ಹಕ್ಕಿಯು ಒಬ್ಬ ಕೈದಿಗೆ ಏನನ್ನು ಕಲಿಸಬಲ್ಲದು?
ಹಕ್ಕಿಯು ಒಬ್ಬ ಕೈದಿಗೆ ಏನನ್ನು ಕಲಿಸಬಲ್ಲದು?
ದಕ್ಷಿಣ ಆಫ್ರಿಕದ ಎಚ್ಚರ! ಸುದ್ದಿಗಾರರಿಂದ
ದಕ್ಷಿಣ ಆಫ್ರಿಕದ ಡರ್ಬನ್‌ನಿಂದ ಪ್ರಕಾಶಿಸಲ್ಪಡುವ ಸಂಡೇ ಟ್ರಿಬ್ಯುನ್ ವಾರ್ತಾಪತ್ರಿಕೆಗನುಸಾರ, ಪಾಲ್ಸ್‌ಮಾರ್ ಸೆರೆಮನೆಯಲ್ಲಿರುವ ಕೈದಿಗಳ ಹೃದಯಗಳನ್ನು ಮೃದುಗೊಳಿಸುವುದರಲ್ಲಿ ಹಕ್ಕಿಗಳು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತಿವೆ. ಸೆರೆಮನೆಯಲ್ಲಿ (ಸೆಲ್‌ನಲ್ಲಿ) ಪುಟ್ಟಗಿಳಿಗಳ ಮತ್ತು ಲವ್‌ಬರ್ಡ್ಸ್‌ಗಳ ಆರೈಕೆ ಮಾಡುವ ಒಂದು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಸದ್ಯಕ್ಕೆ 14 ಕೈದಿಗಳು ಭಾಗವಹಿಸುತ್ತಿದ್ದಾರೆ.
ಈ ಕಾರ್ಯಕ್ರಮದಲ್ಲಿ ಯಾವ ವಿಧಾನವನ್ನು ಅನುಸರಿಸುತ್ತಾರೆ? ಪ್ರತಿಯೊಬ್ಬ ಕೈದಿಯು, ತನ್ನ ಸೆರೆಮನೆಯ ಕೋಣೆಯಲ್ಲಿ ಒಂದು ಕಾವುಗೂಡನ್ನು ಅಂದರೆ, ಮೊಟ್ಟೆಗಳಿಗೆ ಕಾವುಕೊಡುವ ಸಾಧನವನ್ನು ಇಡುತ್ತಾನೆ. ಸೆರೆವಾಸಿಯು ಮರಿಯೊಂದರ ಆರೈಕೆಯನ್ನು ಮಾಡುತ್ತಾನೆ ಮತ್ತು ಹಗಲೂರಾತ್ರಿ ತಾಸಿಗೊಮ್ಮೆ ಅಥವಾ ಎರಡು ತಾಸಿಗೊಮ್ಮೆ, ಸುಮಾರು ಐದು ವಾರಗಳ ವರೆಗೆ ಆ ನಿರ್ಗತಿಕ ಪುಟ್ಟಜೀವಿಗೆ ತನ್ನ ಕೈಯಿಂದಲೇ ಆಹಾರವನ್ನು ಉಣಿಸುತ್ತಾನೆ. ಆಮೇಲೆ ಹಕ್ಕಿಯನ್ನು ಒಂದು ಗೂಡಿನಲ್ಲಿ ಇರಿಸುತ್ತಾನೆ. ಈ ಗೂಡು ಸೆರೆಮನೆಯ ಕೋಣೆಯಲ್ಲೇ ಇರುತ್ತದೆ. ಹಕ್ಕಿಯು ದೊಡ್ಡದಾದಾಗ, ಅದನ್ನು ಸಾರ್ವಜನಿಕರಿಗೆ ಮಾರಲಾಗುತ್ತದೆ. ಕೆಲವು ಕೈದಿಗಳು ತಮ್ಮ ಹಕ್ಕಿಗಳೊಂದಿಗೆ ಬಹಳ ಆಪ್ತರಾಗುತ್ತಾರೆ. ಅನಿವಾರ್ಯವಾಗಿ, ಹಕ್ಕಿಗಳಿಂದ ಅಗಲಬೇಕಾಗಿ ಬಂದಾಗ ಅವರು ಕಣ್ಣೀರಿಡುತ್ತಾರೆ.
ಹಕ್ಕಿಗಳೊಂದಿಗೆ ಪ್ರತಿದಿನವೂ ಮಾತಾಡುತ್ತಾ ಅವುಗಳ ಆರೈಕೆಯನ್ನು ಮಾಡಿದ ನಂತರ ಕೆಲವು ನಿರ್ದಯಿ ಪಾತಕಿಗಳು ಸಹ ಹೆಚ್ಚು ಕೋಮಲರು ಮತ್ತು ಸೌಮ್ಯ ಸ್ವಭಾವದವರು ಆಗಿದ್ದಾರೆ ಎಂಬುದು ತೋರಿಬಂದಿದೆ. ಒಬ್ಬ ಸೆರೆವಾಸಿಯು ಹೇಳಿದ್ದು: “ನಾನು ಹಕ್ಕಿಗಳನ್ನು ಪಳಗಿಸುತ್ತಿರುವಾಗ ಅವು ನನ್ನನ್ನೂ ಪಳಗಿಸಿರುತ್ತವೆ.” ಹಕ್ಕಿಗಳು ತನಗೆ ತಾಳ್ಮೆ ಮತ್ತು ಆತ್ಮಸಂಯಮವನ್ನು ಕಲಿಸಿವೆ ಎಂದು ಇನ್ನೊಬ್ಬ ಕೈದಿಯು ಹೇಳುತ್ತಾನೆ. ಹೆತ್ತವರಾಗಿರುವುದು “ಒಂದು ದೊಡ್ಡ ಜವಾಬ್ದಾರಿಯಾಗಿದೆ” ಎಂಬ ಮನವರಿಕೆಯು ಸೆರೆಮನೆಯಲ್ಲಿ ಈ ಹಕ್ಕಿಗಳ ಆರೈಕೆಮಾಡಿದ ಒಬ್ಬ ಕಳ್ಳನಿಗಾಯಿತು. ತಾನು ಜೈಲಿನಿಂದ ಹೊರಗಿದ್ದಾಗ ತನ್ನ ಸ್ವಂತ ಮಕ್ಕಳ ಕಡೆಗೆ ಇಂತಹ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಅವನು ತಪ್ಪಿದ್ದನೆಂದು ಒಪ್ಪಿಕೊಳ್ಳುತ್ತಾನೆ.
ಹಕ್ಕಿಗಳ ಆರೈಕೆಯನ್ನು ಮಾಡುವುದು ಕೈದಿಗಳಿಗೆ ಇನ್ನೊಂದು ವಿಧದಲ್ಲಿ ಪ್ರಯೋಜನವನ್ನು ತಂದಿದೆ. ಈ ಕಾರ್ಯಕ್ರಮವನ್ನು ಆರಂಭಿಸಿದ ವೀಕಸ್ ಗ್ರೀಸೀ ಹೇಳುವಂತೆ, “ಹಕ್ಕಿಗಳ ಆರೈಕೆ ಮಾಡುವುದನ್ನು ಜೈಲಿನಲ್ಲಿ ಕಲಿತುಕೊಳ್ಳುವುದರಿಂದ ಈ ಕೈದಿಗಳು ಜೈಲಿನಿಂದ ಬಿಡುಗಡೆಯಾದಾಗ ಹಕ್ಕಿಗಳನ್ನು ಬೆಳೆಸುವ ಅಥವಾ ಪಶುವೈದ್ಯರೊಂದಿಗೆ ಕೆಲಸಮಾಡುವ ಅವಕಾಶವು ಸಹ ಸಿಗಸಾಧ್ಯವಿದೆ.”