ರಕ್ತರಹಿತ ಚಿಕಿತ್ಸೆಗೆ ಭಾರೀ ಬೇಡಿಕೆ
ರಕ್ತರಹಿತ ಚಿಕಿತ್ಸೆಗೆ ಭಾರೀ ಬೇಡಿಕೆ
“ರಕ್ತವನ್ನು ಉಪಯೋಗಿಸಿ ಶಸ್ತ್ರಚಿಕಿತ್ಸೆಯನ್ನು ಮಾಡುವ ಪ್ರತಿಯೊಬ್ಬ ಡಾಕ್ಟರರು ರಕ್ತರಹಿತ ಚಿಕಿತ್ಸೆಯ ಕುರಿತು ಪರ್ಯಾಲೋಚಿಸಬೇಕು.”—ಜರ್ಮನಿಯ ಲುಡ್‌ವಿಗ್‌ಷಾಫೆನ್‌ನಲ್ಲಿ ಅರಿವಳಿಕೆಶಾಸ್ತ್ರದ ಅಧ್ಯಾಪಕರಾಗಿರುವ ಡಾಕ್ಟರ್ ಜೊಯೆಕಿಮ್ ಬಾಲ್ಟ್.
ಏಯ್ಡ್ಸ್‌ನಿಂದಾಗಿರುವ ದುರಂತವು, ಯಾವುದೇ ಅಪಾಯವಿಲ್ಲದೆ ಶಸ್ತ್ರಚಿಕಿತ್ಸೆಯನ್ನು ಮಾಡಲು ಇನ್ನೂ ಹೆಚ್ಚಿನ ಕ್ರಮಗಳನ್ನು ತೆಗೆದುಕೊಳ್ಳುವಂತೆ ಡಾಕ್ಟರರನ್ನು ಮತ್ತು ವಿಜ್ಞಾನಿಗಳನ್ನು ಒತ್ತಾಯಿಸಿದೆ. ಸ್ಪಷ್ಟವಾಗಿಯೇ, ಇದರ ಅರ್ಥ, ರಕ್ತವನ್ನು ಇನ್ನೂ ಸೂಕ್ಷ್ಮವಾಗಿ ಪರೀಕ್ಷಿಸಬೇಕಾಗಿದೆ. ಈ ಎಲ್ಲಾ ಕ್ರಮಗಳನ್ನು ತೆಗೆದುಕೊಂಡರೂ ಯಾವುದೇ ರೀತಿಯ ಅಪಾಯವಿರದ ರಕ್ತಪೂರಣವನ್ನು ಕೊಡಲು ಸಾಧ್ಯವೇ ಇಲ್ಲವೆಂದು ಪರಿಣತರು ಹೇಳುತ್ತಾರೆ. “ಹೆಚ್ಚು ಸುರಕ್ಷಿತವಾದ ರಕ್ತವನ್ನು ಒದಗಿಸುವುದಕ್ಕಾಗಿ ಸಮಾಜವು ಸಾಕಷ್ಟು ಹಣಕಾಸಿನ ಸೌಲಭ್ಯವನ್ನು ನೀಡಿದ್ದರೂ ಸಹ, ಬೇರೆ ಮೂಲದಿಂದ ಬರುವ [ದಾನಿಯ] ರಕ್ತವನ್ನು ತೆಗೆದುಕೊಳ್ಳಲು ರೋಗಿಗಳು ಆಗಲೂ ಹಿಂಜರಿಯುತ್ತಾರೆ. ಇದಕ್ಕೆ ಕಾರಣ, ಕೊಡಲ್ಪಡುವ ರಕ್ತವು ಸಂಪೂರ್ಣವಾಗಿ ಸುರಕ್ಷಿತವಾಗಿರಲು ಖಂಡಿತ ಸಾಧ್ಯವಿಲ್ಲದಿರುವುದೇ
ಆಗಿದೆ” ಎಂದು ಟ್ರ್ಯಾನ್ಸ್‌ಫ್ಯೂಷನ್ ಪತ್ರಿಕೆಯು ಹೇಳುತ್ತದೆ.ಆದುದರಿಂದ, ಅನೇಕ ಡಾಕ್ಟರರು ರೋಗಿಗಳಿಗೆ ರಕ್ತವನ್ನು ಕೊಡುವ ವಿಷಯದಲ್ಲಿ ಹೆಚ್ಚೆಚ್ಚು ಜಾಗ್ರತೆ ವಹಿಸುತ್ತಿರುವುದರಲ್ಲಿ ಆಶ್ಚರ್ಯವೇ ಇಲ್ಲ. “ಮೂಲತಃ, ರಕ್ತಪೂರಣವು ಯಾವುದೇ ರೀತಿಯಲ್ಲಿ ಒಳ್ಳೆಯದಲ್ಲ. ಈ ಕಾರಣದಿಂದಲೇ, ಯಾರೊಬ್ಬರಿಗೂ ರಕ್ತವನ್ನು ಕೊಡುವುದು ಬೇಡವೇ ಬೇಡವೆಂದು ನಾವು ಕಟ್ಟುನಿಟ್ಟಾಗಿ ಹೇಳುತ್ತೇವೆ” ಎಂದು ಕ್ಯಾಲಿಫೋರ್ನಿಯಾದ ಸ್ಯಾನ್‌ಫ್ರಾನ್ಸ್‌ಸ್ಕೋದಲ್ಲಿರುವ ಅಲೆಕ್ಸ್ ಸೊಪಲ್ಯಾನ್‌ಸ್ಕಿ ಎಂಬ ಡಾಕ್ಟರ್ ಹೇಳುತ್ತಾರೆ.
ರಕ್ತಪೂರಣದಿಂದಾಗುವ ಅಪಾಯಗಳ ಕುರಿತು ಸಾರ್ವಜನಿಕರಲ್ಲೂ ಸಹ ಅರಿವು ಮೂಡುತ್ತಿದೆ. ಹೌದು, 1996ರಲ್ಲಿ ಕೆನಡಾದಲ್ಲಿ ನಡೆಸಿದ ಸಮೀಕ್ಷೆಯೊಂದರಲ್ಲಿ, ಆ ದೇಶದ 89 ಪ್ರತಿಶತದಷ್ಟು ಜನರು ದಾನಮಾಡಿದ ರಕ್ತವನ್ನು ತೆಗೆದುಕೊಳ್ಳುವುದಕ್ಕಿಂತ ರಕ್ತರಹಿತ ಚಿಕಿತ್ಸೆಯನ್ನು ಇಷ್ಟಪಡುವುದಾಗಿ ತಿಳಿದುಬಂತು. “ಬೇರೊಬ್ಬ ವ್ಯಕ್ತಿಯ ರಕ್ತವನ್ನು ತೆಗೆದುಕೊಳ್ಳುವುದನ್ನು ಯೆಹೋವನ ಸಾಕ್ಷಿಗಳು ನಿರಾಕರಿಸುವಂತೆ ಎಲ್ಲಾ ರೋಗಿಗಳು ಮಾಡುವುದಿಲ್ಲ. ಹಾಗಿದ್ದರೂ ರಕ್ತದಿಂದ ಹರಡುವ ರೋಗಗಳು ಮತ್ತು ನಮ್ಮ ದೇಹದ ಸುರಕ್ಷಾ ವ್ಯವಸ್ಥೆಯಲ್ಲಿ ಏರುಪೇರನ್ನುಂಟುಮಾಡುವಂಥ ಅಪಾಯಗಳು, ನಾವು ನಮ್ಮ ಎಲ್ಲಾ ರೋಗಿಗಳಿಗೆ ಬದಲಿ ಚಿಕಿತ್ಸೆಯನ್ನು ಕಂಡುಹಿಡಿಯಲೇಬೇಕು ಎಂಬುದರ ಸ್ಪಷ್ಟ ಪುರಾವೆಯನ್ನು ಕೊಡುತ್ತವೆ” ಎಂದು ಜರ್ನಲ್ ಆಫ್ ವ್ಯಾಸ್‌ಕುಲಾರ್ ಸರ್ಜರಿ ಹೇಳಿಕೆ ನೀಡಿತು.
ಇಷ್ಟಪಟ್ಟು ಆರಿಸಿಕೊಳ್ಳುವ ಒಂದು ವಿಧಾ
ಸಂತೋಷಕರವಾಗಿ, ರಕ್ತಪೂರಣಕ್ಕೆ ಒಂದು ಬದಲಿ ಚಿಕಿತ್ಸೆಯಿರುವುದಕ್ಕಾಗಿ ನಾವು ಆಭಾರಿಗಳಾಗಿದ್ದೇವೆ. ಅನೇಕ ರೋಗಿಗಳು ಈ ಚಿಕಿತ್ಸೆಯನ್ನು ಬೇರೆ ಮಾರ್ಗವಿಲ್ಲದಿರುವಾಗ ಕೊನೆಯದಾಗಿ ಮಾಡುವ ಆಯ್ಕೆಯಾಗಿ ವೀಕ್ಷಿಸುವುದಿಲ್ಲ. ಬದಲಿಗೆ, ಒಂದು ಒಳ್ಳೇ ಕಾರಣದೊಂದಿಗೆ ತಾವೇ ಇಷ್ಟಪಟ್ಟು ಆರಿಸಿಕೊಳ್ಳುವ ಒಂದು ಚಿಕಿತ್ಸೆಯಾಗಿದೆ. ಒಬ್ಬ ಬ್ರಿಟಿಷ್ ಸಲಹಾ ಸರ್ಜನ್ ಆಗಿರುವ ಸ್ಟೀವನ್ ಜೆಫ್ರಿ ಪೋಲಾರ್ಡ್ ಗಮನಿಸುವುದೇನೆಂದರೆ, ರೋಗ ಹರಡುವ ಮತ್ತು ಪ್ರಾಣನಷ್ಟವಾಗುವ ಪ್ರಮಾಣವು, ರಕ್ತವಿಲ್ಲದೆಯೇ ಶಸ್ತ್ರಚಿಕಿತ್ಸೆಯಾದ ರೋಗಿಗಳಲ್ಲೂ, “ರಕ್ತವನ್ನು ತೆಗೆದುಕೊಂಡಿರುವ ರೋಗಿಗಳಲ್ಲೂ ಹೆಚ್ಚುಕಡಿಮೆ ಒಂದೇ ಆಗಿರುತ್ತದೆ. ಆದರೆ ಅನೇಕ ಸಂದರ್ಭಗಳಲ್ಲಿ ರಕ್ತವನ್ನು ತೆಗೆದುಕೊಳ್ಳದಿರುವವರಿಗೆ ಶಸ್ತ್ರಚಿಕಿತ್ಸೆಯ ನಂತರ ಉಂಟಾಗುವ ಸೋಂಕುಗಳು ಮತ್ತು ಇತರ ತೊಡಕುಗಳಂಥ ಸಮಸ್ಯೆಯಿರುವುದಿಲ್ಲ.”
ರಕ್ತರಹಿತ ಚಿಕಿತ್ಸೆಯನ್ನು ಹೇಗೆ ಕಂಡುಹಿಡಿಯಲಾಯಿತು? ಒಂದರ್ಥದಲ್ಲಿ ಈ ಪ್ರಶ್ನೆಯು ವಿಚಿತ್ರವಾದುದು. ಏಕೆಂದರೆ ವಾಸ್ತವದಲ್ಲಿ ರಕ್ತರಹಿತ ಚಿಕಿತ್ಸೆಯು ಬಹಳ ಸಮಯದಿಂದಲೂ ಇತ್ತು. ಆದರೆ ರಕ್ತಪೂರಣ ಚಿಕಿತ್ಸೆಯು ಇತ್ತೀಚೆಗೆ ಹುಟ್ಟಿಕೊಂಡಿದ್ದು. ಹೌದು, 20ನೇ ಶತಮಾನದ ಆದಿಭಾಗದವರೆಗೂ ರಕ್ತಪೂರಣವೆಂಬ ತಂತ್ರಜ್ಞಾನವೇ ರೂಢಿಯಲ್ಲಿ ಇರಲಿಲ್ಲ. ಆದರೆ, ಕಾಲಾನಂತರ ಇದು ಎಷ್ಟರ ಮಟ್ಟಿಗೆ ಪ್ರಗತಿಯಾಯಿತೆಂದರೆ ರಕ್ತದ ಬಳಕೆಯು ಸರ್ವಸಾಮಾನ್ಯವಾಯಿತು. ಹಾಗಿದ್ದರೂ, ಇತ್ತೀಚಿನ ದಶಕಗಳಲ್ಲಿ ಕೆಲವರು ರಕ್ತರಹಿತ ಶಸ್ತ್ರಚಿಕಿತ್ಸೆಯನ್ನು
ಹೆಚ್ಚು ಪ್ರಸಿದ್ಧಿಗೆ ತಂದಿದ್ದಾರೆ. ಉದಾಹರಣೆಗೆ 1960ರಲ್ಲಿ, ಪ್ರಖ್ಯಾತ ಸರ್ಜನ್ ಆಗಿದ್ದ ಡೆನ್‌ಟನ್ ಕೂಲೆ ಎಂಬುವವರು ರಕ್ತವಿಲ್ಲದೆಯೇ ಕೆಲವು ತೆರೆದ ಹೃದಯದ ಶಸ್ತ್ರಚಿಕಿತ್ಸೆಗಳನ್ನು ಪ್ರಪ್ರಥಮವಾಗಿ ಮಾಡಿದರು.1970ರಲ್ಲಿ ರಕ್ತವನ್ನು ತೆಗೆದುಕೊಂಡವರಲ್ಲಿ ಹೆಪಿಟೈಟಸ್‌ಗೆ ಬಲಿಯಾದವರ ಸಂಖ್ಯೆ ಹೆಚ್ಚಾದಂತೆ, ಅನೇಕ ಡಾಕ್ಟರರು ರಕ್ತಕ್ಕೆ ಬದಲಾಗಿ ಇತರ ಪರ್ಯಾಯ ಔಷಧಿಗಳನ್ನು ಹುಡುಕುವುದಕ್ಕೆ ಪ್ರಾರಂಭಿಸಿದರು. 1980ರೊಳಗಾಗಿ ಹಲವು ದೊಡ್ಡ ವೈದ್ಯಕೀಯ ತಂಡಗಳು ರಕ್ತರಹಿತ ಶಸ್ತ್ರಚಿಕಿತ್ಸೆಯನ್ನು ಮಾಡುತ್ತಿದ್ದವು. ತರುವಾಯ, ಏಡ್ಸ್ ಮಹಾಮಾರಿಯು ತನ್ನ ಕರಾಳ ಪ್ರಭಾವವನ್ನು ತೋರಿಸಲಾರಂಭಿಸಿದಂತೆ, ಈ ತಂಡದವರು ಉಪಯೋಗಿಸುತ್ತಿದ್ದ ರಕ್ತರಹಿತ ವಿಧಾನಗಳನ್ನು ಅನುಸರಿಸಲು ಆಸಕ್ತರಾಗಿದ್ದ ಇತರರೂ ಕೂಡ ಅವರನ್ನು ಆಗಾಗ್ಗೆ ಸಂದರ್ಶಿಸಲು ಪ್ರಾರಂಭಿಸಿದರು. ಹಾಗಾಗಿ, 1990ರಲ್ಲಿ ಅನೇಕ ಆಸ್ಪತ್ರೆಗಳು ತಮ್ಮ ರೋಗಿಗಳಿಗೆ ರಕ್ತರಹಿತ ಚಿಕಿತ್ಸೆಯ ಆಯ್ಕೆಗಳನ್ನು ನೀಡುವ ಹೊಸ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದವು.
ಶಸ್ತ್ರಚಿಕಿತ್ಸೆ ಹಾಗೂ ತುರ್ತು ಪರಿಸ್ಥಿತಿಯ ಸಮಯದಲ್ಲಿ ಸಾಮಾನ್ಯವಾಗಿ ರಕ್ತವನ್ನೇ ಕೊಡುತ್ತಿದ್ದ ವಿಧಾನಗಳಿಗೆ ಈಗ ಡಾಕ್ಟರರು ರಕ್ತರಹಿತ ವಿಧಾನಗಳನ್ನು ಯಶಸ್ವಿಕರವಾಗಿ ನೀಡಲು ಪ್ರಾರಂಭಿಸಿದರು. “ರಕ್ತ ಅಥವಾ ರಕ್ತದ ಉತ್ಪನ್ನಗಳನ್ನು ಉಪಯೋಗಿಸದೆಯೇ ಗಂಭೀರವಾದ ಹೃದ್ರೋಗ, ಹೃದಯ ರಕ್ತನಾಳದ ರೋಗ, ಸ್ತ್ರೀರೋಗ ಮತ್ತು ಪ್ರಸೂತಿ ಚಿಕಿತ್ಸೆಗಳಿಗೆ, ಮೂಳೆರೋಗ ಮತ್ತು ಮೂತ್ರಕೋಶದ ರೋಗಗಳಿಗೆ ಸಂಬಂಧಿಸಿದ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಕರವಾಗಿ ಮಾಡಬಹುದು” ಎಂದು ಕೆನೆಡಿಯನ್ ಜರ್ನಲ್ ಆಫ್ ಅನಸ್ತೇಸಿಯಾ ಎಂಬ ಪತ್ರಿಕೆಯಲ್ಲಿ ಡಿ. ಎಚ್. ಡಬ್ಲ್ಯೂ. ವಾನ್ ಹೇಳುತ್ತಾರೆ.
ರಕ್ತರಹಿತ ಶಸ್ತ್ರಚಿಕಿತ್ಸೆಯ ಒಂದು ಪ್ರಯೋಜನವೇನೆಂದರೆ, ಅದು ಒಳ್ಳೇ ಗುಣಮಟ್ಟದ ಆರೈಕೆಗೆ ಸಹಾಯಮಾಡುತ್ತದೆ. “ಶಸ್ತ್ರಚಿಕಿತ್ಸೆಯ ಸಮಯದಲ್ಲಿ ರಕ್ತದ ನಷ್ಟವನ್ನು ತಡೆಯಲು ಶಸ್ತ್ರವೈದ್ಯನ ಕೌಶಲ್ಯವು ಹೆಚ್ಚು ಪ್ರಾಮುಖ್ಯವಾಗಿದೆ” ಎಂದು ಡಾಕ್ಟರ್ ಬೆಂಜಮಿನ್ ಜೆ. ರೀಕ್‌ಸ್ಟೀನ್ ಹೇಳುತ್ತಾರೆ. ಇವರು ಒಹಾಯೋದಲ್ಲಿರುವ ಕ್ಲೀವ್‌ಲ್ಯಾಂಡಿನ ಶಸ್ತ್ರಚಿಕಿತ್ಸೆಯ ನಿರ್ದೇಶಕರಾಗಿದ್ದಾರೆ. ದಕ್ಷಿಣ ಆಫ್ರಿಕಾದ ಕಾನೂನು ಪತ್ರಿಕೆಯು ಹೇಳುವುದೇನೆಂದರೆ, ಕೆಲವೊಂದು ಸಂದರ್ಭಗಳಲ್ಲಿ ರಕ್ತರಹಿತ ಶಸ್ತ್ರಚಿಕಿತ್ಸೆಯು “ಬೇಗನೇ ಮುಗಿಸಬಹುದಾದ ಮತ್ತು ಶುದ್ಧವೂ, ಅಗ್ಗವೂ” ಆಗಿರುವ ಚಿಕಿತ್ಸೆಯಾಗಿದೆ. ಇನ್ನೂ ಮುಂದುವರಿಸುತ್ತಾ ಅದು ಹೇಳುವುದು: “ಅನೇಕ ಸಂದರ್ಭಗಳಲ್ಲಿ ಶಸ್ತ್ರಚಿಕಿತ್ಸೆಯ ನಂತರ ನೀಡಲಾಗುವ ಚಿಕಿತ್ಸೆಯು ಕಡಿಮೆ ಖರ್ಚಿನಿಂದ ಕೂಡಿದ್ದು ಹೆಚ್ಚು ಸಮಯವನ್ನು ಉಳಿಸುವಂತಹದ್ದಾಗಿದೆ.” ಸದ್ಯಕ್ಕೆ ಜಗತ್ತಿನಾದ್ಯಂತ 180ಕ್ಕಿಂತಲೂ ಹೆಚ್ಚಿನ ಆಸ್ಪತ್ರೆಗಳು ರಕ್ತರಹಿತ ಚಿಕಿತ್ಸೆಗೆ ಮೀಸಲಾಗಿರುವ ಮಾಹಿತಿಯನ್ನು ನೀಡುವ ವ್ಯವಸ್ಥೆಯನ್ನು ಏಕೆ ಇಟ್ಟುಕೊಂಡಿವೆ ಎಂಬುದಕ್ಕೆ ಇವು ಕೇವಲ ಕೆಲವೇ ಕಾರಣಗಳಾಗಿವೆ.
ರಕ್ತ ಮತ್ತು ಯೆಹೋವನ ಸಾಕ್ಷಿಗಳು
ಬೈಬಲಾಧಾರಿತ ಕಾರಣಗಳಿಗಾಗಿ ಯೆಹೋವನ ಸಾಕ್ಷಿಗಳು ರಕ್ತಪೂರಣವನ್ನು ನಿರಾಕರಿಸುತ್ತಾರೆ. * ಆದರೆ ಅವರು ರಕ್ತಕ್ಕೆ ಬದಲಾಗಿ ಇತರ ಪರ್ಯಾಯ ಚಿಕಿತ್ಸೆಯನ್ನು ಸ್ವೀಕರಿಸುತ್ತಾರೆ. ಇನ್ನೂ ಹೇಳಬೇಕಾದರೆ, ಅವರು ರಕ್ತಕ್ಕೆ ಬದಲಾಗಿ ಇತರ ಚಿಕಿತ್ಸೆಗಳನ್ನು ಹುಡುಕುವುದರಲ್ಲಿ ಬಹಳ ಪ್ರಯಾಸಪಡುತ್ತಾರೆ. “ಯೆಹೋವನ ಸಾಕ್ಷಿಗಳು ವೈದ್ಯಕೀಯ ಚಿಕಿತ್ಸೆಯಲ್ಲೇ ಅತ್ಯುತ್ತಮವಾದುದನ್ನು ಪಡೆದುಕೊಳ್ಳಲು ಬಹಳ ಕ್ರಿಯಾಶೀಲರಾಗಿ ಪ್ರಯತ್ನಿಸುತ್ತಾರೆ. ಅತ್ಯುತ್ತಮ ಮಾಹಿತಿಯನ್ನು ಹೊಂದಿರುವ ಇವರಂತಹ ತಿಳುವಳಿಕೆಯುಳ್ಳ ಜನರನ್ನು ಒಬ್ಬ ಸರ್ಜನ್ ಬೇರೆಲ್ಲೂ ಭೇಟಿಯಾಗಲು ಸಾಧ್ಯವೇ ಇಲ್ಲ” ಎಂದು ನ್ಯೂ ಯಾರ್ಕಿನ ಒಂದು ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಯ ನಿರ್ದೇಶಕರಾಗಿದ್ದ ಡಾಕ್ಟರ್ ರಿಚರ್ಡ್ ಕೆ. ಸ್ಪೆನ್ಸ್ ಹೇಳಿದರು.
ಅನೇಕ ಡಾಕ್ಟರರು ಯೆಹೋವನ ಸಾಕ್ಷಿಗಳಿಗೆ ರಕ್ತರಹಿತ ಶಸ್ತ್ರಚಿಕಿತ್ಸೆಯ ವಿಧಾನಗಳನ್ನು ಪ್ರಯೋಗಿಸುವುದರಲ್ಲಿ ಯಶಸ್ವಿಯಾಗಿದ್ದಾರೆ. ಕಾರ್ಡಿಯೋವ್ಯಾಸ್‌ಕುಲರ್ ಸರ್ಜನರಾದ ಡೆನ್‌ಟನ್ ಕೂಲೆ ಅವರ ಅನುಭವವನ್ನು ಪರಿಗಣಿಸಿ. ಕಳೆದ 27 ವರ್ಷಗಳಲ್ಲಿ, ಇವರ ತಂಡವು 663 ಯೆಹೋವನ ಸಾಕ್ಷಿಗಳಿಗೆ ರಕ್ತ ನೀಡದೆಯೇ ತೆರೆದ ಹೃದಯದ ಶಸ್ತ್ರಚಿಕಿತ್ಸೆಗಳನ್ನು ಮಾಡಿದೆ. ಈ ಫಲಿತಾಂಶಗಳು, ಹೃದ್ರೋಗಕ್ಕೆ ಸಂಬಂಧಿಸಿದ ಶಸ್ತ್ರಚಿಕಿತ್ಸೆಗಳನ್ನು ರಕ್ತವಿಲ್ಲದೆ ಯಶಸ್ವಿಕರವಾಗಿ ಮಾಡಬಹುದೆಂಬುದನ್ನು ಸ್ಪಷ್ಟವಾಗಿ ತೋರಿಸುತ್ತವೆ.
ನಿಜ, ಯೆಹೋವನ ಸಾಕ್ಷಿಗಳು ರಕ್ತವನ್ನು ತೆಗೆದುಕೊಳ್ಳುವುದಿಲ್ಲವೆಂದು ಅನೇಕರು ಅವರನ್ನು ಹೀಯಾಳಿಸಿದ್ದಾರೆ. ಆದರೆ, ಗ್ರೇಟ್ ಬ್ರಿಟನ್ ಮತ್ತು ಐಯರ್‌ಲ್ಯಾಂಡಿನ ಅರಿವಳಿಕೆ ತಜ್ಞರ ಸಂಘವು ಪ್ರಕಾಶಿಸಿರುವ ಒಂದು ಗೈಡ್, ಯೆಹೋವನ ಸಾಕ್ಷಿಗಳ ನಿಲುವನ್ನು “ಜೀವವನ್ನು ಗೌರವಿಸುವ ಒಂದು ಚಿಹ್ನೆ”ಯಾಗಿದೆ ಎಂದು ಹೇಳುತ್ತದೆ. ವಾಸ್ತವದಲ್ಲಿ, ಇಂದು ಎಲ್ಲರಿಗೂ ಲಭ್ಯವಿರುವ ಈ ರಕ್ತರಹಿತ ಚಿಕಿತ್ಸೆಯ ಹಿಂದೆ ಸಾಕ್ಷಿಗಳ ದೃಢವಾದ ನಿಲುವೇ ಮುಖ್ಯ ಕಾರಣವಾಗಿದೆ. “ಶಸ್ತ್ರಚಿಕಿತ್ಸೆಯ ಅಗತ್ಯವಿರುವ ಯೆಹೋವನ ಸಾಕ್ಷಿಗಳು ರಕ್ತವಿಲ್ಲದೆ ಶಸ್ತ್ರಚಿಕಿತ್ಸೆಯನ್ನು ಹೇಗೆ ಮಾಡುವುದೆಂದು ತೋರಿಸಿಕೊಟ್ಟಿದ್ದಾರೆ ಮತ್ತು ಅವರು ನಾರ್ವೇಜಿಯನ್ ಆರೋಗ್ಯ ಇಲಾಖೆಯ ಒಂದು ಬಹು ಮುಖ್ಯ ವಿಭಾಗದಲ್ಲಿ ಸುಧಾರಣೆಯನ್ನು ಮಾಡುವಂತೆ ಹೆಚ್ಚು ಒತ್ತಡವನ್ನು ಹಾಕಿದ್ದಾರೆ” ಎಂದು ನಾರ್ವೆಯ ರಾಷ್ಟ್ರೀಯ ಆಸ್ಪತ್ರೆಯ ಅಧ್ಯಾಪಕರಾಗಿರುವ ಸ್ಟಾನ್ ಎ. ಈವನ್‌ಸನ್ ಬರೆಯುತ್ತಾರೆ.
ರಕ್ತರಹಿತ ಚಿಕಿತ್ಸೆಯನ್ನು ನೀಡುವುದಕ್ಕಾಗಿ ಡಾಕ್ಟರುಗಳಿಗೆ ಸಹಾಯಮಾಡಲು ಯೆಹೋವನ ಸಾಕ್ಷಿಗಳು ಒಂದು ಉಪಯುಕ್ತ ಲಿಏಸಾನ್ ಸೇವೆಯನ್ನು ಆರಂಭಿಸಿದ್ದಾರೆ. ಸದ್ಯಕ್ಕೆ ಇಡೀ ಜಗತ್ತಿನಲ್ಲಿ 1,400ಕ್ಕಿಂತಲೂ ಹೆಚ್ಚು ಹಾಸ್ಪಿಟಲ್ ಲಿಏಸಾನ್ ಕಮಿಟಿಗಳಿವೆ. ಇವರ ಬಳಿ ಡಾಕ್ಟರರಿಗೆ ಮತ್ತು ಸಂಶೋಧಕರಿಗೆ ನೀಡುವುದಕ್ಕಾಗಿ, ರಕ್ತರಹಿತ ಚಿಕಿತ್ಸೆಗೆ ಸಂಬಂಧಿಸಿದ 3000ಕ್ಕಿಂತಲೂ ಹೆಚ್ಚು ಲೇಖನಗಳನ್ನೊಳಗೊಂಡ ವೈದ್ಯಕೀಯ ಸಾಹಿತ್ಯದ ದತ್ತಾಂಶ ಸಂಗ್ರಹವಿದೆ. “ಸಾಕ್ಷಿಗಳ ಹಾಸ್ಪಿಟಲ್ ಲಿಏಸಾನ್ ಕಮಿಟಿಗಳ ಕೆಲಸದ ನಿಮಿತ್ತ ಇಂದು ಯೆಹೋವನ ಸಾಕ್ಷಿಗಳಿಗೆ ಮಾತ್ರವಲ್ಲ, ಸಾಮಾನ್ಯ ರೋಗಿಗಳಿಗೂ ಸಹ ಅನಾವಶ್ಯಕವಾಗಿ ರಕ್ತಪೂರಣವನ್ನು ಕೊಡುವುದು ಕಡಿಮೆಯಾಗಿದೆ” ಎಂದು ಬಾಸ್ಟನಿನ ಕಾಲೇಜ್ ಲಾ ಸ್ಕೂಲಿನ ಅಧ್ಯಾಪಕರಾಗಿರುವ ಡಾಕ್ಟರ್ ಬಾರನ್ ಗಮನಿಸುತ್ತಾರೆ. *
ರಕ್ತರಹಿತ ಚಿಕಿತ್ಸೆಯ ಕುರಿತು ಯೆಹೋವನ ಸಾಕ್ಷಿಗಳು ಸಂಗ್ರಹಣ ಮಾಡಿರುವ ಮಾಹಿತಿಯು ವೈದ್ಯಕೀಯ ಕ್ಷೇತ್ರದಲ್ಲಿರುವ ಅನೇಕರಿಗೆ ಹೆಚ್ಚು ಉಪಯುಕ್ತಕರವಾಗಿದೆ. ಉದಾಹರಣೆಗಾಗಿ, ಆಟೋಟ್ರಾನ್ಸ್‌ಫ್ಯೂಷನ್: ಥೆರಪ್ಯಾಟಿಕ್ ಪ್ರಿನ್ಸಿಪಲ್ಸ್ ಆ್ಯಂಡ್ ಟ್ರೆಂಡ್ಸ್ ಎಂಬ ಹೆಸರಿನ ಪುಸ್ತಕಕ್ಕಾಗಿ ವಿಷಯಗಳನ್ನು ಸಿದ್ಧಪಡಿಸುತ್ತಿದ್ದ ಗ್ರಂಥಕರ್ತರು, ಯೆಹೋವನ ಸಾಕ್ಷಿಗಳ ಬಳಿ ರಕ್ತಪೂರಣಕ್ಕೆ ಪರ್ಯಾಯವಾಗಿರುವ ಚಿಕಿತ್ಸೆಗಳ ಕುರಿತು ಮಾಹಿತಿಯನ್ನು ನೀಡುವಂತೆ ಕೇಳಿದರು. ಸಾಕ್ಷಿಗಳು ಅವರ ಕೋರಿಕೆಯನ್ನು ಸಂತೋಷದಿಂದ ಪೂರ್ತಿಮಾಡಿದರು. ಉಪಕಾರವನ್ನು ತಿಳಿಸುವ ಸಲುವಾಗಿ ಆ ಗ್ರಂಥಕರ್ತರು ನಂತರ ಹೀಗೆ ಹೇಳಿದರು: “ಈ ವಿಷಯದ ಕುರಿತು ನಾವು ಅನೇಕ ಪುಸ್ತಕಗಳನ್ನು ಓದಿದ್ದರೂ, ಒಂದೇ ಗುಂಪಿನ ರಕ್ತಪೂರಣವನ್ನು ತಪ್ಪಿಸುವ ಪ್ರತಿಯೊಂದು ಸೂಕ್ಷ್ಮ ವಿಧಾನವನ್ನು ವಿವರಿಸುವ ಸಂಪೂರ್ಣ ಪಟ್ಟಿಯನ್ನು ನೀಡಿದ್ದರೂ, ಮಾಹಿತಿಯನ್ನು ಅಷ್ಟು ಸಂಕ್ಷಿಪ್ತವಾಗಿ ಬರೆದಿರುವಂಥ ಪುಸ್ತಕವನ್ನು ನಾವು ಇದುವರೆಗೂ ನೋಡಿಯೇ ಇಲ್ಲ.”
ವೈದ್ಯಕೀಯ ಜಗತ್ತಿನಲ್ಲಾಗಿರುವ ಪ್ರಗತಿಯು ಅನೇಕರಲ್ಲಿ ರಕ್ತರಹಿತ ಚಿಕಿತ್ಸೆಯ ಕುರಿತು ಜಾಗೃತಿಯನ್ನುಂಟುಮಾಡಿದೆ. ಹಾಗಾದರೆ, ನಾವು ಭವಿಷ್ಯತ್ತಿನಲ್ಲಿ ಇನ್ನೂ ಯಾವ ರೀತಿಯ ಪ್ರಗತಿಯನ್ನು ನಿರೀಕ್ಷಿಸಬಹುದು? ಏಯ್ಡ್ಸ್ ರೋಗಾಣುವನ್ನು ಕಂಡುಹಿಡಿದ ಅಧ್ಯಾಪಕರಾದ ಲ್ಯೂಕ್ ಮಾಂಟ್ಯೆನ ಹೇಳುವುದು: “ಈ ಕ್ಷೇತ್ರದಲ್ಲಿ ನಾವು ಇದುವರೆಗೂ ತಿಳಿದುಕೊಂಡಿರುವ ವಿಷಯಗಳಲ್ಲಿ ಮಾಡಿರುವ ಪ್ರಗತಿಯು, ರಕ್ತಪೂರಣಗಳು ಒಂದು ದಿನ ಕಣ್ಮರೆಯಾಗಬೇಕು ಎಂಬುದನ್ನು ತೋರಿಸುತ್ತದೆ.” ಅಲ್ಲಿಯವರೆಗೂ, ರಕ್ತಕ್ಕೆ ಬದಲಾಗಿರುವ ಪರ್ಯಾಯ ಚಿಕಿತ್ಸೆಗಳು ಈಗಾಗಲೇ ಜೀವಗಳನ್ನು ರಕ್ಷಿಸುತ್ತಿವೆ.
[ಪಾದಟಿಪ್ಪಣಿಗಳು]
^ ಯಾಜಕಕಾಂಡ 7:26, 27; 17:10-14; ಧರ್ಮೋಪದೇಶಕಾಂಡ 12:23-25; 15:23; ಅ. ಕೃತ್ಯಗಳು 15:20, 28, 29; 21:25ನೆಯ ವಚನಗಳನ್ನು ನೋಡಿರಿ.
^ ಹಾಸ್ಪಿಟಲ್ ಲಿಏಸಾನ್ ಕಮಿಟಿಯವರನ್ನು ಆಮಂತ್ರಿಸುವುದಾದರೆ, ಅವರು ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ ವರ್ಗದವರಿಗೆ ನಿರೂಪಣೆಯನ್ನು ಸಹ ಮಾಡಿತೋರಿಸುತ್ತಾರೆ. ಅದರೊಂದಿಗೆ, ನಿರ್ದಿಷ್ಟವಾದ ಸಹಾಯವನ್ನು ಕೋರುವಲ್ಲಿ, ಚಿಕಿತ್ಸೆ ನೀಡುತ್ತಿರುವ ಹೊಣೆಹೊತ್ತ ಡಾಕ್ಟರರೊಂದಿಗೆ ರೋಗಿಗಳು ಮುಂಚಿತವಾಗಿಯೇ ಮುಚ್ಚುಮರೆಯಿಲ್ಲದೆ ಮಾತಾಡುವಂತೆ ಮತ್ತು ಅವರೊಂದಿಗೆ ನಿರಂತರವಾದ ಸಂಪರ್ಕವನ್ನು ಸಹ ಮಾಡುವಂತೆ ಸಹಾಯಮಾಡುವರು.
[ಪುಟ 7ರಲ್ಲಿರುವ ಚೌಕ/ಚಿತ್ರಗಳು]
ಕೆಲವು ಡಾಕ್ಟರರು ಏನು ಹೇಳುತ್ತಾರೆಂಬುದನ್ನು ನೋಡೋಣ
‘ರಕ್ತರಹಿತ ಶಸ್ತ್ರಚಿಕಿತ್ಸೆಯು ಯೆಹೋವನ ಸಾಕ್ಷಿಗಳಿಗೆ ಮಾತ್ರವಲ್ಲ, ಎಲ್ಲಾ ರೋಗಿಗಳಿಗೂ ಅಗತ್ಯವಿದೆ. ಪ್ರತಿಯೊಬ್ಬ ಡಾಕ್ಟರ್ ರಕ್ತರಹಿತ ಶಸ್ತ್ರಚಿಕಿತ್ಸೆಯನ್ನು ಮಾಡಬೇಕೆಂದು ನನಗನಿಸುತ್ತದೆ.’—ಜರ್ಮನಿಯ ಲುಡ್‌ವಿಗ್‌ಷಾಫೆನ್‌ನಲ್ಲಿರುವ ಅರಿವಳಿಕೆಶಾಸ್ತ್ರದ ಅಧ್ಯಾಪಕರಾದ ಡಾಕ್ಟರ್ ಜೊಯೆಕಿಮ್ ಬಾಲ್ಟ್.
“ಇಂದು ರಕ್ತಪೂರಣಗಳು ಸುರಕ್ಷಿತವಾಗಿರುವುದಾದರೂ, ಅವು ದೇಹದ ರಕ್ಷಣಾ ವ್ಯವಸ್ಥೆಯ ಮೇಲೆ ಉಂಟುಮಾಡುವ ಪ್ರತಿಕ್ರಿಯೆಗಳೊಂದಿಗೆ ಮತ್ತು ಹೆಪಿಟೈಟಸ್ ಅಥವಾ ಲೈಂಗಿಕ ಕಾಯಿಲೆಗಳಿಂದ ಸೋಂಕಿತಗೊಳ್ಳುವ ಅಪಾಯಗಳನ್ನು ಒಡ್ಡುತ್ತವೆ.”—ಔಷಧಿಶಾಸ್ತ್ರದ ಸಹಾಯಕ ಅಧ್ಯಾಪಕರಾಗಿರುವ ಡಾಕ್ಟರ್ ಟೆರೆನ್ಸ್ ಜೆ. ಸಾಕಿ.
“ರಕ್ತಪೂರಣ ಬೇಡ ಎಂದೊಡನೆ ಹೆಚ್ಚಿನ ಡಾಕ್ಟರರು ಆಲೋಚನೆ ಮಾಡದೆ ಥಟ್ಟನೆ ಪ್ರತಿಕ್ರಿಯಿಸುತ್ತಾರೆ ಮತ್ತು ಯಾವುದೇ ತಾರತಮ್ಯವಿಲ್ಲದೆ ರಕ್ತವನ್ನು ಉದಾರವಾಗಿ ಕೊಟ್ಟುಬಿಡುತ್ತಾರೆ. ಆದರೆ ನಾನು ಹಾಗಲ್ಲ.”—ಸ್ಯಾನ್‌ಫ್ರಾನ್ಸಿಸ್ಕೋದ ಹೃದ್ರೋಗ ಇನ್ಸ್‌ಟ್ಯೂಟಿನಲ್ಲಿರುವ ಹೃದ್ರೋಗ ಶಸ್ತ್ರಚಿಕಿತ್ಸೆಯ ನಿರ್ದೇಶಕರಾದ ಡಾಕ್ಟರ್ ಅಲೆಕ್ಸ್ ಸೊಪಲ್ಯಾನ್‌ಸ್ಕಿ.
“ನನ್ನ ಪ್ರಕಾರ, ಕಿಬ್ಬೊಟ್ಟೆಯ ಶಸ್ತ್ರಚಿಕಿತ್ಸೆಗಾಗಿ ಬರುವ ಒಬ್ಬ ಸಾಮಾನ್ಯ ರೋಗಿಗೆ ರಕ್ತಪೂರಣ ಕೊಡುವ ಅಗತ್ಯ ಇಲ್ಲ. ಆದರೆ ಯಾಕೆ ಕೊಡುತ್ತಾರೆಂದು ನನಗೆ ಗೊತ್ತಿಲ್ಲ.”—ಜರ್ಮನಿಯ ಜೆನದಲ್ಲಿರುವ ಶಸ್ತ್ರಚಿಕಿತ್ಸೆಯ ಅಧ್ಯಾಪಕರಾದ ಡಾಕ್ಟರ್ ಜೋಹಾನೆಸ್ ಷಲೆ ಹೇಳುತ್ತಾರೆ.
[ಚಿತ್ರಗಳು]
ಡಾಕ್ಟರ್ ಟೆರೆನ್ಸ್ ಜೆ. ಸಾಕಿ
ಡಾಕ್ಟರ್ ಜೊಯೆಕಿಮ್ ಬಾಲ್ಟ್
[ಪುಟ 8, 9ರಲ್ಲಿರುವ ಚೌಕ/ಚಿತ್ರಗಳು]
ರಕ್ತರಹಿತ ಚಿಕಿತ್ಸೆಯ
ಕೆಲವು ವಿಧಾನಗಳು
ದ್ರಾವಣಗಳು: ರಕ್ತದ ಪ್ರಮಾಣವನ್ನು ಸಮಮಟ್ಟದಲ್ಲಿಡಲು ಮತ್ತು ರಕ್ತಕೊರೆಯಿಂದಾಗಿ ಉಂಟಾಗುವ ಕಣ್ಣುಕತ್ತಲೆ ಬಂದಂತಾಗಿ ಸುಸ್ತಾಗುವುದನ್ನು (ಹೈಪೊವೊಲಮಿಕ್ ಷಾಕ್) ತಡೆಯಲು ರಿಂಗರ್ಸ್ ಲ್ಯಾಕ್ಟೇಟ್ ಸಲ್ಯುಷನ್, ಡೆಕ್ಸ್‌ಟ್ರಾನ್, ಹೈಡ್ರಾಕ್ಸಿಥೈಲ್ ಸ್ಟಾರ್ಚ್ ಮತ್ತು ಆಮ್ಲಜನಕವನ್ನು ಒಯ್ಯುವ ಇತರ ದ್ರಾವಣಗಳನ್ನು ಈಗ ಕಂಡುಹಿಡಿಯಲಾಗುತ್ತಿದೆ.
ಔಷಧಗಳು: ತಳಿ ತಂತ್ರಜ್ಞಾನದ ಸಹಾಯದಿಂದ ತಯಾರಿಸಿರುವ ಪ್ರೋಟೀನುಗಳು, ಕೆಂಪು ರಕ್ತಕಣಗಳು (ಎರಿತ್ರೋಪಾಯಿಟಿನ್‌ಗಳು), ರಕ್ತದ ಕಿರುಫಲಕಗಳು (ಇಂಟರ್‌ಲ್ಯೂಕಿನ್-11) ಮತ್ತು ಇನ್ನಿತರ ಹಲವಾರು ಬಿಳಿ ರಕ್ತಕಣಗಳನ್ನು (ಜಿಎಮ್-ಸಿಎಸ್‌ಎಫ್, ಜಿ-ಸಿಎಸ್‌ಎಫ್) ಹೆಚ್ಚು ಉತ್ಪಾದಿಸುವಂತೆ ಸಹಾಯಮಾಡುತ್ತವೆ. ಇನ್ನಿತರ ಔಷಧಿಗಳಾದ (ಆ್ಯಪ್ರೋಟಿನಿನ್, ಆ್ಯಂಟಿಫೈಬ್ರಿನಾಲಿಟಿಕ್ಸ್) ಶಸ್ತ್ರಚಿಕಿತ್ಸೆಯ ಸಮಯದಲ್ಲಿ ರಕ್ತ ನಷ್ಟವಾಗುವುದನ್ನು ಹೆಚ್ಚು ಪರಿಣಾಮಕಾರಿಯಾದ ರೀತಿಯಲ್ಲಿ ಕಡಿಮೆಮಾಡುತ್ತವೆ. ಇಲ್ಲವೇ (ಡೆಸ್ಮೊಪ್ರೆಸಿನ್) ಎಂಬ ಔಷಧಿಯು ತೀವ್ರ ರಕ್ತಸ್ರಾವವಾಗುವುದನ್ನು ಕಡಿಮೆಮಾಡಲು ಸಹಾಯಮಾಡುತ್ತದೆ.
ಬಯಲಾಜಿಕಲ್ ಹೆಮೋಸ್ಟಾಟ್ಸ್: ಕಾಲಜೆನ್ ಮತ್ತು ಸೆಲ್ಯುಲ್ಯೋಸ್‌ನಿಂದ ಹೆಣೆಯಲ್ಪಟ್ಟಿರುವ ಪ್ಯಾಡ್‌ಗಳನ್ನು ನೇರವಾಗಿ ಗಾಯದ ಮೇಲೆ ಹಾಕುವ ಮೂಲಕ ರಕ್ತಸ್ರಾವವನ್ನು ನಿಲ್ಲಿಸಬಹುದು. ಆಳವಾದ ಗಾಯಗಳನ್ನು ಇಲ್ಲವೇ ಹೆಚ್ಚು ರಕ್ತಸ್ರಾವವಾಗುತ್ತಿರುವ ದೊಡ್ಡ ಗಾಯಗಳನ್ನು ಮುಚ್ಚಲು, ಫಿಬ್ರಿನ್ ಅಂಟುಗಳು ಮತ್ತು ಸೆಲನ್‌ಟ್ಸ್ ಅನ್ನು ಉಪಯೋಗಿಸಬಹುದು.
ರಕ್ತ ಸಂರಕ್ಷಣೆ: ಶಸ್ತ್ರಚಿಕಿತ್ಸೆಯ ಸಮಯದಲ್ಲಿ ರಕ್ತವು ನಷ್ಟವಾಗದಂತೆ ಮಾಡುವ ರಕ್ತ ಸಂರಕ್ಷಣಾ ಯಂತ್ರಗಳಿವೆ. ಒಮ್ಮೆ ಶುಚಿಗೊಳಿಸಲ್ಪಟ್ಟ ರಕ್ತವನ್ನು ಮತ್ತೆ ಹೊರತೆಗೆಯದೇ ನೇರವಾಗಿ ರೋಗಿಯ ದೇಹದೊಳಗೆ ಕಳುಹಿಸಬಹುದು. ಕೆಲವೊಂದು ಸಂದರ್ಭಗಳಲ್ಲಿ ಈ ರೀತಿಯ ಯಂತ್ರದ ವ್ಯವಸ್ಥೆಯಿಂದ ಕೆಲವು ಲೀಟರುಗಳಷ್ಟು ರಕ್ತವನ್ನು ಪುನಃ ದೇಹವು ಪಡೆದುಕೊಳ್ಳಬಹುದು.
ಶಸ್ತ್ರಚಿಕಿತ್ಸೆಯ ಉಪಕರಣಗಳು: ಕೆಲವು ಸಲಕರಣೆಗಳು ರಕ್ತನಾಳಗಳನ್ನು ಕತ್ತರಿಸಿ ಅವೇ ಜೋಡಿಸುವಂಥ ಕೆಲಸವನ್ನು ಒಟ್ಟೊಟ್ಟಿಗೆ ಮಾಡುತ್ತವೆ. ಇನ್ನಿತರ ಉಪಕರಣಗಳು ದೊಡ್ಡದಾಗಿ ಕತ್ತರಿಸಿದ ಅಂಗಾಂಶಗಳಲ್ಲಿ ರಕ್ತಸ್ರಾವವಾಗುವುದನ್ನು ಮುಚ್ಚಲು ಶಕ್ತವಾಗಿರುತ್ತವೆ. ಸಾಮಾನ್ಯವಾಗಿ ದೇಹದ ಭಾಗವನ್ನು ದೊಡ್ಡದಾಗಿ ಕತ್ತರಿಸುವುದರಿಂದ ಉಂಟಾಗುವ ರಕ್ತದ ನಷ್ಟವನ್ನು, ಲ್ಯಾಪರಸ್ಕೋಪಿ ಮತ್ತು ಆದಷ್ಟು ಕಡಿಮೆ ಭಾಗವನ್ನು ಕತ್ತರಿಸುವ ಉಪಕರಣಗಳು, ರಕ್ತನಷ್ಟವಿಲ್ಲದೆಯೇ ಶಸ್ತ್ರಚಿಕಿತ್ಸೆ ಮಾಡುವಂತೆ ಸಹಾಯಮಾಡುತ್ತವೆ.
ಶಸ್ತ್ರಚಿಕಿತ್ಸೆಯ ವಿಧಾನಗಳು: ಶಸ್ತ್ರಚಿಕಿತ್ಸೆ ಮಾಡುವ ಮುಂಚೆ ಪರಿಣತ ಡಾಕ್ಟರರೊಂದಿಗೆ ಸಲಹೆ ಪಡೆಯಬೇಕು. ಮತ್ತು ಆಪರೇಷನ್ ಅನ್ನು ಹೇಗೆ ಮಾಡಬೇಕೆಂಬುದರ ಕುರಿತು ಡಾಕ್ಟರರು ಮೊದಲೇ ಸಂಪೂರ್ಣ ಯೋಜನೆಯನ್ನು ಮಾಡಬೇಕು. ಏಕೆಂದರೆ, ಶಸ್ತ್ರಚಿಕಿತ್ಸೆಯ ತಂಡದವರು ಯಾವುದೇ ತೊಡಕುಗಳನ್ನು ತಪ್ಪಿಸುವುದಕ್ಕೆ ಅದು ಸಹಾಯಮಾಡುವುದು. ರಕ್ತಸ್ರಾವವನ್ನು ನಿಲ್ಲಿಸಲು ಕೂಡಲೇ ಕ್ರಿಯೆಗೈಯುವುದು ಬಹು ಪ್ರಾಮುಖ್ಯ. ಏಕೆಂದರೆ 24 ಗಂಟೆಗಿಂತಲೂ ಹೆಚ್ಚು ಸಮಯ ವಿಳಂಬಮಾಡುವಲ್ಲಿ ರೋಗಿಯು ಬದುಕುವ ಸಾಧ್ಯತೆಯು ಬಹಳ ಕಡಿಮೆಯಾಗಿರುವುದು. ದೊಡ್ಡ ಶಸ್ತ್ರಚಿಕಿತ್ಸೆಗಳನ್ನು ಹಲವು ಸಣ್ಣ ಶಸ್ತ್ರಚಿಕಿತ್ಸೆಗಳಾಗಿ ಮಾಡುವುದಾದರೆ, ಸಂಪೂರ್ಣ ರಕ್ತದ ನಷ್ಟವನ್ನು ಕಡಿಮೆಗೊಳಿಸಬಹುದು.
[ಪುಟ 10ರಲ್ಲಿರುವ ಚೌಕ/ಚಿತ್ರಗಳು]
ರಕ್ತರಹಿತ ಔಷಧಿ—ಒಂದು ಹೊಸ “ಗುಣಮಟ್ಟದ ಚಿಕಿತ್ಸೆಯೋ”?
ಎಚ್ಚರ! ಪತ್ರಿಕೆಯವರು ರಕ್ತರಹಿತ ಚಿಕಿತ್ಸೆಯ ಪ್ರಯೋಜನಗಳನ್ನು ಆ ಕ್ಷೇತ್ರದ ನಾಲ್ಕು ಪರಿಣತರೊಂದಿಗೆ ಚರ್ಚಿಸಿದರು.
ಧಾರ್ಮಿಕ ಕಾರಣಗಳಿಗಾಗಿ ರಕ್ತವನ್ನು ನಿರಾಕರಿಸುವ ರೋಗಿಗಳಲ್ಲದೆ, ಬೇರೆ ಯಾರು ಕೂಡ ರಕ್ತರಹಿತ ಚಿಕಿತ್ಸೆಯಲ್ಲಿ ಆಸಕ್ತಿಯನ್ನು ತೋರಿಸುತ್ತಿದ್ದಾರೆ?
ಡಾಕ್ಟರ್ ಶ್ಯಫಾನ್: ಸಾಮಾನ್ಯವಾಗಿ ನಮ್ಮ ಕೇಂದ್ರದಲ್ಲಿ ರಕ್ತರಹಿತ ಚಿಕಿತ್ಸೆಗಾಗಿ ಬರುವ ರೋಗಿಗಳು ಅತ್ಯಂತ ಹೆಚ್ಚು ತಿಳುವಳಿಕೆಯುಳ್ಳವರಾಗಿರುತ್ತಾರೆ.
ಡಾಕ್ಟರ್ ಶ್ಯಾಂಡರ್: 1998ರಲ್ಲಿ ವೈಯಕ್ತಿಕ ಕಾರಣಗಳಿಗಾಗಿ ರಕ್ತವನ್ನು ನಿರಾಕರಿಸಿದವರ ಸಂಖ್ಯೆಯು, ಧಾರ್ಮಿಕ ಕಾರಣಗಳಿಗಾಗಿ ರಕ್ತವನ್ನು ನಿರಾಕರಿಸಿದವರ ಸಂಖ್ಯೆಗಿಂತ ಹೆಚ್ಚಾಗಿತ್ತು.
ಡಾಕ್ಟರ್ ಬಾಯ್ಡ್: ಉದಾಹರಣೆಗೆ, ಕ್ಯಾನ್ಸರ್ ರೋಗಿಗಳನ್ನೇ ತೆಗೆದುಕೊಳ್ಳಿ. ಅವರು ರಕ್ತವನ್ನು ತೆಗೆದುಕೊಳ್ಳದೆಯೇ ಬೇಗನೆ ಗುಣಮುಖರಾಗಿದ್ದಾರೆ ಮತ್ತು ಆ ಕಾಯಿಲೆಯು ಮತ್ತೆ ಬರುವ ಸಾಧ್ಯತೆಯು ಕಡಿಮೆಯಿರುವುದನ್ನು ನಾವು ಅನೇಕವೇಳೆ ನೋಡಿದ್ದೇವೆ.
ಡಾಕ್ಟರ್ ಶ್ಯಫಾನ್: ಅನೇಕ ಸಮಯಗಳಲ್ಲಿ ನಾವು ವಿಶ್ವವಿದ್ಯಾನಿಲಯದ ಅಧ್ಯಾಪಕರು ಮತ್ತು ಅವರ ಕುಟುಂಬದವರಿಗೆ ರಕ್ತವಿಲ್ಲದೆಯೇ ಚಿಕಿತ್ಸೆ ನೀಡುತ್ತೇವೆ. ಅಷ್ಟು ಮಾತ್ರವಲ್ಲ, ಸರ್ಜನ್‌ಗಳು ಸಹ ರಕ್ತಪೂರಣವನ್ನು ತಪ್ಪಿಸುವಂತೆ ನಮಗೆ ಹೇಳುತ್ತಾರೆ! ಉದಾಹರಣೆಗೆ, ಒಬ್ಬ ಸರ್ಜನ್ ತನ್ನ ಹೆಂಡತಿಗೆ ಶಸ್ತ್ರಚಿಕಿತ್ಸೆಯ ಅಗತ್ಯವಿದ್ದುದರಿಂದ ನಮ್ಮಲ್ಲಿಗೆ ಬಂದರು. ಅವರು ಹೇಳಿದ್ದು: “ನನ್ನ ಹೆಂಡತಿಗೆ ರಕ್ತವನ್ನು ಮಾತ್ರ ಯಾರೂ ಕೊಡದಂತೆ ನೋಡಿಕೊಳ್ಳಿ!”
ಡಾಕ್ಟರ್ ಶ್ಯಾಂಡರ್: ನನ್ನ ಅರಿವಳಿಕೆಯ ಇಲಾಖೆಯಲ್ಲಿರುವ ಸದಸ್ಯರು ಹೇಳಿದ್ದು: ‘ರಕ್ತ ತೆಗೆದುಕೊಳ್ಳದಿರುವ ಈ ರೋಗಿಗಳು ಒಳ್ಳೇ ಪ್ರಗತಿಯನ್ನು ಮಾಡುತ್ತಿದ್ದಾರೆ. ಅಷ್ಟೇ ಏಕೆ, ರಕ್ತ ತೆಗೆದುಕೊಳ್ಳುವ ರೋಗಿಗಳಿಗಿಂತ ಇವರ ಸ್ಥಿತಿ ಉತ್ತಮವಾಗಿದೆ ಎಂದೇ ಹೇಳಬಹುದು. ನಾವು ಎರಡು ರೀತಿಯ ಚಿಕಿತ್ಸೆಯ ಮಟ್ಟಗಳನ್ನು ಯಾಕೆ ಇಟ್ಟುಕೊಂಡಿರಬೇಕು? ರಕ್ತರಹಿತ ಚಿಕಿತ್ಸೆಯೇ ಉತ್ತಮವಾಗಿರುವಲ್ಲಿ, ಅದನ್ನೇ ಎಲ್ಲರಿಗೂ ಯಾಕೆ ಕೊಡಬಾರದು?’ ಆದ್ದರಿಂದಲೇ ಇಂದು ನಾವು ರಕ್ತರಹಿತ ಚಿಕಿತ್ಸೆಯನ್ನು ಒಂದು ಗುಣಮಟ್ಟದ ಚಿಕಿತ್ಸೆಯಾಗುವಂತೆ ಎದುರುನೋಡುತ್ತಿದ್ದೇವೆ.
ಡಾಕ್ಟರ್ ಎರ್ನ್‌ಷಾವ್: ರಕ್ತರಹಿತ ಶಸ್ತ್ರಚಿಕಿತ್ಸೆಯು ಯೆಹೋವನ ಸಾಕ್ಷಿಗಳಿಗೆ ಮಾತ್ರವೇ ಯುಕ್ತವಾಗಿರುವುದಂತೂ ನಿಜ. ಆದರೆ ನಾವು ಪ್ರತಿಯೊಬ್ಬರಿಗೂ ಇದೇ ಚಿಕಿತ್ಸೆಯನ್ನು ನೀಡಲು ಬಯಸುತ್ತೇವೆ.
ರಕ್ತರಹಿತ ಚಿಕಿತ್ಸೆಯು ದುಬಾರಿಯೋ ಅಥವಾ ಅಗ್ಗವೋ?
ಡಾಕ್ಟರ್ ಎರ್ನ್‌ಷಾವ್: ಇದು ಹಣದ ಉಳಿತಾಯವನ್ನು ಮಾಡುತ್ತದೆ.
ಡಾಕ್ಟರ್ ಶ್ಯಾಂಡರ್: ರಕ್ತರಹಿತ ಚಿಕಿತ್ಸೆಯಲ್ಲಿ ಶೇಕಡ 25ರಷ್ಟು ವೆಚ್ಚ ಕಡಿಮೆಯಾಗಿರುತ್ತದೆ.
ಡಾಕ್ಟರ್ ಬಾಯ್ಡ್: ಹಣದ ಉಳಿತಾಯಕ್ಕಾಗಿಯಾದರೂ ನಾವು ರಕ್ತರಹಿತ ಚಿಕಿತ್ಸೆಯನ್ನು ಮಾಡಬೇಕು.
ರಕ್ತರಹಿತ ಚಿಕಿತ್ಸೆಯನ್ನು ನೀಡುವ ವಿಧಾನದಲ್ಲಿ ನಾವು ಎಷ್ಟರ ಮಟ್ಟಿಗೆ ಪ್ರಗತಿಯನ್ನು ಮಾಡಿದ್ದೇವೆ?
ಡಾಕ್ಟರ್ ಬಾಯ್ಡ್: ರಕ್ತರಹಿತ ಚಿಕಿತ್ಸೆಯು ಹೆಚ್ಚು ಪ್ರಗತಿಯಾಗುತ್ತಿದೆಯೆಂದು ನನಗನಿಸುತ್ತದೆ. ಆದರೆ ಪ್ರಗತಿಯ ಅಂತಿಮ ಮಟ್ಟವನ್ನು ನಾವಿನ್ನೂ ಮುಟ್ಟಿಲ್ಲ. ರಕ್ತವನ್ನು ಉಪಯೋಗಿಸಬಾರದೆಂಬುದಕ್ಕೆ ಪ್ರತಿಸಾರಿಯೂ ನಾವು ಹೊಸ ಹೊಸ ಕಾರಣಗಳನ್ನು ಕಂಡುಹಿಡಿಯುತ್ತಲೇ ಇದ್ದೇವೆ.
[ಚಿತ್ರಗಳು]
ಡಾಕ್ಟರ್ ಪೀಟರ್ ಎರ್ನ್‌ಷಾವ್, ಎಫ್‌ಆರ್‌ಸಿಎಸ್, ಮೂಳೆಶಾಸ್ತ್ರದ ಸಲಹಾ ಸರ್ಜನ್, ಲಂಡನ್, ಇಂಗ್ಲೆಂಡ್
ಡಾಕ್ಟರ್ ಆ್ಯರ್ಯೆ ಶ್ಯಾಂಡರ್ ಅರಿವಳಿಕೆಶಾಸ್ತ್ರದ ಸಹಾಯಕ ಚಿಕಿತ್ಸೆಯ ಅಧ್ಯಾಪಕ, ಅಮೆರಿಕಾ
ಡಾಕ್ಟರ್ ಡೊನಾಟ್ ಆರ್. ಶ್ಯಫಾನ್. ಅರಿವಳಿಕೆ ಶಾಸ್ತ್ರದ ಅಧ್ಯಾಪಕ, ಸುರಿಕ್, ಸ್ವಿಟ್ಸರ್‌ಲ್ಯಾಂಡ್
ಡಾಕ್ಟರ್ ಮಾರ್ಕ್ ಈ. ಬಾಯ್ಡ್ ಪ್ರಸೂತಿ ಶಾಸ್ತ್ರ ಮತ್ತು ಸ್ತ್ರೀರೋಗ ಶಾಸ್ತ್ರದ ಅಧ್ಯಾಪಕ, ಕೆನಡ
[ಪುಟ 11ರಲ್ಲಿರುವ ಚೌಕ]
ರೋಗಿಯ ಪಾತ್ರ
▪ ಚಿಕಿತ್ಸೆಯ ಅಗತ್ಯವು ಬರುವ ಮುಂಚೆಯೇ ರಕ್ತರಹಿತ ಚಿಕಿತ್ಸೆಗಾಗಿ ನಿಮ್ಮ ಡಾಕ್ಟರ್ ಬಳಿ ಮಾತನಾಡಿ. ಇದು ವಿಶೇಷವಾಗಿ ಗರ್ಭಿಣಿ ಸ್ತ್ರೀಗೆ, ಚಿಕ್ಕ ಮಕ್ಕಳಿರುವ ಹೆತ್ತವರಿಗೆ ಮತ್ತು ವೃದ್ಧರಿಗೆ ಬಹಳ ಪ್ರಾಮುಖ್ಯವಾಗಿದೆ.
▪ ನಿಮ್ಮ ಇಚ್ಛೆಗಳನ್ನು ಲಿಖಿತ ರೂಪದಲ್ಲಿ ಬರೆದಿಡಿ. ಈ ರೀತಿಯ ಉದ್ದೇಶಕ್ಕಾಗಿಯೇ ಲಭ್ಯವಿರುವ ಶಾಸನಬದ್ಧ ದಾಖಲೆಗಳಿರುವಲ್ಲಿ, ಅದರಲ್ಲಿ ಮುಂಚಿತವಾಗಿಯೇ ಬರೆದಿಡಿ.
▪ ನಿಮ್ಮ ಡಾಕ್ಟರ್ ರಕ್ತವಿಲ್ಲದೆ ಚಿಕಿತ್ಸೆ ನೀಡಲು ತಯಾರಿಲ್ಲದಿದ್ದರೆ, ನಿಮ್ಮ ಇಚ್ಛೆಗಳನ್ನು ಗೌರವಿಸಿ ಅದನ್ನು ಪೂರೈಸುವ ಡಾಕ್ಟರನನ್ನು ಕಂಡುಹಿಡಿಯಲು ಪ್ರಯತ್ನಿಸಿ.
▪ ರಕ್ತಕ್ಕೆ ಬದಲಾಗಿ ಉಪಯೋಗಿಸುವ ಕೆಲವು ಔಷಧಿಗಳು ಹೆಚ್ಚು ಪರಿಣಾಮಕಾರಿಯಾಗಿ ಕೆಲಸಮಾಡಲು ಸಮಯ ತೆಗೆದುಕೊಳ್ಳುವುದರಿಂದ, ಶಸ್ತ್ರಚಿಕಿತ್ಸೆಯ ಅಗತ್ಯವು ಖಂಡಿತವಾಗಿಯೂ ಇದೆ ಎಂದು ನಿಮಗೆ ತಿಳಿದುಬರುವಲ್ಲಿ, ಚಿಕಿತ್ಸೆಗಾಗಿ ಹುಡುಕಾಡುತ್ತಾ ಶಸ್ತ್ರಚಿಕಿತ್ಸೆಯನ್ನು ಮುಂದೂಡಬೇಡಿ.