ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಇಂದು ನೈತಿಕ ಮೌಲ್ಯಗಳ ಮಟ್ಟವು ಹೇಗಿದೆ?

ಇಂದು ನೈತಿಕ ಮೌಲ್ಯಗಳ ಮಟ್ಟವು ಹೇಗಿದೆ?

ಇಂದು ನೈತಿಕ ಮೌಲ್ಯಗಳ ಮಟ್ಟವು ಹೇಗಿದೆ?

1999ರ ಏಪ್ರಿಲ್‌ ತಿಂಗಳಿನ ಒಂದು ಬೆಳಗ್ಗೆ, ಅಮೆರಿಕದ ಕೊಲರಾಡೋ, ಡೆನ್‌ವರ್‌ನ ಸಮೀಪದಲ್ಲಿರುವ ಲಿಟಲ್‌ಟನ್‌ ಪಟ್ಟಣದ ಶಾಂತ ವಾತಾವರಣವು ಕದಡಿಹೋಯಿತು. ಕಪ್ಪು ಬಣ್ಣದ ಕೋಟುಗಳನ್ನು ಧರಿಸಿದ್ದ ಇಬ್ಬರು ಯುವಕರು ಶಾಲೆಯೊಳಗೆ ನುಗ್ಗಿ, ವಿದ್ಯಾರ್ಥಿಗಳನ್ನೂ ಶಿಕ್ಷಕರನ್ನೂ ಶೂಟ್‌ ಮಾಡಲು ಪ್ರಾರಂಭಿಸಿದರು. ಅಷ್ಟುಮಾತ್ರವಲ್ಲ, ಅವರು ಬಾಂಬುಗಳನ್ನು ಸಹ ಎಸೆದರು. ಅದರಲ್ಲಿ ಹನ್ನೆರಡು ಮಂದಿ ವಿದ್ಯಾರ್ಥಿಗಳು ಮತ್ತು ಒಬ್ಬ ಶಿಕ್ಷಕನು ತಮ್ಮ ಪ್ರಾಣಗಳನ್ನು ಕಳೆದುಕೊಂಡರು. 20ಕ್ಕಿಂತಲೂ ಅಧಿಕ ಜನರಿಗೆ ಗಾಯಗಳಾದವು. ಆಮೇಲೆ, ಈ ದುಷ್ಕರ್ಮಿಗಳು ತಮ್ಮನ್ನೇ ಶೂಟ್‌ ಮಾಡಿಕೊಳ್ಳುವ ಮೂಲಕ ಕಗ್ಗೊಲೆಯನ್ನು ಅಂತ್ಯಗೊಳಿಸಿದರು. ಇವರು ಕೇವಲ 17 ಮತ್ತು 18 ಪ್ರಾಯದ ಯುವಕರಾಗಿದ್ದರು ಮತ್ತು ಇವರಿಗೆ ಕೆಲವು ಗುಂಪುಗಳ ಮೇಲೆ ಬಹಳ ದ್ವೇಷವಿತ್ತು.

ಮೇಲೆ ತಿಳಿಸಲ್ಪಟ್ಟ ಘಟನೆಯು ಅಪರೂಪವಾಗಿ ಆಗುವಂತಹದ್ದಲ್ಲ ಎಂದು ಹೇಳುವುದಕ್ಕೆ ದುಃಖವಾಗುತ್ತದೆ. ವಾರ್ತಾಪತ್ರಿಕೆಗಳು, ರೇಡಿಯೋ, ಮತ್ತು ಟೆಲಿವಿಷನ್‌ ಇಂತಹ ಘಟನೆಗಳನ್ನು ಲೋಕದಾದ್ಯಂತ ವರದಿಸುತ್ತಿವೆ. ಅಮೆರಿಕದ ಶೈಕ್ಷಣಿಕ ಕೇಂದ್ರಕ್ಕನುಸಾರ, 1997ರಲ್ಲಿ ಅಮೆರಿಕದ ಶಾಲೆಗಳಲ್ಲಿ ಸುಮಾರು 11,000 ಹಿಂಸಾತ್ಮಕ ಕೃತ್ಯಗಳು ವರದಿಸಲ್ಪಟ್ಟವು. ಇವುಗಳಲ್ಲಿ ಶಸ್ತ್ರಾಸ್ತ್ರಗಳನ್ನು ಉಪಯೋಗಿಸಲಾಗಿತ್ತು. ಜರ್ಮನಿಯ ಹ್ಯಾಂಬರ್ಗ್‌ನಲ್ಲಿ, 1997ರಲ್ಲಿ ಹಿಂಸಾಕೃತ್ಯಗಳು 10 ಪ್ರತಿಶತ ಹೆಚ್ಚಿದವು ಮತ್ತು ಬಂಧಿಸಲ್ಪಟ್ಟವರಲ್ಲಿ ಸುಮಾರು 44 ಪ್ರತಿಶತದಷ್ಟು ಜನರು 21ಕ್ಕಿಂತಲೂ ಕಡಿಮೆ ಪ್ರಾಯದ ಯುವ ಜನರಾಗಿದ್ದರು.

ರಾಜಕಾರಣಿಗಳ ಮತ್ತು ಸರಕಾರಿ ಅಧಿಕಾರಿಗಳ ಮಧ್ಯೆ ಭ್ರಷ್ಟಾಚಾರವು ಸರ್ವಸಾಧಾರಣವಾಗಿಬಿಟ್ಟಿದೆ. ಯೂರೋಪಿಯನ್‌ ಯೂನಿಯನ್‌ (EU) ಕಮಿಷನ್‌ನ ಅನೀಟ ಗ್ರಡೀನ್‌, 1998ರಲ್ಲಿ ಒಂದು ವರದಿಯನ್ನು ತಯಾರಿಸಿದರು. 1997ರಲ್ಲಿ EUವಿನೊಳಗೆ ನಡೆದ ಭ್ರಷ್ಟಾಚಾರದಿಂದ ಸಿಕ್ಕಿದ ಒಟ್ಟು ಹಣವು, ಸುಮಾರು 1.4 ಬಿಲಿಯನ್‌ ಡಾಲರುಗಳಷ್ಟಾಗಿತ್ತು ಎಂಬುದನ್ನು ಆ ವರದಿಯು ಹೊರಗೆಡಹಿತು. ಈ ಭ್ರಷ್ಟಾಚಾರದಲ್ಲಿ, ಪಾರ್ಕಿಂಗ್‌ ಸ್ಥಳದಲ್ಲಿ ಫೈನ್‌ ಹಾಕದೇ ಇರುವುದರಿಂದ ಹಿಡಿದು ವ್ಯವಸಾಯದ ಇಲ್ಲವೇ ಇತರ EU ಸಹಾಯಧನಗಳನ್ನು ಮೋಸದಿಂದ ಪಡೆದುಕೊಳ್ಳುವುದರ ವರೆಗಿನ ಎಲ್ಲ ವಿಷಯಗಳು ಒಳಗೂಡಿತ್ತು. ಅಲ್ಲದೆ, ಅಕ್ರಮ ಮೂಲದಿಂದ ಸಿಗುತ್ತಿದ್ದ ದೊಡ್ಡ ಮೊತ್ತದ ಹಣವನ್ನು ಕಾನೂನುಬದ್ಧವನ್ನಾಗಿ ಮಾಡಲು ಖಾತೆಯನ್ನು ಬದಲಾಯಿಸಲಾಗುತ್ತಿತ್ತು ಮತ್ತು ಶಸ್ತ್ರಾಸ್ತ್ರಗಳು ಹಾಗೂ ಮಾದಕ ವಸ್ತುಗಳ ಕಳ್ಳಸಾಗಣೆಯು ಅನುಮತಿಸಲ್ಪಟ್ಟಿತ್ತು. ಮತ್ತು ಅದರ ಬಗ್ಗೆ ಬಾಯಿಬಿಡದಂತೆ ಮಾಡಲು ಕ್ರಿಮಿನಲ್‌ ವ್ಯೂಹಗಳು EUವಿನ ಕಾರ್ಮಿಕರಿಗೆ ಲಂಚಕೊಟ್ಟಿದ್ದವು. ಆದರೆ EU ಕಮಿಷನ್‌ನ ಎಲ್ಲ ಸದಸ್ಯರೂ 1999ರಲ್ಲಿ ರಾಜೀನಾಮೆ ಕೊಟ್ಟುಬಿಟ್ಟರು.

ಸಮಾಜದ ಮೇಲುವರ್ಗದ ಜನರು ಮಾತ್ರವೇ ಮೋಸಮಾಡುವುದಿಲ್ಲ. ಕಾರ್ಮಿಕರು ಸಹ ಮೋಸಮಾಡುತ್ತಾರೆ ಎಂಬುದರ ಕುರಿತಾಗಿ EU ಕಮಿಷನ್‌ ಒಂದು ವರದಿಯನ್ನು ನೀಡಿತು. ಅದು ಹೊರಗೆಡಹಿತೇನೆಂದರೆ, EUವಿನ ವಾರ್ಷಿಕ ಉತ್ಪನ್ನದಲ್ಲಿ 16 ಪ್ರತಿಶತವು, ಸರಕಾರದಿಂದ ಅನುಮತಿಯನ್ನು ಪಡೆದಿರದ ವ್ಯಾಪಾರಗಳಿಂದ ಸಿಗುವ ಆದಾಯವಾಗಿದೆ. ಅಲ್ಲದೆ ಇವು ತೆರಿಗೆಯನ್ನು ಸಹ ಕಟ್ಟುವುದಿಲ್ಲ. ರಷ್ಯದ ಇಡೀ ಆದಾಯದಲ್ಲಿ 50 ಪ್ರತಿಶತ ಆದಾಯವು ಕಾನೂನುಬಾಹಿರವಾಗಿದೆ ಎಂದು ವರದಿಸಲಾಗಿದೆ. ಅಷ್ಟುಮಾತ್ರವಲ್ಲದೆ, ಅಮೆರಿಕದ ಕಂಪನಿಗಳು ವರ್ಷದಲ್ಲಿ ಸುಮಾರು 400ಕ್ಕಿಂತಲೂ ಹೆಚ್ಚು ಬಿಲಿಯನ್‌ ಡಾಲರುಗಳಷ್ಟು ನಷ್ಟವನ್ನು ಹೊಂದುತ್ತವೆ, ಏಕೆಂದರೆ ಅಲ್ಲಿರುವ ಕಾರ್ಮಿಕರು ಹಣವನ್ನು ಇಲ್ಲವೇ ವಸ್ತುಗಳನ್ನು ಕದಿಯುತ್ತಾರೆ ಎಂದು ಅಮೆರಿಕದ ವಂಚನೆ ತನಿಖೆಗಾರರ ಅಸೋಸಿಯೇಷನ್‌ ಹೇಳುತ್ತದೆ.

ಮಕ್ಕಳಿಗೆ ಆಸೆ ತೋರಿಸಲು ಮತ್ತು ಅಪ್ರಾಪ್ತ ವಯಸ್ಕರನ್ನು ಕಾನೂನುಬಾಹಿರ ಸೆಕ್ಸ್‌ ಚಟುವಟಿಕೆಗಳಲ್ಲಿ ಒಳಗೂಡಿಸಲು ಅನೇಕ ಶಿಶುಕಾಮಿಗಳು ಇಂಟರ್‌ನೆಟ್‌ ಅನ್ನು ಉಪಯೋಗಿಸುತ್ತಾರೆ. ಸ್ವೀಡನಿನಲ್ಲಿರುವ, ಮಕ್ಕಳನ್ನು ಕಾಪಾಡಿರಿ ಎಂಬ ಸಂಸ್ಥೆಗನುಸಾರ, ಇಂಟರ್‌ನೆಟ್‌ನಲ್ಲಿ ತೋರಿಸಲಾಗುತ್ತಿರುವ ಮಕ್ಕಳ ಕಾಮಪ್ರಚೋದಕ ಚಿತ್ರಗಳ ಕುರಿತಾಗಿ ಚಿಂತೆಯು ಹೆಚ್ಚುತ್ತಿದೆ. 1997ರಲ್ಲಿ ನಾರ್ವೆಯ ಇಂಟರ್‌ನೆಟ್‌ ವೆಬ್‌ ಸೈಟ್‌ಗಳಲ್ಲಿ ತೋರಿಸಲಾದ, ಮಕ್ಕಳ ಕಾಮಪ್ರಚೋದಕ ಚಿತ್ರಗಳ ಕುರಿತು ಈ ಸಂಸ್ಥೆಗೆ ಸುಮಾರು 1,883 ಸುಳಿವುಗಳು ಸಿಕ್ಕಿವೆ. ಅದರ ಮುಂದಿನ ವರ್ಷ ಅಂತಹ ಸುಳಿವುಗಳ ಸಂಖ್ಯೆ ದಿಢೀರನೆ ಸುಮಾರು 5,000ಕ್ಕೇರಿತು. ಇಂತಹ ಕಾಮಪ್ರಚೋದಕ ಚಿತ್ರಗಳನ್ನು, ಅಂದರೆ, ಎಲ್ಲಿ ಈ ನೀಚ ಕೃತ್ಯಗಳನ್ನು ಸರಕಾರಗಳು ನಿಯಂತ್ರಿಸಲಾಗುವುದಿಲ್ಲವೋ ಆ ದೇಶಗಳಲ್ಲಿಯೇ ತಯಾರಿಸಲಾಗುತ್ತದೆ.

ಹಿಂದೆ ಪರಿಸ್ಥಿತಿ ಉತ್ತಮವಾಗಿತ್ತೋ?

ಇಂದು ಲೋಕದಲ್ಲಿರುವ ಕೆಟ್ಟ ಪರಿಸ್ಥಿತಿಗಳನ್ನು ನೋಡಿ ಕಂಗಾಲಾಗಿರುವ ಅನೇಕ ಜನರು, ತಮ್ಮ ಹೆತ್ತವರ ಅಥವಾ ಅಜ್ಜಅಜ್ಜಿಯರ ಕಾಲದಲ್ಲಿದ್ದ ಕುಟುಂಬಗಳಲ್ಲಿ ಎಷ್ಟೊಂದು ಒಗ್ಗಟ್ಟಿತ್ತು ಎಂಬುದನ್ನು ನೆನಸಿಕೊಳ್ಳುತ್ತಾರೆ. ಹಿಂದಿನ ಕಾಲದಲ್ಲಿ ಜನರು ಎಷ್ಟು ಶಾಂತಿ ಸಮಾಧಾನದಿಂದ ಜೀವಿಸುತ್ತಿದ್ದರು ಹಾಗೂ ಎಲ್ಲರೂ ಪ್ರಾಮಾಣಿಕತೆಗೆ ಮತ್ತು ನೈತಿಕತೆಗೆ ತುಂಬ ಬೆಲೆಕೊಡುತ್ತಿದ್ದರು. ಕಷ್ಟಪಟ್ಟು ಕೆಲಸಮಾಡುತ್ತಿದ್ದ ಜನರು, ಒಬ್ಬರು ಇನ್ನೊಬ್ಬರಿಗೆ ಸಹಾಯಮಾಡುತ್ತಿದ್ದರು, ಕುಟುಂಬ ಸಂಬಂಧಗಳು ತುಂಬ ಬಲವಾಗಿದ್ದವು, ಮತ್ತು ಯುವಕರಿಗೆ ಒಂದು ರೀತಿಯ ಸುರಕ್ಷಿತ ಅನಿಸಿಕೆಯಿತ್ತು. ಅಲ್ಲದೆ ಹೊಲಗದ್ದೆಗಳಲ್ಲಿ ಇಲ್ಲವೇ ವ್ಯಾಪಾರವಹಿವಾಟುಗಳಲ್ಲಿ ಹೆತ್ತವರಿಗೆ ಈ ಯುವಕರು ಸಹಾಯಮಾಡುತ್ತಿದ್ದರು ಎಂದು ಜನರು ನೆನಸಿಕೊಳ್ಳಬಹುದು.

ಹಾಗಾದರೆ ಇದು ಇಂತಹ ಪ್ರಶ್ನೆಗಳನ್ನು ಎಬ್ಬಿಸುತ್ತದೆ: ಹಿಂದಿನ ಕಾಲದಲ್ಲಿ ಜನರ ನೈತಿಕ ಮೌಲ್ಯಗಳು ನಿಜವಾಗಿಯೂ ಉತ್ತಮವಾಗಿದ್ದವೋ? ಅಥವಾ ಇದು ಗತಕಾಲದ ನಮ್ಮ ನೆನಪನ್ನು ತಿರಿಚಿಹಾಕುವ ಒಂದು ರೀತಿಯ ಭಾವುಕ ಹಂಬಲವೋ? ಈ ಪ್ರಶ್ನೆಗಳಿಗೆ ಇತಿಹಾಸಕಾರರು ಮತ್ತು ಇನ್ನಿತರ ಸಾಮಾಜಿಕ ವಿಶ್ಲೇಷಕರು ಹೇಗೆ ಉತ್ತರಿಸುತ್ತಾರೆ ಎಂಬುದನ್ನು ನಾವು ನೋಡೋಣ.

[ಪುಟ 3ರಲ್ಲಿರುವ ಚೌಕ]

ನೈತಿಕ ಮೌಲ್ಯಗಳ ಅರ್ಥ

ಈ ಲೇಖನಗಳಲ್ಲಿ ಕಂಡುಬರುವ “ನೈತಿಕ ಮೌಲ್ಯಗಳು” ಎಂಬ ಪದದ ಅರ್ಥವು, ಮನುಷ್ಯರ ನಡವಳಿಕೆಯಲ್ಲಿ ಯಾವುದು ಸರಿ ಹಾಗೂ ಯಾವುದು ತಪ್ಪು ಎಂಬ ತತ್ತ್ವಗಳಿಗೆ ಸಂಬಂಧಿಸಿದ್ದಾಗಿರುತ್ತದೆ. ಅಂದರೆ, ಉಚ್ಚಮಟ್ಟದ ನಡವಳಿಕೆಯು ಅಪ್ರಾಮಾಣಿಕತೆ, ಅಸತ್ಯ, ಮತ್ತು ಲೈಂಗಿಕತೆ ಹಾಗೂ ಇನ್ನಿತರ ವಿಷಯಗಳಿಂದ ದೂರವಿರುವುದನ್ನು ಅರ್ಥೈಸುತ್ತದೆ.