ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಾನು ವಿದೇಶಕ್ಕೆ ಹೋಗಬೇಕೋ?

ನಾನು ವಿದೇಶಕ್ಕೆ ಹೋಗಬೇಕೋ?

ಯುವ ಜನರು ಪ್ರಶ್ನಿಸುವುದು . . .

ನಾನು ವಿದೇಶಕ್ಕೆ ಹೋಗಬೇಕೋ?

“ನಾನು ಬೇರೆಲ್ಲಾದರೂ ದೂರದ ದೇಶಕ್ಕೆ ಹೋಗಿ ಜೀವಿಸಲು ಬಯಸಿದ್ದೆ.”—ಸ್ಯಾಮ್‌.

“ನನಗೆ ಯಾವುದಾದರೂ ಒಂದು ಹೊಸ ಸ್ಥಳವನ್ನು ನೋಡಬೇಕೆಂಬ ಕುತೂಹಲ.”—ಮಾರನ್‌.

“ಮನೆಯವರಿಂದ ಸ್ವಲ್ಪ ದೂರಹೋಗುವುದು ನನಗೆ ಒಳ್ಳೆಯದೆಂದು ನನ್ನ ಆಪ್ತ ಸ್ನೇಹಿತನೊಬ್ಬನು ಹೇಳಿದನು.”—ಆ್ಯಂಡ್ರಿಯಸ್‌.

“ಸಾಹಸಗಳೆಂದರೆ ನನಗೆ ಪ್ರಾಣ.”—ಹೇಗನ್‌.

ವಿದೇಶದಲ್ಲಿ ನೆಲೆಗೊಳ್ಳಬೇಕು, ಏನಿಲ್ಲವೆಂದರೂ ಸ್ವಲ್ಪ ಕಾಲವಾದರೂ ಅಲ್ಲಿ ಜೀವಿಸಬೇಕು ಎಂಬುದು ನಿಮ್ಮ ಕನಸಾಗಿದೆಯೋ? ಪ್ರತಿವರ್ಷ ಸಾವಿರಾರು ಯುವಜನರು ಈ ರೀತಿಯ ಕನಸನ್ನು ನನಸಾಗಿಸಿಕೊಂಡಿದ್ದಾರೆ. ತನ್ನ ವಿದೇಶ ಪ್ರಯಾಣದ ಕುರಿತ ಅನುಭವವನ್ನು ಆ್ಯಂಡ್ರಿಯಸ್‌ ಹೀಗೆ ಹೇಳುತ್ತಾನೆ: “ನಾನು ಮತ್ತೊಮ್ಮೆ ಅಲ್ಲಿಗೆ ಹೋಗಲು ಬಯಸುತ್ತೇನೆ.”

ಕೆಲವು ಯುವಜನರು ಹಣವನ್ನು ಸಂಪಾದಿಸುವುದಕ್ಕಾಗಿ ಅಥವಾ ವಿದೇಶಿ ಭಾಷೆಯನ್ನು ಕಲಿತುಕೊಳ್ಳುವುದಕ್ಕಾಗಿ ಸ್ವಲ್ಪ ಕಾಲ ವಿದೇಶಕ್ಕೆ ಹೋಗುತ್ತಾರೆ. ಉದಾಹರಣೆಗೆ, ಅನೇಕ ದೇಶಗಳಲ್ಲಿ ಓಪೇರ್‌ ಕಾರ್ಯಕ್ರಮಗಳು ತುಂಬ ಜನಪ್ರಿಯವಾಗಿವೆ. ಓಪೇರ್‌ ಕಾರ್ಯಕ್ರಮದಲ್ಲಿ ಒಳಗೂಡುವ ವಿದ್ಯಾರ್ಥಿಗಳು, ವಿದೇಶದಲ್ಲಿ ತಮಗೆ ಊಟ ಮತ್ತು ವಸತಿ ಸೌಕರ್ಯಗಳನ್ನು ಒದಗಿಸುವವರಿಗೆ ಪ್ರತಿಯಾಗಿ ಅವರ ಮನೆಗೆಲಸಗಳನ್ನು ಮಾಡುತ್ತಾರೆ. ಉಳಿದಿರುವ ಸಮಯವನ್ನು ಸ್ಥಳಿಕ ಭಾಷೆಯನ್ನು ಕಲಿತುಕೊಳ್ಳುವುದಕ್ಕಾಗಿ ಉಪಯೋಗಿಸುತ್ತಾರೆ. ಇನ್ನೂ ಕೆಲವು ಯುವಜನರು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಹೋಗುತ್ತಾರೆ. ಇನ್ನಿತರರು ತಮ್ಮ ಕುಟುಂಬದವರಿಗೆ ಹಣಕಾಸಿನ ಸಹಾಯವನ್ನು ಒದಗಿಸುವುದಕ್ಕಾಗಿ ವಿದೇಶದಲ್ಲಿ ಕೆಲಸಮಾಡಲು ಹೋಗುತ್ತಾರೆ. ಶಾಲೆಯ ವಿದ್ಯಾಭ್ಯಾಸ ಮುಗಿಸಿದ ನಂತರ ಏನು ಮಾಡಬೇಕೆಂದು ಸರಿಯಾಗಿ ಗೊತ್ತಿರದ ಇನ್ನೂ ಕೆಲವರು ಸುಮ್ಮನೇ ಕಾಲಕಳೆಯುವುದಕ್ಕಾಗಿ ವಿದೇಶಕ್ಕೆ ಹೋಗುತ್ತಾರೆ.

ಸ್ವಾರಸ್ಯಕರ ವಿಷಯವೇನೆಂದರೆ, ಕೆಲವು ಯುವ ಕ್ರೈಸ್ತರು ತಮ್ಮ ಸೇವೆಯನ್ನು ಹೆಚ್ಚಿಸುವುದಕ್ಕಾಗಿ ಸೌವಾರ್ತಿಕರ ಕೊರತೆಯಿರುವ ದೇಶಗಳಿಗೆ ಸ್ಥಳಾಂತರಿಸಿದ್ದಾರೆ. ಕಾರಣವು ಏನೇ ಇರಲಿ, ಹೊರದೇಶದಲ್ಲಿ ಜೀವಿಸುವುದು ಯುವಪ್ರಾಯದ ಸ್ವಾತಂತ್ರ್ಯಕ್ಕೆ ಒಂದು ಬಹುಮೂಲ್ಯವಾದ ಪಾಠವನ್ನು ಕಲಿಸಸಾಧ್ಯವಿದೆ. ಏಕೆಂದರೆ, ಅದು ಸಾಂಸ್ಕೃತಿಕವಾಗಿ ನಿಮ್ಮ ಅನುಭವವನ್ನು ವಿಶಾಲವಾಗಿಸುವುದು. ಅಷ್ಟುಮಾತ್ರವಲ್ಲ, ನೀವು ವಿದೇಶಿ ಭಾಷೆಯನ್ನು ಕಲಿತುಕೊಳ್ಳುವುದರಲ್ಲಿ ನಿಪುಣರಾಗಬಹುದು. ನಿಮಗೆ ಕೆಲಸ ಸಿಗುವ ಸಂಭಾವ್ಯತೆಯನ್ನು ಕೂಡ ಅದು ಹೆಚ್ಚಿಸಬಹುದು.

ಹೀಗಿದ್ದರೂ, ವಿದೇಶದಲ್ಲಿ ನೆಲಸುವುದು ಯಾವಾಗಲೂ ಒಂದು ಸವಿಯಾದ ಅನುಭವವಾಗಿರುವುದಿಲ್ಲ. ಉದಾಹರಣೆಗಾಗಿ, ಸುಸಾನೇ ಎಂಬ ವಿದ್ಯಾರ್ಥಿನಿಯ ಅನುಭವವನ್ನು ಗಮನಿಸಿ. ಆಕೆಯು ಒಬ್ಬ ವಿನಿಮಯ ವಿದ್ಯಾರ್ಥಿನಿಯಾಗಿ ಒಂದು ವರ್ಷ ಕಳೆದಿದ್ದಳು. ವಿನಿಮಯ ವಿದ್ಯಾರ್ಥಿ ಎಂದರೆ, ಎರಡು ದೇಶಗಳು ತಮ್ಮ ದೇಶದ ವಿದ್ಯಾರ್ಥಿಗಳನ್ನು ವಿನಿಮಯಮಾಡಿಕೊಳ್ಳುವುದೇ ಆಗಿದೆ. ಸುಸಾನೇ ಹೇಳುವುದು: “ನನ್ನ ವಿದೇಶಿ ಪ್ರಯಾಣವು ಆರಂಭದಿಂದ ಅಂತ್ಯದವರೆಗೆ ತುಂಬ ಚೆನ್ನಾಗಿರುವುದು ಎಂದು ನಾನು ನಂಬಿದ್ದೆ. ಆದರೆ, ನನ್ನ ನಂಬಿಕೆಯು ನುಚ್ಚುನೂರಾಯಿತು.” ಏಕೆಂದರೆ, ಕೆಲವು ಯುವಜನರು ದುರುಪಯೋಗಿಸಲ್ಪಟ್ಟಿದ್ದಾರೆ ಇಲ್ಲವೇ ಗಂಭೀರವಾದ ಸಮಸ್ಯೆಗಳಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಆದುದರಿಂದ, ವಿದೇಶಕ್ಕೆ ಹೋಗುವುದಕ್ಕಾಗಿ ನೀವು ಗಂಟುಮೂಟೆಯನ್ನು ಕಟ್ಟುವುದಕ್ಕೆ ಮುಂಚೆ, ಆರಾಮವಾಗಿ ಕುಳಿತು ಅದರ ಸಾಧಕಬಾಧಕಗಳನ್ನು ಒಮ್ಮೆ ಗಂಭೀರವಾಗಿ ಯೋಚಿಸುವುದು ಬುದ್ಧಿವಂತಿಕೆಯಾಗಿದೆ.

ನಿಮ್ಮ ಉದ್ದೇಶವನ್ನು ಪರೀಕ್ಷಿಸಿ

ವಿದೇಶಕ್ಕೆ ಹೋಗುವುದರ ಕುರಿತು ಸಾಧಕಬಾಧಕಗಳನ್ನು ಯೋಚಿಸುವಾಗ, ಅದರಲ್ಲಿ ನಿಮ್ಮ ಉದ್ದೇಶವನ್ನು ಪರೀಕ್ಷಿಸುವುದು ಸಹ ಸೇರಿರುತ್ತದೆ. ಕುಟುಂಬದ ಜವಾಬ್ದಾರಿಗಳನ್ನು ಹೊರುವುದಕ್ಕಾಗಿ ಇಲ್ಲವೇ ಆತ್ಮಿಕ ಹಿತಾಸಕ್ತಿಗಳನ್ನು ಬೆನ್ನಟ್ಟುವುದಕ್ಕಾಗಿ ವಿದೇಶಕ್ಕೆ ಪ್ರಯಾಣ ಬೆಳೆಸುವುದು ಬೇರೆ ವಿಷಯವಾಗಿದೆ. ಆದರೆ, ಆರಂಭದಲ್ಲಿ ತಿಳಿಸಿರುವಂತೆ ಅನೇಕ ಯುವಜನರು ಕೇವಲ ಸಾಹಸಕ್ಕಾಗಿ, ಹೆಚ್ಚಿನ ಸ್ವಾತಂತ್ರ್ಯಕ್ಕಾಗಿ ಇಲ್ಲವೇ ಮಜಾಮಾಡುವುದಕ್ಕಾಗಿ ವಿದೇಶಕ್ಕೆ ಹೋಗಲು ಬಯಸುತ್ತಾರೆ. ಇದು ತಾನೇ ತಪ್ಪಾಗಿರಬೇಕೆಂದಿಲ್ಲ. ಏನಂದರೂ, ಪ್ರಸಂಗಿ 11:9 ಯುವಜನರು ‘ತಮ್ಮ ಪ್ರಾಯದಲ್ಲಿ ಆನಂದಿಸುವಂತೆ’ ಪ್ರೋತ್ಸಾಹಿಸುವುದಿಲ್ಲವೇ! ಆದರೆ, 10ನೆಯ ವಚನವು ಎಚ್ಚರಿಸುವುದು: “ನಿನ್ನ ಹೃದಯದಿಂದ ಕರಕರೆಯನ್ನೂ ದೇಹದಿಂದ ಶ್ರಮೆಯನ್ನೂ [“ಆಪತ್ತನ್ನೂ,” NW] ತೊಲಗಿಸು.”

ಹೆತ್ತವರ ಕಟ್ಟುಪಾಡಿನಿಂದ ತಪ್ಪಿಸಿಕೊಳ್ಳುವುದಕ್ಕಾಗಿ ವಿದೇಶಕ್ಕೆ ಹೋಗಬೇಕೆಂಬ ಉದ್ದೇಶವನ್ನು ನೀವು ಇಟ್ಟುಕೊಂಡಿರುವುದಾದರೆ, ನೀವು “ಆಪತ್ತನ್ನು” ಆಹ್ವಾನಿಸುತ್ತಿರಬಹುದು. ಯೇಸುವಿನ ದೃಷ್ಟಾಂತದಲ್ಲಿರುವ ಪೋಲಿಹೋದ ಮಗನ ಕಥೆಯು ನಿಮಗೆ ನೆನಪಿದೆಯೇ? ಅದರಲ್ಲಿ ಯುವಕನೊಬ್ಬನು ಸ್ವಾರ್ಥಕ್ಕಾಗಿ ವಿದೇಶಕ್ಕೆ ಹೋದನೆಂದು ಹೇಳಲಾಗಿದೆ. ಅವನು ಹೋಗಲು ಕಾರಣ, ಹೆಚ್ಚಿನ ಸ್ವಾತಂತ್ರ್ಯವನ್ನು ಅರಸಿಯೇ ಎಂಬುದು ಸ್ಪಷ್ಟವಾಗಿತ್ತು. ಆದರೆ, ಸ್ವಲ್ಪ ಸಮಯದರೊಳಗೆ ಅನಾಹುತವು ಸಂಭವಿಸಿತು. ಆ ಪೋಲಿಹೋದ ಮಗನಿಗೆ ಬಂದೆರಗಿದ ಆಪತ್ತಿನಿಂದಾಗಿ ಅವನು ದರಿದ್ರನಾಗಿ, ಹಸಿದು ಕಂಗಾಲಾಗಿ, ಆತ್ಮಿಕವಾಗಿ ಅಸ್ವಸ್ಥನಾದನು.—ಲೂಕ 15:11-16.

ಇನ್ನೂ ಕೆಲವರು ಮನೆಯಲ್ಲಿರುವ ಸಮಸ್ಯೆಗಳಿಂದ ತಪ್ಪಿಸಿಕೊಳ್ಳುವುದಕ್ಕಾಗಿ ವಿದೇಶಕ್ಕೆ ಹೋಗಲು ಬಯಸುತ್ತಾರೆ. ಆದರೆ, ವಾಟ್ಸ್‌ ಅಪ್‌ (ಇಂಗ್ಲಿಷ್‌) ಎಂಬ ತಮ್ಮ ಪುಸ್ತಕದಲ್ಲಿ ಹೈಕೆ ಬರ್ಗ್‌ ಬರೆಯುವುದು; “ನಿಮಗೆ ಸಂತೋಷವಿಲ್ಲ ಎಂಬ ಒಂದೇ ಕಾರಣಕ್ಕಾಗಿ ನೀವು ವಿದೇಶಕ್ಕೆ ಹೋಗಲು ಬಯಸುವುದಾದರೆ, . . . ಮತ್ತು ಬೇರೆ ಸ್ಥಳದಲ್ಲಿ ಎಲ್ಲವೂ ಉತ್ತಮವಾಗಿರುವುದು ಎಂದು ನೀವು ಊಹಿಸುವುದಾದರೆ, ಅದು ಕೇವಲ ನಿಮ್ಮ ಭ್ರಮೆಯಾಗಿದೆ. ಅಂಥ ವಿಚಾರವನ್ನು ಮರೆತುಬಿಡಿ!” ಹೌದು, ಸಮಸ್ಯೆಗಳು ಏನೇ ಇದ್ದರೂ, ಅದನ್ನು ಧೈರ್ಯದಿಂದ ಎದುರಿಸುವುದೇ ಉತ್ತಮ. ನಾವು ಬಯಸದ ಸನ್ನಿವೇಶಗಳಿಂದ ಓಡಿಹೋಗುವುದರಿಂದ ಏನೂ ಪ್ರಯೋಜನವಿಲ್ಲ.

ವಿದೇಶಕ್ಕೆ ಹೋಗುವುದರಲ್ಲಿರುವ ಇನ್ನಿತರ ಅಪಾಯಕಾರಿ ಉದ್ದೇಶಗಳೆಂದರೆ, ದುರಾಸೆ ಮತ್ತು ಪ್ರಾಪಂಚಿಕತೆಯಾಗಿದೆ. ಹಣವಂತರಾಗಬೇಕೆಂಬ ಆಸೆಯು ಚಿಗುರೊಡೆಯುವುದರ ಫಲವಾಗಿ, ಕೈಗಾರಿಕಾ ದೇಶಗಳಲ್ಲಿ ಜೀವನ ಹೀಗಿರಬಹುದು ಹಾಗಿರಬಹುದು ಎಂಬ ಆಡಂಬರವಾದ ಅವಾಸ್ತವಿಕ ಕಲ್ಪನೆಗಳನ್ನು ಅನೇಕ ಯುವಜನರು ಬೆಳೆಸಿಕೊಳ್ಳುತ್ತಾರೆ. ಇನ್ನೂ ಕೆಲವರು ಪಾಶ್ಚಾತ್ಯ ದೇಶದವರೆಲ್ಲಾ ಶ್ರೀಮಂತರು ಎಂದು ನೆನಸುತ್ತಾರೆ. ಆದರೆ ಇದು ನಿಜವಲ್ಲ. ವಿದೇಶಕ್ಕೆ ಹೋದಮೇಲೆ ಅನೇಕ ಯುವಜನರು ತಾವು ಅಜ್ಞಾತ ದೇಶದಲ್ಲಿದ್ದೇವೆಂಬುದನ್ನು ಕಂಡುಕೊಳ್ಳುತ್ತಾರೆ. ಮತ್ತು ಬಡತನದಿಂದ ಹೊರಬರುವುದಕ್ಕಾಗಿ ಅವರು ಅಲ್ಲಿ ಹೋರಾಡುತ್ತಿರುತ್ತಾರೆ. * ಆದುದರಿಂದಲೇ ಬೈಬಲ್‌ ಎಚ್ಚರಿಸುವುದು: “ಹಣದಾಸೆಯು ಸಕಲವಿಧವಾದ ಕೆಟ್ಟತನಕ್ಕೆ ಮೂಲವಾಗಿದೆ. ಕೆಲವರು ಅದಕ್ಕಾಗಿ ಆತುರಪಟ್ಟು ಅದರಿಂದ ಕ್ರಿಸ್ತನಂಬಿಕೆಯನ್ನು ಬಿಟ್ಟು ಅಲೆದಾಡಿ ಅನೇಕ ವೇದನೆಗಳಿಂದ ತಮ್ಮನ್ನು ತಿವಿಸಿಕೊಳ್ಳುತ್ತಾರೆ.”—1 ತಿಮೊಥೆಯ 6:10.

ನೀವು ಸಿದ್ಧರಾಗಿದ್ದೀರೋ?

ಇನ್ನೊಂದು ಅಂಶವನ್ನು ಕೂಡ ಪರಿಗಣಿಸೋಣ. ಅದೇನೆಂದರೆ, ವಿದೇಶದಲ್ಲಿ ಉದ್ಭವಿಸುವ ಜಗಳಗಳು, ಸಮಸ್ಯೆಗಳು ಮತ್ತು ಕಷ್ಟತೊಂದರೆಗಳನ್ನು ನಿಭಾಯಿಸುವಷ್ಟು ಪ್ರೌಢತೆ ನಿಮಗೆ ನಿಜವಾಗಿಯೂ ಇದೆಯೇ? ಪ್ರಾಯಶಃ, ವಿದೇಶದಲ್ಲಿ ನೀವು ಒಬ್ಬ ರೂಮ್‌ಮೇಟ್‌ ಅಥವಾ ಒಂದು ಕುಟುಂಬದೊಂದಿಗೆ ವಾಸಿಸಬೇಕಾಗಿರಬಹುದು ಮತ್ತು ಅವರ ದಿನಚರಿಗಳೊಂದಿಗೆ ಹೊಂದಿಕೊಳ್ಳಬೇಕಾಗಿರಬಹುದು. ಹಾಗಾದರೆ, ಈಗ ನಿಮ್ಮ ಮನೆಯಲ್ಲಿ ಇತರ ಸದಸ್ಯರೊಂದಿಗೆ ನಿಮ್ಮ ಸಂಬಂಧವು ಹೇಗಿದೆ? ನಿಮ್ಮ ಹೆತ್ತವರು ನಿಮ್ಮನ್ನು ಸ್ವಾರ್ಥಿ ಅಥವಾ ದಯೆದಾಕ್ಷಿಣ್ಯವಿಲ್ಲದ ವ್ಯಕ್ತಿಯೆಂದು ಹೇಳುತ್ತಾರೋ? ತಿನ್ನುವ ವಿಷಯದಲ್ಲಿಯೂ ನೀವು ಇದು ಬೇಡ ಅದು ಬೇಡ ಎನ್ನುವವರಾಗಿದ್ದೀರೋ? ಮನೆಗೆಲಸವನ್ನು ಹಂಚಿಕೊಳ್ಳುವುದರಲ್ಲಿ ಎಷ್ಟರ ಮಟ್ಟಿಗೆ ಮನಸ್ಸುಳ್ಳವರಾಗಿದ್ದೀರಿ? ಇಂಥ ವಿಷಯಗಳು ಈಗ ನಿಮಗೆ ಕಷ್ಟಕರವಾಗಿರುವಲ್ಲಿ, ವಿದೇಶದಲ್ಲಿ ಇದೇ ವಿಷಯಗಳು ಇನ್ನೂ ಎಷ್ಟು ಕಷ್ಟಕರವಾಗಿರಬಹುದು ಎಂಬುದನ್ನು ಸ್ವಲ್ಪ ಕಲ್ಪನೆಮಾಡಿನೋಡಿ!

ನೀವು ಕ್ರೈಸ್ತರಾಗಿರುವಲ್ಲಿ, ನಿಮ್ಮ ಆತ್ಮಿಕತೆಯನ್ನು ಕಾಪಾಡಿಕೊಳ್ಳಲು ಶಕ್ತರಾಗಿದ್ದೀರೋ? ಅಥವಾ ಬೈಬಲ್‌ ಅಭ್ಯಾಸವನ್ನು ಮಾಡು, ಕೂಟಗಳನ್ನು ತಪ್ಪಿಸಿಕೊಳ್ಳಬೇಡ ಮತ್ತು ಕ್ಷೇತ್ರಸೇವೆಗೆ ಹೋಗು ಎಂದು ನಿಮ್ಮ ಹೆತ್ತವರು ಸದಾ ನಿಮಗೆ ನೆನಪುಮಾಡುತ್ತಿರಬೇಕೋ? ನಿಮ್ಮ ದೇಶದಲ್ಲಿ ನೀವು ಒತ್ತಡಗಳನ್ನು ಹಾಗೂ ಶೋಧನೆಗಳನ್ನು ಎದುರಿಸದೇ ಇದ್ದಿರಬಹುದು. ಆದರೆ ಅದೇ ಸಮಸ್ಯೆಗಳು ವಿದೇಶದಲ್ಲಿ ಎದುರಾಗುವಲ್ಲಿ, ಅದನ್ನು ನಿಭಾಯಿಸಲು ನೀವು ಆತ್ಮಿಕವಾಗಿ ಬಲವುಳ್ಳವರಾಗಿದ್ದೀರೋ? ವಿದೇಶದಲ್ಲಿ ತನ್ನ ಶಾಲೆಯ ಮೊದಲನೇ ದಿನದಂದು, ವಿನಿಮಯ ವಿದ್ಯಾರ್ಥಿಯಾಗಿದ್ದ ಒಬ್ಬ ಯುವ ಕ್ರೈಸ್ತನಿಗೆ ಮಾದಕ ದ್ರವ್ಯಗಳು ಸಿಗುವ ಸ್ಥಳದ ಕುರಿತು ಹೇಳಲಾಯಿತು. ತದನಂತರ ಒಬ್ಬ ವಿದ್ಯಾರ್ಥಿನಿಯು ತನ್ನೊಂದಿಗೆ ಸುತ್ತಾಡಲು ಬರುವಂತೆ ಕರೆದಳು. ಅದು ಅವನಿಗೆ ಆಶ್ಚರ್ಯವನ್ನು ಉಂಟುಮಾಡಿತು. ಏಕೆಂದರೆ, ಅವನ ದೇಶದಲ್ಲಿ ಒಬ್ಬ ಹುಡುಗಿಯು ಹುಡುಗನ ಮೇಲೆ ತನಗಿರುವ ಆಸಕ್ತಿಯನ್ನು ನೇರವಾಗಿ ಎಂದೂ ಹೇಳಲಾರಳು. ಆಫ್ರಿಕ ದೇಶದಿಂದ ಯೂರೋಪಿಗೆ ಹೋಗಿದ್ದ ಒಬ್ಬ ಯುವಕನು ಕೂಡ ಹೇಳುವುದು: “ನಮ್ಮ ದೇಶದಲ್ಲಿ ಅಶ್ಲೀಲವಾದ ಚಿತ್ರಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲೂ ನೋಡಲು ಸಾಧ್ಯವಿಲ್ಲ. ಆದರೆ ಇಲ್ಲಿ ಎಲ್ಲೆಲ್ಲೂ ಅಂಥ ಚಿತ್ರಗಳನ್ನು ನೋಡಬಹುದಾಗಿದೆ.” “ನಂಬಿಕೆಯಲ್ಲಿ ದೃಢವಾಗಿ” ಇರದಿದ್ದರೆ, ವಿದೇಶಕ್ಕೆ ಹೋಗುವಂಥದ್ದು ಒಬ್ಬನನ್ನು ಆತ್ಮಿಕ ಹಡಗೊಡೆತಕ್ಕೆ ನಡೆಸುವ ಸಾಧ್ಯತೆ ಇದೆ.—1 ಪೇತ್ರ 5:9.

ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳಿ!

ವಿದೇಶಕ್ಕೆ ಹೋಗುವುದಕ್ಕೆ ಮುಂಚೆ ಆ ದೇಶದ ನಿಜ ಸ್ಥಿತಿಯ ಕುರಿತು ಮಾಹಿತಿಯನ್ನು ಪಡೆದುಕೊಳ್ಳುವುದು ತುಂಬ ಅವಶ್ಯವಾಗಿದೆ. ಬೇರೆಯವರು ಹೇಳುವ ಮಾಹಿತಿಯ ಮೇಲೆ ಎಂದೂ ಅವಲಂಬಿಸಬೇಡಿ. ಉದಾಹರಣೆಗೆ, ವಿನಿಮಯ ವಿದ್ಯಾರ್ಥಿಯಾಗಿ ಹೋಗಲು ನೀವು ಆಲೋಚಿಸುತ್ತಿರುವುದಾದರೆ, ಅದಕ್ಕಾಗಿ ಎಷ್ಟು ಖರ್ಚಾಗುವುದು ಎಂದು ಲೆಕ್ಕಹಾಕಿ. ಅನೇಕವೇಳೆ ಸಾವಿರಾರು ಡಾಲರುಗಳನ್ನು ಖರ್ಚುಮಾಡಬೇಕಾಗಿರುವುದು ಎಂಬುದು ತಿಳಿದುಬಂದಾಗ ನಿಮಗೆ ಆಶ್ಚರ್ಯವಾಗಬಹುದು. ಅಷ್ಟುಮಾತ್ರವಲ್ಲ, ವಿದೇಶದಲ್ಲಿ ನೀವು ಪಡೆದುಕೊಳ್ಳಲಿರುವ ವಿದ್ಯಾಭ್ಯಾಸವು ನಿಮ್ಮ ದೇಶದಲ್ಲಿ ಅಂಗೀಕರಿಸಲ್ಪಡುವುದೇ ಎಂಬುದನ್ನು ಕೂಡ ನೀವು ಕಂಡುಹಿಡಿಯಬೇಕಾಗಿರುತ್ತದೆ. ಅದರೊಂದಿಗೆ, ನೀವು ಹೋಗಲು ಇಚ್ಛಿಸುವ ದೇಶದ ನಿಯಮಗಳು, ಅಲ್ಲಿನ ಸಂಸ್ಕೃತಿ ಹಾಗೂ ಪದ್ಧತಿಗಳ ಕುರಿತು ನಿಮ್ಮಿಂದಾದಷ್ಟು ಮಾಹಿತಿಯನ್ನು ಸಂಗ್ರಹಿಸಲು ಪ್ರಯತ್ನಿಸಿ. ಅಲ್ಲಿ ಜೀವಿಸಬೇಕಾದರೆ ಎಷ್ಟು ಹಣ ಬೇಕಾಗಿರುವುದು? ಎಷ್ಟು ತೆರಿಗೆಯನ್ನು ನೀವು ಕಟ್ಟಬೇಕಾಗಿರುವುದು? ಆರೋಗ್ಯ ಅಪಾಯಗಳೇನಾದರೂ ಇವೆಯೇ? ಹೀಗೆ, ಈಗಾಗಲೇ ಅಲ್ಲಿ ಜೀವಿಸಿರುವವರೊಂದಿಗೆ ಮಾತಾಡುವ ಮೂಲಕ ಹೆಚ್ಚು ಉಪಯುಕ್ತ ಮಾಹಿತಿಯನ್ನು ನೀವು ಪಡೆದುಕೊಳ್ಳಬಹುದು.

ಇದೆಲ್ಲಾ ಆದ ಮೇಲೆ, ನಿಮ್ಮ ತಂಗುವ ವಸತಿಯ ಕುರಿತು ನೀವು ಯೋಚಿಸಬೇಕಾಗಿರುತ್ತದೆ. ವಿನಿಮಯ ವಿದ್ಯಾರ್ಥಿಯನ್ನು ಸ್ವೀಕರಿಸುವ ಮನೆಯವರು ಸಾಮಾನ್ಯವಾಗಿ ನಿಮ್ಮಿಂದ ಯಾವುದೇ ಹಣಕಾಸನ್ನು ನಿರೀಕ್ಷಿಸುವುದಿಲ್ಲ. ಆದರೂ, ಬೈಬಲ್‌ ತತ್ವಗಳನ್ನು ಗೌರವಿಸದ ವ್ಯಕ್ತಿಗಳೊಂದಿಗೆ ಜೀವಿಸುವಾಗ, ಅದು ಹೆಚ್ಚು ಒತ್ತಡವನ್ನು, ಮಾನಸಿಕವಾಗಿ ದಣಿವನ್ನು ಉಂಟುಮಾಡುವುದು. ಇದಕ್ಕಿರುವ ಇನ್ನೊಂದು ಪರಿಹಾರವು, ಸ್ನೇಹಿತರೊಂದಿಗೆ ಅಥವಾ ಬಂಧುಗಳೊಂದಿಗೆ ವಾಸಿಸುವುದಾಗಿದೆ. ಆದರೆ, ಒಂದುವೇಳೆ ಅವರು ತಮ್ಮೊಂದಿಗೆ ತಂಗುವಂತೆ ಕೇಳಿಕೊಂಡರೂ ಕೂಡ, ಅವರಿಗೆ ಹೊರೆಯಾಗದಂತೆ ಇರಲು ನೋಡಿಕೊಳ್ಳಿ. ಇಲ್ಲದಿದ್ದರೆ, ಅವರೊಂದಿಗಿರುವ ನಿಮ್ಮ ಸಂಬಂಧಕ್ಕೆ ಹಾನಿಯುಂಟಾಗುವುದು ಇಲ್ಲವೇ ಸಂಬಂಧವೇ ಕಡಿದುಹೋಗಬಹುದು.—ಜ್ಞಾನೋಕ್ತಿ 25:7.

ವಿದೇಶದಲ್ಲಿರುವಾಗ ಹಣ ಸಂಪಾದಿಸಲು ನೀವು ಬಯಸುವುದಾದರೆ, ಸರ್ಕಾರದ ಅಧಿಕಾರಿಗಳಿಗೆ ವಿಧೇಯರಾಗಿರುವ ನಿಮ್ಮ ಕ್ರೈಸ್ತ ಜವಾಬ್ದಾರಿಯನ್ನು ನೀವು ಮರೆಯದಿರಿ. (ರೋಮಾಪುರ 13:1-7) ಆ ದೇಶದ ನಿಯಮವು ನೀವು ಕೆಲಸಮಾಡುವಂತೆ ಅನುಮತಿಸುತ್ತದೋ? ಒಂದುವೇಳೆ ಅನುಮತಿಸುವುದಾದರೆ, ಯಾವ ರೀತಿಯ ಪರಿಸ್ಥಿತಿಯ ಕೆಳಗೆ? ಕಾನೂನು ನಿಷಿದ್ಧವಾದ ಕೆಲಸವನ್ನು ಮಾಡುವುದಾದರೆ, ಒಬ್ಬ ಪ್ರಾಮಾಣಿಕ ಕ್ರೈಸ್ತನಾಗಿರುವ ನಿಮ್ಮ ನಿಲುವನ್ನು ರಾಜಿಮಾಡಿಕೊಳ್ಳುವಂತೆ ಅದು ಮಾಡಸಾಧ್ಯವಿದೆ. ಅಪಘಾತ ವಿಮೆಯಂತಹ ಯಾವುದೇ ಮೂಲ ರಕ್ಷಣಾ ಸೌಲಭ್ಯಗಳು ನಿಮಗೆ ಸಿಗದೆ ಹೋಗಬಹುದು. ನೀವು ಕೆಲಸಮಾಡುವುದು ಕಾನೂನುಬದ್ಧವಾಗಿರುವುದಾದರೂ, ನೀವು ಎಚ್ಚರಿಕೆಯುಳ್ಳವರೂ ಜಾಣರೂ ಆಗಿರುವ ಅಗತ್ಯವಿದೆ. (ಜ್ಞಾನೋಕ್ತಿ 14:15) ಏಕೆಂದರೆ, ಅನೇಕ ಸಮಯಗಳಲ್ಲಿ ನೀತಿನಿಷ್ಠೆಗಳಿಲ್ಲದ ಯಜಮಾನರು ವಿದೇಶಿಯರನ್ನು ತಮ್ಮ ಸ್ವಾರ್ಥಕ್ಕಾಗಿ ದುರುಪಯೋಗಿಸಿಕೊಳ್ಳುತ್ತಾರೆ.

ತೀರ್ಮಾನವನ್ನು ಮಾಡುವುದು

ಹಾಗಾದರೆ, ವಿದೇಶಕ್ಕೆ ಹೋಗುವಂಥದ್ದು ನಿಜವಾಗಿಯೂ ಒಂದು ದೊಡ್ಡ ವಿಷಯವಾಗಿದೆ ಎಂಬುದು ಸ್ಪಷ್ಟವಾಯಿತು. ಆದುದರಿಂದ ಅದನ್ನು ಅಲ್ಪವಾಗಿ ಎಣಿಸಬಾರದು. ನೀವು ವಿದೇಶಕ್ಕೆ ಹೋಗುವ ಯೋಜನೆಯನ್ನು ಮಾಡುವುದಕ್ಕೆ ಮುಂಚೆ ನಿಮ್ಮ ಹೆತ್ತವರೊಂದಿಗೆ ಕುಳಿತು, ಅದರಿಂದ ಸಿಗಲಿರುವ ಪ್ರಯೋಜನಗಳು ಮತ್ತು ಸಂಭಾವ್ಯ ಅಪಾಯಗಳ ಕುರಿತು ಬಲು ಎಚ್ಚರಿಕೆಯಿಂದ ಪರ್ಯಾಲೋಚಿಸಿರಿ. ವಿದೇಶಕ್ಕೆ ಹೋಗಬೇಕೆಂಬ ನಿಮ್ಮ ಹುರುಪು, ನಿಮ್ಮ ವಿವೇಚನೆಯನ್ನು ತಳ್ಳಿಹಾಕದಿರಲಿ. ನಿಮ್ಮ ಉದ್ದೇಶಗಳನ್ನು ಪರೀಕ್ಷಿಸುವಾಗ ಪ್ರಾಮಾಣಿಕರಾಗಿರಿ. ನಿಮ್ಮ ಹೆತ್ತವರು ಹೇಳುವುದನ್ನು ಕೂಡ ಗಮನವಿಟ್ಟು ಕೇಳಿಸಿಕೊಳ್ಳಿ. ಏನೇ ಆದರೂ, ನಿಮ್ಮ ಕುರಿತು ಕಾಳಜಿವಹಿಸುವವರು ಅವರೇ ಅಲ್ಲವೇ? ನೀವು ಸಾವಿರಾರು ಮೈಲಿಗಳಷ್ಟು ದೂರವಿರುವುದಾದರೂ ಅವರಿಗೆ ನಿಮ್ಮ ಕುರಿತು ಚಿಂತೆಯಿರುತ್ತದೆ. ವಿದೇಶದಲ್ಲಿ ಜೀವಿಸಲು ನಿಮಗೆ ಬೇಕಾಗಿರುವ ಹಣಕಾಸಿನ ಸಹಾಯವನ್ನು ಅವರು ನೀಡಬೇಕಾಗಿರಬಹುದು.

ಎಲ್ಲಾ ಅಂಶಗಳನ್ನು ಪರಿಗಣಿಸಿದ ಮೇಲೆ, ಏನ್ನಿಲ್ಲವೆಂದರೂ ಸದ್ಯಕ್ಕೆ ವಿದೇಶಕ್ಕೆ ಹೋಗುವುದು ವಿವೇಕಯುತವಲ್ಲ ಎಂದು ನಿಮಗನಿಸಬಹುದು. ಅದು ಖಂಡಿತ ನಿರಾಶಾಜನಕವಾಗಿರಸಾಧ್ಯವಿದೆ. ಆದರೆ, ನೀವು ಮಾಡಬಹುದಾದ ಆಸಕ್ತಿಕರ ವಿಷಯಗಳು ಅನೇಕ ಇವೆ. ಉದಾಹರಣೆಗೆ, ನಿಮ್ಮ ಸ್ವಂತ ದೇಶದಲ್ಲೇ ಇರುವ ಅನೇಕ ಆಸಕ್ತಿಕರ ಸ್ಥಳಗಳನ್ನು ಸುತ್ತಿನೋಡುವುದರ ಕುರಿತು ನೀವು ಯಾಕೆ ಯೋಚಿಸಬಾರದು? ಅಥವಾ ವಿದೇಶಿ ಭಾಷೆಯನ್ನು ಯಾಕೆ ಕಲಿತುಕೊಳ್ಳಬಾರದು? ಅಷ್ಟರೊಳಗಾಗಿ, ಒಂದುವೇಳೆ ವಿದೇಶಕ್ಕೆ ತೆರಳುವ ಅವಕಾಶವು ನಿಮ್ಮ ಬಾಗಿಲಿಗೆ ಬಂದರೂ ಬರಬಹುದು.

ಒಂದುವೇಳೆ, ನೀವು ವಿದೇಶಕ್ಕೆ ಹೋಗಲೇಬೇಕೆಂದು ತೀರ್ಮಾನಿಸಿರುವುದಾದರೆ ಆಗೇನು? ವಿದೇಶದಲ್ಲಿ ನೆಲಸುವುದನ್ನು ನೀವು ಹೇಗೆ ಯಶಸ್ವಿಕರವಾಗಿ ಮಾಡಬಹುದು ಎಂಬುದನ್ನು ಮುಂದಿನ ಲೇಖನದಲ್ಲಿ ಚರ್ಚಿಸಲಾಗುವುದು.

[ಪಾದಟಿಪ್ಪಣಿ]

^ “ಶ್ರೀಮಂತ ದೇಶಕ್ಕೆ ಹೋಗುವ ಮುನ್ನ ತೆರಬೇಕಾದ ಬೆಲೆಯನ್ನು ಲೆಕ್ಕಹಾಕುವುದು” ಎಂಬ ಏಪ್ರಿಲ್‌ 1, 1991ರ ವಾಚ್‌ಟವರ್‌ ಪತ್ರಿಕೆಯಲ್ಲಿರುವ ಲೇಖನವನ್ನು ನೋಡಿ. ಇದು ವಾಚ್‌ಟವರ್‌ ಬೈಬಲ್‌ ಆ್ಯಂಡ್‌ ಟ್ರ್ಯಾಕ್ಟ್‌ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟಿದೆ.

[ಪುಟ 13ರಲ್ಲಿರುವ ಚಿತ್ರ]

ದೇವರ ರಾಜ್ಯದ ಕುರಿತು ಸಾರುವ ಕೆಲಸವನ್ನು ಹೆಚ್ಚಿಸುವುದಕ್ಕಾಗಿ ಕೆಲವು ಯುವಜನರು ವಿದೇಶಕ್ಕೆ ಹೋಗುತ್ತಾರೆ

[ಪುಟ 14ರಲ್ಲಿರುವ ಚಿತ್ರ]

ವಿದೇಶವೊಂದಕ್ಕೆ ಹೋಗುವುದರ ಪ್ರಯೋಜನಗಳು ಮತ್ತು ಅಪಾಯಗಳ ಕುರಿತು ನಿಮ್ಮ ಹೆತ್ತವರೊಂದಿಗೆ ಮಾತಾಡಿ