ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜಗತ್ತನ್ನು ಗಮನಿಸುವುದು

ಜಗತ್ತನ್ನು ಗಮನಿಸುವುದು

ಜಗತ್ತನ್ನು ಗಮನಿಸುವುದು

ಅಮೆರಿಕದಲ್ಲಿ ಅಧಿಕಗೊಳ್ಳುತ್ತಿರುವ ಸೆರೆವಾಸಿಗಳ ಸಂಖ್ಯೆ

“ಇನ್ನಾವುದೇ ಪ್ರಜಾಪ್ರಭುತ್ವ ದೇಶಕ್ಕಿಂತಲೂ ಅಮೆರಿಕದಲ್ಲಿ ಸದ್ಯಕ್ಕಿರುವ ಸೆರೆವಾಸಿಗಳ ಸಂಖ್ಯೆಯು ಹೋಲಿಸಲಸಾಧ್ಯವಾಗಿದೆ ಮತ್ತು ಈ ಸಂಖ್ಯೆಯು ಸರ್ವಾಧಿಕಾರದ ಕೆಳಗಿದ್ದ ಹೆಚ್ಚಿನ ಸರ್ಕಾರಗಳು ಜನರನ್ನು ಸೆರೆಮನೆಗೆ ಹಾಕಲು ಮಾಡಿದ ಪ್ರಯತ್ನಗಳಿಗಿಂತಲೂ ಅಧಿಕವಾಗಿದೆ” ಎಂದು ದಿ ಎಕಾನಮಿಸ್ಟ್‌ ಗಮನಿಸುತ್ತದೆ. “ಕಳೆದ ವರ್ಷ [ಅಮೆರಿಕದ] 150 ನಿವಾಸಿಗಳಲ್ಲಿ ಒಬ್ಬ ವ್ಯಕ್ತಿಯು (ಮಕ್ಕಳನ್ನು ಸೇರಿಸಿ) ಕಂಬಿ ಎಣಿಸುತ್ತಿದ್ದನು.” ಸೆರೆಮನೆಗೆ ಹಾಕಲ್ಪಟ್ಟಿರುವವರ ಪ್ರಮಾಣವು ಜಪಾನಿಗಿಂತ 20 ಪಟ್ಟು, ಕೆನಡಕ್ಕಿಂತ 6 ಪಟ್ಟು ಮತ್ತು ಪಶ್ಚಿಮ ಯೂರೋಪಿಯನ್‌ ದೇಶಗಳಿಗಿಂತ 5ರಿಂದ 10 ಪಟ್ಟು ಹೆಚ್ಚಾಗಿದೆ. ಅಮೆರಿಕದಲ್ಲಿರುವ ಸೆರೆವಾಸಿಗಳ ಸಂಖ್ಯೆಯು 1980ರಿಂದ ನಾಲ್ಕರಷ್ಟು ಹೆಚ್ಚಾಗಿದೆ. ಈಗ ಬಂಧನದಲ್ಲಿರುವ 4,00,000ಕ್ಕಿಂತಲೂ ಹೆಚ್ಚು ಮಂದಿ ಕೈದಿಗಳು ಅಮಲೌಷಧಗಳಿಗೆ ಸಂಬಂಧಿಸಿದ ಅಪರಾಧಗಳಿಗಾಗಿ ಸೆರೆಮನೆಯಲ್ಲಿದ್ದಾರೆ. ಹೀಗಿದ್ದರೂ, 1988ರಿಂದ ಅಮಲೌಷಧಗಳ ದುರುಪಯೋಗ ಮಾಡುತ್ತಿರುವ ಅನೇಕರು ಕಿಂಚಿತ್ತೂ ಬದಲಾಗದೆ ಹಾಗೆಯೇ ಇದ್ದಾರೆ. “ಕಾರಾಗೃಹವು ಅಪರಾಧದ ವಿರುದ್ಧ ಹೋರಾಡುವ ಸಾಧನವಾಗಿ ಪರಿಣಾಮಕಾರಿಯಾಗಿರುತ್ತದೋ ಇಲ್ಲವೋ, ಆದರೆ ಹೀಗೆ ಹೆಚ್ಚುತ್ತಿರುವ ಸೆರೆವಾಸಿಗಳ ಸಂಖ್ಯೆಯಿಂದ ತುಂಬುತ್ತಿರುವ ಕಾರಾಗೃಹ ವ್ಯವಸ್ಥೆಯನ್ನು ಅಮೆರಿಕ ಇನ್ನೆಷ್ಟು ಕಾಲ ಮುಂದುವರಿಸಿಕೊಂಡು ಹೋಗಲು ಸಾಧ್ಯ?” ಎಂದು ದಿ ಎಕಾನಮಿಸ್ಟ್‌ ಕೇಳುತ್ತದೆ.

ಅರ್ಮಗೆದೋನಿನ ಮೇಲೆ ಬೆಟ್‌ ಕಟ್ಟುತ್ತಿರುವುದು

ಬ್ರಿಟನಿನಲ್ಲಿ ಪ್ರತಿವಾರವು ಬಹುಸಂಖ್ಯೆಯಲ್ಲಿ ಜನರು “ಅರ್ಮಗೆದೋನಿನ ಮೇಲೆ ಬೆಟ್‌ ಕಟ್ಟುತ್ತಿದ್ದಾರೆ” ಎಂದು ದ ಗಾರ್ಡಿಯನ್‌ ವರದಿಸುತ್ತದೆ. 1,001 ವಯಸ್ಕರೊಂದಿಗೆ ಮಾಡಿದ ಒಂದು ಸಮೀಕ್ಷೆಯು ಬಹಿರಂಗಪಡಿಸಿದ್ದೇನೆಂದರೆ, ಲೋಕದ ಅಂತ್ಯವು ಒಂದು ಯುದ್ಧದಿಂದಾಗುವುದೆಂದು 33 ಪ್ರತಿಶತ ಮಂದಿ ನೆನಸುವುದಾದರೆ, ಶೇಕಡ 26ರಷ್ಟು ಮಂದಿ, ಹೆಚ್ಚುತ್ತಿರುವ ಭೂಗೋಲದ ತಾಪಾಮಾನವು ಅಂತ್ಯವನ್ನು ತರುವುದೆಂದು ಭಾವಿಸುತ್ತಾರೆ. ಇನ್ನೂ ಕೆಲವರು ತಾರಾಮಂಡಲದೊಂದಿಗೆ ಢಿಕ್ಕಿಹೊಡೆಯುವ ಮೂಲಕ ಅಂತ್ಯವಾಗಬಹುದು ಎಂದು ಊಹಿಸುತ್ತಾರೆ. ವಾಸ್ತವದಲ್ಲಿ, ಸಮೀಕ್ಷೆಮಾಡಲ್ಪಟ್ಟವರಲ್ಲಿ 59 ಪ್ರತಿಶತ ಜನರು “ನೆನಸುವುದೇನೆಂದರೆ, ರಾಷ್ಟ್ರೀಯ ಲಾಟರಿಯನ್ನು ಗೆಲ್ಲುವುದಕ್ಕಿಂತ ಲೋಕದ ಅಂತ್ಯವನ್ನು ಕಾಣುವ ಸಂಭಾವನೆಗಳೇ ಹೆಚ್ಚು” ಎಂದು ದ ಗಾರ್ಡಿಯನ್‌ ಹೇಳುತ್ತದೆ. ಆದರೆ ಅರ್ಮಗೆದೋನಿನ ಕುರಿತು ಈ ರೀತಿಯ ಊಹಾಪೋಹಗಳೇಕೆ? ಜನರು “ಬರಲಿರುವ ಇಸವಿ 2000ದಿಂದ ಮತ್ತು ಅದನ್ನು ಸುತ್ತುವರಿದಿರುವ ನಾಶನದ ಅನಿಸಿಕೆಗಳಿಂದ ಪ್ರಭಾವಿತರಾಗಿರಬಹುದು” ಎಂದು ಆ ವಾರ್ತಾಪತ್ರಿಕೆಯು ಹೇಳಿಕೆ ನೀಡುತ್ತದೆ.

“ಬಾಬೆಲ್‌ ಗೋಪುರ”

ಯೂರೋಪಿಯನ್‌ ಒಕ್ಕೂಟಕ್ಕೆ (ಈಯೂ) 11 ಅಧಿಕೃತ ಭಾಷೆಗಳಿವೆ ಮತ್ತು ಮುಂದೆ ಅದಕ್ಕೆ ಇನ್ನೂ 10 ಭಾಷೆಗಳು ಸೇರಿಸಲ್ಪಡಬಹುದು ಎಂದು, ಪ್ಯಾರಿಸಿನ ಇಂಟರ್‌ನಾಷ್ಯನಲ್‌ ಹೆರಾಲ್ಡ್‌ ಟ್ರಿಬ್ಯೂನ್‌ ಎಂಬ ವಾರ್ತಾಪತ್ರಿಕೆಯು ವರದಿಸುತ್ತದೆ. ಸದ್ಯಕ್ಕೆ, ಈಯೂವಿನ ಕಾರ್ಯನಿರ್ವಾಹಕ ಮಂಡಳಿಯಾದ ಯೂರೋಪಿಯನ್‌ ಕಮಿಷನ್‌, ವಿಶ್ವಸಂಸ್ಥೆಯ ಮುಖ್ಯ ಕಾರ್ಯಾಲಯಕ್ಕಿಂತ ನಾಲ್ಕು ಪಟ್ಟು ಹೆಚ್ಚು ತರ್ಜುಮೆಗಾರರು ಮತ್ತು ಅನುವಾದಕರನ್ನು ಕೆಲಸಕ್ಕಿಟ್ಟುಕೊಂಡಿದೆ. ಆದರೆ ವಿಶ್ವಸಂಸ್ಥೆಗೆ ಕೇವಲ ಐದು ಅಧಿಕೃತ ಭಾಷೆಗಳು ಮಾತ್ರ ಇವೆ. ಯೂರೋಪನ್ನು ಐಕ್ಯಗೊಳಿಸಲು ಮತ್ತು ಈಯೂವಿನ ಕಾರ್ಯಾಚರಣೆಗಳನ್ನು ಸರಳೀಕರಿಸಲು ಅನೇಕ ಪ್ರಯತ್ನಗಳು ಮಾಡಲ್ಪಡುತ್ತಿರುವುದಾದರೂ, ಭಾಷೆಯ ವಿಷಯದಲ್ಲಿ ಇದಕ್ಕೆ ತದ್ವಿರುದ್ಧವಾದ ವಿಷಯಗಳು ಸಂಭವಿಸುತ್ತಿರುವುದನ್ನು ಕಾಣಬಹುದು. ಏಕೆಂದರೆ, ಪ್ರತಿಯೊಂದು ಸದಸ್ಯ ರಾಷ್ಟ್ರವು ತನ್ನ ಸ್ವಂತ ಭಾಷೆಯನ್ನು ರಕ್ಷಿಸುವುದಕ್ಕಾಗಿ ಹೋರಾಡುತ್ತಿದೆ. “ಬಾಬೆಲಿನ ಒಂದು ಗೋಪುರವು ಕಾಣಿಸುತ್ತಿದೆ,” ಎಂದು ಒಂದು ವಾರ್ತಾಪತ್ರಿಕೆಯು ಹೇಳಿಕೆಯನ್ನು ನೀಡಿತು. ಆಯೋಗವು ಮತ್ತೊಂದು ಸಮಸ್ಯೆಯನ್ನು ಎದುರಿಸಬೇಕಾಗಿದೆ. ಅದು, “ಯೂರೋಸ್ಪೀಕ್‌” ಆಗಿದೆ, ಅಂದರೆ ಪರಿಭಾಷೆ ಮತ್ತು ಭಾವನಾಪದಗಳಿಂದ ತುಂಬಿರುವ ಸಭಾಭಾಷೆಯಾಗಿದೆ. ಒಬ್ಬ ಭಾಷಾಂತರಕಾರನಿಗನುಸಾರ, ರಾಜಕಾರಣಿಗಳನ್ನು ಸ್ಪಷ್ಟವಾಗಿ ಮಾತಾಡುವಂತೆ ಮಾಡುವುದೇ ಒಂದು ಸವಾಲಾಗಿದೆ, ಏಕೆಂದರೆ “ಅವರ ಗುರಿಯು ಅನೇಕವೇಳೆ ಅಸ್ಪಷ್ಟವಾಗಿ ಮಾತಾಡುವುದೇ ಆಗಿದೆ.”

ಭಿಕ್ಷುಕನಂತೆ ನಟಿಸುವುದು

ಅನೇಕ ಭಿಕ್ಷುಕರು ನಿರ್ಗತಿಕ ಸ್ಥಿತಿಯಲ್ಲಿರುವುದಾದರೂ, ಭಾರತದಲ್ಲಿ ಪ್ರಕಟಿಸಲಾಗುವ ದ ವೀಕ್‌ ಎಂಬ ಪತ್ರಿಕೆಯ ಒಂದು ವರದಿಗನುಸಾರ, ಕೆಲವರು ನಾವು ನೆನಸುವಂತೆ ವಾಸ್ತವದಲ್ಲಿ ಇರುವುದಿಲ್ಲ. ಭಾರತದ ಮಹಾರಾಷ್ಟ್ರ ರಾಜ್ಯದಲ್ಲಿ, ಒಬ್ಬ ಭಿಕ್ಷುಕನು ಊರುಗೋಲನ್ನು ಹಿಡಿದುಕೊಂಡು ಟ್ರ್ಯಾಫಿಕ್‌ ಲೈಟಿನ ಬಳಿ ನಿಂತಿದ್ದ ಒಂದು ಕಾರನ್ನು ಸಮೀಪಿಸಿದನು. ಕಾರ್‌ ಡ್ರೈವರ್‌ ಆ ಭಿಕ್ಷುಕನನ್ನು ಅಲಕ್ಷಿಸುತ್ತಾ ತನ್ನ ಗೆಳತಿಯೊಂದಿಗೆ ಮಾತನಾಡುತ್ತಲೇ ಇದ್ದನು. ಇದನ್ನು ಗಮನಿಸಿದ ಭಿಕ್ಷುಕನು ತನ್ನ ಸ್ವರವನ್ನು ಇನ್ನೂ ಹೆಚ್ಚಿಸುತ್ತಾ ಬೇಡಲಾರಂಭಿಸಿದನು. ಇದನ್ನು ಸಹಿಸಲಾಗದೆ ಆ ಕಾರಿನ ಡ್ರೈವರ್‌ ತನ್ನ ಗಾಜಿನ ಕಿಟಕಿಯನ್ನು ಕೆಳಗೆ ಸರಿಸಿ, ಅವನ ಭಿಕ್ಷೆಪಾತ್ರೆಯಲ್ಲಿದ್ದ ಕೆಲವೊಂದು ನಾಣ್ಯಗಳನ್ನು ಚೆಲ್ಲುತ್ತಾ ಅವನನ್ನು ದೂರತಳ್ಳಿದನು. ಇದ್ದಕ್ಕಿದ್ದಂತೆ, ಆ “ಕುಂಟ” ಭಿಕ್ಷುಕನು ವಾಸಿಯಾಗಿಬಿಟ್ಟನು ಹಾಗೂ ತನ್ನ ಊರುಗೋಲಿನಿಂದ ಕಾರಿನ ಮುಂದಿನ ಗಾಜನ್ನು ನುಚ್ಚುನೂರು ಮಾಡಲು ಪ್ರಾರಂಭಿಸಿದನು. ಹತ್ತಿರದಲ್ಲೇ ಇತರ ವಾಹನಗಳ ಬಳಿ ಭಿಕ್ಷೆಬೇಡುವುದರಲ್ಲಿ ವ್ಯಸ್ತರಾಗಿದ್ದ “‘ಕುಂಟ,’ ‘ಕುರುಡ,’ ಮತ್ತು ‘ಊನ’ ಸ್ನೇಹಿತರ ಒಂದು ಗುಂಪು ಅವನ ಸಹಾಯಕ್ಕಾಗಿ ಧಾವಿಸಿತು.” ಅವರು ಕಲ್ಲುಗಳನ್ನು, ದೊಣ್ಣೆಗಳನ್ನು ಮತ್ತು ಊರುಗೋಲನ್ನು ತೂರಲು ಪ್ರಾರಂಭಿಸಿದರು ಮತ್ತು ಕೊನೆಯಲ್ಲಿ ಆ ಯುವ ವ್ಯಕ್ತಿಯನ್ನು ಕಾರಿನಿಂದ ಹೊರಗೆಳೆದರು ಎಂದು ದ ವೀಕ್‌ ಹೇಳಿತು. ಆಕಸ್ಮಿಕವಾಗಿ, ಆ ಸ್ಥಳಕ್ಕೆ ಬರುತ್ತಿದ್ದ ಪೋಲಿಸಿನ ಒಂದು ವಾಹನವನ್ನು ನೋಡಿ ಆ ಭಿಕ್ಷುಕರು ಅಲ್ಲಿಂದ ಕಾಲುಕಿತ್ತರು.

ಬೇಸರಹಿಡಿಸುವ ಕೆಲಸ ಆರೋಗ್ಯಕರವಲ್ಲ

ಜರ್ಮನಿಯ 50,000 ಕಾರ್ಮಿಕರ ಮಧ್ಯೆ ಮಾಡಲ್ಪಟ್ಟ ಅಧ್ಯಯನವು ತೋರಿಸಿದ್ದೇನೆಂದರೆ, ಹೆಚ್ಚು ಕಾರ್ಯಮಗ್ನರಾಗಿರಬೇಕಾದ ಕೆಲಸವನ್ನು ಹೊಂದಿರುವವರಿಗಿಂತ, ತೀರ ಕಡಿಮೆ ಕೆಲಸವಿರುವ ಉದ್ಯೋಗವನ್ನು ಹೊಂದಿರುವವರು ಗಂಭೀರವಾದ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ. “ಯಾರ ಕೆಲಸವು ಪದೇಪದೇ ಮಾಡುವಂತಹದ್ದಾಗಿರುತ್ತದೋ ಮತ್ತು ಯಾರಿಗೆ ಸ್ವಾತಂತ್ರ್ಯದ ಕೊರತೆಯಿರುತ್ತದೊ ಅಂಥ ಕೆಲಸಗಾರರು, ಗಮನವನ್ನು ಅಪೇಕ್ಷಿಸುವಂಥ ಕೆಲಸವನ್ನು ಮಾಡುವವರಿಗಿಂತ ಎರಡು ಪಟ್ಟು ಹೆಚ್ಚು ಅಸ್ವಸ್ಥರಾಗಿದ್ದಾರೆ ಎಂದು ದೃಢೀಕರಿಸಲಾಗಿದೆ” ಎಂದು ಆಗ್ಸ್‌ಬುರ್ಗ್‌ ಆಲ್ಗೆಮೈನ ವಾರ್ತಾಪತ್ರಿಕೆಯು ಗಮನಿಸುತ್ತದೆ. ತೀರ ಕಡಿಮೆ ಗಮನವನ್ನು ಅಪೇಕ್ಷಿಸುವ ಕೆಲಸದಿಂದ ಗೈರುಹಾಜರಿಗಳ ಪ್ರಮಾಣ ಮತ್ತು ಅವಧಿಗಳ ಮೇಲೆ ಬೀಳುವ ಪ್ರಭಾವದಷ್ಟು ಇನ್ನಾವ ಕೆಲಸಸಂಬಂಧಿತ ಒತ್ತಡದ ಪ್ರಭಾವವೂ ಇಲ್ಲ. ಆ ವರದಿಗನುಸಾರ, ಹೆಚ್ಚು ಸವಾಲನ್ನೊಡ್ಡದ ಕೆಲಸವನ್ನು ಹೊಂದಿರುವವರು ಅನೇಕವೇಳೆ “ರಕ್ತದೊತ್ತಡ, ಹೊಟ್ಟೆ ಮತ್ತು ಕರುಳಿನ ಸಮಸ್ಯೆಗಳು, ಬೆನ್ನು ಮತ್ತು ಕೀಲುಗಳ ಅಸ್ವಸ್ಥತೆ”ಯನ್ನು ಅನುಭವಿಸುತ್ತಾರೆ.

ಕಿಂಚಿತ್ತೂ ಪ್ರಯೋಜನವಿಲ್ಲ

“ಧೂಮಪಾನ ಜನರನ್ನು ತೆಳ್ಳಗಾಗಿಸುವುದಿಲ್ಲ,” ಎಂದು ಯೂನಿವರ್ಸಿಟಿ ಆಫ್‌ ಕ್ಯಾಲಿಫೋರ್ನಿಯಾದ ಬರ್ಕ್‌ಲಿ ವೆಲ್‌ನೆಸ್‌ ವಿಶ್ವವಿದ್ಯಾನಿಲಯವು ಹೇಳುತ್ತದೆ. “ತಾವು ತೆಳ್ಳಗಾಗಲು ಧೂಮಪಾನವು ಸಹಾಯಮಾಡುವುದೆಂದು ನೆನಸುತ್ತಾ, ವಿಶೇಷವಾಗಿ ಅನೇಕ ಯುವತಿಯರು ಧೂಮಪಾನಮಾಡಲು ಆರಂಭಿಸುತ್ತಾರೆ.” ಆದರೆ, 18ರಿಂದ 30 ವರ್ಷದ, 4,000ದಷ್ಟು ವಯಸ್ಕರೊಂದಿಗೆ ಮಾಡಿದ ಅಧ್ಯಯನವು ತೋರಿಸಿದ್ದೇನೆಂದರೆ, “ಸುಮಾರು ಏಳು ವರ್ಷಗಳ ಸಮಯಾವಧಿಯಲ್ಲಿ, ವ್ಯಕ್ತಿಯು ಧೂಮಪಾನ ಮಾಡಲಿ ಅಥವಾ ಮಾಡದಿರಲಿ ತೂಕದ ಹೆಚ್ಚುವಿಕೆ ಸಾಮಾನ್ಯವಾಗಿತ್ತು (ಇದು ವರ್ಷಕ್ಕೆ ಸರಾಸರಿ ಒಂದು ಪೌಂಡಿಗಿಂತಲೂ ಹೆಚ್ಚಿತ್ತು).” ಲೇಖನವು ಮಕ್ತಾಯಗೊಳಿಸಿದ್ದು: “ತೂಕವನ್ನು ನಿಯಂತ್ರಣದಲ್ಲಿಡುವುದು ಧೂಮಪಾನದಿಂದ ಸಿಗುವ ಪ್ರಯೋಜನ ಅಲ್ಲ, ಬದಲಿಗೆ ಅದರಿಂದ ಕಿಂಚಿತ್ತೂ ಪ್ರಯೋಜನವಿಲ್ಲ.”

ಕೋಪವನ್ನು ಹೊರಗೆಡಹುವುದು

ಭಾವಶುದ್ಧಿಯೆಂದು ಕರೆಯಲ್ಪಡುವ ವಿಧಾನವು, “ನಿರ್ಜೀವ ವಸ್ತುಗಳ ಮೇಲೆ ಕೋಪವನ್ನು ತೋರಿಸುವುದಾಗಿದೆ. ಉದಾಹರಣೆಗೆ, ದಿಂಬನ್ನು ಗುದ್ದುವುದು ಇಲ್ಲವೇ ಗುದ್ದುವ ಚೀಲವನ್ನು ತಿವಿಯುವುದು, ಆಕ್ರಮಣಕಾರಕ ಪ್ರವೃತ್ತಿಯನ್ನು ಕಡಿಮೆಮಾಡುವುದಕ್ಕಿಂತ ಹೆಚ್ಚಿಸುತ್ತದೆ,” ಎಂದು ಕೆನಡದ ನ್ಯಾಷನಲ್‌ ಪೋಸ್ಟ್‌ ವರದಿಸುತ್ತದೆ. ಐಅವಾ ಸ್ಟೇಟ್‌ ವಿಶ್ವವಿದ್ಯಾನಿಲಯದ ಮನೋವಿಜ್ಞಾನದ ಸಹಾಯಕ ಪ್ರಾಧ್ಯಾಪಕರಾದ ಡಾಕ್ಟರ್‌ ಬ್ರಾಡ್‌ ಜೆ. ಬುಷ್‌ಮನ್‌ ಗಮನಿಸುವುದು: “ಭಾವಶುದ್ಧಿಯು, ತನ್ನ ಸಂಶೋಧನ ಸಾಹಿತ್ಯದಲ್ಲಿ ಪಡೆದಿರುವುದಕ್ಕಿಂತ ಎಷ್ಟೋ ಹೆಚ್ಚು ಬೆಂಬಲವನ್ನು ಜನಪ್ರಿಯ ಮಾಧ್ಯಮದಲ್ಲಿ ಪಡೆದಿದೆ.” ಸಂಶೋಧಕರು ಇನ್ನೂ ಕಂಡುಕೊಂಡದ್ದೇನೆಂದರೆ, “ಕೋಪವನ್ನು ನಿಭಾಯಿಸುವುದಕ್ಕೆ ಉತ್ತಮ ವಿಧಾನವಾಗಿ ‘ಭಾವಶುದ್ಧಿಯನ್ನು’ ಶಿಫಾರಸ್ಸು ಮಾಡುವ ಪುಸ್ತಕ ಮತ್ತು ಲೇಖನಗಳು, ಜನರು ತಮ್ಮ ಆತ್ಮ ನಿಯಂತ್ರಣದಲ್ಲಿ ವಿರಮಿಸುವಂತೆ ಅನುಮತಿಸಿ, ಆಕ್ರಮಣಕಾರಕ ಪ್ರವೃತ್ತಿಯನ್ನು ಬೆಳಸಬಹುದು” ಎಂದು ಪೋಸ್ಟ್‌ ಗಮನಿಸುತ್ತದೆ.

ಹೆಚ್ಚುತ್ತಿರುವ ಶವಸಂಸ್ಕಾರದ ಖರ್ಚು

ಶವಸಂಸ್ಕಾರದ ಖರ್ಚನ್ನು ಕಡಿಮೆಗೊಳಿಸುವುದಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಶವದಹನದ ಕಡೆಗೆ ತಿರುಗುತ್ತಿದ್ದಾರೆ. ರಾಷ್ಟ್ರೀಯ ಶವಸಂಸ್ಕಾರದ ನಿರ್ದೇಶಕರ ಸಂಘಕ್ಕನುಸಾರ, 1996ರಲ್ಲಿ ಅಮೆರಿಕದ ಸಾಂಪ್ರದಾಯಿಕ ಶವಸಂಸ್ಕಾರದ ಸರಾಸರಿ ಖರ್ಚು 4,600 ಡಾಲರ್‌ಗಳಾಗಿತ್ತು. ಇದಕ್ಕೆ ತದ್ವಿರುದ್ಧವಾಗಿ, “ಶವದಹನಕ್ಕಾಗಿರುವ ಖರ್ಚು 500 ಡಾಲರುಗಳಿಂದ 2,000 ಡಾಲರುಗಳಾಗಿವೆ” ಎಂದು ಶಿಕಾಗೋ ಸನ್‌-ಟೈಮ್ಸ್‌ ಹೇಳುತ್ತದೆ. ಇದು “ಶವವನ್ನು ಸುಡುವುದಕ್ಕಾಗಿ ಉಪಯೋಗಿಸುವ ಪೆಟ್ಟಿಗೆ ಮತ್ತು ಬೂದಿಯನ್ನು ಇಡಲು ಭಸ್ಮಪಾತ್ರೆಯ ಆಯ್ಕೆಯ ಮೇಲೆ ಆಧರಿತವಾಗಿದೆ.” ಅಷ್ಟುಮಾತ್ರವಲ್ಲ, ಶವಸಂಸ್ಕಾರಕ್ಕೆ ಬೇಕಾಗಿರುವಂತೆ ಸ್ಥಳ ಮತ್ತು ಸಮಾಧಿಕಲ್ಲಿನ ಅಗತ್ಯವು ಶವದಹನಕ್ಕೆ ಇರುವುದಿಲ್ಲ, ಅದು ಸಾಂಪ್ರದಾಯಿಕ ಶವಸಂಸ್ಕಾರದ ಖರ್ಚಿನಲ್ಲಿ ಇನ್ನೂ 40 ಪ್ರತಿಶತವನ್ನು ಕೂಡಿಸಬಹುದು. ಆ ವಾರ್ತಾಪತ್ರಿಕೆಯು ಇನ್ನೂ ಹೇಳುವುದು, 1997ರಲ್ಲಿ ಅಮೆರಿಕದಲ್ಲಿ ಶವದಹನವು ಶೇಕಡ 23.6ರಷ್ಟು ಮಾತ್ರವೇ ಇತ್ತು. ಆದರೆ ಈ ಸಂಖ್ಯೆಯು ಮುಂದಿನ 10 ವರ್ಷಗಳಲ್ಲಿ ಶೇಕಡ 42ರಷ್ಟನ್ನು ಮುಟ್ಟುವುದು ಎಂದು ನಿರೀಕ್ಷಿಸಲಾಗಿದೆ.

ಬಾಯಿಯ ಕ್ಯಾನ್ಸರಿನ ಪಿಡುಗು

ಭಾರತದ ದೆಹಲಿಯಲ್ಲಿ, ಬಾಯಿಯ ಕ್ಯಾನ್ಸರಿನ ಸಂಭವಗಳು ಕ್ಯಾಲಿಫೋರ್ನಿಯದ ಲಾಸ್‌ ಏಂಜಲೀಸ್‌ಗಿಂತ ನಾಲ್ಕು ಪಟ್ಟು ಹೆಚ್ಚಾಗಿವೆ ಎಂದು ಇಂಡಿಯನ್‌ ಎಕ್ಸ್‌ಪ್ರೆಸ್‌ ಪತ್ರಿಕೆಯು ವರದಿಸುತ್ತದೆ. ಸದ್ಯಕ್ಕೆ, ದೆಹಲಿಯಲ್ಲಿ ಹೊಸದಾಗಿ ಕ್ಯಾನ್ಸರ್‌ ಪರೀಕ್ಷೆಗಾಗಿ ಬಂದಿರುವ ಗಂಡಸರ ಸಂಖ್ಯೆಯಲ್ಲಿ, 18.1 ಪ್ರತಿಶತದಷ್ಟು ಮಂದಿ ಬಾಯಿಯ ಕ್ಯಾನ್ಸರ್‌ ರೋಗ ಇರುವವರಾಗಿದ್ದಾರೆ. ಆದರೆ ಈ ಸಂಖ್ಯೆಯು 1995ರಲ್ಲಿ ಕೇವಲ 10 ಪ್ರತಿಶತದಷ್ಟಿತ್ತು. ಬಾಯಿಯ ಕ್ಯಾನ್ಸರಿಗೆ ಮುಖ್ಯ ಕಾರಣಗಳು, ತಂಬಾಕನ್ನು ಅಗಿಯುವುದು ಮತ್ತು ಬೀಡಿ (ಭಾರತದ ಸಿಗರೇಟು) ಅನ್ನು ಸೇದುವುದು ಮತ್ತು ಪಾನ್‌ ಮಸಾಲ (ತಂಬಾಕಿನ ಮಿಶ್ರಣ, ಅಡಿಕೆ ಪುಡಿ ಮತ್ತು ಇನ್ನಿತರ ಮಿಶ್ರಣಗಳು) ಆಗಿವೆ. ವೀಳ್ಯದೆಲೆಯೊಳಗೆ ಮಡಚಿಡಲ್ಪಟ್ಟ ಈ ಮಿಶ್ರಣವನ್ನು ನಂತರ ಅಗೆಯಲಾಗುತ್ತದೆ. ನಿರ್ಭಯವಾಗಿ ಪಾನ್‌ ಮಸಾಲವನ್ನು ಹೆಚ್ಚೆಚ್ಚು ಸೇವಿಸುತ್ತಿರುವ ಶಾಲಾಮಕ್ಕಳ ಸಂಖ್ಯೆಯು ಭೀತಿಯನ್ನು ಉಂಟುಮಾಡುತ್ತದೆ ಎಂದು ವಾರ್ತಾಪತ್ರಿಕೆಯು ತಿಳಿಸುತ್ತದೆ. ಒಬ್ಬ ಪರಿಣತನು ಎಚ್ಚರ ನೀಡಿದ್ದೇನೆಂದರೆ, ಇಡೀ ಭಾರತವು “ಬಾಯಿಯ ಕ್ಯಾನ್ಸರಿನ ಪಿಡುಗಿನ” ಕಡೆಗೆ ಮುನ್ನುಗ್ಗುತ್ತಿದೆ.