ನೀವು ಧೂಮಪಾನವನ್ನು ಹೇಗೆ ಬಿಟ್ಟುಬಿಡಸಾಧ್ಯವಿದೆ?
ನೀವು ಧೂಮಪಾನವನ್ನು ಹೇಗೆ ಬಿಟ್ಟುಬಿಡಸಾಧ್ಯವಿದೆ?
ಸೈಕಲ್ ತುಳಿಯಲು ಕಲಿಯಬೇಕಾದರೆ ಕೇವಲ ಒಂದು ಸಾರಿ ಪ್ರಯತ್ನಿಸಿದರೆ ಸಾಲದು. ಅದೇ ರೀತಿಯಲ್ಲಿ ಹೊಗೆಸೊಪ್ಪಿನ ಚಟವನ್ನು ಬಿಟ್ಟುಬಿಡಲು ಕೇವಲ ಒಂದು ಸಾರಿ ಪ್ರಯತ್ನಿಸಿದರೆ ಯಶಸ್ಸು ಲಭಿಸದು. ಆದುದರಿಂದ, ನೀವು ಧೂಮಪಾನವನ್ನು ಬಿಟ್ಟುಬಿಡಲು ನಿರ್ಧರಿಸಿರುವಲ್ಲಿ, ನೀವು ಸಫಲರಾಗುವ ತನಕ ಪುನಃ ಪುನಃ ಪ್ರಯತ್ನಗಳನ್ನು ಮಾಡಲು ಸಿದ್ಧರಾಗಿರತಕ್ಕದ್ದು. ಮಧ್ಯೆ ನೀವು ಪುನಃ ಧೂಮಪಾನವನ್ನು ಆರಂಭಿಸುವಲ್ಲಿ, ಅದನ್ನು ಒಂದು ಸೋಲಾಗಿ ಪರಿಗಣಿಸದಿರಿ. ಇದನ್ನು ಕಲಿಯುವ ಒಂದು ಅನುಭವದೋಪಾದಿ, ಅಂದರೆ ಯಶಸ್ವಿಯಾಗಬಲ್ಲ ಒಂದು ಕಾರ್ಯಕ್ರಮದಲ್ಲಿ ಕೇವಲ ಒಂದು ಚಿಕ್ಕ ಸೋಲಿನೋಪಾದಿ ಪರಿಗಣಿಸಿರಿ. ಧೂಮಪಾನವನ್ನು ಬಿಟ್ಟುಬಿಡಲು ಇತರರಿಗೆ ಸಹಾಯಮಾಡಿರುವಂತಹ ಕೆಲವು ಸಲಹೆಗಳು ಇಲ್ಲಿ ಕೊಡಲ್ಪಟ್ಟಿವೆ. ಇವು ಧೂಮಪಾನವನ್ನು ಬಿಟ್ಟುಬಿಡಲು ನಿಮಗೂ ಸಹಾಯಮಾಡಬಹುದು.
ಧೂಮಪಾನವನ್ನು ಬಿಟ್ಟುಬಿಡಲು ಮಾನಸಿಕವಾಗಿ ಸಿದ್ಧರಾಗಿರಿ
◼ ಮೊದಲಾಗಿ, ಧೂಮಪಾನವನ್ನು ಬಿಟ್ಟುಬಿಡುವ ಪ್ರಯತ್ನವು ಸಾರ್ಥಕವಾದದ್ದು ಎಂಬುದನ್ನು ಸ್ವತಃ ಮನದಟ್ಟುಮಾಡಿಕೊಳ್ಳಿರಿ. ನೀವು ಅದನ್ನು ಏಕೆ ಬಿಟ್ಟುಬಿಡಲು ಬಯಸುತ್ತೀರಿ ಎಂಬುದಕ್ಕಿರುವ ಕಾರಣಗಳೊಂದಿಗೆ ಎಲ್ಲ ಪ್ರಯೋಜನಗಳನ್ನೂ ಪಟ್ಟಿಮಾಡಿರಿ. ನೀವು ಧೂಮಪಾನವನ್ನು ಬಿಟ್ಟುಬಿಟ್ಟ ಬಳಿಕ, ಈ ಪಟ್ಟಿಯನ್ನು ಪುನಃ ಪರಿಶೀಲಿಸುವುದರಿಂದ ನಿಮ್ಮ ನಿರ್ಧಾರವು ಇನ್ನೂ ಬಲಗೊಳ್ಳುವುದು. ದೇವರನ್ನು ಮೆಚ್ಚಿಸಬೇಕೆಂಬ ಬಯಕೆಯೇ ಧೂಮಪಾನವನ್ನು ಬಿಟ್ಟುಬಿಡಲಿಕ್ಕಿರುವ ಅತ್ಯಂತ ದೊಡ್ಡ ಪ್ರೇರಣೆಯಾಗಿದೆ. ನಾವು ನಮ್ಮ ಪೂರ್ಣ ಹೃದಯ, ಪ್ರಾಣ, ಬುದ್ಧಿ ಮತ್ತು ಶಕ್ತಿಯಿಂದ ದೇವರನ್ನು ಪ್ರೀತಿಸಬೇಕು ಎಂದು ಬೈಬಲು ಹೇಳುತ್ತದೆ. ಒಂದುವೇಳೆ ನಾವು ಹೊಗೆಸೊಪ್ಪಿನ ವ್ಯಸನಿಗಳಾಗಿರುವುದಾದರೆ, ನಾವು ದೇವರನ್ನು ಈ ರೀತಿಯಲ್ಲಿ ಪ್ರೀತಿಸಲು ಸಾಧ್ಯವಿಲ್ಲ.—ಮಾರ್ಕ 12:30.
◼ ನೀವು ಯಾವಾಗ ಮತ್ತು ಏಕೆ ಧೂಮಪಾನಮಾಡುತ್ತೀರಿ ಎಂಬುದನ್ನು ಕಂಡುಹಿಡಿಯಲಿಕ್ಕಾಗಿ ನಿಮ್ಮ ಧೂಮಪಾನದ ಅಭ್ಯಾಸಗಳನ್ನು ಸರಿಯಾಗಿ ವಿಶ್ಲೇಷಿಸಿರಿ. ಒಂದು ನಿರ್ದಿಷ್ಟ ದಿನದಂದು ಯಾವಾಗ ಮತ್ತು ಎಲ್ಲಿ ನೀವು ಸಿಗರೇಟನ್ನು ಸೇದಿದಿರಿ ಎಂಬುದನ್ನು ಒಂದು ಹಾಳೆಯ ಮೇಲೆ ದಾಖಲಿಸುವುದು ನಿಮಗೆ ಸಹಾಯಕಾರಿಯಾಗಿರಬಹುದು. ನೀವು ಧೂಮಪಾನವನ್ನು ನಿಲ್ಲಿಸಿಬಿಟ್ಟ ಬಳಿಕ ಪುನಃ ಸೇದುವಂತೆ ನಿಮ್ಮನ್ನು ಪ್ರಲೋಭಿಸಬಹುದಾದ ಸನ್ನಿವೇಶಗಳನ್ನು ಮುನ್ನರಿಯಲು ಇದು ನಿಮಗೆ ಸಹಾಯಮಾಡುವುದು.
ಬಿಟ್ಟುಬಿಡಲಿಕ್ಕಾಗಿ ಒಂದು ತಾರೀಖನ್ನು ನಿಗದಿಪಡಿಸಿರಿ
◼ ಧೂಮಪಾನವನ್ನು ಬಿಟ್ಟುಬಿಡಲು ಒಂದು ತಾರೀಖನ್ನು ಆಯ್ದುಕೊಳ್ಳಿರಿ, ಮತ್ತು ನಿಮ್ಮ ಕ್ಯಾಲೆಂಡರಿನ ಮೇಲೆ ಅದನ್ನು ಗುರುತುಹಾಕಿರಿ. ನೀವು ಅನಗತ್ಯವಾದ ಒತ್ತಡಕ್ಕೆ ಒಳಗಾಗದಿರುವಂತಹ ಒಂದು ದಿನವನ್ನು ಆರಿಸಿಕೊಳ್ಳುವುದು ಅತ್ಯುತ್ತಮ. ನಿಗದಿತ ದಿನವು ಬಂದಾಗ ಸಂಪೂರ್ಣವಾಗಿ ಬಿಟ್ಟುಬಿಡಿರಿ—ಇದ್ದಕ್ಕಿದ್ದಂತೆ ಮತ್ತು ಪೂರ್ಣವಾಗಿ ನಿಲ್ಲಿಸಿಬಿಡಿರಿ.
◼ ಧೂಮಪಾನವನ್ನು ಬಿಟ್ಟುಬಿಡಲು ನಿಗದಿಪಡಿಸಿರುವ ದಿನವು ಬರುವುದಕ್ಕೆ ಮುಂಚೆ, ಆ್ಯಷ್‌ಟ್ರೇಗಳು, ಬೆಂಕಿಯಕಡ್ಡಿಗಳು ಮತ್ತು ಲೈಟರ್‌ಗಳನ್ನು ಬಿಸಾಡಿರಿ. ಹೊಗೆಸೊಪ್ಪಿನ ಹೊಗೆಯ ವಾಸನೆಯಿರುವ ನಿಮ್ಮ ಎಲ್ಲ ಬಟ್ಟೆಗಳನ್ನು ತೊಳೆಯಿರಿ.
◼ ಧೂಮಪಾನವನ್ನು ಬಿಟ್ಟುಬಿಡಲಿಕ್ಕಾಗಿರುವ ನಿಮ್ಮ ಪ್ರಯತ್ನಗಳಲ್ಲಿ ನಿಮಗೆ ಪ್ರೋತ್ಸಾಹವನ್ನು ನೀಡುವಂತೆ, ಜೊತೆಕೆಲಸಗಾರರು, ಸ್ನೇಹಿತರು ಮತ್ತು ಕುಟುಂಬದ ಸಹಕಾರವನ್ನು ಪಡೆದುಕೊಳ್ಳಿರಿ. ನಿಮ್ಮ ಮುಂದೆ ಯಾರಾದರೂ ಸಿಗರೇಟನ್ನು ಸೇದುವಲ್ಲಿ, ದಯವಿಟ್ಟು ಸೇದಬೇಡಿರಿ ಎಂದು ಅವರಿಗೆ ಹೇಳಲು ಅಂಜಬೇಡಿರಿ.
◼ ನೀವು ಧೂಮಪಾನವನ್ನು ಬಿಟ್ಟುಬಿಡಲು ನಿಗದಿಪಡಿಸಿರುವ ದಿನದಲ್ಲಿ ಯಾವುದಾದರೂ ಚಟುವಟಿಕೆಗಳನ್ನು ಯೋಜಿಸಿರಿ. ಎಲ್ಲಿ ಧೂಮಪಾನವು ನಿಷೇಧಿಸಲ್ಪಟ್ಟಿದೆಯೋ ಅಂತಹ ಸ್ಥಳಗಳಿಗೆ, ಅಂದರೆ ಒಂದು ವಸ್ತುಸಂಗ್ರಹಾಲಯಕ್ಕೋ ಅಥವಾ ಒಂದು ಥಿಯೇಟರ್‌ಗೋ
ನೀವು ಹೋಗಬಹುದು. ಈಜುವುದು ಅಥವಾ ಸೈಕಲ್ ತುಳಿಯುವುದು ಅಥವಾ ಬಹಳ ದೂರದ ವರೆಗೆ ನಡೆದುಕೊಂಡುಹೋಗುವಂತಹ ವ್ಯಾಯಾಮವನ್ನು ಸಹ ನೀವು ಮಾಡಸಾಧ್ಯವಿದೆ.ಧೂಮಪಾನವನ್ನು ಬಿಟ್ಟುಬಿಡುವಾಗ ಕಂಡುಬರುವ ರೋಗಲಕ್ಷಣಗಳೊಂದಿಗೆ ಹೋರಾಡುವುದು
ಒಂದುವೇಳೆ ನೀವು ವಿಪರೀತ ಧೂಮಪಾನಮಾಡುವವರಾಗಿರುವಲ್ಲಿ, ಕೊನೆಯ ಸಿಗರೇಟನ್ನು ಸೇದಿ ನಿಲ್ಲಿಸಿದ ಕೆಲವೇ ತಾಸುಗಳೊಳಗೆ ಆರಂಭವಾಗುವಂತಹ ಕೆಲವು ರೋಗಲಕ್ಷಣಗಳನ್ನು ನೀವು ಅನುಭವಿಸಬಹುದು. ಸಿಟ್ಟು, ಅಸಹನೆ, ದ್ವೇಷ, ಚಿಂತೆ, ಖಿನ್ನತೆ, ನಿದ್ರಾಹೀನತೆ, ಕಳವಳ, ವಿಪರೀತ ಹಸಿವು, ಮತ್ತು ಸಿಗರೇಟ್‌ಗಳಿಗಾಗಿರುವ ಹಂಬಲವು ಈ ಲಕ್ಷಣಗಳಲ್ಲಿ ಸೇರಿರಬಹುದು. ಈ ರೋಗಲಕ್ಷಣಗಳನ್ನು ನಿಭಾಯಿಸಲು ಸಹಾಯಮಾಡುವಂತಹ ಔಷಧವನ್ನು ನಿಮ್ಮ ವೈದ್ಯರು ಬರೆದುಕೊಡಬಹುದು. ಅಷ್ಟುಮಾತ್ರವಲ್ಲ, ಈ ಹೋರಾಟದಲ್ಲಿ ಗೆಲ್ಲುವಂತೆ ನಿಮಗೆ ಸಹಾಯ ಮಾಡಸಾಧ್ಯವಿರುವ ಕೆಲವು ವಿಷಯಗಳು ಇಲ್ಲಿ ಕೊಡಲ್ಪಟ್ಟಿವೆ.
◼ ಮೊದಲ ಕೆಲವು ವಾರಗಳಲ್ಲಿ ನಿಮಗೆ ತುಂಬ ಕಷ್ಟವಾಗಬಹುದು. ಆಗ ಕಡಿಮೆ ಕ್ಯಾಲೊರಿಗಳಿರುವ ಆಹಾರಪದಾರ್ಥಗಳನ್ನು ಸೇವಿಸಿರಿ ಮತ್ತು ತುಂಬ ನೀರನ್ನು ಕುಡಿಯಿರಿ. ಕ್ಯಾರೆಟ್ ಅಥವಾ ಸೆಲೆರಿಗಳಂತಹ ಹಸಿ ತರಕಾರಿಗಳನ್ನು ತಿನ್ನುವುದು ಸಹಾಯಕಾರಿಯಾಗಿದೆಯೆಂದು ಕೆಲವರು ಕಂಡುಕೊಂಡಿದ್ದಾರೆ. ನೀವು ವ್ಯಾಯಾಮವನ್ನು ಮಾಡುವಲ್ಲಿ, ನೀವು ತೂಕವನ್ನು ಹೆಚ್ಚಿಸಿಕೊಳ್ಳದಿರುವಂತೆ ಅದು ಸಹಾಯಮಾಡುವುದು ಮತ್ತು ಭಯಗ್ರಸ್ತ ನರಗಳಿಗೆ ಉಪಶಮನ ನೀಡುವುದು.
◼ ನಿಮ್ಮನ್ನು ಧೂಮಪಾನಮಾಡುವ ಪ್ರಲೋಭಕ್ಕೆ ಒಳಪಡಿಸುವಂತಹ ಸ್ಥಳಗಳನ್ನು ಮತ್ತು ಸನ್ನಿವೇಶಗಳನ್ನು ದೂರಮಾಡಿರಿ.
◼ ನಿಮ್ಮನ್ನು ಧೂಮಪಾನಮಾಡುವ ಪ್ರಲೋಭಕ್ಕೆ ಒಳಪಡಿಸಬಹುದಾದಂಥ ತಪ್ಪು ತರ್ಕದ ವಿರುದ್ಧ ಹೋರಾಡಿರಿ. ನೀವು ಧೂಮಪಾನವನ್ನು ಬಿಟ್ಟುಬಿಡುವಾಗ ಮನಸ್ಸಿಗೆ ಬರುವಂತಹ ಕೆಲವು ಸಾಮಾನ್ಯ ಆಲೋಚನೆಗಳು ಇಲ್ಲಿ ಕೊಡಲ್ಪಟ್ಟಿವೆ: ‘ಈ ಕಷ್ಟದ ಸಮಯವನ್ನು ನಿಭಾಯಿಸಲಿಕ್ಕಾಗಿ ನಾನು ಇವತ್ತು ಒಂದು ದಿನ ಮಾತ್ರ ಸಿಗರೇಟ್ ಸೇದುವೆ.’ ‘ನನ್ನಲ್ಲಿರುವ ಒಂದೇ ಒಂದು ದುರ್ಗುಣ ಧೂಮಪಾನವಾಗಿದೆ!’ ‘ಹೊಗೆಸೊಪ್ಪು ಅಷ್ಟೇನೂ ಹಾನಿಕರವಾಗಿರಲಾರದು; ವಿಪರೀತ ಧೂಮಪಾನಮಾಡುವವರು ಸಹ 90ಕ್ಕಿಂತಲೂ ಹೆಚ್ಚು ವರ್ಷಗಳ ಕಾಲ ಬದುಕುತ್ತಾರೆ.’ ‘ಮುಂದೆ ಒಂದಲ್ಲ ಒಂದು ದಿನ ಯಾವುದಾದರೂ ಕಾರಣಕ್ಕಾಗಿ ನಾನು ಸಾಯಲೇಬೇಕಲ್ಲ.’ ‘ಹೊಗೆಸೊಪ್ಪು ಇಲ್ಲದೆ ಜೀವನದಲ್ಲಿ ಮಜವೇ ಇಲ್ಲ.’
◼ ಸನ್ನಿವೇಶದ ಒತ್ತಡಕ್ಕೆ ಸಿಲುಕಿ ನೀವು ಇನ್ನೇನು ನಿಮ್ಮ ನಿರ್ಧಾರವನ್ನು ಸಡಿಲಿಸುತ್ತೀರಿ ಎಂದು ಗೊತ್ತಾಗುವಾಗ, ಸ್ವಲ್ಪ ಹೊತ್ತು ತಡೆಯಿರಿ. ಕೇವಲ ಹತ್ತು ನಿಮಿಷ ಕಾಯುವಲ್ಲಿ, ಸಿಗರೇಟ್‌ಗಾಗಿರುವ ಬಲವಾದ ಹಂಬಲವು ಕಡಿಮೆಯಾಗಬಹುದು. ಇನ್ನೆಂದೂ ಧೂಮಪಾನಮಾಡುವುದೇ ಇಲ್ಲ ಎಂಬ ಆಲೋಚನೆಯು ಸಹ ಕೆಲವೊಮ್ಮೆ ಸಹಿಸಲಸಾಧ್ಯವಾದದ್ದಾಗಿ ಕಂಡುಬರಬಹುದು. ನಿಮಗೆ ಹಾಗನಿಸುವಲ್ಲಿ, ಒಂದು ದಿನದ ಮಟ್ಟಿಗೆ ಮಾತ್ರ ಧೂಮಪಾನವನ್ನು ಬಿಟ್ಟುಬಿಡುವುದರ ಮೇಲೆ ಮನಸ್ಸನ್ನು ಕೇಂದ್ರೀಕರಿಸಿರಿ.
◼ ನೀವು ದೇವರ ಸೇವೆಮಾಡಲು ಬಯಸುವಲ್ಲಿ, ಆತನ ಸಹಾಯಕ್ಕಾಗಿ ಬೇಡಿಕೊಳ್ಳಿರಿ. ನಮ್ಮ ಪ್ರೀತಿಯ ಸೃಷ್ಟಿಕರ್ತನು, ತಮ್ಮ ಜೀವಿತಗಳನ್ನು ತನ್ನ ಚಿತ್ತಕ್ಕೆ ಹೊಂದಿಕೆಯಲ್ಲಿ ತರಲು ಹೆಣಗಾಡುತ್ತಿರುವವರಿಗೆ ಅಗತ್ಯವಿರುವ “ಸಮಯೋಚಿತವಾದ ಸಹಾಯ”ವನ್ನು ಒದಗಿಸಬಲ್ಲನು. (ಇಬ್ರಿಯ 4:16) ಆದರೆ ಒಂದು ಅದ್ಭುತವನ್ನು ನಿರೀಕ್ಷಿಸಬೇಡಿರಿ. ನಿಮ್ಮ ಪ್ರಾರ್ಥನೆಗಳಿಗನುಸಾರ ನೀವು ಕ್ರಿಯೆಗೈಯಲೇಬೇಕು.
ಮಾಜಿ ಧೂಮಪಾನಿಯಾಗಿಯೇ ಉಳಿಯಿರಿ
◼ ಮೊದಲ ಮೂರು ತಿಂಗಳುಗಳು ತುಂಬ ಕಷ್ಟಕರವಾಗಿರುತ್ತವೆ. ಆದರೆ ಆ ಕಾಲಾವಧಿಯ ನಂತರವೂ ಧೂಮಪಾನಮಾಡುವಂತೆ ನಿಮ್ಮನ್ನು ಪ್ರಲೋಭಿಸಬಹುದಾದ ಧೂಮಪಾನಿಗಳಿಂದ ಮತ್ತು ಸನ್ನಿವೇಶಗಳಿಂದ ನೀವು ದೂರವಿರಲು ಪ್ರಯತ್ನಿಸಬೇಕು.
◼ ಒಂದು ವರ್ಷ ಅಥವಾ ಅದಕ್ಕಿಂತಲೂ ಹೆಚ್ಚು ಸಮಯದಿಂದ ನೀವು ಧೂಮಪಾನವನ್ನು ಬಿಟ್ಟುಬಿಟ್ಟಿರುವಾಗಲೂ, ನೀವು ಆಗಾಗ ಧೂಮಪಾನಮಾಡಸಾಧ್ಯವಿದೆ ಎಂದು ನೆನಸುತ್ತಾ ನಿಮ್ಮನ್ನು ನೀವು ವಂಚಿಸಿಕೊಳ್ಳಬೇಡಿರಿ.
◼ “ಒಂದೇ ಒಂದು ಸಿಗರೇಟನ್ನು” ಸೇದುತ್ತೇನೆ ಎಂಬ ಬಯಕೆಯನ್ನು ನಿಗ್ರಹಿಸಿರಿ. ಕೇವಲ ಒಂದು ಸಿಗರೇಟನ್ನು ಹೊತ್ತಿಸುವುದು, ಸುಲಭವಾಗಿ ಪುನಃ ಧೂಮಪಾನವನ್ನು ಆರಂಭಿಸುವುದಕ್ಕೆ ನಡಿಸಬಹುದು, ಮತ್ತು ಸ್ವಲ್ಪದರಲ್ಲೇ ನೀವು ಧೂಮಪಾನವನ್ನು ಬಿಟ್ಟುಬಿಡಲಿಕ್ಕಾಗಿ ಪಟ್ಟ ಪ್ರಯತ್ನವೆಲ್ಲವೂ ವ್ಯರ್ಥವಾಗುವುದು. ಆದರೂ, ಒಂದುವೇಳೆ ನೀವು ಸನ್ನಿವೇಶಕ್ಕೆ ಬಲಿಬಿದ್ದು ಒಂದು ಸಿಗರೇಟನ್ನು ಸೇದುವುದಾದರೂ, ಆಮೇಲೆ ಇನ್ನೊಂದನ್ನು ಸೇದುವ ಅಗತ್ಯವಿಲ್ಲ. ನೀವು ಹಿಂದಿನ ಸ್ಥಿತಿಗೆ ಮರಳುವಲ್ಲಿ, ಪುನಃ ಅದನ್ನು ಬಿಟ್ಟುಬಿಡಲು ಪ್ರಯತ್ನಿಸಿರಿ.
ಲಕ್ಷಾಂತರ ಧೂಮಪಾನಿಗಳು ಧೂಮಪಾನವನ್ನು ಬಿಟ್ಟುಬಿಡುವುದರಲ್ಲಿ ಸಫಲರಾಗಿದ್ದಾರೆ. ದೃಢನಿರ್ಧಾರ ಹಾಗೂ ಪಟ್ಟುಹಿಡಿಯುವಿಕೆಯಿಂದ ನೀವು ಸಹ ಈ ದುರಭ್ಯಾಸವನ್ನು ಖಂಡಿತವಾಗಿಯೂ ಬಿಟ್ಟುಬಿಡಬಲ್ಲಿರಿ!