ಪ್ರಾಪಗ್ಯಾಂಡಕ್ಕೆ ಬಲಿಯಾಗಬೇಡಿ!
ಪ್ರಾಪಗ್ಯಾಂಡಕ್ಕೆ ಬಲಿಯಾಗಬೇಡಿ!
“ಮೂಢನು ಯಾವ ಮಾತನ್ನಾದರೂ ನಂಬುವನು.”—ಜ್ಞಾನೋಕ್ತಿ 14:15.
ಶಿಕ್ಷಣ ಮತ್ತು ಪ್ರಾಪಗ್ಯಾಂಡದ ನಡುವೆ ಭೂಮಿಯಾಕಾಶದಷ್ಟು ಅಜಗಜಾಂತರವಿದೆ. ಶಿಕ್ಷಣವು ಹೇಗೆ ಯೋಚಿಸಬೇಕೆಂದು ಕಲಿಸುತ್ತದೆ. ಆದರೆ, ಪ್ರಾಪಗ್ಯಾಂಡವು ಯಾವುದನ್ನು ಯೋಚಿಸಬೇಕೆಂದು ಕಲಿಸುತ್ತದೆ. ಒಳ್ಳೇ ಶಿಕ್ಷಕರು, ಯಾವುದೇ ಒಂದು ವಿವಾದಾಂಶವನ್ನು ಪ್ರಸ್ತುತಪಡಿಸುವಾಗ ಅದಕ್ಕೆ ಸಂಬಂಧಪಟ್ಟ ಎಲ್ಲಾ ಅಂಶಗಳನ್ನು ಮುಂದಿಡುವರು. ಮತ್ತು ಆ ವಿಷಯದ ಕುರಿತು ಚರ್ಚಿಸಲು ಅವಕಾಶವನ್ನು ಕೊಡುವರು. ಆದರೆ, ಪ್ರಾಪಗ್ಯಾಂಡ ಮಾಡುವವರು ತಮ್ಮ ಅಭಿಪ್ರಾಯವನ್ನು ಮಾತ್ರ ಕೇಳುವಂತೆ ಒತ್ತಾಯಿಸುತ್ತಲೇ ಇರುವರು ಮತ್ತು ಚರ್ಚೆಯನ್ನು ಎಂದೂ ಅನುಮತಿಸಲಾರರು. ಅನೇಕವೇಳೆ ಅವರ ಒಳ ಉದ್ದೇಶವೇನು ಎಂಬುದು ಸ್ಪಷ್ಟವಾಗಿ ಗೊತ್ತಾಗುವುದಿಲ್ಲ. ಏಕೆಂದರೆ, ಅವರು ನಿಜಾಂಶಗಳನ್ನು ಶೋಧಿಸಿ ತೆಗೆದುಬಿಡುತ್ತಾರೆ. ಉಪಯುಕ್ತ ಮಾಹಿತಿಗಳನ್ನು ಸದುಪಯೋಗಮಾಡಿಕೊಳ್ಳುತ್ತಾ, ಉಳಿದವುಗಳನ್ನು ಇತರರಿಗೆ ಗೊತ್ತಾಗದಂತೆ ಮರೆಮಾಡಿಬಿಡುತ್ತಾರೆ. ಅಷ್ಟುಮಾತ್ರವಲ್ಲ, ಅವರು ನಿಜಾಂಶಗಳನ್ನು ತಿರುಚಿ ಬಿಡುತ್ತಾರೆ. ವಿಶೇಷವಾಗಿ ಅಪ್ಪಟ ಸುಳ್ಳು ಮತ್ತು ಅರ್ಧಸತ್ಯವನ್ನು ಹೇಳುವುದರಲ್ಲಿ ಅವರು ಮಹಾ ಜಾಣರು. ಅವರು ಗುರಿಯಿಡುವುದು, ನಿಮ್ಮ ತರ್ಕಬದ್ಧವಾದ ಆಲೋಚನಾ ಸಾಮರ್ಥ್ಯಗಳನಲ್ಲ, ಬದಲಿಗೆ ನಿಮ್ಮ ಭಾವನೆಗಳ ಮೇಲೆಯೇ.
ಪ್ರಾಪಗ್ಯಾಂಡ ಮಾಡುವವನು ತನ್ನ ಮಾಹಿತಿಯು ಸತ್ಯವಾಗಿಯೂ ನೈತಿಕವಾಗಿಯೂ ತೋರುವಂತೆ ಖಚಿತಪಡಿಸಿಕೊಳ್ಳುವನು. ಮತ್ತು ಆ ಮಾಹಿತಿಯನ್ನು ಅನ್ವಯಿಸುವುದಾದರೆ, ಅದು ನಿಮ್ಮ ಪ್ರಾಮುಖ್ಯತೆಯನ್ನು ಹೆಚ್ಚಿಸುವುದು ಮತ್ತು ನಿಮಗೆ ಹೆಚ್ಚು ಸಂಬಂಧಪಟ್ಟಿದೆ ಎಂಬ ಭಾವನೆಯನ್ನು ಕೊಡುವಂತೆ ನೋಡಿಕೊಳ್ಳುವನು. ನೀವು ಬುದ್ಧಿವಂತರಾಗಿದ್ದೀರಿ ಆದ್ದರಿಂದಲೇ ಅವರು ಹೇಳುವುದಕ್ಕೆ ಗಮನಕೊಡುತ್ತೀರಿ. ನೀವೊಬ್ಬರೇ ಅಲ್ಲ, ಅನೇಕರು ಕಿಂಚಿತ್ತೂ ಸಂದೇಹವಿಲ್ಲದೇ ನಂಬಿದ್ದಾರೆ, ಆದ್ದರಿಂದ ನಿಶ್ಚಿಂತರಾಗಿರಿ. ಈ ರೀತಿಯಾಗಿ ಅವರು ಹೇಳುವುದನ್ನು ನೀವು ನಂಬಬೇಕೆಂದು ಬಯಸುತ್ತಾರೆ.
ಈ ರೀತಿಯ ಜನರನ್ನು ಬೈಬಲು, ‘ಬರೀ ಮಾತಿನವರು’ ಮತ್ತು ‘ಮೋಸಗಾರರು’ ಎಂದು ಕರೆಯುತ್ತದೆ. (ತೀತ 1:10) ಅಂಥ ಜನರಿಂದ ನೀವು ಹೇಗೆ ದೂರವಿರಬಲ್ಲಿರಿ? ಅವರ ತಂತ್ರಗಳು ಒಮ್ಮೆ ನಿಮಗೆ ಪರಿಚಯವಾದರೆ ಸಾಕು, ಅವರು ಹೇಳುವ ಯಾವುದೇ ರೀತಿಯ ಸುದ್ದಿ ಅಥವಾ ಮಾಹಿತಿಯು ಸರಿಯೋ ತಪ್ಪೋ ಎಂಬುದನ್ನು ತೂಗಿನೋಡಲು ಹೆಚ್ಚು ಶಕ್ತರಾಗಿರುವಿರಿ. ಅದನ್ನು ಮಾಡಲು ಕೆಲವು ವಿಧಾನಗಳು ಇಲ್ಲಿವೆ:
ಸರಿಯಾದ ಆಯ್ಕೆಮಾಡುವವರಾಗಿರಿ: ಸಂಪೂರ್ಣವಾಗಿ ಮುಕ್ತವಾಗಿರುವ ಮನಸ್ಸನ್ನು ಒಂದು ಪೈಪಿಗೆ ಹೋಲಿಸಬಹುದು. ಅದರೊಳಗೆ ಏನನ್ನು ಬೇಕಾದರೂ ಹರಿಯಬಿಡಬಹುದು—ಚರಂಡಿ ನೀರನ್ನು ಸಹ. ನಮ್ಮ ಮನಸ್ಸು ಕೂಡ ಅದೇ ರೀತಿಯಲ್ಲಿ ಆಗಿಬಿಡುವ ಸಾಧ್ಯತೆ ಇದೆ. ಯಾರೊಬ್ಬರೂ ತಮ್ಮ ಮನಸ್ಸನ್ನು ಹೊಲೆಗೆಡಿಸಿಕೊಳ್ಳಲು ಬಯಸುವುದಿಲ್ಲ. ಇದರ ಕುರಿತಾಗಿ ಬಹಳ ಹಿಂದಿನ ಕಾಲದಲ್ಲಿ ಜೀವಿಸಿದ್ದ ಅರಸ ಮತ್ತು ಬೋಧಕನಾಗಿದ್ದ ಸೊಲೊಮೋನನು ಎಚ್ಚರಿಸಿದ್ದೇನೆಂದರೆ: “ಮೂಢನು ಯಾವ ಮಾತನ್ನಾದರೂ ನಂಬುವನು; ಜಾಣನು ತನ್ನ ನಡತೆಯನ್ನು ಚೆನ್ನಾಗಿ ಗಮನಿಸುವನು.” (ಜ್ಞಾನೋಕ್ತಿ 14:15) ಆದುದರಿಂದ, ನಾವು ನಮ್ಮ ಮನಸ್ಸಿನಲ್ಲಿ ಏನ್ನನ್ನು ತುಂಬುತ್ತೇವೆ ಎಂಬ ವಿಷಯದಲ್ಲಿ ಸರಿಯಾಗಿ ಆಯ್ಕೆಮಾಡುವವರಾಗಿರಬೇಕು. ಅದಕ್ಕಾಗಿ, ನಮ್ಮ ಮುಂದೆ ಇಡಲ್ಪಡುವ ಯಾವುದೇ ವಿಷಯವನ್ನು ಸೂಕ್ಷ್ಮವಾಗಿ ಪರಿಶೀಲಿಸಬೇಕು. ನಂತರ ಯಾವುದನ್ನು ತೆಗೆದುಕೊಳ್ಳಬೇಕು ಮತ್ತು ಯಾವುದನ್ನು ತೆಗೆದುಕೊಳ್ಳಬಾರದು ಎಂಬುದನ್ನು ನಾವೇ ತೀರ್ಮಾನಿಸಬೇಕು.
ಆದರೆ, ಅದೇ ಸಮಯದಲ್ಲಿ ನಾವು ತೀರ ಸಂಕುಚಿತ ಸ್ವಭಾವದವರು ಕೂಡ ಆಗಿರಬಾರದು. ಏಕೆಂದರೆ, ಅದು ನಮ್ಮ ಆಲೋಚನೆಯನ್ನು ಉತ್ತಮಗೊಳಿಸಸಾಧ್ಯವಿರುವಂಥ ವಿಷಯಗಳನ್ನು ಸಹ ತಿರಸ್ಕರಿಸುವಂತೆ ಮಾಡುವುದು. ಹಾಗಾದರೆ ಒಂದು ಸರಿಯಾದ ಸಮತೋಲನವನ್ನು ಕಾಪಾಡಿಕೊಳ್ಳುವುದಾದರೂ ಹೇಗೆ? ಯಾವುದೇ ಒಂದು ಹೊಸ
ಮಾಹಿತಿಯನ್ನು ತುಲನೆಮಾಡಲು ಒಂದು ಸರಿಯಾದ ಮಟ್ಟವನ್ನು ಅನುಸರಿಸುವ ಮೂಲಕ ಮಾಡಬಹುದು. ಈ ವಿಷಯದಲ್ಲಿ ಒಬ್ಬ ಕ್ರೈಸ್ತನಿಗೆ ಅತಿಶ್ರೇಷ್ಠವಾದ ವಿವೇಕದ ಮೂಲವಾಗಿರುವ ಬೈಬಲ್ ಇದೆ. ಅದು, ಅವನ ಆಲೋಚನೆಯನ್ನು ಸರಿಯಾದ ದಿಕ್ಕಿನಲ್ಲಿ ನಡೆಸುವ ನಂಬಿಗಸ್ತ ಮಾರ್ಗದರ್ಶಿಯಾಗಿದೆ. ಒಂದು ಕಡೆಯಲ್ಲಿ, ಒಬ್ಬ ಕ್ರೈಸ್ತನ ಮನಸ್ಸು ಮುಕ್ತವಾಗಿರುತ್ತದೆ. ಅಂದರೆ, ಯಾವುದೇ ಹೊಸ ಮಾಹಿತಿಯನ್ನು ಸ್ವೀಕರಿಸುವಂಥದ್ದಾಗಿರುತ್ತದೆ. ಅಂಥ ಹೊಸ ಮಾಹಿತಿಯು ಅವನಿಗೆ ಸಿಗುವಾಗ, ಅವನು ಅದನ್ನು ಬೈಬಲಿನ ಮಟ್ಟಗಳೊಂದಿಗೆ ಸರಿದೂಗಿ ನೋಡುವನು. ನಂತರ ಯಾವುದು ಸರಿಯಾಗಿದೆಯೋ ಆ ಮಾಹಿತಿಯನ್ನು ತನ್ನ ಆಲೋಚನಾ ರೀತಿಯೊಳಗೆ ಸೇರಿಸಿಕೊಳ್ಳುವನು. ಇನ್ನೊಂದು ಕಡೆಯಲ್ಲಿ, ಆ ಮಾಹಿತಿಯು ಬೈಬನಲ್ಲಿರುವ ಮೌಲ್ಯಗಳಿಗೆ ಸಂಪೂರ್ಣವಾಗಿ ವಿರುದ್ಧವಾಗಿರುವಾಗ, ಅದಲ್ಲಿರುವ ಅಪಾಯವನ್ನು ಕೂಡ ಅವನು ಗ್ರಹಿಸುವನು.ವಿವೇಚನೆಯನ್ನು ಉಪಯೋಗಿಸಿ: ವಿವೇಚನೆಯು, “ಸರಿತಪ್ಪು ಎಂದು ನಿರ್ಣಯಿಸುವ ತೀಕ್ಷ್ಣಬುದ್ಧಿಯಾಗಿದೆ.” “ಪರಸ್ಪರ ವಿಷಯಗಳಲ್ಲಿರುವ ವ್ಯತ್ಯಾಸವನ್ನು ವಿಂಗಡಿಸಿ ನೋಡುವ ದಕ್ಷತೆ ಅಥವಾ ಸಾಮರ್ಥ್ಯವಾಗಿದೆ.” ವಿವೇಚನೆಯುಳ್ಳ ಒಬ್ಬ ವ್ಯಕ್ತಿಯು ಅತಿಸೂಕ್ಷ್ಮವಾದ ವಿಚಾರಗಳನ್ನು ಇಲ್ಲವೇ ವಿಷಯಗಳನ್ನು ಗ್ರಹಿಸುವನು ಹಾಗೂ ವಿವೇಚನಾ ಶಕ್ತಿಯನ್ನು ಹೊಂದಿರುವನು.
ವಿವೇಚನೆಯನ್ನು ಉಪಯೋಗಿಸಿ, ಕೇವಲ “ನಯದ ನುಡಿಗಳಿಂದಲೂ ಹೊಗಳಿಕೆಯ ಮಾತುಗಳಿಂದಲೂ ನಿಷ್ಕಪಟಿಗಳ ಹೃದಯಗಳನ್ನು ಮೋಸಗೊಳಿಸು”ವವರನ್ನು ನಾವು ಸುಲಭವಾಗಿ ಗುರುತಿಸಬಹುದು. (ರೋಮಾಪುರ 16:18) ಉಪಯೋಗಕ್ಕೆ ಬಾರದ ಮಾಹಿತಿಯನ್ನು ಇಲ್ಲವೇ ತಪ್ಪಾದ ಅಭಿಪ್ರಾಯಗಳನ್ನು ತೆಗೆದುಹಾಕುವಂತೆ ಹಾಗೂ ಆ ಮಾಹಿತಿಯಲ್ಲಿರುವ ಸತ್ವವನ್ನು ಕಂಡುಹಿಡಿಯಲು ವಿವೇಚನೆಯು ನಮ್ಮನ್ನು ಶಕ್ತಗೊಳಿಸುವುದು. ಹಾಗಾದರೆ, ಯಾವುದೇ ಒಂದು ವಿಷಯದಲ್ಲಿರುವ ತಪ್ಪಾದ ಅಭಿಪ್ರಾಯವನ್ನು ನೀವು ಹೇಗೆ ಕಂಡುಹಿಡಿಯುವಿರಿ?
ಯಾವುದೇ ಮಾಹಿತಿಯನ್ನು ಪರೀಕ್ಷಿಸಿ: ಪ್ರಥಮ ಶತಮಾನದಲ್ಲಿದ್ದ ಕ್ರೈಸ್ತ ಶಿಕ್ಷಕನಾದ ಯೋಹಾನನು ಹೇಳಿದ್ದು: “ಪ್ರಿಯರೇ, . . . ಆತ್ಮದ ಎಲ್ಲಾ ನುಡಿಗಳನ್ನು ನಂಬದೆ ಆಯಾ ನುಡಿಗಳು ದೇವರಿಂದ ಪ್ರೇರಿತವಾದವುಗಳೋ ಅಲ್ಲವೋ ಎಂದು ಅವುಗಳನ್ನು ಪರೀಕ್ಷಿಸಬೇಕು.” (1 ಯೋಹಾನ 4:1) ಇಂದು, ಕೆಲವರು ಸ್ಪಂಜಿನಂತಿರುತ್ತಾರೆ. ಅಂಥವರು ತಮಗೆ ಯಾವುದೇ ಮಾಹಿತಿ ಸಿಕ್ಕಿದರೂ ಅದನ್ನು ಹೀರಿಕೊಂಡುಬಿಡುತ್ತಾರೆ. ಏಕೆಂದರೆ, ನಮ್ಮ ಸುತ್ತುಮುತ್ತಲೂ ತುಂಬಿರುವ ಯಾವುದೇ ರೀತಿಯ ಮಾಹಿತಿಯನ್ನು ಹೀರಿಕೊಂಡುಬಿಡುವುದು ಬಹಳ ಸುಲಭ.
ಆದ್ದರಿಂದ, ತನ್ನ ಮನಸ್ಸನ್ನು ಯಾವ ರೀತಿಯ ಮಾಹಿತಿಯಿಂದ ತುಂಬಿಸಬೇಕು ಎಂಬುದನ್ನು ಪ್ರತಿಯೊಬ್ಬನು ತಾನೇ ತೀರ್ಮಾನಿಸಿಕೊಳ್ಳಬೇಕು. ನಾವು ಏನನ್ನು ಸೇವಿಸುತ್ತೇವೋ ನಮ್ಮ ಆರೋಗ್ಯವು ಸಹ ಹಾಗೆಯೇ ಇರುವುದು ಎಂಬ ಹೇಳಿಕೆಯಿದೆ. ಇದು ದೇಹ ಮತ್ತು ಮನಸ್ಸಿಗೆ ನೀಡುವಂಥ ಆಹಾರಕ್ಕೂ ಅನ್ವಯವಾಗಬಹುದು. ಆದ್ದರಿಂದ, ನೀವು ಯಾವುದೇ ವಿಷಯವನ್ನು ಓದುತ್ತಿದ್ದರೂ, ನೋಡುತ್ತಿದ್ದರೂ ಅಥವಾ ಕೇಳಿಸಿಕೊಳ್ಳುತ್ತಿದ್ದರೂ ಅದು ಸತ್ಯವಾದ ಮಾಹಿತಿಯಾಗಿದೆಯೇ ಅಥವಾ ಪ್ರಾಪಗ್ಯಾಂಡವನ್ನು ಸೂಚಿಸುವ ಮಾಹಿತಿಯಾಗಿದೆಯೇ ಎಂಬುದನ್ನು ಪರೀಕ್ಷಿಸಿ.
ಅಷ್ಟುಮಾತ್ರವಲ್ಲ, ನಾವು ನಿಷ್ಪಕ್ಷಪಾತಿಗಳಾಗಿರಲು ಬಯಸುವುದಾದರೆ, ಹೊಸ ಮಾಹಿತಿಯನ್ನು ನಾವು ಪಡೆದುಕೊಳ್ಳುವಾಗಲೆಲ್ಲಾ, ನಮ್ಮ ಸ್ವಂತ ಅಭಿಪ್ರಾಯಗಳನ್ನು ಸತತವಾದ ಪರೀಕ್ಷೆಗೆ ಒಳಪಡಿಸಲು ಸಿದ್ಧಮನಸ್ಸುಳ್ಳವರಾಗಿರಬೇಕು. ಅವು ಏನೇ ಆದರೂ, ಕೇವಲ ಅಭಿಪ್ರಾಯಗಳೇ ಎಂಬುದನ್ನು ನಾವು ಗ್ರಹಿಸಬೇಕು. ಅವರ ಅಭಿಪ್ರಾಯಗಳು ಎಷ್ಟರ ಮ್ಟಟಿಗೆ ವಿಶ್ವಾಸಾರ್ಹವಾಗಿವೆ ಎಂಬುದು ನಮ್ಮಲ್ಲಿರುವ ಮಾಹಿತಿಯ
ಸಪ್ರಮಾಣತೆಯ ಮೇಲೆಯೇ ಅವಲಂಬಿಸಿರುತ್ತವೆ. ಮತ್ತು ನಮ್ಮ ತರ್ಕಿಸುವ ಗುಣಮಟ್ಟದ ಮೇಲೆ ಹಾಗೂ ನಾವು ಅನ್ವಯಿಸಲು ಬಯಸುವ ಮೌಲ್ಯಗಳು ಅಥವಾ ಮಟ್ಟಗಳ ಮೇಲೆ ಅವು ಅವಲಂಬಿಸಿರುತ್ತವೆ.ಪ್ರಶ್ನೆಗಳನ್ನು ಕೇಳಿ: ನಾವು ಈಗಾಗಲೇ ನೋಡಿರುವಂತೆ, ಇಂದು ಅನೇಕರು ತಮ್ಮ ‘ರಂಜಿಸುವ ಮಾತುಗಳಿಂದ ನಮ್ಮನ್ನು ಮೋಸಗೊಳಿಸಲು’ ಬಯಸುವರು. (ಕೊಲೊಸ್ಸೆ 2:4) ಆದುದರಿಂದ, ನಮ್ಮೊಂದಿಗೆ ಯಾರಾದರೂ ಮನವೊಪ್ಪಿಸುವ ತರ್ಕಗಳನ್ನು ಮಾಡುವಾಗ, ನಾವು ಪ್ರಶ್ನೆಗಳನ್ನು ಕೇಳಬೇಕು.
ಮೊದಲನೆಯದಾಗಿ, ಅವರು ಹೇಳುತ್ತಿರುವ ಮಾಹಿತಿಯಲ್ಲಿ ದುರಾಭಿಪ್ರಾಯವಿದೆಯೇ ಎಂಬುದನ್ನು ಪರೀಕ್ಷಿಸಿ. ಆ ಮಾಹಿತಿಯ ಉದ್ದೇಶವೇನು? ಒಂದುವೇಳೆ ಮಾಹಿತಿಯಲ್ಲಿ ಅಡ್ಡಹೆಸರನ್ನು ಮತ್ತು ಗೂಡಾರ್ಥವಿರುವ ಭಾಷೆಯನ್ನು ಉಪಯೋಗಿಸುವುದಾದರೆ, ಯಾಕೆ ಅಂಥ ಭಾಷೆಯನ್ನು ಉಪಯೋಗಿಸುತ್ತಿದ್ದಾರೆ ಎಂದು ಪರೀಕ್ಷಿಸಿ. ಗೂಢಾರ್ಥವಾದ ಭಾಷೆಯನ್ನು ಬದಿಗಿರಿಸಿ, ಮಾಹಿತಿಯ ಪ್ರಾಮುಖ್ಯತೆಯಾದರೂ ಏನು ಎಂಬುದನ್ನು ಯೋಚಿಸಿ, ಮತ್ತು ಪ್ರಾಪಗ್ಯಾಂಡ ಮಾಡುತ್ತಿರುವವರು ಯಾವ ರೀತಿಯ ಸಾಧನೆಗಳನ್ನು ಮಾಡಿದ್ದಾರೆ ಎಂಬುದನ್ನು ಕಂಡುಹಿಡಿಯಲು ಪ್ರಯತ್ನಿಸಿ. ಅವರು ಸತ್ಯವನ್ನಾಡುವ ಜನರಾಗಿದ್ದಾರೋ? “ಅಧಿಕಾರಿಗಳು” ಎಂದು ಸೂಚಿಸಿ ಮಾತಾಡುವುದಾದರೆ, ಅವರ ಸಂಸ್ಥೆಯ ಅಧಿಕಾರಿ ಯಾರು ಮತ್ತು ಅವರು ಏನಾಗಿದ್ದಾರೆ? ವಿಷಯದ ಕುರಿತು ಅತ್ಯುತ್ತಮ ಮಾಹಿತಿಯನ್ನು ಹೊಂದಿರುವ ಆ ವ್ಯಕ್ತಿಗೋ ಅಥವಾ ಅವನ ಸಂಸ್ಥೆಗೋ ಅಥವಾ ಅದರ ಪ್ರಕಾಶನಗಳಿಗೋ ನೀವು ಯಾಕೆ ಪ್ರಾಮುಖ್ಯತೆಯನ್ನು ಕೊಡಬೇಕು? ಒಂದುವೇಳೆ ಅವರು ನಿಮ್ಮ ಭಾವನೆಗಳನ್ನು ಸ್ವರ್ಶಿಸುವಂಥ ಪ್ರಯತ್ನಗಳನ್ನು ಮಾಡುತ್ತಿರುವುದನ್ನು ನೀವು ಗ್ರಹಿಸುವುದಾದರೆ ಆಗ ನಿಮ್ಮನ್ನೇ ಹೀಗೆ ಪ್ರಶ್ನಿಸಿಕೊಳ್ಳಿ, ‘ಭಾವನೆಗಳನ್ನು ಪಕ್ಕಕ್ಕಿಟ್ಟು, ಈ ಮಾಹಿತಿಯನ್ನು ಪರಿಶೀಲಿಸಿದರೆ ಅದರ ಪ್ರಾಮುಖ್ಯತೆಯಾದರೂ ಏನಾಗಿರುವುದು?’
ಗುಂಪನ್ನು ಹಿಂಬಾಲಿಸಬೇಡಿ: ಎಲ್ಲರೂ ಒಂದೇ ರೀತಿಯಲ್ಲಿ ಆಲೋಚಿಸುತ್ತಾರೆಂದ ಮಾತ್ರಕ್ಕೆ ಅದು ಸರಿಯಾಗಿರಲೇಬೇಕೆಂದೇನಿಲ್ಲ. ಇದನ್ನು ನೀವು ಒಂದುವೇಳೆ ಗ್ರಹಿಸುವುದಾದರೆ, ಭಿನ್ನವಾಗಿ ಯೋಚಿಸಲು ನಿಮಗೆ ಧೈರ್ಯವಿರುವುದು. ಬೇರೆಯವರೆಲ್ಲಾ ಒಂದೇ ರೀತಿಯಲ್ಲಿ ಯೋಚಿಸುತ್ತಿರುವಂತೆ ಅನಿಸಿದರೂ ಸಹ, ನೀವು ಕೂಡ ಅವರ ಹಾಗೆ ಯೋಚಿಸಬೇಕೆಂಬ ಅವಶ್ಯಕತೆ ಇದೆಯೇ? ಜನಪ್ರಿಯ ಅಭಿಪ್ರಾಯಗಳು ವಿಷಯವು ಸತ್ಯವೆಂಬುದಕ್ಕೆ ಭರವಸಾರ್ಹವಾದ ಮಾಪಕವಲ್ಲ. ಏಕೆಂದರೆ, ಅನೇಕ ಶತಮಾನಗಳಿಂದ ಎಲ್ಲಾ ರೀತಿಯ ವಿಚಾರಗಳು ಜನಪ್ರಿಯವಾಗಿ ಅಂಗೀಕರಿಸಲ್ಪಟ್ಟಿವೆ. ಆದರೆ ನಂತರ ಸುಳ್ಳೆಂದು ರುಜುಪಡಿಸಲ್ಪಟ್ಟಿವೆ. ಆದರೂ, ಜನಾಭಿಪ್ರಾಯದೊಂದಿಗೆ ಹೋಗುವ ಇಚ್ಛೆಯು ಈಗಲೂ ಇದೆ. ವಿಮೋಚನಕಾಂಡ 23:2ರಲ್ಲಿ ನೀಡಲ್ಪಟ್ಟಿರುವ ಆಜ್ಞೆಯು ಒಂದು ಒಳ್ಳೇ ತತ್ವವಾಗಿದೆ: “ದುಷ್ಕಾರ್ಯವನ್ನು ಮಾಡುವವರು ಬಹುಮಂದಿ ಆದಾಗ್ಯೂ ಅವರ ಜೊತೆಯಲ್ಲಿ ಸೇರಬಾರದು.”
ನಿಜ ಜ್ಞಾನ v/s ಪ್ರಾಪಗ್ಯಾಂಡ
ಸ್ಪಷ್ಟವಾಗಿ ಆಲೋಚನೆ ಮಾಡಲು ಬೈಬಲ್ ಒಂದು ಭರವಸಾರ್ಹ ಮಾರ್ಗದರ್ಶಿಯಾಗಿದೆ ಎಂದು ಈಗಾಗಲೇ ತಿಳಿಸಲ್ಪಟ್ಟಿದೆ. ದೇವರಿಗೆ ಯೇಸು ಹೇಳಿದ ಹೇಳಿಕೆಯನ್ನು ಯೆಹೋವನ ಸಾಕ್ಷಿಗಳು ನಿರ್ವಿವಾದವಾಗಿ ಒಪ್ಪಿಕೊಳ್ಳುತ್ತಾರೆ. ಅವನು ಹೇಳುವುದು: “ನಿನ್ನ ವಾಕ್ಯವೇ ಸತ್ಯವು.” (ಯೋಹಾನ 17:17) ಏಕೆಂದರೆ, ಬೈಬಲಿನ ಗ್ರಂಥಕರ್ತನಾದ ದೇವರು “ಸತ್ಯವಂತನಾಗಿದ್ದಾನೆ.”—ಕೀರ್ತನೆ 31:5, NW.
ಹೌದು, ನಾವು ಇಂದು ಬಹಳ ಜಟಿಲವಾದ ಪ್ರಾಪಗ್ಯಾಂಡದ ಯುಗದಲ್ಲಿ ಜೀವಿಸುತ್ತಿದ್ದೇವೆ. ಆದುದರಿಂದ, ಯೆಹೋವನ ವಾಕ್ಯವನ್ನು ಸತ್ಯದ ಮೂಲವಾಗಿ ನಾವು ಭರವಸೆಯಿಂದ ಸ್ವೀಕರಿಸಸಾಧ್ಯವಿದೆ. ಅದು ಕೊನೆಯಲ್ಲಿ, ‘ಕಲ್ಪನೆಯ ಮಾತುಗಳನ್ನು ಹೇಳಲು’ ಬಯಸುವ ಜನರಿಂದ ನಮ್ಮನ್ನು ರಕ್ಷಿಸುವುದು.—2 ಪೇತ್ರ 2:3.
[ಪುಟ 9ರಲ್ಲಿರುವ ಚಿತ್ರ]
ವಿವೇಚನೆಯು, ಉಪಯೋಗಕ್ಕೆ ಬಾರದ ಅಥವಾ ತಪ್ಪಾದ ಅಭಿಪ್ರಾಯಗಳನ್ನು ಕೊಡುವ ಮಾಹಿತಿಯನ್ನು ತೆಗೆದುಹಾಕುವಂತೆ ನಿಮಗೆ ಸಹಾಯಮಾಡುವುದು
[ಪುಟ 10ರಲ್ಲಿರುವ ಚಿತ್ರಗಳು]
ನೀವು ಓದುವ ಅಥವಾ ವೀಕ್ಷಿಸುವ ಯಾವುದೇ ವಿಷಯದ ಸತ್ಯಾಸತ್ಯತೆಯನ್ನು ಪರೀಕ್ಷಿಸಿ
[ಪುಟ 11ರಲ್ಲಿರುವ ಚಿತ್ರ]
ಜನಪ್ರಿಯ ಅಭಿಪ್ರಾಯವು ಯಾವಾಗಲೂ ಭರವಸಾರ್ಹವಾಗಿರುವುದಿಲ್ಲ
[ಪುಟ 11ರಲ್ಲಿರುವ ಚಿತ್ರ]
ದೇವರ ವಾಕ್ಯವನ್ನು ಸತ್ಯದ ಮೂಲವಾಗಿ ನಾವು ಭರವಸೆಯಿಂದ ಸ್ವೀಕರಿಸಸಾಧ್ಯವಿದೆ