ಜ್ವಾಲಾಮುಖಿಗೆ ಎದುರಾಗಿ ಕ್ರೈಸ್ತ ಪ್ರೀತಿ
ಜ್ವಾಲಾಮುಖಿಗೆ ಎದುರಾಗಿ ಕ್ರೈಸ್ತ ಪ್ರೀತಿ
ಕ್ಯಾಮರೂನ್‌ನ ಎಚ್ಚರ! ಸುದ್ದಿಗಾರರಿಂದ
ಕಳೆದ ವರ್ಷ ಆಫ್ರಿಕನ್ ದೇಶವಾದ ಕ್ಯಾಮರೂನ್‌ನಲ್ಲಿ ಒಂದು ದೊಡ್ಡ ಜ್ವಾಲಾಮುಖಿಯು ಸ್ಫೋಟಿಸಿತು. ಮೌಂಟ್ ಕ್ಯಾಮರೂನ್ ಒಂದು ಜ್ವಾಲಾಮುಖಿಯಾಗಿದ್ದು, ಸಮುದ್ರ ಮಟ್ಟಕ್ಕಿಂತ 13,353 ಅಡಿಗಳಷ್ಟು ಎತ್ತರದಲ್ಲಿದೆ. ಇದು 20ನೆಯ ಶತಮಾನದಲ್ಲಿ ಈ ಪರ್ವತದಿಂದ ಉಂಟಾಗಿರುವ ಐದನೆಯ ಸ್ಫೋಟವಾಗಿದೆ. ಇದುವರೆಗೆ ಸಂಭವಿಸಿರುವ ಸ್ಫೋಟಗಳಲ್ಲೇ ಅತ್ಯಂತ ಭೀಕರವಾದದ್ದೂ ಗಂಭೀರವಾದದ್ದೂ ಆಗಿದೆ ಎಂದು ವರದಿಸಲಾಗಿತ್ತು.
ಮೊದಲಾಗಿ 1999ರ ಮಾರ್ಚ್ 27ರಂದು, ಶನಿವಾರ ಮಧ್ಯಾಹ್ನ ಈ ವಿಪತ್ತು ಬಂದೆರಗಿತು. ಗೋಡೆಗಳು, ಮನೆಗಳು ಮತ್ತು ಮರಗಳು ಸಹ ಜೋರಾಗಿ ಅಲುಗಾಡಿದವು ಎಂದು, ಈ ಅಗ್ನಿಪರ್ವತದ ತಪ್ಪಲಲ್ಲಿರುವ ಬೂಏ ಪಟ್ಟಣದ ನಿವಾಸಿಗಳಲ್ಲಿ ಈ ದೃಶ್ಯವನ್ನು ಕಣ್ಣಾರೆ ಕಂಡವರು ವರದಿಸಿದರು. ಮರುದಿನ ಸಾಯಂಕಾಲ, ಸುಮಾರು ಎಂಟೂವರೆ ಗಂಟೆಗೆ ಉಂಟಾದ ಅತ್ಯಂತ ಪ್ರಚಂಡವಾದ ಮತ್ತು ಅತಿ ಭೀಕರವಾದ ಕಂಪನವು ಈ ಪ್ರಾಂತವನ್ನೇ ಅಲುಗಾಡಿಸಿಬಿಟ್ಟಿತು. ಸುಮಾರು 40 ಮೈಲು ದೂರದಲ್ಲಿರುವ ಡೌಆಲದಲ್ಲಿಯೂ ಈ ಕಂಪನದ ಅನುಭವವಾಯಿತು. ಮಂಗಳವಾರ, ಮಾರ್ಚ್ 30, 1999ರ ಲ ಮೆಸೇಸಾ ವಾರ್ತಾಪತ್ರಿಕೆಯ ಮುಖಪುಟವು ಹೀಗೆ ಪ್ರಕಟಿಸಿತು: “ಮೌಂಟ್ ಕ್ಯಾಮರೂನ್‌ನ ಸ್ಫೋಟ—2,50,000 ಮಂದಿಯ ಜೀವಗಳು ಅಪಾಯದಲ್ಲಿವೆ.” ಅದು ಮುಂದುವರಿಸಿದ್ದು: “ಎರಡು ದಿನಗಳಲ್ಲಿ ಭೂಮಿಯು ಸುಮಾರು 50 ಬಾರಿ ಕಂಪಿಸಿತು; ಈಗಾಗಲೇ ಜ್ವಾಲಾಮುಖಿಯ ನಾಲ್ಕು ಕುಳಿಗಳು ಕಂಡುಬಂದಿವೆ; ನೂರಾರು ಮನೆಗಳು ಧ್ವಂಸವಾಗಿವೆ; ಬೂಏ ಪಟ್ಟಣದಲ್ಲಿರುವ ರಾಷ್ಟ್ರಾಧ್ಯಕ್ಷರ ಅರಮನೆಯು ಪುಡಿಪುಡಿಯಾಗಿದೆ.”
ಬೂಏದಲ್ಲಿ ಸುಮಾರು 80 ಮಂದಿ ಯೆಹೋವನ ಸಾಕ್ಷಿಗಳು ವಾಸಿಸುತ್ತಿದ್ದಾರೆ. ರಾಜ್ಯ ಸಭಾಗೃಹದೋಪಾದಿ ಉಪಯೋಗಿಸಲ್ಪಡುತ್ತಿದ್ದ ಮನೆಯನ್ನೂ ಸೇರಿಸಿ ಅನೇಕ ಮನೆಗಳು ರಿಪೇರಿಮಾಡಲಾರದಷ್ಟು ಹಾನಿಗೊಳಗಾಗಿದ್ದವು. ಆದರೂ, ಯಾರೂ ಸಾವಿಗೆ ಒಳಗಾಗಲಿಲ್ಲ.
ಕ್ರೈಸ್ತ ಪ್ರೀತಿಯು ಕ್ರಿಯೆಯಲ್ಲಿ ತೋರಿಸಲ್ಪಟ್ಟದ್ದು
ಈ ಭೀಕರ ದೈತ್ಯ ಜ್ವಾಲಾಮುಖಿಯಿಂದ ಉಂಟುಮಾಡಲ್ಪಟ್ಟ ಸರ್ವನಾಶವನ್ನು ಸ್ವಲ್ಪಮಟ್ಟಿಗೆ ಪರಿಹರಿಸಲಿಕ್ಕಾಗಿ, ಆ ಕೂಡಲೆ ಕ್ರೈಸ್ತ ಪ್ರೀತಿಯು ಕ್ರಿಯೆಯಲ್ಲಿ ತೋರಿಸಲ್ಪಟ್ಟಿತು. ಒಂದು ರಿಲೀಫ್ ಕಮಿಟಿಯು ನೇಮಿಸಲ್ಪಟ್ಟಿತು ಮತ್ತು ತುಂಬ ಅಗತ್ಯವಿದ್ದ ಹಣಕಾಸನ್ನು ಒದಗಿಸಲಿಕ್ಕಾಗಿ ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯು ಏರ್ಪಾಡನ್ನು ಮಾಡಿತು. ನೂರಾರು ಮಂದಿ ಸಾಕ್ಷಿಗಳು ತಮ್ಮ ಸಮಯ, ಶಕ್ತಿ ಮತ್ತು ಹಣವನ್ನು ಮನಃಪೂರ್ವಕವಾಗಿ ವಿನಿಯೋಗಿಸಿದರು.
ಯೆಹೋವನ ಸಾಕ್ಷಿಗಳ ಸಭೆಗಳು ಆಹಾರವನ್ನು ಸರಬರಾಜುಮಾಡಿದವು. ಒಬ್ಬ ಸಾಕ್ಷಿಯು 1,000 ಸಿಮೆಂಟ್ ಚಪ್ಪಡಿಗಳನ್ನು ದಾನಮಾಡಿದನು. ಇನ್ನೊಬ್ಬ ಸಾಕ್ಷಿಯು, ಅಲ್ಯೂಮಿನಿಯಂ ಛಾವಣಿಗೆ ಬೇಕಾದ ಸಾಮಗ್ರಿಗಳನ್ನು ಕಡಿಮೆ ಬೆಲೆಯಲ್ಲಿ ಖರೀದಿಸುವ ಏರ್ಪಾಡು ಮಾಡಿದನು. ಮತ್ತೊಬ್ಬನು ಮರದ ದಿಮ್ಮಿಗಳನ್ನು ತರಲಿಕ್ಕಾಗಿ 16 ಕಿಲೊಮೀಟರುಗಳಷ್ಟು ದೂರ ನಡೆದುಹೋದನು. ತನ್ನ ಭಾವೀ ಅತ್ತೆಮಾವಂದಿರಿಗೆ ವಧೂದಕ್ಷಿಣೆಯನ್ನು ಕೊಡಲಿಕ್ಕಾಗಿ ಹಣವನ್ನು ಕೂಡಿಸಿಟ್ಟಿದ್ದ ಒಬ್ಬ ಯುವಕನು, ತನ್ನ ಮದುವೆಯನ್ನು ಮುಂದೂಡಿ, ಒಂದು ಸರಪಣಿ ಗರಗಸವನ್ನು ರಿಪೇರಿ ಮಾಡಿಸಲಿಕ್ಕಾಗಿ ಆ ಹಣವನ್ನು ಉಪಯೋಗಿಸಿದನು. ತದನಂತರ ಕಾಡಿಗೆ ಹೋಗಿ, ಒಂದು ಇಡೀ ಮನೆಯನ್ನು ಕಟ್ಟಲು ಅಗತ್ಯವಾಗಿದ್ದಷ್ಟು ಮರದ ತುಂಡುಗಳನ್ನು ಮೂರು ವಾರಗಳಲ್ಲಿ ಕಡಿದು ತಂದನು! ಗಟ್ಟಿಮುಟ್ಟಾಗಿದ್ದ ಯುವ ಕ್ರೈಸ್ತ ಸಹೋದರರು ತಮ್ಮ ತಲೆಗಳ ಮೇಲೆ ಮರದ ದಿಮ್ಮಿಗಳನ್ನು ಹೊತ್ತುಕೊಂಡು, ಐದು ಕಿಲೊಮೀಟರುಗಳಷ್ಟು ದೂರ ನಡೆದರು, ಮತ್ತು ಅಲ್ಲಿಂದ ಒಂದು ಟ್ರಕ್‌ನಲ್ಲಿ ಅವುಗಳನ್ನು ಸಾಗಿಸಲಾಯಿತು.
ವಿಪತ್ತು ಸಂಭವಿಸಿದ್ದ ಸ್ಥಳದಲ್ಲಿ 60 ಮಂದಿ ಸ್ವಯಂಸೇವಕರು ಒಟ್ಟುಗೂಡಿದಾಗ, ಅಂದರೆ ಏಪ್ರಿಲ್ 24ರಂದು ಪುನರ್ನಿರ್ಮಾಣ ಕಾರ್ಯವು ಆರಂಭವಾಯಿತು. ಮುಂದಿನ ವಾರಾಂತ್ಯಗಳಲ್ಲಿ ಸ್ವಯಂಸೇವಕರ ಸಂಖ್ಯೆಯು 200ಕ್ಕೆ ಏರಿತು. ಇಡೀ ದಿನ ಉದ್ಯೋಗವನ್ನು ಮಾಡುತ್ತಿದ್ದ ಮೂವರು ಸಾಕ್ಷಿಗಳು, ತಮ್ಮ ಕ್ರಮದ ಕೆಲಸವನ್ನು ಮುಗಿಸಿದ ಬಳಿಕ ಇಲ್ಲಿಗೆ ಬಂದು, ಮಧ್ಯರಾತ್ರಿಯ ತನಕ ನಿರ್ಮಾಣ ಕೆಲಸದಲ್ಲಿ ಸಹಾಯಮಾಡುತ್ತಿದ್ದರು. ಡೌಆಲದಲ್ಲಿನ ಒಬ್ಬ ಸಾಕ್ಷಿಯು ಇಡೀ ಬೆಳಗ್ಗೆ ತನ್ನ ಐಹಿಕ ಉದ್ಯೋಗದ ಸ್ಥಳದಲ್ಲಿ ಕೆಲಸಮಾಡಿ, ತದನಂತರ ತನ್ನ ಮೋಟಾರ್‌ಸೈಕಲ್‌ನಲ್ಲಿ 70 ಕಿಲೊಮೀಟರುಗಳಷ್ಟು ದೂರ ಪ್ರಯಾಣಿಸಿ, ನಿರ್ಮಾಣ ಸ್ಥಳಕ್ಕೆ ಬಂದು ಮಧ್ಯರಾತ್ರಿಯ ತನಕ ಕೆಲಸಮಾಡಿ ಮನೆಗೆ ಹಿಂದಿರುಗುತ್ತಿದ್ದನು. ಎರಡು ತಿಂಗಳುಗಳಿಗಿಂತಲೂ ಕಡಿಮೆ ಸಮಯದೊಳಗೆ ಆರು ಮನೆಗಳು ಕಟ್ಟಿ ಮುಗಿಸಲ್ಪಟ್ಟವು. ಈ ಮಧ್ಯೆ, ಬೂಏ ಸಭೆಯು ಖಾಸಗಿ ಮನೆಯೊಂದರಲ್ಲಿ ಕೂಟಗಳನ್ನು ನಡೆಸುವುದನ್ನು ಮುಂದುವರಿಸಿತು. ಆದರೂ ಕೂಟದ ಹಾಜರಿಯು ಸಭೆಯ ಸದಸ್ಯರ ಸಂಖ್ಯೆಗಿಂತ ಹೆಚ್ಚುಕಡಿಮೆ ಎರಡರಷ್ಟಾಗಿತ್ತು.
ಇದೇ ಸಮಯದಲ್ಲಿ, ಕಲುಷಿತಗೊಂಡಿದ್ದ ನೀರನ್ನು ಶುದ್ಧೀಕರಿಸಲಿಕ್ಕಾಗಿ ರಿಲೀಫ್ ಕಮಿಟಿಯು 40,000ಕ್ಕಿಂತಲೂ ಹೆಚ್ಚಿನ ಟ್ಯಾಬ್ಲೆಟ್‌ಗಳನ್ನು ಹಂಚಿತು. ಅಷ್ಟುಮಾತ್ರವಲ್ಲ, ವಿಷಮಯ ಅನಿಲ ಹಾಗೂ ಜ್ವಾಲಾಮುಖಿಯ ಬೂದಿಯಿಂದ ಉಂಟುಮಾಡಲ್ಪಟ್ಟಿದ್ದ ಉಸಿರಾಟಕ್ಕೆ ಸಂಬಂಧಿಸಿದ ರೋಗಗಳಿಂದ ನರಳುತ್ತಿದ್ದ ಸುಮಾರು ಹತ್ತು ಮಂದಿಗೆ ಆಸ್ಪತ್ರೆಯ ಆರೈಕೆಯನ್ನು ನೀಡಿತು. ಈ ಕ್ರೈಸ್ತ ಪ್ರೀತಿಯನ್ನು ಕಣ್ಣಾರೆ ಕಂಡವರ ಪ್ರತಿಕ್ರಿಯೆ ಏನಾಗಿತ್ತು?
ಕ್ರೈಸ್ತ ಪ್ರೀತಿಯ ವಿಜಯ
ಸಹೋದರರಿಂದ ಕಟ್ಟಲ್ಪಟ್ಟ ಮನೆಗಳಲ್ಲಿ ಒಂದನ್ನು ಗಮನಿಸಿದ ಬಳಿಕ, ಪ್ರಾವಿನ್ಸಿಯಲ್ ಡೆಲಿಗೇಷನ್ ಆಫ್ ಅಗ್ರಿಕಲ್ಚರ್‌ನ ಒಬ್ಬ ವ್ಯಕ್ತಿಯು ಹೇಳಿದ್ದು: “ಈ ಮನೆಯೇ ಒಂದು ಪ್ರತ್ಯಕ್ಷ ಸಾಕ್ಷಿಯಾಗಿದೆ . . . ಪ್ರೀತಿಯ ಸಂಕೇತವಾಗಿದೆ.” ಒಬ್ಬ ಶಿಕ್ಷಕಿಯು ಹೀಗೆ ಹೇಳಿದಳು: “ನನ್ನ ಜೀವನದಲ್ಲಿ ಇಂತಹದ್ದನ್ನು ನಾನೆಂದೂ ಕಂಡಿಲ್ಲ. . . . ನಿಜವಾಗಿಯೂ ಇದು ನಿಜ ಕ್ರೈಸ್ತತ್ವದ ಒಂದು ಗುರುತಾಗಿದೆ.”
ಯಾರು ವೈಯಕ್ತಿಕವಾಗಿ ಪ್ರಯೋಜನಗಳನ್ನು ಪಡೆದುಕೊಂಡರೋ ಅವರು ಸಹ ಅಷ್ಟೇ ಮೆಚ್ಚಿಗೆಯನ್ನು ಸೂಚಿಸಿದರು. 65 ವರ್ಷ ಪ್ರಾಯದವನೂ, ಅಸ್ವಸ್ಥನೂ ಆಗಿರುವ ತಿಮೊಥಿಯು ಬರೆದುದು: “ಪ್ರತಿ ಸಲ ನಾವು ನಮ್ಮ ಹೊಸ ಮನೆಯನ್ನು ನೋಡಿದಾಗ, ನಮ್ಮ ಕಣ್ಣುಗಳಿಂದ ಆನಂದಾಶ್ರು ಹರಿಯುತ್ತದೆ. ನಮಗೋಸ್ಕರ ಯೆಹೋವನು ಮಾಡಿರುವ ಸಹಾಯಕ್ಕಾಗಿ ನಾವು ಆತನಿಗೆ ಉಪಕಾರ ಸಲ್ಲಿಸುತ್ತಾ ಇರುತ್ತೇವೆ.” ಯೆಹೋವನ ಸಾಕ್ಷಿಯಲ್ಲದ ಒಬ್ಬ ವಿಧವೆಯ ಮನೆಯು ಕುಸಿದುಬಿದ್ದಾಗ, ಅವಳು ಮತ್ತು ಅವಳ ನಾಲ್ಕು ಮಂದಿ ಮಕ್ಕಳು ನಿರ್ಗತಿಕರಾದರು. ಅಷ್ಟುಮಾತ್ರವಲ್ಲದೆ, ಸಹಾಯಮಾಡಲಿಕ್ಕಾಗಿ ಅವಳು ಕರೆಸಿಕೊಂಡಿದ್ದ ಜನರು ಅವಳ ಮನೆಯ ಛಾವಣಿಯ ವಸ್ತುಗಳನ್ನು ಕದ್ದುಬಿಟ್ಟರು. ಆಗ ಸಾಕ್ಷಿ ಸ್ವಯಂಸೇವಕರು ಅವಳ ಸಹಾಯಕ್ಕೆ ಬಂದರು. ಅವಳು ಹೇಳಿದ್ದು: “ಇವರಿಗೆ ನಾನು ಹೇಗೆ ಉಪಕಾರ ಹೇಳಬೇಕೋ ನನಗೆ ಗೊತ್ತಿಲ್ಲ. ನನಗೆ ತುಂಬ ಆನಂದವಾಗಿದೆ.” ಒಬ್ಬ ಕ್ರೈಸ್ತ ಹಿರಿಯನ ಪತ್ನಿಯಾಗಿದ್ದ ಎಲಿಸಬೆತ್ ಹೇಳಿದ್ದು: “ಯೆಹೋವನ ಸಂಸ್ಥೆಯಲ್ಲಿ ಪ್ರೀತಿಯಿರುವುದರಿಂದ ನಾನು ತುಂಬ ಸಂತೋಷಪಡುತ್ತೇನೆ. ನಾವು ಒಬ್ಬ ಜೀವಂತ ದೇವರ ಸೇವೆಮಾಡುತ್ತಿದ್ದೇವೆ ಎಂಬುದನ್ನು ಇದು ತೋರಿಸುತ್ತದೆ.”
ಜ್ವಾಲಾಮುಖಿಯ ಸಿಡಿತವು ತುಂಬ ಪ್ರಬಲವಾಗಿತ್ತಾದರೂ, ಇದು ಈ ಸಹೋದರತ್ವದ ಕ್ರೈಸ್ತ ಪ್ರೀತಿಯನ್ನು ನಂದಿಸಲು ಅಸಮರ್ಥವಾಗಿತ್ತು. ಅಪೊಸ್ತಲ ಪೌಲನು ಬರೆಯಲು ಪ್ರೇರೇಪಿಸಲ್ಪಟ್ಟಂತೆ, “ಪ್ರೀತಿಯು ಎಂದಿಗೂ ಬಿದ್ದುಹೋಗುವದಿಲ್ಲ.”—1 ಕೊರಿಂಥ 13:8.
[ಪುಟ 10ರಲ್ಲಿರುವ ಚಿತ್ರ]
ಕರಗಿದ ಶಿಲಾಪ್ರವಾಹದ ನದಿಗಳು ಬಹಳಷ್ಟು ವಿನಾಶವನ್ನು ಉಂಟುಮಾಡಿದವು
[ಪುಟ 11ರಲ್ಲಿರುವ ಚಿತ್ರ]
ಹಾನಿಗೊಳಗಾಗಿದ್ದ ಮನೆಗಳನ್ನು ಪುನರ್ನಿರ್ಮಿಸಲು ಸ್ವಯಂಸೇವಕರು ತುಂಬ ಕಷ್ಟಪಟ್ಟು ಕೆಲಸಮಾಡಿದರು
[ಪುಟ 11, 12ರಲ್ಲಿರುವ ಚಿತ್ರ]
ಮೌಂಟ್ ಕ್ಯಾಮರೂನ್