ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪ್ರಕೃತಿಯಲ್ಲಿರುವ ವಿನ್ಯಾಸಗಳಿಂದ ಕಲಿತುಕೊಳ್ಳುವುದು

ಪ್ರಕೃತಿಯಲ್ಲಿರುವ ವಿನ್ಯಾಸಗಳಿಂದ ಕಲಿತುಕೊಳ್ಳುವುದು

ಪ್ರಕೃತಿಯಲ್ಲಿರುವ ವಿನ್ಯಾಸಗಳಿಂದ ಕಲಿತುಕೊಳ್ಳುವುದು

“ನಮ್ಮ ಅತ್ಯುತ್ತಮವಾದ ಅನೇಕ ಆವಿಷ್ಕಾರಗಳು ಅಥವಾ ಈಗಾಗಲೇ ನಾವು ಉಪಯೋಗಿಸುತ್ತಿರುವ ವಸ್ತುಗಳು ಇತರ ಸೃಷ್ಟಿಜೀವಿಗಳಿಂದ ನಕಲುಮಾಡಲ್ಪಟ್ಟಿವೆ.”ಫಿಲ್‌ ಗೇಟ್ಸ್‌, ವೈಲ್ಡ್‌ ಟೆಕ್ನಾಲಜಿ.

ಹಿಂದಿನ ಲೇಖನದಲ್ಲಿ ತಿಳಿಸಲಾದಂತೆ ಬಯೋಮಿಮೆಟಿಕ್ಸ್‌ ವಿಜ್ಞಾನದ ಗುರಿಯು, ಪ್ರಕೃತಿಯನ್ನು ಅನುಕರಿಸುವ ಮೂಲಕ ಹೆಚ್ಚು ಜಟಿಲವಾದ ಸಾಧನಗಳನ್ನು ಮತ್ತು ಯಂತ್ರಗಳನ್ನು ಉತ್ಪಾದಿಸಲು ಪ್ರಯತ್ನಿಸುವುದಾಗಿದೆ. ಪ್ರಕೃತಿಯು ಮಾಲಿನ್ಯವನ್ನು ಉಂಟುಮಾಡದೆ ತನ್ನ ಉತ್ಪನ್ನಗಳನ್ನು ತಯಾರಿಸುತ್ತದೆ ಮತ್ತು ಆ ಉತ್ಪನ್ನಗಳಿಗೆ ಚೇತರಿಸಿಕೊಳ್ಳುವ ಸಾಮರ್ಥ್ಯವಿದೆ ಮಾತ್ರವಲ್ಲ ಅವುಗಳು ಹಗುರವಾಗಿದ್ದರೂ ನಂಬಲಾಗದಷ್ಟು ಶಕ್ತಿಯುತವಾಗಿವೆ.

ಉದಾಹರಣೆಗೆ, ಸಮಾನವಾದ ತೂಕವುಳ್ಳ ಎಲುಬು ಮತ್ತು ಉಕ್ಕನ್ನು ತೆಗೆದುಕೊಂಡರೂ ಸಹ, ಉಕ್ಕಿಗಿಂತ ಎಲುಬು ಹೆಚ್ಚು ಶಕ್ತಿಶಾಲಿಯಾಗಿದೆ. ಹಾಗಾದರೆ, ಅದರ ಗುಟ್ಟೇನು? ಇದಕ್ಕೆ ಒಂದು ಉತ್ತರವು, ಉತ್ತಮವಾಗಿ ವಿನ್ಯಾಸಿಸಲ್ಪಟ್ಟ ಅದರ ಆಕಾರದಲ್ಲಿ ಅಡಗಿದೆ. ಆದರೂ, ಇದಕ್ಕೆ ಮೂಲ ಕಾರಣಗಳು ಅಣುವಿನ ಮಟ್ಟದಲ್ಲಿ ಅಡಗಿವೆ. “ಸಫಲವಾಗಿ ಜೀವಿಸುವ ಜೀವಾಣುಗಳ ಸಾಮರ್ಥ್ಯವು ಅದರ ಚಿಕ್ಕ ಘಟಕಗಳ ವಿನ್ಯಾಸ ಮತ್ತು ಅವುಗಳ ಜೋಡಣೆಯ ಮೇಲೆ ಹೊಂದಿಕೊಂಡಿದೆ,” ಎಂದು ಗೇಟ್ಸ್‌ ವಿವರಿಸುತ್ತಾರೆ. ಈ ಅತ್ಯಂತ ಚಿಕ್ಕ ಘಟಕಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ಫಲಿತಾಂಶವಾಗಿ, ಎಲುಬಿನಿಂದ ಹಿಡಿದು ರೇಷ್ಮೆಯ ವರೆಗಿನ ಪ್ರಾಕೃತಿಕ ಉತ್ಪನ್ನಗಳಲ್ಲಿರುವ ಅಪೇಕ್ಷಣೀಯ ಶಕ್ತಿ ಮತ್ತು ಹಗುರತೆಗೆ ಕಾರಣವಾಗಿರುವ ಪದಾರ್ಥಗಳನ್ನು ವಿಜ್ಞಾನಿಗಳು ಬೇರ್ಪಡಿಸಿದ್ದಾರೆ. ವಿಜ್ಞಾನಿಗಳು ಕಂಡುಹಿಡಿದಿರುವಂತೆ, ಈ ಪದಾರ್ಥಗಳು ಸ್ವಾಭಾವಿಕವಾಗಿ ಸಮ್ಮಿಶ್ರಿತಗೊಂಡಿರುವ ಭಾಗಗಳ ವಿಭಿನ್ನ ರೂಪಗಳಾಗಿವೆ.

ಸಮ್ಮಿಶ್ರಿತ ಪದಾರ್ಥಗಳ ಅದ್ಭುತ

ಎರಡು ಅಥವಾ ಮೂರು ಪದಾರ್ಥಗಳು ಸಂಯೋಜಿತಗೊಂಡು ಮೂಲ ಪದಾರ್ಥಗಳಿಗಿಂತಲೂ ಹೆಚ್ಚು ಮಿಗಿಲಾಗಿರುವ ಗುಣಲಕ್ಷಣಗಳುಳ್ಳ ಹೊಸ ದ್ರವ್ಯವನ್ನು ರಚಿಸುತ್ತವೆ ಮತ್ತು ಹೀಗೆ ರಚಿತವಾದ ಈ ಘನ ಪದಾರ್ಥವು ಸಮ್ಮಿಶ್ರಿತ ಪದಾರ್ಥವಾಗಿರುತ್ತದೆ. ಇದನ್ನು ದೋಣಿಯ ಒಡಲು, ಗಾಳದ ಕೋಲು, ಬಿಲ್ಲು-ಬಾಣಗಳಲ್ಲಿ ಮತ್ತು ಇತರ ಕ್ರೀಡಾ ಸಾಮಗ್ರಿಗಳಲ್ಲಿ ಸಾಮಾನ್ಯವಾಗಿ ಉಪಯೋಗಿಸಲಾಗುವ ಮತ್ತು ಕೃತ್ರಿಮವಾಗಿ ಸಂಯೋಜಿಸಲಾಗುವ ಫೈಬರ್‌ಗ್ಲಾಸ್‌ ಸಮ್ಮಿಶ್ರಿತ ಪದಾರ್ಥಗಳಿಂದ ದೃಷ್ಟಾಂತಿಸಬಹುದು. * ಗಾಜಿನ ಉತ್ತಮವಾದ ಫೈಬರಿನ ದ್ರವ ಅಥವಾ ಪ್ಲಾಸ್ಟಿಕ್‌ನ ಜೆಲ್ಲಿಯಂಥ ಜೀವಕಣಗಳ ಮಧ್ಯೆಯಿರುವ ದ್ರವ್ಯ ಪದಾರ್ಥದಲ್ಲಿರುವ ಅಣುಗಳಿಂದ ಕೂಡಿದ ಪದಾರ್ಥದಿಂದ (ಇದನ್ನು ಪಾಲಿಮರ್‌ ಎಂದು ಕರೆಯಲಾಗುತ್ತದೆ) ಫೈಬರ್‌ಗ್ಲಾಸ್‌ ಮಾಡಲ್ಪಡುತ್ತದೆ. ಪಾಲಿಮರ್‌ ಗಟ್ಟಿಯಾದಾಗ, ತೂಕದಲ್ಲಿ ಹಗುರವಾಗಿದ್ದು, ಶಕ್ತಿಶಾಲಿಯಾದ ಮತ್ತು ಬಗ್ಗಿಸಲು ಸುಲಭವಾಗಿರುವ ದ್ರವ್ಯ ಪದಾರ್ಥವು ಹೊರಬರುತ್ತದೆ. ಫೈಬರ್‌ಗಳ ವಿಧಗಳು ಮತ್ತು ದ್ರವ್ಯ ಪದಾರ್ಥಗಳು ಭಿನ್ನವಾಗಿರುವುದಾದರೆ, ವಿಸ್ತೃತ ಮಟ್ಟದಲ್ಲಿ ಭಾರೀ ಪ್ರಮಾಣದ ಉತ್ಪನ್ನಗಳನ್ನು ತಯಾರಿಸಸಾಧ್ಯವಿದೆ. ಮಾನವರಲ್ಲಿ, ಪ್ರಾಣಿಗಳಲ್ಲಿ ಮತ್ತು ಸಸ್ಯಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ದ್ರವ್ಯ ಪದಾರ್ಥಗಳಿಗೆ ಹೋಲಿಸುವಾಗ, ಮಾನವ ರಚಿತ ಸಮ್ಮಿಶ್ರಿತ ಪದಾರ್ಥಗಳು ಈಗಲೂ ಕೆಳಮಟ್ಟದಲ್ಲಿವೆ ಎಂಬುದು ಸತ್ಯ.

ಮಾನವರಲ್ಲಿ ಮತ್ತು ಪ್ರಾಣಿಗಳಲ್ಲಿ, ಗ್ಲಾಸ್‌ ಫೈಬರ್‌ ಅಥವಾ ಇಂಗಾಲದ ಬದಲು, ಕಾಲಜಿನ್‌ ಎಂದು ಕರೆಯಲ್ಪಡುವ ಎಳೆಗಳುಳ್ಳ ಪ್ರೋಟೀನ್‌ ಪದಾರ್ಥವನ್ನು ಚರ್ಮ, ಕರುಳು, ಮೃದ್ವಸ್ಥಿ, ಸ್ನಾಯು, ಎಲುಬು ಮತ್ತು ಹಲ್ಲುಗಳಿಗೆ (ಎನಾಮೆಲ್‌ಗಾಗಿರುವುದನ್ನು ಹೊರತುಪಡಿಸಿ) ಬಲವನ್ನು ಒದಗಿಸುವ ಸಮ್ಮಿಶ್ರಿತ ಪದಾರ್ಥಗಳಿಗೆ ಮೂಲ ಪದಾರ್ಥವಾಗಿ ಉಪಯೋಗಿಸಲಾಗುತ್ತದೆ. * ಕಾಲಜಿನ್‌ ಇರುವ ಸಮ್ಮಿಶ್ರಿತ ಪದಾರ್ಥವನ್ನು “ಇಲ್ಲಿಯವರೆಗೂ ಕಂಡುಹಿಡಿದಿರುವ ಕೃತಕ ಸಮ್ಮಿಶ್ರಿತ ಪದಾರ್ಥಗಳಲ್ಲೇ ಹೆಚ್ಚು ಉತ್ತಮ ಪದಾರ್ಥವಾಗಿದೆ” ಎಂದು ಒಂದು ಪರಾಮರ್ಶೆ ಕೃತಿಯು ವಿವರಿಸುತ್ತದೆ.

ದೃಷ್ಟಾಂತಕ್ಕೆ, ಮಾಂಸಖಂಡವನ್ನು ಎಲುಬಿಗೆ ಜೋಡಿಸುವ ಸ್ನಾಯುವನ್ನು ಪರಿಗಣಿಸಿರಿ. ಕಾಲಜಿನ್‌ ಮೇಲಾಧರಿತ ಫೈಬರ್‌ಗಳಿಂದ ಪಡೆಯುವ ಶಕ್ತಿಯಿಂದ ಮಾತ್ರವೇ ಅಲ್ಲ, ಈ ಫೈಬರ್‌ಗಳು ಪರಸ್ಪರ ಹೆಣೆಯಲ್ಪಟ್ಟಿರುವ ಪ್ರತಿಭಾಪೂರ್ಣವಾದ ವಿಧದಿಂದ ಸಹ ಈ ಸ್ನಾಯುಗಳು ವಿಶಿಷ್ಟವಾದವುಗಳಾಗಿವೆ. ಬಯೋಮಿಮಿಕ್ರೀ ಎಂಬ ಪುಸ್ತಕದಲ್ಲಿ ಜ್ಯಾನ್‌ ಬ್ಯಾನಸ್‌ ಎಂಬುವರು ಬರೆಯುವುದೇನೆಂದರೆ, ಹೊಸೆದಿರದ ಸ್ನಾಯುವಿನ “ನಿಷ್ಕೃಷ್ಟತೆಯ ಕುರಿತು ಗ್ರಹಿಸುವುದು ಬಹಳ ಮಟ್ಟಿಗೆ ನಂಬಲಾಗದ ವಿಷಯವಾಗಿದೆ.” ನಿಮ್ಮ ಮುಂದೋಳಿನಲ್ಲಿರುವ ಸ್ನಾಯುವು ಕೇಬಲ್‌ಗಳಿಂದ ಹೊಸೆದು ಕಟ್ಟಿರುವಂಥದಾಗಿದೆ. ಇದು, ಎರಡು ಕೊನೆಗಳಲ್ಲಿ ಸ್ತಂಭವಿರುವ ಸೇತುವೆಗಳಲ್ಲಿ ಉಪಯೋಗಿಸಲಾಗುವ ಕೇಬಲ್‌ಗಳಂತೆ ಇದೆ. ಪ್ರತಿಯೊಂದು ಕೇಬಲ್‌ ತಾನೇ ತೆಳ್ಳಗಿನ ಹೊಸೆದಿರುವ ಕೇಬಲ್‌ಗಳ ಕಟ್ಟುಗಳಾಗಿವೆ. ಈ ತೆಳ್ಳಗಿನ ಕೇಬಲ್‌ಗಳು ತಾನೇ ಅಣುಗಳ ಹೊಸೆದ ಕಟ್ಟುಗಳಾಗಿರುತ್ತವೆ. ಈ ಅಣುಗಳು, ಹೊಸೆದ ಸೂಕ್ಷ್ಮ ಪರಮಾಣುಗಳ ಸುರುಳಿಯಾಕಾರದ ಕಟ್ಟುಗಳಾಗಿವೆ ಎಂಬುದು ಸ್ಪಷ್ಟ. ಪುನಃ ಪುನಃ ನಿಷ್ಕೃಷ್ಟವಾದ ಸೌಂದರ್ಯವು ಹೊರಗೆಡವಲ್ಪಡುತ್ತದೆ.” ಅವರು ಇದನ್ನು “ಪ್ರತಿಭಾಪೂರ್ಣವಾದ ಇಂಜಿನಿಯರಿಂಗ್‌ ಕೆಲಸ”ವೆಂದು ಕರೆಯುತ್ತಾರೆ. ಪ್ರಕೃತಿಯ ವಿನ್ಯಾಸಗಳಿಂದಲೇ ನಾವು ಪ್ರೇರಿಸಲ್ಪಟ್ಟಿದ್ದೇವೆ ಎಂದು ವಿಜ್ಞಾನಿಗಳು ಹೇಳುವುದರಲ್ಲಿ ಏನಾದರೂ ಆಶ್ಚರ್ಯವಿದೆಯೇ?—ಯೋಬ 40:15, 17ನ್ನು ಹೋಲಿಸಿರಿ.

ಈಗಾಗಲೇ ತಿಳಿಸಿದಂತೆ, ಮಾನವ ರಚಿತ ಸಮ್ಮಿಶ್ರಿತ ಪದಾರ್ಥಗಳನ್ನು ಪ್ರಕೃತಿಯ ಪದಾರ್ಥಗಳೊಂದಿಗೆ ಹೋಲಿಸುವಾಗ ಸತ್ವಹೀನವಾಗಿರುತ್ತವೆ. ಆದರೂ, ಸಂಯೋಜಿತ ಪದಾರ್ಥಗಳು ವಿಶಿಷ್ಟ ಉತ್ಪನ್ನಗಳಾಗಿವೆ. ವಾಸ್ತವದಲ್ಲಿ, ಕಳೆದ 25 ವರ್ಷಗಳ ಹೆಚ್ಚು ಗಮನಾರ್ಹವಾದ ಹತ್ತು ಎಂಜಿನಿಯರಿಂಗ್‌ ಸಾಧನೆಗಳಲ್ಲಿ ಇವುಗಳನ್ನು ಒಂದಾಗಿ ಪಟ್ಟಿಮಾಡಲಾಗಿತ್ತು. ದೃಷ್ಟಾಂತಕ್ಕೆ, ಗ್ರಾಫೈಟ್‌ ಅಥವಾ ಕಾರ್ಬನ್‌ ಫೈಬರ್‌ ಸಂಯುಕ್ತಗಳ ಸಮ್ಮಿಶ್ರಿತ ಪದಾರ್ಥಗಳು, ವಿಮಾನದ ಮತ್ತು ಆಕಾಶನೌಕೆಯ ಬಿಡಿಭಾಗಗಳ, ಕ್ರೀಡಾ ಸಾಮಗ್ರಿಗಳ, ಗ್ರ್ಯಾಂಡ್‌ ಪ್ರಿಸ್ಕ್‌ ಕಾರುಗಳ, ಯಾಚ್‌ (ಕ್ರೀಡಾ ನೌಕೆ) ಮತ್ತು ಹಗುರವಾದ ಕೃತಕ ಅಂಗಗಳ ಹೊಸಪೀಳಿಗೆಗೆ ದಾರಿ ಮಾಡಿಕೊಟ್ಟಿವೆ. ವೇಗಗತಿಯಲ್ಲಿ ಮುಂದುವರಿಯುತ್ತಿರುವ ವಿವರಗಳ ಪಟ್ಟಿಯೊಂದರಲ್ಲಿ ಈ ಮೇಲೆ ತಿಳಿಸಲಾದವುಗಳು ಕೇವಲ ಕೆಲವು ಐಟಮ್‌ಗಳಾಗಿವೆ.

ವಿವಿಧ ರೀತಿಯಲ್ಲಿ ಕಾರ್ಯಮಾಡುವ, ತಿಮಿಂಗಿಲದ ಅದ್ಭುತಕರ ಕೊಬ್ಬು

ತಿಮಿಂಗಿಲಗಳಿಗೆ ಮತ್ತು ಡಾಲ್ಫಿನ್‌ಗಳಿಗೆ (ಹಂದಿ ಮೀನು) ಕೊಬ್ಬಿನ ಕುರಿತು ತಿಳಿದಿರುವುದಿಲ್ಲ. ಆದರೂ, ಅವುಗಳ ದೇಹಗಳು ಕೌತುಕವನ್ನು ಉಂಟುಮಾಡುವ ಅಂಗಾಂಶವಾದ ಬ್ಲಬರ್‌ನಿಂದ ಹೊದಿಸಲ್ಪಟ್ಟಿವೆ. ಇದು ಒಂದು ಜಾತಿಯ ಕೊಬ್ಬಾಗಿದೆ. “ನಮಗೆ ತಿಳಿದಿರುವುದರಲ್ಲಿಯೇ ವಿವಿಧ ರೀತಿಯಲ್ಲಿ ಕಾರ್ಯಮಾಡುವ ಪದಾರ್ಥವು ಪ್ರಾಯಶಃ ತಿಮಿಂಗಿಲದ ಕೊಬ್ಬಾಗಿದೆ” ಎಂದು ಬಯೋಮಿಮೆಟಿಕ್ಸ್‌: ವಿನ್ಯಾಸ ಮತ್ತು ಪದಾರ್ಥಗಳ ಸಂಸ್ಕರಣೆ (ಇಂಗ್ಲಿಷ್‌) ಎಂಬ ಪುಸ್ತಕವು ಹೇಳುತ್ತದೆ. ಇದು ಏಕೆ ಹೀಗಿದೆಯೆಂದು ವಿವರಿಸುತ್ತಾ ಆ ಪುಸ್ತಕವು ಕೂಡಿಸುವುದು, ಕೊಬ್ಬು ಕೌತುಕವನ್ನುಂಟುಮಾಡುವ ತೇಲುವ ವಸ್ತುವಾಗಿದೆ. ಹೀಗಾಗಿ, ತಿಮಿಂಗಿಲಗಳಿಗೆ ನೀರಿನ ಮಟ್ಟದಿಂದ ಮೇಲೆ ಬರಲು ಮತ್ತು ತಮ್ಮ ದೇಹದಿಂದ ಗಾಳಿಯನ್ನು ಹೊರಬಿಡಲು ಸಾಧ್ಯವಾಗುತ್ತದೆ. ಇದು ಈ ಬೆಚ್ಚನೆಯ ಸಸ್ತನಿ ಪ್ರಾಣಿಗೆ, ಸಾಗರದ ತಣ್ಣನೆಯ ಸ್ಥಳಗಳಲ್ಲೂ ಶಾಖವನ್ನು ಉತ್ತಮವಾದ ರೀತಿಯಲ್ಲಿ ನಿರೋಧಿಸಲು ಸಹ ಸಾಧ್ಯಮಾಡುತ್ತದೆ. ಸಾವಿರಾರು ಮೈಲುಗಳ ವರೆಗೆ ಆಹಾರವಿಲ್ಲದೆ ವಲಸೆಹೋಗುವಾಗಲೂ, ಅದರ ದೇಹದ ಕೊಬ್ಬು ಸಾಧ್ಯವಿರುವ ಅತ್ಯುತ್ತಮ ಆಹಾರದ ದಾಸ್ತಾನಾಗಿರುತ್ತದೆ. ನಿಜ, ಸಮಾನ ತೂಕದ ಕೊಬ್ಬು, ಪ್ರೋಟೀನು ಮತ್ತು ಸಕ್ಕರೆಗಿಂತಲೂ ಎರಡು ಅಥವಾ ಮೂರು ಪಟ್ಟುಗಳಷ್ಟು ಹೆಚ್ಚಿನ ಶಕ್ತಿಯನ್ನು ಉತ್ಪತ್ತಿಮಾಡುತ್ತದೆ.

ಮೇಲೆ ತಿಳಿಸಲಾದ ಪುಸ್ತಕವು ಹೇಳುವಂತೆ: “ಕೊಬ್ಬು ಸಾಮಾನ್ಯವಾಗಿ ರಬ್ಬರ್‌ನಂತಿದ್ದು ಪುಟಿದೇಳುವ ಶಕ್ತಿಯಿರುವ ಭೌತದ್ರವ್ಯವಾಗಿದೆ. ಈಗಿನ ನಮ್ಮ ಅತ್ಯುತ್ತಮ ಅಂದಾಜಿನ ಮೇರೆಗೆ, ಬಾಲದ ಪ್ರತಿಯೊಂದು ಹೊಡೆತದೊಂದಿಗೆ ಹಿಗ್ಗುವ ಮತ್ತು ಕುಗ್ಗುವ ಹಿನ್ನೆಗೆತದಿಂದ ಮೊದಲಿನ ಆಕೃತಿಗೆ ಬರುವ ಗತಿವೃದ್ಧಿಯು, ಬಹಳ ಸಮಯದ ವರೆಗೆ ಈಜುವ ಅವಧಿಗಳಲ್ಲಿ ವ್ಯಯಿಸಲಾಗುವ ಶಕ್ತಿಯಲ್ಲಿ ಶೇಕಡ 20ರಷ್ಟನ್ನು ಉಳಿಸಬಲ್ಲದು.”

ಕೊಬ್ಬನ್ನು ಶತಮಾನಗಳಿಂದ ಸಂಗ್ರಹಿಸುತ್ತಾ ಬಂದಿದ್ದೇವೆ. ಆದರೆ ಪ್ರತಿಯೊಂದು ಪ್ರಾಣಿಯ ಸುತ್ತಲು ಹೊದಿಸಲ್ಪಟ್ಟಿರುವ ಅರ್ಧ ವ್ಯಾಲ್ಯೂಮ್‌ನಷ್ಟು ಕೊಬ್ಬಿನಲ್ಲಿ ಕಾಲಜಿನ್‌ ಫೈಬರ್‌ಗಳ ಸಮ್ಮಿಶ್ರಿತ ರಚನೆಯು ಅಡಕವಾಗಿದೆ ಎಂಬ ವಿಷಯವು ಇತ್ತೀಚೆಗಷ್ಟೆ ಗೊತ್ತಾಗಿದೆ. ಕೊಬ್ಬಿನ ಈ ಸಮ್ಮಿಶ್ರಿತ ಪದಾರ್ಥದ ಕಾರ್ಯಗಳನ್ನು ಪರೀಕ್ಷಿಸಲು ವಿಜ್ಞಾನಿಗಳು ಈಗಲೂ ಪ್ರಯತ್ನವನ್ನು ಮಾಡುತ್ತಿರುವುದಾದರೂ, ಇವರು ಇನ್ನೊಂದು ಅದ್ಭುತಕರವಾದ ಉತ್ಪನ್ನವನ್ನು ಕಂಡುಹಿಡಿದಿದ್ದಾರೆಂದು ನಂಬುತ್ತಾರೆ. ಅದನ್ನು ವಿವಿಧ ಬಗೆಯ ಪದಾರ್ಥಗಳಿಂದ ತಯಾರಿಸುವುದಾದರೆ ಕೊಬ್ಬಿನಿಂದ ಅನೇಕ ಪ್ರಯೋಜನಕಾರಿ ಉಪಯೋಗಗಳು ಇರಬಲ್ಲವು ಎಂಬ ಆಶಯ ಅವರಿಗಿದೆ.

ಅಷ್ಟಪದದ ಉತ್ತಮ ವಿನ್ಯಾಸದ ಚತುರತೆ

ಇತ್ತೀಚೆಗಿನ ವರ್ಷಗಳಲ್ಲಿ ವಿಜ್ಞಾನಿಗಳು ಜೇಡರಹುಳುವಿನ ಕುರಿತು ಸೂಕ್ಷ್ಮವಾದ ಪರೀಕ್ಷೆಯನ್ನು ಮಾಡುತ್ತಿದ್ದಾರೆ. ಜೇಡರಹುಳು ರೇಷ್ಮೆಯನ್ನು ಹೇಗೆ ತಯಾರಿಸುತ್ತದೆಂದು ಅವರು ತಿಳಿದುಕೊಳ್ಳಲು ಬಹಳ ಉತ್ಸುಕರಾಗಿದ್ದಾರೆ. ಈ ಜೇಡರಹುಳು ರೇಷ್ಮೆಯು ಸಹ ಸಮ್ಮಿಶ್ರಿತ ಪದಾರ್ಥವಾಗಿದೆ. ನಿಜ, ಹಲವಾರು ಕೀಟಗಳು ರೇಷ್ಮೆಯನ್ನು ಉತ್ಪಾದಿಸುತ್ತವೆ. ಆದರೆ ಜೇಡರಹುಳು ರೇಷ್ಮೆಯು ವಿಶಿಷ್ಟವಾಗಿದೆ. ಭೂಮಿಯ ಮೇಲಿರುವ ಅತ್ಯಂತ ಗಡುಸಾದ ಪದಾರ್ಥಗಳಲ್ಲಿ ಇದು ಒಂದಾಗಿದ್ದು, ಒಬ್ಬ ವಿಜ್ಞಾನದ ಬರಹಗಾರನು ಹೇಳಿದಂತೆ, “ಇದು ಕೌತುಕವನ್ನು ಉಂಟುಮಾಡುವ ವಸ್ತುವಾಗಿದೆ.” ಅದರ ಬೆರಗುಗೊಳಿಸುವ ಲಕ್ಷಣಗಳ ಪಟ್ಟಿಯು ಎಷ್ಟೊಂದು ವಿಶಿಷ್ಟವಾಗಿದೆ ಎಂದರೆ ಅದನ್ನು ನಂಬಲು ಸಾಧ್ಯವಿಲ್ಲವೆಂಬಂತೆ ತೋರಬಹುದು.

ಜೇಡರಹುಳು ರೇಷ್ಮೆಯನ್ನು ವರ್ಣಿಸುವಾಗ ವಿಜ್ಞಾನಿಗಳು ಸರ್ವೋತ್ತಮ ಪದಗಳನ್ನು ಯಾಕೆ ಉಪಯೋಗಿಸುತ್ತಾರೆ? ಏಕೆಂದರೆ ಅದು ಸ್ಟೀಲಿಗಿಂತ ಐದು ಪಟ್ಟು ಬಲಶಾಲಿಯಾಗಿರುವುದರ ಜೊತೆಗೆ, ತನ್ನ ಮೂಲಗಾತ್ರಕ್ಕೆ ಪುನಃ ಹಿಂದಿರುಗುತ್ತದೆ. ಇದು ಸಮ್ಮಿಶ್ರಿತ ಪದಾರ್ಥಗಳ ಅಪರೂಪದ ಸಂಯೋಜನೆಯಾಗಿ ಉಳಿಯುತ್ತದೆ. ಜೇಡರಹುಳುವಿನ ರೇಷ್ಮೆಯು ಸ್ಥಿತಿಸ್ಥಾಪಕ ಗುಣವನ್ನು ಹೊಂದಿರುವ ನೈಲಾನ್‌ಗಿಂತಲೂ ಶೇಕಡ 30ರಷ್ಟು ಹೆಚ್ಚು ಹಿಗ್ಗುತ್ತದೆ. ಆದರೂ, ಅದು ಕ್ಯಾನ್ವಾಸ್‌ ಪರದೆಯಂತೆ ನೆಗೆಯುವುದಿಲ್ಲ ಮತ್ತು ಈ ಕಾರಣದಿಂದಲೇ ಜೇಡರಹುಳುವಿಗೆ ಆಹಾರವಾಗಿ ಸಿಗುವ ಕೀಟವನ್ನು ಆ ಬಲೆಯು ದೂರ ಎಸೆಯುವುದಿಲ್ಲ. ಸೈಯನ್ಸ್‌ ನ್ಯೂಸ್‌ ಹೇಳುವಂತೆ, “ಮೀನಿನ ಬಲೆಯನ್ನು ಹೋಲುವ ಜೇಡರ ಬಲೆಯನ್ನು ಮಾನವರು ಮಾಡುವುದಾದರೆ, ಅದು ಪ್ರಯಾಣಿಕರ ವಿಮಾನವನ್ನು ಮೇಲಿಂದ ಹಿಡಿಯಬಲ್ಲದು.”

ಜೇಡರಹುಳುವಿನ ರಾಸಾಯನಿಕ ಪ್ರಕ್ರಿಯೆಗಳ ಮಹಾ ಕುಶಲತೆಯನ್ನು ನೋಡುವುದಾದರೆ, ವಿಶೇಷವಾಗಿ ಅವುಗಳ ಎರಡು ಜಾತಿಗಳು, ರೇಷ್ಮೆಯ ಏಳು ವಿಭಿನ್ನ ವಿಧಗಳನ್ನು ಉತ್ಪಾದಿಸುತ್ತವೆ. ಅವುಗಳನ್ನು ನಾವು ನಕಲುಮಾಡಲು ಶಕ್ತರಾಗಿರುವುದಾದರೆ, ನಾವು ಅವುಗಳನ್ನು ಹೇಗೆಲ್ಲಾ ಉಪಯೋಗಿಸಬಹುದಿತ್ತೆಂಬುದನ್ನು ಸ್ವಲ್ಪ ಊಹಿಸಿನೋಡಿ! ಅದರಿಂದ ಸಾಧ್ಯವಾಗುವ ಕೆಲವೇ ಉಪಯೋಗಗಳನ್ನು ಹೆಸರಿಸುವುದಾದರೆ, ಬಹಳವಾಗಿ ಸುಧಾರಿಸಲ್ಪಟ್ಟಿರುವ ಸೀಟ್‌ ಬೆಲ್ಟ್‌ಗಳು, ಮಾತ್ರವಲ್ಲ ಗಾಯದ ಹೊಲಿಗೆಗಳು, ಕೃತಕ ಅಸ್ಥಿಬಂಧಕಗಳು, ಹಗುರತೂಕದ ವಯರುಗಳು ಮತ್ತು ಕೇಬಲ್‌ಗಳು ಮತ್ತು ಗುಂಡುತೂರದ ಬಟ್ಟೆಗಳು ಅವುಗಳಲ್ಲಿ ಸೇರಿವೆ. ಯಾವುದೇ ವಿಷದಿಂದ ಕೂಡಿರುವ ರಸಾಯನಗಳ ಉಪಯೋಗವಿಲ್ಲದೆ ಜೇಡರಹುಳು ರೇಷ್ಮೆಯನ್ನು ಇಷ್ಟೊಂದು ದಕ್ಷತೆಯಿಂದ ಹೇಗೆ ಮಾಡುತ್ತದೆಂಬುದನ್ನು ತಿಳಿದುಕೊಳ್ಳಲು ವಿಜ್ಞಾನಿಗಳು ಪ್ರಯತ್ನಿಸುತ್ತಿದ್ದಾರೆ.

ಪ್ರಕೃತಿಯ ಗಿಯರ್‌ಬಾಕ್ಸ್‌ಗಳು ಮತ್ತು ಜೆಟ್‌ ಎಂಜಿನುಗಳು

ಗಿಯರ್‌ಬಾಕ್ಸ್‌ಗಳು ಮತ್ತು ಜೆಟ್‌ ಎಂಜಿನುಗಳು ಇಂದಿನ ಲೋಕವನ್ನು ವೇಗವಾಗಿ ಚಲಿಸುತ್ತಿರುವಂತೆ ಮಾಡುತ್ತಿವೆ. ಆದರೆ ಈ ವಿನ್ಯಾಸಗಳು ಪ್ರಕೃತಿಯಲ್ಲೂ ಸಹ ಇವೆಯೆಂಬ ವಿಷಯವು ನಿಮಗೆ ತಿಳಿದಿದೆಯೋ? ದೃಷ್ಟಾಂತಕ್ಕೆ, ಗಿಯರ್‌ಬಾಕ್ಸ್‌ನ್ನು ಪರಿಗಣಿಸಿರಿ. ನಿಮ್ಮ ಮೋಟರ್‌ ಅತಿ ದಕ್ಷವಾಗಿ ಕಾರ್ಯನಡಿಸುವಂತೆ ನಿಮ್ಮ ವಾಹನದಲ್ಲಿರುವ ಗಿಯರ್‌ಗಳನ್ನು ಬದಲಾಯಿಸಲು ಗಿಯರ್‌ಬಾಕ್ಸ್‌ಗಳು ನಿಮಗೆ ಸಹಾಯಮಾಡುತ್ತವೆ. ಪ್ರಕೃತಿಯ ಗಿಯರ್‌ಬಾಕ್ಸ್‌ಗಳು ಅದೇ ಕಾರ್ಯವನ್ನು ಮಾಡುತ್ತವಾದರೂ, ಅವುಗಳ ಎಂಜಿನ್‌ ಯಾವುದೇ ಚಕ್ರಗಳಿಗೆ ಜೋಡಿಸಲ್ಪಟ್ಟಿರುವುದಿಲ್ಲ. ಅದಕ್ಕೆ ಬದಲು, ಅದು ರೆಕ್ಕೆಗಳನ್ನು ರೆಕ್ಕೆಗಳಿಗೆ ಜೋಡಿಸುತ್ತದೆ! ಮತ್ತು ನಾವದನ್ನು ಎಲ್ಲಿ ಕಂಡುಕೊಳ್ಳಬಹುದು? ನೊಣದಲ್ಲಿ. ಹೌದು, ನೊಣಕ್ಕೆ ಅದರ ರೆಕ್ಕೆಗಳಿಗೆ ಜೋಡಿಸಲಾದ ಮೂರು ನಿರ್ದಿಷ್ಟ ವೇಗದ ಗತಿಯಿರುವ ಗಿಯರ್‌ಶಿಫ್ಟ್‌ ಇದ್ದು, ಗಾಳಿಯಲ್ಲಿ ಹಾರಾಡುತ್ತಿರುವಾಗ ತನ್ನ ಗಿಯರ್‌ಗಳನ್ನು ಬದಲಾಯಿಸಲು ಅದು ಸಾಧ್ಯಮಾಡುತ್ತದೆ!

ಸ್ಕ್ವಿಡ್‌ ಮೀನು, ಅಷ್ಟಪದಿಗಳು ಮತ್ತು ನಾಟಿಲಸ್‌ ಜಾತಿಯ ಪ್ರಾಣಿಗಳಿಗೆ ನೀರಿನ ಮೂಲಕ ಹಾದುಹೋಗಲು ಜೆಟ್‌ನಂತಹ ಮುನ್ನೂಕ್ಕುವ ಶಕ್ತಿಯಿದೆ. ವಿಜ್ಞಾನಿಗಳು ಈ ಜೆಟ್‌ಗಳ ಶಕ್ತಿಗೆ ಅಸೂಯೆಪಡುತ್ತಾರೆ. ಯಾಕೆ? ಕಾರಣ ಮುರಿಯಲಸಾಧ್ಯವಿರುವ ಮೃದುಭಾಗಗಳು ಅವುಗಳಿಗಿವೆ ಮತ್ತು ಇವುಗಳೇ ತೀರಾ ಆಳದ ನೀರನ್ನು ನಿಭಾಯಿಸಲು ಮತ್ತು ನಿಶ್ಯಬ್ದವಾಗಿ ಮತ್ತು ಸಮರ್ಥವಾಗಿ ಚಲಿಸುವಂತೆ ಸಾಧ್ಯಮಾಡುತ್ತದೆ. ವಾಸ್ತವದಲ್ಲಿ, ನರಭಕ್ಷಕ ಮೀನುಗಳಿಂದ ತಪ್ಪಿಸಿಕೊಂಡು ಓಡುವಾಗ, ಸ್ಕ್ವಿಡ್‌ ಮೀನು ಪ್ರತಿ ಗಂಟೆಗೆ 32 ಕಿಲೋಮೀಟರಿನ ಜೆಟ್‌ ವೇಗದಲ್ಲಿ ಮುನ್ನುಗ್ಗಬಹುದು. ಆದರೆ ವೈಲ್ಡ್‌ ಟೆಕ್ನಾಲಜಿ ಪುಸ್ತಕವು ಹೇಳುವ ಪ್ರಕಾರ, “ಕೆಲವೊಮ್ಮೆ ನೀರಿನಿಂದ ಮೇಲಕ್ಕೆ ಜಿಗಿದು ಹಡಗಿನ ಕಟ್ಟೆಗೆ ಬೀಳಬಹುದು.”

ಹೌದು, ನೈಸರ್ಗಿಕ ಲೋಕದ ಕುರಿತು ಚಿಂತಿಸಲು ಕೇವಲ ಕೆಲವು ಕ್ಷಣಗಳನ್ನು ನಾವು ತೆಗೆದುಕೊಳ್ಳುವುದಾದರೆ, ಅದು ತಾನೇ ನಮ್ಮನ್ನು ಭಯ ಮತ್ತು ಗಣ್ಯತೆಯಿಂದ ತುಂಬಿಸಬಲ್ಲದು. ವಾಸ್ತವದಲ್ಲಿ ಪ್ರಕೃತಿಯು, ಒಂದರ ಹಿಂದೆ ಇನ್ನೊಂದು ಪ್ರಶ್ನೆಗಳನ್ನು ಪ್ರೇರಿಸುವ ಅರ್ಥಪೂರ್ಣವಾದ ಒಗಟಾಗಿದೆ. ಅವುಗಳಲ್ಲಿ ಕೆಲವು ಹೀಗಿವೆ: ಮಿಣುಕು ಹುಳುಗಳು ಮತ್ತು ಕೆಲವು ಪಾಚಿಗಳು ಪ್ರಕಾಶಮಾನವಾದ, ಕಾಂತಿಯುತ ಬೆಳಕನ್ನು ಹೊರಸೂಸಲು ಯಾವ ರಾಸಾಯನಿಕ ಅದ್ಭುತಗಳು ಕಾರ್ಯನಡಿಸುತ್ತವೆ? ಉತ್ತರ ಧ್ರುವದಲ್ಲಿರುವ ಬೇರೆ ಬೇರೆ ಜಾತಿಯ ಮೀನು ಮತ್ತು ಕಪ್ಪೆಗಳು ಚಳಿಗಾಲದಲ್ಲಿ ಹೆಪ್ಪುಗಟ್ಟುವ ಘನವಸ್ತುವಂತಾದರೂ ಹಿಮಕರಗಿದಾಗ ಪುನಃ ಒಮ್ಮೆ ಮುಂಚಿನ ಸ್ಥಿತಿಗೆ ಬರಲು ಕಾರಣವೇನು? ಸಮುದ್ರದ ಸಸ್ತನಿ ಪ್ರಾಣಿಗಳಾಗಿರುವ ತಿಮಿಂಗಿಲ ಮತ್ತು ಸೀಲ್‌ಗಳು ಯಾವುದೇ ಉಸಿರಾಡುವ ಸಾಧನವಿಲ್ಲದೆ ದೀರ್ಘ ಅವಧಿಯ ವರೆಗೆ ನೀರಿನಡಿ ಹೇಗೆ ಉಳಿಯುತ್ತವೆ? ಅವುಗಳು ಪದೇ ಪದೇ ನೀರಿನ ಆಳದ ವರೆಗೂ ಧುಮುಕುತ್ತವೆಯಾದರೂ, ಗಾಳಿಯೊತ್ತಡದ ರೋಗವು ಅಥವಾ ಸಾಮಾನ್ಯವಾಗಿ ಕರೆಯಲಾಗುವ ಕೀಲುವಾತರೋಗವು ಅವುಗಳಿಗೆ ಬರುವುದಿಲ್ಲವೇಕೆ? ಗೋಸುಂಬೆ ಮತ್ತು ಕಟಲ್‌ಮೀನು ತಮ್ಮ ಪರಿಸರಕ್ಕೆ ತಕ್ಕಂತೆ ಹೊಂದಿಸಿಕೊಂಡು ಹೋಗಲು ಬಣ್ಣಗಳನ್ನು ಹೇಗೆ ಬದಲಾಯಿಸುತ್ತವೆ? ಹಮಿಂಗ್‌ಬರ್ಡ್‌ ಮೂರು ಗ್ರ್ಯಾಮ್‌ಕ್ಕಿಂತಲೂ ಕಡಿಮೆ ಪೋಷಕಾಂಶದೊಂದಿಗೆ ಮೆಕ್ಸಿಕೋದ ಕಡಲನ್ನು ಹೇಗೆ ದಾಟುತ್ತದೆ? ಇಂತಹ ಪ್ರಶ್ನೆಗಳ ಪಟ್ಟಿಗೆ ಕೊನೆಯೇ ಇಲ್ಲವೆಂದು ಕಾಣುತ್ತದೆ.

ನಿಜ, ಮಾನವರು ಅದನ್ನೆಲ್ಲಾ ನೋಡಬಲ್ಲರು ಮತ್ತು ಆಶ್ಚರ್ಯಪಡಬಲ್ಲರು ಅಷ್ಟೇ. ಬಯೋಮಿಮಿಕ್ರೀ ಎಂಬ ಪುಸ್ತಕವು ಹೇಳುವಂತೆ, ವಿಜ್ಞಾನಿಗಳು ಪ್ರಕೃತಿಯನ್ನು ಅಭ್ಯಾಸಿಸುವಾಗ ಎಷ್ಟೊಂದು ಭಯಭಕ್ತಿಯನ್ನು ಬೆಳೆಸಿಕೊಳ್ಳುತ್ತಾರೆಂದರೆ ಅದು “ಪೂಜ್ಯಭಾವನೆಗೆ ಸಮೀಪವಾಗಿರುವಂತೆ” ಇರುತ್ತದೆ.

ವಿನ್ಯಾಸದ ಹಿಂದೆ—ಒಬ್ಬ ವಿನ್ಯಾಸಗಾರ!

ಜೀವ ರಸಾಯನವಿಜ್ಞಾನದ, ಜೊತೆ ಪ್ರೊಫೆಸರ್‌ ಆಗಿರುವ ಮೈಕಲ್‌ ಬೀಹೀ ಸಜೀವವಾದ ಕೋಶದೊಳಗೆ ಮಾಡಿದ ಇತ್ತೀಚೆಗಿನ ಆವಿಷ್ಕಾರಗಳ ಒಟ್ಟು ಪ್ರಯತ್ನಗಳ ಪರಿಣಾಮವು, ಅದು ‘ವಿನ್ಯಾಸ!’ದ ಉತ್ಪಾದನೆಯಾಗಿದೆ ಎಂದು ಹೇಳಿದರು. ಜೀವಕೋಶವನ್ನು ಅಭ್ಯಾಸಿಸುವ ಪ್ರಯತ್ನಗಳ ಪರಿಣಾಮವು, “ಎಷ್ಟೊಂದು ಸ್ಪಷ್ಟ ಮತ್ತು ಎಷ್ಟೊಂದು ಮಹತ್ವವುಳ್ಳದ್ದಾಗಿದೆಯೆಂದರೆ, ವಿಜ್ಞಾನದ ಚರಿತ್ರೆಯಲ್ಲಾಗಿರುವ ಅತಿ ಮಹತ್ತಾದ ಸಾಧನೆಗಳಲ್ಲಿ ಒಂದಾಗಿ ಅದನ್ನು ಪಟ್ಟಿಮಾಡಲೇಬೇಕಾಗುತ್ತದೆ” ಎಂದು ಅವರು ಕೂಡಿಸುತ್ತಾ ಹೇಳಿದರು.

ಗ್ರಾಹ್ಯವಾಗಿಯೇ, ವಿಕಾಸವಾದದ ಕುರಿತಾದ ಕಲಿಸುವ ವಿಷಯದೊಂದಿಗೆ ಅಂಟಿಕೊಂಡಿರುವವರಿಗೆ ವಿನ್ಯಾಸಗಾರನ ಸ್ಪಷ್ಟ ರುಜುವಾತುಗಳು ಸಮಸ್ಯೆಗಳನ್ನು ಉಂಟುಮಾಡುತ್ತವೆ. ಯಾಕೆಂದರೆ ಸಜೀವ ವಸ್ತುಗಳಲ್ಲಿರುವ ಕೋಶ ಮತ್ತು ಅಣುವಿನ ಮಟ್ಟದಲ್ಲಿ ನೋಡುವಾಗ ಅದರ ನಯನಾಜೂಕಾದ ವಿನ್ಯಾಸಗಳನ್ನು ಮಾಡಿದವರಾರು ಎಂದು ವಿಕಾಸವಾದಕ್ಕೆ ಹೇಳಲು ಆಗುವುದಿಲ್ಲ. “ಜೀವದ ಯಂತ್ರರಚನೆಗಳಿಗೆ ಡಾರ್ವಿನನು ನೀಡಿದ ವಿವರಣೆಯು ಯಾವಾಗಲೂ ಸ್ವೀಕರಿಸಲು ಕಷ್ಟವಾಗಿರುತ್ತದೆ ಎಂಬುದನ್ನು ಯೋಚಿಸಲು ಬಲವಾದ ಕಾರಣಗಳಿವೆ” ಎಂದು ಬೀಹೀ ಹೇಳುತ್ತಾರೆ.

ಡಾರ್ವಿನನ ಸಮಯದಲ್ಲಿ, ಜೀವದ ಆಧಾರವಾಗಿರುವ ಜೀವಕೋಶವು ಸಾಮಾನ್ಯವಾಗಿದೆ ಎಂದು ನೆನಸಲಾಗಿತ್ತು ಮತ್ತು ವಿಕಾಸವಾದವು ಆ ಸಮಯದ ಅಜ್ಞಾನಕ್ಕೆ ಸಂಬಂಧಿಸಿತ್ತೆಂದು ಗ್ರಹಿಸಲಾಗಿತ್ತು. ಆದರೆ ಇಂದು ವಿಜ್ಞಾನವು ಆ ಶಕವನ್ನು ಬಿಟ್ಟುಬಂದಿದೆ. ನಮ್ಮ ಅತಿ ನೈಜವಾದ ಸಣ್ಣ ಉಪಕರಣ ಮತ್ತು ಯಂತ್ರಗಳ ಒಳ ಕೆಲಸಗಳು ತುಲನೆಯಲ್ಲಿ ಬಹಳ ಸರಳವಾಗಿರುವುದಾದರೂ, ನೈಜತೆಯಲ್ಲಿ ಜೀವಕೋಶವು ಆಶ್ಚರ್ಯಕರವಾದ ಜಟಿಲ ವ್ಯವಸ್ಥೆಯಾಗಿದ್ದು ಅತ್ಯಂತ ಉತ್ಕೃಷ್ಟವಾದ ಮತ್ತು ಪರಿಪೂರ್ಣ ವಿನ್ಯಾಸಗಳಾಗಿವೆ ಎಂದು ಅಣು ಜೀವವಿಜ್ಞಾನ ಮತ್ತು ಬಯೋಮಿಮೆಟಿಕ್ಸ್‌ ನಿಸ್ಸಂದೇಹವಾಗಿ ರುಜುಪಡಿಸಿವೆ.

ಕುಶಲ ವಿನ್ಯಾಸವು ತರ್ಕಬದ್ಧವಾದ ಸಮಾಪ್ತಿಗೆ ನಮ್ಮನ್ನು ನಡೆಸುತ್ತದೆ. ಬೀಹೀ ಹೇಳಿದಂತೆಯೇ ಅದು ಇದೆ: “ಜೀವವು ಜ್ಞಾನವುಳ್ಳ ಕರ್ತೃವಿನಿಂದ ವಿನ್ಯಾಸಿಸಲ್ಪಟ್ಟಿದೆ.” ಆದುದರಿಂದ ಈ ನಿರ್ಮಾಣಿಕನಿಗೆ ಮಾನವರ ಕಡೆಗೆ ಒಂದು ಉದ್ದೇಶವಿರಬೇಕೆಂದು ಹೇಳುವುದು ನ್ಯಾಯಸಮ್ಮತವಾಗಿರುವುದಿಲ್ಲವೋ? ಹಾಗಿರುವುದಾದರೆ, ಆ ಉದ್ದೇಶವು ಏನಾಗಿದೆ? ನಮ್ಮ ವಿನ್ಯಾಸಗಾರನ ಕುರಿತು ನಾವು ಹೆಚ್ಚನ್ನು ಕಲಿಯಬಲ್ಲೆವೋ? ಮುಂದಿನ ಲೇಖನವು ಆ ಪ್ರಾಮುಖ್ಯ ಪ್ರಶ್ನೆಗಳನ್ನು ಪರೀಕ್ಷಿಸಲಿರುವುದು.

[ಪಾದಟಿಪ್ಪಣಿಗಳು]

^ ಕಟ್ಟುನಿಟ್ಟಾಗಿ ಹೇಳುವುದಾದರೆ, ಸಮ್ಮಿಶ್ರಿತ ಪದಾರ್ಥಗಳಲ್ಲಿ ಗ್ಲಾಸ್‌ ಫೈಬರುಗಳೇ ಫೈಬರ್‌ಗ್ಲಾಸುಗಳನ್ನು ಸೂಚಿಸುತ್ತವೆ. ಹೀಗಿದ್ದರೂ, ಸಾಮಾನ್ಯ ಉಪಯೋಗದಲ್ಲಿ ಪ್ಲ್ಯಾಸ್ಟಿಕ್‌ ಮತ್ತು ಫೈಬರ್‌ಗ್ಲಾಸುಗಳಿಂದ ಮಾಡಲ್ಪಟ್ಟ ಸಮ್ಮಿಶ್ರಿತ ಪದಾರ್ಥವನ್ನು ಆ ಪದವು ಸೂಚಿಸುತ್ತದೆ.

^ ಸಸ್ಯ ಸಮ್ಮಿಶ್ರಿತ ಪದಾರ್ಥಗಳು, ಕಾಲಜಿನ್‌ನ ಬದಲು ಸೆಲ್ಯುಲಸ್‌ನ ಮೇಲೆ ಹೆಚ್ಚು ಆಧರಿತಗೊಂಡಿವೆ. ಸೆಲ್ಯುಲಸ್‌, ತನ್ನ ಅಪೇಕ್ಷಣೀಯ ಗುಣಮಟ್ಟಗಳಲ್ಲಿ ಹೆಚ್ಚಿನವುಗಳನ್ನು ಕಟ್ಟಡದ ಸಾಮಗ್ರಿಯಾಗಿರುವ ಮರಕ್ಕೆ ನೀಡುತ್ತದೆ. “ಸಮಾನ ವಸ್ತುಗಳಿಲ್ಲದೇ ಹಿಗ್ಗಿಸಲು ಸಾಧ್ಯವಿರುವ ಸಾಮಗ್ರಿ” ಎಂಬುದಾಗಿ ಸೆಲ್ಯುಲಸ್‌ ಅನ್ನು ವರ್ಣಿಸಲಾಗಿದೆ.

[ಪುಟ 5ರಲ್ಲಿರುವ ಚೌಕ]

ನಿರ್ನಾಮವಾದ ಕೀಟವು ಸೌರಹಲಗೆಯನ್ನು ಉತ್ತಮಗೊಳಿಸಲು ಸಹಾಯಮಾಡುತ್ತದೆ

ವಸ್ತುಸಂಗ್ರಹಾಲಯವನ್ನು ಭೇಟಿಮಾಡುತ್ತಿರುವಾಗ, ತೈಲಸ್ಪಟಿಕದಲ್ಲಿ ಇಡಲ್ಪಟ್ಟಿದ್ದ ನಿರ್ನಾಮವಾದ ಕೀಟವೊಂದರ ಚಿತ್ರಗಳನ್ನು ಒಬ್ಬ ವಿಜ್ಞಾನಿಯು ನೋಡಿದನೆಂದು ನ್ಯೂ ಸೈನ್‌ಟಿಸ್ಟ್‌ ಪತ್ರಿಕೆಯಲ್ಲಿ ಬಂದಿದ್ದ ವರದಿಯು ತಿಳಿಸುತ್ತದೆ. ಆ ಕೀಟದ ಕಣ್ಣುಗಳಲ್ಲಿ ರೇಖಾಫಲಕಗಳ ಸಾಲನ್ನು ಅವನು ಗಮನಿಸಿದನು ಮತ್ತು ವಿಶೇಷವಾಗಿ ವಕ್ರವಾದ ಕೋನಗಳಿಂದಲೂ ಹೆಚ್ಚಿನ ಬೆಳಕನ್ನು ಉತ್ಪತ್ತಿಮಾಡಲು ಕೀಟದ ಕಣ್ಣುಗಳಲ್ಲಿರುವ ಈ ರೇಖಾಫಲಕಗಳು ಸಹಾಯಮಾಡುತ್ತವೆಂದು ಅವನು ಭಾವಿಸಿದನು. ಅವನು ಮತ್ತು ಇತರ ಸಂಶೋಧಕರು ಸೇರಿ ಪ್ರಯೋಗಗಳನ್ನು ನಡೆಸಲು ಆರಂಭಿಸಿದರು ಮತ್ತು ಅವರು ತಮ್ಮ ಹೃದಯದಾಳದ ಬಯಕೆಯನ್ನು ಪೂರೈಸಿದರು.

ಆ ರೇಖಾಫಲಕದ ಅದೇ ನಮೂನೆಯ ಪ್ರತಿರೂಪವನ್ನು ತಯಾರಿಸಿ, ಅದನ್ನು ಗಾಜಿನ ಸೌರಹಲಗೆ (ಸೋಲಾರ್‌ ಪ್ಯಾನಲ್‌)ಗಳಿಗೆ ಅಚ್ಚೋತ್ತಿಸುವ ಯೋಜನೆಯನ್ನು ವಿಜ್ಞಾನಿಗಳು ಕಾರ್ಯಗತಗೊಳಿಸಲು ಬಲುಬೇಗನೇ ಪ್ರಯತ್ನಿಸಿದರು. ಹೀಗೆ ಮಾಡುವುದರಿಂದ ಸೌರಹಲಗೆಗಳ ಮೂಲಕ ಉತ್ಪತ್ತಿಯಾಗುವ ಶಕ್ತಿಯು ಹೆಚ್ಚುವುದೆಂಬ ಆಶಯ ಅವರಿಗಿದೆ. ಸೂರ್ಯನಿಗೆ ಮುಖಮಾಡಿ ಇಡುವುದಕ್ಕಾಗಿ ಸದ್ಯಕ್ಕೆ ಉಪಯೋಗಿಸುವ ದುಬಾರಿಯಾದ ಉಪಕರಣಗಳ ಆವಶ್ಯಕತೆಗಳನ್ನು ತೆಗೆದುಹಾಕುವುದು. ಅತ್ಯುತ್ತಮ ಸೌರಹಲಗೆಗಳನ್ನು ಅಳವಡಿಸುವುದರಿಂದ ಭೂಮಿಯಿಂದ ಅಗೆದುತೆಗೆಯುವ ಅನಿಲ ಮತ್ತು ತೈಲಗಳ ಉಪಯೋಗವು ಕಡಿಮೆಯಾಗುವುದು ಮತ್ತು ಹೀಗೆ ಮಾಲಿನ್ಯವು ಕಡಿಮೆಯಾಗುವುದು. ಇದು ಒಂದು ಸಾರ್ಥಕ ಗುರಿಯಾಗಿದೆ. ಸ್ಪಷ್ಟವಾಗಿಯೇ, ಈ ರೀತಿಯ ಆವಿಷ್ಕಾರಗಳು ತೋರಿಸುವುದೇನೆಂದರೆ ಪ್ರಕೃತಿಯಿಂದ ನಾವು ಬಹಳಷ್ಟನ್ನು ಕಲಿಯಲಿಕ್ಕಿದೆ. ಪ್ರಕೃತಿಯು ಬೆರಗುಗೊಳಿಸುವ ವಿನ್ಯಾಸಗಳಿಂದ ತುಂಬಿದೆ. ನಾವು ಅವುಗಳನ್ನು ಕಂಡುಹಿಡಿದು, ಅವುಗಳನ್ನು ಅರ್ಥಮಾಡಿಕೊಂಡು ಮತ್ತು ಸಾಧ್ಯವಾದರೆ ಇತರರು ಅದರಿಂದ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಅವುಗಳನ್ನು ನಕಲುಮಾಡುವುದೇ ಆಗಿದೆ.

[ಪುಟ 6ರಲ್ಲಿರುವ ಚೌಕ]

ಗೌರವಕ್ಕೆ ಅರ್ಹರಾಗಿರುವವರಿಗೆ ಅದನ್ನು ಸಲ್ಲಿಸುವುದು

ಇಸವಿ 1957ರಲ್ಲಿ, ಸ್ವಿಸ್‌ ಇಂಜಿನಿಯರ್‌ ಜಾರ್ಜ್‌ ಡಿ. ಮೆಸ್ಟ್ರಲ್‌ರವರು, ತಮ್ಮ ಬಟ್ಟೆಗೆ ಅಂಟಿಕೊಂಡಿರುವ ಸಣ್ಣ ಬೀಜಗಳಿಗೆ ಚಿಕ್ಕ-ಚಿಕ್ಕ ಕೊಂಡಿಗಳು ಇದ್ದದ್ದನ್ನು ಗಮನಿಸಿದರು. ಈ ಬೀಜಗಳು ಮತ್ತು ಅವುಗಳಿಗಿರುವ ಕೊಂಡಿಗಳ ಕುರಿತು ಅವರು ಅಧ್ಯಯನವನ್ನು ನಡೆಸಿದರು, ಮತ್ತು ಸ್ವಲ್ಪ ಸಮಯದಲ್ಲಿಯೇ ಅವರ ಸೃಜನಾತ್ಮಕ ಮನಸ್ಸು ಕುತೂಹಲಗೊಂಡಿತು. ಮುಂದಿನ ಎಂಟು ವರ್ಷಗಳ ವರೆಗೆ ಆ ಬೀಜಕ್ಕೆ ಸಮಾನವಾಗಿರುವ ಸಂಮಿಶ್ರಣವನ್ನು ತಯಾರಿಸಿದರು. ಅವರ ಆವಿಷ್ಕಾರವು ಲೋಕವನ್ನು ಬೆಚ್ಚಿಬೆರಗಾಗುವಂತೆ ಮಾಡಿತು ಮತ್ತು ಈಗ ಅದು ವೆಲ್‌ಕ್ರೋ ಎಂಬ ಹೆಸರನ್ನು ಪಡೆದಿರುವುದು ಮನೆಮಾತಾಗಿದೆ.

ವೆಲ್‌ಕ್ರೋವನ್ನು ಯಾರೂ ವಿನ್ಯಾಸಗೊಳಿಸಲಿಲ್ಲ, ಅದು ಒಂದು ಕಾರ್ಖಾನೆಯಲ್ಲಿ ಒಂದಾದ ನಂತರ ಒಂದು, ಸಾವಿರಾರು ಆಕಸ್ಮಿಕ ಘಟನೆಗಳ ಫಲವಾಗಿ ಉಂಟಾಯಿತು ಎಂದು ಜನರು ಹೇಳಿದಿದ್ದಾದರೆ, ಡೇ ಮೆಸ್ಟ್ರಲ್‌ಗೆ ಹೇಗೆ ಅನಿಸಬಹುದೆಂದು ಸ್ವಲ್ಪ ಊಹಿಸಿನೋಡಿ. ಗೌರವಕ್ಕೆ ಅರ್ಹರಾಗಿರುವವರಿಗೆ ಅದನ್ನು ಸಲ್ಲಿಸಬೇಕೆಂದು ನ್ಯಾಯವು ಕೇಳಿಕೊಳ್ಳುತ್ತದೆ. ಮಾನವ ಸಂಶೋಧಕರು ತಮ್ಮ ಸಂಶೋಧನೆಯನ್ನು ಖಾತ್ರಿಗೊಳಿಸಲು ಹಕ್ಕುಪತ್ರಗಳನ್ನು ಪಡೆದುಕೊಳ್ಳುತ್ತಾರೆ. ಹೌದು, ನಿಸರ್ಗದಲ್ಲಿರುವ ವಸ್ತುಗಳನ್ನೇ ಹೆಚ್ಚಾಗಿ ಅನುಕರಿಸಿ ಮಾಡಲಾದ ಕನಿಷ್ಠ ವಸ್ತುಗಳಿಗೂ ಗೌರವವು ಕೊಡಲ್ಪಡಬೇಕೆಂದು, ಹಣಕಾಸಿನ ರೂಪದಲ್ಲಿ ಅದಕ್ಕಾಗಿ ತಮಗೆ ಬಹುಮಾನಗಳನ್ನು ನೀಡಲ್ಪಡಬೇಕೆಂದು ಮತ್ತು ತಮ್ಮ ಕಲಾಕೃತಿಗಳಿಗೆ ಘನತೆಯು ಸಲ್ಲಿಸಲ್ಪಡಬೇಕೆಂದು ಮಾನವರು ಬಯಸುತ್ತಾರೆಂದು ತೋರುತ್ತದೆ. ಹಾಗಾದರೆ, ನಮ್ಮ ವಿವೇಕಿ ಸೃಷ್ಟಿಕರ್ತನಿಗೆ, ಆತನ ಪರಿಪೂರ್ಣ ಸಹಜವಸ್ತುಗಳಿಗಾಗಿ ಕೃತಜ್ಞತೆಯನ್ನು ಸಲ್ಲಿಸುವುದು ತಕ್ಕದಾಗಿರುವುದಿಲ್ಲವೋ?

[ಪುಟ 5ರಲ್ಲಿರುವ ಚಿತ್ರ]

ಸಮಾನವಾದ ತೂಕವುಳ್ಳ ಎಲುಬು ಮತ್ತು ಉಕ್ಕನ್ನು ತೆಗೆದುಕೊಂಡರೂ ಸಹ, ಉಕ್ಕಿಗಿಂತ ಎಲುಬು ಹೆಚ್ಚು ಶಕ್ತಿಶಾಲಿಯಾಗಿದೆ

[ಕೃಪೆ]

Anatomie du gladiateur combattant...., Paris, 1812, Jean-Galbert Salvage

[ಪುಟ 7ರಲ್ಲಿರುವ ಚಿತ್ರ]

ತಿಮಿಂಗಿಲದ ಕೊಬ್ಬು ತೇಲುವ ವಸ್ತುವಾಗಿದ್ದು, ಶಾಖವನ್ನು ನಿರೋಧಿಸುತ್ತದೆ ಮತ್ತು ಆಹಾರ ದಾಸ್ತಾನನ್ನು ಒದಗಿಸುತ್ತದೆ

[ಕೃಪೆ]

© Dave B. Fleetham/Visuals Unlimited

[ಪುಟ 7ರಲ್ಲಿರುವ ಚಿತ್ರ]

ಮೊಸಳೆಗಳು ಮತ್ತು ಚೀನಾ ದೇಶದ ಮೊಸಳೆಗಳ (ಆ್ಯಲಿಗೆಟರ್‌) ಚರ್ಮಗಳು ಈಟಿ, ಬಾಣಗಳನ್ನು ಮತ್ತು ಗುಂಡುಗಳನ್ನು ಸಹ ಬಗ್ಗಿಸಬಲ್ಲವು.

[ಪುಟ 7ರಲ್ಲಿರುವ ಚಿತ್ರ]

ಜೇಡರಹುಳು ರೇಷ್ಮೆಯು ಸ್ಟೀಲಿಗಿಂತ ಐದು ಪಟ್ಟು ಬಲಶಾಲಿಯಾಗಿರುವುದರ ಜೊತೆಗೆ, ತನ್ನ ಮೂಲ ಗಾತ್ರಕ್ಕೆ ಹಿಂದಿರುಗುತ್ತದೆ.

[ಪುಟ 8ರಲ್ಲಿರುವ ಚಿತ್ರ]

ಮರಕುಟುಕದ ಮಿದುಳು ಬಹಳ ಸಾಂದ್ರವಾಗಿರುವ ಮೂಳೆಯಿಂದ ರಕ್ಷಿಸಲ್ಪಟ್ಟಿದ್ದು ಶಾಕ್‌ ಅವಶೋಷಕ (ಶಾಕ್‌ ಅಬ್ಸಾರ್ಬರ್‌) ಆಗಿ ಕೆಲಸಮಾಡುತ್ತದೆ

[ಪುಟ 8ರಲ್ಲಿರುವ ಚಿತ್ರ]

ಗೋಸುಂಬೆಗಳು ತಮ್ಮ ಪರಿಸರಕ್ಕೆ ತಕ್ಕಂತೆ ಹೊಂದಿಕೊಂಡು ಹೋಗಲು ತಮ್ಮ ಬಣ್ಣಗಳನ್ನು ಬದಲಾಯಿಸುತ್ತವೆ

[ಪುಟ 8ರಲ್ಲಿರುವ ಚಿತ್ರ]

ತೇಲುವ ಶಕ್ತಿಯನ್ನು ನಿಯಂತ್ರಿಸಲು ಸಾಧ್ಯವಾಗುವಂತೆ ಸಮುದ್ರದ ಚಿಪ್ಪು ಇರುವ ನಾಟಿಲಸ್‌ ಪ್ರಾಣಿಗೆ ವಿಶೇಷವಾಗಿ ಆವೃತ ಪೊಟರೆಗಳಿವೆ

[ಪುಟ 9ರಲ್ಲಿರುವ ಚಿತ್ರ]

ಕೆಂಪು ಕುತ್ತಿಗೆಯ ಹಮಿಂಗ್‌ಬರ್ಡ್‌ ಮೂರು ಗ್ರ್ಯಾಮ್‌ಕ್ಕಿಂತಲೂ ಕಡಿಮೆ ಪೋಷಕಾಂಶದೊಂದಿಗೆ 600 ಮೈಲಿಗಳಷ್ಟು ಪ್ರಯಾಣವನ್ನು ಮಾಡುತ್ತದೆ

[ಪುಟ 9ರಲ್ಲಿರುವ ಚಿತ್ರ]

ಸ್ಕ್ವಿಡ್‌ ಮೀನು ಜೆಟ್‌ ಮುನ್ನೂಕ್ಕುವ ಶಕ್ತಿಯನ್ನು ಉಪಯೋಗಿಸುತ್ತದೆ

[ಪುಟ 9ರಲ್ಲಿರುವ ಚಿತ್ರ]

ಮಿಣುಕು ಹುಳುಗಳು ಪ್ರಕಾಶ ಮಾನವಾದ, ಕಾಂತಿಯುಳ್ಳ ಬೆಳಕನ್ನು ಹೊರಸೂಸಲು, ರಾಸಾಯನಿಕ ಅದ್ಭುತಗಳು ಕಾರ್ಯನಡಿಸುತ್ತವೆ

[ಕೃಪೆ]

© Jeff J. Daly/Visuals Unlimited