ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜಗತ್ತನ್ನು ಗಮನಿಸುವುದು

ಜಗತ್ತನ್ನು ಗಮನಿಸುವುದು

ಜಗತ್ತನ್ನು ಗಮನಿಸುವುದು

ಮಕ್ಕಳು ಎಷ್ಟು ನೀರನ್ನು ಕುಡಿಯಬೇಕು?

ಒಂದರಿಂದ ನಾಲ್ಕು ವರ್ಷದ ವರೆಗಿನ ಮಕ್ಕಳು ತುಂಬ ಕಡಿಮೆ ನೀರನ್ನು ಕುಡಿಯುತ್ತಿದ್ದಾರೆ. ಜರ್ಮನಿಯ ಡಾರ್ಟ್‌ಮಂಡ್‌ನಲ್ಲಿರುವ ಮಕ್ಕಳ ಪೋಷಣಶಾಸ್ತ್ರದ ಸಂಶೋಧನಾ ಸಂಸ್ಥೆಯು ನಡೆಸಿದ ಅಧ್ಯಯನದಿಂದ ಈ ಸಂಗತಿಯು ತಿಳಿದುಬಂತು ಮತ್ತು ಅದನ್ನು ಟೆಸ್ಟ್‌ ಎಂಬ ಹೆಸರಿನ ಬಳಕೆದಾರರ ಪತ್ರಿಕೆಯಲ್ಲಿ ವರದಿಸಲಾಯಿತು. ವಿಶೇಷವಾಗಿ ಒಂದರಿಂದ ನಾಲ್ಕು ವರ್ಷದ ವರೆಗಿನ ಮಕ್ಕಳು, ನಿರ್ಜಲೀಕರಣಕ್ಕೆ ತೀರ ಸುಲಭವಾಗಿ ತುತ್ತಾಗುತ್ತಾರೆ ಮತ್ತು ಈ ಕಾರಣದಿಂದ ಅವರು ಊಟಗಳ ಸಮಯದಲ್ಲಿ ಕುಡಿಯುವ ನೀರಿನ ಜೊತೆಗೆ, ಒಂದು ದಿನದಲ್ಲಿ ಸುಮಾರು ಒಂದು ಲೀಟರ್‌ ನೀರನ್ನು ಕುಡಿಯಲೇಬೇಕು. ಆದರೆ ಸಾಮಾನ್ಯವಾಗಿ, ಮಕ್ಕಳು ಕೇವಲ ಮುಕ್ಕಾಲು ಲೀಟರ್‌ ನೀರನ್ನು ಕುಡಿಯುತ್ತಾರೆ. ಮತ್ತು ಇದಕ್ಕೆ ಯಾವಾಗಲೂ ಅವರೇ ಕಾರಣರಾಗಿರುವುದಿಲ್ಲ. ಒಂದು ಮಗು ಏನಾದರೂ ಕುಡಿಯಲಿಕ್ಕಾಗಿ 5 ಬಾರಿ ಕೇಳಿಕೊಂಡರೆ, ತಂದೆ ಅಥವಾ ತಾಯಿ ಒಂದು ಬಾರಿ ಆ ಬೇಡಿಕೆಯನ್ನು ತಳ್ಳಿಹಾಕುತ್ತಿದ್ದರೆಂಬುದನ್ನು ಸಂಶೋಧಕರು ಕಂಡುಹಿಡಿದರು. ಮಕ್ಕಳಿಗೆ ಕೊಡಬಹುದಾದ ಅತ್ಯುತ್ಕೃಷ್ಟವಾದ ಪಾನೀಯ ಯಾವುದು? ಸುರಕ್ಷಿತವಾಗಿರುವಲ್ಲೆಲ್ಲ, ಸಾದಾ ನೀರನ್ನು ಕೊಡುವುದು ಉತ್ತಮವೆಂದು ಟೆಸ್ಟ್‌ ಪತ್ರಿಕೆಯು ಹೇಳುತ್ತದೆ.

ಸಾಮಾಜಿಕವಾಗಿ ಕ್ರಿಯಾಶೀಲರಾಗಿರುವವರು ದೀರ್ಘಾಯುಷಿಗಳು

ಹಾರ್ವಾರ್ಡ್‌ ವಿಶ್ವವಿದ್ಯಾನಿಲಯವು ನಡೆಸಿದ ಒಂದು ಹೊಸ ಅಧ್ಯಯನಕ್ಕನುಸಾರ, ಚರ್ಚು, ರೆಸ್ಟೊರೆಂಟ್‌ಗಳು, ಕ್ರೀಡೋತ್ಸವಗಳು, ಮತ್ತು ಚಲನಚಿತ್ರಗಳನ್ನು ನೋಡಲು ಹೋಗುವಂತಹ ಸಾಮಾಜಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ವೃದ್ಧ ವ್ಯಕ್ತಿಗಳು, ಈ ಚಟುವಟಿಕೆಗಳಲ್ಲಿ ಒಳಗೂಡದಿರುವ ಜನರಿಗಿಂತಲೂ ಸರಾಸರಿ ಎರಡೂವರೆ ವರ್ಷಗಳಷ್ಟು ಹೆಚ್ಚು ಕಾಲ ಜೀವಿಸುತ್ತಾರೆ. ಈ ಚಟುವಟಿಕೆಗಳಲ್ಲಿನ ದೈಹಿಕ ಕ್ರಿಯೆಯು ಜನರಿಗೆ ಸಹಾಯಮಾಡುತ್ತದೆಂದು ಬಹು ಸಮಯದಿಂದ ಎಣಿಸಲಾಗುತ್ತಿತ್ತೆಂದು, ಆ ಅಧ್ಯಯನದ ಮುಂದಾಳತ್ವ ವಹಿಸಿದ್ದ ಹಾರ್ವಾರ್ಡ್‌ ವಿಶ್ವವಿದ್ಯಾನಿಲಯದ ಥಾಮಸ್‌ ಗ್ಲಾಸ್‌ರವರು ಹೇಳಿದರು. ಆದರೆ ಈ ಅಧ್ಯಯನವು, “ಜೀವಿತದ ಈ ಕೊನೆಯ ಭಾಗದಲ್ಲೂ ಒಂದು ಅರ್ಥಪೂರ್ಣ ಉದ್ದೇಶವಿರುವುದು ಜೀವನಾಯುಷ್ಯವನ್ನು ಹೆಚ್ಚಿಸುತ್ತದೆಂದು ಈ ವರೆಗೂ ನಮಗೆ ಸಿಕ್ಕಿರುವಂಥದ್ದರಲ್ಲಿ ಅತಿ ಬಲವಾದ ಸಾಕ್ಷ್ಯವನ್ನು” ಕೊಡುತ್ತಿರಬಹುದೆಂದು ಅವರು ಕೂಡಿಸಿ ಹೇಳಿದರು. ಯಾವುದೇ ರೀತಿಯ ಚಟುವಟಿಕೆಯಾಗಿರಲಿ ಅದನ್ನು ಹೆಚ್ಚಿನ ಪ್ರಮಾಣದಲ್ಲಿ ಮಾಡುವುದು, ಬಹುಮಟ್ಟಿಗೆ ಪ್ರತಿಯೊಂದು ವಿದ್ಯಮಾನದಲ್ಲಿ ಜೀವನಾಯುಷ್ಯವನ್ನು ಹೆಚ್ಚಿಸಿತ್ತೆಂಬುದನ್ನು ಗ್ಲಾಸ್‌ ಗಮನಿಸಿದರು.

ವಿಶ್ರಾಮಕ್ಕಾಗಿ ಅಚ್ಚುಮೆಚ್ಚಿನ ಆಯ್ಕೆ

ಇತ್ತೀಚಿನ ಅಧ್ಯಯನವೊಂದರಲ್ಲಿ, 30 ವಿಭಿನ್ನ ದೇಶಗಳಲ್ಲಿನ 1,000 ಜನರಿಗೆ, ಮನಸ್ಸಿನ ಒತ್ತಡವನ್ನು ಕಡಿಮೆಗೊಳಿಸಲು ಅಥವಾ ತೊಲಗಿಸಲಿಕ್ಕಾಗಿ ಏನನ್ನು ಮಾಡಲು ಇಷ್ಟಪಡುತ್ತಾರೆಂದು ಕೇಳಲಾಯಿತು. ರಾಯ್ಟರ್ಸ್‌ ವಾರ್ತಾ ಮಾಧ್ಯಮಕ್ಕನುಸಾರ, ಲೋಕವ್ಯಾಪಕವಾಗಿ ಇಂಟರ್‌ವ್ಯೂ ಮಾಡಲ್ಪಟ್ಟವರಲ್ಲಿ 56 ಪ್ರತಿಶತ ಮಂದಿ, ಸಂಗೀತ ತಮ್ಮ ಪ್ರಥಮ ಆಯ್ಕೆಯಾಗಿದೆ ಎಂದು ಹೇಳಿದರು. ಉತ್ತರ ಅಮೆರಿಕದಲ್ಲಿ, 64 ಪ್ರತಿಶತ ಮಂದಿಯ ಪ್ರಥಮ ಆಯ್ಕೆ ಸಂಗೀತವಾಗಿತ್ತು ಮತ್ತು ಅಭಿವೃದ್ಧಿಹೊಂದಿರುವ ಏಷಿಯದಲ್ಲಿಯೂ 46 ಪ್ರತಿಶತ ಮಂದಿ ಅದನ್ನೇ ಹೇಳಿದರು. ಎಲ್ಲವನ್ನೂ ಒಟ್ಟುಗೂಡಿಸಿ ನೋಡುವಾಗ, ಟಿವಿ ನೋಡುವುದು ಎರಡನೆಯ ಆಯ್ಕೆಯಾಗಿತ್ತು ಮತ್ತು ಅದರ ನಂತರದ ಆಯ್ಕೆ ಸ್ನಾನಮಾಡುವುದಾಗಿತ್ತು. “ಸಂಗೀತಕ್ಕಾಗಿ ತಗಲುವ ವೆಚ್ಚ ಮತ್ತು ರೇಡಿಯೊ, ಟಿವಿ, ಪರ್ಸನಲ್‌ ಸಿಡಿ ಪ್ಲೇಯರ್‌ಗಳು, ಇಂಟರ್‌ನೆಟ್‌ ಹಾಗೂ ಇನ್ನೂ ಅನೇಕ ಹೊಸ ಮಾಧ್ಯಮಗಳ ಮೂಲಕ ಸಂಗೀತವು ಸುಲಭವಾಗಿ ಲಭ್ಯವಿರುವುದರ ಕುರಿತಾಗಿ ಯೋಚಿಸುವಾಗ, ಜಗತ್ತಿನ ಅರ್ಧಕ್ಕಿಂತಲೂ ಹೆಚ್ಚು ಮಂದಿ ವಿಶ್ರಾಮಕ್ಕಾಗಿ ಸಂಗೀತವನ್ನು ಆಲಿಸುತ್ತಿರುವುದು ಆಶ್ಚರ್ಯಗೊಳಿಸುವ ಸಂಗತಿಯೇನಲ್ಲ” ಎಂದು ರೋಪರ್‌ ಸ್ಟಾರ್ಚ್‌ ವರ್ಲ್ಡ್‌ವೈಡ್‌ ಎಂಬ ಕಂಪೆನಿಯಿಂದ ನಡೆಸಲ್ಪಟ್ಟ ಅಧ್ಯಯನದ ನಿರ್ದೇಶಕರಾದ ಟಾಮ್‌ ಮಿಲ್ಲರ್‌ ಹೇಳಿದರು.

ಬಡತನ—ಲೋಕ ಸಮಸ್ಯೆ

ವಿಶ್ವ ಬ್ಯಾಂಕ್‌ನ ಅಧ್ಯಕ್ಷರಾದ ಜೇಮ್ಸ್‌ ಡಿ. ವೊಲ್ಫೆನ್ಸನ್‌ರವರು, ಲೋಕದ ಮುಂದುವರಿಯುತ್ತಿರುವ ಬಡತನದ ಕುರಿತು ಇತ್ತೀಚೆಗೆ ಚಿಂತೆ ವ್ಯಕ್ತಪಡಿಸಿದರು. ಲೋಕದಲ್ಲಿರುವ ಆರುನೂರು ಕೋಟಿ ಜನರಲ್ಲಿ ಇನ್ನೂರು ಕೋಟಿ ಜನರು ಬಡತನದ ಬೇಗೆಯಲ್ಲಿ ಬೇಯುತ್ತಿರುವುದರ ಬಗ್ಗೆ ಅವರು ಹೇಳಿದರೆಂದು, ಮೆಕ್ಸಿಕೊ ನಗರದ ಲಾ ಹೊರ್ನಾಡಾ ವಾರ್ತಾಪತ್ರಿಕೆಯು ವರದಿಸುತ್ತದೆ. ಇಡೀ ಭೂಮಿಯ ಜನಸಂಖ್ಯೆಯಲ್ಲಿ ಅರ್ಧದಷ್ಟು ಜನರು, ಒಂದು ದಿನದಲ್ಲಿ ಎರಡಕ್ಕಿಂತಲೂ ಕಡಿಮೆ ಡಾಲರುಗಳಿಂದ ಜೀವನ ನಡೆಸುತ್ತಾರೆ, ಮತ್ತು ನೂರು ಕೋಟಿ ಜನರು ಒಂದು ಡಾಲರಿಗಿಂತಲೂ ಕಡಿಮೆ ಹಣದಲ್ಲಿ ಜೀವನ ನಡೆಸುತ್ತಾರೆ. ಬಡತನದ ವಿರುದ್ಧ ಹೋರಾಟದಲ್ಲಿ ವಿಶ್ವ ಬ್ಯಾಂಕ್‌ ಮಾಡಿರುವ ಪ್ರಗತಿಯ ಬಗ್ಗೆ ವೊಲ್ಫೆನ್ಸನ್‌ರವರು ಹೆಮ್ಮೆಪಡುತ್ತಾರಾದರೂ, ಆ ಸಮಸ್ಯೆಯು ತುಂಬ ವ್ಯಾಪಕವಾಗಿದೆ ಮತ್ತು ಇನ್ನೂ ಜಯಿಸಲ್ಪಟ್ಟಿಲ್ಲವೆಂದು ತೋರಿಸುವ ಸಂಖ್ಯೆಗಳನ್ನು ಅವರು ಒದಗಿಸಿದರು. ಅವರು ತಿಳಿಸಿದ್ದು: “ಬಡತನವು ಲೋಕ ಸಮಸ್ಯೆಯಾಗಿದೆ ಎಂಬುದನ್ನು ನಾವು ಅಂಗೀಕರಿಸಲೇಬೇಕು.”

ಸಮಯವೇ ಸಾಕಾಗುವುದಿಲ್ಲ

ಯೂರೋಪಿನಾದ್ಯಂತ ಅಧಿಕಾಧಿಕ ಜನರಿಗೆ, ತಮಗೆ ಸಮಯವೇ ಸಾಕಾಗುವುದಿಲ್ಲವೆಂಬ ಅನಿಸಿಕೆಯಿದೆ ಎಂದು ಗೀಸಾನಾ ಆಲ್ಗೇಮೈನಾ ಎಂಬ ಜರ್ಮನ್‌ ವಾರ್ತಾಪತ್ರಿಕೆಯು ವರದಿಸುತ್ತದೆ. ಜನರು ಮನೆಯ ಹೊರಗೆ ಇಲ್ಲವೇ ಮನೆಯೊಳಗೆ ಕೆಲಸಮಾಡುತ್ತಿರಲಿ ಅಥವಾ ವಿರಾಮ ಪಡೆದುಕೊಳ್ಳುತ್ತಿರಲಿ ಅವರಿಗೆ ಇದೇ ಸಮಸ್ಯೆ ಇರುತ್ತದೆ. “ಇಂದಿನ ಜನರು, 40 ವರ್ಷಗಳ ಹಿಂದಿನ ಸಮಯದಲ್ಲಿದ್ದ ಜನರಿಗಿಂತಲೂ ಕಡಿಮೆ ಸಮಯ ಮಲಗುತ್ತಾರೆ, ಹೆಚ್ಚು ಬೇಗನೆ ತಿನ್ನುತ್ತಾರೆ, ಮತ್ತು ಕೆಲಸಕ್ಕೆ ಹೆಚ್ಚು ಅವಸರದಿಂದ ಹೋಗುತ್ತಾರೆ” ಎಂದು ಬ್ಯಾಮ್‌ಬರ್ಗ್‌ ವಿಶ್ವವಿದ್ಯಾನಿಲಯದ ಸಮಾಜಶಾಸ್ತ್ರಜ್ಞರಾದ ಮ್ಯಾನ್‌ಫ್ರೆಡ್‌ ಗಾರ್‌ಹಾಮರ್‌ ಹೇಳುತ್ತಾರೆ. ತಾವು ಅಧ್ಯಯನ ನಡೆಸಿದ ಯೂರೋಪಿನ ಎಲ್ಲ ದೇಶಗಳಲ್ಲಿ, ದೈನಂದಿನ ಜೀವಿತದ ವೇಗವು ತ್ವರಿತಗೊಂಡಿದೆ ಎಂಬುದನ್ನು ಅವರು ಕಂಡುಹಿಡಿದರು. ಮನೆಕೆಲಸವನ್ನು ಕಡಿಮೆಗೊಳಿಸುವ ಉಪಕರಣಗಳು ಮತ್ತು ಉದ್ಯೋಗ ಸ್ಥಳದಲ್ಲಿ ಕೆಲಸಮಾಡುವ ತಾಸುಗಳು ಕಡಿಮೆಗೊಳಿಸಲ್ಪಟ್ಟಿದ್ದರೂ, “ಪುರಸೊತ್ತಿನ ಸಮಾಜ” ಅಥವಾ “ಸಮಯ ಸಮೃದ್ಧಿಯು” ಇನ್ನೂ ಲಭಿಸಿಲ್ಲ. ಅದಕ್ಕೆ ಬದಲು, ಊಟಮಾಡಲು ತೆಗೆದುಕೊಳ್ಳುವ ಸಮಯದಲ್ಲಿ 20 ನಿಮಿಷಗಳು ಮತ್ತು ರಾತ್ರಿಯ ವಿಶ್ರಾಮದ ಸಮಯದಲ್ಲಿ 40 ನಿಮಿಷಗಳ ಸರಾಸರಿ ಕಡಿತವಾಗಿದೆ.

ಮಾನಸಿಕ ಒತ್ತಡವನ್ನು ಎದುರಿಸುವುದು

ನಿಮಗೆ ಮಾನಸಿಕ ಒತ್ತಡವಿದೆಯೊ? ಎಲ್‌ ಯೂನಿವರ್ಸಾಲ್‌ ವಾರ್ತಾಪತ್ರಿಕೆಯಲ್ಲಿ ವರದಿಸಲ್ಪಟ್ಟಂತೆ ಮೆಕ್ಸಿಕೊದ ಸಾಮಾಜಿಕ ಭದ್ರತೆಯ ಸಂಸ್ಥೆಯು, ಮಾನಸಿಕ ಒತ್ತಡವನ್ನು ಎದುರಿಸಲು ಈ ಮುಂದಿನ ಸೂಚನೆಗಳನ್ನು ಕೊಡುತ್ತದೆ. ನಿಮ್ಮ ದೇಹವು ಬೇಡಿಕೊಳ್ಳುವಷ್ಟು ಸಮಯ, ಅಂದರೆ ಒಂದು ದಿನದಲ್ಲಿ ಆರರಿಂದ ಹತ್ತು ತಾಸುಗಳ ವರೆಗೆ ನಿದ್ರೆಮಾಡಿರಿ. ಬೆಳಗ್ಗೆ ಒಳ್ಳೆಯ ಮತ್ತು ಸಮತೂಕದ ಉಪಹಾರವನ್ನು, ಮಧ್ಯಾಹ್ನ ಸಾಧಾರಣ ಮೊತ್ತದ ಊಟವನ್ನು ಮತ್ತು ರಾತ್ರಿ ಕಡಮೆ ಆಹಾರವನ್ನು ಸೇವಿಸಿರಿ. ಅಲ್ಲದೆ, ಹೆಚ್ಚು ಕೊಬ್ಬಿರುವ ಆಹಾರದ ಸೇವನೆಯನ್ನು ಕಡಿಮೆಗೊಳಿಸಲು, ನೀವು ಉಪಯೋಗಿಸುವ ಉಪ್ಪಿನ ಪ್ರಮಾಣವನ್ನು ಸೀಮಿತಗೊಳಿಸಲು ಮತ್ತು 40 ವರ್ಷ ಪ್ರಾಯವನ್ನು ದಾಟಿದ ನಂತರ ಹಾಲು ಮತ್ತು ಸಕ್ಕರೆಯ ಬಳಕೆಯನ್ನು ಕಡಿಮೆಗೊಳಿಸಲು ಪರಿಣತರು ಶಿಫಾರಸ್ಸುಮಾಡುತ್ತಾರೆ. ಮೌನವಾಗಿ ಧ್ಯಾನಮಾಡಲಿಕ್ಕಾಗಿ ಸಮಯ ಮಾಡಲು ಪ್ರಯತ್ನಿಸಿರಿ. ನಿಸರ್ಗದೊಂದಿಗೆ ಸಂಪರ್ಕವನ್ನು ಇಟ್ಟುಕೊಳ್ಳುವ ಮೂಲಕವೂ ಒತ್ತಡವನ್ನು ಕಡಿಮೆಗೊಳಿಸಬಹುದು.

ಬುದ್ಧಿವಂತ ಪಕ್ಷಿಗಳು!

“ಕಲ್ಕತ್ತಾದ ಗುಬ್ಬಚ್ಚಿಗಳು ಮಲೇರಿಯದಿಂದ ದೂರವಿರುತ್ತವೆ” ಎಂದು ತೆರ್‌ ಸೊವಾಸ್‌ ಎಂಬ ಫ್ರೆಂಚ್‌ ನಿಸರ್ಗ ಪತ್ರಿಕೆಯು ವರದಿಸಿತು. ಮಲೇರಿಯವು ಹೆಚ್ಚುತ್ತಿರುವುದರಿಂದ, ಮಲೇರಿಯ ವಿರೋಧಿ ಔಷಧಿಯಾಗಿರುವ ಕ್ವಿನೀನ್‌ ಅನ್ನು ಉಚ್ಚ ಪ್ರಮಾಣದಲ್ಲಿ ನಿಸರ್ಗವು ಉತ್ಪಾದಿಸುವ ಒಂದು ಮರದ ಎಲೆಗಳಿಗಾಗಿ ಹುಡುಕುತ್ತಾ, ಈಗ ಗುಬ್ಬಚ್ಚಿಗಳು ತಮ್ಮ ಗೂಡುಗಳಿಂದ ಎಷ್ಟೋ ದೂರದ ವರೆಗೆ ಹಾರುತ್ತವೆ. ಈ ಎಲೆಗಳನ್ನು ತಮ್ಮ ಗೂಡುಗಳಿಗೆ ಒಳಪದರವಾಗಿ ಉಪಯೋಗಿಸುವುದರೊಂದಿಗೆ, ಅವು ಈ ಎಲೆಗಳನ್ನು ತಿನ್ನುತ್ತವೆ ಸಹ. “ನಗರಗಳನ್ನು ಇಷ್ಟಪಡುವುದಾದರೂ, ಮಲೇರಿಯಕ್ಕೆ ಹೆದರುವ ಈ ಗುಬ್ಬಚ್ಚಿಗಳು ತಮ್ಮನ್ನು ಸಂರಕ್ಷಿಸಿಕೊಳ್ಳುವ ಮಾರ್ಗವನ್ನು ಕಂಡುಹಿಡಿದಿವೆ” ಎಂದು ಆ ಪತ್ರಿಕೆಯು ಹೇಳುತ್ತದೆ.

“ದೇವರು ಯಾರ ಪಕ್ಷದಲ್ಲಿದ್ದಾನೆ?”

ಕ್ರೀಡಾ ಅಂಕಣಕಾರ ಸ್ಯಾಮ್‌ ಸ್ಮಿತ್‌ ಬರೆಯುವುದು: “ಯಾವುದೇ ವ್ಯಕ್ತಿಯ ನಂಬಿಕೆಗಳನ್ನು ತುಚ್ಛೀಕರಿಸುವುದು ನನ್ನ ಉದ್ದೇಶವಲ್ಲ. ಆದರೂ, ಕ್ರೀಡೆಯಲ್ಲಿ ಧಾರ್ಮಿಕತೆಯ ಈ ಬಹಿರಂಗ ಪ್ರದರ್ಶನವು ಅತಿಯಾಗಿಬಿಟ್ಟಿರುವಂತೆ ತೋರುವುದಿಲ್ಲವೊ? ಫುಟ್‌ಬಾಲ್‌ ಆಟಗಾರರು ಗೆಲ್ಲಂಕವನ್ನು ಪಡೆದ ಕೂಡಲೇ ಪ್ರಾರ್ಥಿಸುವುದೇಕೆ?” ಒಂದು ಆಟದ ನಂತರ ಒಟ್ಟುಗೂಡಿ ಪ್ರಾರ್ಥನೆ ಮಾಡುವ ಆಟಗಾರರೇ, ಬಟ್ಟೆ ಬದಲಾಯಿಸುವ ಕೋಣೆಯಲ್ಲಿ “ವರದಿಗಾರರನ್ನು ಶಪಿಸುತ್ತಿರುವುದನ್ನು” ಅಥವಾ ಒಂದು ಕ್ರೀಡಾ ಸ್ಪರ್ಧೆಯ ಆವೇಶದಲ್ಲಿ “ಬೇರೆ ಆಟಗಾರರಿಗೆ ಹಾನಿಮಾಡಲು ಪ್ರಯತ್ನಿಸುತ್ತಿರುವುದನ್ನು” ನೋಡಬಹುದು ಎಂದು ಸ್ಮಿತ್‌ ಗಮನಿಸುತ್ತಾರೆ. ದೇವರು ಒಂದು ತಂಡಕ್ಕಿಂತಲೂ ಹೆಚ್ಚಾಗಿ ಇನ್ನೊಂದು ತಂಡಕ್ಕೆ ಕೃಪೆಯನ್ನು ತೋರಿಸುತ್ತಾನೆಂದು ನೆನಸುವುದು, “ದೇವರಲ್ಲಿನ ನಂಬಿಕೆಯನ್ನು ತುಚ್ಛೀಕರಿಸುತ್ತಿರುವಂತೆ ತೋರುತ್ತದೆಂದು” ಅವರು ಹೇಳುತ್ತಾರೆ. ಆದುದರಿಂದ ಆ ಲೇಖನದ ಕೊನೆಯಲ್ಲಿ ಅವರು ಹೀಗೆ ಹೇಳುತ್ತಾರೆ: “ನಾವು ಕ್ರೀಡೆಯನ್ನು ಒಂದು ಧಾರ್ಮಿಕ ಸಂಸ್ಕಾರವನ್ನಾಗಿ ಮಾಡದಿರಲು ಪ್ರಯತ್ನಿಸೋಣ.”

ಪುಟಾಣಿಗಳು ಮತ್ತು ಟಿವಿ

ಅಮೆರಿಕದ ಮಕ್ಕಳ ವೈದ್ಯಶಾಸ್ತ್ರ ಸಂಸ್ಥೆಯು, ಎರಡು ವರ್ಷಕ್ಕಿಂತಲೂ ಕೆಳಗಿನ ಪ್ರಾಯದ ಮಕ್ಕಳು ಟಿವಿ ನೋಡದಿರುವಂತೆ ಶಿಫಾರಸ್ಸುಮಾಡುತ್ತದೆಂದು, ದ ಟೊರಾಂಟೊ ಸ್ಟಾರ್‌ ವಾರ್ತಾಪತ್ರಿಕೆಯು ವರದಿಸುತ್ತದೆ. ಶಿಶುಗಳು ಮತ್ತು ಪುಟಾಣಿಗಳಿಗೆ, ತಮ್ಮ ಹೆತ್ತವರೊಂದಿಗೆ ಮತ್ತು ಪಾಲಕರೊಂದಿಗೆ ನೇರವಾದ ಸಂಪರ್ಕವಿರಬೇಕೆಂದು, ಶಿಶುಗಳ ಮಿದುಳು ವಿಕಸನದ ಕುರಿತಾದ ಸಂಶೋಧನೆಯು ತೋರಿಸುತ್ತದೆ. ಟಿವಿ ನೋಡುವುದು, “ಅವರ ಸಾಮಾಜಿಕ, ಭಾವನಾತ್ಮಕ ಮತ್ತು ಜ್ಞಾನಗ್ರಹಣದ ಕೌಶಲಗಳನ್ನು ವಿಕಸಿಸಲು ಸಹಾಯಮಾಡುವ ಕ್ರಿಯೆಗೆ ಅಡ್ಡ”ಬರಬಹುದು. ಆದರೆ ಎಲ್ಲ ಪರಿಣತರು ಈ ವಿಷಯವನ್ನು ಒಪ್ಪಿಕೊಳ್ಳುವುದಿಲ್ಲ. ಉದಾಹರಣೆಗಾಗಿ, ಕೆನಡದ ಮಕ್ಕಳ ವೈದ್ಯಶಾಸ್ತ್ರ ಸಂಘವು ಹೇಳುವುದೇನೆಂದರೆ, ಹೆತ್ತವರ ಮೇಲ್ವಿಚಾರಣೆಯ ಕೆಳಗೆ ಒಂದು ದಿನದಲ್ಲಿ ಕನಿಷ್ಠಪಕ್ಷ 30 ನಿಮಿಷಗಳ ವರೆಗೆ ಟಿವಿಯಲ್ಲಿ ಒಳ್ಳೆಯ ಕಾರ್ಯಕ್ರಮಗಳನ್ನು ನೋಡುವುದರಿಂದ ಮಗುವಿಗೆ “ಹೆತ್ತವರಿಂದ ಕಲಿಸಲ್ಪಡಲು ಒಂದು ಅವಕಾಶವು” ಸಿಗುತ್ತದೆ. ಅದೇ ಸಮಯದಲ್ಲಿ, ಪುಟ್ಟ ಮಕ್ಕಳಿಗೆ ತಮ್ಮ ಮಲಗುವ ಕೋಣೆಗಳಲ್ಲಿ ಟಿವಿ ಅಥವಾ ಕಂಪ್ಯೂಟರ್‌ಗಳಿರಬಾರದು ಮತ್ತು ಟಿವಿಯನ್ನು ಒಂದು ಶಿಶುಪಾಲಕನಂತೆ ಉಪಯೋಗಿಸಬಾರದೆಂಬ ವಿಷಯವನ್ನು ಈ ಎರಡೂ ಸಂಸ್ಥೆಗಳು ಅನುಮೋದಿಸುತ್ತವೆ. ಟಿವಿ ನೋಡುವುದು ಎಳೆಯ ಮಕ್ಕಳ ಆರೋಗ್ಯವನ್ನು ಬಾಧಿಸಸಾಧ್ಯವಿರುವುದರಿಂದ, “ಮಕ್ಕಳಿಗೆ ಮನೆಯ ಹೊರಗೆ ಆಡಲು, ಪುಸ್ತಕಗಳನ್ನು ಓದಲು ಅಥವಾ ಚಿತ್ರಬಂಧಗಳನ್ನು ಬಿಡಿಸಲು ಅಥವಾ ಆಟಗಳನ್ನಾಡಲು ಪ್ರೋತ್ಸಾಹಿಸುವಂತೆ” ಸಲಹೆಯನ್ನು ನೀಡಲಾಗಿದೆ.