ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಅತಿ ಸುಂದರ ಅರಣ್ಯವಾಸಿ”

“ಅತಿ ಸುಂದರ ಅರಣ್ಯವಾಸಿ”

“ಅತಿ ಸುಂದರ ಅರಣ್ಯವಾಸಿ”

ಸ್ವೀಡನಿನ ಎಚ್ಚರ! ಸುದ್ದಿಗಾರರಿಂದ

ಜೂನ್‌ ತಿಂಗಳ ಒಂದು ದಿನ, ನಾನು ಅದನ್ನು ಜೀವಿತದಲ್ಲಿಯೇ ಪ್ರಥಮ ಬಾರಿ ನೋಡಿದೆ. ಅದನ್ನು ಕೆಲವರು “ಅತಿ ಸುಂದರ ಅರಣ್ಯವಾಸಿ” ಎಂದು ಕರೆಯುತ್ತಾರೆ. ಇದು ಬೂದುಬಣ್ಣದ ದೊಡ್ಡ ಗೂಬೆಯೇ. ಕೆಲವೊಮ್ಮೆ ಅದನ್ನು ಲೇಪ್‌ಲ್ಯಾಂಡ್‌ ಗೂಬೆ ಎಂದು ಸಹ ಕರೆಯಲಾಗುತ್ತದೆ.

ಈ ಮಂತ್ರಮುಗ್ಧಗೊಳಿಸುವ ಬೃಹದಾಕಾರದ ಗೂಬೆಯು ಫಿನ್ಲೆಂಡ್‌, ಉತ್ತರ ಸ್ವೀಡನ್‌ ಹಾಗೂ ದೂರದ ಪೂರ್ವದಿಕ್ಕಿನ ಸೈಬೀರಿಯ, ಅಲಾಸ್ಕ ಮತ್ತು ಕೆನಡದಲ್ಲಿ ವಾಸಿಸುತ್ತದೆ. ಇದು ಎಲೆಮರೆಯ ಕಾಯಿಯಂತೆ ಇರಲು ಇಷ್ಟಪಡುತ್ತದೆ ಮತ್ತು ಅದರ ಗೂಡು ಎಲ್ಲಿದೆ ಎಂಬುದು ನಿಮಗೆ ಗೊತ್ತಿರದಿದ್ದಲ್ಲಿ, ಅದನ್ನು ಕಂಡುಕೊಳ್ಳುವುದು ಬಹಳ ಕಷ್ಟ. ಆದರೆ ನೀವೇನಾದರೂ ಗೂಡನ್ನು ನೋಡುವಲ್ಲಿ, ಅಲ್ಲಿ ಗೂಬೆಯು ಸ್ವಲ್ಪವೂ ಭಯವಿಲ್ಲದೆ ಕುಳಿತಿರುವುದನ್ನು ನೀವು ಕಾಣುವಿರಿ.

ಬೇಟೆಗಾರನ ಬಗ್ಗೆ ಅಧ್ಯಯನ

ಆಹಾರವನ್ನು ಹುಡುಕುತ್ತಾ ಹೋದ ಒಂದು ಗಂಡು ಲೇಪ್‌ಲ್ಯಾಂಡ್‌ ಗೂಬೆಯ ಬಗ್ಗೆ ನಾನು ಅಧ್ಯಯನಮಾಡಲು ಶಕ್ತನಾದೆ. ಅದು ಥಟ್ಟನೇ ಮರದ ರೆಂಬೆಯಿಂದ ಹಾರಿ, ಇಲಿಯೊಂದನ್ನು ಹಿಡಿಯಲು ಪ್ರಯತ್ನಿಸುತ್ತಿತ್ತು. ಅದಕ್ಕೆ ಆ ಬೇಟೆ ಆಹಾರವು ಸಿಕ್ಕಿತೋ? ಹಾಂ, ಸಿಕ್ಕಿಬಿಟ್ಟಿತು! ರೆಕ್ಕೆಯ ಒಂದು ತುದಿಯಿಂದ ಇನ್ನೊಂದು ತುದಿಯ ವರೆಗೆ ಸುಮಾರು 140 ಸೆಂಟಿಮೀಟರುಗಳಷ್ಟು ಅಗಲವಿರುವ ವಿಸ್ತಾರವಾದ ರೆಕ್ಕೆಯನ್ನು ಚಾಚಿ, ಮೆಲ್ಲನೇ ಮೇಲೆ ಹಾರುತ್ತಿರುವಾಗ ಅದರ ಪಂಜದಲ್ಲಿ ಒಂದು ಚಿಕ್ಕ ಇಲಿಯು ನೇತಾಡುತ್ತಿರುವುದನ್ನು ನಾನು ನೋಡಿದೆ.

ಬೇರೆ ಗೂಬೆಗಳಂತೆ ಲೇಪ್‌ಲ್ಯಾಂಡ್‌ ಗೂಬೆ ಪ್ರತಿ ವರ್ಷ ಸಂತಾನೋತ್ಪತ್ತಿ ಮಾಡುವುದಿಲ್ಲ. ಈ ಬೃಹದಾಕಾರದ ಗೂಬೆಯು ಕೇವಲ ಸಣ್ಣ ಇಲಿ, ಮೊಲ, ಮುಂತಾದ ಪ್ರಾಣಿಗಳನ್ನು ತಿನ್ನುತ್ತದೆ. ಇವು ಸಿಗದೇ ಇರುವ ಸಮಯದಲ್ಲಿ ಸಂಪೂರ್ಣವಾಗಿ ಸಂತಾನೋತ್ಪತ್ತಿ ನಿಲ್ಲುತ್ತದೆ. ಆಹಾರವು ಬೇಕಾದಷ್ಟು ಸಿಗುವಾಗ, ಪ್ರತಿಯೊಂದು ಗೂಡಿನಲ್ಲಿ ನಾಲ್ಕು ಇಲ್ಲವೇ ಅದಕ್ಕಿಂತ ಹೆಚ್ಚು ಮರಿಗಳನ್ನು ನೋಡಸಾಧ್ಯವಿದೆ. ಅಂದರೆ ಸಂತಾನೋತ್ಪತ್ತಿ ಪ್ರಾರಂಭ!

ಸಂಗಾತಿಯ ಆಯ್ಕೆ

ವಸಂತಕಾಲದಲ್ಲಿ ಹೆಣ್ಣು ಮತ್ತು ಗಂಡು ಗೂಬೆಗಳು ಸಂತಾನೋತ್ಪತ್ತಿಗಾಗಿ ಕೂಡುತ್ತವೆ. ಹೆಣ್ಣು ಗೂಬೆ ತನ್ನ ಸಂಗಾತಿಯನ್ನು ಬಹಳ ಜಾಗರೂಕತೆಯಿಂದ ಆರಿಸಿಕೊಳ್ಳುತ್ತದೆ. ಆದರೆ ಮನುಷ್ಯ ಜಾತಿಯ ಅನೇಕ ನಾರಿಯರಿಗೆ ಇರುವಂತೆ, ಈ ಹೆಣ್ಣು ಗೂಬೆಗೆ ತನ್ನ ಸಂಗಾತಿಯ ಚೆಲುವು ಮುಖ್ಯವಾಗಿರುವುದಿಲ್ಲ. ಪಕ್ಷಿಯ ಬಗ್ಗೆ ಅಧ್ಯಯನ ಮಾಡಿರುವ ಕೆಲವರಿಗನುಸಾರ, ಗಂಡು ಗೂಬೆಯು ಬೇಟೆಯಲ್ಲಿ ತನ್ನ ಕೈಚಳಕವನ್ನು ತೋರಿಸಬೇಕಾಗುತ್ತದೆ. ಸಂತಾನೋತ್ಪತ್ತಿಯನ್ನು ಮಾಡುವ ಮುಂಚೆ, ಹೆಣ್ಣು ಗೂಬೆಗೆ ಅದು ಆಹಾರವನ್ನು ತಂದುಕೊಡಬೇಕಾಗುತ್ತದೆ.

ಗಂಡು ಚಾಕಚಕ್ಯತೆಯಿಂದ “ಬೇಟೆಯಾಡುವಲ್ಲಿ” ಹಾಗೂ ಸಾಕಷ್ಟು ಇಲಿಗಳು ಸಿಗುವಲ್ಲಿ, ಹೆಣ್ಣು ಮೈ ತುಂಬಿಕೊಂಡು ದಷ್ಟಪುಷ್ಟವಾಗುತ್ತದೆ. ಇದು ಎಷ್ಟು ಮೊಟ್ಟೆಗಳನ್ನು ಇಡುತ್ತದೆ ಎಂಬುದಕ್ಕೆ ಸೂಚನೆಯಾಗಿರುತ್ತದೆ.

ಈಗ ಗಂಡು ಸಂಪೂರ್ಣವಾಗಿ ಒಂಟಿಯಾಗಿ ಬೇಟೆಯಾಡಬೇಕಾಗಿರುತ್ತದೆ. ಇದಕ್ಕಾಗಿ ಅದಕ್ಕೆ ತುಂಬ ಶಕ್ತಿ ಬೇಕಾಗುತ್ತದೆ. ಹೆಣ್ಣಿನ ಕಳಕಳಿಯ ಕೂಗು, ಗಂಡು ಇದ್ದಬದ್ದ ಶಕ್ತಿಯನ್ನೆಲ್ಲ ಉಪಯೋಗಿಸಿ ಬೇಟೆಯಾಡುವಂತೆ ಮಾಡುತ್ತದೆ. ಏಕೆಂದರೆ ಈಗ ಹೆಣ್ಣು ಮೊಟ್ಟೆಯಿಡಲು ಹಾಗೂ ಅತ್ಯಮೂಲ್ಯ ಸಂಪತ್ತನ್ನು ಕಣ್ಣಿಟ್ಟು ನೋಡಿಕೊಳ್ಳಲು ತನ್ನ ಶಕ್ತಿಯನ್ನು ಬಳಸುತ್ತದೆ.

ಗೂಡನ್ನು ಪತ್ತೆಮಾಡುವುದು

ತನ್ನ ಬೇಟೆಯನ್ನು ಹಿಡಿದುಕೊಂಡು ನನ್ನ ತಲೆಯ ಮೇಲಿಂದ ಯಾವಾಗಲೂ ಹಾರಿಹೋಗುತ್ತಿದ್ದ ಆ ಸುಂದರಾಂಗನನ್ನು ನಾನು ನನ್ನ ಬೈನಾಕುಲರಿನಿಂದ ನೋಡುತ್ತಿದ್ದೆ. ಹೇಗೋ ನಾನು ಅದರ ಗೂಡನ್ನು ಪತ್ತೇಮಾಡಿಯೇಬಿಟ್ಟೆ. ಲೇಪ್‌ಲ್ಯಾಂಡ್‌ ಗೂಬೆಗಳು ತಮ್ಮ ಸ್ವಂತ ಗೂಡುಗಳನ್ನು ಕಟ್ಟಿಕೊಳ್ಳುವುದಿಲ್ಲ, ಅದಕ್ಕೆ ಬದಲಾಗಿ ಅರಣ್ಯದಲ್ಲಿ ವಾಸಿಸುವ ಇನ್ನಿತರ ಪಕ್ಷಿಗಳ ರೆಂಬೆಕೊಂಬೆಗಳ ಗೂಡುಗಳನ್ನು ಆಕ್ರಮಿಸಿಕೊಳ್ಳುತ್ತವೆ. ಅದಕ್ಕೆ ಗೂಡು ಇರದಿದ್ದಲ್ಲಿ, ಮೋಟು ಮರವನ್ನು ಗೂಡಾಗಿ ಉಪಯೋಗಿಸುತ್ತದೆ.

ಗೂಡಿನಲ್ಲಿ, ರೇಷ್ಮೆಯಂತಹ ನುಣುಪಾದ ರೆಕ್ಕೆಪುಕ್ಕಗಳಿರುವ ಎರಡು ಪುಟ್ಟ ಹಕ್ಕಿಮರಿಗಳು ತಮ್ಮ ಸುತ್ತುಮುತ್ತಲಿರುವ ವಸ್ತುಗಳನ್ನು ಕಣ್ಣರಳಿಸಿ ನೋಡುತ್ತಿದ್ದವು. ಅಲ್ಲೇ ಅವುಗಳನ್ನು ಗಮನಿಸುತ್ತಾ ಕುಳಿತಿದ್ದ ತಮ್ಮ ತಾಯಿಯನ್ನು ಹಸಿವಿನ ಕಂಗಳಿಂದ ನೋಡುತ್ತಾ, ಅವು ಒಟ್ಟಾಗಿ ಬೇಡುವ ಧ್ವನಿಯಲ್ಲಿ ಕೂಗುತ್ತಿದ್ದವು. ಈ ಸಮಯದಲ್ಲಿ ನಾವು ಆ ಪುಟ್ಟ ಮರಿಗಳ ಹತ್ತಿರಕ್ಕೆ ಹೋಗುವುದು ತುಂಬ ಅಪಾಯಕಾರಿ. ತನ್ನ ಪುಟ್ಟ ಮರಿಗಳಿಗೆ ಏನೋ ಅಪಾಯವಾಗಲಿದೆ ಎಂಬುದು ಆ ಹೆಣ್ಣು ಗೂಬೆಗೆ ಗೊತ್ತಾಗುವಲ್ಲಿ, ಅದು ಸದ್ದೇ ಮಾಡದೇ ಹಾರಿಬಂದು, ಶತ್ರುವಿನ ಮೇಲೆ ತನ್ನ ಸೂಜಿ ಮೊನೆಯಂತಹ ಪಂಜದಿಂದ ದಾಳಿಮಾಡುತ್ತದೆ. ಆದುದರಿಂದ ತುಂಬ ಜಾಗರೂಕತೆಯಿಂದ, ಒಂದಷ್ಟು ಅಂತರದಿಂದಲೇ ಆ ಗೂಬೆಗಳ ಬಗ್ಗೆ ಅಧ್ಯಯನಮಾಡಬೇಕು.

ಉಣಿಸುವಿಕೆ ಹಾಗೂ ತರಬೇತಿ

ಆಹಾರಕ್ಕಾಗಿ ಹೊರಹೋಗಿದ್ದ ಗಂಡು ಗೂಬೆ ಈಗ ಗೂಡಿಗೆ ಬಂದು, ತನ್ನ ಪಂಜದಲ್ಲಿ ಹಿಡಿದುಕೊಂಡಿದ್ದ ಇಲಿಯನ್ನು ತನ್ನ ಕೊಕ್ಕಿನಲ್ಲಿ ಕಚ್ಚಿ ಹಿಡಿದುಕೊಂಡು ಒಂದು ಮರಿಗೆ ಉಣಿಸಿತು. ಒಂದು ಮರಿಗೆ ಆಹಾರವನ್ನು ಉಣಿಸುತ್ತಿರುವಾಗ, ಅದರ ನಂತರ ಆಹಾರವನ್ನು ಪಡೆದುಕೊಳ್ಳಲಿರುವ ಇನ್ನೊಂದು ಮರಿಯು ಕಿವಿಗಡಚಿಕ್ಕುವಂತೆ ಚಿಲಿಪಿಲಿಗುಟ್ಟುತ್ತದೆ.

ಆಸೆಯಿಂದ ತನ್ನ ಆಹಾರವನ್ನು ತಿಂದ ಮೇಲೆ, ಆ ಮರಿಯು ಒಂದು ರೀತಿ ತಮಾಷೆಯಾಗಿ ನಡೆದುಕೊಳ್ಳುತ್ತದೆ. ಇಷ್ಟರ ವರೆಗೆ ಚುರುಕಿನಿಂದ ಇದ್ದ ಮರಿಯ ಮುಖವು ಥಟ್ಟನೇ ಬದಲಾಗಿ, ಅದು ಕುಡಿದ ಹಾಗೆ ನಟಿಸಲು ಪ್ರಾರಂಭಿಸುತ್ತದೆ! ಅದು ತನ್ನ ಶಕ್ತಿಯನ್ನೆಲ್ಲ ಆಹಾರವನ್ನು ಜೀರ್ಣಿಸಿಕೊಳ್ಳುವುದಕ್ಕಾಗಿ ಬಳಸುತ್ತದೆ. ಮತ್ತು ನೋಡನೋಡುತ್ತಿದ್ದಂತೆಯೇ ರೇಷ್ಮೆಯಂತಹ ನುಣುಪಾದ ರೆಕ್ಕೆಪುಕ್ಕಗಳ ಒಂದು ಮುದ್ದೆಯಾಗಿ ಕೆಳಗೆ ಕುಸಿದುಬೀಳುತ್ತದೆ. ಆದರೆ ಅದರ ಪಕ್ಕದಲ್ಲಿಯೇ ಇರುವ ಇನ್ನೊಂದು ಮರಿಯು ಈಗ ತಾನೇ ಅಮಲೇರುವಿಕೆಯಿಂದ ಚೇತರಿಸಿಕೊಂಡು, ಕಣ್ಣನ್ನು ತೆರೆಯುತ್ತಿರುತ್ತದೆ.

ಇದು ಜೂನ್‌ ತಿಂಗಳ ಮಧ್ಯಭಾಗದ ತನಕ ನಡೆಯುತ್ತದೆ. ಅಷ್ಟರೊಳಗೆ ಅವು ನಾಲ್ಕು ವಾರಗಳ ಮರಿಗಳಾಗಿಬಿಟ್ಟಿರುತ್ತವೆ ಮತ್ತು ತಾಯಿಯ ಕರೆಗೆ ಓಗೊಡುತ್ತಾ ಅವು ತಮ್ಮ ಗೂಡನ್ನು ಬಿಟ್ಟು ಪಟಪಟನೇ ರೆಕ್ಕೆಬಡಿಯುತ್ತಾ ಹೊರಗೆ ಬರಲು ಪ್ರಾರಂಭಿಸಿರುತ್ತವೆ. ಅವು ಮೊದಮೊದಲು ಬಹಳ ಚಾಕಚಕ್ಯತೆಯಿಂದ ಮರಗಳ ಮೇಲೆ ಅತ್ತಿತ್ತ ಹತ್ತುತ್ತಿರುತ್ತವೆ. ಅಲ್ಲಿ ಪರಭಕ್ಷಕ ಪ್ರಾಣಿಗಳು ನೆಲದ ಮೇಲಿರುವ ಪ್ರಾಣಿಗಳಷ್ಟೇನೂ ಅಪಾಯಕಾರಿಯಾಗಿರುವುದಿಲ್ಲ.

ಅಷ್ಟರಲ್ಲಿ, ಮರಿಗಳು ಒಂದು ಕೊಂಬೆಯ ಆಚೀಚೆ ರೆಕ್ಕೆಗಳನ್ನು ಪಟಪಟನೇ ಬಡಿಯುತ್ತಾ ಹಾರಲು ಅಭ್ಯಾಸಮಾಡಲು ಶುರುಮಾಡಿರುತ್ತವೆ. ಸ್ವಲ್ಪ ಸಮಯದ ನಂತರ, ಅವುಗಳೇ ಯಾರ ಸಹಾಯವು ಇಲ್ಲದೆ ಹಾರುತ್ತಾ ಬೇಟೆಯಾಡಲು ಪ್ರಾರಂಭಿಸುತ್ತವೆ. ಅವುಗಳ ಚರ್ಯೆ ಸಹ ಬದಲಾಗುತ್ತದೆ. ಈಗ ಅವು ಸಹ ‘ಅತಿ ಸುಂದರ ಅರಣ್ಯವಾಸಿಗಳಾಗುತ್ತವೆ.’

[ಪುಟ 18ರಲ್ಲಿರುವ ಚಿತ್ರ ಕೃಪೆ]

© Joe McDonald

© Michael S. Quinton

[ಪುಟ 19ರಲ್ಲಿರುವ ಚಿತ್ರ ಕೃಪೆ]

© Michael S. Quinton

© Michael S. Quinton