ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗ್ರೇಟ್‌ ವೈಟ್‌ ಷಾರ್ಕ್‌—ಆಕ್ರಮಣಕ್ಕೆ ತುತ್ತಾಗುತ್ತಿದೆ

ಗ್ರೇಟ್‌ ವೈಟ್‌ ಷಾರ್ಕ್‌—ಆಕ್ರಮಣಕ್ಕೆ ತುತ್ತಾಗುತ್ತಿದೆ

ಗ್ರೇಟ್‌ ವೈಟ್‌ ಷಾರ್ಕ್‌—ಆಕ್ರಮಣಕ್ಕೆ ತುತ್ತಾಗುತ್ತಿದೆ

ಜಗತ್ತಿನಲ್ಲೇ ಅತಿ ದೊಡ್ಡ ಮಾಂಸಾಹಾರಿ ಮೀನಾಗಿರುವ ಗ್ರೇಟ್‌ ವೈಟ್‌ ಷಾರ್ಕ್‌, ಬೇರೆ ಯಾವುದೇ ಜೀವಿಗಿಂತಲೂ ಮಾನವರಿಗೆ ಹೆಚ್ಚು ಭಯಾನಕವಾಗಿ ಕಂಡುಬರುತ್ತದೆ. ಆದರೂ, ಅಮೆರಿಕ, ಆಸ್ಟ್ರೇಲಿಯ, ದಕ್ಷಿಣ ಆಫ್ರಿಕ, ನಮೀಬಿಯ, ಮತ್ತು ಬ್ರೆಸಿಲ್‌ ಹಾಗೂ ಮೆಡಿಟರೇನಿಯನ್‌ ಸಮುದ್ರದಲ್ಲಿರುವ ಈ ಗ್ರೇಟ್‌ ವೈಟ್‌ ಷಾರ್ಕ್‌ ಮೀನುಗಳನ್ನು ಈಗ ಸಂರಕ್ಷಿಸಲಾಗುತ್ತಿದೆ. ಇನ್ನಿತರ ದೇಶಗಳು ಹಾಗೂ ರಾಜ್ಯಗಳು ಸಹ ಈ ಮೀನಿಗೆ ಸಂರಕ್ಷಣೆಯನ್ನು ನೀಡುವುದರ ಕುರಿತು ಆಲೋಚಿಸುತ್ತಿವೆ. ಆದರೆ ಹೆಸರುವಾಸಿಯಾಗಿರುವ ಈ ಹಿಂಸ್ರ ಮೀನನ್ನು ಏಕೆ ಸಂರಕ್ಷಿಸಲಾಗುತ್ತಿದೆ? ನಾವು ನೋಡಲಿರುವಂತೆ, ಈ ವಾದಾಂಶವು ಅಷ್ಟೇನೂ ಸರಳವಾದದ್ದಲ್ಲ. ಅಥವಾ ವೈಟ್‌ ಷಾರ್ಕ್‌ನ ಕುರಿತಾದ ಸಾರ್ವಜನಿಕ ಅಭಿಪ್ರಾಯಗಳು ಯಾವಾಗಲೂ ವಾಸ್ತವ ಸಂಗತಿಗಳ ಮೇಲಾಧಾರಿತವಾಗಿರುವುದಿಲ್ಲ.

ಹಿಂಸ್ರ ತಿಮಿಂಗಿಲ (ಕಿಲ್ಲರ್‌ ವೇಲ್‌) ಮತ್ತು ಸ್ಪರ್ಮ್‌ ತಿಮಿಂಗಿಲಗಳೊಂದಿಗೆ, ಈ ಗ್ರೇಟ್‌ ವೈಟ್‌ ಷಾರ್ಕ್‌ * ಕಡಲಿನ ಆಹಾರ ಸರಪಳಿಯ ತುತ್ತತುದಿಯಲ್ಲಿದೆ. ಷಾರ್ಕ್‌ ಜಾತಿಯಲ್ಲೇ ಇದು ರಾಜನಾಗಿದೆ, ಅಂದರೆ ಸೂಪರ್‌ಷಾರ್ಕ್‌ ಆಗಿದೆ. ಇದು ಏನನ್ನು ಬೇಕಾದರೂ—ಮೀನುಗಳು, ಡಾಲ್ಫಿನ್‌ಗಳು, ಹಾಗೂ ಇನ್ನಿತರ ಷಾರ್ಕ್‌ ಮೀನುಗಳು—ತಿಂದುಹಾಕಬಲ್ಲದು. ಆದರೂ ಅದಕ್ಕೆ ವಯಸ್ಸಾಗುತ್ತಾ ಬಂದು, ಅದು ಬೃಹದಾಕಾರವಾಗಿ ಬೆಳೆದು, ಹೆಚ್ಚು ನಿಧಾನಗೊಳ್ಳುತ್ತಾ ಹೋದಂತೆ, ಅದು ಕೇವಲ ಸೀಲ್‌ಗಳು, ಪೆಂಗ್ವಿನ್‌ಗಳು ಮತ್ತು ಕೊಳೆತ ಮಾಂಸವನ್ನು, ಅದರಲ್ಲೂ ಸತ್ತ ತಿಮಿಂಗಿಲಗಳನ್ನು ತಿನ್ನಲು ಇಷ್ಟಪಡುತ್ತದೆ.

ಅಧಿಕಾಂಶ ಷಾರ್ಕ್‌ಗಳು ತಮ್ಮ ಆಹಾರವನ್ನು ಕಂಡುಕೊಳ್ಳುವುದರಲ್ಲಿ ತಮ್ಮೆಲ್ಲ ಜ್ಞಾನೇಂದ್ರಿಯವನ್ನು ಉಪಯೋಗಿಸುತ್ತವೆ. ಇದರಲ್ಲಿ ಅವುಗಳ ಅತ್ಯುತ್ತಮ ದೃಷ್ಟಿಯೂ ಒಳಗೂಡಿದೆ. ಅವುಗಳ ಘ್ರಾಣಶಕ್ತಿಯ ಬಗ್ಗೆ ಹೇಳುವುದಾದರೆ, ಅವುಗಳಿಗೆ ಈಜುವ ಮೂಗು ಎಂಬ ರೂಪಕಾಲಂಕಾರವು ಸೂಕ್ತವಾಗಿ ಅನ್ವಯಿಸುತ್ತದೆ! ಅಷ್ಟುಮಾತ್ರವಲ್ಲ, ಅವುಗಳ ಕಿವಿಗಳೂ ತುಂಬ ಚುರುಕು. ಆದುದರಿಂದ ಅವುಗಳನ್ನು ಈಜುವ ಕಿವಿಗಳು ಎಂದೂ ಕರೆಯಬಹುದು.

ಷಾರ್ಕ್‌ಗಳ ಕಿವಿಗಳಿಗೆ, ದೇಹದ ಎರಡೂ ಪಾರ್ಶ್ವಗಳ ಉದ್ದಕ್ಕೂ ಇರುವ ಒತ್ತಡಕ್ಕೆ ಸುಲಭವಾಗಿ ಪ್ರತಿಕ್ರಿಯಿಸುವಂತಹ ಜೀವಕೋಶಗಳಿಂದ ನೆರವು ಸಿಗುತ್ತದೆ. ಹೋರಾಟದ ಕಂಪನಗಳಿಗೆ—ಉದಾಹರಣೆಗೆ, ಈಟಿಯೊಂದರ ತುದಿಯಲ್ಲಿ ಒದ್ದಾಡುತ್ತಿರುವಂತಹ ಒಂದು ಮೀನಿನ ಹೋರಾಟಕ್ಕೆ—ವಿಶೇಷವಾಗಿ ಪ್ರತಿಕ್ರಿಯಿಸುವಂತಹ ಹೊಂಚಿಕೇಳುವ ಈ ವ್ಯೂಹದಿಂದ ಯಾವುದೂ ತಪ್ಪಿಸಿಕೊಳ್ಳಲಾರದು. ಆದುದರಿಂದ, ನೀರಿನ ಕೆಳಗೆ ಈಟಿಯನ್ನು ಉಪಯೋಗಿಸಿ ಮೀನು ಹಿಡಿಯುವ ಬೆಸ್ತನಿಗೆ, ರಕ್ತಹರಿಸುತ್ತಾ ಒದ್ದಾಡುತ್ತಿರುವ ಮೀನನ್ನು ಸಾಧ್ಯವಾದಷ್ಟು ಬೇಗನೆ ನೀರಿನಿಂದ ಹೊರಕ್ಕೆ ತೆಗೆಯುವುದು ಬುದ್ಧಿವಂತಿಕೆಯ ಕೆಲಸವಾಗಿದೆ.

ಷಾರ್ಕ್‌ಗಳಿಗೆ ಆರನೆಯ ಜ್ಞಾನೇಂದ್ರಿಯವೂ (ಅಂತರ್ಬೋಧೆ) ಇದೆ. ಲೊರಾನ್‌ಟ್ಸಿನಿಯ ವಿಸ್ತೃತ ನಾಳಾಗ್ರದ—ಷಾರ್ಕ್‌ಗಳ ಮೂಗಿನ ಮೇಲೆಲ್ಲ ಇರುವ ಸಣ್ಣ ಸಣ್ಣ ನಾಳಗಳು—ಕಾರಣದಿಂದ, ಭಾವಿ ಆಹಾರಪ್ರಾಣಿಯ ಎದೆಬಡಿತ, ಕಿವಿರುಗಳ ಚಲನೆ, ಅಥವಾ ಈಜುತ್ತಿರುವ ಸ್ನಾಯುಗಳಿಂದ ಹೊರಡಿಸಲ್ಪಡುವ ದುರ್ಬಲ ವಿದ್ಯುತ್‌ ಕ್ಷೇತ್ರವನ್ನು ಪತ್ತೆಹಚ್ಚಲು ಸಾಧ್ಯವಾಗುತ್ತದೆ. ವಾಸ್ತವದಲ್ಲಿ, ಈ ಆರನೆಯ ಜ್ಞಾನೇಂದ್ರಿಯವು ಎಷ್ಟು ಚುರುಕಾಗಿದೆಯೆಂದರೆ, ಮಹಾಸಾಗರದೊಂದಿಗೆ ಆಗುವ ಭೂಮಿಯ ಕಾಂತೀಯ ಕ್ಷೇತ್ರದ ಪರಸ್ಪರ ಕ್ರಿಯೆಗೆ ಷಾರ್ಕ್‌ಗಳು ಸುಲಭವಾಗಿ ಸ್ಪಂದಿಸುವಂತೆ ಅದು ಮಾಡಬಲ್ಲದು. ಇದರ ಫಲಿತಾಂಶವಾಗಿ, ಯಾವುದು ಉತ್ತರ ಮಾರ್ಗ ಮತ್ತು ಯಾವುದು ದಕ್ಷಿಣ ಮಾರ್ಗ ಎಂಬುದು ಷಾರ್ಕ್‌ಗಳಿಗೆ ತಿಳಿದುಬರುತ್ತದೆ.

ವೈಟ್‌ ಷಾರ್ಕನ್ನು ಗುರುತಿಸುವುದು

ಇದನ್ನು ಗ್ರೇಟ್‌ ವೈಟ್‌ ಷಾರ್ಕ್‌ ಎಂದು ಕರೆಯಲಾಗುತ್ತದಾದರೂ, ಕೇವಲ ಇದರ ಕೆಳಭಾಗ ಮಾತ್ರ ಬಿಳಿ ಅಥವಾ ಮಾಸಲು ಬಣ್ಣದ್ದಾಗಿದೆ. ಸಾಮಾನ್ಯವಾಗಿ ಇದರ ಬೆನ್ನಿನ ಭಾಗವು ದಟ್ಟ ಬೂದು ಬಣ್ಣದ್ದಾಗಿರುತ್ತದೆ. ಈ ಎರಡು ಬಣ್ಣಗಳು, ಮೀನಿನ ಪಾರ್ಶ್ವಭಾಗದಲ್ಲಿ ಅಂಕುಡೊಂಕಾದ ರೇಖೆಯಲ್ಲಿ ಸಂಧಿಸುತ್ತವೆ. ಈ ರೇಖೆಯು ಒಂದೊಂದು ಷಾರ್ಕಿನಲ್ಲಿ ಒಂದೊಂದು ರೀತಿಯಲ್ಲಿರುತ್ತದೆ. ಈ ವೈಶಿಷ್ಟ್ಯವು ಬಣ್ಣವನ್ನು ಮರೆಮಾಚುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ, ಆದರೆ ಪ್ರತಿಯೊಂದು ಷಾರ್ಕನ್ನು ಗುರುತಿಸಲಿಕ್ಕಾಗಿ ಇದು ವಿಜ್ಞಾನಿಗಳಿಗೂ ಸಹಾಯ ಮಾಡುತ್ತದೆ.

ವೈಟ್‌ ಷಾರ್ಕ್‌ಗಳು ಎಷ್ಟು ದೊಡ್ಡ ಗಾತ್ರಕ್ಕೆ ಬೆಳೆಯುತ್ತವೆ? “ಜಾಗರೂಕತೆಯಿಂದ ಅಳೆಯಲ್ಪಟ್ಟ ಅತಿ ದೊಡ್ಡ ವೈಟ್‌ ಷಾರ್ಕ್‌ಗಳು, 5.8 ಮತ್ತು 6.4 ಮೀಟರುಗಳಷ್ಟು ಉದ್ದವಾಗಿರುತ್ತವೆ” ಎಂದು ಗ್ರೇಟ್‌ ವೈಟ್‌ ಷಾರ್ಕ್‌ ಎಂಬ ಪುಸ್ತಕವು ಹೇಳುತ್ತದೆ. ಈ ಗಾತ್ರದ ಮೀನಿನ ತೂಕವು 2,000 ಕಿಲೊಗ್ರ್ಯಾಮ್‌ಗಳಿಗಿಂತಲೂ ಹೆಚ್ಚಾಗಿರಬಲ್ಲದು. ಆದರೂ, ನೌಕಾಸ್ಫೋಟಕ (ಟಾರ್ಪಿಡೊ)ದಂತಿರುವ ಮುಂಡಕ್ಕೆ ಅಂಟಿಕೊಂಡಿದ್ದು, ಹಿಂದಕ್ಕೆ ಬಾಗಿರುವ ತ್ರಿಕೋನಾಕಾರದ ಈಜುರೆಕ್ಕೆಗಳ ಸಹಾಯದಿಂದ ಈ ಬೃಹದಾಕಾರದ ಜೀವಿಗಳು ನೀರಿನ ಮೂಲಕ ಕ್ಷಿಪಣಿಗಳಂತೆ ಹಾದುಹೋಗುತ್ತವೆ. ಒಂದಕ್ಕೊಂದು ಅಭಿಮುಖವಾಗಿರುವ ಅವುಗಳ ಬಾಲವು, ಶಾರೀರಿಕ ಬಲಕ್ಕಾಗಿಯೇ ರಚಿಸಲ್ಪಟ್ಟಿದೆಯೋ ಎಂಬಂತಿದ್ದು, ಷಾರ್ಕ್‌ ಜಗತ್ತಿನಲ್ಲಿ ಇದು ಇನ್ನೊಂದು ವಿಶೇಷತೆಯಾಗಿದೆ. ಏಕೆಂದರೆ ಷಾರ್ಕಿನ ಇನ್ನಿತರ ಜಾತಿಗಳಿಗೆ ವಿಷಮಪಾರ್ಶ್ವವಾದ ಬಾಲಗಳಿರುತ್ತವೆ.

ವೈಟ್‌ ಷಾರ್ಕಿನ ತೀರ ವಿಶಿಷ್ಟವಾದ ಹಾಗೂ ಭಯಾನಕವಾದ ದೈಹಿಕ ಭಾಗಗಳು ಯಾವುವೆಂದರೆ, ಶಂಕುವಿನಾಕಾರದ ಅದರ ದೊಡ್ಡ ತಲೆ, ಅದರ ನಿರ್ಲಿಪ್ತ ಕಣ್ಣುಗಳು, ಮತ್ತು ಬಾಯಿಯೇ. ಅದರ ಬಾಯಿಯಲ್ಲಿ ಕ್ಷೌರಕತ್ತಿಯಷ್ಟು ಹರಿತವಾಗಿದ್ದು, ಗರಗಸದಂತಿರುವ ತ್ರಿಕೋನಾಕಾರದ ಹಲ್ಲುಗಳಿವೆ. ಎರಡು ಮೊನಚುಗಳುಳ್ಳ ಈ “ಕತ್ತಿಗಳು” ಒಂದುವೇಳೆ ಮುರಿದುಹೋಗುವಲ್ಲಿ ಅಥವಾ ಬಿದ್ದುಹೋಗುವಲ್ಲಿ, ಬಿದ್ದುಹೋದ ಹಲ್ಲಿನ ಜಾಗಕ್ಕೆ ‘ಸಾಗಣೆ ಪಟ್ಟಿ’ಯು ಇನ್ನೊಂದು ಹಲ್ಲನ್ನು ಮುನ್ನೂಕುತ್ತದೆ.

ಬಿಸಿ ರಕ್ತದಿಂದ ಶಕ್ತಿಯನ್ನು ಪಡೆದುಕೊಳ್ಳುವುದು

ಲ್ಯಾಮ್‌ನಿಡೆ ಜಾತಿಗೆ—ಇವುಗಳಲ್ಲಿ ಮಾಕೊ, ಪೋರ್‌ಬೀಗ್‌ಲ್‌, ಮತ್ತು ವೈಟ್‌ ಷಾರ್ಕ್‌ಗಳು ಒಳಗೂಡಿವೆ—ಸೇರಿರುವ ಷಾರ್ಕ್‌ಗಳ ರಕ್ತಪರಿಚಲನಾ ವ್ಯೂಹವು, ಇನ್ನಿತರ ಷಾರ್ಕ್‌ ಮೀನುಗಳ ರಕ್ತಪರಿಚಲನಾ ವ್ಯೂಹಕ್ಕಿಂತ ತುಂಬ ಭಿನ್ನವಾಗಿದೆ. ಅವುಗಳ ರಕ್ತದ ಉಷ್ಣತೆಯು, ನೀರಿನ ಉಷ್ಣತೆಗಿಂತಲೂ ಸುಮಾರು 5ರಿಂದ 10 ಡಿಗ್ರಿ ಹೆಚ್ಚು ಸೆಲ್ಸಿಯಸ್‌ಗಳಷ್ಟಿರುತ್ತದೆ. ಅವುಗಳಲ್ಲಿರುವ ಬಿಸಿ ರಕ್ತವು ಜೀರ್ಣಕ್ರಿಯೆಯನ್ನು ತೀವ್ರಗೊಳಿಸುತ್ತದೆ ಮತ್ತು ಅವುಗಳ ಬಲ ಹಾಗೂ ತಾಳ್ಮೆಗೆ ನೆರವು ನೀಡುತ್ತದೆ. ಟ್ಯೂನದಂತಹ ಸಮುದ್ರ ಮೀನುಗಳನ್ನು ತಿನ್ನುವ ಮಾಕೊ ಷಾರ್ಕ್‌ ಮೀನು, ಒಂದು ತಾಸಿಗೆ 100 ಕಿಲೊಮೀಟರ್‌ಗಳಷ್ಟು ವೇಗದಲ್ಲಿ ನೀರಿನ ಮೂಲಕ ಥಟ್ಟನೆ ಹಾದುಹೋಗಬಲ್ಲದು!

ಷಾರ್ಕ್‌ಗಳು ಈಜಾಡುವಾಗ, ತಮ್ಮ ಎದೆಯ ಭಾಗದಲ್ಲಿರುವ ಎರಡು ಈಜುರೆಕ್ಕೆಗಳು, ದೇಹವನ್ನು ಮೇಲೆತ್ತಲು ಅವುಗಳಿಗೆ ಸಹಾಯ ಮಾಡುತ್ತವೆ. ಅವು ತುಂಬ ನಿಧಾನವಾಗಿ ಈಜುವಲ್ಲಿ, ಸಮತೋಲನವನ್ನು ಕಳೆದುಕೊಂಡು, ಒಂದು ವಿಮಾನದಂತೆ ನೀರಿನಲ್ಲಿ ಮುಳುಗಿಹೋಗುವವು. ಷಾರ್ಕ್‌ ಮೀನಿನ ಒಟ್ಟು ತೂಕದಲ್ಲಿ ಸುಮಾರು ನಾಲ್ಕನೇ ಒಂದು ಭಾಗದಷ್ಟು ತೂಕವಿರಬಹುದಾದ ದೊಡ್ಡ ಪಿತ್ತಜನಕಾಂಗದಲ್ಲಿ ಸಂಗ್ರಹಿಸಲ್ಪಟ್ಟಿರುವ ಪ್ಲವನತೆಯನ್ನು ಉಂಟುಮಾಡುವ ಎಣ್ಣೆಯ ಗೋಪ್ಯಸ್ಥಾನವಿದ್ದರೂ ಹೀಗಾಗುವ ಸಂಭವವಿದೆ! ಇದಕ್ಕೆ ಕೂಡಿಸಿ, ಅನೇಕ ಜಾತಿಯ ಷಾರ್ಕ್‌ಗಳು ಉಸಿರಾಟಕ್ಕಾಗಿ ಈಜುತ್ತಾ ಇರಬೇಕಾಗಿದೆ. ಏಕೆಂದರೆ ಈಜುತ್ತಿರುವಾಗ ಅವು ಆಮ್ಲಜನಕದಿಂದ ತುಂಬಿರುವ ನೀರನ್ನು ತಮ್ಮ ಬಾಯಿಗಳು ಹಾಗೂ ಕಿವಿರುಗಳ ಮೂಲಕ ಒಳಕ್ಕೆ ತೆಗೆದುಕೊಳ್ಳುತ್ತವೆ. ಈ ಕಾರಣದಿಂದಲೇ ಇವು ಯಾವಾಗಲೂ ಹಲ್ಲುಕಿರಿಯುತ್ತಿರುತ್ತವೆ!

ಮನುಷ್ಯರನ್ನು ತಿಂದುಬಿಡುತ್ತದೋ?

ಇದುವರೆಗೆ ಕಂಡುಹಿಡಿಯಲ್ಪಟ್ಟಿರುವ 368 ಷಾರ್ಕ್‌ ಜಾತಿಗಳಲ್ಲಿ, ಸುಮಾರು 20 ಜಾತಿಗಳು ಮಾತ್ರ ತುಂಬ ಅಪಾಯಕರವಾಗಿವೆ. ಮತ್ತು ಲೋಕವ್ಯಾಪಕವಾಗಿ ಮಾನವರ ಮೇಲೆ ಪ್ರತಿ ವರ್ಷ ವರದಿಮಾಡಲ್ಪಟ್ಟಿರುವ ಸುಮಾರು 100ರಲ್ಲಿ ಅಧಿಕಾಂಶ ಆಕ್ರಮಣಗಳಿಗೆ, ಕೇವಲ ನಾಲ್ಕು ಜಾತಿಗಳು ಮಾತ್ರ ಕಾರಣವಾಗಿವೆ. ಇವುಗಳಲ್ಲಿ ಸುಮಾರು 30 ಆಕ್ರಮಣಗಳು ಮಾರಕವಾಗಿರುತ್ತವೆ. ಅಪಾಯಕರವಾಗಿರುವ ನಾಲ್ಕು ಷಾರ್ಕ್‌ಗಳು ಯಾವುವೆಂದರೆ, ಬೇರೆ ಯಾವುದೇ ಷಾರ್ಕಿಗೆ ಹೋಲಿಸುವಾಗ ಹೆಚ್ಚು ಮಾನವರನ್ನು ಕೊಂದಿರಬಹುದಾದ ಬುಲ್‌ ಷಾರ್ಕ್‌, ಟೈಗರ್‌ ಷಾರ್ಕ್‌, ಮಹಾಸಾಗರದ ವೈಟ್‌ಟಿಪ್‌ ಷಾರ್ಕ್‌, ಮತ್ತು ವೈಟ್‌ ಷಾರ್ಕ್‌.

ಆಶ್ಚರ್ಯಕರವಾಗಿಯೇ, ವೈಟ್‌ ಷಾರ್ಕಿನ ಆಕ್ರಮಣಕ್ಕೆ ತುತ್ತಾದವರಲ್ಲಿ ಕಡಿಮೆಪಕ್ಷ 55 ಪ್ರತಿಶತ—ಮತ್ತು ಲೋಕದ ಕೆಲವು ಭಾಗಗಳಲ್ಲಿ ಸುಮಾರು 80 ಪ್ರತಿಶತ—ಮಂದಿ ಆ ಆಕ್ರಮಣದಿಂದ ಪಾರಾಗಿ ಉಳಿದಿದ್ದಾರೆ. ಇಷ್ಟೊಂದು ಮಂದಿ ಇಂತಹ ಭೀಕರ ಮಾಂಸಾಹಾರಿ ಮೀನಿನ ಆಕ್ರಮಣಕ್ಕೆ ತುತ್ತಾದರೂ, ಅವರು ಹೇಗೆ ಬದುಕಿ ಉಳಿದಿದ್ದಾರೆ?

ಕಚ್ಚಿ ಉಗಿದುಬಿಡುವುದು

ವೈಟ್‌ ಷಾರ್ಕ್‌ ತನ್ನ ಆಹಾರಪ್ರಾಣಿಯನ್ನು ಮೊದಲು ಗಟ್ಟಿಯಾಗಿ ಕಚ್ಚಿದ ಬಳಿಕ, ಗಾಯಗೊಂಡ ಪ್ರಾಣಿಯನ್ನು ತನ್ನ ಬಾಯಿಂದ ಉಗಿದುಬಿಡುತ್ತದೆ. ತನ್ನ ಬಾಯಿಗೆ ಆಹುತಿಯಾದ ಆ ಪ್ರಾಣಿಯು ನರಳಿ ಸಾಯುವ ತನಕ ಕಾಯುತ್ತದೆ ಮತ್ತು ತದನಂತರ ಅದನ್ನು ತಿನ್ನುತ್ತದೆ. ಷಾರ್ಕ್‌ಗಳ ಈ ವರ್ತನೆಯು, ಮಾನವರು ಅದರ ಬಾಯಿಗೆ ಸಿಕ್ಕಿಕೊಂಡಾಗ ಅವರಿಗೆ ತಪ್ಪಿಸಿಕೊಳ್ಳುವ ಅವಕಾಶವನ್ನು ಕೊಡುತ್ತದೆ. ಕೆಲವೊಮ್ಮೆ ಧೈರ್ಯಶಾಲಿಗಳಾದ ಸಂಗಡಿಗರು ಇವರನ್ನು ಅಪಾಯದಿಂದ ಕಾಪಾಡಿದ್ದಾರೆ. ಎಂದೂ ಒಂಟಿಯಾಗಿ ಈಜಬಾರದು ಎಂಬ ಬುದ್ಧಿವಾದದ ಹಿಂದಿರುವ ವಿವೇಕವನ್ನು ಇದು ಸಾಬೀತುಪಡಿಸುತ್ತದೆ.

ಆದರೂ, ವೈಟ್‌ ಷಾರ್ಕ್‌ಗಳು ಬೇರೆ ಕೆಲವು ಷಾರ್ಕ್‌ಗಳಂತೆ ರಕ್ತದ ವಾಸನೆಯಿಂದ ಉದ್ರೇಕಗೊಂಡು ಬಲಿಪಶುವನ್ನು ತಿನ್ನಲು ಹಾತೊರೆಯುವುದಿಲ್ಲ. ವೈಟ್‌ ಷಾರ್ಕ್‌ ಈ ರೀತಿಯಲ್ಲಿ ವರ್ತಿಸದಿರುತ್ತಿದ್ದಲ್ಲಿ, ಅಪಾಯದಿಂದ ಕಾಪಾಡುವಂತಹ ಪ್ರಯತ್ನಗಳು ಬಹುಮಟ್ಟಿಗೆ ಆತ್ಮಹತ್ಯೆಗೆ ಸಮಾನವಾಗಿರುತ್ತಿದ್ದವು. ಆದರೆ ವೈಟ್‌ ಷಾರ್ಕ್‌ ಈ ಕಚ್ಚುವ ಹಾಗೂ ಉಗಿಯುವ ತಂತ್ರವನ್ನು ಏಕೆ ಉಪಯೋಗಿಸುತ್ತದೆ?

ಅದರ ಕಣ್ಣುಗಳ ಕಾರಣದಿಂದಲೇ ಎಂದು ಒಬ್ಬ ವಿಜ್ಞಾನಿಯು ಊಹಿಸುತ್ತಾನೆ. ಬೇರೆ ಷಾರ್ಕ್‌ಗಳಿಗಿರುವಂತೆ ವೈಟ್‌ ಷಾರ್ಕಿಗೆ ಕಣ್ಣುಗಳನ್ನು ಸಂರಕ್ಷಿಸುವಂತಹ ಕಣ್ಣುರೆಪ್ಪೆಯ ಪೊರೆಯಿಲ್ಲ; ಅದಕ್ಕೆ ಬದಲಾಗಿ, ಯಾವುದಕ್ಕಾದರೂ ಢಿಕ್ಕಿಹೊಡೆಯುವಂತಹ ಸಂಭವವಿರುವಾಗ, ಷಾರ್ಕ್‌ ಕಣ್ಣುಗುಡ್ಡೆಯಲ್ಲಿಯೇ ಕಣ್ಣುಗಳನ್ನು ತಿರುಗಿಸುತ್ತದೆ. ಢಿಕ್ಕಿಹೊಡೆಯುವಂತಹ ಕ್ಷಣದಲ್ಲಿ, ಬಹುಶಃ ಸೀಲ್‌ ಪ್ರಾಣಿಯ ಪಂಜಗಳಿಗೆ ಅದರ ಕಣ್ಣುಗಳು ಸಿಕ್ಕಿಕೊಳ್ಳಬಹುದು. ಆದುದರಿಂದ, ಬಲಿಪಶುವಿನ ಮೇಲೆ ಒಂದೇ ಏಟಿಗೆ ಆಕ್ರಮಣ ಮಾಡಿ, ಮಾರಕ ಹೊಡೆತವನ್ನು ಕೊಟ್ಟು, ತದನಂತರ ಅದನ್ನು ಬಿಟ್ಟುಬಿಡುವುದು ವೈಟ್‌ ಷಾರ್ಕಿನ ಸಾಮಾನ್ಯ ವರ್ತನೆಯಾಗಿದೆ.

ವೈಟ್‌ ಷಾರ್ಕ್‌ಗಳು ಮಾನವ ಶಿಶುಗಳಂತೆ ವರ್ತಿಸುತ್ತವೆ ಎಂಬುದನ್ನು ಸಹ ಮನಸ್ಸಿನಲ್ಲಿಡಿರಿ. ಅಂದರೆ ಒಂದು ವಸ್ತುವನ್ನು ಪರೀಕ್ಷಿಸಿ ನೋಡಲಿಕ್ಕಾಗಿ, ಮೊದಲು ಆ ವಸ್ತುವನ್ನು ನೇರವಾಗಿ ಬಾಯಿಗೆ ಹಾಕಿಕೊಳ್ಳುತ್ತವೆ! ಆದರೆ “ದುಃಖದ ವಿಷಯವೇನೆಂದರೆ, ಒಂದು ದೊಡ್ಡ ವೈಟ್‌ ಷಾರ್ಕ್‌ ಕೇವಲ ಪರೀಕ್ಷಿಸಲಿಕ್ಕಾಗಿ ಕಚ್ಚುವುದಾದರೂ, ಅದರ ಪರಿಣಾಮಗಳು ಮಾರಕವಾಗಿರಸಾಧ್ಯವಿದೆ” ಎಂದು ಸಿಡ್ನಿಯಲ್ಲಿರುವ ಕಡಲ ಜೀವಶಾಸ್ತ್ರಜ್ಞರಾದ ಜಾನ್‌ ವೆಸ್ಟ್‌ ವಿವರಿಸುತ್ತಾರೆ.

ವೈಟ್‌ ಷಾರ್ಕ್‌ ತುಂಬ ಅಪಾಯಕರವಾದ ಮೀನಾಗಿರುವುದಾದರೂ, ಅದು ಮಾನವರ ಮಾಂಸಕ್ಕಾಗಿ ಹಂಬಲಿಸುವ ಕ್ರೂರವಾದ ಹಾಗೂ ವಿನಾಶಕರ ಜೀವಿಯಲ್ಲ. ಚಿಪ್ಪುಳ್ಳ ಒಂದು ಮೃದ್ವಂಗಿಯನ್ನು ಸಂಗ್ರಹಿಸುವ ಒಬ್ಬ ಮುಳುಕ (ಡೈವರ್‌)ನು, ನೀರಿನಲ್ಲಿ 6,000 ತಾಸುಗಳನ್ನು ಕಳೆದಿದ್ದು, ಈ ದೀರ್ಘ ಸಮಯಾವಧಿಯಲ್ಲಿ ಕೇವಲ ಎರಡೇ ವೈಟ್‌ ಷಾರ್ಕ್‌ಗಳನ್ನು ನೋಡಿದ್ದನು, ಮತ್ತು ಅವುಗಳಲ್ಲಿ ಯಾವುದೂ ಅವನ ಮೇಲೆ ಆಕ್ರಮಣ ಮಾಡಲಿಲ್ಲ. ವಾಸ್ತವದಲ್ಲಿ ವೈಟ್‌ ಷಾರ್ಕ್‌ ಅನೇಕವೇಳೆ ಮಾನವರನ್ನು ಕಂಡು ಓಡಿಹೋಗಿದೆ.

ಕೇಪ್‌ ವರ್ಡೆ ಐಲೆಂಡ್ಸ್‌ನ ಮೂಲಕ ಡೈವ್‌ಮಾಡುತ್ತಾ ಹೋಗುತ್ತಿದ್ದಾಗ, ಮಹಾಸಾಗರದ ಪರಿಶೋಧಕನಾದ ಸಾಕ್‌-ಈವ್‌ ಕೌಸ್ಟ್ಯೂ ಹಾಗೂ ಅವನ ಸಂಗಡಿಗನು ಆಕಸ್ಮಿಕವಾಗಿ ಬೃಹದಾಕಾರದ ಒಂದು ವೈಟ್‌ ಷಾರ್ಕ್‌ ತಮ್ಮ ಸಮೀಪ ಬಂದದ್ದನ್ನು ನೋಡಿದರು. “[ಅದರ] ಪ್ರತಿಕ್ರಿಯೆಯು ನಂಬಲು ಅಸಾಧ್ಯವಾದದ್ದಾಗಿತ್ತು” ಎಂದು ಕೌಸ್ಟ್ಯೂ ಬರೆದನು. “ಅತ್ಯಧಿಕ ಭಯದಿಂದ ಆ ದೈತ್ಯ ಮೀನು ದೊಡ್ಡ ಪ್ರಮಾಣದಲ್ಲಿ ಮಲವನ್ನು ಹೊರಹಾಕುತ್ತಾ, ಕ್ಷಣಮಾತ್ರದಲ್ಲಿ ಅಲ್ಲಿಂದ ಕಣ್ಮರೆಯಾಯಿತು.” ಅವನು ಹೀಗೆ ಹೇಳುತ್ತಾ ಮುಕ್ತಾಯಗೊಳಿಸಿದನು: “ವೈಟ್‌ ಷಾರ್ಕ್‌ನೊಂದಿಗಿನ ನಮ್ಮೆಲ್ಲ ಅನುಭವಗಳನ್ನು ಮನನಮಾಡುವಾಗ, ಈ ಜೀವಿಯ ಬಗ್ಗೆ ಸಾರ್ವಜನಿಕರು ತಾಳುವ ಅಭಿಪ್ರಾಯಕ್ಕೂ ನಾವು ಪ್ರತ್ಯಕ್ಷವಾಗಿ ನೋಡಿದ್ದಕ್ಕೂ ಇರುವ ಅಜಗಜಾಂತರವನ್ನು ನೋಡಿ ನಾನು ಮೂಕವಿಸ್ಮಿತನಾದೆ.”

ಆಹಾರದೋಪಾದಿ ವೈಟ್‌ ಷಾರ್ಕ್‌

1970ಗಳಲ್ಲಿ ಯಾವುದು ಜನಪ್ರಿಯ ಚಲನಚಿತ್ರವಾಗಿ ಪರಿಣಮಿಸಿತೋ ಆ ಕಾದಂಬರಿಯಾದ ಜಾಸ್‌, ವೈಟ್‌ ಷಾರ್ಕಿನ ಕುರಿತಾದ ಜನಸಾಮಾನ್ಯ ಕಲ್ಪನೆಯನ್ನು ಬಹಳವಾಗಿ ಪ್ರಭಾವಿಸಿತು. ರಾತ್ರಿಬೆಳಗಾಗುವುದರೊಳಗೆ ವೈಟ್‌ ಷಾರ್ಕ್‌ ದುಷ್ಟತನದ ಒಂದು ಸಾಕಾರ ರೂಪವಾಗಿ ಜಗತ್ಪ್ರಸಿದ್ಧವಾಯಿತು, ಮತ್ತು “ಪಾರಿತೋಷಕವನ್ನು ಪಡೆಯಲು ಬಯಸುವ ಬೇಟೆಗಾರರ ಹಿಂಡು, ಈ ನರಹಂತಕ ಮೀನಿನ ತಲೆಯನ್ನು ಅಥವಾ ದವಡೆಗಳನ್ನು ಬೆಂಕಿಗೂಡಿನ ಮೇಲೆ ಪ್ರದರ್ಶನಕ್ಕಿಡುವುದರಲ್ಲಿ ತಮ್ಮಲ್ಲಿ ಯಾರು ಮೊದಲಿಗರಾಗುವರು ಎಂಬುದನ್ನು ನೋಡಲು ಮುನ್ನುಗ್ಗಿತು” ಎಂದು ಗ್ರೇಟ್‌ ವೈಟ್‌ ಷಾರ್ಕ್‌ ಪುಸ್ತಕವು ಹೇಳುತ್ತದೆ. ಈ ಮಧ್ಯೆ, ಒಂದು ವೈಟ್‌ ಷಾರ್ಕಿನ ಹಲ್ಲು (ಆಸ್ಟ್ರೇಲಿಯದಲ್ಲಿ) ಸುಮಾರು 1,000 ಡಾಲರುಗಳಷ್ಟು ಬೆಲೆಬಾಳಸಾಧ್ಯವಿದೆ; ಮತ್ತು ಒಂದು ಜೊತೆ ದವಡೆಯು 20,000 ಡಾಲರುಗಳಿಗಿಂತಲೂ ಹೆಚ್ಚು ಬೆಲೆಬಾಳಸಾಧ್ಯವಿದೆ.

ಆದರೂ, ವೈಟ್‌ ಷಾರ್ಕ್‌ಗಳು ವಾಣಿಜ್ಯದ ಮೀನುಗಾರಿಕೆಯ ಬಲೆಗಳಲ್ಲಿ ಸಿಕ್ಕಿ ಸಾಯುತ್ತಿವೆ. ಇದಕ್ಕೆ ಕೂಡಿಸಿ, ಷಾರ್ಕ್‌ ಉತ್ಪನ್ನಗಳು, ಅದರಲ್ಲೂ ವಿಶೇಷವಾಗಿ ಈಜುರೆಕ್ಕೆಗಳಿಗಾಗಿ ಬೆಳೆಯುತ್ತಿರುವ ಬೇಡಿಕೆಯನ್ನು ತೃಪ್ತಿಪಡಿಸಲಿಕ್ಕಾಗಿ ಪ್ರತಿ ವರ್ಷ ಇನ್ನಿತರ ಲಕ್ಷಾಂತರ ಷಾರ್ಕ್‌ಗಳು ಹಿಡಿಯಲ್ಪಡುತ್ತಿವೆ. ಇತ್ತೀಚಿನ ವರ್ಷಗಳಲ್ಲಿ ಇವುಗಳ ಸಂಖ್ಯೆಯು ಕಡಿಮೆಯಾಗುತ್ತಿರುವುದರಿಂದ, ಲೋಕವ್ಯಾಪಕವಾಗಿ ಎಚ್ಚರಿಕೆಯ—ವಿಶೇಷವಾಗಿ ವೈಟ್‌ ಷಾರ್ಕ್‌ಗಳ ವಿನಾಶದ ಎಚ್ಚರಿಕೆ—ಗಂಟೆಗಳು ಮೊಳಗುತ್ತಿವೆ.

ಜ್ಞಾನೋದಯವಾಗುತ್ತಿದೆ

ಷಾರ್ಕ್‌ ಮೀನು ಮಹಾಸಾಗರದಲ್ಲಿರುವ ಅಸ್ವಸ್ಥವಾದ, ಸಾಯಲಿಕ್ಕಿರುವ, ಮುಪ್ಪಾದ, ಹಾಗೂ ಸತ್ತ ಪ್ರಾಣಿಗಳನ್ನು ಹುಡುಕಿ ತಿನ್ನುವುದಕ್ಕೆ ಪ್ರಸಿದ್ಧವಾಗಿದೆ. ಆದುದರಿಂದ, ಷಾರ್ಕ್‌ ಮೀನುಗಳ ಸಂಖ್ಯೆಯು ಸಾಕಷ್ಟು ಪ್ರಮಾಣದಲ್ಲಿರುವಲ್ಲಿ, ಅದು ಸ್ವಸ್ಥವಾದ, ಉತ್ತಮ ಗುಣಮಟ್ಟದ ಮಹಾಸಾಗರಗಳಿಗೆ ಕಾರಣವಾಗಬಲ್ಲದು.

ಷಾರ್ಕ್‌ಗಳಿಗೆ ಒಡ್ಡಲ್ಪಟ್ಟಿರುವ ಬೆದರಿಕೆಯನ್ನು ಮನಗಂಡು, ನೈಸರ್ಗಿಕ ಸಂರಕ್ಷಣೆಗಾಗಿರುವ ಅಂತಾರಾಷ್ಟ್ರೀಯ ಸಂಘದ ಸ್ಪೀಷೀಸ್‌ ಸರ್ವೈವಲ್‌ ಕಮಿಷನ್‌ ಸಂಸ್ಥೆಯು, ಷಾರ್ಕ್‌ಗಳ ಎಲ್ಲ ಸಮಸ್ಯೆಗಳ ಬಗ್ಗೆ ಅಧ್ಯಯನ ನಡೆಸಲಿಕ್ಕಾಗಿ ಒಂದು ಷಾರ್ಕ್‌ ಪರಿಣತರ ಗುಂಪನ್ನು ರಚಿಸಿದೆ. ಆದರೂ, ವೈಟ್‌ ಷಾರ್ಕ್‌ಗಳ ಬಗ್ಗೆ ಅಧ್ಯಯನ ನಡೆಸುವುದು ಅಷ್ಟೇನೂ ಸುಲಭದ ಕೆಲಸವಲ್ಲ, ಏಕೆಂದರೆ ಅವು ಸಮೃದ್ಧವಾಗಿ ಸಂತಾನೋತ್ಪತ್ತಿ ಮಾಡುವುದಿಲ್ಲ ಮತ್ತು ಅವುಗಳನ್ನು ಬಂಧನದಲ್ಲಿರಿಸಿದರೆ ಸಾಯುತ್ತವೆ. ಆದುದರಿಂದ, ಅವುಗಳ ಸ್ವಾಭಾವಿಕ ಇರುನೆಲೆಗಳಲ್ಲೇ ಅವುಗಳ ಅಧ್ಯಯನವನ್ನು ಮಾಡಬೇಕು.

ಮಾನವರು ಷಾರ್ಕ್‌ಗಳ ಬಗ್ಗೆ ಹೆಚ್ಚೆಚ್ಚು ತಿಳುವಳಿಕೆಯನ್ನು ಪಡೆದುಕೊಂಡಂತೆ, ಮನೋಹರವಾದ ಈ ಜೀವಿಗಳ ಕಡೆಗಿನ ಅವರ ಮನೋಭಾವವು ತುಂಬ ಬದಲಾಗಿಬಿಟ್ಟಿದೆ. ಆದರೆ ಈ ಮನೋಭಾವವು ಗ್ರೇಟ್‌ ವೈಟ್‌ ಷಾರ್ಕಿನ ವರ್ತನೆಯನ್ನು ಬದಲಾಯಿಸುವುದಿಲ್ಲ. ಇದು ಕ್ರೂರಜೀವಿಯಾಗಿಲ್ಲವಾದರೂ, ಅಪಾಯಕರವಾದ ಒಂದು ಜೀವಿಯಾಗಿದೆ ಮತ್ತು ಇದರೊಂದಿಗೆ ಎಚ್ಚರಿಕೆಯಿಂದ ಹಾಗೂ ಗೌರವದಿಂದ, ಹೌದು, ತುಂಬ ಗೌರವದಿಂದ ವರ್ತಿಸಬೇಕು!

[ಪಾದಟಿಪ್ಪಣಿಗಳು]

^ ಗ್ರೇಟ್‌ ವೈಟ್‌ ಷಾರ್ಕ್‌, ಅಥವಾ ವೈಟ್‌ ಷಾರ್ಕ್‌ ಎಂಬ ಈ ಮೀನಿಗೆ ಅನೇಕಾನೇಕ ಹೆಸರುಗಳಿವೆ. ಉದಾಹರಣೆಗಾಗಿ, ಆಸ್ಟ್ರೇಲಿಯದಲ್ಲಿ ಕೆಲವೊಮ್ಮೆ ಇದನ್ನು ವೈಟ್‌ ಪಾಯಿಂಟರ್‌ ಎಂದು ಕರೆಯಲಾಗುತ್ತದೆ; ದಕ್ಷಿಣ ಆಫ್ರಿಕದಲ್ಲಿ ಬ್ಲೂ ಪಾಯಿಂಟರ್‌ ಎಂದು ಕರೆಯಲಾಗುತ್ತದೆ.

[ಪುಟ 11ರಲ್ಲಿರುವ ಚಿತ್ರ]

ಈ ಷಾರ್ಕ್‌ಗಳಿಗೆ ದೊಡ್ಡದಾದ ಹಾಗೂ ಭಯಾನಕವಾದ ಬಾಯಿಗಳಿರುತ್ತವೆ

[ಪುಟ 10ರಲ್ಲಿರುವ ಚಿತ್ರ ಕೃಪೆ]

Photos by Rodney Fox Reflections

South African White Shark Research Institute