ಹರ್ಷದಾಯಕ ಯುಗಳ ಗಾಯಕರು
ಹರ್ಷದಾಯಕ ಯುಗಳ ಗಾಯಕರು
ಕೆನ್ಯಾದ ಎಚ್ಚರ! ಸುದ್ದಿಗಾರರಿಂದ
ಇಬ್ಬರು ಗಾಯಕರು ತಮ್ಮ ಸಂಗೀತ ಕಛೇರಿಯನ್ನು ಆರಂಭಿಸಲು ಸಜ್ಜಾಗಿ, ಎದುರೆದುರಾಗಿ ನಿಂತುಕೊಂಡರು. ಪ್ರಧಾನ ಗಾಯಕನು ಸ್ವಲ್ಪ ತಲೆಬಾಗಿ, ಕೋಮಲ ಮತ್ತು ಸ್ಪಷ್ಟವಾದ ಸ್ವರವನ್ನು ಹೊರಡಿಸಿದನು. ಅದು ಎಷ್ಟು ನಿರರ್ಗಳ ಮತ್ತು ಸ್ಪಷ್ಟವಾಗಿತ್ತೆಂದರೆ, ಆ ಬೆಳಗ್ಗಿನ ಜಾವದಲ್ಲಿ ಅದು ತುಂಬ ದೂರದ ವರೆಗೂ ಕೇಳಿಸುತ್ತಿತ್ತು. ಅನಂತರ ಜೊತೆಯಲ್ಲಿದ್ದ ಗಾಯಕಿಯೂ ವಿನಯದಿಂದ ತಲೆಬಾಗಿ, ಸರಿಯಾದ ಸಮಯಕ್ಕೆ ಅಷ್ಟೇ ಸರಾಗವಾಗಿ ಸ್ವರವನ್ನು ಹೊರಡಿಸಿದಳು, ಆದರೆ ಸ್ವಲ್ಪ ಹೆಚ್ಚು ತೀವ್ರ ಮಟ್ಟದಲ್ಲಿ. ಆ ಯುಗಳ ಗೀತೆಯ ವೇಗ ಮತ್ತು ತೀವ್ರತೆಯು ಹೆಚ್ಚಿದಂತೆ, ಆ ಎರಡೂ ದನಿಗಳು ಒಂದೇ ದನಿಯಾಗಿರುವಂತೆ ಕೇಳಿಸುತ್ತಿತ್ತು. ನಾನು ರೋಮಾಂಚಿತನಾಗಿ ಉಸಿರುಬಿಗಿಹಿಡಿದುಕೊಂಡು ಕಿವಿಗೊಟ್ಟೆ ಮತ್ತು ಚೆನ್ನಾಗಿ ಹರಿತಗೊಳಿಸಲ್ಪಟ್ಟಿರುವ ಅವುಗಳ ಕೌಶಲ ಮತ್ತು ಧ್ವನಿಯ ಗುಣಮಟ್ಟದಿಂದ ಬೆರಗಾದೆ.
ಈ ನಿಪುಣ ಗಾಯಕರ ಸಂಗೀತ ಕಛೇರಿಯು, ಕಿಕ್ಕಿರಿದು ತುಂಬಿರುವ ವಾದ್ಯಮೇಳ ಸಭಾಂಗಣವೊಂದರಲ್ಲಿ ನಡೆಯಲಿಲ್ಲ. ಬದಲಾಗಿ, ಇಲ್ಲಿ ಕೆನ್ಯಾದಲ್ಲಿ ನನ್ನ ಮನೆಯ ಹತ್ತಿರದಲ್ಲೇ ಇರುವ ಒಂದು ಮರದ ಕೊಂಬೆಯ ಮೇಲೆ ನಡೆಸಲ್ಪಟ್ಟಿತ್ತು. ಅದನ್ನು ನಡೆಸಿದ ಗಾಯಕರು—ಎರಡು ಪಕ್ಷಿಗಳು. ಅವುಗಳ ಹಾಡು ಮುಗಿದಾಗ, ಈ ರೆಕ್ಕೆಗಳುಳ್ಳ ಗಾಯಕ ಜೋಡಿಯು ನೆಟ್ಟಗೆ ನಿಂತು, ತಮ್ಮ ರೆಕ್ಕೆಗಳನ್ನು ಚಾಚಿ ಅಲ್ಲಿಂದ ಹಾರಿಹೋದವು.
ಒಂದೇ ಜಾತಿಯ ಪಕ್ಷಿಗಳು ಗುಂಪಾಗಿ ಕೂಡಿಬರುತ್ತವೆಂದು ಹೇಳಲಾಗುತ್ತದೆ. ಆದರೆ ಗಮನಾರ್ಹವಾದ ಸಂಗತಿಯೇನೆಂದರೆ, ಕೆಲವೊಂದು ಪಕ್ಷಿಗಳು ಜೊತೆಯಾಗಿ ಹಾಡುವುದರಲ್ಲಿಯೂ ಆನಂದಿಸುತ್ತಿರುವಂತೆ ತೋರುತ್ತದೆ. ಅದು ಕೂಡ, ಮನಮೋಹಕ ನಿಷ್ಕೃಷ್ಟತೆಯ ಹಾಡುವಿಕೆ! ಅಂತಹ ಯುಗಳ ಹಾಡು ಎಷ್ಟು ಸುಶ್ರಾವ್ಯವಾಗಿರುತ್ತದೆಂದರೆ, ಒಬ್ಬ ಕೇಳುಗನು ಆ ಎರಡು ಪಕ್ಷಿಗಳನ್ನು ನೋಡದಿದ್ದಲ್ಲಿ, ಆ ಗಾನವನ್ನು ಎರಡು ವಿಭಿನ್ನ ಪಕ್ಷಿಗಳು ಹಾಡುತ್ತಿವೆಯೆಂಬುದನ್ನು ಅನೇಕ ವೇಳೆ ಅವನಿಗೆ ಪತ್ತೆಹಚ್ಚಲು ಸಾಧ್ಯವೇ ಇಲ್ಲ! ವಿಜ್ಞಾನಿಗಳು ಕೂಡ ಈ ವಿಷಯದಲ್ಲಿ ಮೋಸಹೋಗಿದ್ದಾರೆ. ಆದುದರಿಂದಲೇ ಯುಗಳ ಹಾಡುವಿಕೆಯು, ಪಕ್ಷಿಗಳಲ್ಲಿರುವ ಒಂದು ವರ್ತನಾ ಮಾದರಿಯಾಗಿದೆಯೆಂಬ ಸಂಗತಿಯನ್ನು ತೀರ ಇತ್ತೀಚೆಗಷ್ಟೇ ಮಾನ್ಯಮಾಡಲಾಯಿತು.
ಗಂಟೆಹಕ್ಕಿ
ಉದಾಹರಣೆಗೆ, ಉಷ್ಣವಲಯದ ಬೂಬೂ ಪಕ್ಷಿಯು ವಿಶೇಷವಾಗಿ ಒಂದು ಕುಶಲ ಗಾಯಕಪಕ್ಷಿ ಆಗಿದೆ. ಅದು ಆಫ್ರಿಕ ಖಂಡದಲ್ಲಿರುತ್ತದೆ ಮತ್ತು ಅದರ ಗಾನವು ಅಪೂರ್ವವಾದ ಕೊಳಲು ನಾದದಂತಿದೆ. ಇದು ಎರಡು ಲೋಹದ ತುಂಡುಗಳನ್ನು ಪರಸ್ಪರ ಬಡಿದಾಗ ಹೊರಡುವ ಕಂಪನವನ್ನು ಹೋಲುತ್ತದೆ. ಆದುದರಿಂದ ಅದನ್ನು ಸಾಮಾನ್ಯವಾಗಿ ಗಂಟೆಹಕ್ಕಿ ಎಂದು ಕರೆಯಲಾಗುತ್ತದೆ. ಬೂಬೂ ಪಕ್ಷಿಯ ಹೊಳೆಯುವ ಕಪ್ಪುಜುಟ್ಟು, ಕತ್ತಿನ ಹಿಂಭಾಗ ಮತ್ತು ರೆಕ್ಕೆಗಳು ಸುಂದರವಾಗಿ ರಚಿಸಲ್ಪಟ್ಟಿವೆ. ಅದರ ಹಿಮದಷ್ಟು ಬಿಳುಪಾಗಿರುವ ಎದೆಯ ಗರಿಗಳು ಮತ್ತು ರೆಕ್ಕೆಯ ಮಧ್ಯದಲ್ಲಿರುವ ಬಿಳಿ ಗೆರೆಯು, ಸೊಗಸಾದ ಬಣ್ಣ ವ್ಯತ್ಯಾಸವನ್ನು ಉಂಟುಮಾಡುತ್ತದೆ. ಬೂಬೂ ಪಕ್ಷಿಗಳು ಯಾವಾಗಲೂ ಜೋಡಿಯಾಗಿ ಇರುತ್ತವೆ. ಮತ್ತು ಗಂಡು-ಹೆಣ್ಣು ಪಕ್ಷಿಗಳಿಗೆ ಒಂದೇ ರೀತಿಯ ಗುರುತುಗಳು ಮತ್ತು ಬಣ್ಣವಿರುತ್ತದೆ.
ದಟ್ಟವಾದ ಕಾಡುಪ್ರದೇಶದಲ್ಲಿ ಯಾರಾದರೂ ನಡೆಯುತ್ತಿರುವುದಾದರೆ, ಬೂಬೂ ಪಕ್ಷಿಗಳನ್ನು ನೋಡುವ ಮುಂಚೆಯೇ ಅವು ಆ ಕ್ಷೇತ್ರದಲ್ಲಿವೆಯೆಂಬುದು ಗೊತ್ತಾಗುತ್ತದೆ. ಅನೇಕವೇಳೆ ಗಂಡು ಪಕ್ಷಿಯು, ಗಂಟೆಯಂತಹ ಮೂರು ಸ್ವರಗಳನ್ನು ವೇಗದಿಂದ ಹೊರಡಿಸುತ್ತದೆ. ತತ್‌ಕ್ಷಣವೇ ಹೆಣ್ಣು ಪಕ್ಷಿಯು, ಕರ್ಕಶವಾದ ಕ್ವೀ ಶಬ್ದವನ್ನು ಹೊರಡಿಸುತ್ತಾ ಅದಕ್ಕೆ ಉತ್ತರವನ್ನು ನೀಡುತ್ತದೆ. ಕೆಲವೊಮ್ಮೆ ಒಂದು ಪಕ್ಷಿಯು ನಿರಂತರವಾಗಿ
ಒಂದರ ನಂತರ ಒಂದು ಸ್ವರವನ್ನು ಹೊರಡಿಸುತ್ತಾ ಇರುವಾಗ, ಅದರ ಸಂಗಾತಿಯು ಜೊತೆಗೂಡಿ ಒಂದೇ ಸ್ವರವನ್ನು ಹೊರಡಿಸುತ್ತದೆ. ಸುಮಧುರವಾದ ಈ ಸ್ವರವು ಎಷ್ಟು ಚೆನ್ನಾಗಿ ಆ ಹಾಡಿನಲ್ಲಿ ಸೇರಿಕೊಳ್ಳುತ್ತದೆಂದರೆ, ಆಲಿಸುತ್ತಿರುವವನಿಗೆ ಈ ಸ್ವರಗಳ ಮಧ್ಯೆ ಇರುವ ವಿರಾಮವು ಗೊತ್ತೇ ಆಗುವುದಿಲ್ಲ.ಈ ರೀತಿಯ ಹೊಂದಾಣಿಕೆಯನ್ನು ಹೇಗೆ ಸಾಧಿಸಲಾಗುತ್ತದೆಂಬುದನ್ನು ವಿಜ್ಞಾನಿಗಳಿಗೆ ಪೂರ್ಣವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗಿಲ್ಲ. “ಅಭ್ಯಾಸವೇ ಪರಿಪೂರ್ಣತೆಗೆ ಸಾಧನ” ಎಂಬ ನುಡಿಗನುಸಾರ, ಕಡಿಮೆಪಕ್ಷ ಕೆಲವೊಂದು ಸಂದರ್ಭಗಳಲ್ಲಿಯಾದರೂ ಅದು ಕೇವಲ “ಅಭ್ಯಾಸ”ದ ಫಲವಾಗಿರಬಹುದೆಂದು ಕೆಲವರು ನೆನಸುತ್ತಾರೆ. ಗಂಡು-ಹೆಣ್ಣು ಪಕ್ಷಿಗಳು ಪ್ರತಿನಿತ್ಯ ಜೊತೆಯಾಗಿ ಹಾಡುವ ಮೂಲಕ ಅತ್ಯುಚ್ಚ ಮಟ್ಟದ ಗಾನ ಪ್ರದರ್ಶನವನ್ನು ನೀಡಲು ಶಕ್ತವಾಗುತ್ತವೆ.
ಆಸಕ್ತಿಕರವಾದ ಸಂಗತಿಯೇನೆಂದರೆ, ಬೂಬೂ ಪಕ್ಷಿಗಳಿಗೆ, ಅವು ನೆಲೆಸುವ ಸ್ಥಳಕ್ಕನುಸಾರವಾಗಿ ಭಿನ್ನವಾಗಿರುವಂಥ “ಉಚ್ಚರಣಾ-ಶೈಲಿ” ಇರುತ್ತದೆಂಬುದು ಅನೇಕವೇಳೆ ತೋರಿಬರುತ್ತದೆ. ಸ್ಥಳಿಕ ಧ್ವನಿಗಳನ್ನು ಅಥವಾ ಬೇರೆ ಪಕ್ಷಿಗಳ ಹಾಡುಗಳನ್ನು ಅವು ನಕಲುಮಾಡುವುದರಿಂದ ಹೀಗಾಗುತ್ತದೆಂದು ತೋರುತ್ತದೆ. ಇದನ್ನು ಧ್ವನಿ ನಕಲುಮಾಡುವಿಕೆಯೆಂದು ಕರೆಯಲಾಗುತ್ತದೆ. ಆದುದರಿಂದಲೇ, ದಕ್ಷಿಣ ಆಫ್ರಿಕದ ಪೊದೆಗಾಡಿನಲ್ಲಿ ಕೇಳಿಸಿಕೊಳ್ಳಬಹುದಾದ ಬೂಬೂ ಪಕ್ಷಿಗಳ ಗಾನಗಳು, ಪೂರ್ವ ಆಫ್ರಿಕದ ಗ್ರೇಟ್ ರಿಫ್ಟ್ ವ್ಯಾಲಿಯಲ್ಲಿ ಕೇಳಿಸಿಕೊಳ್ಳಬಹುದಾದ ಗಾನಗಳಿಗಿಂತ ತುಂಬ ಭಿನ್ನವಾಗಿರಬಹುದು.
ಜೀವನಪರ್ಯಂತ ಸಂಗಾತಿಗಳು
ಜೀವಿತದ ಕಷ್ಟಗಳು (ಇಂಗ್ಲಿಷ್) ಎಂಬ ಪುಸ್ತಕದಲ್ಲಿ ಡೇವಿಡ್ ಆ್ಯಟೆನ್ಬರೊ ಗಮನಿಸುವುದು: “ಜೊತೆಯಾಗಿ ಹಾಡುವ ಪಕ್ಷಿಗಳು, ಒಂದು ನಿಯಮಕ್ಕನುಸಾರವಾಗಿಯೋ ಎಂಬಂತೆ ಜೀವನದುದ್ದಕ್ಕೂ ಪ್ರತಿಯೊಂದು ಋತುವಿನಲ್ಲಿ ಜೊತೆಯಾಗಿ ಇರುವುದನ್ನು ನೋಡುವುದು ಹೃದಯಸ್ಪರ್ಶಿಸುವಂಥ ಸಂಗತಿಯಾಗಿದೆ.” ಈ ಬಲವಾದ ಬಂಧಕ್ಕೆ ಕಾರಣವೇನು? ಆ್ಯಟೆನ್ಬರೊ ಹೇಳುತ್ತಾ ಮುಂದುವರಿಯುವುದು: “ಈ ಕೌಶಲವನ್ನು ಬೆಳೆಸಿಕೊಂಡ ನಂತರ, ತಮ್ಮ ನಡುವಿನ ಬಂಧವನ್ನು ದೃಢಪಡಿಸುವ ವಿಧದೋಪಾದಿ ಅವು ಆ ಕೌಶಲವನ್ನು ಅಭ್ಯಾಸ ಮಾಡುತ್ತಲೇ ಇರುತ್ತವೆ. ಒಂದು ಕೊಂಬೆಯ ಮೇಲೆ ಅವು ಅಕ್ಕಪಕ್ಕದಲ್ಲಿ ಕುಳಿತುಕೊಂಡಿರುವಾಗಲೂ ತಮ್ಮ ಸಂಕೀರ್ಣವಾದ ಯುಗಳ ಹಾಡುಗಳನ್ನು ಹಾಡುತ್ತಿರುತ್ತವೆ. ಮತ್ತು ಕೆಲವೊಮ್ಮೆ ಎರಡರಲ್ಲಿ ಒಂದು ಪಕ್ಷಿಯು ಇಲ್ಲದಿರುವಲ್ಲಿ, ಆ ಇನ್ನೊಂದು ಪಕ್ಷಿಯು ಹಾಡುತ್ತಿದ್ದ ಭಾಗಗಳನ್ನೂ ಸೇರಿಸುತ್ತಾ ಈ ಒಂಟಿ ಪಕ್ಷಿಯು ಸುದೀರ್ಘವಾದ ಇಡೀ ಗಾನವನ್ನು ಹಾಡುತ್ತದೆ.”
ಆ ಹಾಡುಗಳು ದಟ್ಟವಾದ ಗಿಡಮರಗಳ ಪ್ರದೇಶದಲ್ಲಿ, ಒಂದು ಪಕ್ಷಿ ಇನ್ನೊಂದನ್ನು ಕಂಡುಹಿಡಿಯಲು ಸಹ ಆ ಪಕ್ಷಿಗಳಿಗೆ ಸಹಾಯಮಾಡುತ್ತಿರಬಹುದು. ಗಂಡುಪಕ್ಷಿ ತನ್ನ ಸಂಗಾತಿಯು ಎಲ್ಲಿದೆಯೆಂದು ತಿಳಿಯಲು ಬಯಸುವಾಗ, ಅದು ಸುಮಧುರವಾದ ಸ್ವರಗಳ ಸರಣಿಯನ್ನು ಆರಂಭಿಸುತ್ತದೆ, ಮತ್ತು ಹೆಣ್ಣುಪಕ್ಷಿಯು ಸ್ವಲ್ಪ ದೂರದಲ್ಲಿದ್ದರೂ, ಅದರೊಂದಿಗೆ ಹಾಡಿನಲ್ಲಿ ಜೊತೆಗೂಡುತ್ತದೆ. ಅವುಗಳ ಸಮಯ ಸಾಂಗತ್ಯವು ಎಷ್ಟು ನಿಷ್ಕೃಷ್ಟವಾಗಿರುತ್ತದೆಂದರೆ, ಅವು ಅದನ್ನು ಪೂರ್ವಾಭ್ಯಾಸ ಮಾಡಿದಂತಿರುತ್ತದೆ.
ಕೆಲಸಮಾಡುತ್ತಿರುವಾಗ ಸಿಳ್ಳುಹೊಡೆಯುತ್ತಿರುವುದು
ಕೆಲಸಮಾಡುತ್ತಿರುವಾಗ ನೀವು ಸಂಗೀತವನ್ನು ಕೇಳಿಸಿಕೊಳ್ಳಲು ಇಷ್ಟಪಡುತ್ತೀರೊ? ಅನೇಕ ಪಕ್ಷಿಗಳು ಇಷ್ಟಪಡುತ್ತವೆ. ಮೈಕಲ್ ಬ್ರೈಟ್ ಬರೆದಿರುವ ಪಕ್ಷಿಗಳ ಖಾಸಗಿ ಜೀವನ (ಇಂಗ್ಲಿಷ್) ಎಂಬ ಪುಸ್ತಕವು ಗಮನಿಸುವುದೇನೆಂದರೆ, ಪಕ್ಷಿಗಾನಗಳನ್ನು ಆಲಿಸುವ ಇತರ ಪಕ್ಷಿಗಳ ಮೇಲೆ ಅವು ಶಾರೀರಿಕವಾಗಿ ಹುರಿದುಂಬಿಸುವ ಪ್ರಭಾವವನ್ನು ಬೀರುತ್ತವೆ. ಪಕ್ಷಿಗಳ ಹಾಡುಗಳನ್ನು ಆಲಿಸಿದ ನಂತರ, “ಗಂಡು-ಹೆಣ್ಣು ಪಕ್ಷಿಗಳ ಹೃದಯಬಡಿತದ ಪ್ರಮಾಣವು ಏರಿತೆಂದು” ಅದು ಹೇಳಿತು. ಇನ್ನೂ ಹೆಚ್ಚಾಗಿ, ಕೆಲವು ಹೆಣ್ಣು ಪಕ್ಷಿಗಳು, ಗಂಡು ಪಕ್ಷಿಗಳ ಹಾಡುಗಳನ್ನು ಆಲಿಸುತ್ತಿದ್ದಾಗ “ತಮ್ಮ ಗೂಡುಗಳನ್ನು ಹೆಚ್ಚು ವೇಗದಿಂದ ಕಟ್ಟಿದವು” ಮತ್ತು “ಹೆಚ್ಚು ಮೊಟ್ಟೆಗಳನ್ನೂ ಇಡುತ್ತಿದ್ದವು.”
ಉಷ್ಣವಲಯದ ಬೂಬೂ ಪಕ್ಷಿಯಂತಹ ಯುಗಳ ಗಾಯಕರ ಕುರಿತಾಗಿ ವಿಜ್ಞಾನಿಗಳು ಇನ್ನೂ ಎಷ್ಟೋ ಬೆರಗುಗೊಳಿಸುವಂತಹ ಸಂಗತಿಗಳನ್ನು ಕಂಡುಹಿಡಿಯುವರೆಂಬ ವಿಷಯದಲ್ಲಿ ಸಂದೇಹವೇ ಇಲ್ಲ. ಆದರೆ ಪುಳಕಿತಗೊಳಿಸುವಂತಹ ಅವುಗಳ ಹಾಡುಗಳಿಗೆ ಇರುವ ಕ್ರಿಯಾತ್ಮಕ ಮೌಲ್ಯವು ಏನೇ ಆಗಿರಲಿ, ಅವು ಮತ್ತೊಂದು ಘನೋದ್ದೇಶವನ್ನು ಸಾಧಿಸುತ್ತವೆಂಬುದನ್ನು ನಾವು ಮರೆಯದಿರೋಣ. ಗಣ್ಯತಾಭಾವವಿರುವ ಸ್ತ್ರೀಪುರುಷರ ಕಿವಿಗಳಿಗೆ ಅವು ಮುದನೀಡುತ್ತವೆ! ಹೌದು, ಭಾವಪರವಶಗೊಳಿಸುವ ಅಂತಹ ಸಂಗೀತವು, ನಾವು ‘ಆಕಾಶಪಕ್ಷಿಗಳ’ ಸೃಷ್ಟಿಕರ್ತನನ್ನು ಸ್ತುತಿಸುವಂತೆ ನಮ್ಮನ್ನು ಪ್ರಚೋದಿಸುತ್ತದೆ.—ಕೀರ್ತನೆ 8:8.