ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಎಲ್‌ ನಿನೋ ಅಂದರೇನು?

ಎಲ್‌ ನಿನೋ ಅಂದರೇನು?

ಎಲ್‌ ನಿನೋ ಅಂದರೇನು?

ಪೆರುವಿನ ಲಿಮಾದಲ್ಲಿ ಸಾಮಾನ್ಯವಾಗಿ ಒಣಗಿರುತ್ತಿದ್ದ ಅಪುರಿಮ್ಯಾಕ್‌ ನದಿಯು ಒಂದು ದಿನ ಅನಿರೀಕ್ಷಿತವಾಗಿ ತುಂಬಿಹರಿಯತೊಡಗಿತು ಮತ್ತು ಕಾರ್ಮೆನ್‌ನ ಬಳಿಯಿದ್ದ ಎಲ್ಲವನ್ನೂ ಕೊಚ್ಚಿಕೊಂಡುಹೋಯಿತು. ಇದು ಸಂಭವಿಸಿದಾಗ, ಕಾರ್ಮೆನ್‌ ಪ್ರಲಾಪಿಸಿದ್ದು: “ಇದು ನನ್ನನ್ನು ಮಾತ್ರ ಬಾಧಿಸಲಿಲ್ಲ. ನನ್ನಂತೆ ಅನೇಕರು ತಮ್ಮ ಸೊತ್ತುಗಳನ್ನು ಕಳೆದುಕೊಂಡಿದ್ದಾರೆ.” ಪೆರುವಿನ ಉತ್ತರ ಭಾಗದಲ್ಲಿ ಧಾರಾಕಾರವಾಗಿ ಸುರಿದ ಮಳೆಯು, ಕರಾವಳಿತೀರದ ಸೆಕುರಾ ಮರುಭೂಮಿಯನ್ನು ಪೆರುವಿನಲ್ಲಿಯೇ ಎರಡನೆಯ ಅತಿದೊಡ್ಡ ತಾತ್ಕಾಲಿಕ ಸರೋವರವಾಗಿ ಮಾರ್ಪಡಿಸಿತು ಮತ್ತು ಇದು ಸುಮಾರು 5,000 ಚದರ ಕಿಲೋಮೀಟರುಗಳಷ್ಟು ಕ್ಷೇತ್ರವನ್ನು ಆವರಿಸಿತು. ಭೂಗೋಲದ ಸುತ್ತಲೂ ಬೇರೆ ಕಡೆಗಳಲ್ಲಿ ಸಹ ಭಾರೀ ನೆರೆಹಾವಳಿ, ತೀಕ್ಷ್ಣ ಚಂಡಮಾರುತಗಳು ಮತ್ತು ಭೀಕರ ಅನಾವೃಷ್ಟಿಯು, ಕ್ಷಾಮಕ್ಕೆ, ಅಂಟುರೋಗಗಳಿಗೆ, ಕಾಡ್ಗಿಚ್ಚುಗಳಿಗೆ ಎಡೆಮಾಡಿಕೊಟ್ಟಿದೆ. ಅಷ್ಟು ಮಾತ್ರವಲ್ಲ ಇದು ಬೆಳೆಗಳಿಗೆ, ಆಸ್ತಿಗೆ ಮತ್ತು ಪರಿಸರಕ್ಕೆ ಹಾನಿಯನ್ನು ಉಂಟುಮಾಡಿದೆ. ಇದಕ್ಕೆಲ್ಲ ಕಾರಣವೇನು? ಉಷ್ಣಪ್ರದೇಶದಲ್ಲಿ ಅಥವಾ ಭೂಮಧ್ಯರೇಖೆಯ ಪೆಸಿಫಿಕ್‌ ಸಾಗರದಲ್ಲಿ ಉಂಟಾಗುವ ಎಲ್‌ ನಿನೋ ಇದಕ್ಕೆ ಕಾರಣವೆಂದು ಅನೇಕರು ದೋಷಹೊರಿಸುತ್ತಾರೆ. ಈ ಎಲ್‌ ನಿನೋ 1997ರ ಅಂತ್ಯಭಾಗದಲ್ಲಿ ಪ್ರಾರಂಭವಾಗಿ, ಸುಮಾರು ಎಂಟು ತಿಂಗಳುಗಳ ವರೆಗೆ ಉಳಿದಿತ್ತು.

ಹಾಗಾದರೆ, ಎಲ್‌ ನಿನೋ ಅಂದರೆ ಏನು? ಅದು ಹೇಗೆ ಉಂಟಾಗುತ್ತದೆ? ಅದರ ಪರಿಣಾಮಗಳು ಯಾಕೆ ಅಷ್ಟು ವ್ಯಾಪಕವಾಗಿರುತ್ತವೆ? ಅದು ಯಾವಾಗ ಸಂಭವಿಸುವುದೆಂಬುದನ್ನು ನಾವು ಸ್ಪಷ್ಟವಾಗಿ ಮುಂತಿಳಿಸಿ, ಜೀವ ಮತ್ತು ಆಸ್ತಿಗೆ ಆಗುವ ಅಪಾರ ಹಾನಿಯನ್ನು ಪ್ರಾಯಶಃ ಕಡಿಮೆಗೊಳಿಸಬಲ್ಲೆವೊ?

ಸಮುದ್ರದ ನೀರು ಬೆಚ್ಚಗಾಗುವುದರೊಂದಿಗೆ ಅದು ಪ್ರಾರಂಭವಾಗುತ್ತದೆ

“ಸ್ಪಷ್ಟವಾಗಿ ಹೇಳುವುದಾದರೆ, ಪ್ರತಿ ಎರಡರಿಂದ ಏಳು ವರ್ಷಕ್ಕೆ ಪೆರುವಿನ ಸಮುದ್ರ ತೀರದಲ್ಲಿ ಕಾಣಬರುವ ನೀರಿನ ಬೆಚ್ಚಗಿನ ಪ್ರವಾಹವನ್ನು ಮಾತ್ರ ಎಲ್‌ ನಿನೋ ಸೂಚಿಸುತ್ತದೆ” ಎಂದು ನ್ಯೂಸ್‌ವೀಕ್‌ ಪತ್ರಿಕೆಯು ಹೇಳುತ್ತದೆ. ನೂರು ವರ್ಷಗಳಿಗಿಂತಲೂ ಹೆಚ್ಚಿನ ಸಮಯದಿಂದ, ಪೆರುವಿನ ಸಮುದ್ರ ತೀರದಲ್ಲಿ ಉಂಟಾಗುವ ಇಂತಹ ಬೆಚ್ಚಗಿನ ಸ್ಥಿತಿಯನ್ನು ನಾವಿಕರು ಅವಲೋಕಿಸಿದ್ದಾರೆ. ನೀರಿನ ಈ ಉಷ್ಣ ಪ್ರವಾಹವು ಸಾಮಾನ್ಯವಾಗಿ ಕ್ರಿಸ್ಮಸ್‌ ಹಬ್ಬದ ಸಮಯದಲ್ಲಿ ಉಂಟಾಗುವುದರಿಂದ, ಅದು ಎಲ್‌ ನಿನೋ ಎಂದು ಕರೆಯಲ್ಪಡುತ್ತದೆ. ಇದು ಬಾಲ ಯೇಸುವಿಗಿರುವ ಸ್ಪ್ಯಾನಿಷ್‌ ಪದವಾಗಿದೆ.

ಪೆರುವಿನ ಸಮುದ್ರ ತೀರದ ಹತ್ತಿರದಲ್ಲಿರುವ ನೀರು ಬೆಚ್ಚಗಾಗುವುದರ ಅರ್ಥ, ಆ ಪ್ರದೇಶದಲ್ಲಿ ಭಾರೀ ಮಳೆಯಾಗುವುದೇ. ಮಳೆ ಸುರಿದಾಗ ಸಾಮಾನ್ಯವಾಗಿ ಮರುಭೂಮಿಗಳು ಹಚ್ಚಹಸಿರಾಗುತ್ತವೆ ಮತ್ತು ಅರಣ್ಯಗಳು ಫಲವತ್ತಾಗುತ್ತವೆ. ಆದರೆ ಭಾರೀ ಮಳೆ ಸುರಿದಾಗ, ಈ ಪ್ರದೇಶದಲ್ಲಿ ನೆರೆಗಳೂ ಉಂಟಾಗುತ್ತವೆ. ಹೀಗಿರುವಾಗ, ಸಮುದ್ರದ ನೀರಿನ ಬೆಚ್ಚಗಿನ ಮೇಲ್ಮೈಯು, ಪೌಷ್ಟಿಕ ಅಂಶಗಳಿಂದ ತುಂಬಿರುವ ಕೆಳಭಾಗದ ತಂಪಾದ ನೀರು ಉಕ್ಕಿ ಹರಿಯದಂತೆ ಮಾಡುತ್ತದೆ. ಇದರ ಪರಿಣಾಮವಾಗಿ ಅನೇಕ ಕಡಲ ಜೀವಿಗಳು ಮತ್ತು ಕೆಲವು ಪಕ್ಷಿಗಳು ಸಹ ಆಹಾರದ ಹುಡುಕಾಟದಲ್ಲಿ ವಲಸೆಹೋಗುತ್ತವೆ. ಪೆರುವಿನ ಕರಾವಳಿಯಿಂದ ದೂರವಿರುವ ಇತರ ಸ್ಥಳಗಳಲ್ಲೂ ಎಲ್‌ ನಿನೋವಿನ ಪರಿಣಾಮಗಳು ತದನಂತರ ಭಾಸವಾಗತೊಡಗುತ್ತವೆ. *

ಗಾಳಿ ಮತ್ತು ನೀರಿನಿಂದ ಉಂಟಾಗುತ್ತದೆ

ಪೆರುವಿನ ಕಡಲತೀರದ ಬಳಿಯಲ್ಲಿರುವ ಸಾಗರದ ಉಷ್ಣತೆಯು ಇಷ್ಟು ವಿಪರೀತವಾಗಿ ಹೆಚ್ಚಲು ಕಾರಣವೇನು? ಇದನ್ನು ಅರ್ಥಮಾಡಿಕೊಳ್ಳಲು, ಒಂದು ಬೃಹದಾಕಾರದ ಪರಿಚಲನ ಕುಣಿಕೆ (ಜಯಂಟ್‌ ಸರ್ಕ್ಯುಲೇಟರಿ ಲೂಪ್‌)ಯನ್ನು ಪರಿಗಣಿಸಿರಿ. ಇದನ್ನು ವಾಲ್ಕರ್‌ ಪರಿಚಲನ ಎಂದು ಕರೆಯಲಾಗುತ್ತದೆ. ಇದು ಪೂರ್ವ ಹಾಗೂ ಪಶ್ಚಿಮ ಉಷ್ಣವಲಯದ ಪೆಸಿಫಿಕ್‌ ಕ್ಷೇತ್ರದ ಮಧ್ಯೆಯಿರುವ ವಾಯುಮಂಡಲದಲ್ಲಿ ಇರುತ್ತದೆ. * ಇಂಡೋನೇಶಿಯ ಮತ್ತು ಆಸ್ಟ್ರೇಲಿಯದ ಹತ್ತಿರವಿರುವ ಪಶ್ಚಿಮ ಕ್ಷೇತ್ರದ ನೀರಿನ ಮೇಲ್ಮೈಗೆ ಸೂರ್ಯನು ಶಾಖವನ್ನು ಕೊಟ್ಟಾಗ, ಬಹಳ ಬಿಸಿಯಾದ ಮತ್ತು ತೇವವಾದ ಗಾಳಿಯು ವಾಯುಮಂಡಲವನ್ನು ಸೇರುತ್ತದೆ ಮತ್ತು ನೀರಿನ ಮೇಲ್ಭಾಗದ ಹತ್ತಿರ ಕನಿಷ್ಠ ಒತ್ತಡದ ವ್ಯವಸ್ಥೆಯು ಉಂಟಾಗುತ್ತದೆ. ಹೀಗೆ, ಮೇಲೇರುತ್ತಿರುವ ವಾಯು ತಣ್ಣಗಾಗುತ್ತದೆ ಮತ್ತು ತನ್ನಲ್ಲಿರುವ ತೇವಾಂಶವನ್ನು ಹೊರಹಾಕುತ್ತದೆ. ಇದರಿಂದ ಆ ಸ್ಥಳದಲ್ಲಿ ಮಳೆ ಸುರಿಯುತ್ತದೆ. ಈ ಒಣ ವಾಯುವನ್ನು ಬಿರುಗಾಳಿಯು ಪೂರ್ವದಿಕ್ಕಿಗೆ ಎಳೆಯುತ್ತದೆ. ಈ ವಾಯು ಪೂರ್ವಕ್ಕೆ ಹೋದಂತೆ, ಅದು ತಣ್ಣಗಾಗುತ್ತದೆ ಮತ್ತು ದಟ್ಟವಾಗುತ್ತದೆ. ಪೆರು ಮತ್ತು ಎಕ್ವಡಾರ್‌ ಅನ್ನು ಮುಟ್ಟುವಷ್ಟರಲ್ಲಿ ಗಾಳಿಬೀಸಲು ಆರಂಭವಾಗುತ್ತದೆ. ತದನಂತರ, ನೀರಿನ ಮೇಲ್ಭಾಗದ ಹತ್ತಿರದಲ್ಲಿ ಗರಿಷ್ಠ ಒತ್ತಡದ ವ್ಯವಸ್ಥೆಯು ಉಂಟಾಗುತ್ತದೆ. ಇಷ್ಟುಮಾತ್ರವಲ್ಲದೆ, ಕಡಿಮೆ ಎತ್ತರದಲ್ಲಿ ವಾಣಿಜ್ಯ ಮಾರುತಗಳೆಂದು ಕರೆಯಲ್ಪಡುವ ಗಾಳಿಯ ಪ್ರವಾಹಗಳು ಇಂಡೋನೇಶಿಯದ ಕಡೆಗೆ ಅಂದರೆ, ಪಶ್ಚಿಮದ ಕಡೆಗೆ ಬೀಸುತ್ತಾ ತಮ್ಮ ಪರಿಚಲನೆಯನ್ನು ಮುಗಿಸುತ್ತವೆ.

ವಾಣಿಜ್ಯ ಮಾರುತಗಳು ಉಷ್ಣವಲಯದ ಪೆಸಿಫಿಕ್‌ ಸಾಗರದ ಮೇಲ್ಮೈ ಉಷ್ಣತೆಯನ್ನು ಹೇಗೆ ಬಾಧಿಸುತ್ತವೆ? ನ್ಯೂಸ್‌ವೀಕ್‌ ಪತ್ರಿಕೆಯು ಹೀಗೆ ಹೇಳುತ್ತದೆ: “ಈ ಮಾರುತಗಳು ಸಾಮಾನ್ಯವಾಗಿ ಚಿಕ್ಕ ಕೆರೆಯಲ್ಲಿ ಬೀಸುವ ಗಾಳಿಯಂತೆ ಕಾರ್ಯಮಾಡುತ್ತವೆ. ಇವು ಸಾಗರದ ಮೇಲ್ಮೈ ನೀರನ್ನು ಪಶ್ಚಿಮಭಾಗದ ಪೆಸಿಫಿಕ್‌ಗೆ ತಳ್ಳುವುದರಿಂದ, ಅಲ್ಲಿನ ಸಮುದ್ರ ಮಟ್ಟವು ಎರಡು ಅಡಿ ಹೆಚ್ಚಾಗುತ್ತದೆ ಮತ್ತು ಎಕ್ವಡಾರ್‌ನಲ್ಲಿರುವ ಸಾಮಾನ್ಯ ಉಷ್ಣತೆಗಿಂತಲೂ ಇಲ್ಲಿಯ ಉಷ್ಣತೆ 15 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚುತ್ತದೆ.” ಪೂರ್ವದ ಪೆಸಿಫಿಕ್‌ನಲ್ಲಿ, ಪೌಷ್ಟಿಕ ಅಂಶದಿಂದ ತುಂಬಿರುವ ಕೆಳಭಾಗದ ತಂಪಾದ ನೀರು ಮೇಲುಕ್ಕುವುದರಿಂದ ಕಡಲ ಜೀವಿಗಳು ಬಹಳ ಬೇಗ ದೊಡ್ಡದಾಗುತ್ತವೆ. ಹೀಗೆ, ಎಲ್‌ ನಿನೋ ಸಾಮಾನ್ಯ ಸ್ಥಿತಿಯಲ್ಲಿರಲಿ ಇಲ್ಲದಿರಲಿ, ಸಮುದ್ರದ ಮೇಲ್ಮೈ ಉಷ್ಣತೆಯು ಪಶ್ಚಿಮ ಪೆಸಿಫಿಕ್‌ಗಿಂತಲೂ ಪೂರ್ವ ಪೆಸಿಫಿಕ್‌ ಕ್ಷೇತ್ರದಲ್ಲಿ ಹೆಚ್ಚು ತಣ್ಣಗಿರುತ್ತದೆ.

ವಾಯುಮಂಡಲದಲ್ಲಾಗುವ ಯಾವ ಬದಲಾವಣೆಗಳು ಎಲ್‌ ನಿನೋವನ್ನು ಉಂಟುಮಾಡುತ್ತವೆ? ನ್ಯಾಷನಲ್‌ ಜಿಯಾಗ್ರಾಫಿಕ್‌ ಹೀಗೆ ತಿಳಿಸುತ್ತದೆ: “ಇದಕ್ಕಾಗಿರುವ ಕಾರಣಗಳನ್ನು ವಿಜ್ಞಾನಿಗಳು ಇದು ವರೆಗೂ ಗ್ರಹಿಸಿಲ್ಲ. ಯಾಕೆಂದರೆ ಆಗಾಗ್ಗೆ ಈ ವಾಣಿಜ್ಯ ಮಾರುತಗಳು ಕ್ರಮವಾಗಿ ತಗ್ಗುತ್ತವೆ ಅಥವಾ ಇಲ್ಲವಾಗುತ್ತವೆ.” ಈ ಗಾಳಿಯು ತನ್ನ ವೇಗವನ್ನು ಕಳೆದುಕೊಂಡು ಮುಂದಕ್ಕೆ ಚಲಿಸಿದಂತೆ, ಅದು ಇಂಡೋನೇಶಿಯದ ಹತ್ತಿರ ಸಂಗ್ರಹವಾಗಿರುವ ಬೆಚ್ಚಗಿನ ನೀರನ್ನು ಪೂರ್ವದ ಕಡೆಗೆ ಸಾಗಿಸುತ್ತದೆ. ಆಗ ಪೆರುವಿನ ಮತ್ತು ಪೂರ್ವದ ಅನೇಕ ಸ್ಥಳಗಳಲ್ಲಿರುವ ಸಮುದ್ರದ ಮೇಲ್ಮೈ ಉಷ್ಣತೆಯು ಹೆಚ್ಚಾಗುತ್ತದೆ. ಈ ಚಲನೆಯು, ವಾಯುಮಂಡಲದ ಮೇಲೆ ಪರಿಣಾಮವನ್ನು ಬೀರುತ್ತದೆ. ಒಂದು ಪರಾಮರ್ಶೆಯ ಗ್ರಂಥವು ಹೀಗೆ ಹೇಳುತ್ತದೆ: “ಪೂರ್ವ ಉಷ್ಣವಲಯದ ಪೆಸಿಫಿಕ್‌ ಸಾಗರವು ವಾಲ್ಕರ್‌ ಪರಿಚಲನವನ್ನು ದುರ್ಬಲಗೊಳಿಸುತ್ತದೆ ಮತ್ತು ಭಾರೀ ಮಳೆ ಸುರಿದಾಗ ಉಂಟಾಗುವ ಅಸಮತೂಕ ಉಷ್ಣತೆಯಿಂದ, ಪರಿಚಲನ ವಲಯವು ಪಶ್ಚಿಮದ ಕಡೆಗೆ ತಿರುಗುತ್ತದೆ. ಅಲ್ಲಿಂದ ಪೂರ್ವಕ್ಕೆ ತಿರುಗಿ ಮಧ್ಯಭಾಗವನ್ನು ಪ್ರವೇಶಿಸುತ್ತದೆ. ನಂತರ ಅದು ಪಶ್ಚಿಮ ಉಷ್ಣವಲಯದ ಪೆಸಿಫಿಕ್‌ ಸಾಗರದ ಕಡೆಗೆ ತಿರುಗುತ್ತದೆ.” ಹೀಗೆ, ಭೂಮಧ್ಯರೇಖೆಯ ಪೆಸಿಫಿಕ್‌ನುದ್ದಕ್ಕೂ ಇರುವ ಹವಾಮಾನದ ನಮೂನೆಗಳು ಪ್ರಭಾವಿಸಲ್ಪಡುತ್ತವೆ.

ನೀರಿನ ಪ್ರವಾಹದಲ್ಲಿ ಬಂಡೆಯಂತೆ

ಉಷ್ಣವಲಯದ ಪೆಸಿಫಿಕ್‌ನ ನೀರಿನ ಪ್ರವಾಹದಿಂದ ದೂರ ದೂರದಲ್ಲಿರುವ ಪ್ರದೇಶಗಳ ಹವಾಮಾನದ ನಮೂನೆಗಳನ್ನು ಸಹ ಎಲ್‌ ನಿನೋ ಬದಲಾಯಿಸಬಲ್ಲದು. ಹೇಗೆ? ಈ ವಾಯುಮಂಡಲದ ಪರಿಚಲನ ವ್ಯವಸ್ಥೆಯು ಹವಾಮಾನದ ಮೇಲೆ ಪ್ರಭಾವ ಬೀರುವುದರಿಂದಲೇ. ವಾಯುಮಂಡಲದ ಪರಿಚಲನದಿಂದ ಆ ಕ್ಷೇತ್ರದಲ್ಲಾಗುವ ಅವ್ಯವಸ್ಥೆಗೆ ವ್ಯಾಪಕ ಪರಿಣಾಮಗಳಿವೆ. ಇದನ್ನು ನೀರಿನ ಪ್ರವಾಹದ ಮಧ್ಯೆ, ಸಣ್ಣ ಅಲೆಗಳನ್ನು ಉಂಟುಮಾಡಬಹುದಾದ ಒಂದು ಬಂಡೆಗೆ ಹೋಲಿಸಸಾಧ್ಯವಿದೆ. ಉಷ್ಣವಲಯ ಪ್ರದೇಶದಲ್ಲಿರುವ ಸಾಗರದ ಬೆಚ್ಚಗಿನ ನೀರಿನ ಮೇಲಿರುವ ದಟ್ಟವಾದ ಮಳೆ ಮೋಡಗಳು ಒಂದು ಬಂಡೆಯಂತೆ ವಾಯುಮಂಡಲದಲ್ಲಿ ಅಡಚಣೆಯನ್ನು ಉಂಟುಮಾಡುತ್ತವೆ ಮತ್ತು ಇದು ಸಾವಿರಾರು ಕಿಲೋಮೀಟರುಗಳ ವರೆಗೆ ಹವಾಮಾನದ ನಮೂನೆಗಳನ್ನು ಪ್ರಭಾವಿಸುತ್ತದೆ.

ಉನ್ನತವಾದ ಅಕ್ಷಾಂಶಗಳಲ್ಲಿ ಎಲ್‌ ನಿನೋ ಬಲಗೊಳ್ಳುತ್ತದೆ ಮತ್ತು ಪೂರ್ವದ ಕಡೆಗೆ ತನ್ನ ದಿಕ್ಕನ್ನು ತಕ್ಷಣವೇ ಬದಲಾಯಿಸುತ್ತದೆ. ವೇಗವಾಗಿ ಚಲಿಸುವ ಪೂರ್ವದಿಕ್ಕಿನ ಈ ಗಾಳಿಯ ಪ್ರವಾಹವನ್ನು ಜೆಟ್‌ ತೊರೆಗಳೆಂದು ಕರೆಯಲಾಗುತ್ತದೆ. ಈ ಅಕ್ಷಾಂಶಗಳಲ್ಲಿ, ಜೆಟ್‌ ತೊರೆಗಳು ಅತಿ ರಭಸದಿಂದ ಬೀಸುವ ಗಾಳಿಗಳನ್ನು ಮುನ್ನಡೆಸುತ್ತವೆ. ಜೆಟ್‌ ತೊರೆಗಳು ಬಲಗೊಳ್ಳುತ್ತವೆ, ತಮ್ಮ ದಿಕ್ಕನ್ನು ಬದಲಾಯಿಸುತ್ತವೆ, ಋತುಗನುಗುಣವಾದ ಹವಾಮಾನದ ಪರಿಸ್ಥಿತಿಗಳನ್ನು ತೀವ್ರಗೊಳಿಸುತ್ತವೆ ಅಥವಾ ಹತೋಟಿಯಲ್ಲಿಡುತ್ತವೆ. ಉದಾಹರಣೆಗೆ, ಉತ್ತರ ಅಮೆರಿಕದಲ್ಲಿ ಎಲ್‌ ನಿನೋ ಚಳಿಗಾಲವು ಸಾಮಾನ್ಯವಾದುದಕ್ಕಿಂತಲೂ ಹೆಚ್ಚು ಸೌಮ್ಯವಾಗಿರುತ್ತದೆ, ಆದರೆ ದಕ್ಷಿಣದ ಕೆಲವು ರಾಜ್ಯಗಳಲ್ಲಿ ಅದು ತೀವ್ರವಾದ ಮಳೆ ಮತ್ತು ಚಳಿಯಿಂದ ಕೂಡಿರುತ್ತದೆ.

ಇದನ್ನೆಲ್ಲಾ ಹೇಗೆ ಮುಂತಿಳಿಸುವುದು?

ಬೇರೆ ಬೇರೆ ಬಿರುಗಾಳಿಗಳ ಪರಿಣಾಮಗಳನ್ನು ಕೆಲವೇ ದಿವಸಗಳ ಮುಂಚೆ ಮುಂತಿಳಿಸಸಾಧ್ಯವಿದೆ. ಎಲ್‌ ನಿನೋವನ್ನು ಮುಂತಿಳಿಸುವ ವಿಷಯದಲ್ಲಿ ಇದು ಸತ್ಯವಾಗಿದೆಯೊ? ಇಲ್ಲ. ಕಡಿಮೆ ಅವಧಿಯ ವರೆಗೆ ಮಾತ್ರ ಇರುವಂತಹ ಹವಾಮಾನದ ಪರಿಸ್ಥಿತಿಗಳ ಬದಲು, ಎಲ್‌ ನಿನೋ ಹವಾಮುನ್ಸೂಚನೆಗಳು ಒಂದೇ ಸಮಯಾವಧಿಯಲ್ಲಿ ವ್ಯಾಪಕವಾದ ಕ್ಷೇತ್ರಗಳನ್ನು ಆವರಿಸಿರುವ ಅಸಾಮಾನ್ಯ ಹವಾಮಾನದ ಪರಿಸ್ಥಿತಿಗಳನ್ನು ಒಳಗೊಳ್ಳುತ್ತವೆ. ಮತ್ತು ಹವಾಮಾನ ತಜ್ಞರು, ಎಲ್‌ ನಿನೋ ಹವಾಮುನ್ಸೂಚನೆಯನ್ನು ಕೊಡುವುದರಲ್ಲಿ ಸ್ವಲ್ಪ ಮಟ್ಟಿಗೆ ಯಶಸ್ಸನ್ನು ಗಳಿಸಿದ್ದಾರೆ.

ದೃಷ್ಟಾಂತಕ್ಕೆ, 1997-98ನೇ ಸಾಲಿನ ಎಲ್‌ ನಿನೋ ಹವಾಮುನ್ಸೂಚನೆಯು, 1997ರ ಮೇ ತಿಂಗಳಿನಲ್ಲೇ ಕೊಡಲ್ಪಟ್ಟಿತ್ತು. ಇದರ ಅರ್ಥ ಅದು ಉಂಟಾಗುವ ಹೆಚ್ಚುಕಡಿಮೆ ಆರು ತಿಂಗಳಿನ ಮುಂಚೆಯೇ ತಿಳಿಸಲಾಗಿತ್ತು. ಈಗ ಉಷ್ಣವಲಯದ ಪೆಸಿಫಿಕ್‌ನ ಸುತ್ತಲೂ ಲಂಗರಿಗೆ ಭದ್ರಪಡಿಸಿರುವ 70 ಅಪಾಯ ಸೂಚಿಗಳು, ಸಮುದ್ರದಲ್ಲಿ ಏಳುವ ಬಿರುಗಾಳಿಯ ಪರಿಸ್ಥಿತಿಗಳನ್ನು ತೋರಿಸಲು ಅಳವಡಿಸಲ್ಪಟ್ಟಿವೆ ಮತ್ತು ಇವು 500 ಮೀಟರ್‌ಗಳಷ್ಟು ಆಳದ ವರೆಗೆ ಮುಟ್ಟುವ ಸಾಗರದ ಉಷ್ಣತೆಯನ್ನು ಅಳೆಯುತ್ತವೆ. ಹವಾಮಾನವನ್ನು ತೋರಿಸುವ ಕಂಪ್ಯೂಟರ್‌ ಮೊಡೆಲ್‌ಗಳಿಗೆ ಈ ಅಪಾಯ ಸೂಚಿಗಳನ್ನು ಎಲೆಕ್ಟ್ರಾನಿಕ್‌ ಸರ್ಕಿಟ್‌ಗಳ ಮೂಲಕ ಅಳವಡಿಸಿದಾಗ ಸಿಗುವಂತಹ ಆಧಾರಾಂಶವು, ಹವಾಮಾನದ ಮುನ್ಸೂಚನೆಗಳನ್ನು ಪ್ರಸರಿಸುತ್ತದೆ.

ಆರಂಭದಲ್ಲಿಯೇ ಎಲ್‌ ನಿನೋವಿನ ಕುರಿತು ಎಚ್ಚರಿಕೆಗಳನ್ನು ಕೊಡುವ ಮೂಲಕ, ನಿರೀಕ್ಷಿಸಸಾಧ್ಯವಿರುವ ಬದಲಾವಣೆಗಳನ್ನು ಎದುರಿಸುವಂತೆ ಸಿದ್ಧರಾಗಲು ಇದು ಜನರಿಗೆ ನಿಜವಾಗಿಯೂ ಸಹಾಯಮಾಡುತ್ತದೆ. ಉದಾಹರಣೆಗೆ, 1983ರಿಂದ ಪೆರುವಿನ ಎಲ್‌ ನಿನೋ ಹವಾಮುನ್ಸೂಚನೆಯಿಂದಾಗಿ, ಅನೇಕ ರೈತರು ಪಶುಸಾಕಣೆಯನ್ನು ಮಾಡುವಂತೆ ಮತ್ತು ಮಳೆ ಬಿದ್ದ ಆ ಒದ್ದೆಯಾದ ನೆಲದಲ್ಲಿ ಚೆನ್ನಾಗಿ ಬೆಳೆಯುವ ಬೆಳೆಗಳನ್ನು ಬೆಳೆಸುವಂತೆ ಉತ್ತೇಜಿಸಲ್ಪಟ್ಟರು. ಇನ್ನೊಂದೆಡೆ ಮೀನುಗಾರರು ಮೀನು ಹಿಡಿಯುವುದರ ಬದಲು ಬೆಚ್ಚಗಿನ ನೀರಿನಲ್ಲಿ ಹರಿದುಬರುವ ಸಿಗಡಿಗಳ ವ್ಯವಸಾಯವನ್ನು ಆರಂಭಿಸುವಂತೆ ಹುರಿದುಂಬಿಸಲ್ಪಟ್ಟರು. ಹೌದು, ಸ್ಪಷ್ಟವಾದ ಹವಾಮುನ್ಸೂಚನೆಯೊಂದಿಗೆ, ಮುಂಚಿತವಾಗಿಯೇ ತಯಾರಾಗುವ ಮೂಲಕ ಎಲ್‌ ನಿನೋ ಮಾನವರಿಗೆ ಮತ್ತು ಆರ್ಥಿಕವ್ಯವಸ್ಥೆಗೆ ಮಾಡುವ ಅಪಾರ ಹಾನಿಯನ್ನು ಕಡಿಮೆಗೊಳಿಸಸಾಧ್ಯವಿದೆ.

ನಮ್ಮ ಭೂಮಿಯ ಹವಾಮಾನದ ಮೇಲೆ ಪ್ರಭಾವ ಬೀರುವ ವಿಧಾನಗಳನ್ನು ವೈಜ್ಞಾನಿಕವಾಗಿ ಪರಿಶೋಧಿಸುವ ಮೂಲಕ, ಸುಮಾರು 3,000 ವರ್ಷಗಳ ಹಿಂದೆ ಪ್ರಾಚೀನ ಇಸ್ರಾಯೇಲಿನ ರಾಜನಾದ ಸೊಲೊಮೋನನಿಂದ ದಾಖಲಿಸಲ್ಪಟ್ಟ ಪ್ರೇರಿತ ಮಾತುಗಳು ಸತ್ಯವಾಗಿವೆಯೆಂಬ ರುಜುವಾತು ಸಿಕ್ಕುತ್ತದೆ. ಅವನು ಬರೆದದ್ದು: “ಗಾಳಿಯು ತೆಂಕಣಕ್ಕೆ ಬೀಸಿ ಬಡಗಣಕ್ಕೆ ತಿರುಗುವದು; ಅದು ತಿರುತಿರುಗುತ್ತಾ ಹೋಗಿ ತಿರುತಿರುಗುತ್ತಾ ಬರುವದು.” (ಪ್ರಸಂಗಿ 1:6) ಗಾಳಿ ಪ್ರವಾಹ ಮತ್ತು ನೀರಿನ ಪ್ರವಾಹಗಳ ಕುರಿತು ಕಲಿಯುವುದರ ಮೂಲಕ, ಆಧುನಿಕ ಮನುಷ್ಯನು ಹವಾಮಾನದ ನಮೂನೆಗಳ ಕುರಿತು ಬಹಳಷ್ಟನ್ನು ತಿಳಿದುಕೊಂಡಿದ್ದಾನೆ. ಎಲ್‌ ನಿನೋವಿನಂತಹ ಘಟನೆಗಳ ಕುರಿತು ನಮಗೆ ಸಿಗುವ ಮುನ್ನೆಚ್ಚರಿಕೆಗಳಿಗೆ ಕಿವಿಗೊಡುವ ಮೂಲಕ, ನಾವು ಸಹ ಆ ಜ್ಞಾನದಿಂದ ಪ್ರಯೋಜನವನ್ನು ಪಡೆದುಕೊಳ್ಳುವಂತಾಗಲಿ.

[ಪಾದಟಿಪ್ಪಣಿಗಳು]

^ ಇದಕ್ಕೆ ವ್ಯತಿರಿಕ್ತವಾಗಿ, ಲಾ ನಿನಾ (“ಪುಟ್ಟ ಹುಡುಗಿ” ಎಂಬರ್ಥವುಳ್ಳ ಸ್ಪ್ಯಾನಿಷ್‌ ಪದ) ದಕ್ಷಿಣ ಅಮೆರಿಕದ ಪಶ್ಚಿಮ ಕರಾವಳಿಯಲ್ಲಿ ನಿಯತಕಾಲಿಕವಾಗಿ ಸಂಭವಿಸುವ ನೀರಿನ ತಣ್ಣಗಾಗುವಿಕೆ ಆಗಿದೆ. ಲಾ ನಿನಾ ಸಹ ಹವಾಮಾನದ ಮೇಲೆ ವ್ಯಾಪಕವಾದ ಪರಿಣಾಮಗಳನ್ನು ಬೀರುತ್ತದೆ.

^ ಇಸವಿ 1920ಗಳಲ್ಲಿ ಈ ಪ್ರಕ್ರಿಯೆಯನ್ನು ಕಲಿತ ಬ್ರಿಟಿಷ್‌ ವಿಜ್ಞಾನಿ ಶ್ರೀ. ಗಿಲ್ಬರ್ಟ್‌ ವಾಲ್ಕರ್‌ರ ನೆನಪಾರ್ಥವಾಗಿ ಈ ಹೆಸರನ್ನು ಇಡಲಾಗಿದೆ.

[ಪುಟ 27ರಲ್ಲಿರುವ ಚೌಕ]

ಎಲ್‌ ನಿನೋವಿನ ವಿನಾಶಕ ಹಾದಿ

1525: ಪೆರುವಿನಲ್ಲಿ ಎಲ್‌ ನಿನೋ ಸಂಭವಿಸಿದ್ದರ ಪ್ರಥಮ ಐತಿಹಾಸಿಕ ದಾಖಲೆ.

1789-93: ಎಲ್‌ ನಿನೋವಿನಿಂದ ಭಾರತದಲ್ಲಿ 6,00,000ಕ್ಕಿಂತಲೂ ಹೆಚ್ಚಿನ ಜನರು ಸಾವಿಗೀಡಾದರು ಮತ್ತು ದಕ್ಷಿಣ ಆಫ್ರಿಕದಲ್ಲಿ ಅದು ಭೀಕರ ಕ್ಷಾಮವನ್ನು ಉಂಟುಮಾಡಿತು.

1982-83: ಈ ಘಟನೆಯು 2,000ಕ್ಕಿಂತಲೂ ಹೆಚ್ಚಿನ ಜನರ ಸಾವಿಗೆ ಕಾರಣವಾಯಿತು ಮತ್ತು ಮುಖ್ಯವಾಗಿ ಉಷ್ಣವಲಯದ ಪ್ರದೇಶಗಳಲ್ಲಿ ಆಸ್ತಿಗಳಿಗಾದ ಹಾನಿಯು 1.3 ಶತಕೋಟಿ ಡಾಲರ್‌ಗಳಿಗಿಂತಲೂ ಹೆಚ್ಚಾಗಿತ್ತು.

1990-95: ಒಂದರ ಹಿಂದೆ ಒಂದರಂತೆ ಮೂರು ಬಾರಿ ಈ ಘಟನೆಯು ಸಂಭವಿಸಿದ್ದರಿಂದ, ಒಟ್ಟಿನಲ್ಲಿ ಈ ವರೆಗೆ ಸಂಭವಿಸಿರುವವುಗಳಲ್ಲೇ ಅತಿ ಮಾರಕವಾದ ಎಲ್‌ ನಿನೋ ಇದಾಗಿತ್ತು.

1997-98: ಎಲ್‌ ನಿನೋವಿನಿಂದಾಗಿ ನೆರೆಹಾವಳಿ ಮತ್ತು ಕ್ಷಾಮಗಳು ಉಂಟಾಗುವವು ಎಂಬುದರ ಕುರಿತು ಮಾಡಲಾದ ಪ್ರಾದೇಶಿಕ ಮುನ್ಸೂಚನೆಯು ಮೊದಲ ಬಾರಿ ಯಶಸ್ಸನ್ನು ಗಳಿಸಿತ್ತಾದರೂ, ಸುಮಾರು 2,100 ಜನರ ಜೀವಗಳನ್ನು ಅದು ಬಲಿತೆಗೆದುಕೊಂಡಿತು ಮತ್ತು ಲೋಕದ ಸುತ್ತಲೂ ಒಟ್ಟು 3.3 ಶತಕೋಟಿ ಡಾಲರ್‌ಗಳಷ್ಟು ಮೊತ್ತದ ಹಾನಿಯನ್ನು ಉಂಟುಮಾಡಿತು.

[ಪುಟ 24, 25ರಲ್ಲಿರುವ ರೇಖಾಕೃತಿಗಳು/ಭೂಪಟಗಳು]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ಸಾಮಾನ್ಯ ಮಟ್ಟ

ವಾಲ್ಕರ್‌ ಪರಿಚಲನ ನಮೂನೆ

ಬಲವಾದ ವಾಣಿಜ್ಯ ಮಾರುತಗಳು

ಬೆಚ್ಚಗಿನ ಸಾಗರದ ನೀರು

ತಂಪಾದ ಸಾಗರದ ನೀರು

ಎಲ್‌ ನಿನೋ

ಪೆರು ಸೆಕುರಾ ಮರುಭೂಮಿಯು ನೆರೆಯಿಂದ ಆವೃತಗೊಂಡಿದೆ

ದುರ್ಬಲವಾದ ವಾಣಿಜ್ಯ ಮಾರುತಗಳು

ಜೆಟ್‌ ತೊರೆಗಳು ಹಾದಿಯನ್ನು ಬದಲಾಯಿಸುತ್ತವೆ

ಯಥಾಸ್ಥಿತಿಗಿಂತಲೂ ಹೆಚ್ಚು ಬೆಚ್ಚಗಿನ ಅಥವಾ ಒಣಗಿರುವ ಸ್ಥಿತಿ

ಯಥಾಸ್ಥಿತಿಗಿಂತಲೂ ತಂಪಾದ ಅಥವಾ ಒದ್ದೆಯಾದ ಸ್ಥಿತಿ

[ಪುಟ 26ರಲ್ಲಿರುವ ರೇಖಾಕೃತಿಗಳು/ಚಿತ್ರಗಳು]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ಎಲ್‌ ನಿನೋ

ಮೇಲುಗಡೆಯಿರುವ ಭೂಮಂಡಲದ ಸುತ್ತಲಿರುವ ಕೆಂಪು ಬಣ್ಣಗಳು, ನೀರಿನ ಉಷ್ಣತೆಯು ಯಥಾಸ್ಥಿತಿಗಿಂತಲೂ ಹೆಚ್ಚು ಬೆಚ್ಚಗಾಗಿದೆ ಎಂಬುದನ್ನು ಸೂಚಿಸುತ್ತವೆ

ಸಾಮಾನ್ಯ ಮಟ್ಟ

ಪಶ್ಚಿಮ ಪೆಸಿಫಿಕ್‌ನಲ್ಲಿ ಬೆಚ್ಚಗಿನ ನೀರು ಸಂಗ್ರಹಿಸಲ್ಪಡುತ್ತದೆ, ಮತ್ತು ಪೌಷ್ಟಿಕ ಅಂಶದಿಂದ ತುಂಬಿರುವ ತಂಪಾದ ನೀರು ಪೂರ್ವಕ್ಕೆ ಮೇಲೇರುವಂತೆ ಮಾಡುತ್ತದೆ

ಎಲ್‌ ನಿನೋ

ಬೆಚ್ಚಗಿನ ನೀರು ಪೂರ್ವದ ಕಡೆಗೆ ದಿಕ್ಕು ಬದಲಾಯಿಸುವಂತೆ ದುರ್ಬಲವಾದ ವಾಣಿಜ್ಯ ಮಾರುತಗಳು ಅನುಮತಿಸುತ್ತವೆ ಮತ್ತು ತಂಪಾದ ನೀರು ಮೇಲೇರದಂತೆ ಅವು ತಡೆಗಟ್ಟುತ್ತವೆ

[ಪುಟ 24, 25ರಲ್ಲಿರುವ ಚಿತ್ರಗಳು]

ಪೆರು

ಸೆಕುರಾ ಮರುಭೂಮಿಯು ನೆರೆಯಿಂದ ಆವೃತಗೊಂಡಿದೆ

ಮೆಕ್ಸಿಕೋ

ಲಿಂಡಾ ಬಿರುಗಾಳಿ

ಕ್ಯಾಲಿಫೋರ್ನಿಯ

ನೆಲ ಕುಸಿತಗಳು

[ಕೃಪೆ]

ಎಡದಿಂದ ಬಲಕ್ಕೆ 24-5ನೇ ಪುಟಗಳು: Fotografía por Beatrice Velarde; Image produced by Laboratory for Atmospheres, NASA Goddard Space Flight Center; FEMA photo by Dave Gatley