ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬ್ರಾಟಸ್ಲಾವ—ಪುರಾತನ ನದೀ ದಾಟುದಾಣದಿಂದ ಆಧುನಿಕ ರಾಜಧಾನಿಗೆ

ಬ್ರಾಟಸ್ಲಾವ—ಪುರಾತನ ನದೀ ದಾಟುದಾಣದಿಂದ ಆಧುನಿಕ ರಾಜಧಾನಿಗೆ

ಬ್ರಾಟಸ್ಲಾವಪುರಾತನ ನದೀ ದಾಟುದಾಣದಿಂದ ಆಧುನಿಕ ರಾಜಧಾನಿಗೆ

ಸ್ಲೊವಾಕಿಯದ ಎಚ್ಚರ! ಸುದ್ದಿಗಾರರಿಂದ

ಇಸವಿ 1741ರ ಸಮಯಕ್ಕೆ ಹಿಂದಿರುಗಿ ಹೋಗಸಾಧ್ಯವಿದೆಯೆಂದು ಮನಸ್ಸಿನಲ್ಲಿ ಚಿತ್ರಿಸಿಕೊಳ್ಳಿ. ವಾತಾವರಣವು ಕಾತುರದಿಂದ ನಳನಳಿಸುತ್ತಿದೆ. ಜನರು ಇನ್ನೇನು ಹಾದುಹೋಗಲಿರುವ ಮೆರವಣಿಗೆಯನ್ನು ಹತ್ತಿರದಿಂದ ನೋಡಲು ನೂಕುನುಗ್ಗಲು ಇರುವಾಗ ಉತ್ಸವಘೋಷಗಳು ಕೇಳಿಬರುತ್ತದೆ. ಹಳ್ಳಿಗರು ತಮ್ಮ ಅತ್ಯುತ್ತಮವಾದ ಉಡುಪಿನಿಂದ ಮತ್ತು ಅಭಿಮಾನದ ಪಟ್ಟಣಿಗರು ಹೊಸ ಫ್ಯಾಷನ್‌ ಉಡುಪಿನಿಂದ ಕಂಗೊಳಿಸುತ್ತಿರುವಾಗ, ಕುಲೀನವರ್ಗದವರು ನೋಡಲು ಮತ್ತು ಕಾಣಿಸಿಕೊಳ್ಳಲು ಅಲ್ಲಿ ಕೂಡಿಬಂದಿದ್ದಾರೆ. ಜನರು ಸಂಭ್ರಮೋಲ್ಲಾಸದಿಂದ ಕೂಗಿಕೊಳ್ಳುತ್ತಿರುವಾಗ, ರಾಜದೂತರು ಯುವತಿಯೊಬ್ಬಳ ಭಾವಚಿತ್ರವಿರುವ ಚಿನ್ನ ಹಾಗೂ ಬೆಳ್ಳಿಯ ನಾಣ್ಯಗಳನ್ನು ವಿತರಿಸುತ್ತಿದ್ದಾರೆ. ಇಷ್ಟೊಂದು ಸಡಗರಸಂಭ್ರಮವೇಕೆ? ಆಸ್ಟ್ರಿಯದ, ಚಕ್ರವರ್ತಿಯ ಮಗಳಾದ ಮರೀಯ ಟೆರೇಸ ಹಂಗೆರಿಯ ಹೊಸ ರಾಣಿಯಾಗಿ ಪಟ್ಟಕ್ಕೇರಲು ನಗರಕ್ಕೆ ಬರುತ್ತಿದ್ದಾಳೆ.

ವಾಸ್ತವಕ್ಕೆ ಬನ್ನಿ. ಈ ಮುಖ್ಯವಾದ ಪಟ್ಟಾಭಿಷೇಕದ ಸ್ಥಳಕ್ಕೆ ಭೇಟಿನೀಡಲು ನೀವು ಇಷ್ಟಪಡುವಲ್ಲಿ, ನೀವೆಲ್ಲಿಗೆ ಹೋಗುವಿರಿ? ಅನೇಕ ಪ್ರವಾಸಿಗಳು ಇಂದು ಮರೀಯ ಟೆರೇಸಳ ಅರಮನೆಯನ್ನು ನೋಡಿ ಬೆರಗಾಗುವಂತಹ ವೀಎನಕ್ಕೆ ಇಲ್ಲವೆ ಹಂಗೆರಿಯ ಆಧುನಿಕ ದಿನದ ರಾಜಧಾನಿಯಾದ ಬೂಡಪೆಸ್ಟ್‌ಗಾಗಲಿ ಹೋಗುವುದಿಲ್ಲ. ವೀಎನದಿಂದ ಸುಮಾರು 35 ಮೈಲುಗಳಷ್ಟು ದೂರದಲ್ಲಿ ಪಶ್ಚಿಮ ದಿಕ್ಕಿನಲ್ಲಿರುವ ಡ್ಯಾನ್ಯೂಬ್‌ ನದಿಯ ಬಳಿಯಿರುವ ಒಂದು ನಗರವಾದ ಬ್ರಾಟಸ್ಲಾವವನ್ನು ನೀವು ಭೇಟಿಮಾಡಬೇಕು.

ಸುಮಾರು 50 ಲಕ್ಷ ಜನರಿರುವ ಇಂದಿನ ಬ್ರಾಟಸ್ಲಾವವು ಸ್ಲೊವಾಕಿಯದ, ಕಣ್ಣಿಗೆ ಹಬ್ಬವನ್ನು ಉಂಟುಮಾಡುವ ರಾಜಧಾನಿಯಾಗಿದೆ. ಅದರ ನೆರೆಹೊರೆಯ ರಾಜಧಾನಿಗಳಿಗೆ, ಅಂದರೆ ಬೂಡಪೆಸ್ಟ್‌, ವೀಎನ ಮತ್ತು ಪ್ರಾಗ್‌ಗೆ ಹೋಲಿಸಿದರೆ, ಬ್ರಾಟಸ್ಲಾವ ಪುಟ್ಟ ತಂಗಿಯಂತಿದೆ. ಆದರೂ ಇದು ಸುಮಾರು ಎರಡು ಶತಮಾನಗಳ ವರೆಗೆ ಹಂಗೆರಿಯ ರಾಜಧಾನಿಯಾಗಿತ್ತು ಮತ್ತು ಆ ವಿಶೇಷ ಸ್ಥಾನಮಾನಕ್ಕೆ ಸೇರಿದ ಸಕಲ ಕೀರ್ತಿಗೌರವಗಳಲ್ಲಿ ಇದು ಆನಂದಿಸಿತು. ವಾಸ್ತವದಲ್ಲಿ, ಇದೇ ನಗರದಲ್ಲಿ ಹಂಗೆರಿಯ ಸುಮಾರು 11 ಮಂದಿ ರಾಜರ ಪಟ್ಟಾಭಿಷೇಕಗಳು ನಡೆದವು. ಆದರೆ ಇದನ್ನು ಇಷ್ಟೊಂದು ವಿಶೇಷ ನಗರವನ್ನಾಗಿ ಮಾಡಿದ್ದು ಯಾವುದು?

ಪುರಾತನ ವಸಾಹತು

ಯೂರೋಪಿನ ಎರಡನೆಯ ಅತಿ ಉದ್ದದ ನದಿಯಾಗಿರುವ ಡ್ಯಾನ್ಯೂಬ್‌ನ ಮೇಲೆ ಪ್ರಯೋಜನಕರವಾದ ಹೆಮ್ಮೆಯ ಸ್ಥಾನದಲ್ಲಿ ಬ್ರಾಟಸ್ಲಾವ ಇದೆ. ಹಿಂದೆ, ಈ ಸ್ಥಳದಲ್ಲಿ ಡ್ಯಾನ್ಯೂಬ್‌ ನದಿ ಮಂದಗತಿಯಲ್ಲಿ ಹರಿದು, ಕಡಿಮೆ ಆಳವುಳ್ಳದ್ದಾಗಿ ಪರಿಣಮಿಸಿ, ಒಂದು ಪ್ರಾಕೃತಿಕ ದಾಟುದಾಣವನ್ನುಂಟುಮಾಡುತ್ತಿತ್ತು. ಇಲ್ಲಿ ಸೇತುವೆಗಳನ್ನು ಕಟ್ಟುವುದಕ್ಕೆ ಮುಂಚೆ, ಜನರು ಈ ನದಿಯನ್ನು ತಮ್ಮ ಪ್ರಾಣಿಗಳು ಮತ್ತು ಗಾಡಿಗಳ ಸಮೇತ ದಾಟುತ್ತಿದ್ದರು. ಹೀಗೆ, ಪುರಾತನ ಸಮಯಗಳಿಂದಲೂ ಈಗ ಬ್ರಾಟಸ್ಲಾವವೆಂದು ಕರೆಯಲ್ಪಡುವ ಸ್ಥಳವು ಜನನಿಬಿಡವಾದ ಕೂಡುಹಾದಿಯಾಗಿತ್ತು. ಸಾ.ಶ.ಪೂ. 1500ರಷ್ಟು ಆದಿಭಾಗದಲ್ಲಿ, ಯೂರೋಪಿನ ಉತ್ತರಕ್ಕೂ ದಕ್ಷಿಣಕ್ಕೂ ಸಂಬಂಧಕಲ್ಪಿಸುವ ಪ್ರಾಮುಖ್ಯ ಆ್ಯಂಬರ್‌ ವ್ಯಾಪಾರ ಮಾರ್ಗಗಳಲ್ಲಿ ಒಂದು ಈ ನಗರವನ್ನು ಹಾದುಹೋಗುತ್ತಿತ್ತು. ಅನಂತರ ನದೀ ದಾಟುವಿಕೆಯನ್ನು ಈಗ ಬ್ರಾಟಸ್ಲಾವ ಕೋಟೆಮನೆಯಿರುವ ಹತ್ತಿರದ ಗುಡ್ಡದ ಮೇಲಿರುವ ಕೋಟೆಯು ನಿಯಂತ್ರಿಸಿತು.

ನಿಮಗೆ ಪುರಾತನ ಸಮಯಕ್ಕೆ ಹಿಂದೆ ಹೋಗಸಾಧ್ಯವಿರುವಲ್ಲಿ, ಈ ನದೀ ದಾಟುದಾಣದಲ್ಲಿ ನೀವು ಯಾರನ್ನು ಆಕಸ್ಮಿಕವಾಗಿ ಸಂಧಿಸಬಹುದು? ನೀವೇನಾದರೂ ಸುಮಾರು ಸಾ.ಶ.ಪೂ. ನಾಲ್ಕನೇ ಶತಮಾನದಲ್ಲಿ ಅಲ್ಲಿಗೆ ಹೋಗುವಲ್ಲಿ, ತಮ್ಮ ಸಂಸ್ಕೃತಿಯ ಬೀಡನ್ನಾಗಿ ಅದನ್ನು ಮಾಡಿದ ಕೆಲ್ಟಿಕ್‌ ಜನರನ್ನು ನೀವು ಸಂಧಿಸಬಹುದು. ಆ ಬೆಟ್ಟವು, ಕುಂಬಾರಕೆಲಸ ಮತ್ತು ಮುದ್ರೆಯೊತ್ತಿದ ನಾಣ್ಯಗಳನ್ನು ಉತ್ಪಾದಿಸಿದ ಸ್ಥಳಿಕ ಕೆಲ್ಟಿಕ್‌ ಸಮುದಾಯಕ್ಕೆ ನಗರದುರ್ಗವಾಗಿ ಕಾರ್ಯಸಲ್ಲಿಸಿತು.

ನಮ್ಮ ಸಾಮಾನ್ಯ ಶಕದ ಆರಂಭದಲ್ಲಿ ಅಲ್ಲಿಗೆ ಭೇಟಿನೀಡಿದ್ದಲ್ಲಿ ಆಗೇನು? ನಿಮಗೇನಾದರೂ ಲ್ಯಾಟಿನ್‌ ಭಾಷೆ ಬರುತ್ತಿದ್ದಲ್ಲಿ, ಅಲ್ಲಿನ ಜನರೊಂದಿಗೆ ನೀವು ಮಾತಾಡಸಾಧ್ಯವಿದ್ದಿರುತ್ತಿತ್ತು. ಏಕೆಂದರೆ ಅಷ್ಟರಲ್ಲಿ ರೋಮನರು ತಮ್ಮ ಉತ್ತರ ದಿಕ್ಕಿನ ಗಡಿರೇಖೆಗಳನ್ನು ಡ್ಯಾನ್ಯೂಬ್‌ಗೆ ವಿಸ್ತರಿಸಿದ್ದರು. ಆಗ ನೀವು ಪಶ್ಚಿಮ ದಿಕ್ಕಿನಿಂದ ಬರುತ್ತಿರುವ ಜರ್ಮಾನಿಕ್‌ ಭಾಷೆಯ ಜನರನ್ನು ಸಹ ಭೇಟಿಯಾಗಿದ್ದಿರಸಾಧ್ಯವಿತ್ತು.

ನಿಮ್ಮ ಭೇಟಿಯು ಸರಿಸುಮಾರು ಮಧ್ಯಯುಗಗಳಲ್ಲಾಗಿದ್ದರೆ ಅಂದರೆ ಸುಮಾರು ಎಂಟನೆಯ ಶತಮಾನದಲ್ಲಿ ಆಗಿದ್ದಿದ್ದರೆ, ಆಗ ನೀವು ಬೇರೆ ಬೇರೆ ಕುಲಗಳವರನ್ನೂ ನೋಡುತ್ತಿದ್ದಿರಿ. ಏಕೆಂದರೆ ಅಷ್ಟರೊಳಗಾಗಿ, ಮಹಾ ವಲಸೆ ಎಂದು ಆಮೇಲೆ ಕರೆಯಲಾದ ವಲಸೆ ನಡೆದಿತ್ತು ಮತ್ತು ಪೂರ್ವ ದಿಕ್ಕಿನ ಸ್ಲಾವಿಕ್‌ ಜನರು ಈ ಪ್ರದೇಶದಲ್ಲಿ ನೆಲೆಸಲಾರಂಭಿಸಿದ್ದರು. ಹಂಗೆರಿಯವರು ದಕ್ಷಿಣ ದಿಕ್ಕಿನಲ್ಲಿ ತಮ್ಮನ್ನು ಸ್ಥಾಪಿಸಿಕೊಂಡಿದ್ದು ಬ್ರಾಟಸ್ಲಾವ ಪ್ರದೇಶಕ್ಕೂ ಕಾಲಿಟ್ಟಿದ್ದರು. ಆದರೂ ಹೇಗೊ ಇಲ್ಲಿ ಸ್ಲಾವಿಕ್‌ ಪ್ರಭಾವವೇ ಉಳಿಯಿತು, ಏಕೆಂದರೆ ಹತ್ತನೇ ಶತಮಾನದಲ್ಲಿ ಕಟ್ಟಲ್ಪಟ್ಟ ಮೊದಲನೆಯ ಕೋಟೆಗೆ ಸ್ಲಾವಿಕ್‌ ಹೆಸರಾದ ಬ್ರೆಸಾಲೌಸ್‌ಪುರ್ಟ್ಸ್‌ ಎಂಬ ಹೆಸರನ್ನು ಕೊಡಲಾಯಿತು. ಇದರರ್ಥ, “ಬ್ರಾಸ್ಲಾವ್‌ ಕೋಟೆಮನೆ.” ಉನ್ನತ ಪದವಿಯಲ್ಲಿದ್ದ ಒಬ್ಬ ಸೇನಾಧಿಕಾರಿಯ ಸ್ಮರಣಾರ್ಥವಾಗಿ ಈ ಹೆಸರನ್ನು ನೀಡಲಾಗಿತ್ತು ಎಂದು ನೆನಸಲಾಗಿದೆ. ಈ ಹೆಸರಿನಿಂದ ಸ್ಲೊವಾಕ್‌ ಹೆಸರಾದ ಬ್ರಾಟಸ್ಲಾವ ಬಂದಿದೆ.

ಮಧ್ಯಯುಗಗಳ ಒಂದು ನಗರ

ಸಮಯವು ಕಳೆದಂತೆ, ಆಗ ಸ್ಲೊವಾಕಿಯ ಎಂದು ಕರೆಯಲ್ಪಡುತ್ತಿದ್ದ ದೇಶವು ಹಂಗೆರಿಯ ಭಾಗವಾಯಿತು. ಬ್ರಾಟಸ್ಲಾವ ಕೋಟೆಮನೆಯು, ಹಂಗೆರಿಯಲ್ಲಿಯೇ ಸುಭದ್ರವಾದ ಕೋಟೆಯಿಂದ ಸುತ್ತುವರಿದಿದ್ದ ಕೋಟೆಮನೆ ಎಂಬುದಾಗಿ ಸಾ.ಶ. 1211ರಷ್ಟರ ಐತಿಹಾಸಿಕ ವೃತ್ತಾಂತವು ಪರಿಗಣಿಸುತ್ತದೆ. ಸುಮಾರು ಮೂವತ್ತು ವರುಷಗಳ ಅನಂತರ, ಈ ಅಂದಾಜು ನಿಜವಾಗಿ ಪರಿಣಮಿಸಿತು, ಏಕೆಂದರೆ ಟಾಟರ್‌ ಅತಿಕ್ರಮಿಗಳಿಂದ ಆಕ್ರಮಣಕ್ಕೊಳಗಾದಾಗ ಕೋಟೆಯು ಅದನ್ನು ಎದುರಿಸಿನಿಂತಿತು. ಆ ಯಶಸ್ಸು, ಕೋಟೆಯ ಸುತ್ತಲೂ ವಸಾಹತು ಬೆಳೆಯುವುದಕ್ಕೆ ಅನುವುಮಾಡಿಕೊಟ್ಟಿತು. ಮತ್ತು 1291ರಲ್ಲಿ ಹಂಗೆರಿಯ ರಾಜನಾದ ಓಂಡ್ರೇ III ಪಟ್ಟಣಕ್ಕೆ ಪುರಸಭೆಯ ಪೂರ್ತಿ ವಿಶೇಷಾಧಿಕಾರವನ್ನು ಒದಗಿಸಿಕೊಟ್ಟನು. ಹೀಗೆ, ನಾಗರಿಕರು ತಮ್ಮ ಸ್ವಂತ ಪೌರ ಸಭಾಧ್ಯಕ್ಷನನ್ನು ಚುನಾಯಿಸಲು, ಡ್ಯಾನ್ಯೂಬ್‌ ನದಿಯಲ್ಲಿ ತಮ್ಮ ಸರಕುಗಳನ್ನು ಸಾಗಿಸಲು ಮತ್ತು “ಜಲನೆಲವೆರಡರ ಮುಖಾಂತರವೂ” ಮುಕ್ತವಾಗಿ ವ್ಯಾಪಾರವಹಿವಾಟನ್ನು ಮಾಡುವುದಕ್ಕೆ ಹಕ್ಕನ್ನು ಪಡೆದುಕೊಂಡರು. ದ್ರಾಕ್ಷೇತೋಟಗಳು ನಗರದ ಬಿಸಿಲಿಗೊಡ್ಡಿದ ತಗ್ಗುಗಳಲ್ಲಿ ಸೊಂಪಾಗಿ ಬೆಳೆದುದರಿಂದ, ದ್ರಾಕ್ಷಾರಸವನ್ನು ಮನೆಯಿಂದ ಮಾರುವುದಕ್ಕಿದ್ದ ನಾಗರಿಕರ ಹಕ್ಕು ವಿಶೇಷವಾಗಿ ಮಾನ್ಯ ಮಾಡಲ್ಪಟ್ಟಿತು.

ಹಂಗೆರಿಯನ್ನು ತರುವಾಯ ಆಳಿದ ರಾಜರು ನಗರಕ್ಕೆ ಇನ್ನೂ ಹೆಚ್ಚು ಸವಲತ್ತುಗಳನ್ನು ನೀಡಿದರು. ಇದು ಹೆಚ್ಚಿನ ವಿಸ್ತಾರ್ಯಕ್ಕೆ ಸಹಾಯ ಮಾಡಿತು. 1526ರಲ್ಲಿ, ಬ್ರಾಟಸ್ಲಾವ ಹಂಗೆರಿಯ ದೀರ್ಘಕಾಲದ ರಾಜಧಾನಿಯೋಪಾದಿ ಆಳ್ವಿಕೆಯನ್ನು ಪ್ರಾರಂಭಿಸಿ 1784ರ ತನಕ ಆ ಸ್ಥಾನವನ್ನು ಕಾಪಾಡಿಕೊಂಡಿತು. ಅಷ್ಟರಲ್ಲಿ, ಬ್ರಾಟಸ್ಲಾವದ ಕುಲಮಿಶ್ರಣವು ಹಿಂದೆಂದಿಗಿಂತಲೂ ವೈವಿಧ್ಯವುಳ್ಳದ್ದಾಯಿತು. ಹೆಚ್ಚಿನಾಂಶ ಸ್ಲಾವಿಕ್‌ ಮತ್ತು ಹಂಗೆರಿಯ ಜನರನ್ನು ಹೊಂದಿದ್ದ ದೇಶವು ಈಗ ಜರ್ಮನ್‌ ಮತ್ತು ಯೆಹೂದಿ ಜನರ ಒಳಬರುವಿಕೆಯಿಂದ ಪುಷ್ಟಿಗೊಂಡಿತು. 17ನೇ ಶತಮಾನದಲ್ಲಿ, ಟರ್ಕಿಯ ಪ್ರಭುತ್ವವು ಪಶ್ಚಿಮ ಹಾಗೂ ಉತ್ತರದ ದಿಕ್ಕಿಗೆ ವಿಸ್ತರಿಸಿದಂತೆ ಕ್ರೋಏಷಿಯದ ಅನೇಕರು, ಯೂರೋಪಿನ ಇನ್ನೂ ಹೆಚ್ಚುದೂರದ ಪಶ್ಚಿಮದಲ್ಲಿ ಕ್ಯಾಥೊಲಿಕ್‌ ಹಾಗೂ ಪ್ರಾಟೆಸ್ಟಂಟರ ನಡುವೆ ನಡೆದ ಯುದ್ಧವನ್ನು ಬಿಟ್ಟು ಪಲಾಯನಗೈದ ಚೆಕ್‌ ದೇಶಭ್ರಷ್ಟರು ಮಾಡಿದಂತೆ ಬ್ರಾಟಸ್ಲಾವ ಕ್ಷೇತ್ರದಲ್ಲಿ ಆಶ್ರಯವನ್ನು ಪಡೆದುಕೊಂಡರು.

20ನೇ ಶತಮಾನದಲ್ಲಿ ಬ್ರಾಟ್‌ಸ್ಲಾವ

20ನೇ ಶತಮಾನದ ಆರಂಭದಷ್ಟರಲ್ಲಿ, ಬ್ರಾಟಸ್ಲಾವ ಬಹುರಾಷ್ಟ್ರೀಯ, ಬಹುಸಾಂಸ್ಕೃತಿಕ ನಗರವಾಗಿ ಪರಿಣಮಿಸಿತ್ತು. ಆ ಸಮಯದಲ್ಲಿ ಅಂಗಡಿಯಲ್ಲಿ ನಿಮಗೆ ಬೇಕಾಗಿರುವ ಸಾಮಾನನ್ನು ಪಡೆಯುವ ಖಂಡಿತ ಮಾರ್ಗವು ಜರ್ಮನ್‌ ಅಥವಾ ಹಂಗೆರಿ ಭಾಷೆಯಲ್ಲಿ ಅದಕ್ಕಾಗಿ ಕೇಳಿಕೊಳ್ಳುವುದಾಗಿತ್ತು. ಆದರೆ ಚೆಕ್‌ ಮತ್ತು ರಾಮನಿಗಳು (ಜಿಪ್ಸಿಗಳು) ಸಹ, ಯೆಹೂದಿ ಸಮುದಾಯದಂತೆ ನಗರಾಭಿವೃದ್ಧಿಯಲ್ಲಿ ಮುಖ್ಯವಾದ ಪಾತ್ರವನ್ನು ವಹಿಸಿದರು. Iನೇ ವಿಶ್ವ ಯುದ್ಧಕ್ಕಿಂತ ಮುಂಚೆ, ಜನಸಂಖ್ಯೆಯಲ್ಲಿ ಸುಮಾರು 15 ಪ್ರತಿಶತದಷ್ಟು ಮಾತ್ರ ಸ್ಲೊವಾಕ್‌ ಜನರಿದ್ದರು. ಆದರೆ 1921ರಷ್ಟಕ್ಕೆ, ನಗರದ ಅನೇಕ ಜನಾಂಗಗಳವರಲ್ಲಿ ಸ್ಲೊವಾಕ್‌ ಜನರು ಅತ್ಯಂತ ಹೆಚ್ಚಿನ ಸಂಖ್ಯೆಯಾಗಿ ಮಾರ್ಪಟ್ಟಿದ್ದರು.

ಬೇಗನೆ IIನೇ ವಿಶ್ವ ಯುದ್ಧದ ಕಾರ್ಮೋಡಗಳು ಯೂರೋಪಿನ ಮೇಲೆ ಕವಿದವು. ಇದು ಬ್ರಾಟಸ್ಲಾವದ ಇತಿಹಾಸದಲ್ಲಿ ನೋವಿನ ಎಳೆಯೊಂದನ್ನು ಬಿಟ್ಟುಹೋಯಿತು. ಏಕೆಂದರೆ ಇದು ನಗರದ ಕುಲಜನಾಂಗೀಯ ಸಾಮರಸ್ಯವನ್ನು ಛಿದ್ರಗೊಳಿಸಿತು. ಮೊದಲು, ಚೆಕ್‌ ಜನರು ಬಿಟ್ಟುಹೋಗುವಂತೆ ಒತ್ತಾಯಿಸಲ್ಪಟ್ಟರು. ಅನಂತರ, ರಾಮನಿಗಳು ಮತ್ತು ಯೆಹೂದಿ ನಿವಾಸಿಗಳು ಗಡೀಪಾರುಮಾಡಲ್ಪಟ್ಟರು ಹಾಗೂ ಕೊನೆಗೆ ಸಾವಿರಾರು ಜನರು ಕೂಟಶಿಬಿರಗಳಲ್ಲಿ ಅಸುನೀಗಿದರು. IIನೇ ವಿಶ್ವ ಯುದ್ಧವು ಅಂತ್ಯಗೊಂಡಾಗ, ಜರ್ಮನ್‌ ಭಾಷೆಯನ್ನಾಡುವ ಹೆಚ್ಚಿನ ನಿವಾಸಿಗಳು ಸಹ ಹೊರಹಾಕಲ್ಪಟ್ಟರು. ಕಟ್ಟಕಡೆಗೆ, ಈ ಜನಾಂಗದ ಗುಂಪುಗಳಲ್ಲಿ ಪ್ರತಿಯೊಂದರ ಸದಸ್ಯರು ತಮ್ಮ ಹಿಂದಿನ ತವರೂರಿಗೆ ಹೋಗಿ ಸೇರಿದರು ಮತ್ತು ಅವರ ಆಗಿನ ಇರುವಿಕೆಯು ಬ್ರಾಟ್‌ಸ್ಲಾವದ ವಾತವರಣಕ್ಕೆ ಈಗಲೂ ಮೆರುಗನ್ನು ನೀಡುತ್ತಿದೆ.

ಇಂದು ಬ್ರಾಟಸ್ಲಾವಗೆ ಭೇಟಿನೀಡುವುದು

ಇಂದು ಬ್ರಾಟಸ್ಲಾವಗೆ, ನೀವೇಕೆ ನಮ್ಮ ಜೊತೆ ಸ್ವಲ್ಪ ದೂರ ನಡೆದುಕೊಂಡು ಬರಬಾರದು? ಮೊದಲು, ನಾವು ಅತ್ಯಂತ ಸುಂದರವಾಗಿ ಪುನರ್‌ನಿರ್ಮಿಸಲ್ಪಟ್ಟ ಬ್ರಾಟಸ್ಲಾವದ ಕೋಟೆಮನೆಯನ್ನು ಹೋಗಿ ನೋಡೋಣ. ಕೋಟೆಮನೆಯ ಉದ್ಯಾನವನದಿಂದ, ನಾವು ಡ್ಯಾನ್ಯೂಬ್‌ ನದಿಯ ಎರಡೂ ಕಡೆಗಳಲ್ಲಿ ಹಬ್ಬಿರುವ ನಗರದ ಚಿತ್ರಾವಳಿ ನೋಟದಲ್ಲಿ ಆನಂದಿಸುತ್ತೇವೆ.

ಬೆಟ್ಟದ ತಪ್ಪಲಲ್ಲಿ, ಅಂದರೆ ಕೋಟೆಮನೆಯ ಕ್ಷೇತ್ರಕ್ಕೆ ಸ್ವಲ್ಪ ಕೆಳಗೆ, ನಾವು ಬ್ರಾಟಸ್ಲಾವದ ಐತಿಹಾಸಿಕ ಕೇಂದ್ರವಾದ ಹಳೆಯ ನಗರದಲ್ಲಿ ನಮ್ಮನ್ನು ಕಂಡುಕೊಳ್ಳುತ್ತೇವೆ. ನಳನಳಿಸುವ ಕಿರಿದಾದ ರಸ್ತೆಗಳಲ್ಲಿ ನಡೆಯುತ್ತಾ ಹೋದಂತೆ, ನಾವು ಇನ್ನೂ ಹಿಂದಿನ ಕಾಲದಲ್ಲಿಯೇ ಇದ್ದೇವೋ ಎಂಬ ಅನಿಸಿಕೆಯಾಗುತ್ತದೆ. ಅರಮನೆಗಳು ಮತ್ತು ಪಟ್ಟಣಿಗರ ಮನೆಗಳ ಮನಮೋಹಕ ವಾಸ್ತುಶಿಲ್ಪವನ್ನು ನೋಡಿ ಆಶ್ಚರ್ಯಚಕಿತರಾಗುತ್ತೇವೆ. ಒಂದು ಕಪ್‌ ಕಾಫಿ ಅಥವಾ ಟೀ ಹಾಗೂ ಅಕ್ರೋಟು (ವಾಲ್‌ನಟ್ಸ್‌) ಮತ್ತು ಗಸಗಸೆಯಿಂದ ತುಂಬಿಸಲ್ಪಟ್ಟಿರುವ ಬ್ರಾಟಸ್ಲಾವದ ಪ್ರಸಿದ್ಧ ಪಿಷ್ಟಭಕ್ಷ್ಯವನ್ನು (ಪೇಸ್ಟ್ರಿ) ನೀವು ತಿನ್ನಲು ಇಷ್ಟಪಡುವುದಾದರೆ, ಐತಿಹಾಸಿಕ ಕೆಫೆಗಳಲ್ಲಿ ಒಂದಕ್ಕೆ ಸಹ ನಾವು ಹೋಗಬಹುದು.

ಇಡೀ ವರ್ಷ, ಹಳೆಯ ನಗರದ ಪಕ್ಕದಲ್ಲಿರುವ ಡ್ಯಾನ್ಯೂಬ್‌ ನದಿಯ ದಡಗಳಲ್ಲಿ ವಿಹರಿಸುವುದರಲ್ಲಿ ಸಂದರ್ಶಕರು ಆನಂದಿಸುತ್ತಾರೆ. ಇಲ್ಲಿ ಅವರು ಆಧುನಿಕ ಬ್ರಾಟಸ್ಲಾವದ ಒಂದು ಚಿಹ್ನೆ—ಓಲಿಕೊಂಡಿರುವ ಬುರುಜಿನ ಮೇಲೆ ರೆಸ್ಟೊರೆಂಟ್‌ ಅನ್ನು ಹೊಂದಿರುವ ಹೊಸ ಬ್ರಿಡ್ಜ್‌—ಅನ್ನು ನೋಡದೇ ಇರಲಿಕ್ಕೆ ಸಾಧ್ಯವೇ ಇಲ್ಲ. ಈ ವಿನ್ಯಾಸವು, ನದಿಯ ಇನ್ನೊಂದು ಪಕ್ಕದಲ್ಲಿರುವ ಪೆಟ್ರಸಾಲ್‌ಕ ಹೌಸಿಂಗ್‌ ಕ್ಷೇತ್ರದ ಮೇಲೆ ಆ ರೆಸ್ಟೊರೆಂಟ್‌ ಉಯ್ಯಾಲೆಯಂತೆ ತೂಗಾಡುತ್ತಿದೆಯೋ ಎಂಬಂತಹ ಅನಿಸಿಕೆಯನ್ನು ನೀಡುತ್ತದೆ.

ಬ್ರಾಟಸ್ಲಾವದಲ್ಲಿ ಇನ್ನೂ ಅನೇಕ ಕಟ್ಟಡಗಳು ಕಟ್ಟಲ್ಪಡುತ್ತಿವೆ ಎಂದು ನಿಮಗೆ ಅನಿಸುವುದಾದರೆ, ನಿಮ್ಮೆಣಿಕೆ ತಪ್ಪಾಗಿರುವುದಿಲ್ಲ. ಇತ್ತೀಚೆಗೆ ಹಳೆಯ ನಗರದ ಕೆಲವು ಭಾಗಗಳಲ್ಲಿ ಕಟ್ಟಡಗಳನ್ನು ಪುನರ್‌ನಿರ್ಮಿಸುವುದರ ಜೊತೆಗೆ, ಮನಸೆಳೆಯುವ ಸ್ಟೀಲ್‌ ಮತ್ತು ಗ್ಲಾಸ್‌ನ ಕಟ್ಟಡಗಳು ಸಹ 1990ಗಳಲ್ಲಿ ಥಟ್ಟನೆ ಎದ್ದುಬಂದವು ಹಾಗೂ ಇನ್ನೂ ಅನೇಕ ಕಟ್ಟಡಗಳು ನಿರ್ಮಾಣದ ಹಂತದಲ್ಲಿವೆ. ಈ ಆಫೀಸುಗಳು, ವಾಣಿಜ್ಯ ಕೇಂದ್ರಗಳು ಮತ್ತು ಬ್ಯಾಂಕುಗಳೇ ನಗರಕ್ಕೆ ಆಧುನಿಕ ಮೆರುಗನ್ನು ಕೊಟ್ಟಿರುತ್ತವೆ.

ಸಹಜವಾಗಿಯೇ, ನೀವು ಭೇಟಿಮಾಡಿದ್ದರ ಸವಿನೆನಪನ್ನು ಹೊಂದಿರಲು ಬಯಸುವುದು ಸಹಜವೇ. ಮನಮೋಹಕವಾದ ಲೇಸ್‌ ಇರುವ ಟೇಬಲ್‌ಕ್ಲಾತ್‌ಗಳು ಅಥವಾ ರಾಷ್ಟ್ರೀಯ ಪೋಷಾಕಿನಲ್ಲಿರುವ ಬೊಂಬೆಗಳಂತಹ ಕರಕುಶಲ ಸಾಮಗ್ರಿಗಳನ್ನು ಮಾರುವ ಅಂಗಡಿಗಳಿಗೆ ನೀವು ಹೋಗಸಾಧ್ಯವಿದೆ. ಅಥವಾ ಇಷ್ಟವಿರುವಲ್ಲಿ ಓಪನ್‌-ಏರ್‌ ಮೇಯ್ನ್‌ ಸ್ಕ್ವೇರ್‌ ಮಾರ್ಕೆಟ್‌ಗೆ ಹೋಗಸಾಧ್ಯವಿದೆ. ಅಲ್ಲಿ ಶತಮಾನಗಳಿಂದ ಬ್ರಾಟಸ್ಲಾವದ ನಿವಾಸಿಗಳು ಸಾಮಾನುಗಳನ್ನು ಖರೀದಿಸುತ್ತಾ ಬಂದಿರುವಂತೆಯೇ ನೀವೂ ಸಹ ಖರೀದಿಸಸಾಧ್ಯವಿದೆ. ಈ ನಗರದಲ್ಲಿರುವ ಮನಸೆಳೆಯುವ ವಾಚ್‌ ಟವರ್‌ ಸೊಸೈಟಿಯ ಬ್ರಾಂಚ್‌ ಆಫೀಸನ್ನು ಸಹ ನೀವು ಭೇಟಿಯಾಗಲು ಬಯಸಬಹುದು.

ಒಂದು ದಿನ ನೀವು ನಿಜವಾಗಿಯೂ ಬ್ರಾಟಸ್ಲಾವವನ್ನು ಭೇಟಿಮಾಡಬಹುದು. ಮತ್ತು ಹಾಗೆ ಭೇಟಿನೀಡುವಲ್ಲಿ, ಪುರಾತನ ನದೀ ದಾಟುದಾಣದಿಂದ ಬೆಳೆದು ಝಗಝಗಿಸುವ ಆಧುನಿಕ ರಾಜಧಾನಿಯಾದ ಈ ಸ್ಥಳವನ್ನು ನೋಡುವುದರಲ್ಲಿ ನೀವು ಖಂಡಿತವಾಗಿಯೂ ಆನಂದಿಸುವಿರಿ.

[ಪುಟ 15ರಲ್ಲಿರುವ ಚಿತ್ರ]

ಮರೀಯ ಟೆರೇಸ

[ಕೃಪೆ]

North Wind Picture Archives

[ಪುಟ 16, 17ರಲ್ಲಿರುವ ಚಿತ್ರ]

ಸ್ಲೊವಾಕ್‌ ನ್ಯಾಷನಲ್‌ ಥಿಯೇಟರ್‌

[ಪುಟ 17ರಲ್ಲಿರುವ ಚಿತ್ರ]

ಹಳೆಯ ನಗರದಲ್ಲಿನ ಒಂದು ಬೀದಿ

[ಪುಟ 18ರಲ್ಲಿರುವ ಚಿತ್ರ]

ಹೊಸ ಬ್ರಿಡ್ಜ್‌ ಮತ್ತು ಅದರ ಓಲಿಕೊಂಡಿರುವ ಬುರುಜು

[ಪುಟ 18ರಲ್ಲಿರುವ ಚಿತ್ರ]

ಯೆಹೋವನ ಸಾಕ್ಷಿಗಳ ಬ್ರಾಂಚ್‌ ಆಫೀಸು ಮತ್ತು ರಾಜ್ಯ ಸಭಾಗೃಹ