ಜಗತ್ತನ್ನು ಗಮನಿಸುವುದು
ಜಗತ್ತನ್ನು ಗಮನಿಸುವುದು
ಗಂಗಾನದಿಯಲ್ಲಿ ತೀರ ಹೆಚ್ಚು ಹೆಣಗಳು
“ಶತಮಾನಗಳಿಂದಲೂ ಹಿಂದೂಗಳು, ಮೋಕ್ಷ ಸಿಗುವ ಖಾತ್ರಿಯಲ್ಲಿ ಅಥವಾ ದೈಹಿಕ ಅಸ್ತಿತ್ವದ ಚಕ್ರದಿಂದ ಆತ್ಮಕ್ಕೆ ವಿಮುಕ್ತಿಯಾಗುತ್ತದೆ ಎಂಬ ವಿಶ್ವಾಸದಿಂದ ಸತ್ತ ವ್ಯಕ್ತಿಗಳನ್ನು ಗಂಗಾನದಿಯಲ್ಲಿ ಮುಳುಗಿಸಿದ್ದಾರೆ,” ಎಂದು ಎಲೆಕ್ಟ್ರಾನಿಕ್ ಟೆಲಿಗ್ರಾಫ್ ಎಂಬ ಪತ್ರಿಕೆಯು ಹೇಳುತ್ತದೆ. ಎಷ್ಟರ ತನಕ 2,500 ಕಿಲೊಮೀಟರ್ ಉದ್ದದ ಗಂಗಾನದಿಯು ಆಳವಾಗಿ ಹರಿಯುತ್ತಿತ್ತೋ ಅಷ್ಟರ ತನಕ ಅದರ ತೀವ್ರ ಪ್ರವಾಹವು ಕೊಳೆಯುತ್ತಿರುವ ನೂರಾರು ಶವಗಳನ್ನು ಕೊಂಡೊಯ್ಯುತ್ತಿತ್ತು. ಆದರೆ ಹಲವಾರು ವರ್ಷಗಳಿಂದ ನದಿಯ ಹರಿವು ನಿಧಾನವೂ ಮತ್ತು ಆಳವು ಕಡಿಮೆಯೂ ಆಗಿರುತ್ತದೆ. ಏಕೆಂದರೆ ಅದರಲ್ಲಿ ಕೊಳಕು ಮತ್ತು ಔದ್ಯೋಗಿಕ ತ್ಯಾಜ್ಯ ವಸ್ತುಗಳನ್ನು ಎಸೆಯಲಾಗಿದೆ. ಹೀಗಾಗಿ ಹೆಣಗಳು “ಅನೇಕ ವಾರಗಳ ವರೆಗೆ ಕಳೆಸಸ್ಯಗಳು ಹಾಗೂ ಕಸದಲ್ಲಿ ಸಿಕ್ಕಿಕೊಂಡಿರುತ್ತವೆ.” 1980ಗಳ ಅಂತ್ಯಭಾಗದಲ್ಲಿ, ಗಂಗಾನದಿಯಲ್ಲಿ ಮಾಂಸಾಹಾರಿಯಾಗಿರುವ ಸಾವಿರಾರು ದೊಡ್ಡ ಆಮೆಗಳನ್ನು ಬಿಡುವ ಮೂಲಕ ಸಮಸ್ಯೆಯನ್ನು ಪರಿಹರಿಸಲು ಸರಕಾರವು ಪ್ರಯತ್ನಿಸಿತು. ಆದರೆ ಈ ಯೋಜನೆಯು 1994ರಲ್ಲಿ ನಿಲ್ಲಿಸಲ್ಪಟ್ಟಿತು, ಏಕೆಂದರೆ ದೊಡ್ಡ ಆಮೆಗಳಿಗೆ ತಿನ್ನಲಿಕ್ಕಾಗಿ ಬಹಳಷ್ಟು ಶವಗಳಿದ್ದವು ಮತ್ತು ಸ್ವತಃ ಆಮೆಗಳನ್ನೇ ಕಳ್ಳಬೇಟೆಗಾರರು ಕದ್ದು ತಿನ್ನುತ್ತಿದ್ದರು. ಹೊಸ ಕಾರ್ಯಯೋಜನೆಯೊಂದರಲ್ಲಿ, ಜನರು ಮೃತಪಟ್ಟಿರುವ ತಮ್ಮ ಸಂಬಂಧಿಕರನ್ನು ಸುಡುವುದಕ್ಕೆ ಅಥವಾ ನದಿಯ ಬದಿಯಲ್ಲಿರುವ ಮರಳಿನಲ್ಲಿ ಅವರನ್ನು ಹುಗಿಯುವುದಕ್ಕೆ ಮನವೊಲಿಸಲಾಗುತ್ತಿದೆ.
ಅಪಹರಣದ ವ್ಯಾಪಾರ
“ಅಪಹರಣವು . . . ಮೆಕ್ಸಿಕೊ, ಕೊಲಂಬಿಯ, ಹಾಂಗ್‌ಕಾಂಗ್ ಮತ್ತು ರಷ್ಯ ಮುಂತಾದ ಸ್ಥಳಗಳಲ್ಲಿ ವೃದ್ಧಿಹೊಂದುತ್ತಿರುವ ವ್ಯಾಪಾರವಾಗಿದೆ,” ಎಂದು ಯೂ.ಎಸ್. ನ್ಯೂಸ್ ಆ್ಯಂಡ್ ವರ್ಲ್ಡ್ ರಿಪೋರ್ಟ್ ಹೇಳುತ್ತದೆ. “ಲೋಕದ ಸುತ್ತಲೂ, ಕಳೆದ ಮೂರು ವರ್ಷಗಳಲ್ಲಿ ಪ್ರತಿಯೊಂದು ವರ್ಷದಲ್ಲಿ ಬಿಡುಗಡೆಯ ಹಣಕ್ಕಾಗಿ ಅಪಹರಿಸಲ್ಪಡುವವರ ಸಂಖ್ಯೆಯು ಹಿಂದೆಂದಿಗಿಂತಲೂ ಹೆಚ್ಚಿದ್ದು, ಇದು ದಾಖಲೆಯನ್ನು ಮಾಡಿದೆ.” ಇಂದಿನ ವರೆಗೆ, ಅತ್ಯಧಿಕ ಸಂಖ್ಯೆಯಲ್ಲಿ ಅಪಹರಣವು ಲ್ಯಾಟಿನ್ ಅಮೆರಿಕದಲ್ಲಿ ನಡೆಯುತ್ತಿದೆ. ಇಲ್ಲಿ 1995 ಮತ್ತು 1998ರ ಮಧ್ಯೆ 6,755 ಅಪಹರಣಗಳು ನಡೆದವು. ಇದು ಏಷ್ಯಾ ಮತ್ತು ದೂರದ ಪೂರ್ವ ದೇಶಗಳಲ್ಲಿ (617), ಯೂರೋಪ್ (271), ಆಫ್ರಿಕ (211) ಮಧ್ಯ ಪೂರ್ವ (118) ಮತ್ತು ಉತ್ತರ ಅಮೆರಿಕ (80) ದೇಶಗಳಲ್ಲಿಯೂ ಹಾಗೆಯೇ ನಡೆಯುತ್ತಿದೆ. ಅಪಹರಿಸಲ್ಪಟ್ಟವರಲ್ಲಿ ಅನೇಕರು ಸ್ಥಳೀಯ ವರ್ತಕರು ಮತ್ತು ಭೂಮಾಲಿಕರಾಗಿದ್ದಾರಾದರೂ, ವಿದೇಶಿ ಸಹಾಯಕರು, ವ್ಯಾಪಾರೀ ಪ್ರಯಾಣಿಕರು ಅಥವಾ ಯಾತ್ರಿಕರೇ ಆಗಿರಲಿ ಯಾರೊಬ್ಬರು ಸಹ ಇದಕ್ಕೆ ಬಲಿಯಾಗುವ ಅಪಾಯವಿದೆ. ಬಿಡುಗಡೆಯ ಹಣವನ್ನು ತುಂಬಿಸಲು ಮಾತ್ರವಲ್ಲ, ವೃತ್ತಿಪರ ಸಂಧಾನಕಾರರ ಮತ್ತು ಮನಶಾಸ್ತ್ರ ಸಲಹೆಗಾರರ ವೆಚ್ಚಗಳನ್ನು ತುಂಬಿಸಲು, ಅಪಹರಣ ಮತ್ತು ಬಿಡುಗಡೆ ಹಣದ ವಿಮೆ ಪಾಲಿಸಿಗಳನ್ನು ಈಗ ಅಂತಾರಾಷ್ಟ್ರೀಯ ಕಂಪೆನಿಗಳು ಖರೀದಿಸುತ್ತಿವೆ. ಮಾರುಕಟ್ಟೆ ಸಂಶೋಧನೆಯನ್ನು ಮಾಡುತ್ತಾ ಮತ್ತು ಭಾವೀ ಬಲಿಗಳ ಗಂಡಾಂತರದ ಅಳೆಯುವಿಕೆಯನ್ನು ಮಾಡುತ್ತಾ, ಈ ಅಪಹರಣಕಾರರು ವ್ಯವಸ್ಥಿತರಾಗಿರುತ್ತಾರೆ. ಅವರು ಸಾಮಾನ್ಯವಾಗಿ ಬಂಧಿತರಾದವರನ್ನು ಉತ್ತಮವಾಗಿ ಉಪಚರಿಸುತ್ತಾರೆ, ಇದರಿಂದ ಬಂಧಿತರು ತಪ್ಪಿಸಿಕೊಳ್ಳುವುದಕ್ಕೆ ಕಡಿಮೆ ಪ್ರಯತ್ನಗಳನ್ನು ಮಾಡುವರು ಎಂಬುದನ್ನು ಗ್ರಹಿಸುತ್ತಾರೆ ಮತ್ತು ತಮಗೆ ಭಾರೀ ಹಣ ಸಿಗುವ ನಿರೀಕ್ಷೆಯಿಂದ ಇದನ್ನು ಮಾಡುತ್ತಾರೆ. “ಲೋಕದ ಸುತ್ತಲೂ ನಡೆಯುವ 10 ಅಪಹರಣಗಳಲ್ಲಿ ಕೇವಲ ಒಂದು ಅಪಹರಣದಲ್ಲಿ ಮಾತ್ರ ಬಲಾತ್ಕಾರವಾಗಿ ಅಪಹರಿಸಲ್ಪಟ್ಟ ವ್ಯಕ್ತಿಯು ಕೊಲ್ಲಲ್ಪಡುತ್ತಾನೆ” ಎಂದು ಆ ಪತ್ರಿಕೆಯು ಹೇಳುತ್ತದೆ, ಆದರೆ ಅದು ಈ ಎಚ್ಚರಿಕೆಯನ್ನು ಕೊಡುತ್ತದೆ: “ಸ್ಥಳೀಯ ಪೊಲೀಸರ ಕುರಿತು ಎಚ್ಚರದಿಂದಿರಿ. ಕೆಲವೊಮ್ಮೆ ಅಪಹರಣಕಾರರ ಪಿತೂರಿಯಲ್ಲಿ ಇವರೂ ಪಾಲಿಗರಾಗಿರುತ್ತಾರೆ.”
ಕ್ಯಾನ್ಸರ್ ವಿರುದ್ಧ ಟೊಮೇಟೋ
ಕ್ಯಾನ್ಸರ್ ಸಂಶೋಧನೆಯ ಅಮೆರಿಕನ್ ಸಂಘದಿಂದ ಸಾದರಪಡಿಸಲಾದ ಇತ್ತೀಚೆಗಿನ ಅಧ್ಯಯನಗಳು ಸೂಚಿಸುವುದೇನೆಂದರೆ, ಟೊಮೇಟೋದಲ್ಲಿ ಜನನೇಂದ್ರಿಯಗಳಿಗೆ ಸಂಬಂಧಪಟ್ಟಿರುವ ಗ್ರಂಥಿಯ ಕ್ಯಾನ್ಸರ್‌ನ ಬೆಳವಣಿಗೆಯನ್ನು ತಡೆಯುವ ಪದಾರ್ಥವಿರಬಹುದು ಎಂಬುದನ್ನೇ. ಟೊಮೇಟೋಗಳಿಗೆ ಕೆಂಪು ಬಣ್ಣವನ್ನು ಕೊಡುವ ಲಿಕೋಪಿನ್ ಎಂಬ ಪದಾರ್ಥವು ಜನನೇಂದ್ರಿಯ ಗ್ರಂಥಿಯ ಕ್ಯಾನ್ಸರ್‌ಜನಕ ಗಡ್ಡೆಯ ಗಾತ್ರವನ್ನು ಕಡಿಮೆಮಾಡಬಹುದು ಮತ್ತು ದೇಹದ ಇತರ ಅಂಗಾಂಶಗಳಿಗೆ ಕ್ಯಾನ್ಸರ್ ಅನ್ನು ಹಬ್ಬಿಸುವ ಮೆಟ್ಯಾಸ್ಟಿಸೀಸ್ (ದೇಹಕ್ರಿಯೆ)ಯು ಸಂಭವಿಸುವುದನ್ನು ಕಡಿಮೆಗೊಳಿಸಬಹುದು. ಯು.ಎಸ್. ನ್ಯಾಷನಲ್ ಕ್ಯಾನ್ಸರ್ ಇನ್ಸ್‌ಟಿಟ್ಯೂಟ್‌ನಿಂದ ಪ್ರಕಾಶಿತವಾದ ಒಂದು ಅಧ್ಯಯನವು, “ಟೊಮೇಟೋ ಹಾಗೂ ಅದರ ಉತ್ಪನ್ನವು, ಜನನೇಂದ್ರಿಯ ಕ್ಯಾನ್ಸರ್‌ನ ವಿರುದ್ಧವಾಗಿ ಮಾತ್ರವಲ್ಲ, ಮೇದೋಜೀರಕ ಗ್ರಂಥಿ, ಶ್ವಾಸಕೋಶ ಮತ್ತು ದೊಡ್ಡ ಕರುಳಿನ ಕ್ಯಾನ್ಸರ್‌ಗಳ ವಿರುದ್ಧವೂ ಸಕಾರಾತ್ಮಕವಾದ ಪರಿಣಾಮವನ್ನು ಬೀರುತ್ತದೆ ಎಂದು ಪ್ರಕಟಿಸಿತು.”
ಒಬ್ಬ ತಾಯಿಯ ಮೌಲ್ಯ
ಒಬ್ಬ ತಾಯಿಯು ವರ್ಷದ್ದುದ್ದಕ್ಕೂ ಮಾಡುವ ಎಲ್ಲ ಕೆಲಸಗಳಿಗೆ ಸಂಬಳವನ್ನು ಕೂಡಿಸುತ್ತಾ ಬರುವುದಾದರೆ, ಅವರ ಸೇವೆಗೆ ನೀವು ಎಷ್ಟು ಬೆಲೆಯನ್ನು ತೆರಬೇಕಾಗುವುದು? ದ ವಾಷಿಂಗ್ಟನ್ ಪೋಸ್ಟ್ ಎಂಬ ಪತ್ರಿಕೆಯಲ್ಲಿ ಬಂದಿರುವ ವರದಿಯ ಪ್ರಕಾರ, ಅವರು ಒಂದು ವರ್ಷಕ್ಕೆ 5,08,700 ಡಾಲರುಗಳನ್ನು ಪಡೆಯುವರು! ತಾಯಂದಿರು ಆದರ್ಶಭೂತವಾಗಿ ನಡಿಸುವ ಕೆಲಸಗಳಿಗಾಗಿ ಕೊಡಲಾಗುವ ಸರಾಸರಿ ಪ್ರಮಾಣದ ಸಂಬಳಗಳ ಅಧ್ಯಯನವೊಂದರ ಮೇಲೆ ಈ ಸಂಖ್ಯೆಯು ಆಧಾರಿತವಾಗಿದೆ. ಸರಾಸರಿ ವಾರ್ಷಿಕ ಸಂಬಳದೊಂದಿಗೆ ವರದಿಯಲ್ಲಿ ಸೇರಿಸಲಾಗಿರುವ 17 ಕೆಲಸಗಳಲ್ಲಿ ಈ ಕೆಳಗಿನವುಗಳು ಕೆಲವಾಗಿವೆ: ಮಕ್ಕಳ ಆರೈಕೆ ಕೆಲಸಮಾಡುವವರು, 13,000 ಡಾಲರ್; ಬಸ್ಸು ಚಾಲಕ, 32,000 ಡಾಲರ್; ಮನಶಾಸ್ತ್ರಜ್ಞ, 29,000 ಡಾಲರ್; ಪ್ರಾಣಿಗಳನ್ನು ಸಾಕುವವರು, 17,000 ಡಾಲರ್; ನೋಂದಾಯಿತ ದಾದಿ, 35,000 ಡಾಲರ್; ಕಾರ್ಯನಿರ್ವಾಹಕ ಬಾಣಸಿಗ, 40,000 ಡಾಲರ್; ಮತ್ತು ಸಾಮಾನ್ಯ ಆಫೀಸು ಕ್ಲಾರ್ಕ್, 19,000 ಡಾಲರ್. ಅಧ್ಯಯನವನ್ನು ನಡೆಸಿದ ಆರ್ಥಿಕ ಸೇವಾ ಕಂಪೆನಿಯ ಅಧ್ಯಕ್ಷರಾಗಿರುವ ರಿಕ್ ಈಡೆಲ್‌ಮ್ಯಾನ್‌ರ ಪ್ರಕಾರ, ಈ ಸಂಖ್ಯೆಗಳಲ್ಲಿ ಸಾಮಾಜಿಕ ಭದ್ರತೆ ಮತ್ತು ಇತರ ನಿವೃತ್ತಿವೇತನಗಳಂತಹ ವೆಚ್ಚಗಳನ್ನು ಸೇರಿಸಲಾಗಿಲ್ಲ.
ಬಿದಿರು ಹೂಬಿಡುವಾಗ ಅಪಾಯವಿದೆ
ಈಶಾನ್ಯ ಭಾರತದ ವ್ಯಾಪಕ ಕ್ಷೇತ್ರಗಳು ಬಿದಿರು ಅರಣ್ಯದಿಂದ ಆವರಿಸಲ್ಪಟ್ಟಿವೆ. ಮಣಿಪುರ್ ಮತ್ತು ಮಿಝೊರಾಮ್ ರಾಜ್ಯಗಳಲ್ಲಿರುವ ಬಿದಿರು ಅರಳುವ ಸ್ಥಿತಿಯನ್ನು ತಲಪಿದಾಗ ಭಯವುಂಟಾಯಿತು. ಯಾಕೆ? ಯಾಕೆಂದರೆ ಮೌಟಾಂಗ್ ಎಂದು ಕರೆಯಲ್ಪಡುವ ಆ ಕ್ಷೇತ್ರಗಳಲ್ಲಿರುವ ಬಿದಿರಿನ ಸಸಿಗಳ ನಿರ್ದಿಷ್ಟ ಜಾತಿಯ ಅರಳುವಿಕೆಯು ಸುಮಾರು 50 ವರ್ಷಗಳಿಗೊಮ್ಮೆ ಮಾತ್ರ ಉಂಟಾಗುತ್ತದೆ ಮತ್ತು ಅದು ಇಲಿಗಳನ್ನು ಆಕರ್ಷಿಸುತ್ತದೆ. ಆ ಹೂಗಳನ್ನು ತಿನ್ನುತ್ತಾ ಈ ಇಲಿಗಳು ಶೀಘ್ರವಾಗಿ ಪುನರುತ್ಪತ್ತಿಯನ್ನು ಮಾಡುತ್ತವೆ ಮತ್ತು ಆಮೇಲೆ ಆಹಾರ ಬೆಳೆಗಳನ್ನು ಆಕ್ರಮಿಸಲು ತೊಡಗಿ ಕಾಲಕ್ರಮೇಣ ಕ್ಷಾಮದ ಪರಿಸ್ಥಿತಿಗಳನ್ನು ಉಂಟುಮಾಡುತ್ತವೆ. ದ ಟೈಮ್ಸ್ ಆಫ್ ಇಂಡಿಯಾ ವಾರ್ತಾಪತ್ರಿಕೆಗನುಸಾರ, ಇಸವಿ 1954/55ರಲ್ಲಿ ಬಿದಿರು ಅರಳಿದ ಸಮಯದ ನಂತರದಲ್ಲಿ, ಅಂದರೆ 1957ರಲ್ಲಿ ಕ್ಷಾಮವು ಉಂಟಾಯಿತು. ಇನ್ನೊಂದು ಕ್ಷಾಮವನ್ನು ತಡೆಯುವ ಪ್ರಯತ್ನದಲ್ಲಿ, ಮಿಝೊರಾಮ್ ರಾಜ್ಯದ ಸರಕಾರವು ಇಲಿಗಳನ್ನು ಕೊಲ್ಲುವ ಗುಂಪು ಕಾರ್ಯಯೋಜನೆಯನ್ನು ರೂಪಿಸಿತು. ಪ್ರತಿಯೊಂದು ಇಲಿಯ ಬಾಲಕ್ಕೆ ಒಂದು ರೂಪಾಯಿಯ ನೀಡಿಕೆಯನ್ನು ಅವರು ಮಾಡಿದರು. ಏಪ್ರಿಲ್ 1999ರ ವರೆಗೆ, ಸುಮಾರು 90,000 ಬಾಲಗಳು ಒಟ್ಟುಗೂಡಿಸಲ್ಪಟ್ಟವು ಮತ್ತು ಇಲಿನಾಶಕ ಕಾರ್ಯಯೋಜನೆಯನ್ನು ಮುಂದುವರಿಸಲು ಹಣವನ್ನು ಸಹ ಲಿಖಿತರೂಪದಲ್ಲಿ ಕೋರಲಾಗಿದೆ.