ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪುಟ್ಟ ದ್ವೀಪದಿಂದ ಒಂದು ದೊಡ್ಡ ಪಾಠ

ಪುಟ್ಟ ದ್ವೀಪದಿಂದ ಒಂದು ದೊಡ್ಡ ಪಾಠ

ಪುಟ್ಟ ದ್ವೀಪದಿಂದ ಒಂದು ದೊಡ್ಡ ಪಾಠ

ರಾಪ ನೂಯ್‌ ಎಂಬುದು 170 ಕಿಲೋಮೀಟರುಗಳಷ್ಟು ವಿಸ್ತೀರ್ಣವುಳ್ಳ ದ್ವೀಪವಾಗಿದೆ. ಒಂದೇ ಒಂದು ಮರವೂ ಇಲ್ಲದ ಜ್ವಾಲಾಮುಖಿಯ ತಪ್ಪಲಿನಲ್ಲಿರುವ ಈ ಶೂನ್ಯ ಪ್ರದೇಶವು ಜಗತ್ತಿನ ಅತ್ಯಂತ ದೂರದಲ್ಲಿರುವ ನಿವಾಸ ಸ್ಥಳವಾಗಿದೆ. * ಆದರೆ, ಇಂದು ಇಡೀ ದ್ವೀಪವು ಒಂದು ಐತಿಹಾಸಿಕ ಸ್ಥಳವಾಗಿದೆ. ಅದಕ್ಕೆ ಒಂದು ಕಾರಣವು, ಅಲ್ಲಿನ ಮೊಆಯ್‌ ಎಂಬ ಶಿಲಾಪ್ರತಿಮೆಗಳಾಗಿವೆ. ಇವು ನಾಗರಿಕತೆಯು ತುಂಬಿತುಳುಕುತ್ತಿದ್ದ ಸಮಯದಲ್ಲಿ ಕೆತ್ತಲ್ಪಟ್ಟ ಪ್ರತಿಮೆಗಳಾಗಿವೆ.

ಜ್ವಾಲಾಮುಖಿಯಿಂದ ಉಂಟಾಗುವ ಬಂಡೆಗಳಿಂದ ಕೆತ್ತಲ್ಪಟ್ಟಿರುವ ಕೆಲವು ಮೊಆಯ್‌ ಪ್ರತಿಮೆಗಳು ಎಷ್ಟು ಆಳವಾಗಿ ಹೂಳಿಡಲ್ಪಟ್ಟಿವೆಯೆಂದರೆ, ಅವುಗಳ ಬೃಹದಾಕಾರದ ತಲೆಗಳು ಮಾತ್ರ ಕಾಣಿಸುತ್ತವೆ. ಇನ್ನೂ ಕೆಲವೊಂದು ಪ್ರತಿಮೆಗಳ ವಿಷಯದಲ್ಲಿ ನೋಡುವಾಗ, ಅವುಗಳ ಮುಂಡವು ನೆಲದಿಂದ ಸ್ವಲ್ಪವೇ ಮೇಲೆ ಇದೆ ಮತ್ತು ಇನ್ನೂ ಕೆಲವು ಮೊಆಯ್‌ ಪ್ರತಿಮೆಗಳ ತಲೆಯ ಮೇಲೆ ಶಿಲೆಯಿಂದ ಮಾಡಿದ ಪುಕಾವೊ ಎಂದು ಕರೆಯಲ್ಪಡುವ ಜುಟ್ಟುಗಳಿವೆ. ಅವು ಈಗಲೂ ನೋಡುವುದಕ್ಕೆ ವಿನೋದಕರವಾಗಿವೆ. ಅಧಿಕಾಂಶ ಪ್ರತಿಮೆಗಳು ಪೂರ್ತಿಗೊಳಿಸಲ್ಪಡದೆ ಕಲ್ಲುಗಣಿಗಳಲ್ಲಿಯೇ ಬಿದ್ದಿವೆ, ಇಲ್ಲವೇ ಪಾಳುಬಿದ್ದ ಆಗಿನ ಕಾಲದ ರಸ್ತೆಗಳಲ್ಲಿ ಅಲ್ಲಲ್ಲಿ ಬಿದ್ದಿವೆ. ಅವುಗಳನ್ನು ನೋಡುವಾಗ, ಕೆತ್ತನೆಗಾರರು ಸಲಕರಣೆಗಳನ್ನು ಅಲ್ಲೇ ಬಿಸಾಡಿ, ಕೆಲಸವನ್ನು ಬಿಟ್ಟು ಎದ್ದುಹೋದಂತೆ ತೋರುತ್ತದೆ. ಅವುಗಳಲ್ಲಿ ಸಮುದ್ರಕ್ಕೆ ಬೆನ್ನುಮಾಡಿ ನಿಂತಿರುವ ಸುಮಾರು 15 ಪ್ರತ್ಯೇಕವಾದ ಪ್ರತಿಮೆಗಳು, ನಿಂತಿರುವ ಇನ್ನಿತರ ಪ್ರತಿಮೆಗಳಿಗಿಂತ ಭಿನ್ನವಾಗಿವೆ. ಈ ದ್ವೀಪವನ್ನು ನೋಡುವುದಕ್ಕಾಗಿ ಬರುವ ಸಂದರ್ಶಕರನ್ನು ಈ ಮೊಆಯ್‌ ಪ್ರತಿಮೆಗಳು ಬಹಳ ಸಮಯದಿಂದಲೂ ದಿಗ್ಭ್ರಮೆಗೊಳಿಸಿವೆ ಎಂದು ಹೇಳಿದರೆ ಆಶ್ಚರ್ಯವಾಗಲಾರದು.

ಇತ್ತೀಚಿನ ವರ್ಷಗಳಲ್ಲಿ ವಿಜ್ಞಾನಿಗಳು, ಈ ಮೊಆಯ್‌ ಪ್ರತಿಮೆಗಳ ಹಿಂದಿರುವ ರಹಸ್ಯವನ್ನು ಹಾಗೂ ಅವುಗಳನ್ನು ರಚಿಸಿದ ತುಡಿಯುತ್ತಿದ್ದ ನಾಗರಿಕತೆಯು ನಾಶವಾಗಲು ಕಾರಣವೇನಿರಬಹುದೆಂಬ ಒಗಟನ್ನು ಸಹ ಅರ್ಥಮಾಡಿಕೊಂಡಿದ್ದಾರೆ. ಗಮನಾರ್ಹವಾಗಿಯೇ, ಬೆಳಕಿಗೆ ಬಂದ ಸತ್ಯಾಂಶಗಳು ಕೇವಲ ಐತಿಹಾಸಿಕ ಮೌಲ್ಯಕ್ಕಿಂತಲೂ ಹೆಚ್ಚು ಪ್ರಾಮುಖ್ಯವಾಗಿದ್ದವು. ಏಕೆಂದರೆ, ಅವು “ಆಧುನಿಕ ಜಗತ್ತಿಗೆ ಬಹಳ ಪ್ರಾಮುಖ್ಯದ ಒಂದು ಪಾಠವನ್ನು” ಕಲಿಸುತ್ತವೆ ಎಂದು ಎನ್‌ಸೈಕ್ಲೊಪೀಡಿಯ ಬ್ರಿಟ್ಯಾನಿಕ ಹೇಳುತ್ತದೆ.

ಆ ಪಾಠ ಯಾವುದು? ಅದು ವಿಶೇಷವಾಗಿ ಭೂಮಿಯಲ್ಲಿರುವ ನೈಸರ್ಗಿಕ ಸಂಪತ್ತುಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸುವುದಕ್ಕೆ ಸಂಬಂಧಪಟ್ಟಿದೆ. ಆದರೆ, ಈ ಚಿಕ್ಕ ದ್ವೀಪಕ್ಕಿಂತ ಭೂಮಿಯು ಅತ್ಯಂತ ಹೆಚ್ಚು ಸಂಕೀರ್ಣವೂ ಜೈವಿಕವಾಗಿ ವೈವಿಧ್ಯಮಯವೂ ಆಗಿದೆ ಎಂದು ನೀವು ಹೇಳಬಹುದು. ಅದು ನಿಜವೂ ಸರಿ. ಆದರೆ ರಾಪ ನೂಯ್‌ ದ್ವೀಪದಿಂದ ಕಲಿತುಕೊಳ್ಳಬಹುದಾದ ಪಾಠವನ್ನು ನಾವು ಅಲಕ್ಷ್ಯಮಾಡಬೇಕು ಎಂಬುದು ಇದರ ಅರ್ಥವಲ್ಲ. ಹಾಗಾದರೆ, ಬನ್ನಿ, ರಾಪ ನೂಯ್‌ ದ್ವೀಪದ ಚರಿತ್ರೆಯ ಕುರಿತು ಕೆಲವು ಮುಖ್ಯಾಂಶಗಳನ್ನು ಪುನರ್ವಿಮರ್ಶಿಸುವುದಕ್ಕಾಗಿ ಕೆಲವೊಂದು ನಿಮಿಷಗಳನ್ನು ತೆಗೆದುಕೊಳ್ಳೋಣ. ನಮ್ಮ ಈ ಕಥನವು ಸುಮಾರು ಸಾ. ಶ. ಪೂ 400ರಲ್ಲಿ ಪ್ರಾರಂಭವಾಗುತ್ತದೆ. ಆಗ, ಆ ದ್ವೀಪದ ಮೂಲನಿವಾಸಿಗಳು ಸಾಗರದ ದೋಣಿಗಳಲ್ಲಿ ಬಂದಿಳಿದರು. ಆ ಸಮಯದಲ್ಲಿ ಆಗಸದಲ್ಲಿ ಹಾರಾಡುತ್ತಿದ್ದ ಸಾಗರದ ನೂರಾರು ಹಕ್ಕಿಗಳಷ್ಟೇ ಅವರನ್ನು ಗಮನಿಸುತ್ತಿದ್ದವು.

ಒಂದು ಸುಂದರವಾದ ದ್ವೀಪ

ಈ ದ್ವೀಪದಲ್ಲಿ ಅನೇಕ ವೈವಿಧ್ಯಮಯ ಗಿಡಮರಗಳೇನೂ ಇರಲಿಲ್ಲ. ಆದರೆ, ತಾಳೇ, ಹಾವ್‌ಹಾವ್‌, ಟೋರೋಮಿರೋ ಮರಗಳಿಂದ ಕೂಡಿದ ಕಾಡುಗಳಿಂದ ಸಂಪದ್ಭರಿತವಾಗಿತ್ತು. ಅಷ್ಟೇ ಅಲ್ಲದೆ, ಕುರುಚಲು ಗಿಡಗಳು, ಗಿಡಮೂಲಿಕೆಗಳು ಮತ್ತು ಜರೀಗಿಡಗಳು ಮತ್ತು ಹುಲ್ಲುಗಳಿಂದ ಇಡೀ ದ್ವೀಪವು ಹಚ್ಚಹಸಿರಾಗಿತ್ತು. ಏನ್ನಿಲ್ಲವೆಂದರೂ ಕಡಿಮೆಪಕ್ಷ ಆರು ಬಗೆಯ ಹಕ್ಕಿಗಳು ಈ ದೂರದ ದ್ವೀಪದಲ್ಲಿ ವಿಫುಲವಾಗಿದ್ದವು. ಅವುಗಳಲ್ಲಿ ಗೂಬೆಗಳು, ಕ್ರೌಂಚ ಪಕ್ಷಿಗಳು, ಕೊಕ್ಕರೆಯಂಥ ರೇಲ್‌ಗಳು ಮತ್ತು ಗಿಳಿಗಳು ಹೇರಳವಾಗಿದ್ದವು. ಅಷ್ಟುಮಾತ್ರವಲ್ಲದೆ, ರಾಪ ನೂಯ್‌ ದ್ವೀಪವು “ಪಾಲಿನೇಷಿಯಾ ಮತ್ತು ಬಹುಶಃ ಇಡೀ ಪೆಸಿಫಿಕ್‌ ಕ್ಷೇತ್ರದಲ್ಲೇ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಸಮುದ್ರಹಕ್ಕಿಗಳ ಸಂತಾನವೃದ್ಧಿಮಾಡುವ ಸಂಪದ್ಭರಿತವಾದ ಬೀಡಾಗಿ” ಸಹ ಇತ್ತು ಎಂದು ಡಿಸ್‌ಕವರ್‌ ಎಂಬ ಪತ್ರಿಕೆಯು ಹೇಳುತ್ತದೆ.

ವಸಾಹತುಗಾರರು, ಆ ದ್ವೀಪಕ್ಕೆ ಕೋಳಿ ಮತ್ತು ತಿನ್ನತಕ್ಕ ಇಲಿಗಳನ್ನು ರಸಭಕ್ಷ್ಯವಾಗಿ ತಂದಿರಬಹುದು. ಅಷ್ಟುಮಾತ್ರವಲ್ಲದೇ, ಅವರು ಟೊರೋ ಎಂಬ ಗೆಣಸು, ಸುವರ್ಣಗೆಡ್ಡೆ, ಸಿಹಿ ಗೆಣಸು, ಬಾಳೆಹಣ್ಣು ಮತ್ತು ಕಬ್ಬಿನಂತಹ ಬೆಳೆಗಳನ್ನು ಕೂಡ ತಂದರು. ಅಲ್ಲಿನ ಮಣ್ಣು ಹದವಾಗಿದ್ದರಿಂದ, ಆ ಕೂಡಲೇ ಜಮೀನನ್ನು ಹದಮಾಡಿ ಬೆಳೆಗಳನ್ನು ಬೆಳೆಸುವ ಕೆಲಸವನ್ನು ಪ್ರಾರಂಭಿಸಿದರು. ಜನಸಂಖ್ಯೆ ವೃದ್ಧಿಯಾದಂತೆ ಈ ಕೆಲಸವು ಕೂಡ ಹೆಚ್ಚಾಯಿತು. ಆದರೆ, ರಾಪ ನೂಯ್‌ ದ್ವೀಪದಲ್ಲಿ ಸಾಕಷ್ಟು ಸ್ಥಳವಿರಲಿಲ್ಲ ಹಾಗೂ ಕಾಡುಗಳಿಂದ ತುಂಬಿದ್ದರೂ ಮರಗಳ ಸಂಖ್ಯೆಯು ಅಷ್ಟೇನೂ ಹೆಚ್ಚಿರಲಿಲ್ಲ.

ರಾಪ ನೂಯ್‌ ದ್ವೀಪದ ಚರಿತ್ರೆ

ರಾಪ ನೂಯ್‌ ದ್ವೀಪದ ಚರಿತ್ರೆಯ ಬಗ್ಗೆ ನಮಗೆ ತಿಳಿದಿರುವ ಮಾಹಿತಿಯು, ಪರಿಶೀಲಿಸಿದ ಮೂರು ಮುಖ್ಯ ವಿಭಾಗಗಳ ಅಧ್ಯಯನಗಳ ಮೇಲೆ ಆಧಾರಿತವಾಗಿದೆ. ಅವುಗಳು ಪರಾಗಗಳ ವಿಶ್ಲೇಷಣೆ, ಪ್ರಾಕ್ತನಶಾಸ್ತ್ರ ಮತ್ತು ಪಳೆಯುಳಿಕೆಗಳ ಮೇಲಾಧಾರಿತವಾಗಿರುವ ಅಧ್ಯಯನಗಳಾಗಿವೆ. ಪರಾಗಗಳ ವಿಶ್ಲೇಷಣೆಯಲ್ಲಿ, ಹೊಂಡಗಳಲ್ಲಿ ಮತ್ತು ಜೌಗು ನೆಲಗಳ ಕೆಸರಿನಿಂದ ತೆಗೆಯಲ್ಪಟ್ಟ ಪರಾಗಗಳ ಸ್ಯಾಂಪಲುಗಳು ಸೇರಿರುತ್ತವೆ. ಈ ಸ್ಯಾಂಪಲುಗಳು ವಿವಿಧ ರೀತಿಯ ಗಿಡಗಳು ಮತ್ತು ನೂರಾರು ವರ್ಷಗಳಿಂದ ಅವುಗಳು ಎಷ್ಟು ವಿಫುಲವಾಗಿದ್ದವು ಎಂಬುದನ್ನು ತೋರಿಸುತ್ತವೆ. ಈ ಪರಾಗಗಳು ಕೆಸರಿನಲ್ಲಿ ಎಷ್ಟು ಆಳವಾಗಿ ಸೇರಿಕೊಂಡಿರುತ್ತವೋ, ಅವುಗಳು ಅಷ್ಟೇ ಹಳೆಯ ಕಾಲದ್ದು ಎಂಬುದನ್ನು ಸೂಚಿಸುತ್ತವೆ.

ಪ್ರಾಕ್ತನಶಾಸ್ತ್ರ ಮತ್ತು ಪಳೆಯುಳಿಕೆಗಳ ಮೇಲಾಧಾರಿತ ಅಧ್ಯಯನಗಳು ಜನರು ಜೀವಿಸಿದ ಸ್ಥಳಗಳು, ಪಾತ್ರೆಗಳು, ಮೊಆಯ್‌ ಪ್ರತಿಮೆಗಳು ಮತ್ತು ಆಹಾರಕ್ಕಾಗಿ ಉಪಯೋಗಿಸಲ್ಪಟ್ಟ ಪ್ರಾಣಿಗಳ ಅವಶೇಷಗಳಂಥವುಗಳ ಮೇಲೆ ಹೆಚ್ಚು ಗಮನಹರಿಸುತ್ತವೆ. ರಾಪ ನೂಯ್‌ ದ್ವೀಪದ ಯಾವುದೇ ದಾಖಲೆಗಳನ್ನು ತಗೆದುಕೊಂಡರೂ ಅವು ಹೈರೋಗ್ಲಿಪಿಕ್‌ ಲಿಪಿಯಲ್ಲಿವೆ. ಆದುದರಿಂದ ಅವುಗಳ ಅರ್ಥವನ್ನು ಕಂಡುಹಿಡಿಯುವುದು ಕೂಡ ಬಹಳ ಕಷ್ಟವಾಗಿದೆ. ಆದ್ದರಿಂದ, ಯೂರೋಪಿಯನ್ನರು ಆ ದ್ವೀಪಕ್ಕೆ ಆಗಮಿಸುವುದಕ್ಕೆ ಹಿಂದಿನ ಇಸವಿಗಳಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಿದೆ ಮತ್ತು ದ್ವೀಪದ ಕುರಿತಾದ ಅನೇಕ ಊಹಾಪೋಹಗಳನ್ನು ರುಜುಪಡಿಸಲು ಸಾಧ್ಯವಿಲ್ಲ. ಅದರೊಂದಿಗೆ, ಆ ದ್ವೀಪದಲ್ಲಾದ ಕೆಲವೊಂದು ಬೆಳವಣಿಗೆಗಳ ಕುರಿತು ಕೆಳಗೆ ಕೊಡಲಾಗಿದೆ. ಅವು ಸಂಭವಿಸಿದ ಸಮಯಕ್ಕಿಂತ ಹೆಚ್ಚು ಕಾಲಾವಧಿಯನ್ನು ತೆಗೆದುಕೊಂಡಿರಬಹುದು. ಸ್ಫುಟವಾಗಿ ತಿಳಿಸಲ್ಪಟ್ಟಿರುವ ಈ ಎಲ್ಲಾ ಇಸವಿಗಳು ಸಾಮಾನ್ಯ ಶಕದಲ್ಲಿ ನಡೆದದ್ದನ್ನು ಸೂಚಿಸುತ್ತವೆ.

400 ಸುಮಾರು 20ರಿಂದ 50 ಪಾಲಿನೇಷಿಯನ್‌ ನೆಲಸಿಗರು ಬಹುಶಃ, 15 ಅಥವಾ ಅದಕ್ಕಿಂತಲೂ ಹೆಚ್ಚು ಮೀಟರುಗಳು ಉದ್ದವಿರುವ ಜೋಡಿ ದೋಣಿಗಳಲ್ಲಿ ಬಂದಿಳಿಯುತ್ತಾರೆ. ಪ್ರತಿಯೊಂದು ದೋಣಿಯು 8,000 ಕಿಲೋಗ್ರಾಮ್‌ಗಳಿಗಿಂತಲೂ ಹೆಚ್ಚು ಭಾರವನ್ನು ಹೊರಲು ಶಕ್ತವಾಗಿರುತ್ತದೆ.

800 ಕೆಸರಿನಲ್ಲಿರುವ ಪರಾಗಗಳ ಸಂಖ್ಯೆಯು ಕಡೆಮೆಯಾಗುತ್ತದೆ. ಅದು ಅರಣ್ಯನಾಶವು ಆರಂಭವಾಗುತ್ತಿರುವ ಸಮಯವನ್ನು ಸೂಚಿಸುತ್ತದೆ. ಹುಲ್ಲಿನ ಪರಾಗಗಳ ಸಂಖ್ಯೆಯು ಹೆಚ್ಚಾದಂತೆ ಖಾಲಿಯಾಗಿರುವ ಸ್ಥಳಗಳಲ್ಲಿ ಹುಲ್ಲು ಹೆಚ್ಚಾಗುತ್ತದೆ.

900—1300 ಆಹಾರಕ್ಕಾಗಿ ಹಿಡಿಯಲ್ಪಟ್ಟ ಸುಮಾರು ಮೂರನೇ ಒಂದರಷ್ಟು ಪ್ರಾಣಿಗಳ ಎಲುಬುಗಳು ಡಾಲ್ಫಿನ್‌ ಮೀನುಗಳ ಎಲುಬುಗಳಾಗಿವೆ. ಕಡಲಿನಿಂದ ಡಾಲ್ಫಿನ್‌ಗಳನ್ನು ಹಿಡಿದು ತರಲು ದ್ವೀಪನಿವಾಸಿಗಳು ತಾಳೇ ಮರದ ಕಾಂಡಗಳಿಂದ ಮಾಡಲ್ಪಟ್ಟಿದ್ದ ದೊಡ್ಡ ದೊಡ್ಡ ದೋಣಿಗಳನ್ನು ಉಪಯೋಗಿಸುತ್ತಾರೆ. ಮೊಆಯ್‌ ಪ್ರತಿಮೆಗಳನ್ನು ನಿಲ್ಲಿಸಲು ಮತ್ತು ಸ್ಥಳಾಂತರಿಸಲು ಉಪಯೋಗಿಸುತ್ತಿದ್ದ ಸಲಕರಣೆಗಳ ತಯಾರಿಗಾಗಿ ಕೂಡ ಈ ಮರಗಳು ಕಚ್ಚಾ ಪದಾರ್ಥಗಳನ್ನು ಒದಗಿಸುತ್ತವೆ. ಈ ಪ್ರತಿಮೆಗಳ ನಿರ್ಮಾಣವು ಈ ಸಮಯದಲ್ಲಾಗಲೇ ಹೆಚ್ಚು ಭರದಿಂದ ಸಾಗುತ್ತದೆ. ಕೃಷಿ ಮತ್ತು ಸೌಧೆಗಾಗಿರುವ ಅಗತ್ಯವು ಈಗಾಗಲೇ ಕಾಡುಗಳ ನಾಶನಕ್ಕೆ ನಡೆಸುತ್ತವೆ.

1200—1500 ಪ್ರತಿಮೆಗಳ ಕೆತ್ತನೆಯ ಕೆಲಸವು ಉಚ್ಛ್ರಾಯ ಸ್ಥಿತಿಯಲ್ಲಿದೆ. ಈ ಮೊಆಯ್‌ ಪ್ರತಿಮೆಗಳನ್ನು ಮಾಡುವುದಕ್ಕಾಗಿ ಮತ್ತು ಅವುಗಳನ್ನು ನಿಲ್ಲಿಸುವುದಕ್ಕಾಗಿ ಬೇಕಾಗಿರುವ ವಿಧಿವಿಹಿತ ವೇದಿಕೆಗಾಗಿ ರಾಪ ನೂಯ್‌ ದ್ವೀಪವು ತನ್ನಲ್ಲಿರುವ ಅಪರಿಮಿತ ಸಂಪತ್ತನ್ನು ಅದಕ್ಕಾಗಿ ಸುರಿಯುತ್ತದೆ. ಪ್ರಾಕ್ತನಶಾಸ್ತ್ರಜ್ಞರಾದ ಜೋ ಆ್ಯನ್‌ ಟಿಲ್‌ಬರ್ಗ್‌ ಇದರ ಕುರಿತು ಬರೆಯುವುದು: “ರಾಪ ನೂಯ್‌ ದ್ವೀಪದ ಸಾಮಾಜಿಕ ವ್ಯವಸ್ಥೆಯು ದೊಡ್ಡ ಪ್ರತಿಮೆಗಳನ್ನು ಹೆಚ್ಚೆಚ್ಚು ಮಾಡುವುದಕ್ಕಾಗಿ ಪ್ರೋತ್ಸಾಹನೆಯನ್ನು ಕೊಟ್ಟಿತು ಎಂಬುದು ಸ್ಪಷ್ಟ.” ಅವರು ಇನ್ನೂ ಹೇಳುವುದೇನೆಂದರೆ, “ಸುಮಾರು 800ರಿಂದ ಹಿಡಿದು 1,300ರ ವರ್ಷಗಳ ವರೆಗೆ ಹೆಚ್ಚುಕಡಿಮೆ 1,000 ಪ್ರತಿಮೆಗಳು ಮಾಡಲ್ಪಟ್ಟವು. . . .  ಅದು ಆಗಿದ್ದ ಉಚ್ಚ ಜನಸಂಖ್ಯೆಯ ಅಂದಾಜುಗನುಸಾರ, 7ರಿಂದ 9 ಮಂದಿಗೆ ಒಂದು ಪ್ರತಿಮೆಯಂತೆ ಮಾಡಲ್ಪಟ್ಟಿತ್ತು.”

ಮೊಆಯ್‌ ಪ್ರತಿಮೆಗಳನ್ನು ಆರಾಧನೆಗಾಗಿ ಉಪಯೋಗಿಸುತ್ತಿರಲಿಲ್ಲ. ಆದರೂ, ಕೃಷಿ ಮತ್ತು ಉತ್ತರ ಕ್ರಿಯೆಯ ಸಂಸ್ಕಾರಗಳಲ್ಲಿ ಅವು ಪಾತ್ರವಹಿಸಿದ್ದವು ಎಂಬುದು ಸ್ಪಷ್ಟ. ಅವುಗಳನ್ನು, ಅದೃಶ್ಯಶಕ್ತಿಗಳು ವಾಸಮಾಡುವ ವಾಸಸ್ಥಾನವಾಗಿ ವೀಕ್ಷಿಸಿದ್ದಿರಬಹುದು. ಅಷ್ಟೇ ಅಲ್ಲದೆ, ಅವು ಶಿಲ್ಪಿಗಳ ಶಕ್ತಿ, ಪ್ರತಿಷ್ಠೆ ಮತ್ತು ವಂಶಾವಳಿಯ ಸಂಕೇತವಾಗಿದ್ದವು ಎಂಬಂತೆ ಕಾಣುತ್ತವೆ.

1400—1600 ಜನಸಂಖ್ಯೆಯು 7000ದಿಂದ 9000ಕ್ಕೆ ಹೆಚ್ಚುತ್ತಾ ಉಚ್ಚ ಮಟ್ಟವನ್ನು ತಲುಪುತ್ತದೆ. ಚೂರುಪಾರು ಇದ್ದ ಕಾಡುಗಳು ಕೂಡ ಕಣ್ಮರೆಯಾಗುತ್ತವೆ. ಇದಕ್ಕೆ ಒಂದು ಕಾರಣವು, ಪರಾಗಕ್ರಿಯೆಯಲ್ಲಿ ಭಾಗವಹಿಸುತ್ತಾ ಬೀಜಗಳನ್ನು ಅಲ್ಲಲ್ಲಿ ಚೆಲ್ಲುವ ಮೂಲಕ ಮರಗಳ ಬೆಳವಣಿಗೆಗೆ ಕಾರಣವಾಗಿದ್ದ ಪಕ್ಷಿಗಳ ಅಳಿವಾಗಿತ್ತು. “ಯಾವುದೇ ವಿನಾಯಿತಿ ಇಲ್ಲದೇ ಅಲ್ಲಿನ ಪ್ರತಿಯೊಂದು ಜಾತಿಯ ಸ್ಥಳಿಯ ಪಕ್ಷಿಗಳು ನಶಿಸಿಹೋದವು” ಎಂದು ಡಿಸ್‌ಕವರ್‌ ಪತ್ರಿಕೆಯು ಹೇಳುತ್ತದೆ. ಅರಣ್ಯನಾಶನಕ್ಕೆ ಇಲಿಗಳು ಕೂಡ ಕಾರಣವಾಗಿದ್ದವು. ಹೇಗೆಂದರೆ, ತಾಳೇ ಮರದ ಬೀಜಗಳನ್ನು ತಿನ್ನುವ ಮೂಲಕ ಅವುಗಳ ವಂಶಾಭಿವೃದ್ಧಿಗೆ ಕತ್ತರಿ ಹಾಕಿದ್ದವು ಎಂದು ಪುರಾವೆಗಳು ತೋರಿಸುತ್ತವೆ.

ಸ್ವಲ್ಪ ಸಮಯದರೊಳಗಾಗಿ ನೆಲಸವೆತವು ಆರಂಭವಾಗುತ್ತದೆ. ತೊರೆಗಳು ಬತ್ತಿಹೋಗುತ್ತವೆ, ನೀರಿಗಾಗಿ ಪರದಾಟ ಶುರುವಾಗುತ್ತದೆ. 1500ರೊಳಗಾಗಿ ಡಾಲ್ಫಿನುಗಳ ಎಲುಬುಗಳು ಕಾಣಿಸದೆ ಹೋಗುತ್ತವೆ. ಅದಕ್ಕೆ ಒಂದು ಸಂಭಾವ್ಯ ಕಾರಣವು, ಸಮುದ್ರದಲ್ಲಿ ಉಪಯೋಗಿಸುವ ದೋಣಿಗಳನ್ನು ಮಾಡಲು ಸಾಕಷ್ಟು ದೊಡ್ಡ ಮರಗಳಿಲ್ಲದಿರುವುದೇ ಆಗಿರಬೇಕು. ಆದುದರಿಂದ ಈಗ, ಆ ದ್ವೀಪದಿಂದ ತಪ್ಪಿಸಿಕೊಳ್ಳಲು ಯಾವುದೇ ಅವಕಾಶವು ಇನ್ನಿಲ್ಲದಂತಾಗುತ್ತದೆ. ಆಹಾರಕ್ಕಾಗಿರುವ ವಿಷಮ ಪರಿಸ್ಥಿತಿಯು ಹೆಚ್ಚಾದಂತೆ, ಜಲ ಪಕ್ಷಿಗಳು ನಾಶಗೊಳಿಸಲ್ಪಟ್ಟವು. ಜನರು ಹೆಚ್ಚೆಚ್ಚು ಕೋಳಿಗಳನ್ನು ತಿನ್ನಲಾರಂಭಿಸಿದರು.

1600—1722 ಕಾಡುಗಳು ಬರಿದಾದ್ದರಿಂದ, ಜಮೀನನ್ನು ಉಪಯೋಗಿಸುವುದು ಹೆಚ್ಚಾಯಿತು ಮತ್ತು ಮಣ್ಣಿನ ಸವೆತವು ಕೃಷಿ ಬೆಳೆಗಳು ವಿಫಲವಾಗುವುದಕ್ಕೆ ಕಾರಣವಾಯಿತು. ದ್ವೀಪವು ಹೆಚ್ಚು ವ್ಯಾಪಕವಾದ ಬರಗಾಲಕ್ಕೆ ತುತ್ತಾಗುತ್ತದೆ. ರಾಪ ನೂಯ್‌ ದ್ವೀಪವು ಎರಡು ಪರಸ್ಪರ ವಿರುದ್ಧ ಗುಂಪುಗಳಾಗಿ ಒಡೆದುಹೋಗುತ್ತದೆ. ಪ್ರಪ್ರಥಮವಾಗಿ ಸಾಮಾಜಿಕ ಅವ್ಯವಸ್ಥೆಯ ಸೂಚನೆಗಳು ಕಾಣಿಸಿಕೊಳ್ಳುತ್ತವೆ. ಅದರಲ್ಲಿ ನರಭಕ್ಷಣೆ ಕೂಡ ಇದ್ದಿರಬಹುದು. ಇದು ಬಲಿಷ್ಠರ ವಿಜಯದ ದಿನವಾಗಿದೆ. ಈ ಬಲಿಷ್ಠರು ತಮ್ಮನ್ನು ಎಲ್ಲಿ ತಿಂದುಬಿಡುವರೋ ಎಂದು ಭಯಭೀತರಾದವರು ರಕ್ಷಣೆಗಾಗಿ ಗುಹೆಗಳಲ್ಲಿ ವಾಸಿಸಲು ಪ್ರಾರಂಭಿಸುತ್ತಾರೆ. ಸುಮಾರು 1700ರೊಳಗಾಗಿ ಜನಸಂಖ್ಯೆಯು ಸುಮಾರು 2,000ಕ್ಕೆ ಕುಸಿಯುತ್ತದೆ.

1722 ಡಚ್‌ ದೇಶದ ಸಂಶೋಧಕನಾದ ಯಾಕಪ್‌ ರೊಕ್ವಾನ್‌ ಎಂಬುವವನು ಈ ದ್ವೀಪವನ್ನು ಕಂಡುಹಿಡಿದ ಪ್ರಪ್ರಥಮ ಯೂರೋಪಿಯನ್‌ ದೇಶದವನು. ಅವನು ಅಲ್ಲಿಗೆ ಬಂದಿಳಿದ ದಿನವು ಈಸ್ಟರ್‌ ದಿನವಾಗಿದ್ದರಿಂದ, ಆ ದ್ವೀಪಕ್ಕೆ ಈಸ್ಟರ್‌ ದ್ವೀಪವೆಂದು ಹೆಸರಿಡುತ್ತಾನೆ. ಆ ದ್ವೀಪದ ಕುರಿತು ತನ್ನ ಮನಸ್ಸಿನಲ್ಲಿ ಪ್ರಪ್ರಥಮವಾಗಿ ಮೂಡಿಬಂದ ಅಭಿಪ್ರಾಯವನ್ನು ಹೀಗೆ ಹೇಳುತ್ತಾನೆ: “[ಈಸ್ಟರ್‌ ದ್ವೀಪದ] ಪಾಳುಬಿದ್ದ ದೃಶ್ಯವು, ಬಡತನ ಮತ್ತು ಬರಡುಭೂಮಿಯನ್ನೇ ಹೊರತು ಬೇರೆ ಯಾವ ಅನಿಸಿಕೆಯನ್ನು ನೀಡಸಾಧ್ಯವಿಲ್ಲ.”

1770 ಈ ಸಮಯದರೊಳಗಾಗಿ, ರಾಪ ನೂಯ್‌ನಲ್ಲಿ ಉಳಿದಿರುವ ಎದುರಾಳಿ ತಂಡದವರು ಒಬ್ಬರಿನ್ನೊಬ್ಬರ ಪ್ರತಿಮೆಗಳನ್ನು ಕೆಡವಲು ಪ್ರಾರಂಭಿಸುತ್ತಾರೆ. 1774ರಲ್ಲಿ ಬ್ರಿಟಿಷ್‌ ದೇಶದ ಸಂಶೋಧಕನಾದ ಕ್ಯಾಪ್ಟನ್‌ ಜೇಮ್ಸ್‌ ಕುಕ್‌ ಈ ದ್ವೀಪವನ್ನು ಸಂದರ್ಶಿಸಿದಾಗ ಅವನು ಅನೇಕ ಉರುಳಿರುವ ಪ್ರತಿಮೆಗಳನ್ನು ನೋಡುತ್ತಾನೆ.

1804—63 ಬೇರೆ ನಾಗರಿಕತೆಯೊಂದಿಗೆ ಸಂಪರ್ಕವು ಹೆಚ್ಚಾಗುತ್ತದೆ. ಗುಲಾಮಗಿರಿಯು ಈ ಸಮಯದಲ್ಲಿ ಪೆಸಿಫಿಕ್‌ ದೇಶಗಳಲ್ಲಿ ತುಂಬ ಸಾಮಾನ್ಯವಾಗಿರುತ್ತದೆ. ರೋಗಗಳು ಹೆಚ್ಚು ಉಗ್ರರೂಪ ತಾಳಿ, ಜನರ ಜೀವವನ್ನು ಬಲಿತೆಗೆದುಕೊಳ್ಳುತ್ತವೆ. ಸಾಂಪ್ರದಾಯಿಕ ರಾಪ ನೂಯ್‌ ಸಂಸ್ಕೃತಿಯು ಈ ರೀತಿಯಲ್ಲಿ ಅಂತ್ಯವನ್ನು ಕಾಣುತ್ತದೆ.

1864 ಈ ಸಮಯದರೊಳಗಾಗಿ ಮೊಆಯ್‌ ಪ್ರತಿಮೆಗಳೆಲ್ಲವೂ ಉರುಳಿಸಲ್ಪಟ್ಟಿವೆ. ಅನೇಕ ಪ್ರತಿಮೆಗಳ ರುಂಡವು ಬೇಕುಬೇಕೆಂತಲೇ ಒಡೆದುಹಾಕಲ್ಪಟ್ಟಿವೆ.

1872 ಕೇವಲ 111 ಸ್ಥಳಿಕ ಜನರು ಮಾತ್ರ ಆ ದ್ವೀಪದಲ್ಲಿ ಉಳಿಯುತ್ತಾರೆ.

ರಾಪ ನೂಯ್‌ ದ್ವೀಪವು 1888ರಲ್ಲಿ ಚಿಲಿ ದೇಶದ ಪ್ರಾಂತವಾಯಿತು. ಇತ್ತೀಚಿನ ವರ್ಷಗಳಲ್ಲಿ, ರಾಪ ನೂಯ್‌ ದ್ವೀಪದಲ್ಲಿ ನಾನಾ ಬಗೆಯ ಜನರಿಂದ ಬೆರೆತಿರುವ ಸುಮಾರು 2,100 ಮಂದಿ ಇದ್ದಾರೆ. ಚಿಲಿ ದೇಶವು ಆ ಇಡೀ ದ್ವೀಪವನ್ನು ಐತಿಹಾಸಿಕ ಸ್ಮಾರಕ ಸ್ಥಳವಾಗಿ ಘೋಷಿಸಿದೆ. ರಾಪ ನೂಯ್‌ ದ್ವೀಪದ ಅಪೂರ್ವ ವೈಶಿಷ್ಟತೆಯನ್ನು ಹಾಗೂ ಚರಿತ್ರೆಯನ್ನು ಸಂರಕ್ಷಿಸುವುದಕ್ಕಾಗಿ ಅನೇಕ ಪ್ರತಿಮೆಗಳನ್ನು ಮತ್ತೆ ನಿಲ್ಲಿಸಲಾಗಿದೆ.

ಇಂದು ನಮಗಾಗಿ ಒಂದು ಪಾಠ

ರಾಪ ನೂಯ್‌ ದ್ವೀಪದವರಿಗೆ, ತಾವು ಹೋಗುತ್ತಿರುವ ವಿನಾಶದ ಮಾರ್ಗವನ್ನು ಗ್ರಹಿಸಲು ಏಕೆ ಸಾಧ್ಯವಾಗಲಿಲ್ಲ ಮತ್ತು ಅದನ್ನು ತಡೆಯುವುದಕ್ಕಾಗಿ ಅವರು ಏಕೆ ಯಾವ ಪ್ರಯತ್ನವನ್ನೂ ಮಾಡಲಿಲ್ಲ? ಅಲ್ಲಿನ ಸ್ಥಿತಿಯ ಕುರಿತು ಅನೇಕ ಸಂಶೋಧಕರು ನೀಡುವ ಹೇಳಿಕೆಯನ್ನು ಗಮನಿಸಿ.

“ಕಾಡು . . . ಒಂದೇ ದಿನದಲ್ಲಿ ಕಣ್ಮರೆಯಾಗಲಿಲ್ಲ. ಬದಲಾಗಿ ಅದು ನಿಧಾನವಾಗಿ ಸ್ವಲ್ಪ ಸ್ವಲ್ಪವೇ ನಾಶವಾಗಲು ದಶಕಗಳಷ್ಟು ಸಮಯವೇ ಹಿಡಿಯಿತು. . . . ಹೆಚ್ಚುತ್ತಿರುವ ಅರಣ್ಯನಾಶನದ ಅಪಾಯದ ಕುರಿತು ದ್ವೀಪದಲ್ಲಿರುವ ಯಾರೇ ಆಗಲಿ ಎಚ್ಚರಿಕೆಯನ್ನು ನೀಡಲು ಪ್ರಯತ್ನಸಿದರೂ, ಶಿಲ್ಪಿಗಳು, ಅಧಿಕಾರಿಗಳು ಮತ್ತು ಮುಖ್ಯಸ್ಥರ ಸ್ವಾರ್ಥಾಸಕ್ತಿಗಳು ಆ ಎಚ್ಚರಿಕೆಗಳನ್ನು ತಳ್ಳಿಹಾಕಿಬಿಡುತ್ತಿದ್ದರು.”—ಡಿಸ್‌ಕವರ್‌ ಪತ್ರಿಕೆ.

“ಆ ದ್ವೀಪದ ಜನರು ತಮ್ಮ ಧಾರ್ಮಿಕ ಹಾಗೂ ರಾಜಕೀಯ ವಿಚಾರಗಳನ್ನು ವ್ಯಕ್ತಪಡಿಸುವುದಕ್ಕಾಗಿ ಇಡೀ ದ್ವೀಪವನ್ನೇ ನಾಶನಕ್ಕೆ ಒಳಪಡಿಸಿದ್ದರು. ನಾಶವಾಗದು ಎಂದು ನೆನಸಿ ಅನೇಕ ವಿಧಗಳಲ್ಲಿ ಕಾಡನ್ನು ಉಪಯೋಗಿಸಿದರು. ಆದರೆ ಎಲ್ಲವೂ ನಾಶವಾದ ಮೇಲೆ ಅವರಿಗೆ ಅದರ ಸ್ಥಿತಿಯು ಅರಿವಾಯಿತು.”—ಈಸ್ಟರ್‌ ಐಲಂಡ್‌—ಆರ್ಕಿಯಾಲಜಿ, ಇಕಾಲೆಜಿ ಆ್ಯಂಡ್‌ ಕಲ್ಚರ್‌.

ರಾಪ ನೂಯ್‌ ದ್ವೀಪಕ್ಕೆ ಸಂಭವಿಸಿದಂತಹ ಸ್ಥಿತಿಯು ಸೂಚಿಸುವುದೇನೆಂದರೆ, ಹದ್ದುಮೀರಿದ ಬೆಳವಣಿಗೆ ಮತ್ತು ಪರಿಸರವನ್ನು ಮನಬಂದಂತೆ ಉಪಯೋಗಿಸುವ ಪ್ರವೃತ್ತಿಯು ಹತೋಟಿಯನ್ನು ಮೀರಿತ್ತು. ಅದಕ್ಕೆ ಕೇವಲ ಔದ್ಯೋಗಿಕರಣದಿಂದಾಗಿ ಉಂಟಾಗಿರುವ ಪರಿಸ್ಥಿತಿಯೇ ಕಾರಣವಾಗಿರಲಿಲ್ಲ. ಮಾನವನ ಸಹಜಶೀಲ ಸ್ವಭಾವವೂ ಅದಕ್ಕೆ ಕಾರಣವಾಗಿತ್ತು.”—ನ್ಯಾಷನಲ್‌ ಜಿಯಾಗ್ರಫಿ.

ಇಂದು ಮಾನವನ ಸಹಜಶೀಲ ಸ್ವಭಾವಗಳಲ್ಲಿ ಯಾವುದೇ ಬದಲಾವಣೆಯಾಗದಿದ್ದರೆ ಅದರ ಪರಿಣಾಮವೇನಾಗುವುದು? ವಿಶ್ವದಲ್ಲಿ ಒಂದು ದ್ವೀಪದಂತಿರುವ ನಮ್ಮ ಭೂಮಿಯ ಜೈವಿಕ ಪರಿಸ್ಥಿತಿಯನ್ನು ಮಾನವರು ಹಾಳುಮಾಡುತ್ತಲೇ ಇರುವುದಾದರೆ ಆಗೇನು? ಇದರ ಕುರಿತು ಒಬ್ಬ ಬರಹಗಾರನು ಬರೆಯುವುದೇನೆಂದರೆ, ರಾಪ ನೂಯ್‌ ದ್ವೀಪದ ಜನರಿಗಿಂತ ನಾವು ಹೆಚ್ಚು ವಿವೇಕಿಗಳಾಗಿ ಕ್ರಿಯೆಗೈಯಬೇಕಾಗಿದೆ. ಏಕೆಂದರೆ, “ಇತರ ಸಮಾಜಗಳು ನೆಲಸಮವಾದ ಚರಿತ್ರೆಯ” ಎಚ್ಚರಿಕೆಯ ಉದಾಹರಣೆಗಳು ನಮ್ಮಲ್ಲಿವೆ.

ಆದರೂ, ಈ ಚರಿತ್ರೆಗಳನ್ನು ಮಾನವನು ಗಮನಕ್ಕೆ ತೆಗೆದುಕೊಳ್ಳುತ್ತಿದ್ದಾನೋ ಎಂದು ಕೇಳಬಹುದು. ಅಸಂಖ್ಯಾತ ಸಂಖ್ಯೆಯಲ್ಲಿ ಅರಣ್ಯಗಳು ಮತ್ತು ಭೂಮಿಯ ಮೇಲಿರುವ ಸಜೀವ ವಸ್ತುಗಳ ಸತತವಾದ ನಾಶನವು, ಮಾನವನು ಆ ಎಚ್ಚರದ ಘಂಟೆಗೆ ಕಿವಿಗೊಡುತ್ತಿಲ್ಲ ಎಂಬುದನ್ನು ಸೂಚಿಸುತ್ತದೆ. ಝೂ ಬುಕ್‌ ಎಂಬ ಪುಸ್ತಕದಲ್ಲಿ ಲಿಂಡಾ ಕೊಬ್ನರ್‌ ಬರೆಯುವುದು: “ಒಂದು ಅಥವಾ ಎರಡು ಇಲ್ಲವೇ ಐವತ್ತು ಜೀವಿಗಳ ನಾಶನವು ಸಹ, ನಾವು ಮುಂತಿಳಿಸಲಾಗದ ಪರಿಣಾಮಗಳನ್ನು ತಂದೇ ತರುತ್ತದೆ. ನಾಶನದ ಪರಿಣಾಮವನ್ನು ನಾವು ಅರ್ಥಮಾಡಿಕೊಳ್ಳುವುದಕ್ಕೆ ಮುಂಚೆಯೇ ಅವು ಬದಲಾವಣೆಗಳನ್ನು ಉಂಟುಮಾಡುತ್ತಿರುತ್ತವೆ.”

ಉದಾಹರಣೆಗೆ, ವಿಮಾನದಲ್ಲಿ ಉಪಯೋಗಿಸುವ ಭದ್ರಪಡಿಸುವ ಮೊಳೆಯನ್ನು (ರಿವಿಟ್‌ ಮೊಳೆ) ತೆಗೆದುಕೊಳ್ಳಿ. ಯಾವ ರಿವಿಟ್‌ ಮೊಳೆಯು ವಿಮಾನಕ್ಕೆ ಅಪಘಾತವನ್ನು ಉಂಟುಮಾಡುವುದು ಎಂಬುದನ್ನು ತಿಳಿಯದಿರುವ ಒಬ್ಬ ಕಿರಾತಕನು, ಪ್ರತಿಸಾರಿ ಒಂದು ರಿವಿಟ್‌ ಮೊಳೆಯನ್ನು ತೆಗೆಯುತ್ತಿರುತ್ತಾನೆಂದು ಇಟ್ಟುಕೊಳ್ಳಿ: ಆದರೆ ವಿಮಾನದ ಬಹುಮುಖ್ಯವಾದ ರಿವಿಟ್‌ ಮೊಳೆಯು ತೆಗೆಯಲ್ಪಟ್ಟಾಗ, ಅದು ಮುಂದಿನ ಬಾರಿ ಹಾರುವಾಗ ಬೀಳದಿದ್ದರೂ ಆ ವಿಮಾನದ ಅಪಘಾತವಂತೂ ಖಂಡಿತ. ಅದೇ ರೀತಿಯಲ್ಲಿ, ಮಾನವರು ಕೂಡ ಭೂಮಿಯ ಜೀವಂತ “ರಿವಿಟ್‌ ಮೊಳೆಗಳನ್ನು” ತೆಗೆದುಹಾಕುತ್ತಿದ್ದಾರೆ. ಅದರ ಪ್ರಮಾಣವು ವರ್ಷಕ್ಕೆ 20,000ಕ್ಕಿಂತಲೂ ಹೆಚ್ಚಿನ ಜೀವಿಗಳಾಗಿವೆ. ಅದಕ್ಕೆ ಬಿಡುವೇ ಇಲ್ಲ! ಈ ಭೂಮಿಯು, ಪುನಃ ಚೇತರಿಸಿಕೊಳ್ಳಲಾಗದ ಸ್ಥಿತಿಗೆ ಯಾವಾಗ ಹೋಗಿ ಮುಟ್ಟುವುದು ಎಂಬುದು ಯಾರಿಗೂ ಗೊತ್ತಿಲ್ಲ. ಒಂದು ವೇಳೆ ಹಾಗೆ ಗೊತ್ತಾಗುವುದಾದರೂ ಕೂಡ ಅದು ಮಾನವರ ನಡವಳಿಕೆಯ ಮೇಲೆ ಯಾವುದಾದರೂ ಪರಿಣಾಮವನ್ನು ಉಂಟುಮಾಡಬಲ್ಲದೋ?

ಇದರ ಕುರಿತು ಈಸ್ಟರ್‌ ಐಲಂಡ್‌—ಅರ್ತ್‌ ಐಲಂಡ್‌ ಎಂಬ ಪುಸ್ತಕವು ಈ ಪ್ರಾಮುಖ್ಯವಾದ ಹೇಳಿಕೆಯನ್ನು ನೀಡಿದೆ: “[ರಾಪ ನೂಯ್‌] ದ್ವೀಪದಲ್ಲಿ ಕೊನೆಯ ಮರವನ್ನು ಉರುಳಿಸಿದ ವ್ಯಕ್ತಿಗೆ ಅದೇ ಕೊನೆಯ ಮರವೆಂದು ಚೆನ್ನಾಗಿ ಗೊತ್ತಿತ್ತು. ಆದರೂ ಅವನೋ (ಅವಳೋ) ಅದನ್ನು ಉರುಳಿಸದೆ ಬಿಡಲಿಲ್ಲ.”

“ನಾವು ನಮ್ಮ ಧರ್ಮವನ್ನು ಬದಲಾಯಿಸಬೇಕು”

ಐಲಂಡ್‌—ಅರ್ತ್‌ ಐಲಂಡ್‌ ಪುಸ್ತಕವು ಹೇಳುವುದೇನೆಂದರೆ, ಮಾನವರಿಗೆ ಯಾವುದೇ ನಿರೀಕ್ಷೆಯಿರಬೇಕಾದರೆ ಅದು ಕೇವಲ ಒಂದೇ ಒಂದು ವಿಚಾರದಿಂದ ಮಾತ್ರ ಸಾಧ್ಯವಿದೆ. ಅದೇನೆಂದೆರೆ, ನಾವು ನಮ್ಮ ಧರ್ಮವನ್ನು ಬದಲಾಯಿಸಬೇಕು. ನಮ್ಮ ಸದ್ಯದ ದೇವರುಗಳಾದ ಆರ್ಥಿಕ ಅಭಿವೃದ್ಧಿ, ವಿಜ್ಞಾನ ಮತ್ತು ತಾಂತ್ರಿಕತೆ, ಸತತವಾಗಿ ಮೇಲೆರುತ್ತಿರುವ ಜೀವನದ ಮಟ್ಟ, ಶ್ರೇಷ್ಠತೆಯ ಪ್ರತಿಸ್ಪರ್ಧೆಗಳಾಗಿವೆ. ಇವುಗಳನ್ನೇ ನಾವು ಹೆಚ್ಚು ಶಕ್ತಿಶಾಲಿಯಾದ ದೇವರುಗಳೆಂದು ನೆನಸುತ್ತೇವೆ. ಇವು ಈಸ್ಟರ್‌ ದ್ವೀಪದ ವೇದಿಕೆಗಳಲ್ಲಿರುವ ಬೃಹತ್‌ ಪ್ರತಿಮೆಗಳಂತಿವೆ. ಪ್ರತಿಯೊಂದು ಹಳ್ಳಿಯು ಬೇರೆಯವರಿಗಿಂತ ಹೆಚ್ಚು ದೊಡ್ಡದಾದ ಪ್ರತಿಮೆಯನ್ನು ನಿಲ್ಲಿಸುವುದಕ್ಕಾಗಿ ಪೈಪೋಟಿಮಾಡಿತು. . . . ಅದರ ಪರಿಣಾಮವಾಗಿ ಹೆಚ್ಚೆಚ್ಚು ಸಂಪತ್ತುಗಳು ಅವುಗಳಿಗಾಗಿ ಉಪಯೋಗಿಸಲ್ಪಟ್ಟವು . . . ಆದರೆ ಕೆತ್ತುವುದು, ಸ್ಥಳಾಂತರಿಸುವುದು ಮತ್ತು ನಿಲ್ಲಿಸುವುದು ಎಲ್ಲವೂ ವ್ಯರ್ಥವೇ.”

ತುಂಬ ಬುದ್ಧಿವಂತನಾದ ಒಬ್ಬ ವ್ಯಕ್ತಿಯು ಒಮ್ಮೆ ಹೀಗೆ ಹೇಳಿದನು: “ಮಾನವನ ಮಾರ್ಗವು ಅವನ ಸ್ವಾಧೀನದಲ್ಲಿಲ್ಲವೆಂದು ನನಗೆ ಗೊತ್ತು; ಮನುಷ್ಯನು ನಡೆದಾಡುತ್ತಾ ಸರಿಯಾದ ಕಡೆಗೆ ತನ್ನ ಹೆಜ್ಜೆಯನ್ನಿಡಲಾರನು.” (ಯೆರೆಮೀಯ 10:23) ‘ನಮ್ಮ ಹೆಜ್ಜೆಗಳನ್ನು ಸರಿಯಾದ ಕಡೆಗೆ’ ಹೇಗೆ ಇಡಬೇಕೆಂಬುದನ್ನು ನಮ್ಮ ಸೃಷ್ಟಿಕರ್ತನು ಮಾತ್ರವೇ ಹೇಳಶಕ್ತನು. ನಮ್ಮ ಈ ವಿಷಾದಕರ ಸ್ಥಿತಿಯಿಂದಲೂ ಆತನು ಮಾತ್ರವೇ ನಮ್ಮನ್ನು ಹೊರತರಲು ಶಕ್ತನು. ಇದನ್ನು ಮಾಡುವೆನೆಂದು ತನ್ನ ವಾಕ್ಯವಾದ ಬೈಬಲಿನಲ್ಲಿ ಆತನು ಮಾತುಕೊಟ್ಟಿದ್ದಾನೆ. ಈ ಗ್ರಂಥವು ಗತಕಾಲದ ಅನೇಕ ನಾಗರಿಕತೆಯ ಒಳ್ಳೆಯ ಹಾಗೂ ಕೆಟ್ಟದಾದ ಅನೇಕ ಉದಾರಣೆಗಳನ್ನು ಸಹ ಕೊಡುತ್ತದೆ. ನಿಜವಾಗಿಯೂ, ಈ ಗ್ರಂಥವು ಈ ಅಂಧಕಾರದ ಸಮಯದಲ್ಲಿ ‘ನಮ್ಮ ದಾರಿಗೆ ಬೆಳಕೂ’ ಆಗಿರಸಾಧ್ಯವಿದೆ.—ಕೀರ್ತನೆ 119:105.

ಕೊನೆಗೆ ಆ ದಾರಿಯು ವಿಧೇಯ ಮಾನವರನ್ನು ಶಾಂತಿ ಮತ್ತು ಸಮೃದ್ಧವಾದ ಪ್ರಮೋದವನಕ್ಕೆ ಕರೆದೊಯ್ಯುವುದು. ಆ ಹೊಸ ಲೋಕದಲ್ಲಿ ಭೂಮಿಯ ಅತ್ಯಂತ ಸಣ್ಣ ದ್ವೀಪವಾಗಿರುವ ರಾಪ ನೂಯ್‌ ದ್ವೀಪವು ಕೂಡ ಸೇರಿರುವುದು.—2 ಪೇತ್ರ 3:13.

[ಪಾದಟಿಪ್ಪಣಿ]

^ ಆ ದ್ವೀಪದ ನಿವಾಸಿಗಳು ತಮ್ಮನ್ನು ಹಾಗೂ ತಮ್ಮ ದ್ವೀಪವನ್ನು ರಾಪ ನೂಯ್‌ ಎಂದು ಕರೆಯುವುದಾದರೂ, ದ್ವೀಪವು ಎಲ್ಲಾ ಕಡೆಗಳಲ್ಲೂ ಈಸ್ಟರ್‌ ದ್ವೀಪ ಎಂದು ಪ್ರಸಿದ್ಧವಾಗಿದೆ ಹಾಗೂ ಅಲ್ಲಿನ ನಿವಾಸಿಗಳು ಈಸ್ಟರ್‌ ದ್ವೀಪನಿವಾಸಿಗಳೆಂದು ಪ್ರಸಿದ್ಧರಾಗಿದ್ದಾರೆ.

[ಪುಟ 23ರಲ್ಲಿರುವ ಭೂಪಟ]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ಈಸ್ಟರ್‌ ದ್ವೀಪ

[ಕೃಪೆ]

Mountain High Maps® Copyright © 1997 Digital Wisdom, Inc.

[ಪುಟ 23ರಲ್ಲಿರುವ ಚಿತ್ರ]

“ಸುಮಾರು 1000 ಪ್ರತಿಮೆಗಳು ಕೆತ್ತಲ್ಪಟ್ಟವು”

[ಪುಟ 25ರಲ್ಲಿರುವ ಚಿತ್ರ]

ಬಹು ದೂರದಲ್ಲಿರುವ ದ್ವೀಪಗಳು ಸೇರಿದಂತೆ ಇಡೀ ಭೂಮಿಯು ಪ್ರಮೋದವನವಾಗಲಿರುವುದು