ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ತಂದೆಯಂದಿರು ತಮ್ಮ ಜವಾಬ್ದಾರಿಗಳಿಂದ ನಿಜವಾಗಿಯೂ ತಪ್ಪಿಸಿಕೊಳ್ಳಬಲ್ಲರೋ?

ತಂದೆಯಂದಿರು ತಮ್ಮ ಜವಾಬ್ದಾರಿಗಳಿಂದ ನಿಜವಾಗಿಯೂ ತಪ್ಪಿಸಿಕೊಳ್ಳಬಲ್ಲರೋ?

ಯುವ ಜನರು ಪ್ರಶ್ನಿಸುವುದು . . .

ತಂದೆಯಂದಿರು ತಮ್ಮ ಜವಾಬ್ದಾರಿಗಳಿಂದ ನಿಜವಾಗಿಯೂ ತಪ್ಪಿಸಿಕೊಳ್ಳಬಲ್ಲರೋ?

“‘ನಾನು ನಿಮ್ಮ ಮಗುವಿನ ತಾಯಿಯಾಗಲಿದ್ದೇನೆ’ ಎಂದು ಅವಳು ನನಗೆ ಹೇಳಿದಾಗ ನನಗೆ ಆಘಾತವಾಯಿತು. ಯಾಕೆಂದರೆ ಒಂದು ಕುಟುಂಬವನ್ನು ಪರಾಮರಿಸುವ ಸ್ಥಿತಿಯಲ್ಲಿ ನಾನಿರಲಿಲ್ಲ. ಆ ಮಗುವಿನ ಆರೈಕೆಯನ್ನು ಯಾರು ಮಾಡುವರು? ಎಂಬ ಪ್ರಶ್ನೆಯು ನನ್ನ ಮನಸ್ಸಿಗೆ ಬಂತು. ಆ ಜವಾಬ್ದಾರಿಯಿಂದ ಹೇಗಾದರೂ ತಪ್ಪಿಸಿಕೊಳ್ಳುವ ಅನಿಸಿಕೆ ನನಗಾಯಿತು.”—ಜಿಮ್‌. *

“ಪ್ರತಿ ವರ್ಷ, ಹೆಚ್ಚುಕಡಿಮೆ ಹತ್ತು ಲಕ್ಷಕ್ಕಿಂತಲೂ ಹೆಚ್ಚು ಹದಿಹರೆಯದ ಹುಡುಗಿಯರು . . . ಗರ್ಭಿಣಿಯರಾಗುತ್ತಾರೆ” ಎಂದು ಆ್ಯಲನ್‌ ಗುಟ್ಯಮಕರ್‌ ಸಂಸ್ಥೆಯಿಂದ ಬಂದಿರುವ ವರದಿಯು ಹೇಳುತ್ತದೆ. “ಸುಮಾರು ಶೇಕಡ 78 ರಷ್ಟು ಮಕ್ಕಳು ಮದುವೆಯಾಗದ ಹುಡುಗಿಯರಿಗೆ ಹುಟ್ಟುತ್ತಾರೆ.”

ಹಿಂದಿನ ಕಾಲದಲ್ಲಿ ಮಕ್ಕಳನ್ನು ಸಾಕಿಸಲಹುವ ಜವಾಬ್ದಾರಿಯನ್ನು ತಂದೆಯರೇ ವಹಿಸುತ್ತಿದ್ದರು. ಆದರೆ ಟೀನೆಜ್‌ ಫಾದರ್ಸ್‌ ಎಂಬ ಪುಸ್ತಕವು ಹೇಳುವಂತೆ, “ಒಂದು ಕಾಲದಲ್ಲಿ ಮದುವೆಯಾಗದೆ ಮಕ್ಕಳಿಗೆ ಜನ್ಮ ಕೊಡುವುದು ನಾಚಿಕೆ ಮತ್ತು ಅವಮಾನವನ್ನುಂಟುಮಾಡುವ ಸಂಗತಿಯಾಗಿತ್ತು. ಆದರೆ ಈಗ ಹಾಗಿಲ್ಲ.” ಒಂದು ಮಗುವಿಗೆ ತಂದೆಯಾಗುವುದು ಗೌರವದ ವಿಷಯವಾಗಿದೆ ಎಂಬ ದೃಷ್ಟಿಕೋನವು ಸಹ ಕೆಲವು ಸಮಾಜದ ಯುವ ಜನರಲ್ಲಿ ಇದೆ! ಹೀಗಿದ್ದರೂ, ತಾವು ಹುಟ್ಟಿಸುವ ಮಕ್ಕಳ ಕಡೆಗೆ ತಮಗಿರುವ ಜವಾಬ್ದಾರಿಗಳನ್ನು ವಹಿಸಿಕೊಳ್ಳುವ ಯುವ ಜನರ ಸಂಖ್ಯೆ ಬಹಳ ಕಡಿಮೆ. ಅನೇಕರು ಸ್ವಲ್ಪ ಸಮಯದ ನಂತರ ಜವಾಬ್ದಾರಿಗಳಿಂದ ತಪ್ಪಿಸಿಕೊಳ್ಳುತ್ತಾರೆ ಅಥವಾ ಜಾರಿಕೊಳ್ಳುತ್ತಾರೆ. *

ಆದರೆ ಒಬ್ಬ ಯುವಕನು ತನ್ನ ಅನೈತಿಕ ನಡತೆಯ ದುಷ್ಪರಿಣಾಮಗಳಿಂದ ಸಂಪೂರ್ಣವಾಗಿ ತಪ್ಪಿಸಿಕೊಳ್ಳಬಲ್ಲನೋ? ಬೈಬಲಿನ ಪ್ರಕಾರ ಖಂಡಿತವಾಗಿಯೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅದು ಎಚ್ಚರಿಸುವುದು: “ಮೋಸಹೋಗಬೇಡಿರಿ; ದೇವರು ತಿರಸ್ಕಾರ ಸಹಿಸುವವನಲ್ಲ. ಮನುಷ್ಯನು ತಾನು ಏನು ಬಿತ್ತುತ್ತಾನೋ ಅದನ್ನೇ ಕೊಯ್ಯಬೇಕು.” (ಗಲಾತ್ಯ 6:7) ನಾವು ನೋಡಲಿರುವಂತೆ, ಅನೇಕ ವೇಳೆ ಹುಡುಗ ಮತ್ತು ಹುಡುಗಿಯ ಮಧ್ಯೆ ಲೈಂಗಿಕ ಸಂಬಂಧವು ಜೀವನವಿಡೀ ಅನುಭವಿಸಬೇಕಾದ ದುಷ್ಪರಿಣಾಮಗಳನ್ನು ಉಂಟುಮಾಡಬಲ್ಲದು. ಲೈಂಗಿಕ ಅನೈತಿಕತೆಯಿಂದ ದೂರವಿರುವ ಬಗ್ಗೆ ಬೈಬಲ್‌ ನೀಡುವ ಸ್ಪಷ್ಟ ಸಲಹೆಯನ್ನು ಪಾಲಿಸುವ ಮೂಲಕ ಯುವ ಜನರು ಇಂತಹ ದುಷ್ಪರಿಣಾಮಗಳನ್ನು ತಡೆಯಬಲ್ಲರು.

ಜವಾಬ್ದಾರಿಗಳಿಂದ ತಪ್ಪಿಸಿಕೊಳ್ಳುವುದು ಅಷ್ಟೇನು ಸುಲಭವಲ್ಲ

ಒಂದು ಮಗುವನ್ನು ನೋಡಿಕೊಳ್ಳುವುದಕ್ಕೆ ಸಮಯ, ಹಣ ಮತ್ತು ವೈಯಕ್ತಿಕ ಸ್ವಾತಂತ್ರ್ಯವನ್ನು ತ್ಯಾಗಮಾಡಬೇಕಾಗುತ್ತದೆ. ವಿವಾಹವಾಗದ ಯುವ ತಂದೆಯಂದಿರು (ಇಂಗ್ಲಿಷ್‌) ಎಂಬ ಪುಸ್ತಕವು ಗಮನಿಸುವುದು: “ಮಗುವನ್ನು ಸಾಕಲು ತುಂಬ ಹಣ ಖರ್ಚಾಗುವುದರಿಂದ ಕೆಲವು ಯುವಕರು ‘ಅವರನ್ನು ಸಾಕುವುದರಲ್ಲಿ’ ಆಸಕ್ತಿಯನ್ನು ತೋರಿಸುವುದಿಲ್ಲ. ವಿಷಯವು ಏನೇ ಇರಲಿ, ಅನೇಕರು ತಮ್ಮ ಸ್ವಾರ್ಥಕ್ಕಾಗಿ ಭಾರೀ ಬೆಲೆಯನ್ನು ತೆತ್ತಿದ್ದಾರೆ. ತಮ್ಮ ಸ್ವಂತ ಮಕ್ಕಳನ್ನು ಸಾಕದೆ ಇರುವ ಪುರುಷರನ್ನು ಸಮಾಜವು ಒಳ್ಳೇ ದೃಷ್ಟಿಯಿಂದ ನೋಡುವುದಿಲ್ಲ. ಅನೇಕ ದೇಶಗಳಲ್ಲಿರುವ ಕೋರ್ಟುಗಳು ಮತ್ತು ಕಾನೂನು ರಚಿಸುವವರು ಸಹ ಇಂಥವರಿಗೆ ಯಾವ ಗೌರವವನ್ನೂ ತೋರಿಸದಿರುವುದು ಇದಕ್ಕೆ ಕೇವಲ ಒಂದು ಉದಾಹರಣೆಯಾಗಿದೆ ಅಷ್ಟೇ. ಕಾನೂನಿನ ಪ್ರಕಾರ ಒಬ್ಬನು ತಂದೆಯಾಗಿದ್ದಾನೆಂಬುದು ರುಜುಪಡಿಸಲ್ಪಟ್ಟ ಮೇಲೆ, ಯುವ ತಂದೆಯರು ಮಕ್ಕಳ ಖರ್ಚುವೆಚ್ಚಗಳನ್ನು ವಹಿಸಿಕೊಳ್ಳಬೇಕಾಗಿರುವುದು ತಕ್ಕದ್ದಾಗಿದೆ. ಈ ಖರ್ಚುಗಳನ್ನು ನೋಡಿಕೊಳ್ಳಲು, ಅನೇಕ ಯುವ ಜನರು ಶಾಲೆಗೆ ಹೋಗುವುದನ್ನು ಬಿಟ್ಟುಬಿಡಬೇಕಾಗುತ್ತದೆ ಅಥವಾ ತಮಗೆ ಅರ್ಹತೆಗಳು ಇಲ್ಲದಿರುವುದರಿಂದ ಕೆಲಸವನ್ನು ಮಾಡಬೇಕಾಗುತ್ತದೆ ಮತ್ತು ಇದರಲ್ಲಿ ಅವರಿಗೆ ಸಿಗುವ ಸಂಬಳ ಕೂಡ ಕಡಿಮೆಯಿರುತ್ತದೆ. ಸ್ಕೂಲ್‌ ಏಜ್‌ ಪ್ರೆಗ್ನೆನ್ಸಿ ಆ್ಯಂಡ್‌ ಪೇರಂಟ್‌ಹುಡ್‌ ಎಂಬ ಪುಸ್ತಕವು ಹೀಗೆ ಹೇಳುತ್ತದೆ: “ಹುಡುಗನು ಎಷ್ಟು ಚಿಕ್ಕ ಪ್ರಾಯದಲ್ಲಿ ತಂದೆಯಾಗುತ್ತಾನೊ ಅವನಿಗೆ ಕಾನೂನಿನ ಪ್ರಕಾರ ಶಿಕ್ಷಣ ಪಡೆಯುವ ಅವಕಾಶವೂ ಅಷ್ಟೇ ಕಡಿಮೆಯಾಗಿರುತ್ತದೆ.” ಖರ್ಚುಗಳನ್ನು ನಿಭಾಯಿಸಲು ಸಾಕಷ್ಟು ಹಣವಿಲ್ಲದಿರುವುದಾದರೆ ದೊಡ್ಡ ಮೊತ್ತದ ಸಾಲವು ಜಮಾ ಆಗುತ್ತದೆ.

ಯುವ ಜನರಲ್ಲಿ ಎಲ್ಲರೂ ತಮ್ಮ ಮಕ್ಕಳ ಕಡೆಗೆ ನಿರ್ದಯಿಗಳಾಗಿರುವುದಿಲ್ಲ. ನಿಜ, ಅನೇಕರು ಒಳ್ಳೆಯ ಉದ್ದೇಶದಿಂದಲೇ ಮಗುವಿನ ಪರಾಮರಿಕೆಯನ್ನು ಆರಂಭಿಸುತ್ತಾರೆ. ಒಂದು ಸರ್ವೆಗನುಸಾರ ಶೇಕಡ 75 ರಷ್ಟು ಹದಿಹರೆಯದ ತಂದೆಯಂದಿರು ತಮ್ಮ ಮಕ್ಕಳನ್ನು ನೋಡಲು ಆಸ್ಪತ್ರೆಗೆ ಭೇಟಿಕೊಟ್ಟರು. ಆದರೂ, ಸ್ವಲ್ಪವೇ ಸಮಯದಲ್ಲಿ ತಮ್ಮ ಮಗುವಿನ ಆರೈಕೆಮಾಡುವ ಜವಾಬ್ದಾರಿಗಳಿಂದ ಅನೇಕ ಯುವ ತಂದೆಯಂದಿರು ಚಿಂತೆಗೀಡಾದರು.

ಒಂದು ಒಳ್ಳೆಯ ಉದ್ಯೋಗವನ್ನು ಪಡೆದುಕೊಳ್ಳಲು ಬೇಕಾಗಿರುವ ಸಾಮರ್ಥ್ಯ ಅಥವಾ ಅನುಭವವು ತಮ್ಮಲ್ಲಿ ಇಲ್ಲವೆಂಬುದನ್ನು ಅನೇಕರು ಒಪ್ಪಿಕೊಳ್ಳುತ್ತಾರೆ. ತಾವು ಕುಟುಂಬಕ್ಕೆ ಹಣಸಹಾಯ ಮಾಡಲು ಅಸಮರ್ಥರಾಗಿದ್ದೇವೆಂಬುದರ ಕುರಿತು ಲಜ್ಜಿತರಾಗಿ, ಅವರು ಸ್ವಲ್ಪ ಸಮಯದ ನಂತರ ತಮ್ಮ ಜವಾಬ್ದಾರಿಗಳನ್ನು ತೊರೆದುಬಿಡುತ್ತಾರೆ. ಅದೇನೇ ಇದ್ದರೂ, ಮಾನಸಿಕ ವೇದನೆಯು ಒಬ್ಬ ಯುವಕನ ಮನಸ್ಸನ್ನು ಬಹಳ ಕಾಲದ ವರೆಗೆ ಕಾಡುತ್ತಿರಬಲ್ಲದು. ಒಬ್ಬ ಯುವ ತಂದೆಯು ಒಪ್ಪಿಕೊಳ್ಳುವುದು: “ಕೆಲವೊಮ್ಮೆ ನಾನು, ನನ್ನ ಮಗನು ಹೇಗಿದ್ದಾನೋ ಎಂದು ಚಿಂತಿಸುತ್ತಿರುತ್ತೇನೆ. . . . ಅವನ ಚಿಂತೆ ನನ್ನನ್ನು ಕಾಡುತ್ತಿರುತ್ತದೆ. ಆದರೆ ಈಗ ಏನು ಮಾಡಲಿ, ಅವನನ್ನು ಈಗ ಹುಡುಕಲಿಕ್ಕೆ ಆಗುವುದಿಲ್ಲವಲ್ಲಾ. ಎಂದಾದರೂ ಒಂದು ದಿನ ಅವನು ನನಗೆ ಸಿಗಬಹುದು ಎಂಬ ಭರವಸೆ ನನಗಿದೆ.”

ಮಕ್ಕಳಿಗಾಗುವ ಹಾನಿ

ಜವಾಬ್ದಾರಿಗಳಿಂದ ಓಡಿಹೋಗುವ ತಂದೆಯಂದಿರು, ತಮ್ಮ ಸ್ವಂತ ಮಗುವಿನ ಜೀವನವನ್ನು ಹಾಳುಮಾಡಿದ್ದೇವೆಂಬ ಲಜ್ಜೆಯ ಭಾವನೆಯಿಂದ ಆಳವಾದ ನೋವನ್ನು ಅನುಭವಿಸಬಹುದು. ಎಷ್ಟೆಂದರೂ ಬೈಬಲ್‌ ಸೂಚಿಸುವಂತೆ, ಒಂದು ಮಗುವಿಗೆ ಒಬ್ಬ ತಾಯಿ ಮತ್ತು ತಂದೆಯ ಆವಶ್ಯಕತೆಯಿದೆ. (ವಿಮೋಚನಕಾಂಡ 20:12; ಜ್ಞಾನೋಕ್ತಿ 1:8, 9) ಒಬ್ಬ ಪುರುಷನು ತನ್ನ ಮಗುವನ್ನು ತೊರೆದುಬಿಡುವುದರಿಂದ ಮಗುವಿನ ಮೇಲೆ ಅನೇಕ ಸಮಸ್ಯೆಗಳನ್ನು ಬರಮಾಡುತ್ತಾನೆ. ಅಮೆರಿಕದ ಆರೋಗ್ಯ ಮತ್ತು ಮಾನವ ಸೇವೆಗಳ ಇಲಾಖೆಯಿಂದ ಬಂದಿರುವ ಒಂದು ವರದಿಯು ಹೀಗೆ ಹೇಳುತ್ತದೆ: “ತಾಯಿಯಿಂದ ಮಾತ್ರ ಬೆಳೆಸಲ್ಪಟ್ಟಿರುವ ಚಿಕ್ಕ ಮಕ್ಕಳಿಗೆ ಉತ್ತಮ ತರಬೇತಿಯು ಸಿಕ್ಕಿದರೂ ಮೌಖಿಕ ಪರೀಕ್ಷೆಗಳಲ್ಲಿ (ಓರಲ್‌ ಎಕ್ಸಾಮ್ಸ್‌) ಮತ್ತು ಗಣಿತದ ಪರೀಕ್ಷೆಗಳಲ್ಲಿ ಬಹಳ ಕಡಿಮೆ ಅಂಕಗಳನ್ನು ಗಳಿಸುತ್ತಾರೆ. ಅಷ್ಟೇ ಅಲ್ಲ, ಒಂಟಿ ಹೆತ್ತವರಿಂದ ಬೆಳೆಸಲ್ಪಟ್ಟಿರುವ 7 ರಿಂದ 10 ವರ್ಷ ವಯಸ್ಸಿನ ಮಕ್ಕಳು ಸಹ ಕಡಿಮೆ ಅಂಕಗಳನ್ನು ಗಳಿಸುತ್ತಾರೆ, ತಮ್ಮ ನಡವಳಿಕೆಯಲ್ಲಿ ಭಾರೀ ಸಮಸ್ಯೆಗಳನ್ನು ಹೊಂದಿರುತ್ತಾರೆ ಮತ್ತು ಇವರಲ್ಲಿ ಹೆಚ್ಚಿನವರು ದೀರ್ಘಕಾಲದ ವರೆಗೆ ಆರೋಗ್ಯ ಮತ್ತು ಮನೋರೋಗದ ಸಮಸ್ಯೆಯಿಂದ ನರಳುತ್ತಾರೆ. ತಾಯಿಯೊಬ್ಬಳಿಂದಲೇ ಬೆಳೆಸಲ್ಪಟ್ಟಿರುವ ಹದಿಹರೆಯದವರಿಗೆ ಚಿಕ್ಕ ಪ್ರಾಯದಲ್ಲೇ ಮಕ್ಕಳನ್ನು ಪಡೆಯುವ ಅಪಾಯವಿರಬಹುದು. ಮತ್ತು ಇಂತಹವರು ಶಿಕ್ಷಣವನ್ನು ಅರ್ಧದಲ್ಲೇ ನಿಲ್ಲಿಸಿಬಿಡುವ, ಜೈಲಿನಲ್ಲಿ ಕಂಬಿ ಎಣಿಸುವ ಮತ್ತು ಉದ್ಯೋಗವು ಸಿಗದೇ, ಶಾಲೆಗೂ ಹೋಗದೆ ಅತ್ತಿತ್ತ ಅಲೆಯಬೇಕಾದ ಸಮಸ್ಯೆಗಳನ್ನು ಹೊಂದಿರಸಾಧ್ಯವಿದೆ.”

ಅಟ್ಲಾಂಟಿಕ್‌ ಮನ್ತ್‌ಲಿ ಪತ್ರಿಕೆಯು ಹೀಗೆ ಮುಕ್ತಾಯಗೊಳಿಸುತ್ತದೆ: “ಸಮಾಜ ಮತ್ತು ವಿಜ್ಞಾನ ಕ್ಷೇತ್ರದಿಂದ ನಮಗೆ ಸಿಕ್ಕಿರುವ ಹೆಚ್ಚಿನ ಪುರಾವೆಗಳಿಂದ ಒಂದು ವಿಷಯವು ಸ್ಪಷ್ಟವಾಗುತ್ತದೆ. ಅದೇನಂದರೆ, ವಿಚ್ಛೇದಿತರ ಮಕ್ಕಳನ್ನು ಮತ್ತು ಮದುವೆಯಾಗದಿರುವ ಮಕ್ಕಳನ್ನು, ಹೆತ್ತವರಿಂದ ಬೆಳೆಸಲ್ಪಟ್ಟಿರುವ ಮಕ್ಕಳಿಗೆ ಹೋಲಿಸುವಾಗ ಇವರ ಮಕ್ಕಳು ಕುಟುಂಬದಲ್ಲಿ ಬಹಳಷ್ಟು ಯಶಸ್ಸನ್ನು ಗಳಿಸುತ್ತಾರೆ. ಒಂಟಿ ಹೆತ್ತವರ ಮಕ್ಕಳು ಆರು ಪಟ್ಟು ಹೆಚ್ಚು ಬಡವರಾಗಿರಬಲ್ಲರು. ಅಷ್ಟೇ ಅಲ್ಲ, ಅವರು ಬಡತನದ ಬೇಗೆಯಲ್ಲಿಯೇ ಉಳಿಯುವ ಸಾಧ್ಯತೆಗಳು ಹೆಚ್ಚು.”

ಆದರೆ ಒಂದು ವಿಷಯವನ್ನು ನೆನಪಿನಲ್ಲಿಡಿರಿ. ಅದೇನಂದರೆ, ಈ ಎಲ್ಲ ಅಪಾಯಗಳ ಕುರಿತಾದ ಮಾಹಿತಿಯನ್ನು ಕೆಲವೇ ಆಯ್ದ ಜನರಿಂದ ತೆಗೆಯಲ್ಪಟ್ಟಿದೆ ಮತ್ತು ಅವು ಎಲ್ಲರಿಗೂ ಅನ್ವಯಿಸಬೇಕೆಂದೇನೂ ಇಲ್ಲ. ಒಳ್ಳೆಯ ಕುಟುಂಬದಿಂದ ಬಂದಿರದಂತಹ ಅನೇಕ ಮಕ್ಕಳು ದೊಡ್ಡವರಾಗಿ ಸಮಾಜದ ಉಪಯುಕ್ತ ಪುರುಷರಾಗಿ ಬದಲಾಗುತ್ತಾರೆ. ಆದರೂ ತನ್ನ ಮಗುವನ್ನು ಬಿಟ್ಟುಬಂದಿರುವ ಯುವ ತಂದೆಯು ಅಪರಾಧಿಭಾವದಿಂದ ಜೀವನಪೂರ್ತಿ ನರಳಾಡುತ್ತಿರಬಲ್ಲನು. ಒಬ್ಬ ಅವಿವಾಹಿತ ತಂದೆಯು ಹೀಗೆ ಹೇಳುತ್ತಾನೆ: “ನಾನು ನನ್ನ ಸ್ವಂತ ಕೈಗಳಿಂದ ನನ್ನ ಮಗನ ಜೀವನವನ್ನು ಪೂರ್ಣವಾಗಿ [ಹಾಳುಮಾಡಿದೆನಲ್ಲಾ] ಎಂಬ ಭಾವನೆಯು ನನ್ನನ್ನು ಯಾವಾಗಲೂ ಕಾಡುತ್ತಿರುತ್ತದೆ.”—ಟೀನೆಜ್‌ ಫಾದರ್ಸ್‌.

ಜವಾಬ್ದಾರಿಯನ್ನು ತೆಗೆದುಕೊಳ್ಳುವ ಪಂಥಾಹ್ವಾನ

ಎಲ್ಲ ಯುವ ತಂದೆಯಂದಿರು ತಮ್ಮ ಜವಾಬ್ದಾರಿಗಳಿಂದ ಜಾರಿಕೊಳ್ಳುವುದಿಲ್ಲ. ಅವರಲ್ಲಿ ಕೆಲವರಿಗೆ ತಮ್ಮ ಮಕ್ಕಳ ಕಡೆಗೆ ನೈತಿಕ ಜವಾಬ್ದಾರಿಯ ಅನಿಸಿಕೆಯಿರುತ್ತದೆ ಮತ್ತು ಅವರನ್ನು ಸಾಕಿಸಲಹುವ ವಿಷಯದಲ್ಲಿ ತಮ್ಮ ಸಂಗಾತಿಗೆ ನಿಜವಾಗಿಯೂ ಸಹಾಯ ಮಾಡಲು ಅವರು ಬಯಸುತ್ತಾರೆ. ಆದರೆ ಅನೇಕ ವೇಳೆ ಇದನ್ನು ಮಾಡುವುದಕ್ಕಿಂತ ಹೇಳುವುದೇ ಹೆಚ್ಚು ಸುಲಭವಾಗಿರುತ್ತದೆ. ಒಂದು ವಿಷಯವೇನಂದರೆ, ಅವಿವಾಹಿತ ತಂದೆಗೆ ತನ್ನ ಮಗುವಿನೊಂದಿಗೆ ಎಷ್ಟರ ಮಟ್ಟಿಗೆ ಸಂಪರ್ಕವನ್ನಿಟ್ಟುಕೊಳ್ಳಬೇಕು ಎಂಬುದನ್ನು ಕೆಲವು ಕಾನೂನುಬದ್ಧ ಹಕ್ಕುಗಳು ತಿಳಿಸುತ್ತವೆ. ಆದರೂ, ಆ ಹಕ್ಕುಗಳನ್ನು ಹುಡುಗಿ ಮತ್ತು ಅವಳ ಹೆತ್ತವರು ನಿಯಂತ್ರಿಸುತ್ತಾರೆ. ಇದರ ಕುರಿತು, ಈ ಲೇಖನದ ಆರಂಭದಲ್ಲಿ ಉಲ್ಲೇಖಿಸಲಾಗಿದ್ದ ಜಿಮ್‌ ಹೇಳುವುದು: “ಮಗುವಿನ ಕುರಿತು ಯಾವುದೇ ನಿರ್ಣಯವನ್ನು ಮಾಡುವ ವಿಷಯದಲ್ಲಿ ತಂದೆಗೆ ಸಾಕಷ್ಟು ಅಧಿಕಾರವಿರುವುದಿಲ್ಲ. ಯಾಕೆಂದರೆ, ಅನೇಕ ವೇಳೆ ಆ ಅಧಿಕಾರವನ್ನು ಹುಡುಗಿಯು ಮತ್ತು ಅವಳ ಹೆತ್ತವರು ಹೊಂದಿರುತ್ತಾರೆ.” ಹೀಗಿರುವುದರಿಂದಲೇ, ಪ್ರಾಯಶಃ ದತ್ತುತೆಗೆದುಕೊಳ್ಳುವ ಅಥವಾ ಗರ್ಭಪಾತದ ಕುರಿತು ಮಾಡಲಾದ ನಿರ್ಣಯಗಳನ್ನು ಒಬ್ಬ ಯುವ ತಂದೆಯು ಬಲವಾಗಿ ವಿರೋಧಿಸುವನು. * ಒಬ್ಬ ಯುವ ತಂದೆಯು ಪ್ರಲಾಪಿಸುವುದು: “ನನ್ನ ಮಗುವನ್ನು ಯಾರೋ ಒಬ್ಬ ಅಪರಿಚಿತನ ಕೈಯಲ್ಲಿ ಕೊಡುವುದು ತುಂಬ ಕಷ್ಟವಾಗಿತ್ತು. ಆದರೂ, ಹಾಗೆ ಮಾಡುವುದನ್ನು ಬಿಟ್ಟರೆ ನನಗೆ ಬೇರೆ ಯಾವ ದಾರಿಯಿಲ್ಲವಲ್ಲಾ.”

ಕೆಲವು ಯುವಕರು ತಮ್ಮ ಮಗುವಿನ ತಾಯಿಯನ್ನು ಮದುವೆಯಾಗಲು ಮುಂದಾಗುತ್ತಾರೆ. * ಇದು ಹುಡುಗಿಯನ್ನು ಸ್ವಲ್ಪ ಮಟ್ಟಿಗೆ ಮಾನಸಿಕ ಗೊಂದಲದಿಂದ ಕಾಪಾಡುತ್ತದೆ ಮತ್ತು ಮಗುವಿಗೆ ಇಬ್ಬರು ಹೆತ್ತವರ ಪರಾಮರಿಕೆಯು ಸಿಗುತ್ತದೆ ಎಂಬುದು ಒಪ್ಪತಕ್ಕ ಮಾತೇ. ಅವರಿಬ್ಬರ ತಪ್ಪಿನಿಂದ ಮಕ್ಕಳಾಗಿವೆ. ಆದರೆ, ಇಷ್ಟೆಲ್ಲ ಆದ ಮೇಲೂ ಅವರು ಒಬ್ಬರನ್ನೊಬ್ಬರು ನಿಜವಾಗಿಯೂ ಪ್ರೀತಿಸುತ್ತಾರೆಂಬುದನ್ನು ಮದುವೆಮಾಡಿಕೊಳ್ಳುವ ಮೂಲಕ ತೋರಿಸಿಕೊಡುತ್ತಾರೆ. ಏನೇ ಆದರೂ, ಮಕ್ಕಳನ್ನು ಹುಟ್ಟಿಸುವ ಸಾಮರ್ಥ್ಯವಿದೆ ಎಂದ ಮಾತ್ರಕ್ಕೆ, ಒಬ್ಬನಿಗೆ ಗಂಡ ಮತ್ತು ತಂದೆಯಾಗುವುದಕ್ಕೆ ಅವಶ್ಯವಿರುವ ಮಾನಸಿಕ ಮತ್ತು ಭಾವನಾತ್ಮಕ ಪ್ರೌಢತೆಯು ಇದೆಯೆಂಬ ಅರ್ಥವನ್ನು ಖಂಡಿತವಾಗಿ ಕೊಡುವುದಿಲ್ಲ. ಮಾತ್ರವಲ್ಲದೆ, ಅವನು ತನ್ನ ಹೆಂಡತಿಗೆ ಮತ್ತು ಮಗುವಿಗೆ ಆರ್ಥಿಕ ಸಹಾಯವನ್ನು ಕೊಡುವ ಸಾಮರ್ಥ್ಯವನ್ನು ಹೊಂದಿದ್ದಾನೆಂಬ ಅರ್ಥವನ್ನು ಸಹ ಅದು ಕೊಡುವುದಿಲ್ಲ. ಒಬ್ಬಳು ಗರ್ಭಿಣಿಯಾಗಿ ಮದುವೆಮಾಡಿಕೊಳ್ಳುವುದಾದರೆ, ಅಂತಹ ಮದುವೆಗಳು ಹೆಚ್ಚು ಕಾಲ ಬಾಳುವುದಿಲ್ಲ ಎಂಬುದನ್ನು ಸಂಶೋಧನೆಗಳು ತೋರಿಸುತ್ತವೆ. ಆದುದರಿಂದ ಮದುವೆಯ ವಿಷಯದಲ್ಲಿ ಅವಸರಪಡುವುದು ಯಾವಾಗಲೂ ಒಂದು ವಿವೇಕದ ವಿಷಯವಲ್ಲ.

ಅನೇಕ ಯುವಕರು ತಮ್ಮ ಮಕ್ಕಳಿಗೆ ಹಣಸಹಾಯಮಾಡುವ ಮೂಲಕ ಕುಟುಂಬಕ್ಕೆ ಆಧಾರವಾಗಿರುತ್ತಾರೆ. ಆದರೆ ಈ ಮುಂಚೆ ತಿಳಿಸಲಾದಂತೆ, ಪ್ರಾಯಶಃ 18 ವರ್ಷಗಳ ವರೆಗೆ ಅಥವಾ ಅದಕ್ಕಿಂತಲೂ ಹೆಚ್ಚು ಸಮಯದ ವರೆಗೆ ಈ ರೀತಿಯ ಬೆಂಬಲವನ್ನು ಕೊಡುವುದಕ್ಕೆ ಒಬ್ಬ ಯುವ ತಂದೆಯಲ್ಲಿ ದೃಢಸಂಕಲ್ಪವಿರಬೇಕು! ಈ ರೀತಿಯ ಹಣಸಹಾಯವನ್ನು ನಿರಂತರವಾಗಿ ಕೊಡುವ ಮೂಲಕ ತಾಯಿ ಮತ್ತು ಮಗು ಬಡತನದಲ್ಲಿ ಜೀವಿಸುವ ಹೀನಾಯ ಸ್ಥಿತಿಯಿಂದ ದೂರವಿರಿಸಬಹುದು.

ಆದರೆ ಮಗುವನ್ನು ಬೆಳೆಸುವುದರ ಕುರಿತೇನು? ಇದು ಸಹ ಒಂದು ಕಷ್ಟಕರವಾದ ಸವಾಲಾಗಿಯೇ ಇರಬಹುದು. ಕೆಲವೊಮ್ಮೆ ಮದುವೆಯಾಗದಿರುವ ಹುಡುಗ ಹುಡುಗಿಯನ್ನು ಒಬ್ಬೊಂಟಿಗರಾಗಿ ಬಿಟ್ಟರೆ ಅವರಿಬ್ಬರೂ ಮತ್ತೆ ತಪ್ಪುಮಾಡಿಬಿಡಬಹುದೇನೋ ಎಂಬ ಭಯವು ಅವರ ಹೆತ್ತವರಿಗಿರುತ್ತದೆ ಮತ್ತು ಅದಕ್ಕಾಗಿಯೇ ತಂದೆಯು ತನ್ನ ಮಗುವಿನ ಆರೈಕೆಯನ್ನು ಮಾಡಬಾರದೆಂದು ಹೇಳುತ್ತಾರೆ. ಅಷ್ಟೇ ಅಲ್ಲದೆ, ಹುಡುಗ ಹುಡುಗಿ ಒಬ್ಬರನ್ನೊಬ್ಬರು ನೋಡಬಾರದೆಂಬ ಕಟ್ಟಪ್ಪಣೆಯನ್ನು ಸಹ ಅವರು ವಿಧಿಸುತ್ತಾರೆ. ಹುಡುಗಿ ಕೂಡ ತನ್ನ ಮಗುವಿನ ಸ್ವಂತ ತಂದೆಯಲ್ಲದ ಪುರುಷನೊಂದಿಗೆ ತನ್ನ ಮಗು ಹೆಚ್ಚು ಆಪ್ತವಾಗದಂತೆ ತಡೆಯಬಹುದು. ಏನೇ ಆಗಲಿ, ಮಗುವಿನೊಂದಿಗೆ ಕ್ರಮವಾಗಿ ಭೇಟಿಮಾಡುವ ಅವಕಾಶ ಒಬ್ಬ ತಂದೆಗೆ ಇರುವುದಾದರೆ, ಆ ಭೇಟಿಗಳಲ್ಲಿ ಅವಿವಾಹಿತ ಹುಡುಗಿಯ ಜತೆಯಲ್ಲಿ ಯಾರಾದರೊಬ್ಬರು ಇರುವಂತೆ ಏರ್ಪಾಡನ್ನು ಮಾಡುವುದು ಜಾಣ್ಮೆಯ ವಿಷಯವಾಗಿದೆ. ಹೀಗೆ ಮಾಡುವುದಾದರೆ ಕುಟುಂಬದಲ್ಲಿ ಹೆಚ್ಚಿನ ಅನಾಹುತವಾಗುವುದನ್ನು ತಪ್ಪಿಸಬಹುದು.

ಕೆಲವು ಅವಿವಾಹಿತ ತಂದೆಯಂದಿರು ತಮ್ಮ ಮಕ್ಕಳೊಂದಿಗೆ ಹೆಚ್ಚು ಆಪ್ತರಾಗಲಿಕ್ಕಾಗಿ, ತಂದೆತಾಯಿಗಳು ಮಾಡಬೇಕಾದ ಕೆಲವು ಕೆಲಸಗಳನ್ನು ಕಲಿತಿದ್ದಾರೆ. ಅದರಲ್ಲಿ ಸ್ನಾನಮಾಡಿಸುವುದು, ಉಣಿಸುವುದು ಅಥವಾ ತಮ್ಮ ಮಕ್ಕಳಿಗಾಗಿ ಓದುವುದು ಸೇರಿದೆ. ಬೈಬಲ್‌ ಮಟ್ಟಗಳಿಗಾಗಿ ಗಣ್ಯತೆಯನ್ನು ಬೆಳೆಸಿಕೊಂಡಿರುವ ಒಬ್ಬ ಯುವ ವ್ಯಕ್ತಿಯು ದೇವರ ವಾಕ್ಯದ ಕೆಲವು ಮೂಲತತ್ವಗಳನ್ನು ಸಹ ತನ್ನ ಮಗುವಿಗೆ ಕಲಿಸಲು ಪ್ರಯತ್ನಿಸಬಹುದು. (ಎಫೆಸ 6:4) ಏನೇನೂ ಸಿಗದೇ ಇರುವುದಕ್ಕಿಂತ ತಂದೆಯ ಸ್ವಲ್ಪ ಪ್ರೀತಿಯುಳ್ಳ ಗಮನವಾದರೂ ಒಂದು ಮಗುವಿಗೆ ಸಿಗುವುದು ಉತ್ತಮ. ಆದರೆ, ಪ್ರತಿ ದಿನ ತನ್ನ ಮಕ್ಕಳೊಂದಿಗೆ ಇದ್ದು ಅವರನ್ನು ಪ್ರೀತಿಯಿಂದ ಪರಾಮರಿಸುವ ತಂದೆಗಿಂತ ಇದು ತೀರಾ ಭಿನ್ನವಾಗಿರುತ್ತದೆ. ಒಂದು ವೇಳೆ ಮಗುವಿನ ತಾಯಿಗೆ ಮದುವೆಯಾಗುವುದಾದರೆ, ಒಬ್ಬ ಯುವ ತಂದೆ ನಿಸ್ಸಹಾಯಕನಾಗಬಹುದು. ಯಾಕೆಂದರೆ ಅವನ ಸ್ಥಾನದಲ್ಲಿ ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಬೇರೊಬ್ಬ ಪುರುಷನು ವಹಿಸಿಕೊಂಡಿರುತ್ತಾನೆ.

ಹಾಗಾದರೆ, ಮದುವೆಯಾಗದೆ ಮಕ್ಕಳನ್ನು ಹುಟ್ಟಿಸಿ ಅವರನ್ನು ಬೆಳೆಸುವುದು ಹೆತ್ತವರಿಗೆ ಮಾತ್ರವಲ್ಲ, ಮಗುವಿಗೆ ಸಹ ಹೆಚ್ಚು ಚಿಂತೆಯನ್ನು ಉಂಟುಮಾಡುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. ಸಂಭವಿಸುವ ಈ ಎಲ್ಲ ತೊಂದರೆಗಳ ಜೊತೆಗೆ, ನಿಷಿದ್ಧ ಕಾಮವನ್ನು ಖಂಡಿಸುವ ಯೆಹೋವ ದೇವರ ಅನುಗ್ರಹವನ್ನು ಕಳೆದುಕೊಳ್ಳುವ ಅಪಾಯವೂ ಇರುತ್ತದೆ. (1 ಥೆಸಲೊನೀಕ 4:3) ಹದಿಹರೆಯದಲ್ಲೇ ಗರ್ಭಿಣಿಯಾಗುವಂತಹ ಅಹಿತಕರ ಘಟನೆಯನ್ನು ನಿಭಾಯಿಸಲು ಸಾಧ್ಯವಾಗಲೂಬಹುದು. ಆದರೆ ಇಂತಹ ಅನೈತಿಕ ನಡತೆಯಲ್ಲಿ ನಮ್ಮನ್ನು ಸಿಕ್ಕಿಸಬಹುದಾದ ಮಾರ್ಗವನ್ನು ಆರಂಭದಲ್ಲಿಯೇ ತ್ಯಜಿಸುವುದು ವಿವೇಕದ ಮಾರ್ಗವಾಗಿದೆ ಎಂಬುದು ತೀರ ಸ್ಪಷ್ಟ. ಒಬ್ಬ ಯುವ ತಂದೆಯು ಒಪ್ಪಿಕೊಳ್ಳುವುದು: “ಮದುವೆಯಾಗದೆ ಒಂದು ಮಗುವಿಗೆ ತಂದೆಯಾಗುವುದರಿಂದ ನಿಮ್ಮ ಜೀವನವು ಈ ಮುಂಚೆ ಇದ್ದಂತೆ ಇರಲಿಕ್ಕೆ ಸಾಧ್ಯವೇ ಇಲ್ಲ.” ನಿಜ, ಒಬ್ಬ ಯುವ ತಂದೆಯು ತನ್ನ ಜೀವನದ ಉಳಿದ ದಿನಗಳಲ್ಲೆಲ್ಲ ತನ್ನ ಪಾಪದ ದುಷ್ಪರಿಣಾಮಗಳನ್ನು ಅನುಭವಿಸುತ್ತಾ ಇರಬೇಕಾಗುತ್ತದೆ. (ಗಲಾತ್ಯ 6:8) “ಜಾರತ್ವಕ್ಕೆ ದೂರವಾಗಿ ಓಡಿಹೋಗಿರಿ” ಎಂಬ ಬೈಬಲಿನ ಸಲಹೆಯನ್ನು ಪಾಲಿಸುವುದು ಎಷ್ಟೊಂದು ವಿವೇಕಯುತವಾಗಿದೆ ಎಂಬುದು ಪುನಃ ಒಮ್ಮೆ ರುಜುವಾಗುತ್ತದೆ.—1 ಕೊರಿಂಥ 6:18.

[ಪಾದಟಿಪ್ಪಣಿಗಳು]

^ ಕೆಲವು ಹೆಸರುಗಳು ಬದಲಾಯಿಸಲ್ಪಟ್ಟಿವೆ.

^ ಎಚ್ಚರ! ಪತ್ರಿಕೆಯ ಮೇ 8, 2000 ಸಂಚಿಕೆಯಲ್ಲಿ ಬಂದಿರುವ, “ಯುವ ಜನರು ಪ್ರಶ್ನಿಸುವುದು . . . ಪುರುಷತ್ವವನ್ನು ರುಜುಪಡಿಸಲು ಒಬ್ಬನು ತಂದೆಯಾಗಬೇಕೋ?” ಎಂಬ ಲೇಖನವನ್ನು ನೋಡಿರಿ. ಅವಿವಾಹಿತ ತಾಯ್ತನವು ಯುವ ಸ್ತ್ರೀಯ ಮೇಲೆ ಬೀರುವ ಪ್ರಭಾವದ ಕುರಿತ ಚರ್ಚೆಗಾಗಿ, ಜುಲೈ 22, 1985ರ ಸಂಚಿಕೆಯಲ್ಲಿರುವ “ಯುವ ಜನರು ಪ್ರಶ್ನಿಸುವುದು . . . ನಾನು ಮದುವೆಯಾಗದೆಯೇ ತಾಯಿಯಾಗಿಬಿಡುವೆನೋ?” ಎಂಬ ಲೇಖನವನ್ನು ನೋಡಿರಿ.

^ ಎಚ್ಚರ! (ಇಂಗ್ಲಿಷ್‌) ಪತ್ರಿಕೆಯ ಮಾರ್ಚ್‌ 8, 1995ರಲ್ಲಿ ಬಂದಿರುವ “ಯುವ ಜನರು ಪ್ರಶ್ನಿಸುವುದು . . . ಗರ್ಭಪಾತ—ತಕ್ಕ ಪರಿಹಾರವೋ?” ಎಂಬ ಲೇಖನವನ್ನು ನೋಡಿರಿ.

^ ಮೋಶೆಯ ಧರ್ಮಶಾಸ್ತ್ರಕ್ಕನುಸಾರ, ಒಬ್ಬ ಪುರುಷನು ಒಬ್ಬಾಕೆ ಕನ್ಯೆಯೊಂದಿಗೆ ಲೈಂಗಿಕ ಸಂಬಂಧವನ್ನು ಇಟ್ಟುಕೊಂಡಿದ್ದಲ್ಲಿ ಅವನು ಅವಳನ್ನೇ ಮದುವೆಯಾಗಬೇಕಿತ್ತು. (ಧರ್ಮೋಪದೇಶಕಾಂಡ 22:28, 29) ಹೀಗಿದ್ದರೂ, ಅವರಿಬ್ಬರೂ ಮದುವೆ ಆಗಲೇಬೇಕೆಂಬ ನಿರ್ಬಂಧ ಇರಲಿಲ್ಲ, ಯಾಕೆಂದರೆ ಹೆಣ್ಣಿನ ತಂದೆಯು ಮದುವೆಗೆ ಒಪ್ಪದೆ ಇರಬಹುದಿತ್ತು. (ವಿಮೋಚನಕಾಂಡ 22:16, 17) ಇಂದಿರುವ ಕ್ರೈಸ್ತರು ಧರ್ಮಶಾಸ್ತ್ರದ ಕೆಳಗೆ ಇಲ್ಲದಿರುವುದಾದರೂ, ಮದುವೆಯ ಮುಂಚೆ ಲೈಂಗಿಕ ಸಂಬಂಧವನ್ನಿಟ್ಟುಕೊಳ್ಳುವುದು ಎಷ್ಟೊಂದು ಗಂಭೀರವಾದ ಪಾಪವಾಗಿದೆಯೆಂಬುದನ್ನು ಆ ನಿಯಮವು ಒತ್ತಿಹೇಳುತ್ತದೆ.—ನವೆಂಬರ್‌ 15, 1989ರ ಕಾವಲಿನಬುರುಜು (ಇಂಗ್ಲಿಷ್‌) ಪತ್ರಿಕೆಯಲ್ಲಿರುವ “ವಾಚಕರಿಂದ ಪ್ರಶ್ನೆಗಳು” ಎಂಬ ಲೇಖನವನ್ನು ನೋಡಿರಿ.

[ಪುಟ 15ರಲ್ಲಿರುವ ಚಿತ್ರ]

ಅನೈತಿಕ ನಡತೆಯಿಂದ ದೂರವಿರುವುದೇ ಅತ್ಯುತ್ತಮ