ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯುದ್ಧ ಬಲಿಗಳ ವಿಭಿನ್ನ ರೂಪಗಳು

ಯುದ್ಧ ಬಲಿಗಳ ವಿಭಿನ್ನ ರೂಪಗಳು

ಯುದ್ಧ ಬಲಿಗಳ ವಿಭಿನ್ನ ರೂಪಗಳು

“ಇಂದು ನಡೆಯುತ್ತಿರುವ ಯುದ್ಧಗಳು ಹಿಂದೆ ನಡೆದ ಯುದ್ಧಗಳಿಗಿಂತ ಭಿನ್ನವಾಗಿವೆ . . . ಸೈನಿಕರ ಬದಲು ಸಾಮಾನ್ಯ ನಾಗರಿಕರೇ” ಹೆಚ್ಚೆಚ್ಚಾಗಿ ಬಲಿಯಾಗುತ್ತಿದ್ದಾರೆ ಎಂದು ಯುಎನ್‌ ರೇಡಿಯೋದಿಂದ ಪ್ರಸಾರ ಮಾಡಲ್ಪಟ್ಟ “ಪರ್‌ಸ್ಪೆಕ್ಟಿವ್‌” ಎಂಬ ಕಾರ್ಯಕ್ರಮದಲ್ಲಿ ವರದಿಸಲಾಯಿತು. ಉದಾಹರಣೆಗೆ, ಮೊದಲ ಲೋಕ ಯುದ್ಧದಲ್ಲಿ, ಸತ್ತವರಲ್ಲಿ ಕೇವಲ ಶೇಕಡ 5ರಷ್ಟು ಜನರು ನಾಗರಿಕರಾಗಿದ್ದರು. ಆದರೂ, ಎರಡನೇ ಲೋಕ ಯುದ್ಧದಲ್ಲಿ, ನಾಗರಿಕರ ಸಾವಿನ ಸಂಖ್ಯೆಯು ಶೇಕಡ 48ಕ್ಕೆ ಜಿಗಿಯಿತು. ಯುಎನ್‌ ರೇಡಿಯೋ ಗಮನಿಸುವಂತೆ, ಇಂದು “ಯುದ್ಧದಲ್ಲಿ ಸಾಯುವವರಲ್ಲಿ ಹೆಚ್ಚುಕಡಿಮೆ ಎಲ್ಲರೂ, ಅಂದರೆ ಸುಮಾರು ಶೇಕಡ 90ರಷ್ಟು ಜನರು ನಾಗರಿಕರಾಗಿದ್ದಾರೆ ಮತ್ತು ಅವರಲ್ಲಿ ಅನೇಕರು ಸ್ತ್ರೀಯರು, ಮಕ್ಕಳು ಮತ್ತು ವೃದ್ಧ ವ್ಯಕ್ತಿಗಳಾಗಿದ್ದಾರೆ.”

ಮಕ್ಕಳ ಮತ್ತು ಸಶಸ್ತ್ರ ಹೋರಾಟದ ಯುಎನ್‌ ಸೆಕ್ರಿಟರಿ ಜನರಲ್‌ರ ವಿಶೇಷ ಪ್ರತಿನಿಧಿಯಾಗಿರುವ ಓಲಾರಾ ಆ್ಯಟ್ಯನೋರವರಿಗನುಸಾರ, “ಅಂದಾಜಿನ ಪ್ರಕಾರ ಇಸವಿ 1987ರಿಂದ ಸುಮಾರು ಇಪ್ಪತ್ತು ಲಕ್ಷ ಮಕ್ಕಳು ಸಶಸ್ತ್ರ ಹೋರಾಟದಲ್ಲಿ ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ.” ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ಕಳೆದ 12 ವರ್ಷಗಳಿಂದ ಪ್ರತಿದಿನ 450ಕ್ಕಿಂತಲೂ ಹೆಚ್ಚಿನ ಮಕ್ಕಳು ಯುದ್ಧದಲ್ಲಿ ಸತ್ತಿದ್ದಾರೆ! ಅಷ್ಟು ಮಾತ್ರವಲ್ಲ, ಇದೇ ಸಮಯಾವಧಿಯಲ್ಲಿ, ಅರವತ್ತು ಲಕ್ಷಕ್ಕಿಂತಲೂ ಹೆಚ್ಚಿನ ಮಕ್ಕಳು ಗಂಭೀರವಾಗಿ ಗಾಯಗೊಳಗಾಗಿದ್ದಾರೆ ಅಥವಾ ಅವರು ಶಾಶ್ವತವಾಗಿ ಅಂಗವಿಕಲರಾಗಿದ್ದಾರೆ.

ಆ್ಯಟ್ಯನೋರವರಿಗನುಸಾರ, ಯುದ್ಧದಲ್ಲಿ ಮಕ್ಕಳು ಈ ರೀತಿ ಹೆಚ್ಚೆಚ್ಚು ಸಂಖ್ಯೆಯಲ್ಲಿ ಸಾಯುವುದನ್ನು ಕಡಿಮೆಮಾಡಬಹುದಾದ ಒಂದು ವಿಧಾನವು ಶಾಂತಿಯ ವಲಯಗಳನ್ನು ಸ್ಥಾಪಿಸುವುದೇ ಆಗಿದೆ. “ಮಕ್ಕಳೇ ಹೆಚ್ಚಿರುವ ಸ್ಥಳಗಳಾಗಿರುವ ಶಾಲೆ, ಆಸ್ಪತ್ರೆ ಮತ್ತು ಆಟದ ಮೈದಾನಗಳನ್ನು ಯುದ್ಧದಿಂದ ಮುಕ್ತವಾಗಿರುವ ವಲಯಗಳಾಗಿ ಪರಿಗಣಿಸಬೇಕು.” ಹೀಗಿದ್ದರೂ, ಯುಎನ್‌ ರೇಡಿಯೋ ಕೂಡಿಸುವುದು, ಸಾಮಾನ್ಯ ನಾಗರಿಕರು ಯುದ್ಧದಲ್ಲಿ ಸಂಹಾರವಾಗದಿರುವುದನ್ನು ಖಾತ್ರಿಪಡಿಸುವುದಕ್ಕೆ ಯುಎನ್‌ ಬಳಿ ಇರುವ ಅತಿ ಪರಿಣಾಮಕಾರಿಯಾದ ವಿಧವು, “ಆರಂಭದಲ್ಲಿಯೇ ಕಲಹಗಳನ್ನು ತಡೆಯುವುದು” ಆಗಿದೆ. ನಿಜ, ಯುದ್ಧದಲ್ಲಾಗುವ ಅನಾಹುತಗಳನ್ನು ತಡೆಯಬೇಕಾದರೆ ಯುದ್ಧವು ತಾನೇ ತೆಗೆದುಹಾಕಲ್ಪಡಬೇಕು. ಇದು ಎಂದಾದರೂ ಸಂಭವಿಸುವುದೋ?

ಮಾನವಕುಲಕ್ಕೆ ಯುದ್ಧಗಳ ದೀರ್ಘ ಇತಿಹಾಸವು ಇರುವ ಕಾರಣ, ಮಾನವರು ಎಂದೂ ಲೋಕವ್ಯಾಪಕ ಶಾಂತಿಯನ್ನು ತರಲಾರರು ಎಂದು ಅನೇಕ ವ್ಯಕ್ತಿಗಳು ಸರಿಯಾಗಿಯೇ ನೆನಸುತ್ತಾರೆ. ಆದರೂ, ಯೆಹೋವ ದೇವರು ಶಾಂತಿಯನ್ನು ತರುವನೆಂದು ಬೈಬಲು ವಾಗ್ದಾನಿಸುತ್ತದೆ: “ಲೋಕದ ಎಲ್ಲಾ ಭಾಗದಲ್ಲೂ ಯುದ್ಧವನ್ನು ನಿಲ್ಲಿಸಿಬಿಟ್ಟಿದ್ದಾನೆ.” (ಕೀರ್ತನೆ 46:9) ಆದರೆ, ಇದು ಯಾವಾಗ ಸಂಭವಿಸುವುದು? ಲೋಕವ್ಯಾಪಕವಾಗಿ ಶಾಂತಿಯನ್ನು ತರುವ ದೇವರ ಆಶ್ವಾಸನೆಯು ಶೀಘ್ರದಲ್ಲಿ ಖಂಡಿತವಾಗಿಯೂ ನೆರವೇರುವುದು ಎಂದು ನೀವು ಏಕೆ ಖಾತ್ರಿಯಿಂದಿರಸಾಧ್ಯವಿದೆ? ಈ ಪ್ರಶ್ನೆಗಳಿಗೆ ಉತ್ತರವನ್ನು ಪಡೆದುಕೊಳ್ಳಲು ನೀವು ಬಯಸುವುದಾದರೆ, ಈ ಪತ್ರಿಕೆಯ 5ನೆಯ ಪುಟದಲ್ಲಿ ಪಟ್ಟಿಮಾಡಲ್ಪಟ್ಟಿರುವ ಹತ್ತಿರದ ವಿಳಾಸವನ್ನು ಉಪಯೋಗಿಸಿ, ಈ ಪತ್ರಿಕೆಯ ಪ್ರಕಾಶಕರಿಗೆ ದಯವಿಟ್ಟು ಬರೆಯಿರಿ ಅಥವಾ ನಿಮಗೆ ಹತ್ತಿರದಲ್ಲಿರುವ ಯೆಹೋವನ ಸಾಕ್ಷಿಗಳ ರಾಜ್ಯ ಸಭಾಗೃಹಕ್ಕೆ ಭೇಟಿಯಾಗಿರಿ. ಯಾವುದೇ ಹಂಗಿಲ್ಲದೆ ಅಥವಾ ಖರ್ಚನ್ನು ಕೇಳದೇ ನಿಮಗೆ ನೇರವಾದ ಉತ್ತರಗಳು ಸಿಗುವವು.

[ಪುಟ 31ರಲ್ಲಿರುವ ಚಿತ್ರ ಕೃಪೆ]

UN PHOTO 156450/J. Isaac