ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಇಂಟರ್‌ನೆಟ್‌ನ ಅಪಾಯಗಳಿಂದ ನಾನು ಹೇಗೆ ದೂರವಿರಬಲ್ಲೆ?

ಇಂಟರ್‌ನೆಟ್‌ನ ಅಪಾಯಗಳಿಂದ ನಾನು ಹೇಗೆ ದೂರವಿರಬಲ್ಲೆ?

ಯುವ ಜನರು ಪ್ರಶ್ನಿಸುವುದು . . .

ಇಂಟರ್‌ನೆಟ್‌ನ ಅಪಾಯಗಳಿಂದ ನಾನು ಹೇಗೆ ದೂರವಿರಬಲ್ಲೆ?

ವಿಶ್ವದ ಅತಿ ದೊಡ್ಡ ಲೈಬ್ರರಿಯಲ್ಲಿ ನೀವಿದ್ದೀರಿ ಎಂದು ನೆನಸಿಕೊಳ್ಳಿ. ಅಲ್ಲಿ ಹೆಚ್ಚು ಕಡಿಮೆ ಪ್ರತಿಯೊಂದು ವಿಷಯದ ಕುರಿತು ಎಲ್ಲ ರೀತಿಯ ಪುಸ್ತಕಗಳು, ವಾರ್ತಾಪತ್ರಿಕೆಗಳು, ಕ್ಯಾಟಲಾಗ್‌ಗಳು, ಛಾಯಾಚಿತ್ರಗಳು, ರೆಕಾರ್ಡಿಂಗ್‌ಗಳು ನಿಮ್ಮ ಸುತ್ತಲೂ ಹರಡಿಕೊಂಡಿವೆ. ಇತ್ತೀಚಿನ ಪ್ರತಿಯೊಂದು ಮಾಹಿತಿಯು ಮತ್ತು ಗತ ಶತಮಾನಗಳ ಸಾಹಿತ್ಯವು ನಿಮ್ಮ ಬೆರಳ ತುದಿಯಲ್ಲೇ ಇದೆ.

ಇಂತಹ ಮಾಹಿತಿಯನ್ನು ಇಂಟರ್‌ನೆಟ್‌ ನಿಮ್ಮ ಬೆರಳ ತುದಿಯಲ್ಲೇ ಇರಿಸುತ್ತದೆ. ಒಬ್ಬ ವ್ಯಕ್ತಿ ತನ್ನ ಕಂಪ್ಯೂಟರ್‌ನ ಮುಂದೆ ಕುಳಿತುಕೊಂಡು, ವಿಶ್ವದ ಯಾವುದೇ ಮೂಲೆಯಲ್ಲಿರುವ ಇತರ ಕಂಪ್ಯೂಟರ್‌ಗಳ ಮತ್ತು ಕಂಪ್ಯೂಟರ್‌ ಬಳಕೆದಾರರೊಂದಿಗೆ ಮಾಹಿತಿಯನ್ನು ವಿನಿಮಯಮಾಡಿಕೊಳ್ಳಲು ಇದು ಶಕ್ತಗೊಳಿಸುತ್ತದೆ. * ಉತ್ಪಾದನೆಗಳನ್ನು ಮಾರಲು, ಖರೀದಿಸಲು, ಬ್ಯಾಂಕ್‌ ವ್ಯವಹಾರಗಳನ್ನು ನಡೆಸಲು, ಸಂಭಾಷಿಸಲು, ಇತ್ತೀಚಿನ ಸಂಗೀತ ರೆಕಾರ್ಡಿಂಗ್‌ಗಳನ್ನು ಕೇಳಿಸಿಕೊಳ್ಳಲು ಇದು ಬಳಕೆದಾರರಿಗೆ ಅನುಮತಿ ನೀಡುತ್ತದೆ. ಇವೆಲ್ಲವನ್ನೂ ನಿಮ್ಮ ಮನೆಯ ಏಕಾಂತದಲ್ಲಿ ಕುಳಿತುಕೊಂಡೇ ಮಾಡಸಾಧ್ಯವಿದೆ.

ಈ ವರ್ಷದ ಅಂತ್ಯದಷ್ಟಕ್ಕೇ ಮೂರು ಕೋಟಿ ಇಪ್ಪತ್ತು ಲಕ್ಷಕ್ಕಿಂತಲೂ ಹೆಚ್ಚಿನ ಜನರು ಇಂಟರ್‌ನೆಟ್‌ ಅನ್ನು ಉಪಯೋಗಿಸಲಿರುವರು ಎಂದು ಕೆಲವು ಪರಿಣತರು ಮುಂತಿಳಿಸುವುದರಲ್ಲಿ ಆಶ್ಚರ್ಯವೇನಿಲ್ಲ. ಲೋಕದ ಅನೇಕ ಭಾಗಗಳಲ್ಲಿ ಇಂಟರ್‌ನೆಟ್‌ನ ಉಪಯೋಗವು ಈಗ ಸರ್ವಸಾಮಾನ್ಯವಾಗುತ್ತಿದೆ. ಶಾಲೆಗಳು ಮತ್ತು ಲೈಬ್ರರಿಗಳು ಅದನ್ನು ತೀವ್ರವಾಗಿ ಪ್ರವರ್ಧಿಸುತ್ತಿರುವುದರಿಂದ, ಲಕ್ಷಾಂತರ ಯುವ ಜನರು ಅದನ್ನು ಉಪಯೋಗಿಸಬಹುದಾಗಿದೆ. ಅಮೆರಿಕದಲ್ಲಿ, 12ರಿಂದ 19 ವರ್ಷ ಪ್ರಾಯದ ಯುವ ಜನರಲ್ಲಿ ಸುಮಾರು 65 ಪ್ರತಿಶತದಷ್ಟು ಜನರು, 24 ಗಂಟೆ ಲಭ್ಯವಿರುವ ಇಂಟರ್‌ನೆಟ್‌ ಅನ್ನು ಈಗಾಗಲೇ ಬಳಸಿದ್ದಾರೆ ಅಥವಾ ಅದಕ್ಕೆ ಚಂದಾದಾರರಾಗಿದ್ದಾರೆ.

ಇಂಟರ್‌ನೆಟ್‌ ಅನ್ನು ಯೋಗ್ಯವಾದ ರೀತಿಯಲ್ಲಿ ಬಳಸುವುದಾದರೆ, ಅದು ಹವಾಮಾನ, ಪರ್ಯಟನೆ ಮತ್ತು ಇತರ ವಿಷಯಗಳ ಕುರಿತು ಸಹಾಯಕಾರಿ ಮಾಹಿತಿಯನ್ನು ಕೊಡಸಾಧ್ಯವಿದೆ. ಇದರ ಮೂಲಕ ನೀವು ಪುಸ್ತಕಗಳು, ಕಾರಿನ ಬಿಡಿಭಾಗಗಳು ಮತ್ತು ಇನ್ನಿತರ ವಸ್ತುಗಳನ್ನು ಖರೀದಿಸಸಾಧ್ಯವಿದೆ. ಅನೇಕರು ಅದನ್ನು ಶಾಲಾಕೆಲಸಕ್ಕೆ ಸಹ ಬಳಸಿಕೊಳ್ಳುತ್ತಾರೆ.

ಇಂಟರ್‌ನೆಟ್‌ ಉಪಯುಕ್ತಕಾರಿ ಆಗಿರಬಹುದಾದರೂ, ಗ್ರಂಥಪಾಲಕನಿಲ್ಲದ ಅಥವಾ ಗಮನಿಸುವಂತಹ ಇತರ ಜನರಿಲ್ಲದ ಒಂದು ಲೈಬ್ರರಿಯಂತೆ ಸಹ ಅದು ಆಗಿರಸಾಧ್ಯವಿದೆ. ಸುತ್ತಮುತ್ತಲೂ ಯಾರೂ ಇಲ್ಲವೆಂಬ ಭಾವನೆಯೊಂದಿಗೆ ಒಬ್ಬನು ಅದರ ಮೇಲೆ ಕಣ್ಣೋಡಿಸಬಹುದು. ಆದರೆ, ಇಂಟರ್‌ನೆಟ್‌ ಅನ್ನು ಉಪಯೋಗಿಸುವುದರಲ್ಲಿರುವ ಅತ್ಯಂತ ಅಪಾಯಕಾರಿ ವಿಷಯಗಳಲ್ಲಿ ಇದು ಒಂದಾಗಿದೆ. ಏಕೆ? ಏಕೆಂದರೆ ಅಗಣಿತ ವೆಬ್‌ ಸೈಟ್‌ಗಳು, ನೈತಿಕವಾಗಿ ಭ್ರಷ್ಟಗೊಂಡಿರುವ ಮತ್ತು ಆತ್ಮಿಕವಾಗಿ ವಿನಾಶಕಾರಿಯಾಗಿರುವ ವಿಷಯಗಳನ್ನು ಒಳಗೊಂಡಿವೆ. ಹೀಗೆ, ಇಂಟರ್‌ನೆಟ್‌ ಕ್ರೈಸ್ತ ಯುವ ಜನರನ್ನು ಶೋಧನೆಗೊಳಪಡಿಸಸಾಧ್ಯವಿದೆ. ಮಾನವರಿಗೆ ಕುತೂಹಲವಿರುವುದು ಸಹಜವೇ. ಪಿಶಾಚನಾದ ಸೈತಾನನು ಸಹ ಈ ಪ್ರವೃತ್ತಿಯನ್ನೇ ತನ್ನ ಪ್ರಯೋಜನಕ್ಕಾಗಿ ದೀರ್ಘ ಸಮಯದಿಂದಲೂ ಬಳಸಿಕೊಂಡಿದ್ದಾನೆ. ಸೈತಾನನು ಹವ್ವಳ ಕುತೂಹಲವನ್ನು ಸ್ವಪ್ರಯೋಜನಕ್ಕಾಗಿ ಬಳಸಿಕೊಂಡು, ‘ತನ್ನ ಕುಯುಕ್ತಿಯಿಂದ ಆಕೆಯನ್ನು ಮೋಸಗೊಳಿಸಿದನು’ (NW).—2 ಕೊರಿಂಥ 11:3.

ಇದೇ ರೀತಿಯಲ್ಲಿ, ಒಬ್ಬ ಯುವ ಕ್ರೈಸ್ತನು ತನ್ನ ಆತ್ಮಿಕತೆಯನ್ನು ಕಾಪಾಡಿಕೊಳ್ಳಲು ದೃಢನಿಶ್ಚಯಮಾಡದಿದ್ದಲ್ಲಿ, ಅವನು ಅಹಿತಕರವಾದ ಮಾಹಿತಿಯಿಂದ ಸುಲಭವಾಗಿ ತಪ್ಪುದಾರಿಗೆ ಎಳೆಯಲ್ಪಡುವ ಸಾಧ್ಯತೆಯಿದೆ. ಬೆಟರ್‌ ಹೋಮ್ಸ್‌ ಆ್ಯಂಡ್‌ ಗಾರ್ಡನ್ಸ್‌ ಎಂಬ ಪತ್ರಿಕೆಯಲ್ಲಿನ ಒಂದು ಲೇಖನವು ವಿವರಿಸಿದ್ದು: “ಇತ್ತೀಚಿನ ಮಾಹಿತಿಯನ್ನು ಹಬ್ಬಿಸುವ ನಿಪುಣ ಪ್ರವರ್ತಕರ ಸಂತೆಯೇ ಇಂಟರ್‌ನೆಟ್‌ ಆಗಿದೆ. ಆದರೆ, ಈ ವೆಬ್‌ಸೈಟ್‌ಗಳಲ್ಲಿ, ಶಿಶುಕಾಮಿಗಳು, ಮೋಸಗಾರರು, ಮತಾಂಧರು ಮತ್ತು ಇನ್ನಿತರ ಅಹಿತಕರವಾದ ಜನರು ಸಹ ಅಲೆದಾಡುತ್ತಾರೆ.”

ಹಾವ್ಯೇರ್‌ * ಎಂಬ ಯುವಕನು ಹೇಳುವುದು: “ಕೆಲವೊಂದು ವೆಬ್‌ ಸೈಟ್‌ಗಳು ತಲ್ಲಣಗೊಳಿಸುವಂತಹವುಗಳಾಗಿವೆ. ಯಾವುದೇ ಮುನ್‌ಸೂಚನೆಯನ್ನು ನೀಡದೆ ಅವು ಪರದೆಯ ಮೇಲೆ ಥಟ್ಟನೇ ಕಾಣಿಸಿಕೊಳ್ಳಸಾಧ್ಯವಿದೆ.” ಅವನು ಮುಂದುವರಿಸುವುದು: “ಅವು ನಿಮ್ಮ ಮೇಲೆ ಬಲೆಯನ್ನು ಬೀಸಲು ಪ್ರಯತ್ನಿಸುತ್ತಿವೆ. ನಿಮ್ಮಿಂದ ಹಣವನ್ನು ದೋಚಲು ಅವು ನಿಮ್ಮನ್ನು ಮೋಡಿಮಾಡುತ್ತವೆ.” ಜಾನ್‌ ಎಂಬ ಯುವ ಕ್ರೈಸ್ತನೊಬ್ಬನು ಒಪ್ಪಿಕೊಳ್ಳುವುದು: “ಒಮ್ಮೆ ನೀವು ಅಯೋಗ್ಯವಾದ ವಿಷಯವನ್ನು ನೋಡಲು ಪ್ರಾರಂಭಿಸಿದಿರೆಂದರೆ, ಅದನ್ನು ನಿಲ್ಲಿಸಲು ಬಹಳ ಕಷ್ಟವಾಗುತ್ತದೆ. ಅದು ನಿಜವಾಗಿಯೂ ಬಹಳ ಗೀಳುಹಿಡಿಸುವಂತಹದ್ದಾಗಿದೆ.” ಕೆಲವು ಕ್ರೈಸ್ತ ಯುವ ಜನರು ಇಂತಹ ಅಪಾಯಕರ ವೆಬ್‌ ಸೈಟ್‌ಗಳನ್ನು ಪದೇ ಪದೇ ತೆರೆದುನೋಡಿದ್ದಾರೆ ಮತ್ತು ಇದು ಅವರನ್ನು ಗಂಭೀರವಾದ ಸಂಕಷ್ಟದಲ್ಲಿ ಸಿಕ್ಕಿಸಿದೆ. ಕೆಲವರಂತೂ ಯೆಹೋವನೊಂದಿಗಿನ ತಮ್ಮ ಸಂಬಂಧವನ್ನು ಸಹ ಕಳೆದುಕೊಂಡಿದ್ದಾರೆ. ಇದರಿಂದ ನಾವು ಹೇಗೆ ದೂರವಿರಸಾಧ್ಯವಿದೆ?

‘ವ್ಯರ್ಥಕಾರ್ಯಗಳನ್ನು ದೃಷ್ಟಿಸುವುದು’

ಕೆಲವೊಮ್ಮೆ ಒಂದು ವೆಬ್‌ ಸೈಟ್‌ನ ವಿಳಾಸವು ತಾನೇ ಅದರಲ್ಲಿ ಅಹಿತಕರವಾದ ವಿಷಯವಿದೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ. * ಜ್ಞಾನೋಕ್ತಿ 22:3 ಎಚ್ಚರಿಸುವುದು: “ಜಾಣನು ಕೇಡನ್ನು ಕಂಡು ಅಡಗಿಕೊಳ್ಳುವನು; ಬುದ್ಧಿಹೀನನು ಮುಂದೆ ಹೋಗಿ ನಷ್ಟಪಡುವನು.”

ಆದರೂ, ಜನರು ಆಕ್ಷೇಪಣೀಯವಾದ ಸೈಟ್‌ ಅನ್ನು ತಮಗರಿವಿಲ್ಲದೆ ತೆರೆಯುವುದು ಒಂದು ಸಾಮಾನ್ಯ ಸಮಸ್ಯೆಯಾಗಿದೆ. ಆ ಸೈಟ್‌ ಅನ್ನು ತೆರೆದುನೋಡುವಂತೆ ಮತ್ತು ಅದನ್ನು ಪುನಃ ಪುನಃ ನೋಡುವಂತೆ ನಿಮ್ಮನ್ನು ಮರುಳುಗೊಳಿಸಲಿಕ್ಕಾಗಿ, ತೀರ ಜಾಗರೂಕವಾಗಿ ವಿನ್ಯಾಸಿಸಲ್ಪಟ್ಟಿರುವ ಕೌತುಕಕಾರಿ ಚಿತ್ರಗಳು ಹೋಮ್‌ ಪೇಜ್‌ (ಮುಖಪುಟ)ನಲ್ಲಿರಬಹುದು! *

ತನ್ನ ಸ್ನೇಹಿತರಲ್ಲಿ ಒಬ್ಬನಿಗೆ ಏನು ಸಂಭವಿಸಿತು ಎಂಬುದನ್ನು ಕೆವಿನ್‌ ವರ್ಣಿಸುತ್ತಾನೆ. “ಅವನಿಗೆ ಏನೂ ಕೆಲಸವಿರಲಿಲ್ಲ ಮತ್ತು ಅವನು ತುಂಬ ಕುತೂಹಲ ಸ್ವಭಾವದವನಾಗಿದ್ದ. ಅಶ್ಲೀಲವಾದ ವಿಷಯಗಳನ್ನು ನೋಡುವುದು ಅವನಿಗೆ ಬೇಗನೆ ರೂಢಿಯಾಗಿಹೋಯಿತು.” ಸಂತೋಷಕರವಾದ ವಿಷಯವೇನೆಂದರೆ, ಈ ಯುವ ಕ್ರೈಸ್ತನು ಒಬ್ಬ ಹಿರಿಯನ ಬಳಿ ಹೋಗಿ, ಅವನಿಂದ ಸಹಾಯವನ್ನು ಪಡೆದುಕೊಂಡನು.

ಅಂತಹ ಒಂದು ಸೈಟ್‌ ಅನ್ನು ಗೊತ್ತಿಲ್ಲದೆ ನೀವು ತೆರೆದುನೋಡುವಲ್ಲಿ ಏನು ಮಾಡುವಿರಿ ಎಂಬುದನ್ನು ನೀವು ನಿರ್ಧಾರ ಮಾಡಿದ್ದೀರೋ? ಒಬ್ಬ ಕ್ರೈಸ್ತನು ಏನು ಮಾಡಬೇಕೆಂಬುದು ತೀರ ಸ್ಪಷ್ಟವಾಗಿದೆ: ಆ ಸೈಟ್‌ ಅನ್ನು ತಕ್ಷಣವೇ ಮುಚ್ಚಿಬಿಡಿರಿ—ಅಥವಾ ಇಂಟರ್‌ನೆಟ್‌ ಬ್ರೌಸರ್‌ ಅನ್ನೇ ಮುಚ್ಚಿಬಿಡಿರಿ! “ವ್ಯರ್ಥಕಾರ್ಯಗಳಲ್ಲಿ ದೃಷ್ಟಿಯಿಡದಂತೆ ನನ್ನನ್ನು ಕಾಪಾಡು” ಎಂದು ಪ್ರಾರ್ಥಿಸಿದಂತಹ ಕೀರ್ತನೆಗಾರನಂತೆ ಇರಿ. (ಕೀರ್ತನೆ 119:37; ಹೋಲಿಸಿ ಯೋಬ 31:1.) ಮನುಷ್ಯರು ನಮ್ಮನ್ನು ನೋಡದಿದ್ದರೂ ಯಾರೋ ಒಬ್ಬರು ನಮ್ಮನ್ನು ಯಾವಾಗಲೂ ನೋಡುತ್ತಿರುತ್ತಾರೆ ಎಂಬುದನ್ನು ಜ್ಞಾಪಕದಲ್ಲಿಟ್ಟುಕೊಳ್ಳಿರಿ. “ನಾವು ಯಾವಾತನಿಗೆ ಲೆಕ್ಕ ಒಪ್ಪಿಸಬೇಕಾಗಿದೆಯೋ ಆತನ ದೃಷ್ಟಿಗೆ ಸಮಸ್ತವೂ ಮುಚ್ಚುಮರೆಯಿಲ್ಲದ್ದಾಗಿಯೂ ಬೈಲಾದದ್ದಾಗಿಯೂ ಅದೆ” ಎಂದು ಬೈಬಲು ನಮಗೆ ಜ್ಞಾಪಕಹುಟ್ಟಿಸುತ್ತದೆ.—ಇಬ್ರಿಯ 4:13.

ನಿಮ್ಮ ಹೆತ್ತವರೊಂದಿಗೆ ಅಥವಾ ಇತರ ಪ್ರೌಢ ಕ್ರೈಸ್ತರೊಡನೆ ಮಾತಾಡುವುದು, ಅಂತಹ ಆಕ್ಷೇಪಣೀಯವಾದ ಸೈಟ್‌ಗಳನ್ನು ಪುನಃ ತೆರೆದುನೋಡದಿರಲು ನೀವು ಮಾಡಿರುವ ದೃಢನಿಶ್ಚಯವನ್ನು ಬಲಪಡಿಸಸಾಧ್ಯವಿದೆ. ನೀವೇನಾದರೂ ಕಳ್ಳುಸುಬಿನಲ್ಲಿ ಸಿಕ್ಕಿಕೊಳ್ಳುವುದಾದರೆ, ಮರಳಿನಲ್ಲಿ ಕುತ್ತಿಗೆಯ ವರೆಗೂ ಹೂತುಹೋಗುವ ತನಕ ಸಹಾಯಕ್ಕಾಗಿ ಮೊರೆಯಿಡದೇ ಒದ್ದಾಡುವಿರೋ?

ಆನ್‌-ಲೈನ್‌ ಸಹವಾಸದ ಕುರಿತಾಗಿ ಏನು?

ಲೋಕದ ಸುತ್ತಲಿರುವ ಇಂಟರ್‌ನೆಟ್‌ ಬಳಕೆದಾರರು, ಚಿಟಿಕೆಹೊಡೆಯುವುದರೊಳಗೆ ಒಬ್ಬರು ಇನ್ನೊಬ್ಬರೊಂದಿಗೆ ಸಂಭಾಷಿಸುವಂತೆ ಚ್ಯಾಟ್‌ ರೂಮ್‌ ಅವಕಾಶವನ್ನು ಒದಗಿಸುತ್ತದೆ. ವಾಣಿಜ್ಯೋದ್ಯಮವು, ಆನ್‌-ಲೈನ್‌ ಸಮಾಲೋಚನೆಗಳನ್ನು ಹಾಗೂ ಗ್ರಾಹಕ ಸೇವೆಯನ್ನು ಒದಗಿಸಲಿಕ್ಕಾಗಿ ಇದನ್ನು ಉಪಯೋಗಿಸುತ್ತದೆ. ಮೋಟಾರುಗಾಡಿಯ ರಿಪೇರಿ ಅಥವಾ ಕಂಪ್ಯೂಟರ್‌ ಪ್ರೋಗ್ರ್ಯಾಮಿಂಗ್‌ನಂತಹ ತಾಂತ್ರಿಕ ವಿಷಯಗಳ ಕುರಿತು ಮಾಹಿತಿಯನ್ನು ಹಂಚಿಕೊಳ್ಳಲು ಕೆಲವು ಚ್ಯಾಟ್‌ ರೂಮುಗಳು ಅವಕಾಶವನ್ನು ಒದಗಿಸುತ್ತವೆ. ದೂರ ಅಂತರದ (ಲಾಂಗ್‌-ಡಿಸ್ಟೆನ್ಸ್‌) ಟೆಲಿಫೋನ್‌ ಕರೆಗಳ ಖರ್ಚಿಲ್ಲದೆ, ಸ್ನೇಹಿತರೊಂದಿಗೆ ಮತ್ತು ಕುಟುಂಬದ ಸದಸ್ಯರೊಂದಿಗೆ ಏಕಾಂತದಲ್ಲಿ ಸಂಭಾಷಿಸಲಿಕ್ಕೆ ಕೆಲವು ಚ್ಯಾಟ್‌ ರೂಮುಗಳು ಅನುವು ಮಾಡಿಕೊಡುತ್ತವೆ. ಈ ಮಾಧ್ಯಮಕ್ಕಾಗಿ ನ್ಯಾಯಸಮ್ಮತ ಉಪಯೋಗಗಳು ಇರಬಹುದಾದರೂ, ಇದರಲ್ಲಿ ಅಪಾಯಗಳೇನಾದರೂ ಇವೆಯೋ?

ಸಾರ್ವಜನಿಕ ಚ್ಯಾಟ್‌ ರೂಮುಗಳ ವಿಷಯದಲ್ಲಿಯಾದರೋ ಜಾಗರೂಕರಾಗಿರಬೇಕೆಂಬ ವಿಷಯದಲ್ಲಿ ಎರಡು ಮಾತಿಲ್ಲ. ಏಕೆಂದರೆ, ಇವು ಕೆಲವೊಂದು ನಿರ್ದಿಷ್ಟ ಅಪಾಯಗಳನ್ನೊಡ್ಡಬಲ್ಲವು. ಲೀಆ ರಾಸನ್‌ ಎಂಬ ಲೇಖಕಿಯು ಹೇಳಿದ್ದು: “ತಾಂತ್ರಿಕತೆಯ ಬಗ್ಗೆ ಅರಿವುಳ್ಳ ಹದಿವಯಸ್ಕರು, ದೇಶದ ಮತ್ತು ಲೋಕದ ಎಲ್ಲೆಡೆಯಲ್ಲೂ ಇರುವ ಆಗಂತುಕರೊಂದಿಗೆ ಗಂಟಾನುಗಟ್ಟಲೇ ಆನ್‌ಲೈನ್‌ ಸಂಭಾಷಣೆಯಲ್ಲಿ ಕಾಲವನ್ನು ಕಳೆಯುತ್ತಿದ್ದಾರೆ. ವಿಷಾದನೀಯ ಸಂಗತಿಯೇನೆಂದರೆ, ಈ ಹದಿವಯಸ್ಕರು ಆನ್‌ಲೈನ್‌ನಲ್ಲಿ ಸಂಭಾಷಿಸುತ್ತಿರಬಹುದಾದ ಆಗಂತುಕರಲ್ಲಿ ಕೆಲವರು ಮಕ್ಕಳೊಂದಿಗೆ ಲೈಂಗಿಕ ಸಂಬಂಧವನ್ನು ಇಟ್ಟುಕೊಳ್ಳಲು ಪ್ರಯತ್ನಿಸುತ್ತಿರುವ ವಯಸ್ಕ ವಿಕೃತಕಾಮಿಗಳು ಸಹ ಆಗಿರುತ್ತಾರೆ.” ಸಾರ್ವಜನಿಕ ಚ್ಯಾಟ್‌ ರೂಮುಗಳನ್ನು ಬಳಸುತ್ತಿರುವಾಗ “ನೀವು ಬಹಳಷ್ಟು ಜಾಗರೂಕರಾಗಿರಬೇಕು” ಎಂದು ಪಾಪ್ಯುಲರ್‌ ಮೆಕ್ಯಾನಿಕ್ಸ್‌ ಎಂಬ ಪತ್ರಿಕೆಯ ಲೇಖನವೊಂದು ಎಚ್ಚರಿಕೆಯನ್ನು ನೀಡಿರುವುದರಲ್ಲಿ ಆಶ್ಚರ್ಯವೇನಿಲ್ಲ. ಆಗಂತುಕನೊಬ್ಬನಿಗೆ ನಿಮ್ಮ ಹೆಸರು ಅಥವಾ ವಿಳಾಸವನ್ನು ನೀಡುವುದು, ಗಂಭೀರವಾದ ಸಮಸ್ಯೆಗೆ ಕರೆಕೊಡುವುದು! ಗೊತ್ತಿದ್ದೂ ಗೊತ್ತಿದ್ದೂ ಏಕೆ ಬಂಡೆಗೆ ತಲೆಚಚ್ಚಿಕೊಳ್ಳಬೇಕು?

ಬೈಬಲ್‌ ತತ್ವಗಳಿಗೆ ಗೌರವವನ್ನು ತೋರಿಸದ ಆಗಂತುಕರೊಂದಿಗೆ ಅಯೋಗ್ಯವಾದ ಸಹವಾಸದಲ್ಲಿ ಸಿಕ್ಕಿಬೀಳುವುದು ಮತ್ತಷ್ಟೂ ನವಿರಾದ ಅಪಾಯವಾಗಿದೆ. * ಚ್ಯಾಟ್‌ ರೂಮುಗಳಲ್ಲಿ ನಡೆಯುವ ಹದಿವಯಸ್ಕರ ಮಾತುಕತೆಗಳಲ್ಲಿ ಲೈಂಗಿಕ ವಿಷಯಗಳೇ ಹೆಚ್ಚಾಗಿರುತ್ತವೆ ಎಂದು ಸಂಶೋಧನಕಾರರು ಹೇಳುತ್ತಾರೆ. 1 ಕೊರಿಂಥ 15:33ರಲ್ಲಿರುವ ಬೈಬಲಿನ ಸಲಹೆಯು ನಿಜವಾಗಿಯೂ ತಕ್ಕದ್ದಾಗಿದೆ. ಅದು ಹೇಳುವುದು: “ಮೋಸಹೋಗಬೇಡಿರಿ; ದುಸ್ಸಹವಾಸವು ಸದಾಚಾರವನ್ನು ಕೆಡಿಸುತ್ತದೆ.” ಕಂಪ್ಯೂಟರ್‌ ಮೂಲಕ ದುಸ್ಸಹವಾಸವನ್ನು ಮಾಡುವುದು ನಿಜವಾಗಿಯೂ ಅಪಾಯಕಾರಿಯಾಗಿದೆ. ದೇವಭಯವುಳ್ಳ ಯುವಕ ಅಥವಾ ಯುವತಿಯು ತನ್ನನ್ನು ಅಂತಹ ಅಪಾಯಗಳಿಗೆ ಭಂಡುಧೈರ್ಯದಿಂದ ಒಡ್ಡಿಕೊಳ್ಳಬೇಕೋ?

ರಕ್ಷಣೋಪಾಯಗಳು

ಇಂಟರ್‌ನೆಟ್‌ ಪ್ರಸ್ತುತಪಡಿಸುವಂತಹ ಅಪಾಯಗಳನ್ನು ಮನಸ್ಸಿನಲ್ಲಿಟ್ಟುಕೊಂಡು, ಅದನ್ನು ಜಾಗರೂಕತೆಯಿಂದ ಉಪಯೋಗಿಸಬೇಕಾಗಿದೆ. ಉದಾಹರಣೆಗೆ, ಕೆಲವು ಕುಟುಂಬಗಳು ವಾಸದ ಕೋಣೆಯಲ್ಲಿ, ಎಲ್ಲರಿಗೂ ಕಾಣಿಸುವಂತಹ ಜಾಗದಲ್ಲಿ ಕಂಪ್ಯೂಟರ್‌ ಅನ್ನು ಇಡುತ್ತವೆ. ಮನೆಯಲ್ಲಿ ಇತರ ಸದಸ್ಯರೂ ಇರುವಾಗ ಮಾತ್ರ ಇಂಟರ್‌ನೆಟ್‌ ಅನ್ನು ಉಪಯೋಗಿಸಬಹುದು ಎಂಬಂತಹ ನಿಯಮವನ್ನು ಸಹ ಅವರು ಮಾಡಬಹುದು. ಅಂತಹ ಕಟ್ಟುಪಾಡುಗಳನ್ನು ನಿಮ್ಮ ಹೆತ್ತವರು ಮಾಡುವಲ್ಲಿ, ಅವರೊಂದಿಗೆ ಸಹಕರಿಸಿರಿ. (ಜ್ಞಾನೋಕ್ತಿ 1:8) ಸ್ಪಷ್ಟವಾದ ಮಾರ್ಗದರ್ಶನವು ಅವರ ಪ್ರೀತಿಯ ಪ್ರಮಾಣವಾಗಿದೆ.

ಇಂಟರ್‌ನೆಟ್‌ ಅನ್ನು ಉಪಯೋಗಿಸುವಂತೆ ಶಾಲಾಕೆಲಸವು ಅಗತ್ಯಪಡಿಸುವುದಾದರೆ, ಆನ್‌-ಲೈನ್‌ನಲ್ಲಿ ಎಷ್ಟು ಸಮಯವನ್ನು ನೀವು ವ್ಯಯಿಸುತ್ತೀರಿ ಎಂಬುದನ್ನು ಏಕೆ ಕಂಡುಹಿಡಿಯಬಾರದು? ಎಷ್ಟು ಸಮಯವನ್ನು ನೀವು ವ್ಯಯಿಸುವಿರಿ ಎಂಬುದನ್ನು ಮೊದಲೇ ನಿರ್ಧರಿಸಲು ಪ್ರಯತ್ನಿಸಿ, ಆ ಸಮಯವು ಮೀರಿದಾಗ ನಿಮಗೆ ಅದರ ಬಗ್ಗೆ ಎಚ್ಚರಿಸಲು ಅಲಾರ್ಮ್‌ ಗಡಿಯಾರವನ್ನು ಉಪಯೋಗಿಸಿರಿ. ಟಾಮ್‌ ಸಲಹೆ ನೀಡುವುದು: “ಮುಂದಾಗಿಯೇ ಯೋಜಿಸಿರಿ. ಇತರ ವಿಷಯಗಳು ಎಷ್ಟೇ ಆಕರ್ಷಕವಾಗಿ ತೋರಿದರೂ, ನೀವು ಯಾವ ಉದ್ದೇಶಕ್ಕಾಗಿ ಅದನ್ನು ತೆರೆದುನೋಡುತ್ತಿದ್ದೀರಿ ಎಂಬುದನ್ನು ತಿಳಿದುಕೊಂಡು, ಆ ಯೋಜನೆಗೆ ಅಂಟಿಕೊಂಡಿರಿ.”

ಇ-ಮೇಯ್ಲ್‌ ಅನ್ನು ಉಪಯೋಗಿಸುವ ಸಂಬಂಧದಲ್ಲೂ ಎಚ್ಚರಿಕೆಯ ಆವಶ್ಯಕತೆ ಇದೆ. ಭಾರಿ ಪ್ರಮಾಣದ ಇ-ಮೇಯ್ಲ್‌ ಅನ್ನು, ಅದೂ ವಿಶೇಷವಾಗಿ ಹೆಚ್ಚಿನ ಮಾಹಿತಿಯು ನಿಷ್ಪ್ರಯೋಜಕ ಅಥವಾ ನಿಷ್ಕೃಷ್ಟವಲ್ಲದ ವಿಷಯಗಳಿಂದ ತುಂಬಿರುವಲ್ಲಿ, ಅದನ್ನು ಓದುವುದರಲ್ಲಿ ಸಿಕ್ಕಿಹಾಕಿಕೊಳ್ಳದಂತೆ ಕ್ರೈಸ್ತ ಯುವಕರು ಜಾಗರೂಕರಾಗಿರತಕ್ಕದ್ದು. ಇ-ಮೇಯ್ಲ್‌ ಅನ್ನು ಲಂಗುಲಗಾಮಿಲ್ಲದೆ ಉಪಯೋಗಿಸುವಲ್ಲಿ, ಶಾಲಾ ಕೆಲಸ ಮತ್ತು ಆತ್ಮಿಕ ಚಟುವಟಿಕೆಗಳಿಗೆ ಬೇಕಾದ ಸಮಯವನ್ನು ಇದು ಕಬಳಿಸಿಬಿಡಸಾಧ್ಯವಿದೆ.

ರಾಜನಾದ ಸೊಲೊಮೋನನು ಹೇಳಿದ್ದು: “ಬಹುಗ್ರಂಥಗಳ ರಚನೆಗೆ ಮಿತಿಯಿಲ್ಲ; ಅತಿವ್ಯಾಸಂಗವು ದೇಹಕ್ಕೆ ಆಯಾಸ.” (ಪ್ರಸಂಗಿ 12:12) ಇದು ಇಂಟರ್‌ನೆಟ್‌ಗೆ ಸಹ ಅನ್ವಯಿಸುತ್ತದೆ. ಬೈಬಲಿನ ವೈಯಕ್ತಿಕ ಅಧ್ಯಯನ ಮತ್ತು ಕ್ರೈಸ್ತ ಶುಶ್ರೂಷೆಯಲ್ಲಿ ಭಾಗವಹಿಸಲಿಕ್ಕೆ ಸಹ ಸಮಯವಿಲ್ಲದಂತಹ ರೀತಿಯಲ್ಲಿ ಅಂಕಿಅಂಶಗಳ ಸಂಶೋಧನೆಯಲ್ಲಿ ಪೂರ್ತಿಯಾಗಿ ಮುಳುಗಿಹೋಗದಿರಿ. (ಮತ್ತಾಯ 24:14; ಯೋಹಾನ 17:3; ಎಫೆಸ 5:15, 16) ಕಂಪ್ಯೂಟರಿನ ಮೂಲಕ ಸಂಭಾಷಿಸಬಹುದಾದರೂ, ಜೊತೆ ಕ್ರೈಸ್ತರೊಂದಿಗೆ ಮುಖಾಮುಖಿ ಭೇಟಿಯಾಗಿ ಮಾತಾಡುವಷ್ಟು ಒಳ್ಳೆಯ ವಿಧವು ಇನ್ನಾವುದೂ ಇರುವುದಿಲ್ಲ. ಇಂಟರ್‌ನೆಟ್‌ ಅನ್ನು ಉಪಯೋಗಿಸಲೇಬೇಕೆಂದಾಗ, ಅದನ್ನು ವಿವೇಕಯುತವಾಗಿ ಉಪಯೋಗಿಸಲು ದೃಢನಿರ್ಧಾರವನ್ನು ಮಾಡಿರಿ. ಅಪಾಯಕಾರಿ ಸೈಟ್‌ಗಳಿಂದ ದೂರವಿರಿ ಮತ್ತು ಆನ್‌ಲೈನ್‌ ಸಂಭಾಷಣೆಯಲ್ಲಿ ಗಂಟಾನುಗಟ್ಟಲೇ ಸಮಯವನ್ನು ಕಳೆಯದಿರಿ. ‘ನಿಮ್ಮ ಹೃದಯವನ್ನು ಬಹು ಜಾಗರೂಕತೆಯಿಂದ ಕಾಪಾಡಿಕೊಳ್ಳಿರಿ’ ಮತ್ತು ಇಂಟರ್‌ನೆಟ್‌ನ ದಾಸರಾಗಬೇಡಿ.—ಜ್ಞಾನೋಕ್ತಿ 4:23.

[ಪಾದಟಿಪ್ಪಣಿಗಳು]

^ ಆಗಸ್ಟ್‌ 8, 1998ರ ಎಚ್ಚರ! ಪತ್ರಿಕೆಯಲ್ಲಿ ಮೂಡಿಬಂದಿರುವ “ಇಂಟರ್‌ನೆಟ್‌ ಎಂದರೇನು?” ಎಂಬ ಲೇಖನಮಾಲೆಯನ್ನು ನೋಡಿರಿ.

^ ಕೆಲವು ಹೆಸರುಗಳು ಬದಲಾಯಿಸಲ್ಪಟ್ಟಿವೆ.

^ ವೆಬ್‌ ಸೈಟ್‌ ಅನ್ನು ತೆರೆಯಲು ಬಳಸಲಾಗುವ ಅಕ್ಷರಮಾಲೆಯೇ ವೆಬ್‌ ಸೈಟ್‌ ವಿಳಾಸವಾಗಿದೆ. ಕೆಲವೊಮ್ಮೆ ವಿಳಾಸದಲ್ಲಿರುವ ಪದಗಳು ಆ ಸೈಟ್‌ನಲ್ಲಿ ಏನಿದೆಯೆಂಬುದನ್ನು ತಿಳಿದುಕೊಳ್ಳಲು ನಮಗೆ ಸಹಾಯಮಾಡುತ್ತವೆ.

^ ಹೋಮ್‌ ಪೇಜ್‌ ಇಲೆಕ್ಟ್ರಾನಿಕ್‌ ಸ್ಟೋರ್‌ಫ್ರಂಟ್‌ ವಿಂಡೋ (ಪ್ರದರ್ಶನದ ಸ್ಥಳ) ಆಗಿದೆ. ಅದು ಸೈಟ್‌ನಲ್ಲಿ ಏನಿದೆ, ಅದರ ಕರ್ತೃ ಯಾರು ಮುಂತಾದ ವಿಷಯಗಳನ್ನು ವಿವರಿಸುತ್ತದೆ.

^ ಆತ್ಮಿಕ ವಿಷಯಗಳನ್ನು ಚರ್ಚಿಸುವುದಕ್ಕಾಗಿ ಸದುದ್ದೇಶವುಳ್ಳ ಕ್ರೈಸ್ತರಿಂದ ಸ್ಥಾಪಿಸಲ್ಪಡುವ ಸಾರ್ವಜನಿಕ ಚ್ಯಾಟ್‌ ರೂಮುಗಳಲ್ಲಿ ಇಂತಹ ಅಪಾಯಗಳಿರಸಾಧ್ಯವಿದೆ. ಅಪ್ರಾಮಾಣಿಕ ಜನರು ಮತ್ತು ಧರ್ಮಭ್ರಷ್ಟರು ಇಂತಹ ಚರ್ಚೆಗಳಲ್ಲಿ ಕೆಲವೊಮ್ಮೆ ಒಳಗೂಡಿ, ತಮ್ಮ ಅಶಾಸ್ತ್ರೀಯ ವಿಚಾರಗಳನ್ನು ಸ್ವೀಕರಿಸುವಂತೆ ಇತರರ ಮನವೊಪ್ಪಿಸಲು ಕಪಟತನದಿಂದ ಪ್ರಯತ್ನಿಸಿದ್ದಾರೆ.

[ಪುಟ 20ರಲ್ಲಿರುವ ಸಂಕ್ಷಿಪ್ತ ವಿವರಣೆ]

“ಕೆಲವೊಂದು ವೆಬ್‌ ಸೈಟ್‌ಗಳು ತಲ್ಲಣಗೊಳಿಸುವಂತಹವುಗಳಾಗಿವೆ. ಯಾವುದೇ ಮುನ್‌ಸೂಚನೆಯನ್ನು ನೀಡದೆ ಅವು ಪರದೆಯ ಮೇಲೆ ಥಟ್ಟನೇ ಕಾಣಿಸಿಕೊಳ್ಳಸಾಧ್ಯವಿದೆ”

[ಪುಟ 21ರಲ್ಲಿರುವ ಚಿತ್ರ]

ಕೆಲವು ಕುಟುಂಬಗಳು ವಾಸದ ಕೋಣೆಯಲ್ಲಿ, ಎಲ್ಲರಿಗೂ ಕಾಣಿಸುವಂತಹ ಜಾಗದಲ್ಲಿ ಕಂಪ್ಯೂಟರ್‌ ಅನ್ನು ಇಡುತ್ತವೆ