ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕಣ್ಣಿಗೆ ಕಾಣಿಸದ ವಸ್ತುಗಳು ಏನನ್ನು ಪ್ರಕಟಪಡಿಸುತ್ತವೆ?

ಕಣ್ಣಿಗೆ ಕಾಣಿಸದ ವಸ್ತುಗಳು ಏನನ್ನು ಪ್ರಕಟಪಡಿಸುತ್ತವೆ?

ಕಣ್ಣಿಗೆ ಕಾಣಿಸದ ವಸ್ತುಗಳು ಏನನ್ನು ಪ್ರಕಟಪಡಿಸುತ್ತವೆ?

ಇಂದು ಕಂಡುಹಿಡಿಯಲ್ಪಟ್ಟಿರುವ ಹೊಸ ಹೊಸ ಆವಿಷ್ಕಾರಗಳ ಸಹಾಯದಿಂದ ಮಾನವರು ಈ ಹಿಂದೆ ಕಣ್ಣಿಗೆ ಕಾಣದಂತಹ ವಸ್ತುಗಳನ್ನು ನೋಡಲು ಶಕ್ತರಾಗಿದ್ದಾರೆ. ಇದರಿಂದ ನಮಗೇನು ಪ್ರಯೋಜನಗಳು ಸಿಕ್ಕಿವೆ? ಈ ಹಿಂದೆ ನಮಗೆ ತಿಳಿಯದೇ ಇದ್ದ ಅನೇಕ ವಸ್ತುಗಳ ಬಗ್ಗೆ ತಿಳಿದುಕೊಳ್ಳಲು ಮತ್ತು ಅವುಗಳು ಅಸ್ತಿತ್ವದಲ್ಲಿವೆ ಎಂಬುದನ್ನು ಗುರುತಿಸಲು ಸಹಾಯಮಾಡಿವೆ.​—⁠ಕೆಳಗಿರುವ ಚೌಕವನ್ನು ನೋಡಿ.

ಉದಾಹರಣೆಗೆ, ಒಂದು ಕಾಲದಲ್ಲಿ ಭೂಮಿಯು ವಿಶ್ವದ ಮಧ್ಯದಲ್ಲಿದೆ ಎಂದು ಸಾಮಾನ್ಯವಾಗಿ ನಂಬಲಾಗುತ್ತಿತ್ತು. ಆದರೆ ದೂರದರ್ಶಕದ ಸಹಾಯದಿಂದ ನೋಡಿದಾಗ, ಭೂಮಿಯೊಂದಿಗೆ ಇನ್ನಿತರ ಗ್ರಹಗಳು ಸೂರ್ಯನ ಸುತ್ತಲೂ ತಮ್ಮ ಕಕ್ಷೆಯಲ್ಲಿ ಸುತ್ತುತ್ತಿವೆ ಎಂಬುದು ಗೊತ್ತಾಯಿತು. ಇತ್ತೀಚೆಗೆ, ಹೆಚ್ಚು ಶಕ್ತಿಶಾಲಿಯಾದ ಸೂಕ್ಷ್ಮದರ್ಶಕ ಯಂತ್ರಗಳನ್ನು ಆವಿಷ್ಕಾರಮಾಡಿದ್ದಾರೆ. ಅವುಗಳ ಸಹಾಯದಿಂದ ಮಾನವರು ಸ್ವತಃ ಅಣುವನ್ನೇ ಪರೀಕ್ಷಿಸಿದ್ದಾರೆ. ಅವುಗಳಲ್ಲಿ ಕೆಲವೊಂದು ರೀತಿಯ ಅಣುಗಳು ಬೇರೆ ರೀತಿಯ ಅಣುಗಳೊಂದಿಗೆ ಸಂಯೋಜಿತಗೊಂಡು, ಪರಮಾಣುವಿನ ಸಮುಚ್ಛಯಗಳಾಗಿ ಹೇಗೆ ರೂಪುಗೊಳ್ಳುತ್ತವೆ ಎಂಬುದನ್ನು ಸಹ ಪರೀಕ್ಷಿಸಿದ್ದಾರೆ.

ಉದಾಹರಣೆಗೆ, ಜೀವಿಸುವುದಕ್ಕೆ ಹೆಚ್ಚು ಪ್ರಾಮುಖ್ಯವಾದ ಪದಾರ್ಥಗಳಲ್ಲಿ ನೀರು ಒಂದು. ಅದರಲ್ಲಿರುವ ಪರಮಾಣುವಿನ ಸಂಯೋಜನೆಯನ್ನು ಗಮನಿಸಿ. ಅವುಗಳ ವಿಶೇಷ ರಚನೆಯ ಕಾರಣದಿಂದಾಗಿ, ಒಂದೇ ಒಂದು ಆಮ್ಲಜನಕದ ಪರಮಾಣುವಿನೊಂದಿಗೆ ಎರಡು ಜಲಜನಕದ ಪರಮಾಣುಗಳು ಒಂದು ಅಪೂರ್ವವಾದ ರೀತಿಯಲ್ಲಿ ಸಂಯೋಜಿತಗೊಂಡು ನೀರಿನ ಒಂದು ಪರಮಾಣುವನ್ನು ರಚಿಸುತ್ತವೆ. ಒಂದು ತೊಟ್ಟಿನ ನೀರಿನಲ್ಲಿ ಈ ರೀತಿಯ ಕೋಟ್ಯಂತರ ಪರಮಾಣುಗಳಿರುತ್ತವೆ! ನೀರಿನಲ್ಲಿರುವ ಪರಮಾಣುವನ್ನು ಪರೀಕ್ಷಿಸುವ ಮೂಲಕ ಹಾಗೂ ಅವು ಬೇರೆ ಬೇರೆ ಸನ್ನಿವೇಶಗಳಲ್ಲಿ ಹೇಗೆ ವರ್ತಿಸುತ್ತವೆ ಎಂಬುದನ್ನು ತಿಳಿದುಕೊಳ್ಳುವ ಮೂಲಕ, ನಾವು ಏನನ್ನು ಕಲಿತುಕೊಳ್ಳಸಾಧ್ಯವಿದೆ?

ನೀರಿನ ಅದ್ಭುತ

ನೀರಿನ ಪ್ರತ್ಯೇಕ ಹನಿಗಳನ್ನು ನೋಡುವಾಗ ಅವು ತುಂಬ ಸರಳವಾಗಿರುವಂತೆ ತೋರುತ್ತವೆ. ಆದರೂ, ನೀರು ಹೆಚ್ಚು ಸಂಕೀರ್ಣವಾದ ಒಂದು ಪದಾರ್ಥವಾಗಿದೆ. ನಿಜ ಹೇಳಬೇಕೆಂದರೆ, ನೀರು “ಎಲ್ಲಾ ರಸಾಯನಗಳಲ್ಲೇ ಹೆಚ್ಚು ಸಂಶೋಧನೆಗೊಳಪಟ್ಟಿರುವ ಒಂದು ಪದಾರ್ಥವಾಗಿದೆ. ಹಾಗಿದ್ದರೂ ಇಂದಿಗೂ ತೀರ ಕಡಿಮೆ ಅರ್ಥಮಾಡಿಕೊಂಡಿರುವ ಪದಾರ್ಥವೆಂದರೆ ಅದು ನೀರೇ ಆಗಿದೆ” ಎಂಬುದಾಗಿ ಇಂಗ್ಲೆಂಡ್‌ ದೇಶದ ಲಂಡನ್ನಿನಲ್ಲಿರುವ ಇಂಪೀರಿಯಲ್‌ ಕಾಲೇಜಿನ ವಿಜ್ಞಾನದ ಬರಹಗಾರರಾದ ಡಾಕ್ಟರ್‌ ಜಾನ್‌ ಎಮ್‌ಸ್ಲಿ ಹೇಳುತ್ತಾರೆ. ನ್ಯೂ ಸೈಯನ್‌ಟಿಸ್ಟ್‌ ಪತ್ರಿಕೆಯು ಹೇಳಿದ್ದು: “ಭೂಮಿಯಲ್ಲೇ ಹೆಚ್ಚು ಚಿರಪರಿಚಿತವಾಗಿರುವ ದ್ರವ ಪದಾರ್ಥವು ನೀರಾಗಿದೆ. ಅದೇ ಸಮಯದಲ್ಲಿ ಹೆಚ್ಚು ರಹಸ್ಯದಿಂದ ಕೂಡಿರುವ ದ್ರವವು ಕೂಡ ನೀರೇ ಆಗಿದೆ.”

ನೀರು ತುಂಬ ಸರಳವಾದ ರಚನೆಯನ್ನು ಹೊಂದಿದ್ದರೂ, “ವರ್ತನೆಯಲ್ಲಿ ಅದಕ್ಕಿಂತ ಹೆಚ್ಚು ಜಟಿಲವಾದುದು ಇನ್ಯಾವುದೂ ಇಲ್ಲ” ಎಂಬುದಾಗಿ ಡಾಕ್ಟರ್‌ ಎಮ್‌ಸ್ಲಿ ವಿವರಿಸಿದರು. ಉದಾಹರಣೆಗೆ, ಅವರು ಹೇಳಿದ್ದು: “H2O ಅನಿಲವಾಗಿರಬೇಕು, . . . ಆದರೆ ಅದು ಒಂದು ದ್ರವಪದಾರ್ಥವಾಗಿದೆ. ಅಷ್ಟೇ ಅಲ್ಲದೆ, ಅದು ಘನೀಭವಿಸುವಾಗ, . . . . ಅದರ ಘನರೂಪವಾದ ಮಂಜುಗಡ್ಡೆ ಮುಳುಗುವುದಕ್ಕೆ ಬದಲಾಗಿ ತೇಲುತ್ತದೆ.” ಇದು ನಾವು ಸಾಮಾನ್ಯವಾಗಿ ನಿರೀಕ್ಷಿಸುವ ವರ್ತನೆಗೆ ವಿರುದ್ಧವಾಗಿದೆ. ಈ ಅಸಾಮಾನ್ಯವಾದ ವರ್ತನೆಯ ಕುರಿತು, ಅಮೆರಿಕನ್‌ ಅಸೋಸಿಯೇಷನ್‌ ಫಾರ್‌ ದ ಅಡ್ವಾನ್ಸ್‌ಮೆಂಟ್‌ ಆಫ್‌ ಸೈಯನ್ಸಿನ ಮಾಜಿ ಅಧ್ಯಕ್ಷರಾದ ಡಾಕ್ಟರ್‌ ಪಾಲ್‌ ಇ. ಕ್ಲೊಪ್‌ಸ್ಟೆಗ್‌ ಹೇಳುವುದು:

“ಇದು ಮೀನುಗಳಂತಹ ಜಲಚರಗಳನ್ನು ಉಳಿಸುವುದಕ್ಕಾಗಿಯೇ ಹೆಚ್ಚು ವಿಶೇಷ ರೀತಿಯಲ್ಲಿ ರಚಿಸಲ್ಪಟ್ಟಿರುವಂತೆ ತೋರುತ್ತದೆ. ನೀರು ಘನೀಭವಿಸುವ ಮಟ್ಟಕ್ಕೆ ತಣ್ಣಗಾದಾಗ ಈಗಾಗಲೇ ವರ್ಣಿಸಿರುವಂತೆ ಅದು ವರ್ತಿಸದಿದ್ದರೆ, ಏನಾಗಬಹುದೆಂಬುದನ್ನು ಸ್ವಲ್ಪ ಯೋಚಿಸಿ ನೋಡಿ. ಅದರ ಪರಿಣಾಮವು, ನೀರೆಲ್ಲೆವೂ ಮಂಜುಗಡ್ಡೆಯಾಗುತ್ತಾ ಇಡೀ ಸರೋವರವನ್ನೇ ತುಂಬಿಕೊಳ್ಳುವುದು. ಆಗ, ಎಲ್ಲಾ ಅಥವಾ ಬಹುತೇಕ ಕಡಲಜೀವಿಗಳು ನಾಶವಾಗುವವು.” ನೀರಿನ ಈ ಅನಿರೀಕ್ಷಿತ ವರ್ತನೆಯು, “ವಿಶ್ವದ ಒಬ್ಬ ಮಹಾನ್‌ ಹಾಗೂ ಉದ್ದೇಶವುಳ್ಳ ವ್ಯಕ್ತಿಯ ಕೈಕೆಲಸದ ಸಾಕ್ಷ್ಯವಾಗಿದೆ” ಎಂದು ಡಾಕ್ಟರ್‌ ಕ್ಲೊಪ್‌ಸ್ಟೆಗ್‌ ಹೇಳುತ್ತಾರೆ.

ನ್ಯೂ ಸೈಯನ್‌ಟಿಸ್ಟ್‌ ಪತ್ರಿಕೆಗನುಸಾರ, ನೀರಿನ ಈ ಅಸಾಮಾನ್ಯ ವರ್ತನೆಗೆ ಕಾರಣವೇನೆಂದು ತಮಗೆ ಗೊತ್ತಾಗಿದೆ ಎಂದು ಈಗ ಸಂಶೋಧಕರಿಗೆ ಅನಿಸುತ್ತದೆ. ಅವರು, ನೀರು ಘನೀಭವಿಸಿದಂತೆ ವಿಸ್ತರಣೆಯಾಗುವುದಕ್ಕೆ ಹಾಗೂ ನೀರಿಗಿಂತ ಮಂಜುಗಡ್ಡೆಯು ಹೆಚ್ಚು ಸಾಂದ್ರತೆಯಿಂದಿರುವುದಕ್ಕೆ ಕಾರಣವನ್ನು ನಿಷ್ಕೃಷ್ಟವಾಗಿ ಮುಂತಿಳಿಸುವ ಪ್ರಪ್ರಥಮವಾದ ಊಹಾತ್ಮಕವಾದ ನಮೂನೆಯನ್ನು ಕಂಡುಹಿಡಿದರು. ಅದರ “ಈ ರಹಸ್ಯಕ್ಕೆ ಮುಖ್ಯ ಕಾರಣವು, ಅವುಗಳಲ್ಲಿರುವ ಆಮ್ಲಜನಕದ ಅಣುಗಳ ಮಧ್ಯೆ ಇರುವ ಅಂತರದಲ್ಲೇ ಅಡಗಿದೆ” ಎಂಬುದನ್ನು ಸಂಶೋಧಕರು ಗ್ರಹಿಸಿದ್ದಾರೆ.

ಇದು ಅಸಾಧಾರಣವಾಗಿಲ್ಲವೋ? ತುಂಬ ಸರಳವಾಗಿ ಕಾಣುವ ಒಂದು ಪರಮಾಣು ಮಾನವನ ಬುದ್ಧಿಶಕ್ತಿಗೆ ಸವಾಲನ್ನೆಸೆಯುತ್ತದೆ. ನಮ್ಮ ದೇಹದ ಬಹಳಷ್ಟು ತೂಕಕ್ಕೆ ನೀರೇ ಕಾರಣವಾಗಿದೆ ಎಂಬುದನ್ನು ಯೋಚಿಸಿನೋಡಲು ಆಶ್ಚರ್ಯವಾಗುತ್ತದೆ! ಎರಡು ಮೂಲವಸ್ತುಗಳಲ್ಲಿ ಕೇವಲ ಮೂರು ಅಣುಗಳಿರುವ ಈ ಪರಮಾಣುವಿನ ಅದ್ಭುತದ ಹಿಂದಿರುವ “ಒಬ್ಬ ಮಹಾನ್‌ ಉದ್ದೇಶವುಳ್ಳ ವ್ಯಕ್ತಿಯ ಪುರಾವೆಯನ್ನು” ನೀವು ಸಹ ನೋಡಲು ಸಾಧ್ಯವಾಗುತ್ತಿದೆಯೇ? ಆದರೂ, ನೀರಿನಲ್ಲಿರುವ ಪರಮಾಣು ಅತ್ಯಂತ ಕಿರಿದಾದದ್ದು ಹಾಗೂ ಬೇರೆ ಯಾವುದೇ ಪರಮಾಣುಗಳಿಗಿಂತ ಕಡಿಮೆ ಜಟಿಲತೆಯಿಂದ ಕೂಡಿದೆ.

ಹೆಚ್ಚು ಜಟಿಲತೆಯುಳ್ಳ ಪರಮಾಣುಗಳು

ಕೆಲವೊಂದು ಪರಮಾಣುಗಳು ಅನೇಕ ಸಾವಿರಾರು ಅಣುಗಳಿಂದ ಕೂಡಿರುತ್ತವೆ. ಇವುಗಳಲ್ಲಿ ಅನೇಕವು ಭೂಮಿಯಲ್ಲಿ ಸಹಜವಾಗಿಯೇ ಉಂಟಾಗುವ 88 ಮೂಲವಸ್ತುಗಳಿಂದ ಕೂಡಿರುತ್ತವೆ. ಉದಾಹರಣೆಗೆ, ಸಂಕೇತದ ರೂಪದಲ್ಲಿ ಪ್ರತಿಯೊಂದು ಜೀವಿಯ ಅನುವಂಶದ ಕುರಿತು ಮಾಹಿತಿಯನ್ನು ಸಂಗ್ರಹಿಸಿ ಇಟ್ಟುಕೊಂಡಿರುವ ಡಿಎನ್‌ಏಯ (ಡಿಆಕ್ಸಿರೈಬೋನ್ಯೂಕ್ಲಿಕ್‌ನ ಸಂಕ್ಷಿಪ್ತ ರೂಪ) ಪರಮಾಣುವನ್ನು ತೆಗೆದುಕೊಳ್ಳಿ. ಅದು ಹಲವಾರು ಮೂಲವಸ್ತುಗಳಿಂದ ಕೂಡಿರುವ ಲಕ್ಷಾಂತರ ಅಣುಗಳನ್ನು ಹೊಂದಿರಲು ಸಾಧ್ಯವಿದೆ!

ಡಿಎನ್‌ಏಯು ನಂಬಲಸಾಧ್ಯವಾದ ಜಟಿಲತೆಯಿಂದ ಕೂಡಿದ್ದರೂ, ಅದರ ಪರಮಾಣುವಿನ ವ್ಯಾಸವು ಕೇವಲ 0.0000025 ಮಿಲಿಮೀಟರ್‌ ಮಾತ್ರವೇ ಆಗಿದೆ. ಇದು ಎಷ್ಟು ಚಿಕ್ಕದಾಗಿದೆಯೆಂದರೆ, ಕೇವಲ ಶಕ್ತಿಶಾಲಿಯಾದ ಸೂಕ್ಷ್ಮದರ್ಶಕ ಯಂತ್ರದ ಸಹಾಯದಿಂದ ಮಾತ್ರ ಅದನ್ನು ನೋಡಲು ಸಾಧ್ಯ. ಡಿಎನ್‌ಏಯು ಒಬ್ಬ ವ್ಯಕ್ತಿಯ ಅನುವಂಶೀಯತೆಯನ್ನು ನಿರ್ಧರಿಸುತ್ತದೆ ಎಂಬುದನ್ನು ವಿಜ್ಞಾನಿಗಳು 1944ರ ವರೆಗೂ ಕಂಡುಹಿಡಿದಿರಲಿಲ್ಲ. ಈ ಕಂಡುಹಿಡಿತವು, ತೀರ ಸಂಕೀರ್ಣವಾಗಿರುವ ಈ ಪರಮಾಣುವಿನ ಕುರಿತು ಇನ್ನೂ ಆಳವಾದ ಸಂಶೋಧನೆಯನ್ನು ಪ್ರಾರಂಭಿಸುವಂತೆ ಮಾಡಿತು.

ಆದರೂ, ವಸ್ತುಗಳನ್ನು ಸೃಷ್ಟಿಸುವುದರಲ್ಲಿ ಪಾತ್ರವಹಿಸುವ ಅನೇಕ ರೀತಿಯ ಪರಮಾಣುಗಳಲ್ಲಿ ಡಿಎನ್‌ಏ ಮತ್ತು ನೀರು ಕೇವಲ ಎರಡು ಬಗೆಯ ಪರಮಾಣುಗಳಾಗಿವೆ. ಸಜೀವ ಮತ್ತು ನಿರ್ಜೀವ ವಸ್ತುಗಳಲ್ಲಿ ಅನೇಕ ರೀತಿಯ ಪರಮಾಣುಗಳು ಇರುವುದರಿಂದ, ಅವುಗಳೆರಡರ ನಡುವೆ ಸುಲಭವಾಗಿ ದಾಟಬಹುದಾದ ಅಂತರವಿರುವುದು ಎಂಬ ತೀರ್ಮಾನಕ್ಕೆ ನಾವು ಬರಬೇಕೋ?

ಬಹಳ ಕಾಲಗಳಿಂದ ಅನೇಕರು ಇದನ್ನೇ ನಂಬಿದ್ದರು. “1920 ಮತ್ತು 30ರ ದಶಕಗಳಲ್ಲಿ ವಿಜ್ಞಾನದ ಕ್ಷೇತ್ರದಲ್ಲಿರುವ ಅನೇಕ ಅಧಿಕಾರಿಗಳು, ಜೀವರಸಾಯನದ ಕುರಿತ ಹೆಚ್ಚಿನ ಜ್ಞಾನವು ಆ ಅಂತರವನ್ನು ಕಡಿಮೆಮಾಡುವುದು ಎಂಬ ನಿರೀಕ್ಷೆಯನ್ನು ವ್ಯಕ್ತಪಡಿಸಿದ್ದರು” ಎಂದು ಸೂಕ್ಷ್ಮಜೀವ ವಿಜ್ಞಾನಿಯಾದ ಮೈಕಲ್‌ ಡೆನ್‌ಟನ್‌ ವಿವರಿಸುತ್ತಾರೆ. ಆದರೂ, ಸ್ವಲ್ಪ ಸಮಯದರೊಳಗೆ ಏನನ್ನು ಕಂಡುಹಿಡಿಯಲಾಯಿತು?

ಜೀವ​—⁠ವಿಶೇಷವೂ ಅಪೂರ್ವವೂ ಆಗಿದೆ

ಸಜೀವ ಮತ್ತು ನಿರ್ಜೀವ ವಸ್ತುಗಳ ನಡುವೆ ಒಂದರಿಂದ ಮತ್ತೊಂದು ಹಂತದಲ್ಲಾಗುವ ಪರಿವರ್ತನೆಗಳು ಅಥವಾ ಪರಿವರ್ತನೆಯ ಕ್ರಮವಾದ ಹೆಜ್ಜೆಗಳನ್ನು ವಿಜ್ಞಾನಿಗಳು ಕಂಡುಹಿಡಿಯುವ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಆದರೂ ಡೆನ್‌ಟನ್‌ ಗಮನಿಸಿದ್ದೇನೆಂದರೆ, ಸ್ಪಷ್ಟವಾದ ಅಂತರವು ಇದೆ ಎಂಬುದನ್ನು “1950ರ ಆರಂಭದಲ್ಲಿ ಮಾಡಲ್ಪಟ್ಟ ಕ್ರಾಂತಿಕಾರಕ ಅಣು ಜೀವಶಾಸ್ತ್ರದ ಆವಿಷ್ಕಾರಗಳ ನಂತರ ಅಂತಿಮವಾಗಿ ರುಜುಪಡಿಸಲಾಯಿತು.” ವಿಜ್ಞಾನಿಗಳಿಗೆ ಈಗ ಸ್ಪಷ್ಟವಾಗಿರುವ ಗಮನಾರ್ಹವಾದ ಅಂಶವನ್ನು ಸೂಚಿಸುತ್ತಾ ಡೆನ್‌ಟನ್‌ ವಿವರಿಸುವುದು:

“ಸಜೀವ ಮತ್ತು ನಿರ್ಜೀವ ಜಗತ್ತಿನ ನಡುವೆ ಅಂತರವಿರುವುದು ನಮಗೆ ಈಗ ಗೊತ್ತಾಗಿರುವುದಷ್ಟೇ ಅಲ್ಲ, ಅದು ನಿಸರ್ಗದಲ್ಲಿ ಹೆಚ್ಚು ಎದ್ದುಕಾಣುವ ಹಾಗೂ ಮೂಲಭೂತವಾದ ಎಲ್ಲಾ ಅಂತರಗಳನ್ನು ಸಹ ಪ್ರತಿನಿಧಿಸುತ್ತದೆ. ಅದು ಯಾವುದೆಂದರೆ, ಜೀವಕೋಶ ಹಾಗೂ ಹೆಚ್ಚು ಸಂಕೀರ್ಣವಾಗಿರುವ ಸ್ಪಟಿಕ ಅಥವಾ ಹಿಮದ ಹರಳುಗಳಂತಹ ಜೈವಿಕವಲ್ಲದ ವ್ಯವಸ್ಥೆಯ ನಡುವೆ ಊಹಿಸಲಸಾಧ್ಯವಾದಷ್ಟು ಖಂಡಿತವಾಗಿಯೂ ವಿಶಾಲವಾದ ಅಂತರವಿದೆ.”

ಇದರ ಅರ್ಥ ಒಂದು ಪರಮಾಣುವನ್ನು ಸೃಷ್ಟಿಸುವುದು ಸುಲಭವೆಂದಲ್ಲ. ಇದರ ಕುರಿತಾಗಿ ಮಾಲಿಕ್ಯೂಲ್ಸ್‌ ಟು ಲಿವಿಂಗ್‌ ಸೆಲ್ಸ್‌ ಎಂಬ ಪುಸ್ತಕವು ವಿವರಿಸುವುದೇನೆಂದರೆ, “ಒಂದು ಸಣ್ಣ ಪರಮಾಣುವಿನಲ್ಲಿರುವ ಪ್ರತಿಯೊಂದು ರಚನೆಯ ಸಂಯೋಗವು ತಾನೇ ಜಟಿಲವಾಗಿದೆ.” ಹಾಗಿದ್ದರೂ, ಅಂಥ ಅಣುಗಳನ್ನು ರಚಿಸುವುದು, “ಪ್ರಪ್ರಥಮವಾದ ಜೀವಕೋಶವನ್ನು ಉತ್ಪತ್ತಿಮಾಡುವುದಕ್ಕಾಗಿ ಏನ್ನೆಲ್ಲಾ ಕ್ರಿಯೆಗಳು ಒಳಗೂಡಿದ್ದಿರಬೇಕು ಎಂಬುದಕ್ಕೆ ಹೋಲಿಸಿನೋಡುವಾಗ ಅದು ಚಿಕ್ಕ ಮಕ್ಕಳ ಆಟವಾಗಿದೆ” ಎಂದು ಅದು ಕೂಡಿಸಿ ಹೇಳುತ್ತದೆ.

ಬ್ಯಾಕ್ಟೀರಿಯಾದಂತಹ ಏಕಕೋಶೀಯ ಜೀವಿಗಳು ಸ್ವತಂತ್ರವಾದ ಜೀವಿಗಳಾಗಿ ಜೀವಿಸಬಹುದು. ಇಲ್ಲವೇ ಅವು ಮಾನವನಂತಹ ಬಹುಕೋಶೀಯ ಜೀವಿಗಳ ಭಾಗವಾಗಿ ಕ್ರಿಯೆಗೈಯಬಹುದು. ಈ ವಾಕ್ಯದ ಕೊನೆಯಲ್ಲಿರುವ ಪೂರ್ಣವಿರಾಮ ಚಿಹ್ನೆಯವರೆಗೆ ಸರಿಸಮವಾಗಿರುವಂತೆ ಮಾಡಬೇಕಾದರೆ, ಸರಾಸರಿ ಗಾತ್ರದ 500 ಕೋಶಗಳು ಬೇಕಾಗಿರುವವು. ಆದುದರಿಂದ, ಕೋಶದ ಕ್ರಿಯೆಗಳು ಪ್ರತ್ಯಕ್ಷ ಕಣ್ಣಿಗೆ ಅಗೋಚರವಾಗಿರುವುದರಲ್ಲಿ ಆಶ್ಚರ್ಯವೇನಿಲ್ಲ. ಹಾಗಾದರೆ, ಸೂಕ್ಷ್ಮದರ್ಶಕವನ್ನು ಉಪಯೋಗಿಸಿ ಮಾನವ ದೇಹದಲ್ಲಿರುವ ಒಂದು ಪ್ರತ್ಯೇಕ ಕೋಶವನ್ನು ಇಣುಕಿನೋಡುವಾಗ ಏನು ತಿಳಿದುಬರುತ್ತದೆ?

ಕೋಶ​—⁠ಆಕಸ್ಮಿಕವೋ ಅಥವಾ ವಿನ್ಯಾಸವೋ?

ಮೊದಲಾಗಿ, ಸಜೀವ ಕೋಶಗಳ ಸಂಕೀರ್ಣತೆಯನ್ನು ನೋಡುವ ವ್ಯಕ್ತಿಯೊಬ್ಬನು ಆಶ್ಚರ್ಯಗೊಳ್ಳುವುದರಲ್ಲಿ ಸಂಶಯವೇ ಇಲ್ಲ. ಇದರ ಕುರಿತಾಗಿ ಒಬ್ಬ ವಿಜ್ಞಾನದ ಬರಹಗಾರನು ಹೇಳುವುದು: “ಅತ್ಯಂತ ಸಾಧಾರಣವಾದ ಕೋಶದ ಯಥಾಪ್ರಕಾರದ ಬೆಳವಣಿಗೆಗೂ ಕೂಡ ಹತ್ತಾರುಸಾವಿರ ರಸಾಯನಿಕ ಪ್ರತಿಕ್ರಿಯೆಗಳು ಸುವ್ಯವಸ್ಥಿತವಾದ ರೀತಿಯಲ್ಲಿ ನಡೆಯಬೇಕಾದ ಅವಶ್ಯಕತೆಯಿರುತ್ತದೆ. ಹಾಗಾದರೆ, ಒಂದು ಸಣ್ಣ ಕೋಶದೊಳಗೆ ನಡೆಯುವ ಎಲ್ಲಾ 20,000 ಪ್ರತಿಕ್ರಿಯೆಗಳನ್ನು ಒಂದೇ ಸಮಯದಲ್ಲಿ ಹೇಗೆ ನಿಯಂತ್ರಿಸಸಾಧ್ಯವಿದೆ?” ಎಂಬುದಾಗಿ ಅವರು ಪ್ರಶ್ನಿಸುತ್ತಾರೆ.

ಮೈಕಲ್‌ ಡೆನ್‌ಟನ್‌, ಅತ್ಯಂತ ಸೂಕ್ಷ್ಮವಾದ ಜೀವಕೋಶಗಳನ್ನು “ಅತಿ ಸಣ್ಣ ಇಲೆಕ್ಟ್ರಾನಿಕ್‌ ಸಾಧನಗಳನ್ನು ತಯಾರಿಸುವ ಕಾರ್ಖಾನೆಗೆ ಹೋಲಿಸಿದನು. ಅದು ನೂರು ಸಾವಿರ ಲಕ್ಷಗಳಷ್ಟು ಅಣುಗಳು ಒಟ್ಟಿಗೆ ಸೇರಿ ಮಾಡಲ್ಪಟ್ಟಿರುವ, ಸುಂದರವಾಗಿ ವಿನ್ಯಾಸಿಸಿರುವ ಸಾವಿರಾರು ಜಟಿಲವಾದ ಪರಮಾಣುವಿನ ಯಂತ್ರಗಳ ಭಾಗಗಳನ್ನು ಹೊಂದಿರುತ್ತದೆ. ಇದು ಮಾನವನು ನಿರ್ಮಿಸಿರುವ ಯಾವುದೇ ಯಂತ್ರಕ್ಕಿಂತಲೂ ಎಷ್ಟೋ ಹೆಚ್ಚು ಜಟಿಲವು ಮತ್ತು ನಿರ್ಜೀವ ಜಗತ್ತಿಗೆ ಯಾವುದೇ ರೀತಿಯಲ್ಲಿ ಸರಿಸಾಟಿಯಿಲ್ಲದ್ದೂ ಆಗಿದೆ.”

ಕೋಶದ ಜಟಿಲತೆಯನ್ನು ಕಂಡು ವಿಜ್ಞಾನಿಗಳು ಇಂದಿಗೂ ಗೊಂದಲದಲ್ಲೇ ಇದ್ದಾರೆ. ಇದರ ಕುರಿತು ಫೆಬ್ರವರಿ 15, 2000ದ ದ ನ್ಯೂಯಾರ್ಕ್‌ ಟೈಮ್ಸ್‌ ಹೇಳಿದ್ದು: “ಜೀವಕೋಶಗಳ ಕುರಿತು ಜೀವಶಾಸ್ತ್ರಜ್ಞರು ಹೆಚ್ಚೆಚ್ಚು ಅರ್ಥಮಾಡಿಕೊಂಡಷ್ಟೂ, ಅವರು ಕಂಡುಹಿಡಿಯುವ ಪ್ರತಿಯೊಂದು ಜೀವಕೋಶದ ಕಾರ್ಯಗತಿಯನ್ನು ನಿರ್ಣಯಿಸುವುದೇ ಹೆಚ್ಚು ಕಂಗೆಡಿಸುವ ಕೆಲಸದಂತೆ ತೋರುತ್ತದೆ. ಸರಾಸರಿ ಮಾನವನ ಕೋಶವು ನೋಡಲಸಾಧ್ಯವಾದಷ್ಟು ಚಿಕ್ಕದಾಗಿದೆ. ಆದರೂ ಯಾವುದೇ ಕ್ಷಣದಲ್ಲೂ ಅದರಲ್ಲಿರುವ 30,000ದಿಂದ 1,00,000ದ ವರೆಗಿನ ಜೀನುಗಳು, ಕೋಶದ ಚಟುವಟಿಕೆಗೆ ಅಗತ್ಯವಿರುವುದನ್ನು ಒದಗಿಸುವುದಕ್ಕಾಗಿ ಇಲ್ಲವೇ ಬೇರೆ ಕೋಶಗಳಿಂದ ಬರುವ ಮಾಹಿತಿಗಳಿಗೆ ಪ್ರತಿಕ್ರಿಯಿಸುವುದಕ್ಕಾಗಿ ಆನ್‌ ಮತ್ತು ಆಫ್‌ ಆಗುತ್ತಾ ಮಿಡಿಯುತ್ತಿರಬಹುದು.”

ಟೈಮ್ಸ್‌ ಪತ್ರಿಕೆಯು ಪ್ರಶ್ನಿಸಿದ್ದೇನೆಂದರೆ, “ಇಷ್ಟೊಂದು ಚಿಕ್ಕದಾಗಿಯೂ ಸಂಕೀರ್ಣವಾಗಿಯೂ ಇರುವ ಈ ಯಂತ್ರವನ್ನು ಎಂದಾದರೂ ಅರ್ಥಮಾಡಿಕೊಳ್ಳುವುದಾದರೂ ಹೇಗೆ? ಒಂದುವೇಳೆ, ಮಾನವನ ಒಂದು ಕೋಶವನ್ನು ಅಸಾಧಾರಣ ಪ್ರಯತ್ನದಿಂದ ಎಂದಾದರೂ ಸಂಪೂರ್ಣವಾಗಿ ಅರ್ಥಮಾಡಿಕೊಂಡರೂ ಕೂಡ, ಮಾನವ ದೇಹದಲ್ಲಿರುವ ಕನಿಷ್ಟಪಕ್ಷ 200 ವಿಭಿನ್ನ ರೀತಿಯ ಕೋಶಗಳನ್ನು ಅರ್ಥಮಾಡಿಕೊಳ್ಳುವುದಾದರೂ ಹೇಗೆ?”

ನೇಚರ್‌ ಎಂಬ ಪತ್ರಿಕೆಯಲ್ಲಿ ಬಂದಿದ್ದ “ನಿಸರ್ಗದ ನಿಜವಾದ ಯಂತ್ರಗಳು” ಎಂಬ ಲೇಖನವು, ಶರೀರದಲ್ಲಿರುವ ಪ್ರತಿಯೊಂದು ಕೋಶದ ಒಳಗೆ ಇರುವ ಪುಟ್ಟ ಯಂತ್ರಗಳನ್ನು ಕಂಡುಹಿಡಿದಿರುವುದರ ಬಗ್ಗೆ ವರದಿಸಿತ್ತು. ಇವು, ಕೋಶಗಳ ಶಕ್ತಿಯ ಮೂಲವಾಗಿರುವ ಅಡಿನೋಸೈನ್‌ ಟ್ರೈಫೋಸ್ಫೇಟ್‌ ಅನ್ನು ಉತ್ಪತ್ತಿಮಾಡುವುದಕ್ಕಾಗಿ ತಿರುಗುತ್ತಿರುತ್ತವೆ. ಇದರ ಕುರಿತು ಒಬ್ಬ ವಿಜ್ಞಾನಿಯು ಹೀಗೆ ಯೋಚಿಸಿದನು: “ಕೋಶಗಳಲ್ಲಿ ನಾವು ನೋಡುವ ಪರಮಾಣುವಿನ ವ್ಯವಸ್ಥೆಯಂತೆಯೇ ಇರುವ ಪರಮಾಣುವಿನ ಯಂತ್ರ ವ್ಯವಸ್ಥೆಯನ್ನು ಹೇಗೆ ವಿನ್ಯಾಸಿಸುವುದು ಮತ್ತು ತಯಾರಿಸುವುದು ಎಂಬುದನ್ನು ನಾವು ಕಲಿತುಕೊಂಡಾಗ ಏನೆಲ್ಲಾ ಸಾಧಿಸಬಹುದು ಎಂದು ಊಹಿಸಿನೋಡಿ!”

ಕೋಶದ ಸೃಜನಾತ್ಮಕ ಸಾಮರ್ಥ್ಯದ ಕುರಿತು ಸ್ವಲ್ಪ ಯೋಚಿಸಿನೋಡಿ! ನಮ್ಮ ದೇಹದ ಒಂದು ಕೋಶದೊಳಗಿರುವ ಡಿಎನ್‌ಏಯಲ್ಲಿ ಸಂಗ್ರಹವಾಗಿರುವ ಒಟ್ಟು ಮಾಹಿತಿಯನ್ನು ಬರೆಯುವುದಾದರೆ, ಅದು ಈ ಪುಟದಂತಿರುವ ಹತ್ತುಲಕ್ಷ ಪುಟಗಳನ್ನು ಆವರಿಸುವುದು! ಅದಕ್ಕಿಂತಲೂ ಹೆಚ್ಚೆಂದರೆ, ಒಂದು ಹೊಸ ಕೋಶವನ್ನು ಉಂಟುಮಾಡುವುದಕ್ಕಾಗಿ ಪ್ರತಿಸಾರಿ ಕೋಶವು ವಿಭಜನೆಗೊಳ್ಳುವಾಗ, ಇದೇ ಮಾಹಿತಿಯು ಹೊಸ ಕೋಶಕ್ಕೂ ಸಾಗಿಸಲ್ಪಡುತ್ತದೆ. ನಮ್ಮ ದೇಹದಲ್ಲಿ 100 ಟ್ರಿಲಿಯನ್ನುಗಳಷ್ಟು ಕೋಶಗಳಿವೆ. ಅವುಗಳಲ್ಲಿ ಪ್ರತಿಯೊಂದು ಕೋಶವು ಈ ಮಾಹಿತಿಯಿಂದ ಸಜ್ಜುಗೊಳಿಸಲ್ಪಡುತ್ತದೆ ಎಂಬುದನ್ನು ನೀವು ಕಲ್ಪಿಸಿನೋಡಲು ಸಾಧ್ಯವಾಗುತ್ತಿದೆಯೇ? ಇದು ಆಕಸ್ಮಿಕವಾಗಿ ಸಂಭವಿಸಿತೇ ಅಥವಾ ಒಬ್ಬ ಮಹಾ ವಿನ್ಯಾಸಗಾರನು ಇದಕ್ಕೆ ಕಾರಣಕರ್ತನಾಗಿದ್ದಾನೆಯೇ?

ಬಹುಶಃ, ನೀವು ಸಹ ಜೀವಶಾಸ್ತ್ರಜ್ಞರಾದ ರಸಲ್‌ ಚಾರ್ಲ್ಸ್‌ ಆರ್ಟಿಸ್ಟ್‌ ಬಂದಂತಹ ಮುಕ್ತಾಯಕ್ಕೆ ಬಂದಿರಬೇಕು. ಅವರು ಹೇಳಿದ್ದು: “ಒಬ್ಬ ಬುದ್ಧಿವಂತ ವ್ಯಕ್ತಿಯೇ ಕೋಶವನ್ನು ಸೃಷ್ಟಿಸಿರಬೇಕು ಎಂಬುದನ್ನು ನಾವು ಅಂಗೀಕರಿಸಲೇ ಬೇಕು. ಇಲ್ಲವಾದಲ್ಲಿ, [ಕೋಶದ] ಆರಂಭದ ಕುರಿತು ಮಾತ್ರವೇ ಅಲ್ಲ, ಅದರ ನಿರಂತರ ಕಾರ್ಯಗತಿಗೆ ಕಾರಣವನ್ನು ಕೊಡಲು ಸಾಧ್ಯವೇ ಇಲ್ಲ.”

ಬೆರಗುಗೊಳಿಸುವ ಪ್ರಕೃತಿಯ ವ್ಯವಸ್ಥೆ

ಅನೇಕ ವರ್ಷಗಳ ಹಿಂದೆ, ಹಾವರ್ಡ್‌ ವಿಶ್ವವಿದ್ಯಾನಿಲಯದಲ್ಲಿ ಆಗಿನ ಭೂವಿಜ್ಞಾನದ ಪ್ರೊಫೆಸರ್‌ ಆಗಿದ್ದ ಕಿರ್ಟಲೆ ಎಫ್‌. ಮೆಧರ್‌ ಎಂಬುವವರು ಈ ಮುಂದಿನ ತೀರ್ಮಾನಕ್ಕೆ ಬಂದರು: “ನಿಯಮ ಮತ್ತು ಶಿಸ್ತಿನಿಂದ ಕೂಡಿರುವ ಒಂದು ವಿಶ್ವದಲ್ಲಿ ನಾವು ಜೀವಿಸುತ್ತಿದ್ದೇವೆಯೇ ಹೊರತು ಆಕಸ್ಮಿಕ ಅಥವಾ ಮನಬಂದಂತೆ ನಡೆಯುವ ವಿಶ್ವದಲ್ಲಲ್ಲ. ಅದರ ಕಾರ್ಯನಿರ್ವಹಣೆಯು ಸಂಪೂರ್ಣವಾಗಿ ವಿವೇಚನೆಯುಳ್ಳದ್ದಾಗಿದೆ ಹಾಗೂ ಅತ್ಯಂತ ಹೆಚ್ಚಿನ ಗೌರವಕ್ಕೂ ಅರ್ಹವಾಗಿದೆ. ಉದಾಹರಣೆಗೆ, ಗಣಿತೀಯವಾಗಿ ಕ್ರಮಬದ್ಧವಾಗಿರುವ ನಿಸರ್ಗದ ವಿಸ್ಮಯಗೊಳಿಸುವ ವಿನ್ಯಾಸವನ್ನು ಗಮನಿಸಿ. ಅದು ಭೌತದ್ರವ್ಯದಲ್ಲಿರುವ ಪ್ರತಿಯೊಂದು ಮೂಲವಸ್ತುವಿಗೆ, ನಾವು ಅನುಕ್ರಮವಾದ ಪರಮಾಣು ಕ್ರಮಾಂಕವನ್ನು ಕೊಡುವಂತೆ ಅನುಮತಿಸುತ್ತದೆ.”

“ಗಣಿತೀಯವಾಗಿ ಕ್ರಮಬದ್ಧವಾಗಿರುವ ನಿಸರ್ಗದ ವಿಸ್ಮಯಗೊಳಿಸುವ ವಿನ್ಯಾಸವನ್ನು” ಸಂಕ್ಷಿಪ್ತವಾಗಿ ನಾವು ನೋಡೋಣ. ಪ್ರಾಚೀನ ಕಾಲದವರಿಗೆ ಪರಿಚಯವಿದ್ದ ಮೂಲವಸ್ತುಗಳೆಂದರೆ * ಚಿನ್ನ, ಬೆಳ್ಳಿ, ತಾಮ್ರ, ತವರ ಮತ್ತು ಕಬ್ಬಿಣಗಳಾಗಿದ್ದವು. ಮಧ್ಯ ಯುಗದಲ್ಲಿ ಜೀವಿಸುತ್ತಿದ್ದ ರಸಾಯನ ವಿಜ್ಞಾನಿಗಳು ಆರ್ಸನಿಕ್‌, ಬಿಸ್ಮತ್‌ ಮತ್ತು ಆಂಟಿಮೊನಿಗಳನ್ನು ಕಂಡುಹಿಡಿದರು. ತರುವಾಯ 1700ರಲ್ಲಿ ಇನ್ನೂ ಅನೇಕ ಮೂಲವಸ್ತುಗಳು ಕಂಡುಹಿಡಿಯಲ್ಪಟ್ಟವು. 1863ರಲ್ಲಿ ಪ್ರತಿಯೊಂದು ಮೂಲವಸ್ತುವು ಹೊರಸೂಸುವ ಬಣ್ಣಗಳ ಪಟ್ಟಿಯನ್ನು ಬೇರ್ಪಡಿಸುವ ಸ್ಪೆಕ್ಟ್ರೋಸ್ಕೋಪಿಯನ್ನು ಉಪಯೋಗಿಸಿ ಇಂಡಿಯಮ್‌ ಅನ್ನು ಕಂಡುಹಿಡಿಯಲಾಯಿತು. ಇದು ಕಂಡುಹಿಡಿಯಲ್ಪಟ್ಟ 63ನೇ ಮೂಲವಸ್ತುವಾಗಿತ್ತು.

ಆ ಸಮಯದಲ್ಲಿ ರಷ್ಯಾದ ರಸಾಯನಶಾಸ್ತ್ರಜ್ಞರಾದ ಡಿಮಿಟ್ರಿ ಇವಾನೋವಿಚ್‌ ಮೆಂಡಿಲೀವ್‌ ಅವರು, ಮೂಲವಸ್ತುಗಳು ಆಕಸ್ಮಿಕವಾಗಿ ಸೃಷ್ಟಿಸಲ್ಪಟ್ಟಿಲ್ಲ ಎಂಬ ತೀರ್ಮಾನಕ್ಕೆ ಬಂದರು. ಕೊನೆಯದಾಗಿ, ಮಾರ್ಚ್‌ 18, 1869ರಲ್ಲಿ “ಮೂಲವಸ್ತುಗಳ ವ್ಯವಸ್ಥೆಯ ಕುರಿತು ಒಂದು ಸ್ಥೂಲ ವಿವರಣೆಯನ್ನು” ನೀಡಿದ ಅವರ ಪ್ರಕರಣ ಗ್ರಂಥವನ್ನು ರಷ್ಯನ್‌ ಕೆಮಿಕಲ್‌ ಸೊಸೈಟಿಗೆ ಓದಿ ತಿಳಿಸಲಾಯಿತು. ಅದರಲ್ಲಿ ಅವರು ಹೇಳುವುದು: ‘ನಾನು ಯಾವುದಾದರೂ ಒಂದು ರೀತಿಯ ನಿಶ್ಚಿತವಾದ ಹಾಗೂ ನಿಖರವಾದ ಮೂಲತತ್ವದ ಮೇಲಾಧರಿಸಿದ ವ್ಯವಸ್ಥೆಯನ್ನು ಸ್ಥಾಪಿಸಲು ಬಯಸುತ್ತೇನೆ ಹೊರತು ಯಾವುದೇ ಆಕಸ್ಮಿಕತೆಯ ಮೇಲಾಧರಿಸಿದ ವ್ಯವಸ್ಥೆಯನ್ನಲ್ಲ.’

ಈ ಪ್ರಸಿದ್ಧ ಪೇಪರಿನಲ್ಲಿ ಮೆಂಡಿಲೀವ್‌ ಮುಂತಿಳಿಸಿದ್ದು: “ಇನ್ನೂ ಅಜ್ಞಾತವಾಗಿರುವ ಅನೇಕ ಸರಳವಾದ ಮೂಲವಸ್ತುಗಳು ಇನ್ನೂ ಕಂಡುಹಿಡಿಯಲ್ಪಡಲಿರುವುದನ್ನು ನಾವು ನಿರೀಕ್ಷಿಸಬೇಕು; ಉದಾಹರಣೆಗೆ, ಅಲ್ಯೂಮಿನಿಯಂ ಮತ್ತು ಸಿಲಿಕಾನ್‌ಗಳಂತೆ 65ರಿಂದ 75ರ ವರೆಗೆ ಪರಮಾಣು ತೂಕಗಳಿರುವ ತದ್ರೀತಿಯ ಮೂಲವಸ್ತುಗಳು ಕಂಡುಹಿಡಿಯಲ್ಪಡಲಿರುವುದನ್ನು ನಿರೀಕ್ಷಿಸಬೇಕು.” ಮೆಂಡಿಲೀವ್‌ 16 ಹೊಸ ಮೂಲವಸ್ತುಗಳಿಗಾಗಿ ಸ್ಥಳವನ್ನು ಬಿಟ್ಟರು. ಕಂಡುಹಿಡಿಯಲ್ಪಡುವುದಕ್ಕೆ ಮುಂಚೆಯೇ ಅವುಗಳ ಕುರಿತು ಹೇಳುತ್ತಿರುವುದಕ್ಕೆ ರುಜುವಾತನ್ನು ಕೊಡುವಂತೆ ಅವರಿಗೆ ಕೇಳಿದಾಗ, ಅವರು ಉತ್ತರಿಸಿದ್ದು: “ನನಗೆ ಯಾವ ಪುರಾವೆಯ ಅಗತ್ಯವೂ ಇಲ್ಲ. ವ್ಯಾಕರಣದಲ್ಲಿ ವಿನಾಯಿತಿ ಇರುವಂತೆ ಪ್ರಕೃತಿಯ ನಿಯಮಕ್ಕೆ ಯಾವುದೇ ವಿನಾಯಿತಿ ಇಲ್ಲ.” ನಂತರ ಅವರು ಕೂಡಿಸಿ ಹೇಳಿದ್ದು: “ನಾನು ಹೇಳಿರುವ ಅಜ್ಞಾತ ಮೂಲವಸ್ತುಗಳು ಕಂಡುಹಿಡಿಯಲ್ಪಡುವಾಗ, ಹೆಚ್ಚು ಜನರು ನಾವು ಹೇಳಿದ ವಿಷಯಗಳ ಕಡೆಗೆ ಗಮನವನ್ನು ಕೊಡುವರು ಎಂದು ನಾನು ಭಾವಿಸುತ್ತೇನೆ.”

ಅವರು ಹೇಳಿದ ಹಾಗೆಯೇ ಆಯಿತು! “ಮುಂದಿನ 15 ವರ್ಷಗಳಲ್ಲಿ ಗ್ಯಾಲಿಯಂ, ಸ್ಕ್ಯಾನ್ಡಿಯಮ್‌ ಮತ್ತು ಜರ್ಮೇನಿಯಮ್‌ಗಳು ಕಂಡುಹಿಡಿಯಲ್ಪಟ್ಟವು. ಅವುಗಳ ಗುಣಲಕ್ಷಣಗಳು ಮೆಂಡಿಲೀವ್‌ ಮುಂತಿಳಿಸಿದ್ದವುಗಳಿಗೆ ನಿಕಟವಾಗಿ ಹೋಲುತ್ತಿದ್ದವು. ಇವು ಮೂಲವಸ್ತುಗಳ ಕ್ರಮಪಟ್ಟಿಯ ಸಪ್ರಮಾಣತೆಯನ್ನು ಮತ್ತು ಅದರ ಮೂಲಕರ್ತನ ಖ್ಯಾತಿಯನ್ನು ರುಜುಪಡಿಸಿದವು” ಎಂಬುದಾಗಿ ಎನ್‌ಸೈಕ್ಲೊಪೀಡಿಯ ಅಮೆರಿಕಾನ ವಿವರಿಸುತ್ತದೆ. 20ನೇ ಶತಮಾನದ ಆರಂಭದೊಳಗಾಗಿ, ಈಗ ಅಸ್ತಿತ್ವದಲ್ಲಿರುವ ಎಲ್ಲಾ ಮೂಲವಸ್ತುಗಳು ಕಂಡುಹಿಡಿಯಲ್ಪಟ್ಟಿದ್ದವು.

ಸ್ಪಷ್ಟವಾಗಿಯೇ, “ಈ ಸುಂದರವಾದ ಜೋಡಣೆಯು ಖಂಡಿತ ಆಕಸ್ಮಿಕವಾಗಿ ಬರಲು ಸಾಧ್ಯವೇ ಇಲ್ಲ” ಎಂಬುದಾಗಿ ಸಂಶೋಧಕ ರಸಾಯನಶಾಸ್ತ್ರಜ್ಞರಾದ ಎಲ್ಮರ್‌ ಡಬ್ಲ್ಯೂ ಮೌರರ್‌ ಗಮನಿಸುತ್ತಾರೆ. ಮೂಲವಸ್ತುಗಳ ಸುಸಂಗತವಾದ ಅನುಕ್ರಮವು ಆಕಸ್ಮಿಕವಾಗಿದೆ ಎಂಬ ಸಾಧ್ಯತೆಯ ಕುರಿತು ತಾನೇ ರಸಾಯನಶಾಸ್ತ್ರದ ಪ್ರೊಫೆಸರ್‌ ಆಗಿರುವ ಜಾನ್‌ ಕ್ಲೀವ್‌ಲ್ಯಾಂಡ್‌ ಕೋಥರನ್‌ ಹೇಳಿದ್ದು: “ಕಂಡುಹಿಡಿಯಲ್ಪಟ್ಟಿರುವ ಎಲ್ಲಾ ಮೂಲವಸ್ತುಗಳ ಅಸ್ತಿತ್ವದ ಕುರಿತು ಮೆಂಡಿಲೀವ್‌ನ ಭವಿಷ್ಯವಾಣಿ ಹಾಗೂ ಅವುಗಳಲ್ಲಿ ಇಂಥ ಗುಣಗಳೇ ಇರುವುದು ಎಂದು ಮುಂತಿಳಿಸಿದ ಅವುಗಳ ಗುಣಲಕ್ಷಣಗಳು ಕೂಡ ಹೆಚ್ಚುಕಡಿಮೆ ಒಂದೇ ರೀತಿಯಲ್ಲಿದ್ದವು. ಇವು ಮೂಲವಸ್ತುಗಳ ಅನುಕ್ರಮವು ಆಕಸ್ಮಿಕವಾಗಿ ಬಂದಿವೆ ಎಂಬ ಯಾವುದೇ ಸಾಧ್ಯತೆಯನ್ನು ಬುಡಮೇಲುಮಾಡಿದವು. ಅವರ ಪ್ರಸಿದ್ಧ ಸಾಮಾನ್ಯೀಕರಣವನ್ನು ಎಂದೂ ‘ಮೂಲವಸ್ತುಗಳ ಆಕಸ್ಮಿಕ ಕ್ರಮಪಟ್ಟಿ’ ಎಂದು ಕರೆಯಲ್ಪಟ್ಟಿರಲಿಲ್ಲ. ಅದಕ್ಕೆ ಬದಲಾಗಿ, ಅದನ್ನು ‘ಮೂಲವಸ್ತುಗಳ ನಿಯಮ’ ಎಂದು ಕರೆಯಲಾಯಿತು.

ಒಬ್ಬ ಪ್ರಸಿದ್ಧ ಭೌತವಿಜ್ಞಾನಿ ಹಾಗೂ ಕೇಂಬ್ರಿಡ್ಜ್‌ ವಿಶ್ವವಿದ್ಯಾನಿಲಯದಲ್ಲಿ ಗಣಿತಶಾಸ್ತ್ರದ ಪ್ರೊಫೆಸರ್‌ ಆಗಿದ್ದ ಪಿ. ಎ. ಎಮ್‌ ಡೈರಕ್‌ರವರು, ಮೂಲವಸ್ತುಗಳ ಕುರಿತು ಹಾಗೂ ವಿಶ್ವದಲ್ಲಿರುವ ಪ್ರತಿಯೊಂದನ್ನು ಉಂಟುಮಾಡಲು ಅವು ಹೇಗೆ ಒಂದಕ್ಕೊಂದು ಸರಿಹೊಂದುತ್ತವೆ ಎಂಬುದರ ಕುರಿತು ಆಳವಾಗಿ ಅಧ್ಯಯನಿಸಿದ್ದಾರೆ. ಅವರ ಈ ಅಧ್ಯಯನವು ಅವರನ್ನು ಹೀಗೆ ಹೇಳುವಂತೆ ಮಾಡಿತು: “ದೇವರು ಅತಿ ಮಹಾನ್‌ ಗಣಿತಶಾಸ್ತ್ರಜ್ಞನಾಗಿದ್ದಾನೆ ಹಾಗೂ ಈ ವಿಶ್ವವನ್ನು ನಿರ್ಮಿಸುವುದಕ್ಕಾಗಿ ಆತನು ಹೆಚ್ಚು ಮುಂದುವರಿದ ಗಣಿತಶಾಸ್ತ್ರವನ್ನು ಉಪಯೋಗಿಸಿದ್ದಾನೆ ಎಂದು ಹೇಳುವಂತೆ ಒಬ್ಬನನ್ನು ನಡೆಸಬಹುದು.”

ಕಣ್ಣಿಗೆ ಕಾಣಿಸದಿರುವ ವಸ್ತುಗಳನ್ನು ಇಣುಕಿನೋಡುವಾಗ ನಿಜವಾಗಿಯೂ ಅದು ನಮ್ಮನ್ನು ಮುಗ್ಧಗೊಳಿಸುವಂತಹದ್ದಾಗಿದೆ. ಅವುಗಳಲ್ಲಿ ಅತ್ಯಂತ ಸೂಕ್ಷ್ಮವಾದ ಅಣುಗಳು, ಪರಮಾಣುಗಳು ಮತ್ತು ಜೀವ ಕೋಶಗಳು ಹಾಗೂ ಮಾನವನ ಕಣ್ಣಿಗೆ ನೋಡಲು ಅಸಾಧ್ಯವಾದ ನಕ್ಷತ್ರಗಳ ಬೃಹದಾಕಾರದ ಆಕಾಶಗಂಗೆಗಳು ಸೇರಿವೆ! ಈ ಅನುಭವವು ನಮ್ಮನ್ನು ತಗ್ಗಿಸುವಂಥದ್ದಾಗಿದೆ. ಇವೆಲ್ಲವನ್ನು ಓದಿದ ಮೇಲೆ, ನೀವು ಯಾವ ರೀತಿಯಲ್ಲಿ ಪ್ರಭಾವಿಸಲ್ಪಟ್ಟಿದ್ದೀರಿ? ಈ ವಸ್ತುಗಳಲ್ಲಿ ಏನು ಪ್ರತಿಬಿಂಬಿತವಾಗುತ್ತಿರುವುದನ್ನು ನೀವು ನೋಡುತ್ತೀರಿ? ಕಣ್ಣಿಗೆ ಕಾಣಿಸದ ವಸ್ತುಗಳನ್ನು ನೀವು ನೋಡುತ್ತಿದ್ದೀರೋ?

[ಪಾದಟಿಪ್ಪಣಿ]

^ ಮೂಲಭೂತ ಪದಾರ್ಥಗಳು ಒಂದೇ ರೀತಿಯ ಅಣುಗಳನ್ನು ಹೊಂದಿರುತ್ತವೆ. 88 ಮೂಲವಸ್ತುಗಳು ಮಾತ್ರ ಭೂಮಿಯಲ್ಲಿ ಸಹಜವಾಗಿಯೇ ದೊರಕುತ್ತವೆ.

[ಪುಟ 5ರಲ್ಲಿರುವ ಚೌಕ/ಚಿತ್ರಗಳು]

ಮಿಂಚಿನ ವೇಗ

ನಾಗಾಲೋಟದಲ್ಲಿ ಓಡುತ್ತಿರುವ ಕುದುರೆಯ ವೇಗವು ಹೆಚ್ಚು ತೀವ್ರವಾಗಿರುತ್ತದೆ. ಹೀಗೆ ಕುದುರೆಯು ಓಡುತ್ತಿರುವ ಸಮಯದಲ್ಲಿ, ಅದರ ನಾಲ್ಕು ಗೊರಸುಗಳು ಯಾವುದೇ ಕ್ಷಣದಲ್ಲೂ ನೆಲದಿಂದ ಮೇಲಕ್ಕಿರುವವೋ ಎಂಬುದಾಗಿ 19ನೇ ಶತಮಾನದಲ್ಲಿದ್ದ ಕೆಲವರು ವಾಗ್ವಾದಮಾಡಿದರು. ಕೊನೆಗೆ, 1872ರಲ್ಲಿ ಎಡ್ವರ್ಡ್‌ ಮೈಬ್ರಿಜ್‌ ಛಾಯಾಚಿತ್ರಗಳ ಮೂಲಕ ಪ್ರಯೋಗಗಳನ್ನು ಮಾಡತೊಡಗಿದನು. ಅದು ಕೊನೆಯಲ್ಲಿ ಈ ವಿವಾದಾಂಶವನ್ನು ಇತ್ಯರ್ಥಮಾಡಿತು. ಈ ಮೈಬ್ರಿಜನೇ ಪ್ರಪ್ರಥಮವಾಗಿ ಹೆಚ್ಚು ವೇಗವಾದ ಚಲನಚಿತ್ರಗಳನ್ನು ತಯಾರಿಸುವ ತಂತ್ರವನ್ನು ಕಂಡುಹಿಡಿದನು.

ಮೈಬ್ರಿಜ್‌ 24 ಕ್ಯಾಮರಾಗಳನ್ನು ಒಂದರ ಪಕ್ಕ ಒಂದರಂತೆ ಸ್ವಲ್ಪ ದೂರದಲ್ಲಿ ಸಾಲಾಗಿ ನಿಲ್ಲಿಸಿದನು. ಪ್ರತಿಯೊಂದು ಕ್ಯಾಮರಾದ ಮುಚ್ಚಳಕ್ಕೆ ಒಂದು ದಾರವನ್ನು ಕಟ್ಟಿ ಅದನ್ನು ಕುದುರೆಯು ಓಡುವ ಹಾದಿಯ ವರೆಗೆ ಎಳೆದು ಕಟ್ಟಿದ್ದನು. ಹೀಗೆ, ಕುದುರೆಯು ನಾಗಾಲೋಟದಲ್ಲಿ ಓಡುತ್ತಿರುವಾಗ, ಅದರ ಕಾಲು ದಾರಗಳಿಗೆ ತಗಲಿ ಕ್ಯಾಮರಾಗಳು ಕ್ಲಿಕ್‌ ಆದವು. ಈ ರೀತಿಯಾಗಿ ತೆಗೆದ ಛಾಯಾಚಿತ್ರಗಳನ್ನು ವಿಶ್ಲೇಷಣೆ ಮಾಡಿದಾಗ, ಕೆಲವೊಮ್ಮೆ ಕುದುರೆಯು ಸಂಪೂರ್ಣವಾಗಿ ನೆಲದಿಂದ ಮೇಲಿದ್ದು ಗಾಳಿಯಲ್ಲಿ ಹಾರುತ್ತಿರುವುದನ್ನು ಆ ಚಿತ್ರಗಳು ತೋರಿಸಿದವು.

[ಕೃಪೆ]

Courtesy George Eastman House

[ಪುಟ 7ರಲ್ಲಿರುವ ಚಿತ್ರ]

ಘನೀಭವಿಸಿದ ನೀರು ಮುಳುಗುವುದಕ್ಕೆ ಬದಲಾಗಿ ಏಕೆ ತೇಲುತ್ತದೆ?

[ಪುಟ 7ರಲ್ಲಿರುವ ಚಿತ್ರ]

ಒಂದು ಡಿಎನ್‌ಏ ಪರಮಾಣುವಿನ ವ್ಯಾಸವು 0.0000025 ಮಿಲಿಮೀಟರ್‌ ಆಗಿದೆ. ಆದರೂ ಅದರಲ್ಲಿರುವ ಮಾಹಿತಿಯು ಹತ್ತುಲಕ್ಷದಷ್ಟು ಪುಟಗಳನ್ನು ಆವರಿಸುವುದು

[ಕೃಪೆ]

ಕಂಪ್ಯೂಟರಿನ ಸಹಾಯದಿಂದ ಮಾಡಲ್ಪಟ್ಟ ಡಿಎನ್‌ಏಯ ಮಾಡೆಲ್‌: Donald Struthers/Tony Stone Images

[ಪುಟ 8ರಲ್ಲಿರುವ ಚಿತ್ರ]

ನಮ್ಮ ದೇಹದಲ್ಲಿ ಒಟ್ಟು 100 ಟ್ರಿಲಿಯನ್‌ ಕೋಶಗಳಿವೆ. ಅವುಗಳಲ್ಲಿ ಪ್ರತಿಯೊಂದು ಕೋಶದಲ್ಲೂ ಹತ್ತಾರು ಸಾವಿರದಷ್ಟು ರಸಾಯನಿಕ ಪ್ರತಿಕ್ರಿಯೆಗಳು ಸುಸಂಘಟಿತ ರೀತಿಯಲ್ಲಿ ನಡೆಯುತ್ತಿರುತ್ತವೆ

[ಕೃಪೆ]

Copyright Dennis Kunkel, University of Hawaii

[ಪುಟ 9ರಲ್ಲಿರುವ ಚಿತ್ರಗಳು]

ರಷ್ಯಾದ ರಸಾಯನಶಾಸ್ತ್ರಜ್ಞರಾದ ಮೆಂಡಿಲೀವ್‌, ಮೂಲವಸ್ತುಗಳು ಆಕಸ್ಮಿಕವಾಗಿ ಸೃಷ್ಟಿಸಲ್ಪಟ್ಟಿಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದರು

[ಕೃಪೆ]

Courtesy National Library of Medicine