ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಧೂಮಪಾನದ ಚಟಕ್ಕೆ ಸಿಕ್ಕಿಕೊಂಡಿರುವ ಒಂದು ಲೋಕ

ಧೂಮಪಾನದ ಚಟಕ್ಕೆ ಸಿಕ್ಕಿಕೊಂಡಿರುವ ಒಂದು ಲೋಕ

ಧೂಮಪಾನದ ಚಟಕ್ಕೆ ಸಿಕ್ಕಿಕೊಂಡಿರುವ ಒಂದು ಲೋಕ

ಬಿಲ್‌ ತುಂಬ ದಯಾಪರನೂ, ಬುದ್ಧಿವಂತನೂ ಆಗಿದ್ದನು. ಅಷ್ಟುಮಾತ್ರವಲ್ಲ ಗಟ್ಟಿಮುಟ್ಟಾಗಿಯೂ ಇದ್ದನು. ಅವನು ತನ್ನ ಕುಟುಂಬವನ್ನು ತುಂಬ ಪ್ರೀತಿಸುತ್ತಿದ್ದನು. ಆದರೆ ತುಂಬ ಚಿಕ್ಕ ಪ್ರಾಯದಲ್ಲಿಯೇ ಅವನು ಸಿಗರೇಟ್‌ಗಳನ್ನು ಸೇದಲಾರಂಭಿಸಿದನು. ಕಾಲಾನಂತರ ಅವನು ಈ ದುರಭ್ಯಾಸವನ್ನು ತುಂಬ ದ್ವೇಷಿಸತೊಡಗಿದನು. ಸ್ವತಃ ತಾನೇ ಸಿಗರೇಟ್‌ ಸೇದುತ್ತಿದ್ದಾಗಲೂ, ಧೂಮಪಾನಮಾಡುವುದು ಎಂತಹ ಮೂರ್ಖತನ ಎಂದು ಹೇಳುತ್ತಾ, ಅದರ ವಿರುದ್ಧ ತನ್ನ ಪುತ್ರರಿಗೆ ಅವನು ಮನಸಾರೆ ಎಚ್ಚರಿಕೆ ನೀಡಿದನು. ತನ್ನ ಬಲಿಷ್ಠ ಕೈಗಳಲ್ಲಿ ಸಿಗರೇಟ್‌ ಪ್ಯಾಕ್‌ಗಳನ್ನು ಹಿಸುಕಿಹಾಕಿ, ಮೂಲೆಗೆ ಎಸೆದು, ಇನ್ನೆಂದಿಗೂ ತಾನು ಸಿಗರೇಟನ್ನು ಸೇದುವುದಿಲ್ಲ ಎಂದು ಪ್ರತಿಜ್ಞೆಮಾಡಿದ್ದಂತಹ ಸಂದರ್ಭಗಳೂ ಇದ್ದವು. ಆದರೂ, ಸ್ವಲ್ಪದರಲ್ಲೇ ಅವನು ಪುನಃ ಧೂಮಪಾನಮಾಡುವ ಪಾಶದಲ್ಲಿ ಸಿಕ್ಕಿಬಿದ್ದು, ಮೊದಲು ಬೇರೆಯವರ ಕಣ್ಣುತಪ್ಪಿಸಿ ಸೇದುತ್ತಿದ್ದು, ಸಮಯಾನಂತರ ಎಲ್ಲರ ಮುಂದೆ ಸೇದಲು ಆರಂಭಿಸುತ್ತಿದ್ದನು.

ಅನೇಕ ತಿಂಗಳುಗಳ ವರೆಗೆ ಸಹಿಸಲಸಾಧ್ಯವಾದ ನೋವಿನಿಂದ ನರಳುತ್ತಾ, 15 ವರ್ಷಗಳ ಹಿಂದೆ ಬಿಲ್‌ ಕ್ಯಾನ್ಸರ್‌ನಿಂದ ಮೃತಪಟ್ಟನು. ಅವನು ಒಬ್ಬ ಧೂಮಪಾನಿಯಾಗಿಲ್ಲದೇ ಇರುತ್ತಿದ್ದಲ್ಲಿ, ಅವನು ಈಗಲೂ ಬದುಕಿರುತ್ತಿದ್ದನು. ಅವನ ಪತ್ನಿಗಿನ್ನೂ ಪತಿಯಿರುತ್ತಿದ್ದನು; ಅವನ ಪುತ್ರರಿಗೂ ಒಬ್ಬ ತಂದೆಯಿರುತ್ತಿದ್ದನು.

ಬಿಲ್‌ನ ಕುಟುಂಬದಲ್ಲಿ ಮಾತ್ರವೇ ಈ ಘಟನೆಯು ಸಂಭವಿಸಿಲ್ಲ, ಲೋಕದಾದ್ಯಂತ ಇಂತಹ ಸನ್ನಿವೇಶವಿದೆ. ಲೋಕಾರೋಗ್ಯ ಸಂಸ್ಥೆ (ಡಬ್ಲ್ಯೂಏಚ್‌ಓ)ಗನುಸಾರ, ಹೊಗೆಸೊಪ್ಪಿನ ಸೇವನೆಯಿಂದ ಉಂಟಾಗುವ ರೋಗಗಳು, ಪ್ರತಿ ವರ್ಷ ಸುಮಾರು ನಾಲ್ವತ್ತು ಲಕ್ಷ ಜನರನ್ನು ಅಥವಾ ಪ್ರತಿ ಎಂಟು ಸೆಕೆಂಡಿಗೆ ಒಬ್ಬ ವ್ಯಕ್ತಿಯನ್ನು ಕೊಲ್ಲುತ್ತವೆ. ಹೊಗೆಸೊಪ್ಪಿನ ಉಪಯೋಗವು ಲೋಕದಾದ್ಯಂತ ರೋಗದ ಪ್ರಮುಖ ಕಾರಣವಾಗಿದ್ದರೂ, ಇದನ್ನು ತಡೆಗಟ್ಟಸಾಧ್ಯವಿದೆ. ಹೀಗೆಯೇ ಮುಂದುವರಿಯುವಲ್ಲಿ, ಮುಂದಿನ 20 ವರ್ಷಗಳೊಳಗೆ ಧೂಮಪಾನವು ಲೋಕದಲ್ಲೇ ಮರಣದ ಅತಿ ಪ್ರಮುಖ ಕಾರಣವಾಗುವುದು. ಅಂದರೆ ಏಡ್ಸ್‌, ಕ್ಷಯರೋಗ, ಹೆರಿಗೆಯ ಮರಣ ಸಂಖ್ಯೆ, ಮೋಟಾರು ವಾಹನದ ಅಪಘಾತಗಳು, ಆತ್ಮಹತ್ಯೆ, ಹಾಗೂ ನರಹತ್ಯೆಗಳಿಂದ ಉಂಟಾಗುವ ಸಾವಿಗಿಂತಲೂ ಹೆಚ್ಚು ಜನರ ಮರಣ ಮತ್ತು ಅಂಗವಿಕಲತೆಗೆ ಧೂಮಪಾನವು ಕಾರಣವಾಗಬಲ್ಲದು.

ಸಿಗರೇಟ್‌ಗಳು ಸಾವನ್ನುಂಟುಮಾಡುತ್ತವೆ. ಆದರೂ ಎಲ್ಲ ಕಡೆಗಳಲ್ಲೂ ಸಿಗರೇಟ್‌ಗಳನ್ನು ಸೇದುವವರು ಇದ್ದಾರೆ. ಲೋಕವ್ಯಾಪಕವಾಗಿ, ಕಡಿಮೆಪಕ್ಷ 1.1 ಶತಕೋಟಿ ಜನರು ಧೂಮಪಾನಿಗಳಾಗಿದ್ದಾರೆ ಎಂದು ಡಬ್ಲ್ಯೂಏಚ್‌ಓ ಹೇಳುತ್ತದೆ. ಇದರರ್ಥ, ಲೋಕದ ವಯಸ್ಕರಲ್ಲಿ ಹೆಚ್ಚುಕಡಿಮೆ ಮೂರನೇ ಒಂದು ಭಾಗದಷ್ಟು ಜನರು ಧೂಮಪಾನಿಗಳಾಗಿದ್ದಾರೆ.

ತಮ್ಮ ವಿರುದ್ಧ ಹೂಡಲ್ಪಡುವ ಮೊಕದ್ದಮೆಗಳಿಗಾಗಿ ಹೊಗೆಸೊಪ್ಪಿನ ಕಂಪೆನಿಗಳು ಈಗ ಕೋಟ್ಯಂತರ ಡಾಲರುಗಳಷ್ಟು ಹಣವನ್ನು ವೆಚ್ಚಮಾಡುತ್ತವಾದರೂ, ಅವುಗಳು ಸಂಪಾದಿಸುವ ಅನೇಕ ಶತಕೋಟಿ ಡಾಲರ್‌ ಆದಾಯಗಳಿಗೆ ಹೋಲಿಸುವಾಗ ಈ ಹಣವು ಏನೂ ಅಲ್ಲ ಎಂದು ವಿಶ್ಲೇಷಕರು ಅಂದಾಜುಮಾಡುತ್ತಾರೆ. ಕೇವಲ ಅಮೆರಿಕವೊಂದರಲ್ಲಿಯೇ, ಪ್ರತಿ ದಿನ ಹೊಗೆಸೊಪ್ಪಿನ ಕಾರ್ಖಾನೆಗಳಲ್ಲಿ 1.5 ಶತಕೋಟಿ ಸಿಗರೇಟ್‌ಗಳು ಉತ್ಪಾದಿಸಲ್ಪಡುತ್ತವೆ ಎಂದು ಅಂದಾಜುಮಾಡಲಾಗಿದೆ. ಲೋಕವ್ಯಾಪಕವಾಗಿ, ಹೊಗೆಸೊಪ್ಪಿನ ಕಂಪೆನಿಗಳು ಮತ್ತು ಸರಕಾರದಿಂದ ಪರವಾನೆಯನ್ನು ಪಡೆದಿರುವ ಕಂಪೆನಿಗಳು ಪ್ರತಿ ವರ್ಷ ಸುಮಾರು ಐದು ಶತ ಸಹಸ್ರ ಕೋಟಿ (ಟ್ರಿಲಿಯನ್‌) ಸಿಗರೇಟುಗಳನ್ನು ಮಾರುತ್ತವೆ!

ಇಷ್ಟೊಂದು ಮಾರಕವಾಗಿರುವ ಈ ಚಟವನ್ನು ಅನೇಕ ಮಂದಿ ಏಕೆ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ? ನೀವು ಒಬ್ಬ ಧೂಮಪಾನಿಯಾಗಿರುವಲ್ಲಿ, ಈ ದುಶ್ಚಟವನ್ನು ಹೇಗೆ ಬಿಟ್ಟುಬಿಡಸಾಧ್ಯವಿದೆ? ಮುಂದಿನ ಲೇಖನಗಳಲ್ಲಿ ಈ ಪ್ರಶ್ನೆಗಳಿಗೆ ಉತ್ತರವು ಕೊಡಲ್ಪಡುವುದು.