ವಾಸಾ—ದುರ್ಘಟನೆಯಿಂದ ಚಿತ್ತಾಕರ್ಷಣೆಗೆ
ವಾಸಾ—ದುರ್ಘಟನೆಯಿಂದ ಚಿತ್ತಾಕರ್ಷಣೆಗೆ
ಸ್ವೀಡನ್‌ನ ಎಚ್ಚರ! ಸುದ್ದಿಗಾರರಿಂದ
ಆಗಸ್ಟ್ 10, 1628. ಸ್ವೀಡನ್‌ನ ರಾಜಧಾನಿಯಾಗಿದ್ದ ಸ್ಟಾಕ್‌ಹೋಮ್‌ನಲ್ಲಿ ಅದೊಂದು ಮನೋಹರವಾದ ಬೇಸಗೆಯ ದಿನವಾಗಿತ್ತು. ರಾಜನ ಭವ್ಯವಾದ ವಾಸಾ ಎಂಬ ಯುದ್ಧನೌಕೆಯ ನಿರ್ಮಾಣಕ್ಕೆ ಮೂರು ವರ್ಷಗಳಷ್ಟು ಸಮಯ ಹಿಡಿದಿತ್ತು. ಈಗ ಅದು ಸ್ವೀಡಿಷ್ ನೌಕಾದಳವನ್ನು ಸೇರಲು ತನ್ನ ಪ್ರಥಮ ಯಾನವನ್ನು ಆರಂಭಿಸಿದಾಗ, ಜನರು ನೌಕಾನಿಲ್ದಾಣದ ಬಂದರು ಕಟ್ಟೆಗಳಿಗೆ ಹಿಂಡು ಹಿಂಡಾಗಿ ಬಂದರು.
ಈ ವಾಸಾ ನೌಕೆಯು ಬೇರೆಲ್ಲ ನೌಕೆಗಳಂತೆ ಒಂದು ಸಾಮಾನ್ಯ ಯುದ್ಧನೌಕೆಯಾಗಿರಲಿಲ್ಲ. ಗುಸ್ಟಾವಸ್ IIನೆಯ ಅಡಾಲ್ಫಸ್ ವಾಸಾ ಎಂಬ ರಾಜನು, ಇದು ಲೋಕದಲ್ಲಿನ ಅತಿ ಬಲಿಷ್ಠ ನೌಕೆಯಾಗಿರಬೇಕೆಂದು ಬಯಸಿದನು. ಡೆನ್‌ಮಾರ್ಕ್ ದೇಶದವರು ತೋಪುಗಳುಳ್ಳ ಎರಡು ಅಟ್ಟಗಳ ಒಂದು ಹಡಗನ್ನು ಕಟ್ಟುತ್ತಿದ್ದಾರೆಂದು ಕೇಳಿಸಿಕೊಂಡ ಬಳಿಕವೇ, ಈ ರಾಜನು ಸಹ ತೋಪುಗಳುಳ್ಳ ಎರಡನೆಯ ಅಟ್ಟವನ್ನು ತಯಾರಿಸುವ ಆಜ್ಞೆಕೊಟ್ಟನೆಂದು ಕೆಲವರು ಹೇಳುತ್ತಾರೆ. ತನ್ನ ಕುಟುಂಬದ ಹೆಸರನ್ನು ಹೊತ್ತಿರುವ ಈ ನೌಕೆಯು, ಬೇರಾವುದೇ ನೌಕೆಗಿಂತ ಯಾವುದೇ ರೀತಿಯಲ್ಲಿ ಕಡಿಮೆಯಾಗಿರಬಾರದೆಂಬುದು ಅವನ ಅಪೇಕ್ಷೆಯಾಗಿತ್ತು.
ಆ ನೌಕೆಯ ಪ್ರಥಮ ಯಾನವು, ಅವನ ರಾಜೋಚಿತ ಶಕ್ತಿ ಮತ್ತು ಮಹಿಮೆಯ ಆಡಂಬರದ ಪ್ರದರ್ಶನವಾಗಿರಲಿತ್ತು. ಅದು 64 ಬಂದೂಕುಗಳಿಂದ ಸಜ್ಜಿತವಾಗಿತ್ತು ಮತ್ತು 700ಕ್ಕಿಂತಲೂ ಹೆಚ್ಚು ಶಿಲ್ಪಕೃತಿಗಳು ಹಾಗೂ ಅಲಂಕಾರವಸ್ತುಗಳಿಂದ ಸಿಂಗರಿಸಲ್ಪಟ್ಟಿತ್ತು. ಅದರ ಬೆಲೆಯು, ಸ್ವೀಡನಿನ ನಿವ್ವಳ ರಾಷ್ಟ್ರೀಯ ಉತ್ಪನ್ನದಲ್ಲಿ 5 ಪ್ರತಿಶತಕ್ಕಿಂತಲೂ ಹೆಚ್ಚಿನದ್ದಕ್ಕೆ ಸಮಾನವಾಗಿತ್ತು. ಈ ಶಕ್ತಿಶಾಲಿಯಾದ ಯುದ್ಧ ಯಂತ್ರ ಮತ್ತು ಸಂಚಾರಿ ಕಲಾ ಪ್ರದರ್ಶನವು, ಆ ಸಮಯದಲ್ಲಿ ಇನ್ನೆಲ್ಲೂ ಕಟ್ಟಲ್ಪಡದೇ ಇರುವಷ್ಟು ವೈಭವಯುತವಾದ ನೌಕೆಯಾಗಿದ್ದಿರಬಹುದು. ಆದುದರಿಂದ ಅವಳು ಸ್ಟಾಕ್‌ಹೋಮ್‌ನ ಬಂದರುಕಟ್ಟೆಗಳನ್ನು ದಾಟಿಹೋಗುತ್ತಿದ್ದಾಗ ಜನರು ಹೆಮ್ಮೆಯಿಂದ ಜಯಘೋಷ ಮಾಡುತ್ತಿದ್ದದ್ದರಲ್ಲಿ ಆಶ್ಚರ್ಯವೇನಿಲ್ಲ!
ದುರ್ಘಟನೆ ಮತ್ತು ಅವಮಾನ
ಆದರೆ ವಾಸಾ ಒಂದು ಕಿಲೊಮೀಟರ್‌ಗಿಂತಲೂ ಸ್ವಲ್ಪ ಮುಂದೆ ದಾಟಿಹೋಗುವಷ್ಟರಲ್ಲಿ, ಬಿರುಸಾದ ಗಾಳಿಯು ಅದನ್ನು ಒಂದು ಕಡೆಗೆ ವಾಲುವಂತೆ ಮಾಡಿತು. ತೆರೆದಿದ್ದ ತೋಪಿನ ಕಿಂಡಿಗಳ ಮೂಲಕ ನೀರು ರಭಸವಾಗಿ ಒಳಸೇರಿ, ಅದು ಮುಳುಗಿಹೋಯಿತು. ನೌಕಾ ಇತಿಹಾಸದಲ್ಲೇ ಇದು ಪ್ರಾಯಶಃ ಅತಿ ಅಲ್ಪಕಾಲದ ಪ್ರಥಮ ಯಾನವಾಗಿತ್ತು!
ಪ್ರೇಕ್ಷಕರು ದಂಗುಬಡಿದವರಾಗಿ ನೋಡುತ್ತಾ ನಿಂತರು. ಸ್ವೀಡಿಷ್ ನೌಕಾದಳದ ಕೀರ್ತಿಯಾಗಿದ್ದ ಈ ಹಡಗು, ಯುದ್ಧದಿಂದ ಅಥವಾ ದೂರದ ಸಮುದ್ರದಲ್ಲಿನ ಪ್ರಚಂಡ ಬಿರುಗಾಳಿಯಿಂದಲ್ಲ, ಬದಲಾಗಿ ತನ್ನ ಸ್ವಂತ ಬಂದರಿನಲ್ಲೇ ಬೀಸಿದ ಸಾಧಾರಣವಾದ ಗಾಳಿಯಿಂದಾಗಿ ಮುಳುಗಿಹೋಗಿತ್ತು. ಹಡಗಿನಲ್ಲಿದ್ದ ಸುಮಾರು 50 ಜನರ ಮರಣವು ಇನ್ನೂ ಹೆಚ್ಚಿನ ದಿಗಿಲನ್ನುಂಟುಮಾಡಿತು. ರಾಷ್ಟ್ರದ ಹೆಮ್ಮೆಯಾಗುವ ಬದಲಿಗೆ, ವಾಸಾ ನಿರಾಶೆ ಮತ್ತು ಅವಮಾನದ ಒಂದು ಪ್ರತೀಕವಾಯಿತು.
ಈ ಅವಮಾನಕಾರಿಯಾದ ಅವಘಡಕ್ಕೆ ಯಾರು ಜವಾಬ್ದಾರರೆಂದು ಕಂಡುಹಿಡಿಯಲು ಕೊನೆಯಲ್ಲಿ ಒಂದು ನ್ಯಾಯಸಭೆಯನ್ನು ಒಟ್ಟುಗೂಡಿಸಲಾಯಿತು. ಆದರೆ ಯಾರ ಮೇಲೂ ತಪ್ಪಿನ ಆರೋಪವನ್ನು ಹೊರಿಸಲಾಗಲಿಲ್ಲ. ಯಾಕೆಂದರೆ ಸಾಕ್ಷ್ಯಕ್ಕನುಸಾರ ರಾಜನ ಮತ್ತು ಸ್ವೀಡಿಷ್ ನೌಕಾದಳದ ಎರಡನೆಯ ಉಪಪ್ರಧಾನ ದಳಪತಿಯಾದ ಕ್ಲಾಸ್ ಫ್ಲೇಮಿಂಗ್‌ನ ತಪ್ಪಿದೆಯೆಂದು ಕಂಡುಬಂತು.
ರಾಜನ ಬೇಡಿಕೆಗಳನ್ನು ತೀರಿಸಲಿಕ್ಕಾಗಿ, ಆ ನೌಕೆಯನ್ನು ಕಟ್ಟಿದವರು ತಮಗೆ ಅಪರಿಚಿತವಾದ ವಿನ್ಯಾಸಗಳೊಂದಿಗೆ ಪ್ರಯೋಗನಡಿಸಿದರು. ಆದುದರಿಂದ ವಾಸಾ ನೌಕೆಯ ಪರಿಮಾಣಗಳು ಸರಿಯಾಗಿರಲಿಲ್ಲ. ಅದು ಮುಳುಗುವ ಸ್ವಲ್ಪ ಹೊತ್ತಿಗೆ ಮುಂಚೆ, ದಳಪತಿಯಾದ ಫ್ಲೇಮಿಂಗ್ ಹಡಗಿನ ಸ್ಥಿರತೆಯನ್ನು ಕಂಡುಹಿಡಿಯಲು ಪರೀಕ್ಷೆಯನ್ನು ನಡಿಸಿದರು. ಮೂವತ್ತು ಮಂದಿ ಪುರುಷರು ಜೊತೆಜೊತೆಯಾಗಿ ಹಡಗಿನ ಒಂದು ಪಕ್ಕದಿಂದ ಇನ್ನೊಂದು ಪಕ್ಕಕ್ಕೆ ಓಡಿದರು. ಹೀಗೆ ಮೂರು ಸಲ ಓಡಿದ ನಂತರ, ಈ ಪರೀಕ್ಷೆಯನ್ನು ಮುಂದುವರಿಸುವಲ್ಲಿ, ಆ ಕೂಡಲೆ ಹಡಗು ಮುಳುಗಿಹೋಗುವುದೆಂದು ಆ ದಳಪತಿಗೆ ತಿಳಿದಿತ್ತು. ಆದುದರಿಂದ ಆ ಪರೀಕ್ಷೆಯನ್ನು ಅವನು ಅಲ್ಲಿಗೇ ನಿಲ್ಲಿಸಿದರೂ, ಆ ಪ್ರಥಮ ಯಾನವನ್ನು ಅವನು ತಡೆಯಲಿಲ್ಲ. ಇದರಲ್ಲಿ ರಾಜ ಮತ್ತು ನೌಕಾಧಿಪತಿಯಂತಹ ಪ್ರಮುಖ ವ್ಯಕ್ತಿಗಳದ್ದೇ ತಪ್ಪಿದ್ದದ್ದರಿಂದ, ಆರೋಪಗಳನ್ನು ಹಿಂದೆಗೆದುಕೊಳ್ಳಲಾಯಿತು.
1664-65ರಲ್ಲಿ, ಸ್ವೀಡಿಷ್ ಸೇನೆಯ ಒಬ್ಬ ಮಾಜಿ ಆಫೀಸರನು, ಒಂದು ಸರಳವಾದ ಮುಳುಗು ಗಂಟೆಯ ಸಹಾಯದಿಂದ, ವಾಸಾ ನೌಕೆಯಲ್ಲಿದ್ದ ಹೆಚ್ಚಿನ ಬಂದೂಕುಗಳನ್ನು ಹೊರತೆಗೆದನು. ಅನಂತರ, ವಾಸಾ ನೌಕೆಯು ಮೇಲ್ಮೈಯಿಂದ 100 ಅಡಿ ಕೆಳಗಿನ ಕೆಸರಿನಲ್ಲಿ ಹೆಚ್ಚು ಆಳಕ್ಕೆ ಮುಳುಗುತ್ತಾ ಹೋದಂತೆ, ನಿಧಾನವಾಗಿ ಎಲ್ಲರೂ ಅದರ ಕುರಿತು ಮರೆತುಬಿಟ್ಟರು.
ಕೆಸರಿನಿಂದ ಹೊರತೆಗೆಯಲ್ಪಟ್ಟದ್ದು
ಆಗಸ್ಟ್ 1956ರಲ್ಲಿ, ಆ್ಯಂಡರ್ಸ್ ಫ್ರಾನ್ಸನ್ ಎಂಬ ಹವ್ಯಾಸಿ ಪ್ರಾಕ್ತನಶಾಸ್ತ್ರಜ್ಞನು, ಸಮುದ್ರತಳದಿಂದ ಆ ನೌಕೆಯ ಓಕ್ ಮರದ ಒಂದು ತುಂಡನ್ನು ಹೊರತರಲಿಕ್ಕಾಗಿ ಕೊರೆದು ತೆಗೆಯುವ ಪರೀಕ್ಷಕ ಯಂತ್ರವನ್ನು ಉಪಯೋಗಿಸಿದನು. ಅನೇಕ ವರ್ಷಗಳಿಂದ ಅವನು ಹಳೆಯ ದಸ್ತಾವೇಜುಗಳನ್ನು ಪರೀಕ್ಷಿಸಿ, ವಾಸಾ ನೌಕೆಗಾಗಿ ಸಮುದ್ರತಳದಲ್ಲಿ ಹುಡುಕುತ್ತಾ ಇದ್ದನು. ಈಗ ಅವನು ಅದನ್ನು ಕಂಡುಹಿಡಿದಿದ್ದನು. ನಾಜೂಕಾದ ನೌಕಾ ಸಂರಕ್ಷಣಾ ಕಾರ್ಯಾಚರಣೆಯ ಮೂಲಕ ವಾಸಾ ನೌಕೆಯನ್ನು ಆ ಜವುಗು ನೆಲದಿಂದ ಎತ್ತಿ,
ಬೇರೆ ಬೇರೆ ತುಂಡಾಗಿ ಮಾಡದೆ, ಇಡೀಯಾಗಿ ಸಮುದ್ರದ ನೀರಿನಡಿಯಲ್ಲೇ ಜಾಗರೂಕತೆಯಿಂದ ಹೊತ್ತುಕೊಂಡು ಹಡಗುಕಟ್ಟೆಗೆ ತರಲಾಯಿತು.ಏಪ್ರಿಲ್ 24, 1961ರಲ್ಲಿ, ಸ್ಟಾಕ್‌ಹೋಮ್‌ನ ಹಡಗುಕಟ್ಟೆಗಳು ಪುನಃ ಒಮ್ಮೆ ಜಯಘೋಷ ಮಾಡುತ್ತಿದ್ದ ಪ್ರೇಕ್ಷಕರಿಂದ ತುಂಬಿದ್ದವು. 333 ವರ್ಷಗಳಷ್ಟು ಸಮಯ ಸಮುದ್ರತಳದಲ್ಲಿದ್ದ ಬಳಿಕ, ಈಗ ವಾಸಾ ನೌಕೆಯು ಪುನರಾಗಮಿಸಿತ್ತು. ಆದರೆ ಒಂದೇ ವ್ಯತ್ಯಾಸವೇನೆಂದರೆ, ಅದು ಈಗ ಒಂದು ಪ್ರವಾಸಿ ಆಕರ್ಷಣೆಯ ವಸ್ತುವಾಗಿದ್ದು, ಕಡಲಿನ ಪ್ರಾಕ್ತನಶಾಸ್ತ್ರಜ್ಞರಿಗೆ ಒಂದು ನಿಕ್ಷೇಪವಾಗಿತ್ತು. 17ನೆಯ ಶತಮಾನದ ಈ ಯುದ್ಧನೌಕೆಯ ಕುರಿತಾಗಿ 25,000ಕ್ಕಿಂತಲೂ ಹೆಚ್ಚಿನ ಹಸ್ತಕೃತಿಗಳು ಬೆರಗುಗೊಳಿಸುವಂತಹ ವಿವರಗಳನ್ನು ಹೊರಗೆಡಹಿದವು ಮತ್ತು ಆ ಕಾಲದ ಹಡಗುನಿರ್ಮಾಣ ಹಾಗೂ ಕಲಾಕೃತಿಯ ಕುರಿತಾಗಿಯೂ ಅಪೂರ್ವವಾದ ಒಳನೋಟವನ್ನು ಒದಗಿಸಿದವು.
ವಾಸಾ ಮತ್ತು ಅದರಲ್ಲಿದ್ದ ಹಸ್ತಕೃತಿಗಳು ಇಷ್ಟು ಚೆನ್ನಾಗಿ ಹೇಗೆ ಸಂರಕ್ಷಿಸಲ್ಪಟ್ಟವು? ಕೆಲವು ಕಾರಣಗಳು ಇಲ್ಲಿವೆ: ಅದು ಮುಳುಗಿಹೋಗಿದ್ದಾಗ ಹೊಚ್ಚಹೊಸದಾಗಿತ್ತು, ಜವುಗು ಮಣ್ಣಿಗೆ ಸಂರಕ್ಷಿಸುವ ಶಕ್ತಿಯಿದೆ ಮತ್ತು ಮರದ ವಸ್ತುಗಳನ್ನು ತಿಂದುಹಾಕುವ ಸಮುದ್ರದ ಹುಳು, ಉಪ್ಪಿನ ಪ್ರಮಾಣವು ಕಡಿಮೆಯಿರುವ ನೀರಿನಲ್ಲಿ ಬದುಕಿ ಉಳಿಯುವುದಿಲ್ಲ.
ವಾಸಾ ನೌಕೆಯ ನಿಲುಭಾರ (ballast) ಸುಮಾರು 120 ಟನ್ನುಗಳಷ್ಟಿತ್ತು. ಆದರೆ ಅದನ್ನು ಸ್ಥಿರಗೊಳಿಸಲು ಅದಕ್ಕಿಂತಲೂ ಎರಡು ಪಟ್ಟು ಹೆಚ್ಚು ನಿಲುಭಾರ ಬೇಕಾಗಿತ್ತಾದರೂ, ಅದರಲ್ಲಿ ಸಾಕಷ್ಟು ಸ್ಥಳವಿರಲಿಲ್ಲವೆಂದು ಪರಿಣತರು ಅಂದಾಜು ಮಾಡುತ್ತಾರೆ. ಅಲ್ಲದೆ, ಆ ಭಾರವನ್ನು ಹೆಚ್ಚಿಸುವಲ್ಲಿ, ಕೆಳಗಿನ ಸ್ತರದಲ್ಲಿದ್ದ ತೋಪಿನ ಕಂಡಿಗಳು ನೀರಿಗೆ ತುಂಬ ಹತ್ತಿರ ಬರುತ್ತಿದ್ದವು. ಅದರ ತೋರಿಕೆಯು ಭವ್ಯವಾಗಿತ್ತು, ಆದರೆ ಅದರ ಸಮತೂಕದ ಕೊರತೆಯೇ ಆ ದುರ್ಘಟನೆಗೆ ಕಾರಣವಾಯಿತು.
ಈಗ ಅದು ತನ್ನದೇ ಆದ ಮ್ಯೂಸಿಯಮ್‌ನೊಳಗೆ ಸುರಕ್ಷಿತವಾಗಿದೆ. ಅದು ಲೋಕದಲ್ಲೇ ಅತೀ ಹಳೆಯ, ಜೋಪಾನವಾಗಿರಿಸಲ್ಪಟ್ಟಿರುವ, ಇಡೀಯಾಗಿರುವ, ಮತ್ತು ಪೂರ್ಣವಾಗಿ ಗುರುತಿಸಸಾಧ್ಯವಿರುವ ಹಡಗಾಗಿದೆ. ಪ್ರತಿ ವರ್ಷ 8,50,000 ಸಂದರ್ಶಕರು, 1628ರಲ್ಲಿ ನಡೆದ ಆ ದುರ್ಘಟನೆಯಿಂದಾಗಿ, ಶತಮಾನಗಳಿಂದಲೂ ಬದಲಾಗದೇ ಉಳಿದಿರುವ 17ನೆಯ ಶತಮಾನದ ರಾಜವೈಭವದ ಪ್ರದರ್ಶನವನ್ನು ನೋಡಬಲ್ಲರು. ಇದು ತಮ್ಮ ಅಹಂ ಮತ್ತು ಅಜಾಗರೂಕತೆಯಿಂದಾಗಿ, ಹಡಗನ್ನು ಕಟ್ಟುವ ಸರಿಯಾದ ವಿಧಾನಗಳನ್ನು ಅಲಕ್ಷಿಸುವ ಆಯ್ಕೆಯನ್ನು ಮಾಡಿದ ಅಧಿಕಾರದಲ್ಲಿರುವವರ ತಪ್ಪಿನ ಒಂದು ಸ್ಮಾರಕವಾಗಿ ನಿಂತಿದೆ.
[ಪುಟ 26ರಲ್ಲಿರುವ ಚಿತ್ರ]
ರಾಜ ಗುಸ್ಟಾವಸ್ II ಅಡಾಲ್ಫಸ್ ವಾಸಾ
[ಕೃಪೆ]
Foto: Nationalmuseum, Stockholm
[ಪುಟ 26, 27ರಲ್ಲಿರುವ ಚಿತ್ರಗಳು]
300ಕ್ಕಿಂತಲೂ ಹೆಚ್ಚು ವರ್ಷಗಳಷ್ಟು ಸಮಯ ಸಮುದ್ರತಳದಲ್ಲಿದ್ದ ಬಳಿಕ, “ವಾಸಾ” ಈಗ ಒಂದು ಜಗತ್ಪ್ರಸಿದ್ಧ ಪ್ರವಾಸಿ ಆಕರ್ಷಣೆಯಾಗಿದೆ
[ಕೃಪೆ]
Genom tillmötesgående från Vasamuseet, Stockholm
[ಪುಟ 27ರಲ್ಲಿರುವ ಚಿತ್ರ ಕೃಪೆ]
Målning av det kapsejsande Vasa, av konstnär Nils Stödberg