ಪ್ರೇಮವು ಕುರುಡಾದಾಗ
ಪ್ರೇಮವು ಕುರುಡಾದಾಗ
ಸ್ಪೇ ನಿನ ಎಚ್ಚರ! ಸುದ್ದಿಗಾರರಿಂದ
ದೂರದ ವಸ್ತುಗಳಿಗಿಂತಲೂ ಹತ್ತಿರದ ವಸ್ತುಗಳನ್ನು ಮಾತ್ರವೇ ಹೆಚ್ಚು ಸ್ಪಷ್ಟವಾಗಿ ನೋಡಸಾಧ್ಯವಿರುವ ನೀವು, ವಧುವಿಗಾಗಿ ಹುಡುಕುತ್ತಿದ್ದೀರೆಂದು, ಆದರೆ ನಿಮಗೆ ಬೇಕಾಗಿರುವ ತಕ್ಕ ಕನ್ಯೆಯರು ರಾತ್ರಿಯ ಸಮಯದಲ್ಲಿ ಮಾತ್ರ ಹೊರಗೆ ಬರುತ್ತಿದ್ದಾರೆಂದು ಊಹಿಸಿಕೊಳ್ಳಿರಿ. ಇಂತಹದ್ದೇ ಅವಸ್ಥೆಯು ಗಂಡು ಸಾಮ್ರಾಟ ಕೀಟ (ಯೂಡಿಯಾ ಪೌಓನಿಯಾ ಎಂಬ ಹೆಸರಿನ ಮಾತ್)ದ್ದಾಗಿರುತ್ತದೆ. ಹೀಗಿದ್ದರೂ, ಈ ಸೊಗಸಾದ ಕೀಟದಲ್ಲಿ ಕೆಲವು ನಿರ್ದಿಷ್ಟ ಗುಣಲಕ್ಷಣಗಳಿರುವುದರಿಂದ ಈ ಕಷ್ಟಕರವಾದ ಸವಾಲನ್ನು ಧೈರ್ಯದಿಂದ ಎದುರಿಸಲು ಅದಕ್ಕೆ ಸಾಧ್ಯವಾಗುತ್ತದೆ.
ಬೇಸಿಗೆಯ ತಿಂಗಳುಗಳಲ್ಲಿ, ಹೆಣ್ಣಿಗಾಗಿ ಹುಡುಕುವ ನಮ್ಮ ಗಂಡುಕೀಟವು, ಕೊಬ್ಬಿದ ಕಂಬಳಿಹುಳುವಿನಂತೆ ತನಗೆ ಸಿಗುವ ಆಹಾರವೆಲ್ಲವನ್ನು ಕಬಳಿಸಿಕೊಳ್ಳುತ್ತಾ ತನ್ನ ದಿನಗಳನ್ನು ಕಳೆಯುತ್ತದೆ. ಹೀಗೆ ಮುಂದಿನ ವಸಂತಋತುವಿನಲ್ಲಿ, ತನ್ನ ಪೊರೆಹುಳುವಿನಿಂದ ಹೊರಬಂದಾಗ, ಈ ಮಿನುಗುವ ಕೀಟಕ್ಕೆ ತಾನು ಸೇವಿಸಿದ ಆಹಾರವು ಜೀವನಪೂರ್ತಿ ಸಾಕಾಗುತ್ತದೆ, ಯಾಕೆಂದರೆ ಈ ಕೀಟವು ಸುಮಾರು ಎರಡು ತಿಂಗಳಿನಷ್ಟು ಸಮಯ ಮಾತ್ರ ಬಾಳುತ್ತದೆ.
ಈಗ ಸಾಮ್ರಾಟ ಕೀಟದ ಆಹಾರ ಸಮಸ್ಯೆಗಳು ಪರಿಹರಿಸಲ್ಪಟ್ಟಿವೆ. ಆದ್ದರಿಂದ ಸಂಗಾತಿಯನ್ನು ಹುಡುಕುವ ಕೆಲಸದ ಮೇಲೆ ತನ್ನ ಗಮನವನ್ನು ಅದು ಕೇಂದ್ರಿಕರಿಸಬಲ್ಲದು. ಆದಾಗ್ಯೂ, ಗಂಡುಕೀಟದಲ್ಲಿ ಒಂದು ಉಪಯುಕ್ತ ಅಂಗವು ಇರದೆ ಇರುತ್ತಿದ್ದಲ್ಲಿ, ಚಂದ್ರನ ಬೆಳಕಿನಲ್ಲಿ ಹೆಣ್ಣನ್ನು ಹುಡುಕುವುದು, ಹುಲ್ಲಿನ ಮೆದೆಯಲ್ಲಿ ಸೂಜಿಯನ್ನು ಹುಡುಕುವಷ್ಟೇ ಅಸಾಧ್ಯವಾಗಿರುವುದು.
ಈ ಕೀಟದ ಪುಟ್ಟ ತಲೆಯ ಮೇಲೆ ಎರಡು ಸ್ಪರ್ಶಾಂಗಗಳು ಸೂಕ್ಷ್ಮ ಜರಿಗಿಡಗಳಂತೆ ಚಿಗುರುತ್ತವೆ. ಈ ಚಿಕ್ಕ ಚಿಗುರುಗಳು ಭೂಮಿಯ ಮೇಲಿನ ಅತ್ಯಂತ ಜಟಿಲವಾದ ಸುವಾಸನೆಯನ್ನು ಪತ್ತೆಮಾಡುವ ಸಾಧನಗಳಾಗಿವೆ. ಅಷ್ಟು ಮಾತ್ರವಲ್ಲ, ಈ ಸ್ಪರ್ಶಾಂಗವು ಎಷ್ಟು ಪ್ರಬಲವಾಗಿದೆಯೆಂದರೆ, ಹೆಣ್ಣು ಕೀಟವು ಪ್ರೀತಿಯಿಂದ ಹೊರಸೂಸುವ ಫೆರೋಮೋನ್ ರಾಸಾಯನಿಕವನ್ನು ಅಥವಾ “ಸುಗಂಧ”ವನ್ನು ದೂರದಿಂದಲೇ ಬಹಳ ಸುಲಭವಾಗಿ ಪತ್ತೆಹಚ್ಚುತ್ತದೆ.
ಹೆಣ್ಣು ಕೀಟಗಳು ಕೆಲವೇ ಕೆಲವು ಇದ್ದು, ಸಂಖ್ಯೆಯಲ್ಲಿ ಕಡಿಮೆಯಾಗಿದ್ದರೂ ಸಹ, ಅವುಗಳ ಪ್ರಬಲವಾದ ಫೆರೋಮೋನ್ ರಾಸಾಯನಿಕವು ಘ್ರಾಣ ಸಂಬಂಧಿ ಸಂಕೇತದಂತೆ ಕಾರ್ಯನಡಿಸುತ್ತದೆ. ಗಂಡು ಸಾಮ್ರಾಟ ಕೀಟದ ಸ್ಪರ್ಶಾಂಗಗಳು ಎಷ್ಟು ಶೀಘ್ರಗ್ರಾಹಿಗಳಾಗಿವೆಯೆಂದರೆ, ಹೆಣ್ಣು ಕೀಟವು ಸುಮಾರು 11 ಕಿಲೋಮೀಟರ್‌ನಷ್ಟು ದೂರವಿರುವಾಗಲೇ ಅದನ್ನು ಕಂಡುಹಿಡಿಯುತ್ತವೆ. ಹೀಗೆ ಎಲ್ಲ ಅಡಚಣೆಗಳು ಕೊನೆಗೂ ತೆಗೆಯಲ್ಪಡುತ್ತವೆ ಮತ್ತು ಗಂಡು ಸಾಮ್ರಾಟ ಕೀಟವು ಹೆಣ್ಣು ಕೀಟವನ್ನು ಕೊನೆಗೂ ಸಂಧಿಸುತ್ತದೆ. ಕಡಿಮೆಪಕ್ಷ ಈ ಒಂದು ವಿಷಯದಲ್ಲಾದರೂ ಕೀಟ ಪ್ರಪಂಚದಲ್ಲಿ ಪ್ರೇಮವು ಕುರುಡಾಗಿರಸಾಧ್ಯವಿದೆ.
ದೇವರ ಸೃಷ್ಟಿಯು ಇಂತಹ ಬೆರಗುಗೊಳಿಸುವ ವಿವರಣೆಗಳಿಂದ ಮತ್ತು ಅಸಾಧಾರಣ ವಿನ್ಯಾಸಗಳಿಂದ ತುಂಬಿರುತ್ತದೆ! ಕೀರ್ತನೆಗಾರನು ಬರೆದದ್ದು: “ಯೆಹೋವನೇ, ನಿನ್ನ ಕೈಕೆಲಸಗಳು ಎಷ್ಟೋ ವಿಧವಾಗಿವೆ. ಅವುಗಳನ್ನೆಲ್ಲಾ ಜ್ಞಾನದಿಂದಲೇ ಮಾಡಿದ್ದೀ.”—ಕೀರ್ತನೆ 104:24.
[ಪುಟ 12ರಲ್ಲಿರುವ ಚಿತ್ರ ಕೃಪೆ]
© A. R. Pittaway