ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ಕುಟುಂಬದ ಪುನರ್ಮಿಲನವು ಹೇಗಾಯಿತು?

ನಮ್ಮ ಕುಟುಂಬದ ಪುನರ್ಮಿಲನವು ಹೇಗಾಯಿತು?

ನಮ್ಮ ಕುಟುಂಬದ ಪುನರ್ಮಿಲನವು ಹೇಗಾಯಿತು?

ಲಾಹ್ಸ್‌ ಮತ್ತು ಯೂಡಿಟ್‌ ವೆಸ್ಟರ್‌ಗಾರ್‌ ಅವರು ಹೇಳಿದಂತೆ

ಡೆನ್ಮಾರ್ಕಿನಲ್ಲಿರುವ ಯಾವುದೇ ಸಂತೋಷಭರಿತ ಕುಟುಂಬದಲ್ಲಿ ಸರ್ವಸಾಮಾನ್ಯವಾಗಿ ಕಂಡುಬರುವ ಸನ್ನಿವೇಶವೇ ಈ ಮನೆಯಲ್ಲೂ ಕಂಡುಬರುತ್ತದೆ. ಇದು ಒಂದು ಪ್ರಶಾಂತವಾದ ಹಳ್ಳಿಯಲ್ಲಿರುವ ಮನೆಯಾಗಿದ್ದು, ಅದರ ಸುತ್ತಲೂ ಮನಸ್ಸಿಗೆ ಮುದನೀಡುವ ಕೈತೋಟವು ನಳನಳಿಸುತ್ತಿದೆ. ಮನೆಯ ಒಳಗೋಡೆಯ ಮೇಲಿರುವ ಛಾಯಾಚಿತ್ರದಲ್ಲಿ, ಆ ಕುಟುಂಬದ ಆರೋಗ್ಯಭರಿತ ಮಕ್ಕಳು ಹಸನ್ಮುಖರಾಗಿದ್ದಾರೆ.

ಅವರ ತಂದೆಯಾಗಿರುವ ಲಾಹ್ಸ್‌, ಯೆಹೋವನ ಸಾಕ್ಷಿಗಳ ಸಭೆಯೊಂದರಲ್ಲಿ ಹಿರಿಯನಾಗಿದ್ದಾನೆ. ಅವನ ಪತ್ನಿಯಾದ ಯೂಡಿಟ್‌ ಒಬ್ಬ ಪಯನೀಯರ್‌ (ಪೂರ್ಣ ಸಮಯದ ಸೌವಾರ್ತಿಕಳು) ಆಗಿದ್ದಾಳೆ. ಈಗ ಅವರು ತುಂಬ ಸಂತೋಷದಿಂದ ಬಾಳ್ವೆ ನಡೆಸುತ್ತಿರುವ ದಂಪತಿಯಾಗಿರುವುದಾದರೂ, ಈ ಮುಂಚೆ ಅವರು ಹೀಗಿರಲಿಲ್ಲ. ಯಾಕೆಂದರೆ ಲಾಹ್ಸ್‌ ಮತ್ತು ಯೂಡಿಟ್‌ ತಮ್ಮ ದಾಂಪತ್ಯ ಸಂಬಂಧದಲ್ಲಿ ವಿರಸವನ್ನು ಅನುಭವಿಸಿದ್ದಾರೆ. ಮತ್ತು ಇದು ವಿವಾಹ ವಿಚ್ಛೇದ ಹಾಗೂ ಕುಟುಂಬದ ಒಡೆತದಲ್ಲಿ ಕೊನೆಗೊಂಡಿತು. ಈಗಲಾದರೋ, ಅವರ ಕುಟುಂಬದ ಪುನರ್ಮಿಲನವಾಗಿದೆ. ಅದು ಹೇಗೆ ಎಂಬುದನ್ನು ಅವರೇ ವಿವರಿಸುತ್ತಾರೆ.

ಅವರ ವಿವಾಹದಲ್ಲಿ ಇಂತಹ ಭೀಕರ ಪರಿಸ್ಥಿತಿಗೆ ಯಾವುದು ಕಾರಣವಾಗಿತ್ತು ಮತ್ತು ಹೇಗೆ ಅವರ ಕುಟುಂಬದ ಪುನರ್ಮಿಲನವಾಯಿತು ಎಂಬುದನ್ನು ತಿಳಿಸಲು ಲಾಹ್ಸ್‌ ಮತ್ತು ಯೂಡಿಟ್‌ರಿಗೆ ಅಭ್ಯಂತರವೇನೂ ಇಲ್ಲ. ತಮ್ಮ ಅನುಭವವು ಇತರರಿಗೆ ಸಹಾಯ ಮಾಡಬಹುದೇನೋ ಎಂಬುದು ಅವರ ಅನಿಸಿಕೆ.

ಎಲ್ಲವೂ ಚೆನ್ನಾಗಿಯೇ ಇತ್ತು

ಲಾಹ್ಸ್‌: 1973ರ ಏಪ್ರಿಲ್‌ ತಿಂಗಳಿನಲ್ಲಿ ನಾವು ದಾಂಪತ್ಯ ಜೀವನಕ್ಕೆ ಕಾಲಿಟ್ಟೆವು. ಆಗ ನಮ್ಮ ವಿವಾಹ ಜೀವನವು ಸುಖದ ಸಾಗರವಾಗಿತ್ತು. ಮತ್ತು ಇಡೀ ಜಗತ್ತೇ ನಮಗೆ ಸುಂದರವಾಗಿ ಕಂಡಿತು. ನಮಗೆ ಬೈಬಲಿನ ಕುರಿತಾಗಲಿ ಯೆಹೋವನ ಸಾಕ್ಷಿಗಳ ಕುರಿತಾಗಲಿ ಏನೂ ತಿಳಿದಿರಲಿಲ್ಲ. ಆದರೆ ಎಲ್ಲ ಜನರು ಪ್ರಯತ್ನಪಟ್ಟರೆ, ನಾವು ಈ ಭೂಮಿಯನ್ನು ಅತ್ಯುತ್ತಮವಾದ ಸ್ಥಳವನ್ನಾಗಿ ಮಾಡಸಾಧ್ಯವಿದೆ ಎಂಬ ಅಭಿಪ್ರಾಯ ನಮಗಿತ್ತು. ಆದುದರಿಂದ, ನಾವು ಅನೇಕ ರಾಜಕೀಯ ಕೆಲಸಗಳಲ್ಲಿ ಒಳಗೂಡಿದೆವು. ನಮ್ಮ ಕುಟುಂಬದಲ್ಲಿ ಆರೋಗ್ಯದಿಂದ ಕೂಡಿದ ಮತ್ತು ಲವಲವಿಕೆಯುಳ್ಳ ಮೂವರು ಗಂಡು ಮಕ್ಕಳು ಜನಿಸಿದರು. ಇವರ ಹೆಸರು ಮಾರ್ಟಿನ್‌, ಟೋಮಾಸ್‌, ಮತ್ತು ಯೋನಾಸ್‌ ಎಂದಾಗಿತ್ತು. ಈ ಮೂವರು ಮಕ್ಕಳು ಜನಿಸಿದ ಬಳಿಕ, ನಮ್ಮ ಸಂತೋಷವು ಇನ್ನೂ ಹೆಚ್ಚಿತು.

ಯೂಡಿಟ್‌: ಪೌರ ಸೇವಾ ವಿಭಾಗದ ಒಂದು ಶಾಖೆಯಲ್ಲಿ ನಾನು ಕಾರ್ಯನಿರ್ವಾಹಕ ಹುದ್ದೆಯಲ್ಲಿದ್ದೆ. ಅದೇ ಸಮಯದಲ್ಲಿ, ರಾಜಕೀಯ ಹಾಗೂ ಕಾರ್ಮಿಕ ಸಂಘದ ಚಟುವಟಿಕೆಗಳಲ್ಲಿ ನಾನು ಭಾಗವಹಿಸುತ್ತಿದ್ದೆ. ಸಮಯ ಕಳೆದಂತೆ ನನಗೆ ಪ್ರಮುಖ ಸ್ಥಾನಗಳು ಕೊಡಲ್ಪಟ್ಟವು.

ಲಾಹ್ಸ್‌: ನನ್ನ ವಿಷಯದಲ್ಲಿ ಹೇಳುವುದಾದರೆ, ನಾನು ಒಂದು ದೊಡ್ಡ ಕಾರ್ಮಿಕ ಸಂಘದಲ್ಲಿ ಉದ್ಯೋಗದಲ್ಲಿದ್ದೆ. ಮತ್ತು ಕಾಲಕ್ರಮೇಣ ಉನ್ನತ ಅಧಿಕಾರದ ಸ್ಥಾನವು ನನಗೆ ಸಿಕ್ಕಿತು. ನಮ್ಮಿಬ್ಬರಿಗೂ ಒಳ್ಳೆಯ ಉದ್ಯೋಗವಿತ್ತು ಮತ್ತು ನಮ್ಮ ಆನಂದಮಯ ಜೀವನಕ್ಕೆ ಯಾವ ಬೆದರಿಕೆಯೂ ಇರಲಿಲ್ಲ.

ಪರಸ್ಪರ ದೂರ ಸರಿಯುವುದು

ಲಾಹ್ಸ್‌: ಆದರೆ ನಾವು ನಮ್ಮ ಸ್ವಂತ ಕೆಲಸಗಳಲ್ಲಿ ಪೂರ್ತಿ ತಲ್ಲೀನರಾಗಿದ್ದೆವು. ಆದುದರಿಂದ, ನಾವಿಬ್ಬರೂ ಒಟ್ಟಿಗೆ ಸಮಯ ಕಳೆಯುವುದೇ ಕಷ್ಟವಾಯಿತು. ನಾವಿಬ್ಬರೂ ಒಂದೇ ರಾಜಕೀಯ ಪಕ್ಷಕ್ಕಾಗಿ ಕೆಲಸಮಾಡುತ್ತಿದ್ದೆವು, ಆದರೆ ಬೇರೆ ಬೇರೆ ಕ್ಷೇತ್ರಗಳಲ್ಲಿ. ನಮ್ಮ ಮೂವರು ಗಂಡು ಮಕ್ಕಳನ್ನು ಬೇರೆಯವರು ನೋಡಿಕೊಳ್ಳುವ ಏರ್ಪಾಡನ್ನು ಮಾಡಿದ್ದೆವು. ಅಂದರೆ ಖಾಸಗಿಯಾಗಿ ಅಥವಾ ಹಗಲು-ಪಾಲನೆಯ (ಡೇ-ಕೇರ್‌) ಕೇಂದ್ರಗಳಲ್ಲಿ ಅವರನ್ನು ಬಿಡುತ್ತಿದ್ದೆವು. ನಮ್ಮ ಸ್ವಂತ ವಿಚಾರಗಳ ಬಗ್ಗೆಯೇ ನಾವಿಬ್ಬರೂ ಹೆಚ್ಚು ಆಸಕ್ತರಾಗಿದ್ದುದರಿಂದ, ನಮ್ಮ ಕುಟುಂಬ ಜೀವಿತವು ಅಸ್ತವ್ಯಸ್ತವಾಗಿತ್ತು. ಒಂದುವೇಳೆ ಆಕಸ್ಮಿಕವಾಗಿ ನಾವಿಬ್ಬರೂ ಮನೆಯಲ್ಲಿ ಇರುತ್ತಿದ್ದಲ್ಲಿ, ತುಂಬ ಜಗಳವಾಡುತ್ತಿದ್ದೆವು. ಈ ಎಲ್ಲ ನೋವನ್ನು ಮರೆಯಲಿಕ್ಕಾಗಿ ನಾನು ಮದ್ಯಪಾನವನ್ನು ಮಾಡಲಾರಂಭಿಸಿದೆ.

ಯೂಡಿಟ್‌: ಇಷ್ಟೆಲ್ಲಾ ಆದರೂ ನಾವಿಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದೆವು ಮತ್ತು ಮಕ್ಕಳ ಮೇಲೂ ನಮಗೆ ಅಪಾರ ವಾತ್ಸಲ್ಯವಿತ್ತು. ಆದರೆ ಆ ಪ್ರೀತಿಯನ್ನು ನಾವು ಸರಿಯಾದ ರೀತಿಯಲ್ಲಿ ಬೆಳೆಸಿಕೊಳ್ಳಲಿಲ್ಲ; ನಮ್ಮ ಪ್ರೀತಿಯು ದಿನೇ ದಿನೇ ಬಾಡಿಹೋಗುತ್ತಿರುವಂತೆ ತೋರಿತು. ನಮ್ಮ ಮಧ್ಯೆ ವೈಮನಸ್ಯವು ತಲೆದೋರಿತು ಮತ್ತು ಇದರ ಫಲಿತಾಂಶವಾಗಿ ಮಕ್ಕಳು ತುಂಬ ಕಷ್ಟವನ್ನು ಅನುಭವಿಸಿದರು.

ಲಾಹ್ಸ್‌: ಕುಟುಂಬದ ಐಕ್ಯತೆಯನ್ನು ಕಾಪಾಡಿಕೊಳ್ಳುವ ಕಡೇ ಪ್ರಯತ್ನದಲ್ಲಿ, ನಾನು ನನ್ನ ಉದ್ಯೋಗವನ್ನು ಬಿಟ್ಟುಬಿಡಲು ನಿರ್ಧರಿಸಿದೆ. 1985ರಲ್ಲಿ ನಾವು ನಗರವನ್ನು ಬಿಟ್ಟು, ಈಗ ನಾವು ಎಲ್ಲಿ ವಾಸಿಸುತ್ತಿದ್ದೇವೋ ಆ ಹಳ್ಳಿಗೆ ಬಂದೆವು. ಅಲ್ಲಿಗೆ ಬಂದ ಮೇಲೆ ಪರಿಸ್ಥಿತಿಯು ಸ್ವಲ್ಪ ಸುಧಾರಿಸಿತು, ಆದರೆ ಎಂದಿನಂತೆ ನಾನು ಮತ್ತು ನನ್ನ ಪತ್ನಿಯು ನಮ್ಮ ಕೆಲಸಗಳಲ್ಲಿ ತಲ್ಲೀನರಾದೆವು. ಕಟ್ಟಕಡೆಗೆ, 16 ವರ್ಷಗಳ ವರೆಗೆ ದಾಂಪತ್ಯ ಜೀವನವನ್ನು ನಡೆಸಿದ ಬಳಿಕ, 1989ರ ಫೆಬ್ರವರಿ ತಿಂಗಳಿನಲ್ಲಿ ನಮ್ಮ ವಿವಾಹ ಜೀವನವು ವಿಚ್ಛೇದದಲ್ಲಿ ಕೊನೆಗೊಂಡಿತು. ಹೀಗೆ ನಮ್ಮ ಕುಟುಂಬವು ನುಚ್ಚುನೂರಾಯಿತು.

ಯೂಡಿಟ್‌: ನಮ್ಮ ಸ್ವಂತ ಕುಟುಂಬವು ಛಿದ್ರಗೊಂಡಿದ್ದು ಮಾತ್ರವಲ್ಲ ಮಕ್ಕಳು ಕೂಡ ಕಷ್ಟಪಡುತ್ತಿರುವುದನ್ನು ನೋಡುವುದು ಕರುಳನ್ನು ಹಿಂಡುವಂತಿತ್ತು. ಪತಿಪತ್ನಿಯರಾಗಿದ್ದ ನಾವು ಒಬ್ಬರನ್ನೊಬ್ಬರು ತುಂಬ ದ್ವೇಷಿಸತೊಡಗಿದೆವು. ಆದುದರಿಂದ, ನಮ್ಮ ವಿಚ್ಛೇದದ ಸಮಯದಲ್ಲಿ ನಮ್ಮ ಗಂಡು ಮಕ್ಕಳು ನಮ್ಮಿಬ್ಬರ ಬಳಿಯೂ ಸರದಿಗನುಸಾರ ಇರಬೇಕೆಂಬ ವಿಚಾರವನ್ನು ನಾವಿಬ್ಬರೂ ಸಮ್ಮತಿಸಲಿಲ್ಲ. ಈ ಕಾರಣದಿಂದ, ನಮ್ಮ ಮೂವರು ಗಂಡು ಮಕ್ಕಳು ನನ್ನ ಬಳಿಯೇ ಉಳಿಯುವಂತೆ ಕೋರ್ಟ್‌ ತೀರ್ಪುಕೊಟ್ಟಿತು.

ಲಾಹ್ಸ್‌: ಇದಕ್ಕೆ ಮೊದಲು ಚೂರುಚೂರಾಗುತ್ತಿದ್ದ ನಮ್ಮ ಕುಟುಂಬವನ್ನು ಒಟ್ಟುಗೂಡಿಸಲಿಕ್ಕಾಗಿ, ನಾನು ಮತ್ತು ಯೂಡಿಟ್‌ ಕೆಲವೊಂದು ಪ್ರಯತ್ನಗಳನ್ನು ಮಾಡಿದೆವು. ಅಷ್ಟುಮಾತ್ರವಲ್ಲ, ಸಹಾಯಕ್ಕಾಗಿ ನಾವು ದೇವರ ಬಳಿಯೂ ಪ್ರಾರ್ಥಿಸಿದೆವು. ಆದರೆ ಆಗ ದೇವರ ಕುರಿತು ನಮಗೆ ಅಷ್ಟೇನೂ ಗೊತ್ತಿರಲಿಲ್ಲ.

ಯೂಡಿಟ್‌: ಆಗ ದೇವರು ನಮ್ಮ ಪ್ರಾರ್ಥನೆಗಳಿಗೆ ಕಿವಿಗೊಡಲಿಲ್ಲ ಎಂಬ ಅನಿಸಿಕೆ ನಮಗಾಯಿತು. ಆದರೆ ಈಗ, ದೇವರು ನಮ್ಮ ಪ್ರಾರ್ಥನೆಗಳಿಗೆ ಖಂಡಿತವಾಗಿಯೂ ಕಿವಿಗೊಡುತ್ತಾನೆ ಎಂಬುದನ್ನು ಕಣ್ಣಾರೆ ಕಂಡಿರುವುದಕ್ಕೆ ನಾವು ಕೃತಜ್ಞರಾಗಿದ್ದೇವೆ.

ಲಾಹ್ಸ್‌: ನಾವೇ ಪ್ರಯತ್ನವನ್ನು ಮಾಡಬೇಕು ಮತ್ತು ನಾವೇ ಬದಲಾವಣೆಗಳನ್ನು ಮಾಡಿಕೊಳ್ಳಬೇಕು ಎಂಬುದನ್ನು ನಾವು ಆಗ ಅರ್ಥಮಾಡಿಕೊಳ್ಳಲಿಲ್ಲ. ಆದುದರಿಂದಲೇ, ನಮ್ಮ ವಿವಾಹವು ವಿಚ್ಛೇದದಲ್ಲಿ ಕೊನೆಗೊಂಡಿತು.

ಲಾಹ್ಸ್‌ನ ಜೀವಿತದಲ್ಲಿ ಒಂದು ಅನಿರೀಕ್ಷಿತ ತಿರುವು

ಲಾಹ್ಸ್‌: ಆದರೆ ನಾನು ಒಂಟಿಯಾಗಿ ಜೀವನ ಸಾಗಿಸುತ್ತಿದ್ದಾಗ, ಅನೇಕ ಘಟನೆಗಳು ನನ್ನ ಜೀವಿತದಲ್ಲಿ ಅನಿರೀಕ್ಷಿತವಾದ ಬದಲಾವಣೆಯನ್ನು ಉಂಟುಮಾಡಿದವು. ಒಂದು ದಿನ ನಾನು ಯೆಹೋವನ ಸಾಕ್ಷಿಗಳಿಂದ ಎರಡು ಪತ್ರಿಕೆಗಳನ್ನು ತೆಗೆದುಕೊಂಡೆ. ಅದಕ್ಕೆ ಮುಂಚೆ ನಾನು ಸಾಕ್ಷಿಗಳು ನನ್ನ ಮನೆಗೆ ಬಂದಾಗಲೆಲ್ಲ ಅವರ ಸಂದೇಶಕ್ಕೆ ಕಿವಿಗೊಡದೆ ಅವರನ್ನು ಹಿಂದಟ್ಟುತ್ತಿದ್ದೆ. ಆದರೆ ಈ ಪತ್ರಿಕೆಗಳನ್ನು ನಾನು ಓದಿದಾಗ, ಸಾಕ್ಷಿಗಳು ದೇವರಲ್ಲಿ ಮತ್ತು ಯೇಸು ಕ್ರಿಸ್ತನಲ್ಲಿ ನಂಬಿಕೆಯಿಡುತ್ತಾರೆ ಎಂಬುದು ನನಗೆ ಗೊತ್ತಾಯಿತು. ಇದು ತುಂಬ ಆಶ್ಚರ್ಯಕರವಾದ ಸಂಗತಿಯಾಗಿತ್ತು. ಏಕೆಂದರೆ ಸಾಕ್ಷಿಗಳು ಕ್ರೈಸ್ತರಾಗಿದ್ದಾರೆ ಎಂಬ ಕಲ್ಪನೆಯೇ ನನಗಿರಲಿಲ್ಲ.

ಹೆಚ್ಚುಕಡಿಮೆ ಅದೇ ಸಮಯದಲ್ಲಿ, ನಾನು ಭೇಟಿಯಾದ ಒಬ್ಬ ಸ್ತ್ರೀಯೊಂದಿಗೆ ನಾನು ಜೀವಿಸಲಾರಂಭಿಸಿದೆ. ಈ ಮುಂಚೆ ಅವಳು ಯೆಹೋವನ ಸಾಕ್ಷಿಗಳಲ್ಲಿ ಒಬ್ಬಳಾಗಿದ್ದಳೆಂಬುದು ನನಗೆ ಗೊತ್ತಾಯಿತು. ನಾನು ಅವಳಿಗೆ ಪ್ರಶ್ನೆಗಳನ್ನು ಕೇಳಲಾರಂಭಿಸಿದಾಗ, ದೇವರ ಹೆಸರು ಯೆಹೋವ ಎಂಬುದನ್ನು ಅವಳು ನನಗೆ ಬೈಬಲಿನಲ್ಲಿ ತೋರಿಸಿದಳು. ಆದುದರಿಂದ, “ಯೆಹೋವನ ಸಾಕ್ಷಿಗಳು” ಅಂದರೆ “ದೇವರ ಸಾಕ್ಷಿಗಳು” ಎಂಬುದು ನನಗೆ ಮನದಟ್ಟಾಯಿತು!

ಯೆಹೋವನ ಸಾಕ್ಷಿಗಳ ಅಸೆಂಬ್ಲಿ ಹಾಲ್‌ನಲ್ಲಿ ಒಂದು ಬಹಿರಂಗ ಭಾಷಣಕ್ಕೆ ನಾನು ಹಾಜರಾಗುವಂತೆ ಆ ಸ್ತ್ರೀಯು ಏರ್ಪಾಡನ್ನು ಮಾಡಿದಳು. ನಾನು ಅಲ್ಲಿ ಏನನ್ನು ನೋಡಿದೆನೋ ಅದು ನನ್ನ ಆಸಕ್ತಿಯನ್ನು ಕೆರಳಿಸಿತು. ಹೆಚ್ಚನ್ನು ತಿಳಿದುಕೊಳ್ಳಲಿಕ್ಕಾಗಿ ನಾನು ಸ್ಥಳಿಕ ರಾಜ್ಯ ಸಭಾಗೃಹಕ್ಕೆ ಹೋದೆ ಮತ್ತು ಒಂದು ಬೈಬಲ್‌ ಅಭ್ಯಾಸವು ಆರಂಭವಾಯಿತು. ನನ್ನ ಜೀವನ ರೀತಿಯು ತಪ್ಪಾಗಿದೆ ಎಂಬುದು ನನಗೆ ಬೇಗನೆ ಗೊತ್ತಾಯಿತು. ಆದುದರಿಂದ, ನಾನು ಯಾರೊಂದಿಗೆ ಜೀವಿಸುತ್ತಿದ್ದೆನೋ ಆ ಸ್ತ್ರೀಯನ್ನು ಬಿಟ್ಟುಬಿಟ್ಟೆ ಮತ್ತು ನಾನು ಮೊದಲು ಇದ್ದ ಪಟ್ಟಣಕ್ಕೇ ಹೋಗಿ ಒಂಟಿಯಾಗಿ ಜೀವಿಸಲು ಆರಂಭಿಸಿದೆ. ಮೊದಲು ಯೆಹೋವನ ಸಾಕ್ಷಿಗಳನ್ನು ಸಂಪರ್ಕಿಸಲು ಸ್ವಲ್ಪ ಹಿಂಜರಿದೆನಾದರೂ, ಸಮಯಾನಂತರ ಅವರ ಬಳಿಗೆ ಹೋಗಿ, ಬೈಬಲ್‌ ಅಭ್ಯಾಸ ಮಾಡುವುದನ್ನು ನಾನು ಮುಂದುವರಿಸಿದೆ.

ಆದರೂ, ಯೆಹೋವನ ಸಾಕ್ಷಿಗಳು ನಿಜವಾಗಿಯೂ ದೇವಜನರಾಗಿದ್ದಾರೋ? ಮತ್ತು ಚಿಕ್ಕವನಾಗಿದ್ದಾಗ ನಾನು ಕಲಿತುಕೊಂಡಿದ್ದ ವಿಷಯಗಳ ಕುರಿತಾಗಿ ಏನು? ಎಂಬ ಸಂದೇಹಗಳು ನನಗಿದ್ದವು. ನಾನು ಸೆವೆನ್ತ್‌-ಡೇ ಅಡ್ವೆಂಟಿಸ್ಟ್‌ ಪಂಗಡದಲ್ಲಿ ಬೆಳೆದಿದ್ದುದರಿಂದ, ನಾನು ಈಗ ಒಬ್ಬ ಅಡ್ವೆಂಟಿಸ್ಟ್‌ ಪಾದ್ರಿಯನ್ನು ಸಂಪರ್ಕಿಸಿದೆ. ಪ್ರತಿ ಸೋಮವಾರ ಯೆಹೋವನ ಸಾಕ್ಷಿಗಳು ನನ್ನೊಂದಿಗೆ ಅಭ್ಯಾಸಮಾಡುತ್ತಿದ್ದರು ಮತ್ತು ಪ್ರತಿ ಬುಧವಾರ ಆ ಪಾದ್ರಿಯು ನನ್ನೊಂದಿಗೆ ಅಭ್ಯಾಸಮಾಡಲು ಒಪ್ಪಿಕೊಂಡನು. ನಿರ್ದಿಷ್ಟವಾದ ನಾಲ್ಕು ವಿಚಾರಗಳ ಕುರಿತು ಈ ಎರಡೂ ಗುಂಪುಗಳಿಂದ ನಾನು ಸ್ಪಷ್ಟವಾದ ಉತ್ತರವನ್ನು ಬಯಸುತ್ತಿದ್ದೆ: ಕ್ರಿಸ್ತನ ಪುನರಾಗಮನ, ಪುನರುತ್ಥಾನ, ತ್ರಯೈಕ್ಯ ಸಿದ್ಧಾಂತ, ಮತ್ತು ಸಭೆಯು ವ್ಯವಸ್ಥಾಪಿಸಲ್ಪಡತಕ್ಕ ರೀತಿ. ಕೆಲವೇ ತಿಂಗಳುಗಳಲ್ಲಿ ನನ್ನ ಸಂದೇಹಗಳೆಲ್ಲಾ ಬಗೆಹರಿಸಲ್ಪಟ್ಟವು. ಈ ಎಲ್ಲ ನಾಲ್ಕು ಕ್ಷೇತ್ರಗಳಲ್ಲಿ ಮತ್ತು ಬೇರೆ ವಿಚಾರಗಳಲ್ಲಿ ಸಹ ಕೇವಲ ಯೆಹೋವನ ಸಾಕ್ಷಿಗಳ ನಂಬಿಕೆಗಳು ಸಂಪೂರ್ಣವಾಗಿ ಬೈಬಲಿನ ಮೇಲೆ ಆಧಾರಿತವಾಗಿದ್ದವು ಎಂಬುದನ್ನು ನಾನು ಮನಗಂಡೆ. ಇದರ ಫಲಿತಾಂಶವಾಗಿ, ಸಭೆಯ ಎಲ್ಲ ಚಟುವಟಿಕೆಗಳಲ್ಲಿ ನಾನು ಸಂತೋಷದಿಂದ ಭಾಗವಹಿಸಲಾರಂಭಿಸಿದೆ. ಮತ್ತು ಅತಿ ಬೇಗನೆ ಯೆಹೋವನಿಗೆ ನನ್ನನ್ನು ಸಮರ್ಪಿಸಿಕೊಂಡೆ. 1990ರ ಮೇ ತಿಂಗಳಿನಲ್ಲಿ ನಾನು ದೀಕ್ಷಾಸ್ನಾನವನ್ನು ಪಡೆದುಕೊಂಡೆ.

ಯೂಡಿಟಳ ಕುರಿತಾಗಿ ಏನು?

ಯೂಡಿಟ್‌: ನಮ್ಮ ವಿವಾಹ ಸಂಬಂಧವು ತುಂಬ ಬಿಕ್ಕಟ್ಟಿಗೆ ಒಳಗಾಗಿದ್ದಾಗ ನಾನು ಪುನಃ ಚರ್ಚಿಗೆ ಹೋಗಲಾರಂಭಿಸಿದೆ. ಲಾಹ್ಸ್‌ ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಾಗುತ್ತಿದ್ದಾನೆ ಎಂಬುದು ನನಗೆ ತಿಳಿದುಬಂದಾಗ, ನನಗೆ ಅದು ಸ್ವಲ್ಪವೂ ಹಿಡಿಸಲಿಲ್ಲ. ಆಗ ನಮ್ಮ ಕಿರಿಯ ಮಗನಾಗಿದ್ದ ಯೋನಾಸ್‌ ಹತ್ತು ವರ್ಷದವನಾಗಿದ್ದನು ಮತ್ತು ಆಗಾಗ ತನ್ನ ತಂದೆಯನ್ನು ಭೇಟಿಯಾಗುತ್ತಿದ್ದನು. ಆದರೆ ಯೋನಾಸ್‌ನನ್ನು ಸಾಕ್ಷಿಗಳ ಯಾವುದೇ ಕೂಟಕ್ಕೆ ಕರೆದುಕೊಂಡು ಹೋಗಬಾರದೆಂದು ನಾನು ಲಾಹ್ಸ್‌ಗೆ ಖಡಾಖಂಡಿತವಾಗಿ ಹೇಳಿದೆ. ಈ ವಿಷಯದ ಬಗ್ಗೆ ಲಾಹ್ಸ್‌ ಸಂಬಂಧಪಟ್ಟ ಅಧಿಕಾರಿಗಳ ಬಳಿ ಮನವಿಮಾಡಿದನು, ಆದರೆ ಆ ಅಧಿಕಾರಿಗಳು ನನ್ನ ಪರವಹಿಸಿದರು.

ನನಗೆ ಪರಪುರುಷನೊಬ್ಬನ ಪರಿಚಯವಾಯಿತು. ಅಷ್ಟುಮಾತ್ರವಲ್ಲ, ನಾನು ರಾಜಕೀಯದಲ್ಲಿ ಹಾಗೂ ಎಲ್ಲ ರೀತಿಯ ಸಮಾಜ ಕಲ್ಯಾಣದ ಕೆಲಸದಲ್ಲಿ ಹೆಚ್ಚು ಕಾರ್ಯಮಗ್ನಳಾಗಿದ್ದೆ. ಆದುದರಿಂದ, ಆ ಸಮಯದಲ್ಲಿ ಯಾರಾದರೂ ನನ್ನ ಬಳಿ ಬಂದು ನಮ್ಮ ಕುಟುಂಬವನ್ನು ಪುನಃ ಐಕ್ಯಗೊಳಿಸುವುದರ ಕುರಿತು ಮಾತಾಡುತ್ತಿದ್ದಲ್ಲಿ, ಅದು ಖಂಡಿತ ಅಸಾಧ್ಯವೆಂದು ನಾನು ಅವರಿಗೆ ಹೇಳಿಬಿಡುತ್ತಿದ್ದೆನೋ ಏನೋ.

ಯೆಹೋವನ ಸಾಕ್ಷಿಗಳ ವಿರುದ್ಧ ವಾದಿಸಲಿಕ್ಕಾಗಿ ಬೇಕಾಗುವ ಸಾಕ್ಷ್ಯಗಳನ್ನು ಪಡೆದುಕೊಳ್ಳಲಿಕ್ಕಾಗಿ ನಾನು ಸ್ಥಳಿಕ ಚರ್ಚಿನ ಪಾದ್ರಿಯ ಬಳಿಗೆ ಹೋದೆ. ಆದರೆ ಸಾಕ್ಷಿಗಳ ಕುರಿತು ತನಗೆ ಏನೂ ತಿಳಿದಿಲ್ಲ ಮತ್ತು ಅವರ ಕುರಿತಾದ ಯಾವುದೇ ಸಾಹಿತ್ಯವೂ ತನ್ನ ಬಳಿಯಿಲ್ಲ ಎಂದು ಆ ಪಾದ್ರಿಯು ತತ್‌ಕ್ಷಣ ಒಪ್ಪಿಕೊಂಡನು. ನೀನು ಸಾಕ್ಷಿಗಳಿಂದ ದೂರವಿರುವುದೇ ಲೇಸು ಎಂದಷ್ಟೇ ಅವನು ಹೇಳಿದನು. ಏನೇ ಆದರೂ, ಈ ಎಚ್ಚರಿಕೆಯು ಯೆಹೋವನ ಸಾಕ್ಷಿಗಳ ಕುರಿತಾದ ನನ್ನ ನಕಾರಾತ್ಮಕ ದೃಷ್ಟಿಕೋನವನ್ನು ಕೊಂಚವೂ ಬದಲಾಯಿಸಲಿಲ್ಲ. ಆದರೆ ಕೊನೆಗೂ ನಾನು ಸಾಕ್ಷಿಗಳನ್ನು ಸಂಧಿಸಬೇಕಾಯಿತು. ಅದು ಕೂಡ ಒಂದು ಅನಿರೀಕ್ಷಿತವಾದ ರೀತಿಯಲ್ಲಿ.

ಸ್ವೀಡನ್‌ನಲ್ಲಿ ವಾಸಿಸುತ್ತಿರುವ ನನ್ನ ಸಹೋದರನು ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಾಗಿದ್ದನು. ಮತ್ತು ಒಂದು ರಾಜ್ಯ ಸಭಾಗೃಹದಲ್ಲಿ ನಡೆಯಲಿರುವ ಅವನ ವಿವಾಹಕ್ಕೆ ನನ್ನನ್ನು ಆಮಂತ್ರಿಸಿದನು! ಅಲ್ಲಿ ನನಗಾದ ಅನುಭವವು, ಸಾಕ್ಷಿಗಳ ಕುರಿತಾದ ನನ್ನ ದೃಷ್ಟಿಕೋನವನ್ನು ಸಂಪೂರ್ಣವಾಗಿ ಬದಲಾಯಿಸಿಬಿಟ್ಟಿತು. ಸಾಕ್ಷಿಗಳು ತುಂಬ ಬೇಸರಹಿಡಿಸುವ ಜನರೆಂದು ನಾನು ನೆನಸಿದ್ದೆ. ಆದರೆ ನನ್ನ ಅನಿಸಿಕೆ ಸುಳ್ಳಾಗಿತ್ತು. ಅವರು ದಯಾಪರರೂ ಸಂತೋಷಭರಿತರೂ ಆಗಿದ್ದರು. ಅಷ್ಟುಮಾತ್ರವಲ್ಲ, ಹಾಸ್ಯಪ್ರವೃತ್ತಿಯುಳ್ಳವರೂ ಆಗಿದ್ದರು.

ಈ ಮಧ್ಯೆ, ನನ್ನ ಮಾಜಿ ಪತಿಯಾಗಿದ್ದ ಲಾಹ್ಸ್‌ನ ವ್ಯಕ್ತಿತ್ವವು ಸಂಪೂರ್ಣವಾಗಿ ಬದಲಾಗಿತ್ತು. ಈಗ ಅವನು ತುಂಬ ಜವಾಬ್ದಾರಿಯುತ ವ್ಯಕ್ತಿಯಾಗಿದ್ದನು. ಮಕ್ಕಳೊಂದಿಗೆ ಸಮಯವನ್ನು ಕಳೆಯುತ್ತಿದ್ದನು. ಅವನು ದಯಾಪರನಾಗಿದ್ದನು ಮತ್ತು ಎಂದೂ ಹತೋಟಿ ಮೀರಿ ಮಾತಾಡುತ್ತಿರಲಿಲ್ಲ. ಮುಂಚಿನಂತೆ ಈಗ ಅವನು ಮಿತಿಮೀರಿ ಕುಡಿಯುತ್ತಿರಲಿಲ್ಲ. ಈಗ ಅವನ ವ್ಯಕ್ತಿತ್ವವು ತುಂಬ ಆಕರ್ಷಕವಾಗಿತ್ತು! ಅವನು ಎಂತಹ ವ್ಯಕ್ತಿಯಾಗಿರಬೇಕೆಂದು ನಾನು ನೆನಸುತ್ತಿದ್ದೆನೋ ಅಂತಹ ವ್ಯಕ್ತಿತ್ವ ಈಗ ಅವನಲ್ಲಿತ್ತು. ಆದರೆ ಈಗ ನಾನು ಅವನ ಪತ್ನಿಯಾಗಿಲ್ಲವಲ್ಲ ಮತ್ತು ಮುಂದೆ ಒಂದು ದಿನ ಅವನು ಬೇರೊಬ್ಬ ಸ್ತ್ರೀಯ ಪತಿಯಾಗಬಹುದು ಎಂಬ ಆಲೋಚನೆಯೇ ನನಗೆ ತುಂಬ ನೋವನ್ನು ಉಂಟುಮಾಡುತ್ತಿತ್ತು!

ಆಗ ನಾನು ಒಂದು ಕಪಟ “ದಾಳಿ”ಯನ್ನು ಯೋಜಿಸಿದೆ. ಒಂದು ಸಲ ನಮ್ಮ ಕಿರಿಯ ಮಗನಾದ ಯೋನಾಸ್‌ನು ತನ್ನ ತಂದೆಯ ಬಳಿ ಉಳಿದಿದ್ದನು. ನನ್ನಲ್ಲಿಗೆ ಬಂದಿದ್ದ ನನ್ನ ಇಬ್ಬರು ಸಹೋದರಿಯರು ತಮ್ಮ ಸೋದರಳಿಯನನ್ನು ನೋಡಲು ಬಯಸುತ್ತಾರೆಂಬ ನೆಪವನ್ನು ಹೇಳಿ, ಯೋನಾಸ್‌ನನ್ನು ಮತ್ತು ಲಾಹ್ಸ್‌ನನ್ನು ನೋಡಲಿಕ್ಕಾಗಿ ನಾನು ನನ್ನ ಇಬ್ಬರು ಸಹೋದರಿಯರೊಂದಿಗೆ ಅವರಿದ್ದಲ್ಲಿಗೆ ಪ್ರಯಾಣಿಸುವ ಏರ್ಪಾಡನ್ನು ಮಾಡಿದೆ. ತದನಂತರ ಒಂದು ಅಮ್ಯೂಸ್‌ಮೆಂಟ್‌ ಪಾರ್ಕಿ (ಮೋಜಿನ ಮೇಳ)ನಲ್ಲಿ ನಾವೆಲ್ಲರೂ ಭೇಟಿಯಾದೆವು. ಯೋನಾಸ್‌ನನ್ನು ಅವನ ಆಂಟಿಯರು ನೋಡಿಕೊಳ್ಳುತ್ತಿದ್ದಾಗ, ನಾನು ಮತ್ತು ಲಾಹ್ಸ್‌ ಒಂದು ಬೆಂಚಿನ ಮೇಲೆ ಕುಳಿತುಕೊಂಡೆವು.

ಅಲ್ಲಿ ಕುಳಿತುಕೊಂಡಿದ್ದಾಗ, ನಮ್ಮ ಭವಿಷ್ಯತ್ತಿನ ಕುರಿತು ನಾನು ಲಾಹ್ಸ್‌ನೊಂದಿಗೆ ಮಾತಾಡಿದೆ. ಆ ಕೂಡಲೆ ಲಾಹ್ಸ್‌ ತನ್ನ ಜೇಬಿನಿಂದ ಒಂದು ಪುಸ್ತಕವನ್ನು ಹೊರತೆಗೆದನು ಮತ್ತು ಅದನ್ನು ನೋಡಿ ನನಗೆ ತುಂಬ ಆಶ್ಚರ್ಯವಾಯಿತು. ನಿಮ್ಮ ಕುಟುಂಬ ಜೀವನವನ್ನು ಸಂತೋಷಗೊಳಿಸುವುದು * ಎಂಬುದು ಆ ಪುಸ್ತಕದ ಹೆಸರಾಗಿತ್ತು. ಅವನು ಆ ಪುಸ್ತಕವನ್ನು ನನಗೆ ಕೊಟ್ಟನು. ಮತ್ತು ಒಂದು ಕುಟುಂಬದಲ್ಲಿ ಪತಿಪತ್ನಿಯ ಪಾತ್ರದ ಕುರಿತು ವಿವರಿಸುವಂತಹ ಅಧ್ಯಾಯಗಳನ್ನು ಓದುವಂತೆ ನನಗೆ ಸಲಹೆ ನೀಡಿದನು. ಅದರಲ್ಲಿದ್ದ ಶಾಸ್ತ್ರವಚನಗಳನ್ನು ಬೈಬಲಿನಲ್ಲಿ ತೆರೆದು ನೋಡುವಂತೆ ಅವನು ವಿಶೇಷವಾಗಿ ಹೇಳಿದನು.

ನಾನು ಮತ್ತು ಲಾಹ್ಸ್‌ ಮಾತಾಡಿದ ಬಳಿಕ ಮನೆಗೆ ಹೋಗಲು ನಾವು ಎದ್ದು ನಿಂತೆವು. ಆಗ ನಾನು ಅವನ ಕೈಹಿಡಿದುಕೊಳ್ಳಲು ಇಷ್ಟಪಟ್ಟೆ, ಆದರೆ ಅದನ್ನು ಲಾಹ್ಸ್‌ ವಿನಯಭಾವದಿಂದ ನಿರಾಕರಿಸಿದನು. ಈಗಾಗಲೇ ಅವನೊಬ್ಬ ಯೆಹೋವನ ಸಾಕ್ಷಿಯಾಗಿದ್ದನು. ಆದುದರಿಂದ, ತನ್ನ ಹೊಸ ನಂಬಿಕೆಯ ಬಗ್ಗೆ ನನ್ನ ದೃಷ್ಟಿಕೋನವೇನು ಎಂಬುದನ್ನು ತಿಳಿದುಕೊಳ್ಳುವ ಮುಂಚೆ ಅವನು ನನ್ನೊಂದಿಗೆ ಹೊಸ ಬಾಂಧವ್ಯವನ್ನು ಬೆಳೆಸಿಕೊಳ್ಳಲು ಇಚ್ಛಿಸಲಿಲ್ಲ. ಇದರಿಂದಾಗಿ ನನಗೆ ತುಂಬ ಕೋಪ ಬಂತು. ಆದರೆ ಅವನ ಈ ವರ್ತನೆಯು ಸರಿಯಾದದ್ದಾಗಿದೆ ಎಂದು ನಾನು ಅರಿತುಕೊಂಡೆ. ಅಷ್ಟುಮಾತ್ರವಲ್ಲ, ಒಂದುವೇಳೆ ಅವನು ಪುನಃ ನನ್ನ ಗಂಡನಾಗುವಲ್ಲಿ ಅವನ ಈ ವರ್ತನೆಯಿಂದ ನನಗೇ ಪ್ರಯೋಜನವಾಗುವುದು ಎಂದು ಮನಸ್ಸಿಗೆ ಸಮಾಧಾನಮಾಡಿಕೊಂಡೆ.

ಈ ಎಲ್ಲ ಕಾರಣಗಳಿಂದ ಯೆಹೋವನ ಸಾಕ್ಷಿಗಳ ಕುರಿತಾದ ನನ್ನ ಕುತೂಹಲವು ಇನ್ನೂ ಹೆಚ್ಚಿತು. ಆದುದರಿಂದ, ಮರುದಿನ ನಾನು ಒಬ್ಬ ಸಾಕ್ಷಿ ಸ್ತ್ರೀಯನ್ನು ಸಂಪರ್ಕಿಸಿದೆ. ಆ ಸ್ತ್ರೀ ಹಾಗೂ ಅವಳ ಗಂಡನು, ತಮ್ಮ ಧರ್ಮದ ಬಗ್ಗೆ ನನಗೆ ಬೇಕಾದ ಮಾಹಿತಿಯನ್ನು ಒದಗಿಸುವಂತೆ ನಾವು ಏರ್ಪಾಡನ್ನು ಮಾಡಿದೆವು. ನನಗೆ ಅನೇಕ ಪ್ರಶ್ನೆಗಳಿದ್ದವು ಮತ್ತು ಆ ಎಲ್ಲ ಪ್ರಶ್ನೆಗಳಿಗೆ ಅವರು ಬೈಬಲಿನಿಂದಲೇ ಉತ್ತರಿಸಿದರು. ಯೆಹೋವನ ಸಾಕ್ಷಿಗಳು ಕಲಿಸುವಂತಹ ವಿಷಯಗಳು ಸಂಪೂರ್ಣವಾಗಿ ಬೈಬಲಾಧಾರಿತವಾಗಿವೆ ಎಂಬುದು ನನಗೆ ಗೊತ್ತಾಯಿತು. ಪ್ರತಿಯೊಂದು ವಿಷಯವನ್ನು ನಾವು ಚರ್ಚಿಸಿದಂತೆ, ಅವರು ಹೇಳಿದ್ದೆಲ್ಲವೂ ಸತ್ಯವಾಗಿತ್ತು ಎಂಬುದನ್ನು ನಾನು ಒಪ್ಪಿಕೊಳ್ಳಲೇಬೇಕಾಯಿತು.

ಈ ಸಮಯದಲ್ಲೇ ನಾನು ಇವ್ಯಾಂಜೆಲಿಕಲ್‌ ಲ್ಯೂತರನ್‌ ಚರ್ಚಿಗೆ ರಾಜೀನಾಮೆ ಕೊಟ್ಟೆ. ಮತ್ತು ನನ್ನ ರಾಜಕೀಯ ಚಟುವಟಿಕೆಗಳನ್ನು ನಿಲ್ಲಿಸಿಬಿಟ್ಟೆ. ಧೂಮಪಾನವನ್ನೂ ಬಿಟ್ಟುಬಿಟ್ಟೆ. ಈ ಚಟವನ್ನು ಬಿಟ್ಟುಬಿಡುವುದು ಎಲ್ಲದಕ್ಕಿಂತಲೂ ಹೆಚ್ಚು ಕಷ್ಟಕರವಾಗಿತ್ತು. 1990ರ ಆಗಸ್ಟ್‌ ತಿಂಗಳಿನಲ್ಲಿ ನನ್ನ ಬೈಬಲ್‌ ಅಭ್ಯಾಸವು ಆರಂಭವಾಯಿತು. ಹಾಗೂ 1991ರ ಏಪ್ರಿಲ್‌ ತಿಂಗಳಿನಲ್ಲಿ ನಾನು ದೀಕ್ಷಾಸ್ನಾನ ಪಡೆದುಕೊಂಡು, ಯೆಹೋವನ ಸಾಕ್ಷಿಗಳಲ್ಲಿ ಒಬ್ಬಳಾದೆ.

ಮರುಮದುವೆ

ಯೂಡಿಟ್‌: ಈಗ ನಾವಿಬ್ಬರೂ ದೀಕ್ಷಾಸ್ನಾನಿತ ಸಾಕ್ಷಿಗಳಾಗಿದ್ದೆವು. ನಾವು ಬೇರೆ ಬೇರೆ ಮಾರ್ಗವನ್ನು ಹಿಡಿದಿದ್ದರೂ, ಇಬ್ಬರೂ ಬೈಬಲನ್ನು ಅಭ್ಯಾಸಿಸಿದ್ದೆವು. ಬೈಬಲಿನ ಅತ್ಯುತ್ತಮ ಬೋಧನೆಗಳ ಫಲವಾಗಿ ನಾವು ಈಗ ಸಂಪೂರ್ಣವಾಗಿ ಬದಲಾಗಿದ್ದೆವು. ಈಗಲೂ ನಾವು ಒಬ್ಬರು ಇನ್ನೊಬ್ಬರ ಬಗ್ಗೆ ಕಾಳಜಿ ವಹಿಸುತ್ತಿದ್ದೆವು, ಆದರೆ ಈ ಮುಂಚಿಗಿಂತಲೂ ಹೆಚ್ಚು ಆತ್ಮೀಯವಾದ ರೀತಿಯಲ್ಲಿ. ಆದುದರಿಂದ, ಈಗ ಮರುಮದುವೆಯಾಗಲು ನಮಗೆ ಯಾವುದೇ ತಡೆಯಿರಲಿಲ್ಲ. ಹೀಗೆ ಎರಡನೆಯ ಬಾರಿ ನಾವು ವಿವಾಹ ಪ್ರತಿಜ್ಞೆಗಳನ್ನು ತೆಗೆದುಕೊಂಡೆವು, ಆದರೆ ಈ ಬಾರಿ ನಾವು ಯೆಹೋವನ ಸಾಕ್ಷಿಗಳ ರಾಜ್ಯ ಸಭಾಗೃಹದಲ್ಲಿ ಮದುವೆಯಾದೆವು.

ಲಾಹ್ಸ್‌: ನಂಬಲಸಾಧ್ಯವಾದ ಘಟನೆಯು ಸಂಭವಿಸಿತ್ತು: ನಮ್ಮ ಕುಟುಂಬದ ಪುನರ್ಮಿಲನವಾಗಿತ್ತು! ಈಗ ನಮಗಾದ ಹರ್ಷಾನಂದವು ಹೇಳತೀರದು.

ಯೂಡಿಟ್‌: ನಮ್ಮ ಗಂಡು ಮಕ್ಕಳು, ಬಂಧುಬಳಗದವರು, ಮತ್ತು ಅನೇಕ ಹೊಸ ಹಾಗೂ ಹಳೆಯ ಸ್ನೇಹಿತರು ನಮ್ಮ ಮದುವೆಗೆ ಹಾಜರಾಗಿದ್ದರು. ಇದೊಂದು ರೋಮಾಂಚಕ ಅನುಭವವಾಗಿತ್ತು. ನಮ್ಮ ಅತಿಥಿಗಳಲ್ಲಿ, ನಮ್ಮ ಹಿಂದಿನ ಮದುವೆಯ ಸಮಯದಿಂದ ನಮಗೆ ಪರಿಚಯವಿದ್ದ ಜನರೂ ಸೇರಿದ್ದರು. ನಾವು ಪುನಃ ಒಟ್ಟುಗೂಡಿದ್ದನ್ನು ನೋಡಿ ಅವರಿಗೆ ತುಂಬ ಸಂತೋಷವಾಗಿತ್ತು. ಅಷ್ಟುಮಾತ್ರವಲ್ಲ ಯೆಹೋವನ ಸಾಕ್ಷಿಗಳ ನಡುವೆಯಿದ್ದ ನಿಜವಾದ ಸಂತೋಷವನ್ನು ಕಂಡು ಸಹ ಅವರು ಮೂಕವಿಸ್ಮಿತರಾಗಿದ್ದರು.

ಮಕ್ಕಳು

ಲಾಹ್ಸ್‌: ನಮ್ಮ ದೀಕ್ಷಾಸ್ನಾನವಾದ ಮೇಲೆ, ನಮ್ಮ ಗಂಡು ಮಕ್ಕಳಲ್ಲಿ ಇಬ್ಬರು ತಮ್ಮ ಜೀವಿತಗಳನ್ನು ಯೆಹೋವನಿಗೆ ಸಮರ್ಪಿಸಿಕೊಳ್ಳುವುದನ್ನು ನೋಡುವ ಆನಂದವು ನಮಗೆ ದೊರಕಿದೆ.

ಯೂಡಿಟ್‌: ಯೋನಾಸ್‌ನು ಚಿಕ್ಕವನಾಗಿದ್ದಾಗಿನಿಂದಲೂ ತನ್ನ ತಂದೆಯನ್ನು ಭೇಟಿಯಾಗುತ್ತಿದ್ದನು. ಆಗ ಅವನ ತಂದೆಯು ಅವನಿಗೆ ಪರಿಚಯಿಸಿದ ಬೈಬಲ್‌ ಸತ್ಯವನ್ನು ಅಂದಿನಿಂದಲೇ ಗಣ್ಯಮಾಡಲಾರಂಭಿಸಿದ್ದನು. “ಅಪ್ಪ ಬೈಬಲಿಗನುಸಾರ ಜೀವಿಸುತ್ತಾರೆ,” ಆದುದರಿಂದ ನಾನು ಅವರೊಂದಿಗೆ ವಾಸಿಸಲು ಇಷ್ಟಪಡುತ್ತೇನೆ ಎಂದು ಅವನು ಹತ್ತು ವರ್ಷದವನಾಗಿದ್ದಾಗಲೇ ನನಗೆ ಹೇಳಿದ್ದನು. ಯೋನಾಸ್‌ 14 ವರ್ಷದವನಾಗಿದ್ದಾಗ ಅವನಿಗೆ ದೀಕ್ಷಾಸ್ನಾನವಾಯಿತು. ಅವನು ತನ್ನ ವಿದ್ಯಾಭ್ಯಾಸವನ್ನು ಮುಗಿಸಿ, ಈಗ ಒಬ್ಬ ಪೂರ್ಣ ಸಮಯದ ಶುಶ್ರೂಷಕನಾಗಿದ್ದಾನೆ.

ಲಾಹ್ಸ್‌: ನಮ್ಮ ಹಿರಿಯ ಮಗನಾಗಿರುವ ಮಾರ್ಟೀನ್‌ಗೆ ಈಗ 27 ವರ್ಷ. ನಮ್ಮ ಜೀವಿತದಲ್ಲಿ ನಾವು ಮಾಡಿದಂತಹ ಬದಲಾವಣೆಗಳು ಅವನ ಜೀವಿತದ ಮೇಲೆ ಬಲವಾದ ಪರಿಣಾಮವನ್ನು ಬೀರಿದವು. ಅವನು ಮನೆಯನ್ನು ಬಿಟ್ಟುಹೋಗಿ, ದೇಶದ ಇನ್ನೊಂದು ಭಾಗದಲ್ಲಿ ವಾಸಿಸತೊಡಗಿದನು. ಎರಡು ವರ್ಷಗಳ ಹಿಂದೆ ಅವನು ಅಲ್ಲಿರುವ ಯೆಹೋವನ ಸಾಕ್ಷಿಗಳ ಸ್ಥಳಿಕ ಸಭೆಯೊಂದಿಗೆ ಬೈಬಲ್‌ ಅಭ್ಯಾಸ ಮಾಡಲಾರಂಭಿಸಿದನು. ಐದೇ ತಿಂಗಳುಗಳ ನಂತರ ಅವನು ದೀಕ್ಷಾಸ್ನಾನ ಪಡೆದುಕೊಂಡನು. ಒಬ್ಬ ಕ್ರೈಸ್ತನೋಪಾದಿ ಅವನು ತನ್ನ ಮುಂದಿನ ಜೀವನಕ್ಕಾಗಿ ಅತ್ಯುತ್ತಮ ಯೋಜನೆಗಳನ್ನು ಮಾಡುತ್ತಿದ್ದಾನೆ.

ಸದ್ಯಕ್ಕೆ ನಮ್ಮ ಎರಡನೆಯ ಮಗನಾದ ಟೋಮಾಸ್‌ ಇನ್ನೂ ಒಬ್ಬ ಯೆಹೋವನ ಸಾಕ್ಷಿಯಾಗಿಲ್ಲ. ಆದರೂ ನಾವು ಅವನನ್ನು ಪ್ರೀತಿಸುತ್ತೇವೆ ಮತ್ತು ಅವನೊಂದಿಗೆ ಒಳ್ಳೆಯ ಸಂಬಂಧವನ್ನು ಇಟ್ಟುಕೊಂಡಿದ್ದೇವೆ. ನಮ್ಮ ಕುಟುಂಬದಲ್ಲಿ ಆಗಿರುವ ಬದಲಾವಣೆಯನ್ನು ನೋಡಿ ಅವನಿಗೂ ಸಂತೋಷವಾಗಿದೆ. ಹೆತ್ತವರಾದ ನಾವು ಬೈಬಲಿನಿಂದ ಕಲಿತುಕೊಂಡ ಮೂಲತತ್ವಗಳ ಫಲವಾಗಿಯೇ ನಮ್ಮ ಕುಟುಂಬದ ಪುನರ್ಮಿಲನವಾಯಿತು ಎಂಬುದನ್ನು ನಾವೆಲ್ಲರೂ ಒಪ್ಪಿಕೊಳ್ಳುತ್ತೇವೆ. ಇಂದು, ಮೂವರು ಗಂಡು ಮಕ್ಕಳು ಮತ್ತು ಹೆತ್ತವರಾದ ನಾವಿಬ್ಬರೂ ಒಂದು ಕುಟುಂಬವಾಗಿ ಆಗಿಂದಾಗ್ಗೆ ಒಂದೇ ಛಾವಣಿಯ ಕೆಳಗೆ ಒಟ್ಟುಗೂಡಲು ಸಾಧ್ಯವಾಗಿರುವುದನ್ನು ನೋಡುವುದು ಎಂತಹ ಒಂದು ಆಶೀರ್ವಾದವಾಗಿದೆ!

ನಮ್ಮ ಇಂದಿನ ಜೀವನ ರೀತಿ

ಲಾಹ್ಸ್‌: ಈಗ ನಾವು ತಪ್ಪೇ ಮಾಡುವುದಿಲ್ಲ ಎಂದು ನಾವು ಹೇಳುತ್ತಿಲ್ಲ. ಆದರೆ ನಾವು ಒಂದು ಪಾಠವನ್ನು ಕಲಿತಿದ್ದೇವೆ. ಅದೇನೆಂದರೆ, ಪ್ರೀತಿ ಹಾಗೂ ಪರಸ್ಪರ ಗೌರವಗಳೇ ಯಶಸ್ವೀ ವಿವಾಹ ಜೀವನದ ರಹಸ್ಯವಾಗಿವೆ. ಈಗ ನಮ್ಮ ದಾಂಪತ್ಯ ಜೀವನವು ಸರಿಯಾದ ತಳಪಾಯದ ಮೇಲೆ ಕಟ್ಟಲ್ಪಟ್ಟಿದೆ. ಈಗ ನಾವಿಬ್ಬರೂ ನಮಗಿಂತಲೂ ಶ್ರೇಷ್ಠನಾಗಿರುವ ಒಬ್ಬ ಅಧಿಕಾರಿಯನ್ನು ಅಂಗೀಕರಿಸಿದ್ದೇವೆ. ಆತನು ಯೆಹೋವ ದೇವರೇ ಆಗಿದ್ದಾನೆ ಮತ್ತು ಆತನಿಗೋಸ್ಕರವೇ ನಾವು ಜೀವಿಸುತ್ತಿದ್ದೇವೆ ಎಂಬುದನ್ನು ನಾವು ಮನಗಂಡಿದ್ದೇವೆ. ನಾನು ಮತ್ತು ಯೂಡಿಟ್‌ ನಿಜವಾಗಿಯೂ ಐಕ್ಯರಾಗಿದ್ದೇವೆ ಹಾಗೂ ಭವಿಷ್ಯತ್ತನ್ನು ಭರವಸೆಯಿಂದ ಮುನ್ನೋಡುತ್ತಿದ್ದೇವೆ.

ಯೂಡಿಟ್‌: ವಿವಾಹ ಹಾಗೂ ಕುಟುಂಬ ಜೀವನದ ಅತ್ಯುತ್ತಮ ಸಲಹೆಗಾರನು ಯೆಹೋವನೇ ಆಗಿದ್ದಾನೆ ಎಂಬುದಕ್ಕೆ ನಾವೇ ಜೀವಂತ ಸಾಕ್ಷ್ಯವಾಗಿದ್ದೇವೆ ಎಂಬುದೇ ನನ್ನ ಅಭಿಪ್ರಾಯ.

[ಪಾದಟಿಪ್ಪಣಿ]

^ 1978ರಲ್ಲಿ ವಾಚ್‌ಟವರ್‌ ಬೈಬಲ್‌ ಆ್ಯಂಡ್‌ ಟ್ರ್ಯಾಕ್ಟ್‌ ಸೊಸೈಟಿಯಿಂದ ಪ್ರಕಾಶಿತ. ಆದರೆ ಈಗ ಈ ಪುಸ್ತಕವು ಮುದ್ರಿಸಲ್ಪಡುತ್ತಿಲ್ಲ.

[ಪುಟ 22ರಲ್ಲಿರುವ ಚಿತ್ರ]

1973ರಲ್ಲಿ, ತಮ್ಮ ಪ್ರಥಮ ವಿವಾಹದ ಸಮಯದಲ್ಲಿ ಲಾಹ್ಸ್‌ ಮತ್ತು ಯೂಡಿಟ್‌

[ಪುಟ 23ರಲ್ಲಿರುವ ಚಿತ್ರ]

ಮೂವರು ಗಂಡು ಮಕ್ಕಳಿದ್ದ ಕುಟುಂಬವು ಇಬ್ಭಾಗವಾಯಿತು ಮತ್ತು ಅದರ ಪುನರ್ಮಿಲನವಾಯಿತು

[ಪುಟ 25ರಲ್ಲಿರುವ ಚಿತ್ರ]

ಬೈಬಲ್‌ ಮೂಲತತ್ವಗಳನ್ನು ಅನುಸರಿಸುವ ಮೂಲಕ ಲಾಹ್ಸ್‌ ಮತ್ತು ಯೂಡಿಟರ ಪುನರ್ಮಿಲನವಾಯಿತು