ನೆಕ್‌ಟೈಗಳು ಹಿಂದೆ ಮತ್ತು ಈಗ
ನೆಕ್‌ಟೈಗಳು ಹಿಂದೆ ಮತ್ತು ಈಗ
ಸಹಸ್ರಾರು ವರ್ಷಗಳಿಂದ ಪುರುಷರು ತಮ್ಮ ಕತ್ತು ಮತ್ತು ಕಂಠವನ್ನು ಅಲಂಕರಿಸುವುದರಲ್ಲಿ ಹೆಚ್ಚು ಆಸಕ್ತಿಯನ್ನು ತೆಗೆದುಕೊಂಡಿದ್ದಾರೆ. ಉದಾಹರಣೆಗೆ, ಸುಮಾರು ಸಾ.ಶ.ಪೂ 1737ರಲ್ಲಿ ಈಜಿಪ್ಟ್ ದೇಶದ ಫರೋಹನು ಯೋಸೆಫನಿಗೆ ಚಿನ್ನದ ಕಂಠಹಾರವನ್ನು ಕೊಟ್ಟನು.—ಆದಿಕಾಂಡ 41:42.
ಇಂದು ಪ್ರಪಂಚದ ಅನೇಕ ಕಡೆಗಳಲ್ಲಿ ಎಲ್ಲರಿಗೂ ಪರಿಚಿತವಾಗಿರುವ ನೆಕ್‌ಟೈ ಅನ್ನು ಪುರುಷರು ಧರಿಸುತ್ತಾರೆ. ಅನೇಕ ಮೂಲಗಳಿಗನುಸಾರ, ಆಧುನಿಕ ಕಾಲದ ಟೈಯನ್ನು ಪರಿಚಯಿಸಿದವರು ಇಂಗ್ಲೆಡ್ ದೇಶದವರು ಎಂದು ತೋರುತ್ತದೆ. ಅನಂತರ, ಅದು 16ನೇ ಶತಮಾನದ ಕೊನೆಯಲ್ಲಿ ಫ್ರಾನ್ಸ್‌ನಲ್ಲಿ ಕಾಣಿಸಿಕೊಳ್ಳಲಾರಂಭಿಸಿತು. ಪುರುಷರು ಡಬ್ಲೆಟ್ ಎಂದು ಕರೆಯಲ್ಪಡುವ ನಡುವಂಗಿಯನ್ನು ಧರಿಸುತ್ತಿದ್ದರು. ಮತ್ತು ಅದರ ಅಲಂಕಾರಕ್ಕಾಗಿ ಕೊರಳಿಗೆ ಕಟ್ಟುವ ನಿರಿಗೆಯನ್ನು ಧರಿಸುತ್ತಿದ್ದರು. ಅನೇಕ ಸಂದರ್ಭಗಳಲ್ಲಿ ಈ ಕೊರಳಿನ ನಿರಿಗೆಯು, ಹಲವು ಸೆಂಟಿಮೀಟರುಗಳಷ್ಟು ದಪ್ಪವಿರಬಹುದಾದ ದೊಡ್ಡ ತಟ್ಟೆಯಾಕಾರದ ಬಿಲ್ಲೆಯಂತಿದ್ದು, ಕತ್ತಿನ ಸುತ್ತಲು ಆವರಿಸುತ್ತಿತ್ತು. ಇದನ್ನು, ತನ್ನ ಆಕಾರದಲ್ಲಿ ಉಳಿಯುವಂತೆ ಮಾಡಲು ಗಂಜಿ ಹಾಕಿ ಬಿರುಸುಮಾಡಿದ ಬಿಳಿ ಬಟ್ಟೆಯಿಂದ ಮಾಡಲಾಗುತ್ತಿತ್ತು.
ಕಾಲಕ್ರಮೇಣ, ಕೊರಳಿನ ನಿರಿಗೆಯು ಹೋಗಿ ನೇತಾಡುವ ಕಾಲರುಗಳು ಪ್ರಸಿದ್ಧಿಗೆ ಬಂದವು. ಇದು ಬಿಳಿ ಬಣ್ಣದ ಕಾಲರಾಗಿದ್ದು ಇಡೀ ಭುಜವನ್ನು ಆವರಿಸುತ್ತಿತ್ತು ಮತ್ತು ತೋಳಿನ ಮೇಲೆಲ್ಲಾ ಹರಡಿಕೊಳ್ಳುತ್ತಿತ್ತು. ಈ ರೀತಿಯ ಕಾಲರುಗಳನ್ನು ವ್ಯಂಡೆಕ್ಸ್ ಎಂದು ಕೂಡ ಕರೆಯಲಾಗುತ್ತಿತ್ತು. ಇದನ್ನು ಧರ್ಮಶುದ್ಧಿವಾದಿಗಳು ಅಥವಾ ಪ್ಯೂರಿಟನ್‌ಗಳು ಹಾಗೂ ಇನ್ನಿತರರು ಧರಿಸುತ್ತಿದ್ದರು.
17ನೇ ಶತಮಾನದಲ್ಲಿ, ಸಾಮಾನ್ಯವಾಗಿ ತೊಡುತ್ತಿದ್ದ ಉದ್ದವಾದ ಮೇಲಂಗಿಯ ಒಳಗೆ, ನಡುವಂಗಿ ಅಥವಾ ವೇಸ್ಟ್‌ಕೋಟ್ ಎಂದು ಕರೆಯಲ್ಪಡುವ ಇನ್ನೊಂದು ಉದ್ದ ಅಂಗಿಯನ್ನು ಧರಿಸಲು ಪ್ರಾರಂಭಿಸಿದರು. ಈ ಉಡುಪನ್ನು ಧರಿಸಿದವನ ಕತ್ತನ್ನು, ಕ್ರಾವಟ್ ಎಂದು ಕರೆಯಲ್ಪಡುವ ಸ್ಕಾರ್ಫ್‌ನಂತಹ ಕಂಠವಸ್ತ್ರದಿಂದ ಸುತ್ತಲಾಗುತ್ತಿತ್ತು. ಈ ವಸ್ತ್ರವನ್ನು ಕತ್ತಿನ ಸುತ್ತಲೂ ಒಂದಕ್ಕಿಂತಲೂ ಹೆಚ್ಚು ಬಾರಿ ಸುತ್ತಲಾಗುತ್ತಿತ್ತು. ಸಡಿಲವಾದ ತುದಿಗಳನ್ನು ಷರ್ಟಿನ ಮೇಲೆ ನೇತಾಡಲು ಬಿಡಲಾಗುತ್ತಿತ್ತು. 17ನೆಯ ಶತಮಾನದ ಕೊನೆಯ ಭಾಗದ ವರ್ಣಚಿತ್ರಗಳು, ಈ ರೀತಿಯ ಕಂಠವಸ್ತ್ರಗಳು ತುಂಬ ಜನಪ್ರಿಯವಾಗಿದ್ದವು ಎಂಬುದನ್ನು ತೋರಿಸುತ್ತವೆ.
ಕಂಠವಸ್ತ್ರಗಳು ಅಥವಾ ಕ್ರಾವಟ್‌ಗಳು ಮಸ್ಲಿನ್, ನಾರು ಮತ್ತು ಕಸೂತಿಬಟ್ಟೆಯಿಂದ ಮಾಡಲ್ಪಡುತ್ತಿದ್ದವು. ಈ ಕಸೂತಿಬಟ್ಟೆಯಿಂದ ಮಾಡಲ್ಪಟ್ಟವುಗಳು ತುಂಬಾ ದುಬಾರಿಯಾಗಿದ್ದವು. ಇಂಗ್ಲೆಂಡಿನ ಅರಸನಾದ ಜೇಮ್ಸ್ II, ತನ್ನ ಪಟ್ಟಾಭಿಷೇಕದಂದು ಕಸೂತಿಮಾಡಿದ ಕಂಠವಸ್ತ್ರಕ್ಕಾಗಿ 36 ಪೌಂಡುಗಳು, 10 ಶಿಲಿಂಗ್‌ಗಳನ್ನು ಪಾವತಿಮಾಡಿದನು ಎಂದು ಹೇಳಲಾಗುತ್ತದೆ. ಆ ಕಾಲಕ್ಕೆ ಅದು ನಿಜವಾಗಿಯೂ ದೊಡ್ಡ ಮೊತ್ತವೇ ಆಗಿತ್ತು. ಕಸೂತಿಮಾಡಿದ ಕೆಲವು ಕಂಠವಸ್ತ್ರಗಳು ದೊಡ್ಡದಾಗಿದ್ದವು. ಅಂಥ ಒಂದು ಕಂಠವಸ್ತ್ರವನ್ನು ವೆಸ್ಟ್‌ಮಿನಿಸ್ಟರ್ ಅಬೆನಲ್ಲಿರುವ ಚಾರ್ಲ್ಸ್ IIನ ಪ್ರತಿಮೆಯಲ್ಲಿ ನೋಡಬಹುದು. ಆ ಕಂಠವಸ್ತ್ರವು 15 ಸೆಂಟಿಮೀಟರುಗಳಷ್ಟು ಅಗಲವಿದ್ದು 86 ಸೆಂಟಿಮೀಟರುಗಳಷ್ಟು ಉದ್ದವಾಗಿದೆ.
ಕಂಠವಸ್ತ್ರವನ್ನು ಕಟ್ಟುವುದಕ್ಕಾಗಿ ಅನೇಕ ರೀತಿಯಲ್ಲಿ ಗಂಟುಗಳು ಹಾಕಲ್ಪಡುತ್ತಿದ್ದವು. ಕೆಲವೊಂದು ಸಂದರ್ಭಗಳಲ್ಲಿ, ಕಂಠವಸ್ತ್ರವು ತನ್ನ ಸ್ಥಳದಲ್ಲೇ ಇರುವಂತೆ ಮಾಡಲು, ಅದರ ಮೇಲೆ ರೇಷ್ಮೆಯ ಪಟ್ಟಿಯನ್ನು ಇಟ್ಟು, ಗದ್ದದ ಕೆಳಗೆ ದೊಡ್ಡ ಬಿಲ್ಲು ಅಥವಾ ಬೋ ಆಕಾರದಲ್ಲಿ ಕಟ್ಟಲಾಗುತ್ತಿತ್ತು. ಈ ರೀತಿಯ ಕಂಠವಸ್ತ್ರವನ್ನು ಕಟ್ಟುವ ಸ್ಟೈಲನ್ನು ಸಾಲಿಟೆರ್ ಎಂದು ಕರೆಯಲಾಗುತ್ತಿತ್ತು. ಈ ರೀತಿಯ ಬೋ ಆಧುನಿಕ ದಿನದ ಟೈಯನ್ನು ಹೋಲುತ್ತಿತ್ತು. ಕಂಠವಸ್ತ್ರವನ್ನು ಕಟ್ಟುವ ವಿಧಾನಗಳು ಕನಿಷ್ಟಪಕ್ಷ ನೂರಾದರೂ ಇದ್ದವು ಎಂದು ಹೇಳಲಾಗುತ್ತದೆ. ಪುರುಷರ ವಸ್ತ್ರಧಾರಣೆಯನ್ನು ಪ್ರಭಾವಿಸಿದ ಬೊ ಬ್ರಮೆಲ್ ಎಂಬ ಒಬ್ಬ ಆಂಗ್ಲನು, ಇಡೀ ಬೆಳಗ್ಗಿನ ಸಮಯವನ್ನು ಕೇವಲ ಒಂದು ಕಂಠವಸ್ತ್ರವನ್ನು ಸರಿಯಾಗಿ ಕಟ್ಟುವುದಕ್ಕಾಗಿಯೇ ಕಳೆಯುತ್ತಿದ್ದನು ಎಂದು ಹೇಳಲಾಗುತ್ತದೆ.
1860ರೊಳಗಾಗಿ, ಉದ್ದವಾದ ತುದಿಗಳಿದ್ದ ಕಂಠವಸ್ತ್ರಗಳು ಆಧುನಿಕ ರೂಪದ ಕಂಠ ಉಡುಪನ್ನು ಹೋಲಲಾರಂಭಿಸಿದವು. ಇದನ್ನು ನೆಕ್‌ಟೈ ಎಂದು ಕರೆಯಬೇಕು. ಇದನ್ನು ಫೋರ್-ಇನ್-ಹ್ಯಾಂಡ್ ಎಂದು ಕೂಡ ಕರೆಯಲಾಗುತ್ತದೆ. ಈ ಹೆಸರು ನಾಲ್ಕು ಕುದುರೆಯನ್ನು ಒಂಟಿಯಾಗಿ ಓಡಿಸುವ ಸಾರೋಟಿಯರು ಉಪಯೋಗಿಸುವ ಗಂಟಿನಿಂದ ಬಂದಿದೆ. ಕಾಲರ್ ಇರುವ ಷರ್ಟ್ ಫ್ಯಾಷನ್ ಆಗಲು ಪ್ರಾರಂಭಿಸಿತು. ಟೈ ಅನ್ನು ಗದ್ದದ ಕೆಳಗೆ ಗಂಟುಹಾಕಲಾಗುತ್ತಿತ್ತು
ಮತ್ತು ಅದರ ಉದ್ದವಾದ ತುದಿಯನ್ನು ಷರ್ಟಿನ ಮೇಲೆ ನೇತುಬಿಡಲಾಗುತ್ತಿತ್ತು. ಆಗಿನಿಂದಲೇ ನಮ್ಮ ಆಧುನಿಕ ಕಾಲದ ಟೈ ಪರಿಚಯವಾಗತೊಡಗಿತು. ಇನ್ನೊಂದು ರೀತಿಯ ಟೈ, ಬೋ ಟೈ ಆಗಿದೆ. ಇದು 1890ರ ಸಮಯದಿಂದ ಜನಪ್ರಿಯವಾಗತೊಡಗಿತು.ಇಂದು, ಟೈ ಅನ್ನು ಧರಿಸುವುದು ವ್ಯಕ್ತಿಯ ವೇಷಭೂಷಣದ ಒಂದು ಬಹುಮುಖ್ಯ ಭಾಗವಾಗಿದೆ ಎಂದು ಅನೇಕರು ನೆನಸುತ್ತಾರೆ. ಅಷ್ಟೇ ಅಲ್ಲ, ಒಬ್ಬ ಅಪರಿಚಿತನು ಧರಿಸಿರುವ ಟೈಯಿಯ ಆಧಾರದ ಮೇಲೆ ಅವನ ಕುರಿತು ಅಭಿಪ್ರಾಯಗಳನ್ನು ಸೃಷ್ಟಿಸಿಬಿಡುತ್ತಾರೆ. ಆದುದರಿಂದ, ನಿಮ್ಮ ಷರ್ಟಿಗೂ ಪ್ಯಾಂಟಿಗೂ ಮತ್ತು ನಡುವಂಗಿಗೂ ಹೊಂದಿಕೊಳ್ಳುವ ಬಣ್ಣ ಮತ್ತು ವಿನ್ಯಾಸವಿರುವ ಶುಭ್ರವಾದ ಟೈಯನ್ನು ಧರಿಸುವುದು ಒಳ್ಳೆಯದು.
ಗಂಟನ್ನು ಹಾಕುವಾಗ ಅದನ್ನು ಸರಿಯಾಗಿ ಹಾಕಬೇಕು. ಬಹುಶಃ, ಹೆಚ್ಚು ಜನಪ್ರಿಯವಾದ ಗಂಟು, ಫೋರ್-ಇನ್-ಹ್ಯಾಂಡ್ ಆಗಿರಬೇಕು. (ಪುಟ 18ರಲ್ಲಿರುವ ಚಿತ್ರವನ್ನು ನೋಡಿ.) ಇದು ನೀಟಾಗಿರುತ್ತದೆ ಮಾತ್ರವಲ್ಲ ಅಷ್ಟೇನೂ ಆಡಂಭರವಾಗಿಯೂ ತೋರುವುದಿಲ್ಲ. ಅಷ್ಟುಮಾತ್ರವಲ್ಲ, ವಿಶೇಷ ಸಂದರ್ಭಗಳಿಗಾಗಿ ತೊಡುವ ಉಡುಪಿಗೆ ವ್ಯಾಪಕವಾಗಿ ಸ್ವೀಕಾರರ್ಹವಾಗಿದೆ. ಇನ್ನೊಂದು ಜನಪ್ರಿಯವಾದ ಟೈಯನ್ನು ಗಂಟುಹಾಕುವ ವಿಧಾನವು ವಿನಸರ್ ನಾಟ್ ಎಂಬುದಾಗಿದೆ. ಇದು ಒಂದು ರೀತಿಯಲ್ಲಿ ದೊಡ್ಡದಾಗಿರುತ್ತದೆ. ಟೈನ ಗಂಟಿನ ಕೆಳಗೆ ಸಾಮಾನ್ಯವಾಗಿ ಒಂದು ಗುಳಿಯನ್ನು ಮಾಡಲಾಗುತ್ತದೆ.
ಅನೇಕರಿಗೆ ಟೈಯನ್ನು ಧರಿಸುವುದು ಅಹಿತಕರವಾಗಿರುವಂತೆ ಅನಿಸುತ್ತದೆ. ಏಕೆಂದರೆ, ಕುತ್ತಿಗೆಯ ಬಳಿ ಹೆಚ್ಚು ಒತ್ತಡವನ್ನು ಅವರು ಇಷ್ಟಪಡುವುದಿಲ್ಲ. ಆದರೂ, ಈ ಸಮಸ್ಯೆಯನ್ನು ಅನುಭವಿಸಿರುವ ಕೆಲವರು, ಅದಕ್ಕೆ ಕಾರಣ ಷರ್ಟಿನ ಕಾಲರಿನ ಅಳತೆಯೇ ಹೊರತು ಟೈ ಅಲ್ಲ ಎಂದು ನಂತರ ಕಂಡುಕೊಂಡಿದ್ದಾರೆ. ನಿಮಗೂ ಇದೇ ಸಮಸ್ಯೆಯಿರುವಲ್ಲಿ, ನಿಮ್ಮ ಷರ್ಟಿನ ಕಾಲರ್ ತುಂಬ ಚಿಕ್ಕದಾಗಿರದಂತೆ ನೋಡಿಕೊಳ್ಳಿ. ಷರ್ಟಿನ ಕಾಲರ್ ಸರಿಯಾದ ಗಾತ್ರದಲ್ಲಿರುವುದಾದರೆ, ಟೈಯನ್ನು ಧರಿಸಿಕೊಂಡಿದ್ದರೂ ಅದನ್ನು ಧರಿಸಿರುವಂತೆ ನಿಮಗೆ ಅನಿಸುವುದೇ ಇಲ್ಲ.
ಅನೇಕ ದೇಶಗಳಲ್ಲಿ, ಟೈ ಅನ್ನು ವ್ಯಾಪಾರ ಮತ್ತು ಔಪಚಾರಿಕವಾದ ಸಂದರ್ಭಗಳಲ್ಲಿ ಧರಿಸಲೇಬೇಕಾದ ಉಡುಪಾಗಿ ಎಣಿಸಲಾಗುತ್ತದೆ. ಅದೇ ಕಾರಣಕ್ಕಾಗಿಯೇ, ಅನೇಕ ಕ್ರೈಸ್ತರು ಔಪಚಾರಿಕವಾದ ಸಾಕ್ಷಿಕಾರ್ಯದಲ್ಲಿ ಒಳಗೂಡುವಾಗ ಟೈ ಅನ್ನು ಧರಿಸುತ್ತಾರೆ. ಹೌದು, ಒಬ್ಬ ಪುರುಷನ ಕತ್ತಿನ ಸುತ್ತಲಿರುವ ಒಂದು ತುಂಡು ಬಟ್ಟೆಯು ಅವನನ್ನು ಹೆಚ್ಚು ಗೌರವಾರ್ಥ ವ್ಯಕ್ತಿಯನ್ನಾಗಿ ಮಾಡುತ್ತಾ ಅವನಿಗೆ ಘನತೆಯನ್ನು ನೀಡಬಲ್ಲದು.
[ಪುಟ 18ರಲ್ಲಿರುವ ರೇಖಾಕೃತಿ]
(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)
ಫೋರ್-ಇನ್-ಹ್ಯಾಂಡ್ ಟೈಯನ್ನು ಕಟ್ಟುವ ವಿಧ *
1 ಟೈಯನ್ನು ನಿಮ್ಮ ಕತ್ತಿನ ಸುತ್ತ ಹಾಕಿಕೊಳ್ಳಿ. ಅಗಲವಾದ ತುದಿಯನ್ನು ಹೆಚ್ಚುಕಡಿಮೆ 30 ಸೆಂಟಿಮೀಟರುಗಳಷ್ಟು ಉದ್ದಬಿಡಿ. ನಂತರ ಅಗಲವಾದ ತುದಿಯನ್ನು ಕಿರಿದಾದ ತುದಿಯ ಕೆಳಗಿನಿಂದ ಮೇಲೆ ತನ್ನಿ.
2 ಆಮೇಲೆ ಅಗಲವಾದ ತುದಿಯನ್ನು ಮತ್ತೆ ಸುತ್ತಿ ಕುಣಿಕೆಯ ಒಳಗಿನಿಂದ ಮೇಲಕ್ಕೆ ತನ್ನಿ.
3 ಗಂಟಿನ ಭಾಗವನ್ನು ನಿಮ್ಮ ತೋರ್ಬೆರಳಿನಿಂದ ಸಡಿಲವಾಗಿ ಹಿಡಿದುಕೊಂಡು, ಅಗಲವಾದ ತುದಿಯನ್ನು ಗಂಟಿನಿಂದ ಹೊರಗೆ ತನ್ನಿ.
4 ಸಣ್ಣ ತುದಿಯನ್ನು ಹಿಡಿದುಕೊಂಡು ಕಾಲರಿನ ಬಳಿಗೆ ಗಂಟನ್ನು ಸರಿಸುವ ಮೂಲಕ ಗಂಟನ್ನು ನಿಧಾನವಾಗಿ ಬಿಗಿಗೊಳಿಸಿ.
[ಪಾದಟಿಪ್ಪಣಿ]
^ ಷರ್ಟ್ ಮತ್ತು ಟೈ (ಇಂಗ್ಲಿಷ್) ಎಂಬ ಪುಸ್ತಕದಿಂದ
[ಪುಟ 19ರಲ್ಲಿರುವ ಚಿತ್ರಗಳು]
17ನೇ ಶತಮಾನದಿಂದ ಇಂದಿನವರೆಗಿನ ನೆಕ್‌ಟೈ ಸ್ಟೈಲುಗಳು