ಹೆಬ್ಬಾವುಗಳು ಕೆಲವೊಂದು ರಹಸ್ಯಗಳನ್ನು ಬಯಲುಪಡಿಸುತ್ತಿವೆಯೊ?
ಹೆಬ್ಬಾವುಗಳು ಕೆಲವೊಂದು ರಹಸ್ಯಗಳನ್ನು ಬಯಲುಪಡಿಸುತ್ತಿವೆಯೊ?
ಎಚ್ಚರ! ಪತ್ರಿಕೆಯ ಸಿಬ್ಬಂದಿವರ್ಗದ ಲೇಖಕರಿಂದ
ನಿಮಗೆ ಹೇಗನಿಸುತ್ತದೊ ನನಗೆ ಗೊತ್ತಿಲ್ಲ, ಆದರೆ ನನಗೆ ಮಾತ್ರ ಯಾವುದೇ ಪ್ರಾಣಿಗಳಿಗಿಂತಲೂ ದೊಡ್ಡ ಗಾತ್ರದ ಹಾವುಗಳನ್ನು ಕಂಡರೆ ತುಂಬ ಇಷ್ಟ. ದೊಡ್ಡ ಗಾತ್ರದ ಹಾವುಗಳು ಎಂದು ಹೇಳುವಾಗ, ನಾವು ಮಾತಾಡುತ್ತಿರುವುದು ಹೆಬ್ಬಾವುಗಳ ಕುರಿತಾಗಿಯೇ. ಈ ಹೆಬ್ಬಾವುಗಳು, ಬಾಯ್ಡೇ ಎಂಬ ಉರಗ ವರ್ಗಕ್ಕೆ ಸೇರಿದವುಗಳಾಗಿವೆ. ಇವು ದೈತ್ಯಾಕಾರವಾಗಿರುವುದಾದರೂ, ಇತ್ತೀಚಿನ ವರೆಗೆ ಅವುಗಳ ವರ್ತನೆಯ ಕುರಿತು ಹೆಚ್ಚಿನ ವಿವರಗಳೇನೂ ತಿಳಿದುಬಂದಿಲ್ಲ ಎಂಬುದು ಕುತೂಹಲಕರ ಸಂಗತಿಯಾಗಿದೆ.
1992ರಲ್ಲಿ, ಕೇಸೂಸ್ ಏ. ರೀಬಾಸ್ ಎಂಬ ಜೀವಶಾಸ್ತ್ರಜ್ಞನು ಮತ್ತು ನ್ಯೂ ಯಾರ್ಕಿನ ವನ್ಯಜೀವಿ ಸಂರಕ್ಷಣಾ ಸಂಘದ (ಡಬ್ಲ್ಯೂಸಿಎಸ್) ಸಂಶೋಧಕರು ಹೆಬ್ಬಾವುಗಳ ಬಗ್ಗೆ ಕಾಡಿನಲ್ಲಿ, ಅಂದರೆ ವೆನಿಸ್ವೇಲದ ಜೌಗು ಪ್ರದೇಶದಲ್ಲಿ ಮೊತ್ತಮೊದಲ ಬಾರಿ ಅಧ್ಯಯನ ನಡೆಸಿದರು. * ಅಲ್ಲಿ ನಡೆಸಲ್ಪಟ್ಟ ಆರು ವರ್ಷಗಳಷ್ಟು ದೀರ್ಘ ಸಮಯದ ಈ ಹೊರಾಂಗಣ ಅಧ್ಯಯನವು ಕೆಲವೊಂದು ಸಂಗತಿಗಳನ್ನು ಬಯಲುಪಡಿಸಿದೆ ಎಂಬುದನ್ನು ನಾನು ಪತ್ರಿಕೆಯಲ್ಲಿ ಓದಿದೆ. ಆಗ, ಆ ಅಧ್ಯಯನದಲ್ಲಿ ಯಾವ ವಿಷಯಗಳನ್ನು ಕಂಡುಹಿಡಿಯಲಾಗಿದೆ ಎಂಬುದರ ಬಗ್ಗೆ ನಾನು ಕುತೂಹಲಗೊಂಡೆ. ಇಂದು ನಾನು ಆ ವಿಷಯಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸುವೆ.
ಹೆಬ್ಬಾವಿನ ಹೆಸರುಗಳು ಮತ್ತು ಜಾತಿಗಳು
ಒಂದು ದಿನ ಮಧ್ಯಾಹ್ನ ನಾನು ಬ್ರೂಕ್ಲಿನ್‌ನಲ್ಲಿರುವ ನನ್ನ ಆಫೀಸಿನಿಂದ, ಡಬ್ಲ್ಯೂಸಿಎಸ್ ಮುಖ್ಯಕಾರ್ಯಾಲಯಕ್ಕೆ ಹೋದೆ. ಇದು ನ್ಯೂ ಯಾರ್ಕ್ ನಗರದ ಬ್ರಾಂಕ್ಸ್ ಪ್ರಾಣಿಸಂಗ್ರಹಾಲಯದಲ್ಲಿದೆ. ಹೆಬ್ಬಾವುಗಳ ಕುರಿತಾದ ಕೆಲವು ನಿಜ ಸಂಗತಿಗಳನ್ನು ತಿಳಿದುಕೊಳ್ಳುವುದಕ್ಕಾಗಿ ಈಗಾಗಲೇ ನಾನು ಸಾಕಷ್ಟು ಸಂಶೋಧನೆಯನ್ನು ನಡೆಸಿದ್ದೆ.
ಹೆಬ್ಬಾವನ್ನು ಇಂಗ್ಲಿಷ್ ಭಾಷೆಯಲ್ಲಿ ಆ್ಯನಕಾಂಡ ಎಂದು ಕರೆಯಲಾಗುತ್ತದೆ. ಆದುದರಿಂದ, ಆ್ಯನಕಾಂಡ ಎಂಬ ಹೆಸರು, ಈ ಹಾವಿನ ಮೂಲಸ್ಥಳವಾದ ದಕ್ಷಿಣ ಅಮೆರಿಕದಿಂದ ಬಹು ದೂರದಲ್ಲಿರುವ ಕ್ಷೇತ್ರದಿಂದ ಬಂದದ್ದಾಗಿರಬಹುದು ಎಂಬುದು ಸೋಜಿಗದ ಸಂಗತಿ. ಆ್ಯನಕಾಂಡ ಎಂಬ ಶಬ್ದವು, ತಮಿಳು ಭಾಷೆಯ ಆನೈ ಅಂದರೆ “ಆನೆ” ಮತ್ತು ಕೊಲ್‌ರ ಅಂದರೆ “ಕೊಲೆಗಾರ” ಎಂಬ ಪದಗಳಿಂದ ಬಂದದ್ದಾಗಿದೆ ಎಂದು ಕೆಲವರು ಹೇಳುತ್ತಾರೆ. ಆದರೆ ಇದು ಹೆನಕತಯಾ (ಹೆನಾ ಅಂದರೆ “ಮಿಂಚು” ಮತ್ತು ಕತ ಅಂದರೆ “ಕಾಂಡ”) ಎಂಬ ಸಿಂಹಳೀಯ ಭಾಷೆಯ ಶಬ್ದಗಳಿಂದ ಬಂದದ್ದಾಗಿದೆ ಎಂಬುದು ಇತರರ ಅಭಿಪ್ರಾಯ. ಏನೇ ಇರಲಿ, ಈ ಸಿಂಹಳ ಭಾಷೆಯ ಶಬ್ದಗಳು, ಏಷಿಯದಿಂದ ದಕ್ಷಿಣ ಅಮೆರಿಕಕ್ಕೆ ಪೋರ್ಚುಗೀಸ್ ವ್ಯಾಪಾರಿಗಳಿಂದ ಪರಿಚಯಿಸಲ್ಪಟ್ಟಿದ್ದಿರಬಹುದು. ಶ್ರೀಲಂಕಾದಲ್ಲಿ ಈ ಸಿಂಹಳ ಭಾಷೆಯ ಶಬ್ದಗಳನ್ನು ಮೂಲತಃ ಪೈತನ್ (ಅಜಗರ)ಗಳಿಗೆ ಉಪಯೋಗಿಸಲಾಗುತ್ತಿತ್ತು.
ತಪ್ಪಾಗಿ ಉಪಯೋಗಿಸಲ್ಪಡುವ ಹೆಸರುಗಳ ಕುರಿತಾಗಿ ಹೇಳುವಾಗ, ಹೆಬ್ಬಾವಿನ ಯುನೆಕ್ಟಸ್ ಮ್ಯೂರಿನಸ್ ಎಂಬ ಅಧಿಕೃತ ಹೆಸರು ಸಹ ಸರಿಯಾಗಿ ಹೊಂದುವುದಿಲ್ಲ.
ಯುನೆಕ್ಟಸ್‌ನ ಅರ್ಥ “ಒಳ್ಳೆಯ ಈಜುಗಾರ” ಎಂದಾಗಿದೆ ಮತ್ತು ಈ ಅರ್ಥಕ್ಕೆ ತಕ್ಕಂತೆ ಅದು ಸುಲಲಿತವಾಗಿ ಈಜಬಲ್ಲದು. ಆದರೆ ಮ್ಯೂರಿನಸ್‌ನ ಅರ್ಥ “ಇಲಿಯ ಬಣ್ಣದ್ದು” ಎಂದಾಗಿದೆ. ಆದರೆ ಹೆಬ್ಬಾವಿಗೆ ಕಡುಹಸಿರು ಬಣ್ಣದ ಚರ್ಮವಿರುವುದರಿಂದ, ಈ ಹೆಸರು “ಹೆಬ್ಬಾವಿಗೆ ನಿಜವಾಗಿಯೂ ಸರಿಹೊಂದುವುದಿಲ್ಲ” ಎಂದು ಒಂದು ಕೃತಿಯು ದಾಖಲಿಸುತ್ತದೆ.ಈ ಹಾವಿನ ವೈಜ್ಞಾನಿಕ ಹೆಸರುಗಳು ಮತ್ತು ವರ್ಗಗಳ ಕುರಿತು ಇನ್ನೂ ಒಂದು ಸಂಗತಿಯನ್ನು ಹೇಳಲಿಕ್ಕಿದೆ. ಹೆಬ್ಬಾವುಗಳಲ್ಲಿ ಎರಡು ಜಾತಿಗಳಿವೆ ಎಂದು ಹೆಬ್ಬಾವುಗಳ ಕುರಿತಾದ ಸಾಹಿತ್ಯವು ಮಾಹಿತಿ ನೀಡುತ್ತದೆ. ಅವುಗಳಲ್ಲಿ ಒಂದು ಜಾತಿಯ ಹೆಬ್ಬಾವಿನ ಬಗ್ಗೆಯೇ ಈ ಲೇಖನವು ತಿಳಿಸುತ್ತದೆ. ಹಸಿರು ಹೆಬ್ಬಾವು ಅಥವಾ ವಾಟರ್ ಬೋವ ಹೆಬ್ಬಾವೇ ಅದಾಗಿದೆ. ಅಮೆಸಾನ್ ಮತ್ತು ಓರಿನೊಕೊದ ಜಲಾನಯನ ಭೂಮಿಯಲ್ಲಿನ ಜೌಗು ಪ್ರದೇಶಗಳಲ್ಲಿ ಮತ್ತು ಗಯಾನದಲ್ಲಿ ಇವು ಹೆಚ್ಚಾಗಿ ಹರಿದಾಡುತ್ತಿರುತ್ತವೆ. ಇನ್ನೊಂದು ಯಾವುದೆಂದರೆ, ಚಿಕ್ಕದಾಗಿರುವ ಹಳದಿ ಹೆಬ್ಬಾವೇ (ಈ. ನೊಟೇಯಸ್) ಆಗಿದೆ. ದಕ್ಷಿಣ ಬ್ರಸಿಲ್‌ನ ಪ್ಯಾರಗ್ವೈ ಮತ್ತು ಉತ್ತರ ಆರ್ಜೆಂಟೀನವೇ ಇದರ ವಾಸಸ್ಥಾನವಾಗಿದೆ.
ಪರಿಣತನೊಂದಿಗೆ ಭೇಟಿ
ನಾನು ಬ್ರಾಂಕ್ಸ್ ಪ್ರಾಣಿಸಂಗ್ರಹಾಲಯಕ್ಕೆ ಬಂದು ಮುಟ್ಟಿದೆ. ಈ ವನ್ಯಜೀವಿ ಉದ್ಯಾನವನವು ಸುಮಾರು 265 ಎಕ್ರೆಗಳಷ್ಟು ವಿಸ್ತಾರವಾಗಿದ್ದು, ಬಹಳಷ್ಟು ಗಿಡಮರಗಳಿಂದ ತುಂಬಿದೆ. ಇಲ್ಲಿ 4,000ಕ್ಕಿಂತಲೂ ಹೆಚ್ಚು ಪ್ರಾಣಿಗಳು ಜೀವಿಸುತ್ತಿದ್ದು, ಸುಮಾರು ಒಂದು ಡಸನ್ ಹೆಬ್ಬಾವುಗಳೂ ಇವೆ. ಖಾಕಿ ವಸ್ತ್ರಧಾರಿಯಾಗಿದ್ದ ವಿಲಿಯಮ್ ಹಾಲ್ಮ್‌ಸ್ಟ್ರಮ್, ಡಬ್ಲ್ಯೂಸಿಎಸ್‌ನ ಉರಗಶಾಸ್ತ್ರ (ಉರಗಗಳ ಬಗ್ಗೆ ಅಧ್ಯಯನ) ಇಲಾಖೆಗೆ ಸೇರಿದವರಾಗಿದ್ದರು. ನನ್ನನ್ನು ಸಂಧಿಸಲು ಅವರು ಪ್ರಾಣಿಸಂಗ್ರಹಾಲಯದ ಪ್ರವೇಶದ್ವಾರಕ್ಕೆ ಬಂದಿದ್ದರು. ದಪ್ಪ ಮೀಸೆಯಿದ್ದು, ಕನ್ನಡಕವನ್ನು ಹಾಕಿಕೊಂಡು, ನಗುಮುಖದಿಂದ ನಮ್ಮನ್ನು ಸ್ವಾಗತಿಸಿದ ಶ್ರೀ. ಹಾಲ್ಮ್‌ಸ್ಟ್ರಮ್ 51 ವರ್ಷ ಪ್ರಾಯದವರಾಗಿದ್ದು, ನ್ಯೂ ಯಾರ್ಕಿನ ನಿವಾಸಿಯಾಗಿದ್ದರು. ಇವರು ಪ್ರಾಣಿಸಂಗ್ರಹಾಲಯದ ಉರಗ ಇಲಾಖೆಯಲ್ಲಿ ಉರಗಗಳ ವಿವಿಧ ಜಾತಿಗಳ ಸಂಗ್ರಹದ ಮೇಲ್ವಿಚಾರಕರಾಗಿದ್ದಾರೆ. ಅಷ್ಟುಮಾತ್ರವಲ್ಲ, ಇವರು ವೆನಿಸ್ವೇಲದ ಜೌಗು ಪ್ರದೇಶದಲ್ಲಿ ನಡೆಸಲ್ಪಟ್ಟ ಹೊರಾಂಗಣ ಅಧ್ಯಯನದಲ್ಲಿಯೂ ಭಾಗವಹಿಸಿದ್ದರು. ಈಗ ವಿಜ್ಞಾನಿಗಳು ಮೂರನೆಯ ಜಾತಿಯ ಹೆಬ್ಬಾವನ್ನು (ಈ. ಡೆಸ್‌ಚೌವೆನ್‌ಸೀಇ) ಕಂಡುಹಿಡಿದಿದ್ದಾರೆ ಎಂದು ಇವರು ಹೇಳಿದರು. ಈಶಾನ್ಯ ಬ್ರಸಿಲ್ ಮತ್ತು ಕರಾವಳಿಯ ಫ್ರೆಂಚ್ ಗಯಾನವೇ ಈ ಹೆಬ್ಬಾವಿನ ಇರುನೆಲೆಯಾಗಿದೆ. * ಇಂದು ಮಧ್ಯಾಹ್ನ ಶ್ರೀ. ಹಾಲ್ಮ್‌ಸ್ಟ್ರಮ್‌ರವರೇ ನನಗೆ ಗೈಡ್ ಆಗಿ ಹೆಬ್ಬಾವುಗಳ ಬಗ್ಗೆ ವಿವರಿಸಲಿದ್ದಾರೆ.
ಬೇರೆಯವರು ನಾಯಿಗಳನ್ನು ಅಥವಾ ಗಿಳಿಗಳನ್ನು ಇಷ್ಟಪಡುವಂತೆಯೇ, ನನ್ನ ಗೈಡ್ ಹಾವುಗಳನ್ನು ತುಂಬ ಇಷ್ಟಪಡುತ್ತಾರೆ ಎಂಬುದನ್ನು ನಾನು ಬೇಗನೆ ಅರ್ಥಮಾಡಿಕೊಂಡೆ. ಅವರು ಮಗುವಾಗಿದ್ದಾಗಿನಿಂದ ಅವರ ಹೆತ್ತವರು ಸ್ಯಾಲಮಾಂಡರ್‌ಗಳು, ಕಪ್ಪೆಗಳು ಮತ್ತು ಇನ್ನಿತರ ಪ್ರಾಣಿಗಳನ್ನು ಮನೆಯಲ್ಲಿ ಸಾಕುತ್ತಿದ್ದರೆಂದು ಅವರು ನನಗೆ ಹೇಳಿದರು. “ನನ್ನ ತಂದೆಗೆ ಅವುಗಳನ್ನು ಕಂಡರೆ ತುಂಬ ಇಷ್ಟವಿತ್ತು. ನನ್ನ ತಾಯಿ ಅಷ್ಟೊಂದು ಇಷ್ಟಪಡುತ್ತಿರಲಿಲ್ಲವಾದರೂ ಅವುಗಳನ್ನು ಸಹಿಸಿಕೊಳ್ಳುತ್ತಿದ್ದರು” ಎಂದು ಸಹ ಹೇಳಿದರು. ಶ್ರೀ. ಹಾಲ್ಮ್‌ಸ್ಟ್ರಮ್‌ರವರಿಗೆ ತಮ್ಮ ತಂದೆಯ ಸ್ವಭಾವವೇ ಬಂದಿದೆ ಎಂದೇನೂ ಹೇಳಬೇಕಾಗಿಲ್ಲ.
ಬೆರಗುಗೊಳಿಸುವಂತಹ ಗಾತ್ರ ಮತ್ತು ವಿಪರೀತ ಭಿನ್ನತೆಗಳು
ಪ್ರಾಣಿಸಂಗ್ರಹಾಲಯದ ಒಳಗೆ 100 ವರ್ಷಗಳಷ್ಟು ಹಳೆಯದಾದ ಒಂದು ಉರಗಧಾಮವಿದೆ. ನಾವು ಅದರ ಒಳಗೆ ಹೋಗಿ, ಒಂದು ಹೆಬ್ಬಾವು ವಾಸವಾಗಿರುವ ಪಂಜರದ ಮುಂದೆ ನಿಂತುಕೊಂಡೆವು. ನಾನು ನೋಡಲು ಹಾತೊರೆಯುತ್ತಿದ್ದಂತಹ ಒಂದು ಜೀವಿಯು ನನ್ನ ಕಣ್ಮುಂದೆ ಇತ್ತಾದರೂ, ನನ್ನಿಂದ ಆಶ್ಚರ್ಯವನ್ನು ತಡೆದುಕೊಳ್ಳಲಾಗಲಿಲ್ಲ. ಅದರ ದೊಡ್ಡ ಗಾತ್ರ ಹಾಗೂ ದೇಹದ ವಿಚಿತ್ರ ಪ್ರಮಾಣವನ್ನು ನೋಡಿ ನಾನು ದಂಗಾದೆ. ಅದಕ್ಕೆ ಮೊಂಡು ಮೂಗುಳ್ಳ ತಲೆಯಿದೆ ಮತ್ತು ಅದು ಮನುಷ್ಯನ ಕೈಗಿಂತಲೂ ದಪ್ಪವಾಗಿದೆ. ಅದರ ಬೃಹದ್ಗಾತ್ರದ ದೇಹಕ್ಕೆ ಹೋಲಿಸುವಾಗ ಈ ತಲೆಯು ತುಂಬ ಚಿಕ್ಕದಾಗಿ ಕಾಣುತ್ತಿದೆ. ಗಮನಸೆಳೆಯುವಂತಹ ಈ ಹಾವು, 16 ಅಡಿಗಳಷ್ಟು ಉದ್ದವಿರುವ ಹೆಣ್ಣು ಹಾವಾಗಿದ್ದು, ಸುಮಾರು 80 ಕಿಲೊಗ್ರಾಮ್‌ಗಳಷ್ಟು ಭಾರವಾಗಿದೆ ಎಂದು ನನ್ನ ಗೈಡ್ ನನಗೆ ಹೇಳಿದರು. ಅದರ ದೇಹವು ಟೆಲಿಫೋನ್ ಕಂಭದಷ್ಟು ದಪ್ಪಗಿರುವುದಾದರೂ, ವಿಶ್ವದಾಖಲೆ ಮಾಡಿರುವಂತಹ ಇನ್ನೊಂದು ಹೆಬ್ಬಾವಿಗೆ ಹೋಲಿಸುವಾಗ ಇದು ತೀರ ಚಿಕ್ಕದು ಎಂಬುದು ನನ್ನ ಅರಿವಿಗೆ ಬಂತು. ವಿಶ್ವದಾಖಲೆ ಮಾಡಿರುವ ಆ ಹೆಣ್ಣು ಹೆಬ್ಬಾವು, ತುಂಬ ದಷ್ಟಪುಷ್ಟವಾಗಿದ್ದು, 1960ರಲ್ಲಿ ಹಿಡಿಯಲ್ಪಟ್ಟಿತ್ತು. ಅದರ ತೂಕ ಸುಮಾರು 227 ಕಿಲೊಗ್ರಾಮ್‌ಗಳಷ್ಟಾಗಿತ್ತೆಂದು ಅಂದಾಜುಮಾಡಲಾಗಿತ್ತು!
ಯಾವುದೇ ಗಂಡು ಹೆಬ್ಬಾವು ಇಷ್ಟು ದೊಡ್ಡ ಗಾತ್ರಕ್ಕೆ ಬೆಳೆಯುವುದನ್ನು ಕನಸಿನಲ್ಲೂ ನೆನಸಲಾರದು. ಗಂಡು ಹೆಬ್ಬಾವುಗಳು ಹೆಣ್ಣು ಹೆಬ್ಬಾವುಗಳಿಗಿಂತ ಸಣ್ಣವುಗಳಾಗಿರುತ್ತವೆ ಎಂಬುದು ಉರಗಶಾಸ್ತ್ರಜ್ಞರಿಗೆ ಗೊತ್ತಿತ್ತು. ಆದರೆ ಗಂಡು ಹೆಬ್ಬಾವುಗಳು ಎಷ್ಟು ಸಣ್ಣಗಿರುತ್ತವೆಂದರೆ, ಅವು ಹೆಣ್ಣು ಹೆಬ್ಬಾವುಗಳ ಪುಟ್ಟ ಮರಿಗಳಂತೆ ಕಾಣುತ್ತವೆ ಎಂಬ ಸಂಗತಿಯು ಹೊರಾಂಗಣ ಅಧ್ಯಯನದಲ್ಲಿಯೇ ತಿಳಿದುಬಂತು. ಅಂದರೆ, ಗಂಡು ಹೆಬ್ಬಾವುಗಳಿಗಿಂತ ಹೆಣ್ಣು ಹೆಬ್ಬಾವುಗಳು ಸರಾಸರಿ ಐದು ಪಟ್ಟು ದೊಡ್ಡದಾಗಿರುತ್ತವೆ ಎಂಬುದನ್ನು ಈ ಅಧ್ಯಯನವು ತೋರಿಸಿತು. ಗಂಡು ಹೆಬ್ಬಾವು ಹಾಗೂ ಹೆಣ್ಣು ಹೆಬ್ಬಾವುಗಳ ಗಾತ್ರದಲ್ಲಿ ಕಂಡುಬರುವ ಈ ಮೂಲಭೂತ ಭಿನ್ನತೆಯು, ಜನರನ್ನು ಮೋಸಗೊಳಿಸಸಾಧ್ಯವಿದೆ ಎಂಬುದನ್ನು ಜೀವಶಾಸ್ತ್ರಜ್ಞನಾದ ಕೇಸೂಸ್ ರೀಬಾಸ್ ಕಂಡುಹಿಡಿದಿದ್ದನು. ಹೇಗೆಂದರೆ, ಅವನು ಒಂದು ಹೆಬ್ಬಾವಿನ ಮರಿಯನ್ನು ಸಾಕುಪ್ರಾಣಿಯಾಗಿ ಇಟ್ಟುಕೊಂಡಿದ್ದನು. ಈ ಚಿಕ್ಕ ಮರಿಯು ಅವನನ್ನು ಕಚ್ಚುತ್ತಾ ಇತ್ತು. ಇಷ್ಟು ಚಿಕ್ಕ ಮರಿಯು ನನ್ನನ್ನು ಏಕೆ ಕಚ್ಚುತ್ತಿದೆ ಎಂದು
ಅವನು ಯಾವಾಗಲೂ ಕುತೂಹಲಪಡುತ್ತಿದ್ದನು. ಆದರೆ ಪೂರ್ಣವಾಗಿ ಬೆಳೆದು ಕೆರಳಿದ್ದ ಗಂಡು ಹೆಬ್ಬಾವನ್ನೇ ತಾನು ಸಾಕುಪ್ರಾಣಿಯಾಗಿ ಇಟ್ಟುಕೊಂಡಿದ್ದೆ ಎಂಬ ಸತ್ಯವು ಹೊರಾಂಗಣದ ಅಧ್ಯಯನವನ್ನು ಮಾಡುತ್ತಿದ್ದಾಗಲೇ ಈ ಜೀವಶಾಸ್ತ್ರಜ್ಞನಿಗೆ ಹೊಳೆಯಿತು.ಬಹುಮಾನವು ಕಾದಿರಿಸಲ್ಪಟ್ಟಿದೆ
ಹೆಬ್ಬಾವಿನ ಬೃಹದ್ಗಾತ್ರವು ಒಂದು ಅಪೂರ್ವ ಸಂಗತಿಯಾಗಿರುವುದಾದರೂ, ಅದರ ಉದ್ದವು ಸಹ ಅಷ್ಟೇ ಆಕರ್ಷಣೀಯವಾಗಿದೆ. ಹೆಬ್ಬಾವುಗಳು ಹಾಲಿವುಡ್ ಚಲನಚಿತ್ರಗಳಲ್ಲಿ ತೋರಿಸಲ್ಪಡುವಷ್ಟು ದೈತ್ಯಾಕಾರದವುಗಳಾಗಿ ಇರುವುದಿಲ್ಲ ಎಂಬುದು ಒಪ್ಪಿಕೊಳ್ಳತಕ್ಕದ್ದೇ. ಏಕೆಂದರೆ ಒಂದು ಚಲನಚಿತ್ರದಲ್ಲಿ, 40 ಅಡಿಗಳಷ್ಟು ಉದ್ದವಾದ ಒಂದು ಹೆಬ್ಬಾವನ್ನು ತೋರಿಸಲಾಗಿತ್ತು. ಆದರೆ ಹೆಬ್ಬಾವುಗಳ ಗರಿಷ್ಠ ಉದ್ದವು ಮೂವತ್ತು ಅಡಿಗಳಷ್ಟು ಅಥವಾ ಅದಕ್ಕಿಂತ ಸ್ವಲ್ಪ ಹೆಚ್ಚಾಗಿರುತ್ತದೆ ಮತ್ತು ಈ ಉದ್ದದ ಬಗ್ಗೆ ಯೋಚಿಸುವುದೇ ಭಯಾನಕವಾಗಿರುತ್ತದೆ.
ಇಷ್ಟೊಂದು ದೊಡ್ಡ ಗಾತ್ರದ ಹೆಬ್ಬಾವುಗಳು ತೀರ ಕಡಿಮೆ ಸಂಖ್ಯೆಯಲ್ಲಿವೆ. ಹೊರಾಂಗಣ ಅಧ್ಯಯನದಲ್ಲಿ ಹಿಡಿಯಲ್ಪಟ್ಟ ಅತಿ ದೊಡ್ಡ ಹೆಣ್ಣು ಹೆಬ್ಬಾವು, 90 ಕಿಲೊಗ್ರಾಮ್‌ಗಳಷ್ಟು ಭಾರವಿದ್ದು, 17 ಅಡಿಗಳಷ್ಟು ಉದ್ದವಿತ್ತು. ನಿಜವಾಗಿಯೂ ಹೇಳುವುದಾದರೆ, ದೊಡ್ಡ ಗಾತ್ರದ ಹೆಬ್ಬಾವುಗಳನ್ನು ಕಂಡುಕೊಳ್ಳುವುದು ತುಂಬ ಕಷ್ಟಕರವಾಗಿದೆ. ಆದುದರಿಂದಲೇ, ಸುಮಾರು 90 ವರ್ಷಗಳ ಹಿಂದೆ ನ್ಯೂ ಯಾರ್ಕಿನ ಪ್ರಾಣಿಶಾಸ್ತ್ರದ ಸಂಸ್ಥೆ (ಡಬ್ಲ್ಯೂಸಿಎಸ್‌ಗಿಂತ ಮುಂಚೆ ಇದ್ದ ಸಂಸ್ಥೆ)ಯು, 30 ಅಡಿಗಳಿಗಿಂತಲೂ ಉದ್ದವಾಗಿರುವ ಹೆಬ್ಬಾವನ್ನು ಹಿಡಿದುಕೊಡುವವರಿಗೆ 1,000 ಅಮೆರಿಕನ್ ಡಾಲರ್‌ಗಳ ಬಹುಮಾನವನ್ನು ಘೋಷಿಸಿತ್ತು. ಆದರೂ, ಆ ಬಹುಮಾನವನ್ನು ಇಷ್ಟರ ತನಕ ಯಾರೂ ಪಡೆದುಕೊಳ್ಳಲು ಸಾಧ್ಯವಾಗಿಲ್ಲ. “ದಕ್ಷಿಣ ಅಮೆರಿಕದ ಅನೇಕ ಜನರಿಂದ ಒಂದು ವರ್ಷಕ್ಕೆ ಎರಡು ಅಥವಾ ಮೂರು ಫೋನ್ ಕರೆಗಳು ನಮಗೆ ಬರುತ್ತವೆ. ತಮಗೆ ಹಾವು ಸಿಕ್ಕಿದೆ, ಆದುದರಿಂದ ಬಹುಮಾನವು ತಮಗೇ ಸಿಗಬೇಕೆಂದು ಅವರು ಫೋನಿನ ಮೂಲಕ ಪ್ರತಿಪಾದಿಸುತ್ತಾರೆ. ಆದರೆ ಅದನ್ನು ಪರೀಕ್ಷಿಸಲಿಕ್ಕಾಗಿ ನಾವು ಅಲ್ಲಿಗೆ ಹೋಗುವ ಮುಂಚೆ, ಅಂತಹ ಹೆಬ್ಬಾವನ್ನು ಹಿಡಿದಿದ್ದೀರಿ ಎಂಬುದಕ್ಕೆ ನೀವೇ ಏನಾದರೂ ರುಜುವಾತನ್ನು ಕಳುಹಿಸಿರಿ ಎಂದು ನಾವು ಅವರಿಗೆ ಹೇಳುವಾಗ, ಅವರಿಂದ ಉತ್ತರವೇ ಬರುವುದಿಲ್ಲ” ಎಂದು ಶ್ರೀ. ಹಾಲ್ಮ್‌ಸ್ಟ್ರಮ್ ಹೇಳುತ್ತಾರೆ. ಇನ್ನೊಂದು ಸಂಗತಿಯೇನೆಂದರೆ, 30 ಅಡಿಗಳಷ್ಟು ಉದ್ದದ ಹೆಬ್ಬಾವನ್ನು ಹಿಡಿದುಕೊಡುವವರಿಗೆ ಈಗ 50,000 ಅಮೆರಿಕನ್ ಡಾಲರುಗಳ ಬಹುಮಾನವು ಸಿಗುವುದು!
ಬಹಳ ಹತ್ತಿರದಿಂದ ನೋಡುವ ಅವಕಾಶ
ಉರಗಧಾಮದ ಎರಡನೆಯ ಮಾಳಿಗೆಯ ಕಡೆಗೆ ನನ್ನ ಗೈಡ್ ನಡೆಯಲಾರಂಭಿಸಿದಾಗ, ನಾನು ಸಹ ಅವರ ಹಿಂದೆ ಹೋದೆ. ಇದು ಹೆಬ್ಬಾವುಗಳು ವಂಶಾಭಿವೃದ್ಧಿ ಮಾಡುವ ಸ್ಥಳವಾಗಿದೆ. ಈ ಸ್ಥಳದಲ್ಲಿ ತುಂಬ ಶಾಖವೂ ಇದೆ ಮತ್ತು ಆರ್ದ್ರತೆಯೂ ಇದೆ. ನನಗೆ ಹೆಬ್ಬಾವುಗಳ ಬಗ್ಗೆ ತುಂಬ ಆಸಕ್ತಿಯಿರುವುದರಿಂದ, ಯಾವುದೇ ಅಡಚಣೆಯಿಲ್ಲದೆ ನಾನು ಅವುಗಳನ್ನು ನೋಡಬೇಕೆಂಬುದು ಶ್ರೀ. ಹಾಲ್ಮ್‌ಸ್ಟ್ರಮ್‌ರ ಬಯಕೆಯಾಗಿತ್ತು. ಆದುದರಿಂದ ಅವರು ಒಂದು ಪಂಜರದ ಬಾಗಿಲನ್ನು ತೆರೆದರು, ಅಲ್ಲಿ ತುಂಬ ದೊಡ್ಡ ಗಾತ್ರದ ಒಂದು ಹೆಣ್ಣು ಹೆಬ್ಬಾವಿತ್ತು.
ಈಗ ನಮಗೂ ಹಾವಿಗೂ ಕೇವಲ ಎಂಟು ಅಡಿಗಳಷ್ಟು ಅಂತರವಿತ್ತು. ಆಗ, ಆ ಹೆಬ್ಬಾವು ನಿಧಾನವಾಗಿ ತನ್ನ ತಲೆಯನ್ನು ಮೇಲೆ ಎತ್ತಿ, ನಾವಿದ್ದ ದಿಕ್ಕಿಗೆ ಸರಸರನೆ ಹರಿದು ಬರಲಾರಂಭಿಸಿತು. ಈಗ ಹೆಬ್ಬಾವಿನ ತಲೆಗೂ ನಮಗೂ ಕೇವಲ ಮೂರು ಅಡಿಗಳ ಅಂತರವಿತ್ತಷ್ಟೆ.
“ಈಗ ನಾವು ಹಿಂದೆಹೋಗುವುದು ಒಳ್ಳೇದು. ಅದು ಆಹಾರಕ್ಕಾಗಿ ಹುಡುತ್ತಿದೆ” ಎಂದು ಶ್ರೀ. ಹಾಲ್ಮ್‌ಸ್ಟ್ರಮ್‌ರವರು ಹೇಳಿದರು. ನಾನು ಅವರ ಮಾತಿಗೆ ತಲೆದೂಗಿ, ಅಲ್ಲಿಂದ ಹಿಂದೆ ಸರಿದೆ. ಅವರು ಆ ಪಂಜರದ ಬಾಗಿಲನ್ನು ಮುಚ್ಚಿದರು. ಆಗ ಹೆಬ್ಬಾವಿನ ತಲೆಯು ನಿಧಾನವಾಗಿ ಹಿಂದಕ್ಕೆ ಸರಿದು, ಸುರುಳಿಯಂತೆ ಸುತ್ತಿಕೊಂಡಿದ್ದ ತನ್ನ ದೇಹದ ಮಧ್ಯಭಾಗಕ್ಕೆ ಹೋಗಿ ವಿರಮಿಸತೊಡಗಿತು.
ಒಂದುವೇಳೆ ನೀವು ಹೆಬ್ಬಾವಿನ ಅಪಾಯಕರವಾದ ದಿಟ್ಟನೋಟವನ್ನು ಗಣನೆಗೆ ತೆಗೆದುಕೊಳ್ಳದೆ, ಕೆಂಪು ಪಟ್ಟೆಗಳುಳ್ಳ ಅದರ ತಲೆಯನ್ನು ಗಮನವಿಟ್ಟು ನೋಡುವಲ್ಲಿ, ಅದರಲ್ಲಿ ಬಹಳಷ್ಟು ವಿಶೇಷತೆಯಿದೆ ಎಂಬುದು ನಿಮಗೆ ಗೊತ್ತಾಗುವುದು. ಉದಾಹರಣೆಗೆ, ಹೆಬ್ಬಾವಿನ ಕಣ್ಣುಗಳು ಹಾಗೂ ಮೂಗಿನ ಹೊಳ್ಳೆಗಳು ತಲೆಯ ಮೇಲ್ಭಾಗದಲ್ಲಿವೆ. ಆದುದರಿಂದ, ಹೆಬ್ಬಾವು ತನ್ನ ಇಡೀ ದೇಹವನ್ನು ಹಾಗೂ ತಲೆಯನ್ನು ನೀರಿನಲ್ಲಿ ಮುಳುಗಿಸಿದರೂ, ತನ್ನ ಕಣ್ಣುಗಳು ಮತ್ತು ಮೂಗಿನ ಹೊಳ್ಳೆಗಳನ್ನು ಮಾತ್ರ ನೀರಿನ ಮೇಲ್ಮೈಯ ಮೇಲೆಯೇ ಚಾಚಿಕೊಂಡಿರುತ್ತದೆ. ಸಾಮಾನ್ಯವಾಗಿ ಮೊಸಳೆಗಳು ಸಹ ಹೀಗೆಯೇ ಮಾಡುತ್ತವೆ. ಹೆಬ್ಬಾವು ಮರೆಯಲ್ಲಿದ್ದುಕೊಂಡು ಮೋಸದಿಂದ ಹೇಗೆ ತನ್ನ ಆಹಾರವನ್ನು ಹಿಡಿಯುತ್ತದೆ ಎಂಬುದು ಇದರಿಂದ ತಿಳಿಯುತ್ತದೆ.
ಭದ್ರವಾಗಿ ಸುರುಳಿ ಸುತ್ತಿಕೊಳ್ಳುವ ಮಂಡಲಗಳು ಮತ್ತು ಸಡಿಲವಾದ ದವಡೆಗಳು
ಹೆಬ್ಬಾವು ಒಂದು ವಿಷಸರ್ಪವಲ್ಲ. ಇದು ತನ್ನ ಬೇಟೆಯನ್ನು ಹಿಡಿದೊಡನೆ, ಅದಕ್ಕೆ ಗಟ್ಟಿಯಾಗಿ ಸುತ್ತಿಕೊಂಡು, ಅದನ್ನು ಉಸಿರು ಕಟ್ಟಿಸಿ ಸಾಯಿಸುತ್ತದೆ. ಇದು ತನ್ನ ಬೇಟೆಯನ್ನು ಒಂದೇ ಬಾರಿಗೆ ನಜ್ಜುಗುಜ್ಜುಮಾಡುವುದಿಲ್ಲ. ಬದಲಾಗಿ, ತಾನು ಹಿಡಿದಿರುವ ಬೇಟೆ ಪ್ರಾಣಿಯು ಪ್ರತಿ ಬಾರಿ ಉಸಿರಾಡಿದಾಗ, ಈ ಹೆಬ್ಬಾವು ತನ್ನ ಹಿಡಿತವನ್ನು ಬಿಗಿಗೊಳಿಸುತ್ತದೆ. ನಿಸ್ಸಹಾಯಕವಾದ ಆ ಬೇಟೆ ಪ್ರಾಣಿಯು ಉಸಿರುಕಟ್ಟಿ ಸಾಯುವ ತನಕ ಅದು ಹೀಗೆ ಮಾಡುತ್ತಿರುತ್ತದೆ. ಸಾಮಾನ್ಯವಾಗಿ ಹೆಬ್ಬಾವುಗಳು ಬಾತುಕೋಳಿಯಿಂದ ಹಿಡಿದು ಜಿಂಕೆಯ ತನಕ ಏನೇ ಸಿಗಲಿ ಅವುಗಳನ್ನು ಆಕ್ರಮಿಸುತ್ತವೆ. ಆದರೂ, ಹೆಬ್ಬಾವುಗಳು ಜನರನ್ನು ತಿಂದುಹಾಕಿರುವುದರ ಕುರಿತು ವಿಶ್ವಾಸಾರ್ಹ ವರದಿಗಳು ಸಿಕ್ಕಿರುವುದು ತೀರ ಅಪರೂಪ.
ಯಾವುದೇ ಹಾವುಗಳು ತಮ್ಮ ಆಹಾರವನ್ನು ಅಗಿಯಲು ಅಥವಾ ತುಂಡುತುಂಡು ಮಾಡಲು ಅಸಮರ್ಥವಾಗಿವೆ. ಆದುದರಿಂದ ತಾವು ಸಾಯಿಸಿರುವ ಬೇಟೆ ಪ್ರಾಣಿಯನ್ನು ಸಂಪೂರ್ಣವಾಗಿ ನುಂಗುವುದು ಬಿಟ್ಟು ಹೆಬ್ಬಾವುಗಳಿಗೆ ಬೇರೆ ಮಾರ್ಗವೇ ಇಲ್ಲ. ಸ್ವತಃ ಹಾವಿಗಿಂತ ಬೇಟೆ ಪ್ರಾಣಿಯು ಸಾಕಷ್ಟು ದೊಡ್ಡ
ಗಾತ್ರದ್ದಾಗಿರುವುದಾದರೂ, ಹೆಬ್ಬಾವು ಅದನ್ನು ನುಂಗಲೇಬೇಕು. ಒಂದು ವೇಳೆ ಹೆಬ್ಬಾವಿನಂತೆಯೇ ನೀವು ಸಹ ಆಹಾರವನ್ನು ನುಂಗಲು ಸಾಧ್ಯವಿರುತ್ತಿದ್ದಲ್ಲಿ, ನೀವು ಒಂದು ತೆಂಗಿನಕಾಯಿಯನ್ನು ಕಡಲೆಕಾಯಿ ಬೀಜವನ್ನು ನುಂಗುವಷ್ಟು ಸುಲಭವಾಗಿ ನುಂಗಿಬಿಡಸಾಧ್ಯವಿರುತ್ತಿತ್ತು. ಆದರೆ ಹೆಬ್ಬಾವು, ಬೇಟೆ ಪ್ರಾಣಿಯನ್ನು ಹೇಗೆ ನುಂಗುತ್ತದೆ?“ಹೆಬ್ಬಾವಿನ ತಲೆಯು ಬೇಟೆ ಪ್ರಾಣಿಯ ಮೇಲೆ ನಡೆಯುತ್ತಿರುವಂತೆ ಕಾಣುತ್ತದೆ” ಎಂದು ಶ್ರೀ. ಹಾಲ್ಮ್‌ಸ್ಟ್ರಮ್ ಹೇಳುತ್ತಾರೆ. ಹೆಬ್ಬಾವಿನ ದವಡೆಗಳು ಅದರ ತಲೆಗೆ ಸಡಿಲವಾಗಿ ಜೋಡಿಸಲ್ಪಟ್ಟಿವೆ ಎಂದು ಅವರು ವಿವರಿಸುತ್ತಾರೆ. ದೊಡ್ಡ ಗಾತ್ರದ ಬೇಟೆ ಪ್ರಾಣಿಯನ್ನು ಹೆಬ್ಬಾವು ತನ್ನ ಹಲ್ಲುಗಳಿಂದ ಗಟ್ಟಿಯಾಗಿ ಹಿಡಿದುಕೊಳ್ಳುವುದಕ್ಕೆ ಮೊದಲು, ಅದರ ಕೆಳದವಡೆಯ ಸಂದುಗಳು ಕಳಚಿಕೊಂಡು, ಅದು ಹೊರಚಾಚಿಕೊಳ್ಳುತ್ತದೆ. ತದನಂತರ ಹೆಬ್ಬಾವಿನ ಕೆಳದವಡೆಯ ಒಂದು ಭಾಗವು ಮುಂದಕ್ಕೆ ಬಂದು, ಹಿಮ್ಮುಖವಾಗಿರುವ ಹಲ್ಲುಗಳನ್ನು ತನ್ನ ಬೇಟೆ ಪ್ರಾಣಿಯ ಮೇಲೆ ಸಿಕ್ಕಿಸುತ್ತದೆ. ಆಮೇಲೆ ಅದು ದವಡೆಯ ಭಾಗವನ್ನು ಮತ್ತು ಬೇಟೆ ಪ್ರಾಣಿಯನ್ನು ಬಾಯೊಳಗೆ ಎಳೆದುಕೊಳ್ಳುತ್ತದೆ. ನಂತರ, ತನ್ನ ಕೆಳದವಡೆಯ ಇನ್ನರ್ಧ ಭಾಗವನ್ನು ಉಪಯೋಗಿಸಿ ಇದೇ ರೀತಿಯ ಕ್ರಿಯೆಯನ್ನು ಪುನರಾವರ್ತಿಸುತ್ತದೆ. ಸ್ವಲ್ಪಮಟ್ಟಿಗೆ ಮೇಲಿನ ದವಡೆಯು ಸಹ ಈ ಕೆಲಸವನ್ನು ಮಾಡಬಲ್ಲದು. ಒಂದಾದ ಮೇಲೆ ಇನ್ನೊಂದರಂತೆ ಪುನರಾವರ್ತಿಸಲ್ಪಡುವ ಈ ಪ್ರಕ್ರಿಯೆಯು, ನೋಡುವವರಿಗೆ ಈ ಹಾವಿನ ದವಡೆಯು ಬೇಟೆ ಪ್ರಾಣಿಯ ಮೇಲೆ ನಡೆದುಕೊಂಡು ಹೋಗುತ್ತಿರುವಂತೆ ಕಾಣುತ್ತಿರುತ್ತದೆ. ಬೇಟೆ ಪ್ರಾಣಿಯನ್ನು ಸಂಪೂರ್ಣವಾಗಿ ನುಂಗಲು ಅನೇಕ ತಾಸುಗಳು ಹಿಡಿಯಬಹುದು. ಆದರೆ ನುಂಗುವ ಕೆಲಸವು ಮುಗಿದ ಬಳಿಕ, ಹೆಬ್ಬಾವು ಅನೇಕ ಬಾರಿ ಆಕಳಿಸುತ್ತದೆ. ಹಾಗೆ ಆಕಳಿಸಿದಾಗ, ಅದರ ತಲೆಯ ಎಲ್ಲ ಭಾಗಗಳು ತಮ್ಮ ಯಥಾಸ್ಥಿತಿಗೆ ಹಿಂದಿರುಗುತ್ತವೆ.
ಈ ರೀತಿಯಲ್ಲಿ ಹೆಬ್ಬಾವು ಆಹಾರವನ್ನು ಸೇವಿಸುವಾಗ ಉಸಿರುಕಟ್ಟದಂತೆ ಯಾವುದು ಸಹಾಯ ಮಾಡುತ್ತದೆ? ಇದರ ಬಾಯಿಯ ಕೆಳಭಾಗದಲ್ಲಿ ವಿಸ್ತರಿಸಬಹುದಾದ ಉಸಿರುಗೊಳವೆಯಿದೆ ಮತ್ತು ಇದು ಉಸಿರುಕಟ್ಟದಂತೆ ಸಹಾಯ ಮಾಡುತ್ತದೆ. ಹೆಬ್ಬಾವು ತನ್ನ ಆಹಾರವನ್ನು ಒಳಕ್ಕೆ ಎಳೆದುಕೊಳ್ಳುತ್ತಿರುವಾಗ, ಉಸಿರುಗೊಳವೆಯನ್ನು ತನ್ನ ಬಾಯಿಯ ಮುಂಭಾಗಕ್ಕೆ ಸರಿಯುವಂತೆ ಮಾಡುತ್ತದೆ. ಹೀಗೆ, ಹೆಬ್ಬಾವು ಆಹಾರವನ್ನು ತಿನ್ನುತ್ತಿರುವಾಗ, ಈ ಉಸಿರುಗೊಳವೆಯು ಅದಕ್ಕೆ ಗಾಳಿಯನ್ನು ಒದಗಿಸುತ್ತದೆ.
ಬೇರೆ ಬೇರೆ ಹೆಬ್ಬಾವುಗಳ ನಡುವಣ ವ್ಯತ್ಯಾಸವನ್ನು ಹೇಗೆ ಕಂಡುಹಿಡಿಯುವುದು?
ನನ್ನ ಗೈಡ್ ಒಂದು ಟೆರಾರಿಯಮ್‌ನ (ನೆಲದ ಮೇಲೆ ವಾಸಿಸುವ ಚಿಕ್ಕ ಪ್ರಾಣಿಗಳನ್ನು ಇಡುವಂತಹ ಪಂಜರ) ಮುಚ್ಚಳವನ್ನು ತೆರೆದರು. ನಾವು ಒಳಗೆ ನೋಡಿದಾಗ ಅಲ್ಲಿ ಎರಡು ಚಿಕ್ಕ ಹೆಬ್ಬಾವುಗಳಿದ್ದವು. ಅವು ಒಂದೇ ರೀತಿ ಕಾಣುತ್ತಿದ್ದುದರಿಂದ, ವೆನಿಸ್ವೇಲದ ಜೌಗು ಪ್ರದೇಶದಲ್ಲಿ ಸಂಶೋಧಕರು ನಡೆಸಿದ ಅಧ್ಯಯನದಲ್ಲಿ ಕಂಡುಬಂದ ನೂರಾರು ಕಾಡು ಹೆಬ್ಬಾವುಗಳ ನಡುವಣ ವ್ಯತ್ಯಾಸವನ್ನು ಅವರು ಹೇಗೆ ಕಂಡುಹಿಡಿದರು ಎಂದು ನಾನು ಕುತೂಹಲಪಟ್ಟೆ.
ಬೇರೆ ಬೇರೆ ಹಾವುಗಳನ್ನು ಗುರುತಿಸುವ ಸಮಸ್ಯೆಯನ್ನು ಬಗೆಹರಿಸಲಿಕ್ಕಾಗಿ ಸಂಶೋಧಕರು ಒಂದು ವಿಧಾನವನ್ನು ಕಂಡುಹಿಡಿದರು ಎಂದು ಶ್ರೀ. ಹಾಲ್ಮ್‌ಸ್ಟ್ರಮ್ ವಿವರಿಸಿದರು. ಅದೇನೆಂದರೆ, ಸಣ್ಣ ಪೇಪರ್ ಕ್ಲಿಪ್‌ಗಳ ಕಂಬಿಗಳನ್ನು ಉಪಯೋಗಿಸಿ ಗುರುತು ಹಾಕುವುದೇ ಆಗಿತ್ತು. ಆ ಸಣ್ಣ “ಕಂಬಿಗಳನ್ನು” ಕಾಯಿಸಿ, ಹೆಬ್ಬಾವಿನ ತಲೆಗಳ ಮೇಲೆ ಚಿಕ್ಕ ಸಂಖ್ಯೆಗಳ ಮುದ್ರೆಯೊತ್ತಿದರು. ಹೆಬ್ಬಾವುಗಳು ಮುದ್ರೆಯೊತ್ತಿರುವ ಸಂಖ್ಯೆಯೊಂದಿಗೆ ತಮ್ಮ ಪೊರೆಯನ್ನು ಬಿಡುವ ವರೆಗೆ ಈ ವಿಧಾನವು ಪರಿಣಾಮಕಾರಿಯಾಗಿತ್ತು. ಆದರೂ, ಪ್ರತಿಯೊಂದು ಹೆಬ್ಬಾವಿಗೆ ಮೊದಲಿನಿಂದಲೇ ತನ್ನದೇ ಆದ ಗುರುತು ಇದೆ ಎಂಬುದನ್ನು ಸಂಶೋಧಕರು ಗಮನಿಸಿದರು. ಹೇಗಂದರೆ, ಪ್ರತಿಯೊಂದು ಹೆಬ್ಬಾವಿನ ಬಾಲದ ಹಳದಿ ಬಣ್ಣದ ಕೆಳಭಾಗದಲ್ಲಿ ಕಪ್ಪು ಮಚ್ಚೆಗಳ ಒಂದು ನಮೂನೆಯಿರುತ್ತದೆ. ಮತ್ತು ಪ್ರತಿಯೊಬ್ಬ ಮಾನವನ ಬೆರಳ ಗುರುತು ಬೇರೆ ಬೇರೆಯಾಗಿರುವಂತೆಯೇ, ಪ್ರತಿಯೊಂದು ಹಾವಿನ ಕೆಳಭಾಗದಲ್ಲಿರುವ ಕಪ್ಪು ಮಚ್ಚೆಗಳ ನಮೂನೆ ಸಹ ಬೇರೆ ಬೇರೆಯಾಗಿರುತ್ತದೆ. “ನಾವು ಹೆಬ್ಬಾವಿನ ಚರ್ಮದ ಮೇಲಿರುವ 15 ಪೊರೆಗಳಷ್ಟು ಉದ್ದದ ಭಾಗದಲ್ಲಿ ಕಂಡುಬರುವ ನಮೂನೆಯನ್ನು ಕೈಯಿಂದ ಚಿತ್ರಿಸಬೇಕಾಗಿತ್ತಷ್ಟೆ. ಹೀಗೆ ಚಿತ್ರಿಸಿದಾಗ, ನಾವು ಅಧ್ಯಯನ ನಡೆಸಿದ 800 ಹೆಬ್ಬಾವುಗಳ ನಡುವಣ ವ್ಯತ್ಯಾಸವನ್ನು ತಿಳಿಸಲು ನಮ್ಮಲ್ಲಿ ಸಾಕಷ್ಟು ಭಿನ್ನ ನಮೂನೆಗಳಿದ್ದವು.”
ಯಾರು ಗೆಲ್ಲುತ್ತಾರೆ?
ನಾವು ಶ್ರೀ. ಹಾಲ್ಮ್‌ಸ್ಟ್ರಮ್‌ರವರ ಆಫೀಸಿನಲ್ಲಿ ನಮ್ಮ ಸಂದರ್ಶನವನ್ನು ಮುಗಿಸಿದಾಗ, ಅವರು ನನಗೆ ಒಂದು ಚಿತ್ರವನ್ನು ತೋರಿಸಿದರು. ಇದು ಅವರು ವೆನಿಸ್ವೇಲದಲ್ಲಿ ತೆಗೆದಿದ್ದ ಚಿತ್ರವಾಗಿದ್ದು, ಅದರಲ್ಲಿ ಅನೇಕ ಗಂಡು ಹೆಬ್ಬಾವುಗಳು ಒಂದರಮೇಲೊಂದು ಸುತ್ತಿಕೊಂಡಿದ್ದವು. ಇದು ತುಂಬ ಮನಮೋಹಕವಾದ ಒಂದು ದೃಶ್ಯವಾಗಿದೆ. ಒಂದಕ್ಕೊಂದು ಹೆಣೆದುಕೊಂಡಿರುವ ಹೆಬ್ಬಾವುಗಳ ದೇಹಗಳಿಂದ ಕೂಡಿದ ಈ ಗಂಟು, ಬ್ರೀಡಿಂಗ್ ಬಾಲ್ ಎಂದು ಕರೆಯಲ್ಪಡುವ ಒಂದು ರಚನೆಯನ್ನು ಉಂಟುಮಾಡುತ್ತದೆ ಎಂದು ಅವರು ವಿವರಿಸಿದರು. (26ನೆಯ ಪುಟದಲ್ಲಿರುವ ಚಿತ್ರವನ್ನು ನೋಡಿರಿ.) “ಈ ಬ್ರೀಡಿಂಗ್ ಬಾಲ್‌ನ ಒಳಗೆ ಎಲ್ಲಿಯೋ ಒಂದು ಕಡೆಯಲ್ಲಿ ಒಂದೇ ಒಂದು ಹೆಣ್ಣು ಹೆಬ್ಬಾವು ಇರುತ್ತದೆ. ಒಂದು ಸಲ ನಾವು 13 ಗಂಡು ಹೆಬ್ಬಾವುಗಳು ಒಂದೇ ಒಂದು ಹೆಣ್ಣು ಹೆಬ್ಬಾವಿನ ಸುತ್ತಲೂ ಸುತ್ತಿಕೊಂಡಿರುವುದನ್ನು ನೋಡಿದೆವು. ಇದು ಒಂದು ದಾಖಲೆಯಾಗಿತ್ತು” ಎಂದು ಅವರು ಹೇಳಿದರು.
ಗಂಡು ಹೆಬ್ಬಾವುಗಳು ಜಗಳವಾಡುತ್ತಿವೆಯೊ? ಒಂದರ್ಥದಲ್ಲಿ ಇದು ನಿಧಾನವಾಗಿ ಮಾಡುವ ಕುಸ್ತಿ ಸ್ಪರ್ಧೆಯಂತೆ ಕಾಣುತ್ತದೆ. ಆದರೆ, ವಾಸ್ತವದಲ್ಲಿ ಪ್ರತಿಯೊಂದು ಗಂಡು ಪ್ರತಿಸ್ಪರ್ಧಿಯು ಇನ್ನೊಂದನ್ನು ಹೊರಗೆ ತಳ್ಳಿ, ಹೆಣ್ಣು ಹೆಬ್ಬಾವಿನೊಂದಿಗೆ ಕೂಡುವ ಭಂಗಿಯಲ್ಲಿ ತನ್ನನ್ನು ಇರಿಸಿಕೊಳ್ಳಲು ಪ್ರಯತ್ನಿಸುತ್ತಿರುತ್ತದೆ. ಈ ಸ್ಪರ್ಧೆಯು ಎರಡರಿಂದ ನಾಲ್ಕು ವಾರಗಳಷ್ಟು ದೀರ್ಘ ಸಮಯದ ವರೆಗೂ ಮುಂದುವರಿಯಬಹುದು. ಕೊನೆಗೆ ಯಾರು ಗೆಲ್ಲುತ್ತಾರೆ? ಎಲ್ಲ ಹೆಬ್ಬಾವುಗಳಿಗಿಂತ ಬಲಿಷ್ಠವಾಗಿರುವ ಹೆಬ್ಬಾವು ಗೆಲ್ಲುತ್ತದೋ? ಅತಿ ಹೆಚ್ಚು ವೀರ್ಯವನ್ನು ಹೊರಸೂಸುವ ಹೆಬ್ಬಾವು ಗೆಲ್ಲುತ್ತದೋ? ಅಥವಾ ಸ್ಪರ್ಧೆಯಲ್ಲಿ ಎಲ್ಲ ಹೆಬ್ಬಾವುಗಳನ್ನು ಸೋಲಿಸಿಬಿಡುವ ಹೆಬ್ಬಾವು ಗೆಲ್ಲುತ್ತದೋ? ಸಂಶೋಧಕರು ಇದಕ್ಕೆ ಆದಷ್ಟು ಬೇಗನೆ ಉತ್ತರವನ್ನು ಕಂಡುಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ.
ಇನ್ನೇನು ಸಾಯಂಕಾಲವಾಗಲಿದ್ದಾಗ ನಮ್ಮ ಟೂರ್ ಮುಗಿಯಿತು. ನನ್ನ ಗೈಡ್ ಅತ್ಯುತ್ತಮವಾದ ರೀತಿಯಲ್ಲಿ ತಮ್ಮ ಕೆಲಸವನ್ನು ನಿಭಾಯಿಸಿದ್ದಕ್ಕಾಗಿ ನಾನು ಅವರಿಗೆ ಉಪಕಾರ ಹೇಳಿದೆ. ನಾನು ನನ್ನ ಆಫೀಸಿಗೆ ಹಿಂದಿರುಗುತ್ತಿದ್ದಾಗ, ನಾನು ನೋಡಿದ ಹಾಗೂ ಕಲಿತುಕೊಂಡ ವಿಷಯಗಳನ್ನು ಪುನಃ ಜ್ಞಾಪಿಸಿಕೊಂಡೆ. “ಹೆಬ್ಬಾವುಗಳು ಮನಮೋಹಕ ಜೀವಿಗಳು” ಎಂಬುದು ಜೀವಶಾಸ್ತ್ರಜ್ಞನಾದ ಕೇಸೂಸ್ ರೀಬಾಸ್‌ನ ಅಭಿಪ್ರಾಯವಾಗಿದ್ದರೂ, ನನ್ನಲ್ಲಿ ಇನ್ನೂ ಆ ಅಭಿಪ್ರಾಯ ಹುಟ್ಟಿಕೊಂಡಿಲ್ಲ. ಆದರೆ ಖಂಡಿತವಾಗಿಯೂ ಹೆಬ್ಬಾವುಗಳು ನನ್ನ ಗಮನವನ್ನು ಸೆಳೆದವು ಎಂಬುದನ್ನು ಮಾತ್ರ ನಾನು ಒಪ್ಪಿಕೊಳ್ಳುತ್ತೇನೆ. ಸಂಶೋಧಕರು ಕಾಡಿನಲ್ಲಿ ಹೆಬ್ಬಾವುಗಳನ್ನು ಪತ್ತೆಹಚ್ಚುವ ಕೆಲಸವನ್ನು ಮುಂದುವರಿಸುತ್ತಾ ಹೋದಂತೆ, ಈ ದೈತ್ಯಾಕಾರದ ಹಾವುಗಳು ಇನ್ನೂ ಹೆಚ್ಚಿನ ರಹಸ್ಯಗಳನ್ನು ಬಯಲುಪಡಿಸುವವೋ ಎಂಬುದನ್ನು ತಿಳಿದುಕೊಳ್ಳುವುದು ತುಂಬ ಸ್ವಾರಸ್ಯಕರ ಸಂಗತಿಯಾಗಿರುವುದು.
[ಪಾದಟಿಪ್ಪಣಿಗಳು]
^ ವೆನಿಸ್ವೇಲನ್ ವೈಲ್ಡ್‌ಲೈಫ್ ಡಿಪಾರ್ಟ್‌ಮೆಂಟ್ ಮತ್ತು ಕನ್‌ವೆನ್‌ಷನ್ ಆನ್ ಇಂಟರ್‌ನ್ಯಾಷನಲ್ ಟ್ರೇಡ್ ಇನ್ ಎನ್‌ಡೇಂಜರ್ಡ್ ಸ್ಪೀಶೀಸ್ ಆಫ್ ವೈಲ್ಡ್ ಫ್ಲೋರಾ ಆ್ಯಂಡ್ ಫೌನಾ ಸಂಸ್ಥೆಯು ಈ ಅಧ್ಯಯನಕ್ಕಾಗಿ ಹಣವನ್ನು ಒದಗಿಸುವ ಮೂಲಕ ಸಹಾಯ ಮಾಡಿತು.
^ ಉಭಯವಾಸಿಗಳು ಮತ್ತು ಉರಗಗಳ ಕುರಿತಾದ ಅಧ್ಯಯನ ಸಂಸ್ಥೆಯಿಂದ ಪ್ರಕಾಶಿಸಲ್ಪಟ್ಟ ಜರ್ನಲ್ ಆಫ್ ಹರ್ಪಿಟೊಲಜಿ ಪತ್ರಿಕೆ, ನಂಬ್ರ 4, 1997, 607-9ನೆಯ ಪುಟಗಳು.
[ಪುಟ 26ರಲ್ಲಿರುವ ಚಿತ್ರ]
ವೆನಿಸ್ವೇಲದಲ್ಲಿ ಹೆಬ್ಬಾವುಗಳ ಕುರಿತಾದ ಹೊರಾಂಗಣ ಅಧ್ಯಯನ
[ಪುಟ 27ರಲ್ಲಿರುವ ಚಿತ್ರ]
ವಿಲಿಯಮ್ ಹಾಲ್ಮ್‌ಸ್ಟ್ರಮ್
[ಪುಟ 28ರಲ್ಲಿರುವ ಚಿತ್ರ]
ಹೆಬ್ಬಾವಿನ ಬ್ರೀಡಿಂಗ್ ಬಾಲ್