ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೇಸುವನ್ನು ಆರಾಧಿಸುವುದು ಸರಿಯೋ?

ಯೇಸುವನ್ನು ಆರಾಧಿಸುವುದು ಸರಿಯೋ?

ಬೈಬಲಿನ ದೃಷ್ಟಿಕೋನ

ಯೇಸುವನ್ನು ಆರಾಧಿಸುವುದು ಸರಿಯೋ?

ಶತಮಾನಗಳಾದ್ಯಂತ, ಕ್ರೈಸ್ತಪ್ರಪಂಚದಲ್ಲಿ ಅನೇಕರು ಯೇಸು ಕ್ರಿಸ್ತನನ್ನು ಸರ್ವಶಕ್ತ ದೇವರಂತೆ ಆರಾಧಿಸಿದ್ದಾರೆ. ಆದರೆ ಸ್ವತಃ ಯೇಸು, ಜನರ ಗಮನವನ್ನು ಮತ್ತು ಆರಾಧನೆಯನ್ನು ಕೇವಲ ಯೆಹೋವ ದೇವರ ಕಡೆಗೆ ನಿರ್ದೇಶಿಸಿದನು. ಉದಾಹರಣೆಗಾಗಿ, ಪಿಶಾಚನಿಗೆ ಸಾಷ್ಟಾಂಗನಮಸ್ಕಾರ ಮಾಡುವಂತೆ ಶೋಧನೆಗೊಳಪಡಿಸಲ್ಪಟ್ಟಾಗ ಯೇಸು ಅಂದದ್ದು: “ನಿನ್ನ ದೇವರಾಗಿರುವ ಕರ್ತನಿಗೆ [“ಯೆಹೋವನಿಗೆ,” NW] ಅಡ್ಡಬಿದ್ದು ಆತನೊಬ್ಬನನ್ನೇ ಆರಾಧಿಸಬೇಕು.” (ಮತ್ತಾಯ 4:10) ತದನಂತರ ಯೇಸು ತನ್ನ ಶಿಷ್ಯರಿಗೆ ಸೂಚನೆ ಕೊಟ್ಟದ್ದು: “ಭೂಲೋಕದಲ್ಲಿ ಯಾರನ್ನೂ ನಮ್ಮ ತಂದೆ ಎಂದು ಕರೆಯಬೇಡಿರಿ; ಪರಲೋಕದಲ್ಲಿರುವಾತನೊಬ್ಬನೇ ನಿಮಗೆ ತಂದೆ.”—ಮತ್ತಾಯ 23:9.

ಜನರು ದೇವರಿಗೆ ಯಾವ ರೀತಿಯ ಆರಾಧನೆಯನ್ನು ಸಲ್ಲಿಸಬೇಕು ಎಂಬುದನ್ನು ಯೇಸು ಒಬ್ಬ ಸಮಾರ್ಯದ ಸ್ತ್ರೀಗೆ ವರ್ಣಿಸಿದನು. ಅವರ ಆರಾಧನೆಯು ಆತ್ಮ ಮತ್ತು ಸತ್ಯದ ಮೇಲೆ ಆಧಾರಿತವಾಗಿರಬೇಕು. ಖಂಡಿತವಾಗಿಯೂ, ‘ತಂದೆಯು ತನ್ನನ್ನು ಆರಾಧಿಸುವವರು ಇಂಥವರೇ ಆಗಿರಬೇಕೆಂದು ಅಪೇಕ್ಷಿಸುತ್ತಾನೆ.’ (ಯೋಹಾನ 4:23, 24) ಹೌದು, ಪೂಜ್ಯಭಾವದ ಭಕ್ತಿಯು ಕೇವಲ ದೇವರಿಗೆ ಕೊಡಲ್ಪಡಬೇಕು. ಬೇರಾವುದೇ ವ್ಯಕ್ತಿ ಅಥವಾ ವಸ್ತುವನ್ನು ಆರಾಧಿಸುವುದು ಒಂದು ರೀತಿಯ ವಿಗ್ರಹಾರಾಧನೆಯಾಗಿರುವುದು. ಮತ್ತು ಇದನ್ನು ಹೀಬ್ರು ಹಾಗೂ ಗ್ರೀಕ್‌ ಶಾಸ್ತ್ರಗಳಲ್ಲಿ ಖಂಡಿಸಲಾಗಿದೆ.—ವಿಮೋಚನಕಾಂಡ 20:4, 5; ಗಲಾತ್ಯ 5:19, 20.

‘ಆದರೆ ನಾವು ಯೇಸುವನ್ನು ಸಹ ಆರಾಧಿಸಬೇಕೆಂದು ಸ್ವತಃ ಬೈಬಲೇ ಸೂಚಿಸುತ್ತದಲ್ಲವೇ? ಇಬ್ರಿಯ 1:6ರಲ್ಲಿ “ಎಲ್ಲ ದೇವದೂತರು [ಯೇಸುವನ್ನು] ಆರಾಧಿಸಲಿ” ಎಂದು ಪೌಲನು ಹೇಳಲಿಲ್ಲವೊ?’ (ಕಿಂಗ್‌ ಜೇಮ್ಸ್‌ ವರ್ಷನ್‌) ಎಂದು ಕೆಲವರು ಮರುಪ್ರಶ್ನೆ ಹಾಕಬಹುದು. ವಿಗ್ರಹಾರಾಧನೆಯ ಕುರಿತಾಗಿ ಬೈಬಲ್‌ ಏನನ್ನು ಹೇಳುತ್ತದೊ ಅದನ್ನು ಮನಸ್ಸಿನಲ್ಲಿಟ್ಟುಕೊಂಡು ನಾವು ಈ ವಚನವನ್ನು ಹೇಗೆ ಅರ್ಥಮಾಡಿಕೊಳ್ಳಬಹುದು?

ಬೈಬಲಿನಲ್ಲಿ ತಿಳಿಸಲ್ಪಟ್ಟಿರುವ ಆರಾಧನೆ

‘ಆರಾಧಿಸಲಿ’ ಎಂದು ಪೌಲನು ಹೇಳಿದಾಗ, ಅವನು ಹೇಳಿದ್ದರ ಅರ್ಥವೇನಾಗಿತ್ತೆಂಬುದನ್ನು ನಾವು ಮೊದಲಾಗಿ ತಿಳಿದುಕೊಳ್ಳಬೇಕು. ಅವನು ಇಲ್ಲಿ ಪ್ರೊಸ್ಕೀನೀಯೊ ಎಂಬ ಗ್ರೀಕ್‌ ಪದವನ್ನು ಉಪಯೋಗಿಸಿದನು. ಈ ಪದದ ಅಕ್ಷರಾರ್ಥವು, ‘ಪೂಜ್ಯಭಾವನೆಯ ಸಂಕೇತದೋಪಾದಿ ಅಥವಾ ಗೌರವಾರ್ಪಣೆಯೋಪಾದಿ ಒಬ್ಬ ವ್ಯಕ್ತಿಯ ಕೈಗೆ ಮುತ್ತಿಡುವುದು’ ಆಗಿದೆಯೆಂದು ಅಂಗರ್ಸ್‌ ಬೈಬಲ್‌ ಡಿಕ್ಷನೆರಿ ಹೇಳುತ್ತದೆ. ಈ ಪದವು, “ಮನುಷ್ಯನಿಗೆ . . . ಅಥವಾ ದೇವರಿಗೆ ಪೂಜ್ಯಭಕ್ತಿಯ ಕೃತ್ಯವನ್ನು ಸೂಚಿಸುತ್ತದೆ” ಎಂದು ಡಬ್ಲ್ಯೂ. ಈ. ವೈನ್‌ರವರ ಆ್ಯನ್‌ ಎಕ್ಸ್‌ಪೊಸಿಟರಿ ಡಿಕ್ಷನೆರಿ ಆಫ್‌ ನ್ಯೂ ಟೆಸ್ಟಮೆಂಟ್‌ ವರ್ಡ್ಸ್‌ ಹೇಳುತ್ತದೆ. ಬೈಬಲ್‌ ಸಮಯಗಳಲ್ಲಿ, ಉನ್ನತ ಪದವಿಯ ಒಬ್ಬ ವ್ಯಕ್ತಿಯ ಮುಂದೆ ಅಕ್ಷರಾರ್ಥವಾಗಿ ತಲೆಬಾಗುವುದು ಪ್ರೊಸ್ಕೀನೀಯೊದಲ್ಲಿ ಸೇರಿತ್ತು.

ತನ್ನ ಧಣಿಗೆ ಒಂದು ದೊಡ್ಡ ಮೊತ್ತದ ಹಣವನ್ನು ಹಿಂದಿರುಗಿಸಲು ಅಶಕ್ತನಾಗಿದ್ದ ದಾಸನ ಕುರಿತಾದ ಯೇಸುವಿನ ಸಾಮ್ಯದ ಬಗ್ಗೆ ಯೋಚಿಸಿರಿ. ಆ ಗ್ರೀಕ್‌ ಪದದ ಒಂದು ರೂಪವು ಈ ಸಾಮ್ಯದಲ್ಲಿ ಕಂಡುಬರುತ್ತದೆ. ಅದನ್ನು ಭಾಷಾಂತರಿಸುವಾಗ, ದ ಕಿಂಗ್‌ ಜೇಮ್ಸ್‌ ವರ್ಷನ್‌ ಬೈಬಲ್‌ ಹೇಳುವುದು: “ಆದುದರಿಂದ ಆ ಸೇವಕನು ಅಡ್ಡಬಿದ್ದು, ಪ್ರಭುವೇ ನನಗೆ ದಯೆತೋರಿಸು, ನಾನು ಎಲ್ಲ ಹಣವನ್ನು ಹಿಂದಿರುಗಿಸುವೆ ಎಂದು ಹೇಳುತ್ತಾ ಅವನನ್ನು [ಅರಸನನ್ನು] ಆರಾಧಿಸಿದನು [ಪ್ರೊಸ್ಕೀನೀಯೊ ಪದದ ರೂಪ].” (ಮತ್ತಾಯ 18:26, ಓರೆಅಕ್ಷರಗಳು ನಮ್ಮವು.) ಈ ಮನುಷ್ಯನು ಒಂದು ವಿಗ್ರಹಾರಾಧಕ ಕೃತ್ಯವನ್ನು ಗೈದಿದ್ದನೊ? ಖಂಡಿತವಾಗಿಯೂ ಇಲ್ಲ! ತನ್ನ ಧಣಿಯಾಗಿದ್ದ ಮತ್ತು ತನಗಿಂತಲೂ ಮೇಲಿನ ಪದವಿಯಲ್ಲಿದ್ದ ರಾಜನಿಗೆ, ಯೋಗ್ಯವಾಗಿರುವ ಭಯಭಕ್ತಿ ಮತ್ತು ಗೌರವವನ್ನು ಅವನು ತೋರಿಸುತ್ತಿದ್ದನಷ್ಟೇ.

ಬೈಬಲ್‌ ಸಮಯಗಳಲ್ಲಿನ ಪೂರ್ವ ದೇಶಗಳಲ್ಲಿ ಅಂತಹ ಪ್ರಣಾಮಗಳು ಅಥವಾ ಗೌರವದ ಅಭಿವ್ಯಕ್ತಿಗಳು ತೀರ ಸಾಮಾನ್ಯವಾಗಿದ್ದವು. ಯಾಕೋಬನು ತನ್ನ ಅಣ್ಣನಾದ ಏಸಾವನನ್ನು ಭೇಟಿಯಾದಾಗ ಏಳು ಸಾರಿ ಬೊಗ್ಗಿ ನಮಸ್ಕರಿಸಿದನು. (ಆದಿಕಾಂಡ 33:3) ಐಗುಪ್ತದ ಆಸ್ಥಾನದಲ್ಲಿ ಯೋಸೇಫನಿಗಿದ್ದ ಪದವಿಯ ಗೌರವಾರ್ಥವಾಗಿ ಅವನ ಸಹೋದರರು ಅವನ ಮುಂದೆ ಸಾಷ್ಟಾಂಗನಮಸ್ಕಾರ ಮಾಡಿದರು ಅಥವಾ ಪ್ರಣಾಮಮಾಡಿದರು. (ಆದಿಕಾಂಡ 42:6) ಈ ವಿಷಯವನ್ನು ನಾವು ಮನಸ್ಸಿನಲ್ಲಿಟ್ಟರೆ, ಜ್ಯೋತಿಷಿಗಳು ಚಿಕ್ಕ ಮಗುವಾಗಿದ್ದ ಯೇಸುವನ್ನು ಕಂಡುಕೊಂಡಾಗ ಏನು ಸಂಭವಿಸಿತೊ ಅದನ್ನು ಇನ್ನೂ ಚೆನ್ನಾಗಿ ಅರ್ಥಮಾಡಿಕೊಳ್ಳಲು ಶಕ್ತರಾಗುವೆವು. ಯೇಸು, “ಯೆಹೂದ್ಯರ ಅರಸನಾಗಿ ಹುಟ್ಟಿದವನು” ಆಗಿದ್ದಾನೆಂಬುದನ್ನು ಅವರು ಅಂಗೀಕರಿಸಿದರು. ಕಿಂಗ್‌ ಜೇಮ್ಸ್‌ ವರ್ಷನ್‌ ಬೈಬಲಿನಲ್ಲಿ ಭಾಷಾಂತರಿಸಲ್ಪಟ್ಟಿರುವಂತೆ, ಅವರು “ಅಡ್ಡಬಿದ್ದು, ಅವನನ್ನು ಆರಾಧಿಸಿದರು [ಪ್ರೊಸ್ಕೀನೀಯೊ]” ಎಂದು ಆ ವೃತ್ತಾಂತವು ಹೇಳುತ್ತದೆ.—ಮತ್ತಾಯ 2:2, 11.

ಹಾಗಾದರೆ, ಕೆಲವೊಂದು ಬೈಬಲ್‌ಗಳಲ್ಲಿ “ಆರಾಧನೆ” ಎಂಬುದಾಗಿ ಭಾಷಾಂತರಿಸಲ್ಪಟ್ಟಿರುವ ಪ್ರೊಸ್ಕೀನೀಯೊ ಎಂಬ ಪದವನ್ನು, ಯೆಹೋವ ದೇವರಿಗೆ ಸಲ್ಲತಕ್ಕಂತಹ ರೀತಿಯ ಆರಾಧನೆಗೆ ಮಾತ್ರ ಉಪಯೋಗಿಸಲಾಗುವುದಿಲ್ಲ. ಇನ್ನೊಬ್ಬ ವ್ಯಕ್ತಿಗೆ ತೋರಿಸಲಾಗುವ ಗೌರವ ಮತ್ತು ಸನ್ಮಾನವನ್ನೂ ಅದು ಸೂಚಿಸಬಲ್ಲದು. ಯಾವುದೇ ರೀತಿಯ ಅಪಾರ್ಥ ಮಾಡಿಕೊಳ್ಳದೆ ಸ್ಪಷ್ಟವಾಗಿ ತಿಳಿದುಕೊಳ್ಳುವಂತೆ, ಇಬ್ರಿಯ 1:6ರಲ್ಲಿರುವ ಪ್ರೊಸ್ಕೀನೀಯೊ ಎಂಬ ಪದವನ್ನು ಕೆಲವೊಂದು ಬೈಬಲ್‌ ಭಾಷಾಂತರಗಳು, “ಗೌರವಾರ್ಪಣೆಯನ್ನು ಸಲ್ಲಿಸಿದರು” (ನ್ಯೂ ಜೆರೂಸಲೇಮ್‌ ಬೈಬಲ್‌), “ಅವನನ್ನು ಸನ್ಮಾನಿಸಿದರು” (ದ ಕಂಪ್ಲೀಟ್‌ ಬೈಬಲ್‌ ಇನ್‌ ಮಾಡರ್ನ್‌ ಇಂಗ್ಲಿಷ್‌), “ಅವನ ಮುಂದೆ ಅಡ್ಡಬಿದ್ದರು” (ಟ್ವೆಂಟಿಯತ್‌ ಸೆಂಚುರಿ ನ್ಯೂ ಟೆಸ್ಟಮೆಂಟ್‌), ಅಥವಾ “ಅವನಿಗೆ ಪ್ರಣಾಮಮಾಡಿದರು” (ನ್ಯೂ ವರ್ಲ್ಡ್‌ ಟ್ರಾನ್ಸ್‌ಲೇಶನ್‌) ಎಂದು ಭಾಷಾಂತರಿಸುತ್ತವೆ.

ಯೇಸು ಪ್ರಣಾಮಕ್ಕೆ ಯೋಗ್ಯನಾಗಿದ್ದಾನೆ

ಯೇಸು ಅಂತಹ ಪ್ರಣಾಮಕ್ಕೆ ಯೋಗ್ಯನಾಗಿದ್ದಾನೊ? ಖಂಡಿತವಾಗಿಯೂ ಹೌದು! “ಎಲ್ಲಕ್ಕೂ ಬಾಧ್ಯ”ನಾದ ಯೇಸು, “ಉನ್ನತಲೋಕದೊಳಗೆ ಮಹತ್ವವುಳ್ಳ ದೇವರ ಬಲಗಡೆಯಲ್ಲಿ ಆಸನಾರೂಢನಾದನು” ಎಂದು ಇಬ್ರಿಯರಿಗೆ ಬರೆದ ಪತ್ರದಲ್ಲಿ ಅಪೊಸ್ತಲ ಪೌಲನು ವಿವರಿಸುತ್ತಾನೆ. (ಇಬ್ರಿಯ 1:2-4) ಹೀಗಿರುವುದರಿಂದ, “ಸ್ವರ್ಗ ಮರ್ತ್ಯ ಪಾತಾಳಗಳಲ್ಲಿರುವವರೆಲ್ಲರೂ ಯೇಸುವಿನ ಹೆಸರಿನಲ್ಲಿ ಅಡ್ಡಬಿದ್ದು ಯೇಸು ಕ್ರಿಸ್ತನನ್ನು ಒಡೆಯನೆಂದು ಪ್ರತಿಜ್ಞೆಮಾಡಿ ತಂದೆಯಾದ ದೇವರಿಗೆ ಘನವನ್ನು ಸಲ್ಲಿಸುವರು.”—ಫಿಲಿಪ್ಪಿ 2:10, 11.

ಒಂದು ಗಮನಾರ್ಹವಾದ ರೀತಿಯಲ್ಲಿ, ಕ್ರಿಸ್ತನು ತನ್ನ ಈ ಮಹೋನ್ನತ ಸ್ಥಾನವನ್ನು ಮತ್ತು ಅದರಿಂದಾಗಿ ತನಗೆ ದೊರಕಿರುವ ಶಕ್ತಿಯನ್ನು, ಈ ಇಡೀ ಭೂಮಿಯನ್ನು ಒಂದು ಪ್ರಮೋದವನವನ್ನಾಗಿ ಮಾಡಲು ಬೇಗನೆ ಉಪಯೋಗಿಸಲಿದ್ದಾನೆ. ದೇವರ ನಿರ್ದೇಶನದ ಮೇರೆಗೆ ಮತ್ತು ತನ್ನ ಪ್ರಾಯಶ್ಚಿತ್ತ ಯಜ್ಞದ ಫಲವಾಗಿ, ತನ್ನ ನೀತಿಯುತ ಆಳ್ವಿಕೆಗೆ ಅಧೀನರಾಗುವವರ ಪ್ರಯೋಜನಕ್ಕಾಗಿ ಅವನು ಈ ಭೂಮಿಯಿಂದ ಎಲ್ಲ ಶೋಕ, ನೋವು, ಮತ್ತು ದುಃಖವನ್ನು ತೆಗೆದುಹಾಕುವನು. ಹೀಗಿರುವುದರಿಂದ ಅವನು ನಮ್ಮ ಗೌರವ, ಸನ್ಮಾನ ಮತ್ತು ವಿಧೇಯತೆಗೆ ಅರ್ಹನಾಗಿದ್ದಾನಲ್ಲವೊ?—ಕೀರ್ತನೆ 2:12; ಯೆಶಾಯ 9:6; ಲೂಕ 23:43; ಪ್ರಕಟನೆ 21:3, 4.

“ಅನನ್ಯ ಭಕ್ತಿಯನ್ನು ಕೇಳಿಕೊಳ್ಳುವ ದೇವರು”

ಆದರೆ ಧಾರ್ಮಿಕ ಪೂಜ್ಯಭಾವನೆ ಮತ್ತು ಭಕ್ತಿಯ ಅರ್ಥದಲ್ಲಿನ ನಮ್ಮ ಆರಾಧನೆಯು ಕೇವಲ ದೇವರಿಗೆ ಮಾತ್ರ ಸಲ್ಲಬೇಕು. ಆತನು “ಅನನ್ಯ ಭಕ್ತಿಯನ್ನು ಕೇಳಿಕೊಳ್ಳುವ ದೇವರು” ಆಗಿದ್ದಾನೆಂದು ಮೋಶೆಯು ವರ್ಣಿಸುತ್ತಾನೆ. ಮತ್ತು “ಭೂಲೋಕ ಪರಲೋಕಗಳನ್ನೂ ಸಮುದ್ರವನ್ನೂ ನೀರಿನ ಬುಗ್ಗೆಗಳನ್ನೂ ಉಂಟುಮಾಡಿದಾತನಿಗೆ ನಮಸ್ಕಾರ”ಮಾಡುವಂತೆ ಬೈಬಲ್‌ ನಮ್ಮನ್ನು ಉತ್ತೇಜಿಸುತ್ತದೆ.—ಧರ್ಮೋಪದೇಶಕಾಂಡ 4:24, NW; ಪ್ರಕಟನೆ 14:7.

ಸತ್ಯಾರಾಧನೆಯಲ್ಲಿ ಯೇಸುವಿಗೆ ಖಂಡಿತವಾಗಿಯೂ ಒಂದು ಮಹತ್ವಪೂರ್ಣ ಪಾತ್ರವಿದೆ. ಇದಕ್ಕಾಗಿ ಅವನು ಮಾನಗೌರವಗಳಿಗೆ ಯೋಗ್ಯನಾಗಿದ್ದಾನೆ. (2 ಕೊರಿಂಥ 1:20, 21; 1 ತಿಮೊಥೆಯ 2:5) ನಾವು ಯೆಹೋವ ದೇವರನ್ನು ಸಮೀಪಿಸಲು ಸಾಧ್ಯವಿರುವ ಏಕೈಕ ಮಾರ್ಗ ಅವನಾಗಿದ್ದಾನೆ. (ಯೋಹಾನ 14:6) ಅದಕ್ಕೆ ತಕ್ಕಂತೆ ಸತ್ಯ ಕ್ರೈಸ್ತರು ತಮ್ಮ ಆರಾಧನೆಯನ್ನು ಯೋಗ್ಯವಾಗಿಯೇ ಸರ್ವಶಕ್ತನಾದ ಯೆಹೋವ ದೇವರಿಗೆ ಮಾತ್ರ ಸಲ್ಲಿಸುತ್ತಾರೆ.