ಪ್ಲೇಗ್ ಮಹಾಮಾರಿ (ಕರಾಳ ಸಾವು)—ಮಧ್ಯ ಯುಗದ ಯೂರೋಪಿನ ಪಿಡುಗು
ಪ್ಲೇಗ್ ಮಹಾಮಾರಿ (ಕರಾಳ ಸಾವು)—ಮಧ್ಯ ಯುಗದ ಯೂರೋಪಿನ ಪಿಡುಗು
ಫ್ರಾನ್ಸ್‌ನ ಎಚ್ಚರ! ಸುದ್ದಿಗಾರರಿಂದ
ಅದು 1347ನೆಯ ಇಸವಿಯಾಗಿತ್ತು. ಈಗಾಗಲೇ ಪ್ಲೇಗ್ ಪೂರ್ವ ದೇಶಗಳನ್ನು ಧ್ವಂಸಮಾಡಿಬಿಟ್ಟಿತ್ತು. ಈಗ ಅದು ಯೂರೋಪಿನ ಪೂರ್ವ ಹೊರವಲಯಗಳಲ್ಲೂ ಹಬ್ಬಿತ್ತು.
ಕ್ರಿಮಿಯದಲ್ಲಿರುವ ಫೀಅಡೋಸೀಅ ಎಂದು ಈಗ ಕರೆಯಲ್ಪಡುವ ಕಾಫಾ ಪಟ್ಟಣದ ಜೆನೋಸ್ ಟ್ರೇಡಿಂಗ್ ಕಂಪೆನಿಗೆ ಮಂಗೋಲಿಯರು ಮುತ್ತಿಗೆ ಹಾಕುತ್ತಿದ್ದರು. ಗುಪ್ತವಾದ ಒಂದು ರೋಗವು ಮಂಗೋಲಿಯರಲ್ಲಿ ಬಹುಮಂದಿಯನ್ನು ಕೊಂದಿದ್ದರಿಂದ, ಅವರು ತಮ್ಮ ಆಕ್ರಮಣವನ್ನು ಹಿಂದೆಗೆದುಕೊಂಡರು. ಆದರೆ ಅದಕ್ಕೆ ಮೊದಲು, ಅವರು ಮಾರಕವಾದ ಹಿಂಬಾಣವನ್ನು ಬಿಟ್ಟರು. ಬೃಹದಾಕಾರದ ಕವಣೆಯಂತ್ರವನ್ನು ಉಪಯೋಗಿಸಿ, ಪ್ಲೇಗ್‌ಗೆ ತುತ್ತಾಗಿ ಆಗತಾನೇ ಸತ್ತುಹೋಗಿದ್ದವರ ಶವಗಳನ್ನು ಅವರು ಪಟ್ಟಣದ ಗೋಡೆಗಳ ಒಳಗೆ ಎಸೆದುಬಿಟ್ಟರು. ಈಗ ಪ್ಲೇಗ್‌ನಿಂದ ತುಂಬಿದ್ದ ಪಟ್ಟಣದಿಂದ ತಪ್ಪಿಸಿಕೊಳ್ಳಲಿಕ್ಕಾಗಿ ಜೆನೋವದ ರಕ್ಷಕ ತಂಡದ ಕೆಲವರು ಹಡಗುಗಳನ್ನು ಹತ್ತಿದಾಗ, ತಾವು ಭೇಟಿಮಾಡಿದಂತಹ ಪ್ರತಿಯೊಂದು ಬಂದರಿಗೆ ಅವರು ಈ ರೋಗವನ್ನು ಹಬ್ಬಿಸಿಬಿಟ್ಟರು.
ಕೆಲವೇ ತಿಂಗಳುಗಳೊಳಗೆ ಯೂರೋಪಿನಾದ್ಯಂತ ಮರಣ ಸಂಖ್ಯೆಗಳು ಅತ್ಯಧಿಕವಾಗಿದ್ದವು. ಅತಿ ಬೇಗನೆ ಪ್ಲೇಗ್ ರೋಗವು ಉತ್ತರ ಆಫ್ರಿಕ, ಇಟಲಿ, ಸ್ಪೆಯ್ನ್, ಇಂಗ್ಲೆಂಡ್, ಫ್ರಾನ್ಸ್, ಆಸ್ಟ್ರಿಯ, ಹಂಗೇರಿ, ಸ್ವಿಟ್ಸರ್ಲೆಂಡ್, ಜರ್ಮನಿ, ಸ್ಕ್ಯಾಂಡಿನೇವಿಯ, ಮತ್ತು ಬಾಲ್ಟಿಕ್ಸ್‌ಗೂ ಹಬ್ಬಿತು. ಎರಡೇ ವರ್ಷಗಳಲ್ಲಿ, ಯೂರೋಪಿನ ಜನಸಂಖ್ಯೆಯ ನಾಲ್ಕನೇ ಒಂದು ಭಾಗ, ಅಂದರೆ 2.5 ಕೋಟಿ ಜನರು, “ಮಾನವಕುಲವು ಇದುವರೆಗೂ ಕಂಡಿರದಂತಹ ಅತ್ಯಂತ ಪಾಶವೀಯ ಜನಸಂಖ್ಯಾಶಾಸ್ತ್ರದ ವಿನಾಶ”—ಕರಾಳ ಸಾವು—ಎಂದು ಯಾವುದು ಕರೆಯಲ್ಪಟ್ಟಿತೋ ಆ ದುರಂತಕ್ಕೆ ಆಹುತಿಯಾದರು. *
ವಿಪತ್ತಿಗೆ ತಳಪಾಯವನ್ನು ಹಾಕುವುದು
ಕರಾಳ ಸಾವಿನ (ಪ್ಲೇಗ್ ಮಹಾಮಾರಿಯ) ದುರಂತವು ಕೇವಲ ರೋಗಕ್ಕಿಂತಲೂ ಹೆಚ್ಚಿನದ್ದಾಗಿತ್ತು. ಈ ವಿಪತ್ತನ್ನು ಉಲ್ಬಣಗೊಳಿಸಲು ಅನೇಕ ಅಂಶಗಳು ಕಾರಣವಾಗಿದ್ದವು. ಅವುಗಳಲ್ಲಿ, ಧಾರ್ಮಿಕ ಉತ್ಸಾಹವು ಒಂದಾಗಿತ್ತು. ಪರ್ಗೆಟರಿಯ ಬೋಧನೆಯು ಒಂದು ಉದಾಹರಣೆಯಾಗಿದೆ. “13ನೆಯ ಶತಮಾನದ ಕೊನೆಯಷ್ಟಕ್ಕೆ, ಪರ್ಗೆಟರಿಯ ನಂಬಿಕೆಯು ವ್ಯಾಪಕವಾಗಿತ್ತು” ಎಂದು ಫ್ರೆಂಚ್ ಇತಿಹಾಸಕಾರನಾದ ಸಾಕ್ ಲ ಗೋಫ್ ಹೇಳುತ್ತಾನೆ. 14ನೆಯ ಶತಮಾನದ ಆರಂಭದಲ್ಲಿ, ಡಾಂಟೆ ಎಂಬುವವನು ಲಾ ಡೀವೀನಾ ಕೋಮಡ್ಯಾ ಎಂಬ ಪ್ರಭಾವಶಾಲಿ ಕೃತಿಯನ್ನು ಸಿದ್ಧಗೊಳಿಸಿದನು. ಅದರಲ್ಲಿ ನರಕ ಹಾಗೂ ಪರ್ಗೆಟರಿಯ ಕುರಿತು ಕಣ್ಣಿಗೆ ಕಟ್ಟುವಂತಹ ರೀತಿಯ ವರ್ಣನೆಯಿತ್ತು. ಹೀಗೆ, ಪ್ಲೇಗ್ ದೇವರ ದಂಡನೆಯಾಗಿದೆ ಎಂದು ಭಾವಿಸುತ್ತಾ, ಜನರು ತುಂಬ ನಿರಾಸಕ್ತಿಯಿಂದ ಹಾಗೂ ಇದನ್ನು ಅನುಭವಿಸುವುದು ಅನಿವಾರ್ಯವೆಂಬ ಭಾವನೆಯಿಂದ ಪ್ಲೇಗನ್ನು ಎದುರಿಸುವಂತಹ ಒಂದು ಧಾರ್ಮಿಕ ವಾತಾವರಣವು ಅಲ್ಲಿ ವಿಕಸಿಸಿತು. ಮುಂದೆ ನಾವು ನೋಡಲಿರುವಂತೆ, ಅಂತಹ ಅಶುಭ ಪ್ರತೀಕ್ಷೆಯ ಮನೋಭಾವವು ವಾಸ್ತವದಲ್ಲಿ ಈ ರೋಗದ ಹಬ್ಬುವಿಕೆಯನ್ನು ತೀವ್ರಗೊಳಿಸಿತು. “ಈ ಸಂಗತಿಯೇ, ಪ್ಲೇಗ್ ವ್ಯಾಪಕವಾಗಿ ಹಬ್ಬಲಿಕ್ಕಾಗಿ ಒಂದು ಉತ್ತಮ ಅವಕಾಶವನ್ನು ಒದಗಿಸಿಕೊಟ್ಟಿತು” ಎಂದು ಫಿಲಿಪ್ ಸಿಗ್ಲರ್‌ರ ದ ಬ್ಲ್ಯಾಕ್ ಡೆತ್ ಪುಸ್ತಕವು ತಿಳಿಸುತ್ತದೆ.
ಇದಲ್ಲದೆ, ಯೂರೋಪಿನಲ್ಲಿ ಬೆಳೆಯು ಸತತವಾಗಿ ನಾಶವಾಗುತ್ತಾ ಇತ್ತು. ಇದರ ಫಲಿತಾಂಶವಾಗಿ, ಈ ಖಂಡದಲ್ಲಿ ತೀವ್ರಗತಿಯಿಂದ ಬೆಳೆಯುತ್ತಿರುವ ಜನಸಂಖ್ಯೆಗೆ ಸಾಕಷ್ಟು ಆಹಾರವು ಸಿಗುತ್ತಿರಲಿಲ್ಲ. ಆದುದರಿಂದ, ಈ ರೋಗವನ್ನು ಪ್ರತಿರೋಧಿಸುವುದಕ್ಕೆ ಅವರು ಸನ್ನದ್ಧರಾಗಿರಲಿಲ್ಲ.
ಪ್ಲೇಗ್ ಹಬ್ಬುತ್ತದೆ
ಆರನೆಯ ಪೋಪ್ ಕ್ಲೆಮೆಂಟ್‌ನ ಖಾಸಗಿ ವೈದ್ಯನಾಗಿದ್ದ ಗೇ ಡ ಶೋಲ್ಯಕ್‌ಗನುಸಾರ, ಎರಡು ರೀತಿಯ ಪ್ಲೇಗ್ ಯೂರೋಪನ್ನು
ದಾಳಿಮಾಡಿತ್ತು: ನ್ಯೂಮೋನಿಕ್ ಮತ್ತು ಬ್ಯೂಬೋನಿಕ್. ಈ ಕೆಳಗಿನಂತೆ ಬರೆಯುತ್ತಾ ಅವನು ಈ ರೋಗಗಳ ಬಗ್ಗೆ ಸುಸ್ಪಷ್ಟವಾಗಿ ವರ್ಣಿಸಿದನು: “ಸತತವಾದ ಜ್ವರ ಹಾಗೂ ರಕ್ತ ಕಾರುವಿಕೆಯೊಂದಿಗೆ ನ್ಯೂಮೋನಿಕ್ ಪ್ಲೇಗ್ ಎರಡು ತಿಂಗಳುಗಳ ತನಕ ಮಾತ್ರ ಇತ್ತು ಮತ್ತು ಇದರಿಂದ ವ್ಯಕ್ತಿಯೊಬ್ಬನು ಮೂರು ದಿನಗಳಲ್ಲೇ ಮೃತಪಡುತ್ತಿದ್ದನು. ಸಾಂಕ್ರಾಮಿಕ ರೋಗದ ಉಳಿದ ಕಾಲಾವಧಿಯಲ್ಲೆಲ್ಲ ಬ್ಯೂಬೋನಿಕ್ ಪ್ಲೇಗ್ ಇತ್ತು; ಇದರೊಂದಿಗೆ ಸತತ ಜ್ವರ, ಒಳಕುರುಗಳು ಮತ್ತು ದೇಹದ ಹೊರಭಾಗದಲ್ಲಿ, ಮುಖ್ಯವಾಗಿ ಕಂಕುಳು ಮತ್ತು ತೊಡೆ ಸಂದುಗಳಲ್ಲಿ ಹುಣ್ಣುಗಳು ಇದ್ದವು. ಈ ಪ್ಲೇಗ್‌ನಿಂದ ವ್ಯಕ್ತಿಯೊಬ್ಬನು ಐದೇ ದಿನಗಳಲ್ಲಿ ಮೃತಪಡುತ್ತಿದ್ದನು.” ಪ್ಲೇಗ್‌ನ ಹಬ್ಬುವಿಕೆಯನ್ನು ನಿಲ್ಲಿಸಲು ವೈದ್ಯರು ನಿಸ್ಸಹಾಯಕರಾಗಿದ್ದರು.ಅನೇಕರು ಪ್ಲೇಗ್‌ನಿಂದ ಸೋಂಕಿತರಾಗಿದ್ದ ಸಾವಿರಾರು ಮಂದಿಯನ್ನು ಹಿಂದೆಬಿಟ್ಟು ಭಯದಿಂದ ಪಲಾಯನಗೈದರು. ಶ್ರೀಮಂತ ಕುಲೀನರು ಮತ್ತು ವೃತ್ತಿಪರರು ಪಲಾಯನಗೈದವರಲ್ಲಿ ಮೊದಲಿಗರಾಗಿದ್ದರು ಎಂಬುದಂತೂ ನಿಜ. ಕೆಲವು ಪಾದ್ರಿಗಳು ಸಹ ಪಲಾಯನಗೈದರಾದರೂ, ಮೇಲುವರ್ಗದ ಅಧಿಕಾರಿಗಳಲ್ಲಿ ಅನೇಕರು ಸೋಂಕಿನಿಂದ ತಪ್ಪಿಸಿಕೊಳ್ಳುವ ನಿರೀಕ್ಷೆಯಿಂದ ತಮ್ಮ ಕ್ರೈಸ್ತ ಮಠಗಳಲ್ಲೇ ಅವಿತುಕೊಂಡರು.
ಈ ಭಯಭೀತ ವಾತಾವರಣದ ಮಧ್ಯೆ, 1350ನೆಯ ವರ್ಷವು ಒಂದು ಪವಿತ್ರ ವರ್ಷವಾಗಿದೆಯೆಂದು ಪೋಪ್ ಪ್ರಕಟಿಸಿದರು. ರೋಮ್‌ಗೆ ಯಾರು ಪ್ರಯಾಣ ಬೆಳೆಸುತ್ತಾರೋ ಆ ಯಾತ್ರಿಕರಿಗೆ, ಪರ್ಗೆಟರಿಯ ಮೂಲಕ ಹಾದುಹೋಗುವ ಬದಲಿಗೆ ನೇರವಾಗಿ ಪ್ರಮೋದವನವನ್ನು ಪ್ರವೇಶಿಸಸಾಧ್ಯವಿರುವ ನಿರೀಕ್ಷೆಯನ್ನು ನೀಡಲಾಯಿತು! ಲಕ್ಷಾಂತರ ಯಾತ್ರಿಕರು ಈ ಪ್ರಕಟನೆಗೆ ಓಗೊಟ್ಟರು—ಅದೇ ಸಮಯದಲ್ಲಿ ಅವರು ಪ್ರಯಾಣಿಸಿದ ಸ್ಥಳಗಳಲ್ಲೆಲ್ಲ ಪ್ಲೇಗನ್ನು ಹಬ್ಬಿಸಿದರು.
ವ್ಯರ್ಥ ಪ್ರಯತ್ನಗಳು
ಪ್ಲೇಗ್ ಮಹಾಮಾರಿಯನ್ನು ನಿಯಂತ್ರಿಸಲಿಕ್ಕಾಗಿ ಮಾಡಲ್ಪಟ್ಟ ಪ್ರಯತ್ನಗಳು ವ್ಯರ್ಥವಾಗಿದ್ದವು, ಏಕೆಂದರೆ ಈ ಸೋಂಕು ಹೇಗೆ ಹರಡುತ್ತದೆ ಎಂಬುದು ನಿಜವಾಗಿಯೂ ಯಾರಿಗೂ ಗೊತ್ತಿರಲಿಲ್ಲ. ಈ ರೋಗದಿಂದ ನರಳುತ್ತಿರುವ ವ್ಯಕ್ತಿಯೊಂದಿಗೆ ಸಂಪರ್ಕಮಾಡುವುದು ಅಥವಾ ಅವನ ಬಟ್ಟೆಯನ್ನು ಮುಟ್ಟುವುದು ಸಹ ಅಪಾಯಕರ ಎಂಬುದು ಅಧಿಕಾಂಶ ಮಂದಿಗೆ ಗೊತ್ತಾಯಿತು. ಕೆಲವರು ಪ್ಲೇಗ್ ರೋಗದಿಂದ ಸೋಂಕಿತನಾದ ವ್ಯಕ್ತಿಯ ದಿಟ್ಟನೋಟಕ್ಕೂ ಹೆದರಿದರು! ಆದರೂ, ಇಟಲಿಯ ಫ್ಲಾರೆನ್ಸ್‌ನ ನಿವಾಸಿಗಳು, ಅಲ್ಲಿನ ಬೆಕ್ಕುಗಳು ಹಾಗೂ ನಾಯಿಗಳೇ ಪ್ಲೇಗಿಗೆ ಕಾರಣವೆಂದು ನೆನಸಿದರು. ಅವರು ಈ ಪ್ರಾಣಿಗಳನ್ನು ಕೊಂದುಬಿಟ್ಟರು. ಹಾಗೆ ಮಾಡುವ ಮೂಲಕ ಸೋಂಕನ್ನು ಹಬ್ಬಿಸುವುದರಲ್ಲಿ ನಿಜವಾಗಿಯೂ ಒಳಗೂಡಿದ್ದ ಒಂದು ಜೀವಿಗೆ, ಅಂದರೆ ಇಲಿಗೆ ಸ್ವೇಚ್ಛೆಯಾಗಿರಲು ತಾವು ಅನುಕೂಲಮಾಡಿಕೊಡುತ್ತಿದ್ದೇವೆ ಎಂಬುದು ಅವರ ಅರಿವಿಗೆ ಬರಲಿಲ್ಲ.
ಮರಣ ಸಂಖ್ಯೆಗಳು ದಿನೇ ದಿನೇ ಅತ್ಯಧಿಕಗೊಂಡಂತೆ, ಕೆಲವರು ಸಹಾಯಕ್ಕಾಗಿ ದೇವರ ಕಡೆಗೆ ತಿರುಗಿದರು. ದೇವರು ತಮ್ಮನ್ನು ಈ ರೋಗದಿಂದ ಕಾಪಾಡುವನು ಅಥವಾ ಕಡಿಮೆಪಕ್ಷ ತಾವು ಸತ್ತರೂ ತಮಗೆ ಸ್ವರ್ಗೀಯ ಜೀವಿತವನ್ನು ಬಹುಮಾನವಾಗಿ ನೀಡುವನೆಂದು ನಿರೀಕ್ಷಿಸುತ್ತಾ, ಕೆಲವು ಸ್ತ್ರೀಪುರುಷರು ತಮ್ಮಲ್ಲಿರುವುದನ್ನೆಲ್ಲ ಚರ್ಚಿಗೆ ದಾನವಾಗಿ ಕೊಟ್ಟರು. ಇದರಿಂದಾಗಿ ಚರ್ಚು ಬಹಳಷ್ಟು ಐಶ್ವರ್ಯವನ್ನು ಸಂಪಾದಿಸಿತು. ಅದೃಷ್ಟದ ತಾಯಿತಿಗಳು, ಕ್ರಿಸ್ತನ ಪ್ರತಿಮೆಗಳು, ಮತ್ತು ಚಿಕ್ಕ ಚಿಕ್ಕ ಚರ್ಮದ ತಾಯಿತಿಗಳು ಸಹ ಜನಪ್ರಿಯವಾದ ಪರಿಹಾರವಾಗಿದ್ದವು. ರೋಗದ ಗುಣಪಡಿಸುವಿಕೆಗಾಗಿ ಇನ್ನಿತರರು ಮೂಢನಂಬಿಕೆ, ಮ್ಯಾಜಿಕ್ ಹಾಗೂ ನಕಲಿ ಔಷಧಗಳ ಮೊರೆಹೊಕ್ಕರು. ಸುಗಂಧದ್ರವ್ಯಗಳು, ವಿನೆಗರ್ ಮತ್ತು ವಿಶೇಷ ಔಷಧದ ಗುಟುಕುಗಳು ಈ ರೋಗವನ್ನು ಗುಣಪಡಿಸುತ್ತವೆ ಎಂದು ಹೇಳಲಾಗುತ್ತಿತ್ತು. ರಕ್ತವಿಸರ್ಜನೆಯು ಇನ್ನೊಂದು ಜನಪ್ರಿಯ ಚಿಕಿತ್ಸೆಯಾಗಿತ್ತು. ಪ್ಯಾರಿಸ್ ವಿಶ್ವವಿದ್ಯಾನಿಲಯದ ಸುಶಿಕ್ಷಿತ ವೈದ್ಯರು ಸಹ, ಗ್ರಹಗಳ ಸಾಲು ನೆಲೆಯೇ ಪ್ಲೇಗ್‌ಗೆ ಕಾರಣವಾಗಿದೆಯೆಂದು ಹೇಳಿದರು! ಆದರೂ, ಮೋಸದ ವಿವರಣೆಗಳು ಮತ್ತು “ಗುಣಪಡಿಸುವಿಕೆಗಳು” ಈ ಕರಾಳ ಪ್ಲೇಗ್‌ನ ಪ್ರಗತಿಯನ್ನು ನಿಲ್ಲಿಸಲು ಅಸಮರ್ಥವಾಗಿದ್ದವು.
ಶಾಶ್ವತ ಪರಿಣಾಮಗಳು
ಐದು ವರ್ಷಗಳೊಳಗೆ ಕರಾಳ ಸಾವು ಕೊನೆಗೊಂಡಂತೆ ತೋರಿತು. ಆದರೆ ಆ ಶತಮಾನವು ಮುಗಿಯುವ ಮೊದಲು, ಕಡಿಮೆಪಕ್ಷ ನಾಲ್ಕು ಬಾರಿ ಅದು ಪುನಃ ಬಂತು. ಹೀಗೆ ಕರಾಳ ಸಾವಿನ ಪರಿಣಾಮಗಳು Iನೆಯ ಲೋಕ ಯುದ್ಧದ ಪರಿಣಾಮಗಳಿಗೆ ಹೋಲಿಸಲ್ಪಟ್ಟಿವೆ. “ಈ ಸಾಂಕ್ರಾಮಿಕ ರೋಗದ ಪುನರಾಗಮನವು, 1348ರ ಬಳಿಕ ಆರ್ಥಿಕ ವ್ಯವಸ್ಥೆಯಲ್ಲಿ ಮತ್ತು ಸಮಾಜದಲ್ಲಿ ತೀವ್ರವಾದ ಪರಿಣಾಮಗಳನ್ನು ಉಂಟುಮಾಡಿತು ಎಂಬ ವಿಷಯದಲ್ಲಿ ಆಧುನಿಕ ಇತಿಹಾಸಕಾರರ ಮಧ್ಯೆ ಯಾವುದೇ ಅಸಮ್ಮತಿಯಿಲ್ಲ” ಎಂದು ದ ಬ್ಲ್ಯಾಕ್ ಡೆತ್ ಇನ್ ಇಂಗ್ಲೆಂಡ್ ಎಂಬ 1996ರ ಪುಸ್ತಕವು ದಾಖಲಿಸುತ್ತದೆ. ಪ್ಲೇಗ್ ರೋಗವು ಜನಸಂಖ್ಯೆಯ ಬಹುಭಾಗವನ್ನು ಸಂಹಾರಮಾಡಿಬಿಟ್ಟಿತು, ಮತ್ತು ಕೆಲವು ಕ್ಷೇತ್ರಗಳು ಚೇತರಿಸಿಕೊಳ್ಳುವ ಮೊದಲು ಶತಮಾನಗಳೇ ಉರುಳಿದವು. ಕೆಲಸಮಾಡುವವರ ಸಂಖ್ಯೆಯು ಕಡಿಮೆಯಾದುದರಿಂದ, ಕೆಲಸದ ಕೂಲಿಯು ಅತ್ಯಧಿಕವಾಗಿತ್ತು. ಒಂದು ಕಾಲದಲ್ಲಿ ದೊಡ್ಡ ಜಮೀನ್ದಾರರಾಗಿದ್ದವರು ಈಗ ಬಡಸ್ಥಿತಿಗೆ ಇಳಿದರು ಮತ್ತು ಮಧ್ಯ ಯುಗದ ಸಂಕೇತವಾಗಿ ಪರಿಣಮಿಸಿದ್ದ ಊಳಿಗಮಾನ್ಯ ಪದ್ಧತಿಯು ಸಂಪೂರ್ಣವಾಗಿ ಕುಸಿದುಬಿತ್ತು.
ಆದುದರಿಂದ, ರಾಜಕೀಯ, ಧಾರ್ಮಿಕ ಮತ್ತು ಸಾಮಾಜಿಕ ಬದಲಾವಣೆಗಳಿಗೆ ಈ ಪ್ಲೇಗ್ ಒಂದು ಪ್ರಚೋದನೆಯಾಗಿತ್ತು. ಪ್ಲೇಗ್‌ಗೆ ಮುಂಚೆ, ಇಂಗ್ಲೆಂಡ್‌ನಲ್ಲಿದ್ದ ಸುಶಿಕ್ಷಿತ ವರ್ಗದವರ ಮಧ್ಯೆ ಸರ್ವಸಾಮಾನ್ಯವಾಗಿ ಫ್ರೆಂಚ್ ಭಾಷೆಯು ಮಾತಾಡಲ್ಪಡುತ್ತಿತ್ತು. ಆದರೆ
ಪ್ಲೇಗ್‌ನ ಕಾರಣದಿಂದ ಅನೇಕಾನೇಕ ಫ್ರೆಂಚ್ ಶಿಕ್ಷಕರು ಮರಣಪಟ್ಟಿದ್ದರಿಂದ, ಬ್ರಿಟನ್‌ನಲ್ಲಿ ಫ್ರೆಂಚ್‌ಗಿಂತಲೂ ಇಂಗ್ಲಿಷ್ ಭಾಷೆಯೇ ಮೇಲುಗೈ ಪಡೆಯಲು ಅವಕಾಶ ಸಿಕ್ಕಿತು. ಧಾರ್ಮಿಕ ಕ್ಷೇತ್ರದಲ್ಲಿಯೂ ಬದಲಾವಣೆಗಳು ಉಂಟಾದವು. ಫ್ರೆಂಚ್ ಇತಿಹಾಸಕಾರರಾದ ಸಾಕ್ಲನ್ ಬ್ರೊಸೊಲ್ ದಾಖಲಿಸುವಂತೆ, ಯಾಜಕತ್ವಕ್ಕಾಗಿರುವ ಅಭ್ಯರ್ಥಿಗಳ ಸಂಖ್ಯೆಯು ಕಡಿಮೆಯಾದುದರಿಂದ, “ಅಜ್ಞಾನಿಗಳೂ ನಿರಾಸಕ್ತರೂ ಆಗಿದ್ದ ವ್ಯಕ್ತಿಗಳನ್ನು ಚರ್ಚು ಆ ಸ್ಥಾನಕ್ಕೆ ಸೇರಿಸಿಕೊಂಡಿತು.” “ಕಲಿಯುವ ಹಾಗೂ ನಂಬಿಕೆಯಿಡುವ ವಿಷಯದಲ್ಲಿ [ಚರ್ಚಿನ] ಕೇಂದ್ರಗಳ ಅವನತಿಯು, ಮತೀಯ ಸುಧಾರಣೆಗೆ ಕಾರಣವಾದ ಅಂಶಗಳಲ್ಲಿ ಒಂದಾಗಿತ್ತು” ಎಂದು ಬ್ರೊಸೊಲ್ ದೃಢವಾಗಿ ಹೇಳುತ್ತಾರೆ.ಪ್ಲೇಗ್ ಮಹಾಮಾರಿಯು ಕಲೆಯ ಮೇಲೆ ಮಹತ್ತರವಾದ ಪ್ರಭಾವವನ್ನು ಬೀರಿತು ಮತ್ತು ಸಾವು ಕಲಾಕಾರರ ವಸ್ತುವಿಷಯವಾಗಿ ಪರಿಣಮಿಸಿತು. ಸಾಮಾನ್ಯವಾಗಿ ಅಸ್ತಿಪಂಜರಗಳು ಮತ್ತು ಶವಗಳನ್ನು ಪ್ರತಿನಿಧಿಸುವಂತಹ ಡಾನ್ಸ್ ಮಕಬ್ರೆ (ಮರಣದ ನರ್ತನ) ಷಾನ್ರ್ ಪೈಂಟಿಂಗ್ ಶೈಲಿಯು, ಮರಣದ ಶಕ್ತಿಯನ್ನು ಚಿತ್ರಿಸುವ ಜನಪ್ರಿಯ ರೂಪಕ ಕಥೆಯಾಯಿತು. ಭವಿಷ್ಯತ್ತಿನ ಬಗ್ಗೆ ಅನಿಶ್ಚಿತರಾಗಿದ್ದು, ಪ್ಲೇಗ್ ರೋಗದಿಂದ ಪಾರಾದವರು ತಮ್ಮ ಎಲ್ಲ ನೈತಿಕ ನಿರ್ಬಂಧಗಳನ್ನು ತೊರೆದುಬಿಟ್ಟರು. ಹೀಗೆ ನೈತಿಕತೆಯು ಅತ್ಯಂತ ಹೀನ ಮಟ್ಟಕ್ಕಿಳಿಯಿತು. ಚರ್ಚಿನ ಬಗ್ಗೆ ಹೇಳುವುದಾದರೆ, ಅದು ಪ್ಲೇಗ್ ಮಹಾಮಾರಿಯನ್ನು ನಿಲ್ಲಿಸುವುದರಲ್ಲಿ ಅಸಫಲಗೊಂಡಿದ್ದರಿಂದ, “ತನ್ನ ಚರ್ಚು ತನ್ನನ್ನು ನಿರಾಶೆಗೊಳಿಸಿದೆ ಎಂಬುದು ಮಧ್ಯ ಯುಗದ ಮನುಷ್ಯನ ಅನಿಸಿಕೆಯಾಗಿತ್ತು.” (ದ ಬ್ಲ್ಯಾಕ್ ಡೆತ್) ಕರಾಳ ಸಾವಿನ ಫಲಿತಾಂಶವಾಗಿ ಸಂಭವಿಸಿದ ಸಾಮಾಜಿಕ ಬದಲಾವಣೆಗಳು, ವ್ಯಕ್ತಿಸ್ವಾತಂತ್ರ್ಯಕ್ಕೆ, ವ್ಯಾಪಾರಕ್ಕೆ, ಮತ್ತು ಅತ್ಯಧಿಕ ಸಾಮಾಜಿಕ ಹಾಗೂ ಆರ್ಥಿಕ ಆಗುಹೋಗುಗಳಿಗೆ ತುಂಬ ಪ್ರೋತ್ಸಾಹ ನೀಡಿದವು—ಇದೆಲ್ಲವೂ
ಬಂಡವಾಳಗಾರರ ಪ್ರಾಬಲ್ಯಕ್ಕೆ ಕಾರಣವಾಯಿತು ಎಂದು ಸಹ ಕೆಲವು ಇತಿಹಾಸಕಾರರು ಹೇಳುತ್ತಾರೆ.ಕರಾಳ ಸಾವು, ನೈರ್ಮಲ್ಯ ವ್ಯವಸ್ಥೆಗಳನ್ನು ಸ್ಥಾಪಿಸುವಂತೆಯೂ ಸರಕಾರಗಳನ್ನು ಪ್ರಚೋದಿಸಿತು. ಪ್ಲೇಗ್ ರೋಗವು ಸ್ವಲ್ಪ ಕಡಿಮೆಯಾದ ಬಳಿಕ, ವೆನಿಸ್ ತನ್ನ ನಗರದ ಬೀದಿಗಳನ್ನು ಸ್ವಚ್ಛಗೊಳಿಸಲು ಸೂಕ್ತ ಕ್ರಮಗಳನ್ನು ಕೈಗೊಂಡಿತು. ಗುಡ್ ಎಂದು ಕರೆಯಲ್ಪಡುವ ಫ್ರಾನ್ಸ್‌ನ IIನೆಯ ಕಿಂಗ್ ಜಾನ್, ಪ್ಲೇಗ್ ಸಾಂಕ್ರಾಮಿಕ ರೋಗದ ಬೆದರಿಕೆಯನ್ನು ತಡೆಗಟ್ಟಲಿಕ್ಕಾಗಿರುವ ಉಪಾಯದೋಪಾದಿ ಬೀದಿಗಳನ್ನು ಸ್ವಚ್ಛಗೊಳಿಸುವ ಆಜ್ಞೆಯನ್ನು ಹೊರಡಿಸಿದನು. ಅಥೇನೆ ಪಟ್ಟಣದ ಬೀದಿಗಳನ್ನು ಸ್ವಚ್ಛಗೊಳಿಸಿ, ಅವುಗಳನ್ನು ಚೆನ್ನಾಗಿ ತೊಳೆಯುವ ಮೂಲಕ ಆ ಪಟ್ಟಣವನ್ನು ಪ್ಲೇಗ್‌ನಿಂದ ಕಾಪಾಡಿದ ಒಬ್ಬ ಪುರಾತನ ಗ್ರೀಕ್ ವೈದ್ಯನ ಕುರಿತು ತಿಳಿದುಕೊಂಡ ಬಳಿಕ, ರಾಜನು ಈ ಕ್ರಮವನ್ನು ಕೈಗೊಂಡನು. ಮಧ್ಯ ಯುಗದ ಅನೇಕ ಬೀದಿಗಳಲ್ಲಿ ತೆರೆದ ಚರಂಡಿಗಳಿದ್ದವು ಮತ್ತು ಕೊನೆಗೂ ಅವುಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಲಾಯಿತು.
ಗತಕಾಲದ ಒಂದು ರೋಗವೊ?
ಆದರೂ, 1894ರಷ್ಟಕ್ಕೆ ಫ್ರೆಂಚ್ ಏಕಾಣುಜೀವಿಶಾಸ್ತ್ರಜ್ಞನಾಗಿದ್ದ ಅಲೆಕ್ಸಾಂಡರ್ ಯಾರ್ಸನ್, ಪ್ಲೇಗ್ ಮಹಾಮಾರಿಗೆ ಕಾರಣವಾಗಿದ್ದ ಬ್ಯಾಸಿಲಸ್ ಅಣುಜೀವಿಯನ್ನು ಪ್ರತ್ಯೇಕಿಸಿದನು. ಅವನ ನಾಮಾರ್ಥವಾಗಿ ಆ ಅಣುಜೀವಿಗೆ ಯಾರ್ಸಿನಿಯ ಪೆಸ್ಟಿಸ್ ಎಂದು ಹೆಸರಿಡಲಾಯಿತು. ನಾಲ್ಕು ವರ್ಷಗಳ ತರುವಾಯ, ಇನ್ನೊಬ್ಬ ಫ್ರೆಂಚ್ ವ್ಯಕ್ತಿಯಾಗಿದ್ದ ಪಾಲ್-ಲ್ವೀ ಸೀಮೋನ್, ಈ ರೋಗವನ್ನು ರವಾನಿಸುವುದರಲ್ಲಿ ಚಿಗಟ (ದಂಶಕ ಪ್ರಾಣಿಗಳ ಮೇಲಿರುವವು)ಗಳು ವಹಿಸುವ ಪಾತ್ರವನ್ನು ಕಂಡುಹಿಡಿದನು. ಆ ಕೂಡಲೆ ಒಂದು ಲಸಿಕೆಯು ತಯಾರಿಸಲ್ಪಟ್ಟಿತ್ತಾದರೂ, ಇದರಿಂದ ಹೆಚ್ಚು ಸಾಫಲ್ಯವು ಸಿಗಲಿಲ್ಲ.
ಇಂದು ಪ್ಲೇಗ್ ಗತಕಾಲದ ಒಂದು ರೋಗವಾಗಿದೆಯೊ? ಖಂಡಿತವಾಗಿಯೂ ಇಲ್ಲ. 1910ರ ಚಳಿಗಾಲದಲ್ಲಿ, ಮಂಚೂರಿಯದಲ್ಲಿ ಪ್ಲೇಗ್‌ನಿಂದ ಸುಮಾರು 50,000 ಮಂದಿ ಮೃತಪಟ್ಟರು. ಮತ್ತು ಪ್ರತಿ ವರ್ಷ ಲೋಕಾರೋಗ್ಯ ಸಂಸ್ಥೆಯು ಪ್ಲೇಗ್ ರೋಗದ ಸಾವಿರಾರು ಕೇಸುಗಳನ್ನು ದಾಖಲಿಸುತ್ತದೆ ಮತ್ತು ರೋಗಿಗಳ ಸಂಖ್ಯೆಯು ಏರುತ್ತಾ ಇದೆ. ಪ್ಲೇಗ್ ರೋಗದ ಹೊಸ ರೂಪಗಳು, ಅಂದರೆ ಚಿಕಿತ್ಸೆಗೆ ಪ್ರತಿರೋಧಕವಾಗಿರುವ ಹೊಸ ರೀತಿಯ ಪ್ಲೇಗ್‌ಗಳು ಸಹ ಕಂಡುಹಿಡಿಯಲ್ಪಟ್ಟಿವೆ. ಹೌದು, ಆರೋಗ್ಯಶಾಸ್ತ್ರದ ಮೂಲಭೂತ ಮಟ್ಟಗಳಿಗೆ ಭದ್ರವಾಗಿ ಅಂಟಿಕೊಂಡು ನಡೆಯದಿದ್ದಲ್ಲಿ, ಪ್ಲೇಗ್ ಮಾನವಕುಲಕ್ಕೆ ಒಂದು ಬೆದರಿಕೆಯಾಗಿಯೇ ಉಳಿಯುವುದು. ಸಾಕ್ಲನ್ ಬ್ರೊಸೊಲ್ ಮತ್ತು ಆ್ಯನ್ರಿ ಮೋಲೆರ್‌ರು ಮುದ್ರಣಕ್ಕೆ ಸಿದ್ಧಪಡಿಸಿದ ಪೂರ್‌ಕ್ವಾ ಲ ಪೆಸ್ಟ್? ಲ ರೇ, ಲೆ ಪ್ಯೂಸ್ ಆ ಲ ಬ್ಯೂಬೊನ್ (ಏಕೆ ಪ್ಲೇಗ್? ಇಲಿ, ಚಿಗಟ, ಮತ್ತು ಬ್ಯೂಬೊ) ಎಂಬ ಪುಸ್ತಕವು ಹೀಗೆ ಮುಕ್ತಾಯಗೊಳಿಸುತ್ತದೆ: “ಪ್ಲೇಗ್ ಮಧ್ಯ ಯುಗದಲ್ಲಿ ಪುರಾತನ ಯೂರೋಪಿನ ಒಂದು ರೋಗವಾಗಿ ಉಳಿದಿಲ್ಲ ಎಂಬುದಂತೂ ಖಂಡಿತ, . . . ವಿಷಾದಕರವಾಗಿ, ಬಹುಶಃ ಪ್ಲೇಗ್ ಭವಿಷ್ಯತ್ತಿನ ಒಂದು ರೋಗವಾಗಿದೆ.”
[ಪಾದಟಿಪ್ಪಣಿಗಳು]
^ ಆ ಸಮಯದ ಜನರು ಅದನ್ನು ಮಹಾಮಾರಿ ಅಥವಾ ಸಾಂಕ್ರಾಮಿಕ ರೋಗ ಎಂದು ಕರೆದರು.
[ಪುಟ 17ರಲ್ಲಿರುವ ಸಂಕ್ಷಿಪ್ತ ವಿವರಣೆ]
ದೇವರು ತಮ್ಮನ್ನು ಈ ರೋಗದಿಂದ ಕಾಪಾಡುವನೆಂದು ನಿರೀಕ್ಷಿಸುತ್ತಾ,
ಕೆಲವು ಸ್ತ್ರೀಪುರುಷರು ತಮ್ಮಲ್ಲಿರುವುದನ್ನೆಲ್ಲ ಚರ್ಚಿಗೆ ದಾನವಾಗಿ ಕೊಟ್ಟರು
[ಪುಟ 18ರಲ್ಲಿರುವ ಚೌಕ/ಚಿತ್ರ]
ಚಾವಟಿಯಿಂದ ಹೊಡೆದುಕೊಳ್ಳುವವರ ಪಂಥ
ಪ್ಲೇಗ್ ದೇವರು ಬರಮಾಡಿದ ಒಂದು ದಂಡನೆಯೆಂದು ನೆನಸುತ್ತಾ, ಕೆಲವರು ಸ್ವತಃ ಚಾವಟಿಯಿಂದ ಅಥವಾ ಬಾರುಕೋಲಿನಿಂದ ತಮ್ಮನ್ನು ಹೊಡೆದುಕೊಳ್ಳುವ ಮೂಲಕ ದೇವರ ಕೋಪವನ್ನು ತಗ್ಗಿಸಲು ಪ್ರಯತ್ನಿಸಿದರು. ಚಾವಟಿಯಿಂದ ಹೊಡೆದುಕೊಳ್ಳುವವರ ಪಂಥವು, ಅಂದರೆ 8,00,000ಕ್ಕಿಂತಲೂ ಹೆಚ್ಚಿನ ಸಂಖ್ಯೆಯಿಂದ ಕೂಡಿರುವ ಒಂದು ಚಳವಳಿಯು, ಪ್ಲೇಗ್ ಮಹಾಮಾರಿಯ ಕಾಲಾವಧಿಯಲ್ಲಿ ಜನಪ್ರಿಯತೆಯ ತುತ್ತತುದಿಯನ್ನು ಮುಟ್ಟಿತ್ತು. ಈ ಪಂಥದ ನಿಯಮಗಳು, ಸ್ತ್ರೀಯರೊಂದಿಗೆ ಮಾತಾಡುವುದನ್ನು, ಬಟ್ಟೆ ಒಗೆಯುವುದನ್ನು ಅಥವಾ ಬಟ್ಟೆ ಬದಲಾಯಿಸುವುದನ್ನು ನಿಷೇಧಿಸುತ್ತವೆ. ಈ ಪಂಥದವರು ದಿನವೊಂದಕ್ಕೆ ಎರಡು ಬಾರಿ ಸಾರ್ವಜನಿಕರ ಮುಂದೆ ಚಾವಟಿಯಿಂದ ಹೊಡೆದುಕೊಳ್ಳುವ ರೂಢಿಯನ್ನು ಮಾಡಿಕೊಂಡಿದ್ದರು.
“ಭಯಗೊಂಡಿದ್ದ ಜನಸಂಖ್ಯೆಯು ತನ್ನ ಭಾವನೆಗಳನ್ನು ವ್ಯಕ್ತಪಡಿಸಲು ಲಭ್ಯವಿದ್ದ ಕೆಲವು ಉಪಾಯಗಳಲ್ಲಿ ಚಾವಟಿಯಿಂದ ಹೊಡೆದುಕೊಳ್ಳುವುದೂ ಒಂದಾಗಿತ್ತು” ಎಂದು ಮಿಡ್‌ಈವಲ್ ಹೆರೆಸಿ ಎಂಬ ಪುಸ್ತಕವು ತಿಳಿಸುತ್ತದೆ. ಚರ್ಚಿನ ಪುರೋಹಿತ ಪ್ರಭುತ್ವವನ್ನು ನಿರಾಕರಿಸುವುದರಲ್ಲಿ ಮತ್ತು ವಿಮೋಚನೆಯನ್ನು ಒದಗಿಸುವುದರ ಕುರಿತಾದ ಚರ್ಚಿನ ಅನ್ಯಾಯಭರಿತ ಪದ್ಧತಿಯ ಪ್ರಭಾವವನ್ನು ಗುಪ್ತವಾಗಿ ಹಾಳುಮಾಡುವುದರಲ್ಲಿ, ಚಾವಟಿಯಿಂದ ಹೊಡೆದುಕೊಳ್ಳುವ ಪಂಥದವರು ಪ್ರಮುಖ ಪಾತ್ರವನ್ನು ವಹಿಸಿದ್ದರು. ಆದುದರಿಂದ, 1349ರಲ್ಲಿ ಪೋಪ್ ಈ ಪಂಥವನ್ನು ಖಂಡಿಸಿದ್ದರಲ್ಲಿ ಆಶ್ಚರ್ಯವೇನೂ ಇಲ್ಲ. ಆದರೂ, ಪ್ಲೇಗ್ ಮಹಾಮಾರಿಯು ಕೊನೆಗೊಂಡ ಬಳಿಕ, ಕಾಲಕ್ರಮೇಣ ಈ ಪಂಥವು ತನ್ನ ಪ್ರಾಬಲ್ಯವನ್ನು ಕಳೆದುಕೊಂಡಿತು.
[ಚಿತ್ರ]
ಚಾವಟಿಯಿಂದ ಹೊಡೆದುಕೊಳ್ಳುವವರು ದೇವರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು
[ಕೃಪೆ]
© Bibliothèque Royale de Belgique, Bruxelles
[ಪುಟ 19ರಲ್ಲಿರುವ ಚಿತ್ರ]
ಫ್ರಾನ್ಸ್‌ನ ಮಾರ್ಸಲಿಸ್‌ನಲ್ಲಿ ಪ್ಲೇಗ್
[ಕೃಪೆ]
© Cliché Bibliothèque Nationale de France, Paris
[ಪುಟ 19ರಲ್ಲಿರುವ ಚಿತ್ರ]
ಪ್ಲೇಗ್‌ಗೆ ಕಾರಣವಾಗಿದ್ದ ಬ್ಯಾಸಿಲಸ್ ಅಣುಜೀವಿಯನ್ನು ಅಲೆಕ್ಸಾಂಡರ್ ಯಾರ್ಸನ್ ಪ್ರತ್ಯೇಕಿಸಿದನು
[ಕೃಪೆ]
Culver Pictures