ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪುರುಷತ್ವವನ್ನು ರುಜುಪಡಿಸಲು ಒಬ್ಬನು ತಂದೆಯಾಗಬೇಕೋ?

ಪುರುಷತ್ವವನ್ನು ರುಜುಪಡಿಸಲು ಒಬ್ಬನು ತಂದೆಯಾಗಬೇಕೋ?

ಯುವ ಜನರು ಪ್ರಶ್ನಿಸುವುದು . . .

ಪುರುಷತ್ವವನ್ನು ರುಜುಪಡಿಸಲು ಒಬ್ಬನು ತಂದೆಯಾಗಬೇಕೋ?

“‘ನನಗೆ ಅಲ್ಲೊಬ್ಬ ಮಗಳಿದ್ದಾಳೆ, ಇಲ್ಲೊಬ್ಬ ಮಗನಿದ್ದಾನೆ’ ಎಂದು ಹೇಳುವ ಅನೇಕ [ಆಸಾಮಿಗಳ] ಬಗ್ಗೆ ನನಗೆ ಗೊತ್ತು. ಅವರು ಹೇಳುವ ರೀತಿಯನ್ನು ನೋಡಿದರೆ, ಅವರಿಗೆ ಸ್ವಲ್ಪವೂ ಜವಾಬ್ದಾರಿಯೇ ಇಲ್ಲವೆನೋ ಎಂದನಿಸುತ್ತದೆ.”—ಹ್ಯಾರಲ್ಡ್‌.

ಅಮೆರಿಕಾದಲ್ಲಿ ಪ್ರತಿವರ್ಷ ಯೌವನಕ್ಕೆ ಕಾಲಿಡುವ ಸುಮಾರು ಹತ್ತು ಲಕ್ಷದಷ್ಟು ಹುಡುಗಿಯರು ಗರ್ಭಿಣಿಯರಾಗುತ್ತಾರೆ. ಆದರೆ ಈ ರೀತಿಯಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಹೆರುವ ತಾಯಂದಿರಿಗೆ ಮದುವೆಯೇ ಆಗಿರುವುದಿಲ್ಲ. ಈ ಯುವ ತಾಯಂದಿರಲ್ಲಿ ನಾಲ್ಕರಲ್ಲಿ ಒಬ್ಬರು, ಮೊದಲ ಮಗುವಿಗೆ ಎರಡು ವರ್ಷ ತುಂಬುವುದರೊಳಗೆ ಎರಡನೇ ಮಗುವಿಗೆ ತಾಯಿಯಾಗಿರುತ್ತಾರೆ. “ಇದು ಹೀಗೆ ಮುಂದುವರಿಯುವುದಾದರೆ, ಇಂದು ಅಮೆರಿಕಾದಲ್ಲಿ ಹುಟ್ಟುವ ಮಕ್ಕಳಲ್ಲಿ ಅರ್ಧಕ್ಕಿಂತಲೂ ಕಡಿಮೆ ಮಕ್ಕಳು ಮಾತ್ರ ತಮ್ಮ ಬಾಲ್ಯವನ್ನು ಸ್ವಂತ ತಂದೆತಾಯಿಯೊಂದಿಗೆ ಕಳೆಯುವರು. ಆದರೆ ಅಧಿಕಾಂಶ ಮಕ್ಕಳು ಅನೇಕ ವರ್ಷಗಳನ್ನು ಕೇವಲ ತಾಯಿ ಮಾತ್ರ ಇರುವ ಕುಟುಂಬದಲ್ಲಿ ಕಳೆಯುವರು” ಎಂದು ಅಟ್ಲಾಂಟಿಕ್‌ ಮನ್ತ್‌ಲಿ ಎಂಬ ಪತ್ರಿಕೆಯು ಹೇಳುತ್ತದೆ.

ಹದಿಹರೆಯದ ಹುಡುಗಿಯರು ಗರ್ಭಿಣಿಯರಾಗುವ ಪ್ರಮಾಣವು ಅಮೆರಿಕಾದಲ್ಲಿರುವಷ್ಟು ಇನ್ಯಾವುದೇ ಪ್ರಗತಿಶೀಲ ದೇಶಗಳಲ್ಲಿ ಇಲ್ಲ. ಆದರೂ ವಿವಾಹವಾಗದೆಯೇ ಮಕ್ಕಳನ್ನು ಹೆರುವ ಸಮಸ್ಯೆಯು ಭೌಗೋಲಿಕವಾಗಿದೆ. ಇಂಗ್ಲೆಂಡ್‌ ಮತ್ತು ಫ್ರಾನ್ಸ್‌ನಂತಹ ಕೆಲವು ಯೂರೋಪಿಯನ್‌ ದೇಶಗಳಲ್ಲಿ ಈ ರೀತಿಯಾಗಿ ಹುಟ್ಟುವ ಮಕ್ಕಳ ಸಂಖ್ಯೆಯು ಹೆಚ್ಚುಕಡಿಮೆ ಅಮೆರಿಕಾದಲ್ಲಿರುವಷ್ಟೇ ಇದೆ. ದಕ್ಷಿಣ ಅಮೆರಿಕ ಮತ್ತು ಕೆಲವು ಆಫ್ರಿಕಾದ ದೇಶಗಳಲ್ಲಿ, ಹದಿಹರೆಯದ ಹುಡುಗಿಯರಿಗೆ ಹುಟ್ಟುವ ಮಕ್ಕಳ ಜನನ ಪ್ರಮಾಣವು ಪ್ರಾಯಶಃ ಅಮೆರಿಕಾಗಿಂತ ಎರಡು ಪಟ್ಟು ಹೆಚ್ಚಾಗಿದೆ. ಈ ಪಿಡುಗು ಹೆಚ್ಚಾಗುತ್ತಿರುವುದಕ್ಕೆ ಕಾರಣವೇನು?

ಈ ಪಿಡುಗಿನ ಮರೆಯಲ್ಲಿ

ಇಂದಿನ ಈ ಸ್ಥಿತಿಗೆ ಮುಖ್ಯ ಕಾರಣ, ನಾವು ಜೀವಿಸುತ್ತಿರುವ ‘ಕಠಿನಕಾಲಗಳ’ಲ್ಲಿ ನೈತಿಕ ಮಟ್ಟಗಳ ಅವನತಿಯೇ ಆಗಿದೆ. (2 ತಿಮೊಥೆಯ 3:1-5) ಇತ್ತೀಚಿನ ದಶಕಗಳಲ್ಲಿ ವಿವಾಹ ವಿಚ್ಛೇದದ ಪ್ರಮಾಣವು ಗಗನಕ್ಕೇರುತ್ತಿದೆ. ಇದರೊಂದಿಗೆ ಸಲಿಂಗೀಕಾಮ ಮತ್ತು ಇನ್ನಿತರ ಪರ್ಯಾಯ ಜೀವನ ಶೈಲಿಗಳು ಸರ್ವಸಾಧಾರಣವಾಗಿ ಅಂಗೀಕರಿಸಲ್ಪಡುತ್ತಿವೆ. ಪ್ರಸಾರ ಮಾಧ್ಯಮದಿಂದ ಬರುವ ಪ್ರಚಾರದ ಸುರಿಮಳೆಗೆ ಯುವಜನರು ತುತ್ತಾಗಿದ್ದಾರೆ. ಭಾವನೆಗಳನ್ನು ಕೆರಳಿಸುವಂಥ ಸಂಗೀತಗಳು, ಸಂಗೀತ ವಿಡಿಯೋಗಳು, ಸಡಿಲ ಲೈಂಗಿಕ ಸಂಬಂಧಗಳನ್ನು ಮಹಿಮೆಪಡಿಸುವ ಭಾವೋದ್ರೇಕಗೊಳಿಸುವ ಪತ್ರಿಕಾ ಲೇಖನಗಳು ಮತ್ತು ಜಾಹೀರಾತುಗಳು, ಟಿವಿ ಕಾರ್ಯಕ್ರಮಗಳು ಮತ್ತು ಚಲನಚಿತ್ರಗಳು ಇವೇ ಮುಂತಾದವುಗಳು ಯುವಜನರ ಮೇಲೆ ಪ್ರಭಾವವನ್ನು ಬೀರಿವೆ. ಮಾತ್ರವಲ್ಲ, ಸುಲಭವಾಗಿ ಕೈಗೆಟುಕಬಹುದಾದ ಗರ್ಭಪಾತದ ಸೌಲಭ್ಯಗಳು ಮತ್ತು ಗರ್ಭನಿರೋಧಕಗಳು ಸಹ ಸೆಕ್ಸ್‌ನಿಂದ ಯಾವುದೇ ಪರಿಣಾಮವಾಗುವುದಿಲ್ಲವೆಂಬ ವ್ಯಾಪಕವಾದ ತಪ್ಪು ಕಲ್ಪನೆಯನ್ನು ಯುವಜನರಲ್ಲಿ ಮೂಡಿಸಿವೆ. ವಿವಾಹವಾಗಿರದ ಒಬ್ಬ ತಂದೆಯು ಹೇಳುವುದು: “ಸೆಕ್ಸ್‌ ಬೇಕು ಆದರೆ ಮುಂದೆ ಯಾವುದೇ ಜವಾಬ್ದಾರಿಯು ನನಗೆ ಬೇಡ.” “ಸೆಕ್ಸ್‌ನಲ್ಲಿ ತುಂಬ ಮಜಾ ಇದೆ ಹಾಗೂ ಅದು ಒಂದು ರೀತಿ ವಿನೋದ ಕೂಡ” ಎಂದು ಇನ್ನೊಬ್ಬನು ಹೇಳುತ್ತಾನೆ.

ಇಂಥ ಪ್ರವೃತ್ತಿಯು ವಿಶೇಷವಾಗಿ ಬಡ ಯುವಕರಲ್ಲಿ ಹೆಚ್ಚಾಗಿರಬಹುದು. ಜನ ಕಿಕ್ಕಿರಿದಿರುವ ನಗರ ಪ್ರದೇಶದ ಯುವಕರನ್ನು ವ್ಯಾಪಕವಾಗಿ ಇಂಟರ್‌ವ್ಯೂ ಮಾಡಿದ ಸಂಶೋಧಕ ಎಲೈಜ ಆ್ಯಂಡರ್‌ಸನ್‌ ಗಮನಿಸಿದ್ದೇನೆಂದರೆ: “ಅನೇಕ ಹುಡುಗರು, ಸೆಕ್ಸ್‌ ಅನ್ನು ಸಮಾಜದ ಅಂತಸ್ತಿನ ಒಂದು ಬಹು ಮುಖ್ಯ ಚಿಹ್ನೆಯಾಗಿದೆಯೆಂದು ನೆನಸುತ್ತಾರೆ. ಮತ್ತು ಪ್ರತಿಸಾರಿ ಸೆಕ್ಸ್‌ನಲ್ಲಿ ಒಳಗೂಡುವುದು, ಒಬ್ಬನು ಸಾಧನೆಯ ಮತ್ತೊಂದು ಶಿಖರವನ್ನು ಮುಟ್ಟಿರುವಂತೆ ನೆನಸುತ್ತಾರೆ.” ಹಾಗೆಯೇ, ವಿವಾಹವಾಗಿರದ ಒಬ್ಬ ತಂದೆಯು ಎಚ್ಚರ! ಪತ್ರಿಕೆಗೆ ಹೇಳಿದ್ದೇನೆಂದರೆ, ಸೆಕ್ಸ್‌ ವಿಜಯಗಳನ್ನು “ಒಬ್ಬನು ಅಲಮಾರಿನಲ್ಲಿ ಜೋಡಿಸಿಡಬಹುದಾದ ಪಾರಿತೋಷಕಗಳಾಗಿ” ಹೆಚ್ಚಿನ ಕಡೆಗಳಲ್ಲಿ ವೀಕ್ಷಿಸಲಾಗುತ್ತದೆ. ಈ ರೀತಿಯ ಜಡ ಸ್ವಭಾವಕ್ಕೆ ಯಾರು ಕಾರಣರೆಂದು ಗೊತ್ತೇ? ಅನೇಕ ಸಂದರ್ಭಗಳಲ್ಲಿ, ಕಿಕ್ಕಿರಿದ ನಗರಗಳಲ್ಲಿ ವಾಸಿಸುವ ಯುವಕನ ಜೀವನದಲ್ಲಿ ಹೆಚ್ಚು ಪ್ರಭಾವಬೀರುವ ವ್ಯಕ್ತಿಗಳಾದ, “ಅವನ ವಯಸ್ಸಿನ ಹುಡುಗರ ಗುಂಪಿನವರೇ” ಆಗಿದ್ದಾರೆ. “ಆ ಹುಡುಗನು ಹೇಗೆ ನಡೆದುಕೊಳ್ಳಬೇಕೆಂಬುದನ್ನು ಅವರೇ ನಿರ್ಧರಿಸುತ್ತಾರೆ ಮತ್ತು ಅವರ ಮಟ್ಟಗಳಿಗನುಸಾರ ಅವನು ಜೀವಿಸುವುದು ಬಹಳ ಪ್ರಾಮುಖ್ಯವಾಗಿದೆ” ಎಂದು ಆ್ಯಂಡರ್‌ಸನ್‌ ವಿವರಿಸುತ್ತಾರೆ.

ಹೀಗೆ ಆ್ಯಂಡರ್‌ಸನ್‌ ಗಮನಿಸುವುದೇನೆಂದರೆ, ಅನೇಕ ಯುವಕರಿಗೆ ಲೈಂಗಿಕ ವಿಜಯವು ಕೇವಲ ಒಂದು ವಿನೋದವಾಗಿದೆಯೇ ಹೊರತು ಬೇರೇನೂ ಅಲ್ಲ. “ಅದರ ಮುಖ್ಯ ಗುರಿಯು ಇನ್ನೊಬ್ಬ ವ್ಯಕ್ತಿಯನ್ನು ಮೂರ್ಖನನ್ನಾಗಿ, ಅದರಲ್ಲೂ ವಿಶೇಷವಾಗಿ ಒಬ್ಬ ತರುಣಿಯನ್ನು ಮೂರ್ಖಳನ್ನಾಗಿ ಮಾಡುವುದೇ ಆಗಿದೆ.” ಅವರು ಮುಂದುವರಿಸುತ್ತಾ ಹೇಳುವುದು: “ಈ ಆಟದಲ್ಲಿ ಹುಡುಗನು ತನ್ನನ್ನು ಸಂಪೂರ್ಣವಾಗಿ ಅರ್ಪಿಸುವುದು ಸೇರಿರುತ್ತದೆ. ಅದರಲ್ಲಿ ಅವನ ಉಡುಗೆತೊಡುಗೆ, ಕೇಶಾಲಂಕಾರ, ರೂಪ, ಡ್ಯಾನ್ಸ್‌ ಮಾಡುವ ಸಾಮರ್ಥ್ಯ ಮತ್ತು ಮಾತಾಡುವ ಧಾಟಿಯು ಒಳಗೂಡಿರುತ್ತದೆ.” ಈ “ಆಟ”ದಲ್ಲಿ ಗೆಲ್ಲುವುದರಲ್ಲಿ ಅನೇಕ ಹುಡುಗರು ಬಹಳ ಜಾಣರಾಗಿರುತ್ತಾರೆ. ಆದರೆ ಆ್ಯಂಡರ್‌ಸನ್‌ ಗಮನಿಸುವುದು: “ಹುಡುಗಿಯು ಗರ್ಭಿಣಿಯಾದೊಡನೆ ಹುಡುಗ ಅವಳಿಂದ ದೂರ ಹೋಗಲು ಪ್ರಾರಂಭಿಸುತ್ತಾನೆ.”—ವಿವಾಹರಹಿತ ಯುವ ತಂದೆಯರು—ಬದಲಾಗುತ್ತಿರುವ ಪಾತ್ರಗಳು ಮತ್ತು ಹುಟ್ಟಿಕೊಳ್ಳುತ್ತಿರುವ ನಿಯಮಗಳು (ಇಂಗ್ಲಿಷ್‌) ಎಂಬ ಪುಸ್ತಕ. ಇದರ ಸಂಪಾದಕರು ರಾಬರ್ಟ್‌ ಲರ್‌ಮ್ಯಾನ್‌ ಮತ್ತು ಥಿಯಾಡರ ವುಮ್ಸ್‌.

ದೇವರ ದೃಷ್ಟಿಕೋನ

ಆದರೆ, ಮಕ್ಕಳನ್ನು ಹುಟ್ಟಿಸಿದರೆ ಮಾತ್ರ ಒಬ್ಬನು ನಿಜವಾದ ಗಂಡಸೆಂದು ಅನ್ನಿಸಿಕೊಳ್ಳುತ್ತಾನೋ? ಸೆಕ್ಸ್‌ ಅನ್ನುವುದು ಕೇವಲ ಒಂದು ಆಟವೇ? ಖಂಡಿತವಾಗಿಯೂ, ನಮ್ಮ ಸೃಷ್ಟಿಕರ್ತನಾದ ಯೆಹೋವ ದೇವರ ದೃಷ್ಟಿಯಲ್ಲಂತೂ ಅದು ಆಟವಲ್ಲ. ಆತನ ವಾಕ್ಯವಾದ ಬೈಬಲಿನಲ್ಲಿ, ಸೆಕ್ಸ್‌ ಒಂದು ಉದಾತ್ತ ಧ್ಯೇಯವನ್ನು ಹೊಂದಿದೆ ಎಂಬುದನ್ನು ದೇವರು ಸ್ಪಷ್ಟಪಡಿಸುತ್ತಾನೆ. ಪ್ರಥಮ ಗಂಡು ಮತ್ತು ಹೆಣ್ಣಿನ ಸೃಷ್ಟಿಯ ಕುರಿತು ಹೇಳಿದ ಬಳಿಕ ಮುಂದುವರಿಸುತ್ತಾ ಬೈಬಲ್‌ ಹೇಳುವುದು: “ದೇವರು ಅವರನ್ನು ಆಶೀರ್ವದಿಸಿ—ನೀವು ಬಹುಸಂತಾನವುಳ್ಳವರಾಗಿ ಹೆಚ್ಚಿರಿ; ಭೂಮಿಯಲ್ಲಿ ತುಂಬಿಕೊಂಡು ಅದನ್ನು ವಶಮಾಡಿಕೊಳ್ಳಿರಿ . . . ಅಂದನು.” (ಆದಿಕಾಂಡ 1:27, 28) ತಂದೆಯರು ಮಕ್ಕಳನ್ನು ಹುಟ್ಟಿಸಿ ಅವರನ್ನು ಅನಾಥರನ್ನಾಗಿ ತೊರೆದುಬಿಡುವುದು ಎಂದೂ ದೇವರ ಉದ್ದೇಶವಾಗಿರಲಿಲ್ಲ. ಅವನು ಪ್ರಥಮ ಗಂಡು ಮತ್ತು ಹೆಣ್ಣನ್ನು ಬಿಡಿಸಲಾಗದ ಬಂಧವಾಗಿರುವ ವಿವಾಹದಲ್ಲಿ ಒಂದುಗೂಡಿಸಿದನು. (ಆದಿಕಾಂಡ 2:24) ಆದುದರಿಂದಲೇ, ಪ್ರತಿಯೊಂದು ಮಗುವಿಗೂ ತಂದೆ ಮತ್ತು ತಾಯಿ ಇಬ್ಬರೂ ಇರಬೇಕೆಂಬುದು ಆತನ ಚಿತ್ತವಾಗಿತ್ತು.

ಆದರೆ, ಸ್ವಲ್ಪ ಸಮಯದರೊಳಗಾಗಿ ಮಾನವರು ಬಹು ಪತ್ನಿಗಳನ್ನು ತೆಗೆದುಕೊಳ್ಳುವುದಕ್ಕೆ ಪ್ರಾರಂಭಿಸಿದರು. (ಆದಿಕಾಂಡ 4:19) ಕೆಲವು ಆತ್ಮ ಜೀವಿಗಳು ಕೂಡ, “ಮಾನವ ಪುತ್ರಿಯರ ಮೇಲೆ ದೃಷ್ಟಿಯನ್ನಿಡಲಾರಂಭಿಸಿದರು, ಏಕೆಂದರೆ ಅವರು ತುಂಬ ಸುಂದರಿಯರಾಗಿದ್ದರು” ಎಂದು ಆದಿಕಾಂಡ 6:2 (NW) ಹೇಳುತ್ತದೆ. ಈ ದೇವದೂತರು ಮಾನವ ಶರೀರಧಾರಣೆ ಮಾಡಿದ ನಂತರ “ತಮಗಾಗಿ ಹೆಂಡತಿಯರನ್ನು ಆರಿಸಿಕೊಂಡರು,” ಅಷ್ಟೇ ಅಲ್ಲ, ಅವರು ದುರಾಶೆಯಿಂದ “ತಮಗೆ ಇಷ್ಟವಾದವರನ್ನೆಲ್ಲಾ ಆರಿಸಿಕೊಂಡರು.” ನೋಹನ ದಿನದ ಜಲಪ್ರಳಯವು ಈ ದೆವ್ವಗಳು ಆತ್ಮಕ್ಷೇತ್ರಕ್ಕೆ ಹಿಂದಿರುಗುವಂತೆ ಒತ್ತಾಯಿಸಿತು. ಆದರೆ, ಅವರು ಅಲ್ಲಿಗೆ ಹೋದರೋ? ಇಲ್ಲ. ಅವರು ಈಗ ಭೂಮಿಯ ಕ್ಷೇತ್ರದಲ್ಲೇ ಬಂಧಿಸಿಡಲ್ಪಟ್ಟಿದ್ದಾರೆಂದು ಬೈಬಲ್‌ ಸೂಚಿಸುತ್ತದೆ. (ಪ್ರಕಟನೆ 12:9-12) ಆದ್ದರಿಂದಲೇ, ಇಂದು ಸೈತಾನ ಮತ್ತು ಅವನ ದೂತರು ಜನರ ಮೇಲೆ ಅತ್ಯಂತ ಹೆಚ್ಚು ಶಕ್ತಿಶಾಲಿಯಾದ ಪ್ರಭಾವವನ್ನು ಬೀರುತ್ತಿದ್ದಾರೆ. (ಎಫೆಸ 2:2) ಇಂದಿನ ತರುಣರು ತಮಗೆ ಬೇಡವಾದ, ಪ್ರೀತಿಯಿಂದ ವಂಚಿತರಾದ ಮಕ್ಕಳ ಜನ್ಮಕ್ಕೆ ಕಾರಣರಾಗುವಾಗ ಅವರು ತಮಗರಿವಿಲ್ಲದೆಯೇ ಅಂಥ ಒಂದು ದುಷ್ಟಶಕ್ತಿಯ ಪ್ರಭಾವಕ್ಕೆ ಮಣಿಯುತ್ತಿದ್ದಾರೆ.

ಆದುದರಿಂದಲೇ ಒಂದು ಒಳ್ಳೇ ಕಾರಣಕ್ಕಾಗಿ ಬೈಬಲಿನ ವಚನಗಳು ಹೇಳುವುದು: “ದೇವರ ಚಿತ್ತವೇನಂದರೆ ನೀವು ಶುದ್ಧರಾಗಿರಬೇಕೆಂಬದೇ. ಆದದರಿಂದ ಹಾದರಕ್ಕೆ ದೂರವಾಗಿರಬೇಕು. ದೇವರನ್ನರಿಯದ ಅನ್ಯಜನಗಳಂತೆ ಕಾಮಾಭಿಲಾಷೆಗೆ ಒಳಪಡದೆ ನಿಮ್ಮಲ್ಲಿ ಪ್ರತಿಯೊಬ್ಬನು ಪವಿತ್ರವಾದ ಮನಸ್ಸಿನಿಂದಲೂ ಘನತೆಯಿಂದಲೂ ಧರ್ಮಪತ್ನಿಯನ್ನು ಸಂಪಾದಿಸಿಕೊಳ್ಳಲು ತಿಳಿಯಬೇಕು. ಈ ವಿಷಯದಲ್ಲಿ ಯಾರೂ ತನ್ನ ಸಹೋದರನನ್ನು ವಂಚಿಸಿ ಕೇಡುಮಾಡಬಾರದು. . . . ಇವೆಲ್ಲವುಗಳ ವಿಷಯದಲ್ಲಿ ಕರ್ತನು ಮುಯ್ಯಿಗೆ ಮುಯ್ಯಿ ತೀರಿಸುವವನಾಗಿದ್ದಾನೆ.”—1 ಥೆಸಲೋನಿಕ 4:3-6.

ಏನು, ‘ಹಾದರಕ್ಕೆ ದೂರವಾಗಿರುವುದೇ?’ ಎಂದು ವ್ಯಂಗವಾಗಿ ಹೇಳುತ್ತಾ, ಅನೇಕ ಯುವಕರು ಕೇಕೇ ಹಾಕಿ ನಗಬಹುದು. ಏನೇ ಆದರೂ, ಅವರದು ಯೌವನದ ಬಿಸಿ ರಕ್ತವಲ್ಲವೇ, ಮತ್ತು ಅವರ ಬಯಕೆಗಳು ಕೂಡ ಅಷ್ಟೇ ಬಲವಾದವುಗಳು! ಆದರೆ ಗಮನದಲ್ಲಿಡಿ: ಹಾದರವು ಮತ್ತೊಬ್ಬರನ್ನು ‘ವಂಚಿಸಿ ಕೇಡನ್ನುಂಟುಮಾಡುತ್ತದೆ.’ ಒಬ್ಬ ಹುಡುಗಿಯನ್ನು ಹಾಳುಮಾಡಿ ಅವಳನ್ನು ಮಗುವಿನೊಂದಿಗೆ ಒಬ್ಬ ಗಂಡನ ಸಹಕಾರವಿಲ್ಲದೆ ತ್ಯಜಿಸಿಬಿಡುವುದು ಅವಳಿಗೆ ಕೇಡನ್ನು ಉಂಟುಮಾಡಿದಂತಾಗುವುದಿಲ್ಲವೋ? ಅಷ್ಟುಮಾತ್ರವಲ್ಲ, ನೀವು ಆಕೆಗೆ ಜೆನಿಟಲ್‌ ಹರ್ಪಿಸ್‌ (ಒಳ ಜನನೇಂದ್ರಿಯದ ಸೋಂಕು), ಸಿಫಿಲಿಸ್‌, ಗನೊರಿಯಾದಂತಹ ರತಿರೋಗಗಳು ಇಲ್ಲವೇ ಏಡ್ಸ್‌ ರೋಗದ ಸೋಂಕನ್ನುಂಟುಮಾಡುವ ಅಪಾಯದ ಕುರಿತು ಯೋಚಿಸಿದ್ದೀರಾ? ನಿಜ, ಕೆಲವೊಮ್ಮೆ ಈ ರೀತಿಯ ಅಪಾಯಗಳನ್ನು ತಪ್ಪಿಸಬಹುದು. ಆದರೂ ಸಹ, ವಿವಾಹಕ್ಕೆ ಮೊದಲೇ ಲೈಂಗಿಕ ಸಂಬಂಧವು ಆ ಹುಡುಗಿಯ ಒಳ್ಳೇ ಹೆಸರನ್ನು ಕಾಪಾಡುವ ಮತ್ತು ಕನ್ಯೆಯಾಗಿ ವಿವಾಹ ಬಂಧದೊಳಗೆ ಪ್ರವೇಶಿಸುವ ಹಕ್ಕನ್ನು ವಂಚಿಸಿದಂತಾಗುತ್ತದೆ. ಹಾಗಾದರೆ, ವ್ಯಭಿಚಾರದಿಂದ ದೂರವಿರುವುದು ವ್ಯಕ್ತಿಯ ಬುದ್ಧಿವಂತಿಕೆ ಮತ್ತು ಪ್ರೌಢತೆಯನ್ನು ತೋರಿಸುತ್ತದೆ. ನಿಜ, ‘ಪ್ರತಿಯೊಬ್ಬನು ಪವಿತ್ರವಾದ ಮನಸ್ಸನ್ನು’ ಕಾಪಾಡಿಕೊಳ್ಳಬೇಕಾದರೆ ಮತ್ತು ವಿವಾಹವಾಗದ ವ್ಯಕ್ತಿಯೊಡನೆ ಅನೈತಿಕ ಸಂಬಂಧವನ್ನು ಇಟ್ಟುಕೊಳ್ಳುವುದದಿಂದ ದೂರವಿರಬೇಕಾದರೆ, ಅವನಿಗೆ ಆತ್ಮಸಂಯಮ ಮತ್ತು ದೃಢಮನಸ್ಸು ಇರಬೇಕು. ಏಕೆಂದರೆ ದೇವರು ತನ್ನ ನಿಯಮಗಳ ಮೂಲಕ ನಮ್ಮ ‘ಸ್ವಂತ ಪ್ರಯೋಜನಕ್ಕಾಗಿ ಬೋಧಿಸುವವನಾಗಿದ್ದಾನೆ’ (NW) ಎಂದು ಯೆಶಾಯ 48:17, 18ನೇ ವಚನಗಳು ನಮಗೆ ಹೇಳುತ್ತವೆ.

“ಪೌರುಷವುಳ್ಳವರಾಗಿ ಮುನ್ನಡೆಯಿರಿ”

ಹಾಗಾದರೆ, ಒಬ್ಬ ಯುವಕನು ತನ್ನ ಪುರುಷತ್ವವನ್ನು ಹೇಗೆ ರುಜುಪಡಿಸಬಲ್ಲನು? ಖಂಡಿತವಾಗಿ, ಹೆತ್ತವರ ಹೆಸರೇ ಗೊತ್ತಿಲ್ಲದ ಮಕ್ಕಳನ್ನು ಹುಟ್ಟಿಸುವುದರಿಂದಂತೂ ಅಲ್ಲ. ಬೈಬಲ್‌ ಬುದ್ಧಿವಾದ ಹೇಳುವುದು: “ಎಚ್ಚರವಾಗಿರಿ, ಕ್ರಿಸ್ತನಂಬಿಕೆಯಲ್ಲಿ ದೃಢವಾಗಿ ನಿಲ್ಲಿರಿ. ಶೂರರಾಗಿರಿ, [“ಪೌರುಷವುಳ್ಳವರಾಗಿ ಮುನ್ನಡೆಯಿರಿ,” NW] ಬಲಗೊಳ್ಳಿರಿ. ನೀವು ಮಾಡುವದನ್ನೆಲ್ಲಾ ಪ್ರೀತಿಯಿಂದ ಮಾಡಿರಿ.”—1 ಕೊರಿಂಥ 16:13, 14.

‘ಪೌರುಷವುಳ್ಳವರಾಗಿರುವುದರಲ್ಲಿ’ ಎಚ್ಚರಿಕೆಯಿಂದಿರುವುದು, ನಂಬಿಕೆಯಲ್ಲಿ ದೃಢರಾಗಿರುವುದು, ಧೈರ್ಯವಂತರಾಗಿರುವುದು ಮತ್ತು ಪ್ರೀತಿಯುಳ್ಳವರಾಗಿರುವುದು ಒಳಗೂಡಿದೆ ಎಂಬುದನ್ನು ಗಮನಿಸಿ. ನಿಸ್ಸಂದೇಹವಾಗಿ, ಈ ತತ್ವಗಳು ಗಂಡು ಮತ್ತು ಹೆಣ್ಣಿಗೆ ಒಂದೇ ರೀತಿಯಲ್ಲಿ ಅನ್ವಯಿಸುತ್ತವೆ. ಈ ರೀತಿಯ ಆತ್ಮಿಕ ಗುಣಗಳನ್ನು ನೀವು ಬೆಳೆಸಿಕೊಳ್ಳುವುದಾದರೆ, ಒಬ್ಬ ನಿಜವಾದ ಪೌರುಷವುಳ್ಳ ಗಂಡಸಾಗಿ, ಜನರು ನಿಮ್ಮನ್ನು ಗೌರವದಿಂದ ಕಾಣಲು ಮತ್ತು ನಿಮ್ಮನ್ನು ಮೆಚ್ಚಲು ಒಳ್ಳೇ ಕಾರಣವಿರುತ್ತದೆ! ಇದುವರೆಗೂ ಜೀವಿಸಿದವರಲ್ಲೇ ಅತ್ಯಂತ ಮಹಾನ್‌ ಪುರುಷನಾದ ಯೇಸು ಕ್ರಿಸ್ತನಿಂದ ಪಾಠವನ್ನು ಕಲಿಯಿರಿ. ಹಿಂಸೆ ಮತ್ತು ಮರಣದ ಎದುರಿನಲ್ಲೂ ಅವನ ಪೌರುಷ ಮತ್ತು ಧೈರ್ಯದಿಂದ ಕೂಡಿದ ವರ್ತನೆಯ ಕುರಿತು ಸ್ವಲ್ಪ ಯೋಚಿಸಿನೋಡಿ. ಆದರೆ, ಯೇಸು ವಿರುದ್ಧ ಲಿಂಗದವರೊಡನೆ ಅಂದರೆ ಸ್ತ್ರೀಯರೊಂದಿಗೆ ಹೇಗೆ ನಡೆದುಕೊಂಡನು?

ಖಂಡಿತವಾಗಿಯೂ ಯೇಸುವಿಗೆ ಸ್ತ್ರೀಯರ ಸಹವಾಸವನ್ನು ಆನಂದಿಸುವ ಅವಕಾಶ ಇತ್ತು. ಅನೇಕ ಸ್ತ್ರೀಯರು ಕೂಡ ಅವನಿಗೆ ಶಿಷ್ಯರಾಗಿದ್ದರು. ಅವರಲ್ಲಿ ಕೆಲವರು “ತಮ್ಮ ಆಸ್ತಿಯಿಂದ ಅವನಿಗೆ [ಮತ್ತು ಅವನ ಶಿಷ್ಯರಿಗೆ] ಕೊಟ್ಟು ಉಪಚಾರಮಾಡುತ್ತಿದ್ದರು.” (ಲೂಕ 8:3) ವಿಶೇಷವಾಗಿ ಅವನು ಲಾಜರನ ಇಬ್ಬರು ಸಹೋದರಿಯರೊಂದಿಗೆ ಹೆಚ್ಚು ಆಪ್ತನಾಗಿದ್ದನು. ನಿಜ ಹೇಳಬೇಕೆಂದರೆ, “ಮಾರ್ಥಳಲ್ಲಿಯೂ ಆಕೆಯ ತಂಗಿಯಲ್ಲಿಯೂ ಲಾಜರನಲ್ಲಿಯೂ ಯೇಸುವಿಗೆ ಪ್ರೀತಿ ಇತ್ತು” ಎಂದು ಬೈಬಲ್‌ ಹೇಳುತ್ತದೆ. (ಯೋಹಾನ 11:5) ಯೇಸು, ಬುದ್ಧಿಚಾತುರ್ಯ, ಚೆಲುವು ಅಥವಾ ಆಕರ್ಷಕ ಮೈಮಾಟವನ್ನು ದೈವದತ್ತವಾಗಿ ಪಡೆದಿದ್ದನು ಮತ್ತು ಅವು ಅವನನ್ನು ಪರಿಪೂರ್ಣ ವ್ಯಕ್ತಿಯಾಗಿ ಖಂಡಿತವಾಗಿ ಮಾಡಿದ್ದವು. ಆದರೆ ಯೇಸು ಈ ಸ್ತ್ರೀಯರನ್ನು ಅನೈತಿಕ ಕ್ರಿಯೆಗಳಿಗಾಗಿ ಮೋಡಿಮಾಡಲು ಅವುಗಳನ್ನು ಉಪಯೋಗಿಸಿದನೋ? ಅದಕ್ಕೆ ಬದಲಾಗಿ, “ಆತನು ಯಾವ ಪಾಪವನ್ನೂ ಮಾಡಲಿಲ್ಲ” ಎಂದು ಬೈಬಲ್‌ ಯೇಸುವಿನ ಕುರಿತು ಹೇಳುತ್ತದೆ. (1 ಪೇತ್ರ 2:22) ಅಷ್ಟೇ ಏಕೆ, ಪಾಪಿಯೆಂದು ಎಲ್ಲರೂ ಪರಿಗಣಿಸುತ್ತಿದ್ದ ಹೆಂಗಸಿನೊಂದಿಗೆ ಕೂಡ ಯೇಸು ಅಸಭ್ಯವಾಗಿ ನಡೆದುಕೊಳ್ಳಲಿಲ್ಲ. ಪ್ರಾಯಶಃ ಒಬ್ಬ ಸೂಳೆಯಾಗಿದ್ದವಳು “ಆತನ ಪಾದಗಳ ಬಳಿಯಲ್ಲಿ ನಿಂತುಕೊಂಡು ಅಳುತ್ತಾ ತನ್ನ ಕಣ್ಣೀರಿನಿಂದ ಆತನ ಪಾದಗಳನ್ನು ತ್ಯಾವಮಾಡಿ ತನ್ನ ತಲೇಕೂದಲಿನಿಂದ ಒರಸಿ ಅವುಗಳಿಗೆ ಮುದ್ದಿಟ್ಟು ಆ ತೈಲವನ್ನು ಹಚ್ಚಿದಳು.” (ಲೂಕ 7:37, 38) ಈ ಅಸಹಾಯಕ ಹೆಂಗಸಿನ ಸ್ಥಿತಿಯನ್ನು ಸದುಪಯೋಗಮಾಡಿಕೊಳ್ಳುವ ಆಲೋಚನೆ ಕೂಡ ಯೇಸುವಿನ ಮನಸ್ಸಿನಲ್ಲಿ ಬರಲಿಲ್ಲ! ಹೌದು, ಪುರುಷತ್ವದ ಗುರುತಾಗಿ ತನ್ನ ಭಾವನೆಗಳನ್ನು ಹತೋಟಿಯಲ್ಲಿಟ್ಟುಕೊಳ್ಳುವ ಸಾಮರ್ಥ್ಯವನ್ನು ಅವನು ಪ್ರದರ್ಶಿಸಿದನು. ಅವನು ಸ್ತ್ರೀಯರನ್ನು, ಕಾಮತೃಷೆಯನ್ನು ತಣಿಸುವ ವಸ್ತುವಾಗಿ ನೋಡದೆ, ಪ್ರೀತಿ ಮತ್ತು ಗೌರವಕ್ಕೆ ಪಾತ್ರರಾಗಿರುವ ವ್ಯಕ್ತಿಗಳಾಗಿ ನೋಡಿದನು.

ನೀವು ಒಬ್ಬ ಯುವ ಕ್ರೈಸ್ತನಾಗಿರುವುದಾದರೆ, ನಿಮ್ಮ ಕೆಲವು ಯುವ ಸ್ನೇಹಿತರನ್ನು ಹಿಂಬಾಲಿಸುವ ಬದಲಾಗಿ ಕ್ರಿಸ್ತನ ಮಾದರಿಯನ್ನು ಅನುಸರಿಸಿ. ಹಾಗೆ ಮಾಡುವುದಾದರೆ, ಅದು ಇತರರನ್ನು ‘ವಂಚಿಸಿ ಕೇಡನ್ನುಂಟುಮಾಡುವುದರಿಂದ’ ನಿಮ್ಮನ್ನು ದೂರವಿರಿಸುವುದು. ಅಷ್ಟುಮಾತ್ರವಲ್ಲ, ಹಾದರಕ್ಕೆ ಹುಟ್ಟುವ ಮಗುವಿನ ತಂದೆಯಾಗುವ ದುಃಖಭರಿತ ಅನುಭವದಿಂದ ಕೂಡ ನಿಮ್ಮನ್ನು ಕಾಪಾಡುವುದು. ನಿಜ, ವ್ಯಭಿಚಾರದಿಂದ ನೀವು ದೂರವಿರುವುದನ್ನು ನೋಡಿ ಇತರರು ನಿಮ್ಮನ್ನು ಹಾಸ್ಯಮಾಡಬಹುದು. ಆದರೆ, ನಿಮ್ಮ ಸ್ನೇಹಿತರ ಕ್ಷಣಿಕವಾದ ಮೆಚ್ಚುಗೆಗಿಂತಲೂ ದೇವರ ನಿರಂತರ ಮೆಚ್ಚುಗೆಯನ್ನು ಸಂಪಾದಿಸುವುದಾದರೆ ಕೊನೆಯಲ್ಲಿ ಅದು ನಿಮಗೆ ಹೆಚ್ಚು ಪ್ರಯೋಜನವನ್ನು ತರುವುದು.—ಜ್ಞಾನೋಕ್ತಿ 27:11.

ಒಬ್ಬ ಯುವಕನು ಒಂದು ಕಾಲದಲ್ಲಿ ಅನೈತಿಕ ಜೀವನವನ್ನು ನಡೆಸಿದ್ದಿರಬಹುದು. ಆದರೆ ಈಗ ಅವನು ತನ್ನ ಅನೈತಿಕ ಮಾರ್ಗದಿಂದ ತಿರುಗಿ ನಿಜವಾದ ಪಶ್ಚಾತ್ತಾಪವನ್ನು ತೋರಿಸಿರುವುದಾದರೆ ಆಗೇನು? ಹಾಗಿರುವಲ್ಲಿ, ಲೈಂಗಿಕ ದುರ್ನಡತೆಯಲ್ಲಿ ಒಳಗೂಡಿದ್ದ ಪಶ್ಚಾತ್ತಾಪಿ ಅರಸನಾದ ದಾವೀದನಿಗಿದ್ದಂತೆ, ಅವನು ಕೂಡ ದೇವರು ಕ್ಷಮಿಸುವನೆಂಬ ಭರವಸೆಯನ್ನು ಇಟ್ಟುಕೊಳ್ಳಬಹುದು. (2 ಸಮುವೇಲ 11:2-5; 12:13; ಕೀರ್ತನೆ 51:1, 2) ಆದರೆ ವಿವಾಹಕ್ಕೆ ಮುಂಚೆಯೇ ಹುಡುಗಿಯು ಗರ್ಭಿಣಿಯಾಗುವುದಾದರೆ, ಆಗಲೂ ಕೂಡ ಒಬ್ಬ ಯುವಕನು ಕೆಲವು ಗಂಭೀರ ನಿರ್ಧಾರಗಳನ್ನು ಮಾಡಬೇಕಾಗಿರುತ್ತದೆ. ಅವನು ಆ ಹುಡುಗಿಯನ್ನು ಮದುವೆಯಾಗಬೇಕೋ? ಹುಟ್ಟಲಿರುವ ತನ್ನ ಮಗುವಿಗಾಗಿ ಅವನು ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕೋ? ಮುಂದಿನ ಲೇಖನವು ಈ ಪ್ರಶ್ನೆಗಳ ಕುರಿತು ಚರ್ಚಿಸುವುದು.

[ಪುಟ 15ರಲ್ಲಿರುವ ಚಿತ್ರ]

ಸೆಕ್ಸ್‌ನಿಂದ ಯಾವುದೇ ಪರಿಣಾಮಗಳಿಲ್ಲವೆಂಬ ತಪ್ಪು ಕಲ್ಪನೆ ಅನೇಕ ಯುವಕರಲ್ಲಿದೆ