ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪ್ರತಿದಿನ ಆಸ್ಪ್ರಿನ್‌ ಮಾತ್ರೆಯನ್ನು ತೆಗೆದುಕೊಳ್ಳಬೇಕೋ ಬೇಡವೋ?

ಪ್ರತಿದಿನ ಆಸ್ಪ್ರಿನ್‌ ಮಾತ್ರೆಯನ್ನು ತೆಗೆದುಕೊಳ್ಳಬೇಕೋ ಬೇಡವೋ?

ಪ್ರತಿದಿನ ಆಸ್ಪ್ರಿನ್‌ ಮಾತ್ರೆಯನ್ನು ತೆಗೆದುಕೊಳ್ಳಬೇಕೋ ಬೇಡವೋ?

ಮುಂದೆ ತಿಳಿಸಲ್ಪಟ್ಟಿರುವ ನಿಜ ಜೀವನದ ಕಥೆಯು ಒಬ್ಬ ಡಾಕ್ಟರರಿಂದ ವರ್ಣಿಸಲ್ಪಟ್ಟಿದೆ. ಅದು ಆಗಾಗ್ಗೆ ಸಂಭವಿಸುವ ವಿಷಾದನೀಯ ಘಟನೆಯನ್ನು ತಿಳಿಸುತ್ತದೆ.

ಇಡೀ ಕುಟುಂಬವು ಚಿಂತೆಗೀಡಾಗಿತ್ತು. ಈಗ ಡಾಕ್ಟರರಿಗೆ ಕೂಡ ಚಿಂತೆಯಾಗಿತ್ತು. “ಇವನಿಗೆ ರಕ್ತಸ್ರಾವವು ನಿಲ್ಲದಿದ್ದರೆ, ರಕ್ತಪೂರಣವನ್ನು ಕೊಡುವುದರ ಬಗ್ಗೆ ನಾವು ಯೋಚಿಸಬೇಕಾಗಿರುವುದು” ಎಂದು ಡಾಕ್ಟರರು ಹೇಳಿದರು.

ಆ ವ್ಯಕ್ತಿಗೆ ಅಂಥದ್ದೇನಾಗಿದೆ? ಕರುಳಿನ ರಕ್ತಸ್ರಾವದಿಂದಾಗಿ ಅನೇಕ ವಾರಗಳಿಂದ ಅವನು ಸ್ವಲ್ಪ ಸ್ವಲ್ಪವಾಗಿ ತನ್ನ ದೇಹದಲ್ಲಿರುವ ರಕ್ತವನ್ನು ಕಳೆದುಕೊಳ್ಳುತ್ತಿದ್ದನು. ಸಮಸ್ಯೆಯೇನೆಂದು ಕೂಡ ಕಂಡುಹಿಡಿಯಲಾಗಿತ್ತು. ಅದೇನೆಂದರೆ, ಅವನಿಗೆ ಜಠರದುರಿತ ಅಥವಾ ಗ್ಯಾಸ್ಟ್ರೈಟಿಸ್‌ನ ಸಮಸ್ಯೆಯಿತ್ತು. ಆದರೆ, ರಕ್ತಸ್ರಾವವೇಕೆ ನಿಲ್ಲುತ್ತಿಲ್ಲ? ಹತಾಶರಾದ ಡಾಕ್ಟರ್‌ ಆ ವ್ಯಕ್ತಿಯ ಬಳಿ, “ನೀವು ಬೇರೆ ಯಾವುದೇ ಔಷಧಿಯನ್ನು ತೆಗೆದುಕೊಳ್ಳುತ್ತಿಲ್ಲ ತಾನೇ?” ಎಂದು ಕೇಳಿದರು.

“ಇಲ್ಲ ಡಾಕ್ಟ್ರೇ, ಅದೇ ಎಲ್ಲಾ ಕಡೆ ಸಿಗುತ್ತದಲ್ಲಾ ಆ ಪ್ರಕೃತಿದತ್ತ ಮಾತ್ರೆಯನ್ನು ಮಾತ್ರ ನನ್ನ ಸಂಧಿವಾತ ಕಾಯಿಲೆಗಾಗಿ ತೆಗೆದುಕೊಳ್ಳುತ್ತಿದ್ದೇನೆ” ಎಂದು ಉತ್ತರಿಸಿದ ಆ ವ್ಯಕ್ತಿ.

ಕೂಡಲೇ ಆ ಡಾಕ್ಟರ್‌ ತನ್ನ ಕಿವಿಗಳನ್ನು ನಿಮಿರಿಸಿ, “ಎಲ್ಲಿ ಕೊಡು ನೋಡೋಣ” ಎಂದರು. ಆ ಔಷಧಿಯಲ್ಲಿದ್ದ ಘಟಕಾಂಶಗಳ ಪಟ್ಟಿಯನ್ನು ಬಹಳ ಎಚ್ಚರಿಕೆಯಿಂದ ನೋಡುತ್ತಾ, ತಾವು ಯಾವುದಕ್ಕಾಗಿ ಹುಡುಕುತ್ತಿದ್ದರೋ ಅದನ್ನು ಕಂಡುಕೊಂಡರು. ಅದು ಅಸಿಟಿಲೀಸಿಲಿಕ್‌ ಆಮ್ಲವಾಗಿತ್ತು! ಇನ್ನು ಸಮಸ್ಯೆಯು ಪರಿಹಾರವಾದಂತೆ. ಆಸ್ಪ್ರಿನಿನ ಸಂಯುಕ್ತವಿರುವ ಔಷಧಿಯನ್ನು ನಿಲ್ಲಿಸಿ, ಖನಿಜದ ಮಾತ್ರೆಗಳನ್ನು ಹಾಗೂ ಹೊಟ್ಟೆಹುಣ್ಣನ್ನು ವಾಸಿಮಾಡುವ ಕೆಲವು ಔಷಧಿಗಳನ್ನು ರೋಗಿಗೆ ಕೊಟ್ಟಂತೆ ರಕ್ತಸ್ರಾವವು ನಿಂತುಹೋಯಿತು ಮತ್ತು ರಕ್ತದ ಪ್ರಮಾಣವು ಸ್ವಲ್ಪ ಸ್ವಲ್ಪವಾಗಿ ತಕ್ಕ ಪ್ರಮಾಣಕ್ಕೆ ಬರಲಾರಂಭಿಸಿತು.

ರಕ್ತಸ್ರಾವವನ್ನು ಉಂಟುಮಾಡುವ ಚಿಕಿತ್ಸೆಗಳು

ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿರುವಾಗ ಜಠರದುರಿತದಿಂದಾಗಿ ರಕ್ತಸ್ರಾವವಾಗುವುದು ಇಂದು ಒಂದು ವೈದ್ಯಕೀಯ ಸಮಸ್ಯೆಯಾಗಿದೆ. ಇದಕ್ಕೆ ಅನೇಕ ಚಿಕಿತ್ಸೆಗಳು ಕಾರಣವಾಗಿರಬಹುದು. ಆದರೆ, ಈ ರೀತಿಯ ಹೆಚ್ಚಿನ ಸಮಸ್ಯೆಗಳು, ಸಂಧಿವಾತ ಮತ್ತು ಬೇನೆಗಳಿಗಾಗಿ ಉಪಯೋಗಿಸುವ ಔಷಧಿಗಳಿಂದ ಉಂಟಾಗುತ್ತವೆ. ಅಂಥ ಔಷಧಿಗಳಲ್ಲಿ ಕೆಲವು ಸ್ಟೆರಾಯ್ಡ್‌ಗಳಿಲ್ಲದ ಉರಿಯುಂಟಾಗದ (ಆ್ಯಂಟಿ ಇನ್‌ಫ್ಲಮೇಟರಿ) ಔಷಧಿಗಳು ಅಥವಾ ಎನ್‌ಎಸ್‌ಏಐಡಿಎಸ್‌ ಕೂಡ ಸೇರಿವೆ. ಈ ಹೆಸರುಗಳು ದೇಶದಿಂದ ದೇಶಕ್ಕೆ ಭಿನ್ನವಾಗಿರಬಹುದು.

ಎಲ್ಲೆಡೆಯೂ ಸುಲಭವಾಗಿ ಸಿಗುವ ಅನೇಕ ಔಷಧಿಗಳಲ್ಲಿ ಆಸ್ಪ್ರಿನ್‌ ಇರುತ್ತದೆ. ಇತ್ತೀಚಿನ ವರ್ಷಗಳಲ್ಲಿ, ಅನೇಕ ದೇಶಗಳಲ್ಲಿ ಪ್ರತಿದಿನ ಆಸ್ಪ್ರಿನ್‌ ಮಾತ್ರೆಯನ್ನು ನುಂಗುವವರ ಸಂಖ್ಯೆಯು ಹೆಚ್ಚಾಗಿದೆ. ಅದಕ್ಕೆ ಕಾರಣವೇನು?

ಆಸ್ಪ್ರಿನ್‌ ಮಾತ್ರೆಗಾಗಿರುವ ಉತ್ಸಾಹ

“ದಿನನಿತ್ಯ ಆಸ್ಪ್ರಿನ್‌ ಸೇವನೆಯು ಜೀವಗಳನ್ನು ಉಳಿಸುವುದು” ಎಂದು 1995ರಲ್ಲಿ ಹಾರ್ವಾಡ್‌ ಹೆಲ್ತ್‌ ಲೆಟರ್‌ ವರದಿಸಿತು. ಆಗಿನಿಂದ, ಲೋಕದಾದ್ಯಂತ ನಡೆಸಲ್ಪಟ್ಟ ಹಲವಾರು ಅಧ್ಯಯನಗಳನ್ನು ಪದೇಪದೇ ಉಲ್ಲೇಖಿಸುತ್ತಾ, ಇದನ್ನು ಅನೇಕಬಾರಿ ಸೂಚಿಸುತ್ತಾ ಸಂಶೋಧಕರು ಮುಕ್ತಾಯಗೊಳಿಸಿದ್ದು: “ಹೃದಯಾಘಾತ, ಲಕ್ವ, ಎದೆನೋವನ್ನು (ಆಂಜೈನಾ) ಅನುಭವಿಸಿರುವ ಪ್ರತಿಯೊಬ್ಬರು ಮತ್ತು ಹೃದಯದ ಅಪಧಮನಿಯ ಬೈಪಾಸ್‌ ಸರ್ಜರಿಯಾಗಿರುವವರು, ಅರ್ಧ ಅಥವಾ ಒಂದು ಆಸ್ಪ್ರಿನ್‌ ಮಾತ್ರೆಯನ್ನು ಪ್ರತಿದಿನ ತೆಗೆದುಕೊಳ್ಳಬೇಕು. ಆದರೆ, ಔಷಧಿಯಿಂದ ಅಲರ್ಜಿಯುಂಟಾಗುವ ಸಮಸ್ಯೆಯು ಇರುವುದಾದರೆ ತೆಗೆದುಕೊಳ್ಳಬಾರದು. *

ಇನ್ನಿತರ ಸಂಶೋಧಕರು, ಹೃದಯಾಘಾತದ ಅಪಾಯವಿರುವ 50ಕ್ಕಿಂತಲೂ ಹೆಚ್ಚಿನ ವಯಸ್ಸಿನ ಗಂಡಸರು ಮತ್ತು ಹೆಂಗಸರು ದಿನನಿತ್ಯ ಆಸ್ಪ್ರಿನ್‌ ಮಾತ್ರೆಯನ್ನು ತೆಗೆದುಕೊಳ್ಳುವುದರಿಂದ ಪ್ರಯೋಜನಗಳು ಸಿಗುತ್ತವೆ ಎಂದು ಪ್ರತಿಪಾದಿಸುತ್ತಾರೆ. ಅಷ್ಟುಮಾತ್ರವಲ್ಲದೆ, ಪ್ರತಿದಿನ ಆಸ್ಪ್ರಿನ್‌ ಮಾತ್ರೆಯನ್ನು ತೆಗೆದುಕೊಳ್ಳುವುದು ದೊಡ್ಡ ಕರುಳಿನ ಕ್ಯಾನ್ಸರ್‌ ಬರುವ ಅಪಾಯವನ್ನು ಕಡಿಮೆಮಾಡಬಹುದು ಮತ್ತು ಹೆಚ್ಚು ಪ್ರಮಾಣದಲ್ಲಿ ಆಸ್ಪ್ರಿನ್‌ ಮಾತ್ರೆಗಳನ್ನು ಬಹುಕಾಲ ತೆಗೆದುಕೊಳ್ಳುವುದು ಮಧುಮೇಹ ರೋಗವಿರುವವರ ರಕ್ತದಲ್ಲಿರುವ ಸಕ್ಕರೆ ಪ್ರಮಾಣವನ್ನು ಕಡಿಮೆಮಾಡಬಲ್ಲದು ಎಂದು ಅಧ್ಯಯನಗಳು ಸೂಚಿಸುತ್ತವೆ.

ಈ ರೀತಿಯಾಗಿ ಪ್ರಸ್ತಾಪಿಸಿರುವ ಅನೇಕ ಪ್ರಯೋಜನಗಳನ್ನು ನೀಡಲು ಆಸ್ಪ್ರಿನ್‌ ಮಾತ್ರೆಯು ಹೇಗೆ ಕೆಲಸಮಾಡುತ್ತದೆ? ಪೂರ್ತಿ ವಿವರಗಳು ತಿಳಿಯದಿದ್ದರೂ, ಪುರಾವೆಗಳು ತೋರಿಸುವುದೇನೆಂದರೆ, ಆಸ್ಪ್ರಿನ್‌ ಮಾತ್ರೆಯು ರಕ್ತದಲ್ಲಿರುವ ಕಿರುಫಲಕಗಳು ಒಂದಕ್ಕೊಂದು ಅಂಟಿಕೊಳ್ಳದಂತೆ ಕ್ರಿಯೆಮಾಡುತ್ತದೆ. ಹೀಗೆ, ರಕ್ತವು ಹೆಪ್ಪುಗಟ್ಟದಂತಿರಲು ಸಹಾಯಮಾಡುತ್ತದೆ. ಇದು ಹೃದಯ ಮತ್ತು ಮೆದುಳಿನ ರಕ್ತವನ್ನು ಒಯ್ಯುವ ಸಣ್ಣ ಸಣ್ಣ ರಕ್ತನಾಳಗಳಲ್ಲಿ ರಕ್ತಸಂಚಾರಕ್ಕೆ ಅಡ್ಡಿಯಾಗದಂತೆ ಸಹಾಯಮಾಡುತ್ತದೆ. ಹೀಗೆ, ಅತ್ಯಂತ ಪ್ರಾಮುಖ್ಯವಾದ ಅಂಗಾಂಗಗಳಿಗಾಗುವ ಅಪಾಯವನ್ನು ತಡೆಗಟ್ಟುತ್ತದೆ ಎಂದು ಎಣಿಸಲಾಗುತ್ತದೆ.

ಇಷ್ಟೆಲ್ಲಾ ಪ್ರಯೋಜನಗಳಿವೆಯೆಂದು ಎಣಿಸುವ ಆಸ್ಪ್ರಿನ್‌ ಮಾತ್ರೆಯನ್ನು ಎಲ್ಲರೂ ಯಾಕೆ ತೆಗೆದುಕೊಳ್ಳುವುದಿಲ್ಲ? ಒಂದು ಕಾರಣವೇನೆಂದರೆ, ಆಸ್ಪ್ರಿನ್‌ ಮಾತ್ರೆಯ ಬಗ್ಗೆ ಇನ್ನೂ ಅನೇಕ ವಿಷಯಗಳು ನಮಗೆ ಸರಿಯಾಗಿ ತಿಳಿದಿಲ್ಲ. ಎಷ್ಟು ತೆಗೆದುಕೊಳ್ಳಬೇಕು ಎಂಬುದು ಕೂಡ ಅಸ್ಪಷ್ಟವಾಗಿದೆ. ಮಾಡುವ ಶಿಫಾರಸ್ಸುಗಳು ಸಹ ಬೇರೆಬೇರೆಯಾಗಿವೆ. ಕೆಲವರು ಮಧ್ಯಮ ಗಾತ್ರದ ಮಾತ್ರೆಯನ್ನು ದಿನಕ್ಕೆ ಎರಡು ಸಾರಿ ತೆಗೆದುಕೊಳ್ಳಿ ಎಂದು ಹೇಳುತ್ತಾರೆ. ಇನ್ನೂ ಕೆಲವರು ಸಣ್ಣ ಗಾತ್ರದ ಆಸ್ಪ್ರಿನ್‌ ಅನ್ನು ದಿನ ಬಿಟ್ಟು ದಿನ ಒಂದು ತೆಗೆದುಕೊಳ್ಳಿ ಎಂದು ಹೇಳುತ್ತಾರೆ. ಗಂಡಸರು ತೆಗೆದುಕೊಳ್ಳುವಷ್ಟು ಪ್ರಮಾಣವೇ ಹೆಂಗಸರು ತೆಗೆದುಕೊಳ್ಳಬೇಕೇ ಅಥವಾ ಅದರಲ್ಲೇನಾದರೂ ವ್ಯತ್ಯಾಸವಿದೆಯೇ? ಈ ವಿಷಯದ ಕುರಿತು ಡಾಕ್ಟರರು ಖಚಿತರಾಗಿಲ್ಲ. ಕರುಳಿಗೆ ಸಂಬಂಧಪಟ್ಟಿರುವ ಆಸ್ಪ್ರಿನ್‌ ಒಂದು ರೀತಿಯಲ್ಲಿ ಉಪಯುಕ್ತವಾದುದು ಎಂದು ಹೇಳಬಹುದು. ಆದರೆ, ಪ್ರತಿರೋಧಕ ಆಸ್ಪ್ರಿನಿನ ಕುರಿತು ಈಗಲೂ ವಿವಾದವಿದೆ.

ಎಚ್ಚರಿಕೆಯಿಂದಿರಲು ಕಾರಣ

ವಾಸ್ತವದಲ್ಲಿ ಆಸ್ಪ್ರಿನ್‌ ಒಂದು ನೈಸರ್ಗಿಕ ಪದಾರ್ಥವಾಗಿದೆ. ಅಮೇರಿಕದ ಇಂಡಿಯನ್ನರು ನೀರುಹಬ್ಬೆ ಗಿಡದ ತೊಗಟೆಯಿಂದ ಆಸ್ಪ್ರಿನ್‌ ಮಾತ್ರೆಯಲ್ಲಿರುವ ಘಟಕಾಂಶಗಳನ್ನು ಪಡೆದುಕೊಂಡರು. ಆದರೆ, ಅದರಲ್ಲಿ ಅನೇಕ ಅಡ್ಡಪರಿಣಾಮಗಳಿವೆ. ಆಸ್ಪ್ರಿನ್‌ ಕೆಲವರಲ್ಲಿ ರಕ್ತಸ್ರಾವವನ್ನು ಉಂಟುಮಾಡುವುದಲ್ಲದೇ, ಆಸ್ಪ್ರಿನ್‌ನಿಂದ ಇನ್ನಿತರ ಅನೇಕ ತೊಂದರೆಗಳುಂಟಾಗುವ ಸಾಧ್ಯತೆಯಿದೆ. ಅದರಲ್ಲಿ ಒಂದು ಆಸ್ಪ್ರಿನ್‌ ಮಾತ್ರೆಗೆ ಸುಲಭವಾಗಿ ಪ್ರತಿಕ್ರಿಯೆಯನ್ನು ತೋರಿಸುವವರಿಗೆ ಅಲರ್ಜಿಯಾಗುವುದು ಕೂಡ ಸೇರಿದೆ. ಎಲ್ಲರೂ ಪ್ರತಿದಿನ ಆಸ್ಪ್ರಿನ್‌ ಮಾತ್ರೆಯನ್ನು ತೆಗೆದುಕೊಳ್ಳುವುದು ಒಳ್ಳೆಯದಲ್ಲ ಎಂದು ಹೇಳಬೇಕಾಗಿಯೇ ಇಲ್ಲ.

ಆದರೆ, ಹೃದಯಾಘಾತ ಅಥವಾ ಲಕ್ವದ ಅಪಾಯವಿರುವ ಇಲ್ಲವೇ ಗಮನಾರ್ಹವಾದ ಅಪಾಯದ ಅಂಶಗಳನ್ನು ಹೊಂದಿರುವ ವ್ಯಕ್ತಿಯು, ಪ್ರತಿದಿನ ಆಸ್ಪ್ರಿನ್‌ ಅನ್ನು ತೆಗೆದುಕೊಳ್ಳುವುದು ಒಳ್ಳೆಯದೋ ಇಲ್ಲವೋ ಎಂಬುದನ್ನು ತಮ್ಮ ಡಾಕ್ಟರರ ಬಳಿ ಕೇಳಿ ತಿಳಿದುಕೊಳ್ಳಬಹುದು. ಅದೇ ಸಮಯದಲ್ಲಿ ತಮಗೆ ರಕ್ತಸ್ರಾವದ ಸಮಸ್ಯೆ, ಆಸ್ಪ್ರಿನ್‌ ಅನ್ನು ತೆಗೆದುಕೊಳ್ಳುವುದರಿಂದ ಉಂಟಾಗುವ ತೊಂದರೆಗಳು ಮತ್ತು ಹೊಟ್ಟೆಯುರಿ ಅಥವಾ ಜಠರದುರಿಯ ಸಮಸ್ಯೆಗಳಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು. ಈ ಮಾತ್ರೆಯನ್ನು ತೆಗೆದುಕೊಳ್ಳುವುದಕ್ಕೆ ಮುಂಚೆ, ಅದರಿಂದ ಉಂಟಾಗಬಹುದಾದ ಸಮಸ್ಯೆಗಳು ಅಥವಾ ಚಿಕಿತ್ಸೆಯ ಪ್ರತಿಕ್ರಿಯೆಯ ಬಗ್ಗೆ ಡಾಕ್ಟರರೊಂದಿಗೆ ಮಾತಾಡಬೇಕು.

ಈಗಾಗಲೇ ತಿಳಿಸಿರುವಂತೆ, ಆಸ್ಪ್ರಿನ್‌ ಮತ್ತು ಆಸ್ಪ್ರಿನ್‌ನಂತಹ ಔಷಧಿಗಳು ಹೆಚ್ಚು ರಕ್ತಸ್ರಾವವಾಗುವ ಅಪಾಯವನ್ನು ಉಂಟುಮಾಡುತ್ತವೆ. ಅಷ್ಟುಮಾತ್ರವಲ್ಲ, ಅಂಥ ರಕ್ತಸ್ರಾವವು ಗುರುತಿಸಲು ಅಸಾಧ್ಯವಾದದ್ದಾಗಿ ಇರಬಹುದು. ಅದು ಕೂಡಲೇ ಗೊತ್ತಾಗದೆ, ಸ್ವಲ್ಪಸ್ವಲ್ಪವಾಗಿ ಸಮಯ ಕಳೆದಂತೆ ಹೆಚ್ಚಾಗಬಹುದು. ಇನ್ನಿತರ ಔಷಧಿಗಳನ್ನು ತೆಗೆದುಕೊಳ್ಳುವಾಗ ಕೂಡ, ಅದರಲ್ಲೂ ವಿಶೇಷವಾಗಿ ಉರಿಯನ್ನುಂಟುಮಾಡದಿರುವ ಬೇರೆ ಔಷಧಿಗಳ ಕುರಿತು ಬಲು ಎಚ್ಚರಿಕೆಯಿಂದಿರಬೇಕು. ಅಂಥ ಔಷಧಿಗಳನ್ನು ಉಪಯೋಗಿಸುತ್ತಿರುವುದಾದರೆ, ಅದನ್ನು ನಿಮ್ಮ ಡಾಕ್ಟರರ ಬಳಿ ಹೇಳಿ. ಅನೇಕ ಸಂದರ್ಭಗಳಲ್ಲಿ, ಆಪರೇಷನ್‌ ಆಗುವುದಕ್ಕೆ ಮುಂಚೆ ಅಂಥ ಔಷಧಿಯನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸುವುದು ಬುದ್ಧಿವಂತಿಕೆಯಾಗಿರುವುದು. ರಕ್ತದ ಪ್ರಮಾಣವನ್ನು ಕ್ರಮವಾಗಿ ಲ್ಯಾಬೊರೆಟರಿಯಲ್ಲಿ ಪರೀಕ್ಷಿಸುವುದು ಕೂಡ ಉಪಯುಕ್ತವಾಗಿರಬಹುದು.

ಭವಿಷ್ಯದಲ್ಲಿ ಯಾವುದೇ ತೊಂದರೆಯಾಗುವುದರಿಂದ ನಮ್ಮನ್ನು ರಕ್ಷಿಸಿಕೊಳ್ಳಬೇಕಾದರೆ, ನಾವು ಬೈಬಲಿನಲ್ಲಿರುವ ಜ್ಞಾನೋಕ್ತಿಗೆ ಗಮನಕೊಡುವೆವು: “ಜಾಣನು ಕೇಡನ್ನು ಕಂಡು ಅಡಗಿಕೊಳ್ಳುವನು; ಬುದ್ಧಿಹೀನನು ಮುಂದೆ ಹೋಗಿ ನಷ್ಟಪಡುವನು.” (ಜ್ಞಾನೋಕ್ತಿ 22:3) ವೈದ್ಯಕೀಯಕ್ಕೆ ಸಂಬಂಧಪಟ್ಟಿರುವ ಈ ವಿಷಯದಲ್ಲಿ ನಾವು ಜ್ಞಾನಿಗಳಾಗಿರುತ್ತಾ, ನಮ್ಮ ಆರೋಗ್ಯಕ್ಕೆ ಉಂಟಾಗಬಹುದಾದ ಯಾವುದೇ ಆಪತ್ತಿನಿಂದ ತಪ್ಪಿಸಿಕೊಳ್ಳುವವರಾಗಿರೋಣ.

[ಪಾದಟಿಪ್ಪಣಿ]

^ ಎಚ್ಚರ! ಪತ್ರಿಕೆಯು ಯಾವುದೇ ರೀತಿಯ ವೈದ್ಯಕೀಯ ಚಿಕಿತ್ಸೆಯನ್ನು ಶಿಫಾರಸ್ಸು ಮಾಡುವುದಿಲ್ಲ.

[ಪುಟ 20, 21ರಲ್ಲಿರುವ ಚೌಕ/ಚಿತ್ರ]

ಪ್ರತಿದಿನ ಆಸ್ಪ್ರಿನ್‌ ಮಾತ್ರೆಯನ್ನು ಯಾರು ತೆಗೆದುಕೊಳ್ಳಬಹುದು

● ಮುಕುಟ ಕವಾಟದ ಹೃದ್ರೋಗವಿರುವವರು ಇಲ್ಲವೇ ಮುರುಟಿಕೊಂಡ ಶೀರ್ಷ ಧಮನಿಗಳ ರೋಗವಿರುವವರು (ಶೀರ್ಷ ಧಮನಿಗಳು, ಇವು ಕತ್ತಿನ ಬಳಿಯಿರುವ ಮುಖ್ಯವಾದ ರಕ್ತನಾಳಗಳಾಗಿವೆ).

● ರಕ್ತಹೆಪ್ಪುಗಟ್ಟಿದ ಪರಿಣಾಮದಿಂದಾಗಿ ಲಕ್ವ ಹೊಡೆದಿರುವವರು (ಇದು ರಕ್ತನಾಳದಲ್ಲಿ ರಕ್ತಹೆಪ್ಪುಗಟ್ಟುವುದರಿಂದ ಅಥವಾ ಕ್ಷಣಿಕವಾಗಿ ರಕ್ತಪರಿಚಲನೆಗೆ ಅಡ್ಡಿಯುಂಟಾಗುವುದರಿಂದಾಗುವ (ಸ್ವಲ್ಪ ಸಮಯದವರೆಗೆ ಲಕ್ವಹೊಡೆದಂತಾಗುವುದು).

● ಹೃದ್ರೋಗವನ್ನು ಉಂಟುಮಾಡುವ, ಈ ಮುಂದೆ ತಿಳಿಸಲ್ಪಟ್ಟಿರುವ ಅಪಾಯಕರ ಅಂಶಗಳಲ್ಲಿ ಒಂದು ಅಥವಾ ಅದಕ್ಕಿಂತ ಹೆಚ್ಚಿನ ಸಮಸ್ಯೆಯನ್ನು ಹೊಂದಿರುವ 50 ವರ್ಷಕ್ಕಿಂತ ಮೇಲ್ಪಟ್ಟ ಪುರುಷರು: ಧೂಮಪಾನಮಾಡುವವರು, ರಕ್ತದೊತ್ತಡವಿರುವವರು, ಮಧುಮೇಹರೋಗವಿರುವವರು, ಅತ್ಯಂತ ಹೆಚ್ಚಿನ ಮಟ್ಟದ ಕೊಲೆಸ್ಟ್ರಾಲ್‌ ಇರುವವರು, ಮತ್ತು ಏಚ್‌ಡಿಎಲ್‌ ಕೊಲೆಸ್ಟ್ರಾಲ್‌ ಕಡಿಮೆಯಿರುವವರು, ತೀವ್ರ ಬೊಜ್ಜು ಇರುವವರು, ವಿಪರೀತ ಮದ್ಯಪಾನ ಸೇವನೆಮಾಡುವವರು, ಹಾಗೂ ವಯಸ್ಕರಾಗಿರುವಾಗಲೇ ಮುಕುಟ ಕವಾಟದ ಹೃದ್ರೋಗವಿರುವ, (55 ವರ್ಷಕ್ಕಿಂತ ಮುಂಚೆ ಹೃದಯಾಘಾತ) ಇಲ್ಲವೇ ಲಕ್ವ, ಚಟುವಟಿಕೆಯಿಲ್ಲದ ಜೀವನಶೈಲಿಯನ್ನು ಹೊಂದಿರುವ ಕುಟುಂಬದ ಹಿನ್ನೆಲೆಗಳಿಂದ ಬಂದಿರುವವರು.

● ಈ ಮೇಲೆ ತಿಳಿಸಿರುವ ಅಪಾಯಗಳಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚಿನ ಸಮಸ್ಯೆಯನ್ನು ಹೊಂದಿರುವ 50 ವರ್ಷಕ್ಕಿಂತಲೂ ಮೇಲ್ಪಟ್ಟ ಮಹಿಳೆಯರು.

ಈ ವಿಷಯದ ಕುರಿತು ಯಾವುದೇ ತೀರ್ಮಾನಗಳನ್ನು ತೆಗೆದುಕೊಳ್ಳುವುದಕ್ಕೆ ಮುಂಚೆ ನಿಮ್ಮ ಡಾಕ್ಟರರ ಸಲಹೆಯನ್ನು ಪಡೆದುಕೊಳ್ಳಿ.

[ಕೃಪೆ]

ಮೂಲ: ಆರೋಗ್ಯದ ಕುರಿತ ಗ್ರಾಹಕರ ವರದಿಗಳು