ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರು ಬದಲಾಗುತ್ತಾನೋ?

ದೇವರು ಬದಲಾಗುತ್ತಾನೋ?

ಬೈಬಲಿನ ದೃಷ್ಟಿಕೋನ

ದೇವರು ಬದಲಾಗುತ್ತಾನೋ?

ಮಾನವಶಾಸ್ತ್ರಜ್ಞನಾದ ಜಾರ್ಜ್‌ ಡಾರ್ಸಿ ಎಂಬುವವನು, “ಹಳೆಯ ಒಡಂಬಡಿಕೆಯಲ್ಲಿರುವ” ದೇವರನ್ನು “ಕ್ರೂರ ದೇವರು” ಎಂದು ವರ್ಣಿಸಿದನು. ಅದಲ್ಲದೇ ಅವನು ಹೇಳಿದ್ದು: “ಯಾಹ್ವೆ . . . ತೀರ ಅಪ್ರಿಯನಾದವನು. ಆತನು ಲೂಟಿಹೊಡೆಯುವವರ, ಹಿಂಸಕರ, ರಣವೀರರ ದೇವರು.” ಇನ್ನಿತರರು ಕೂಡ “ಹಳೆಯ ಒಡಂಬಡಿಕೆಯ” ದೇವರಾದ ಯಾಹ್ವೆ ಅಥವಾ ಯೆಹೋವನ ಕುರಿತು ಅದೇ ರೀತಿಯ ತೀರ್ಮಾನಕ್ಕೆ ಬಂದಿದ್ದಾರೆ. ಹಾಗಾಗಿ, “ಹೊಸ ಒಡಂಬಡಿಕೆಯಲ್ಲಿ” ಕ್ರಮೇಣವಾಗಿ ಕರುಣಾಳು ಹಾಗೂ ಪ್ರೇಮಮಯ ದೇವರಾಗಿ ತನ್ನ ಸ್ವಭಾವವನ್ನು ಬದಲಾಯಿಸಿಕೊಂಡಿರುವ ಯೆಹೋವನು ನಿಜವಾಗಿಯೂ ಒಬ್ಬ ಕ್ರೂರ ದೇವರಾಗಿದ್ದಾನೋ ಎಂದು ಕೆಲವರು ನೆನಸುವವರಾಗಿದ್ದಾರೆ.

ಬೈಬಲಿನ ದೇವರ ಕುರಿತು ಈ ರೀತಿಯಾದ ಅಭಿಪ್ರಾಯಗಳಿರುವುದು ಹೊಸದೇನಲ್ಲ. ಏಕೆಂದರೆ, ಇಂಥ ಅಭಿಪ್ರಾಯವನ್ನು ಪ್ರಪ್ರಥಮವಾಗಿ ಜನರ ಮುಂದಿಟ್ಟವನು, ಕ್ರಿ. ಶ. ಎರಡನೇ ಶತಮಾನದಲ್ಲಿದ್ದ, ನಾಸ್ಟಿಕ್‌ ಪಂಥಕ್ಕೆ ಪೂರ್ತಿಯಾಗಿ ಸೇರಿರದ ಮಾರ್‌ಸಿಯಾನ್‌ ಎಂಬುವವನು. ಮಾರ್‌ಸಿಯಾನ್‌ “ಹಳೇ ಒಡಂಬಡಿಕೆಯ” ದೇವರನ್ನು ತಿರಸ್ಕರಿಸಿದನು. ಏಕೆಂದರೆ, ಅವನಿಗನುಸಾರ ಹಳೇ ಒಡಂಬಡಿಕೆಯ ದೇವರು ತನ್ನನ್ನು ಆರಾಧಿಸುವವರಿಗೆ ಭೌತಿಕ ಲಾಭಗಳನ್ನು ನೀಡುವ ಒಬ್ಬ ನಿರಂಕುಶ, ಪ್ರತೀಕಾರ ಮಾಡುವ ಹಾಗೂ ಹಿಂಸಾತ್ಮಕ ದೇವರಾಗಿದ್ದನು. ಆದರೆ ಮತ್ತೊಂದು ಕಡೆಯಲ್ಲಿ, ಯೇಸು ಕ್ರಿಸ್ತನ ಮೂಲಕ ಪ್ರಕಟವಾಗಿರುವ “ಹೊಸ ಒಡಂಬಡಿಕೆಯ” ದೇವರು, ಒಬ್ಬ ಪರಿಪೂರ್ಣ ದೇವರಾಗಿದ್ದು, ಕೃಪೆಯಲ್ಲೂ ಕ್ಷಮೆಯಲ್ಲೂ ಅಪ್ಪಟ ಪ್ರೀತಿಯನ್ನೂ ಕರುಣೆಯನ್ನೂ ತೋರಿಸುವ ದೇವರಾಗಿದ್ದಾನೆ ಎಂದು ಮಾರ್‌ಸಿಯಾನ್‌ ವರ್ಣಿಸಿದನು.

ಯೆಹೋವನು ಪರಿಸ್ಥಿತಿಗೆ ತಕ್ಕಂತೆ ವರ್ತಿಸುತ್ತಾನೆ

ಯೆಹೋವ ಎಂಬ ದೇವರ ಹೆಸರು ತಾನೇ, “ಆತನು ಆಗಿಸುತ್ತಾನೆ” ಎಂಬುದಾಗಿದೆ. ಇದು, ತನ್ನ ಎಲ್ಲಾ ವಾಗ್ದಾನಗಳನ್ನು ನೆರವೇರಿಸುವವನಾಗಿ ಅದಕ್ಕೆ ತಕ್ಕಂತೆ ತನ್ನನ್ನು ಆಗಿಸಿಕೊಳ್ಳುತ್ತಾನೆ ಅಥವಾ ಅನುಗೊಳಿಸಿಕೊಳ್ಳುತ್ತಾನೆ ಎಂಬ ಅರ್ಥವನ್ನು ಕೊಡುತ್ತದೆ. ಒಮ್ಮೆ ಮೋಶೆಯು ದೇವರ ಬಳಿ ಆತನ ಹೆಸರನ್ನು ಕೇಳಿದಾಗ, ಯೆಹೋವನು ತನ್ನ ಹೆಸರಿನ ಅರ್ಥವನ್ನು ಈ ರೀತಿಯಾಗಿ ವಿವರಿಸಿದನು: “ಇರುವಾತನೇ ಆಗಿದ್ದೇನೆ.” (ವಿಮೋಚನಕಾಂಡ 3:14) ರೋಥರ್‌ಹಾಮ್‌ ಅನುವಾದವು ಇದನ್ನು ಈ ರೀತಿಯಲ್ಲಿ ಭಾಷಾಂತರಿಸುತ್ತದೆ: “ನನ್ನ ಇಚ್ಛೆಗನುಸಾರ ಬದಲಾಗುವೆನು.”

ಆದುದರಿಂದ, ಯೆಹೋವನು ತನ್ನ ನೀತಿಯ ಉದ್ದೇಶಗಳನ್ನು ಮತ್ತು ವಾಗ್ದಾನಗಳನ್ನು ನೆರವೇರಿಸುವುದಕೋಸ್ಕರ ಅಗತ್ಯಕ್ಕನುಸಾರ ಪರಿಣಮಿಸಿ ಅಥವಾ ಅದರಂತೆ ಆಗಲು ಅಥವಾ ಪರಿಣಮಿಸಲು ಉದ್ದೇಶಿಸುತ್ತಾನೆ. ಇದಕ್ಕೆ ಒಂದು ಪುರಾವೆಯೇನೆಂದರೆ, ಆತನಿಗಿರುವ ಅನೇಕ ಬಿರುದುಗಳು ಮತ್ತು ವರ್ಣನಾತ್ಮಕ ಹೆಸರುಗಳೇ ಆಗಿವೆ. ಅವು ಯಾವುವೆಂದರೆ: ಸ್ವಗೌರವವನ್ನು ಕಾಪಾಡಿಕೊಳ್ಳುವವನು, ನ್ಯಾಯಸ್ಥಾಪಕನು, ಕುರುಬನು, ಪ್ರಾರ್ಥನೆಯನ್ನು ಕೇಳುವವನು, ಒಡೆಯನು, ಕರ್ತನು, ಸೇನಾಧೀಶ್ವರನು, ಬೋಧಕನು, ನಿರ್ಮಾಣಿಕನು, ಸದಮಲಸ್ವಾಮಿ, ಭಾಗ್ಯವಂತನಾದ ದೇವರು ಎಂದೆಲ್ಲಾ ಆತನಿಗೆ ಹೇಳಲಾಗಿದೆ. ತನ್ನ ಪ್ರೀತಿಯುಳ್ಳ ಉದ್ದೇಶಗಳನ್ನು ನೆರವೇರಿಸುವುದಕ್ಕಾಗಿ ಈ ಎಲ್ಲಾ ಮತ್ತು ಅದಕ್ಕಿಂತಲೂ ಹೆಚ್ಚಿನ ಪಾತ್ರವನ್ನು ವಹಿಸಿಕೊಳ್ಳಲು ಆತನು ಉದ್ದೇಶಿಸಿದ್ದಾನೆ.—ವಿಮೋಚನಕಾಂಡ 34:14; ನ್ಯಾಯಸ್ಥಾಪಕರು 11:27; ಕೀರ್ತನೆ 23:1; 65:2; 73:28; 89:26; ಯೆಶಾಯ 8:13; 30:20; 40:28; 41:14; 1 ತಿಮೊಥೆಯ 1:11.

ಹಾಗಾದರೆ, ದೇವರ ವ್ಯಕಿತ್ವ ಅಥವಾ ಮಟ್ಟಗಳು ಬದಲಾಗುತ್ತಿರುತ್ತವೆ ಎಂಬುದು ಇದರ ಅರ್ಥವೋ? ಖಂಡಿತವಾಗಿಯೂ ಇಲ್ಲ. ದೇವರ ಕುರಿತಾಗಿ ಯಾಕೋಬ 1:17ನೇ ವಚನವು ಹೇಳುವುದು: “ಆತನಲ್ಲಿ ಚಂಚಲತ್ವವೇನೂ ಇಲ್ಲ, ವ್ಯತ್ಯಾಸದ ಸೂಚನೆಯೂ ಇಲ್ಲ.” ನೀವು ಹೀಗೆ ಕೇಳಬಹುದು, ಹಾಗಾದರೆ ದೇವರು ತನ್ನ ವ್ಯಕ್ತಿತ್ವದಲ್ಲಿ ಸ್ವಲ್ಪವೂ ಬದಲಾಗದೆ, ವಿಭಿನ್ನವಾದ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಲು ಹೇಗೆ ಸಾಧ್ಯ?

ಇದು ಹೇಗೆ ಸಾಧ್ಯ ಎಂಬುದನ್ನು ಅರ್ಥಮಾಡಿಕೊಳ್ಳಲು, ಹೆತ್ತವರು ತಮ್ಮ ಮಕ್ಕಳಿಗಾಗಿ ವಹಿಸಿಕೊಳ್ಳುವ ಬೇರೆಬೇರೆ ಪಾತ್ರಗಳ ಉದಾಹರಣೆಯ ಮೂಲಕ ದೃಷ್ಟಾಂತಿಸಬಹುದು. ಬೆಳಗ್ಗಿನಿಂದ ಸಂಜೆಯ ವರೆಗೆ ಹೆತ್ತವಳೊಬ್ಬಳು ಅಡುಗೆಮಾಡುವವಳಾಗಿ, ಮನೆಗೆಲಸಮಾಡುವವಳಾಗಿ, ಒಬ್ಬ ಎಲೆಕ್ಟ್ರಿಷಿಯನ್‌ ಆಗಿ, ಒಬ್ಬ ದಾದಿಯಾಗಿ, ಸ್ನೇಹಿತಳಾಗಿ, ಸಲಹೆಗಾರಳಾಗಿ, ಒಬ್ಬ ಶಿಕ್ಷಕಿಯಾಗಿ, ಶಿಸ್ತುಗೊಳಿಸುವವಳಾಗಿ, ಹೀಗೆ ಇನ್ನೂ ಅನೇಕ ಪಾತ್ರಗಳನ್ನು ವಹಿಸಿಕೊಳ್ಳಬಹುದು. ವಾಸ್ತವದಲ್ಲಿ ಈ ಪಾತ್ರಗಳನ್ನು ವಹಿಸಿಕೊಳ್ಳುವಾಗ ಹೆತ್ತವಳ ವ್ಯಕ್ತಿತ್ವ ಬದಲಾಗುವುದಿಲ್ಲ; ಆಕೆಯೋ ಅಥವಾ ಅವನೋ ಪರಿಸ್ಥಿತಿಗನುಸಾರ ತಮ್ಮನ್ನು ಅನುಗೊಳಿಸಿಕೊಳ್ಳುತ್ತಾರೆ. ಇದು ಯೆಹೋವನ ವಿಷಯದಲ್ಲೂ ನಿಜವಾಗಿದೆ. ಆದರೆ ಅದು ಹೆತ್ತವರಿಗಿಂತ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಆತನು ತನ್ನ ಉದ್ದೇಶವನ್ನು ಪೂರ್ತಿಗೊಳಿಸುವುದಕ್ಕಾಗಿ ಮತ್ತು ತನ್ನ ಸೃಷ್ಟಿಜೀವಿಗಳ ಪ್ರಯೋಜನಕ್ಕಾಗಿ ತನ್ನನ್ನು ಹೇಗೆ ಅನುಗೊಳಿಸಿಕೊಳ್ಳುತ್ತಾನೆಂಬುದಕ್ಕೆ ಮಿತಿಯೇ ಇಲ್ಲ.—ರೋಮಾಪುರ 11:33.

ಉದಾಹರಣೆಗಾಗಿ, ಹೀಬ್ರು ಮತ್ತು ಕ್ರೈಸ್ತ ಗ್ರೀಕ್‌ ಶಾಸ್ತ್ರವಚನಗಳಲ್ಲಿ ಯೆಹೋವನು ತನ್ನನ್ನು ಪ್ರೀತಿ ಮತ್ತು ಕರುಣಾಳುವಾದ ದೇವರಾಗಿ ಪ್ರಕಟಪಡಿಸಿದ್ದಾನೆ. ಸಾ.ಶ.ಪೂ ಎಂಟನೇ ಶತಮಾನದಲ್ಲಿ ಜೀವಿಸಿದ್ದ ಮೀಕನು ಯೆಹೋವನ ಕುರಿತು ಹೇಳಿದ್ದೇನೆಂದರೆ: “ನಿನಗೆ ಯಾವ ದೇವರು ಸಮಾನ? ನೀನು ನಿನ್ನ ಸ್ವಾಸ್ತ್ಯದವರಲ್ಲಿ ಉಳಿದವರ ಅಪರಾಧವನ್ನು ಕ್ಷಮಿಸುವವನೂ ಅವರ ದ್ರೋಹವನ್ನು ಲಕ್ಷಿಸದವನೂ ಆಗಿದ್ದೀ; ಹೌದು, ನಮ್ಮ ದೇವರು ನಿತ್ಯವೂ ಕೋಪಿಸುವವನಲ್ಲ, ಕರುಣೆಯೇ ಆತನಿಗೆ ಇಷ್ಟ.” (ಮೀಕ 7:18) ತದ್ರೀತಿಯಲ್ಲಿ, ಅಪೋಸ್ತಲ ಯೋಹಾನನು ಕೂಡ “ದೇವರು ಪ್ರೀತಿಸ್ವರೂಪಿ” ಎಂಬ ಪ್ರಸಿದ್ಧ ವಾಕ್ಯವನ್ನು ಬರೆದನು.—1 ಯೋಹಾನ 4:8.

ಆದರೆ ಮತ್ತೊಂದು ಕಡೆಯಲ್ಲಿ, ಬೈಬಲಿನ ಎರಡೂ ಭಾಗಗಳಲ್ಲಿ ಅಂದರೆ ಗ್ರೀಕ್‌ ಮತ್ತು ಹೀಬ್ರು ಶಾಸ್ತ್ರವಚನಗಳಲ್ಲಿ, ಬೇಕುಬೇಕೆಂತಲೇ ಸ್ವಲ್ಪವೂ ಪರಿತಾಪವನ್ನು ತೋರಿಸದೇ ತನ್ನ ನಿಯಮಗಳನ್ನು ಪದೇ ಪದೇ ಮೀರುವವರಿಗೆ ಮತ್ತು ಇತರರಿಗೆ ಹಾನಿಯನ್ನು ಉಂಟುಮಾಡುವವರಿಗೆ ಯೆಹೋವನನ್ನು ನೀತಿಯುತ ನ್ಯಾಯಧಿಪತಿಯಾಗಿ ಪರಿಚಯಿಸಲಾಗಿದೆ. “ಯೆಹೋವನು . . . ಎಲ್ಲಾ ದುಷ್ಟರನ್ನು ಸಂಹರಿಸುತ್ತಾನೆ.” (ಕೀರ್ತನೆ 145:20) ಅದೇ ರೀತಿಯಲ್ಲಿ, ಯೋಹಾನ 3:36 ಹೇಳುವುದು: “ಆತನ ಮಗನನ್ನು ನಂಬುವವನಿಗೆ ನಿತ್ಯಜೀವ ಉಂಟು; ಮಗನಿಗೆ ಒಳಗಾಗದವನು ಜೀವವನ್ನು ಕಾಣುವದೇ ಇಲ್ಲ; ದೇವರ ಕೋಪವು ಅವನ ಮೇಲೆ ನೆಲೆಗೊಂಡಿರುವದು.”

ಗುಣಗಳಲ್ಲಿ ಕಿಂಚಿತ್ತೂ ಬದಲಾಗದವನು

ಯೆಹೋವನ ವ್ಯಕ್ತಿತ್ವ ಹಾಗೂ ಆತನ ಪ್ರಧಾನವಾದ ಗುಣಗಳಾದ ಪ್ರೀತಿ, ವಿವೇಕ, ನ್ಯಾಯ ಮತ್ತು ಶಕ್ತಿ, ಇವುಗಳಲ್ಲಿ ಯಾವುದೂ ಬದಲಾಗಿಲ್ಲ. ಆತನು ಇಸ್ರಾಯೇಲ್ಯರಿಗೆ ಹೇಳಿದ್ದು: “ಯೆಹೋವನಾದ ನಾನು ಮಾರ್ಪಟ್ಟಿಲ್ಲ.” (ಮಲಾಕಿಯ 3:6) ಇದು ಮಾನವಕುಲದ ಸೃಷ್ಟಿಯಾಗಿ ಸುಮಾರು 3,500 ವರ್ಷಗಳ ಬಳಿಕ ಹೇಳಲ್ಪಟ್ಟಿತು. ಈ ಹೇಳಿಕೆಯು ಎಷ್ಟು ಸತ್ಯವಾಗಿದೆ ಎಂಬುದನ್ನು, ಇಡೀ ಬೈಬಲನ್ನು ಹೆಚ್ಚು ಗಮನವಿಟ್ಟು ಪರೀಕ್ಷಿಸುವಾಗ, ದೇವರು ತನ್ನ ಗುಣಗಳಲ್ಲಿ ಮತ್ತು ಮಟ್ಟಗಳಲ್ಲಿ ಕಿಂಚಿತ್ತೂ ಬದಲಾಗದವನಾಗಿದ್ದಾನೆ ಎಂಬುದು ತಿಳಿದುಬರುತ್ತದೆ. ವರ್ಷಗಳು ಕಳೆದಂತೆ ಮಾನವರ ವ್ಯಕ್ತಿತ್ವವು ಪರಿಪಕ್ವಗೊಳ್ಳುವಂತೆ, ಶತಮಾನಗಳು ಕಳೆದಂತೆ ಯೆಹೋವನ ವ್ಯಕ್ತಿತ್ವದಲ್ಲಿ ಯಾವುದೇ ಪರಿಪಕ್ವತೆಯು ಆಗಿಲ್ಲ, ಹಾಗೆ ಆಗುವ ಅಗತ್ಯವೂ ಆತನಿಗಿಲ್ಲ.

ಬೈಬಲಿನಾದ್ಯಂತ ಪ್ರಕಟಿಸಲ್ಪಟ್ಟಿರುವ ನೀತಿಗಾಗಿರುವ ದೇವರ ಅಚಲತೆಯಲ್ಲಿ ಯಾವುದೇ ರೀತಿಯ ಕೊರತೆಯೂ ಇಲ್ಲ. ಹಾಗೆಯೇ ಆರಂಭದಲ್ಲಿ ಏದೆನ್‌ ತೋಟದಲ್ಲಿ ಮಾನವರೊಂದಿಗೆ ವ್ಯವಹರಿಸುವಾಗ ಇದ್ದ ಆತನ ಪ್ರೀತಿಯಲ್ಲಿ ಹೆಚ್ಚಳವೂ ಇಲ್ಲ. ಬೈಬಲಿನ ಬೇರೆಬೇರೆ ಭಾಗಗಳಲ್ಲಿ ಯೆಹೋವನು ಪ್ರದರ್ಶಿಸಿರುವಂತೆ ಕಾಣುವ ಆತನ ವ್ಯಕ್ತಿತ್ವದಲ್ಲಿರುವ ವ್ಯತ್ಯಾಸಗಳು, ವಾಸ್ತವದಲ್ಲಿ ಕಿಂಚಿತ್ತೂ ಬದಲಾಗದ ಅದೇ ವ್ಯಕ್ತಿತ್ವದ ವಿಭಿನ್ನ ಅಂಶಗಳಾಗಿವೆ. ಈ ವ್ಯತ್ಯಾಸಗಳು, ವಿಭಿನ್ನ ಸನ್ನಿವೇಶಗಳು ಹಾಗೂ ವ್ಯವಹರಿಸಿದ ವ್ಯಕ್ತಿಗಳೊಂದಿಗೆ ಅವಶ್ಯಪಡಿಸಿದ ಮನೋಭಾವಗಳ ಇಲ್ಲವೇ ಸಂಬಂಧಗಳ ಪರಿಣಾಮವಾಗಿದೆ.

ಆದುದರಿಂದ, ಶತಮಾನಗಳು ಕಳೆದಂತೆ ದೇವರ ವ್ಯಕ್ತಿತ್ವವು ಬದಲಾಗಿಲ್ಲ, ಹಾಗೆಯೇ ಭವಿಷ್ಯದಲ್ಲಿ ಕೂಡ ಬದಲಾಗದು ಎಂಬುದನ್ನು ಶಾಸ್ತ್ರವಚನಗಳು ಸ್ಪಷ್ಟವಾಗಿ ತೋರಿಸುತ್ತವೆ. ಏಕೆಂದರೆ, ಯೆಹೋವನು ಸ್ಥಿರತೆ ಮತ್ತು ಏಕರೂಪತೆಗೆ ಅತಿಶ್ರೇಷ್ಠವಾದ ಮೂರ್ತರೂಪನಾಗಿದ್ದಾನೆ. ಎಲ್ಲಾ ಸಮಯಗಳಲ್ಲೂ ಆತನು ವಿಶ್ವಾಸಪಾತ್ರನೂ ಹಾಗೂ ಭರವಸಾರ್ಹನೂ ಆಗಿದ್ದಾನೆ. ಆದ್ದರಿಂದ, ನಾವು ಆತನ ಮೇಲೆ ಎಂದೆಂದಿಗೂ ಅವಲಂಬಿಸಸಾಧ್ಯವಿದೆ.

[ಪುಟ 12, 13ರಲ್ಲಿರುವ ಚಿತ್ರ]

ಸೊದೋಮ್‌ ಮತ್ತು ಗೊಮೋರ ಪಟ್ಟಣಗಳನ್ನು ನಾಶಮಾಡಿದ ಅದೇ ದೇವರು . . . .

. . . ಒಂದು ನೀತಿಯ ಹೊಸ ಲೋಕವನ್ನೂ ತರುವನು