ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಯುದ್ಧವು ನಿಮ್ಮದಲ್ಲ, ದೇವರದೇ”

“ಯುದ್ಧವು ನಿಮ್ಮದಲ್ಲ, ದೇವರದೇ”

“ಯುದ್ಧವು ನಿಮ್ಮದಲ್ಲ, ದೇವರದೇ”

ಡಬ್ಲ್ಯೂ. ಗ್ಲೆನ್‌ ಹೌವ್‌ ಹೇಳಿದಂತೆ

ಕೆನಡದಲ್ಲಿರುವ ಯೆಹೋವನ ಸಾಕ್ಷಿಗಳು ಕಳೆದ ಅರುವತ್ತು ವರ್ಷಗಳಲ್ಲಿ ಅನೇಕ ಕಾನೂನುಸಂಬಂಧಿತ ಹೋರಾಟಗಳನ್ನು ನಡೆಸಿದ್ದಾರೆ. ಅವರಿಗೆ ದೊರಕಿರುವ ವಿಜಯಗಳು ಭೂವ್ಯಾಪಕವಾಗಿರುವ ನ್ಯಾಯಾಂಗ ಇಲಾಖೆಗಳ ಗಮನವನ್ನು ಸೆಳೆದಿವೆ. ಈ ಸಂಘರ್ಷಗಳಲ್ಲಿ ನಾನು ವಹಿಸಿದ ಪಾತ್ರಕ್ಕಾಗಿ, ಅಮೆರಿಕದ ವಕೀಲರ ಸಂಘವು ಇತ್ತೀಚೆಗೆ ಧೀರ ವಕಾಲತ್ತಿಗಾಗಿ ನನ್ನನ್ನು ಪುರಸ್ಕರಿಸಿತು. ಯೆಹೋವನ ಸಾಕ್ಷಿಗಳನ್ನು ಒಳಗೊಂಡಿರುವ ಮೊಕದ್ದಮೆಗಳು, “ಸರಕಾರದ ದೌರ್ಜನ್ಯಗಳ ವಿರುದ್ಧ ಮಹತ್ವಪೂರ್ಣವಾದ ರಕ್ಷಣೆಯ ಗೋಡೆಗಳಂತಾದವು . . . ಯಾಕೆಂದರೆ, ಎಲ್ಲ ಕೆನಡವಾಸಿಗಳ ಸ್ವಾತಂತ್ರ್ಯದ ಹಕ್ಕುಗಳನ್ನು ಅಂಗೀಕರಿಸಿ ಸಂರಕ್ಷಿಸುವ, ಕಾನೂನುಬದ್ಧವಾಗಿ ಅಂಗೀಕೃತವಾದ ಹಕ್ಕುಗಳ ಮಸೂದೆಯನ್ನು ಇವು ರಚಿಸಿದವೆಂದು” ಆ ಪುರಸ್ಕಾರ ಸಮಾರಂಭದಲ್ಲಿ ಹೇಳಲಾಯಿತು. ಈ ಕೋರ್ಟ್‌ ಮೊಕದ್ದಮೆಗಳಲ್ಲಿ ಕೆಲವೊಂದರ ವಿವರಗಳನ್ನು ನಾನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ ಮತ್ತು ನಾನು ಕಾನೂನು ಹಾಗೂ ಯೆಹೋವನ ಸಾಕ್ಷಿಗಳೊಂದಿಗೆ ಒಳಗೂಡಿದ್ದು ಹೇಗೆಂಬುದನ್ನು ತಿಳಿಸಲು ಇಚ್ಛಿಸುತ್ತೇನೆ.

ಜಾರ್ಜ್‌ ರಿಕ್ಸ್‌ ಎಂಬುವವರು 1924ರಲ್ಲಿ ಕೆನಡದ ಟೊರಾಂಟೊದಲ್ಲಿದ್ದ ನನ್ನ ಹೆತ್ತವರನ್ನು ಸಂದರ್ಶಿಸಿದರು. ಅವರೊಬ್ಬ ಬೈಬಲ್‌ ವಿದ್ಯಾರ್ಥಿಯಾಗಿದ್ದರು. ಆ ಸಮಯದಲ್ಲಿ ಯೆಹೋವನ ಸಾಕ್ಷಿಗಳನ್ನು ಹೀಗೆ ಕರೆಯಲಾಗುತ್ತಿತ್ತು. ಗಿಡ್ಡದೇಹಿಯಾಗಿದ್ದ ಬೆಸ್ಸಿ ಹೌವ್‌ ಎಂಬ ಹೆಸರಿನ ಒಬ್ಬ ಮಹಿಳೆಯು ಅವರನ್ನು ಒಂದು ಚರ್ಚೆಗಾಗಿ ಮನೆಯೊಳಗೆ ಆಮಂತ್ರಿಸಿದಳು. ಇವರು ನನ್ನ ತಾಯಿಯಾಗಿದ್ದರು. ನಾನಾಗ ಐದು ವರ್ಷದವನು ಮತ್ತು ನನ್ನ ತಮ್ಮ ಜೋ ಮೂರು ವರ್ಷದವನಾಗಿದ್ದನು.

ಸ್ವಲ್ಪ ಸಮಯದೊಳಗೆ ನನ್ನ ತಾಯಿ ಟೊರಾಂಟೊದಲ್ಲಿ ಬೈಬಲ್‌ ವಿದ್ಯಾರ್ಥಿಗಳ ಕೂಟಗಳಿಗೆ ಹಾಜರಾಗಲಾರಂಭಿಸಿದರು. 1929ರಲ್ಲಿ ಅವರೊಬ್ಬ ಪಯನೀಯರ್‌ ಅಥವಾ ಪೂರ್ಣ ಸಮಯದ ಶುಶ್ರೂಷಕರಾದರು. ಅವರು 1969ರಲ್ಲಿ ತಮ್ಮ ಭೂಜೀವಿತವನ್ನು ಮುಗಿಸುವವರೆಗೂ ಆ ಚಟುವಟಿಕೆಯಲ್ಲಿ ಮುಂದುವರಿದರು. ಅವರು ದೃಢಸಂಕಲ್ಪದಿಂದ ಮತ್ತು ಬೇಸರಿಸದೆ ಸತತವಾಗಿ ನಡೆಸಿದ ಈ ಶುಶ್ರೂಷೆಯು, ಮಕ್ಕಳಾಗಿದ್ದ ನಮಗೆ ಒಂದು ಒಳ್ಳೆಯ ಮಾದರಿಯಾಗಿತ್ತು ಮತ್ತು ಅನೇಕ ಜನರು ಬೈಬಲ್‌ ಸತ್ಯದ ಜ್ಞಾನವನ್ನು ಪಡೆದುಕೊಳ್ಳಲು ಸಹಾಯಮಾಡಿತು.

ನನ್ನ ತಂದೆ ಫ್ರಾಂಕ್‌ ಹೌವ್‌, ಒಬ್ಬ ಶಾಂತಸ್ವಭಾವದ ವ್ಯಕ್ತಿಯಾಗಿದ್ದರು. ಆರಂಭದಲ್ಲಿ ಅವರು ತಾಯಿಯ ಧಾರ್ಮಿಕ ಚಟುವಟಿಕೆಗಳನ್ನು ವಿರೋಧಿಸುತ್ತಿದ್ದರು. ಆದರೆ ಅವರನ್ನು ಸಂದರ್ಶಿಸಿ, ಅವರೊಂದಿಗೆ ಮಾತಾಡುವಂತೆ ನಮ್ಮ ತಾಯಿ ಬುದ್ಧಿವಂತಿಕೆಯಿಂದ ಸಂಚರಣ ಶುಶ್ರೂಷಕರನ್ನು ಮನೆಗೆ ಆಮಂತ್ರಿಸುತ್ತಿದ್ದರು. ಇವರಲ್ಲೊಬ್ಬರು ಜಾರ್ಜ್‌ ಯಂಗ್‌ ಆಗಿದ್ದರು. ಕಾಲ ಕಳೆದಂತೆ ತಂದೆಯ ಮನೋಭಾವವು ಬದಲಾಯಿತು. ತನ್ನ ಕುಟುಂಬದ ಮೇಲೆ ಬೈಬಲ್‌ ಸತ್ಯದಿಂದಾಗಿ ಉಂಟಾಗುತ್ತಿರುವ ಒಳ್ಳೆಯ ಪರಿಣಾಮವನ್ನು ನೋಡಿ ಅವರು ನಮ್ಮನ್ನು ಬೆಂಬಲಿಸಲಾರಂಭಿಸಿದರು. ಆದರೆ ಕೊನೇ ವರೆಗೂ ಅವರೊಬ್ಬ ಸಾಕ್ಷಿಯಾಗಲಿಲ್ಲ.

ದೇವರನ್ನು ಸೇವಿಸುವ ನಿರ್ಣಯವನ್ನು ಮಾಡುವುದು

1936ರಲ್ಲಿ ನಾನು ಪ್ರೌಢ ಶಾಲಾ ಶಿಕ್ಷಣವನ್ನು ಮುಗಿಸಿದೆ. ನಾನು ಹದಿಪ್ರಾಯದವನಾಗಿದ್ದಾಗ ನನಗೆ ಆತ್ಮಿಕ ವಿಷಯಗಳ ಕುರಿತು ಅಷ್ಟೇನೂ ಆಸಕ್ತಿಯಿರಲಿಲ್ಲ. ಅದು ಆರ್ಥಿಕ ಹಾಗೂ ಕೈಗಾರಿಕಾ ಕುಸಿತದ ಸಮಯವಾಗಿತ್ತು ಮತ್ತು ಈ ಕಾರಣದಿಂದ ಉದ್ಯೋಗಗಳು ಸಿಗುವುದು ಕಷ್ಟಕರವಾಗಿತ್ತು. ಆದುದರಿಂದ ನಾನು ಟೊರಾಂಟೊದ ವಿಶ್ವವಿದ್ಯಾನಿಲಯಕ್ಕೆ ಸೇರಿದೆ. 1940ರಲ್ಲಿ ನಾನು ಕಾನೂನು ಕಾಲೇಜಿಗೆ ಹೋಗಲು ನಿರ್ಣಯಿಸಿದೆ. ಈ ನಿರ್ಣಯದಿಂದ ನನ್ನ ತಾಯಿಗೆ ಸ್ವಲ್ಪವೂ ಆಶ್ಚರ್ಯವಾಗಲಿಲ್ಲ. ಯಾಕೆಂದರೆ ನಾನು ಮಗುವಾಗಿದ್ದಾಗ, ಅವರು ಎಷ್ಟೋ ಬಾರಿ ನನ್ನ ಮೇಲೆ ರೇಗಿ, ಹೀಗಂದಿದ್ದರು: “ಈ ತುಂಟನು ಯಾವಾಗಲೂ ವಾದಮಾಡುತ್ತಿರುತ್ತಾನೆ! ಇವನು ದೊಡ್ಡವನಾದಾಗ ಒಬ್ಬ ವಕೀಲನಾಗುವನೋ ಏನೋ!”

ನಾನು ಕಾನೂನು ಕಾಲೇಜಿನ ಶಿಕ್ಷಣವನ್ನು ಇನ್ನೇನು ಆರಂಭಿಸಲಿದ್ದಾಗ, ಅಂದರೆ ಜುಲೈ 4, 1940ರಲ್ಲಿ ಕೆನಡ ಸರಕಾರವು ಯಾವುದೇ ಮುನ್ಸೂಚನೆಯಿಲ್ಲದೆ ಯೆಹೋವನ ಸಾಕ್ಷಿಗಳನ್ನು ನಿಷೇಧಿಸಿತು. ಇದೇ ನನ್ನ ಜೀವಿತವನ್ನು ಬದಲಾಯಿಸಿದ ಹಂತವಾಗಿತ್ತು. ನಿರ್ದೋಷಿಗಳೂ, ನಮ್ರರೂ ಆದ ಜನರಿರುವ ಈ ಚಿಕ್ಕ ಸಂಸ್ಥೆಯ ಮೇಲೆ ಸರಕಾರವು ತನ್ನ ಎಲ್ಲ ಶಕ್ತಿಯನ್ನು ಪ್ರಯೋಗಿಸಿದಾಗ, ಯೆಹೋವನ ಸಾಕ್ಷಿಗಳು ಯೇಸುವಿನ ನಿಜ ಹಿಂಬಾಲಕರಾಗಿದ್ದಾರೆಂಬ ಮಾತು ನನಗೆ ಮನದಟ್ಟಾಯಿತು. ಯಾಕೆಂದರೆ ಯೇಸು ಪ್ರವಾದಿಸಿದಂತೆಯೇ, ‘[ಅವನ] ಹೆಸರಿನ ನಿಮಿತ್ತ ಅವರನ್ನು ಎಲ್ಲಾ ಜನಾಂಗಗಳವರು ಹಗೆಮಾಡಿದರು.’ (ಮತ್ತಾಯ 24:9) ಈ ಸಂಸ್ಥೆಯನ್ನು ಬೆಂಬಲಿಸುತ್ತಿರುವ ದೇವರ ಸೇವೆ ಮಾಡುವೆನೆಂಬ ದೃಢನಿರ್ಧಾರವನ್ನು ಮಾಡಿದೆ. ಯೆಹೋವ ದೇವರಿಗೆ ಮಾಡಿದಂತಹ ಸಮರ್ಪಣೆಯನ್ನು ನಾನು 1941ರ ಫೆಬ್ರವರಿ 10ರಂದು ನೀರಿನ ದೀಕ್ಷಾಸ್ನಾನದ ಮೂಲಕ ಸಂಕೇತಿಸಿದೆ.

ನಾನು ಆ ಕೂಡಲೆ ಪಯನೀಯರ್‌ ಸೇವೆಯನ್ನು ಆರಂಭಿಸಲು ಬಯಸಿದೆ. ಆದರೆ ಆ ಸಮಯದಲ್ಲಿ ಕೆನಡದಲ್ಲಿನ ಸಾರುವ ಕೆಲಸದ ಮುಂದಾಳತ್ವ ವಹಿಸುತ್ತಿದ್ದ ಜ್ಯಾಕ್‌ ನೇತನ್‌ರವರು, ನನ್ನ ಕಾನೂನುಶಾಸ್ತ್ರದ ಶಿಕ್ಷಣವನ್ನು ಮುಗಿಸುವಂತೆ ನನ್ನನ್ನು ಉತ್ತೇಜಿಸಿದರು. ನಾನು ಕಾನೂನು ಶಿಕ್ಷಣವನ್ನು ಮುಗಿಸಿ, ಮೇ 1943ರಲ್ಲಿ ಪದವೀಧರನಾದೆ. ತದನಂತರ ನಾನು ಪಯನೀಯರ್‌ ಸೇವೆಯನ್ನಾರಂಭಿಸಿದೆ. ಆಗಸ್ಟ್‌ ತಿಂಗಳಿನಲ್ಲಿ, ನಾನು ಟೊರಾಂಟೊದಲ್ಲಿರುವ ವಾಚ್‌ ಟವರ್‌ ಸೊಸೈಟಿಯ ಬ್ರಾಂಚ್‌ ಆಫೀಸಿನಲ್ಲಿ ಸೇವೆಸಲ್ಲಿಸುತ್ತಾ, ಯೆಹೋವನ ಸಾಕ್ಷಿಗಳು ಎದುರಿಸುತ್ತಿದ್ದ ಕಾನೂನುಸಂಬಂಧಿತ ಸಮಸ್ಯೆಗಳನ್ನು ನಿಭಾಯಿಸಲು ಸಹಾಯಮಾಡುವಂತೆ ನನಗೆ ಆಮಂತ್ರಣ ನೀಡಲಾಯಿತು. ಮುಂದಿನ ತಿಂಗಳು ನನ್ನನ್ನು ಕೆನಡದ ಆಂಟಾರಿಯೊದಲ್ಲಿ ವಕೀಲರ ಸಂಘಕ್ಕೆ ಸೇರಿಸಲಾಯಿತು.

ಸುವಾರ್ತೆಯನ್ನು ಕಾನೂನಿನ ಸಹಾಯದಿಂದ ಸಂರಕ್ಷಿಸುವುದು

ಎರಡನೆಯ ವಿಶ್ವ ಯುದ್ಧವು ಬಿರುಸಿನಿಂದ ನಡೆಯುತ್ತಿತ್ತು ಮತ್ತು ಕೆನಡದಲ್ಲಿ ಸಾಕ್ಷಿಗಳು ಇನ್ನೂ ನಿಷೇಧದ ಕೆಳಗಿದ್ದರು. ಕೇವಲ ಯೆಹೋವನ ಸಾಕ್ಷಿಗಳಾಗಿರುವ ಕಾರಣಕ್ಕೋಸ್ಕರ ಸ್ತ್ರೀಪುರುಷರನ್ನು ಜೈಲಿಗೆ ಕಳುಹಿಸಲಾಗುತ್ತಿತ್ತು. ಮಕ್ಕಳನ್ನು ಶಾಲೆಯಿಂದ ತೆಗೆದುಹಾಕಲಾಗುತ್ತಿತ್ತು, ಮತ್ತು ಕೆಲವರನ್ನು ಅನಾಥ ಗೃಹಗಳಿಗೂ ಸೇರಿಸಲಾಗುತ್ತಿತ್ತು. ಯಾಕೆಂದರೆ ಅವರು ಧ್ವಜವಂದನೆ ಅಥವಾ ರಾಷ್ಟ್ರ ಗೀತೆಯನ್ನು ಹಾಡುವಂತಹ ದೇಶಭಕ್ತಿಯ ಆರಾಧನಾ ಕ್ರಿಯೆಗಳಲ್ಲಿ ಒಳಗೂಡುತ್ತಿರಲಿಲ್ಲ. ಸರಕಾರ ಮತ್ತು ರಕ್ಷಣೆ: ಯೆಹೋವನ ಸಾಕ್ಷಿಗಳು ಮತ್ತು ಪೌರ ಹಕ್ಕುಗಳಿಗಾಗಿ ಅವರ ಹೋರಾಟ (ಇಂಗ್ಲಿಷ್‌) ಎಂಬ ಶೀರ್ಷಿಕೆಯುಳ್ಳ ಪುಸ್ತಕವನ್ನು ಬರೆದ ಪ್ರೊಫೆಸರ್‌ ವಿಲ್ಯಮ್‌ ಕಾಪ್ಲಾನ್‌ ಹೇಳಿದ್ದೇನೆಂದರೆ, “ಸಾಕ್ಷಿಗಳನ್ನು ಸಾರ್ವಜನಿಕವಾಗಿ ದೂಷಿಸಲಾಯಿತು. ಅಷ್ಟುಮಾತ್ರವಲ್ಲದೆ, ಅವರು ರಾಜ್ಯ ಸರಕಾರದ ಹಸ್ತಕ್ಷೇಪ ಹಾಗೂ ಅಸಹಿಷ್ಣು ಸರಕಾರದ ಖಾಸಗಿ ದಾಳಿಗಳಿಗೆ ತುತ್ತಾದರು. ಅವರು ಯುದ್ಧದ ಉತ್ಸಾಹ ಹಾಗೂ ದೇಶಭಕ್ತಿಯಲ್ಲಿ ಮುಳುಗಿದ್ದ ಪ್ರಜೆಗಳ ಬಹಿರಂಗ ದ್ವೇಷಕ್ಕೂ ಗುರಿಯಾಗಿದ್ದರು.”

ಸಾಕ್ಷಿಗಳು ನಿಷೇಧವನ್ನು ತೆಗೆದುಹಾಕಲು ತುಂಬ ಪ್ರಯತ್ನಿಸುತ್ತಿದ್ದರಾದರೂ, ಅವರು ಸಫಲರಾಗಲಿಲ್ಲ. ಆದರೆ ಇದ್ದಕ್ಕಿದ್ದಂತೆ, 1943ರ ಅಕ್ಟೋಬರ್‌ 14ರಂದು ನಿಷೇಧವನ್ನು ತೆಗೆದುಹಾಕಲಾಯಿತು. ಹೀಗಿದ್ದರೂ, ಸಾಕ್ಷಿಗಳು ಇನ್ನೂ ಸೆರೆಮನೆಗಳಲ್ಲಿ ಮತ್ತು ಜೀತ ಶಿಬಿರಗಳಲ್ಲಿದ್ದರು, ಮಕ್ಕಳಿಗೆ ಸಾರ್ವಜನಿಕ ಶಾಲಾ ಶಿಕ್ಷಣವನ್ನು ನಿರಾಕರಿಸಲಾಗುತ್ತಿತ್ತು, ಹಾಗೂ ವಾಚ್‌ ಟವರ್‌ ಬೈಬಲ್‌ ಆ್ಯಂಡ್‌ ಟ್ರ್ಯಾಕ್ಟ್‌ ಸೊಸೈಟಿ ಮತ್ತು ಟೊರಾಂಟೊದಲ್ಲಿರುವ ನಮ್ಮ ಆಸ್ತಿಯ ಒಡೆತನವಿದ್ದ ಇಂಟರ್‌ನ್ಯಾಷನಲ್‌ ಬೈಬಲ್‌ ಸ್ಟೂಡೆಂಟ್ಸ್‌ ಸಂಘದ ವಿರುದ್ಧ ಇದ್ದ ನಿಷೇಧವು ಮುಂದುವರಿಯಿತು.

ಆ ಸಮಯದಲ್ಲಿ ವಾಚ್‌ ಟವರ್‌ ಸೊಸೈಟಿಯ ಅಧ್ಯಕ್ಷರಾಗಿದ್ದ ನೇತನ್‌ ನಾರ್‌ ಮತ್ತು ಸೊಸೈಟಿಯ ಉಪಾಧ್ಯಕ್ಷರು ಹಾಗೂ ವಕೀಲರಾಗಿದ್ದ ಹೇಡನ್‌ ಕೊವಿಂಗ್ಟನ್‌ರೊಂದಿಗೆ ಸಮಾಲೋಚನೆಯನ್ನು ನಡೆಸಲು, ಕೆನಡದ ಬ್ರಾಂಚ್‌ ಸೇವಕರಾಗಿದ್ದ ಪರ್ಸಿ ಚ್ಯಾಪ್‌ಮ್ಯಾನ್‌ರೊಂದಿಗೆ 1943ರ ಕೊನೆಯಲ್ಲಿ ನಾನು ನ್ಯೂ ಯಾರ್ಕ್‌ಗೆ ಪ್ರಯಾಣಿಸಿದೆ. ಸಹೋದರ ಕೊವಿಂಗ್ಟನ್‌ರಿಗೆ ಕಾನೂನುಶಾಸ್ತ್ರದಲ್ಲಿ ಅಪಾರವಾದ ಅನುಭವವಿತ್ತು. ಒಟ್ಟಿನಲ್ಲಿ ಅವರು ಅಮೆರಿಕದ ಸರ್ವೋಚ್ಚ ನ್ಯಾಯಾಲಯದಲ್ಲಿ 45 ಅಪೀಲುಗಳ ಪೈಕಿ 36 ಮೊಕದ್ದಮೆಗಳಲ್ಲಿ ಗೆದ್ದಿದ್ದರು.

ಕೆನಡದಲ್ಲಿದ್ದ ಸಾಕ್ಷಿಗಳಿಗೆ ನಿಧಾನವಾಗಿ ಉಪಶಮನವು ಸಿಕ್ಕಿತು. 1944ರಲ್ಲಿ ಟೊರಾಂಟೊದಲ್ಲಿದ್ದ ಬ್ರಾಂಚ್‌ ಆಸ್ತಿಯನ್ನು ಪುನಃ ಹಿಂದೆ ಪಡೆದುಕೊಳ್ಳಲಾಯಿತು ಮತ್ತು ನಿಷೇಧಕ್ಕೆ ಮುಂಚೆ ಅಲ್ಲಿ ಸೇವೆಸಲ್ಲಿಸುತ್ತಿದ್ದವರು ಬ್ರಾಂಚ್‌ಗೆ ಹಿಂದಿರುಗಲು ಶಕ್ತರಾದರು. ಯೆಹೋವನ ಸಾಕ್ಷಿಗಳಾಗಿದ್ದ ಮಕ್ಕಳ ಮನಸ್ಸಾಕ್ಷಿಗೆ ವಿರುದ್ಧವಾಗಿರುವ ಯಾವುದೇ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಅವರನ್ನು ಒತ್ತಾಯಮಾಡಬಾರದೆಂದು ಆಂಟಾರಿಯೊ ಪ್ರಾಂತದ ಸರ್ವೋಚ್ಚ ನ್ಯಾಯಾಲಯವು ಘೋಷಿಸಿತು. ಶಾಲೆಯಿಂದ ಹೊರಹಾಕಲ್ಪಟ್ಟಿದ್ದ ಮಕ್ಕಳನ್ನು ಪುನಃ ಒಮ್ಮೆ ಸೇರಿಸಿಕೊಳ್ಳುವ ಆಜ್ಞೆಯನ್ನು ಅದು ಹೊರಡಿಸಿತು. ಕೊನೆಗೆ, 1946ರಲ್ಲಿ ಕೆನಡ ಸರಕಾರವು ಜೀತ ಶಿಬಿರಗಳಲ್ಲಿದ್ದ ಎಲ್ಲ ಸಾಕ್ಷಿಗಳನ್ನು ಬಿಡುಗಡೆಗೊಳಿಸಿತು. ಸಹೋದರ ಕೊವಿಂಗ್ಟನ್‌ರ ಮಾರ್ಗದರ್ಶನದ ಕೆಳಗೆ, ನಾನು ಈ ವಿವಾದಾಂಶಗಳನ್ನು ಧೈರ್ಯದಿಂದ, ದೃಢಸಂಕಲ್ಪದಿಂದ ಹಾಗೂ ಎಲ್ಲಕ್ಕಿಂತಲೂ ಮಿಗಿಲಾಗಿ ಯೆಹೋವನ ಮೇಲಿನ ಭರವಸೆಯೊಂದಿಗೆ ಹೋರಾಡಲು ಕಲಿತುಕೊಂಡೆ.

ಕ್ಯೂಬೆಕ್‌ ಸಮರ

ಕೆನಡದ ಹೆಚ್ಚಿನ ಭಾಗಗಳಲ್ಲಿ ಯೆಹೋವನ ಸಾಕ್ಷಿಗಳಿಗಿರುವ ಧಾರ್ಮಿಕ ಸ್ವಾತಂತ್ರ್ಯಕ್ಕೆ ಮನ್ನಣೆಯನ್ನು ಕೊಡಲಾಯಿತು. ಆದರೆ ಒಂದು ಕಡೆ ಮಾತ್ರ, ಅಂದರೆ ಕ್ಯೂಬೆಕ್‌ ಎಂಬ ಫ್ರೆಂಚ್‌ ಕ್ಯಾತೊಲಿಕ್‌ ಪ್ರಾಂತದಲ್ಲಿ ಮಾತ್ರ ಧಾರ್ಮಿಕ ಸ್ವಾತಂತ್ರ್ಯವಿರಲಿಲ್ಲ. ಈ ಪ್ರಾಂತವು 300ಕ್ಕಿಂತಲೂ ಹೆಚ್ಚು ವರ್ಷಗಳಿಂದ ರೋಮನ್‌ ಕ್ಯಾತೊಲಿಕ್‌ ಚರ್ಚಿನ ನಿಯಂತ್ರಣದ ಕೆಳಗಿತ್ತು. ಇಲ್ಲಿನ ಶಾಲೆಗಳು, ಆಸ್ಪತ್ರೆಗಳು ಮತ್ತು ಹೆಚ್ಚಿನ ಸಾರ್ವಜನಿಕ ಸೇವೆಗಳನ್ನು ಪಾದ್ರಿಗಳೇ ನಡೆಸುತ್ತಿದ್ದರು ಇಲ್ಲವೇ ನಿಯಂತ್ರಿಸುತ್ತಿದ್ದರು. ಕ್ಯೂಬೆಕ್‌ನ ವಿಧಾನಮಂಡಲದಲ್ಲಿ ಅಧ್ಯಕ್ಷನ ಕುರ್ಚಿಯ ಪಕ್ಕದಲ್ಲೇ ಕ್ಯಾತೊಲಿಕ್‌ ಕಾರ್ಡಿನಲಿಗಾಗಿ ಒಂದು ಸಿಂಹಾಸನವೂ ಇತ್ತು!

ಕ್ಯೂಬೆಕ್‌ನ ಪ್ರಧಾನಮಂತ್ರಿ ಮತ್ತು ಅಟಾರ್ನಿ ಜನರಲ್‌ನಾಗಿದ್ದ ಮೌರಿಸ್‌ ಡ್ಯೂಪ್ಲಾಸೀ ಒಬ್ಬ ನಿರಂಕುಶಾಧಿಕಾರಿಯಾಗಿದ್ದನು. ಕ್ಯೂಬೆಕ್‌ನ ಇತಿಹಾಸಕಾರ ಗೀರಾರ್ಡ್‌ ಪೆಲೆಟ್ಯರ್‌ರವರಿಗನುಸಾರ, ಅವನು ಆ ಪ್ರಾಂತದ ಮೇಲೆ “ಸುಳ್ಳು, ಅನ್ಯಾಯ, ಭ್ರಷ್ಟಾಚಾರ, ಅಧಿಕಾರದ ವ್ಯವಸ್ಥಿತ ದುರುಪಯೋಗ, ಸಂಕುಚಿತ ಮನಸ್ಸಿನ ವ್ಯಕ್ತಿಗಳ ಆಧಿಪತ್ಯ ಮತ್ತು ಮೂಢತನದ ಗೆಲುವಿನ ಇಪ್ಪತ್ತು ವರ್ಷ ಕಾಲದ ಆಳ್ವಿಕೆಯನ್ನು” ನಡೆಸಿದನು. ರೋಮನ್‌ ಕ್ಯಾತೊಲಿಕ್‌ ಕಾರ್ಡಿನಲ್‌ ವಿಲೇನೊವ್‌ರೊಂದಿಗೆ ಅನ್ಯೋನ್ಯವಾಗಿ ಕೆಲಸಮಾಡುವ ಮೂಲಕ ಡ್ಯೂಪ್ಲಾಸೀ ತನ್ನ ಅಧಿಕಾರವನ್ನು ಬಲಪಡಿಸಿದನು.

1940ರ ಆರಂಭದ ವರ್ಷಗಳಲ್ಲಿ, ಕ್ಯೂಬೆಕ್‌ನಲ್ಲಿ 300 ಸಾಕ್ಷಿಗಳಿದ್ದರು. ನನ್ನ ತಮ್ಮ ಜೋನನ್ನು ಸೇರಿಸಿ, ಅನೇಕರು ಕೆನಡದ ಇನ್ನಿತರ ಭಾಗಗಳಿಂದ ಬಂದಿದ್ದ ಪಯನೀಯರರಾಗಿದ್ದರು. ಕ್ಯೂಬೆಕ್‌ನಲ್ಲಿ ನಮ್ಮ ಸಾರುವ ಕೆಲಸವು ಹೆಚ್ಚಾದಂತೆ, ಪಾದ್ರಿಗಳ ಒತ್ತಡಕ್ಕೆ ಒಳಗಾಗಿದ್ದ ಸ್ಥಳಿಕ ಪೊಲೀಸರು, ಪದೇ ಪದೇ ದಸ್ತಗಿರಿಮಾಡುವ ಮೂಲಕ ಮತ್ತು ಸಾಕ್ಷಿಗಳ ಧಾರ್ಮಿಕ ಚಟುವಟಿಕೆಗಳಿಗೆ ವಾಣಿಜ್ಯದ ಉಪನಿಯಮಗಳನ್ನು ತಪ್ಪಾಗಿ ಅನ್ವಯಿಸುವ ಮೂಲಕ ಅವರನ್ನು ಪೀಡಿಸಿ ಸೇಡುತೀರಿಸಿಕೊಳ್ಳುತ್ತಿದ್ದರು.

ನಾನು ಟೊರಾಂಟೊದಿಂದ ಕ್ಯೂಬೆಕ್‌ಗೆ ಅನೇಕ ಸಲ ಹೋಗಿ ಬರುತ್ತಿದ್ದೆ. ಆದುದರಿಂದ, ನಮ್ಮ ಕ್ರೈಸ್ತ ಸಹೋದರ ಸಹೋದರಿಯರನ್ನು ಪ್ರತಿನಿಧಿಸುತ್ತಿದ್ದ ಸಾಕ್ಷ್ಯೇತರ ವಕೀಲರಿಗೆ ಸಹಾಯಮಾಡಲು ನಾನು ಕ್ಯೂಬೆಕ್‌ಗೆ ಸ್ಥಳಾಂತರಿಸುವಂತೆ ಹೇಳಲಾಯಿತು. ಪ್ರತಿ ದಿನ ನನ್ನ ಮೊದಲ ಕೆಲಸವು, ಹಿಂದಿನ ದಿನ ಎಷ್ಟು ಮಂದಿ ಸಾಕ್ಷಿಗಳನ್ನು ದಸ್ತಗಿರಿಮಾಡಲಾಗಿದೆ ಎಂಬುದನ್ನು ತಿಳಿದುಕೊಂಡು, ಅವರಿಗೆ ಜಾಮೀನಿನ ಏರ್ಪಾಡನ್ನು ಮಾಡಲು ಸ್ಥಳಿಕ ನ್ಯಾಯಾಲಯಕ್ಕೆ ಓಡುವುದಾಗಿತ್ತು. ಫ್ರಾಂಕ್‌ ರಾನ್‌ಕಾರೆಲಿ ಎಂಬ ಧನಿಕ ಸಾಕ್ಷಿಯೊಬ್ಬನು, ಜೈಲಿನಲ್ಲಿದ್ದ ಈ ಸಾಕ್ಷಿಗಳಲ್ಲಿ ಹೆಚ್ಚಿನವರಿಗೆ ಜಾಮೀನನ್ನು ಒದಗಿಸಿದ್ದು ಸಂತೋಷಕರ ಸಂಗತಿ.

1944ರಿಂದ 1946ರ ವರೆಗೆ, ಉಪನಿಯಮಗಳ ಉಲ್ಲಂಘನೆಗಳೆಂದು ಹೇಳಲಾದ ತಕ್ಸೀರುಗಳ ಸಂಖ್ಯೆಯು 40ರಿಂದ 800ಕ್ಕೇರಿತು! ಸಾರ್ವಜನಿಕ ಅಧಿಕಾರಿಗಳು ಸಾಕ್ಷಿಗಳನ್ನು ಸತತವಾಗಿ ದಸ್ತಗಿರಿಮಾಡಿ, ಪೀಡಿಸುತ್ತಿದ್ದರು ಮಾತ್ರವಲ್ಲ, ಕ್ಯಾತೊಲಿಕ್‌ ಪಾದ್ರಿಗಳಿಂದ ಪ್ರಚೋದಿಸಲ್ಪಟ್ಟಿದ್ದ, ಕಾನೂನನ್ನು ಲಕ್ಷಿಸದ ಜನರ ದೊಡ್ಡ ಗುಂಪುಗಳು ಸಹ ಅವರ ಮೇಲೆ ಆಕ್ರಮಣ ಮಾಡುತ್ತಿದ್ದವು.

1946ರ ನವೆಂಬರ್‌ 2 ಮತ್ತು 3ರಂದು, ಈ ವಿಷಮಸ್ಥಿತಿಯ ಕುರಿತು ಮಾತಾಡಲು ಮಾಂಟ್ರಿಯಲ್‌ನಲ್ಲಿ ಒಂದು ವಿಶೇಷ ಕೂಟವನ್ನು ಏರ್ಪಡಿಸಲಾಯಿತು. “ನಾವೇನು ಮಾಡಬಹುದು?” ಎಂಬ ಶೀರ್ಷಿಕೆಯುಳ್ಳ ಕೊನೆಯ ಭಾಷಣವನ್ನು ಸಹೋದರ ನಾರ್‌ ಕೊಟ್ಟರು. ಈ ಪ್ರಶ್ನೆಗೆ ಅವರ ಉತ್ತರವನ್ನು ಕೇಳಿ ಹಾಜರಿದ್ದವರೆಲ್ಲರೂ ಹರ್ಷಿಸಿದರು. ಈಗ ಒಂದು ಐತಿಹಾಸಿಕ ದಾಖಲೆಯಾಗಿರುವ, ದೇವರು ಮತ್ತು ಕ್ರಿಸ್ತನಿಗಾಗಿ ಕ್ಯೂಬೆಕ್‌ನ ಉತ್ಕಟ ದ್ವೇಷವು ಇಡೀ ಕೆನಡಕ್ಕೆ ನಾಚಿಕೆಗೇಡು (ಇಂಗ್ಲಿಷ್‌) ಎಂಬ ಕಿರುಹೊತ್ತಗೆಯನ್ನು ಅವರು ಗಟ್ಟಿಯಾದ ಸ್ವರದಲ್ಲಿ ಓದಿದರು. ಅದು ನಾಲ್ಕು ಪುಟಗಳದ್ದಾಗಿದ್ದು, ಅದರಲ್ಲಿ ಖಂಡನಾತ್ಮಕವಾದ ಮಾಹಿತಿಯಿತ್ತು. ಕ್ಯೂಬೆಕ್‌ನಲ್ಲಿನ ಯೆಹೋವನ ಸಾಕ್ಷಿಗಳ ವಿರುದ್ಧ ಪಾದ್ರಿಗಳಿಂದ ಚಿತಾಯಿಸಲ್ಪಟ್ಟ ದೊಂಬಿಗಲಭೆಗಳು, ಪೊಲೀಸ್‌ ದೌರ್ಜನ್ಯ, ದಸ್ತಗಿರಿಗಳು ಮತ್ತು ದೊಂಬಿ ಹಿಂಸಾಚಾರಗಳನ್ನು ನಡೆಸಿದವರ ಹೆಸರುಗಳು, ಅವು ನಡೆದಂತಹ ತಾರೀಖುಗಳು ಮತ್ತು ಸ್ಥಳಗಳ ಕುರಿತಾದ ವಿವರವಾದ ಪ್ರಕಟನೆ ಅದಾಗಿತ್ತು. 12 ದಿವಸಗಳೊಳಗೆ ಕೆನಡದಾದ್ಯಂತ ಈ ಕಿರುಹೊತ್ತಗೆಯ ವಿತರಣೆಯು ಆರಂಭವಾಯಿತು.

ಕೆಲವೇ ದಿನಗಳಲ್ಲಿ, ಯೆಹೋವನ ಸಾಕ್ಷಿಗಳ ವಿರುದ್ಧ “ನಿಷ್ಕಾರುಣ್ಯವಾಗಿ ಯುದ್ಧ”ಮಾಡುವೆನೆಂದು ಡ್ಯೂಪ್ಲಾಸೀ ಬಹಿರಂಗವಾಗಿ ಘೋಷಿಸಿದನು. ಆದರೆ ಹೀಗೆ ಮಾಡುವುದರಿಂದ ತನಗರಿವಿಲ್ಲದೇ ಅವನು ನಮಗೆ ಒಂದು ಉಪಕಾರವನ್ನು ಮಾಡಿದನು. ಹೇಗೆ? ಕ್ಯೂಬೆಕ್‌ನ ಉತ್ಕಟ ದ್ವೇಷ (ಇಂಗ್ಲಿಷ್‌) ಎಂಬ ಕಿರುಹೊತ್ತಗೆಯನ್ನು ಯಾರೇ ವಿತರಿಸಲಿ ಅವರ ಮೇಲೆ ದೇಶದ್ರೋಹದ ಆರೋಪವನ್ನು ಹೊರಿಸಲಾಗುವುದೆಂಬ ಆದೇಶವನ್ನು ಹೊರಡಿಸುವ ಮೂಲಕವೇ. ದೇಶದ್ರೋಹವು ತುಂಬ ಗಂಭೀರವಾದ ಅಪರಾಧವಾಗಿತ್ತು, ಮತ್ತು ಇದು ನಮ್ಮನ್ನು ಕ್ಯೂಬೆಕ್‌ನ ನ್ಯಾಯಾಲಯಗಳಿಂದ ಹೊರತಂದು, ಕೆನಡದ ಸರ್ವೋಚ್ಚ ನ್ಯಾಯಾಲಯದ ಕಟಕಟೆಯಲ್ಲಿ ನಿಲ್ಲಿಸಲಿತ್ತು. ತನ್ನ ಕೋಪದ ಬರದಲ್ಲಿ ಡ್ಯೂಪ್ಲಾಸೀ ಹೀಗಾಗಬಹುದೆಂದು ಯೋಚಿಸಿರಲಿಲ್ಲ. ಅನಂತರ ಅವನು, ನಮಗೆ ಜಾಮೀನನ್ನು ಒದಗಿಸುತ್ತಿದ್ದ ಮುಖ್ಯ ವ್ಯಕ್ತಿ ಫ್ರಾಂಕ್‌ ರೊನ್‌ಕಾರೆಲಿಯ ಸಾರಾಯಿ ಪರವಾನಗಿಯನ್ನು ರದ್ದುಪಡಿಸಿದನು. ದ್ರಾಕ್ಷಾಮದ್ಯ ಲಭ್ಯವಿಲ್ಲದ್ದರಿಂದ ಮಾಂಟ್ರಿಯಲ್‌ನಲ್ಲಿ ರೊನ್‌ಕಾರೆಲಿಯವರಿಗಿದ್ದ ಒಳ್ಳೆಯ ರೆಸ್ಟೊರಾಂಟ್‌ ಕೆಲವೇ ತಿಂಗಳುಗಳೊಳಗೆ ಮುಚ್ಚಲ್ಪಟ್ಟಿತ್ತು ಮತ್ತು ಅವನು ಆರ್ಥಿಕವಾಗಿ ದಿವಾಳಿಯಾದ.

ದಸ್ತಗಿರಿಗಳು ಹೆಚ್ಚುತ್ತಾ ಹೋದವು. ಈಗ 800 ತಕ್ಸೀರುಗಳ ಬದಲಿಗೆ 1,600 ತಕ್ಸೀರುಗಳು ಮುಂದಿದ್ದವು. ಯೆಹೋವನ ಸಾಕ್ಷಿಗಳ ಈ ಎಲ್ಲ ಮೊಕದ್ದಮೆಗಳು ಕ್ಯೂಬೆಕ್‌ನ ನ್ಯಾಯಾಲಯಗಳಲ್ಲಿನ ಇತರ ಮೊಕದ್ದಮೆಗಳಿಗೆ ಅಡ್ಡಿಯಾಗಿದ್ದವೆಂದು ಅನೇಕ ವಕೀಲರು ಮತ್ತು ನ್ಯಾಯಾಧೀಶರು ದೂರುಕೊಟ್ಟರು. ಅವರಿಗೆ ಉತ್ತರ ಕೊಡುತ್ತಾ, ನಾವು ಒಂದು ಸುಲಭ ಪರಿಹಾರವನ್ನು ಸೂಚಿಸುತ್ತಿದ್ದೆವು: ಪೊಲೀಸರು ಈ ಕ್ರೈಸ್ತರ ಬದಲಿಗೆ ಅಪರಾಧಿಗಳನ್ನು ಮಾತ್ರ ದಸ್ತಗಿರಿಮಾಡಲಿ ಅಷ್ಟೇ. ಆಗ ಅವರ ಸಮಸ್ಯೆಯು ಬಗೆಹರಿಯುವುದು!

ಇಬ್ಬರು ಧೀರ ಯೆಹೂದಿ ವಕೀಲರಾಗಿದ್ದ ಮಾಂಟ್ರೀಯಲ್‌ನ ಎ. ಎಲ್‌. ಸ್ಟೇನ್‌ ಮತ್ತು ಕ್ಯೂಬೆಕ್‌ ಪ್ರಾಂತದ ಸ್ಯಾಮ್‌ ಎಸ್‌. ಬಾರ್ಡ್‌ರವರು, ನಾನು 1949ರಲ್ಲಿ ಕ್ಯೂಬೆಕ್‌ ವಕೀಲರ ಸಂಘಕ್ಕೆ ಸೇರುವ ಮುಂಚೆ, ಅನೇಕ ಮೊಕದ್ದಮೆಗಳಲ್ಲಿ ನಮ್ಮ ಪರವಾಗಿ ವಕಾಲತ್ತು ನಡೆಸುವ ಮೂಲಕ ಸಹಾಯಮಾಡಿದರು. ಕ್ಯೂಬೆಕ್‌ನಲ್ಲಿದ್ದ ಯೆಹೋವನ ಸಾಕ್ಷಿಗಳು “ನಮ್ಮ ಇಡೀ ಸಮಾಜದಿಂದ ಹೀಯಾಳಿಸಲ್ಪಟ್ಟಿದ್ದಾರೆ, ಹಿಂಸಿಸಲ್ಪಟ್ಟಿದ್ದಾರೆ ಮತ್ತು ದ್ವೇಷಿಸಲ್ಪಟ್ಟಿದ್ದಾರೆ; ಆದರೂ ಅವರು ಕಾನೂನು ಮಾಧ್ಯಮಗಳ ಮೂಲಕ ಚರ್ಚು, ಸರಕಾರ, ದೇಶ, ಪೊಲೀಸ್‌, ಮತ್ತು ಸಾರ್ವಜನಿಕರ ಅಭಿಪ್ರಾಯದ ವಿರುದ್ಧ ಹೋರಾಡಲು ಶಕ್ತರಾಗಿದ್ದಾರೆ” ಎಂದು ಸಮಯಾನಂತರ ಕೆನಡದ ಪ್ರಧಾನ ಮಂತ್ರಿಯ ಪಟ್ಟಕ್ಕೇರಿದ ಪ್ಯರ್‌ ಎಲ್ಯಟ್‌ ಟ್ರೂಡಿ ಬರೆದರು.

ನನ್ನ ತಮ್ಮ ಜೋನನ್ನು ಉಪಚರಿಸಿದ ರೀತಿಯಲ್ಲಿ ಕ್ಯೂಬೆಕ್‌ ಕೋರ್ಟುಗಳ ಮನೋಭಾವವು ಸ್ಪಷ್ಟವಾಗಿ ತೋರಿಬರುತ್ತಿತ್ತು. ಸಮಾಜದಲ್ಲಿ ಶಾಂತಿಯನ್ನು ಭಂಗಗೊಳಿಸುತ್ತಿದ್ದಾನೆಂಬ ಆರೋಪವನ್ನು ಅವನ ಮೇಲೆ ಹೊರಿಸಲಾಯಿತು. ಕ್ಯೂಬೆಕ್‌ ಪ್ರಾಂತದ ನ್ಯಾಯಾಧಿಪತಿ ಸಾನ್‌ ಮರ್ಸ್ಯಾ, ಜೋಗೆ 60 ದಿನಗಳ ಸೆರೆಮನೆವಾಸದ ಅಧಿಕತಮ ಶಿಕ್ಷೆಯನ್ನು ವಿಧಿಸಿದನು. ನಂತರ ತನ್ನ ಸಂಯಮ ಕಳೆದುಕೊಂಡ ಅವನು, ಸಾಧ್ಯವಿರುತ್ತಿದ್ದಲ್ಲಿ ತಾನು ಜೋಗೆ ಜೀವಾವಧಿ ಶಿಕ್ಷೆಯನ್ನು ಕೊಡುತ್ತಿದ್ದೆ ಎಂದು ತನ್ನ ಆಸನದಿಂದಲೇ ಕಿರುಚಿದನು!

“ಯಾವುದೇ ವ್ಯಕ್ತಿ ಒಬ್ಬ ಯೆಹೋವನ ಸಾಕ್ಷಿಯಾಗಿದ್ದಾನೆಂದು ತಿಳಿದಿರುವಲ್ಲಿ ಅಥವಾ ಸಂಶಯ ಇರುವಲ್ಲಿ ಅವನನ್ನು ಕೂಡಲೇ ದಸ್ತಗಿರಿ ಮಾಡಬೇಕು” ಎಂದು ಮರ್ಸ್ಯಾನು ಕ್ಯೂಬೆಕ್‌ ಪ್ರಾಂತದ ಪೊಲೀಸರಿಗೆ ಅಪ್ಪಣೆ ಕೊಟ್ಟಿದ್ದನೆಂದು ಒಂದು ವಾರ್ತಾಪತ್ರಿಕೆಯು ಹೇಳಿತು. ಈ ರೀತಿಯ ನಡವಳಿಕೆಯು, ಕ್ಯೂಬೆಕ್‌ನ ಉತ್ಕಟ ದ್ವೇಷ ಎಂಬ ನಮ್ಮ ಕಿರುಹೊತ್ತಗೆಯಲ್ಲಿ ತಿಳಿಸಲಾಗಿರುವ ಆಪಾದನೆಗಳು ಎಷ್ಟೊಂದು ಸತ್ಯವಾಗಿವೆಯೆಂಬುದನ್ನು ರುಜುಪಡಿಸಿತು. ಕ್ಯೂಬೆಕ್‌ ಪ್ರಾಂತವನ್ನು ಬಿಟ್ಟು ಕೆನಡದ ವಾರ್ತಾಪತ್ರಿಕೆಗಳಲ್ಲಿ ಸರ್ವಸಾಮಾನ್ಯವಾಗಿಬಿಟ್ಟಿದ್ದ ಶಿರೋನಾಮಗಳಲ್ಲಿ ಕೆಲವು ಹೀಗಿದ್ದವು: “ಕ್ಯೂಬೆಕ್‌ ಪ್ರಾಂತಕ್ಕೆ ಅಂಧಕಾರ ಯುಗಗಳು ಹಿಮ್ಮರಳುತ್ತಿವೆ” (ದ ಟೊರಾಂಟೊ ಸ್ಟಾರ್‌), “ನ್ಯಾಯವಿಚಾರಣೆಯ ಪುನರಾಗಮನ” (ದ ಗ್ಲೋಬ್‌ ಆ್ಯಂಡ್‌ ಮೆಯ್ಲ್‌, ಟೊರಾಂಟೊ), “ಫ್ಯಾಸಿಸಮ್‌ನ ಹೊಲಸು ನಾತ” (ದ ಗ್ಯಾಝೆಟ್‌, ಗ್ಲೇಸ್‌ ಬೇ, ನೊವಾ ಸ್ಕಾಟ್ಯಾ).

ದೇಶದ್ರೋಹದ ಆರೋಪದ ವಿರುದ್ಧ ಪ್ರತಿವಾದ

1947ರಲ್ಲಿ, ದೇಶದ್ರೋಹದ ಆರೋಪದ ಕುರಿತಾದ ನಮ್ಮ ಪ್ರಥಮ ಮೊಕದ್ದಮೆಯಲ್ಲಿ ನಾನು ಶ್ರೀ. ಸ್ಟೇನ್‌ರಿಗೆ ಸಹಾಯಮಾಡಿದೆ. ಇದು ಈಮೇ ಬುಷೇ ಎಂಬವರ ಮೇಲೆ ಹೊರಿಸಲಾಗಿದ್ದ ಆರೋಪವಾಗಿತ್ತು. ಈಮೇರವರು ತಮ್ಮ ಮನೆಯ ಹತ್ತಿರ ಕೆಲವೊಂದು ಕಿರುಹೊತ್ತಗೆಗಳನ್ನು ವಿತರಿಸಿದ್ದರು. ಅವರ ವಿಚಾರಣೆಯ ಸಮಯದಲ್ಲಿ, ಕ್ಯೂಬೆಕ್‌ನ ಉತ್ಕಟ ದ್ವೇಷ ಎಂಬ ಕಿರುಹೊತ್ತಗೆಯಲ್ಲಿ ಯಾವುದೇ ಅಸತ್ಯಗಳಿಲ್ಲ, ಬದಲಾಗಿ ಯೆಹೋವನ ಸಾಕ್ಷಿಗಳ ಮೇಲೆ ನಡೆಸಲ್ಪಟ್ಟಿದ್ದ ದೌರ್ಜನ್ಯಗಳ ಕುರಿತು ಅಸಮಾಧಾನ ಸೂಚಿಸುತ್ತಾ ಕಟುವಾದ ಶಬ್ದಗಳನ್ನು ಉಪಯೋಗಿಸಲಾಗಿದೆಯಷ್ಟೇ ಎಂಬುದನ್ನು ನಾವು ಸಾಬೀತುಪಡಿಸಿದೆವು. ಈ ದೌರ್ಜನ್ಯವನ್ನು ನಡೆಸಿದವರ ಮೇಲೆ ಯಾವುದೇ ಆರೋಪಗಳನ್ನು ಹೊರಿಸಲಾಗಲಿಲ್ಲವೆಂಬುದನ್ನು ನಾವು ತೋರಿಸಿದೆವು. ಆದರೆ ಇದೆಲ್ಲವನ್ನು ಬಹಿರಂಗಪಡಿಸುತ್ತಿದ್ದದ್ದಕ್ಕಾಗಿ ಈಮೇರವರನ್ನು ಅಪರಾಧಿಯೆಂದು ನಿರ್ಣಯಿಸಲಾಗಿತ್ತು. ಆದುದರಿಂದ ಸತ್ಯವನ್ನು ಹೇಳುವುದು ಸಹ ಒಂದು ಅಪರಾಧವಾಗಿದೆ ಎಂಬುದೇ ಫಿರ್ಯಾದಿ ಪಕ್ಷದ ನಿಲುವು ಎಂಬಂತೆ ತೋರುತ್ತಿತ್ತು!

ಕ್ಯೂಬೆಕ್‌ನ ಕೋರ್ಟುಗಳು, “ದೇಶದ್ರೋಹ” ಎಂಬ ಪದದ ಅಸ್ಪಷ್ಟವಾದ ಮತ್ತು 350 ವರ್ಷಗಳಷ್ಟು ಹಳೆಯದಾದ ಅರ್ಥನಿರೂಪಣೆಯ ಮೇಲೆ ಅವಲಂಬಿಸಿದ್ದವು. ಆ ಅರ್ಥನಿರೂಪಣೆಗನುಸಾರ, ಸರಕಾರದ ಬಗ್ಗೆ ಟೀಕಿಸುವವರನ್ನು ಸಹ ಅಪರಾಧಿಗಳೆಂದು ನಿರ್ಣಯಿಸಬಹುದಿತ್ತು. ಡ್ಯೂಪ್ಲಾಸೀ ಸಹ, ತನ್ನ ಆಳ್ವಿಕೆಯನ್ನು ಟೀಕಿಸುವವರನ್ನು ದಬಾಯಿಸಲು ಈ ಅರ್ಥನಿರೂಪಣೆಯ ಮೇಲೆಯೇ ಆತುಕೊಂಡಿದ್ದನು. ಆದರೆ ಒಂದು ಆಧುನಿಕ ಪ್ರಜಾಪ್ರಭುತ್ವದಲ್ಲಿ “ದೇಶದ್ರೋಹದ” ಅರ್ಥ, ಹಿಂಸಾಚಾರವನ್ನು ಅಥವಾ ಸರಕಾರದ ವಿರುದ್ಧ ದಂಗೆಯನ್ನು ಪ್ರಚೋದಿಸುವುದೇ ಆಗಿದೆಯೆಂಬ ನಮ್ಮ ನಿವೇದನೆಯನ್ನು ಕೆನಡದ ಸರ್ವೋಚ್ಚ ನ್ಯಾಯಾಲಯವು ಅಂಗೀಕರಿಸಿತು. ಹಾಗೆ ಮಾಡುವಂತೆ ಪ್ರಚೋದಿಸುವ ಯಾವ ವಿಷಯವೂ ಕ್ಯೂಬೆಕ್‌ನ ಉತ್ಕಟ ದ್ವೇಷ ಕಿರುಹೊತ್ತಗೆಯಲ್ಲಿರಲಿಲ್ಲ ಮತ್ತು ಈ ಕಾರಣದಿಂದ ಅದು ವಾಕ್‌ಸ್ವಾತಂತ್ರ್ಯದ ಕಾನೂನುಬದ್ಧ ರೂಪವಾಗಿತ್ತು. ಈ ಒಂದೇ ನಿರ್ಣಾಯಕ ತೀರ್ಪಿನಿಂದಾಗಿ, ದೇಶದ್ರೋಹದ ಒಟ್ಟು 123 ಮೊಕದ್ದಮೆಗಳನ್ನು ವಜಾಮಾಡಲಾಯಿತು! ಯೆಹೋವನು ನಮಗೆ ಹೇಗೆ ವಿಜಯವನ್ನು ಕೊಟ್ಟನೆಂಬುದನ್ನು ನಾನು ಕಣ್ಣಾರೆ ನೋಡಿದೆ.

ಸಾಹಿತ್ಯ ವಿತರಣೆಯ ನಿಷೇಧದ ವಿರುದ್ಧ ಹೋರಾಡುವುದು

ಪೊಲೀಸ್‌ ಮುಖ್ಯಾಧಿಕಾರಿಯಿಂದ ಪರವಾನಗಿಯಿಲ್ಲದೆ, ಸಾಹಿತ್ಯ ವಿತರಣೆಯನ್ನು ಪ್ರತಿಬಂಧಿಸುವ ಒಂದು ಉಪನಿಯಮವು ಕ್ಯೂಬೆಕ್‌ ನಗರದಲ್ಲಿತ್ತು. ಇದು ನೇರವಾದ ನಿಷೇಧವಾಗಿದ್ದು, ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆಯಾಗಿತ್ತು. ಈ ನಿಯಮದಿಂದ ಮತ್ತು ಅದರಿಂದಾಗಿ ಹೊರಿಸಲ್ಪಟ್ಟ ಬೇರೆ ಆರೋಪಗಳ ಕಾರಣದಿಂದ, ಆ ಸಮಯದಲ್ಲಿ ಸಂಚರಣ ಮೇಲ್ವಿಚಾರಕರೋಪಾದಿ ಸೇವೆಸಲ್ಲಿಸುತ್ತಿದ್ದ ಲೊರ್ಯಾ ಸೊಮುಅರ್‌ರಿಗೆ ಮೂರು ತಿಂಗಳ ಸೆರೆಮನೆವಾಸವನ್ನು ವಿಧಿಸಲಾಯಿತು.

1947ರಲ್ಲಿ, ಕ್ಯೂಬೆಕ್‌ ನಗರವು ಯೆಹೋವನ ಸಾಕ್ಷಿಗಳ ವಿರುದ್ಧ ಈ ಉಪನಿಯಮವನ್ನು ಜಾರಿಗೆತರುವುದರಿಂದ ತಡೆಯುವಂತಹ ಒಂದು ಸಿವಿಲ್‌ ಮೊಕದ್ದಮೆಯನ್ನು ಸಹೋದರ ಸೊಮುಅರ್‌ರ ಹೆಸರಿನಲ್ಲಿ ದಾಖಲುಮಾಡಲಾಯಿತು. ಕ್ಯೂಬೆಕ್‌ ಪ್ರಾಂತದ ಕೋರ್ಟುಗಳು ನಮ್ಮ ವಿರುದ್ಧ ತೀರ್ಪು ಕೊಟ್ಟವು, ಆದರೂ ನಾವು ಪುನಃ ಕೆನಡದ ಸರ್ವೋಚ್ಚ ನ್ಯಾಯಾಲಯಕ್ಕೆ ಅಪೀಲ್‌ ಮಾಡಿದೆವು. ಆ ನ್ಯಾಯಾಲಯದ ಎಲ್ಲ ಒಂಬತ್ತು ಮಂದಿ ನ್ಯಾಯಾಧಿಪತಿಗಳ ಮುಂದೆ ಏಳು ದಿನಗಳ ವರೆಗಿನ ವಿಚಾರಣೆಯ ನಂತರ ಅಕ್ಟೋಬರ್‌ 1953ರಲ್ಲಿ ತಡೆಯಾಜ್ಞೆಯನ್ನು ಹೊರಡಿಸಬೇಕೆಂಬ ನಮ್ಮ ವಿನಂತಿಯನ್ನು ಅಂಗೀಕರಿಸಲಾಯಿತು. ಮುದ್ರಿತ ಬೈಬಲ್‌ ಪ್ರಸಂಗಗಳನ್ನು ಸಾರ್ವಜನಿಕವಾಗಿ ವಿತರಿಸುವುದು ಯೆಹೋವನ ಸಾಕ್ಷಿಗಳ ಕ್ರೈಸ್ತ ಆರಾಧನೆಯ ಮೂಲಭೂತ ಅಂಶವಾಗಿದ್ದು, ಈ ಕಾರಣದಿಂದ ನಿಷೇಧಿಸಲ್ಪಡುವುದರಿಂದ ಸಂವಿಧಾನವು ಅದನ್ನು ರಕ್ಷಿಸುತ್ತದೆಂದು ಕೋರ್ಟು ಅಂಗೀಕರಿಸಿತು.

ಹೀಗೆ, ಯೆಹೋವನ ಸಾಕ್ಷಿಗಳು ಏನನ್ನು ಹೇಳುತ್ತಾರೊ ಅದು ನ್ಯಾಯಸಮ್ಮತವಾಗಿದೆಯೆಂಬುದನ್ನು ಬುಷೇ ಮೊಕದ್ದಮೆಯು ನಿರ್ಧರಿಸಿತು. ಆದರೆ ಸೊಮುಅರ್‌ ಮೊಕದ್ದಮೆಯಲ್ಲಿ ಕೊಡಲ್ಪಟ್ಟ ತೀರ್ಪು, ಅವರು ಅದನ್ನು ಹೇಗೆ ಮತ್ತು ಎಲ್ಲಿ ಹೇಳಸಾಧ್ಯವಿದೆಯೆಂಬುದನ್ನು ನಿರ್ಧರಿಸಿತು. ಸೊಮುಅರ್‌ ಮೊಕದ್ದಮೆಯಲ್ಲಿ ಸಿಕ್ಕಿದಂತಹ ವಿಜಯವು, ಕ್ಯೂಬೆಕ್‌ನಲ್ಲಿ ಉಪನಿಯಮಗಳ ಉಲ್ಲಂಘನೆಯ ಕುರಿತಾದ 1,100ಕ್ಕಿಂತಲೂ ಹೆಚ್ಚಿನ ಆರೋಪಗಳ ವಜಾಮಾಡುವಿಕೆಗೆ ಕಾರಣವಾಯಿತು. ಮಾಂಟ್ರಿಯಲ್‌ನಲ್ಲೂ, ರುಜುವಾತಿನ ಕೊರತೆಯಿಂದಾಗಿ 500ಕ್ಕಿಂತಲೂ ಹೆಚ್ಚಿನ ಆರೋಪಗಳನ್ನು ಹಿಂದೆಗೆದುಕೊಳ್ಳಲಾಯಿತು. ಸ್ವಲ್ಪ ಸಮಯದೊಳಗೇ ಸಾಕ್ಷಿಗಳ ಮೇಲಿದ್ದ ಎಲ್ಲ ಆರೋಪಗಳು ವಜಾಮಾಡಲ್ಪಟ್ಟವು. ಕ್ಯೂಬೆಕ್‌ನಲ್ಲಿ ಯಾವುದೇ ಆಪಾದನೆಯ ಆರೋಪಗಳು ಉಳಿದಿರಲಿಲ್ಲ!

ಡ್ಯೂಪ್ಲಾಸೀಯ ಕೊನೆಯ ದಾಳಿ

ಡ್ಯೂಪ್ಲಾಸೀಗೆ ಯೆಹೋವನ ಸಾಕ್ಷಿಗಳ ವಿರುದ್ಧ ಉಪಯೋಗಿಸಲಿಕ್ಕಾಗಿ ಈಗ ಇನ್ಯಾವುದೇ ನಿಯಮಗಳು ಉಳಿದಿರಲಿಲ್ಲ. ಆದುದರಿಂದ, ಜನವರಿ 1954ರಲ್ಲಿ ಅವನು ವಿಧಾನಮಂಡಲದಲ್ಲಿ ಒಂದು ಹೊಸ ಕಾಯಿದೆಯನ್ನು, ಅಂದರೆ ಮಸೂದೆ ನಂ. 38ನ್ನು ಮಂಡಿಸಿದನು. ಈ ಮಸೂದೆಯನ್ನು ‘ಯೆಹೋವನ ಸಾಕ್ಷಿ ವಿರೋಧಿ ಕಾಯಿದೆ’ ಎಂದು ವಾರ್ತಾಮಾಧ್ಯಮವು ಕರೆಯಿತು. ಈ ಮಸೂದೆಯಿಂದಾಗಿ, ಒಬ್ಬನು “ದೂಷಣೀಯ ಅಥವಾ ಅವಮಾನಕಾರಿಯಾದ” ಹೇಳಿಕೆಯನ್ನು ಮಾಡಲು ಉದ್ದೇಶಿಸುತ್ತಿದ್ದಾನೆಂದು ಯಾರು ಶಂಕಿಸುತ್ತಾರೊ ಅವರು ಯಾವುದೇ ರುಜುವಾತನ್ನು ಕೊಡದೆಯೇ ದೂರನ್ನು ದಾಖಲುಮಾಡಸಾಧ್ಯವಿತ್ತು. ಆಗ ಆಟಾರ್ನಿ ಜನರಲ್‌ನೋಪಾದಿ ಡ್ಯೂಪ್ಲಾಸೀ, ಆ ಆಪಾದಿತನು ಯಾವುದೇ ಬಹಿರಂಗ ಹೇಳಿಕೆಯನ್ನು ಮಾಡದಂತೆ ತಡೆಯುವ ತಡೆಯಾಜ್ಞೆಯನ್ನು ಪಡೆದುಕೊಳ್ಳಬಹುದಿತ್ತು. ಒಬ್ಬ ವ್ಯಕ್ತಿಯ ವಿರುದ್ಧ ತಡೆಯಾಜ್ಞೆಯನ್ನು ಹೊರಡಿಸಿದಾಕ್ಷಣ, ಆ ವ್ಯಕ್ತಿಯ ಚರ್ಚಿನ ಎಲ್ಲ ಸದಸ್ಯರೂ ಸಹ ಅಂತೆಯೇ ಯಾವುದೇ ಬಹಿರಂಗ ಹೇಳಿಕೆಯನ್ನು ಮಾಡುವುದರಿಂದ ನಿಷೇಧಿಸಲ್ಪಡುವರು. ಅಷ್ಟುಮಾತ್ರವಲ್ಲದೆ, ಆ ಚರ್ಚಿಗೆ ಸೇರಿರುವ ಎಲ್ಲ ಬೈಬಲುಗಳು ಮತ್ತು ಧಾರ್ಮಿಕ ಸಾಹಿತ್ಯವು ವಶಪಡಿಸಿಕೊಳ್ಳಲ್ಪಟ್ಟು ನಾಶಗೊಳಿಸಲ್ಪಡಲಿತ್ತು ಮತ್ತು ಅದರ ಎಲ್ಲ ಆರಾಧನಾ ಸ್ಥಳಗಳು, ಆ ಮೊಕದ್ದಮೆಯ ತೀರ್ಪು ಹೊರಬೀಳುವ ವರೆಗೂ, ಅಂದರೆ ಅನೇಕ ವರ್ಷಗಳ ವರೆಗೆ ಮುಚ್ಚಲ್ಪಡಲಿದ್ದವು.

ಈ ಮಸೂದೆ ನಂ. 38, ಟಾರ್ಕಮೊಡ ನಡೆಸಿದ ಸ್ಪ್ಯಾನಿಷ್‌ ನ್ಯಾಯವಿಚಾರಣೆಯ ಸಮಯದಲ್ಲಿ, ಅಂದರೆ 15ನೆಯ ಶತಮಾನದಲ್ಲಿ ರಚಿಸಲ್ಪಟ್ಟಿದ್ದ ಒಂದು ನಿಯಮದ ನಕಲಾಗಿತ್ತು. ಆಪಾದಿತ ವ್ಯಕ್ತಿ ಮತ್ತು ಅವನ ಎಲ್ಲ ಸಂಗಡಿಗರು, ತಮ್ಮ ತಪ್ಪಿನ ಯಾವುದೇ ರುಜುವಾತಿಲ್ಲದೆ ಎಲ್ಲ ನಾಗರಿಕ ಹಕ್ಕುಗಳನ್ನು ಕಳೆದುಕೊಳ್ಳುತ್ತಿದ್ದರು. ಮಸೂದೆ ನಂ. 38ರ ಕುರಿತಾಗಿ ತಿಳಿಸುತ್ತಾ, ಯೆಹೋವನ ಸಾಕ್ಷಿಗಳ ಎಲ್ಲ ರಾಜ್ಯ ಸಭಾಗೃಹಗಳನ್ನು ಮುಚ್ಚಿಸಿ, ಅವರ ಬೈಬಲುಗಳು ಮತ್ತು ಬೇರೆ ಸಾಹಿತ್ಯವನ್ನು ವಶಪಡಿಸಿಕೊಂಡು, ಅವುಗಳನ್ನು ನಾಶಮಾಡಬೇಕೆಂಬ ಅಪ್ಪಣೆಯನ್ನು ಪ್ರಾಂತೀಯ ಪೊಲೀಸರಿಗೆ ಕೊಡಲಾಗಿದೆಯೆಂದು ವಾರ್ತಾಮಾಧ್ಯಮವು ಘೋಷಿಸಿತು. ಈ ದೊಡ್ಡ ಬೆದರಿಕೆಯಿಂದಾಗಿ, ಯೆಹೋವನ ಸಾಕ್ಷಿಗಳು ತಮ್ಮ ಎಲ್ಲ ಧಾರ್ಮಿಕ ಪ್ರಕಾಶನಗಳನ್ನು ಆ ಪ್ರಾಂತದಿಂದ ಹೊರಕಳುಹಿಸಿದರು. ಆದರೂ ಅವರು ಕೇವಲ ತಮ್ಮ ವೈಯಕ್ತಿಕ ಬೈಬಲ್‌ ಪ್ರತಿಗಳನ್ನು ಉಪಯೋಗಿಸಿ, ಸಾರ್ವಜನಿಕವಾಗಿ ಸಾರುವ ತಮ್ಮ ಕೆಲಸವನ್ನು ಮುಂದುವರಿಸಿದರು.

ಈ ಮಸೂದೆಯು, ಜನವರಿ 28, 1954ರಂದು ಒಂದು ಕಾನೂನು ಆಗಿಬಿಟ್ಟಿತು. ಜನವರಿ 29ರಂದು ಬೆಳಗ್ಗೆ 9 ಘಂಟೆಗೆ ನಾನು ಕ್ಯೂಬೆಕ್‌ ಪ್ರಾಂತದ ಎಲ್ಲ ಯೆಹೋವನ ಸಾಕ್ಷಿಗಳ ಪರವಾಗಿ ಒಂದು ಮೊಕದ್ದಮೆಯನ್ನು ಹೂಡಲು ನ್ಯಾಯಸ್ಥಾನದಲ್ಲಿದ್ದೆ. ಡ್ಯೂಪ್ಲಾಸೀ ಆ ಕಾನೂನನ್ನು ಪ್ರಯೋಗಿಸುವ ಮುಂಚೆಯೇ, ಅದರ ವಿರುದ್ಧ ಒಂದು ಕಾಯಂ ತಡೆಯಾಜ್ಞೆಯನ್ನು ಹೊರಡಿಸುವಂತೆ ನಾನು ಕೋರಿದೆ. ಮಸೂದೆ ನಂ. 38 ಇನ್ನೂ ಪ್ರಯೋಗಿಸಲ್ಪಡದೇ ಇದ್ದುದರಿಂದ, ನ್ಯಾಯಾಧೀಶನು ಒಂದು ತಾತ್ಕಾಲಿಕ ತಡೆಯಾಜ್ಞೆಯನ್ನು ದಯಪಾಲಿಸಲಿಲ್ಲ. ಒಂದುವೇಳೆ ಸರಕಾರವು ಆ ಮಸೂದೆಯನ್ನು ಪ್ರಯೋಗಿಸಲು ಪ್ರಯತ್ನಿಸಿದರೆ, ನೀನು ರಕ್ಷಣೆಗಾಗಿ ನನ್ನ ಬಳಿ ಬರಬಹುದೆಂದು ಆ ನ್ಯಾಯಾಧೀಶನು ಹೇಳಿದನು. ನ್ಯಾಯಾಧೀಶರ ಈ ಕ್ರಮವು ಒಂದು ತಾತ್ಕಾಲಿಕ ತಡೆಯಾಜ್ಞೆಯಷ್ಟೇ ಪರಿಣಾಮಕಾರಿಯಾಗಿತ್ತು, ಯಾಕೆಂದರೆ ಡ್ಯೂಪ್ಲಾಸೀ ಆ ಕಾನೂನನ್ನು ಪ್ರಯೋಗಿಸಲು ಪ್ರಯತ್ನಿಸಿದ ಕೂಡಲೇ, ಅವನನ್ನು ತಡೆಯಲಾಗುವುದು ಎಂಬುದು ಇದರ ಅರ್ಥವಾಗಿತ್ತು!

ಮುಂದಿನ ವಾರದಲ್ಲಿ, ಈ ಹೊಸ ಕಾನೂನಿಗನುಸಾರ ಪೊಲೀಸರು ಯಾವುದಾದರೂ ಕ್ರಮವನ್ನು ತೆಗೆದುಕೊಳ್ಳುತ್ತಾರೊ ಎಂದು ನಾವು ಕಾದುನೋಡಿದೆವು. ಆದರೆ ಏನೂ ಆಗಲಿಲ್ಲ! ಹೀಗೇಕೆ ಎಂಬುದನ್ನು ಪತ್ತೆಹಚ್ಚಲು ನಾನೊಂದು ಚಿಕ್ಕ ಪರೀಕ್ಷೆಯನ್ನು ಏರ್ಪಡಿಸಿದೆ. ಇದಕ್ಕಾಗಿ, ವಿಕ್ಟೋರಿಯಾ ಡಗಲಕ್‌ (ನಂತರ ಸ್ಟೀಲ್‌ ಆದರು) ಮತ್ತು ಹೆಲೆನ್‌ ಡಗಲಕ್‌ (ನಂತರ ಸಿಮ್‌ಕಾಕ್ಸ್‌ ಆದರು) ಎಂಬ ಇಬ್ಬರು ಪಯನೀಯರ್‌ ಸಹೋದರಿಯರು, ಡ್ಯೂಪ್ಲಾಸೀಯ ಪಟ್ಟಣದಲ್ಲೇ ಅಂದರೆ ಟ್ರಾಯ್ಸ್‌-ರಿವೇರಿಸ್‌ ಎಂಬ ನಗರದಲ್ಲಿ ಸಾಹಿತ್ಯದೊಂದಿಗೆ ಮನೆಯಿಂದ ಮನೆಗೆ ಹೋದರು. ಆಗಲೂ ಏನೂ ಆಗಲಿಲ್ಲ. ಈ ಸಹೋದರಿಯರು ಹೀಗೆಯೇ ಮನೆಯಿಂದ ಮನೆಗೆ ಹೋಗುತ್ತಿದ್ದಾಗ, ಪೊಲೀಸರಿಗೆ ಫೋನ್‌ ಮಾಡಿ ಹೇಳುವಂತೆ ಲೊರ್ಯಾ ಸೊಮುಅರ್‌ರವರನ್ನು ಕಳುಹಿಸಿದೆ. ಅವನು ತನ್ನ ಗುರುತನ್ನು ಹೇಳದೇ, ಯೆಹೋವನ ಸಾಕ್ಷಿಗಳು ಸಾರುತ್ತಿದ್ದಾರೆ ಮತ್ತು ಪೊಲೀಸರು ಡ್ಯೂಪ್ಲಾಸೀಯ ಹೊಸ ಕಾನೂನನ್ನು ಜಾರಿಗೆ ತರುತ್ತಿಲ್ಲವೆಂದು ದೂರುಕೊಟ್ಟನು.

ಅಲ್ಲಿದ್ದ ಆಫೀಸರನು ಅಂಜುತ್ತಾ ಹೇಳಿದ್ದು: “ಹೌದು, ಆ ಕಾನೂನನ್ನು ಅನುಮೋದಿಸಲಾಗಿದೆಯೆಂದು ನಮಗೆ ಗೊತ್ತಿದೆ; ಆದರೆ ಮರುದಿನವೇ ಯೆಹೋವನ ಸಾಕ್ಷಿಗಳು ನಮ್ಮ ವಿರುದ್ಧ ಒಂದು ತಡೆಯಾಜ್ಞೆಯನ್ನು ತಂದಿರುವುದರಿಂದ ಈಗ ನಮಗೇನೂ ಮಾಡಲಾಗುವುದಿಲ್ಲ.” ತತ್‌ಕ್ಷಣವೇ ನಾವು ನಮ್ಮ ಸಾಹಿತ್ಯವನ್ನು ಕ್ಯೂಬೆಕ್‌ ಪ್ರಾಂತದೊಳಗೆ ತಂದೆವು. ಈ ಮೊಕದ್ದಮೆಯನ್ನು ಉಚ್ಚ ಕೋರ್ಟುಗಳಲ್ಲಿ ಅಪೀಲ್‌ಮಾಡಲು ತಗಲಿದ ಹತ್ತು ವರ್ಷಗಳು ತಗಲಿದವು. ಈ ಎಲ್ಲ ಸಮಯದಲ್ಲಿ ನಮ್ಮ ಸಾರುವ ಕೆಲಸವು ಯಾವುದೇ ಅಡಚಣೆಗಳಿಲ್ಲದೇ ಸರಾಗವಾಗಿ ಮುಂದುವರಿಯಿತು.

ತಡೆಯಾಜ್ಞೆಯನ್ನು ಪಡೆಯುವುದರೊಂದಿಗೆ, ಮಸೂದೆ ನಂ. 38ನ್ನು ಅಸಾಂವಿಧಾನಿಕವೆಂದು ಘೋಷಿಸಲ್ಪಡುವಂತೆಯೂ ಪ್ರಯತ್ನಿಸಿದೆವು. ಈ ಕಾನೂನನ್ನು ಯೆಹೋವನ ಸಾಕ್ಷಿಗಳ ವಿರುದ್ಧವೇ ಸಿದ್ಧಗೊಳಿಸಲಾಗಿತ್ತೆಂದು ರುಜುಪಡಿಸಲು ನಾವು ಕೆಚ್ಚೆದೆಯಿಂದ ಒಂದು ಕ್ರಮವನ್ನು ತೆಗೆದುಕೊಂಡೆವು. ಸ್ವತಃ ಡ್ಯೂಪ್ಲಾಸೀ ವಿಚಾರಣೆಗೆ ಬಂದು ರುಜುವಾತನ್ನು ಕೊಡುವಂತೆ ಒತ್ತಾಯಪಡಿಸುವ, ನ್ಯಾಯಾಲಯದ ಮುಂದೆ ಹಾಜರಾಗುವ ಒಂದು ಲಿಖಿತ ಆದೇಶವನ್ನು ಕಳುಹಿಸಿದೆವು. ಎರಡೂವರೆ ತಾಸುಗಳ ವರೆಗೆ ನಾನು ಅವನ ವಿಚಾರಣೆ ನಡೆಸಿದೆ. “ಯೆಹೋವನ ಸಾಕ್ಷಿಗಳ ಮೇಲೆ ನಿಷ್ಕಾರುಣ್ಯವಾಗಿ ಯುದ್ಧ”ಮಾಡುವ ಅವನ ಘೋಷಣೆಗಳು ಮತ್ತು ಮಸೂದೆ ನಂ. 38 ಕ್ಯೂಬೆಕ್‌ನಲ್ಲಿ ಯೆಹೋವನ ಸಾಕ್ಷಿಗಳನ್ನು ಕೊನೆಗಾಣಿಸುವುದು ಎಂದು ಅವನು ಬಹಿರಂಗವಾಗಿ ಮಾಡಿದ ಘೋಷಣೆಗಳನ್ನು ನಾನು ಪದೇ ಪದೇ ಒತ್ತಿ ಹೇಳಿದೆ. ಕೋಪದಿಂದ ಕುದಿಯುತ್ತಾ, ಅವನು ನನ್ನನ್ನು ವೈಯಕ್ತಿಕವಾಗಿ ಆಕ್ರಮಿಸುತ್ತಾ ಹೇಳಿದ್ದು: “ನೀನೊಬ್ಬ ಅಧಿಕಪ್ರಸಂಗಿ!”

ಅದಕ್ಕೆ ಉತ್ತರವಾಗಿ ನಾನು ಹೇಳಿದ್ದು: “ಶ್ರೀಮಾನ್‌ ಡ್ಯೂಪ್ಲಾಸೀಯವರೇ, ನಾವು ಪರಸ್ಪರರ ಸ್ವಭಾವಗಳ ಕುರಿತಾಗಿ ಚರ್ಚಿಸುತ್ತಿದ್ದಲ್ಲಿ, ನಾನು ಸಹ ಕೆಲವೊಂದು ವಿಷಯಗಳನ್ನು ಹೇಳಬಹುದಿತ್ತು. ಆದರೆ ಈಗ ನಮಗೆ ತುಂಬ ಗಂಭೀರವಾದ ಕೆಲಸವಿರುವುದರಿಂದ, ಆ ವಿಷಯವನ್ನು ಬಿಟ್ಟು ನನ್ನ ಕೊನೆಯ ಪ್ರಶ್ನೆಗೆ ನೀವೇಕೆ ಉತ್ತರವನ್ನು ಕೊಡಲಿಲ್ಲವೆಂದು ದಯವಿಟ್ಟು ಕೋರ್ಟಿಗೆ ವಿವರಿಸಿ ಹೇಳುವಿರಾ?”

1964ರಲ್ಲಿ, ನಾನು ಕೆನಡದ ಸರ್ವೋಚ್ಚ ನ್ಯಾಯಾಲಯದ ಮುಂದೆ ಮಸೂದೆ ನಂ. 38ರ ಕುರಿತಾಗಿ ವಾದಿಸಿದೆ. ಆದರೆ ಆ ಕಾನೂನು ಎಂದೂ ಪ್ರಯೋಗಿಸಲ್ಪಡದೇ ಇದ್ದುದರಿಂದ, ಅದರ ಸಂವಿಧಾನಾತ್ಮಕತೆಯ ಕುರಿತಾಗಿ ಅವರು ಯಾವುದೇ ತೀರ್ಪನ್ನು ಕೊಡಲು ನಿರಾಕರಿಸಿದರು. ಆದರೆ ಅಷ್ಟರೊಳಗೆ ಡ್ಯೂಪ್ಲಾಸೀ ಸತ್ತುಹೋಗಿದ್ದನು, ಮತ್ತು ಅಂದಿನಿಂದ ಯಾರೂ ಮಸೂದೆ ನಂ. 38ರ ಗೊಡವೆಗೇ ಹೋಗಲಿಲ್ಲ. ಅದು ಯೆಹೋವನ ಸಾಕ್ಷಿಗಳು ಅಥವಾ ಬೇರೆ ಯಾರ ವಿರುದ್ಧವೂ ಪ್ರಯೋಗಿಸಲ್ಪಡಲೇ ಇಲ್ಲ.

ಡ್ಯೂಪ್ಲಾಸೀ 1959ರಲ್ಲಿ ತೀರಿಹೋಗುವ ಸ್ವಲ್ಪ ಮುಂಚೆ, ಅವನು ಸಹೋದರ ರಾನ್‌ಕಾರೆಲಿಯವರ ಸರಾಯಿ ಪರವಾನಗಿಯನ್ನು ಕಾನೂನುಬಾಹಿರವಾಗಿ ರದ್ದುಗೊಳಿಸಿದ್ದರಿಂದ ಅವರಿಗೆ ನಷ್ಟಭರ್ತಿಮಾಡಿಕೊಡುವಂತೆ ಕೆನಡದ ಸರ್ವೋಚ್ಚ ನ್ಯಾಯಾಲಯವು ಆದೇಶಿಸಿತು. ಅಂದಿನಿಂದ ಕ್ಯೂಬೆಕ್‌ನ ಜನರು ಯೆಹೋವನ ಸಾಕ್ಷಿಗಳೊಂದಿಗೆ ತುಂಬ ಸ್ನೇಹಪರರಾಗಿದ್ದಾರೆ. ಸರಕಾರದ ಒಂದು ಗಣತಿಗನುಸಾರ, ಅಲ್ಲಿರುವ ಸಾಕ್ಷಿಗಳ ಸಂಖ್ಯೆಯು, 1943ರಲ್ಲಿ 300ರಿಂದ ಇಂದು 33,000ಕ್ಕೆ ಏರಿದೆ. ಯೆಹೋವನ ಸಾಕ್ಷಿಗಳು ಈಗ ಆ ಪ್ರಾಂತದಲ್ಲಿರುವ ಧಾರ್ಮಿಕ ಗುಂಪುಗಳಲ್ಲಿ ನಾಲ್ಕನೆಯ ಸ್ಥಾನದಲ್ಲಿದ್ದಾರೆಂದು ಪಟ್ಟಿಮಾಡಲಾಗಿದೆ. ಈ ಕಾನೂನುಸಂಬಂಧಿತ ವಿಜಯಗಳು ಅಥವಾ ಯೆಹೋವನ ಸಾಕ್ಷಿಗಳ ಶುಶ್ರೂಷೆಯಲ್ಲಿನ ಯಶಸ್ಸು ಯಾವುದೇ ಮನುಷ್ಯನ ಸಾಧನೆಗಳಾಗಿವೆಯೆಂದು ನಾನೆಣಿಸುವುದಿಲ್ಲ. ಅದಕ್ಕೆ ಬದಲಾಗಿ, ಯುದ್ಧವು ನಮ್ಮದಲ್ಲ ಯೆಹೋವನದ್ದೇ ಆಗಿರುವುದರಿಂದ ಆತನು ನಮಗೆ ವಿಜಯವನ್ನು ಕೊಡುತ್ತಾನೆಂದು ಇದು ನನಗೆ ರುಜುಪಡಿಸಿದೆ.—2 ಪೂರ್ವಕಾಲವೃತ್ತಾಂತ 20:15.

ಪರಿಸ್ಥಿತಿಗಳಲ್ಲಿ ಬದಲಾವಣೆಗಳು

1954ರಲ್ಲಿ ನಾನು ಮಾರ್ಗರೆಟ್‌ ಬೀಗಲ್‌ ಎಂಬ ಇಂಗ್ಲೆಂಡಿನ ಒಬ್ಬ ಚೆಲುವೆಯನ್ನು ಮದುವೆಯಾದೆ. ಅವಳೊಬ್ಬ ಪಯನೀಯರಳಾಗಿದ್ದಳು ಮತ್ತು ನಾವು ಜೊತೆಯಾಗಿ ಪಯನೀಯರ್‌ ಸೇವೆಯನ್ನು ಮಾಡಲಾರಂಭಿಸಿದೆವು. ನಾನು ಕೆನಡದಲ್ಲಿ ಮತ್ತು ಅಮೆರಿಕದಲ್ಲಿ ಕೋರ್ಟ್‌ ಮೊಕದ್ದಮೆಗಳ ವಕಾಲತ್ತು ನಡಿಸುವುದನ್ನು, ಮತ್ತು ಯೂರೋಪ್‌ ಹಾಗೂ ಆಸ್ಟ್ರೇಲಿಯದಲ್ಲಿನ ಕೆಲವೊಂದು ಮೊಕದ್ದಮೆಗಳಲ್ಲಿ ಸಮಾಲೋಚಕನಾಗಿ ಸೇವೆಸಲ್ಲಿಸುವುದನ್ನು ಮುಂದುವರಿಸಿದೆ. ಮಾರ್ಗರೆಟ್‌ ನನ್ನ ಸೆಕ್ರಿಟರಿಯಾದಳು ಮತ್ತು ಅನೇಕ ವರ್ಷಗಳ ವರೆಗೆ ಅವಳು ನನಗೆ ಅತ್ಯಮೂಲ್ಯವಾದ ಆಸರೆಯಾಗಿದ್ದಳು. 1984ರಲ್ಲಿ ನಾನು ಮಾರ್ಗರೆಟ್‌ಳೊಂದಿಗೆ ಕೆನಡ ಬ್ರಾಂಚ್‌ನಲ್ಲಿರಲು ಹಿಂದಿರುಗಿ ಬಂದೆ ಮತ್ತು ಒಂದು ಕಾನೂನು ವಿಭಾಗವನ್ನು ಪುನಸ್ಸ್ಥಾಪಿಸಲು ಸಹಾಯಮಾಡಿದೆ. ಆದರೆ ಮಾರ್ಗರೆಟ್‌ 1987ರಲ್ಲಿ ಕ್ಯಾನ್ಸರ್‌ ರೋಗಕ್ಕೆ ಬಲಿಯಾಗಿ ತೀರಿಕೊಂಡಳು ಎಂಬುದು ನೋವಿನ ಸಂಗತಿಯಾಗಿದೆ.

ನನ್ನ ತಮ್ಮ ಜೋ ಮತ್ತು ಅವನ ಹೆಂಡತಿ ಎಲ್ಸೀ, ವಾಚ್‌ಟವರ್‌ ಬೈಬಲ್‌ ಸ್ಕೂಲ್‌ ಆಫ್‌ ಗಿಲ್ಯಡ್‌ನ ಒಂಬತ್ತನೆಯ ತರಗತಿಯಲ್ಲಿ ಮಿಷನೆರಿಗಳಾಗಿ ತರಬೇತಿಗೊಳಿಸಲ್ಪಟ್ಟಿದ್ದರು. ಆದರೆ 1969ರಲ್ಲಿ ನನ್ನ ತಾಯಿಯ ಮರಣದ ಬಳಿಕ, ಅವರು ತಂದೆಯವರನ್ನು ತಮ್ಮ ಮನೆಗೆ ಕರೆತಂದು, ಅವರು ಸಾಯುವ ವರೆಗೆ ಅಂದರೆ 16 ವರ್ಷಗಳ ವರೆಗೆ ಅವರನ್ನು ಪರಾಮರಿಸಿದರು. ಅವರ ಈ ರೀತಿಯ ಸ್ವತ್ಯಾಗದ ಮೂಲಕ, ನಾನು ಪೂರ್ಣ ಸಮಯದ ಸೇವೆಯಲ್ಲಿಯೇ ಉಳಿಯುವಂತೆ ಅವರು ನನ್ನನ್ನು ಶಕ್ತಗೊಳಿಸಿದರು ಮತ್ತು ಇದಕ್ಕಾಗಿ ನಾನು ಅವರಿಗೆ ಚಿರಋಣಿ.

ಮುಂದುವರಿದ ಹೋರಾಟಗಳು

ವರ್ಷಗಳು ದಾಟಿದಂತೆ, ಯೆಹೋವನ ಸಾಕ್ಷಿಗಳಿಗೆ ಸಂಬಂಧಿಸಿದ ಕಾನೂನು ಹೋರಾಟಗಳು ಬದಲಾಗಿವೆ. ಅನೇಕ ಮೊಕದ್ದಮೆಗಳಲ್ಲಿ ರಾಜ್ಯ ಸಭಾಗೃಹಗಳು ಮತ್ತು ಅಸೆಂಬ್ಲಿ ಹಾಲ್‌ಗಳಿಗಾಗಿ ಆಸ್ತಿ ಮತ್ತು ಪರವಾನಗಿಗಳನ್ನು ಪಡೆದುಕೊಳ್ಳುವುದು ಒಳಗೂಡಿತ್ತು. ಬೇರೆ ಮೊಕದ್ದಮೆಗಳು ಮಗುವಿನ ಕಸ್ಟಡಿಯ ವಿವಾದಗಳಾಗಿರುತ್ತಿದ್ದವು. ಇದರಲ್ಲಿ ಸಾಕ್ಷಿಗಳಾಗಿರದ ಹೆತ್ತವರು ತಮ್ಮ ಮಕ್ಕಳ ಏಕೈಕ ಪಾಲಕರಾಗಿರಲು ಅಥವಾ ಸಾಕ್ಷಿ ಹೆತ್ತವರು ತಮ್ಮ ಮಕ್ಕಳಿಗೆ ಪ್ರಯೋಜನಕರವಾಗಿರುವ ಧಾರ್ಮಿಕ ನಂಬಿಕೆಗಳು ಹಾಗೂ ಆಚರಣೆಗಳ ಕುರಿತು ತಿಳಿಸುವುದರಿಂದ ನಿರ್ಬಂಧಿಸಲಿಕ್ಕಾಗಿ ಧಾರ್ಮಿಕ ಅಂಧಾಭಿಮಾನವನ್ನು ಉಪಯೋಗಿಸುತ್ತಿದ್ದರು.

1989ರಲ್ಲಿ ಲಿಂಡಾ ಮ್ಯಾನಿಂಗ್‌ ಎಂಬ ಅಮೆರಿಕದ ಒಬ್ಬ ಮಹಿಳಾ ವಕೀಲಳು, ತಾತ್ಕಾಲಿಕ ಕಾನೂನುಸಂಬಂಧಿತ ಸಹಾಯವನ್ನು ಕೊಡಲು ಕೆನಡದ ಬ್ರಾಂಚ್‌ಗೆ ಬಂದಳು. ಅದೇ ವರ್ಷದ ನವೆಂಬರ್‌ ತಿಂಗಳಲ್ಲಿ ನಾವು ಮದುವೆಯಾಗಿ, ಅಂದಿನಿಂದ ಇಲ್ಲಿ ಜೊತೆಯಾಗಿ ಸಂತೋಷದಿಂದ ಕೆಲಸಮಾಡುತ್ತಿದ್ದೇವೆ.

1990ರ ದಶಕದಲ್ಲಿ, ಕೆನಡದ ಬ್ರಾಂಚ್‌ನಲ್ಲಿ ಒಬ್ಬ ಜೊತೆ ವಕೀಲನಾಗಿರುವ ಜಾನ್‌ ಬರ್ನ್ಸ್‌ ಮತ್ತು ನಾನು ಜಪಾನಿನಲ್ಲಿದ್ದೆವು. ಅಲ್ಲಿ, ಶಾಲೆಯಿಂದ ಕಡ್ಡಾಯಗೊಳಿಸಲ್ಪಟ್ಟಿದ್ದ ಕಾದಾಡುವ ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದನ್ನು ನಿರಾಕರಿಸಲು ಒಬ್ಬ ವಿದ್ಯಾರ್ಥಿಗೆ ಇರುವಂತಹ ಸ್ವಾತಂತ್ರ್ಯದ ಕುರಿತಾದ ಒಂದು ಸಂವಿಧಾನಾತ್ಮಕ ಮೊಕದ್ದಮೆಯನ್ನು ಜಯಿಸುವುದರಲ್ಲಿ ನಮ್ಮ ಕ್ರೈಸ್ತ ಸಹೋದರರಿಗೆ ಸಹಾಯಮಾಡಿದೆವು. ರಕ್ತಪೂರಣವನ್ನು ನಿರಾಕರಿಸಲು ಒಬ್ಬ ವಯಸ್ಕನಿಗಿರುವ ಹಕ್ಕಿನ ಕುರಿತಾದ ಒಂದು ಮೊಕದ್ದಮೆಯಲ್ಲೂ ನಮಗೆ ವಿಜಯವು ಸಿಕ್ಕಿತು.

ಅನಂತರ 1995 ಮತ್ತು 1996ರಲ್ಲಿadjustment, ಸಿಂಗಾಪುರದಲ್ಲಿ ಯೆಹೋವನ ಸಾಕ್ಷಿಗಳ ಮೇಲಿನ ನಿಷೇಧ ಮತ್ತು ಅದರಿಂದ ಫಲಿಸಿದ ಆಪಾದನೆಗಳಿಂದಾಗಿ, ಲಿಂಡಾ ಮತ್ತು ನಾನು ಸಿಂಗಾಪುರದಲ್ಲಿ ಐದು ತಿಂಗಳುಗಳನ್ನು ಕಳೆಯುವ ಸುಯೋಗವನ್ನು ಪಡೆದೆವು. ಕ್ರೈಸ್ತ ಕೂಟಗಳಿಗೆ ಹಾಜರಾಗುತ್ತಿದ್ದುದಕ್ಕಾಗಿ ಮತ್ತು ಬೈಬಲುಗಳು ಹಾಗೂ ಧಾರ್ಮಿಕ ಸಾಹಿತ್ಯವನ್ನು ಇಟ್ಟುಕೊಂಡದ್ದಕ್ಕಾಗಿ 64 ಮಂದಿ ಸ್ತ್ರೀಪುರುಷರು ಮತ್ತು ಯುವ ಜನರು ಕ್ರಿಮಿನಲ್‌ ಆರೋಪಗಳಿಗೆ ಒಳಗಾಗಿದ್ದರು. ನಾನು ಅವರ ಪರವಾಗಿ ವಾದಿಸಿದೆ. ನಾವು ಅಲ್ಲಿ ಯಾವುದೇ ಮೊಕದ್ದಮೆಯನ್ನು ಜಯಿಸದಿದ್ದರೂ, ಸಮಗ್ರತೆಯನ್ನು ಕಾಪಾಡಿಕೊಂಡು, ಆನಂದದಿಂದ ತಾಳಿಕೊಳ್ಳುವಂತೆ ಯೆಹೋವನು ತನ್ನ ನಂಬಿಗಸ್ತ ಸೇವಕರನ್ನು ಹೇಗೆ ಬಲಪಡಿಸುತ್ತಾನೆಂಬುದನ್ನು ನೋಡಿದೆವು.

ಒಂದಿಷ್ಟನ್ನು ಮಾಡಲು ಸಿಕ್ಕಿರುವ ಅವಕಾಶಕ್ಕಾಗಿ ಆಭಾರಿ

ಈ 80 ವರ್ಷ ಪ್ರಾಯದಲ್ಲಿ ನನಗಿನ್ನೂ ಒಳ್ಳೆಯ ಆರೋಗ್ಯವಿರುವುದರಿಂದ ಮತ್ತು ಯೆಹೋವನ ಜನರ ಕಾನೂನುಸಂಬಂಧಿತ ಕದನಗಳಲ್ಲಿ ಹೋರಾಡುವುದರಲ್ಲಿ ಸ್ವಲ್ಪ ಸಹಾಯವನ್ನು ಮಾಡಲು ಈಗಲೂ ಶಕ್ತನಾಗಿರುವುದರಿಂದ ನಾನು ಸಂತೋಷಿಸುತ್ತೇನೆ. ಇಂದಿಗೂ ನಾನು ಕೋರ್ಟಿಗೆ ಹೋಗಿ, ಸತ್ಯಕ್ಕಾಗಿ ಹೋರಾಡಲು ಸಿದ್ಧ. ಕೆನಡದಲ್ಲಿರುವ ಸಾಕ್ಷಿಗಳ ಸಂಖ್ಯೆಯು 1940ರಲ್ಲಿ 4,000ದಿಂದ ಈಗ 1,11,000ಕ್ಕೆ ಏರಿರುವುದನ್ನು ನೋಡಿ ನನಗೆ ಆನಂದವಾಗುತ್ತದೆ. ಜನರು ಬಂದುಹೋಗುತ್ತಾರೆ, ಘಟನೆಗಳು ಆಗಿಹೋಗುತ್ತವೆ, ಆದರೆ ತನ್ನ ಜನರು ನಿರಂತರವಾಗಿ ಮುಂದೊತ್ತಿ, ಆತ್ಮಿಕವಾಗಿ ಏಳಿಗೆಹೊಂದುವುದನ್ನು ಯೆಹೋವನು ಖಚಿತಪಡಿಸಿಕೊಳ್ಳುತ್ತಾ ಇದ್ದಾನೆ.

ಸಮಸ್ಯೆಗಳಿವೆಯೊ? ಖಂಡಿತವಾಗಿಯೂ ಇವೆ. ಆದರೆ ಯೆಹೋವನ ವಾಕ್ಯವು ನಮಗೆ ಈ ಆಶ್ವಾಸನೆಯನ್ನು ಕೊಡುತ್ತದೆ: “ನಿನ್ನನ್ನು ಎದುರಿಸಲು ಕಲ್ಪಿಸಿದ ಯಾವ ಆಯುಧವೂ ಜಯಿಸದು.” (ಯೆಶಾಯ 54:17) ‘ಸುವಾರ್ತೆಯನ್ನು ಸಮರ್ಥಿಸಿ ಅದನ್ನು ಕಾನೂನುಬದ್ಧವಾಗಿ ಸ್ಥಾಪಿಸುತ್ತಾ,’ ಪೂರ್ಣ ಸಮಯದ ಶುಶ್ರೂಷೆಯಲ್ಲಿ ನಾನು ಕಳೆದಿರುವ 56ಕ್ಕಿಂತಲೂ ಹೆಚ್ಚಿನ ವರ್ಷಗಳ ಅನುಭವದ ಆಧಾರದ ಮೇಲೆ ಯೆಶಾಯನ ಆ ಪ್ರವಾದನೆಯು ಎಷ್ಟು ಸತ್ಯವಾಗಿದೆಯೆಂಬುದಕ್ಕೆ ನಾನು ಸಾಕ್ಷ್ಯವನ್ನು ಕೊಡಬಲ್ಲೆ!—ಫಿಲಿಪ್ಪಿ 1:7.

[ಪುಟ 17ರಲ್ಲಿರುವ ಚಿತ್ರ]

ನನ್ನ ತಮ್ಮ ಮತ್ತು ನಮ್ಮ ಹೆತ್ತವರೊಂದಿಗೆ

[ಪುಟ 17ರಲ್ಲಿರುವ ಚಿತ್ರ]

ವಕೀಲ ಹೇಡನ್‌ ಕೊವಿಂಗ್ಟನ್‌

[ಪುಟ 17ರಲ್ಲಿರುವ ಚಿತ್ರ]

ನೇತನ್‌ ನಾರ್‌ರೊಂದಿಗೆ

[ಪುಟ 18ರಲ್ಲಿರುವ ಚಿತ್ರ]

ಕಾರ್ಡಿನಲ್‌ ವಿಲೆನೌವ್‌ರ ಮುಂದೆ ಮೊಣಕಾಲೂರುತ್ತಿರುವ ಡ್ಯೂಪ್ಲಾಸೀ

[ಕೃಪೆ]

Photo by W. R. Edwards

[ಪುಟ 18, 19ರಲ್ಲಿರುವ ಚಿತ್ರ]

ಫ್ರಾಂಕ್‌ ರಾನ್‌ಕಾರೆಲಿ

[ಕೃಪೆ]

Courtesy Canada Wide

[ಪುಟ 19ರಲ್ಲಿರುವ ಚಿತ್ರ]

ಈಮೇ ಬುಷೇ

[ಪುಟ 22ರಲ್ಲಿರುವ ಚಿತ್ರ]

ಜೊತೆ ವಕೀಲರಾಗಿರುವ ಜಾನ್‌ ಬರ್ನ್ಸ್‌ ಮತ್ತು ನನ್ನ ಹೆಂಡತಿ ಲಿಂಡಾರೊಂದಿಗೆ