ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮಾಹಿತಿಯನ್ನು ಜಾಣ್ಮೆಯಿಂದ ತಿರುಚುವುದು

ಮಾಹಿತಿಯನ್ನು ಜಾಣ್ಮೆಯಿಂದ ತಿರುಚುವುದು

ಮಾಹಿತಿಯನ್ನು ಜಾಣ್ಮೆಯಿಂದ ತಿರುಚುವುದು

“ಪ್ರಾಪಗ್ಯಾಂಡವನ್ನು ಹೆಚ್ಚು ಜಾಣತನದಿಂದ ಹಾಗೂ ಎಡಬಿಡದೇ ಉಪಯೋಗಿಸುವ ಮೂಲಕ, ಜನರಿಗೆ ನರಕವನ್ನು ಸ್ವರ್ಗವಾಗಿಯೂ ದಾರಿದ್ರ್ಯ ಸ್ಥಿತಿಯನ್ನು ಪ್ರಮೋದವನವನ್ನಾಗಿಯೂ ಮಾಡಿ ತೋರಿಸಬಹುದು.”—ಅಡಾಲ್ಫ್‌ ಹಿಟ್ಲರ್‌, ಮೇಯ್ನ್‌ ಕೆಂಫ್‌ ಎಂಬ ಪುಸ್ತಕದಲ್ಲಿ.

ಸಂಪರ್ಕ ಮಾಧ್ಯಮವು ಇಂದು ವ್ಯಾಪಕವಾಗಿ ಬೆಳೆಯುತ್ತಿದೆ. ಪ್ರಿಟಿಂಗ್‌, ಟೆಲಿಫೋನ್‌, ರೇಡಿಯೋ, ಟಿವಿ ಮತ್ತು ಇಂಟರ್‌ನೆಟ್‌, ಹೀಗೆ ಅನೇಕ ಸಂಪರ್ಕ ಸಾಧನಗಳು ಕಂಡುಹಿಡಿಯಲ್ಪಟ್ಟಿವೆ. ಇವುಗಳ ಮೂಲಕ ಸಿಗುವ ಮನವೊಪ್ಪಿಸುವ ಸಂದೇಶಗಳು ಕೂಡ ಇದ್ದಕ್ಕಿದ್ದಂತೆ ಹೆಚ್ಚಾಗಿವೆ. ಸಂಪರ್ಕ ಮಾಧ್ಯಮಗಳಲ್ಲಾಗಿರುವ ಈ ಕ್ರಾಂತಿಯು ಸಿಕ್ಕಾಬಟ್ಟೆ ಮಾಹಿತಿಗಳನ್ನು ನೀಡುವುದಕ್ಕೆ ಕಾರಣವಾಗಿದೆ. ಹೀಗೆ, ಪ್ರತಿಯೊಂದು ಮೂಲಗಳಿಂದಲೂ ಬರುವ ಸಂದೇಶಗಳ ಸುರಿಮಳೆಯು ಜನರನ್ನು ಪೂರ್ತಿಯಾಗಿ ಮುಳುಗಿಸಿಬಿಟ್ಟಿವೆ. ಈ ರೀತಿಯಾಗಿ ದಾಳಿಮಾಡುವ ಸಂದೇಶಗಳನ್ನು ಸ್ವಲ್ಪವೂ ಪರಿಶೀಲಿಸದೆ ಅಥವಾ ಪ್ರಶ್ನಿಸದೆ ಅನೇಕರು ಕೂಡಲೇ ಸ್ವೀಕರಿಸುತ್ತಾರೆ.

ಇಂತಹ ಸುಲಭವಾದ ಮಾರ್ಗಗಳನ್ನೇ ಪ್ರಾಪಗ್ಯಾಂಡ ಮಾಡುವ ಕುತಂತ್ರಿಯು ತುಂಬಾ ಇಷ್ಟಪಡುತ್ತಾನೆ. ಅದರಲ್ಲೂ ವಿಶೇಷವಾಗಿ, ಜನರು ಸ್ವಲ್ಪವೂ ಆಲೋಚಿಸದೆ ಕೂಡಲೇ ವಿಚಾರಗಳನ್ನು ಅಂಗೀಕರಿಸುವುದೆಂದರೆ ಅವನಿಗೆ ತುಂಬ ಇಷ್ಟ. ಇಂತಹದ್ದನ್ನೇ ಪ್ರಾಪಗ್ಯಾಂಡವು ಪ್ರೋತ್ಸಾಹಿಸುತ್ತದೆ. ಅಂದರೆ ಭಾವನೆಗಳನ್ನು ಕೆರಳಿಸುವುದು, ಅಭದ್ರತೆಯ ಅನಿಸಿಕೆಗಳ ಸದುಪಯೋಗವನ್ನು ಮಾಡಿಕೊಳ್ಳುವುದು, ಅಸ್ಪಷ್ಟವಾದ ಭಾಷೆಯನ್ನು ಉಪಯೋಗಿಸಿ ವ್ಯಕ್ತಿಯ ಸದುಪಯೋಗಮಾಡಿಕೊಳ್ಳುವುದು, ತರ್ಕಬದ್ಧವಾದ ನಿಯಮಗಳನ್ನು ತಿರುಚುವುದು. ಇಂಥ ತಂತ್ರಗಳು ಅತ್ಯಂತ ಪರಿಣಾಮಕಾರಿಯಾದ ರೀತಿಯಲ್ಲಿ ಕೆಲಸಮಾಡುತ್ತವೆ ಎಂಬುದನ್ನು ಚರಿತ್ರೆಯು ರುಜುಪಡಿಸುತ್ತದೆ.

ಪ್ರಾಪಗ್ಯಾಂಡದ ಒಂದು ಉದ್ದ ಚರಿತ್ರೆ

“ಪ್ರಾಪಗ್ಯಾಂಡ” ಎಂಬ ಪದವು, ಇಂದು ತಪ್ಪಾದ ಅರ್ಥವನ್ನು ಕೊಡುತ್ತಾ ಮೋಸಕರವಾದ ತಂತ್ರಗಳನ್ನು ಸೂಚಿಸುತ್ತದೆ. ಆದರೆ, ಮೂಲತಃ ಆ ಪದಕ್ಕಾಗಿ ಉದ್ದೇಶಿಸಿದ ಅರ್ಥವು ಇದಾಗಿರಲಿಲ್ಲ. ನಿಜವಾಗಿಯೂ ನೋಡುವುದಾದರೆ, “ಪ್ರಾಪಗ್ಯಾಂಡ” ಎಂಬ ಪದವು ಲ್ಯಾಟಿನ್‌ ಭಾಷೆಯಲ್ಲಿ ಕಾಂಗ್ರಿಗೇಷಿಯೋ ಡಿ ಪ್ರಾಪಗ್ಯಾಂಡ ಫಯ್ಡ್‌ (ನಂಬಿಕೆಯನ್ನು ಪ್ರಚಾರಮಾಡುವುದಕ್ಕಾಗಿರುವ ಸಭೆ) ಎಂದಾಗಿದೆ. ಇದು ಕ್ಯಾಥೊಲಿಕ್‌ ಧರ್ಮಪಾಲಕರ ಗುಂಪಿಗೆ ಹೇಳುವ ಹೆಸರಾಗಿದೆ. ಈ ಕಮಿಟಿಯನ್ನು ಪ್ರಾಪಗ್ಯಾಂಡ ಅಥವಾ ಪ್ರಚಾರ ಎಂದು ಸಂಕ್ಷಿಪ್ತರೂಪದಲ್ಲಿ ಕರೆಯಲಾಗುತ್ತಿತ್ತು. ಮಿಷನೆರಿಗಳ ಕೆಲಸವನ್ನು ಮೇಲ್ವಿಚಾರಣೆ ಮಾಡುವುದಕ್ಕಾಗಿ, 1622ರಲ್ಲಿ ಹದಿನೈದನೆಯ ಪೋಪ್‌ ಗ್ರೆಗರಿಯು ಈ ಕಮಿಟಿಯನ್ನು ಸ್ಥಾಪಿಸಿದನು. ಕ್ರಮೇಣವಾಗಿ, “ಪ್ರಾಪಗ್ಯಾಂಡ” ಎಂಬ ಪದವು, ಒಂದು ನಂಬಿಕೆಯನ್ನು ಹಬ್ಬಿಸುವುದಕ್ಕಾಗಿ ಮಾಡಲ್ಪಡುವ ಯಾವುದೇ ಪ್ರಯತ್ನವನ್ನು ಸೂಚಿಸುವ ಅರ್ಥವನ್ನು ಕೊಡಲಾರಂಭಿಸಿತು.

ಆದರೆ, ಪ್ರಾಪಗ್ಯಾಂಡ ಎಂಬ ವಿಚಾರವು 17ನೇ ಶತಮಾನದಲ್ಲಿ ಹುಟ್ಟಲಿಲ್ಲ. ಏಕೆಂದರೆ, ಪ್ರಾಚೀನ ಕಾಲದಿಂದಲೂ ಮನುಷ್ಯರು ತಮ್ಮ ವಿಚಾರಭಾವಗಳನ್ನು ಅಥವಾ ತಮ್ಮ ಕೀರ್ತಿ ಮತ್ತು ಪ್ರಾಬಲ್ಯವನ್ನು ಹಬ್ಬಿಸುವುದಕ್ಕಾಗಿ ಲಭ್ಯವಿದ್ದ ಪ್ರತಿಯೊಂದು ಮಾಧ್ಯಮವನ್ನು ಉಪಯೋಗಿಸಿದ್ದಾರೆ. ಉದಾಹರಣೆಗೆ, ಪ್ರಾಚೀನ ಕಾಲದಿಂದಲೂ ಐಗುಪ್ತದ ಫರೋಹರು ಚಿತ್ರಕಲೆಯನ್ನು ಪ್ರಾಪಗ್ಯಾಂಡ ಮಾಡುವ ಉದ್ದೇಶಕ್ಕಾಗಿ ಉಪಯೋಗಿಸಿದ್ದಾರೆ. ಅಲ್ಲಿಯ ಅರಸರುಗಳು ತಮ್ಮ ಪ್ರಾಬಲ್ಯ ಮತ್ತು ಸ್ಥಿರತೆಯ ಪ್ರತಿರೂಪವನ್ನು ಎತ್ತಿತೋರಿಸುವುದಕ್ಕಾಗಿ ತಮ್ಮ ಸ್ವಂತ ಪಿರಮಿಡ್ಡುಗಳನ್ನು ರಚಿಸಿದರು. ಅದೇ ರೀತಿಯಲ್ಲಿ, ರೋಮನ್ನರ ವಾಸ್ತುಶಿಲ್ಪ ಕಲೆಯು ರಾಜಕೀಯ ಉದ್ದೇಶವನ್ನು ಪೂರೈಸುವುದಕ್ಕಾಗಿ ಕಾರ್ಯನಡೆಸಿತು. ಅದು, ರೋಮನ್‌ ಸಾಮ್ರಾಜ್ಯದ ಮಹಿಮೆಯನ್ನು ಎತ್ತಿತೋರಿಸುವುದಾಗಿತ್ತು. ಮೊದಲನೇ ವಿಶ್ವ ಮಹಾಯುದ್ಧದ ಸಮಯದಲ್ಲಿ, “ಪ್ರಾಪಗ್ಯಾಂಡ” ಎಂಬ ಶಬ್ದಕ್ಕೆ ಸಾಮಾನ್ಯವಾಗಿರುವ ನಕಾರಾತ್ಮಕ ಅರ್ಥವು ಕೊಡಲ್ಪಟ್ಟಿತು. ಆಗ, ಪ್ರಸಾರ ಮಾಧ್ಯಮದವರಿಂದ ಹಬ್ಬಿಸಲ್ಪಟ್ಟ ಯುದ್ಧದ ಕುರಿತ ಮಾಹಿತಿಯನ್ನು ರೂಪಿಸುವುದರಲ್ಲಿ ಸರ್ಕಾರಗಳು ಒಂದು ಪ್ರಾಮುಖ್ಯವಾದ ಪಾತ್ರವನ್ನು ವಹಿಸಲು ಪ್ರಾರಂಭಿಸಿದವು. ಎರಡನೇ ಮಹಾಯುದ್ಧದ ಸಮಯದಲ್ಲಿ, ಅಡಾಲ್ಫ್‌ ಹಿಟ್ಲರ್‌ ಮತ್ತು ಯೋಸಫ್‌ ಗೆಬ್ಬೆಲ್ಸ್‌ ಇವರಿಬ್ಬರು ಸ್ವತಃ ಪ್ರಾಪಗ್ಯಾಂಡ ಮಾಡುವುದರಲ್ಲಿ ಪ್ರಚಂಡರಾಗಿದ್ದರು.

ಎರಡನೇ ಮಹಾಯುದ್ಧದ ನಂತರ, ರಾಷ್ಟ್ರೀಯ ನೀತಿಯನ್ನು ಉತ್ತೇಜಿಸುವುದಕ್ಕಾಗಿ ಪ್ರಾಪಗ್ಯಾಂಡವು ಬಹುಮುಖ್ಯ ಪಾತ್ರವನ್ನು ವಹಿಸಲು ಪ್ರಾರಂಭಿಸಿತು. ಪಶ್ಚಿಮ ಹಾಗೂ ಪೂರ್ವ ದೇಶದ ಒಕ್ಕೂಟಗಳು, ಯಾವುದಕ್ಕೂ ಬದ್ಧರಾಗಿರದಿದ್ದ ಅಸಂಖ್ಯಾತ ಜನರನ್ನು ತಮ್ಮ ಕಡೆ ಸೆಳೆದುಕೊಳ್ಳುವುದಕ್ಕಾಗಿ ಎಲ್ಲಾ ರೀತಿಯ ಚಳುವಳಿಗಳನ್ನು ಮಾಡಿದವು. ಪ್ರಾಪಗ್ಯಾಂಡ ಮಾಡುವ ಉದ್ದೇಶಗಳಿಗಾಗಿ, ರಾಷ್ಟ್ರೀಯ ಜನಜೀವನ ಮತ್ತು ಕಾರ್ಯನೀತಿಯ ಪ್ರತಿಯೊಂದು ಅಂಶವು ಸ್ವಪ್ರಯೋಜನಕ್ಕಾಗಿ ಉಪಯೋಗಿಸಿಕೊಳ್ಳಲ್ಪಟ್ಟವು. ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗುತ್ತಿರುವ ಪ್ರಾಪಗ್ಯಾಂಡದ ತಂತ್ರಗಳ ಜಟಿಲತೆಯನ್ನು ಚುನಾವಣೆಯ ಪ್ರಚಾರಗಳಲ್ಲಿ ಮತ್ತು ಸಿಗರೇಟು ಕಂಪನಿಗಳ ಜಾಹೀರಾತುಗಳಲ್ಲಿ ಸ್ಪಷ್ಟವಾಗಿ ಕಾಣಬಹುದಾಗಿದೆ. ಅವು, ಸಿಗರೇಟ್‌ ಸೇವನೆಯು ಆಕರ್ಷಕವಾಗಿದೆ ಹಾಗೂ ಆರೋಗ್ಯಕರವಾಗಿದೆ ಎಂಬುದನ್ನು ಜನರಿಗೆ ನಟಿಸಿ ತೋರಿಸುವುದಕ್ಕಾಗಿ, ನುರಿತ ವ್ಯಕ್ತಿಗಳನ್ನು ಹಾಗೂ ಇನ್ನಿತರ ಪ್ರಮುಖರನ್ನು ಕೆಲಸಕ್ಕೆ ಇಟ್ಟುಕೊಂಡಿವೆ. ಅದು ಸಾರ್ವಜನಿಕರ ಆರೋಗ್ಯಕ್ಕೆ ಅಪಾಯಕಾರಿಯಾಗಿದ್ದರೂ ಅಪಾಯವೇ ಇಲ್ಲವೆಂಬಂತೆ ಚಿತ್ರಿಸಿ ತೋರಿಸುತ್ತವೆ.

ಬರೀ ಸುಳ್ಳು!

ಅಪ್ಪಟವಾದ ಸುಳ್ಳನ್ನು ಹೇಳುವುದೇ ಪ್ರಾಪಗ್ಯಾಂಡ ಮಾಡುವವನ ಬಳಿಯಿರುವ ಅನುಕೂಲಕರವಾದ ತಂತ್ರವಾಗಿದೆ ಎಂಬುದು ಖಂಡಿತ. ಇದರ ಕುರಿತು ಒಂದು ಉದಾಹರಣೆಯನ್ನು ಗಮನಿಸಿ. 1543ರಲ್ಲಿ ಯೂರೋಪಿನಲ್ಲಿದ್ದ ಯೆಹೂದ್ಯರ ಕುರಿತು ಮಾರ್ಟಿನ್‌ ಲೂಥರ್‌ ಬರೆದ ಸುಳ್ಳುಗಳ ಪಟ್ಟಿಯನ್ನು ಗಮನಿಸಿ: “ಅವರು ಬಾವಿಗಳಲ್ಲಿ ವಿಷವನ್ನು ಬೆರೆಸಿದ್ದಾರೆ, ಹತ್ಯೆಗಳನ್ನು ಮಾಡಿದ್ದಾರೆ, ಮಕ್ಕಳನ್ನು ಅಪಹರಿಸಿದ್ದಾರೆ . . . ಅವರು ವಿಷಪೂರಿತ ಜನರು, ಉಗ್ರರು, ಪ್ರತಿಕಾರಮಾಡುವವರು, ಹಾವಿನಂಥ ವಂಚಕರು, ಹತ್ಯೆಗಾರರು, ಇತರರನ್ನು ಕುಟುಕುವ ಮತ್ತು ಕೆಟ್ಟದ್ದನ್ನು ಮಾಡುವ ಪಿಶಾಚನ ಮಕ್ಕಳು.” ಹಾಗಾದರೆ, ಕ್ರೈಸ್ತರೆನಿಸಿಕೊಂಡವರಿಗೆ ಅವನ ಸಲಹೆಯೇನು? “ಅವರ ಸಭಾಮಂದಿರಗಳಿಗೆ ಅಥವಾ ಶಾಲೆಗಳಿಗೆ ಬೆಂಕಿಯಿಡಿ . . . ಅವರ ಮನೆಮಠಗಳು ಕೂಡ [ನೆಲಸಮವಾಗಬೇಕು] ಮತ್ತು ನಾಶಗೊಳಿಸಲ್ಪಡಬೇಕು.”

ಆ ಕಾಲವನ್ನು ಅಭ್ಯಾಸಮಾಡಿದ ಸರ್ಕಾರ ಹಾಗೂ ಸಮಾಜವಿಜ್ಞಾನದ ಒಬ್ಬ ಪ್ರೊಫೆಸರ್‌ ಇದರ ಕುರಿತು ಹೇಳುವುದು: “ಯೆಹೂದಿದ್ವೇಷಕ್ಕೂ ಯೆಹೂದ್ಯರ ಕ್ರಿಯೆಗೂ ಮೂಲತಃ ಯಾವುದೇ ರೀತಿಯಲ್ಲೂ ಸಂಬಂಧವಿಲ್ಲ. ಹಾಗಾಗಿ, ಯೆಹೂದ್ಯರ ನಿಜವಾದ ಸ್ವಭಾವದ ಕುರಿತು ಯೆಹೂದಿದ್ವೇಷಿಗಿದ್ದ ಜ್ಞಾನಕ್ಕೆ ಮೂಲಭೂತವಾಗಿ ಯಾವುದೇ ಸಂಬಂಧವಿರಲಿಲ್ಲ.” ಅವರು ಇನ್ನೂ ಹೇಳುವುದು: “ಸಮಾಜದ ಯಾವುದೇ ವಕ್ರತೆಗೆ ಯೆಹೂದ್ಯರೇ ಕಾರಣರಾಗಿದ್ದರು. ಹೀಗೆ, ಸ್ವಾಭಾವಿಕ ಅಥವಾ ಸಾಮಾಜಿಕ ತೊಂದರೆಗೆ ಅನೈಚ್ಛಿಕವಾಗಿ ಪ್ರತಿಕ್ರಿಯಿಸುವುದಕ್ಕೂ ಯೆಹೂದಿ ಮೂಲಗಳೇ ಕಾರಣವಾಗಿರಬಹುದೆಂದು ಆಪಾದಿಸಲಾಗುತ್ತಿತ್ತು.”

ಸಾಮಾನ್ಯವಾದ ಹೆಸರಿನಿಂದ ಕರೆಯುವುದು

ಪ್ರಾಪಗ್ಯಾಂಡದ ಮತ್ತೊಂದು ಯಶಸ್ವಿಕರ ತಂತ್ರವು ಸಾಮಾನ್ಯ ಹೆಸರಿನಿಂದ ಕರೆಯುವುದಾಗಿದೆ. ಈ ರೀತಿಯ ಸಾಮಾನ್ಯೀಕರಣವು ನಿಜವಾದ ವಿವಾದಾಂಶದಲ್ಲಿರುವ ಹೆಚ್ಚು ಮಹತ್ವಪೂರ್ಣ ಅಂಶಗಳನ್ನು ಮಂಕಾಗಿಸಿಬಿಡುತ್ತದೆ. ಅವುಗಳನ್ನು ಸಾಮಾನ್ಯವಾಗಿ ಇಡೀ ಜನಸಮೂಹವನ್ನೇ ಹೀನೈಸುವುದಕ್ಕಾಗಿ ಆಗಾಗ್ಗೆ ಉಪಯೋಗಿಸಲಾಗುತ್ತದೆ. ಉದಾಹರಣೆಗೆ, “ಜಿಪ್ಸಿಗಳು [ಅಥವಾ ವಲಸೆಗಾರರು] ಕಳ್ಳರು” ಎಂದು ಹೇಳುವುದನ್ನು ಅನೇಕವೇಳೆ ಯೂರೋಪಿಯನ್‌ ದೇಶಗಳಲ್ಲಿ ಕೇಳಿಸಿಕೊಂಡಿರಬಹುದು. ಆದರೆ ಅದು ನಿಜವೇ?

ಇದರ ಕುರಿತು ರೆಕಾರ್ಡ್‌ಸ್‌ ಸೊಮರೆಟಿಸ್‌ ಎಂಬ ಒಬ್ಬ ಅಂಕಣಗಾರನು ಹೇಳುವುದೇನೆಂದರೆ, ಈ ರೀತಿಯ ಕಲ್ಪನೆಗಳು ಒಂದು ದೇಶದಲ್ಲಿರುವುದಾದರೆ, ಅದು ವಿದೇಶದವರ ಕುರಿತು “ಒಂದು ರೀತಿಯ ಭಯ ಇಲ್ಲವೇ ಕಡು ದ್ವೇಷವನ್ನು ಹಾಗೂ ಅನೇಕವೇಳೆ ಜಾತಿವಾದದ ಕುರಿತು ದ್ವೇಷದ ಉನ್ಮಾದವನ್ನು” ಉಂಟುಮಾಡುತ್ತದೆ. ಆದರೆ, ಅಪರಾಧ ಕೃತ್ಯಗಳನ್ನು ನೋಡುವಾಗ, ಹೆಚ್ಚಿನವೇಳೆ ತಪ್ಪಿತಸ್ಥರು ಸ್ವದೇಶದವರೇ ಆಗಿರುವ ಸಂಭವನೀಯತೆ ಇರುತ್ತದೆ. ಉದಾಹರಣೆಗೆ, ಸೊಮರೆಟಿಸ್‌ ಹೇಳುವ ಪ್ರಕಾರ ಗ್ರೀಸ್‌ ದೇಶದಲ್ಲಿ ಮಾಡಿದ ಸರ್ವೆಗಳು ತೋರಿಸುವುದೇನೆಂದರೆ, “100ರಲ್ಲಿ 96 ಪಾತಕಗಳು [ಗ್ರೀಕರಿಂದಲೇ] ಮಾಡಲ್ಪಡುತ್ತವೆ.” “ಪಾತಕ ಕೃತ್ಯಗಳಿಗೆ ಆರ್ಥಿಕ ಮತ್ತು ಸಾಮಾಜಿಕ ವಿಷಯಗಳು ಕಾರಣವಾಗಿದೆಯೇ ಹೊರತು ಜಾತೀಯತೆಯಲ್ಲ” ಎಂದು ಹೇಳುತ್ತಾರೆ. ಅವರು ಪ್ರಸಾರಮಾಧ್ಯಮವನ್ನು ದೂರುತ್ತಾ ಹೇಳುವುದು, ಪಾತಕ ಕೃತ್ಯಗಳು ನಡೆಯುವಾಗ ಅದನ್ನು ಪ್ರಸಾರಮಾಡುವ ಮಾಧ್ಯಮವು ಕಥೆಯನ್ನು ತಿರುಚುವ ಮೂಲಕ, “ಜನರಲ್ಲಿ ಜಾತೀಯತೆಯನ್ನು ಮತ್ತು ವಿದೇಶಿಯರ ಕುರಿತು ಭಯ ಮತ್ತು ತೀವ್ರ ದ್ವೇಷವನ್ನು ಉದ್ದೇಶಪೂರ್ವಕವಾಗಿ ಬೆಳೆಸುತ್ತಿದೆ.”

ಹೆಸರುಪಟ್ಟಿಯನ್ನು ನೀಡುವುದು

ತಮ್ಮ ಅಭಿಪ್ರಾಯಗಳನ್ನು ಒಪ್ಪದಿರುವ ವ್ಯಕ್ತಿಗಳೊಂದಿಗೆ ಕೆಲವರು, ನಿಜವೇನೆಂದು ಪರೀಕ್ಷಿಸುವ ಬದಲು ಅವರನ್ನು ನಿಂದಿಸುವುದು ಮತ್ತು ಅವರ ನಡತೆಯ ಬಗ್ಗೆ ಅಥವಾ ಅವರ ಉದ್ದೇಶಗಳ ಕುರಿತು ಪ್ರಶ್ನೆಯನ್ನು ಮಾಡುತ್ತಾರೆ. ಕೂಡಲೇ ತಪ್ಪಾದ ಅರ್ಥವನ್ನು ಕೊಡುವ ಮತ್ತು ಸುಲಭವಾಗಿ ಜ್ಞಾಪಕದಲ್ಲಿಟ್ಟುಕೊಳ್ಳಬಹುದಾದ ಒಂದು ಹೆಸರುಪಟ್ಟಿಯನ್ನು ವ್ಯಕ್ತಿಯ ಇಲ್ಲವೇ ವಿಚಾರದ ಅಥವಾ ಆ ಗುಂಪಿನವರ ಮೇಲೆ ಅಂಟಿಸಿಬಿಡುತ್ತಾರೆ. ಅಂತಹ ಹೆಸರುಪಟ್ಟಿಯನ್ನು ಹಚ್ಚಿರುವ ದುರ್ಭಾಷೆಯನ್ನಾಡುವವನು ಕೂಡ ಆ ಪಟ್ಟಿಯು ಹಾಗೇ ಉಳಿಯುವುದೆಂದು ನಂಬುತ್ತಾನೆ. ಆಗ, ವಿಷಯವು ಸರಿಯೋ ತಪ್ಪೋ ಎಂಬುದನ್ನು ಜನರು ಸ್ವತಃ ವಿಚಾರಮಾಡದೆ, ಈಗಾಗಲೇ ಹಚ್ಚಿರುವ ತಪ್ಪಭಿಪ್ರಾಯವನ್ನು ಕೊಡುವ ಹೆಸರುಪಟ್ಟಿಯ ಆಧಾರದ ಮೇಲೆ ವ್ಯಕ್ತಿಯನ್ನೋ ಇಲ್ಲವೇ ವಿಚಾರವನ್ನೋ ತಿರಸ್ಕರಿಸಿಬಿಡುತ್ತಾರೆ. ಆಗ ಹೆಸರುಪಟ್ಟಿಯನ್ನು ನೀಡಿದ ದುರ್ಭಾಷಿಯ ಉದ್ದೇಶವು ಪೂರ್ತಿಯಾದಂತಾಗುತ್ತದೆ.

ಉದಾಹರಣೆಗೆ, ಇತ್ತೀಚಿನ ವರ್ಷಗಳಲ್ಲಿ ಅನೇಕ ಯೂರೋಪ್‌ ಮತ್ತು ಇನ್ನಿತರ ದೇಶಗಳಲ್ಲಿ ಪಂಥದ್ವೇಷದ ಅಲೆಯು ರಭಸದಿಂದ ಬೀಸಿದ ಕಾರಣ, ಈ ಪ್ರವೃತ್ತಿಯು ಅನೇಕರ ಭಾವನೆಗಳನ್ನು ಕೆರಳಿಸಿತು. ಇದು ಶತ್ರುವಿನ ಕುರಿತು ಒಂದು ಕಲ್ಪನಾಚಿತ್ರವನ್ನು ಜನರ ಮನಸ್ಸಿನಲ್ಲಿ ಮೂಡಿಸಿದೆ. ಅಲ್ಪಸಂಖ್ಯಾತ ಧಾರ್ಮಿಕ ಗುಂಪಿನವರ ವಿರುದ್ಧ ಈಗಾಗಲೇ ಇರುವ ಪೂರ್ವಾಗ್ರಹಗಳನ್ನು ಇದು ಇನ್ನೂ ಪುಷ್ಟಿಗೊಳಿಸಿದೆ. ಅನೇಕವೇಳೆ, “ಪಂಥ” ಎಂಬ ಹೆಸರುಪಟ್ಟಿಯು ಸೆಳೆನಡಿಯಾಗಿಬಿಡುತ್ತದೆ. “‘ಪಂಥ’ ಎಂಬ ಪದಕ್ಕೆ ಇನ್ನೊಂದು ಪದ ‘ಪಾಷಂಡ’ ಎಂಬುದಾಗಿದೆ” ಎಂದು 1993ರಲ್ಲಿ ಜರ್ಮನಿಯ ಪ್ರೋಫೆಸರರಾದ ಮಾರ್ಟಿನ್‌ ಕ್ರೇಲೆ ಬರೆದರು. “ಜರ್ಮನಿಯಲ್ಲಿ ಹಿಂದೆ ಪಾಷಂಡಿಯು [ನಾಶವಾಗುವಂತೆ ಖಂಡಿಸಲ್ಪಡುತ್ತಿದ್ದನು.] ಆದರೆ, ಇಂದು ಅವನು ಒಂದುವೇಳೆ ಬೆಂಕಿಯಿಂದ ನಾಶವಾಗದಿದ್ದರೂ . . . ಚಾರಿತ್ರ್ಯವಧೆ ಮಾಡುವ ಮೂಲಕ ಮತ್ತು ಪ್ರತ್ಯೇಕತೆ ಮತ್ತು ಆರ್ಥಿಕವಾಗಿ ನಾಶಮಾಡಲಾಗುತ್ತದೆ.”

ಪ್ರಾಪಗ್ಯಾಂಡದ ವಿಶ್ಲೇಷಣಾ ಸಂಘವು ಗಮನಿಸುವುದೇನೆಂದರೆ, “ಕೆಟ್ಟ ಹೆಸರುಗಳು ಲೋಕದ ಚರಿತ್ರೆಯಲ್ಲಿ ಮತ್ತು ನಮ್ಮ ವೈಯಕ್ತಿಕ ಬೆಳವಣಿಗೆಯಲ್ಲಿ ಹೆಚ್ಚು ಶಕ್ತಿಶಾಲಿಯಾದ ಪಾತ್ರವನ್ನು ವಹಿಸಿವೆ. ಅವು, ಸತ್ಕೀರ್ತಿಯನ್ನು ಹಾಳುಮಾಡಿವೆ . . . [ಜನರನ್ನು] ಜೈಲಿಗೆ ಕಳುಹಿಸಿವೆ ಮತ್ತು ತಮ್ಮ ಜೊತೆ ಮಾನವರನ್ನು ಕೊಚ್ಚಿ ಹಾಕುವುದಕ್ಕಾಗಿ ರಣರಂಗಕ್ಕೆ ಇಳಿಯುವಷ್ಟು ಜನರನ್ನು ಹುಚ್ಚರನ್ನಾಗಿ ಮಾಡಿವೆ.”

ಭಾವನೆಗಳನ್ನು ಸ್ವಪ್ರಯೋಜನಕ್ಕಾಗಿ ಬಳಸಿಕೊಳ್ಳುವುದು

ವಾಸ್ತವದಲ್ಲಿ ನಿಜಾಂಶಗಳನ್ನು ಪರಿಶೀಲಿಸಿ ನೋಡುವಾಗ ಅಥವಾ ಯಾವುದೇ ವಿವಾದದಲ್ಲಿರುವ ತರ್ಕವನ್ನು ಪರಿಶೀಲಿಸುವಾಗ, ಭಾವನೆಗಳಿಗೆ ಯಾವುದೇ ಪ್ರಾಮುಖ್ಯತೆ ಇರುವುದಿಲ್ಲ. ಆದರೂ, ಒಂದು ವಿಷಯವನ್ನು ಮನವೊಪ್ಪಿಸಬೇಕಾದರೆ ಭಾವನೆಗಳು ಬಹುಮುಖ್ಯ ಪಾತ್ರವನ್ನು ವಹಿಸುತ್ತವೆ. ಒಬ್ಬ ಲಲಿತಕಲಾ ಪ್ರೇಮಿಯು ತನ್ನ ವಾದ್ಯವನ್ನು ಹೇಗೆ ನಿಪುಣತೆಯಿಂದ ನುಡಿಸುವನೋ, ಹಾಗೆಯೇ ಅನುಭವಸ್ಥ ಪ್ರಾಪಗ್ಯಾಂಡ ಮಾಡುವವನು ಕೂಡ ಬಹಳ ನಿಪುಣತೆಯಿಂದ ತಮ್ಮ ಭಾವನಾತ್ಮಕ ಕರೆಗಳಿಗೆ ಜನರು ಸ್ಪಂದಿಸುವಂತೆ ಮಾಡಬಲ್ಲನು.

ಉದಾಹರಣೆಗೆ, ಭಯ ಎಂಬುದು ಒಂದು ಭಾವನೆಯಾಗಿದೆ. ಅದು ವಿವೇಚನಾಶಕ್ತಿಯನ್ನು ಮಬ್ಬಾಗಿಸುವುದು. ಮತ್ಸರದಂತೆಯೇ, ಭಯವು ಕೂಡ ಪರಿಣಾಮಕಾರಿಯಾಗಿ ಕೆಲಸಮಾಡುವಂತೆ ಮಾಡಬಹುದು. ಉದಾಹರಣೆಗೆ, ಫೆಬ್ರವರಿ 15, 1999ರಂದು ಗ್ಲೋಬ್‌ ಆ್ಯಂಡ್‌ ಮೆಯ್ಲ್‌ ಎಂಬ ಕೆನಡಾದ ವಾರ್ತಾಪತ್ರಿಕೆಯಲ್ಲಿ, ಮಾಸ್ಕೋದಲ್ಲಿ ಸಂಭವಿಸಿದ ಒಂದು ಘಟನೆಯ ಕುರಿತು ಈ ರೀತಿಯಾಗಿ ಬರೆದಿತ್ತು: “ಕಳೆದವಾರ ಮಾಸ್ಕೋದಲ್ಲಿ ಮೂವರು ಹುಡುಗಿಯರು ಆತ್ಮಹತ್ಯೆ ಮಾಡಿಕೊಂಡಾಗ, ಕೂಡಲೇ ರಷ್ಯಾದ ಪ್ರಸಾರಮಾಧ್ಯಮವು ಆ ಹುಡುಗಿಯರು ಮತಭ್ರಾಂತರಾದ ಯೆಹೋವನ ಸಾಕ್ಷಿಗಳ ಹಿಂಬಾಲಕರಾಗಿದ್ದರು ಎಂದು ಸೂಚಿಸಿತ್ತು.” ಇಲ್ಲಿ, “ಮತಭ್ರಾಂತ” ಎಂಬ ಪದವನ್ನು ಗಮನಿಸಿ. ಸಾಮಾನ್ಯವಾಗಿ, ಯಾವುದೇ ಮತಭ್ರಾಂತ ಧಾರ್ಮಿಕ ಸಂಸ್ಥೆಯ ಕುರಿತು ಜನರಿಗೆ ಒಂದು ರೀತಿಯ ಭಯವಿರುತ್ತದೆ. ಏಕೆಂದರೆ, ಆ ರೀತಿಯ ಸಂಸ್ಥೆಗಳು ಯುವಜನರನ್ನು ಆತ್ಮಹತ್ಯೆಮಾಡಿಕೊಳ್ಳುವ ಸ್ಥಿತಿಗೆ ತಳ್ಳುತ್ತವೆ ಎಂಬ ಭಾವನೆ ಜನರಲ್ಲಿರುತ್ತದೆ. ಹಾಗಾದರೆ, ಈ ಹುಡುಗಿಯರಿಗೆ ನಿಜವಾಗಿಯೂ ಯೆಹೋವ ಸಾಕ್ಷಿಗಳೊಂದಿಗೆ ಯಾವುದೇ ರೀತಿಯಲ್ಲಿ ಸಂಬಂಧವಿತ್ತೇ?

ಗ್ಲೋಬ್‌ ಪತ್ರಿಕೆಯು ಮುಂದುವರಿಸುತ್ತಾ ಹೇಳಿದ್ದು: “ಆದರೆ ಪೋಲಿಸರು ನಂತರ ಹೇಳಿದ್ದೇನೆಂದರೆ, ಆ ಹುಡುಗಿಯರಿಗೂ [ಯೆಹೋವನ ಸಾಕ್ಷಿಗಳಿಗೂ] ಯಾವ ಸಂಬಂಧವೂ ಇಲ್ಲ. ಆದರೆ ಅಷ್ಟರೊಳಗಾಗಿ, ಮಾಸ್ಕೋದ ದೂರದರ್ಶನದ ಚ್ಯಾನೆಲೊಂದು ಈಗಾಗಲೇ ಆ ಪಂಗಡದವರ ಮೇಲೆ ಒಂದು ಹೊಸ ಆಕ್ರಮಣವನ್ನು ಮಾಡಿಬಿಟ್ಟಿತ್ತು. ಹೇಗೆಂದರೆ, ಸಾವಿರಾರು ಸಾಕ್ಷಿಗಳು ನಾಸಿ ಮರಣ ಶಿಬಿರಗಳಲ್ಲಿ ಬಲಿಯಾಗಿದ್ದರು ಎಂಬುದಕ್ಕೆ ಇತಿಹಾಸದಲ್ಲಿ ಪುರಾವೆಯಿದ್ದರೂ ಸಹ ಯೆಹೋವನ ಸಾಕ್ಷಿಗಳು ನಾಸಿ ಜರ್ಮನಿಯ ಅಡಾಲ್ಫ್‌ ಹಿಟ್ಲರ್‌ನೊಂದಿಗೆ ಸಹಕರಿಸಿದ್ದರು ಎಂಬುದಾಗಿ ವೀಕ್ಷಕರಿಗೆ ಹೇಳಿತ್ತು.” ಇದರ ಪರಿಣಾಮವೇನು? ಸಾಕ್ಷಿಗಳ ಕುರಿತು ಸರಿಯಾದ ತಿಳುವಳಿಕೆಯಿಲ್ಲದ ಹಾಗೂ ಭಯಭೀತರಾಗಿರಸಾಧ್ಯವಿರುವ ಸಾರ್ವಜನಿಕರ ಮನಸ್ಸಿನಲ್ಲಿ, ಯೆಹೋವನ ಸಾಕ್ಷಿಗಳು ಆತ್ಮಹತ್ಯೆಯನ್ನು ಮಾಡಿಕೊಳ್ಳುವ ಕುಪಂಥ ಇಲ್ಲವೇ ನಾಸಿಗಳ ಸಹಕಾರಿಗಳು ಎಂಬ ಅಭಿಪ್ರಾಯವೇ ಇರುತ್ತದೆ!

ಮತ್ಸರ ಇನ್ನೊಂದು ಶಕ್ತಿಶಾಲಿಯಾದ ಭಾವನೆಯಾಗಿದೆ. ಇದನ್ನು ಕೂಡ ಪ್ರಾಪಗ್ಯಾಂಡ ಮಾಡುವವರು ಸ್ವಪ್ರಯೋಜನಕ್ಕಾಗಿ ಉಪಯೋಗಿಸಿಕೊಂಡಿದ್ದಾರೆ. ಮತ್ಸರವೆಂಬ ಜ್ವಾಲೆಯನ್ನು ಹೆಚ್ಚಿಸಲು ವಿಶೇಷವಾಗಿ ಗೂಢಾರ್ಥದ ಭಾಷೆಯು ಹೆಚ್ಚು ಪರಿಣಾಮಕಾರಿಯಾಗಿದೆ. ಇಂದು ಅಶ್ಲೀಲವಾದ ಶಬ್ದಗಳಿಗೆ ಅಭಾವವೇ ಇಲ್ಲವೆಂದು ಕಾಣುತ್ತದೆ. ಅಂಥ ಶಬ್ದಗಳನ್ನು ಉಪಯೋಗಿಸುವಾಗ ಅವು ಒಂದು ವಿಶಿಷ್ಟ ಜನಾಂಗ, ಕುಲ ಅಥವಾ ಧರ್ಮದ ಗುಂಪಿನವರ ಮೇಲೆ ದ್ವೇಷವನ್ನು ಕಾರುವಂತೆ ಮಾಡುತ್ತವೆ.

ಪ್ರಾಪಗ್ಯಾಂಡ ಮಾಡುವ ಕೆಲವರು ಪ್ರತಿಷ್ಠೆಯನ್ನು ಪರಿಣಾಮಕಾರಿಯಾಗಿ ಸದುಪಯೋಗಿಸಿಕೊಳ್ಳುತ್ತಾರೆ. ಅನೇಕವೇಳೆ ಪ್ರತಿಷ್ಠೆಯನ್ನು ಕೆಣಕುವಂತಹ ಕರೆಗಳನ್ನು ಗಮನಿಸಬಹುದು. ಹೇಗೆಂದರೆ, “ಎಂಥ ಬುದ್ಧಿವಂತರಿಗೂ ಗೊತ್ತಿರುವ ಹಾಗೆ . . .” ಅಥವಾ, “ವಿದ್ಯಾವಂತರಾದ ಎಂಥವರಿಗೂ ಅದು ಖಂಡಿತ ಅರ್ಥವಾಗದೇ ಇರಲು ಸಾಧ್ಯವಿಲ್ಲ . . . ” ನಮ್ಮ ಪ್ರತಿಷ್ಠೆಯನ್ನು ಕೆಣಕುವ ಈ ಕರೆಯು, ಮೂರ್ಖರಾಗಿ ತೋರಿಬಿಡುವೆವೋ ಎಂಬ ಭಯದ ಮೇಲೆ ಪರಿಣಾಮಕಾರಿಯಾಗಿ ಕೆಲಸಮಾಡುವುದೇ ಇದರ ಹಿಂದಿರುವ ಗುಟ್ಟಾಗಿದೆ. ಮನವೊಪ್ಪಿಸುವ ಪರಿಣತರಿಗೆ ಅದು ಚೆನ್ನಾಗಿ ಗೊತ್ತಿರುತ್ತದೆ.

ಘೋಷಣೆಗಳು ಮತ್ತು ಚಿಹ್ನೆಗಳು

ಘೋಷಣೆಗಳು ಅಸ್ಪಷ್ಟ ಹೇಳಿಕೆಗಳಾಗಿವೆ. ಅಭಿಪ್ರಾಯಗಳನ್ನು ಹಾಗೂ ಧ್ಯೇಯಗಳನ್ನು ವ್ಯಕ್ತಪಡಿಸುವುದಕ್ಕಾಗಿ ಅವುಗಳನ್ನು ಮುಖ್ಯವಾಗಿ ಉಪಯೋಗಿಸಲಾಗುತ್ತದೆ. ಈ ಘೋಷಣೆಗಳು ಮತ್ತು ಚಿಹ್ನೆಗಳು ಅಸ್ಪಷ್ಟವಾಗಿರುವುದರಿಂದ ಅವುಗಳನ್ನು ಒಪ್ಪಿಕೊಳ್ಳುವುದು ಸುಲಭವಾಗಿರುತ್ತದೆ.

ಉದಾಹರಣೆಗೆ, ರಾಷ್ಟ್ರದ ಸಂದಿಗ್ಧ ಸಮಯಗಳಲ್ಲಿ ಅಥವಾ ಯುದ್ಧದ ಸಮಯಗಳಲ್ಲಿ, ಚಳುವಳಿಗಾರರು “ಸರಿಯೋ ತಪ್ಪೋ, ಇದು ನನ್ನ ದೇಶ,” “ತಾಯ್ನಾಡು, ಧರ್ಮ, ಕುಟುಂಬ,” ಅಥವಾ “ಸ್ವಾತಂತ್ರ್ಯ ಇಲ್ಲವೇ ಮರಣ” ಎಂಬ ಘೋಷಣೆಗಳನ್ನು ಉಪಯೋಗಿಸಬಹುದು. ಆದರೆ, ಯುದ್ಧ ಅಥವಾ ಬಿಕ್ಕಟ್ಟಿಗೆ ನಿಜವಾದ ಕಾರಣಗಳೇನು ಎಂಬುದು ಎಷ್ಟು ಮಂದಿ ಜನರಿಗೆ ಗೊತ್ತಿರುತ್ತದೆ? ಅಥವಾ ಅನೇಕವೇಳೆ ಏನು ಹೇಳಲಾಗುತ್ತದೋ ಅದನ್ನು ಕಣ್ಣುಮುಚ್ಚಿಕೊಂಡು ಜನರು ಸ್ವೀಕರಿಸಿಬಿಡುವುದಿಲ್ಲವೇ?

ಮೊದಲನೇ ಮಹಾಯುದ್ಧದ ಕುರಿತು ಬರೆಯುತ್ತಿದ್ದ ಸಮಯದಲ್ಲಿ ವಿನ್‌ಸ್ಟನ್‌ ಚರ್ಚಿಲ್‌ ಹೇಳಿದ್ದು: “ಈ ಶಾಂತಿಯುತರಾದ ರೈತರು ಹಾಗೂ ಕಾರ್ಮಿಕರ ದೊಡ್ಡ ಜನಸಮೂಹವನ್ನು, ಒಬ್ಬರನ್ನೊಬ್ಬರು ಕಿತ್ತು ಹರಿದುಹಾಕಿಕೊಳ್ಳುವಂತೆ ಮಾಡುವ ಒಂದು ಶಕ್ತಿಶಾಲಿಯಾದ ದೊಡ್ಡ ಪಡೆಯನ್ನಾಗಿ ಮಾರ್ಪಡಿಸಲು ಕೇವಲ ಒಂದು ಸಂಜ್ಞೆಯಷ್ಟೇ ಸಾಕು.” ಅವರು ಮುಂದೆ ಇದರ ಕುರಿತು ಹೇಳುವುದೇನೆಂದರೆ, ಯಾವುದೇ ಒಂದು ವಿಷಯವನ್ನು ಮಾಡು ಎಂದು ಹೇಳಿದಾಗ, ಅಧಿಕಾಂಶ ಜನಸಾಮಾನ್ಯರು ಸ್ವಲ್ಪವೂ ಯೋಚಿಸದೇ ಅದನ್ನು ಮಾಡಿಬಿಡುತ್ತಾರೆ.

ಪ್ರಾಪಗ್ಯಾಂಡ ಮಾಡುವವನು ಕೂಡ ವೈವಿಧ್ಯಮಯವಾದ ಚಿಹ್ನೆಗಳನ್ನು ಮತ್ತು ಸಂಕೇತಗಳನ್ನು ಇಟ್ಟುಕೊಂಡಿರುತ್ತಾನೆ. ಅವುಗಳ ಮೂಲಕ ತನ್ನ ಸಂದೇಶವನ್ನು ಜನರಿಗೆ ತಿಳಿಸುತ್ತಾನೆ. ಉದಾಹರಣೆಗೆ, ಆಕಾಶದಲ್ಲಿ 21 ಗುಂಡಿನ ಅಭಿವಂದನಾರ್ಥ, ಮಿಲಿಟರಿ ಸಲ್ಯೂಟ್‌ (ಪ್ರಣಾಮ), ಧ್ವಜ ಮುಂತಾದವು. ಹೆತ್ತವರ ಮೇಲಿರುವ ಪ್ರೀತಿಯನ್ನು ಕೂಡ ಸ್ವಾರ್ಥಕ್ಕಾಗಿ ಉಪಯೋಗಿಸಿಕೊಳ್ಳಬಹುದಾಗಿದೆ. ಆದುದರಿಂದ, ತಾಯ್ನಾಡು, ಜನ್ಮಭೂಮಿ, ಮೂಲ ಚರ್ಚ್‌ ಎಂಬಂಥವು ಜಾಣ ಪ್ರಚೋದಕರ ಬಳಿಯಿರುವ ಅಮೂಲ್ಯವಾದ ಸಾಧನಗಳಾಗಿವೆ.

ಕುತಂತ್ರದಿಂದ ಮಾಡಲ್ಪಡುವ ಪ್ರಾಪಗ್ಯಾಂಡದ ಕಲೆಯು ಆಲೋಚನೆಯನ್ನು ಬಲಹೀನಗೊಳಿಸುತ್ತದೆ. ಅಷ್ಟುಮಾತ್ರವಲ್ಲ, ಸ್ಪಷ್ಟವಾಗಿ ಆಲೋಚಿಸದಂತೆಯೂ ವಿವೇಚಿಸದಂತೆಯೂ ಮಾಡಬಹುದು ಹಾಗೂ ವ್ಯಕ್ತಿಗಳನ್ನು ಸಂಪೂರ್ಣವಾಗಿ ಮಾರ್ಪಡಿಸುವುದು. ಹಾಗಾದರೆ ನೀವು ಅಂಥ ಕುತಂತ್ರಗಳಿಂದ ಹೇಗೆ ದೂರವಿರಬಲ್ಲಿರಿ?

[ಪುಟ 8ರಲ್ಲಿರುವ ಸಂಕ್ಷಿಪ್ತ ವಿವರಣೆ]

ಕುತಂತ್ರದಿಂದ ಮಾಡಲ್ಪಡುವ ಪ್ರಾಪಗ್ಯಾಂಡದ ಕಲೆಯು ಆಲೋಚನೆಯನ್ನು ಬಲಹೀನಗೊಳಿಸುತ್ತದೆ ಮತ್ತು ಸ್ಪಷ್ಟವಾಗಿ ಆಲೋಚಿಸದಂತೆಯೂ ಮಾಡುವುದು

[ಪುಟ 7ರಲ್ಲಿರುವ ಚೌಕ/ಚಿತ್ರಗಳು]

ಯೆಹೋವನ ಸಾಕ್ಷಿಗಳ ಕೆಲಸವು ಪ್ರಾಪಗ್ಯಾಂಡ ಮಾಡುವ ಕೆಲಸವಾಗಿದೆಯೇ?

ಯೆಹೋವನ ಸಾಕ್ಷಿಗಳ ಕೆಲಸವು ಜಯನಿಸ್ಟರ (ಯೆಹೂದ್ಯ ಸ್ವಾಸ್ಥ್ಯ ಚಳುವಳಿಯ) ಪ್ರಾಪಗ್ಯಾಂಡ ಕೆಲಸವೆಂದು ಕೆಲವು ವಿರೋಧಿಗಳು ಅವರ ಮೇಲೆ ಅಪವಾದವನ್ನು ಹೊರಿಸಿದ್ದಾರೆ. ಇನ್ನೂ ಕೆಲವರು, ಸಾಕ್ಷಿಗಳ ಸಾರುವ ಕೆಲಸವು ಕಮ್ಯುನಿಸಮ್‌ ಅನ್ನು ಉತ್ತೇಜಿಸುತ್ತದೆ ಎಂದು ಆಪಾದಿಸಿದ್ದಾರೆ. ಇನ್ನಿತರರು, ಸಾಕ್ಷಿಗಳ ಕೆಲಸವು “ಅಮೆರಿಕದ ಸಾಮ್ರಾಜ್ಯಶಾಹಿಯ” ಹಿತಾಸಕ್ತಿಗಳನ್ನು ಮತ್ತು ವಿಚಾರಗಳನ್ನು ಪ್ರಚಾರಮಾಡುವುದೇ ಆಗಿದೆ ಎಂದು ಪ್ರತಿಪಾದಿಸುತ್ತಾರೆ. ಸಾಕ್ಷಿಗಳು ಅರಾಜಕತೆಯ ಬೆಂಬಲಿಗರಾಗಿದ್ದಾರೆ ಮತ್ತು ಅವರು ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಅಥವಾ ಕಾನೂನು ವ್ಯವಸ್ಥೆಯಲ್ಲಿ ಅವ್ಯವಸ್ಥೆಯನ್ನು ಉಂಟುಮಾಡಲು ಜನರನ್ನು ಪ್ರೇರಿಸುತ್ತಿದ್ದಾರೆ ಎಂದು ಪ್ರತಿಪಾದಿಸುವವರೂ ಇದ್ದಾರೆ. ಪರಸ್ಪರ ವಿರುದ್ಧವಾಗಿರುವ ಈ ಎಲ್ಲಾ ಅಪವಾದಗಳು ನಿಜವಾಗಿರಲು ಖಂಡಿತ ಸಾಧ್ಯವಿಲ್ಲ ಎಂಬುದು ಸ್ಪಷ್ಟ.

ಈ ಮೇಲೆ ಹೇಳಲ್ಪಟ್ಟಿರುವ ಅಪವಾದಗಳ ಕುರಿತು ನೇರವಾಗಿ ಹೇಳುವುದಾದರೆ, ಅವುಗಳಲ್ಲಿ ಯಾವುದೂ ಯೆಹೋವನ ಸಾಕ್ಷಿಗಳಿಗೆ ಅನ್ವಯಿಸುವುದಿಲ್ಲ. ಸಾಕ್ಷಿಗಳು ಮಾಡುತ್ತಿರುವ ಕೆಲಸವು, ಯೇಸು ತನ್ನ ನಂಬಿಗಸ್ತ ಶಿಷ್ಯರಿಗೆ ನೀಡಿದ ಆಜ್ಞೆಗೆ ವಿಧೇಯತೆಯೇ ಆಗಿದೆ. ಆ ಆಜ್ಞೆಯು, “ಭೂಲೋಕದ ಕಟ್ಟಕಡೆಯ ವರೆಗೂ ನೀವು ನನ್ನ ಸಾಕ್ಷಿಗಳಾಗಿರಬೇಕು.” (ಅ. ಕೃತ್ಯಗಳು 1:8, NW) ಆದುದರಿಂದ, ಸಾಕ್ಷಿಗಳ ಕೆಲಸವು ಕೇವಲ ಸ್ವರ್ಗೀಯ ರಾಜ್ಯದ ಮೇಲೆಯೇ ಸಂಪೂರ್ಣವಾಗಿ ಕೇಂದ್ರಿಕೃತವಾಗಿರುವ ಶುಭ ಸಮಾಚಾರವಾಗಿದೆ. ಆ ರಾಜ್ಯವು ಇಡೀ ಭೂಮಿಗೆ ಶಾಂತಿಯನ್ನು ತರುವುದಕ್ಕಾಗಿ ದೇವರು ಉಪಯೋಗಿಸುವ ಸಾಧನವಾಗಿದೆ.—ಮತ್ತಾಯ 6:10, 24:14.

ಯೆಹೋವನ ಸಾಕ್ಷಿಗಳನ್ನು ಸೂಕ್ಷ್ಮವಾಗಿ ಗಮನಿಸಿರುವವರು, ಯಾವುದೇ ದೇಶದ ಶಿಸ್ತು ಮತ್ತು ಶಾಂತಿಯನ್ನು ಕದಡುವವರಾಗಿದ್ದಾರೆ ಎಂಬುದಕ್ಕೆ ಅವರ ಮೇಲೆ ಇದುವರೆಗೂ ಯಾವುದೇ ಪುರಾವೆಯನ್ನು ಕಂಡುಕೊಂಡಿಲ್ಲ.

ಅನೇಕ ಪತ್ರಿಕೋದ್ಯಮಿಗಳು, ನ್ಯಾಯಾಧೀಶರು ಮತ್ತು ಇನ್ನಿತರರು, ಸಾಕ್ಷಿಗಳು ತಾವು ಜೀವಿಸುತ್ತಿರುವ ಸಮಾಜಕ್ಕಾಗಿ ಸಲ್ಲಿಸಿರುವ ಉಪಯುಕ್ತ ಸೇವೆಗಳಿಗಾಗಿ ಯೆಹೋವನ ಸಾಕ್ಷಿಗಳನ್ನು ಹೊಗಳಿದ್ದಾರೆ. ಕೆಲವು ಉದಾಹರಣೆಗಳನ್ನು ಗಮನಿಸಿ. ಒಬ್ಬ ವರದಿಗಾರ್ತಿಯು ದಕ್ಷಿಣ ಯೂರೋಪಿನಲ್ಲಿ ಯೆಹೋವನ ಸಾಕ್ಷಿಗಳ ಸಮ್ಮೇಳನಕ್ಕೆ ಹಾಜರಾಗಿದ್ದಳು. ಆ ಬಳಿಕ ಅವಳು, “ಈ ಜನರು ಹೆಚ್ಚು ಅನ್ಯೋನ್ಯವಾದ ಕುಟುಂಬವನ್ನು ಹೊಂದಿರುವ ಜನರಾಗಿದ್ದಾರೆ. ಅಷ್ಟೇ ಅಲ್ಲದೆ, ಬೇರೆಯವರಿಗೆ ಹಾನಿಯನ್ನು ಉಂಟುಮಾಡದಿರಲು, ಅವರನ್ನು ಪ್ರೀತಿಸಲು ಹಾಗೂ ತಮ್ಮ ಮನಸ್ಸಾಕ್ಷಿಗನುಸಾರ ಜೀವಿಸುವಂತೆ ಕಲಿಸಲ್ಪಟ್ಟಿದ್ದಾರೆ” ಎಂದು ಹೇಳಿದಳು.

ಒಂದು ಸಮಯದಲ್ಲಿ ಸಾಕ್ಷಿಗಳ ಕುರಿತು ಒಳ್ಳೆಯ ಅಭಿಪ್ರಾಯವಿರದಿದ್ದ ಇನ್ನೊಬ್ಬ ಪತ್ರಿಕೋದ್ಯಮಿಯು ಹೇಳಿದ್ದು: “ಸಾಕ್ಷಿಗಳು ಆದರ್ಶ ಜೀವನವನ್ನು ನಡೆಸುತ್ತಾರೆ. ನೈತಿಕವಾಗಿಯೂ ಹಾಗೂ ನ್ಯಾಯವಾಗಿಯೂ ಇರುವ ಮಟ್ಟಗಳನ್ನು ಅವರು ಎಂದೂ ಮೀರುವುದಿಲ್ಲ.” ರಾಜವಿಜ್ಞಾನಿಯೊಬ್ಬರು ಅದೇ ರೀತಿಯಲ್ಲಿ ಯೆಹೋವನ ಸಾಕ್ಷಿಗಳ ಕುರಿತಾಗಿ ಹೇಳಿಕೆ ನೀಡಿದರು: “ಇತರ ಜನರೊಂದಿಗೆ ಅವರು ಹೆಚ್ಚು ದಯಾಪರರೂ ಪ್ರೀತಿಪರರೂ ಹಾಗೂ ನಮ್ರತೆಯಿಂದಲೂ ವರ್ತಿಸುವ ಜನರಾಗಿದ್ದಾರೆ.”

ಅಧಿಕಾರಕ್ಕೆ ಅಧೀನತೆಯನ್ನು ತೋರಿಸುವುದು ನ್ಯಾಯಬದ್ಧವಾಗಿದೆ ಎಂಬುದನ್ನು ಸಾಕ್ಷಿಗಳು ಕಲಿಸುತ್ತಾರೆ. ನಿಯಮಬದ್ಧ ನಾಗರಿಕರಾಗಿರುವ ಅವರು, ಬೈಬಲಿನ ಮಟ್ಟಗಳಾದ ಪ್ರಾಮಾಣಿಕತೆ, ಸತ್ಯತೆ ಹಾಗೂ ಶುದ್ಧತೆಯನ್ನು ಪಾಲಿಸುತ್ತಾರೆ. ಅವರು ತಮ್ಮ ಕುಟುಂಬ ಸದಸ್ಯರಲ್ಲಿ ಉತ್ತಮ ನೈತಿಕ ನಿಯಮಗಳನ್ನು ನಾಟಿಸುತ್ತಾರೆ. ಹಾಗೂ ಇತರರು ಕೂಡ ಅದನ್ನು ಹೇಗೆ ಮಾಡಬಹುದೆಂಬುದನ್ನು ಕಲಿಸುತ್ತಾರೆ. ಅವರು ಶಾಂತಿಭಂಗ ಮಾಡುವ ಪ್ರದರ್ಶನಗಳಲ್ಲಿ ಇಲ್ಲವೇ ರಾಜಕೀಯ ಕ್ರಾಂತಿಗಳಲ್ಲಿ ಒಳಗೂಡುವುದಿಲ್ಲ. ಬದಲಿಗೆ, ಎಲ್ಲರೊಂದಿಗೂ ಅವರು ಶಾಂತಿಯಿಂದ ಜೀವಿಸುತ್ತಾರೆ. ಯೆಹೋವನ ಸಾಕ್ಷಿಗಳು ಸರ್ಕಾರದಲ್ಲಿರುವ ಉನ್ನತ ಅಧಿಕಾರಿಗಳ ನಿಯಮಗಳಿಗೆ ವಿಧೇಯತೆಯನ್ನು ತೋರಿಸುವುದರಲ್ಲಿ ಆದರ್ಶಪ್ರಾಯರಾಗಿದ್ದಾರೆ. ಆದರೆ, ಭೂಮಿಯ ಮೇಲೆ ಶಾಂತಿ ಮತ್ತು ನೀತಿಯುತ ಸರ್ಕಾರದ ಸ್ಥಾಪನೆಯನ್ನು ಮಾಡುವವರೆಗೂ ಅತ್ಯುನ್ನತ ಅಧಿಕಾರಿಯಾಗಿರುವ, ಸಾರ್ವಭೌಮನಾದ ಯೆಹೋವನಿಗಾಗಿ ಕಾಯುತ್ತಾರೆ.

ಆದರೆ ಅದೇ ಸಮಯದಲ್ಲಿ, ಯೆಹೋವನ ಸಾಕ್ಷಿಗಳ ಕೆಲಸವು ಶೈಕ್ಷಣಿಕ ಕೆಲಸವಾಗಿದೆ. ಬೈಬಲನ್ನು ಆಧಾರವಾಗಿಟ್ಟುಕೊಂಡು, ಅವರು ಲೋಕದಾದ್ಯಂತ ಜನರಿಗೆ ಬೈಬಲಿನ ತತ್ವಗಳನ್ನು ವಿವೇಚಿಸಿ ನೋಡುವಂತೆ ಕಲಿಸುತ್ತಾರೆ. ಮತ್ತು ಜನರು ಉತ್ತಮವಾದ ನಡತೆಯ ಮಟ್ಟಗಳನ್ನು ಹಾಗೂ ನೈತಿಕ ಸಮಗ್ರತೆಯನ್ನು ಬೆಳೆಸಿಕೊಳ್ಳುವಂತೆ ಸಹಾಯಮಾಡುತ್ತಾರೆ. ಕುಟುಂಬ ಜೀವನವನ್ನು ಸುಧಾರಿಸುವ ಮೌಲ್ಯಗಳನ್ನು ಜನರು ಕಲಿತುಕೊಳ್ಳುವಂತೆ ಉತ್ತೇಜಿಸುತ್ತಾರೆ. ಹಾಗೂ ಯುವಜನರಿಗಿರುವ ತಮ್ಮದೇ ಆದ ಸಮಸ್ಯೆಗಳನ್ನು ನಿಭಾಯಿಸಲು ಅವರಿಗೆ ಸಹಾಯಮಾಡುತ್ತಾರೆ. ಜನರು ಕೆಟ್ಟ ಚಟಗಳನ್ನು ಬಿಟ್ಟುಬಿಡುವಂತೆ ಹಾಗೂ ಇತರರೊಂದಿಗೆ ಹೊಂದಿಕೊಂಡು ಹೋಗುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವಂತೆ ಸಹ ಸಹಾಯಮಾಡುತ್ತಾರೆ. ಅಂಥ ಒಂದು ಕೆಲಸವನ್ನು “ಪ್ರಾಪಗ್ಯಾಂಡ” ಎಂದು ಹೆಸರಿಸಲು ಸಾಧ್ಯವೇ ಇಲ್ಲ. ಇದರ ಕುರಿತು ವರ್ಲ್ಡ್‌ ಬುಕ್‌ ಎನ್‌ಸೈಕ್ಲೊಪೀಡಿಯ ಹೇಳುವುದೇನೆಂದರೆ, ವಿಚಾರಗಳು ಎಲ್ಲಿ ಮುಕ್ತವಾಗಿ ವಿನಿಮಯವಾಗುತ್ತವೋ ಅಲ್ಲಿ “ಪ್ರಾಪಗ್ಯಾಂಡವು ಶಿಕ್ಷಣಕ್ಕಿಂತ ಭಿನ್ನವಾಗಿರುತ್ತದೆ.”

[ಚಿತ್ರಗಳು]

ಯೆಹೋವನ ಸಾಕ್ಷಿಗಳ ಪ್ರಕಾಶನಗಳು ಕುಟುಂಬ ಮೌಲ್ಯಗಳನ್ನು ಹಾಗೂ ಉಚ್ಚ ನೈತಿಕ ಮಟ್ಟಗಳನ್ನು ಜನರು ಕಲಿಯುವಂತೆ ಉತ್ತೇಜಿಸುತ್ತವೆ

[ಪುಟ 5ರಲ್ಲಿರುವ ಚಿತ್ರ]

ಯುದ್ಧ ಮತ್ತು ಧೂಮಪಾನವನ್ನು ಉತ್ತೇಜಿಸುವ ಪ್ರಾಪಗ್ಯಾಂಡವು ಅಸಂಖ್ಯಾತರ ಮರಣಕ್ಕೆ ಕಾರಣವಾಗಿದೆ