ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜಗತ್ತನ್ನು ಗಮನಿಸುವುದು

ಜಗತ್ತನ್ನು ಗಮನಿಸುವುದು

ಜಗತ್ತನ್ನು ಗಮನಿಸುವುದು

ಮಕ್ಕಳಿಗೆ ಮನೆಗೆಲಸ

“ಈ ಕಾಲದ ಕಾರ್ಯಮಗ್ನ ಹೆತ್ತವರು, ತಮ್ಮ ಮಕ್ಕಳು ಮನೆಗೆಲಸದಲ್ಲಿ ಸಹಾಯಮಾಡುವ ವಿಷಯದಲ್ಲಿ ತುಂಬ ಸಲುಗೆಯಿಂದಿರುತ್ತಾರೆ” ಎಂದು ಟೊರಾಂಟೋ ಸ್ಟಾರ್‌ ಎಂಬ ವಾರ್ತಾಪತ್ರಿಕೆಯು ವರದಿಸುತ್ತದೆ. ಇದರ ಕುರಿತು ಪಾಸಿಟಿವ್‌ ಡಿಸಿಪ್ಲಿನ್‌ (ಇಂಗ್ಲಿಷ್‌) ಎಂಬ ಪುಸ್ತಕದ ಲೇಖಕಿಯಾದ ಜೇನ್‌ ನೆಲ್‌ಸನ್‌ ಹೇಳುವುದೇನೆಂದರೆ, ಮನೆಗೆಲಸಗಳು “ಎಂದೂ ಮಕ್ಕಳಿಗೆ ಹೆಚ್ಚು ಪ್ರಾಮುಖ್ಯವಾಗಿರುವ ವಿಷಯವಾಗಿರುವುದಿಲ್ಲ.” ಆದರೂ ಅಂಥ ಕೆಲಸಗಳು, “ಸ್ವಾವಲಂಬನೆಯನ್ನು ಹಾಗೂ ಸ್ವಗೌರವವನ್ನು ಹೆಚ್ಚಿಸಲು ಸಹಾಯಮಾಡುತ್ತವೆ.” ಮಗು ಎಂಬ (ಇಂಗ್ಲಿಷ್‌) ಪತ್ರಿಕೆಯಲ್ಲಿ ಕಾಣಿಸಿಕೊಂಡ ಒಂದು ಅಧ್ಯಯನಕ್ಕನುಸಾರ, ಎರಡರಿಂದ ಮೂರು ವರ್ಷದ ಮಕ್ಕಳು ಸುಲಭವಾಗಿ ಮಾಡಬಹುದಾದ ಕೆಲವೊಂದು ಮನೆಗೆಲಸಗಳ ಕುರಿತು ತಿಳಿಸಿತ್ತು. ಅವುಗಳಲ್ಲಿ ಕೆಲವು, ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಆಟಿಕೆಗಳನ್ನು ತೆಗೆದಿಡುವುದು ಹಾಗೂ ಕೊಳೆ ಬಟ್ಟೆಗಳನ್ನು ಅದಕ್ಕಾಗಿ ಇಡಲ್ಪಟ್ಟಿರುವ ಬುಟ್ಟಿಯಲ್ಲಿ ಹಾಕುವುದಾಗಿದೆ. ಮೂರರಿಂದ ಐದು ವರ್ಷದ ಮಕ್ಕಳು ಊಟದ ಮೇಜಿನ ಮೇಲೆ ತಟ್ಟೆಗಳನ್ನೂ ಸ್ಪೂನುಗಳನ್ನೂ ಜೋಡಿಸಿಡಬಹುದು ಮತ್ತು ಕೊಳೆಯಾದ ಪಾತ್ರೆಗಳನ್ನು ಸಿಂಕಿನಲ್ಲಿಡಬಹುದು. ಮತ್ತು ತಾವು ಆಟವಾಡುವ ಸ್ಥಳವನ್ನು ಚೊಕ್ಕಟವಾಗಿಡಬಹುದು. 5ರಿಂದ 9 ವರ್ಷದ ಮಕ್ಕಳು ತಮ್ಮ ಹಾಸಿಗೆಯನ್ನು ತಾವೇ ಹಾಸಿಕೊಳ್ಳುವುದು, ತೋಟದಲ್ಲಿ ಬಿದ್ದಿರುವ ಎಲೆಗಳನ್ನು ಆರಿಸುವುದು ಮತ್ತು ಕಳೆಗಳನ್ನು ಕೀಳುವಂಥ ಕೆಲಸಗಳನ್ನು ಮಾಡಬಹುದಾದರೆ, 9ರಿಂದ 12 ವರ್ಷದ ಮಕ್ಕಳು ಪಾತ್ರೆಗಳನ್ನು ತೊಳೆಯುವುದು ಮತ್ತು ಅವುಗಳನ್ನು ಒರೆಸಿಡುವುದು, ಕಸವನ್ನು ಹೊರಗೆ ಚೆಲ್ಲುವುದು, ಹುಲ್ಲನ್ನು ಕತ್ತರಿಸುವುದು ಮತ್ತು ಧೂಳು ಹೊಡೆಯುವಂಥ ಕೆಲಸಗಳನ್ನು ಮಾಡಬಹುದು. “ಈ ರೀತಿಯ ಕೆಲಸಗಳನ್ನು ಮಾಡಿಮುಗಿಸುವುದಕ್ಕಾಗಿ ಸಮಯದ ಗಡುವನ್ನು ನೀಡುವಾಗ ಫಲಿತಾಂಶಗಳು ಉತ್ತಮವಾಗಿರುವವು” ಎಂದು ನೆಲ್‌ಸನ್‌ ಹೇಳುತ್ತಾರೆ.

ಮಕ್ಕಳು ಮತ್ತು ನಿದ್ರೆ

“ಶಾಲೆಗೆ ಹೋಗುವ ಮಕ್ಕಳು ಎಷ್ಟು ಹೊತ್ತು ಎಚ್ಚರವಾಗಿರಬೇಕೆಂಬುದರ ಕುರಿತು ಮಾತ್ರವಲ್ಲ, ಮಲಗುವ ಮುಂಚೆ ಅವರು ಏನು ಮಾಡುತ್ತಿರುತ್ತಾರೆ ಎಂಬುದರ ಕುರಿತು ಸಹ ಹೆತ್ತವರು ಮಿತಿಯನ್ನು ಇಟ್ಟಿರಬೇಕು” ಎಂದು ಪೇರೆಂಟ್ಸ್‌ ಎಂಬ ಪತ್ರಿಕೆಯು ಹೇಳುತ್ತದೆ. “ಟಿವಿ ನೋಡುತ್ತಿರುವುದು, ಕಂಪ್ಯೂಟರ್‌ ಅಥವಾ ವಿಡಿಯೋ ಗೇಮ್ಸ್‌ಗಳನ್ನು ಆಡುತ್ತಿರುವುದು ಮತ್ತು ಇಂಟರ್‌ನೆಟ್‌ ಜಾಲಗಳನ್ನು ಹುಡುಕುತ್ತಿರುವಂಥ ಚಟುವಟಿಕೆಗಳು ಮಕ್ಕಳ ಮಿದುಳನ್ನು ಹೆಚ್ಚು ಕ್ರಿಯಾಶೀಲವಾಗಿರುವಂತೆ ಪ್ರಚೋದಿಸುತ್ತವೆ. ಶಾಲೆಯು ಮುಗಿದ ನಂತರ ಅತಿ ಹೆಚ್ಚಾದ ಚಟುವಟಿಕೆಗಳು, ಸ್ವಲ್ಪ ಸಮಯದಲ್ಲಿ ಮಾಡಿಮುಗಿಸಬಹುದಾದ ಶಾಲೆಯ ಮನೆಗೆಲಸಕ್ಕೆ ಅಡ್ಡಿಯನ್ನುಂಟುಮಾಡುತ್ತವೆ.” ಸರಿಯಾದ ನಿದ್ರೆಯಿಲ್ಲದಿರುವುದು ಅನೇಕವೇಳೆ ಚಿಕ್ಕ ಮಕ್ಕಳ ಮೇಲೆ ಭಿನ್ನವಾದ ಪರಿಣಾಮವನ್ನು ಉಂಟುಮಾಡುತ್ತದೆ. ಸರಿಯಾಗಿ ನಿದ್ರಿಸದಿದ್ದ ವಯಸ್ಕರಾದರೋ ತೂಕಡಿಸುತ್ತಾರೆ ಹಾಗೂ ಹೆಚ್ಚು ಮೌನವಾಗಿ ಇರುತ್ತಾರೆ. ಆದರೆ ಮಕ್ಕಳಾದರೋ ತುಂಬ ಕ್ರಿಯಾಶೀಲರು ಮತ್ತು ಹತೋಟಿಯಲ್ಲಿಡಲು ಸಾಧ್ಯವಾಗದವರಾಗುತ್ತಾರೆ. ಇದರ ಫಲಿತಾಂಶವಾಗಿ, ನಿದ್ರೆಯಿಂದ ವಂಚಿತರಾದ ಮಕ್ಕಳಿಗೆ ಶಾಲೆಯಲ್ಲಿ ಮನಸ್ಸನ್ನು ಕೇಂದ್ರಿಕರಿಸುವುದಕ್ಕೋ, ಗಮನಕೊಡುವುದಕ್ಕೋ ಕಷ್ಟವಾಗಿರುತ್ತದೆ ಮತ್ತು ಕಲಿತಿರುವ ವಿಷಯಗಳನ್ನು ಮರುಜ್ಞಾಪಿಸಿಕೊಳ್ಳಲು ಹಾಗೂ ಸಮಸ್ಯೆಗಳನ್ನು ಪರಿಹರಿಸಲು ಕಷ್ಟವಾಗಿರುತ್ತದೆ ಎಂದು ಸಂಶೋಧನೆಗಳು ತೋರಿಸುತ್ತವೆ. ಆದುದರಿಂದ, ಮಕ್ಕಳು ಸರಿಯಾದ ಸಮಯಕ್ಕೆ ನಿದ್ರೆ ಮಾಡುವಂತೆ ಹೆತ್ತವರು ಸಮಯವನ್ನು ನಿರ್ಧರಿಸಬೇಕು. ದೇಹದಲ್ಲಿರುವ ಶಕ್ತಿಯೆಲ್ಲಾ ಮುಗಿದ ಮೇಲೆ ಇಲ್ಲವೇ ಎಲ್ಲಾ ಚಟುವಟಿಕೆಗಳು ಮುಗಿದ ಮೇಲೆ ನಿದ್ರೆಗೆ ಆದ್ಯತೆಯನ್ನು ನೀಡುವಂಥದ್ದಾಗಿರಬಾರದು ಎಂದು ನಿಪುಣರು ಹೇಳುತ್ತಾರೆ.

ತೊಂದರೆಕೊಡುವ ವಿದ್ಯಾರ್ಥಿಗಳು

ಸಾಮಾನ್ಯವಾಗಿ, ಜಪಾನ್‌ ದೇಶದಲ್ಲಿ ಹದಿಹರೆಯದ ಮಕ್ಕಳು ದಂಗೆ ಏಳುವ ಸಮಸ್ಯೆಯೇ ಇರಲಿಲ್ಲ. ಆದರೆ, ಜಪಾನಿನಾದ್ಯಂತ ಶಾಲಾಶಿಕ್ಷಕರು ವರದಿಸುವುದೇನೆಂದರೆ, ಈಗೀಗ ಚಡಪಡಿಸುವ ಮತ್ತು ಅಶಾಂತರಾದ ಮಕ್ಕಳ ನಿಮಿತ್ತ ತರಗತಿಯಲ್ಲಿ ಶಿಸ್ತನ್ನು ಕಾಪಾಡುವುದು ತುಂಬ ಕಷ್ಟವಾಗಿದೆ ಎಂದು ವರದಿಸುತ್ತಾರೆ. ಟೋಕಿಯೋ ಮಹಾನಗರದ ಸರ್ಕಾರವು 9ರಿಂದ 11 ಹಾಗೂ 14 ವರ್ಷದ ವಿದ್ಯಾರ್ಥಿಗಳ ಬಳಿ, ಬೇರೆಯವರ ಕುರಿತು ಅವರಿಗಿರುವ ಭಾವನೆಯನ್ನು ಕಂಡುಹಿಡಿಯುವಂತೆ ಪ್ರಶ್ನೆಯನ್ನು ಕೇಳಿತು. ದ ಡೆಯ್ಲಿ ಯೊಮಿಯುರಿ ಎಂಬ ಆಂಗ್ಲ ವಾರ್ತಾಪತ್ರಿಕೆಗನುಸಾರ, ಅವರಲ್ಲಿ 65 ಪ್ರತಿಶತದಷ್ಟು ಮಂದಿ ತಮ್ಮ ಸ್ನೇಹಿತರೊಂದಿಗೂ, ಹಾಗೂ 60 ಪ್ರತಿಶತದಷ್ಟು ಮಂದಿ ತಮ್ಮ ಹೆತ್ತವರೊಂದಿಗೂ, ಹಾಗೂ 50 ಪ್ರತಿಶತದಷ್ಟು ಮಂದಿ ತಮ್ಮ ಶಾಲಾಶಿಕ್ಷಕರೊಂದಿಗೆ ಕಿರಿಕಿರಿಗೊಂಡಿರುವುದಾಗಿಯೂ ಮತ್ತು ಬೇಸತ್ತು ಹೋಗಿರುವುದಾಗಿಯೂ ಹೇಳಿದರು. ನಲವತ್ತು ಪ್ರತಿಶತದಷ್ಟು ಮಂದಿ ಹೇಳಿದ್ದೇನೆಂದರೆ, ತಮಗೆ ಕೋಪವನ್ನು ತಡೆದುಕೊಳ್ಳಲು ಆಗುವುದೇ ಇಲ್ಲ, ಹಾಗೆ ಮಾಡಿದರೂ ಅದು ತುಂಬ ವಿರಳವೆಂದು ಹೇಳಿದರು. ಅವರಲ್ಲಿ 5 ಮಂದಿ ವಿಧ್ಯಾರ್ಥಿಯರಲ್ಲಿ ಒಬ್ಬ ವಿದ್ಯಾರ್ಥಿ ಅಥವಾ ವಿಧ್ಯಾರ್ಥಿನಿಯು, ಕೈಗೆ ಸಿಕ್ಕ ವಸ್ತುಗಳನ್ನು ಒಡೆದುಹಾಕುವ ಮೂಲಕ ಕೋಪವನ್ನು ವ್ಯಕ್ತಪಡಿಸುತ್ತಾರೆಂದು ಹೇಳಿದರು.

ಭಾರತದ “ನಿಶ್ಶಬ್ದ ತುರ್ತುಪರಿಸ್ಥಿತಿ”

“ಕಳೆದ ಕೆಲವು ವರ್ಷಗಳಿಂದ ಆರೋಗ್ಯ ಮತ್ತು ಕ್ಷೇಮಾಭಿವೃದ್ಧಿಯ ಕ್ಷೇತ್ರದಲ್ಲಿ ಅನೇಕ ಸುಧಾರಣೆಗಳಾಗಿರುವುದಾದರೂ, ನ್ಯೂನಪೋಷಣೆಯು ಭಾರತದ “ನಿಶ್ಶಬ್ದ ತುರ್ತುಪರಿಸ್ಥಿತಿ”ಯಾಗಿಯೇ ಉಳಿದಿದೆ ಎಂದು ದ ಟೈಮ್ಸ್‌ ಆಫ್‌ ಇಂಡಿಯಾ ವಾರ್ತಾಪತ್ರಿಕೆಯು ಹೇಳುತ್ತದೆ. ನ್ಯೂನಪೋಷಣೆಯಿಂದಾಗಿ, ಭಾರತವು 230 ಮಿಲಿಯನ್‌ಗಿಂತಲೂ ಹೆಚ್ಚು ಹಣವನ್ನು ಆರೋಗ್ಯ ಸುಧಾರಣೆಗಾಗಿ ಮತ್ತು ಉತ್ಪಾದನೆಯ ನಷ್ಟಕ್ಕಾಗಿ ತೆರಬೇಕಾಗಿದೆ. ಒಂದು ವರದಿಗನುಸಾರ, ಭಾರತದಲ್ಲಿ ನಾಲ್ಕು ವರ್ಷಕ್ಕಿಂತಲೂ ಕಡಿಮೆ ವಯಸ್ಸಿನ ಸುಮಾರು 50 ಪ್ರತಿಶತಕ್ಕಿಂತಲೂ ಹೆಚ್ಚಿನ ಮಕ್ಕಳು ನ್ಯೂನಪೋಷಣೆಯಿಂದ ನರಳುತ್ತಿದ್ದಾರೆ. ನವಜಾತ ಶಿಶುಗಳಲ್ಲಿ 30 ಪ್ರತಿಶತದಷ್ಟು ಮಕ್ಕಳು “ಅತ್ಯಂತ ಕಡಿಮೆ ತೂಕದವರಾಗಿದ್ದಾರೆ.” ಹಾಗೂ 60 ಪ್ರತಿಶತ ಮಹಿಳೆಯರು ರಕ್ತಕೊರೆಯುಳ್ಳವರಾಗಿದ್ದಾರೆ. ವಿಶ್ವಬ್ಯಾಂಕಿನ, ಸಮಾಜ ಸುಧಾರಣೆಯ ಹಿರಿಯ ತಜ್ಞೆಯಾದ ಮೀರಾ ಚಟರ್ಜಿ ಹೇಳುವುದೇನೆಂದರೆ, “ನ್ಯೂನಪೋಷಣೆಯಿಂದ ವ್ಯಕ್ತಿಗಳ ಜೀವನ ಮತ್ತು ಕುಟುಂಬಗಳಿಗಾಗುವ ಹಾನಿ ಮಾತ್ರವಲ್ಲ, ವಿದ್ಯಾಭ್ಯಾಸಕ್ಕಾಗಿ ಹೂಡಿರುವ ಹಣದಿಂದಲೂ ಯಾವ ಪ್ರತಿಫಲವೂ ಸಿಗುವುದಿಲ್ಲ. ಮತ್ತು ಸಾಮಾಜಿಕ ಹಾಗೂ ಆರ್ಥಿಕ ಪ್ರಗತಿಗೆ ಒಂದು ದೊಡ್ಡ ಅಡ್ಡಗೋಡೆಯಾಗಿರುತ್ತದೆ.”

“ಸಂಚಾರಕ್ಕೆ ತಕ್ಕದಾದ ಮಾಧ್ಯಮ”

ಪೆಡಿಕ್ಯಾಬ್‌ ಅಥವಾ ತ್ರಿಚಕ್ರ ವಾಹನ ಎಂದು ಎಲ್ಲರಿಗೂ ಪರಿಚಿತವಾಗಿರುವ ಸೈಕಲ್‌ ರಿಕ್ಷಾಗಳು ಅನೇಕ ದಶಕಗಳಿಂದ ಭಾರತದಲ್ಲಿ ಉಪಯೋಗದಲ್ಲಿವೆ. ಆದರೆ, ಔಟ್‌ಲುಕ್‌ ಎಂಬ ಪತ್ರಿಕೆಯು ಈ ಸೈಕಲ್‌ ರಿಕ್ಷಾಗಳ ಕುರಿತು ಹೇಳುವುದೇನೆಂದರೆ, “ಭಾರವಾದ ಮರದ ವಿನ್ಯಾಸ, ಗಡುಸಾದ ಕಬ್ಬಿಣದ ದೊಡ್ಡ ಚೌಕಟ್ಟು, ವಕ್ರವಾದ ಆಸನ ಮತ್ತು ಗಿಯರ್‌ ಇಲ್ಲದ” ಈ ಸೈಕಲ್‌ ರಿಕ್ಷಾಗಳು ಈಗಲೂ ಹಾಗೆಯೇ ಇವೆ. ಇತ್ತೀಚಿನ ವರ್ಷಗಳಲ್ಲಿ, ಅವುಗಳನ್ನು ಉಪಯೋಗಿಸುವುದರ ಕುರಿತು ಹೆಚ್ಚು ವಿರೋಧವನ್ನು ಎಬ್ಬಿಸಿದ್ದಾರೆ. ಕಾರಣ, ಈ ರೀತಿಯ ಸೈಕಲ್‌ ರಿಕ್ಷಾಗಳು ಚಾಲಕರಿಗೆ ಹೆಚ್ಚು ಶ್ರಮವನ್ನು ಉಂಟುಮಾಡುತ್ತವೆ. ಅನೇಕವೇಳೆ ಈ ಚಾಲಕರು ತುಂಬಾ ವಯಸ್ಸಾದವರಾಗಿರುತ್ತಾರೆ ಮತ್ತು ಬಲಹೀನರಾಗಿರುತ್ತಾರೆ. ಆದರೆ ಈಗ, ಭಾರತದಲ್ಲಿ ವಾಯುಮಾಲಿನ್ಯವು ಹೆಚ್ಚು ಅಪಾಯಕಾರಿಯಾದ ಮಟ್ಟವನ್ನು ತಲುಪುತ್ತಿರುವುದರಿಂದ, ಸೈಕಲ್‌ ರಿಕ್ಷಾಗಳಿಗೆ ಹೆಚ್ಚು ಕಾಲ ಬದುಕುವ ಅವಕಾಶವು ಸಿಕ್ಕಿದೆ. ಹೇಗೆಂದರೆ, ದೆಹಲಿಯಲ್ಲಿರುವ ಒಂದು ಕಂಪನಿಯು ಸೈಕಲ್‌ ರಿಕ್ಷಾಗಳ ಒಂದು ಹೊಸ ವಿನ್ಯಾಸವನ್ನು ಹೊರತಂದಿದೆ. ವಿನ್ಯಾಸದಲ್ಲಿ ಅದು ಹೊಳಪುಳ್ಳದ್ದೂ ಹೆಚ್ಚು ಹಗುರವೂ ಆಗಿರುವುದರಿಂದ ಗಾಳಿಯ ಒತ್ತಡವನ್ನು ಕಡಿಮೆಮಾಡುತ್ತದೆ. ಮತ್ತು ತುಳಿಯುವಾಗ ಉಂಟಾಗುವ ಶ್ರಮವನ್ನು ಕಡಿಮೆಮಾಡುವುದಕ್ಕಾಗಿ ಗಿಯರ್‌ ಸಿಸ್ಟಮ್‌ ಅನ್ನು ಅಳವಡಿಸಲಾಗಿದೆ. ಪ್ರಯಾಣಿಕರು ತುಂಬಾ ಆರಾಮವಾಗಿ ಕುಳಿತುಕೊಳ್ಳುವಂತೆ ಮಾಡಿರುವ ಆಸನಗಳು ಕೂಡ ಇವೆ. ಕೈಹಿಡಿಗಳು ಕೂಡ ಮಣಿಕಟ್ಟಿನ ಮೇಲಾಗುವ ಶ್ರಮವನ್ನು ಕಡಿಮೆಗೊಳಿಸುತ್ತವೆ ಹಾಗೂ ಪ್ರಯಾಣಿಕರು ಆರಾಮವಾಗಿ ಕುಳಿತುಕೊಳ್ಳಲು ಸಹ ಸಾಕಷ್ಟು ಸ್ಥಳವನ್ನು ಒದಗಿಸಿದೆ. ಟಿ. ವಿನೀತ್‌ ಎಂಬ ಪ್ರಾಜೆಕ್ಟ್‌ ಅಧಿಕಾರಿಗನುಸಾರ, “ಮಾನವಹಕ್ಕುಗಳು ಮತ್ತು ಮಾಲಿನ್ಯರಹಿತ ವಾತಾವರಣದ ಕುರಿತು ಘೋಷಣೆಗಳನ್ನು ಮೊಳಗಿಸುವುದು ಫ್ಯಾಶನ್‌ ಆಗಿಬಿಟ್ಟಿರುವ ಇಂದಿನ ರಾಜಕೀಯ ಅಥವಾ ಸಾಮಾಜಿಕ ವಾತಾವರಣಕ್ಕೆ ಈ ಸೈಕಲ್‌ ರಿಕ್ಷಾಗಳು ತಕ್ಕದಾಗಿವೆ.” ಇದರ ಕುರಿತು ಔಟ್‌ಲುಕ್‌ ಪತ್ರಿಕೆಯು ಹೇಳುವುದು: “ತುಂಬ ಸರಳವಾದ ಈ ರಿಕ್ಷಾಗಳು 21ನೇ ಶತಮಾನದ ಸಂಚಾರಕ್ಕೆ ತಕ್ಕ ಮಾಧ್ಯಮವಾಗಿರಬಹುದು.”

ಎವರೆಸ್ಟ್‌ ಪರ್ವತವು ಈಗ ಇನ್ನೂ ಎತ್ತರವಾಗಿದೆ

“ವಿಶ್ವದಲ್ಲೇ ಅತ್ಯಂತ ಎತ್ತರವಾಗಿರುವ ಎವರೆಸ್ಟ್‌ ಶಿಖರವು, ಈ ಹಿಂದೆ ವಿಜ್ಞಾನಿಗಳು ನೆನಸಿದ್ದಕ್ಕಿಂತ ಈಗ ಇನ್ನೂ ಹೆಚ್ಚು ಎತ್ತರವಾಗಿದೆ ಮತ್ತು ಅದು ಇನ್ನು ಎತ್ತರವಾಗಿ ಬೆಳೆಯುತ್ತಲೇ ಇದೆ” ಎಂದು ಇತ್ತೀಚಿನ ರಾಯಟರ್ಸ್‌ ಎಂಬ ವಾರ್ತಾ ಏಜೆನ್ಸಿಯು ಹೇಳುತ್ತದೆ. ಹೆಚ್ಚು ಸಂಕೀರ್ಣವಾದ ಉಪಗ್ರಹ ವ್ಯವಸ್ಥೆಯನ್ನು ಉಪಯೋಗಿಸಿ ಪರ್ವತಾರೋಹಿಗಳು ಎವರೆಸ್ಟ್‌ ಪರ್ವತದ ಎತ್ತರವನ್ನು [29,035 ಅಡಿಗಳು] ಅಳತೆಮಾಡಿದರು. ಅಂದರೆ, ಅದು [8.9 ಕಿಲೋಮೀಟರ್‌ಗಳಷ್ಟು] ಎತ್ತರವಾಗಿತ್ತು . . . ಇದು ಹಿಂದೆ ಮಾಡಿದ್ದ ಅಧಿಕೃತ ಅಳತೆಗಿಂತ [ಏಳು ಅಡಿಗಳು] ಹೆಚ್ಚಾಗಿತ್ತು. ಅಂದರೆ, 1954ರಲ್ಲಿ ಎವರೆಸ್ಟ್‌ ಪರ್ವತವನ್ನು ಅಳತೆಮಾಡಿದಾಗ ಅದರ ಎತ್ತರವು [29,028 ಅಡಿಗಳು] ಆಗಿತ್ತು.” ಈ ಹೊಸ ಅಳತೆಯು ಹಿಮದಿಂದ ಮುಚ್ಚಿಹೋಗಿರುವ ಎವರೆಸ್ಟಿನ ತುದಿಯ ಎತ್ತರವಾಗಿತ್ತು. ಆದರೆ, ಈ ಹಿಮದ ಕೆಳಗಿರುವ ನಿಜವಾದ ಶಿಖರದ ತುದಿಯು ಇಲ್ಲಿಯವರೆಗೂ ಅಜ್ಞಾತವಾಗಿಯೇ ಉಳಿದಿದೆ. ನ್ಯಾಷನಲ್‌ ಜಿಯಾಗ್ರಫಿಕ್‌ ಸೊಸೈಟಿಯು ತನ್ನ ಭೂಪಟಗಳಲ್ಲಿ ಈ ಹೊಸ ಅಂಕೆಯನ್ನು ಸೇರಿಸಿಕೊಳ್ಳುತ್ತಿದೆ. ಎವರೆಸ್ಟ್‌ ಎತ್ತರವಾಗುತ್ತಿರುವುದಲ್ಲದೆ, ಇಡೀ ಹಿಮಾಲಯದ ಪರ್ವದ ಶ್ರೇಣಿಯು ವರ್ಷಕ್ಕೆ ಸುಮಾರು 1/16 ಇಂಚುಗಳಿಂದ 1/4 ಇಂಚುಗಳಷ್ಟು ಉತ್ತರ ದಿಕ್ಕಿನಡೆಗೆ, ಅಂದರೆ ಚೈನಾ ದೇಶದ ಕಡೆಗೆ ಸರಿಯುತ್ತಿದೆ.

ತಂದೆಯರು ಮತ್ತು ಹೆಣ್ಣುಮಕ್ಕಳು

ಇತ್ತೀಚೆಗೆ 2,500 ಹದಿಹರೆಯದವರೊಂದಿಗೆ ಮಾಡಲ್ಪಟ್ಟ ಹೆಲ್ತ್‌ ಕೆನಡಾ ಎಂಬ ಅಧ್ಯಯನದ ಮೇಲೆ ಆಧಾರಿತವಾದ ಸರ್ವೆಗಳು ತೋರಿಸಿದ್ದೇನೆಂದರೆ, ತಂದೆಯರು ಮತ್ತು ಮಕ್ಕಳ ಮಧ್ಯೆ ವಿಶೇಷವಾಗಿ ಹೆಣ್ಣುಮಕ್ಕಳ ನಡುವೆ ಸಂವಾದದ ಕೊರತೆಯಿದೆ ಎಂದು ಕೆನಡಾದ ಗ್ಲೋಬ್‌ ಆ್ಯಂಡ್‌ ಮೆಯ್ಲ್‌ ಎಂಬ ವಾರ್ತಾಪತ್ರಿಕೆಯು ತಿಳಿಸಿತು. 51 ಪ್ರತಿಶತ ಹುಡುಗರಿಗೆ ಹೋಲಿಸಿ ನೋಡುವಾಗ, 15ರಿಂದ 16 ವರ್ಷದ, 33 ಪ್ರತಿಶತದಷ್ಟು ಹುಡುಗಿಯರು ಮಾತ್ರ “ತಮಗೆ ಚಿಂತೆಯನ್ನುಂಟುಮಾಡುವ ವಿಷಯಗಳ ಕುರಿತು ತಮ್ಮ ತಂದೆಯರೊಂದಿಗೆ ಸುಲಭವಾಗಿ ಅಥವಾ ನಿರಾಳವಾಗಿ ಮಾತಾಡುತ್ತಾರೆ.” ಹಾಗಿದ್ದರೂ, “ಹುಡುಗಿಯರು ತಮ್ಮ ತಂದೆಯಂದಿರಿಗೆ ಹೆಚ್ಚು ಪ್ರಾಧಾನ್ಯತೆಯನ್ನು ಕೊಡುವವರಾಗಿದ್ದಾರೆ. ಮತ್ತು ಅವರ ಬೆಂಬಲವನ್ನು ಸಹ ಬಯಸುತ್ತಾರೆ” ಎಂದು ಆ ವರದಿಯು ಹೇಳುತ್ತದೆ. ಕ್ವೀನ್ಸ್‌ ವಿಶ್ವವಿದ್ಯಾನಿಲಯದ ಆ್ಯಲನ್‌ ಕಿಂಗ್‌ ನಂಬುವುದೇನೆಂದರೆ, “ತಂದೆಯಂದಿರಿಗೆ ತಮ್ಮ ಮಕ್ಕಳೊಂದಿಗೆ ಮುಕ್ತವಾಗಿ ಮಾತಾಡುವುದು ಕಷ್ಟ. ವಿಶೇಷವಾಗಿ, ಗೊಂದಲಕ್ಕೀಡಾಗುವ ಹದಿಹರೆಯದ ಆರಂಭದ ಸಮಯದಲ್ಲಿ ಅವರಿಗೆ ಇನ್ನೂ ಕಷ್ಟವಾಗಿರುತ್ತದೆ.” ಅಂಥ ಸಮಯಗಳಲ್ಲಿ ಅನೇಕ ತಂದೆಯರು ಲೈಂಗಿಕ ವಿಷಯಗಳಿಗೆ ಸಂಬಂಧಪಟ್ಟ ಹಾಗೂ ಅಪಾಯಕರ ನಡವಳಿಕೆಗಳ ಕುರಿತಾದ ವಿಷಯಗಳನ್ನು ಮಾತಾಡಲು ಬಯಸುವುದಿಲ್ಲ. ಆದರೆ, ವಿಶೇಷವಾಗಿ ಅನೇಕ ತಾಯಂದಿರು ಕೆಲಸಕ್ಕೆ ಹೋಗುವುದರಿಂದ, ಹಿಂದೆ ಅವರಿಗಿದ್ದಷ್ಟು ಸಮಯ ಈಗ ಇಲ್ಲದಿರುವುದರಿಂದ, ತಂದೆಯಂದಿರು ಆ ಸವಾಲನ್ನು ಎದುರಿಸುವಂತೆ ಅವರು ಪ್ರೋತ್ಸಾಹಿಸುತ್ತಾರೆ.

ಸೂಪರ್‌ ಸುಮೋ ಕುಸ್ತಿಪಟುಗಳು

ಸುಮೋ ಕುಸ್ತಿಪಟುಗಳು ಲೋಕವ್ಯಾಪಕವಾಗಿ ತಮ್ಮ ದೈತ್ಯಾಕಾರದ ನಡುವಿನ ಸುತ್ತಳತೆಗೆ ಪ್ರಸಿದ್ಧರಾಗಿದ್ದಾರೆ. ಅದರಲ್ಲೂ ವಿಶೇಷವಾಗಿ ಅವರ ಒಡಲ ಸುತ್ತ ಇರುವ ಬೊಜ್ಜಿಗಾಗಿ ಹೆಚ್ಚು ಪ್ರಸಿದ್ಧರು. ಆದರೆ, ಅವರ ಕಾಲುಗಳಿಗೆ ಬೊಜ್ಜಿನ ಹೊರೆ ತೀರ ಅತಿಯಾಗಿದೆ ಎಂದು ಜಪಾನಿನ ಕ್ರೀಡಾ ಶರೀರವಿಜ್ಞಾನತಜ್ಞರು ಹೇಳುತ್ತಾರೆ. ನ್ಯೂ ಸೈಯನ್‌ಟಿಸ್ಟ್‌ ಪತ್ರಿಕೆಯು ವರದಿಸುವುದೇನೆಂದರೆ, ಅತ್ಯಂತ ಹೆಚ್ಚು ತೂಕವಿರುವ ಎರಡು ಪ್ರಮುಖ ಸುಮೋ ಕುಸ್ತಿಪಟುಗಳ ವಿಭಾಗದವರಿಗೆ ಹಾನಿಯಾದ ಘಟನೆಗಳು, ಕಳೆದ ಐದು ವರ್ಷಗಳಲ್ಲಿ ಎರಡು ಪಟ್ಟು ಹೆಚ್ಚಾಗಿದೆ. ಇದು, 50 ಕುಸ್ತಿಪಟುಗಳ ಕಾಲಿನ ಶಕ್ತಿಯನ್ನು ದೇಹದ ಬೊಜ್ಜಿನೊಂದಿಗೆ ಹೋಲಿಸಿನೋಡುವಂತೆ ಶರೀರವಿಜ್ಞಾನತಜ್ಞರ ಗುಂಪಿನವರನ್ನು ನಡೆಸಿದೆ, “ಅವರಲ್ಲಿ 12ರಿಂದ 13 ಮಂದಿಯ ಕಾಲುಗಳ ಮಾಂಸಖಂಡಗಳು ಅವರ ಸ್ಥೂಲ ದೇಹದ ಭಾರವನ್ನು ಹೊರುವಷ್ಟು ಶಕ್ತಿಶಾಲಿಯಾಗಿರಲಿಲ್ಲ” ಎಂದು ಆ ವರದಿಯು ಹೇಳುತ್ತದೆ. ಅತ್ಯಂತ ಹೆಚ್ಚು ತೂಕವುಳ್ಳ ಕುಸ್ತಿಪಟುಗಳ ತೂಕವು 1974ರಲ್ಲಿ 126 ಕಿಲೋಗ್ರ್ಯಾಮ್‌ಗಳಷ್ಟು ಇತ್ತು. ಆದರೆ 1999ರಲ್ಲಿ 156 ಕಿಲೋಗ್ರ್ಯಾಮ್‌ಗಳಷ್ಟಾಗಿತ್ತು. “ಇದಕ್ಕೆ ಒಂದು ಕಾರಣ, ಜಪಾನಿನ ಜನಸಾಮಾನ್ಯರ ಸರಾಸರಿ ಗಾತ್ರದಲ್ಲಾಗಿರುವ ಹೆಚ್ಚಳವಾಗಿದೆ” ಎಂದು ಸುಮೋ ಕುರಿತು ಹೇಳಿಕೆ ನೀಡುವ ಡೋರೆನ್‌ ಸಿಮನ್ಸ್‌ ಹೇಳುತ್ತಾರೆ. ಕುಸ್ತಿಯನ್ನು ಉತ್ತಮವಾಗಿ ಮಾಡಲು ತೂಕವು ಹೆಚ್ಚಾಗಿರಬೇಕೆಂಬ ಅಗತ್ಯವಿಲ್ಲ. “ಒಬ್ಬ ಸುಮೋ ಕುಸ್ತಿಪಟುವಿನ ದೇಹದ ಸರಿಯಾದ ವಿನ್ಯಾಸವು ಪೇರು ಹಣ್ಣಿನಂತಿರಬೇಕು. ಟೊಂಕ ತೆಳ್ಳಗಿರಬೇಕು, ಬಲಿಷ್ಠವಾದ ತೊಡೆಗಳಿರಬೇಕು ಮತ್ತು ಕಣಕಾಲುಗಳು ಓಕ್‌ ಮರದಂತೆ ಇರಬೇಕು” ಎಂದು ಸಿಮನ್ಸ್‌ ಹೇಳುತ್ತಾರೆ.

ಧೂಮಪಾನದ ಹೊಗೆಗೆ ಒಡ್ಡಲ್ಪಟ್ಟಿರುವ ಮಕ್ಕಳು

“ಲೋಕದ ಅರ್ಧದಷ್ಟು ಮಕ್ಕಳು ಧೂಮಪಾನಿಗಳೊಂದಿಗೆ ಜೀವಿಸುತ್ತಾರೆ” ಎಂದು ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಕುರಿತು ಹೇಳಿಕೆಯನ್ನು ನೀಡುತ್ತಾ, ಯೂನಿವರ್ಸಿಟಿ ಆಫ್‌ ಕ್ಯಾಲಿಫೋರ್ನಿಯ ಬರ್ಕ್ಲಿ ವೆಲ್‌ನೆಸ್‌ ಲೆಟರ್‌ ತಿಳಿಸುತ್ತದೆ. ಹಾಗೆ ನೋಡುವುದಾದರೆ, ಆ “ಮಕ್ಕಳ ಸಂಖ್ಯೆಯು, 700 ದಶಲಕ್ಷಕ್ಕಿಂತಲೂ ಹೆಚ್ಚಾಗಿದೆ.” ಇದನ್ನು ನೋಡುವಾಗ, ಮುಂದಿನ 20 ವರ್ಷಗಳಲ್ಲಿ ಧೂಮಪಾನವನ್ನು ಮಾಡುವ ವಯಸ್ಕರ ಸಂಖ್ಯೆಯು, 1.6 ಶತಕೋಟಿಯಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಇನ್ನೂ ಅನೇಕ ಮಕ್ಕಳು ಧೂಮಪಾನದ ಹೊಗೆಯ ಸೇವನೆಗೆ ಬಲಿಯಾಗುವರು. ಈ ಮಕ್ಕಳಿಗೆ, ಕಿವಿಯ ಸೋಂಕುಗಳು ಮತ್ತು ಉಸಿರಾಟದ ಸಮಸ್ಯೆಗಳಂತಹ ಆರೋಗ್ಯ ಸಮಸ್ಯೆಗಳು ಹೆಚ್ಚಾಗುವ ಅಪಾಯವಿರುವುದು.