ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಲಾಮು—ಸಮಯ ಗತಿಸಿದಂತೆ ಸ್ವಲ್ಪವೇ ಬದಲಾವಣೆಯನ್ನು ಕಂಡಿರುವ ಒಂದು ದ್ವೀಪ

ಲಾಮು—ಸಮಯ ಗತಿಸಿದಂತೆ ಸ್ವಲ್ಪವೇ ಬದಲಾವಣೆಯನ್ನು ಕಂಡಿರುವ ಒಂದು ದ್ವೀಪ

ಲಾಮು—ಸಮಯ ಗತಿಸಿದಂತೆ ಸ್ವಲ್ಪವೇ ಬದಲಾವಣೆಯನ್ನು ಕಂಡಿರುವ ಒಂದು ದ್ವೀಪ

ಕೆನ್ಯದ ಎಚ್ಚರ! ಸುದ್ದಿಗಾರರಿಂದ

ಲವಣಯುತ ಗಾಳಿಯು ಹಡಗಿನ ಪಟಕ್ಕೆ ಜೋರಾಗಿ ಬೀಸಿದಾಗ, ಸಣ್ಣ ಮರದ ಹಡಗು ಮುಂದೆ ಮುಂದೆ ಚಲಿಸಲು ಆರಂಭಿಸಿತು. ಹಡಗುಕಟ್ಟೆಯ ಎತ್ತರದಲ್ಲಿ, ಹಡಗಿನ ಪಟಸ್ತಂಭವನ್ನು ಬಿಗಿಯಾಗಿ ಹಿಡಿದುಕೊಳ್ಳುತ್ತಾ, ಹಿಂದೂಸಾಗರದ ಹೊಳಪು ಪಹರೆಯೊಬ್ಬನ ಕಣ್ಣನ್ನು ಕುಕ್ಕುತ್ತಿದ್ದರೂ, ಅದನ್ನು ಲೆಕ್ಕಿಸದೆ ನೆಲಕ್ಕಾಗಿ ದೂರದಿಂದಲೇ ಅವನು ಹುಡುಕಾಡುತ್ತಿದ್ದನು. ಅದು ಸಾ.ಶ. 15ನೇ ಶತಮಾನವಾಗಿತ್ತು ಮತ್ತು ಈ ನಾವಿಕರು ಲಾಮು ದ್ವೀಪಕ್ಕಾಗಿ ಹುಡುಕಾಡುತ್ತಿದ್ದರು.

ಆಫ್ರಿಕವು ಇವರಿಗೆ ಚಿನ್ನ, ದಂತ, ಸಾಂಬಾರು ಪದಾರ್ಥ ಮತ್ತು ಗುಲಾಮರನ್ನು ಒದಗಿಸಿತ್ತು. ಆಫ್ರಿಕದ ಸಂಪತ್ತಿನಿಂದ ಮೋಹಿತರಾಗಿ ಮತ್ತು ಹೊಸ ಸಾಹಸಗಳನ್ನು ಮಾಡಲು ಪ್ರೇರೇಪಿಸಲ್ಪಟ್ಟವರಾಗಿ, ದೂರದ ದೇಶಗಳಿಂದ ಬಂದಿರುವ ಈ ಧೀರ ಪುರುಷರು ಆಫ್ರಿಕದ ಪೂರ್ವ ಕರಾವಳಿತೀರದ ವರೆಗೆ ಹಡಗಿನಲ್ಲಿ ಪ್ರಯಾಣಿಸಿದರು. ಧನಸಂಪತ್ತನ್ನು ಹುಡುಕಲಿಕ್ಕಾಗಿ ನಾವಿಕರು, ಅಲ್ಲೋಲಕಲ್ಲೋಲವಾಗಿದ್ದ ಸಮುದ್ರವನ್ನು ಮತ್ತು ಬಿರುಸಿನ ಬಿರುಗಾಳಿಯನ್ನು ಧೈರ್ಯದಿಂದ ಎದುರಿಸಿದರು. ಜನರಿಂದ ಕಿಕ್ಕಿರಿದು ತುಂಬಿರುವ ಹಡಗುಗಳನ್ನು ಹತ್ತಿ ಅವರು ದೂರದ ಪ್ರಯಾಣವನ್ನು ಕೈಗೊಳ್ಳುತ್ತಿದ್ದರು.

ಆಫ್ರಿಕದ ಪೂರ್ವ ಕರಾವಳಿತೀರದ ನಡು ದಾರಿಯಲ್ಲಿ, ಲಾಮುವಿನ ದ್ವೀಪಸಮೂಹಗಳಾದ ಒಂದು ಚಿಕ್ಕ ದ್ವೀಪಸಮೂಹವು, ಸಮುದ್ರ ಸಂಚಾರದಲ್ಲಿ ತೊಡಗಿರುವ ನಾವಿಕರಿಗೆ ಮತ್ತು ಅವರ ದುರ್ಬಲ ಹಡಗುಗಳಿಗೆ ಬಂದರನ್ನು ಒದಗಿಸಿತ್ತು. ಈ ಬಂದರವು ಬಂಡೆಯ ಸಾಲಿನಿಂದ ಪ್ರತ್ಯೇಕವಾಗಿತ್ತು ಮಾತ್ರವಲ್ಲ ಸುರಕ್ಷಿತವಾಗಿಯೂ ಆಳವಾಗಿಯೂ ಭದ್ರವಾಗಿಯೂ ಇತ್ತು. ಈ ಬಂದರಿನಲ್ಲಿ ನಾವಿಕರು ತಮ್ಮ ದೋಣಿಗಳಲ್ಲಿ ಶುದ್ಧ ನೀರು ಮತ್ತು ಆಹಾರವನ್ನು ಪುನಃ ತುಂಬಿಸಿಕೊಳ್ಳಲು ಶಕ್ತರಾದರು.

ಹದಿನೈದನೆಯ ಶತಮಾನದೊಳಗಾಗಿ, ಲಾಮು ದ್ವೀಪವು ಸಂಪದ್ಭರಿತವಾದ ವ್ಯಾಪಾರ ಸ್ಥಳವಾಗಿತ್ತು ಮಾತ್ರವಲ್ಲ, ಸಾಮಗ್ರಿಗಳನ್ನು ಸಾಗಿಸುವ ಕೇಂದ್ರವಾಗಿಯೂ ಸ್ಥಾಪಿಸಲ್ಪಟ್ಟಿತು. ಹದಿನಾರನೆಯ ಶತಮಾನದಲ್ಲಿ ಈ ದ್ವೀಪಕ್ಕೆ ಬಂದ ಪೋರ್ಚುಗೀಸ್‌ ನಾವಿಕರು ರೇಷ್ಮೆಯ ಮುಂಡಾಸನ್ನು ಮತ್ತು ಸಡಿಲಾದ ಜೋಲಂಗಿಯನ್ನು ಧರಿಸಿರುವ ಧನಿಕ ವ್ಯಾಪಾರಿಗಳನ್ನು ಕಂಡುಕೊಂಡರು. ಸುಂದರ ಸ್ತ್ರೀಯರು ತಮ್ಮ ತೋಳುಗಳಿಗೆ ಮತ್ತು ಕಣಕಾಲುಗಳಿಗೆ ಚಿನ್ನದ ಕಡಗಗಳನ್ನು ಧರಿಸಿ, ಶೋಭಾಯಮಾನವಾಗಿ ಅಲಂಕೃತಗೊಂಡು ಇಕ್ಕಟ್ಟಾದ ಬೀದಿಗಳಲ್ಲಿ ಹಾದುಹೋಗುತ್ತಿದ್ದರು. ಹಡಗುಕಟ್ಟೆಯುದ್ದಕ್ಕೂ, ಪ್ರಯಾಣದ ಹಡಗುಗಳು ತಮ್ಮ ಹಡಗಿನಪಟವನ್ನು ಹಾಯಿಸುತ್ತಾ ನೀರಿನ ಮೇಲೆ ಚಲಿಸುತ್ತಿದ್ದವು ಮತ್ತು ಹೊಸ ಕ್ಷೇತ್ರಗಳತ್ತ ಮುಂದೆ ಸಾಗುತ್ತಿರುವ ಈ ಹಡಗುಗಳು ಸಾಮಾನು ಸರಂಜಾಮುಗಳಿಂದ ಭಾರವಾಗಿದ್ದವು. ಒಟ್ಟಾಗಿ ಕಟ್ಟಿ ಬಂಧಿಸಲಾಗಿದ್ದ ಗುಲಾಮರು, ಅರಬ್ಬೀ ಹಡಗಿನೊಳಗೆ ಹಿಂಡುಗಟ್ಟಾಗಿ ಹೋಗಲು ಕಾಯುತ್ತಿದ್ದರು.

ಲಾಮುವಿನಲ್ಲಿರುವ ವಾಸ್ತುಶಿಲ್ಪದ ವಿನ್ಯಾಸವನ್ನು ಮತ್ತು ನೈರ್ಮಲ್ಯದ ವ್ಯವಸ್ಥೆಯ ಉಚ್ಚ ಮಟ್ಟವನ್ನು ನೋಡಿ ಆ ಸಮಯದ ಯೂರೋಪಿಯನ್‌ ಪರಿಶೋಧಕರು ಆಶ್ಚರ್ಯಗೊಂಡರು. ಸಮುದ್ರತೀರದಲ್ಲಿರುವ ಮನೆಗಳನ್ನು ಕಟ್ಟಲು ಸ್ಥಳೀಯ ಗಣಿಯಿಂದ ಕಲ್ಲುಗಳು ತೆಗೆಯಲ್ಪಡುತ್ತಿದ್ದವು ಮತ್ತು ಈ ಹವಳಗೆಂಪಿನ ಕಲ್ಲನ್ನು ಕೈಯಿಂದ ಕೆತ್ತಿ ಅದಕ್ಕೆ ರೂಪಕೊಡುತ್ತಿದ್ದರು. ಅಲ್ಲಿನ ಪ್ರವೇಶದ್ವಾರಗಳಲ್ಲಿ ಅತ್ಯಂತ ಮನೋಹರವಾಗಿ ಕೆತ್ತಿದ ಭಾರವಾದ ಮರದ ಬಾಗಿಲುಗಳಿದ್ದವು. ಇಕ್ಕಟ್ಟಾದ ಬೀದಿಗಳ ಮೂಲಕ ತಂಪಾದ ಸಮುದ್ರ ಗಾಳಿಯು ಮನೆಗಳಿರುವ ದಿಕ್ಕಿಗೆ ಬೀಸಲಾಗುವಂತೆ ಮತ್ತು ಬಿಸಿಲಿನ ಬೇಗೆಯನ್ನು ನಿವಾರಿಸುವಂತೆ ಮನೆಗಳನ್ನು ವ್ಯವಸ್ಥಿತವಾದ ಸಾಲಿನಲ್ಲಿ ಕಟ್ಟಲಾಗಿದ್ದವು.

ಬಹಳ ಶ್ರೀಮಂತರು ಸಹ ಅಲ್ಲಿದ್ದರು ಮತ್ತು ಅವರ ಮನೆಗಳು ದೊಡ್ಡದಾಗಿದ್ದವು ಮಾತ್ರವಲ್ಲ ವಿಶಾಲವು ಕೂಡ ಆಗಿದ್ದವು. ಶುದ್ಧ ನೀರು ಸ್ನಾನಗೃಹಕ್ಕೆ ಹೋಗುವಂತೆ ಹಳೇ ಕಾಲದ ಕೊಳಾಯಿ ವ್ಯವಸ್ಥೆಯಿತ್ತು. ಚರಂಡಿ ವ್ಯವಸ್ಥೆ ಅಥವಾ ಹೊಲಸನ್ನು ತೆಗೆಯುವ ವ್ಯವಸ್ಥೆಯು ಸಾಕಷ್ಟು ಉತ್ತಮವಾಗಿದ್ದು ಆ ಸಮಯದ ಅನೇಕ ಯೂರೋಪಿಯನ್‌ ದೇಶಗಳಿಗಿಂತ ಹೆಚ್ಚು ಮುಂದುವರಿದದ್ದಾಗಿತ್ತು. ಕಲ್ಲಿನಿಂದ ಕೆತ್ತಲಾಗಿದ್ದ ದೊಡ್ಡ ಪೈಪುಗಳು ಸಮುದ್ರದ ಕಡೆಗೆ ವಾಲಿದ್ದವು ಮತ್ತು ಶುದ್ಧ ನೀರಿನ ಮೂಲಗಳಿಂದ ಬಹಳ ದೂರದಲ್ಲಿದ್ದ ಇವು, ಕೊಳಕುನೀರನ್ನು ಸಾಗಿಸಿ ಆಳವಾದ ಹೊಂಡದಲ್ಲಿ ದ್ರವಿಸುತ್ತಿದ್ದವು. ಕಲ್ಲಿನಿಂದ ಕಟ್ಟಲಾದ ನೀರಿನ ತೊಟ್ಟಿಗಳು ಮನೆಗಳಿಗೆ ಶುದ್ಧ ನೀರನ್ನು ಒದಗಿಸುತ್ತಿದ್ದವು ಮತ್ತು ಇದರಲ್ಲಿ ಸಣ್ಣ ಮೀನುಗಳು ಇರುತ್ತಿದ್ದವು. ಇವು ಸೊಳ್ಳೆ ಮರಿಹುಳುವನ್ನು ತಿನ್ನುತ್ತಿದ್ದುದರಿಂದ ಕಚ್ಚುವ ಕೀಟಗಳ ಸಂಖ್ಯೆ ಕಡಿಮೆಯಾಗುತ್ತಿತ್ತು.

ಹತ್ತೊಂಬತ್ತನೆಯ ಶತಮಾನದೊಳಗೆ ಲಾಮು ದ್ವೀಪವು ಸಾಗರಕ್ಕೆ ಹೋಗುವ ಅರಬ್ಬೀ ಹಡಗಿನ ಮೂಲಕ ದಂತ, ಎಣ್ಣೆ, ಬೀಜಗಳು, ಪ್ರಾಣಿ ಚರ್ಮಗಳು, ಆಮೆ ಚಿಪ್ಪು, ನೀರಾನೆಯ ಹಲ್ಲು ಮತ್ತು ಗುಲಾಮರನ್ನು ಅಧಿಕ ಪ್ರಮಾಣದಲ್ಲಿ ಸಾಗಿಸುತ್ತಿತ್ತು. ಏನೇ ಆದರೂ, ಕಾಲ ಕಳೆದಂತೆ ಲಾಮುವಿನ ಸಮೃದ್ಧಿಯು ಅಳಿದು ಹೋಯಿತು. ಮಾರಕವ್ಯಾಧಿ, ಪ್ರತಿಪಕ್ಷದ ಕುಲಗಳಿಂದ ಅನಿರೀಕ್ಷಿತ ದಾಳಿಗಳು ಮತ್ತು ಗುಲಾಮ ಪದ್ಧತಿಯ ಮೇಲೆ ಹೇರಲಾದ ನಿರ್ಬಂಧಗಳು ಲಾಮುವಿನ ಆರ್ಥಿಕ ಸ್ಥಿರತೆಯನ್ನು ಅಲುಗಾಡಿಸಿದವು.

ಹಿಂದಿನ ಕಾಲಕ್ಕೆ ಹೆಜ್ಜೆಯಿಡುವುದು

ಇಂದು ಲಾಮುವಿನ ಬಂದರಿಗೆ ಪ್ರಯಾಣಮಾಡುವುದು ಇತಿಹಾಸದ ಪುಟದಷ್ಟು ಹಿಂದಕ್ಕೆ ಹೋಗುವುದಕ್ಕೆ ಸಮಾನವಾಗಿರುತ್ತದೆ. ಹಿಂದೂ ಸಾಗರದ ವಿಶಾಲ ನೀಲಿಬಾನಿನಿಂದ ಗಾಳಿಯು ಒಂದೇಸಮನೆ ಬೀಸುತ್ತಿದೆ. ಮರಳಿನ ಬಿಳಿ ಕಡಲ ದಡದ ಮೇಲೆ ಸೌಮ್ಯವಾಗಿರುವ ಆಗಸನೀಲಿ ಅಲೆಗಳು ಅಪ್ಪಳಿಸುತ್ತಿವೆ. ಹಳೇ ಕಾಲಕ್ಕನುಸಾರ ರಚಿಸಲಾದ ಮರದಿಂದ ಮಾಡಲಾದ ಹಡಗುಗಳು ಸಮುದ್ರ ತೀರದಲ್ಲಿ ಮೆಲ್ಲಗೆ ಸರಿದು ಹೋಗುತ್ತಿವೆ. ಅವುಗಳ ತ್ರಿಕೋನಾಕಾರದ ಬಿಳಿ ಹಡಗಿನಪಟಗಳು ಹಾರುವ ಚಿಟ್ಟೆಗಳನ್ನು ಹೋಲುತ್ತಿವೆ. ಮೀನು, ಹಣ್ಣು, ತೆಂಗಿನಕಾಯಿಗಳಿಂದ, ದನಗಳಿಂದ, ಕೋಳಿಮರಿಗಳಿಂದ ಮತ್ತು ಪ್ರಯಾಣಿಕರಿಂದ ತುಂಬಿರುವ ಹಡಗು ಲಾಮುವಿನ ದ್ವೀಪದ ಕಡೆಗೆ ಪ್ರಯಾಣ ಬೆಳೆಸುತ್ತಿದೆ.

ಹಡಗುಕಟ್ಟೆಯಲ್ಲಿ, ತಾಳೆಮರಗಳು ಬಿಸಿಯಾದ ಗಾಳಿಯಿಂದಾಗಿ ಮರ್ಮರ ಶಬ್ದವನ್ನು ಮಾಡುತ್ತಿದ್ದವು. ಆದರೆ ಮರದ ದೋಣಿಗಳಿಂದ ಸಾಮಾನುಗಳನ್ನು ಇಳಿಸುವವರಿಗೆ ಈ ಮರಗಳು ಸ್ವಲ್ಪ ನೆರಳನ್ನು ಕೊಡುತ್ತಿದ್ದವು. ಸಾಮಾಗ್ರಿಗಳಿಗಾಗಿ ವಿನಿಮಯ ಮಾರಾಟವನ್ನು ಮಾಡಲು ಗದ್ದಲಭರಿತ ಜನರ ಗುಂಪು ಮಾರುಕಟ್ಟೆಯಲ್ಲೆಲ್ಲಾ ರಂಪವನ್ನು ಎಬ್ಬಿಸುತ್ತಿತ್ತು. ಈ ವ್ಯಾಪಾರಿಗಳು ಚಿನ್ನ, ದಂತ ಅಥವಾ ಗುಲಾಮರಿಗಾಗಿ ಹುಡುಕಾಡುತ್ತಿಲ್ಲ, ಬದಲಾಗಿ ಅವರು ಬಾಳೆಹಣ್ಣು, ತೆಂಗಿನಕಾಯಿ, ಮೀನು ಮತ್ತು ಬುಟ್ಟಿಗಳಿಗೆ ಹುಡುಕಾಡುತ್ತಿದ್ದಾರೆ.

ದೊಡ್ಡ ಮಾವಿನ ಮರದ ನೆರಳಿನಲ್ಲಿ, ಪುರುಷರು ಸೀಸಲ್‌ ಫೈಬರ್‌ನಿಂದ ಉದ್ದುದ್ದ ಹಗ್ಗಗಳನ್ನು ಹೆಣೆಯುತ್ತಿದ್ದಾರೆ ಮತ್ತು ತಮ್ಮ ಮರದ ದೋಣಿಗಳನ್ನು ಚಲಿಸುವಂತೆ ಮಾಡುವ ಹಡಗುಪಟದ ಬಟ್ಟೆಯನ್ನು ದುರಸ್ತುಮಾಡುತ್ತಿದ್ದಾರೆ. ಬೀದಿಗಳು ಇಕ್ಕಟ್ಟಾಗಿವೆ ಮತ್ತು ಎಲ್ಲ ಕಡೆಗಳಿಂದಲೂ ಜನರು ಅತ್ತಿತ್ತ ತಿರುಗಾಡುತ್ತಿದ್ದಾರೆ. ವ್ಯಾಪಾರಿಗಳು ಉದ್ದವಾದ, ಸಡಿಲವಾದ ಬಿಳೀ ನಿಲುವಂಗಿಗಳನ್ನು ಧರಿಸಿಕೊಂಡು ತಮ್ಮ ಅಸ್ತವ್ಯಸ್ತವಾದ ಅಂಗಡಿಗಳಲ್ಲಿ ನಿಂತಿದ್ದಾರೆ ಮತ್ತು ಅಲ್ಲಿಂದಲೇ ತಾವು ಮಾರಲು ಇಟ್ಟಿರುವ ಸಾಮಾನನ್ನು ಖರೀದಿಸಲು ಮತ್ತು ಪರೀಕ್ಷಿಸಲು ಕೈಯಿಂದ ಸನ್ನೆಮಾಡಿ ಗಿರಾಕಿಗಳನ್ನು ಕರೆಯುತ್ತಿದ್ದಾರೆ. ಮರದ ಬಂಡಿಯ ಮೇಲೆ ಭಾರವಾದ ದವಸಧಾನ್ಯದ ಚೀಲಗಳು ಹೇರಲ್ಪಟ್ಟಿದ್ದವು. ಈ ಬಂಡಿಯನ್ನು ಎಳೆಯಲು ಕತ್ತೆಯನ್ನು ಉಪಯೋಗಿಸಲಾಗುತ್ತಿತ್ತು. ಜನರಿಂದ ಕಿಕ್ಕಿರಿದು ತುಂಬಿರುವ ಬೀದಿಗಳಲ್ಲಿ ಕತ್ತೆಯು ಬಂಡಿಯನ್ನು ಎಳೆಯುತ್ತಾ ದಾರಿಯನ್ನು ಮಾಡಿಕೊಂಡು ಮುಂದೆ ಮುಂದೆ ಹೋಗುತ್ತಿದೆ. ಲಾಮು ದ್ವೀಪದ ನಿವಾಸಿಗಳು ಒಂದು ದ್ವೀಪದಿಂದ ಇನ್ನೊಂದು ದ್ವೀಪಕ್ಕೆ ನಡೆದುಕೊಂಡು ಹೋಗುತ್ತಾರೆ, ಯಾಕೆಂದರೆ ಆ ದ್ವೀಪದಲ್ಲಿ ಪ್ರಯಾಣಕ್ಕಾಗಿ ಯಾವುದೇ ವಾಹನ ಸೌಕರ್ಯಗಳಿಲ್ಲ. ದೋಣಿಯಿಂದ ಮಾತ್ರವೇ ಒಬ್ಬನು ಆ ದ್ವೀಪಕ್ಕೆ ತಲುಪಬಹುದಾಗಿತ್ತು.

ಅಪರಾಹ್ನದ ಸಮಯದಲ್ಲಿ ಸೂರ್ಯನು ನೆತ್ತಿಯ ಮೇಲೆ ಬಂದಾಗ, ಅಲ್ಲಿನ ಜನರು ಸದ್ದಿಲ್ಲದವರಾಗುತ್ತಾರೆ. ಬಿಸಿಲಿನ ಬೇಗೆಯಲ್ಲಿ, ಕೆಲವೇ ಜನರು ಅತ್ತಿತ್ತ ನಡೆದುಕೊಂಡು ಹೋಗುತ್ತಿರುತ್ತಾರೆ ಮತ್ತು ಸೆಕೆಯಿಂದ ನೆಮ್ಮದಿ ಪಡೆದುಕೊಳ್ಳಲು ಕಾಯುತ್ತಾ, ಕತ್ತೆಗಳು ಸಹ ತಮ್ಮ ಕಣ್ಣುಗಳನ್ನು ಬಿಗಿಯಾಗಿ ಮುಚ್ಚಿಕೊಳ್ಳುತ್ತಾ ನಿಶ್ಯಬ್ದವಾಗಿ ನಿಂತುಕೊಂಡಿರುತ್ತವೆ.

ಸೂರ್ಯನು ಅಸ್ತಮಿಸಲು ಆರಂಭಿಸಿದಂತೆ ಮತ್ತು ಉಷ್ಣತೆಯು ಇಳಿಯಲು ತೊಡಗಿದಂತೆ, ನಿದ್ರಿಸುತ್ತಿರುವ ದ್ವೀಪವು ಜೀವಂತವಾಗುತ್ತದೆ. ವ್ಯಾಪಾರವನ್ನು ಪುನಃ ಆರಂಭಿಸಲು ಮರದಿಂದ ಕೆತ್ತಿದ ಭಾರವಾದ ಬಾಗಿಲುಗಳನ್ನು ವ್ಯಾಪಾರಿಗಳು ಪ್ರಯಾಸದಿಂದ ತೆರೆಯುತ್ತಾರೆ ಮತ್ತು ಮಧ್ಯ ರಾತ್ರಿಯ ವರೆಗೆ ವ್ಯಾಪಾರವನ್ನು ಮುಂದುವರಿಸುತ್ತಾರೆ. ಸ್ತ್ರೀಯರು ತಮ್ಮ ಚಿಕ್ಕ ಮಕ್ಕಳಿಗೆ ಸ್ನಾನಮಾಡಿಸುತ್ತಾರೆ ಮತ್ತು ಅವರ ಚರ್ಮ ಹೊಳೆಯುವ ತನಕ ತೆಂಗಿನೆಣ್ಣೆಯಿಂದ ಅವರನ್ನು ಉಜ್ಜುತ್ತಾರೆ. ತೆಂಗಿನಮರದ ಎಲೆಗಳಿಂದ ನೇಯ್ದ ಚಾಪೆಗಳ ಮೇಲೆ ಕುಳಿತುಕೊಂಡೇ ಈ ಸ್ತ್ರೀಯರು ಆಹಾರವನ್ನು ತಯಾರಿಸಲು ಆರಂಭಿಸುತ್ತಾರೆ. ಅವರು ಚಾಪೆಯ ಮೇಲೆಯೇ ಕುಳಿತು, ಸ್ಟೌವಿನ ಉಪಯೋಗವಿಲ್ಲದೆ ಒಲೆಯನ್ನು ಉರಿಸಿ ಅಡುಗೆಯನ್ನು ತಯಾರಿಸುತ್ತಾರೆ. ಪರಿಮಳಯುಕ್ತ ಮಸಾಲೆಗಳನ್ನು ಬೆರೆಸಿ, ಮೀನಿನ ಸ್ವಾದಿಷ್ಟ ಭೋಜನವನ್ನು ತಯಾರಿಸುತ್ತಾರೆ ಮತ್ತು ತೆಂಗಿನ ಹಾಲನ್ನು ಹಾಕಿ ಅನ್ನವನ್ನು ಬೇಯಿಸುತ್ತಾರೆ. ಜನರು ಸ್ನೇಹಪರರು, ಅತಿಥಿ ಸತ್ಕಾರವನ್ನು ತೋರಿಸುವವರು ಮತ್ತು ಶಾಂತಸ್ವಭಾವದವರು ಆಗಿದ್ದಾರೆ.

ಲಾಮು ದ್ವೀಪವು ತನ್ನ ಹಿಂದಿನ ವೈಭವವನ್ನು ಕಳೆದುಕೊಂಡಿದೆಯಾದರೂ, 20ನೆಯ ಶತಮಾನಕ್ಕೂ ಹಿಂದೆಯೇ ಇದ್ದ ಸಾಂಪ್ರದಾಯಿಕ ಆಫ್ರಿಕದ ಸಂಸ್ಕೃತಿಯು ಇಲ್ಲಿ ಈಗಲೂ ಸಮೃದ್ಧಿಯಾಗಿ ಕಾಣಸಿಗುತ್ತದೆ. ಕೆಂಪೇರಿದ ಉಷ್ಣವಲಯದ ಸೂರ್ಯನ ಕೆಳಗೆ, ಅನೇಕ ಶತಮಾನಗಳಿಂದ ಜೀವನವು ಹೇಗಿತ್ತೋ ಹಾಗೆಯೇ ಇಂದು ಸಹ ಸುಗಮವಾಗಿ ಸಾಗುತ್ತಿದೆ. ಇಲ್ಲಿಗೆ ಭೇಟಿನೀಡುವವರು ಈಗಲೂ ಹಿಂದಿನ ಮತ್ತು ಈಗಿನ ದ್ವೀಪವನ್ನು ನೋಡಬಲ್ಲರು. ಗತಿಸಿಹೋದ ಯುಗದಿಂದ ಪಾರಾಗಿ ಬಂದಿರುವ ಈ ಲಾಮು ದ್ವೀಪವು ಯಾವ ದ್ವೀಪಕ್ಕೂ ಸರಿಸಾಟಿಯಿಲ್ಲದ್ದಾಗಿದೆ. ಹೌದು, ಈ ಲಾಮು ದ್ವೀಪವು ಸಮಯ ಗತಿಸಿದಂತೆ ಸ್ವಲ್ಪವೇ ಬದಲಾವಣೆಗಳನ್ನು ಕಂಡಿರುವ ಒಂದು ದ್ವೀಪವಾಗಿದೆಯೆಂಬುದು ನಿಜ.

[ಪುಟ 18, 19ರಲ್ಲಿರುವ ಚೌಕ/ಚಿತ್ರಗಳು]

ಲಾಮು ದ್ವೀಪಕ್ಕೆ ನಮ್ಮ ಭೇಟಿ

ಸ್ವಲ್ಪ ಸಮಯದ ಹಿಂದೆ, ನಮ್ಮ ತಂಡವು ಲಾಮು ದ್ವೀಪಕ್ಕೆ ಭೇಟಿ ನೀಡಿತು. ಆದರೆ ನಾವಲ್ಲಿಗೆ ವಸ್ತುಗಳನ್ನು ಖರೀದಿಸಲಿಕ್ಕಾಗಿ ಅಥವಾ ಮಾರಲಿಕ್ಕಾಗಿ ಹೋಗಲಿಲ್ಲ. ನಾವು ನಮ್ಮ ಕ್ರೈಸ್ತ ಸಹೋದರ ಮತ್ತು ಸಹೋದರಿಯರನ್ನು ಅಂದರೆ, ಯೆಹೋವನ ಜೊತೆ ಸಾಕ್ಷಿಗಳನ್ನು ನೋಡಲು ಆ ಸ್ಥಳಕ್ಕೆ ಭೇಟಿನೀಡಿದೆವು. ನಮ್ಮ ಹಗುರವಾದ ವಿಮಾನವು ಉತ್ತರಕ್ಕಿರುವ ಕೆನ್ಯದ ಏರುಪೇರಾದ ಕಡಲತೀರದ ಕಡೆಗೆ ಹಾರಿತು. ವಿಮಾನದಿಂದ ಕೆಳಗೆ ಬಹುದೂರದಲ್ಲಿ, ಬಿಳಿ ಮರಳಿನ ಸಾಲಿನಿಂದ ಆವರಿಸಲ್ಪಟ್ಟಿರುವ ಉಷ್ಣವಲಯದ ಸಮೃದ್ಧವಾದ ನಿತ್ಯಹರಿದ್ವರ್ಣ ಕಾಡುಗಳ ಕಡಲತೀರಕ್ಕೆ ಅಲೆಗಳು ಸೌಮ್ಯವಾಗಿ ತೇಲಿಬರುತ್ತಿದ್ದವು. ಆಗ ಥಟ್ಟನೆ, ನೀಲವರ್ಣದ ಸಾಗರದಲ್ಲಿ ರತ್ನಗಳಂತೆ ಹೊಳೆಯುತ್ತಿರುವ ಲಾಮು ದ್ವೀಪಸಮೂಹವು ನಮ್ಮ ಕಣ್ಣಿಗೆ ಬಿತ್ತು. ಬಲಿಷ್ಠವಾದ ಆಫ್ರಿಕದ ಗರುಡನಂತೆ ನಾವು ದ್ವೀಪಗಳನ್ನು ಸುತ್ತುತ್ತಾ, ಆಕಾಶದಿಂದ ಇಳಿದು ವಿಸ್ತಾರವಾದ ಭೂಭಾಗದ ಮೇಲಿರುವ ಸಣ್ಣ ವಿಮಾನಹಾದಿಯ ಬಳಿ ಬಂದೆವು. ನಾವು ವಿಮಾನದಿಂದ ಇಳಿದು, ನೀರಿನ ದಡದ ವರೆಗೆ ನಡೆದುಕೊಂಡು ಹೋದೆವು ಮತ್ತು ಲಾಮು ದ್ವೀಪದ ಪ್ರವಾಸಕ್ಕಾಗಿ ಮರದಿಂದ ಮಾಡಲಾದ ಅರಬ್ಬೀ ಹಡಗನ್ನು ಹತ್ತಿದೆವು.

ಅದು ಸುಂದರವಾದ ಪ್ರಕಾಶಮಾನವಾದ ದಿನವಾಗಿತ್ತು ಮತ್ತು ಸಮುದ್ರದಲ್ಲಿ ಬೆಚ್ಚನೆಯ ಗಾಳಿಯು ಬೀಸುತ್ತಿತ್ತು ಮಾತ್ರವಲ್ಲ ಅದು ಆಹ್ಲಾದಕರವಾಗಿತ್ತು. ನಾವು ದ್ವೀಪದ ಹತ್ತಿರಕ್ಕೆ ಬರುತ್ತಿದ್ದಂತೆ, ಬಂದರಿನ ಇಳಿಗಟ್ಟೆಯಲ್ಲಿ ಜನರು ಸಂಭ್ರಮದಿಂದ ಅತ್ತಿತ್ತ ಓಡಾಡುತ್ತಿರುವುದನ್ನು ನಾವು ಗಮನಿಸಿದೆವು. ಗಟ್ಟಿಮುಟ್ಟಾದ ಪುರುಷರು ದೋಣಿಯಿಂದ ಭಾರವಾದ ಹೊರೆಗಳನ್ನು ಹೊತ್ತುಕೊಂಡು ಹೋಗುತ್ತಿದ್ದರು ಮತ್ತು ಸ್ತ್ರೀಯರು ಕೂಡ ಸಾಮಾನುಗಳನ್ನು ತಮ್ಮ ತಲೆಗಳ ಮೇಲೆ ಸರಿದೂಗಿಸುತ್ತಾ ಜಾಗ್ರತೆಯಿಂದ ಹೊತ್ತುಕೊಂಡು ಹೋಗುತ್ತಿದ್ದರು. ನಾವು ನಮ್ಮ ಸಾಮಾನು ಸರಂಜಾಮನ್ನು ಹೊತ್ತುಕೊಂಡು, ಕಿಕ್ಕಿರಿದಿದ್ದ ಜನರ ಗುಂಪಿನ ಮೂಲಕ ದಾರಿಮಾಡಿಕೊಂಡು ಮುಂದೆ ಮುಂದೆ ಸಾಗಿ ತಾಳೆಮರದ ನೆರಳಿನ ಕೆಳಗೆ ಬಂದು ನಿಂತೆವು. ಕೆಲವೇ ನಿಮಿಷಗಳಲ್ಲಿ, ನಮ್ಮ ಕ್ರೈಸ್ತ ಸಹೋದರರು ನಮ್ಮನ್ನು ಗುರುತಿಸಿದರು ಮತ್ತು ದ್ವೀಪದಲ್ಲಿರುವ ತಮ್ಮ ಮನೆಗೆ ಅವರು ನಮ್ಮನ್ನು ಆದರಣೀಯವಾಗಿ ಸ್ವಾಗತಿಸಿದರು.

ಅರುಣೋದಯಕ್ಕೂ ಮುಂಚೆಯೇ, ಬೆಳಗ್ಗೆ ಬೇಗನೇ ಎದ್ದು ಸಮುದ್ರತೀರದ ಬಳಿಯಲ್ಲಿ ವಾಸಿಸುತ್ತಿದ್ದ ನಮ್ಮ ಸಹೋದರ ಮತ್ತು ಸಹೋದರಿಯರನ್ನು ಭೇಟಿಯಾದೆವು. ಸಭಾ ಕೂಟಗಳಿಗೆ ಹಾಜರಾಗುವುದಕ್ಕಾಗಿ ದೀರ್ಘ ಪ್ರಯಾಣವನ್ನು ಮಾಡಬೇಕಾಗಿತ್ತು ಮತ್ತು ಅದು ಅನೇಕ ತಾಸುಗಳನ್ನು ತೆಗೆದುಕೊಳ್ಳುತ್ತಿತ್ತು. ನಾವು ನಮ್ಮೊಂದಿಗೆ ಕುಡಿಯುವ ನೀರನ್ನು, ಅಗಲ ಅಂಚುಳ್ಳ ಟೋಪಿಗಳನ್ನು ಮತ್ತು ನಡೆಯಲು ಯೋಗ್ಯವಾಗಿರುವ ಶೂಗಳನ್ನು ಕೊಂಡೊಯ್ಯಲು ಸಿದ್ಧತೆಯನ್ನು ಮಾಡಿದ್ದೆವು. ಅರುಣೋದಯವಾಗುವ ವೇಳೆಗೆ ನಾವು ಮುಖ್ಯ ಭೂಭಾಗದ ಕಡೆಗೆ ಪ್ರಯಾಣವನ್ನು ಬೆಳೆಸಿದೆವು, ಯಾಕೆಂದರೆ ಅಲ್ಲಿಯೇ ಕೂಟಗಳು ನಡೆಸಲ್ಪಡುತ್ತಿದ್ದವು.

ದೋಣಿಯಲ್ಲಿ ಪ್ರಯಾಣಿಸುವಾಗಲೂ, ಈ ಸಹೋದರರು ಸಮಯ ಹಾಳುಮಾಡದೆ ಸಾಕ್ಷಿಕೊಡುವುದನ್ನು ಆರಂಭಿಸಿದರು. ಹಾಗಾಗಿ, ನಾವು ದೋಣಿಯಿಂದ ಇಳಿಯುವ ಮುಂಚೆ, ಕೆಲವು ಬೈಬಲ್‌ ಚರ್ಚೆಗಳನ್ನು ನಡೆಸುವುದರಲ್ಲಿ ಆನಂದಿಸಿದೆವು ಮತ್ತು ಅನೇಕ ಪತ್ರಿಕೆಗಳನ್ನು ಸಹ ನೀಡಿದೆವು. ನಾವು ಸಾಗುತ್ತಿದ್ದ ಅರಣ್ಯ ಮಾರ್ಗವು ಸುಡುಬಿಸಿಲಿನ ಮತ್ತು ಧೂಳಿನಿಂದ ಕೂಡಿದ ರಸ್ತೆಯಾಗಿತ್ತು. ಜನಸಂಚಾರವಿಲ್ಲದ ವನ್ಯಭೂಮಿಯ ಮೂಲಕ ನಡೆದುಕೊಂಡು ಹೋಗುತ್ತಾ, ಕ್ರೂರ ಪ್ರಾಣಿಗಳ ಕುರಿತು ಜಾಗ್ರತೆವಹಿಸಬೇಕೆಂದು ನಮಗೆ ಹೇಳಲಾಯಿತು. ಯಾಕೆಂದರೆ ಕೆಲವೊಮ್ಮೆ ಆಕಸ್ಮಿಕವಾಗಿ ಆ ದಾರಿಯಲ್ಲಿ ಆನೆಗಳು ಬರುತ್ತಿದ್ದವು. ನಾವು ನಮ್ಮ ಸ್ಥಳದತ್ತ ನಿಧಾನವಾಗಿ ನಡೆದುಕೊಂಡು ಹೋಗುತ್ತಿದ್ದಂತೆ ಸಹೋದರರು ಉಲ್ಲಾಸಿತರು ಮತ್ತು ಸಂತೋಷಿತರು ಆಗಿದ್ದರು.

ಸ್ವಲ್ಪ ಸಮಯದಲ್ಲೇ, ನಾವು ಒಂದು ಚಿಕ್ಕ ಹಳ್ಳಿಗೆ ಬಂದು ತಲುಪಿದೆವು. ದೂರದೂರದ ಸ್ಥಳಗಳಿಂದ ನಡೆದುಕೊಂಡು ಇಲ್ಲಿಗೆ ಬಂದಿರುವ ಇತರ ಸಹೋದರರನ್ನು ಸಭೆಯಲ್ಲಿ ಭೇಟಿಯಾದೆವು. ದೀರ್ಘ ಪ್ರಯಾಣಗಳನ್ನು ಮಾಡಬೇಕಾಗಿರುವುದರಿಂದ, ನಾಲ್ಕು ಸಭಾ ಕೂಟಗಳನ್ನು ಒಂದೇ ದಿನದಲ್ಲಿ ನಡೆಸಲಾಗುತ್ತಿತ್ತು.

ಕೂಟಗಳು ಒಂದು ಸಣ್ಣ ಶಾಲೆಯಲ್ಲಿ ನಡೆಸಲ್ಪಟ್ಟವು. ಅದು ಒರಟಾದ ಕಲ್ಲುಗಳಿಂದ ಕಟ್ಟಲ್ಪಟ್ಟಿದ್ದು, ಅದರ ಕಿಟಕಿಗಳ ಇಲ್ಲವೆ ಬಾಗಿಲುಗಳ ಕೆಲಸ ಇನ್ನೂ ಪೂರ್ಣಗೊಂಡಿರಲಿಲ್ಲ. ಶಾಲಾ ಕೊಠಡಿಯೊಳಗೆ, ನಮ್ಮಲ್ಲಿ ಹದಿನೈದು ಮಂದಿ ಕಿರಿದಾದ ಮರದ ಬೆಂಚುಗಳ ಮೇಲೆ ಕುಳಿತೆವು ಮತ್ತು ಉತ್ತೇಜನದಾಯಕವೂ ಬೋಧಪ್ರದವೂ ಆಗಿದ್ದ ಅತ್ಯುತ್ತಮ ಬೈಬಲಾಧಾರಿತ ಕಾರ್ಯಕ್ರಮದಲ್ಲಿ ಆನಂದಿಸಿದೆವು. ತಗಡಿನಿಂದ ಮಾಡಲ್ಪಟ್ಟ ಮೇಲ್ಛಾವಣಿಯ ಮೂಲಕ ಸಹಿಸಲು ಕಷ್ಟವಾದ ಸುಡುಬಿಸಿಲಿನ ತಾಪವನ್ನು ನಾವು ಅನುಭವಿಸುತ್ತಿದ್ದರೂ, ನಮ್ಮಲ್ಲಿ ಯಾರೂ ಅದನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಿರುವ ಹಾಗೆ ತೋರುತ್ತಿರಲಿಲ್ಲ. ಎಲ್ಲರೂ ಒಟ್ಟಾಗಿ ಸಂತೋಷದಿಂದಿದ್ದರು. ಕೂಟಗಳ ನಾಲ್ಕು ತಾಸುಗಳ ನಂತರ, ನಾವು ಒಬ್ಬರನ್ನೊಬ್ಬರು ಬೀಳ್ಕೊಟ್ಟೆವು ಮತ್ತು ಪ್ರತಿಯೊಬ್ಬರು ಬೇರೆ ಬೇರೆ ದಿಕ್ಕಿನಲ್ಲಿ ಹೊರಟುಹೋದೆವು. ನಾವು ಲಾಮು ದ್ವೀಪಕ್ಕೆ ಹಿಂದಿರುಗುವಷ್ಟರೊಳಗೆ, ಕೆಂಪೇರಿದ ಸೂರ್ಯನು ದಿಗಂತದಲ್ಲಿ ಅಸ್ತಮಿಸುತ್ತಿದ್ದನು.

ಅದೇ ರಾತ್ರಿಯ ತಣ್ಣಗಿನ ವಾತಾವರಣದಲ್ಲಿ, ನಾವು ಲಾಮು ದ್ವೀಪದಲ್ಲಿ ವಾಸಿಸುತ್ತಿರುವ ಸಾಕ್ಷಿ ಕುಟುಂಬಗಳೊಂದಿಗೆ ಒಟ್ಟುಗೂಡಿ ಸರಳವಾದ ಆಹಾರವನ್ನು ಸೇವಿಸುವುದರಲ್ಲಿ ಆನಂದಿಸಿದೆವು. ಮುಂದಿನ ದಿನಗಳಲ್ಲಿ, ಬೈಬಲ್‌ ಸತ್ಯಕ್ಕಾಗಿ ಹಸಿದಿರುವ ಜನರನ್ನು ಹುಡುಕುತ್ತಾ, ನಾವು ತಿರುವು ಮುರುವುಳ್ಳ ಇಕ್ಕಟ್ಟಾದ ಬೀದಿಗಳಲ್ಲಿ ಸಾರುವ ಕೆಲಸದಲ್ಲಿ ಭಾಗವಹಿಸಲಿಕ್ಕಾಗಿ ಅವರೊಂದಿಗೆ ನಡೆದುಕೊಂಡು ಹೋದೆವು. ಮತ್ತು ಇಂತಹ ಕೆಲವು ಸಹೋದರ ಸಹೋದರಿಯರ ಹುರುಪು ಮತ್ತು ಧೈರ್ಯವು ನಮ್ಮೆಲ್ಲರನ್ನು ಉತ್ತೇಜಿಸಿತು.

ಆ ಸ್ಥಳವನ್ನು ಬಿಟ್ಟುಹೋಗುವ ಸಮಯವು ಕೊನೆಗೂ ಬಂದೇಬಿಟ್ಟಿತು. ಸಹೋದರರು ನಮ್ಮನ್ನು ಹಡಗುಕಟ್ಟೆಯ ಬಳಿ ಕರೆತಂದರು ಮತ್ತು ನಾವು ಬಹಳ ದುಃಖದಿಂದ ಅವರಿಗೆ ಗುಡ್‌ಬೈ ಹೇಳಿದೆವು. ನಮ್ಮ ಭೇಟಿಯು ಆ ಸಹೋದರರನ್ನು ಉತ್ತೇಜಿಸಿತು ಎಂಬುದಾಗಿ ಅವರು ನಮಗೆ ಹೇಳಿದರು. ನಮ್ಮನ್ನು ಅವರೆಷ್ಟು ಉತ್ತೇಜಿಸಿದರೆಂಬುದರ ಕುರಿತು ಅವರಿಗೆ ತಿಳಿದಿದೆಯೋ ಎಂದು ನಾವು ಆಲೋಚಿಸಿದೆವು! ಅದೇ ಮುಖ್ಯ ಭೂಭಾಗದಲ್ಲಿ, ನಾವು ಬೇಗನೇ ನಮ್ಮ ಸಣ್ಣ ವಿಮಾನವನ್ನು ಹತ್ತಿದೆವು. ನಾವು ಆಕಾಶದ ಕಡೆಗೆ ಮೇಲೇರುತ್ತಿದ್ದಂತೆ, ಕೆಳಗಡೆ ಆ ಸುಂದರವಾದ ಲಾಮು ದ್ವೀಪವನ್ನು ನೋಡಿದೆವು. ಅಲ್ಲಿರುವ ಸಹೋದರರ ಬಲವಾದ ನಂಬಿಕೆಯನ್ನು ನಾವು ನೆನಪಿಸಿಕೊಂಡೆವು ಮಾತ್ರವಲ್ಲ, ಕೂಟಗಳನ್ನು ಹಾಜರಾಗಲು ಅವರು ಕೈಗೊಳ್ಳುವ ದೀರ್ಘ ಪ್ರಯಾಣವನ್ನು ಮತ್ತು ಸತ್ಯದ ಕಡೆಗೆ ಅವರಿಗಿರುವ ಹುರುಪು ಮತ್ತು ಪ್ರೀತಿಯನ್ನು ಸಹ ನೆನಪಿಸಿಕೊಂಡೆವು. ಬಹಳ ಸಮಯದ ಹಿಂದೆ ಈ ಪ್ರವಾದನೆಯು ಕೀರ್ತನೆ 97:1ರಲ್ಲಿ ದಾಖಲಿಸಲಾಗಿತ್ತು: “ಯೆಹೋವನು ರಾಜ್ಯಾಧಿಕಾರವನ್ನು ವಹಿಸಿದ್ದಾನೆ; ಭೂಲೋಕವು ಸಂತೋಷಿಸಲಿ; ಸಮುದ್ರದ ತೀರಪ್ರದೇಶಗಳೆಲ್ಲಾ (“ದ್ವೀಪಗಳೆಲ್ಲಾ,” NW) ಹರ್ಷಿಸಲಿ.” ನಿಜ, ಅತಿ ದೂರವಿರುವ ಆ ಲಾಮು ದ್ವೀಪದಲ್ಲಿಯೂ ಸಹ, ದೇವರ ರಾಜ್ಯದ ಕೆಳಗೆ ಭವಿಷ್ಯದಲ್ಲಿ ಬರಲಿರುವ ಪರದೈಸದಲ್ಲಿ ಜೀವಿಸುವ ಅದ್ಭುತಕರವಾದ ನಿರೀಕ್ಷೆಯಲ್ಲಿ ಆನಂದಿಸುವ ಅವಕಾಶವು ಅಲ್ಲಿನ ಜನರಿಗೆ ಕೊಡಲಾಗುತ್ತಿದೆ.—ದತ್ತ ಲೇಖನ.

[ಪುಟ 17ರಲ್ಲಿರುವ ಭೂಪಟಗಳು/ಚಿತ್ರ]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

[ಪುಟ 17ರಲ್ಲಿರುವ ಚಿತ್ರ]

ಆಫ್ರಿಕ

ಕೆನ್ಯ

ಲಾಮು

[ಪುಟ 17ರಲ್ಲಿರುವ ಚಿತ್ರ ಕೃಪೆ]

© Alice Garrard

[ಪುಟ 18ರಲ್ಲಿರುವ ಚಿತ್ರ ಕೃಪೆ]

© Alice Garrard