ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಜ ನಂಬಿಕೆ—ಅದು ಏನು?

ನಿಜ ನಂಬಿಕೆ—ಅದು ಏನು?

ಬೈಬಲಿನ ದೃಷ್ಟಿಕೋನ

ನಿಜ ನಂಬಿಕೆ—ಅದು ಏನು?

“ಆದರೆ ನಂಬಿಕೆಯಿಲ್ಲದೆ ದೇವರನ್ನು ಮೆಚ್ಚಿಸುವದು ಅಸಾಧ್ಯ; ದೇವರ ಬಳಿಗೆ ಬರುವವನು ದೇವರು ಇದ್ದಾನೆ, ಮತ್ತು ತನ್ನನ್ನು ಹುಡುಕುವವರಿಗೆ ಪ್ರತಿಫಲವನ್ನು ಕೊಡುತ್ತಾನೆ ಎಂದು ನಂಬುವದು ಅವಶ್ಯ.”—ಇಬ್ರಿಯ 11:6.

ನಂಬಿಕೆ ಅಂದರೇನು? ದೇವರ ಅಸ್ತಿತ್ವದಲ್ಲಿ ಸ್ಪಷ್ಟವಾದ ಪುರಾವೆಯಿಲ್ಲದೆ ಆತನಲ್ಲಿ ಶ್ರದ್ಧಾಭಕ್ತಿಯಿಂದ ವಿಶ್ವಾಸವಿಡುವುದೇ ನಂಬಿಕೆಯಾಗಿದೆ ಎಂಬ ವಿವರಣೆಯನ್ನು ಕೆಲವರು ಕೊಡುತ್ತಾರೆ. ಅಮೆರಿಕನ್‌ ಪತ್ರಿಕೋದ್ಯಮಿ ಎಚ್‌. ಎಲ್‌. ಮೆನ್ಕೆನ್‌, ನಂಬಿಕೆಯನ್ನು “ಅಸಂಭವವಾಗಿರಬಹುದಾದ ವಿಷಯಗಳು ಸಂಭವಿಸುವುದೆಂಬ ತರ್ಕರಹಿತ ವಿಶ್ವಾಸ” ಎಂಬುದಾಗಿ ವ್ಯಾಖ್ಯಾನಿಸುತ್ತಾರೆ. ಇದು ಬೈಬಲಿನಲ್ಲಿ ವಿವರಿಸಲಾಗಿರುವ ನಿಜ ನಂಬಿಕೆಯಂತೆಯೇ ಇದೆಯೋ? ನಂಬಿಕೆಯೇನೆಂಬುದರ ಕುರಿತು ಸ್ಪಷ್ಟ ತಿಳುವಳಿಕೆಯನ್ನು ಪಡೆದುಕೊಳ್ಳುವುದು ಬಹಳ ಪ್ರಾಮುಖ್ಯ. ಯಾಕೆಂದರೆ, ಈ ಮೇಲೆ ಉಲ್ಲೇಖಿಸಿದಂತೆ “ನಂಬಿಕೆಯಿಲ್ಲದೆ ದೇವರನ್ನು ಮೆಚ್ಚಿಸುವುದು ಅಸಾಧ್ಯ.”

ಬೈಬಲು ಹೇಳುವುದು: “ನಾವು ನಿರೀಕ್ಷಿಸುವಂಥವುಗಳು ನಮಗೆ ದೊರಕುತ್ತವೆ ಎಂಬುದೇ ನಂಬಿಕೆಯಾಗಿದೆ.” (ಇಬ್ರಿಯರಿಗೆ 11:1, ದ ನ್ಯೂ ಟೆಸ್ಟಮೆಂಟ್‌ ಇನ್‌ ದ ಲ್ಯಾಂಗ್ವೆಜ್‌ ಆಫ್‌ ಟುಡೇ) ಆದುದರಿಂದ, ನಂಬಿಕೆಯು ನಿಷ್ಕೃಷ್ಟ ಜ್ಞಾನದ ಮೇಲೆ ಕಟ್ಟಲ್ಪಡುತ್ತದೆ ಮತ್ತು ಇಂತಹ ಸತ್ಯ ಜ್ಞಾನದ ಆಧಾರದ ಮೇಲೆ ಸರಿಯಾದ ನಿರ್ಣಯಗಳನ್ನು ಮಾಡಬಹುದು. ಇದು ವಿಶ್ವಾಸವನ್ನು ಮಾತ್ರವೇ ಅಲ್ಲ ವಿಶ್ವಾಸವಿಡುವುದಕ್ಕೆ ಕಾರಣವನ್ನು ಸಹ ಕೇಳಿಕೊಳ್ಳುತ್ತದೆ.

ಇದನ್ನು ದೃಷ್ಟಾಂತಿಸಲು, ನೀವು ಹೀಗೆ ಹೇಳಶಕ್ತರಾಗುವ ಒಬ್ಬ ಸ್ನೇಹಿತನು ನಿಮಗಿರಬಹುದು: “ನಾನು ಆ ವ್ಯಕ್ತಿಯನ್ನು ನಂಬುತ್ತೇನೆ. ತನ್ನ ಮಾತನ್ನು ನಡೆಸಿಕೊಡುವನೆಂಬ ಕಾರಣಕ್ಕಾಗಿ ನಾನು ಅವನ ಮೇಲೆ ಭರವಸೆ ಇಡಬಹುದು. ನನಗೆ ಒಂದು ಸಮಸ್ಯೆಯಿರುವುದಾದರೆ ಅವನು ನನ್ನ ಸಹಾಯಕ್ಕೆ ಬರುವನೆಂಬುದು ನನಗೆ ಗೊತ್ತಿದೆ.” ಕೇವಲ ಒಂದು ಅಥವಾ ಎರಡು ದಿನದ ಹಿಂದೆಯೇ ಪರಿಚಯವನ್ನು ಮಾಡಿಕೊಂಡ ಯಾರೊಬ್ಬನ ಕುರಿತು ನೀವು ಈ ರೀತಿಯಲ್ಲಿ ಹೇಗೆ ತಾನೇ ಹೇಳಸಾಧ್ಯವಿದೆ? ಹಾಗೆ ಹೇಳಸಾಧ್ಯವಿಲ್ಲ. ತಾನು ಇತರರ ನಂಬಿಕೆಗೆ ಅರ್ಹನೆಂಬುದನ್ನು ಅವನು ಪುನಃ ಪುನಃ ರುಜುಪಡಿಸಿಕೊಂಡಿರುವವನು ಆಗಿರಬೇಕು. ಧಾರ್ಮಿಕ ನಂಬಿಕೆಯ ಕುರಿತು ಸಹ ಇದು ಸತ್ಯವಾಗಿರಬೇಕು, ಮತ್ತು ದೃಢವಾದ ಭರವಸಾರ್ಹ ಪುರಾವೆಗಳ ಮೇಲೆ ಆಧಾರಿತವಾಗಿರುವ ನಿರೀಕ್ಷೆ ಮತ್ತು ದೃಢ ವಿಶ್ವಾಸವನ್ನು ಅದು ನಮ್ಮಲ್ಲಿ ಮೂಡಿಸಬೇಕು.

ನಂಬಿಕೆಯೋ ಅಥವಾ ಅವಿಚಾರಿತ ವಿಶ್ವಾಸವೋ?

ಇಂದು ನಂಬಿಕೆಯೆಂದು ಪರಿಗಣಿಸುವ ಹೆಚ್ಚಿನ ವಿಷಯಗಳು ಅಂದರೆ, ಯಾವುದೇ ಬಲವಾದ ಆಧಾರವಿರದೆ ಅಥವಾ ಕಾರಣವಿರದೆ ನಂಬಲು ಸಿದ್ಧವಾಗಿರುವಂತಹವುಗಳು ವಾಸ್ತವದಲ್ಲಿ ಅವಿಚಾರಿತ ವಿಶ್ವಾಸವಾಗಿದೆ. ಅವಿಚಾರಿತ ವಿಶ್ವಾಸವು ಭಾವಾವೇಶ ಮತ್ತು ಮೂಢನಂಬಿಕೆಯ ಅಸ್ಥಿರ ಮರಳಿನ ಮೇಲೆ ಅನೇಕ ಸಲ ಕಟ್ಟಲ್ಪಡುತ್ತದೆ. ಅವಿಚಾರಿತ ವಿಶ್ವಾಸಕ್ಕೆ ಯಾವುದೇ ನಂಬಲರ್ಹ ಆಧಾರವಿಲ್ಲದಿರುವುದರಿಂದ, ಅದು ಉತ್ತಮವಾಗಿ ಕಟ್ಟಲ್ಪಟ್ಟ ನಂಬಿಕೆಯಲ್ಲ.

ಬೈಬಲ್‌ ಸತ್ಯದೊಂದಿಗೆ ಹೊಂದಿಕೆಯಲ್ಲಿರದ ತೀರ್ಮಾನಗಳನ್ನು ಅವಸರದಿಂದ ಮಾಡುವಂತೆ ಅವಿಚಾರಿತ ವಿಶ್ವಾಸವು ಒಬ್ಬನನ್ನು ನಡೆಸಬಲ್ಲದು. ಆದುದರಿಂದಲೇ, ಯೋಗ್ಯವಾದ ತಳಹದಿಯ ಮೇಲೆ ಕಟ್ಟಲ್ಪಡದೇ ಇರುವ ನಂಬಿಕೆಯ ವಿರುದ್ಧ ಬೈಬಲ್‌ ಎಚ್ಚರಿಸುತ್ತದೆ: “ಮೂಢನು ಯಾವ ಮಾತನ್ನಾದರೂ ನಂಬುವನು; ಜಾಣನು ತನ್ನ ನಡತೆಯನ್ನು ಚೆನ್ನಾಗಿ ಗಮನಿಸುವನು.” (ಜ್ಞಾನೋಕ್ತಿ 14:15) ಅಪೊಸ್ತಲ ಪೌಲನು ಬರೆದದ್ದು: “ಆದರೆ ಎಲ್ಲವನ್ನೂ ಪರಿಶೋಧಿಸಿ ಒಳ್ಳೇದನ್ನೇ ಭದ್ರವಾಗಿ ಹಿಡಿದುಕೊಳ್ಳಿರಿ.” (1 ಥೆಸಲೊನೀಕ 5:21) ಬೈಬಲು ಅವಿಚಾರಿತ ವಿಶ್ವಾಸವನ್ನು ಪ್ರೋತ್ಸಾಹಿಸುವುದಿಲ್ಲ. ಅದು ಪುರಾವೆಗಳ ಮೇಲೆ ಆಧಾರಿತವಾದ ನಂಬಿಕೆಯನ್ನು ಉತ್ತೇಜಿಸುತ್ತದೆ.

ನಿಜ ನಂಬಿಕೆಯನ್ನು ಅವಿಚಾರಿತ ವಿಶ್ವಾಸದಿಂದ ಭಿನ್ನಗೊಳಿಸುವಷ್ಟು ವಿವೇಚನೆಯನ್ನು ಹೊಂದಿರುವುದು ಒಂದು ಗಂಭೀರವಾದ ವಿಷಯವಾಗಿದೆ. ಒಬ್ಬ ವ್ಯಕ್ತಿಯು ಧರ್ಮದಲ್ಲಿ ಶ್ರದ್ಧೆಯುಳ್ಳವನಾಗಿರಬಹುದು, ಆದರೂ ಅವನಲ್ಲಿ ನಿಜ ನಂಬಿಕೆಯು ಇರಲಿಕ್ಕಿಲ್ಲ. ಪೌಲನು ಗಮನಿಸಿದ್ದು: “ನಂಬಿಕೆಯು ಎಲ್ಲ ಜನರ ಸ್ವತ್ತಾಗಿರುವುದಿಲ್ಲ.” (2 ಥೆಸಲೊನೀಕ 3:2) ಆದರೆ ಬೈಬಲ್‌ ಆಧಾರಿತ ನಂಬಿಕೆಯು ಕೆಲವು ಜನರ ಸ್ವತ್ತು ಆಗಿದೆ ಮತ್ತು ಅದು ಅವರ ಜೀವಿತಗಳ ಮೇಲೆ ಪ್ರಭಾವಬೀರುತ್ತದೆ.

ನಿಜ ನಂಬಿಕೆಯು ಮನುಷ್ಯನನ್ನು ದೇವರ ಸಂಬಂಧದೊಳಗೆ ತರುತ್ತದೆ

ನಂಬಿಕೆಯನ್ನು ವಿಶ್ವಾಸ ಮತ್ತು ಭರವಸೆಯ ಜೋಡಣೆಯಿರುವ ಸರಪಣಿಗೆ ಹೋಲಿಸಬಹುದು. ಮತ್ತು ಇದು ಒಬ್ಬ ವ್ಯಕ್ತಿಯನ್ನು ದೇವರೊಂದಿಗಿನ ಸಂಬಂಧದೊಳಗೆ ತರುತ್ತದೆ. ಆದರೆ ಈ ರೀತಿಯ ನಂಬಿಕೆಯನ್ನು ಬೆಳೆಸಿಕೊಳ್ಳುವ ಅಗತ್ಯವಿದೆ, ಇದು ನಮ್ಮೊಂದಿಗೆ ಹುಟ್ಟಿಬಂದ ಒಂದು ವಿಷಯವಲ್ಲ. ನಿಜ ನಂಬಿಕೆಯನ್ನು ನೀವು ಹೇಗೆ ಬೆಳೆಸಿಕೊಳ್ಳಬಲ್ಲಿರಿ? ಬೈಬಲು ಹೀಗೆ ವಿವರಿಸುತ್ತದೆ: “ಆದಕಾರಣ ಸಾರಿದ ವಾರ್ತೆಯು ನಂಬಿಕೆಗೆ ಆಧಾರ, ಆ ವಾರ್ತೆಗೆ ಕ್ರಿಸ್ತನ ವಾಕ್ಯವೇ ಆಧಾರ.”—ರೋಮಾಪುರ 10:17.

ಆದುದರಿಂದ, ದೇವರನ್ನು ಮತ್ತು ಆತನ ಮಗನಾದ ಯೇಸು ಕ್ರಿಸ್ತನ ಬೋಧನೆಗಳನ್ನು ತಿಳಿದುಕೊಳ್ಳುವುದಕ್ಕೆ ಸಮಯವನ್ನು ತೆಗೆದುಕೊಳ್ಳುವ ಅಗತ್ಯವು ನಿಮಗಿದೆ. ಯಾವುದೇ ಪ್ರಯತ್ನವಿಲ್ಲದೆ ಈ ಜ್ಞಾನವು ನಮಗೆ ಸಿಗುವುದಿಲ್ಲ. (ಜ್ಞಾನೋಕ್ತಿ 2:1-9) ಬೈಬಲ್‌ ಏನನ್ನು ಹೇಳುತ್ತದೋ ಅದನ್ನು ಕಂಡುಹಿಡಿಯಲು ನೀವು ಪ್ರಯಾಸಪಡಬೇಕು. ಹೀಗೆ ಮಾಡುವುದರಿಂದ ಅದರ ನಂಬಲರ್ಹತೆಯ ಕುರಿತು ನೀವು ಮನವೊಪ್ಪಿಸಲ್ಪಡುತ್ತೀರಿ.

ಹೀಗಿದ್ದರೂ, ಜ್ಞಾನ ಪಡೆದುಕೊಳ್ಳುವುದಕ್ಕಿಂತ ಅಥವಾ ಯಾವುದೋ ವಿಷಯವು ಸರಿಯೆಂದು ತಿಳಿದುಕೊಳ್ಳುವುದಕ್ಕಿಂತಲೂ ಹೆಚ್ಚಿನದ್ದು ನಿಜ ನಂಬಿಕೆಯಲ್ಲಿ ಸೇರಿದೆ. ಅದು ಪ್ರೇರಣೆಯ ಪೀಠವಾದ ಹೃದಯವನ್ನು ಒಳಗೊಂಡಿದೆ. ರೋಮಾಪುರ 10:10 (NW) ಹೇಳುವುದು: “ಹೃದಯದಿಂದ ಒಬ್ಬನು ನಂಬುತ್ತಾನೆ.” ಇದರ ಅರ್ಥವೇನು? ನೀವು ದೈವಿಕ ವಿಷಯಗಳನ್ನು ಧ್ಯಾನಿಸಿ, ಅದಕ್ಕಾಗಿ ಗಣ್ಯತೆಯನ್ನು ಬೆಳೆಸುತ್ತಾ ಹೋದಂತೆ, ದೇವರ ವಾಕ್ಯವು ನಿಮ್ಮ ಹೃದಯದಲ್ಲಿ ಆಳವಾಗಿ ಬೇರೂರುತ್ತದೆ. ದೇವರ ಉದ್ದೇಶಗಳ ಪ್ರಕಾರ ಕ್ರಿಯೆಗೈದಂತೆ ಮತ್ತು ಆತನ ಆಶೀರ್ವಾದದ ಪುರಾವೆಗಳನ್ನು ನೀವು ನೋಡಿದಂತೆ ನಿಮ್ಮ ನಂಬಿಕೆಯು ಬೆಳೆಯುತ್ತದೆ ಮತ್ತು ಬಲವಾಗುತ್ತದೆ.—2 ಥೆಸಲೊನೀಕ 1:3.

ನಿಜ ನಂಬಿಕೆಯು ಎಂತಹ ಒಂದು ಅಮೂಲ್ಯ ಸ್ವತ್ತಾಗಿರುತ್ತದೆ! ದೇವರಲ್ಲಿ ಬಲವಾದ ವಿಶ್ವಾಸವಿಡುವ ಮೂಲಕ, ನಮ್ಮ ಹೆಜ್ಜೆಗಳನ್ನು ಮಾರ್ಗದರ್ಶಿಸುವ ಆತನ ಸಾಮರ್ಥ್ಯದಲ್ಲಿ ಭರವಸೆಯಿಡುವ ಮೂಲಕ ಮತ್ತು ನಮ್ಮ ಅಗತ್ಯಗಳನ್ನು ಪೂರೈಸುವುದಕ್ಕೆ ಆತನಿಗಿರುವ ಸಿದ್ಧಮನಸ್ಸನ್ನು ತಿಳಿದುಕೊಂಡವರಾಗಿರುವುದರ ಮೂಲಕ ನಾವು ಸಂಕಷ್ಟಕರ ಪರಿಸ್ಥಿತಿಗಳನ್ನು ಎದುರಿಸಲು ಶಕ್ತರಾಗುತ್ತೇವೆ. ಇದಕ್ಕೆ ಕೂಡಿಸಿ, ದೇವರ ಮಗನಾದ ಯೇಸು ಕ್ರಿಸ್ತನು ನಂಬಿಕೆಯ ದೀರ್ಘ ಕಾಲದ ಪ್ರಯೋಜನದ ಕಡೆಗೆ ಕೈತೋರಿಸುತ್ತಾ ಹೀಗೆ ಹೇಳಿದನು: “ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು; ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು.” (ಯೋಹಾನ 3:16) ನಂಬಿಕೆಯುಳ್ಳವರಿಗೆ ನಿತ್ಯಜೀವವು ಎಂತಹ ಅತ್ಯದ್ಭುತಕರವಾದ ಕೊಡುಗೆಯಾಗಿದೆ!

ದೇವರು ತನ್ನ ಸೇವಕರಿಗೆ ಪ್ರತಿಫಲವನ್ನು ಕೊಡುತ್ತಾನೆಂಬ ಆತನ ವಾಗ್ದಾನದಲ್ಲಿ ನಂಬಿಕೆಯು, ಜೀವನದಲ್ಲಿ ನಮಗೆ ಒಂದು ಹೊಸ ದೃಷ್ಟಿಕೋನವನ್ನು ಕೊಡುತ್ತದೆ. ಇಬ್ರಿಯರಿಗೆ 11:6 ಹೇಳುವ ಪ್ರಕಾರ, “ತನ್ನನ್ನು ಹುಡುಕುವವರಿಗೆ ಪ್ರತಿಫಲವನ್ನು” ಕೊಡುವ ದೇವರ ಸಾಮರ್ಥ್ಯದಲ್ಲಿ ವಿಶ್ವಾಸವಿಡುವುದು ನಿಜ ನಂಬಿಕೆಯಲ್ಲಿ ಸೇರಿದೆ. ಹಾಗಾದರೆ, ನಿಜ ನಂಬಿಕೆಯು ಅವಿಚಾರಿತ ವಿಶ್ವಾಸವಾಗಿರುವುದಿಲ್ಲ ಮತ್ತು ದೇವರು ಅಸ್ತಿತ್ವದಲ್ಲಿ ಇದ್ದಾನೆಂಬುದನ್ನು ನಂಬುವುದಕ್ಕಿಂತ ಹೆಚ್ಚಿನದ್ದು ನಿಜ ನಂಬಿಕೆಯಲ್ಲಿ ಸೇರಿದೆ ಎಂಬುದು ಸ್ಪಷ್ಟ. ದೇವರು ತನ್ನನ್ನು ಹುಡುಕುವವರಿಗೆ ಪ್ರತಿಫಲವನ್ನು ಕೊಡುವ ದೇವರ ಸಾಮರ್ಥ್ಯವನ್ನು ಒಪ್ಪಿಕೊಳ್ಳುವುದು ಸಹ ಇದರಲ್ಲಿ ಸೇರಿದೆ. ನೀವು ದೇವರನ್ನು ನಿಜವಾಗಿಯೂ ಮತ್ತು ಯಥಾರ್ಥವಾಗಿ ತಿಳಿದುಕೊಳ್ಳಲು ಬಯಸುತ್ತೀರೋ? ಹಾಗಾದರೆ, ಆತನ ವಾಕ್ಯವಾದ ಬೈಬಲಿನಿಂದ ಸ್ಪಷ್ಟವಾದ ಜ್ಞಾನವನ್ನು ಪಡೆದುಕೊಳ್ಳಿರಿ ಮತ್ತು ಆಗ ಮಾತ್ರ ನಿಮ್ಮ ನಂಬಿಕೆಗೆ ಪ್ರತಿಫಲವು ದೊರಕುವುದು.—ಕೊಲೊಸ್ಸೆ 1:9, 10.

[ಪುಟ 26ರಲ್ಲಿರುವ ಚಿತ್ರ ಕೃಪೆ]

Drawings of Albrecht Dürer/Dover Publications, Inc.