ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇಹದ ಕೆಲವೊಂದು ಭಾಗಗಳಿಗೆ ಓಲೆಹಾಕುವುದರ ಕುರಿತೇನು?

ದೇಹದ ಕೆಲವೊಂದು ಭಾಗಗಳಿಗೆ ಓಲೆಹಾಕುವುದರ ಕುರಿತೇನು?

ಯುವ ಜನರು ಪ್ರಶ್ನಿಸುವುದು . . .

ದೇಹದ ಕೆಲವೊಂದು ಭಾಗಗಳಿಗೆ ಓಲೆಹಾಕುವುದರ ಕುರಿತೇನು?

‘ಜನರು ತಮ್ಮ ತುಟಿಗಳಿಗೆ ಮತ್ತು ದೇಹದ ಬೇರೆ ಬೇರೆ ಭಾಗಗಳಿಗೆಲ್ಲಾ ಓಲೆಗಳನ್ನು ಹಾಕಿಕೊಳ್ಳುವುದನ್ನು ನಾನು ನೋಡಿದಾಗ, ನನಗೂ ಹಾಗೆ ಹಾಕಿಕೊಳ್ಳಬೇಕೆನಿಸುತ್ತದೆ.’—ಲೀಸಾ.

ಲೀಸಾಗೆ ಮಾತ್ರವೇ ಅಲ್ಲ, ಅನೇಕ ಯುವ ಜನರಿಗೂ ಕೂಡ ಹಾಗೆ ಅನಿಸುತ್ತದೆ. ಅವರ ಸ್ಟೈಲ್‌ ಎಷ್ಟೊಂದು ಅತಿಯಾಗಿದೆಯೆಂದರೆ, ಕಿವಿ ಮತ್ತು ಮೂಗಿಗೆ ಮಾತ್ರವಲ್ಲ, ತಮ್ಮ ಹುಬ್ಬು, ನಾಲಿಗೆ, ತುಟಿ ಮತ್ತು ಹೊಕ್ಕಳಿಗೂ ಸಹ ಓಲೆಗಳನ್ನು ಹಾಕಿಕೊಳ್ಳುತ್ತಾರೆ. ಈಗೀಗ ಇದೊಂದು ದೊಡ್ಡ ಫ್ಯಾಷನ್‌ ಆಗಿಬಿಟ್ಟಿದೆ. *

ಉದಾಹರಣೆಗೆ, ಹದಿನಾರು ವರ್ಷ ಪ್ರಾಯದ ಹಿಥರ್‌ ತನ್ನ ಹೊಕ್ಕಳಿಗೆ ಉಂಗುರವನ್ನು ಹಾಕಿಕೊಳ್ಳಲು ಬಯಸುತ್ತಾಳೆ ಮತ್ತು ಅದರಿಂದ “ತಾನು ಇನ್ನೂ ಅಂದವಾಗಿ ಕಾಣುತ್ತೇನೆ” ಎಂಬುದು ಅವಳ ಅನಿಸಿಕೆ. ಹತ್ತೊಂಬತ್ತು ವರ್ಷ ಪ್ರಾಯದ ಜೋ ತನ್ನ ನಾಲಿಗೆಗೆ ಚಿನ್ನದ ಉಂಗುರವನ್ನು ಹಾಕಿದ್ದಾಳೆ. ಮತ್ತು ಇನ್ನೊಬ್ಬ ಹುಡುಗಿಯು ತನ್ನ ಹುಬ್ಬನ್ನು ಚುಚ್ಚಿ ಓಲೆಹಾಕಿಕೊಂಡಿದ್ದಾಳೆ, ಯಾಕೆಂದರೆ ಪ್ರತಿಯೊಬ್ಬರು ಅದನ್ನು ನೋಡಿ ಆಶ್ಚರ್ಯಪಡಬೇಕೆಂದು ಅವಳು ಬಯಸುತ್ತಾಳೆ.

ಓಲೆಗಳನ್ನು ಧರಿಸುವುದು ನಿನ್ನೆ-ಮೊನ್ನೆಯ ವಿಷಯವಲ್ಲ. ಉದಾಹರಣೆಗೆ, ರೆಬೆಕ್ಕ ಸಹ ಮೂಗುತಿಯನ್ನು ಧರಿಸಿದ್ದಳೆಂದು ಬೈಬಲ್‌ ಹೇಳುತ್ತದೆ. (ಆದಿಕಾಂಡ 24:22, 47) ಇಸ್ರಾಯೇಲ್ಯರು ಐಗುಪ್ತದಿಂದ ಹೊರಬಂದಾಗ ಸಹ ತಮ್ಮ ಕಿವಿಗಳಿಗೆ ಓಲೆಗಳನ್ನು ಹಾಕಿಕೊಂಡಿದ್ದರು. (ವಿಮೋಚನಕಾಂಡ 32:2) ಆ ರೀತಿಯ ಓಲೆಗಳನ್ನು ಅವರು ಕಿವಿಯನ್ನು ಚುಚ್ಚಿ ಹಾಕಿಕೊಳ್ಳುತ್ತಿದ್ದರೋ ಅಥವಾ ಹಾಗೆಯೇ ಹಾಕಿಕೊಳ್ಳುತ್ತಿದ್ದರೋ ಎಂಬುದು ನಮಗೆ ಗೊತ್ತಿಲ್ಲ. ಆದರೆ ಬೈಬಲ್‌ ಹೀಗೆ ಹೇಳುವುದಂತೂ ಖಂಡಿತ, ಅದೇನೆಂದರೆ ದಾಸರು ತಮ್ಮ ಯಾಜಮಾನರಿಗೆ ನಿಷ್ಠಾವಂತರಾಗಿದ್ದಾರೆಂಬುದನ್ನು ತೋರಿಸುವ ಗುರುತಾಗಿ ತಮ್ಮ ಕಿವಿಗಳನ್ನು ಚುಚ್ಚಿಕೊಳ್ಳುತ್ತಿದ್ದರು. (ವಿಮೋಚನಕಾಂಡ 21:6) ಪ್ರಾಚೀನ ದೇಶಗಳಲ್ಲಿಯೂ ಸಹ ದೇಹದ ಇತರ ಭಾಗಗಳನ್ನು ಚುಚ್ಚಿ ಓಲೆಹಾಕುವುದು ಸರ್ವಸಾಮಾನ್ಯವಾಗಿದೆ. ಉದಾಹರಣೆಗೆ, ಆ್ಯಸ್ಟಿಕ್‌ ಮತ್ತು ಮಾಯಾ ಜನರು ಧಾರ್ಮಿಕ ಕಾರಣಗಳಿಗಾಗಿ ತಮ್ಮ ನಾಲಿಗೆಯನ್ನು ಚುಚ್ಚಿ ಓಲೆಹಾಕಿಕೊಳ್ಳುತ್ತಾರೆ. ಇಂದು, ತುಟಿಗಳನ್ನು ಚುಚ್ಚಿ ಓಲೆಹಾಕಿಕೊಳ್ಳುವುದು ಆಫ್ರಿಕ ಮತ್ತು ದಕ್ಷಿಣ ಅಮೆರಿಕಾದ ಆದಿವಾಸಿಗಳಲ್ಲಿ ಸಾಮಾನ್ಯವಾಗಿದೆ. ಮೂಗುತಿಗಳನ್ನು ಹಾಕಿಕೊಳ್ಳುವುದು ಭಾರತೀಯರಲ್ಲಿ, ಪಾಕಿಸ್ತಾನದವರಲ್ಲಿ ಮತ್ತು ಪೆಸಿಫಿಕ್‌ ಸಾಗರದ ಕೆಲವು ದ್ವೀಪಗಳಲ್ಲಿರುವ ಜನರಲ್ಲಿಯೂ ಸರ್ವಸಾಧಾರಣವಾಗಿದೆ.

ಕೆಲವು ವರ್ಷಗಳ ಹಿಂದೆ, ಪಾಶ್ಚಿಮಾತ್ಯ ದೇಶಗಳಲ್ಲಿ ಸ್ತ್ರೀಯರು ತಮ್ಮ ಕಿವಿಗಳಿಗೆ ಮಾತ್ರ ಓಲೆಗಳನ್ನು ಹಾಕಿಕೊಳ್ಳುತ್ತಿದ್ದರು. ಆದರೆ ಇಂದು, ಗಂಡಸರೂ ಹೆಂಗಸರೂ ಮಾತ್ರವಲ್ಲ ಯುವ ಜನರು ಸಹ ದೇಹದ ಬೇರೆ ಬೇರೆ ಭಾಗಗಳಿಗೆ ಓಲೆಗಳನ್ನು ಹಾಕಿಕೊಳ್ಳುತ್ತಾರೆ.

ಅವರು ಏಕೆ ಓಲೆಗಳನ್ನು ಹಾಕಿಕೊಳ್ಳುತ್ತಾರೆ?

ಇದೊಂದು ಭಾರೀ ಬೇಡಿಕೆಯಲ್ಲಿರುವ ಜನಪ್ರಿಯ ಫ್ಯಾಷನ್‌ ಆಗಿದೆಯೆಂಬ ಕಾರಣಕ್ಕಾಗಿ ಅನೇಕರು ಇಂದು ತಮ್ಮ ದೇಹದ ಕೆಲವೊಂದು ಭಾಗಗಳಿಗೆ ಓಲೆಗಳನ್ನು ಹಾಕಿಕೊಳ್ಳುತ್ತಾರೆ. ಇದು ತಮ್ಮ ರೂಪವನ್ನು ಇನ್ನಷ್ಟು ಅಂದಗೊಳಿಸುತ್ತದೆ ಎಂದು ಕೆಲವರು ಹೇಳುತ್ತಾರೆ. ನಿಶ್ಚಯವಾಗಿಯೂ, ಪ್ರಮುಖ ಮಾಡೆಲ್‌ಗಳು, ಕ್ರೀಡಾಸ್ಟಾರ್‌ಗಳು ಮತ್ತು ಜನಪ್ರಿಯ ಸಂಗೀತಗಾರರು ತಮ್ಮ ದೇಹದ ವಿವಿಧ ಭಾಗಗಳಲ್ಲಿ ಓಲೆಗಳನ್ನು ಧರಿಸುತ್ತಿರುವುದರಿಂದ ಈ ಫ್ಯಾಷನ್‌ ಇನ್ನಷ್ಟು ಜನಪ್ರಿಯವಾಗಿದೆ. ಕೆಲವು ಯುವಕರಾದರೋ, ಸ್ವಾತಂತ್ರ್ಯ ಮನೋಭಾವವನ್ನು ತೋರಿಸಲು, ತಾವು ಒಬ್ಬ ವಿಶಿಷ್ಟ ವ್ಯಕ್ತಿಯೆಂದು ತೋರಿಸಲು ಅಂದರೆ ತಾವು ಇತರರಿಗಿಂತ ಭಿನ್ನರಾಗಿದ್ದೇವೆಂಬುದನ್ನು ತೋರಿಸಲಿಕ್ಕಾಗಿ ದೇಹದ ಕೆಲವು ಭಾಗಗಳನ್ನು ಚುಚ್ಚಿ ಓಲೆಗಳನ್ನು ಹಾಕಿಕೊಳ್ಳುತ್ತಾರೆ. ಜೋನ್‌ ಲಿಯೋ ಎಂಬ ಪತ್ರಿಕೋದ್ಯಮಿಯು ಗಮನಿಸುವುದು: “ದೇಹದ ಕೆಲವೊಂದು ಭಾಗಗಳನ್ನು ಪದೇ ಪದೇ ಚುಚ್ಚಿಸಿಕೊಂಡು ಓಲೆಗಳನ್ನು ಹಾಕಿಕೊಳ್ಳುವುದರ ಹಿಂದೆ ಇರುವ ಮುಖ್ಯ ಹೇತುವು, ಹೆತ್ತವರನ್ನು ರೇಗಿಸುವುದು ಮತ್ತು ಮಧ್ಯಮ ವರ್ಗದವರನ್ನು ಆಘಾತಕ್ಕೆ ಒಳಪಡಿಸುವುದು ಆಗಿದೆ.” ಈ ರೀತಿ ಚುಚ್ಚಿಸಿಕೊಳ್ಳುವುದರ ಹಿಂದೆ ಅತೃಪ್ತಿಯ ಭಾವನೆ, ಅಸಮ್ಮತಿ, ಉಲ್ಲಂಘನೆ ಮತ್ತು ದಂಗೆಯು ಸಹ ಇದೆ ಎಂದು ತೋರುತ್ತದೆ.

ಇನ್ನೂ ಕೆಲವರು ಆಳವಾದ ಮಾನಸಿಕ ಅಥವಾ ಭಾವನಾತ್ಮಕ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ತಮ್ಮ ದೇಹದ ಕೆಲವು ಭಾಗಗಳನ್ನು ಚುಚ್ಚಿಕೊಳ್ಳುತ್ತಾರೆ. ಉದಾಹರಣೆಗೆ, ಇದು ತಮ್ಮ ಸ್ವ-ಗೌರವವನ್ನು ಹೆಚ್ಚಿಸುತ್ತದೆಂದು ಕೆಲವು ಯುವ ಜನರು ನೆನಸುತ್ತಾರೆ. ದುರುಪಚಾರಕ್ಕೆ ಬಲಿಯಾಗಿರುವ ಮಕ್ಕಳಲ್ಲಿ ಕೆಲವರು ಈ ರೀತಿಯಲ್ಲಿ ದೇಹದ ಕೆಲವೊಂದು ಭಾಗಗಳಿಗೆ ಓಲೆಹಾಕುವುದರಿಂದ ತಮ್ಮ ದೇಹದ ಮೇಲೆ ತಾವು ಹತೋಟಿಸಾಧಿಸುತ್ತಿದ್ದೇವೆಂದು ಭಾವಿಸುತ್ತಾರೆ.

ಆರೋಗ್ಯ ಅಪಾಯಗಳು

ಆದರೆ ಈ ರೀತಿಯಲ್ಲಿ ದೇಹದ ಕೆಲವು ಭಾಗಗಳನ್ನು ಚುಚ್ಚಿ ಓಲೆಹಾಕಿಕೊಳ್ಳುವುದು ಸುರಕ್ಷಿತವಾಗಿದೆಯೋ? ಇವುಗಳಲ್ಲಿ ಕೆಲವು ಸುರಕ್ಷಿತವಾಗಿಲ್ಲವೆಂದು ಅನೇಕ ವೈದ್ಯಕೀಯ ಚಿಕಿತ್ಸಕರು ಹೇಳುತ್ತಾರೆ. ನಿಮ್ಮ ದೇಹದ ಒಂದು ಭಾಗವನ್ನು ನೀವೇ ಚುಚ್ಚಿಸಿಕೊಂಡಲ್ಲಿ ಅಪಾಯವಿರುತ್ತದೆ ಎಂಬುದಕ್ಕೆ ಸಂದೇಹವಿಲ್ಲ. ಹಾಗೆಯೇ ಚುಚ್ಚುವಿಕೆಯನ್ನು ವೃತ್ತಿಯಾಗಿ ಮಾಡಿಕೊಂಡಿರುವ ಚಿಕಿತ್ಸಕರಲ್ಲಿಗೆ ಹೋಗುವುದರಿಂದಲೂ ಅಪಾಯಗಳು ಇವೆ. ಈ ಚಿಕಿತ್ಸಕರಲ್ಲಿ ಅನೇಕರು ಅಷ್ಟೊಂದು ಉತ್ತಮವಾದ ರೀತಿಯಲ್ಲಿ ತರಬೇತಿಯನ್ನು ಪಡೆದಿರುವುದಿಲ್ಲ. ಅವರು ಈ ಕೌಶಲ್ಯವನ್ನು ತಮ್ಮ ಸ್ನೇಹಿತರಿಂದ, ಪತ್ರಿಕೆಗಳಿಂದ ಅಥವಾ ವಿಡಿಯೊಗಳಿಂದ ಕಲಿತುಕೊಂಡವರಾಗಿರುತ್ತಾರೆ. ಇದರ ಪರಿಣಾಮವಾಗಿ, ಅವರು ಶುಚಿಯಾದ ವಿಧಾನಗಳನ್ನು ಬಳಸಲಿಕ್ಕಿಲ್ಲ ಅಥವಾ ಚುಚ್ಚುವುದರಲ್ಲಿರುವ ಅಪಾಯಗಳನ್ನು ಸಹ ತಿಳಿದುಕೊಂಡಿರಲಿಕ್ಕಿಲ್ಲ. ಅಷ್ಟೇ ಅಲ್ಲ, ದೇಹದ ಭಾಗವೊಂದನ್ನು ಚುಚ್ಚಿ ಅದಕ್ಕೆ ಓಲೆಗಳನ್ನು ಹಾಕಿಕೊಳ್ಳುವ ಅನೇಕರಿಗೆ ಅಂಗವಿಚ್ಛೇದದ ಕುರಿತು ತಿಳುವಳಿಕೆ ಸಹ ಇರುವುದಿಲ್ಲ. ಇದು ಗಂಭೀರವಾದ ಸಮಸ್ಯೆಯಾಗಿದೆ, ಯಾಕೆಂದರೆ ತಪ್ಪಾದ ಸ್ಥಳದಲ್ಲಿ ತೂತು ಮಾಡುವುದರಿಂದ ಅತಿರೇಕ ರಕ್ತಸ್ರಾವ ಉಂಟಾಗಬಲ್ಲದು. ಚುಚ್ಚಿಸಿಕೊಳ್ಳುವಾಗ ನರಕ್ಕೆ ತಾಗಿದರೆ ಶಾಶ್ವತ ಹಾನಿಯೂ ಸಹ ಉಂಟಾಗಸಾಧ್ಯವಿದೆ.

ಇನ್ನೊಂದು ಗಂಭೀರವಾದ ಅಪಾಯವು ಸೋಂಕು ತಗಲುವುದಾಗಿದೆ. ಶುದ್ಧವಲ್ಲದ ಸಲಕರಣೆಯು ಯಕೃತ್ತಿನ ಉರಿಯೂತ, ಏಡ್ಸ್‌, ಕ್ಷಯರೋಗ ಮತ್ತು ಧನುರ್ವಾತ ಮುಂತಾದ ಮಾರಕ ಕಾಯಿಲೆಗಳನ್ನು ರವಾನಿಸಬಲ್ಲದು. ಶುದ್ಧವಾದ ಸಲಕರಣೆಗಳನ್ನು ಉಪಯೋಗಿಸಿ ಚುಚ್ಚಿಸಿಕೊಂಡರೂ ಸಹ, ಓಲೆಗಳನ್ನು ಹಾಕಿದ ನಂತರ ಜಾಗ್ರತೆ ವಹಿಸಬೇಕಾಗುತ್ತದೆ. ಉದಾಹರಣೆಗೆ, ಹೊಕ್ಕಳನ್ನು ಚುಚ್ಚಿ ಅಲ್ಲಿ ಓಲೆಯನ್ನು ಹಾಕುವುದರಿಂದ ನೋವಾಗುತ್ತದೆ, ಯಾಕೆಂದರೆ ಬಟ್ಟೆಯು ಅದಕ್ಕೆ ಯಾವಾಗಲೂ ತಾಗುತ್ತಾ ಇರುವುದರಿಂದ ಅಲ್ಲಿ ಗಾಯವಾಗುತ್ತದೆ. ಹೀಗೆ, ಆ ಗಾಯ ಗುಣವಾಗಲು ಒಂಭತ್ತು ತಿಂಗಳುಗಳಾದರೂ ಬೇಕಾಗುತ್ತದೆ.

ಒಬ್ಬನ ಮೂಗು ಅಥವಾ ಕಿವಿಗಳ ಮೃದು ಎಲುಬಿಗೆ ಓಲೆಗಳನ್ನು ಹಾಕುವುದು, ಕಿವಿಯ ಹೊರಭಾಗವನ್ನು ಚುಚ್ಚಿ ಅದಕ್ಕೆ ಕಿವಿಯೋಲೆಯನ್ನು ಹಾಕುವುದಕ್ಕಿಂತ ಹೆಚ್ಚು ಅಪಾಯಕಾರಿಯಾಗಿದೆ. ಫೇಸಿಯಲ್‌ ಪ್ಲಾಸ್ಟಿಕ್‌ ಆ್ಯಂಡ್‌ ರೀಕನ್ಸ್‌ಟ್ರಿಕ್ಟಿವ್‌ ಸರ್ಜರಿ ಎಂಬ ಅಮೆರಿಕನ್‌ ಸಂಸ್ಥೆಯಿಂದ ಹೊರಡಿಸಿದ ವಾರ್ತಾಪತ್ರಿಕೆಯು ಹೀಗೆ ವಿವರಿಸುತ್ತದೆ: “ಕಿವಿಯ ಮೇಲ್ಭಾಗದ ಸುತ್ತಲೂ ಓಲೆ ಹಾಕಲು ಮಾಡಲಾಗಿರುವ ಒಂದಕ್ಕಿಂತ ಹೆಚ್ಚಿನ ತೂತುಗಳು ಮುಖ್ಯವಾಗಿ ಅಪಾಯಕಾರಿಯಾಗಿರುತ್ತವೆ. ಯಾಕೆಂದರೆ ಕಿವಿಯ ಸಂಪೂರ್ಣ ಮೇಲ್ಭಾಗದ ತಿರುವನ್ನು ಗಾಯಗೊಳಿಸುವುದರಿಂದ ಗಂಭೀರವಾದ ಸೋಂಕುಗಳು ಉಂಟಾಗಬಲ್ಲವು. ಉಂಗುರವನ್ನು ಮೂಗಿಗೆ ಧರಿಸುವುದರಿಂದ ಸಹ ಬಹಳಷ್ಟು ಅಪಾಯವಿದೆ, ಯಾಕೆಂದರೆ ಈ ಭಾಗಗಳಲ್ಲಿ ಮಾಡಲಾಗುವ ತೂತಿನಿಂದ ಸುತ್ತಮುತ್ತಲಿರುವ ರಕ್ತನಾಳಗಳಿಗೆ ಸೋಂಕು ತಗಲಿ, ನಂತರ ಈ ಸೋಂಕು ಮಿದುಳಿಗೆ ಹಬ್ಬಲುಸಾಧ್ಯವಿದೆ.” ನ್ಯೂಸ್‌ಪತ್ರಿಕೆಯು ಹೀಗೆ ಮುಕ್ತಾಯಗೊಳಿಸುತ್ತದೆ: “ನಿಜ ಹೇಳಬೇಕೆಂದರೆ, ಕಿವಿಯ ಹೊರಭಾಗಕ್ಕೆ ಮಾತ್ರ ಕಿವಿಯೋಲೆಯನ್ನು ಹಾಕತಕ್ಕದ್ದು.”

ಇನ್ನಿತರ ಅಪಾಯಗಳು ಅಸಹ್ಯಕಲೆಗಳಾಗಿವೆ ಮತ್ತು ಓಲೆಗಳನ್ನು ಚುಚ್ಚಿದ ಕಾರಣದಿಂದಾಗಿ ಅಲರ್ಜಿಗೆ ಸಂಬಂಧಿಸಿದ ಕೆಲವು ಅಡ್ಡಪರಿಣಾಮಗಳು ಉಂಟಾಗುವವು. ಬಹಳ ಸೂಕ್ಷ್ಮವಾದ ಭಾಗಗಳಾಗಿರುವ ಮೊಲೆ ತೊಟ್ಟುಗಳಿಗೆ ಓಲೆಗಳನ್ನು ಹಾಕಿದರೆ ಮತ್ತು ಅದು ಎಲ್ಲಿಯಾದರೂ ಬಟ್ಟೆಗೆ ತಾಗಿದರೆ ಅಥವಾ ಬಟ್ಟೆಯಿಂದ ಎಳೆಯಲ್ಪಡುವುದಾದರೆ, ಅಂತಹ ಚುಚ್ಚುವಿಕೆಯು ಸುಲಭವಾಗಿ ಆ ಭಾಗದ ಮಾಂಸವನ್ನು ಹರಿಯಬಲ್ಲದು. ಯುವತಿಯ ಸ್ತನದಲ್ಲಿ ಇರುವ ಅಂಗಾಂಶವು ಗಾಯಗೊಂಡಲ್ಲಿ ಅದು ಹಾಲಿನ ನಾಳವನ್ನು ತಡೆಗಟ್ಟಬಲ್ಲದು ಮತ್ತು ಅವಳು ಚಿಕಿತ್ಸೆಯನ್ನು ಪಡೆದುಕೊಳ್ಳದಿದ್ದಲ್ಲಿ, ಮುಂದಕ್ಕೆ ಮಗುವಿಗೆ ಮೊಲೆಯುಣಿಸಲು ಅವಳಿಗೆ ಕಷ್ಟವಾಗುವುದು ಮಾತ್ರವಲ್ಲ ಅಸಾಧ್ಯವಾಗಲೂಬಹುದು.

ಬಾಯಿಯ ಸುತ್ತಲು ಓಲೆಯನ್ನು ಹಾಕುವ ಪ್ರಕ್ರಿಯೆಯು ಸಾರ್ವಜನಿಕ ಆರೋಗ್ಯ ಅಪಾಯವಾಗಿದೆಯೆಂದು ಅಮೆರಿಕನ್‌ ಡೆಂಟಲ್‌ ಸಂಘವು ಇತ್ತೀಚೆಗಷ್ಟೇ ಹೇಳಿದೆ. ಓಲೆಯನ್ನು ನುಂಗಿದ ನಂತರ ಉಸಿರಾಟ ನಿಲ್ಲುವುದು, ನಾಲಿಗೆಯು ರುಚಿಯನ್ನು ಕಳೆದುಕೊಳ್ಳುವುದು ಮತ್ತು ಜಡವಾಗುವುದು, ದೀರ್ಘ ಸಮಯದ ವರೆಗೆ ರಕ್ತಸ್ರಾವವಾಗುವುದು, ಒಡೆದ ಅಥವಾ ಮುರಿದ ಹಲ್ಲುಗಳು, ಬಾಯಿಂದ ವಿಪರೀತವಾಗಿ ಜೊಲ್ಲು ಸುರಿಯುವುದು, ಊಟದ ಸಮಯದಲ್ಲಿ ಬಹಳ ಜೊಲ್ಲುಸುರಿತ, ಒಸಡುಗಳ ಹಾನಿ, ಮಾತಿನ ಅಡಚಣೆ ಮಾತ್ರವಲ್ಲ ಉಸಿರಾಟ, ಅಗಿಯುವಿಕೆ ಮತ್ತು ನುಂಗುವಿಕೆಯಲ್ಲಿ ತೊಂದರೆಗಳೇ ಮುಂತಾದ ಹೆಚ್ಚಿನ ಅಪಾಯಗಳು ಬಾಯಿಯ ಸುತ್ತಲಿನ ಭಾಗಗಳಲ್ಲಿ ಚುಚ್ಚುವುದರ ಮೂಲಕ ಉಂಟಾಗುತ್ತವೆ. ಕೆಂಡ್ರ ಎಂಬ ಹೆಸರಿನ ಒಬ್ಬಾಕೆ ಯುವ ಸ್ತ್ರೀ, ತನ್ನ ನಾಲಿಗೆಯನ್ನು ಚುಚ್ಚಿದಾಗ, ಅದು “ಬಲೂನಿನಂತೆ ಊದಿಕೊಂಡಿತು.” ಚುಚ್ಚುವವನು ಗಲ್ಲಕ್ಕಾಗಿಯೇ ರೂಪಿಸಲಾದ ಓಲೆಯನ್ನು ಹಾಕಿದಾಗಲಂತೂ ವಿಷಯವು ಇನ್ನಷ್ಟು ಗಂಭೀರವಾಯಿತು ಮತ್ತು ಇದು ಕೆಂಡ್ರಳ ನಾಲಿಗೆಯ ಮಧ್ಯೆ ತೂರಿತು ಮತ್ತು ನಾಲಿಗೆಯ ಕೆಳಗಿರುವ ಅಂಗಾಂಶವನ್ನು ಕತ್ತರಿಸಿತು. ಅವಳು ಹೆಚ್ಚುಕಡಿಮೆ ಮಾತಾಡುವ ಸಾಮರ್ಥ್ಯವನ್ನು ಕಳೆದುಕೊಂಡಳು.

ತಮ್ಮ ದೇಹಗಳನ್ನು ಹಾನಿಗೊಳಪಡಿಸಬಾರದೆಂದು ಮತ್ತು ಅದನ್ನು ಸ್ವತಃ ಘಾಸಿಮಾಡಿಕೊಳ್ಳಬಾರದೆಂದು ಸಹ ದೇವರು ತನ್ನ ಜನರಾದ ಇಸ್ರಾಯೇಲ್ಯರಿಗೆ ಕಲಿಸಿದ್ದನು. (ಯಾಜಕಕಾಂಡ 19:28; 21:5; ಧರ್ಮೋಪದೇಶಕಾಂಡ 14:1) ಇಂದಿರುವ ಕ್ರೈಸ್ತರು ಮೋಶೆಯ ಧರ್ಮಶಾಸ್ತ್ರದ ಕೆಳಗೆ ಇಲ್ಲದಿರುವುದಾದರೂ, ದೇಹದ ಕೆಲವೊಂದು ಭಾಗಗಳನ್ನು ಚುಚ್ಚಿ ಓಲೆಗಳನ್ನು ಹಾಕಿ ಅದನ್ನು ಹಾನಿಮಾಡಿಕೊಳ್ಳಬಾರದೆಂಬ ಸಲಹೆಯನ್ನು ಅವರು ಈಗಲೂ ಪಾಲಿಸಬೇಕು. (ರೋಮಾಪುರ 12:1) ಹಾಗಾದರೆ, ಅನಾವಶ್ಯಕವಾಗಿ ಉಂಟಾಗಬಹುದಾದ ಆರೋಗ್ಯ ಅಪಾಯಗಳನ್ನು ತಪ್ಪಿಸಲು ನಾವು ಕ್ರಿಯೆಗೈಯಬೇಕಾಗಿರುವುದು ಜಾಣ್ಮೆಯ ವಿಷಯವಲ್ಲವೇ? ಆದಾಗ್ಯೂ, ಆರೋಗ್ಯದ ಹೊರತು ನೀವು ಪರಿಗಣಿಸಬೇಕಾದ ಬೇರೆ ಅಂಶಗಳು ಸಹ ಇವೆ.

ಜನರು ನಿಮ್ಮ ಬಗ್ಗೆ ಏನು ತಿಳಿದುಕೊಳ್ಳಬಹುದು?

ದೇಹದ ಕೆಲವು ಭಾಗಗಳನ್ನು ಚುಚ್ಚಿಸಿಕೊಂಡು ಓಲೆಗಳನ್ನು ಹಾಕಿಕೊಳ್ಳುವುದರ ಬಗ್ಗೆ ಬೈಬಲು ಯಾವ ನಿರ್ದಿಷ್ಟ ಆಜ್ಞೆಯನ್ನೂ ಕೊಡುವುದಿಲ್ಲ. ಆದರೆ ‘ಮಾನಸ್ಥೆಯರಾಗಿಯೂ ಮರ್ಯಾದೆಗೆ ತಕ್ಕಂತೆಯೂ’ ನಡೆಯಬೇಕೆಂಬ ಉತ್ತೇಜನವನ್ನು ಅದು ಖಂಡಿತವಾಗಿಯೂ ಕೊಡುತ್ತದೆ. (1 ತಿಮೊಥೆಯ 2:9) ಲೋಕದ ಒಂದು ಕಡೆಯಲ್ಲಿ ಆಡಂಬರವಿಲ್ಲದ್ದಾಗಿ ಪರಿಗಣಿಸಲ್ಪಡುವ ವಿಷಯವು ಇನ್ನೊಂದು ಕಡೆಯಲ್ಲಿ ಅಂದರೆ, ನೀವು ವಾಸಿಸುತ್ತಿರುವ ಕ್ಷೇತ್ರದಲ್ಲಿ ಬೇರೆ ರೀತಿಯಲ್ಲಿ ದೃಷ್ಟಿಸಲ್ಪಡಬಹುದು. ಹಾಗಾಗಿ, ಜನರ ದೃಷ್ಟಿಕೋನಕ್ಕೆ ನಾವು ನಮ್ಮ ಗಮನವನ್ನು ಕೊಡಬೇಕು. ದೃಷ್ಟಾಂತಕ್ಕಾಗಿ, ಸ್ತ್ರೀಯರು ಕಿವಿಯೋಲೆಯನ್ನು ಹಾಕಿಕೊಳ್ಳುವುದು ಲೋಕದ ಒಂದು ಭಾಗದಲ್ಲಿ ಸ್ವೀಕರಣೀಯವಾಗಿರುತ್ತದಾದರೂ ಇನ್ನೊಂದು ದೇಶದಲ್ಲಿ ಅಥವಾ ಸಂಸ್ಕೃತಿಯಲ್ಲಿ ಅದನ್ನು ಕೆಲವರು ಉಲ್ಲಂಘಿಸಬಹುದು.

ದೇಹದ ಕೆಲವೊಂದು ಭಾಗಗಳಿಗೆ ಓಲೆಗಳನ್ನು ಹಾಕಿಕೊಳ್ಳುವುದು ಪ್ರಸಿದ್ಧ ವ್ಯಕ್ತಿಗಳ ಮಧ್ಯೆ ಜನಪ್ರಿಯವಾಗಿದೆ. ಆದರೂ ಸಾಮಾನ್ಯವಾಗಿ ಪುರುಷರು ಕಿವಿಯೋಲೆಯನ್ನು ಹಾಕಿಕೊಳ್ಳುವುದು ಈಗೀಗ ಪಶ್ಚಿಮಭಾಗದಲ್ಲೆಲ್ಲಾ ಜನಪ್ರಿಯತೆಯನ್ನು ಪಡೆದುಕೊಳ್ಳಲು ಸೋತಿದೆ. ಪಶ್ಚಿಮ ದೇಶದಲ್ಲಿ ಕೇವಲ ಸೆರೆಮನೆವಾಸಿಗಳು, ಮೋಟಾರ್‌ಸೈಕಲ್‌ ಕದಿಯುವ ತಂಡಗಳು, ಪಂಕ್‌ ರಾಕ್‌ ಸಂಗೀತಗಾರರು ಮತ್ತು ಸಲಿಂಗಕಾಮದ ಮೂಲಕ ಲೈಂಗಿಕ ಪೀಡೆಯನ್ನು ಕೊಡುವ ಉಪಸಂಸ್ಕೃತಿಯ ಸದಸ್ಯರು ದೇಹದ ಬೇರೆ ಬೇರೆ ಭಾಗಗಳಿಗೆ ಓಲೆಗಳನ್ನು ಹಾಕಿಕೊಳ್ಳುವುದು ಒಂದು ದೊಡ್ಡ ಫ್ಯಾಷನ್‌ ಆಗಿ ವೀಕ್ಷಿಸುತ್ತಾರೆ. ಆದುದರಿಂದಲೇ, ಪಾಶ್ಚಿಮಾತ್ಯ ದೇಶದವರು ಮೇಲೆ ತಿಳಿಸಿದ ಗುಂಪಿನವರಂತಾಗಲು ಬಯಸದಿದ್ದ ಕಾರಣದಿಂದಾಗಿ ಇಂತಹ ಫ್ಯಾಷನ್‌ನಿಂದ ದೂರವಿರುತ್ತಾರೆ. ಅನೇಕರಿಗೆ ದೇಹದ ಭಾಗವೊಂದನ್ನು ಚುಚ್ಚಿ ಅದಕ್ಕೆ ಓಲೆಗಳನ್ನು ಹಾಕಿಕೊಳ್ಳುವುದು, ವಕ್ರವಾದ ಮತ್ತು ದಂಗೆಯ ಮಾರ್ಗದಲ್ಲಿ ಇದ್ದಾರೆಂಬ ಅರ್ಥವನ್ನು ಕೊಡುತ್ತದೆ. ಅದು ಒಂದು ಆಘಾತಕಾರಿ ಸಂಗತಿಯಾಗಿಯೂ ಮಾತ್ರವಲ್ಲ ಅಸಮಂಜಸವಾಗಿರುವ ಸಂಗತಿಯಾಗಿಯೂ ಸಹ ಇದೆಯೆಂಬ ದೃಷ್ಟಿಕೋನವು ಅನೇಕ ಜನರಿಗಿದೆ. ಆಶ್‌ಲೆ ಎಂಬ ಹೆಸರಿನ ಕ್ರೈಸ್ತ ಹುಡುಗಿಯು ಹೇಳುವುದು: “ನನ್ನ ತರಗತಿಯಲ್ಲಿರುವ ಈ ಹುಡುಗನು ಈಗಷ್ಟೇ ತನ್ನ ಮೂಗಿಗೆ ಓಲೆಯನ್ನು ಹಾಕಿದ್ದಾನೆ. ಇದು ಅವನಿಗೆ ಬಹಳ ಒಳ್ಳೆಯದಾಗಿ ತೋರುತ್ತದೆ. ನನಗಂತೂ ಅದು ತೀರ ಅಸಹ್ಯವೆನಿಸುತ್ತದೆ!”

ಒಂದು ಪ್ರಸಿದ್ಧ ಅಮೆರಿಕದ ಮಳಿಗೆಯು, ಗ್ರಾಹಕರೊಂದಿಗೆ ನೇರವಾದ ಸಂಪರ್ಕವನ್ನಿಡುವ ನೌಕರರು ಒಂದು ಕಿವಿಗೆ ಕೇವಲ ಒಂದೇ ಕಿವಿಯೋಲೆಯನ್ನು ಮತ್ತು ದೇಹದ ಬೇರೆ ಭಾಗಗಳಲ್ಲಿ ಓಲೆಗಳನ್ನು ಹಾಕುವುದನ್ನು ನಿಷೇಧಿಸುವ ನಿಯಮವನ್ನು ಮಾಡಿದ್ದರಲ್ಲಿ ಯಾವ ಆಶ್ಚರ್ಯವೂ ಇಲ್ಲ. ಒಂದು ಕಂಪೆನಿಯ ಸ್ತ್ರೀ ಪ್ರತಿನಿಧಿಯು ವಿವರಿಸುವುದು: “ಗ್ರಾಹಕರು ಇದಕ್ಕೆ ಹೇಗೆ ಪ್ರತಿಕ್ರಿಯೆಯನ್ನು ತೋರಿಸಬಹುದು ಎಂಬುದನ್ನು ನೀವು ಈಗಲೇ ಹೇಳಲಾರಿರಿ.” ಇದೇ ರೀತಿಯಲ್ಲಿ, ಕಾಲೇಜ್‌ ಹುಡುಗರು ಉದ್ಯೋಗಕ್ಕಾಗಿ ಅರ್ಜಿಯನ್ನು ಸಲ್ಲಿಸಲು ಬರುವಾಗ, “ಯಾವುದೇ ಕಿವಿಯೋಲೆಗಳನ್ನು ಅಥವಾ ದೇಹದ ಇತರ ಭಾಗಗಳನ್ನು ಚುಚ್ಚಿ ಓಲೆಗಳನ್ನು ಹಾಕಬಾರದು; ಸ್ತ್ರೀಯರು . . . ಯಾವುದೇ ರೀತಿಯ ಮೂಗುತಿಗಳನ್ನು ಧರಿಸಬಾರದು,” ಎಂಬ ಸಲಹೆಯನ್ನು ಉದ್ಯೋಗ ಸಲಹಾಗಾರರು ಕೊಡುತ್ತಾರೆ.

ಯುವ ಕ್ರೈಸ್ತರು ಇತರರಿಗೆ ಒಳ್ಳೆಯ ಅಭಿಪ್ರಾಯವನ್ನು ಕೊಡುವುದರ ಕುರಿತು ಚಿಂತಿತರಾಗಿರಬೇಕು. ಅದರಲ್ಲೂ ಮುಖ್ಯವಾಗಿ ಸೌವಾರ್ತಿಕ ಕೆಲಸದಲ್ಲಿ ತೊಡಗಿರುವಾಗ ಅವರು ಆದರ್ಶಪ್ರಾಯರಾಗಿರಬೇಕು. “ನಿಂದೆಗೆ ಅವಕಾಶಕೊಡದೆ ಎಲ್ಲಾ ಸಂಗತಿಗಳಲ್ಲಿ ದೇವರ ಸೇವಕರೆಂದು ನಮ್ಮನ್ನು ಸಮ್ಮತರಾಗ ಮಾಡಿ”ಕೊಳ್ಳಲು ನಾವು ಬಯಸುತ್ತೇವೆ. (2 ಕೊರಿಂಥ 6:3, 4) ದೇಹದ ಕೆಲವು ಭಾಗಗಳನ್ನು ಚುಚ್ಚಿಸಿಕೊಳ್ಳುವುದರ ಕುರಿತು ನಿಮಗೆ ವೈಯಕ್ತಿಕವಾಗಿ ಯಾವುದೇ ಅಭಿಪ್ರಾಯವಿರಲಿ, ನಿಮ್ಮ ತೋರಿಕೆಯು ನಿಮ್ಮ ಮನೋಭಾವನೆ ಮತ್ತು ಜೀವನ ಶೈಲಿಯ ಕುರಿತು ಖಂಡಿತವಾಗಿಯೂ ಏನನ್ನಾದರೂ ಹೇಳುತ್ತದೆ. ಜನರು ನಿಮ್ಮ ಬಗ್ಗೆ ಯಾವ ಅಭಿಪ್ರಾಯ ಕೊಡಬೇಕೆಂದು ನೀವು ಬಯಸುತ್ತೀರಿ?

ಕೊನೆಯಲ್ಲಿ, ನೀವು ಮತ್ತು ನಿಮ್ಮ ಹೆತ್ತವರು ಸಹ ಈ ವಿಷಯದಲ್ಲಿ ಏನು ಮಾಡಲಿರುವಿರೆಂಬುದನ್ನು ನಿರ್ಧರಿಸಬೇಕು. ಬೈಬಲಿನ ಸ್ವಸ್ಥಕರವಾದ ಸಲಹೆಯು ಹೀಗಿದೆ: “ಲೋಕವು ನಿಮ್ಮನ್ನು ಅದರ ಅಚ್ಚಿನೊಳಗೆ ತುರುಕಿಸುವಂತೆ ಬಿಡಬೇಡಿರಿ.” (ರೋಮಾಪುರ 12:2, ಫಿಲಿಪ್ಸ್‌) ಎಷ್ಟೆಂದರೂ, ಅದರಿಂದಾಗುವ ಪರಿಣಾಮಗಳೊಂದಿಗೆ ಜೀವಿಸಬೇಕಾಗಿರುವವರು ನೀವೇ ಆಗಿದ್ದೀರಿ.

[ಪಾದಟಿಪ್ಪಣಿ]

^ ಈ ಲೇಖನದಲ್ಲಿ, ಸಾಮಾನ್ಯವಾಗಿ ಅನೇಕ ದೇಶಗಳಲ್ಲಿ ಸ್ವೀಕರಿಸಲಾಗುವ ಮತ್ತು ಸಭ್ಯವೆಂದು ಎಣಿಸಲ್ಪಡುವ ಕಿವಿ ಮತ್ತು ಮೂಗಿಗೆ ಹಾಕುವ ಓಲೆಗಳ ಕುರಿತು ನಾವು ಉಲ್ಲೇಖಿಸುವುದಿಲ್ಲ. ಅದರ ಬದಲು, ಇಂದು ಅತಿ ಫ್ಯಾಷನ್‌ ಆಗಿಬಿಟ್ಟಿರುವ, ದೇಹದ ಬೇರೆ ಬೇರೆ ಭಾಗಗಳಿಗೆ ಹಾಕುವ ಓಲೆಗಳ ಕುರಿತು ನಾವು ಉಲ್ಲೇಖಿಸುತ್ತಿದ್ದೇವೆ.—ಮೇ 15, 1974ರ ದ ವಾಚ್‌ಟವರ್‌ ಪತ್ರಿಕೆಯ ಪುಟ 318-19ನ್ನು ನೋಡಿರಿ.

[ಪುಟ 14ರಲ್ಲಿರುವ ಚಿತ್ರ]

ದೇಹದ ಕೆಲವು ಭಾಗಗಳನ್ನು ಚುಚ್ಚಿ ಓಲೆಹಾಕಿಕೊಳ್ಳುವುದು ಯುವಕರ ಮಧ್ಯೆ ದೊಡ್ಡ ಫ್ಯಾಷನ್‌ ಆಗಿಬಿಟ್ಟಿದೆ