ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಹತಾಶೆಯನ್ನು ಹೇಗೆ ನಿಭಾಯಿಸಸಾಧ್ಯವಿದೆ?

ಹತಾಶೆಯನ್ನು ಹೇಗೆ ನಿಭಾಯಿಸಸಾಧ್ಯವಿದೆ?

ಬೈಬಲಿನ ದೃಷ್ಟಿಕೋನ

ಹತಾಶೆಯನ್ನು ಹೇಗೆ ನಿಭಾಯಿಸಸಾಧ್ಯವಿದೆ?

ಪ್ರತಿಯೊಬ್ಬರೂ ಸ್ವಲ್ಪಮಟ್ಟಿಗಾದರೂ ಹತಾಶೆಯನ್ನು ಅನುಭವಿಸುತ್ತಾರೆ. ಆದರೂ, ಕೆಲವರಿಗೆ ಹತಾಶೆಯ ಭಾವನೆಗಳು ಎಷ್ಟು ತೀವ್ರವಾಗಿರುತ್ತವೆಂದರೆ, ಬದುಕಿರುವುದಕ್ಕಿಂತಲೂ ಸಾವೇ ಲೇಸೆಂದು ಅವರಿಗೆ ಅನಿಸುತ್ತದೆ.

ದೇವರ ನಂಬಿಗಸ್ತ ಸೇವಕರು ಸಹ ಹತಾಶೆಯನ್ನು ಉಂಟುಮಾಡುವಂತಹ ಸಮಸ್ಯೆಗಳನ್ನು ಹಾಗೂ ಒತ್ತಡಗಳನ್ನು ಎದುರಿಸುತ್ತಾರೆ ಎಂದು ಬೈಬಲು ತೋರಿಸುತ್ತದೆ. ಎಲೀಯನ ಮತ್ತು ಯೋಬನ ಉದಾಹರಣೆಯನ್ನು ತೆಗೆದುಕೊಳ್ಳಿರಿ. ಇವರಿಬ್ಬರಿಗೂ ದೇವರೊಂದಿಗೆ ಒಳ್ಳೆಯ ಸಂಬಂಧವಿತ್ತು. ಎಲೀಯನು ತನ್ನ ಪ್ರಾಣರಕ್ಷಣೆಗಾಗಿ ದುಷ್ಟ ರಾಣಿಯಾದ ಈಜೆಬೆಲಳಿಂದ ದೂರ ಓಡಿಹೋದಾಗ, “ನನ್ನ ಪ್ರಾಣವನ್ನು ತೆಗೆದುಬಿಡು” ಎಂದು ಅವನು ಯೆಹೋವನಲ್ಲಿ ಮೊರೆಯಿಟ್ಟನು. (1 ಅರಸು 19:1-4) ನೀತಿವಂತನಾಗಿದ್ದ ಯೋಬನು ಎಷ್ಟು ಕಷ್ಟವನ್ನು ಅನುಭವಿಸಿದನೆಂದರೆ, ಒಂದರ ಮೇಲೊಂದು ವಿಪತ್ತು ಅವನ ಮೇಲೆ ಬಂದೆರಗಿತು. ಅವನಿಗೆ ತಗಲಿದ್ದ ಕೆಟ್ಟ ಕುರುಗಳ ರೋಗ ಮತ್ತು ಅವನ ಹತ್ತು ಮಂದಿ ಮಕ್ಕಳ ಮರಣವು ಸಹ ಈ ವಿಪತ್ತಿನಲ್ಲಿ ಒಳಗೂಡಿತ್ತು. (ಯೋಬ 1:13-19; 2:7, 8) ಅವನಲ್ಲಿ ಉಂಟಾದ ಹತಾಶೆಯ ಭಾವನೆಯು, “ಈ ಕಷ್ಟಗಳನೆಲ್ಲ ಅನುಭವಿಸುವುದಕ್ಕೆ ಬದಲಾಗಿ ನಾನು ಸಾಯುವುದೇ ಲೇಸು” ಎಂದು ಹೇಳುವಷ್ಟರ ಮಟ್ಟಿಗೆ ಅವನ ಮೇಲೆ ಪರಿಣಾಮವನ್ನು ಬೀರಿತು. (ಯೋಬ 7:15, ದ ನ್ಯೂ ಇಂಗ್ಲಿಷ್‌ ಬೈಬಲ್‌) ದೇವರ ಈ ನಂಬಿಗಸ್ತ ಪುರುಷರ ಚಿಂತೆಯು ಎಷ್ಟು ಹೆಚ್ಚಾಗಿತ್ತೆಂದರೆ, ತಮಗಿನ್ನು ಅದನ್ನು ಸಹಿಸಿಕೊಳ್ಳಲಾಗುವುದಿಲ್ಲ ಎಂಬ ಅನಿಸಿಕೆ ಅವರಿಗಾಯಿತು ಎಂಬುದು ಈ ಉದಾಹರಣೆಗಳಿಂದ ಸ್ಪಷ್ಟವಾಗುತ್ತದೆ.

ಇಂದು ಕೂಡ ಹತಾಶೆಗೆ ಅನೇಕ ಕಾರಣಗಳಿರಬಹುದು. ಅವುಗಳಲ್ಲಿ ಕೆಲವು, ವೃದ್ಧಾಪ್ಯದ ವೇದನಾಮಯ ಸಮಸ್ಯೆಗಳಾಗಿರಬಹುದು, ಬಾಳಸಂಗಾತಿಯ ಮರಣವು ಕಾರಣವಾಗಿರಬಹುದು, ಇಲ್ಲವೆ ಹಣಕಾಸಿನ ಮುಗ್ಗಟ್ಟಾಗಿರಬಹುದು. ಇನ್ನೂ ಕೆಲವು ಕಾರಣಗಳು, ಸತತವಾದ ಒತ್ತಡವಾಗಿರಬಹುದು, ಜೀವನದಲ್ಲಾಗಿರುವ ಕಹಿ ಅನುಭವಗಳ ಪರಿಣಾಮಗಳಾಗಿರಬಹುದು, ಇಲ್ಲವೆ ಕೌಟುಂಬಿಕ ಸಮಸ್ಯೆಗಳಾಗಿರಬಹುದು. ಈ ಎಲ್ಲ ಕಾರಣಗಳಿಂದಾಗಿ, ಇಂಥ ವ್ಯಕ್ತಿಗಳಿಗೆ ಸಾಗರದ ಮಧ್ಯದಲ್ಲಿ ಸಿಕ್ಕಿಕೊಂಡು ಒದ್ದಾಡುತ್ತಿರುವಂತೆ ಅನಿಸಬಹುದು. ಮತ್ತು ಏಳುತ್ತಿರುವ ಪ್ರತಿಯೊಂದು ಅಲೆಯು ದಡಸೇರದಂತೆ ಅವರನ್ನು ತಡೆಯುತ್ತಿದೆಯೋ ಎಂಬಂತೆ ಅನಿಸಬಹುದು. ಒಬ್ಬ ವ್ಯಕ್ತಿಯು ಹೇಳಿದ್ದು: “ನೀವು ಯಾವುದಕ್ಕೂ ಯೋಗ್ಯರಲ್ಲ ಎಂಬ ಅನಿಸಿಕೆ ಉಂಟಾಗುತ್ತದೆ. ಒಂದುವೇಳೆ ನೀವು ಸತ್ತರೂ, ನಿಮ್ಮನ್ನು ಯಾರೂ ನೆನಸಿಕೊಳ್ಳುವುದಿಲ್ಲ ಎಂದು ನಿಮಗನಿಸುತ್ತದೆ. ಒಬ್ಬನು ಅನುಭವಿಸುವ ಒಂಟಿತನವು ಕೆಲವೊಮ್ಮೆ ಸಹಿಸಲಸಾಧ್ಯವಾದದ್ದಾಗಿರುತ್ತದೆ.”

ಕೆಲವೊಮ್ಮೆ ಪರಿಸ್ಥಿತಿಗಳು ಬದಲಾಗಿ ಉತ್ತಮಗೊಂಡಾಗ ಈ ಹತಾಶೆಯ ಭಾವನೆಗಳೂ ಕಡಿಮೆಯಾಗಬಹುದು. ಆದರೆ ನಮ್ಮ ಪರಿಸ್ಥಿತಿಗಳು ಬದಲಾಗದಿರುವಲ್ಲಿ ಆಗೇನು? ಹತಾಶೆಯನ್ನು ನಿಭಾಯಿಸಲು ಬೈಬಲು ನಮಗೆ ಯಾವ ರೀತಿಯಲ್ಲಿ ಸಹಾಯ ಮಾಡಬಲ್ಲದು?

ಬೈಬಲು ಸಹಾಯ ಮಾಡಬಲ್ಲದು

ಎಲೀಯ ಮತ್ತು ಯೋಬರು ಕಷ್ಟಸಂಕಟಗಳಿಗೆ ಒಳಗಾಗಿದ್ದ ಸಮಯದಲ್ಲಿ ಅವರಿಗೆ ಆಸರೆಯಾಗಿರುವ ಸಾಮರ್ಥ್ಯ ಮತ್ತು ಶಕ್ತಿಯು ಯೆಹೋವನಲ್ಲಿತ್ತು. (1 ಅರಸು 19:10-12; ಯೋಬ 42:1-6) ಈ ಅರಿವು ಇಂದು ನಮಗೆ ಎಷ್ಟು ಸಾಂತ್ವನದಾಯಕವಾಗಿದೆ! ಬೈಬಲು ಹೇಳುವುದು: “ದೇವರು ನಮಗೆ ಆಶ್ರಯದುರ್ಗವಾಗಿದ್ದಾನೆ; ಆತನು ಇಕ್ಕಟ್ಟಿನಲ್ಲಿ ನಮಗೆ ವಿಶೇಷಸಹಾಯಕನು.” (ಕೀರ್ತನೆ 46:1; 55:22) ಹತಾಶೆಯು ನಮ್ಮನ್ನು ಸಂಪೂರ್ಣವಾಗಿ ಕಂಗೆಡಿಸಿಬಿಡುತ್ತಿದೆ ಎಂದು ಕೆಲವೊಮ್ಮೆ ಅನಿಸಬಹುದು. ಆದರೆ, ಯೆಹೋವನು ತನ್ನ ಧರ್ಮದ ಬಲಗೈಯನ್ನು ನಮಗೆ ಆಧಾರವನ್ನಾಗಿ ನೀಡುವನೆಂಬ ಭರವಸೆ ನಮಗಿದೆ. (ಯೆಶಾಯ 41:10) ನಾವು ಈ ಸಹಾಯವನ್ನು ಹೇಗೆ ಪಡೆದುಕೊಳ್ಳಸಾಧ್ಯವಿದೆ?

ಪ್ರಾರ್ಥನೆಯ ಮೂಲಕ, “ಎಲ್ಲಾ ಗ್ರಹಿಕೆಯನ್ನು ಮೀರುವ ದೇವಶಾಂತಿಯು . . . [ನಮ್ಮ] ಹೃದಯಗಳನ್ನೂ [ನಮ್ಮ] ಯೋಚನೆಗಳನ್ನೂ ಕ್ರಿಸ್ತ ಯೇಸುವಿನಲ್ಲಿ ಕಾಯುವದು” ಎಂದು ಬೈಬಲು ವಿವರಿಸುತ್ತದೆ. (ಫಿಲಿಪ್ಪಿ 4:6, 7) ನಾವು ತುಂಬ ವ್ಯಥೆಗೀಡಾಗಿರುವಾಗ, ನಮ್ಮ ಸಮಸ್ಯೆಗಳಿಗೆ ಪರಿಹಾರವೇ ಇಲ್ಲವೆಂದು ನಮಗನಿಸಬಹುದು. ಆದರೂ, ನಾವು “ಎಡೆಬಿಡದೆ ಪ್ರಾರ್ಥಿಸುವಲ್ಲಿ” (NW), ಯೆಹೋವನು ತಾಳಿಕೊಳ್ಳಲು ನಮಗೆ ಅಗತ್ಯವಿರುವಂತಹ ಬಲವನ್ನು ಒದಗಿಸಿ, ನಮ್ಮ ಹೃದಮನಗಳನ್ನು ಕಾಪಾಡುವನು.—ರೋಮಾಪುರ 12:12; ಯೆಶಾಯ 40:28-31; 2 ಕೊರಿಂಥ 1:3, 4; ಫಿಲಿಪ್ಪಿ 4:13.

ನಮ್ಮ ವಿಚಾರಗಳನ್ನು ಪ್ರಾರ್ಥನೆಯಲ್ಲಿ ಸ್ಪಷ್ಟವಾಗಿ ತಿಳಿಯಪಡಿಸುವ ಮೂಲಕ ನಾವು ಪ್ರಯೋಜನವನ್ನು ಪಡೆದುಕೊಳ್ಳುವೆವು. ನಮ್ಮ ಆಲೋಚನೆಗಳನ್ನು ಮಾತುಗಳಲ್ಲಿ ವ್ಯಕ್ತಪಡಿಸುವುದು ತುಂಬ ಕಷ್ಟಕರವಾಗಿರಬಹುದಾದರೂ, ನಮ್ಮ ಅನಿಸಿಕೆಗಳ ಕುರಿತು ಮತ್ತು ಸಮಸ್ಯೆಯ ಮೂಲಕಾರಣದ ಕುರಿತು ನಾವು ಯೆಹೋವನಿಗೆ ಬಿಚ್ಚುಮನಸ್ಸಿನಿಂದ ಹೇಳಬೇಕು. ಅಷ್ಟುಮಾತ್ರವಲ್ಲ, ಪ್ರತಿದಿನ ನಮಗೆ ಅಗತ್ಯವಿರುವ ಬಲವನ್ನು ನೀಡುವಂತೆ ಆತನ ಬಳಿ ಬೇಡಿಕೊಳ್ಳಬೇಕು. ಈ ವಿಷಯದಲ್ಲಿ ನಮಗೆ ಕೀರ್ತನೆಗಾರನು ಈ ಆಶ್ವಾಸನೆಯನ್ನು ಕೊಡುತ್ತಾನೆ: “ತನ್ನಲ್ಲಿ ಭಯಭಕ್ತಿಯುಳ್ಳವರ ಇಷ್ಟವನ್ನು [ಯೆಹೋವನು] ನೆರವೇರಿಸುತ್ತಾನೆ; ಅವರ ಕೂಗನ್ನು ಕೇಳಿ ರಕ್ಷಿಸುತ್ತಾನೆ.”—ಕೀರ್ತನೆ 145:19.

ಪ್ರಾರ್ಥಿಸುವುದು ಮಾತ್ರ ಸಾಕಾಗಲಾರದು. ನಾವು ಒಂಟಿಯಾಗಿರದಂತೆಯೂ ನೋಡಿಕೊಳ್ಳಬೇಕು. (ಜ್ಞಾನೋಕ್ತಿ 18:1) ಇತರರಿಗೆ ಸಹಾಯ ಮಾಡುವುದರಲ್ಲಿ ತಮ್ಮ ಸಮಯ ಹಾಗೂ ಶಕ್ತಿಯನ್ನು ಉಪಯೋಗಿಸುವುದರಿಂದ ಕೆಲವರು ಬಲವನ್ನು ಪಡೆದುಕೊಂಡಿದ್ದಾರೆ. (ಜ್ಞಾನೋಕ್ತಿ 19:17; ಲೂಕ 6:38) ಮರೀಯ * ಎಂಬ ಹೆಸರಿನ ಒಬ್ಬ ಸ್ತ್ರೀಯನ್ನು ತೆಗೆದುಕೊಳ್ಳಿ. ಅವಳು ಒಂದೇ ವರ್ಷದಲ್ಲಿ ಕುಟುಂಬದ ಎಂಟು ಮಂದಿ ಸದಸ್ಯರನ್ನು ಮರಣದಲ್ಲಿ ಕಳೆದುಕೊಂಡಿದ್ದಳು. ಅಷ್ಟುಮಾತ್ರವಲ್ಲದೆ, ಸ್ವತಃ ಅವಳೇ ಕ್ಯಾನ್ಸರ್‌ ರೋಗದಿಂದ ನರಳುತ್ತಿದ್ದಳು. ಹಾಸಿಗೆಯಿಂದ ಎದ್ದು, ಪುನಃ ಎಂದಿನಂತೆ ದೈನಂದಿನ ಕೆಲಸವನ್ನು ಮಾಡುವುದು ಮರೀಯಳಿಗೆ ತುಂಬಾ ಕಷ್ಟವಾಗುತ್ತಿತ್ತು. ಬೈಬಲಿನ ಕುರಿತು ಇತರರಿಗೆ ಕಲಿಸಲಿಕ್ಕಾಗಿ ಬಹುಮಟ್ಟಿಗೆ ಪ್ರತಿದಿನ ಅವಳು ಹೊರಗೆ ಹೋಗುತ್ತಿದ್ದಳು ಮತ್ತು ಕ್ರೈಸ್ತ ಕೂಟಗಳಿಗೆ ಕ್ರಮವಾಗಿ ಹಾಜರಾಗುತ್ತಿದ್ದಳು. ಆದರೆ ಮನೆಗೆ ಹಿಂದಿರುಗಿದ ಬಳಿಕ, ಒಮ್ಮೆಲೆ ಹತಾಶೆಯ ಭಾವನೆಯು ಅವಳನ್ನು ಮುತ್ತಿಕೊಳ್ಳುತ್ತಿತ್ತು. ಏನೇ ಆದರೂ, ತಾನು ಇತರರಿಗೆ ಹೇಗೆ ಸಹಾಯ ಮಾಡಸಾಧ್ಯವಿದೆ ಎಂಬುದರ ಮೇಲೆ ತನ್ನ ಮನಸ್ಸನ್ನು ಕೇಂದ್ರೀಕರಿಸುವ ಮೂಲಕ ಮರೀಯಳು ತನ್ನೆಲ್ಲ ದುಃಖವನ್ನು ಮರೆಯಲು ಶಕ್ತಳಾಗಿದ್ದಾಳೆ.

ಆದರೆ ಪ್ರಾರ್ಥಿಸುವುದು ನಮಗೆ ಕಷ್ಟಕರವಾಗಿ ಕಂಡುಬರುವಲ್ಲಿ ಅಥವಾ ಸ್ವಂತ ಪ್ರಯತ್ನಗಳಿಂದ ನಮ್ಮ ಒಂಟಿತನವನ್ನು ದೂರಮಾಡಲು ಅಸಾಧ್ಯವಾಗಿರುವಲ್ಲಿ ಆಗೇನು? ಹಾಗಿರುವಲ್ಲಿ, ನಾವು ಬೇರೆಯವರಿಂದ ಸಹಾಯವನ್ನು ಪಡೆದುಕೊಳ್ಳಲು ಪ್ರಯತ್ನಿಸಬೇಕು. “ಸಭೆಯ ಹಿರಿಯರ” ಬಳಿ ಸಹಾಯವನ್ನು ಕೇಳಿಕೊಳ್ಳುವಂತೆ ಬೈಬಲು ನಮ್ಮನ್ನು ಉತ್ತೇಜಿಸುತ್ತದೆ. (ಯಾಕೋಬ 5:13-16) ದೀರ್ಘಸಮಯದಿಂದ ತೀವ್ರವಾದ ಖಿನ್ನತೆಯನ್ನು ಅನುಭವಿಸುತ್ತಿರುವ ಒಬ್ಬ ವ್ಯಕ್ತಿಯು ಹೇಳಿದ್ದು: “ಕೆಲವೊಮ್ಮೆ ನೀವು ಯಾರ ಮೇಲೆ ಭರವಸೆಯಿಡುತ್ತೀರೋ ಆ ವ್ಯಕ್ತಿಯೊಂದಿಗೆ ಮಾತಾಡುವುದರಿಂದ, ನಿಮ್ಮ ಮನಸ್ಸು ಹಗುರಗೊಳ್ಳುತ್ತದೆ ಮತ್ತು ಮನಃಸ್ಥಿತಿಯು ಉತ್ತಮಗೊಳ್ಳುತ್ತದೆ. ಇದರಿಂದಾಗಿ ನೀವು ಸ್ಪಷ್ಟವಾಗಿ ಯೋಚಿಸಲು ಶಕ್ತರಾಗುವಿರಿ.” (ಜ್ಞಾನೋಕ್ತಿ 17:17) ದೀರ್ಘ ಸಮಯದಿಂದ ಇರುವಂತಹ ತೀವ್ರ ಖಿನ್ನತೆಯು ವೈದ್ಯಕೀಯ ಸಮಸ್ಯೆಯಾಗಿರುವಂತೆ ತೋರುವಾಗ, ವೈದ್ಯರ ಸಹಾಯವನ್ನು ಸಹ ಪಡೆದುಕೊಳ್ಳಬಹುದು. *ಮತ್ತಾಯ 9:12.

ನಮ್ಮ ಸಮಸ್ಯೆಗಳಿಗೆ ಯಾವುದೇ ರೀತಿಯ ಸುಲಭ ಪರಿಹಾರಗಳು ಇಲ್ಲದಿರುವುದಾದರೂ, ಇವುಗಳನ್ನು ನಿಭಾಯಿಸಲು ನಮಗೆ ಸಹಾಯ ಮಾಡಲಿಕ್ಕಾಗಿರುವ ದೇವರ ಸಾಮರ್ಥ್ಯವನ್ನು ನಾವೆಂದೂ ಕಡೆಗಣಿಸದಿರೋಣ. (2 ಕೊರಿಂಥ 4:8) ಎಡೆಬಿಡದೆ ಪ್ರಾರ್ಥಿಸುವುದು, ಒಂಟಿಯಾಗಿರದಂತೆ ನೋಡಿಕೊಳ್ಳುವುದು ಮತ್ತು ಅರ್ಹ ವ್ಯಕ್ತಿಗಳಿಂದ ಸಹಾಯವನ್ನು ಪಡೆದುಕೊಳ್ಳುವುದರಿಂದ ನಾವು ಪುನಃ ಮಾನಸಿಕ ಸ್ಥಿರತೆಯನ್ನು ಹೊಂದುವೆವು. ನಮ್ಮ ತೀವ್ರ ಹತಾಶೆಯ ಮೂಲಕಾರಣಗಳನ್ನು ದೇವರು ಸಂಪೂರ್ಣವಾಗಿ ಕೊನೆಗೊಳಿಸುವನು ಎಂದು ಬೈಬಲು ವಾಗ್ದಾನಿಸುತ್ತದೆ. ‘ಮೊದಲಿದ್ದದ್ದನ್ನು ಯಾರೂ ಜ್ಞಾಪಿಸಿಕೊಳ್ಳದ’ ದಿನಕ್ಕಾಗಿ ಕ್ರೈಸ್ತರು ಕಾಯುತ್ತಿರುವಾಗ, ಸಂಪೂರ್ಣವಾಗಿ ಆತನ ಮೇಲೆ ಆತುಕೊಳ್ಳಲು ಅವರು ದೃಢನಿರ್ಧಾರವನ್ನು ಮಾಡಿದ್ದಾರೆ.—ಯೆಶಾಯ 65:17; ಪ್ರಕಟನೆ 21:4.

[ಪಾದಟಿಪ್ಪಣಿಗಳು]

^ ಇದು ಅವಳ ನಿಜವಾದ ಹೆಸರಲ್ಲ.

^ ಎಚ್ಚರ! ಪತ್ರಿಕೆಯು ಯಾವುದೇ ರೀತಿಯ ನಿರ್ದಿಷ್ಟ ಚಿಕಿತ್ಸೆಯನ್ನು ಶಿಫಾರಸ್ಸುಮಾಡುವುದಿಲ್ಲ. ತಾವು ಮಾಡುವಂತಹ ಚಿಕಿತ್ಸೆಯು ಬೈಬಲಿನ ಮೂಲತತ್ವಗಳಿಗೆ ವಿರುದ್ಧವಾಗಿಲ್ಲ ಎಂಬುದನ್ನು ಕ್ರೈಸ್ತರು ಖಚಿತಪಡಿಸಿಕೊಳ್ಳತಕ್ಕದ್ದು. ಹೆಚ್ಚಿನ ಮಾಹಿತಿಗಾಗಿ, ಅಕ್ಟೋಬರ್‌ 15, 1988ರ ದ ವಾಚ್‌ಟವರ್‌ ಪತ್ರಿಕೆಯ 25-9ನೆಯ ಪುಟಗಳನ್ನು ನೋಡಿರಿ.