ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬದುಕುವ ಆಸೆಯನ್ನು ನೀಡುವುದು

ಬದುಕುವ ಆಸೆಯನ್ನು ನೀಡುವುದು

ಬದುಕುವ ಆಸೆಯನ್ನು ನೀಡುವುದು

ಮೇರಿಯು ಖಿನ್ನತೆಯ ರೋಗದಿಂದ ಮಾತ್ರವಲ್ಲ, ಇನ್ನಿತರ ಆರೋಗ್ಯ ಸಮಸ್ಯೆಗಳಿಂದಾಗಿಯೂ ತೊಂದರೆಗಳನ್ನು ಅನುಭವಿಸುತ್ತಿದ್ದರು. ಹೀಗಿದ್ದರೂ, ಮೇರಿಯನ್ನು ಅವರ ಕುಟುಂಬದವರು ಭಾವನಾತ್ಮಕವಾಗಿ ದೂರಮಾಡಲಿಲ್ಲ. ಇಲ್ಲವೇ ಅವರು ಮಧ್ಯಪಾನವನ್ನೋ ಅಥವಾ ಮಾದಕದ್ರವ್ಯಗಳನ್ನೋ ತೆಗೆದುಕೊಳ್ಳುವ ಕೆಟ್ಟ ಚಟಕ್ಕೆ ಬಲಿಯಾಗಲಿಲ್ಲ. ಆತ್ಮಹತ್ಯೆಗಾಗಿ ಗಂಭೀರವಾದ ಪ್ರಯತ್ನವನ್ನು ಮಾಡಬೇಕಾದರೆ ಎಲ್ಲಾ ರೀತಿಯ ಸಂಭಾವ್ಯ ಕಾರಣಗಳು ಇರಲೇಬೇಕೆಂಬ ಅವಶ್ಯಕತೆ ಇಲ್ಲ ಎಂಬ ಅಂಶವನ್ನು ಮೇರಿಯ ಪ್ರಸಂಗವು ತುಂಬ ಚೆನ್ನಾಗಿ ದೃಷ್ಟಾಂತಿಸುತ್ತದೆ.

ತಮ್ಮ ಜೀವವನ್ನು ಹೆಚ್ಚು ಪರಿಣಾಮಕಾರಿಯಾಗಿ ಕಿವಿಚಿಹಾಕುವ ವೃದ್ಧ ವ್ಯಕ್ತಿಗಳ ಪೈಕಿ ಮೇರಿಯೂ ಒಬ್ಬರಾಗಿ ಆ ಪಟ್ಟಿಯಲ್ಲಿ ಸೇರಿಸಲ್ಪಡುವರೋ ಎಂಬ ಅಂಜಿಕೆ ಸ್ವಲ್ಪ ಸಮಯದವರೆಗೂ ಇತ್ತು. ಏಕೆಂದರೆ, ಮೇರಿಯು ಸ್ಥಳಿಕ ಆಸ್ಪತ್ರೆಯ ಇಂಟೆನ್ಸಿವ್‌ ಕೇರ್‌ ವಿಭಾಗದಲ್ಲಿ ಅನೇಕ ದಿನಗಳವರೆಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ, ಯಾವುದೇ ಮಾತುಕತೆಯಿಲ್ಲದೆ, ತಮ್ಮ ಜೀವದೊಂದಿಗೆ ಹೋರಾಡುತ್ತಿದ್ದರು. ತಲ್ಲಣಗೊಂಡ ಅವರ ಗಂಡ ಜಾನ್‌, ಒಂದು ಕ್ಷಣವೂ ಅಲ್ಲಿಂದ ಕದಲದೆ ಅವರ ಪಕ್ಕದಲ್ಲೇ ಕುಳಿತಿದ್ದರು. ಮೇರಿ ಬದುಕುಳಿಯುವ ಸಾಧ್ಯತೆ ಬಹಳ ಕಡಿಮೆಯಿದೆ ಎಂದು ಮತ್ತು ಒಂದುವೇಳೆ ಅವರು ಹಾಗೆ ಬದುಕುಳಿದರೂ ಮಿದುಳಿಗಾಗುವ ಶಾಶ್ವತ ಹಾನಿಯ ಪರಿಣಾಮಗಳನ್ನು ಅವರು ಅನುಭವಿಸಬೇಕಾಗುವುದು ಎಂದು ವೈದ್ಯರು ಜಾನ್‌ ಮತ್ತು ಅವರ ಪರಿವಾರದವರಿಗೆ ಎಚ್ಚರಿಕೆ ನೀಡಿದ್ದರು.

ಮೇರಿಯ ಪಕ್ಕದ ಮನೆಯವಳಾದ ಸ್ಯಾಲಿ ಎಂಬ ಒಬ್ಬ ಯೆಹೋವನ ಸಾಕ್ಷಿಯು ಮೇರಿಯನ್ನು ಪ್ರತಿದಿನ ಭೇಟಿಮಾಡಿದಳು. ಸ್ಯಾಲಿ ಹೇಳುವುದು, “ಭರವಸೆಯನ್ನು ಕಳೆದುಕೊಳ್ಳಬೇಡಿ ಎಂದು ನಾನು ಅವರ ಕುಟುಂಬದವರನ್ನು ಬಹಳವಾಗಿ ಪ್ರೋತ್ಸಾಹಿಸಿದೆ. ಸಕ್ಕರೆ ಕಾಯಿಲೆಯಿರುವ ನನ್ನ ತಾಯಿ, ಕೆಲವು ವರ್ಷಗಳ ಹಿಂದೆ, ಅನೇಕ ವಾರಗಳ ವರೆಗೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಅವರು ಬದುಕಲಾರರು ಎಂದು ಡಾಕ್ಟರರು ನಮ್ಮ ಕುಟುಂಬದವರಿಗೆ ಹೇಳಿದ್ದರು. ಆದರೂ ಅವರು ಬದುಕುಳಿದರು. ನನ್ನ ತಾಯಿಯೊಂದಿಗೆ ಮಾತಾಡಿದಂತೆ, ನಾನು ಮೇರಿಯ ಕೈಯನ್ನು ಹಿಡಿದುಕೊಂಡು ಅವರೊಂದಿಗೆ ಮಾತಾಡುತ್ತಿದ್ದೆ. ಎಲ್ಲೋ ಒಂದು ಕಡೆ ಮೇರಿಯ ದುರ್ಬಲವಾದ ಪ್ರತಿಕ್ರಿಯೆಯನ್ನು ನನಗೆ ಗುರುತಿಸಸಾಧ್ಯವಿರುವಂತೆ ಅನಿಸಿತು.” ಮೂರು ದಿನಗೊಳಗಾಗಿ, ಅವರ ಪ್ರತಿಕ್ರಿಯೆಯು ಸ್ಪಷ್ಟವಾಗಿತ್ತು. ಮೇರಿ ಮಾತಾಡಶಕ್ತರಾಗಿರದಿದ್ದರೂ ವ್ಯಕ್ತಿಗಳನ್ನು ಗುರುತಿಸುತ್ತಿರುವಂತೆ ತೋರಿತು.

‘ನಾನು ಈ ಅನಾಹುತವನ್ನು ತಡೆಯಬಹುದಿತ್ತೇ?’

“ಅಪರಾಧಿ ಭಾವನೆಯು ಜಾನ್‌ ಮನಸ್ಸನ್ನು ಎಷ್ಟು ಕವಿದಿತ್ತೆಂದರೆ, ಇದಕ್ಕೆಲ್ಲಾ ನಾನೇ ಕಾರಣ, ತಪ್ಪೆಲ್ಲಾ ನನ್ನದೇ ಎಂದು ಖಡಾಖಂಡಿತವಾಗಿ ಹೇಳುತ್ತಿದ್ದರು” ಎಂದು ಸ್ಯಾಲಿ ಹೇಳುತ್ತಾರೆ. ತಮ್ಮ ನೆಚ್ಚಿನ ವ್ಯಕ್ತಿಗಳು ಆತ್ಮಹತ್ಯೆ ಮಾಡಿಕೊಳ್ಳುವಾಗ ಇಲ್ಲವೇ ಅದಕ್ಕಾಗಿ ಪ್ರಯತ್ನಿಸುವಾಗ ಈ ರೀತಿ ಪ್ರತಿಕ್ರಿಯಿಸುವುದು ಸಾಮಾನ್ಯವಾಗಿದೆ. “ಮೇರಿಗೆ ಖಿನ್ನತೆಯ ರೋಗವಿತ್ತು ಮತ್ತು ಅದಕ್ಕಾಗಿ ಅವರಿಗೆ ಚಿಕಿತ್ಸೆಯು ನೀಡಲಾಗುತ್ತಿತ್ತು. ಅಲ್ಲದೆ ಅವರು ಅನಾರೋಗ್ಯದಿಂದಿದ್ದರು ಹಾಗೂ ಜಾನ್‌ ಸ್ವತಃ ಒಬ್ಬ ರೋಗಿಯಾಗಿದ್ದುದ್ದರಿಂದ ಮೇರಿಯು ಯಾವಾಗಲೂ ಖಿನ್ನರಾಗಿರುವುದನ್ನು ತಡೆಯಲು ಅವರಿಗೆ ಸಾಧ್ಯವಾಗಲಿಲ್ಲ ಎಂದು ನಾನು ಅವರಿಗೆ ನೆನಪು ಮಾಡಿದೆ.”

ಒಬ್ಬ ವ್ಯಕ್ತಿಗೆ ಪ್ರಿಯರಾಗಿರುವವರು ಆತ್ಮಹತ್ಯೆ ಮಾಡಿಕೊಳ್ಳುವಾಗ, ಯಾವುದಾದರೊಂದು ರೀತಿಯಲ್ಲಿ ನಾನು ಈ ಅನಾಹುತವನ್ನು ತಡೆಯಬಹುದಿತ್ತೇ? ಎಂಬ ಪ್ರಶ್ನೆಯು ಅನೇಕವೇಳೆ ಆ ವ್ಯಕ್ತಿಯನ್ನು ಕಾಡುತ್ತಿರುತ್ತದೆ. ಎಚ್ಚರಿಕೆಯ ಸೂಚನೆಗಳು ಮತ್ತು ಸಂಭಾವ್ಯ ಕಾರಣಗಳಿಗೆ ಎಚ್ಚರವಾಗಿರುವ ಮೂಲಕ ಆತ್ಮಹತ್ಯೆಯ ಪ್ರಯತ್ನಗಳನ್ನು ತಪ್ಪಿಸಬಹುದು. ಆದರೆ ಒಂದು ವೇಳೆ ಆತ್ಮಹತ್ಯೆ ಮಾಡಿಕೊಂಡರೂ, ಇನ್ನೊಬ್ಬ ವ್ಯಕ್ತಿಯ ಸ್ವನಾಶಕ ಕ್ರಿಯೆಗೆ ನೀವು ಜವಾಬ್ದಾರರಲ್ಲ. (ಗಲಾತ್ಯ 6:5) ಆತ್ಮಹತ್ಯೆಗಾಗಿ ಪ್ರಯತ್ನಿಸುವ ಕುಟುಂಬ ಸದಸ್ಯನು ಬೇಕು ಬೇಕೆಂದೇ ಇತರರ ಮೇಲೆ ತಪ್ಪನ್ನು ಹೊರಿಸುವ ಮೂಲಕ ನೋವನ್ನುಂಟುಮಾಡಲು ಪ್ರಯತ್ನಿಸುವಾಗ ಇದನ್ನು ನೆನಪಿನಲ್ಲಿಟ್ಟುಕೊಳ್ಳುವುದು ಬಹು ಪ್ರಾಮುಖ್ಯ. ಈ ಹಿಂದೆ ಉಲ್ಲೇಖಿಸಲ್ಪಟ್ಟಿರುವ ಡಾಕ್ಟರ್‌ ಹೆನ್‌ಡಿನ್‌ ಗಮನಿಸುವುದು: “ಯಾರು ಇತರರ ಭಾವನೆಗಳನ್ನು ಪ್ರಭಾವಿಸುವ ಅಥವಾ ಕುತಂತ್ರವಾಗಿ ಅವನ್ನು ವಶಪಡಿಸಿಕೊಳ್ಳುವ ನಿರೀಕ್ಷೆಯನ್ನು ಇಟ್ಟುಕೊಂಡಿರುತ್ತಾರೋ, ಅಂಥವರು ತಮ್ಮ ಪ್ರಯತ್ನಗಳು ಸಫಲವಾಗುತ್ತವೋ ಇಲ್ಲವೋ ಎಂಬುದನ್ನು ನೋಡಲು ಇರದಿದ್ದರೂ, ಅನೇಕವೇಳೆ ಸಾವನ್ನುಂಟುಮಾಡುವ ಆತ್ಮಹತ್ಯೆಯ ಪ್ರಯತ್ನಗಳನ್ನು ಮಾಡುತ್ತಾರೆ ಎಂಬುದನ್ನು ಮನಸ್ಸಿನಲ್ಲಿಡಬೇಕು.”

ಡಾಕ್ಟರ್‌ ಹೆನ್‌ಡಿನ್‌ ಇನ್ನೂ ಸ್ಪಷ್ಟಪಡಿಸುತ್ತಾ ಹೇಳುವುದು: “ಆತ್ಮಹತ್ಯೆಯನ್ನು ಮಾಡಿಕೊಳ್ಳುವ ಹಿರಿಯ ವ್ಯಕ್ತಿಗಳ ವಿಷಯದಲ್ಲಿ, ರೋಗಿಯು ಅನೇಕವೇಳೆ ಬೆಳೆದ ಮಕ್ಕಳು, ಒಡಹುಟ್ಟಿದವರು ಮತ್ತು ವಿವಾಹ ಸಂಗಾತಿಗಳ ಮೇಲೆ ತನ್ನ ಪ್ರಭಾವ ಬೀರಲು, ನಿಯಂತ್ರಿಸಲು ಇಲ್ಲವೇ ಇನ್ನೂ ತನಗೆ ಹೆಚ್ಚು ಗಮನವನ್ನು ಕೊಡುವ ಪಾತ್ರವನ್ನು ಅವರು ವಹಿಸಿಕೊಳ್ಳುವಂತೆ ಒತ್ತಾಯಿಸಲು ಬಯಸಬಹುದು. ಅನೇಕ ಸಮಯಗಳಲ್ಲಿ ಈ ರೀತಿಯ ಕೋರಿಕೆಗಳನ್ನು ಪೂರೈಸುವುದು ಅಸಾಧ್ಯವಾಗಿರುತ್ತವೆ. ಅಷ್ಟು ಮಾತ್ರವಲ್ಲ, ಅನೇಕವೇಳೆ ರೋಗಿಯು ತಮ್ಮ ಕೋರಿಕೆಗಳ ವಿಷಯದಲ್ಲಿ ರಾಜಿಮಾಡಿಕೊಳ್ಳುವುದಿಲ್ಲ ಮತ್ತು ಹೆಚ್ಚು ಅಪಾಯಕರವಲ್ಲದ ಆತ್ಮಹತ್ಯೆಯ ಪ್ರಯತ್ನಗಳನ್ನು ಮಾಡಿದ ನಂತರ, ಅನೇಕವೇಳೆ ಸಾವನ್ನುಂಟುಮಾಡುವ ಆತ್ಮಹತ್ಯೆಯನ್ನು ಮಾಡಿಕೊಳ್ಳುತ್ತಾನೆ.”

ಈ ರೀತಿಯ ಪರಿಸ್ಥಿತಿಯಲ್ಲಿರುವ ಕುಟುಂಬದವರಿಗೆ ತಾವು ನಿಜವಾಗಿಯೂ ತಮ್ಮ ಶಕ್ತಿಯನ್ನು ಮೀರಿದ ತೀವ್ರ ಒತ್ತಡದ ಕೆಳಗಿದ್ದೇವೆಂದು ಅನಿಸಬಹುದು. ಆದರೂ, ಯೆಹೋವ ದೇವರು ಮೃತರನ್ನು ಎಬ್ಬಿಸುವನೆಂಬುದನ್ನು ಎಂದೂ ಮರೆಯಬೇಡಿ. ಇವರಲ್ಲಿ ಖಿನ್ನತೆ, ಮಾನಸಿಕ ಅಸ್ವಸ್ಥತೆ ಇಲ್ಲವೇ ಹತಾಶೆಯಿಂದಾಗಿ ತಮ್ಮ ಜೀವವನ್ನು ತೆಗೆದುಕೊಂಡಿರುವ ನಮ್ಮ ಪ್ರಿಯ ವ್ಯಕ್ತಿಗಳೂ ಸಹ ಸೇರಿರಬಹುದು.—ಅವೇಕ್‌! ಪತ್ರಿಕೆಯ, ಸೆಪ್ಟೆಂಬರ್‌ 8, 1990ರ ಸಂಚಿಕೆಯ ಪುಟ 22-3ರಲ್ಲಿರುವ “ಬೈಬಲಿನ ದೃಷ್ಟಿಕೋನ: ಆತ್ಮಹತ್ಯೆ ಮಾಡಿಕೊಳ್ಳುವವರಿಗೆ ಪುನರುತ್ಥಾನವಿದೆಯೇ?” ಎಂಬ ಲೇಖನವನ್ನು ನೋಡಿ.

ಆತ್ಮಹತ್ಯೆಯು ನ್ಯಾಯವಾದುದೆಂದು ಸಮರ್ಥಿಸಸಾಧ್ಯವಿಲ್ಲ. ಆದರೆ ಒಬ್ಬನನ್ನು ಅಂತಹ ನಿರಾಶಾಜನಕವಾದ ಸ್ಥಿತಿಗೆ ದೊಬ್ಬುವ ಬಲಹೀನತೆಗಳು ಮತ್ತು ದೌರ್ಬಲ್ಯಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವ ದೇವರ ಕೈಯಲ್ಲಿ ನಮ್ಮ ಪ್ರಿಯ ವ್ಯಕ್ತಿಗಳ ಭವಿಷ್ಯದ ಪ್ರತೀಕ್ಷೆಯು ಇದೆ ಎಂಬುದನ್ನು ತಿಳಿದುಕೊಳ್ಳುವುದು ಎಷ್ಟು ಸಾಂತ್ವನದಾಯಕವಾಗಿದೆ. ಯೆಹೋವನ ಕುರಿತು ಬೈಬಲ್‌ ಹೇಳುವುದು: “ಭೂಮಿಯ ಮೇಲೆ ಆಕಾಶವು ಎಷ್ಟು ಉನ್ನತವೋ ಆತನಲ್ಲಿ ಭಯಭಕ್ತಿಯುಳ್ಳವರ ಮೇಲೆ ಆತನ ಕೃಪೆಯು ಅಷ್ಟು ಅಪಾರವಾಗಿದೆ. ಪೂರ್ವಕ್ಕೂ ಪಶ್ಚಿಮಕ್ಕೂ ಎಷ್ಟು ದೂರವೋ ನಮ್ಮ ದ್ರೋಹಗಳನ್ನು ನಮ್ಮಿಂದ ತೆಗೆದು ಅಷ್ಟು ದೂರ ಮಾಡಿದ್ದಾನೆ. ತಂದೆಯು ಮಕ್ಕಳನ್ನು ಕನಿಕರಿಸುವಂತೆ ಯೆಹೋವನು ತನ್ನಲ್ಲಿ ಭಯಭಕ್ತಿಯುಳ್ಳವರನ್ನು ಕನಿಕರಿಸುತ್ತಾನೆ. ಆತನು ನಮ್ಮ ಪ್ರಕೃತಿಯನ್ನು ಬಲ್ಲನು; ನಾವು ಧೂಳಿಯಾಗಿದ್ದೇವೆಂಬದನ್ನು ನೆನಪುಮಾಡಿಕೊಳ್ಳುತ್ತಾನೆ.”—ಕೀರ್ತನೆ 103:11-14.

ಸಂತೋಷದ ಪರಿಣಾಮ

ಎರಡು ದಿನಗಳ ವರೆಗೂ ಮೇರಿಯ ಜೀವವು ತೂಗುಯ್ಯಾಲೆಯಾಡುತ್ತಿತ್ತು. ಆದರೆ ಅವರು ಬದುಕಿಕೊಂಡರು. ಕಾಲಕ್ರಮೇಣ ಅವರ ಸ್ಮರಣೆಯು ತಿಳಿಯಾಯಿತು. ಜಾನ್‌ ಅವರನ್ನು ಮನೆಗೆ, ಅಂದರೆ ಈ ಬಾರಿ ಎಲ್ಲಾ ಔಷಧಿಗಳು ಕಪಾಟಿನಲ್ಲಿ ಬೀಗಹಾಕಿ ಇಡಲ್ಪಟ್ಟಿದ್ದ ಮನೆಗೆ ಕರೆದೊಯ್ದರು. ಮೇರಿ ಈಗ ಮಾನಸಿಕ ಆರೋಗ್ಯ ತಜ್ಞರನ್ನು ತಪ್ಪದೆ ಸಂದರ್ಶಿಸುತ್ತಾರೆ. ತಮ್ಮ ಜೀವವನ್ನೇ ಕಳೆದುಕೊಳ್ಳುವಷ್ಟು ಮಟ್ಟಿಗೆ ತಿಳುವಳಿಕೆಯಿಲ್ಲದ ಒತ್ತಾಯಕ್ಕೆ ಮಣಿದದ್ದನ್ನು ಅವರಿಗೆ ನೆನಪಿಸಿಕೊಳ್ಳುವುದಕ್ಕೊ ಇಲ್ಲವೇ ಅದನ್ನು ವಿವರಿಸುವುದಕ್ಕೊ ಈಗಲೂ ಅವರಿಗೆ ಸಾಧ್ಯವಾಗುತ್ತಿಲ್ಲ.

ಜಾನ್‌ ಮತ್ತು ಮೇರಿಯ ಪಕ್ಕದ ಮನೆಯವಳಾದ ಸ್ಯಾಲಿಯು ಈಗ ಪ್ರತಿವಾರ ಅವರೊಂದಿಗೆ ಬೈಬಲಿನ ಅಭ್ಯಾಸವನ್ನು ಮಾಡುತ್ತಿದ್ದಾಳೆ. ವಿಶೇಷವಾಗಿ ವೃದ್ಧ ವ್ಯಕ್ತಿಗಳಿಗೆ ಪರಿಹರಿಸಲಾಗದಂತೆ ತೋರುವ ಸಮಸ್ಯೆಗಳನ್ನು ದೇವರು ಶೀಘ್ರದಲ್ಲೇ ಪರಿಹರಿಸಲಿರುವನು ಎಂಬುದನ್ನು ಬೈಬಲ್‌ನಿಂದ ಅವರು ಕಲಿತಿದ್ದಾರೆ. “ಕೇವಲ ಬೈಬಲನ್ನು ಕಲಿತ ಮಾತ್ರಕ್ಕೆ ಸಕಲ ಸಮಸ್ಯೆಗಳು ಪರಿಹಾರವಾಗಿಬಿಡುವುದಿಲ್ಲ ಎಂಬುದಂತೂ ಖಂಡಿತ” ಎಂದು ಸ್ಯಾಲಿ ವಿವರಿಸುತ್ತಾಳೆ. “ಈ ವಾಗ್ದಾನಗಳು ಸತ್ಯವಾದವುಗಳೆಂದು ಶಾಸ್ತ್ರವಚನಗಳಿಂದ ಸ್ವತಃ ನೀವು ಖಚಿತಪಡಿಸಿಕೊಳ್ಳಬೇಕು. ಮತ್ತು ನೀವು ಏನನ್ನು ಕಲಿಯುತ್ತೀರೋ ಅದನ್ನು ಅನ್ವಯಿಸಿಕೊಳ್ಳಬೇಕು. ಜಾನ್‌ ಮತ್ತು ಮೇರಿಯು ಭವಿಷ್ಯಕ್ಕಾಗಿರುವ ಒಂದು ಆಶಾಕಿರಣವನ್ನು ಪಡೆದುಕೊಳ್ಳುತ್ತಿದ್ದಾರೆಂದು ನನಗನಿಸುತ್ತದೆ.”

ನಿಮ್ಮ ಭವಿಷ್ಯವು ಕತ್ತಲಾಗಿ ಕಾಣುತ್ತಿರುವುದಾದರೆ ಮತ್ತು ನಿಜವಾದ ನಿರೀಕ್ಷೆಯೆಂಬ ಒಂದು ಆಶಾಕಿರಣವನ್ನು ನೀವು ಬಯಸುವುದಾದರೆ, ಏಕೆ ನೀವು ಯೆಹೋವನ ಸಾಕ್ಷಿಗಳನ್ನು ಸಂಪರ್ಕಿಸಬಾರದು? ಅವರು ಜಾನ್‌ ಮತ್ತು ಮೇರಿಯವರೊಂದಿಗೆ ಮಾಡಿದಂತೆ, ನಿಕಟ ಭವಿಷ್ಯದಲ್ಲಿ ದೇವರು ಪರಿಹಾರ ಮಾಡದ ಮತ್ತು ಆತನಿಂದ ಪರಿಹರಿಸಲಾಗದ ಸಮಸ್ಯೆಯು ಇಲ್ಲವೇ ಇಲ್ಲ ಎಂಬುದನ್ನು ಅವರೇ ನಿಮಗೆ ರುಜುಪಡಿಸಲಿ. ಸಮಸ್ಯೆಗಳು ಈಗ ಎಷ್ಟೇ ಹದಗೆಟ್ಟಿರಲಿ, ಖಂಡಿತವಾಗಿ ಅದಕ್ಕೊಂದು ಪರಿಹಾರವಿದೆ. ಜೀವಿಸುವುದಕ್ಕಾಗಿರುವ ಬಯಕೆಯನ್ನು ಅನೇಕರಲ್ಲಿ ಪುನರ್‌ಚೈತನ್ಯಗೊಳಿಸಿರುವ ಭವಿಷ್ಯಕ್ಕಾಗಿರುವ ನಿಜ ನಿರೀಕ್ಷೆಯನ್ನು ದಯವಿಟ್ಟು ಪರಿಗಣಿಸಿರಿ.

[ಪುಟ 6ರಲ್ಲಿರುವ ಚೌಕ]

ಸಂಭಾವ್ಯ ಕಾರಣಗಳು ಮತ್ತು ಎಚ್ಚರಿಕೆಯ ಸೂಚನೆಗಳು

“ವೃದ್ಧ ವ್ಯಕ್ತಿಗಳ ಆತ್ಮಹತ್ಯೆಗೂ ಯುವಜನರ ಆತ್ಮಹತ್ಯೆಗೂ ಇರುವ ಕಾರಣಗಳು ಬಹಳ ಭಿನ್ನವಾಗಿವೆ” ಎಂದು ಅಮೆರಿಕದ ವೈದ್ಯಕೀಯ ಸಂಘದ ಪತ್ರಿಕೆಯು (ಇಂಗ್ಲಿಷ್‌) ಗಮನಿಸುತ್ತದೆ. ಅವುಗಳಲ್ಲಿ ಕೆಲವು “ಹೆಚ್ಚಿನ ಮಟ್ಟದಲ್ಲಿ ಮದ್ಯಪಾನದ ದುರುಪಯೋಗ ಹಾಗೂ ಖಿನ್ನತೆ, ಹೆಚ್ಚು ಅಪಾಯಕರವಾದ ಆತ್ಮಹತ್ಯೆಯ ವಿಧಾನಗಳು ಮತ್ತು ಸಾಮಾಜಿಕ ಜೀವನದಿಂದ ಪ್ರತ್ಯೇಕತೆಯು” ಒಳಗೂಡಿವೆ. “ಅದರೊಂದಿಗೆ, ವೃದ್ಧ ವ್ಯಕ್ತಿಗಳು . . . ಹೆಚ್ಚು ಶಾರೀರಿಕ ಅಸ್ವಸ್ಥತೆಗಳು ಮತ್ತು ಭಾವನಾತ್ಮಕ ವೈಪರೀತ್ಯಗಳ ಸಮಸ್ಯೆಗಳನ್ನು ಹೊಂದಿರುತ್ತಾರೆ.” ಸ್ಟೀವನ್‌ ಫ್ಲಾನ್‌ಡರ್ಸ್‌ ಅವರ ಆತ್ಮಹತ್ಯೆ (ಇಂಗ್ಲಿಷ್‌) ಎಂಬ ಪುಸ್ತಕವು ಈ ಮುಂದಿನ ಕಾರಣಗಳನ್ನು ಪಟ್ಟಿಮಾಡುತ್ತದೆ. ಇದರಲ್ಲಿ ಪ್ರತಿಯೊಂದು ನಮ್ಮ ಗಮನಕ್ಕೆ ಪಾತ್ರವಾಗಿದೆ.

ದೀರ್ಘ ಸಮಯದ ಖಿನ್ನತೆ:

“ತಮ್ಮನ್ನು ತಾವೇ ಅಂತ್ಯಮಾಡಿಕೊಳ್ಳುವ 50 ಪ್ರತಿಶತ ಇಲ್ಲವೇ ಅದಕ್ಕಿಂತಲೂ ಹೆಚ್ಚಿನವರು, ಬಹು ಕಾಲದಿಂದ ಗಂಭೀರವಾದ ಖಿನ್ನತೆಯ ಸಮಸ್ಯೆಯನ್ನು ಅನುಭವಿಸಿರುತ್ತಾರೆ ಎಂದು ಸಂಶೋಧನೆಗಳು ವರದಿಸುತ್ತವೆ.”

ನಿರಾಶಸ್ಥಿತಿ:

ಖಿನ್ನರಾಗಿರುವವರಂತೆ ಕಾಣದಿದ್ದರೂ, ಅಂಥವರಿಗೆ ಭವಿಷ್ಯಕ್ಕಾಗಿ ಯಾವುದೇ ನಿರೀಕ್ಷೆಯಿಲ್ಲದಿದ್ದಾಗ ಆತ್ಮಹತ್ಯೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು ಎಂದು ಕೆಲವು ಅಧ್ಯಯನಗಳು ತೋರಿಸುತ್ತವೆ.

ಮದ್ಯಪಾನ ಮತ್ತು ಮಾದಕವಸ್ತುಗಳ ದುರುಪಯೋಗ:

“ಒಂದು ಅಂದಾಜಿಗನುಸಾರ, ಸಾಮಾನ್ಯ ಜನಸಂಖ್ಯೆಯಲ್ಲಿ 1 ಪ್ರತಿಶತಕ್ಕಿಂತಲೂ ಕಡಿಮೆ ಜನರಿಗೆ ಹೋಲಿಸುವಾಗ 7ರಿಂದ 21 ಪ್ರತಿಶತದಷ್ಟು [ಮದ್ಯಪಾನ ಸೇವಿಸುವವರು] ತಮ್ಮನ್ನು ತಾವೇ ಅಂತ್ಯಮಾಡಿಕೊಳ್ಳುತ್ತಾರೆ.”

ಕುಟುಂಬದ ಪ್ರಭಾವ:

“ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿಯ ಪರಿವಾರದ ಇತರ ಸದಸ್ಯರು ಸಹ ಆತ್ಮಹತ್ಯೆ ಮಾಡಿಕೊಳ್ಳುವ ಅಪಾಯ ಹೆಚ್ಚಿದೆಯೆಂದು ಅಧ್ಯಯನಗಳು ತೋರಿಸುತ್ತವೆ.”

ಅನಾರೋಗ್ಯ:

“ಆರೋಗ್ಯವನ್ನು ಕಳೆದುಕೊಳ್ಳುತ್ತಾ ನರ್ಸಿಂಗ್‌ಹೋಮ್‌ನಲ್ಲೇ ಉಳಿಯಬೇಕಾಗುವುದೋ ಏನೋ ಎಂಬ ಭಯವೇ ವೃದ್ಧ ವ್ಯಕ್ತಿಗಳನ್ನು ಆತ್ಮಹತ್ಯೆಗೆ ನೂಕಬಹುದು.”

ನಷ್ಟಗಳು:

“ಸಂಗಾತಿ, ಸ್ನೇಹಿತ, ಉದ್ಯೋಗ ಇಲ್ಲವೇ ಆರೋಗ್ಯವನ್ನು ಕಳೆದುಕೊಂಡಿರುವಂತಹ ವಿಷಯಗಳು ಸ್ಪಷ್ಟವಾಗಿ ಕಾಣುವ ನಷ್ಟವಾಗಿರಬಹುದು. ಕೆಲವೊಮ್ಮೆ ಇದು ಸ್ಪಷ್ಟವಾಗಿ ಕಾಣದಿರುವ ನಷ್ಟವೂ ಆಗಿರಬಹುದು. ಉದಾಹರಣೆಗೆ, ಆತ್ಮಗೌರವ, ಅಂತಸ್ತು ಇಲ್ಲವೇ ಭದ್ರತೆಯ ಅನಿಸಿಕೆಯು ಸಹ ಒಳಗೂಡಿರಬಹುದು.”

ಈ ಎಲ್ಲಾ ಕಾರಣಗಳೊಂದಿಗೆ, ಫ್ಲಾನ್‌ಡರ್ಸ್‌ ಪುಸ್ತಕವು ಮುಂದಿನ ಎಚ್ಚರಿಕೆಯ ಸೂಚನೆಗಳನ್ನು ಪಟ್ಟಿಮಾಡುತ್ತದೆ. ಅವುಗಳನ್ನೂ ಸಹ ಎಂದೂ ಅಲ್ಪವಾಗಿ ಎಣಿಸಬಾರದಾಗಿದೆ.

ಆತ್ಮಹತ್ಯೆಗಾಗಿ ಹಿಂದೆ ಪ್ರಯತ್ನಿಸಿರುವುದು:

“ಮುಂದೆ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಇದೊಂದೇ ಮುಖ್ಯ ಸೂಚನೆಯಾಗಿದೆ.”

ಆತ್ಮಹತ್ಯೆಯ ಕುರಿತು ಮಾತಾಡುವುದು:

“‘ಅವರು ನನ್ನ ಕುರಿತು ಚಿಂತೆಮಾಡಬೇಕಾಗಿಲ್ಲ’ ಅಥವಾ ‘ನಾನಿಲ್ಲದಿದ್ದರೆ ಅವರೆಲ್ಲರೂ ಸುಖವಾಗಿರುತ್ತಾರೆ’ ಎನ್ನುವಂಥ ಹೇಳಿಕೆಗಳು ಆತ್ಮಹತ್ಯೆ ಮಾಡಿಕೊಳ್ಳುವ ಸ್ಪಷ್ಟವಾದ ಬೆದರಿಕೆಗಳಾಗಿವೆ.”

ಅಂತಿಮ ತಯಾರಿಗಳು:

“ವಿಲ್‌ ಅನ್ನು ಬರೆಯುವುದು, ಬೆಲೆಬಾಳುವ ವಸ್ತುಗಳನ್ನು ಬೇರೆಯವರಿಗೆ ಕೊಟ್ಟುಬಿಡುವುದು ಮತ್ತು ತಮ್ಮ ಮುದ್ದುಪ್ರಾಣಿಗಳನ್ನು ನೋಡಿಕೊಳ್ಳುವ ಏರ್ಪಾಡನ್ನು ಮಾಡುವಂಥ ನಡವಳಿಕೆಗಳು ಇದರಲ್ಲಿ ಸೇರಿರುತ್ತವೆ.”

ವ್ಯಕ್ತಿತ್ವ ಇಲ್ಲವೇ ನಡವಳಿಕೆಯಲ್ಲಿ ಬದಲಾವಣೆ:

“ಹತಾಶೆ ಇಲ್ಲವೇ ತಾನು ಯಾವುದಕ್ಕೂ ಪ್ರಯೋಜನವಿಲ್ಲದವನು ಎಂಬ ಅಭಿವ್ಯಕ್ತಿಗಳು” ಸೇರಿರುವಾಗ, ಅದು “ಸ್ವನಾಶಕ ಕ್ರಿಯೆಗೆ ನಡೆಸಲು ಸಾಧ್ಯವಿರುವಷ್ಟು ತೀವ್ರವಾಗಿರುವ ಖಿನ್ನತೆಯ ಸೂಚನೆಯಾಗಿದೆ.”

[ಪುಟ 7ರಲ್ಲಿರುವ ಚಿತ್ರ]

ಸಂಗಾತಿಯು ಆತ್ಮಹತ್ಯೆ ಮಾಡಿಕೊಂಡಾಗ, ಪಾರಾದವರಿಗೆ ಅದನ್ನು ನಿಭಾಯಿಸಲು ಅನೇಕವೇಳೆ ಸಹಾಯದ ಅಗತ್ಯವಿರುತ್ತದೆ