ನೈತಿಕ ಮೌಲ್ಯಗಳು ಹಿಂದಿನ ಕಾಲಕ್ಕಿಂತಲೂ ತೀರ ಕೆಟ್ಟುಹೋಗಿವೆಯೋ?
ನೈತಿಕ ಮೌಲ್ಯಗಳು ಹಿಂದಿನ ಕಾಲಕ್ಕಿಂತಲೂ ತೀರ ಕೆಟ್ಟುಹೋಗಿವೆಯೋ?
“ಇಂದು ಜನರ ನೈತಿಕ ಮೌಲ್ಯಗಳು ಹೇಗಿವೆ? ಹಿಂದಿನ ಕಾಲಕ್ಕೆ ಹೋಲಿಸಿದರೆ ಒಳ್ಳೆಯದಾಗಿದೆಯೋ ಇಲ್ಲವೇ ಕೆಟ್ಟುಹೋಗಿದೆಯೋ?” ಎಂದು ಇತಿಹಾಸಕಾರರನ್ನು ನೀವು ಕೇಳಿದರೆ, ಬೇರೆ ಬೇರೆ ಸಮಯದಲ್ಲಿದ್ದ ನೈತಿಕತೆಯನ್ನು ಹೋಲಿಸಿನೋಡುವುದು ಕಷ್ಟ ಎಂದು ಕೆಲವರು ಹೇಳಬಹುದು. ಒಂದು ಯುಗವು ಒಳ್ಳೆಯದಾಗಿತ್ತೋ ಇಲ್ಲವೇ ಕೆಟ್ಟದ್ದಾಗಿತ್ತೋ ಎಂಬುದನ್ನು, ಆಗ ಇದ್ದಂತಹ ಪರಿಸ್ಥಿತಿಗಳಿಗನುಸಾರ ತಿಳಿಸಬೇಕು ಎಂಬುದು ಅವರ ಅಭಿಪ್ರಾಯವಾಗಿರಬಹುದು.
ಉದಾಹರಣೆಗೆ, 16ನೇ ಶತಮಾನದಿಂದ ಯೂರೋಪಿನಲ್ಲಿ ಬೆಳೆಯುತ್ತಿರುವ ಹಿಂಸಾತ್ಮಕ ಅಪರಾಧಗಳನ್ನು ತೆಗೆದುಕೊಳ್ಳಿರಿ. 400 ವರ್ಷಗಳ ಹಿಂದೆ ಸಹ ಕೊಲೆಗಳು ನಡೆದಿದ್ದವು. ಜನರು ಅನೇಕ ವೇಳೆ ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳುತ್ತಿದ್ದರು. ಅಷ್ಟುಮಾತ್ರವಲ್ಲದೆ ಬದ್ಧದ್ವೇಷದ ಕಲಹಗಳು ಎಲ್ಲೆಲ್ಲೂ ಇದ್ದವು.
ಆದರೂ ಇತಿಹಾಸಕಾರರಾದ ಆರ್ನ ಯಾರಿಕ್ ಮತ್ತು ಯೋಹಾನ್ ಸೊಯೀಡರ್‌ಬರ್ ತಮ್ಮ ಮನಿಸ್ಕೋಟರ್ಡಟ್ ಒಕ್ ಮಾಕ್‌ಟನ್ (ಮಾನವ ಘನತೆ ಹಾಗೂ ಶಕ್ತಿ) ಎಂಬ ಪುಸ್ತಕದಲ್ಲಿ ಬರೆದದ್ದೇನೆಂದರೆ, 1600 ಮತ್ತು 1850ರ ನಡುವಿನ ಅವಧಿಯಲ್ಲಿ ಕೆಲವು ಸ್ಥಳಗಳಲ್ಲಿ “ಸಮಾಜ ಜೀವನವು ಒಳ್ಳೆಯದಾಗಿತ್ತು.” ಜನರು ಇತರರ ಅಗತ್ಯಗಳಿಗೆ ಸ್ಪಂದಿಸುತ್ತಿದ್ದರು. ಅವರು ತುಂಬ ಸಹಾನುಭೂತಿಯುಳ್ಳವರಾಗಿದ್ದರು. ಉದಾಹರಣೆಗೆ, ಇತರ ಇತಿಹಾಸಕಾರರು ಹೇಳುವುದೇನೆಂದರೆ, ಇಂದಿರುವ ಪರಿಸ್ಥಿತಿಗೆ ಹೋಲಿಸಿನೋಡುವಾಗ, 16ನೇ ಶತಮಾನದಲ್ಲಿ ಕಳ್ಳತನ ಹಾಗೂ ಆಸ್ತಿಪಾಸ್ತಿಯ ವಿರುದ್ಧ ನಡೆಯುತ್ತಿದ್ದ ಅಪರಾಧಗಳು ಅಷ್ಟೇನೂ ಹೆಚ್ಚಿರಲಿಲ್ಲ. ಸಂಘಟಿಸಲ್ಪಟ್ಟ ಗ್ಯಾಂಗುಗಳಿಂದ ಮಾಡಲ್ಪಡುತ್ತಿದ್ದ ಕಳ್ಳತನವು ತೀರ ಅಪರೂಪದ್ದಾಗಿತ್ತು. ಅದೂ ವಿಶೇಷವಾಗಿ ಹಳ್ಳಿಗಾಡಿನಲ್ಲಿ.
ಅಲ್ಲಿ ದಾಸತ್ವ ಸಹ ಇತ್ತು ಮತ್ತು ಇದು ಇತಿಹಾಸದಲ್ಲಿಯೇ ಅತ್ಯಂತ ಘೋರವಾದ ಅಪರಾಧಗಳನ್ನೆಸಗುವಂತೆ ಮಾಡಿತು. ಯೂರೋಪ್ ದೇಶದ ವ್ಯಾಪಾರಸ್ಥರು ಆಫ್ರಿಕ ದೇಶದ ಜನರನ್ನು ಅಪಹರಿಸಿದರು. ಈ ಕೋಟ್ಯಂತರ ಗುಲಾಮರನ್ನು ಕರೆದುಕೊಂಡುಹೋದ ದೇಶಗಳಲ್ಲಿ ಅಮಾನವೀಯವಾಗಿ ಉಪಚರಿಸಲಾಯಿತು.
ಆದುದರಿಂದ, ನಾವು ಗತ ಶತಮಾನಗಳ ಕಡೆಗೆ ಹಿನ್ನೋಟ ಬೀರಿದರೆ, ಅಂದರೆ ಐತಿಹಾಸಿಕ ದೃಷ್ಟಿಕೋನದಿಂದ ನೋಡಿದರೆ, ಕೆಲವು ಪರಿಸ್ಥಿತಿಗಳು ಒಳ್ಳೆಯದಾಗಿದ್ದವು ಮತ್ತು ಕೆಲವು ಪರಿಸ್ಥಿತಿಗಳು ಇಂದಿಗಿಂತಲೂ ಕೆಟ್ಟದ್ದಾಗಿದ್ದವು ಎಂಬುದನ್ನು ನೋಡಬಹುದು. ಆದರೆ, ಪೂರ್ವದಲ್ಲಿ ಎಂದೂ ನಡೆಯದಂತಹ ಯಾವುದೋ ಒಂದು ಅತಿ ಭಿನ್ನವಾದ ಹಾಗೂ ತುಂಬ ಗಂಭೀರವಾದ ವಿಷಯವು 20ನೆಯ ಶತಮಾನದಲ್ಲಿ ನಡೆಯಿತು. ಮತ್ತು ಅದು ಈಗಲೂ ನಡೆಯುತ್ತಿದೆ.
20ನೇ ಶತಮಾನ—ಒಂದು ತಿರುವು
ಇತಿಹಾಸಕಾರರಾದ ಯಾರಿಕ್ ಮತ್ತು ಸೊಯೀಡರ್‌ಬರ್ ಹೇಳುವುದು: “1930ಗಳಲ್ಲಿ ನರಹತ್ಯೆಯು ಮತ್ತೆ ಹೆಚ್ಚಾಯಿತು ಮತ್ತು ದುಃಖಕರವಾದ ವಿಷಯವೇನೆಂದರೆ, ಅಂದಿನಿಂದ ಇಂದಿನ ವರೆಗೂ, ಅಂದರೆ ಸುಮಾರು ಅರ್ಧ ಶತಮಾನಕ್ಕಿಂತಲೂ ಹೆಚ್ಚಿನ ಸಮಯವು ಕಳೆದಿದೆಯಾದರೂ ಪರಿಸ್ಥಿತಿಯು ಇನ್ನೂ ಹಾಗೇ ಇದೆ.”
ಅನೇಕ ವ್ಯಾಖ್ಯಾನಗಾರರಿಗನುಸಾರ, 20ನೇ ಶತಮಾನದಲ್ಲಿ ವ್ಯಾಪಕವಾದ ಮಟ್ಟದಲ್ಲಿ ನೈತಿಕತೆಯ ಅಧಃಪತನವಾಗಿತ್ತು.
ನೈತಿಕತೆಯ ತತ್ತ್ವಜ್ಞಾನದ ಕುರಿತು ಒಂದು ಪ್ರಬಂಧವು ಹೀಗೆ ಹೇಳುವುದು: “ಸೆಕ್ಸ್ ಬಗ್ಗೆ ಮತ್ತು ನೈತಿಕವಾಗಿ ಯಾವುದು ಸ್ವೀಕರಣೀಯವಾಗಿದೆ ಎಂಬುದರ ಬಗ್ಗೆ ಸಮಾಜಕ್ಕಿದ್ದ ದೃಷ್ಟಿಕೋನವು, ಕಳೆದ 30ರಿಂದ 40 ವರ್ಷಗಳ ಸಮಯದಲ್ಲಿ ಬಹಳಷ್ಟು ಬದಲಾಗಿರುವುದನ್ನು ನಾವು ಸ್ಪಷ್ಟವಾಗಿ ನೋಡಬಹುದು. ಹಿಂದೆ ಸಮಾಜವು ಕಟ್ಟುನಿಟ್ಟಾದ ನಿಯಮಗಳನ್ನು ಮಾಡುವ ಮೂಲಕ ನೈತಿಕವಾಗಿ ಯಾವುದು ಸರಿಯಾಗಿದೆ ಎಂಬುದನ್ನು ಸ್ಪಷ್ಟಗೊಳಿಸಿತ್ತು. ಆದರೆ ಈಗ ಅದು ಹೆಚ್ಚು ಸ್ವೇಚ್ಛಾಚಾರ ಹಾಗೂ ವ್ಯಕ್ತಿಸ್ವಾತಂತ್ರ್ಯದ ದೃಷ್ಟಿಕೋನವನ್ನು ಹೊಂದಿದೆ.”ಅಂದರೆ, ಲೈಂಗಿಕ ನಡವಳಿಕೆ ಹಾಗೂ ನೈತಿಕತೆಯ ಇತರ ಅಂಶಗಳ ಬಗ್ಗೆ ಪ್ರತಿಯೊಬ್ಬರು ವ್ಯಕ್ತಿಗತವಾಗಿ ನಿರ್ಧಾರವನ್ನು ತೆಗೆದುಕೊಳ್ಳಸಾಧ್ಯವಿದೆ ಎಂದಾಯಿತು. ಉದಾಹರಣೆಗೆ, 1960ರಲ್ಲಿ ಅಮೆರಿಕದಲ್ಲಿ ಕೇವಲ 5.3 ಪ್ರತಿಶತದಷ್ಟು ಮಕ್ಕಳು ಮದುವೆಗೆ ಮುಂಚೆ ಹುಟ್ಟಿದ್ದವು ಎಂಬುದನ್ನು ಆ ಪ್ರಬಂಧದ ಸಂಖ್ಯಾಸಂಗ್ರಹಣವು ತಿಳಿಸುತ್ತದೆ. ಆದರೆ ಆ ಸಂಖ್ಯೆಯು, 1990ರಲ್ಲಿ 28 ಪ್ರತಿಶತಕ್ಕೇರಿತ್ತು.
ಅಮೆರಿಕದ ಸೆನೆಟರ್ ಜೋ ಲೀಬರ್‌ಮಾನ್ ಅವರಿಗನುಸಾರ, ನಮ್ಮ ಸಮಯದ ನೈತಿಕ ಮೌಲ್ಯಗಳು “ಶೂನ್ಯವಾಗಿವೆ . . . ಮತ್ತು ಸರಿತಪ್ಪು ಎಂಬಂತಹ ಸಾಂಪ್ರದಾಯಿಕ ವಿಚಾರಗಳು ಈಗಿಲ್ಲ.” ಇವರು ನೋಟರ್ ಡೇಮ್‌ನ ವಿಶ್ವವಿದ್ಯಾನಿಲಯದಲ್ಲಿ ಉಪನ್ಯಾಸವೊಂದನ್ನು ನೀಡುತ್ತಿದ್ದಾಗ ಹೀಗೆ ಹೇಳಿದರು. ಮತ್ತು ಈ ರೀತಿಯ ಸಂಗತಿಯು “ಹೆಚ್ಚುಕಡಿಮೆ ಎರಡು ಪೀಳಿಗೆಗಳಿಂದ ಇದೆ” ಎಂದು ಸಹ ಇವರು ಹೇಳಿದರು.
ಪ್ರಾಪಂಚಿಕತೆಯ ಭಾವ
20ನೇ ಶತಮಾನದಲ್ಲಿ ಆಗಿರುವ ಈ ಗಮನಾರ್ಹವಾದ ವಿಕಸನೆಗೆ ಇತಿಹಾಸಕಾರರು ಮತ್ತು ವಿಶ್ಲೇಷಕರು ಯಾವ ಕಾರಣವನ್ನು ಕೊಡುತ್ತಾರೆ? “ಕಳೆದ ಎರಡು ಶತಮಾನಗಳ ಸಮಯಾವಧಿಯಲ್ಲಿ ಸಮಾಜದಲ್ಲಾಗಿರುವ ಅತ್ಯಂತ ಪ್ರಾಮುಖ್ಯವಾದ ಬದಲಾವಣೆಯು, ಪ್ರಾಪಂಚಿಕತೆಯಾಗಿದೆ” ಎಂದು ಮನಿಸ್ಕೋಟರ್ಡಟ್ ಒಕ್ ಮಾಕ್‌ಟನ್ ಎಂಬ ಪುಸ್ತಕವು ಹೇಳುತ್ತದೆ. ಪ್ರಾಪಂಚಿಕತೆಯ ಮೂಲಕ, “ಬೇರೆ ಬೇರೆ ದೃಷ್ಟಿಕೋನಗಳ ಬಗ್ಗೆ ಸ್ವಂತ ನಿಲುವನ್ನು ತೆಗೆದುಕೊಳ್ಳಲು ಜನರಿಗೆ ಅವಕಾಶವು ಸಿಕ್ಕಿತು. ಇಂತಹ ವಿಚಾರವು . . . 18ನೇ ಶತಮಾನದ ಜ್ಞಾನೋದಯ ತತ್ವಜ್ಞಾನಿಗಳಿಂದ ಬಂತು. ಇವರು ಬೈಬಲು ಸತ್ಯದ ಏಕಮಾತ್ರ ಮೂಲವಾಗಿದೆ ಎಂಬುದನ್ನು ತಳ್ಳಿಹಾಕಿದವರಲ್ಲಿ . . . ಮೊದಲಿಗರಾಗಿದ್ದಾರೆ.” ಆದುದರಿಂದ, ಜನರು ಅದರಲ್ಲೂ ವಿಶೇಷವಾಗಿ ಕ್ರೈಸ್ತಪ್ರಪಂಚದ ಜನರು ಹಿಂದೆ ನೈತಿಕತೆಯ ಬಗ್ಗೆ ಮಾರ್ಗದರ್ಶನೆಯನ್ನು ಪಡೆದುಕೊಳ್ಳುತ್ತಿದ್ದಷ್ಟು, ಈಗ ಪಡೆದುಕೊಳ್ಳುತ್ತಿಲ್ಲ.
ಆದರೆ, 18ನೇ ಶತಮಾನದಲ್ಲಿ ಪ್ರಾರಂಭವಾದ ವಿಚಾರವು ಜನಪ್ರಿಯವಾಗಲು ಏಕೆ ಸುಮಾರು 200ಕ್ಕಿಂತಲೂ ಹೆಚ್ಚಿನ ವರ್ಷಗಳು ತಗಲಿದವು? ಏಕೆಂದರೆ, “ಈ ವಿಚಾರಗಳು ಜನಸಾಮಾನ್ಯರಲ್ಲಿ ಅಷ್ಟು ಸುಲಭವಾಗಿ ಹರಡಲಿಲ್ಲ” ಎಂದು ಮೇಲೆ ಉಲ್ಲೇಖಿಸಲ್ಪಟ್ಟ ಪುಸ್ತಕವು ಹೇಳುತ್ತದೆ. “ಪ್ರಾಪಂಚಿಕತೆಯ ಭಾವವು ಮಂದಗತಿಯಲ್ಲಿ ಸಾಗಿತ್ತು.”
ಸಾಂಪ್ರದಾಯಿಕ ನೈತಿಕ ಮಟ್ಟಗಳನ್ನು ಹಾಗೂ ಕ್ರೈಸ್ತ ಮೌಲ್ಯಗಳನ್ನು ತ್ಯಜಿಸುವ ಮನೋವೃತ್ತಿಯು, ಕಳೆದ 200 ವರ್ಷಗಳಿಂದಲೂ ತೆವಳಿಕೊಂಡುಹೋಗುತ್ತಿತ್ತಾದರೂ, 20ನೇ ಶತಮಾನದಲ್ಲಿ ಥಟ್ಟನೇ ವೇಗವನ್ನು ಪಡೆದುಕೊಂಡಿತು. ಇದು ವಿಶೇಷವಾಗಿ ಹಿಂದಿನ ಕೆಲವು ದಶಕಗಳಲ್ಲಿ ಸತ್ಯವಾಗಿದೆ. ಆದರೆ ಏಕೆ?
ಸ್ವಾರ್ಥ ಮತ್ತು ಲೋಭ
20ನೇ ಶತಮಾನದಲ್ಲಿ ಸಮಾಜದಲ್ಲಿ ಆದ ಕ್ಷಿಪ್ರಗತಿಯ ತಂತ್ರಜ್ಞಾನ ಹಾಗೂ ಆರ್ಥಿಕ ಬೆಳವಣಿಗೆಯು ಒಂದು ಬಲವಾದ ಅಂಶವಾಗಿದೆ. ಜರ್ಮನ್ ವಾರ್ತಾಪತ್ರಿಕೆಯಾದ ಡೀ ಟ್ಸೀಟ್ ಎಂಬುದರಲ್ಲಿ ಬಂದ ಒಂದು ಲೇಖನವು ಹೇಳುವುದು, “ಹಿಂದಿನ ಶತಮಾನಗಳಲ್ಲಿದ್ದ ಅಕ್ರಿಯ ಯುಗದಲ್ಲಲ್ಲ ಬದಲಾಗಿ ಕ್ರಿಯಾತ್ಮಕ ಅಂದರೆ, ಮಿಂಚಿನ ವೇಗದಲ್ಲಿ ಬದಲಾಗುತ್ತಿರುವ ಒಂದು ಯುಗದಲ್ಲಿ” ನಾವು ಜೀವಿಸುತ್ತಿದ್ದೇವೆ. ಇದು ಮುಕ್ತ ಮಾರುಕಟ್ಟೆಯ ವ್ಯವಸ್ಥೆಗೆ ನಡೆಸಿದೆ. ಮತ್ತು ಇದು ಪೈಪೋಟಿಯಿಂದಲೂ ಸ್ವಾರ್ಥದಿಂದಲೂ ತುಂಬಿದೆ ಎಂದು ಆ ಲೇಖನವು ವಿವರಿಸುತ್ತದೆ.
ಆ ಲೇಖನವು ಹೇಳುವುದು, “ಈ ಸ್ವಾರ್ಥವನ್ನು ಏನೇ ಮಾಡಿದರೂ ಹೋಗಲಾಡಿಸಲಾಗುವುದಿಲ್ಲ. ಇದರ ಪರಿಣಾಮವಾಗಿ ದಿನನಿತ್ಯದ ಜೀವನದಲ್ಲಿ ಪಾಶವೀಯತೆಯು ಹೆಚ್ಚಾಗಿದೆ, ಭ್ರಷ್ಟಾಚಾರವು ತುಂಬಿತುಳುಕುತ್ತಿದೆ ಮತ್ತು ಅನೇಕ ದೇಶಗಳ ಸರಕಾರಗಳಲ್ಲೂ ಭ್ರಷ್ಟಾಚಾರವಿದೆ. ಜನರು ಕೇವಲ ತಮ್ಮ ಬಗ್ಗೆ ಚಿಂತಿಸುತ್ತಾರೆ ಮತ್ತು ಆದಷ್ಟು ಹೆಚ್ಚಾಗಿ ತಮ್ಮ ಆಸೆ-ಅಭಿಲಾಷೆಗಳನ್ನು ತಣಿಸಿಕೊಳ್ಳಲು ನೋಡುತ್ತಾರೆ.”
ಪ್ರಿನ್ಸ್‌ಟನ್ ವಿಶ್ವವಿದ್ಯಾನಿಲಯದ ಸಮಾಜಶಾಸ್ತ್ರಜ್ಞರಾಗಿರುವ ರಾಬರ್ಟ್ ವೂತ್‌ನೌ, ಅಮೆರಿಕದಲ್ಲಿರುವ ಜನರು ಈಗ ಹಣದಾಸೆಯುಳ್ಳವರಾಗಿದ್ದಾರೆ, ಆದರೆ ಹಿಂದಿನ ಪೀಳಿಗೆಯ ಜನರು ಇಷ್ಟೊಂದು ಹಣದಾಸೆಯುಳ್ಳವರಾಗಿರಲಿಲ್ಲ ಎಂದು ಜನಾಭಿಪ್ರಾಯದ ಸಂಗ್ರಹಣೆಯಿಂದ ಕಂಡುಕೊಂಡರು. ಅವರ ಅಧ್ಯಯನಕ್ಕನುಸಾರ, “ಇತರರಿಗೆ ಮರ್ಯಾದೆ ಕೊಡುವುದು, ಕೆಲಸದ ಸ್ಥಳದಲ್ಲಿ ಪ್ರಾಮಾಣಿಕರಾಗಿರುವುದು ಮತ್ತು ಸಮಾಜಸೇವೆಯಂತಹ ಅನೇಕ ಮೌಲ್ಯಗಳನ್ನು ಈ ಹಣದಾಸೆಯು ಅದುಮಿಬಿಟ್ಟಿದೆ ಎಂದು ಅನೇಕ ಅಮೆರಿಕನ್ನರು ನೆನಸುತ್ತಾರೆ.”
ಸಮಾಜದಲ್ಲಿ ಲೋಭವು ಇನ್ನೂ ಹೆಚ್ಚಾಗುತ್ತಿದೆ. ಏಕೆಂದರೆ, ಕಾರ್ಮಿಕರು ಹೆಚ್ಚು ವೇತನದ ಬೇಡಿಕೆಗಳನ್ನು ಮುಂದಿಡಬಾರದು ಎಂದು ವ್ಯಾಪಾರ-ವಹಿವಾಟುಗಳ ನಿರ್ವಾಹಕರು ಹೇಳುತ್ತಿರುವಾಗ, ಇವರೇ ದೊಡ್ಡ ಮೊತ್ತದ ವೇತನವನ್ನು ಹಾಗೂ ನಿವೃತ್ತಿಯಿಂದ ಸಿಗುವ ಹಣಕಾಸುಗಳನ್ನು ತೆಗೆದುಕೊಂಡಿದ್ದಾರೆ. “ಈ ವ್ಯಾಪಾರಸ್ಥರು ಲಾಭವನ್ನು ಬೆನ್ನಟ್ಟುತ್ತಾರೆ. ಆದರೆ ಸಮಸ್ಯೆಯೇನೆಂದರೆ, ಇವರ ಮನೋಭಾವಗಳು ಬೇಗನೆ ಇತರರಲ್ಲೂ ಹರಡುವಂತಹದ್ದಾಗಿದ್ದು, ಇವು ಜನಸಾಮಾನ್ಯರ ನೈತಿಕ ಮಟ್ಟವನ್ನು ಕೀಳ್ಮಟ್ಟಕ್ಕಿಳಿಸುತ್ತವೆ” ಎಂದು ಸ್ವೀಡನಿನ ಕ್ರೈಸ್ತ ಮಹಾಸಭೆಯ ನೀತಿಸೂತ್ರ ಹಾಗೂ ದೇವತಾಶಾಸ್ತ್ರದ ಜಂಟಿ ಪ್ರೊಫೆಸರರಾಗಿರುವ ಷೆಲ್ ಊವ ನಿಲ್‌ಸನ್ ಹೇಳುತ್ತಾರೆ. “ಇದು ಸಮಾಜದಲ್ಲಿ ಮತ್ತು ವೈಯಕ್ತಿಕ ಮಟ್ಟದಲ್ಲಿ, ನೈತಿಕತೆಯ ಮೇಲೆ ವಿಧ್ವಂಸಕ ಪರಿಣಾಮವನ್ನು ಬೀರಿದೆ.”
ಮನೋರಂಜನೆಯ ಛಾಪು
20ನೇ ಶತಮಾನದ ಕೊನೆಯ ಅರ್ಧ ಭಾಗದಲ್ಲಾದ ಕ್ಷಿಪ್ರಗತಿಯ ನೈತಿಕ ಅಧಃಪತನಕ್ಕೆ ಇನ್ನೊಂದು ಮುಖ್ಯ ಅಂಶವು, ಸಮೂಹ ಮಾಧ್ಯಮದ ಸಂಸ್ಕೃತಿಯಾಗಿದೆ. “ಹೊಸ ಮೌಲ್ಯಗಳನ್ನು ಪರಿಚಯಿಸುವವರು ಟೆಲಿವಿಷನ್ ನಿರ್ಮಾಪಕರು, ಚಲನಚಿತ್ರದ ಪ್ರತಿಷ್ಠಿತ ವ್ಯಕ್ತಿಗಳು, ಫ್ಯಾಷನ್ ಜಾಹೀರಾತುದಾರರು, ಗ್ಯಾಂಗ್ಸ್‌ಟಾ ರ್ಯಾಪ್ ಸಂಗೀತಗಾರರು ಮತ್ತು ಈ ಇಲೆಕ್ಟ್ರಾನಿಕ್ ಸಮೂಹ ಮಾಧ್ಯಮದ ಸಾಂಸ್ಕೃತಿಕ ಜಾಲದಲ್ಲಿ ಒಳಗೂಡಿರುವ ಇನ್ನಿತರ ಪ್ರಭಾವಶಾಲಿ ವ್ಯಕ್ತಿಗಳೇ ಆಗಿದ್ದಾರೆ” ಎಂದು ಸೆನೆಟರ್ ಲೀಬರ್‌ಮಾನ್ ಹೇಳುತ್ತಾರೆ. “ನವೀನ ವಿಷಯಗಳ ಈ ಸ್ಥಾಪಕರಿಗೆ, ನಮ್ಮ ಸಂಸ್ಕೃತಿಯ ಮೇಲೆ ಮತ್ತು ಅದರಲ್ಲೂ ವಿಶೇಷವಾಗಿ ನಮ್ಮ ಮಕ್ಕಳ ಮೇಲೆ ಬಲವಾದ ಹಿಡಿತವಿದೆ. ಮತ್ತು ಇವರಿಗೆ ತಾವು ಹಾನಿಕರವಾದ ಮೌಲ್ಯಗಳನ್ನು ಹರಡಿಸುತ್ತಿದ್ದೇವೆಂಬ ಚಿಂತೆಯೇ ಇಲ್ಲ.”
ಕ್ಯಾನಿಬಲ್ ಕಾರ್ಪ್ಸ್ (ನರಭಕ್ಷಕ ಕಳೇಬರ) ಎಂಬ ಹೆಸರನ್ನು ಹೊಂದಿರುವ ಹೆವಿ ಮೆಟಲ್ ಗುಂಪೊಂದರ ಒಂದು ಹಾಡಿನ ಉದಾಹರಣೆಯೊಂದನ್ನು ಲೀಬರ್‌ಮಾನ್ ನೀಡುತ್ತಾರೆ. ಆ ಹಾಡಿನಲ್ಲಿ, ಕತ್ತಿಯನ್ನು ತೋರಿಸಿ, ಬೆದರಿಸಿ ಒಬ್ಬ ಮಹಿಳೆಯ ಮೇಲೆ ನಡೆಸಲ್ಪಟ್ಟ ಅತ್ಯಾಚಾರವನ್ನು ಈ ಗಾಯಕರು
ಸವಿವರವಾಗಿ ವರ್ಣಿಸುತ್ತಾರೆ. ಈ ರೆಕಾರ್ಡನ್ನು ಮಾರುಕಟ್ಟೆಯಿಂದ ಹಿಂದೆತೆಗೆದುಕೊಳ್ಳುವಂತೆ ಲೀಬರ್‌ಮಾನ್ ಮತ್ತು ಇವರ ಒಬ್ಬ ಸಹೋದ್ಯೋಗಿಯು ರೆಕಾರ್ಡ್ ಕಂಪನಿಗೆ ಕೇಳಿಕೊಂಡರಾದರೂ, ಕಂಪನಿಯು ಅದನ್ನು ಕಿವಿಗೆ ಹಾಕಿಕೊಳ್ಳಲಿಲ್ಲ ಎಂದು ಲೀಬರ್‌ಮಾನ್ ಹೇಳುತ್ತಾರೆ.ಆದುದರಿಂದ, ಇಂದು ಜವಾಬ್ದಾರಿಯುತ ಹೆತ್ತವರು, ತಮ್ಮ ಮಕ್ಕಳ ಮೇಲೆ ಪ್ರಭಾವ ಬೀರಿ, ಬೆಳೆಸಿ, ದೊಡ್ಡವರನ್ನಾಗಿ ಯಾರು ಮಾಡುತ್ತಾರೆ ಎಂಬ ವಿಷಯದಲ್ಲಿ ಸಮೂಹ ಮಾಧ್ಯಮದ ಸಂಸ್ಕೃತಿಯೊಂದಿಗೆ ಸ್ಪರ್ಧೆಗಿಳಿದಿದ್ದಾರೆ. ಆದರೆ ಇದರ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳದ ಹೆತ್ತವರಿರುವ ಕುಟುಂಬಗಳ ಗತಿಯೇನು? “ಆಗ ಸಮೂಹ ಮಾಧ್ಯಮವೇ ಗೆಲ್ಲುತ್ತದೆ. ಒಂದು ಮಗುವು ಟಿವಿಯಲ್ಲಿ, ಚಲನಚಿತ್ರದಲ್ಲಿ ಏನನ್ನು ನೋಡುತ್ತದೋ ಹಾಗೂ ಸಿಡಿ ಪ್ಲೇಯರಿಂದ ಏನನ್ನು ಕಲಿಯುತ್ತದೋ, ಅದು ಮಗುವಿನ ಸರಿತಪ್ಪು ಭಾವನೆಯನ್ನು ಮತ್ತು ಆದ್ಯತೆಗಳನ್ನು ರೂಪಿಸುತ್ತದೆ.” ಇತ್ತೀಚೆಗೆ ಬಂದಿರುವ ಇಂಟರ್‌ನೆಟ್ ಅನ್ನು ಸಹ ಈ ಪಟ್ಟಿಗೆ ನಾವು ಸೇರಿಸಬಹುದು.
ಮರಳಿ “ನೈತಿಕ ಶಿಲಾಯುಗಕ್ಕೆ”
ಈ ಕೆಟ್ಟ ಪ್ರಭಾವಗಳು, ಯುವ ಜನರ ಮೇಲೆ ಯಾವ ರೀತಿಯಲ್ಲಿ ಪರಿಣಾಮವನ್ನು ಬೀರಿವೆ? ಒಂದು ವಿಷಯವನ್ನು ಹೇಳುವುದಾದರೆ, ಇತ್ತೀಚಿನ ವರ್ಷಗಳಲ್ಲಿ ಮಕ್ಕಳ ಮೇಲೆ ಹಾಗೂ ವಯಸ್ಕರ ಮೇಲೆ, ಹೆಚ್ಚಾಗಿ ಮಕ್ಕಳು ಹಾಗೂ ಹದಿಹರೆಯದವರೇ ಬರ್ಬರ ಕೃತ್ಯಗಳನ್ನು ನಡೆಸಿದ್ದಾರೆ.
ಇಸವಿ 1998ರಲ್ಲಿ ಸ್ವೀಡನಿನಲ್ಲಿ ಮೈನಡುಗಿಸುವಂತಹ ಒಂದು ಸಂಗತಿಯು ನಡೆಯಿತು. ಇಬ್ಬರು ಹುಡುಗರು, ಒಬ್ಬನು ಐದು ವರ್ಷದವನು ಮತ್ತೊಬ್ಬ ನಾಲ್ಕು ವರ್ಷದವನು ಸೇರಿಕೊಂಡು, ತಮ್ಮೊಂದಿಗೆ ಆಟವಾಡುತ್ತಿದ್ದ ನಾಲ್ಕು ವರ್ಷದ ಮಗುವನ್ನು ಉಸಿರುಕಟ್ಟಿಸಿ ಸಾಯಿಸಿಬಿಟ್ಟರು! ಪರಿಸ್ಥಿತಿ ಕೈಮೀರಿಹೋಗುತ್ತಿರುವಾಗ ಅದನ್ನು ಮಾಡಬೇಡ ಎಂದು ಹೇಳುವ ಅಂತರ್ಗತವಾಗಿರುವ ಪ್ರತಿಬಂಧಕ ಶಕ್ತಿ ಮಕ್ಕಳಲ್ಲಿ ಇಲ್ಲವೋ? ಎಂದು ಅನೇಕರು ಪ್ರಶ್ನೆಯನ್ನು ಹಾಕಿದರು. ಈ ಅರ್ಥವತ್ತಾದ ಹೇಳಿಕೆಯನ್ನು ಮಕ್ಕಳ ಮನೋವೈದ್ಯೆಯಾದ ಒಬ್ಬಳು ನೀಡಿದ್ದು: “ಪರಿಸ್ಥಿತಿ ಕೈಮೀರಿಹೋಗುತ್ತಿರುವಾಗ ಅದನ್ನು ತಡೆಯುವ ಪ್ರತಿಬಂಧಕ ಶಕ್ತಿಯು, ಬೆಳೆಸಿಕೊಳ್ಳಬೇಕಾದ ಒಂದು ವಿಷಯವಾಗಿದೆ. . . . ಇದು, ಮಕ್ಕಳ ಆದರ್ಶ ವ್ಯಕ್ತಿಗಳು ಯಾರಾಗಿದ್ದಾರೆ ಹಾಗೂ ಅವರು ತಮ್ಮ ಅಕ್ಕಪಕ್ಕದಲ್ಲಿರುವ ವಯಸ್ಕರಿಂದ ಏನನ್ನು ಕಲಿತುಕೊಂಡಿದ್ದಾರೆ ಎಂಬುದರ . . . ಮೇಲೆ ಹೊಂದಿಕೊಂಡಿರುತ್ತದೆ.”
ಹಿಂಸಾತ್ಮಕ ಅಪರಾಧಿಗಳಲ್ಲೂ ಇಂತಹದ್ದೇ ಸ್ವಭಾವವನ್ನು ನೋಡಸಾಧ್ಯವಿದೆ. ಸ್ವೀಡನಿನಲ್ಲಿ ಮನೋವೈದ್ಯ ಪ್ರೊಫೆಸರರಾಗಿರುವ ಸ್ಟೇನ್ ಲೇವಾಂಡರ್ ಅವರಿಗನುಸಾರ, ಇಂದು ಸೆರೆಮನೆಯಲ್ಲಿರುವ ಸುಮಾರು 15ರಿಂದ 20 ಪ್ರತಿಶತದ ಸೆರೆವಾಸಿಗಳು ಮನೋವಿಕೃತರಾಗಿದ್ದಾರೆ. ಇವರು ತೀರ ಸ್ವಾರ್ಥಿಗಳು, ಸಹಾನುಭೂತಿಯಿಲ್ಲದವರು ಮತ್ತು ಸರಿತಪ್ಪು ಏನೆಂಬುದನ್ನು ಅರ್ಥಮಾಡಿಕೊಳ್ಳಲು ಒಂದೋ ಅಶಕ್ತರು ಇಲ್ಲವೇ ಅರ್ಥಮಾಡಿಕೊಳ್ಳಲು ಇಷ್ಟಪಡದವರಾಗಿದ್ದಾರೆ. ಸಾಮಾನ್ಯರಂತೆ ತೋರುವ ಮಕ್ಕಳು ಹಾಗೂ ಯುವ ಜನರ ನೈತಿಕ ಪ್ರಜ್ಞೆಯು ಸಹ ಮೊಂಡಾಗುತ್ತಿರುವುದನ್ನು ಅವಲೋಕನಗಾರರು ಗಮನಿಸಿದ್ದಾರೆ. “ನಾವು ಮರಳಿ ಒಂದು ನೈತಿಕ ಶಿಲಾಯುಗಕ್ಕೆ ಹೋಗಿದ್ದೇವೆ” ಎಂದು ತತ್ತ್ವಜ್ಞಾನದ ಪ್ರೊಫೆಸರರಾದ ಕ್ರಿಸ್ಟೀನ ಕೊಫ್ ಸೊಮರ್ಸ್ ಹೇಳುತ್ತಾರೆ. ತನ್ನ ಎಳೆಯ ವಿದ್ಯಾರ್ಥಿಗಳಿಗೆ ಯಾವುದು ಸರಿ ಮತ್ತು ಯಾವುದು ತಪ್ಪು ಎಂದು ಪ್ರಶ್ನಿಸುವಾಗ, ಹೆಚ್ಚಿನವರು ಗಲಿಬಿಲಿಗೊಂಡವರಾಗಿ ತೋರುತ್ತಾರೆ ಎಂಬುದನ್ನು ಇವರು ಗಮನಿಸಿದರು. ಮತ್ತು ಈ ವಿದ್ಯಾರ್ಥಿಗಳು ಸರಿ ಅಥವಾ ತಪ್ಪು ಅನ್ನುವಂತಹ ವಿಷಯವೇ ಇಲ್ಲ ಎಂದು ಉತ್ತರಿಸುತ್ತಾರೆ. ಪ್ರತಿಯೊಬ್ಬನು ತನಗೆ ಯಾವುದು ಉತ್ತಮವಾಗಿದೆ ಎಂಬ ನಿರ್ಣಯವನ್ನು ಸ್ವತಃ ತೆಗೆದುಕೊಳ್ಳಬೇಕು ಎಂಬುದೇ ಅವರ ನಂಬುಗೆಯಾಗಿದೆ.
ಇತ್ತೀಚಿನ ಸಮಯಗಳಲ್ಲಿ, ಈ ಪ್ರೊಫೆಸರರ ಅನೇಕ ವಿದ್ಯಾರ್ಥಿಗಳು ಮನುಷ್ಯನ ಜೀವಕ್ಕೆ ಕೊಡಬೇಕಾದ ಗೌರವಾದರ ಮತ್ತು ಮಾನವನ ಜೀವದ ಮೌಲ್ಯಕ್ಕೆ ಆಕ್ಷೇಪಣೆಯನ್ನು ಎತ್ತಿದ್ದಾರೆ. ಉದಾಹರಣೆಗೆ, ತಮ್ಮ ಸಾಕುಪ್ರಾಣಿ ಅಥವಾ ತಮಗೆ ಪರಿಚಯವಿಲ್ಲದ ಮನುಷ್ಯನೊಬ್ಬನ ಜೀವವು ಅಪಾಯದಲ್ಲಿರುವಾಗ, ಯಾರನ್ನು ನೀವು ಕಾಪಾಡುವಿರಿ ಎಂದು ಇವರಿಗೆ ಕೇಳಿದಾಗ, ಅನೇಕರು ನಾವು ಪ್ರಾಣಿಯನ್ನು ಕಾಪಾಡುವೆವು ಎಂದು ಹೇಳಿದರು.
“ಇದಕ್ಕೆ ಕಾರಣ ಯುವ ಜನರು ಅಜ್ಞಾನಿಗಳು, ಅಪನಂಬಿಗಸ್ತರು, ಕ್ರೂರರು ಅಥವಾ ವಂಚಕರಾಗಿದ್ದಾರೆ ಎಂದಲ್ಲ. . . . ಬದಲಿಗೆ ನೇರವಾಗಿ ಹೇಳುವುದಾದರೆ, ಅವರಿಗೆ ಸರಿ ಯಾವುದು, ತಪ್ಪು ಯಾವುದು ಎಂಬ ಅರಿವೇ ಇಲ್ಲ” ಎಂದು ಪ್ರೊಫೆಸರ್ ಸೊಮರ್ಸ್ ಹೇಳುತ್ತಾರೆ. ತಪ್ಪು ಅಥವಾ ಸರಿಯೆನ್ನುವ ವಿಚಾರವು ಇದೆಯೋ ಎಂದು ಇಂದು ಅನೇಕ ಯುವ ಜನರು ಪ್ರಶ್ನಿಸುತ್ತಾರೆಂದು ಅವರು ಹೇಳುತ್ತಾರೆ. ಮತ್ತು ಇಂತಹ ಒಂದು ಮನೋಭಾವವು ಸಮಾಜಕ್ಕೆ ಒಂದು ದೊಡ್ಡ ಬೆದರಿಕೆಯಾಗಿದೆ ಎಂದು ಅವರು ನೆನಸುತ್ತಾರೆ.
ಆದುದರಿಂದ, ನಮ್ಮ ಸಮಯದಲ್ಲಿ ನೈತಿಕತೆಯು ಶಿಥಿಲವಾಗುತ್ತಾ ಇದೆ ಎಂಬುದು ಕಟುಸತ್ಯ. ಇದರಿಂದ ಘೋರ ಪರಿಣಾಮಗಳು ಉಂಟಾಗುವವು ಎಂದು ಅನೇಕರು ಭಯಪಡುತ್ತಾರೆ. ಹಿಂದೆ ಉಲ್ಲೇಖಿಸಲ್ಪಟ್ಟ ಡೀ ಟ್ಸೀಟ್ ಎಂಬ ಪತ್ರಿಕೆಯಲ್ಲಿನ ಲೇಖನವು ಹೇಳುವುದು, ಇಂದಿರುವ ಮುಕ್ತ ಮಾರುಕಟ್ಟೆಯು ಕ್ರಮೇಣವಾಗಿ “ಅವನತಿ ಹೊಂದಿ, ಸಮಾಜವಾದಿ ವ್ಯವಸ್ಥೆಯು ಇತ್ತೀಚೆಗೆ ಹೇಗೆ ಕುಸಿಯಿತೋ ಹಾಗೇ ಒಂದು ದಿನ ಸಹ ನೆಲಕಚ್ಚಸಾಧ್ಯವಿದೆ.”
ಇವೆಲ್ಲವು ಏನನ್ನು ಸೂಚಿಸುತ್ತವೆ? ಯಾವ ರೀತಿಯ ಭವಿಷ್ಯತ್ತನ್ನು ನಾವು ಎದುರುನೋಡಬೇಕು?
[ಪುಟ 6, 7ರಲ್ಲಿರುವ ಚಿತ್ರಗಳು]
“ಹೊಸ ಮೌಲ್ಯಗಳನ್ನು ಪರಿಚಯಿಸುವವರು ಟೆಲಿವಿಷನ್ ನಿರ್ಮಾಪಕರು, ಚಲನಚಿತ್ರದ ಪ್ರತಿಷ್ಠಿತ ವ್ಯಕ್ತಿಗಳು, ಫ್ಯಾಷನ್ ಜಾಹೀರಾತುದಾರರು, ಗ್ಯಾಂಗ್ಸ್‌ಟಾ ರ್ಯಾಪ್ ಸಂಗೀತಗಾರರು . . . ಆಗಿದ್ದಾರೆ.”