ನಗುಮುಖದಿಂದಿರಿ ಅದು ನಿಮಗೆ ಒಳ್ಳೆಯದು!
ನಗುಮುಖದಿಂದಿರಿ ಅದು ನಿಮಗೆ ಒಳ್ಳೆಯದು!
ಜಪಾನ್ ದೇಶದಲ್ಲಿರುವ ಎಚ್ಚರ! ಸುದ್ದಿಗಾರರಿಂದ
ಯಥಾರ್ಥವಾಗಿರುವಾಗ ಅದು ಸಂಶಯವೆಂಬ ಭೂತವನ್ನು ಹೊಡೆದೋಡಿಸುವುದು. ಅನೇಕ ವರ್ಷಗಳಿಂದ ಹೂತುಹೋಗಿರುವ ಪೂರ್ವಾಗ್ರಹದ ಭಾವನೆಗಳನ್ನು ಕಿತ್ತೊಗೆಯುವುದು. ಅವಿಶ್ವಾಸದಿಂದ ಜಡವಾಗಿರುವ ಹೃದಯವನ್ನು ಮೃದುವಾಗಿಸುವುದು. ಅನೇಕರಿಗೆ ನೆಮ್ಮದಿ ಹಾಗೂ ಸಂತೋಷವನ್ನು ತರುವುದು. “ಚಿಂತಿಸಬೇಡ, ನಾನು ಅರ್ಥಮಾಡಿಕೊಳ್ಳಬಲ್ಲೆ” ಎಂದು ಅದು ಹೇಳುವುದು. “ನಾವು ಮತ್ತೆ ಸ್ನೇಹಿತರಾಗಿರಬಹುದು ಎಂದು ನೆನಸುತ್ತೇನೆ” ಎಂದು ಕೇಳಿಕೊಳ್ಳುವುದು. ಇಷ್ಟೊಂದು ಶಕ್ತಿಶಾಲಿಯಾದ ಆ ಮೂಲ ಯಾವುದು? ಹೌದು, ಅದು ಮುಗುಳ್ನಗೆಯೇ. ಅದು ನಿಮ್ಮ ಮುಗುಳ್ನಗೆಯಾಗಿರಸಾಧ್ಯವಿದೆ.
ಮುಗುಳ್ನಗೆ ಎಂದರೇನು? ನಿಘಂಟುಗಳಲ್ಲಿ ಮುಗುಳ್ನಗೆ, ಸಾಮಾನ್ಯವಾಗಿ ‘ತುಟಿಗಳ ಮೂಲೆಯಲ್ಲಿರುವ ತಿರುವುಗಳು ಸ್ವಲ್ಪ ಮೇಲಕ್ಕೆ ಏರುವುದು ಹಾಗೂ ವಿನೋದವನ್ನು, ಸಮ್ಮತಿಯನ್ನು ಅಥವಾ ಸಂತೋಷವನ್ನು ವ್ಯಕ್ತಪಡಿಸುವ ಮುಖಭಾವವಾಗಿದೆ’ ಎಂಬ ಅರ್ಥವನ್ನು ಕೊಡಲಾಗಿದೆ. ಇದರಲ್ಲೇ ಆದರದ ನಗುವಿನ ರಹಸ್ಯವು ಅಡಗಿರುವುದು. ಒಬ್ಬರ ಅನಿಸಿಕೆಗಳನ್ನು ವ್ಯಕ್ತಪಡಿಸುವುದು ಇಲ್ಲವೇ ಒಬ್ಬರ ಭಾವನೆಗಳನ್ನು ಇನ್ನೊಬ್ಬರೊಂದಿಗೆ ಅವ್ಯಕ್ತ ಭಾಷೆಯಲ್ಲಿ ವ್ಯಕ್ತಪಡಿಸುವುದೇ ನಗು. ಅದೇ ಸಮಯದಲ್ಲಿ, ಗೇಲಿಮಾಡುವುದು ಅಥವಾ ಅಸಡ್ಡೆಯನ್ನು ಕೂಡ ನಗುವಿನ ಮೂಲಕ ವ್ಯಕ್ತಪಡಿಸಬಹುದು. ಆದರೆ ಅದು ಬೇರೆ ವಿಷಯ.
ಈಗ ಪ್ರಶ್ನೆಯೇನೆಂದರೆ, ನಗು ನಿಜವಾಗಿಯೂ ಯಾವುದಾದರೂ ಗಮನಾರ್ಹವಾದ ಬದಲಾವಣೆಯನ್ನು ಉಂಟುಮಾಡಬಲ್ಲದೋ? ಯಾರೋ ಒಬ್ಬರು ನಿಮ್ಮನ್ನು ನೋಡಿ ಮಂದಹಾಸವನ್ನು ಬೀರಿದಾಗ, ಅದು ನಿಮ್ಮ ಮನಸ್ಸು ಹಗುರವಾದಂತೆ ಅಥವಾ ನಿರಾತಂಕ ಭಾವನೆಯನ್ನು ಉಂಟುಮಾಡಿದಂತಹ ಸಂದರ್ಭವು ನಿಮಗೆ ನೆನಪಿದೆಯೋ? ಅಥವಾ ಯಾರೂ ಮಂದಹಾಸವನ್ನು ಬೀರದಿದ್ದಾಗ, ಅದು ನಿಮ್ಮಲ್ಲಿ ಆತಂಕವನ್ನು ಇಲ್ಲವೇ ತಿರಸ್ಕರಿಸಿದಂಥ ಭಾವನೆಯನ್ನು ಉಂಟುಮಾಡಿದೆಯೋ? ಹೌದು, ನಗು ಖಂಡಿತವಾಗಿಯೂ ಗಮನಾರ್ಹವಾದ ಬದಲಾವಣೆಯನ್ನು ಉಂಟುಮಾಡುತ್ತದೆ. ನಗುಮುಖದಿಂದಿರುವುದು ನಿಮ್ಮನ್ನು ಮತ್ತು ನೀವು ಯಾರನ್ನು ನೋಡಿ ಮುಗ್ನುಳಗೆಯನ್ನು ಸೂಸುತ್ತೀರೋ ಅವರನ್ನು, ಹೀಗೆ ಅದು ಇಬ್ಬರನ್ನೂ ಪ್ರಭಾವಿಸುತ್ತದೆ. ಬೈಬಲಿನಲ್ಲಿ ತಿಳಿಸಲ್ಪಟ್ಟಿರುವ ವ್ಯಕ್ತಿಯಾದ ಯೋಬನು ತನ್ನ ವೈರಿಗಳ ಕುರಿತು ಹೇಳಿದ್ದು: “ನಾನು ಅವರನ್ನು ನೋಡಿ ನಗಲು ಅವರು ಧೈರ್ಯಗೆಟ್ಟರು, ನನ್ನ ಮುಖಕಾಂತಿಯನ್ನೋ ಅವರು ಎಂದೂ ಕುಂದಿಸಲಿಲ್ಲ.” (ಯೋಬ 29:24) ಯೋಬನ ‘ಮುಖಕಾಂತಿಯು’ ಆತನ ಉಲ್ಲಾಸವಾದ ಅಥವಾ ಗೆಲುವಿನ ಮುಖವನ್ನು ಸೂಚಿಸಿರಬಹುದು.
ಮಂದಹಾಸವು ಉಂಟುಮಾಡುವ ಒಳ್ಳೆಯ ಪರಿಣಾಮವು ಇಂದಿಗೂ ನಿಜವಾಗಿಯೇ ಉಳಿದಿದೆ. ಆದರದ ಮಂದಹಾಸವು ಅಧಿಕಗೊಂಡಿರುವ ಒತ್ತಡವನ್ನು ಕಡಿಮೆಮಾಡುವುದು. ಇದನ್ನು ಪ್ರಷರ್ ಕುಕ್ಕರ್‌ನಲ್ಲಿ ಉಪಯೋಗಿಸುವ ಸುರಕ್ಷಾ ಕವಾಟಕ್ಕೆ ಹೋಲಿಸಬಹುದು. ಹೇಗೆಂದರೆ, ನಾವು ಹೆಚ್ಚು ಟೆನ್ಷನ್ನಿನಲ್ಲಿರುವಾಗ ಇಲ್ಲವೇ ಆಶಾಭಂಗಗೊಂಡಿರುವಾಗ ಟೆನ್ಷನ್ ಅನ್ನು ಕಡಿಮೆಮಾಡಲು ಹಾಗೂ ಆಶಾಭಂಗ ಸ್ಥಿತಿಯನ್ನು ನಿಭಾಯಿಸಲು ಮಂದಹಾಸವು ಸಹಾಯಮಾಬಲ್ಲದು. ಟೊಮೊಕೋ ಎಂಬ ಸ್ತ್ರೀಯ ಉದಾಹರಣೆಯನ್ನು ಗಮನಿಸಿ. ಬೇರೆಯವರು ತನ್ನನ್ನು ಯಾವಾಗಲೂ ದುರುಗುಟ್ಟಿ ನೋಡುತ್ತಿರುವಂತೆ ಟೊಮೊಕೋಗೆ ಅನಿಸುತ್ತಿತ್ತು. ಅವಳು ಅವರನ್ನು ನೋಡಿದೊಡನೆ ಅವರು ತಮ್ಮ ದೃಷ್ಟಿಯನ್ನು ಬೇರೆ ಕಡೆಗೆ ತಿರುಗಿಸಿಕೊಳ್ಳುತ್ತಿದ್ದರು. ಅದನ್ನು ಗಮನಿಸಿದ ಟೊಮೊಕೋ ಅವರು ತನ್ನ ಬಗ್ಗೆ ತಪ್ಪು ಕಂಡುಹಿಡಿಯುತ್ತಿದ್ದಾರೆಂದು ಭಾವಿಸಿದಳು. ಇದರ ಪರಿಣಾಮವಾಗಿ ಟೊಮೊಕೋಗೆ ಒಂಟಿಭಾವನೆ ಉಂಟಾಗುತ್ತಿತ್ತು ಹಾಗೂ ಅದರಿಂದ ದುಃಖಿತಳೂ ಆಗುತ್ತಿದ್ದಳು. ಒಂದು ದಿನ ಅವಳ ಸ್ನೇಹಿತೆಯು ಜನರನ್ನು ನೋಡಿದೊಡನೆ ಮಂದಹಾಸವನ್ನು ಬೀರುವಂತೆ ಅವಳಿಗೆ ಸಲಹೆ ನೀಡಿದಳು. ಅದರಂತೆಯೇ ಟೊಮೊಕೋ
ಎರಡು ವಾರಗಳ ವರೆಗೆ ಮಾಡಿದಳು. ಆಗ ಅವಳಿಗೆ ಆಶ್ಚರ್ಯ ತಂದಂಥ ಸಂಗತಿಯೆಂದರೆ, ಅವಳು ಯಾರನ್ನೆಲ್ಲಾ ನೋಡಿ ಮಂದಹಾಸ ಬೀರಿದಳೋ ಅವರೆಲ್ಲರೂ ತಿರುಗಿ ಅವಳಿಗೆ ಮಂದಹಾಸವನ್ನು ಸೂಸಿದರು! ಟೆನ್ಷನ್ ಇನ್ನಿಲ್ಲದಂತಾಯಿತು. “ಜೀವನವು ನಿಜವಾಗಿಯೂ ಹೆಚ್ಚು ಸಂತೋಷಭರಿತವಾಯಿತು” ಎಂದು ಅವಳು ಹೇಳುತ್ತಾಳೆ. ಹೌದು, ಇತರರೊಂದಿಗೆ ನಿರಾತಂಕವಾಗಿ ಬೆರೆಯಲು ಮತ್ತು ಹೆಚ್ಚು ಸ್ನೇಹಪರರಾಗಿರುವಂತೆ ಮಂದಹಾಸವು ಸಹಾಯಮಾಡುತ್ತದೆ.ನಿಮ್ಮ ಹಾಗೂ ಇತರರ ಮೇಲೆ ಬೀರುವ ಒಳ್ಳೆಯ ಪರಿಣಾಮ
ನಗು ಒಬ್ಬ ವ್ಯಕ್ತಿಯನ್ನು ಭಾವನಾತ್ಮಕವಾಗಿ ಪ್ರಭಾವಿಸಬಲ್ಲದು. ಅದು ಸಕಾರಾತ್ಮಕ ಮನೋಭಾವವನ್ನು ಇಟ್ಟುಕೊಳ್ಳಲು ಒಬ್ಬನಿಗೆ ಸಹಾಯಮಾಡುವುದಲ್ಲದೆ ಆರೋಗ್ಯಕ್ಕೆ ಕೂಡ ಒಳ್ಳೆಯದು. ನಗುವಿಗಿಂತ ಉತ್ತಮ ಔಷಧಿಯಿಲ್ಲ ಎಂದು ಹೇಳುವುದುಂಟು. ನಿಜ ಹೇಳಬೇಕೆಂದರೆ, ಒಬ್ಬನ ಶಾರೀರಿಕ ಸ್ಥಿತಿಯು ಅವನ ಮಾನಸಿಕ ಸ್ಥಿತಿಯ ಮೇಲೆ ಹೆಚ್ಚು ಅವಲಂಬಿಸಿದೆ ಎಂದು ವೈದ್ಯಕೀಯ ಅಧಿಕಾರಿಗಳು ಹೇಳುತ್ತಾರೆ. ಅನೇಕ ಅಧ್ಯಯನಗಳು ತೋರಿಸುವಂತೆ, ದೀರ್ಘಸಮಯದ ಒತ್ತಡ, ನಕಾರಾತ್ಮಕ ಭಾವನೆಗಳಂಥವು ನಮ್ಮ ದೇಹದ ಸುರಕ್ಷಾವ್ಯವಸ್ಥೆಯನ್ನು ಬಲಹೀನಗೊಳಿಸುವುವು. ಆದರೆ ಮತ್ತೊಂದು ಕಡೆಯಲ್ಲಿ, ಹಸನ್ಮುಖರಾಗಿರುವುದು ನಮ್ಮನ್ನು ಹೆಚ್ಚು ಉಲ್ಲಾಸಿತರನ್ನಾಗಿ ಮಾಡುವುದಲ್ಲದೆ ನಮ್ಮ ಸುರಕ್ಷಾವ್ಯವಸ್ಥೆಯನ್ನೂ ಹೆಚ್ಚು ಬಲಪಡಿಸುತ್ತದೆ.
ಹಸನ್ಮುಖರಾಗಿರುವುದು ಬೇರೆಯವರ ಮೇಲೆ ಹೆಚ್ಚು ಪ್ರಭಾವವನ್ನು ಬೀರುತ್ತದೆ ಎಂಬುದಕ್ಕೆ ಒಂದು ಉದಾಹರಣೆಯನ್ನು ಗಮನಿಸಿ. ನಿಮಗೆ ಯಾರೋ ಒಬ್ಬರು ಸಲಹೆಯನ್ನು ಕೊಡುತ್ತಿದ್ದಾರೆಂದು ಊಹಿಸಿಕೊಳ್ಳಿ. ಆ ಸಲಹೆಗಾರರ ಮುಖದಲ್ಲಿ ಯಾವ ರೀತಿಯ ಭಾವವನ್ನು ನೋಡಲು ಬಯಸುವಿರಿ? ನಿರ್ಭಾವದ ಅಥವಾ ಗಡುಸು ಮುಖವನ್ನು ನೀವು ನೋಡುವುದಾದರೆ, ಅದು ಕೋಪವನ್ನು, ಕಿರಿಕಿರಿಯನ್ನು ಹಾಗೂ ತಿರಸ್ಕಾರದ ಭಾವನೆಯನ್ನು ಸೂಚಿಸಬಹುದು. ಆದರೆ, ಆ ಸಲಹೆಗಾರನ ಮುಖದಲ್ಲಿ ಆದರದ ಮುಗುಳ್ನಗೆಯನ್ನು ನೋಡುವುದಾದರೆ, ಇದು ನಿಮ್ಮನ್ನು ಹೆಚ್ಚು ನಿರಾತಂಕರಾಗಿರುವಂತೆ ಮಾಡುವುದಲ್ಲದೆ, ಅವರು ಕೊಡುವ ಸಲಹೆಯನ್ನು ಸಹ ಸ್ವೀಕರಿಸಲು ಹೆಚ್ಚು ಸುಲಭವನ್ನಾಗಿ ಮಾಡುತ್ತದೆ. ಪರಿಸ್ಥಿತಿಯು ಬಿಗಡಾಯಿಸಿರುವಾಗ ಮುಗುಳ್ನಗೆಯು ತಪ್ಪಭಿಪ್ರಾಯಗಳನ್ನು ಕಡಿಮೆಮಾಡಲು ನೆರವಾಗುವುದೆಂಬುದು ನಿಶ್ಚಯ.
ಒಳ್ಳೆಯ ಆಲೋಚನೆಗಳು ನಗುಮುಖದಿಂದಿರಲು ಸಹಾಯಮಾಡುತ್ತವೆ
ಯಾವುದೇ ಕ್ಷಣದಲ್ಲೂ ಭಾವನೆಗಳನ್ನು ಥಟ್ಟನೆ ನಗುವಿನ ಮೂಲಕ ವ್ಯಕ್ತಪಡಿಸುವುದಕ್ಕೆ ನಾವೇನೂ ವೃತ್ತಿಪರ ನಟರಲ್ಲ ಎಂಬುದು ಖಂಡಿತ. ಹಾಗಿರಲು ಸಹ ನಾವು ಬಯಸಲಾರೆವು. ಏಕೆಂದರೆ, ನಮ್ಮ ಮುಗುಳ್ನಗೆಯು ನೈಜವಾಗಿಯೂ ನಿಷ್ಕಪಟವಾಗಿಯೂ ಇರುವಂತೆ ನಾವು ಬಯಸುತ್ತೇವೆ. ವೈಯಕ್ತಿಕ ಸೌಹಾರ್ದದ ಒಂದು ಶಾಲೆಯ ಶಿಕ್ಷಕಿಯು ಹೇಳಿದ್ದೇನೆಂದರೆ: ‘ಹೃತ್ಪೂರ್ವಕವಾಗಿ ಮಂದಹಾಸವನ್ನು ಬೀರುವ ಮೊದಲು ನಿರಾತಂಕರಾಗಿರುವುದು ಬಹಳ ಪ್ರಾಮುಖ್ಯವಾಗಿದೆ. ಇಲ್ಲದಿದ್ದರೆ, ನಿಮ್ಮ ನಗು ಕೇವಲ ಹೊರತೋರಿಕೆಯ ನಗುವಾಗಿರುವಂತೆ ತೋರಬಹುದು.’ ಹಾಗಾದರೆ, ನಾವು ಹೃದಯದಿಂದ ಯಥಾರ್ಥವಾಗಿ ಮುಗುಳ್ನಗೆಯನ್ನು ಹೇಗೆ ಬೀರಬಹುದು? ಇಗೋ, ಸಹಾಯಕ್ಕಾಗಿ ನಮಗೆ ಬೈಬಲ್ ಇದೆ. ನಮ್ಮ ಮಾತುಕತೆಯ ಕುರಿತು ಮತ್ತಾಯ 12:34, 35 ಹೇಳುವುದು: “ಹೃದಯದಲ್ಲಿ ತುಂಬಿರುವದೇ ಬಾಯಲ್ಲಿ ಹೊರಡುವದು. ಒಳ್ಳೆಯವನು ತನ್ನ ಒಳ್ಳೆಯ ಬೊಕ್ಕಸದೊಳಗಿಂದ ಒಳ್ಳೆಯ ವಸ್ತುಗಳನ್ನು ತೆಗೆಯುತ್ತಾನೆ; ಕೆಟ್ಟವನು ಕೆಟ್ಟ ಬೊಕ್ಕಸದೊಳಗಿಂದ ಕೆಟ್ಟ ವಸ್ತುಗಳನ್ನು ತೆಗೆಯುತ್ತಾನೆ.”
ನಮ್ಮ ಭಾವನೆಗಳನ್ನು ಇನ್ನೊಬ್ಬರಿಗೆ ಅವ್ಯಕ್ತ ಭಾಷೆಯಲ್ಲಿ ವ್ಯಕ್ತಪಡಿಸುವುದೇ ನಗು ಎಂಬುದನ್ನು ನೆನಪಿನಲ್ಲಿಡಿ. ‘ಹೃದಯದಲ್ಲಿ ತುಂಬಿರುವುದನ್ನೇ’ ನಾವು ಮಾತಾಡುತ್ತೇವೆ. ‘ಒಳ್ಳೆಯ ವಿಷಯಗಳು’ ‘ಒಳ್ಳೆಯ ಬೊಕ್ಕಸದೊಳಗಿಂದ ಬರುತ್ತವೆ’ ಎಂಬುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು. ಆಗ, ನೈಜವಾದ ಮಂದಹಾಸಕ್ಕೆ ಮೂಲವು ನಮ್ಮ ಆಲೋಚನೆಗಳಲ್ಲಿ ಮತ್ತು ಭಾವನೆಗಳಲ್ಲಿ ಅಡಗಿದೆ ಎಂಬುದು ಸ್ಫುಟವಾಗುತ್ತದೆ. ಹೌದು, ನಮ್ಮ ಹೃದಯಲ್ಲಿ ಏನಿದೆ ಎಂಬುದು, ಇಂದಲ್ಲದಿದ್ದರೂ ನಾಳೆ ಖಂಡಿತವಾಗಿ ಮಾತಿನಲ್ಲಿ ಮತ್ತು ನಡತೆಯಲ್ಲಿ ಮಾತ್ರವಲ್ಲ, ನಮ್ಮ ಮುಖಭಾವಗಳಲ್ಲಿ ಸಹ ವ್ಯಕ್ತವಾಗುವುದು. ಆದುದರಿಂದ,
ನಾವು ಒಳ್ಳೆಯದನ್ನೇ ಯಾವಾಗಲೂ ಆಲೋಚಿಸುವುದಕ್ಕಾಗಿ ಶ್ರಮಿಸಬೇಕಾಗಿರುವ ಅಗತ್ಯವಿದೆ. ಏಕೆಂದರೆ, ಇತರರ ಕುರಿತು ನಮ್ಮ ಮನಸ್ಸಿನಲ್ಲಿರುವ ಆಲೋಚನೆಗಳು ನಮ್ಮ ಮುಖಭಾವವನ್ನು ಹೆಚ್ಚು ಪ್ರಭಾವಿಸುವುವು. ಹಾಗಾಗಿ, ನಾವು ನಮ್ಮ ಕುಟುಂಬದವರ, ನೆರೆಹೊರೆಯವರ, ಒಳ್ಳೇ ಸ್ನೇಹಿತರ ಉತ್ತಮ ಗುಣಗಳ ಕಡೆಗೆ ಹೆಚ್ಚು ಗಮನಕೊಡೋಣ. ಆಗ ಅವರನ್ನು ನೋಡಿದಾಕ್ಷಣ ಮುಗುಳ್ನಗಲು ಸುಲಭವಾಗಿರುವುದು. ಅದು ಕಪಟವಾದ ನಗುವಾಗಿರುವುದಿಲ್ಲ, ಬದಲಾಗಿ ಯಥಾರ್ಥವಾದ ಮುಗುಳ್ನಗೆಯಾಗಿರುವುದು. ಅಂಥ ನಗುವಿನ ಹಿಂದೆ ಒಳ್ಳೆಯತನ, ದಯೆ ಮತ್ತು ಕರುಣೆಯು ತುಂಬಿರುವುದು ಮಾತ್ರವಲ್ಲ, ನಮ್ಮ ಕಂಗಳು ಕೂಡ ಹೊಳೆಯುತ್ತಿರುವುವು. ಆಗ ಬೇರೆಯವರು ನಮ್ಮ ಮುಗುಳ್ನಗೆಯು ಏನನ್ನು ಸೂಚಿಸುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳುವರು.ಆದರೆ, ಕೆಲವರಿಗೆ ಮುಗುಳ್ನಗೆಯನ್ನು ಬೀರುವುದು ಇತರರಿಗಿಂತ ಕಷ್ಟವಾಗಿರುತ್ತದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಏಕೆಂದರೆ, ಅವರ ಕುಟುಂಬದ ಹಿನ್ನೆಲೆ ಅಥವಾ ಬೆಳೆದುಬಂದಿರುವ ಪರಿಸರ ಅದಕ್ಕೆ ಕಾರಣವಾಗಿರಬಹುದು. ಅಂಥವರು ಬೇರೆಯವರ ಕುರಿತು ಒಳ್ಳೆಯ ಭಾವನೆಗಳನ್ನು ಹೊಂದಿದ್ದರೂ ಮುಗುಳ್ನಗೆಯನ್ನು ಬೀರುವ ಅಭ್ಯಾಸ ಅವರಿಗೆ ಇರುವುದಿಲ್ಲ. ಉದಾಹರಣೆಗೆ, ಜಪಾನ್ ದೇಶದಲ್ಲಿ ಗಂಡಸರು ಎಲ್ಲಾ ಸಮಯಗಳಲ್ಲೂ ಮೌನವನ್ನು ಹಾಗೂ ಸಂಪೂರ್ಣ ಪ್ರಶಾಂತತೆಯನ್ನು ಕಾಪಾಡಿಕೊಳ್ಳುವಂತೆ ಅಲ್ಲಿನ ಸಂಪ್ರದಾಯದಲ್ಲಿ ನಿರೀಕ್ಷಿಸಲ್ಪಡುತ್ತದೆ. ಆದುದರಿಂದ, ಅಪರಿಚಿತರನ್ನು ನೋಡಿ ಮುಗುಳ್ನಗುವುದು ಅನೇಕರಿಗೆ ಅಭ್ಯಾಸವಿರುವುದಿಲ್ಲ. ಇನ್ನೂ ಕೆಲವು ಸಂಸ್ಕೃತಿಗಳಲ್ಲೂ ಇದೇ ರೀತಿಯ ಅಭ್ಯಾಸವಿದೆ. ಅಥವಾ ಕೆಲವು ವ್ಯಕ್ತಿಗಳು ಸ್ವಭಾವತಃ ನಾಚಿಕೆಪಡುವವರಾಗಿರುತ್ತಾರೆ. ಅಂಥವರಿಗೆ ಬೇರೆಯವರನ್ನು ಕಂಡಾಗ ಮುಗುಳ್ನಗೆಯನ್ನು ಸೂಸುವುದು ಬಹಳ ಕಷ್ಟ. ಆದುದರಿಂದ, ಯಾರು ಎಷ್ಟು ಸಾರಿ ನಗುತ್ತಾರೆ, ಬಾಯನ್ನು ಎಷ್ಟು ಅಗಲಮಾಡಿ ನಗೆಯನ್ನು ಸೂಸುತ್ತಾರೆ ಎಂಬುದನ್ನು ನಾವು ತೀರ್ಪುಮಾಡಬಾರದು. ಏಕೆಂದರೆ, ವ್ಯಕ್ತಿಗಳು ಒಬ್ಬರಿಂದ ಒಬ್ಬರು ಭಿನ್ನರಾಗಿದ್ದಾರೆ, ಅದೇ ರೀತಿಯಲ್ಲಿ ಅವರ ಗುಣಲಕ್ಷಣಗಳು ಕೂಡ ಭಿನ್ನಭಿನ್ನವಾಗಿರುತ್ತವೆ ಹಾಗೂ ಒಬ್ಬರಿಗೊಬ್ಬರು ವ್ಯವಹರಿಸುವ ವಿಧಗಳು ಸಹ ಬೇರೆ ಬೇರೆಯಾಗಿರುತ್ತವೆ.
ಹಾಗಿದ್ದರೂ, ಬೇರೆಯವರನ್ನು ನೋಡಿ ಮುಗುಳ್ನಗಲು ನಿಮಗೆ ತುಂಬ ಕಷ್ಟವಾಗಿರುವುದಾದರೆ, ಅದರ ಕುರಿತು ಯಾಕೆ ಪ್ರಯತ್ನ ಮಾಡಬಾರದು? ಏಕೆಂದರೆ, “ಒಳ್ಳೇದನ್ನು ಮಾಡುವದರಲ್ಲಿ ಬೇಸರಗೊಳ್ಳದೆ ಇರೋಣ. . . . ಎಲ್ಲರಿಗೆ ಒಳ್ಳೇದನ್ನು ಮಾಡೋಣ” ಎಂದು ಬೈಬಲ್ ಬುದ್ಧಿವಾದ ನೀಡುತ್ತದೆ. (ಗಲಾತ್ಯ 6:9, 10) ಇತರರಿಗೆ “ಒಳ್ಳೇದನ್ನು” ಮಾಡುವ ಒಂದು ವಿಧಾನವು, ಅವರನ್ನು ನೋಡಿ ಮುಗುಳ್ನಗುವುದೇ ಆಗಿದೆ. ಅದು ನಿಮ್ಮ ಕೈಯಲ್ಲೇ ಇದೆ! ಆದ್ದರಿಂದ, ಇತರರನ್ನು ವಂದಿಸಲು ನೀವು ಮೊದಲ ಹೆಜ್ಜೆಯನ್ನು ತೆಗೆದುಕೊಳ್ಳಿರಿ ಮತ್ತು ಅವರಿಗೆ ಪ್ರೋತ್ಸಾಹನೆಯಾಗಿ ಮುಗುಳ್ನಗೆಯನ್ನು ಸೂಸಿರಿ. ಆಗ, ಅದನ್ನು ಇತರರು ತುಂಬ ಗಣ್ಯಮಾಡುವರು. ಅಷ್ಟೇ ಅಲ್ಲ, ನಗುವುದನ್ನು ಅಭ್ಯಾಸಮಾಡಿಕೊಂಡಂತೆ, ಅದು ಅತ್ಯಂತ ಸುಲಭವಾದ ವಿಷಯವಾಗಿರುವುದನ್ನು ನೀವು ಕಂಡುಕೊಳ್ಳುವಿರಿ.
[ಪುಟ 27ರಲ್ಲಿರುವ ಚೌಕ]
ಎಚ್ಚರಿಕೆಯ ಒಂದು ಮಾತು
ನಾವು ನೋಡುವ ಪ್ರತಿಯೊಂದು ಮುಗುಳ್ನಗೆಯು ನೈಜವಾದುದಲ್ಲ. ಏಕೆಂದರೆ ನಯವಂಚಕರು, ಮೋಸಗಾರರು, ನೀತಿನಿಷ್ಠೆಗಳಿಲ್ಲದ ವ್ಯಾಪಾರಸ್ಥರು ಹಾಗೂ ಇನ್ನಿತರರು ತುಂಬ ಆಕರ್ಷಕವಾದ ನಗೆಯನ್ನು ಬೀರುತ್ತಾರೆ. ಏಕೆಂದರೆ, ನಗು ಜನರನ್ನು ಅಸಹಾಯಕರನ್ನಾಗಿಯೂ ಹಾಗೂ ಅನುಮಾನಿಸದಂತೆಯೂ ಮಾಡುತ್ತದೆ ಎಂಬುದು ಅವರಿಗೆ ಗೊತ್ತಿರುತ್ತದೆ. ಸಂಶಯಾಸ್ಪದ ನಡತೆ ಅಥವಾ ಕೆಟ್ಟ ಉದ್ದೇಶಗಳುಳ್ಳ ವ್ಯಕ್ತಿಗಳು ಕೂಡ ಮನಸೂರೆಗೊಳ್ಳುವ ನಗೆಯನ್ನು ಬೀರುತ್ತಾರೆ. ಆದರೆ, ಅವರ ನಗು ಪೊಳ್ಳಾದದ್ದು ಮತ್ತು ವಂಚಕವಾದದ್ದು. (ಪ್ರಸಂಗಿ 7:6) ಆದುದರಿಂದ, ಸ್ವತಃ ಯೇಸುವೇ ಹೇಳಿದಂತೆ ನಾವು “ಸರ್ಪಗಳಂತೆ ಜಾಣರೂ ಪಾರಿವಾಳಗಳಂತೆ ನಿಷ್ಕಪಟಿಗಳೂ” ಆಗಿರಬೇಕಾಗಿದೆ. ಆದರೆ, ಇತರರ ಕುರಿತು ತೀರ ಸಂದೇಹಾಸ್ಪದರಾಗಿರದೇ, ನಾವು ಜೀವಿಸಲು ಕಠಿನವಾದ “ಕಡೇ ದಿವಸಗಳಲ್ಲಿ” ಇದ್ದೇವೆ ಎಂಬುದನ್ನು ಗ್ರಹಿಸಬೇಕಾಗಿದೆ.—2 ತಿಮೊಥೆಯ 3:1; ಮತ್ತಾಯ 10:16.
[ಪುಟ 28ರಲ್ಲಿರುವ ಚಿತ್ರ]
ಇತರರಿಗೆ ಮುಗುಳ್ನಗೆಯನ್ನು ಸೂಸುವ ಮೂಲಕ ವಂದನೆಯನ್ನು ತಿಳಿಸುವುದರಲ್ಲಿ ಮೊದಲ ಹೆಜ್ಜೆಯನ್ನು ತೆಗೆದುಕೊಳ್ಳಿ