ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮಹಾ ವಿನ್ಯಾಸಗಾರನು ಪ್ರಕಟಿಸಲ್ಪಟ್ಟದ್ದು

ಮಹಾ ವಿನ್ಯಾಸಗಾರನು ಪ್ರಕಟಿಸಲ್ಪಟ್ಟದ್ದು

ಮಹಾ ವಿನ್ಯಾಸಗಾರನು ಪ್ರಕಟಿಸಲ್ಪಟ್ಟದ್ದು

ಒಬ್ಬ ವಿನ್ಯಾಸಗಾರನು, ಒಬ್ಬ ಸೃಷ್ಟಿಕರ್ತನು ಇದ್ದಾನೆಂಬುದು ವಿವೇಚನಾಪರ ಮನಸ್ಸಿಗೆ ಸಂದೇಹವಿಲ್ಲದೆ ತಿಳಿಯಬರುತ್ತದೆ ಎಂಬುದನ್ನು ನಿಸರ್ಗದ ಗ್ರಂಥವೆಂದು ಕರೆಯಲ್ಪಡುವ ಸಂಗತಿಗಳಿಂದ ಕಲಿತಿರುವ ಅನೇಕ ವಿಜ್ಞಾನಿಗಳು ಸಹ ಒಪ್ಪುತ್ತಾರೆ. ಬಹಳ ಸಮಯದ ಹಿಂದೆ ಕ್ರೈಸ್ತ ಅಪೊಸ್ತಲ ಪೌಲನು ಬರೆದದ್ದು: “ಕಣ್ಣಿಗೆ ಕಾಣದಿರುವ ಆತನ” ಅಂದರೆ ದೇವರ “ಗುಣಲಕ್ಷಣಗಳು ಅಂದರೆ ಆತನ ನಿತ್ಯಶಕ್ತಿಯೂ ದೇವತ್ವವೂ ಜಗದುತ್ಪತ್ತಿ ಮೊದಲುಗೊಂಡು ಆತನು ಮಾಡಿದ ಸೃಷ್ಟಿಗಳ ಮೂಲಕ ಬುದ್ಧಿಗೆ ಗೊತ್ತಾಗಿ ಕಾಣಬರುತ್ತವೆ.” (ರೋಮಾಪುರ 1:20) ಆದರೆ, ನಿಸರ್ಗದ ಗ್ರಂಥವು ದೇವರ ಮತ್ತು ಆತನ ಚಿತ್ತದ ಕುರಿತು ಸಂಪೂರ್ಣವಾಗಿ ಪ್ರಕಟಿಸುವುದಿಲ್ಲ. ಉದಾಹರಣೆಗೆ, ಅದು ಜೀವನದ ಉದ್ದೇಶವನ್ನು ತಿಳಿಯಪಡಿಸುವುದಿಲ್ಲ. ಸೃಷ್ಟಿಯ ಮೂಲಕರ್ತನು ಬೇರೊಂದು ಗ್ರಂಥವಾದ, ಅಂದರೆ ತನ್ನ ಪ್ರೇರಿತ ವಾಕ್ಯವಾದ ಬೈಬಲಿನಲ್ಲಿ ತನ್ನ ಕುರಿತು ಪ್ರಕಟಿಸಿದ್ದಾನೆ ಎಂಬುದಕ್ಕೆ ನಾವು ಆಭಾರಿಗಳಾಗಿದ್ದೇವೆ.—2 ತಿಮೊ. 3:16.

ಬೈಬಲ್‌ ವಿಜ್ಞಾನದ ಪುಸ್ತಕವಾಗಿರದಿದ್ದರೂ, ನೈಸರ್ಗಿಕ ಲೋಕವು ಉತ್ತರಿಸಲಾಗದ ಹಲವಾರು ಪ್ರಾಮುಖ್ಯ ಪ್ರಶ್ನೆಗಳನ್ನು ಅದು ಉತ್ತರಿಸುತ್ತದೆ. ಆತನ ಕೈಕೆಲಸದ ಕುಶಲ ಕಲಾಕೃತಿಯನ್ನು ಅಭ್ಯಾಸಿಸುವಾಗ ಅನೇಕ ಜನರು ಪ್ರಥಮ ಬಾರಿ ಕೇಳುವ ಪ್ರಶ್ನೆಗಳಲ್ಲೊಂದನ್ನು ಅದು ಉತ್ತರಿಸುತ್ತದೆ. ಅದು ಯಾವುದೆಂದರೆ, ಇದನ್ನು ಮಾಡಿದವರಾರು? ಸೃಷ್ಟಿಯ ಕುರಿತು, ಬೈಬಲು ಪ್ರಕಟನೆ 4:11ರಲ್ಲಿ ಏನು ಹೇಳುತ್ತದೆ ಎಂಬುದನ್ನು ಗಮನಿಸಿರಿ: “ಕರ್ತನೇ, ನಮ್ಮ ದೇವರೇ, ನೀನು ಪ್ರಭಾವ ಮಾನ ಬಲಗಳನ್ನು ಹೊಂದುವದಕ್ಕೆ ಯೋಗ್ಯನಾಗಿದ್ದೀ; ಸಮಸ್ತವನ್ನು ಸೃಷ್ಟಿಸಿದಾತನು ನೀನೇ; ಎಲ್ಲವು ನಿನ್ನ ಚಿತ್ತದಿಂದಲೇ ಇದ್ದವು, ನಿನ್ನ ಚಿತ್ತದಿಂದಲೇ ನಿರ್ಮಿತವಾದವು.” ಹೌದು, ಆ ಮಹಾ ವಿನ್ಯಾಸಗಾರನು ಯೆಹೋವ ದೇವರಾಗಿದ್ದಾನೆ ಮತ್ತು ಬೈಬಲಿನ ಮೂಲ ಹಸ್ತಪ್ರತಿಗಳಲ್ಲಿ ಆತನ ಹೆಸರು ಸುಮಾರು 7,000 ಬಾರಿ ಕಂಡುಬರುತ್ತದೆ.

ನಮ್ಮ ವೈಜ್ಞಾನಿಕ ಯುಗದ ಸುಮಾರು 3,500 ವರ್ಷಗಳ ಹಿಂದೆ, ಪ್ರಕೃತಿಯನ್ನು ಅತ್ಯಾಸಕ್ತಿಯಿಂದ ಅವಲೋಕಿಸುವವನೂ ಮತ್ತು ವಿವೇಚನೆಯುಳ್ಳವನೂ ಆಗಿದ್ದ ಯೋಬನೆಂಬ ಪುರುಷನು, ಸೃಷ್ಟಿಯು ಯೆಹೋವನಿಗೆ ಸೇರಿದ್ದೆಂದು ತಿಳಿಸಿದನು. ಯೋಬನು ಹೇಳಿದ್ದು: “ಆದರೆ ಮೃಗಗಳನ್ನು ವಿಚಾರಿಸು, ನಿನಗೆ ಉಪದೇಶಮಾಡುವವು; ಆಕಾಶದ ಪಕ್ಷಿಗಳನ್ನು ಕೇಳು, ನಿನಗೆ ತಿಳಿಸುವವು; ಭೂಮಿಯನ್ನು ಮಾತಾಡಿಸು, ನಿನಗೆ ಬೋಧಿಸುವದು; ಸಮುದ್ರದ ಮೀನುಗಳು ನಿನಗೆ ಹೇಳುವವು.” ಇವೆಲ್ಲವೂ ಸೃಷ್ಟಿಯ ಕುರಿತು ಏನನ್ನು ಕಲಿಸುತ್ತವೆ? “ಈ ಎಲ್ಲವುಗಳ ಸಾಕ್ಷಿಯಿಂದ ಯೆಹೋವನ ಕೈಯೇ ಸಕಲಕಾರ್ಯಗಳನ್ನು ಮಾಡುತ್ತದೆ ಎಂದು ಯಾರಿಗೆ ತಾನೇ ಗೊತ್ತಾಗುವದಿಲ್ಲ?” ಎಂಬ ಪ್ರಶ್ನೆಯೊಂದಿಗೆ ಯೋಬನು ಉತ್ತರಿಸುತ್ತಾನೆ.—ಯೋಬ 12:7-9.

ಮಾನವರಿಗಾಗಿ ಯೆಹೋವನ ಉದ್ದೇಶ

ಮಾನವಕುಲಕ್ಕಾಗಿರುವ ಯೆಹೋವ ದೇವರ ಉದ್ದೇಶವನ್ನು ಸಹ ಬೈಬಲು ತಿಳಿಯಪಡಿಸುತ್ತದೆ. ಆ ಉದ್ದೇಶವು ಏನಾಗಿದೆ? ಇದೇ ಭೂಮಿಯ ಮೇಲೆ, ಅಂದರೆ ಪರದೈಸದಲ್ಲಿ ನೀತಿವಂತ ಮಾನವರು ನಿತ್ಯಜೀವದ ಕೊಡುಗೆಯನ್ನು ಆನಂದಿಸಬೇಕೆಂಬುದೇ ಆಗಿದೆ. “ನೀತಿವಂತರೋ ದೇಶವನ್ನು ಅನುಭವಿಸುವವರಾಗಿ ಅದರಲ್ಲಿ ಶಾಶ್ವತವಾಗಿ ವಾಸಿಸುವರು” ಎಂದು ಕೀರ್ತನೆ 37:29 ಹೇಳುತ್ತದೆ. ತದ್ರೀತಿಯಲ್ಲಿ, ಯೇಸು ಹೇಳಿದ್ದು: “ದೀನರು ಭಾಗ್ಯವಂತರು: ಅವರು ಭೂಮಿಯನ್ನು ಬಾಧ್ಯವಾಗಿ ಹೊಂದುವರು.”—ಮತ್ತಾಯ 5:5; ಕಿಂಗ್‌ ಜೇಮ್ಸ್‌ ವರ್ಷನ್‌.

ಇನ್ನೂ ಹೆಚ್ಚಾಗಿ, ವಿಶೇಷ ರೀತಿಯ ಜ್ಞಾನದ ಸಹಾಯದಿಂದ ಭೂಮಿಯು ಶಾಂತಿಭರಿತ ಪರದೈಸವಾಗಿ ಎಂದೆಂದೂ ಉಳಿಯುವುದು. ಯೆಶಾಯ 11:9 ಹೇಳುವುದು: “ನನ್ನ ಪರಿಶುದ್ಧ ಪರ್ವತದಲ್ಲೆಲ್ಲಾ ಯಾರೂ ಕೇಡು ಮಾಡುವದಿಲ್ಲ, ಯಾರೂ ಹಾಳುಮಾಡುವದಿಲ್ಲ; ಸಮುದ್ರದಲ್ಲಿ ನೀರು ಹೇಗೋ ಹಾಗೆಯೇ ಭೂಮಿಯಲ್ಲಿ ಯೆಹೋವನ ಜ್ಞಾನವು ತುಂಬಿಕೊಂಡಿರುವದು.” ವಾಸ್ತವದಲ್ಲಿ, “ಯೆಹೋವನ ಜ್ಞಾನವು” ಅನಂತ ಜೀವನಕ್ಕೆ, ಶಾಂತಿಗೆ ಮತ್ತು ಸಂತೋಷಕ್ಕೆ ಕೀಲಿಕೈಯಾಗಿದೆ. ಯೇಸು ಹೀಗೆ ಹೇಳಿದಾಗ ಇದನ್ನು ದೃಢೀಕರಿಸಿದನು: “ಒಬ್ಬನೇ ಸತ್ಯದೇವರಾಗಿರುವ ನಿನ್ನನ್ನೂ ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನನ್ನೂ ತಿಳಿಯುವದೇ ನಿತ್ಯಜೀವವು.”—ಯೋಹಾನ 17:3.

ದೇವರು ಮೂಲದಲ್ಲಿ ಉದ್ದೇಶಿಸಿದ ಪ್ರಕಾರವೇ, ಇದೇ ಭೂಮಿಯಲ್ಲಿ ಮಾನವರು ನಿತ್ಯಜೀವವನ್ನು ಗಳಿಸುವುದರೊಂದಿಗೆ ಆನಂದವನ್ನೂ ಪಡೆಯುವುದು ಕೊನೆಗೂ ಸಾಧ್ಯವಾಗುವುದು. ನಿತ್ಯಜೀವವು ಬೇಸರ ಹಿಡಿಸುವ ಜೀವನವಾಗಿರದೆ, ಅದು ಆವಿಷ್ಕಾರ ಮತ್ತು ಆನಂದದ ನಿರಂತರ ಸಾಹಸವಾಗಿರುವುದು.

ರೋಮಾಂಚಕವೂ ಆಸಕ್ತಿದಾಯಕವೂ ಆಗಿರುವ ಕೆಲಸ!

ಪ್ರಸಂಗಿ 3:11 ಹೇಳುವುದು: “ಒಂದೊಂದು ವಸ್ತುವನ್ನು ಸಮಯಕ್ಕೆ ತಕ್ಕ ಹಾಗೆ ಅಂದವಾಗಿ ನಿರ್ಮಿಸಿದ್ದಾನೆ; ಇದಲ್ಲದೆ ಮನುಷ್ಯರ ಹೃದಯದಲ್ಲಿ ಅನಂತಕಾಲದ ಯೋಚನೆಯನ್ನು ಇಟ್ಟಿದ್ದಾನೆ; ಆದರೂ ದೇವರು ಆದ್ಯಂತವಾಗಿ ನಡಿಸುತ್ತಿರುವ ಕೆಲಸವನ್ನು ಅವರು ಗ್ರಹಿಸಲಾರದಂತೆ ಮಾಡಿದ್ದಾನೆ.” ಬೇಗನೇ, “ಅನಂತಕಾಲ” ಅಥವಾ ಸದಾಕಾಲ ಜೀವಿಸುವ ಮಾನವನ ಸಹಜ ಆಕಾಂಕ್ಷೆಯು ಪೂರ್ಣವಾಗಿ ತೃಪ್ತಿಗೊಳಿಸಲ್ಪಡುವುದರೊಂದಿಗೆ, ‘ದೇವರು ಆದ್ಯಂತವಾಗಿ ನಡಿಸುತ್ತಿರುವ ಕೆಲಸವನ್ನು ಗ್ರಹಿಸುವ’ ಪ್ರಯತ್ನವನ್ನು ನಾವು ಮಾಡಬಲ್ಲೆವು. ಹೌದು, ಇಡೀ ಭೂಮಿಯು ನಮ್ಮ ಪಾಠಶಾಲೆಯಾಗಿರುವುದು, ಯೆಹೋವನು ನಮ್ಮ ಶಿಕ್ಷಕನಾಗಿರುವನು, ಮತ್ತು ಜೀವಿತವು ರೋಮಾಂಚಕವೂ ಮತ್ತು ನಿರಂತರವಾಗಿ ಆವಿಷ್ಕಾರಗಳನ್ನು ಮಾಡುವ ಮುಗಿಯದ ಪ್ರಯಾಣದಂತಿರುವುದು.

ನೀವು ಪರಿಪೂರ್ಣ ಮನಸ್ಸು ಮತ್ತು ದೇಹದೊಂದಿಗೆ ಪರದೈಸದಲ್ಲಿ ಜೀವಿಸುವುದನ್ನು ಚಿತ್ರಿಸಿಕೊಳ್ಳಿರಿ. ಈಗ ಕನಸಿನಲ್ಲೂ ಮಾಡಲು ಬಯಸದ ಆಸಕ್ತಿದಾಯಕ ಕೆಲಸಗಳನ್ನು ಅಲ್ಲಿ ನೀವು ಸಂತೋಷದಿಂದ ಸ್ವೀಕರಿಸುವಿರಿ ಮತ್ತು ಅದನ್ನು ಪೂರೈಸಲು ನೂರು ವರ್ಷವೇ ಆಗಲಿ ಅಥವಾ ಸಾವಿರ ವರ್ಷವೇ ಆಗಲಿ, ನೀವು ಅದನ್ನು ಮಾಡಿಯೇ ತೀರಿಸುವಿರೆಂಬುದು ನಿಮಗೆ ಗೊತ್ತಿದೆ. ಪ್ರಾಯಶಃ, ಯೆಹೋವನ ವಿನ್ಯಾಸಗಳಲ್ಲಿ ಕೆಲವನ್ನು ನಕಲುಮಾಡಲು ನಿಮ್ಮ ಪರಿಪೂರ್ಣ ಸಾಮರ್ಥ್ಯಗಳನ್ನು ಸಹ ನೀವು ಉಪಯೋಗಿಸಬಹುದು. ಆದರೆ, ಮಾನವಕುಲದ ಸದ್ಯದ ಆವಿಷ್ಕಾರಗಳು ಹೆಚ್ಚಾಗಿ ಹಾನಿಯನ್ನುಂಟು ಮಾಡುತ್ತವೆ ಮತ್ತು ಪರಿಸರವನ್ನು ಮಲಿನಗೊಳಿಸುತ್ತವೆ. ಆದರೆ, ಅಲ್ಲಿ ಮಾಡುವ ಪ್ರಯತ್ನಗಳು ಎಷ್ಟೋ ಉತ್ತಮವಾದ ರೀತಿಯಲ್ಲಿ ಇರುವುದು. ಹೌದು, ಯೆಹೋವನಂತೆ ನೀವು ಮಾಡುವ ಎಲ್ಲ ವಿಷಯಗಳಲ್ಲಿ ಪ್ರೀತಿಯು ವ್ಯಕ್ತವಾಗುವುದು.—ಆದಿಕಾಂಡ 1:27; 1 ಯೋಹಾನ 4:8.

ಇದು ಕಾಲ್ಪನಿಕ ಸಂಗತಿಯಲ್ಲ ಎಂಬುದನ್ನು ನಾವು ಹೇಗೆ ತಿಳಿದುಕೊಳ್ಳಬಹುದು? ಯೆಹೋವನ ಎರಡು ಮಹತ್ವದ “ಗ್ರಂಥಗಳು” ನಮಗಿರುವುದರಿಂದಲೇ. ಹೌದು, ಬೈಬಲು ಮತ್ತು ಸೃಷ್ಟಿಯು ನಮ್ಮ ಮಹಾ ವಿನ್ಯಾಸಗಾರನು ಮತ್ತು ಸೃಷ್ಟಿಕರ್ತನಿಗೆ ಯಾವುದೂ ಅಸಾಧ್ಯವಲ್ಲ ಎಂಬ ನಿರಾಕರಿಸಲಾಗದ ರುಜುವಾತನ್ನು ಒದಗಿಸುತ್ತದೆ. ಆದುದರಿಂದ ನಾವು ಆತನನ್ನು ಮತ್ತು ಆತನ ಮಗನಾಗಿರುವ ಯೇಸು ಕ್ರಿಸ್ತನನ್ನು ಈಗಲೇ ಹೆಚ್ಚು ಉತ್ತಮವಾಗಿ ಯಾಕೆ ತಿಳಿದುಕೊಳ್ಳಬಾರದು? ಇದಕ್ಕಿಂತ ಹೆಚ್ಚು ಆಸಕ್ತಿದಾಯಕವಾಗಿರುವ, ಪ್ರಯೋಜನದಾಯಕ ಮತ್ತು ಆಶಾಜನಕವಾಗಿರುವ ಬೇರೊಂದು ಕೆಲಸವು ಇರಲು ಸಾಧ್ಯವೇ ಇಲ್ಲ.

[ಪುಟ 10ರಲ್ಲಿರುವ ಚಿತ್ರಗಳು]

ಬೈಬಲ್‌ ಮತ್ತು ನಿಸರ್ಗದ ಗ್ರಂಥವು ಮಹಾ ವಿನ್ಯಾಸಗಾರನ ಕುರಿತು ತಿಳಿಯಪಡಿಸುತ್ತದೆ.