ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜಗತ್ತನ್ನು ಗಮನಿಸುವುದು

ಜಗತ್ತನ್ನು ಗಮನಿಸುವುದು

ಜಗತ್ತನ್ನು ಗಮನಿಸುವುದು

ಭಾರತದ ಜನಸಂಖ್ಯೆ 100 ಕೋಟಿಯನ್ನು ದಾಟುತ್ತದೆ

ವಿಶ್ವಸಂಸ್ಥೆಯ ಜನಸಂಖ್ಯೆಯ ವಿಭಾಗಕ್ಕನುಸಾರ, ಕಳೆದ ವರ್ಷ ಆಗಸ್ಟ್‌ ತಿಂಗಳಿನಲ್ಲಿ ಭಾರತದ ಜನಸಂಖ್ಯೆಯು 100 ಕೋಟಿಯ ಗೆರೆಯನ್ನು ದಾಟಿದೆ. ಕೇವಲ 50 ವರ್ಷಗಳ ಹಿಂದೆ ಭಾರತದ ಜನಸಂಖ್ಯೆಯು ಈಗಿನ ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟಿತ್ತು. ಹೀಗೆ, ವರ್ಷಕ್ಕೆ 1.6 ಪ್ರತಿಶತವಾಗಿರುವ ಸದ್ಯದ ಪ್ರಮಾಣದಲ್ಲಿ ಜನಸಂಖ್ಯೆಯು ಹೆಚ್ಚುತ್ತಾ ಹೋಗುವುದಾದರೆ, ಮುಂದಿನ ನಲವತ್ತು ವರ್ಷಗಳಲ್ಲಿ ಜಗತ್ತಿನಲ್ಲೇ ಅತ್ಯಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಚೀನಾವನ್ನು ಭಾರತವು ಸೋಲಿಸಿಬಿಡುವುದು. “ಈಗಾಗಲೇ ಭಾರತ ಮತ್ತು ಚೀನಾವು ಜಗತ್ತಿನಲ್ಲಿರುವ ಮೂರನೇ ಒಂದು ಭಾಗದಷ್ಟು ಜನರನ್ನು ಹೊಂದಿವೆ” ಎಂದು ದ ನ್ಯೂ ಯಾರ್ಕ್‌ ಟೈಮ್ಸ್‌ ಪತ್ರಿಕೆಯು ವರದಿಸುತ್ತದೆ. ಅರ್ಧ ಶತಮಾನಕ್ಕಿಂತಲೂ ಕಡಿಮೆ ಸಮಯದೊಳಗಾಗಿ, ಭಾರತದಲ್ಲಿ ಜನರ ಆಯುಷ್ಕಾಲವು 39 ವರ್ಷದಿಂದ 63 ವರ್ಷದಷ್ಟು ಹೆಚ್ಚಾಗಿದೆ.

ನಾಲಿಗೆಯ ಆರೈಕೆ

ನಿಮ್ಮ ನಾಲಿಗೆಯ ಹಿಂಭಾಗದಲ್ಲಿ ಅವಿತುಕೊಳ್ಳುವ ಬ್ಯಾಕ್ಟೀರಿಯಾಗಳು, ಉಸಿರಿನ ದುರ್ವಾಸನೆಗೆ ಕಾರಣವಾಗಿರುವ ಸಲ್ಫರ್‌ ಗ್ಯಾಸ್‌ ಅನ್ನು ಉತ್ಪತ್ತಿಮಾಡುತ್ತವೆ ಎಂದು ಪ್ರಿನ್ಸ್‌ ಜ್ಯಾರ್ಜ್‌ ಸಿಟಿಸನ್‌ ಎಂಬ ವಾರ್ತಾಪತ್ರಿಕೆಯಲ್ಲಿ ಬಂದಿದ್ದ ವರದಿಯು ಹೇಳುತ್ತದೆ. “ಒಣಗಿದ ಸ್ಥಳಗಳಲ್ಲಿ ಅಂದರೆ ಆಮ್ಲಜನಕದ ಸರಬರಾಜಿಲ್ಲದ ಸ್ಥಳಗಳಲ್ಲಿ ಬ್ಯಾಕ್ಟೀರಿಯಾಗಳು ವಿಪುಲವಾಗಿ ಬೆಳೆಯುತ್ತವೆ. ಆದುದರಿಂದಲೇ ನಾವು ಶ್ವಾಸಕೋಶಗಳಿಗೆ ಗಾಳಿಯನ್ನು ಎಳೆದುಕೊಳ್ಳುವಾಗ ಅವು ತಪ್ಪಿಸಿಕೊಳ್ಳಸಾಧ್ಯವಾಗುವಂತೆ ನಾಲಿಗೆಯ ಹಿಂಭಾಗದ ಸಂದುಗಳಲ್ಲಿ ಮತ್ತು ಬಿರುಕುಗಳಲ್ಲಿ ಜೀವಿಸುತ್ತವೆ” ಎಂದು ಆ ವರದಿಯು ಹೇಳುತ್ತದೆ. ಹಲ್ಲನ್ನು ಬ್ರಷ್‌ನಿಂದ ಉಜ್ಜುವುದು ಮತ್ತು ಹಲ್ಲುಗಳ ಸಂದುಗಳನ್ನು ಫ್ಲಾಸ್‌ನಿಂದ ಶುಚಿಮಾಡುವುದು ಬ್ಯಾಕ್ಟೀರಿಯಾಗಳನ್ನು ತೊಲಗಿಸಲು ಸಹಾಯಮಾಡುವುದು. ಆದರೆ ಬ್ರಷ್‌ ಮಾಡುವುದರಿಂದ 25 ಪ್ರತಿಶತದಷ್ಟು ಬ್ಯಾಕ್ಟೀರಿಯಾಗಳನ್ನು ಮಾತ್ರ ತೊಲಗಿಸಬಹುದು. ಯೂರೋಪಿನ ಅತ್ಯಂತ ಹಳೆಯ ಪದ್ಧತಿಯಾದ ನಾಲಿಗೆಯನ್ನು ಉಜ್ಜುವುದು ತಾನೇ, “ಉಸಿರಿನ ದುರ್ವಾಸನೆಯನ್ನು ತಡೆಗಟ್ಟಲು ನೀವು ಮಾಡಬಹುದಾದ ಒಂದು ಅತ್ಯುತ್ತಮ ವಿಧಾನವಾಗಿದೆ” ಎಂದು ದಂತವೈದ್ಯರಾದ ಆ್ಯಲನ್‌ ಗ್ರೊವ್‌ ನಂಬುತ್ತಾರೆ. ಪ್ಲ್ಯಾಸ್ಟಿಕ್‌ನಿಂದ ಮಾಡಿರುವ ಉಜ್ಜುವ ಸಾಧನವನ್ನು ಉಪಯೋಗಿಸುವ ಮೂಲಕ “ನಾಲಿಗೆಯನ್ನು ಶುಚಿಯಾಗಿ ಮತ್ತು ಗುಲಾಬಿ ಬಣ್ಣದಲ್ಲಿಡಬಹುದು. ಇದು ಬ್ರಷ್‌ಗಿಂತ ಹೆಚ್ಚು ಉತ್ತಮವಾಗಿದೆ” ಎಂದು ಸಿಟಿಸನ್‌ ವಾರ್ತಾಪತ್ರಿಕೆಯು ಹೇಳುತ್ತದೆ.

“ಜೀವಕ್ಕೆ ಅತ್ಯಂತ ಪ್ರಾಮುಖ್ಯವಾದ ಘಟಕ”

“ನೀರು ಜೀವಕ್ಕೆ ಅತ್ಯಂತ ಪ್ರಾಮುಖ್ಯವಾಗಿರುವ ಘಟಕವಾಗಿದೆ. ಏಕೆಂದರೆ ನಮ್ಮ ಇಡೀ ದೇಹವು ಬಹುಪಾಲು ನೀರಿನಿಂದಲೇ ತುಂಬಿದೆ” ಎಂದು ಟೊರಾಂಟೊ ಸ್ಟಾರ್‌ ಎಂಬ ವಾರ್ತಾಪತ್ರಿಕೆಯು ವರದಿಸುತ್ತದೆ. “ನಮ್ಮ ದೇಹದಲ್ಲಿ ಕೇವಲ 20 ಪ್ರತಿಶತದಷ್ಟು ನೀರು ಕಡಿಮೆಯಾಗುವುದಾದರೂ ಅದು ಅಪಾಯಕಾರಿಯಾಗಿರಸಾಧ್ಯವಿದೆ.” ನೀರು, ನಮ್ಮ ದೇಹದ ಉಷ್ಣತೆಯನ್ನು ನಿಯಂತ್ರಿಸುವುದಲ್ಲದೆ “ರಕ್ತ ಮತ್ತು ದೇಹದ ಇತರ ವ್ಯವಸ್ಥೆಗಳ ಮೂಲಕ ದೇಹದ ಅಂಗಾಂಗಗಳಿಗೆ ಪೌಷ್ಠಿಕಾಂಶಗಳನ್ನು ಒಯ್ಯುತ್ತದೆ. ಮತ್ತು ಅವುಗಳಿಂದ ಬೇಡವಾದ ವಸ್ತುಗಳನ್ನು ಕೊಂಡೊಯ್ಯುತ್ತದೆ. ಅಸ್ತಿಮಜ್ಜೆ ಮತ್ತು ದೊಡ್ಡಕರುಳನ್ನು ಮೃದುವಾಗಿಡುವ ಮೂಲಕ ಮಲಬದ್ಧತೆಯನ್ನು ತಡೆಯಲು ಸಹಾಯಮಾಡುತ್ತದೆ.” ಒಬ್ಬ ಸರಾಸರಿ ವಯಸ್ಕನು ಒಂದು ದಿನಕ್ಕೆ ಎರಡರಿಂದ ಮೂರು ಲೀಟರಿನಷ್ಟು ನೀರನ್ನು ಕುಡಿಯಬೇಕು. ಕಾಫಿ, ನೊರೆಗೆರೆಯುವ ತಂಪು ಪಾನೀಯಗಳು ಇಲ್ಲವೇ ಮದ್ಯಪಾನೀಯಗಳಂಥವುಗಳನ್ನು ಕುಡಿಯುವುದು, ವಾಸ್ತವದಲ್ಲಿ ದೇಹಕ್ಕೆ ಶುದ್ಧ ನೀರಿನ ಅಗತ್ಯವನ್ನು ಹೆಚ್ಚಿಸುವಂತೆ ಮಾಡಬಹುದು. ಏಕೆಂದರೆ ಈ ಪಾನೀಯಗಳು ನೀರ್ಕಳತೆ (ಡಿಹೈಡ್ರೇಷನ್‌)ಯುಂಟಾಗುವಂತೆ ಮಾಡುತ್ತವೆ. ಒಬ್ಬ ಪಥ್ಯಶಾಸ್ತ್ರಜ್ಞನಿಗನುಸಾರ, ದಾಹವಾಗುವಾಗ ಮಾತ್ರ ನೀರು ಕುಡಿಯಬೇಕೆಂದು ನೆನಸಬಾರದು. ಏಕೆಂದರೆ ನೀರಿನ ದಾಹದಿಂದಾಗಿ ನಿಮ್ಮ ಗಂಟಲು, ಬಾಯಿ ಒಣಗುತ್ತಿರುವಂತೆ ಅನಿಸುವುದರಷ್ಟರೊಳಗೆ ನಿಮ್ಮ ದೇಹವು ನೀರ್ಕಳತೆಯನ್ನು ಅನುಭವಿಸಿರುತ್ತದೆ. “ದಿನದ ಸಮಯದಲ್ಲಿ ಪ್ರತಿ ಗಂಟೆಗೆ ಒಂದು ಲೋಟ ನೀರು ಕುಡಿಯುವುದು ಅನೇಕರಿಗಿರುವ ನೀರಿನ ಅಗತ್ಯವನ್ನು ತಣಿಸುವುದು” ಎಂದು ಆ ವಾರ್ತಾಪತ್ರಿಕೆಯು ತಿಳಿಸುತ್ತದೆ.

ಬುದ್ಧಿವಂತಿಕೆಯ ಆಹಾರ ಸೇವನೆ

ಹತ್ತರಿಂದ ಹದಿನಾಲ್ಕು ವಯಸ್ಸಿನ ಮಧ್ಯೆಯಿರುವ ಹುಡುಗಿಯರು ಸರಾಸರಿ 25 ಸೆಂಟಿಮೀಟರುಗಳಷ್ಟು ಉದ್ದ ಬೆಳೆಯುತ್ತಾರೆ ಹಾಗೂ 18ರಿಂದ 22 ಕೆ.ಜಿ. ತೂಕವನ್ನು ಗಳಿಸುತ್ತಾರೆ. ಆದರೆ 12ರಿಂದ 16 ವರ್ಷದ ಹುಡುಗರ ವಿಷಯದಲ್ಲಿ, ಅವರು 30 ಸೆಂಟಿಮೀಟರ್‌ ಉದ್ದ ಬೆಳೆಯುತ್ತಾ ಹಾಗೂ 22ರಿಂದ 27 ಕೆ.ಜಿಗಳಷ್ಟು ತೂಕವನ್ನು ಗಳಿಸುತ್ತಾರೆ. ಈ ಕ್ಷಿಪ್ರ ಬೆಳವಣಿಗೆಯ ಸಮಯದಲ್ಲಿ, ಹದಿಹರೆಯದವರಿಗೆ ತಮ್ಮ ತೂಕದ ಕುರಿತು ಹೆಚ್ಚು ಮುಜುಗರವಾಗುವುದು ಅಸಾಮಾನ್ಯವೇನಲ್ಲ ಮತ್ತು ಅವರಲ್ಲಿ ಅನೇಕರು ತಮ್ಮ ತೂಕವನ್ನು ಹತೋಟಿಯಲ್ಲಿಡುವ ವಿಷಯದಲ್ಲಿ ಹೆಚ್ಚು ಚಿಂತಿತರಾಗಲೂಬಹುದು. “ಆದರೆ ಕಟ್ಟುನಿಟ್ಟಾದ ಆಹಾರಪಥ್ಯ (ಡೈಯಟಿಂಗ್‌) ಮತ್ತು ಸೇವಿಸುವ ಆಹಾರದ ಮೇಲೆ ನಿರ್ಬಂಧವನ್ನು ಹಾಕುವುದು ಆರೋಗ್ಯದ ದೃಷ್ಟಿಯಲ್ಲಿ ಒಳ್ಳೇಯದಲ್ಲ ಮತ್ತು ಇದನ್ನು ಶಿಫಾರಸ್ಸು ಮಾಡುವುದೂ ಇಲ್ಲ” ಎಂದು ದ ಟೊರಾಂಟೋ ಸ್ಟಾರ್‌ ಪತ್ರಿಕೆಯಲ್ಲಿ ಪಥ್ಯ ಶಾಸ್ತ್ರಜ್ಞರಾದ ಲಿನ್‌ ರಾಬ್ಲಿನ್‌ ಬರೆಯುತ್ತಾರೆ. ಈ ನಿರ್ಬಂಧಗಳು ದೇಹಕ್ಕೆ ಅಗತ್ಯವಿರುವ ಪೌಷ್ಟಿಕಾಂಶಗಳು ಸಿಗದಂತೆ ಮಾಡಬಹುದು ಎಂದು ರಾಬ್ಲಿನ್‌ ತಿಳಿಸುತ್ತಾರೆ. ಅದರ ಜೊತೆಗೆ, ಬೇರೆ ಬೇರೆ ರೀತಿಯ ಆಹಾರ ಪಥ್ಯಗಳನ್ನು ಪ್ರಯೋಗಿಸಿ ನೋಡುವುದು, “ಅನಾರೋಗ್ಯಕರವಾದ ಆಹಾರಸೇವನೆಯ ಅಭ್ಯಾಸಕ್ಕೆ ದಾರಿಮಾಡಿಕೊಡಬಹುದು, ಅಷ್ಟು ಮಾತ್ರವಲ್ಲ, ಹೆಚ್ಚು ಗಂಭೀರವಾದ ಆಹಾರಮಾಂದ್ಯತೆಗೂ ನಡೆಸಬಹುದು.” ಅವರು ಮುಂದುವರಿಸುತ್ತಾ ಹೇಳುವುದು, ಹದಿಹರೆಯದವರು ತಮ್ಮ ತೋರಿಕೆಯ ಕುರಿತು ವಾಸ್ತವಿಕ ನೋಟವನ್ನು ಹೊಂದಿರುವ ಅಗತ್ಯವಿದೆ ಮತ್ತು ತಮ್ಮ ದೇಹವು ಆರೋಗ್ಯಕರವಾದ ತೂಕವನ್ನು ಹೊಂದಿರಲು, “ಬುದ್ಧಿವಂತಿಕೆಯಿಂದ ಕೂಡಿದ ಆಹಾರ ಸೇವನೆ, ಚಟುವಟಿಕೆಯಿಂದ ಕೂಡಿದ ಜೀವನ ಮತ್ತು ತಮ್ಮ ಕುರಿತು ತಾವೇ ತೃಪ್ತಿಯನ್ನು ಕಾಣುವ” ಮೂಲಕ ಇದನ್ನು ಮಾಡಬಹುದಾಗಿದೆ.

ತಂಬಾಕಿನಿಂದ ಮಕ್ಕಳಿಗಾಗುವ ಅಪಾಯ

ತಂಬಾಕಿನ ಹೊಗೆಗೆ ಒಡ್ಡಲ್ಪಟ್ಟಿರುವ ಫಲವಾಗಿ ಲೋಕದ 50 ಪ್ರತಿಶತದಷ್ಟು ಮಕ್ಕಳು ಅಪಾಯದಲ್ಲಿದ್ದಾರೆಂದು ಲೋಕಾರೋಗ್ಯ ಸಂಸ್ಥೆ (WHO) ಅಂದಾಜುಮಾಡಿದೆ ಎಂದು ಲಂಡನ್ನಿನ ಗಾರ್ಡಿಯನ್‌ ವಾರ್ತಾಪತ್ರಿಕೆಯು ವರದಿಸುತ್ತದೆ. ಈ ರೀತಿಯಾಗಿ ತಂಬಾಕಿನ ಹೊಗೆಗೆ ಒಡ್ಡಲ್ಪಡುವುದರಿಂದ ಉಂಟಾಗುವ ರೋಗಗಳು ಆಸ್ತಮಾ ಮತ್ತು ಇನ್ನಿತರ ಉಸಿರಾಟದ ತೊಂದರೆಗಳಾಗಿವೆ. ಅದರೊಂದಿಗೆ ಇದ್ದಕ್ಕಿದ್ದಂತೆ ಶಿಶುವಿನ ಸಾವಿಗೆ ಕಾರಣವಾಗುವ ಲಕ್ಷಣಾವಳಿ ಹಾಗೂ ಮಧ್ಯೆ ಕಿವಿಯ ಕಾಯಿಲೆ ಹಾಗೂ ಕ್ಯಾನ್ಸರ್‌ ಆಗಿವೆ. ಧೂಮಪಾನ ಮಾಡುವ ಹೆತ್ತವರ ಮಕ್ಕಳು ಶಾಲೆಯಲ್ಲಿ ಸರಿಯಾಗಿ ಓದುವುದಿಲ್ಲ ಮತ್ತು ನಡವಳಿಕೆಯಲ್ಲೂ ಕೂಡ ಸಮಸ್ಯೆಗಳನ್ನು ಹೊಂದಿರುತ್ತಾರೆ. ಒಂದು ವೇಳೆ ಹೆತ್ತವರಲ್ಲಿ ಇಬ್ಬರೂ ಧೂಮಪಾನ ಮಾಡುವುದಾದರೆ, ಅವರ ಮಕ್ಕಳು ಆರೋಗ್ಯ ಸಮಸ್ಯೆಗಳನ್ನು ಅನುಭವಿಸುವ ಸಾಧ್ಯತೆಯು 70 ಪ್ರತಿಶತಕ್ಕಿಂತಲೂ ಹೆಚ್ಚಿರುವುದು. ಅಷ್ಟೇ ಅಲ್ಲ, ಕುಟುಂಬದಲ್ಲಿ ಒಬ್ಬ ವ್ಯಕ್ತಿ ಧೂಮಪಾನ ಮಾಡುವುದಾದರೂ 30 ಪ್ರತಿಶತದಷ್ಟು ಅನಾರೋಗ್ಯ ಸಮಸ್ಯೆಯನ್ನು ಹೆಚ್ಚಿಸುವರು. ತಮ್ಮ ಚಟದಿಂದ ಕುಟುಂಬದವರ ಮೇಲೆ ಬರಲಿರುವ ಆಪತ್ತುಗಳ ಕುರಿತು ಹೆತ್ತವರಿಗೆ ಆರೋಗ್ಯ ಶಿಕ್ಷಣವನ್ನು ಕೊಡುವಂತೆ ಹಾಗೂ ಶಾಲೆಗಳಲ್ಲಿ ಮತ್ತು ಮಕ್ಕಳು ಹೆಚ್ಚಾಗಿ ಹೋಗಿ ಬರುವ ಇನ್ನಿತರ ಸ್ಥಳಗಳಲ್ಲಿ ಧೂಮಪಾನವನ್ನು ನಿಷೇಧಿಸುವಂತೆ WHO ವಿನಂತಿಸಿಕೊಳ್ಳುತ್ತಿದೆ.

ಪ್ರವಾಸೋದ್ಯಮದ ವಿಜಯ

ಲೋಕ ಪ್ರವಾಸೋದ್ಯಮ ಸಂಸ್ಥೆಯಾದ (WTO)ಗನುಸಾರ, “ಅಂತಾರಾಷ್ಟ್ರೀಯ ಪ್ರವಾಸಕ್ಕಾಗಿ ಬರುವ ಪ್ರವಾಸಿಗರ ಸಂಖ್ಯೆಯು ಈಗ ವರ್ಷಕ್ಕೆ 625 ದಶಲಕ್ಷದಷ್ಟಾಗಿದೆ. ಆದರೆ 2020ರಲ್ಲಿ ಅವರ ಸಂಖ್ಯೆಯು 160 ಕೋಟಿಯಷ್ಟು ಹೆಚ್ಚಾಗಲಿದೆ” ಎಂದು ಯೂನೆಸ್ಕೋ ಕುರಿಯರ್‌ ವರದಿಸುತ್ತದೆ. ಈ ಪ್ರವಾಸಿಗರು 2,000,000,000,000ಗಳಷ್ಟು ಅಮೆರಿಕನ್‌ ಡಾಲರುಗಳನ್ನು ಖರ್ಚುಮಾಡಲಿದ್ದಾರೆ. ಹೀಗೆ ಪ್ರವಾಸೋದ್ಯಮವು “ಪ್ರಪಂಚದ ಉದ್ಯಮಗಳ ಸಾಲಿನಲ್ಲಿ ಅಗ್ರಗಣ್ಯ ಸ್ಥಾನವನ್ನು ಪಡೆಯಲಿದೆಯೆಂದು” ನಿರೀಕ್ಷಿಸಲಾಗಿದೆ. ಇದುವರೆಗೂ ಯೂರೋಪ್‌ ಪ್ರವಾಸಿಗರ ಅತ್ಯಂತ ಜನಪ್ರಿಯ ತಾಣವಾಗಿತ್ತು. 1998ರಲ್ಲಿ ಫ್ರಾನ್ಸ್‌ ದೇಶವು, 7 ಕೋಟಿ ಪ್ರವಾಸಿಗರನ್ನು ಆಕರ್ಷಿಸುವ ಮೂಲಕ ಅತ್ಯಂತ ಹೆಚ್ಚಿನ ಪ್ರವಾಸಿಗರು ಭೇಟಿನೀಡುವ ನೆಚ್ಚಿನ ತಾಣವಾಯಿತು. ಆದರೆ, 2020ನೇ ಇಸವಿಯೊಳಗಾಗಿ ಚೀನಾ ಮೊದಲನೇ ಸ್ಥಾನವನ್ನು ತೆಗೆದುಕೊಳ್ಳುವುದೆಂದು ನಿರೀಕ್ಷಿಸಲಾಗಿದೆ. ಆದರೆ ಅಂತಾರಾಷ್ಟ್ರೀಯ ಪ್ರವಾಸವು ಕೆಲವು ಅದೃಷ್ಟವಂತರ ಪಾಲಿಗೆ ಮಾತ್ರ ಸಿಗುವ ಮೃಷ್ಟಾನ್ನವಾಗಿದೆ. 1996ರಲ್ಲಿ ಲೋಕದ ಜನಸಂಖ್ಯೆಯಲ್ಲಿ ಕೇವಲ 3.5 ಪ್ರತಿಶತದಷ್ಟು ಜನ ಮಾತ್ರ ಹೊರದೇಶಗಳಿಗೆ ಪ್ರಯಾಣಮಾಡಿದರು. ಈ ಸಂಖ್ಯೆಯು 2020ನೇ ಇಸವಿಯೊಳಗಾಗಿ 7 ಪ್ರತಿಶತವನ್ನು ಮುಟ್ಟುವುದು ಎಂದು WTO ಮುಂದಾಗಿಯೇ ಊಹಿಸುತ್ತಿದೆ.

ಗಿಲಿಕೆಹಾವಿನ ಸೇಡು

“ಗಿಲಿಕೆಹಾವನ್ನು ಕೊಂದ ಮೇಲೂ ಅದು ನಿಮ್ಮನ್ನು ಕಚ್ಚಬಹುದು. ಸತ್ತ ಮೇಲೂ ಸೇಡು ತೀರಿಸಿಕೊಳ್ಳುವ ಈ ಹಾವಿನ ವಿಲಕ್ಷಣ ರೀತಿಯು ಅಚ್ಚರಿಯನ್ನುಂಟುಮಾಡುವುದಾದರೂ ಸಾಮಾನ್ಯ ವಿಷಯವಾಗಿದೆ” ಎಂದು ನ್ಯೂ ಸೈಯನ್‌ಟಿಸ್ಟ್‌ ವರದಿಸುತ್ತದೆ. ಅಮೆರಿಕಾದ ಅರಿಸೋನದಲ್ಲಿ 11 ತಿಂಗಳಲ್ಲಿ 34 ಮಂದಿಯನ್ನು ಗಿಲಿಕೆ ಹಾವು ಕಚ್ಚಿತ್ತು. ಚಿಕಿತ್ಸೆಯನ್ನು ಪಡೆದುಕೊಂಡಿದ್ದವರಲ್ಲಿ 5 ಮಂದಿ, ಹಾವನ್ನು ಕೊಂದ ಮೇಲೂ ಅದು ಅವರ ಮೇಲೆ ಎರಗಿತು ಎಂದು ಹೇಳಿದರಂತೆ. ಈ ಅಸಾಧಾರಣ ವಿಷಯವನ್ನು ಅಭ್ಯಸಿಸುತ್ತಿರುವ ಇಬ್ಬರು ಡಾಕ್ಟರರು ಇದನ್ನು ಹೇಳಿದರು. ಈ ಹಾವಿನ ಕಡಿತಕ್ಕೆ ಗುರಿಯಾದ ಒಬ್ಬ ವ್ಯಕ್ತಿಯು, ಮೊದಲು ಹಾವನ್ನು ಗುಂಡಿಕ್ಕಿ ಕೊಂದನು. ನಂತರ ಅದರ ರುಂಡವನ್ನು ಮುಂಡದಿಂದ ಬೇರೆ ಮಾಡಿಬಿಟ್ಟನು. ಅದು ಕದಲುವುದು ಸಂಪೂರ್ಣವಾಗಿ ನಿಲ್ಲುವ ವರೆಗೂ ಕಾದಿದ್ದು, ಅದರ ತಲೆಯನ್ನು ಕೈಯಲ್ಲಿ ಎತ್ತಿಕೊಂಡನು. ಅದು ಥಟ್ಟನೆ ಜಿಗಿದು ಅವನ ಎರಡೂ ಕೈಗಳನ್ನು ಕಚ್ಚಿಬಿಟ್ಟಿತು. ಕತ್ತರಿಸಲ್ಪಟ್ಟ ಗಿಲಿಕೆಹಾವಿನ ತಲೆಯು, “ಸತ್ತು ಒಂದು ಗಂಟೆಯವರೆಗೂ ಯಾವುದೇ ವಸ್ತುಗಳನ್ನು ಅದರ ಮುಂದೆ ಆಡಿಸಿದರೂ ಅದರ ಮೇಲೆ ಆಕ್ರಮಣಮಾಡುತ್ತದೆ” ಎಂದು ಹಿಂದಿನ ಅಧ್ಯಯನಗಳು ತೋರಿಸುತ್ತವೆ ಎಂದು ಆ ಪತ್ರಿಕೆಯು ತಿಳಿಸುತ್ತದೆ. ಇದರ ಕುರಿತು ಸರೀಸೃಪತಜ್ಞರು ನಂಬುವುದೇನೆಂದರೆ, “ಹಾವಿನ ‘ಪೊಳ್ಳು ಅಂಗ’ದಲ್ಲಿರುವ ಇನ್‌ಫ್ರಾ ರೆಡ್‌ ಸಂವೇದಗಳಿಂದ ಪ್ರಚೋದಿಸಲ್ಪಡುವ ಅನೈಚ್ಛಿಕ ಪ್ರತಿಕ್ರಿಯೆಯೇ ಇದಕ್ಕೆ ಕಾರಣವಾಗಿದೆ. ಮತ್ತು ಇದು ಕಣ್ಣು ಮತ್ತು ಮೂಗಿನ ಮಧ್ಯೆಯಿದ್ದು ದೇಹದ ಉಷ್ಣತೆಯನ್ನು ಕಂಡುಹಿಡಿಯುತ್ತದೆ.” ಡಾಕ್ಟರ್‌ ಜೆಫ್ರಿ ಶುಷಾರ್ಡ್‌ ಎಚ್ಚರಿಸುವುದೇನೆಂದರೆ, ರುಂಡವಿಲ್ಲದ ಗಿಲಿಕೆಯನ್ನು “ಬಹಳ ಚಿಕ್ಕ ಹಾವಾಗಿ” ವೀಕ್ಷಿಸಬೇಕು. “ಅದನ್ನು ನೀವು ಮುಟ್ಟಲೇ ಬೇಕೆನ್ನುವುದಾದರೆ ಒಂದು ಉದ್ದ ಕೋಲನ್ನು ಉಪಯೋಗಿಸುವಂತೆ ನಾನು ನಿಮಗೆ ಸಲಹೆ ನೀಡುತ್ತೇನೆ” ಎಂದು ಅವರು ಹೇಳುತ್ತಾರೆ.

ಅಸಾಮಾನ್ಯವಾದ ಶಕ್ತಿಯ ಮೂಲಗಳು

◼ ನ್ಯೂ ಕ್ಯಾಲಡೊನಿಯಾದ ಯುವೆಯಾ ಎಂಬ ದ್ವೀಪದಲ್ಲಿ ಪೆಟ್ರೋಲ್‌ ದೊರಕುವುದಿಲ್ಲ. ಆದರೆ ಆ ದ್ವೀಪದಲ್ಲಿ ತೆಂಗಿನ ಎಣ್ಣೆಯನ್ನು ಉಪಯೋಗಿಸಿ ವಿದ್ಯುಚ್ಛಕ್ತಿಯನ್ನು ಉತ್ಪಾದಿಸಲಾಗುತ್ತದೆ ಎಂದು ಫ್ರೆಂಚ್‌ ಪತ್ರಿಕೆಯಾದ ಸೈಯನ್ಸ್‌ ಎ ಎವನಿರ್‌ ವರದಿಸುತ್ತದೆ. ಫ್ರೆಂಚ್‌ ದೇಶದ ಎಲನ್‌ ಐನರ್‌ ಎಂಬ ಒಬ್ಬ ಎಂಜಿನಿಯರ್‌, ತೆಂಗಿನ ಎಣ್ಣೆಯ ಮೂಲಕ ಚಲಿಸುವ ಎಂಜಿನ್‌ ಅನ್ನು ತಯಾರಿಸಲು 18 ವರ್ಷಗಳನ್ನು ವ್ಯಯಿಸಿದನು. ಈ ಎಂಜಿನ್‌ ಜನರೇಟರನ್ನು ಚಲಿಸುವಂತೆ ಮಾಡುತ್ತದೆ ಮತ್ತು ಜನರೇಟರ್‌ ನೀರಿನಿಂದ ಉಪ್ಪನ್ನು ಬೇರ್ಪಡಿಸುವ ಯಂತ್ರಕ್ಕೆ ವಿದ್ಯುತ್‌ ಅನ್ನು ಒದಗಿಸುತ್ತದೆ. ಇದು ಆ ದ್ವೀಪದಲ್ಲಿರುವ 235 ಪರಿವಾರಗಳಿಗೆ ಕುಡಿಯುವ ನೀರನ್ನು ಒದಗಿಸುತ್ತದೆ. ತನ್ನ 165 ಕಿಲೋವಾಟಿನ ಸಜ್ಜಿತ ಯಂತ್ರವು, ಶಕ್ತಿ ಮತ್ತು ಇಂಧನದ ಉಳಿತಾಯದಲ್ಲಿ ಡೀಸಲ್‌ ಎಂಜಿನುಗಳೊಂದಿಗೆ ಪ್ರತಿಸ್ಪರ್ಧಿಸುತ್ತದೆ ಎಂದು ಐನರ್‌ ಹೇಳಿದನು.

◼ ಈ ಮಧ್ಯೆ, ಭಾರತದ ಗುಜರಾಥ್‌ ರಾಜ್ಯದ ಕಲಾಲಿ ಎಂಬ ಗ್ರಾಮದಲ್ಲಿ ಮಾಡಲ್ಪಟ್ಟ ಪ್ರಯೋಗದಲ್ಲಿ, ಎತ್ತುಗಳ ಬಲವನ್ನು ಉಪಯೋಗಿಸಿ ವಿದ್ಯುತ್ತನ್ನು ಉತ್ಪಾದಿಸುವುದನ್ನು ಕಂಡುಹಿಡಿಯಲಾಗಿದೆ. ಈ ರೀತಿಯಾಗಿ ವಿದ್ಯುತ್ತನ್ನು ಉತ್ಪಾದಿಸುವ ಉಪಾಯವು, ಒಬ್ಬ ವಿಜ್ಞಾನಿ ಮತ್ತು ಅವನ ಸೋದರ ಮಗಳಿಗೆ ಹೊಳೆಯಿತು ಎಂದು ನವ ದೆಹಲಿಯ ಡೌನ್‌ ಟು ಅರ್ತ್‌ ಎಂಬ ಪತ್ರಿಕೆಯು ವರದಿಸುತ್ತದೆ. ಅದು ಹೇಗೆಂದರೆ, ಗಿಯರ್‌ ಬಾಕ್ಸಿಗೆ ಜೋಡಿಸಿರುವ ಚಾಲಕದಂಡವನ್ನು ನಾಲ್ಕು ಎತ್ತುಗಳು ತಿರುಗಿಸುತ್ತವೆ, ಆ ಗಿಯರ್‌ ಬಾಕ್ಸ್‌ ಒಂದು ಸಣ್ಣ ಜನರೇಟರನ್ನು ಚಲಿಸುವಂತೆ ಮಾಡುತ್ತದೆ. ಮುಂದೆ ಈ ಜನರೇಟರ್‌ ಬ್ಯಾಟರಿಗಳಿಗೆ ಜೋಡಿಸಲ್ಪಟ್ಟಿದ್ದು ಅವು ನೀರಿನ ಪಂಪು ಮತ್ತು ಧಾನ್ಯ ಬೀಸುವ ಯಂತ್ರಕ್ಕೆ ಶಕ್ತಿಯನ್ನು ಒದಗಿಸುತ್ತವೆ. ಈ ರೀತಿಯಾಗಿ ತಯಾರಿಸಲ್ಪಡುವ ವಿದ್ಯುಚ್ಛಕ್ತಿಯ ಪ್ರತಿ ಯೂನಿಟಿನ ದರವು 10 ಸೆಂಟುಗಳಷ್ಟು ಆಗಿದೆ. ಆದರೆ ಇದನ್ನು ಹವಾಯಂತ್ರಗಳಿಂದ ಉತ್ಪಾದಿಸುವ ವಿದ್ಯುಚ್ಛಕ್ತಿಗೆ ಹೋಲಿಸುವಾಗ ಪ್ರತಿ ಯುನಿಟಿಗೆ 1 ಡಾಲರ್‌ ಆಗಿದೆ ಅಥವಾ ಸೌರ ಹಲಗೆಗಳ ವಿದ್ಯುತ್ತಿಗೆ ಹೋಲಿಸುವುದಾದರೆ ಪ್ರತಿ ಯೂನಿಟಿಗೆ 24 ಡಾಲರುಗಳಾಗಿವೆ ಎಂದು ಡೌನ್‌ ಟು ಅರ್ತ್‌ ಪತ್ರಿಕೆಯು ಹೇಳುತ್ತದೆ. ಹಾಗಿದ್ದರೂ, ವರ್ಷದಲ್ಲಿ ಮೂರು ತಿಂಗಳು ಹೊಲಗಳಲ್ಲಿ ಕೆಲಸಮಾಡಲು ಎತ್ತುಗಳ ಅವಶ್ಯಕತೆ ರೈತರಿಗಿರುವುದರಿಂದ, ಎತ್ತುಗಳ ಗೈರು ಹಾಜರಿಯ ಸಮಯದಲ್ಲಿ ವಿದ್ಯುತ್ತನ್ನು ಶೇಖರಿಸಲು ಹೆಚ್ಚು ಪರಿಣಾಮಕಾರಿಯಾದ ಮಾರ್ಗವನ್ನು ವಿದ್ಯುತ್‌ ಉತ್ಪಾದಕರು ಹುಡುಕುತ್ತಿದ್ದಾರೆ.

ನಡೆಯುವುದು ಆರೋಗ್ಯಕ್ಕೆ ಒಳ್ಳೆಯದು

ನಡೆಯುವುದು ತೂಕವನ್ನು ಕಡಿಮೆಮಾಡಲು ಮತ್ತು ಒತ್ತಡದಿಂದ ವಿಮುಕ್ತರಾಗಲು ಸಹಾಯಮಾಡುವುದರೊಂದಿಗೆ “ರಕ್ತದೊತ್ತಡವನ್ನು ಮತ್ತು ಹೃದಯಾಘಾತವಾಗುವ ಅಪಾಯವನ್ನು ಸಹ ಕಡಿಮೆ ಮಾಡುತ್ತದೆ” ಎಂದು ಟೊರಾಂಟೊದ ದ ಗ್ಲೋಬ್‌ ಆ್ಯಂಡ್‌ ಮೆಯ್ಲ್‌ ಪತ್ರಿಕೆಯು ಹೇಳುತ್ತದೆ. ಆರೋಗ್ಯವಂತರಾಗಿರಲು ಪ್ರತಿದಿನವು ನಿರ್ದಿಷ್ಟವಾದ ಸಮಯ ನಡೆಯಬೇಕೆಂಬುದಕ್ಕೆ ಬದ್ಧರಾಗಿರುವುದು ಬಹಳ ಪ್ರಾಮುಖ್ಯವಾಗಿದೆ. ಹಾಗಾದರೆ ಎಷ್ಟು ಹೊತ್ತು ನಡೆಯಬೇಕು? “ಆರೋಗ್ಯಕರವಾದ ಚಟುವಟಿಕೆಯಿಂದ ಕೂಡಿದ ಜೀವನಕ್ಕೆ ಕೆನಡಾದ ದೈಹಿಕ ಚಟುವಟಿಕೆಯ ಗೈಡ್‌ ಎಂಬ ಪುಸ್ತಕಕ್ಕನುಸಾರ, ನೀವು ಸಾಮಾನ್ಯ ವೇಗದಲ್ಲಿ ನಡೆಯುವವರಾದರೆ ಪ್ರತಿದಿನ 60 ನಿಮಿಷಗಳು ನಡೆಯುವ ಅಗತ್ಯವಿದೆ. ಅದನ್ನು ಪ್ರತಿಸಾರಿ ಕಡಿಮೆಪಕ್ಷ 10 ನಿಮಿಷದಂತೆ ಮಾಡಬಹುದು.” ಚುರುಕಾಗಿ ನಡೆಯುವುದಾದರೆ ಅಥವಾ ಸೈಕಲ್‌ ತುಳಿಯುವುದಾದರೆ ಪ್ರತಿದಿನ 30ರಿಂದ 60 ನಿಮಿಷಗಳು ಮತ್ತು ಜಾಗಿಂಗ್‌ ಅಥವಾ ನಿಧಾನವಾಗಿ ಓಡುವುದಾದರೆ 20ರಿಂದ 30 ನಿಮಿಷಗಳ ವ್ಯಾಯಾಮವು ಸಹ ನೀವು ಆರೋಗ್ಯವಂತರಾಗಿರಲು ಸಹಾಯಮಾಡಬಹುದು. ಹಗುರವಾದ, ಗಾಳಿಯಾಡುವ ಮತ್ತು ಮೃದುವಾದ ಪಾದತಲಗಳಿರುವ, ಪಾದಕ್ಕೆ ಸಾಕಷ್ಟು ಆಧಾರವನ್ನು ನೀಡುವ ಪಾದರಕ್ಷೆಯನ್ನು ಉಪಯೋಗಿಸುವಂತೆ ಗ್ಲೋಬ್‌ ವಾರ್ತಾಪತ್ರಿಕೆಯು ಶಿಫಾರಸ್ಸುಮಾಡುತ್ತದೆ.

ತಾಯಿಯ ಹಾಲು ತೂಕವನ್ನು ಹತೋಟಿಯಲ್ಲಿಡುತ್ತದೆಯೇ?

ಮೊಲೆಯುಣಿಸುವುದರ ಮತ್ತೊಂದು ಪ್ರಯೋಜನವನ್ನು ತಾವು ಕಂಡುಹಿಡಿದಿದ್ದೇವೆಂದು ಸಂಶೋಧಕರು ಹೇಳುತ್ತಾರೆ. ಅದೇನೆಂದರೆ, ಮೊಲೆಯುಣಿಸುವುದರಿಂದ ಮಗು ಕಾಲಾನಂತರ ಬೊಜ್ಜು ದೇಹವನ್ನು ಧರಿಸದಂತಿರಲು ಸಹಾಯಮಾಡಬಹುದಂತೆ. ಜರ್ಮನಿಯ ವಾರ್ತಾಪತ್ರಿಕೆಯಾದ ಫೋಕಸ್‌ನಲ್ಲಿ ವರದಿಸಿದಂತೆ, ಮ್ಯೂನಿಕ್‌ ವಿಶ್ವವಿದ್ಯಾನಿಲಯದ ಸಂಶೋಧಕರ ತಂಡವು ಐದರಿಂದ ಆರು ವರ್ಷ ವಯಸ್ಸಿನ 9,357 ಮಕ್ಕಳಲ್ಲಿ ತೂಕವನ್ನು ನೋಡಿದರು ಮತ್ತು ಶಿಶುವಾಗಿದ್ದಾಗ ಪ್ರತಿಯೊಂದು ಮಗುವಿಗೂ ಯಾವ ರೀತಿಯ ಆಹಾರವನ್ನು ಕೊಡಲಾಗಿತ್ತೆಂಬುದನ್ನು ಕಂಡುಹಿಡಿದರು. ಫಲಿತಾಂಶವು ತೋರಿಸಿದ್ದೇನೆಂದರೆ, ಮೂರರಿಂದ ಐದು ತಿಂಗಳವರೆಗೆ ತಾಯಿಯ ಹಾಲನ್ನು ಕುಡಿದ ಮಕ್ಕಳು, ಶಾಲೆಯನ್ನು ಪ್ರವೇಶಿಸುವ ಸಮಯದೊಳಗೆ ಬೊಜ್ಜು ದೇಹವನ್ನು ಧರಿಸುವ ಸಾಧ್ಯತೆ 35 ಪ್ರತಿಶತದಷ್ಟು ಕಡಿಮೆಯಿತ್ತು. ಆದರೆ ಈ ರೀತಿಯಾಗಿ ಬೆಳೆಸಲ್ಪಡದ ಮಕ್ಕಳಲ್ಲಿ ಬೊಜ್ಜು ದೇಹದ ಸಾಧ್ಯತೆಯು ಹೆಚ್ಚಿತ್ತು. ಇನ್ನು ಹೇಳಬೇಕಾದರೆ, ಮಗುವಿಗೆ ಮೊಲೆಯುಣಿಸುವ ಕಾಲ ಹೆಚ್ಚಾದಂತೆ ಅವರು ಬೊಜ್ಜು ದೇಹವನ್ನು ಧರಿಸುವ ಸಾಧ್ಯತೆ ಕೂಡ ಕಡಿಮೆಯಾಗುವುದು. ಜೀವದ್ರವ್ಯಕ್ಕೆ ಸಹಾಯಕಾರಿಯಾಗಿರುವ ಈ ಉಪಯುಕ್ತ ಘಟಕಾಂಶವು ತಾಯಿಯ ಹಾಲಿನಲ್ಲಿದೆ ಎಂದು ಒಬ್ಬ ಸಂಶೋಧಕನು ಹೇಳುತ್ತಾನೆ.