ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಧೂಮಪಾನವನ್ನು ಏಕೆ ಬಿಟ್ಟುಬಿಡಬೇಕು?

ಧೂಮಪಾನವನ್ನು ಏಕೆ ಬಿಟ್ಟುಬಿಡಬೇಕು?

ಧೂಮಪಾನವನ್ನು ಏಕೆ ಬಿಟ್ಟುಬಿಡಬೇಕು?

ದೀರ್ಘಕಾಲದ ವರೆಗೆ ಮತ್ತು ಸಂತೋಷದಿಂದ ಜೀವಿಸಲು ಬಯಸುವವರು ಧೂಮಪಾನವನ್ನು ಮಾಡಬಾರದು. ದೀರ್ಘ ಸಮಯದಿಂದಲೂ ಧೂಮಪಾನಮಾಡುತ್ತಿರುವ ಒಬ್ಬ ವ್ಯಕ್ತಿಯು ಕಾಲಕ್ರಮೇಣ ಹೊಗೆಸೊಪ್ಪಿನಿಂದ ಸಾವನ್ನಪ್ಪುವ ಸಂಭವನೀಯತೆಯಿದೆ. ಅಂದರೆ ಪ್ರತಿ ಇಬ್ಬರು ವ್ಯಕ್ತಿಗಳಲ್ಲಿ ಒಬ್ಬನು ಸಾವನ್ನಪ್ಪಸಾಧ್ಯವಿದೆ. ಲೋಕಾರೋಗ್ಯ ಸಂಸ್ಥೆ (ಡಬ್ಲ್ಯೂಏಚ್‌ಓ)ಯ ಡೈರೆಕ್ಟರ್‌ ಜನರಲ್‌ರು ಹೇಳಿದ್ದು: “ಒಂದು ಸಿಗರೇಟು . . . ತುಂಬ ಬುದ್ಧಿವಂತಿಕೆಯಿಂದ ಕುಟಿಲವಾಗಿ ತಯಾರಿಸಲ್ಪಟ್ಟಿರುವ ಒಂದು ಉತ್ಪನ್ನವಾಗಿದ್ದು, ಅದನ್ನು ಉಪಯೋಗಿಸುವ ವ್ಯಕ್ತಿಯನ್ನು ಕೊಲ್ಲುತ್ತದೆ. ಅದಕ್ಕಿಂತಲೂ ಮುಂಚೆ ಅದು ಅವನಿಗೆ ಜೀವಾವಧಿ ಚಟ ಹಿಡಿಯುವಂತೆ ಮಾಡಲು ಸಾಕಾಗುವಷ್ಟು ಪ್ರಮಾಣದ ನಿಕೊಟಿನ್‌ ಅನ್ನು ದೇಹದೊಳಕ್ಕೆ ಸೇರಿಸುತ್ತದೆ.”

ಆದುದರಿಂದ, ಧೂಮಪಾನವನ್ನು ಬಿಟ್ಟುಬಿಡಲಿಕ್ಕಾಗಿರುವ ಒಂದು ಕಾರಣವು ಯಾವುದೆಂದರೆ, ಸಿಗರೇಟ್‌ ಅಥವಾ ಹೊಗೆಸೊಪ್ಪನ್ನು ಸೇದುವುದು ಆರೋಗ್ಯಕ್ಕೆ ಮತ್ತು ಜೀವಕ್ಕೆ ತುಂಬ ಅಪಾಯಕರವಾಗಿದೆ. ಧೂಮಪಾನವು, ಜೀವಕ್ಕೆ ಅಪಾಯಕರವಾಗಿರುವ 25ಕ್ಕಿಂತಲೂ ಹೆಚ್ಚು ರೋಗಗಳೊಂದಿಗೆ ಸಂಬಂಧವನ್ನು ಹೊಂದಿದೆ. ಉದಾಹರಣೆಗೆ, ಹೃದಯಾಘಾತ, ಮಸ್ತಿಷ್ಕ ಆಘಾತ, ಅಸ್ಥಿಗತ ಶ್ವಾಸನಾಳಗಳ ಉರಿಯೂತ, ವಾತಶೋಥಕ್ಕೆ (ಎಂಫಿಸೀಮ) ಮತ್ತು ಬೇರೆ ಬೇರೆ ಕ್ಯಾನ್ಸರ್‌ಗಳಿಗೆ, ಅದರಲ್ಲೂ ವಿಶೇಷವಾಗಿ ಶ್ವಾಸಕೋಶದ ಕ್ಯಾನ್ಸರಿಗೆ ಇದೇ ಪ್ರಮುಖ ಕಾರಣವಾಗಿದೆ.

ಅನೇಕ ವರ್ಷಗಳಿಂದ ಧೂಮಪಾನಮಾಡುತ್ತಿರುವ ಒಬ್ಬ ವ್ಯಕ್ತಿಯು ಈ ರೋಗಗಳಲ್ಲಿ ಒಂದಕ್ಕೆ ಬಲಿಯಾಗುವ ಸಂಭವವು ಹೆಚ್ಚಾಗಿರುತ್ತದೆ. ಅದೇ ಸಮಯದಲ್ಲಿ, ಧೂಮಪಾನವು ಒಬ್ಬ ವ್ಯಕ್ತಿಯನ್ನು ಇತರರಿಗೆ ಹೆಚ್ಚು ಆಕರ್ಷಣೀಯವಾಗಿ ಮಾಡುತ್ತದೆಂದು ಹೇಳಲಾಗದು. ಜಾಹೀರಾತುಗಳಲ್ಲಿ, ಧೂಮಪಾನಿಗಳನ್ನು ಮೋಹಕ ಸೌಂದರ್ಯವಿರುವ ಹಾಗೂ ಒಳ್ಳೆಯ ಆರೋಗ್ಯವುಳ್ಳ ವ್ಯಕ್ತಿಗಳೋಪಾದಿ ತೋರಿಸಲಾಗುತ್ತದೆ. ಆದರೆ ನಿಜ ಸಂಗತಿಯಾದರೋ ತೀರ ಭಿನ್ನವಾಗಿರುತ್ತದೆ. ಧೂಮಪಾನವು ಉಸಿರಿನ ದುರ್ವಾಸನೆಯನ್ನು ಹೆಚ್ಚಿಸುತ್ತದೆ ಮತ್ತು ಹಲ್ಲುಗಳನ್ನು ಮತ್ತು ಉಗುರುಗಳನ್ನು ಹಳದಿಮಿಶ್ರಿತ ಕಂದು ಬಣ್ಣಕ್ಕೆ ತಿರುಗಿಸುತ್ತದೆ. ಪುರುಷರನ್ನು ನಿರ್ಬಲರನ್ನಾಗಿ ಮಾಡುತ್ತದೆ. ಇದು ಧೂಮಪಾನಿಗಳಿಗೆ ಕೆಮ್ಮನ್ನೂ, ತೀವ್ರಗತಿಯ ಉಸಿರಾಟವನ್ನೂ ಉಂಟುಮಾಡುತ್ತದೆ. ಧೂಮಪಾನಿಗಳ ಮುಖದ ಚರ್ಮವು ಬೇಗನೆ ಸುಕ್ಕುಗಟ್ಟುತ್ತದೆ ಮತ್ತು ಅವರಿಗೆ ಚರ್ಮದ ಇನ್ನಿತರ ಸಮಸ್ಯೆಗಳು ಬೇಗನೆ ಉಂಟಾಗುತ್ತವೆ.

ಧೂಮಪಾನವು ಇತರರ ಮೇಲೆ ಹೇಗೆ ಪರಿಣಾಮವನ್ನು ಬೀರುತ್ತದೆ?

ಬೈಬಲು ಹೀಗೆ ಹೇಳುತ್ತದೆ: “ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು.” (ಮತ್ತಾಯ 22:39) ನಿಮ್ಮ ಕುಟುಂಬದ ಸದಸ್ಯರೇ ನಿಮ್ಮ ಅತಿ ಆಪ್ತ ನೆರೆಯವರಾಗಿದ್ದಾರೆ. ಮತ್ತು ನಿಮ್ಮ ನೆರೆಯವರ ಕಡೆಗಿನ ಈ ಪ್ರೀತಿಯೇ, ಧೂಮಪಾನವನ್ನು ಬಿಟ್ಟುಬಿಡಲು ಪ್ರಬಲವಾದ ಕಾರಣವಾಗಿದೆ.

ಧೂಮಪಾನವು ಇತರರಿಗೆ ಹಾನಿಯನ್ನುಂಟುಮಾಡುತ್ತದೆ. ಇತ್ತೀಚಿನ ವರೆಗೆ ಒಬ್ಬ ಧೂಮಪಾನಿಯು ಎಲ್ಲಿ ಬೇಕೆಂದರಲ್ಲಿ ಮತ್ತು ಯಾವುದೇ ಆಕ್ಷೇಪಣೆಯಿಲ್ಲದೆ ಸಿಗರೇಟನ್ನು ಹೊತ್ತಿಸಸಾಧ್ಯವಿತ್ತು. ಆದರೆ ಈಗ ಮನೋಭಾವಗಳು ಬದಲಾಗುತ್ತಿವೆ, ಏಕೆಂದರೆ ಇತರರ ಸಿಗರೇಟುಗಳಿಂದ ಹೊರಬರುವ ಹೊಗೆಯನ್ನು ಉಸಿರಾಡುವುದರಿಂದ ಉಂಟಾಗುವ ಅಪಾಯಗಳನ್ನು ಅನೇಕರು ತಿಳಿದುಕೊಳ್ಳುತ್ತಿದ್ದಾರೆ. ಉದಾಹರಣೆಗೆ, ಧೂಮಪಾನಮಾಡದಿರುವವರು ಧೂಮಪಾನಮಾಡುವ ವ್ಯಕ್ತಿಗಳನ್ನು ಮದುವೆಯಾದರೆ ಅವರಿಗೆ ಶ್ವಾಸಕೋಶದ ಕ್ಯಾನ್ಸರ್‌ನಿಂದ ಸಾಯುವ ಅಪಾಯವು 30 ಪ್ರತಿಶತ ಹೆಚ್ಚಾಗಿರುತ್ತದೆ. ಧೂಮಪಾನಮಾಡದಂತಹ ಹೆತ್ತವರಿರುವ ಮನೆಗಳಲ್ಲಿ ಜೀವಿಸುವ ಮಕ್ಕಳಿಗಿಂತಲೂ, ಧೂಮಪಾನಮಾಡುವಂತಹ ಹೆತ್ತವರೊಂದಿಗೆ ಜೀವಿಸುವ ಮಕ್ಕಳು, ತಮ್ಮ ಜೀವಿತದ ಮೊದಲ ಎರಡು ವರ್ಷಗಳಲ್ಲಿ ನ್ಯುಮೋನಿಯ ಅಥವಾ ಶ್ವಾಸನಾಳಗಳ ಉರಿಯೂತವನ್ನು ಬೆಳೆಸಿಕೊಳ್ಳುವ ಸಂಭವನೀಯತೆ ಹೆಚ್ಚು.

ಧೂಮಪಾನಮಾಡುವಂತಹ ಗರ್ಭಿಣಿಯರು ತಮ್ಮ ಅಜಾತ ಶಿಶುಗಳಿಗೆ ಅಪಾಯವನ್ನುಂಟುಮಾಡುತ್ತಾರೆ. ಸಿಗರೇಟ್‌ ಹೊಗೆಯಲ್ಲಿ ಸೇರಿರುವ ನಿಕೊಟಿನ್‌, ಕಾರ್ಬನ್‌ ಮಾನಾಕ್ಸೈಡ್‌, ಮತ್ತು ಇತರ ಅಪಾಯಕರ ರಾಸಾಯನಿಕಗಳು ತಾಯಿಯ ರಕ್ತವನ್ನು ಪ್ರವೇಶಿಸಿ, ನೇರವಾಗಿ ಗರ್ಭಕೋಶದಲ್ಲಿರುವ ಮಗುವಿಗೆ ಹೋಗಿಸೇರುತ್ತವೆ. ಇದರ ಫಲಿತಾಂಶವಾಗಿ, ಅನೈಚ್ಛಿಕವಾದ ಅಕಾಲ ಪ್ರಸವ, ಗರ್ಭದಲ್ಲೇ ಸತ್ತಿರುವ ಮಕ್ಕಳು ಮತ್ತು ನವಜಾತ ಶಿಶುಗಳ ಮರಣದ ಸಂಭವನೀಯತೆಯು ಹೆಚ್ಚಾಗುತ್ತದೆ. ಅಷ್ಟುಮಾತ್ರವಲ್ಲ, ಯಾವ ಶಿಶುಗಳ ತಾಯಂದಿರು ಗರ್ಭಾವಸ್ಥೆಯಲ್ಲಿ ಧೂಮಪಾನಮಾಡಿರುತ್ತಾರೋ ಆ ಶಿಶುಗಳು ಅನಿರೀಕ್ಷಿತವಾಗಿ ಸಾಯುವ ಅಪಾಯವು ಮೂರುಪಟ್ಟು ಹೆಚ್ಚಾಗಿರುತ್ತದೆ.

ದುಬಾರಿ ಹಾನಿ

ಧೂಮಪಾನವು ತುಂಬ ದುಬಾರಿಯಾಗಿರುವುದರಿಂದ ಅದನ್ನು ಬಿಟ್ಟುಬಿಡುವುದು ಒಳ್ಳೇದು. ಪ್ರತಿ ವರ್ಷ ಧೂಮಪಾನದಿಂದ ನೇರವಾಗಿ ಉಂಟುಮಾಡಲ್ಪಡುವ ಆರೋಗ್ಯಾರೈಕೆಯ ವೆಚ್ಚಗಳು 200 ಶತಕೋಟಿ ಡಾಲರುಗಳಷ್ಟಿರುತ್ತವೆ ಎಂದು, ವಿಶ್ವಬ್ಯಾಂಕ್‌ನಿಂದ ನಡೆಸಲ್ಪಟ್ಟ ಒಂದು ಅಧ್ಯಯನವು ಅಂದಾಜುಮಾಡಿತು. ಹೊಗೆಸೊಪ್ಪಿನಿಂದ ಉಂಟಾಗುವ ರೋಗಗಳಿಗೆ ಬಲಿಯಾದವರು ಅನುಭವಿಸುವ ಕಷ್ಟಾನುಭವ ಹಾಗೂ ವೇದನೆಯನ್ನು ಈ ಸಂಖ್ಯೆಯು ತಿಳಿಸುವುದಿಲ್ಲ ಎಂಬುದಂತೂ ಖಂಡಿತ.

ಒಬ್ಬ ಧೂಮಪಾನಿಯು ಸಿಗರೇಟ್‌ಗಳಿಗಾಗಿ ಖರ್ಚುಮಾಡುವ ಹಣವನ್ನು ಲೆಕ್ಕಹಾಕುವುದು ತುಂಬ ಸುಲಭ. ಒಂದುವೇಳೆ ನೀವು ಧೂಮಪಾನಮಾಡುವಲ್ಲಿ, ನೀವು ದಿನವೊಂದಕ್ಕೆ ಸಿಗರೇಟ್‌ಗಳಿಗಾಗಿ ವ್ಯಯಿಸುವ ಹಣದ ಮೊತ್ತವನ್ನು 365ರಿಂದ ಗುಣಿಸಿರಿ. ಒಂದು ವರ್ಷಕ್ಕೆ ನೀವು ಎಷ್ಟು ಹಣವನ್ನು ಸಿಗರೇಟ್‌ಗಳಿಗಾಗಿ ಖರ್ಚುಮಾಡುತ್ತೀರಿ ಎಂಬುದನ್ನು ಅದು ತೋರಿಸುವುದು. ಈ ಸಂಖ್ಯೆಯನ್ನು ಹತ್ತರಿಂದ ಗುಣಿಸಿರಿ; ಆಗ ಮುಂದಿನ ಹತ್ತು ವರ್ಷಗಳ ವರೆಗೆ ನೀವು ಧೂಮಪಾನಮಾಡುವಲ್ಲಿ ಸಿಗರೇಟ್‌ಗಳಿಗಾಗಿ ನೀವು ಎಷ್ಟು ಹಣವನ್ನು ಖರ್ಚುಮಾಡಬೇಕಾಗಬಹುದು ಎಂಬುದು ನಿಮಗೆ ಗೊತ್ತಾಗುವುದು. ದೊರೆಯುವ ಫಲಿತಾಂಶವು ನಿಮ್ಮನ್ನು ಬೆರಗುಗೊಳಿಸಬಹುದು. ಅಷ್ಟೊಂದು ಹಣದಿಂದ ನೀವು ಏನು ಮಾಡಬಹುದಿತ್ತೆಂಬುದರ ಕುರಿತು ತುಸು ಆಲೋಚಿಸಿರಿ.

ಸಿಗರೇಟ್‌ ಬದಲಾಯಿಸುವುದು ಸುರಕ್ಷಿತವೋ?

ಧೂಮಪಾನಮಾಡುವುದರಿಂದ ಉಂಟಾಗುವ ಆರೋಗ್ಯ ಅಪಾಯಗಳನ್ನು ಕಡಿಮೆಮಾಡುವ ಮಾರ್ಗದೋಪಾದಿ ಹೊಗೆಸೊಪ್ಪಿನ ಉದ್ಯಮವು, ಸಾರಕಡಿಮೆಯಿರುವ (ಲೈಟ್‌) ಮತ್ತು ಹೆಚ್ಚು ತೀಕ್ಷ್ಣವಲ್ಲದ (ಮೈಲ್ಡ್‌) ಸಿಗರೇಟ್‌ಗಳನ್ನು ಶಿಫಾರಸ್ಸು ಮಾಡುತ್ತದೆ. ಅದಕ್ಕಾಗಿ ಅದು ಕಡಿಮೆ ಟಾರ್‌ ಮತ್ತು ಕಡಿಮೆ ನಿಕೊಟಿನ್‌ ಇರುವ ಸಿಗರೇಟ್‌ಗಳ ಜಾಹೀರಾತನ್ನು ನೀಡುತ್ತದೆ. ಆದರೂ, ಕಡಿಮೆ ಟಾರ್‌ ಮತ್ತು ಕಡಿಮೆ ನಿಕೊಟಿನ್‌ ಇರುವ ಸಿಗರೇಟ್‌ಗಳನ್ನು ಸೇದಲು ಆರಂಭಿಸುವವರು, ಮುಂಚಿನಷ್ಟೇ ಪ್ರಮಾಣದ ನಿಕೊಟಿನ್‌ ಅನ್ನು ಸೇವಿಸಲು ಹಂಬಲಿಸುತ್ತಾರೆ. ಇದರ ಪರಿಣಾಮವಾಗಿ, ಕಡಿಮೆ ಟಾರ್‌ ಮತ್ತು ನಿಕೊಟಿನ್‌ ಇರುವ ಸಿಗರೇಟ್‌ಗಳನ್ನು ಸೇದಲಾರಂಭಿಸುವವರು, ಸಾಮಾನ್ಯವಾಗಿ ಹೆಚ್ಚು ಸಿಗರೇಟ್‌ಗಳನ್ನು ಸೇದುವ ಮೂಲಕ, ಮತ್ತು ಆಗಿಂದಾಗ್ಗೆ ಸೇದುವ ಮೂಲಕ, ಅಥವಾ ಪ್ರತಿಯೊಂದು ಸಿಗರೇಟನ್ನು ತುಂಬ ಸಮಯದ ವರೆಗೆ ಸೇದುವ ಮೂಲಕ ಆ ಹಂಬಲವನ್ನು ತಣಿಸಲು ಪ್ರಯತ್ನಿಸುತ್ತಾರೆ. ಈ ರೀತಿಯಲ್ಲಿ ನಷ್ಟಭರ್ತಿಮಾಡಲಿಕ್ಕಾಗಿ ಬದಲಾವಣೆಗಳನ್ನು ಮಾಡದವರಿಗೂ, ಧೂಮಪಾನವನ್ನು ಸಂಪೂರ್ಣವಾಗಿ ಬಿಟ್ಟುಬಿಡುವುದರಿಂದ ಎಷ್ಟು ಆರೋಗ್ಯದ ಪ್ರಯೋಜನಗಳು ಸಿಗುತ್ತವೋ ಅಷ್ಟು ಹೆಚ್ಚು ಪ್ರಯೋಜನಗಳು ಸಿಗುವುದಿಲ್ಲ.

ಪೈಪ್‌ಗಳು ಮತ್ತು ಸಿಗಾರ್‌ಗಳ ಕುರಿತಾಗಿ ಏನು? ಹೊಗೆಸೊಪ್ಪಿನ ಉದ್ಯಮವು ಬಹಳ ಸಮಯದಿಂದಲೂ ಪೈಪ್‌ಗಳನ್ನು ಮತ್ತು ಸಿಗಾರ್‌ಗಳನ್ನು ಪ್ರತಿಷ್ಠೆಯ ಸಂಕೇತಗಳಾಗಿ ಶಿಫಾರಸ್ಸು ಮಾಡಿತ್ತಾದರೂ, ಇವುಗಳು ಹೊರಸೂಸುವ ಹೊಗೆಯು ಸಿಗರೇಟುಗಳಿಂದ ಹೊರಬರುವ ಹೊಗೆಯಷ್ಟೇ ಮಾರಕವಾಗಿರುತ್ತದೆ. ಸಿಗಾರ್‌ ಅಥವಾ ಪೈಪ್‌ನಿಂದ ಹೊರಬರುವ ಹೊಗೆಯನ್ನು ಧೂಮಪಾನಿಗಳು ಬಾಯೊಳಗೆ ಎಳೆದುಕೊಳ್ಳುವುದಿಲ್ಲವಾದರೂ, ಅವರಿಗೆ ತುಟಿ, ಬಾಯಿ ಮತ್ತು ನಾಲಿಗೆಯ ಕ್ಯಾನ್ಸರ್‌ಗಳು ಬರುವ ಅಪಾಯವು ಅತ್ಯಧಿಕವಾಗಿರುತ್ತದೆ.

ಹೊಗೆರಹಿತ ಹೊಗೆಸೊಪ್ಪು ಆರೋಗ್ಯಕ್ಕೆ ಹಾನಿಯನ್ನು ಉಂಟುಮಾಡುವುದಿಲ್ಲವೋ? ಹೊಗೆರಹಿತ ಹೊಗೆಸೊಪ್ಪು ಎರಡು ರೂಪಗಳಲ್ಲಿ ಲಭ್ಯವಿರುತ್ತದೆ: ನಶ್ಯ ಮತ್ತು ಅಗಿಯುವ ಹೊಗೆಸೊಪ್ಪು. ಹೊಗೆಸೊಪ್ಪಿನ ನುಣ್ಣಗಿನ ಪುಡಿಯೇ ನಶ್ಯವಾಗಿದ್ದು, ಸರ್ವಸಾಮಾನ್ಯವಾಗಿ ಇದು ಚಿಕ್ಕ ಡಬ್ಬಿಗಳಲ್ಲಿ ಅಥವಾ ಪೊಟ್ಟಣಗಳಲ್ಲಿ ಮಾರಲ್ಪಡುತ್ತದೆ. ನಶ್ಯವನ್ನು ಉಪಯೋಗಿಸುವವರು ಇದನ್ನು ಕೆಳದುಟಿ ಅಥವಾ ಕೆನ್ನೆಯ ಒಳಗೆ ಇಟ್ಟುಕೊಳ್ಳುತ್ತಾರೆ. ಅಗಿಯುವ ಹೊಗೆಸೊಪ್ಪು ಉದ್ದುದ್ದವಾಗಿರುವ ಎಳೆಗಳ ರೂಪದಲ್ಲಿ, ಸಾಮಾನ್ಯವಾಗಿ ಪೊಟ್ಟಣದಲ್ಲಿ ಮಾರಲ್ಪಡುತ್ತದೆ. ಈ ಹೆಸರೇ ಸೂಚಿಸುವಂತೆ ಇದು ಸೇದುವಂಥದ್ದಲ್ಲ, ಅಗಿಯುವಂಥದ್ದಾಗಿದೆ. ನಶ್ಯ ಮತ್ತು ಅಗಿಯುವ ಹೊಗೆಸೊಪ್ಪುಗಳು, ಉಸಿರಿನ ದುರ್ವಾಸನೆ, ಹಲ್ಲುಗಳ ಮೇಲೆ ಕಲೆ, ಬಾಯಿ ಹಾಗೂ ಗಂಟಲ ಕುಹರದ ಕ್ಯಾನ್ಸರ್‌, ನಿಕೊಟಿನ್‌ನ ಚಟ, ಕ್ಯಾನ್ಸರ್‌ಗೆ ಕಾರಣವಾಗಸಾಧ್ಯವಿರುವ ಬಾಯೊಳಗಿನ ಬಿಳಿಯ ಹುಣ್ಣುಗಳು, ವಸಡುಗಳ ಸುಲಿಯುವಿಕೆ, ಮತ್ತು ಹಲ್ಲುಗಳ ಸುತ್ತಲಿನ ಮೂಳೆಗಳ ನಷ್ಟವನ್ನು ಉಂಟುಮಾಡುತ್ತವೆ. ಹೊಗೆಸೊಪ್ಪನ್ನು ಸೇದುವುದಕ್ಕಿಂತಲೂ ಅದರ ರಸವನ್ನು ಹೀರಿಕೊಳ್ಳುವುದು ಅಥವಾ ಅಗಿಯುವುದು ಯಾವುದೇ ರೀತಿಯಲ್ಲಿ ಉತ್ತಮವಲ್ಲವೆಂಬುದು ಸ್ಪಷ್ಟ.

ಧೂಮಪಾನವನ್ನು ಬಿಟ್ಟುಬಿಡುವುದರ ಪ್ರಯೋಜನಗಳು

ನೀವು ಬಹಳ ಸಮಯದಿಂದಲೂ ಧೂಮಪಾನಮಾಡುತ್ತಿದ್ದೀರಿ ಎಂದಿಟ್ಟುಕೊಳ್ಳಿ. ಧೂಮಪಾನವನ್ನು ಬಿಟ್ಟುಬಿಡುವಾಗ ಏನಾಗುತ್ತದೆ? ನೀವು ಕೊನೆಯ ಸಿಗರೇಟನ್ನು ಸೇದಿ ನಿಲ್ಲಿಸಿದ 20 ನಿಮಿಷಗಳೊಳಗೆ ನಿಮ್ಮ ರಕ್ತದೊತ್ತಡವು ಯಥಾಸ್ಥಿತಿಗೆ ಇಳಿಯುವುದು. ಒಂದು ವಾರದ ಬಳಿಕ ನಿಮ್ಮ ದೇಹವು ನಿಕೊಟಿನ್‌ನಿಂದ ಮುಕ್ತವಾಗಿರುವುದು. ಒಂದು ತಿಂಗಳ ಬಳಿಕ ನಿಮ್ಮ ಕೆಮ್ಮು, ಸೈನಸ್‌ ತೊಂದರೆ, ಆಯಾಸ ಮತ್ತು ತೀವ್ರಗತಿಯ ಉಸಿರಾಟವು ಕಡಿಮೆಯಾಗತೊಡಗುವುದು. ಐದು ವರ್ಷಗಳ ನಂತರ, ಶ್ವಾಸಕೋಶದ ಕ್ಯಾನ್ಸರ್‌ನಿಂದ ನೀವು ಸಾಯುವಂತಹ ಅಪಾಯವು 50 ಪ್ರತಿಶತದಷ್ಟು ಕಡಿಮೆಯಾಗಿರುವುದು. 15 ವರ್ಷಗಳ ಬಳಿಕ ನೀವು ಹೃದ್ರೋಗಕ್ಕೆ ತುತ್ತಾಗುವಂತಹ ಅಪಾಯದ ಮಟ್ಟವು, ಧೂಮಪಾನವನ್ನೇ ಮಾಡದಿರುವ ವ್ಯಕ್ತಿಯ ಅಪಾಯದ ಮಟ್ಟಕ್ಕೇ ಇಳಿಯುವುದು.

ನಿಮಗೆ ಆಹಾರವು ಹೆಚ್ಚು ರುಚಿಸುವುದು. ನಿಮ್ಮ ಉಸಿರು, ದೇಹ, ಉಡುಪುಗಳು ಸಹ ದುರ್ಗಂಧವನ್ನು ಹೊರಸೂಸುವುದಿಲ್ಲ. ಇನ್ನೆಂದಿಗೂ ನಿಮಗೆ ಹೊಗೆಸೊಪ್ಪನ್ನು ಖರೀದಿಸುವ ತೊಂದರೆ ಅಥವಾ ಖರ್ಚು ಇರುವುದಿಲ್ಲ. ನೀವು ಏನನ್ನೋ ಸಾಧಿಸಿದ್ದೀರಿ ಎಂಬ ಅನಿಸಿಕೆ ನಿಮಗಾಗುವುದು. ನಿಮಗೆ ಮಕ್ಕಳಿರುವುದಾದರೆ, ನಿಮ್ಮ ಒಳ್ಳೇ ಮಾದರಿಯು ಅವರು ಭವಿಷ್ಯತ್ತಿನಲ್ಲಿ ಧೂಮಪಾನಿಗಳಾಗುವ ಸಂಭವನೀಯತೆಯನ್ನು ಕಡಿಮೆಮಾಡುವುದು. ಬಹುಶಃ ನೀವು ಇನ್ನೂ ಹೆಚ್ಚು ಕಾಲ ಬದುಕುವಿರಿ. ಅಷ್ಟುಮಾತ್ರವಲ್ಲ, ನೀವು ದೇವರ ಚಿತ್ತಕ್ಕನುಸಾರ ಕಾರ್ಯನಡಿಸುತ್ತಿರುವಿರಿ. ಏಕೆಂದರೆ ಬೈಬಲು ಹೇಳುವುದು: ‘ನಾವು ಶರೀರಾತ್ಮಗಳ ಎಲ್ಲ ಕಲ್ಮಶವನ್ನು ತೊಲಗಿಸೋಣ.’ (2 ಕೊರಿಂಥ 7:1) ನಾನು ಬಹಳ ಸಮಯದಿಂದ ಧೂಮಪಾನಮಾಡುತ್ತಿದ್ದೇನೆ, ಆದುದರಿಂದ ಧೂಮಪಾನವನ್ನು ಬಿಟ್ಟುಬಿಡಲಾಗುವುದಿಲ್ಲ ಎಂದು ಭಾವಿಸಬೇಡಿರಿ; ನೀವು ಈ ದುಶ್ಚಟವನ್ನು ಆದಷ್ಟು ಬೇಗನೆ ಬಿಟ್ಟುಬಿಡುವಲ್ಲಿ, ಅದರಿಂದ ನಿಮಗೇ ಒಳಿತಾಗುವುದು.

ಧೂಮಪಾನವನ್ನು ಬಿಟ್ಟುಬಿಡುವುದು ತುಂಬ ಕಷ್ಟಕರವೇಕೆ?

ಧೂಮಪಾನವನ್ನು ಬಿಟ್ಟುಬಿಡುವುದು ತುಂಬ ಕಷ್ಟ. ಇದು ಅದನ್ನು ಬಿಟ್ಟುಬಿಡಬೇಕೆಂಬ ಪ್ರಚೋದನೆಗೆ ಒಳಗಾಗಿರುವವರ ವಿಷಯದಲ್ಲೂ ಸತ್ಯವಾಗಿದೆ. ಹೊಗೆಸೊಪ್ಪಿನಲ್ಲಿರುವ ನಿಕೊಟಿನ್‌ ಎಂಬ ಪದಾರ್ಥವು ತುಂಬ ಚಟಹಿಡಿಸುವ ಅಮಲೌಷಧವಾಗಿರುವುದೇ ಇದಕ್ಕೆ ಮುಖ್ಯ ಕಾರಣವಾಗಿದೆ. “ಮನಸ್ಸಿನ ಮೇಲೆ ಪ್ರಭಾವ ಬೀರುವಂತಹ ಅಮಲೌಷಧಗಳ ಚಟಹಿಡಿಸುವಿಕೆಯ ಶ್ರೇಣಿಯಲ್ಲಿ, ಹೆರೋಯಿನ್‌ [ಮತ್ತು] ಕೊಕೇನ್‌ಗಿಂತಲೂ ನಿಕೊಟಿನ್‌ ಹೆಚ್ಚು ಚಟಹಿಡಿಸುವಂತಹ ಅಮಲೌಷಧವಾಗಿದೆ” ಎಂದು ಡಬ್ಲ್ಯೂಏಚ್‌ಓ ಹೇಳುತ್ತದೆ. ಹೆರೋಯಿನ್‌ ಮತ್ತು ಕೊಕೇನ್‌ಗಳ ಅಮಲೇರಿಸುವಂತಹ ಪುರಾವೆಯು ಸ್ಪಷ್ಟವಾಗಿ ಕಂಡುಬರುತ್ತದೆ, ಆದರೆ ನಿಕೊಟಿನ್‌ ಅಮಲೇರಿಸುವಂತಹ ಪುರಾವೆಯು ಬೇಗನೆ ಕಂಡುಬರುವುದಿಲ್ಲ. ಆದುದರಿಂದ, ಅದರ ಪ್ರಭಾವವನ್ನು ಕಡಿಮೆ ಅಂದಾಜುಮಾಡುವುದು ತುಂಬ ಸುಲಭ. ಆದರೆ, ನಿಕೊಟಿನ್‌ ಒಂದು ರೀತಿಯ ಭ್ರಾಂತಿಕಾರಕ ಸುಖವನ್ನು ಉಂಟುಮಾಡುತ್ತದೆ. ಹೀಗಿರುವುದರಿಂದ ಅಧಿಕಾಂಶ ಜನರು ಆ ಅನಿಸಿಕೆಯನ್ನು ಪದೇ ಪದೇ ಅನುಭವಿಸಲಿಕ್ಕಾಗಿ ಧೂಮಪಾನಮಾಡುತ್ತಾ ಇರುತ್ತಾರೆ. ನಿಜವಾಗಿಯೂ ನಿಕೊಟಿನ್‌ ನಿಮ್ಮ ಮನೋಭಾವವನ್ನು ಬದಲಾಯಿಸುತ್ತದೆ; ಚಿಂತೆಗೆ ಉಪಶಮನವನ್ನು ನೀಡುತ್ತದೆ. ಆದರೆ ಸಿಗರೇಟ್‌ ಸೇದಿದಾಗ ಮಾನಸಿಕ ಒತ್ತಡವು ಕಡಿಮೆಯಾಗಲು ಕಾರಣವೇನೆಂದರೆ, ವ್ಯಕ್ತಿಯು ನಿಕೊಟಿನ್‌ಗಾಗಿ ಹಂಬಲಿಸುತ್ತಿರುವುದೇ.

ಧೂಮಪಾನವು ವರ್ತನೆಗೆ ಸಂಬಂಧಿಸಿದ ಅಭ್ಯಾಸವಾಗಿರುವುದರಿಂದ, ಅದನ್ನು ಬಿಟ್ಟುಬಿಡುವುದು ತುಂಬ ಕಷ್ಟ. ಧೂಮಪಾನಿಗಳು ನಿಕೊಟಿನ್‌ನ ಚಟಕ್ಕೆ ಒಳಗಾಗಿರುತ್ತಾರೆ ಮಾತ್ರವಲ್ಲ, ಆಗಿಂದಾಗ್ಗೆ ಸಿಗರೇಟನ್ನು ಹೊತ್ತಿಸಿ ಹೊಗೆಬಿಡುವಂತಹ ನಿಯತಕ್ರಮವನ್ನು ಸಹ ಬೆಳೆಸಿಕೊಂಡಿರುತ್ತಾರೆ. ‘ಇದು ನಿಮ್ಮ ಕೈಗಳಿಗೆ ಕೆಲಸ ಕೊಡುತ್ತದೆ.’ ‘ಇದು ಹೊತ್ತು ಕಳೆಯಲು ಸಹಾಯಮಾಡುತ್ತದೆ’ ಎಂದು ಕೆಲವರು ಹೇಳಬಹುದು.

ಧೂಮಪಾನವನ್ನು ಬಿಟ್ಟುಬಿಡುವುದನ್ನು ಕಷ್ಟಕರವಾದದ್ದಾಗಿ ಮಾಡುವ ಮೂರನೆಯ ಅಂಶವು ಯಾವುದೆಂದರೆ, ಹೊಗೆಸೊಪ್ಪು ದೈನಂದಿನ ಜೀವಿತದ ಅವಿಭಾಜ್ಯ ಅಂಗವಾಗಿಬಿಟ್ಟಿರುವುದೇ. ಧೂಮಪಾನಿಗಳನ್ನು ಮೋಹಕ ಸೌಂದರ್ಯವುಳ್ಳ, ಕ್ರಿಯಾಶೀಲ, ಆರೋಗ್ಯಭರಿತ ಹಾಗೂ ಬುದ್ಧಿವಂತ ಜನರೋಪಾದಿ ಚಿತ್ರಿಸುವಂತಹ ಜಾಹೀರಾತುಗಳಿಗಾಗಿ, ಹೊಗೆಸೊಪ್ಪಿನ ಉದ್ಯಮವು ಪ್ರತಿ ವರ್ಷ ಸುಮಾರು ಆರು ಶತಕೋಟಿ ಅಮೆರಿಕನ್‌ ಡಾಲರುಗಳನ್ನು ವ್ಯಯಿಸುತ್ತದೆ. ಅನೇಕವೇಳೆ ಧೂಮಪಾನಿಗಳು ಕುದುರೆ ಸವಾರಿಮಾಡುತ್ತಿರುವುದನ್ನು, ಈಜುತ್ತಿರುವುದನ್ನು, ಟೆನ್ನಿಸ್‌ ಆಡುತ್ತಿರುವುದನ್ನು, ಅಥವಾ ಮನೋರಂಜನೀಯವಾಗಿರುವ ಇನ್ನಿತರ ಚಟುವಟಿಕೆಯಲ್ಲಿ ಒಳಗೂಡಿರುವುದನ್ನು ಇವುಗಳಲ್ಲಿ ತೋರಿಸಲಾಗುತ್ತದೆ. ಚಲನ ಚಿತ್ರಗಳು ಹಾಗೂ ಟೆಲಿವಿಷನ್‌ ಕಾರ್ಯಕ್ರಮಗಳು ಜನರು ಧೂಮಪಾನ ಮಾಡುತ್ತಿರುವುದನ್ನು ತೋರಿಸುತ್ತವೆ ಮತ್ತು ಯಾವಾಗಲೂ ಖಳನಾಯಕರು ಮಾತ್ರವಲ್ಲ, ನಾಯಕರು ಸಹ ಸೇದುತ್ತಿರುವುದನ್ನು ತೋರಿಸುತ್ತವೆ. ಹೊಗೆಸೊಪ್ಪು ಕಾನೂನುಬದ್ಧವಾಗಿ ಮಾರಾಟಮಾಡಲ್ಪಡುತ್ತದೆ ಮತ್ತು ಕಾರ್ಯತಃ ಎಲ್ಲ ಕಡೆಗಳಲ್ಲಿ ಸುಲಭವಾಗಿ ಸಿಗುತ್ತದೆ. ನಮ್ಮಲ್ಲಿ ಹೆಚ್ಚಿನವರು, ನಮ್ಮ ಸುತ್ತಲೂ ಧೂಮಪಾನಿಗಳು ಇರುವುದನ್ನು ನೋಡಿದ್ದೇವೆ. ಈ ಎಲ್ಲ ಪ್ರಭಾವಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ.

ತಲೆನೋವನ್ನು ಹೋಗಲಾಡಿಸಲು ಆ್ಯಸ್ಪಿರಿನ್‌ ಮಾತ್ರೆಯನ್ನು ತೆಗೆದುಕೊಳ್ಳಬಹುದು, ಆದರೆ ಧೂಮಪಾನದ ಬಯಕೆಯನ್ನು ಹೋಗಲಾಡಿಸಲು ನೀವು ಯಾವುದೇ ಮಾತ್ರೆಯನ್ನು ತೆಗೆದುಕೊಳ್ಳಸಾಧ್ಯವಿಲ್ಲ ಎಂಬುದು ವಿಷಾದಕರ ಸಂಗತಿ. ಧೂಮಪಾನವನ್ನು ಬಿಟ್ಟುಬಿಡುವಂತಹ ಕಷ್ಟಕರ ಕೆಲಸದಲ್ಲಿ ಯಶಸ್ಸನ್ನು ಪಡೆಯಲಿಕ್ಕಾಗಿ, ಒಬ್ಬ ವ್ಯಕ್ತಿಗೆ ಸ್ವತಃ ಆಸಕ್ತಿಯಿರಬೇಕು. ಒಬ್ಬ ವ್ಯಕ್ತಿಯು ತೂಕವನ್ನು ಕಡಿಮೆಮಾಡಲಿಕ್ಕೋಸ್ಕರ ದೀರ್ಘ ಸಮಯದ ವರೆಗೆ ಸತತವಾಗಿ ಪರಿಶ್ರಮಿಸಬೇಕಾಗುತ್ತದೆ. ಇದು ಧೂಮಪಾನವನ್ನು ನಿಲ್ಲಿಸುವುದಕ್ಕೂ ಅನ್ವಯವಾಗುತ್ತದೆ. ಧೂಮಪಾನವನ್ನು ನಿಲ್ಲಿಸುವುದರಲ್ಲಿ ಯಶಸ್ಸನ್ನು ಪಡೆದುಕೊಳ್ಳುವ ಜವಾಬ್ದಾರಿಯು ಸ್ವತಃ ಆ ವ್ಯಕ್ತಿಯ ಮೇಲೆಯೇ ಇರುತ್ತದೆ.

[ಪುಟ 5ರಲ್ಲಿರುವ ಚೌಕ]

ಚಿಕ್ಕ ಪ್ರಾಯದಲ್ಲೇ ಧೂಮಪಾನದ ಚಟಕ್ಕೆ ಬಲಿಯಾಗುವುದು

ಸಿಗರೇಟನ್ನು ಸೇದಲು ಪ್ರಯತ್ನಿಸಿದ ಪ್ರತಿ 4 ಯುವ ಜನರಲ್ಲಿ ಒಬ್ಬನು ಕಾಲಕ್ರಮೇಣ ಧೂಮಪಾನದ ವ್ಯಸನಿಯಾಗಿ ಪರಿಣಮಿಸಿದನು ಎಂದು ಅಮೆರಿಕದಲ್ಲಿನ ಒಂದು ಅಧ್ಯಯನವು ತೋರಿಸಿತು. ಕೊಕೇನ್‌ ಮತ್ತು ಹೆರೋಯಿನ್‌ನಂತಹ ಅಮಲೌಷಧಗಳೊಂದಿಗೆ ಪ್ರಯೋಗ ಪರೀಕ್ಷೆಮಾಡಿದವರ ವ್ಯಸನ ಪ್ರಮಾಣಕ್ಕೆ ಇದು ಸಮಾನವಾಗಿತ್ತು. ತರುಣಾವಸ್ಥೆಯ ಧೂಮಪಾನಿಗಳಲ್ಲಿ ಸುಮಾರು 70 ಪ್ರತಿಶತ ಮಂದಿ ತಾವು ಧೂಮಪಾನವನ್ನು ಆರಂಭಿಸಿದ್ದಕ್ಕಾಗಿ ವಿಷಾದವನ್ನು ವ್ಯಕ್ತಪಡಿಸುತ್ತಾರಾದರೂ, ಅದನ್ನು ಕೆಲವರು ಮಾತ್ರವೇ ಬಿಟ್ಟುಬಿಡಲು ಶಕ್ತರಾಗಿರುತ್ತಾರೆ.

[ಪುಟ 5ರಲ್ಲಿರುವ ಚೌಕ]

ಸಿಗರೇಟ್‌ನ ಹೊಗೆಯಲ್ಲಿ ಏನು ಅಡಕವಾಗಿದೆ?

ಸಿಗರೇಟ್‌ ಹೊಗೆಯಲ್ಲಿ ಟಾರ್‌ ಇದೆ. ಈ ಟಾರ್‌ನಲ್ಲಿ 4,000ಕ್ಕಿಂತಲೂ ಹೆಚ್ಚು ರಾಸಾಯನಿಕ ವಸ್ತುಗಳಿವೆ. ಈ ರಾಸಾಯನಿಕ ವಸ್ತುಗಳಲ್ಲಿ ಸುಮಾರು 43 ರಾಸಾಯನಿಕಗಳು ಕ್ಯಾನ್ಸರನ್ನು ಉಂಟುಮಾಡುವುದಕ್ಕೆ ಪ್ರಸಿದ್ಧವಾಗಿವೆ. ಇವುಗಳಲ್ಲಿ ಕೆಲವು ಯಾವುವೆಂದರೆ, ಸೈಯನೈಡ್‌, ಬೆಂಝೀನ್‌, ಮೆಥನೊಲ್‌ ಮತ್ತು ಆ್ಯಸಿಟಲೀನ್‌ (ಟಾರ್ಚ್‌ಗಳಲ್ಲಿ ಉಪಯೋಗಿಸಲ್ಪಡುವ ಒಂದು ಇಂಧನ). ನೈಟ್ರೊಜನ್‌ ಆಕ್ಸೈಡ್‌ ಮತ್ತು ಕಾರ್ಬನ್‌ ಮಾನಾಕ್ಸೈಡ್‌ಗಳು ಸಹ ಸಿಗರೇಟ್‌ ಹೊಗೆಯಲ್ಲಿ ಸೇರಿಕೊಂಡಿದ್ದು, ಇವೆರಡೂ ವಿಷಾನಿಲಗಳಾಗಿವೆ. ಇದರ ಪ್ರಮುಖ ಪರಿಣಾಮಕಾರಿ ಪದಾರ್ಥವು ನಿಕೊಟಿನ್‌ ಆಗಿದ್ದು, ಇದು ತುಂಬ ಚಟಹಿಡಿಸುವಂತಹ ಒಂದು ಅಮಲೌಷಧವಾಗಿದೆ.

[ಪುಟ 6ರಲ್ಲಿರುವ ಚೌಕ]

ಒಬ್ಬ ಪ್ರಿಯ ವ್ಯಕ್ತಿಗೆ ಧೂಮಪಾನವನ್ನು ಬಿಟ್ಟುಬಿಡಲು ಸಹಾಯಮಾಡುವುದು

ಸ್ವತಃ ನೀವು ಧೂಮಪಾನಮಾಡದಿದ್ದರೂ, ಧೂಮಪಾನದ ಅಪಾಯಗಳ ಅರಿವು ನಿಮಗಿರುವಾಗ, ನಿಮ್ಮ ಸ್ನೇಹಿತರು ಹಾಗೂ ಪ್ರಿಯ ಜನರು ಧೂಮಪಾನವನ್ನು ಮುಂದುವರಿಸುವುದನ್ನು ನೋಡಿ ನೀವು ತುಂಬ ಹತಾಶರಾಗುತ್ತಿರಬಹುದು. ಆ ದುಶ್ಚಟವನ್ನು ಬಿಟ್ಟುಬಿಡುವಂತೆ ಅವರಿಗೆ ಸಹಾಯಮಾಡಲಿಕ್ಕಾಗಿ ನೀವು ಏನು ಮಾಡಸಾಧ್ಯವಿದೆ? ಪೀಡಿಸುವುದು, ಬೇಡಿಕೊಳ್ಳುವುದು, ಒತ್ತಾಯಿಸುವುದು, ಮತ್ತು ಅಪಹಾಸ್ಯಮಾಡುವುದರಿಂದ ಹೆಚ್ಚು ಸಾಫಲ್ಯ ಸಿಗಲಿಕ್ಕಿಲ್ಲ. ಅಥವಾ ಛೀಮಾರಿಹಾಕುತ್ತಾ ದೊಡ್ಡ ಭಾಷಣಗಳನ್ನು ಬಿಗಿಯುವುದು ಸಹ ಸಹಾಯಮಾಡಲಾರದು. ಹೀಗೆ ಮಾಡುವಲ್ಲಿ, ಧೂಮಪಾನದ ಚಟವನ್ನು ಬಿಟ್ಟುಬಿಡುವುದಕ್ಕೆ ಬದಲಾಗಿ, ಈ ತಂತ್ರಗಳು ಉಂಟುಮಾಡಬಹುದಾದ ಭಾವನಾತ್ಮಕ ನೋವನ್ನು ಕಡಿಮೆಮಾಡಲಿಕ್ಕಾಗಿ ಧೂಮಪಾನಿಯು ಸೇದುವುದನ್ನು ಇನ್ನೂ ಮುಂದುವರಿಸಬಹುದು. ಆದುದರಿಂದ, ಧೂಮಪಾನವನ್ನು ಬಿಟ್ಟುಬಿಡುವುದು ಎಷ್ಟು ಕಷ್ಟಕರವಾಗಿದೆ ಮತ್ತು ಬೇರೆಯವರಿಗೆ ಹೋಲಿಸುವಾಗ ಕೆಲವರಿಗೆ ಇದು ಹೆಚ್ಚು ಕಷ್ಟಕರವಾದದ್ದಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿರಿ.

ಧೂಮಪಾನವನ್ನು ಬಿಟ್ಟುಬಿಡುವಂತೆ ನೀವು ಒಬ್ಬ ವ್ಯಕ್ತಿಯನ್ನು ಒತ್ತಾಯಿಸಲಾರಿರಿ. ಧೂಮಪಾನಮಾಡುವ ವ್ಯಕ್ತಿಯಲ್ಲಿ, ಅದನ್ನು ಬಿಟ್ಟುಬಿಡುವ ಆಂತರಿಕ ಬಲ ಮತ್ತು ದೃಢನಿಶ್ಚಯವು ಮೂಡಿಬರಬೇಕು. ಧೂಮಪಾನವನ್ನು ಬಿಟ್ಟುಬಿಡುವಂತಹ ಬಯಕೆಯು ಬರುವಂತೆ ಉತ್ತೇಜಿಸುವ ಮತ್ತು ಬೆಂಬಲಿಸುವ ಪ್ರೀತಿಪರ ಮಾರ್ಗಗಳನ್ನು ನೀವು ಕಂಡುಕೊಳ್ಳುವ ಅಗತ್ಯವಿದೆ.

ನೀವು ಇದನ್ನು ಹೇಗೆ ಮಾಡಸಾಧ್ಯವಿದೆ? ಉಚಿತವಾದ ಸಮಯದಲ್ಲಿ, ಆ ವ್ಯಕ್ತಿಯ ಕಡೆಗಿರುವ ನಿಮ್ಮ ಪ್ರೀತಿಯನ್ನು ನೀವು ವ್ಯಕ್ತಪಡಿಸಬಹುದು ಮತ್ತು ಅವನ ಅಥವಾ ಅವಳ ಧೂಮಪಾನದ ದುರಭ್ಯಾಸದ ಕುರಿತು ನಿಮಗೆ ಚಿಂತೆಯಿದೆ ಎಂದು ಹೇಳಬಹುದು. ಧೂಮಪಾನವನ್ನು ಬಿಟ್ಟುಬಿಡಲಿಕ್ಕಾಗಿ ಅವರು ಮಾಡುವ ಯಾವುದೇ ನಿರ್ಧಾರವನ್ನು ಬೆಂಬಲಿಸಲಿಕ್ಕಾಗಿ ನೀವು ಸಿದ್ಧರಿದ್ದೀರಿ ಎಂಬುದನ್ನು ವಿವರಿಸಿರಿ. ಆದರೂ, ಪುನಃ ಪುನಃ ಇದೇ ವಿಧಾನವನ್ನು ಉಪಯೋಗಿಸುವಲ್ಲಿ, ಅದು ಅಷ್ಟು ಪರಿಣಾಮಕಾರಿಯಾಗಿರಲಿಕ್ಕಿಲ್ಲ.

ನಿಮ್ಮ ಪ್ರಿಯ ವ್ಯಕ್ತಿಯು ಧೂಮಪಾನವನ್ನು ಬಿಟ್ಟುಬಿಡಲು ನಿರ್ಧರಿಸುವುದಾದರೆ, ನೀವು ಏನು ಮಾಡಬಹುದು? ಅವನು ಅಥವಾ ಅವಳು ಧೂಮಪಾನವನ್ನು ನಿಲ್ಲಿಸಿದ್ದಕ್ಕಾಗಿ ರೋಗಲಕ್ಷಣಗಳು—ಇದರಲ್ಲಿ ಸಿಟ್ಟು ಹಾಗೂ ಖಿನ್ನತೆಗಳೂ ಸೇರಿವೆ—ಕಂಡುಬರಬಹುದು ಎಂಬುದನ್ನು ಮನಸ್ಸಿನಲ್ಲಿಡಿರಿ. ತಲೆನೋವು ಮತ್ತು ನಿದ್ರೆಯ ತೊಂದರೆಗಳು ಸಹ ಕಾಡಬಹುದು. ಈ ರೋಗಲಕ್ಷಣಗಳು ತಾತ್ಕಾಲಿಕವಾಗಿದ್ದು, ಹೊಸತಾದ ಹಾಗೂ ಆರೋಗ್ಯಕರವಾದ ಸಮತೆಗೆ ದೇಹವು ಒಗ್ಗಿಕೊಳ್ಳುತ್ತಿದೆ ಎಂಬ ಸೂಚನೆಯನ್ನು ಕೊಡುತ್ತಿವೆ ಎಂದು ನಿಮ್ಮ ಪ್ರಿಯ ವ್ಯಕ್ತಿಗೆ ಜ್ಞಾಪಕಹುಟ್ಟಿಸಿರಿ. ಹರ್ಷಚಿತ್ತರಾಗಿರಿ ಮತ್ತು ಆಶಾವಾದಿಗಳಾಗಿರಿ. ಅವನು ಅಥವಾ ಅವಳು ಧೂಮಪಾನವನ್ನು ನಿಲ್ಲಿಸುತ್ತಿರುವುದರಿಂದ ನಿಮಗೆ ಸಂತೋಷವಾಗುತ್ತಿದೆ ಎಂಬುದನ್ನು ವ್ಯಕ್ತಪಡಿಸಿರಿ. ಧೂಮಪಾನವನ್ನು ನಿಲ್ಲಿಸಲು ಪ್ರಯತ್ನಿಸುವ ಕಾಲಾವಧಿಯಲ್ಲೆಲ್ಲ, ಪುನಃ ಅದನ್ನು ಆರಂಭಿಸುವಂತೆ ಪ್ರಚೋದಿಸಸಾಧ್ಯವಿರುವ ಒತ್ತಡಭರಿತ ಸನ್ನಿವೇಶಗಳಿಂದ ತಪ್ಪಿಸಿಕೊಳ್ಳಲು ನಿಮ್ಮ ಪ್ರಿಯ ವ್ಯಕ್ತಿಗೆ ಸಹಾಯಮಾಡಿರಿ.

ಒಂದುವೇಳೆ ಪುನಃ ಅದನ್ನು ಅವರು ಆರಂಭಿಸುವುದಾದರೆ ಆಗೇನು? ಅತಿಯಾಗಿ ಪ್ರತಿಕ್ರಿಯಿಸದೆ ಇರಲು ಪ್ರಯತ್ನಿಸಿರಿ. ಸಹಾನುಭೂತಿಯುಳ್ಳವರಾಗಿರಿ. ಮತ್ತೊಮ್ಮೆ ಪ್ರಯತ್ನಿಸುವುದಾದರೆ ಖಂಡಿತವಾಗಿಯೂ ಯಶಸ್ಸು ಸಿಗುವುದು ಎಂಬ ಭಾವನೆಯೊಂದಿಗೆ ನೀವಿಬ್ಬರೂ ಈ ಸನ್ನಿವೇಶವನ್ನು ಪಾಠ ಕಲಿಸುವ ಒಂದು ಅನುಭವದೋಪಾದಿ ಪರಿಗಣಿಸಿರಿ.

[ಪುಟ 7ರಲ್ಲಿರುವ ಚಿತ್ರ]

ಹೊಗೆಸೊಪ್ಪಿನ ಉದ್ಯಮವು ಜಾಹೀರಾತಿಗಾಗಿ ಪ್ರತಿ ವರ್ಷ ಸುಮಾರು ಆರು ಶತಕೋಟಿ ಡಾಲರುಗಳನ್ನು ಖರ್ಚುಮಾಡುತ್ತದೆ