ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜಗತ್ತನ್ನು ಗಮನಿಸುವುದು

ಜಗತ್ತನ್ನು ಗಮನಿಸುವುದು

ಜಗತ್ತನ್ನು ಗಮನಿಸುವುದು

ಲೋಕದ ಸುಮಾರು ಮೂರನೇ ಒಂದು ಭಾಗವು ಕ್ಷಯಕ್ಕೆ ತುತ್ತಾಗಿದೆ

1997ರಲ್ಲಿ ಲೋಕದ ಜನಸಂಖ್ಯೆಯಲ್ಲಿ ಸುಮಾರು ಮೂರನೇ ಒಂದು ಭಾಗ, ಅಂದರೆ 186 ಕೋಟಿ ಜನರು ಕ್ಷಯರೋಗಕ್ಕೆ ತುತ್ತಾಗಿದ್ದರೆಂದು, 40 ದೇಶಗಳಿಂದ ಬಂದ 86ಕ್ಕಿಂತಲೂ ಹೆಚ್ಚು ಆರೋಗ್ಯ ಪರಿಣತರ ಒಂದು ಗುಂಪು ಹೇಳುತ್ತದೆ. ಲೋಕಾರೋಗ್ಯ ಸಂಸ್ಥೆಯಿಂದ ಆಯ್ಕೆಮಾಡಲ್ಪಟ್ಟಿರುವ ಈ ಗುಂಪು, 1997ರಲ್ಲಿ 18.7 ಲಕ್ಷ ಜನರು ಕ್ಷಯರೋಗದಿಂದ ಸತ್ತರು ಮತ್ತು ಇನ್ನೂ 79.6 ಲಕ್ಷ ಹೊಸ ರೋಗಿಗಳು ಈ ರೋಗಕ್ಕೆ ತುತ್ತಾಗಿರುವ ವರದಿಗಳಿವೆ ಎಂಬುದನ್ನು ಸಹ ಅಂದಾಜುಮಾಡಿ ಹೇಳಿತು. ದ ಜರ್ನಲ್‌ ಆಫ್‌ ದಿ ಅಮೆರಿಕನ್‌ ಮೆಡಿಕಲ್‌ ಅಸೋಸಿಯೇಷನ್‌ನಲ್ಲಿ ಪ್ರಕಾಶಿಸಲ್ಪಟ್ಟ ಆ ಅಧ್ಯಯನವು ಹೇಳಿದ್ದೇನೆಂದರೆ, “ಇಷ್ಟರ ತನಕ ಕ್ಷಯರೋಗಕ್ಕೆ ತುತ್ತಾಗಿರುವ ಎಲ್ಲ ಕ್ಷಯರೋಗಿಗಳಲ್ಲಿ ಸುಮಾರು ಎಂಬತ್ತು ಪ್ರತಿಶತದಷ್ಟು ಜನರು 22 ದೇಶಗಳಿಗೆ ಸೇರಿದವರಾಗಿದ್ದರು. ಅಷ್ಟುಮಾತ್ರವಲ್ಲ, ಈ ಸಂಖ್ಯೆಯಲ್ಲಿ ಅರ್ಧಕ್ಕಿಂತಲೂ ಹೆಚ್ಚು ರೋಗಿಗಳು, ಆಗ್ನೇಯ ಏಷಿಯಾದ 5 ದೇಶಗಳವರಾಗಿದ್ದರು.” ಈ ಅಧ್ಯಯನಕ್ಕನುಸಾರ, “ಅತಿ ಹೆಚ್ಚು ಕ್ಷಯರೋಗಿಗಳಿದ್ದ ಹತ್ತು ದೇಶಗಳ ಪೈಕಿ 9 ದೇಶಗಳು ಆಫ್ರಿಕದಲ್ಲಿದ್ದವು.” ಏಚ್‌ಐವಿ ಸೋಂಕಿನ ಪ್ರಮಾಣಗಳು ಅತ್ಯಧಿಕವಾಗಿರುವ ಕೆಲವು ದೇಶಗಳಲ್ಲಿ, ಸಾವಿನ ಸಂಖ್ಯೆಯು 50 ಪ್ರತಿಶತಕ್ಕಿಂತಲೂ ಹೆಚ್ಚಾಗಿದೆ. ಆ ದೇಶಗಳಲ್ಲಿ ರೋಗವನ್ನು “ತಡೆಗಟ್ಟುವ ಕ್ರಮಗಳ ಕೊರತೆಯ” ಫಲಿತಾಂಶವಾಗಿ, ಕ್ಷಯರೋಗದ ಪ್ರಮಾಣಗಳು ಹೆಚ್ಚುತ್ತಾ ಹೋಗುತ್ತಿವೆ. ಈ ವರ್ಷ ಸುಮಾರು 84 ಲಕ್ಷ ಜನರು ಕ್ಷಯರೋಗಕ್ಕೆ ತುತ್ತಾಗಲಿದ್ದಾರೆ ಎಂದು ಈ ಅಧ್ಯಯನದ ಲೇಖಕರು ಮುಂತಿಳಿಸುತ್ತಾರೆ. ಈ ರೋಗದ ಸೋಂಕು ತಗುಲಿದವರಲ್ಲಿ ಹೆಚ್ಚಿನವರು ಪುನಃ ಈ ರೋಗಕ್ಕೆ ತುತ್ತಾಗುವುದಿಲ್ಲ. ಆದರೆ ರೋಗಿಯು ನ್ಯೂನಪೋಷಣೆಗೆ ಒಳಗಾದಾಗ ಅಥವಾ ಅವನ ಸೋಂಕುರಕ್ಷಣಾ ವ್ಯವಸ್ಥೆಯು ದುರ್ಬಲಗೊಂಡಿರುವಾಗ, ಈ ರೋಗದ ಬ್ಯಾಕ್ಟೀರಿಯವು ಪುನಃ ತನ್ನ ಕೆಲಸವನ್ನು ಆರಂಭಿಸಬಹುದು ಎಂದು ಅದೇ ಮೂಲವು ತಿಳಿಸುತ್ತದೆ.

ಪಾನಮತ್ತ ಡ್ರೈವರ್‌ಗಳಿಗೆ ಎದುರಾಗಿ ತೂಕಡಿಸುವ ಡ್ರೈವರ್‌ಗಳು

“ರಾತ್ರಿ ಸಾಕಷ್ಟು ನಿದ್ರೆಮಾಡದಿದ್ದರೆ, ಅತಿಯಾಗಿ ಕುಡಿಯುವುದರಿಂದ ಉಂಟಾಗುವ ಪರಿಣಾಮವನ್ನೇ ಅದು ಉಂಟುಮಾಡುತ್ತದೆ” ಎಂದು ದ ನ್ಯೂ ಯಾರ್ಕ್‌ ಟೈಮ್ಸ್‌ ಹೇಳುತ್ತದೆ. ಇದರ ಬಗ್ಗೆ ಅಧ್ಯಯನ ನಡೆಸಲಿಕ್ಕಾಗಿ ಸ್ಟ್ಯಾನ್‌ಫರ್ಡ್‌ ವಿಶ್ವವಿದ್ಯಾನಿಲಯವು ಎರಡು ಗುಂಪಿನ ಜನರನ್ನು ಆರಿಸಿಕೊಂಡಿತು. ಒಂದು ಗುಂಪಿನಲ್ಲಿ 113 ಜನರಿದ್ದರು ಮತ್ತು ಅವರಿಗೆ ಸ್ಲೀಪ್‌ ಆ್ಯಪ್ನೀಯ ಸಮಸ್ಯೆಯಿತ್ತು. ಅಂದರೆ, ಇವರಿಗೆ ರಾತ್ರಿ ನಿದ್ರೆ ಮಾಡುತ್ತಿರುವಾಗ ಅನೇಕಬಾರಿ ಎಚ್ಚರವಾಗುತ್ತದೆ ಮತ್ತು ಈ ಕಾರಣದಿಂದ ಹಗಲು ಹೊತ್ತಿನಲ್ಲಿ ನಿದ್ರೆಬರುತ್ತಿರುತ್ತದೆ. ಈ ಗುಂಪಿಗೆ ವಿರುದ್ಧವಾಗಿ 80 ಜನರಿದ್ದ ಇನ್ನೊಂದು ಕಂಟ್ರೋಲ್‌ ಗ್ರೂಪ್‌ ಇತ್ತು. ಈ ಎರಡೂ ಗುಂಪುಗಳು ತಮ್ಮ ಕಾರ್ಯವನ್ನು ಆರಂಭಿಸುವ ಸಮಯವನ್ನು ನಿಗದಿಪಡಿಸಿದಾಗ, 80 ಜನರಿದ್ದ ಗುಂಪಿನವರು, 80 ಪ್ರತಿಶತ ಪ್ರಮಾಣ ಆಲ್ಕೊಹಾಲ್‌ ಇದ್ದ ಮಾದಕಪಾನೀಯವನ್ನು ಕುಡಿಯಲಾರಂಭಿಸಿದರು. “ಏಳು ಪರೀಕ್ಷೆಗಳಲ್ಲಿ ಮೂರು ಪರೀಕ್ಷೆಗಳು ತೋರಿಸಿದ್ದೇನೆಂದರೆ, ರಕ್ತದಲ್ಲಿ 0.8 ಪ್ರತಿಶತದಷ್ಟು ಆಲ್ಕೊಹಾಲ್‌ ಪ್ರಮಾಣವಿದ್ದ ಜನರಿಗಿಂತಲೂ ಸ್ಲೀಪ್‌ ಆ್ಯಪ್ನೀಯದ ಸಮಸ್ಯೆಯಿದ್ದ ಜನರ ಸ್ಥಿತಿಯು ತುಂಬ ಕೆಟ್ಟದ್ದಾಗಿತ್ತು. ಅಮೆರಿಕದ 16 ರಾಜ್ಯಗಳಲ್ಲಿ ಇಂತಹ ವ್ಯಕ್ತಿಗಳಿಗೆ ಗಾಡಿಯನ್ನು ಓಡಿಸಲು ಅನುಮತಿ ಸಿಗುವುದಿಲ್ಲ” ಎಂದು ಟೈಮ್ಸ್‌ ವರದಿಸಿತು. ಮುಖ್ಯ ಸಂಶೋಧಕರಾಗಿರುವ ಡಾ. ನೆಲ್ಸನ್‌ ಬಿ. ಪವೆಲ್‌ ಅವರಿಗನುಸಾರ, ತೂಕಡಿಸುತ್ತಾ ಡ್ರೈವ್‌ಮಾಡುವುದರ ಅಪಾಯಗಳನ್ನು ಈ ಕಂಡುಹಿಡಿತಗಳು ಒತ್ತಿಹೇಳುತ್ತವೆ.

‘ಟಿವಿ ಇಲ್ಲದಿದ್ದರೆ ಆಗುವುದಿಲ್ಲ!’

ನಿರ್ಜನವಾದ ಒಂದು ದ್ವೀಪದಲ್ಲಿ ನೀವು ಸ್ವಲ್ಪ ಸಮಯವನ್ನು ಕಳೆಯಬೇಕಾಗಿರುವಲ್ಲಿ, ನೀವು ನಿಮ್ಮೊಂದಿಗೆ ಏನನ್ನು ಕೊಂಡೊಯ್ಯುವಿರಿ? ಈ ಪ್ರಶ್ನೆಯನ್ನು ಜರ್ಮನಿಯಲ್ಲಿರುವ 2,000 ಯುವ ಜನರಿಗೆ ಕೇಳಲಾಯಿತು. ಅಧಿಕಾಂಶ ಜನರಿಗೆ, ಟಿವಿ ಸೆಟ್‌ಗಳು, ರೇಡಿಯೋಗಳು, CDಗಳು ಮತ್ತು ಕ್ಯಾಸೆಟ್‌ ರೆಕಾರ್ಡಿಂಗ್‌ಗಳು, ಅತಿ ಹೆಚ್ಚು ಅಗತ್ಯವಿದ್ದ ವಸ್ತುಗಳಾಗಿದ್ದವು ಎಂದು ವೆಸ್ಟ್‌ಫಾಲಿಶ ರಂಟ್‌ಶೌ ವಾರ್ತಾಪತ್ರಿಕೆಯು ವರದಿಸುತ್ತದೆ. ಆಹಾರ ಮತ್ತು ಪಾನೀಯಗಳು ಎರಡನೆಯ ಸ್ಥಾನದಲ್ಲಿದ್ದವು. ಕುಟುಂಬ ಸದಸ್ಯರು ಮತ್ತು ಸ್ನೇಹಿತರು ಮೂರನೆಯ ಸ್ಥಾನದಲ್ಲಿದ್ದರು. 13 ವರ್ಷ ಪ್ರಾಯದ ಒಬ್ಬ ಹುಡುಗನು ತನ್ನ ಆಯ್ಕೆಯನ್ನು ಹೀಗೆ ವಿವರಿಸಿದನು: “ಟಿವಿ ಇಲ್ಲದಿದ್ದರೆ ನನಗೆ ಆಗುವುದೇ ಇಲ್ಲ.” ಪ್ರಶ್ನಿಸಲ್ಪಟ್ಟವರಲ್ಲಿ ಮೂರನೇ ಒಂದು ಭಾಗದಷ್ಟು ಮಂದಿ ಮಾತ್ರ, ಚಾಕುಗಳು, ಗುದ್ದಲಿಗಳು, ಮತ್ತು ಗರಗಸಗಳಂತಹ ಉಪಯುಕ್ತಕರ ಸಲಕರಣೆಗಳನ್ನು ತೆಗೆದುಕೊಂಡು ಹೋಗುವೆವೆಂದು ಹೇಳಿದರು. ಕೇವಲ 0.3 ಪ್ರತಿಶತ ಮಂದಿ ಬೈಬಲನ್ನು ತೆಗೆದುಕೊಂಡು ಹೋಗುವೆವೆಂದು ಹೇಳಿದರು. ಅವರೆಲ್ಲರಲ್ಲಿ ತುಂಬ ಕಿರಿಯವಳಾಗಿದ್ದ ಏಳು ವರ್ಷ ಪ್ರಾಯದ ಹುಡುಗಿಯು ಹೇಳಿದ್ದು: “ನನ್ನ ಜೊತೆ ನಾನು ನನ್ನ ಅಮ್ಮನನ್ನು ಮಾತ್ರ ಕರೆದುಕೊಂಡುಹೋಗುವೆ. ನನ್ನ ಅಮ್ಮ ಇದ್ದರೆ ನನಗೆ ಏನೂ ತೊಂದರೆಯಾಗುವುದಿಲ್ಲ.”

ಮಕ್ಕಳು ಮತ್ತು ಧಾರ್ಮಿಕ ಆರಾಧನಾ ಕೂಟಗಳು

“ಮಕ್ಕಳು ಧಾರ್ಮಿಕ ಆರಾಧನಾ ಕೂಟಗಳಿಗೆ ಹಾಜರಾಗುತ್ತಿದ್ದಾರೋ?” ಎಂದು ಕೆನೆಡಿಯನ್‌ ಸೋಷಿಯಲ್‌ ಟ್ರೆಂಡ್ಸ್‌ ಎಂಬ ಪತ್ರಿಕೆಯ ಇತ್ತೀಚಿನ ಸಂಪುಟವು ಪ್ರಶ್ನಿಸುತ್ತದೆ. ಸ್ಟ್ಯಾಟಿಸ್ಟಿಕ್ಸ್‌ ಕೆನಡದಲ್ಲಿರುವ ಒಂದು ಅಧ್ಯಯನಕ್ಕನುಸಾರ ಈ ಪತ್ರಿಕೆಯು ಹೀಗೆ ಉತ್ತರಿಸುತ್ತದೆ: “ಕೆನಡದ 12 ವರ್ಷಕ್ಕಿಂತಲೂ ಚಿಕ್ಕ ಪ್ರಾಯದ ಮಕ್ಕಳಲ್ಲಿ ಮೂರನೇ ಒಂದು ಭಾಗ, ಅಂದರೆ 36% ಮಕ್ಕಳು ಕಡಿಮೆಪಕ್ಷ ತಿಂಗಳಿಗೆ ಒಮ್ಮೆಯಾದರೂ ಧಾರ್ಮಿಕ ಆರಾಧನಾ ಕೂಟಕ್ಕೆ ಹಾಜರಾಗುತ್ತಿದ್ದರು. ಮತ್ತು ಇವರಲ್ಲಿ ಹೆಚ್ಚಿನವರು ಪ್ರತಿವಾರ ಧಾರ್ಮಿಕ ಆರಾಧನಾ ಕೂಟಗಳಲ್ಲಿ ಭಾಗವಹಿಸುವವರಾಗಿದ್ದರು. ಇನ್ನೂ 22% ಮಂದಿ ತುಂಬ ಅಪರೂಪವಾಗಿ, ಅಂದರೆ ಕೊನೆಪಕ್ಷ ವರ್ಷಕ್ಕೆ ಒಮ್ಮೆಯಾದರೂ ಹಾಜರಾಗುತ್ತಿದ್ದರು.” ಅಷ್ಟುಮಾತ್ರವಲ್ಲ, ಈ ಲೇಖನವು ಹೀಗೂ ಹೇಳಿತು: “ಧಾರ್ಮಿಕ ಆರಾಧನಾ ಕೂಟಗಳಲ್ಲಿ ಮಕ್ಕಳ ಭಾಗವಹಿಸುವಿಕೆಯು, ಅವರು ಯಾವ ಧಾರ್ಮಿಕ ಗುಂಪಿನ ಸದಸ್ಯರಾಗಿದ್ದರು ಎಂಬುದರ ಮೇಲೆ ಅವಲಂಬಿಸಿತ್ತು. . . . ಪ್ರಮುಖ ಧರ್ಮಗಳೆಂಬ ಖ್ಯಾತಿಯಿರುವ ಆ್ಯಂಗ್ಲಿಕನ್‌ ಮತ್ತು ಯುನೈಟೆಡ್‌ ಚರ್ಚ್‌ಗಳಿಗೆ ಸೇರಿದ್ದ ಮಕ್ಕಳ ಸಾಪ್ತಾಹಿಕ ಹಾಜರಿಯು ತುಂಬ ಕಡಿಮೆಯಾಗಿತ್ತು, ಅಂದರೆ 18% ಆಗಿತ್ತು.” ರೋಮನ್‌ ಕ್ಯಾಥೊಲಿಕ್‌ ಮಕ್ಕಳ ಹಾಜರಿಯು ಇದಕ್ಕಿಂತ ಸ್ವಲ್ಪ ಹೆಚ್ಚು ಉತ್ತಮವಾಗಿದ್ದು, ವಾರಕ್ಕೆ ಸುಮಾರು 22 ಪ್ರತಿಶತದಷ್ಟು ಮಂದಿ ಹಾಜರಾಗುತ್ತಿದ್ದರು. 44 ಪ್ರತಿಶತದಷ್ಟು ಮುಸ್ಲಿಮ್‌ ಮಕ್ಕಳು, ಪ್ರತಿ ವಾರ ಇಸ್ಲಾಮ್‌ ಧರ್ಮದ ಆರಾಧನಾ ಕೂಟಗಳಿಗೆ ಹಾಜರಾಗುತ್ತಿದ್ದರಾದರೂ, “ಈ ಸಮೀಕ್ಷೆಯು ನಡೆಯುವುದಕ್ಕಿಂತ ಒಂದು ವರ್ಷ ಮುಂಚೆ 39% ಪ್ರತಿಶತದಷ್ಟು ಮುಸ್ಲಿಮರು ಆರಾಧನಾ ಕೂಟಗಳಿಗೆ ಹಾಜರಾಗಲಿಲ್ಲ. ಇದು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕೂಟಗಳಿಗೆ ತಪ್ಪಿಸಿಕೊಂಡ ದಾಖಲೆಯಾಗಿತ್ತು.”