ಕಬ್ಬು ಹುಲ್ಲಿನ ಜಾತಿಯಲ್ಲಿಯೇ ದೈತ್ಯ
ಕಬ್ಬು ಹುಲ್ಲಿನ ಜಾತಿಯಲ್ಲಿಯೇ ದೈತ್ಯ
ಆಸ್ಟ್ರೇಲಿಯದ ಎಚ್ಚರ! ಸುದ್ದಿಗಾರರಿಂದ
ಸಕ್ಕರೆ ಇಲ್ಲದಿದ್ದರೆ ಏನಾಗಬಹುದು? ಲೋಕದಲ್ಲಿ ಏನೊಂದೂ ಕೆಲಸವು ನಡೆಯದು ಎಂದು ಹೇಳುವುದು ಅತಿಯಾಗುವುದು. ಆದರೆ ಒಂದು ಮಾತಂತೂ ಸತ್ಯ, ಸಕ್ಕರೆ ಏನಾದರೂ ಇಲ್ಲದೇ ಹೋಗುವುದಾದರೆ ಅನೇಕ ಆಹಾರವನ್ನು ನಾವು ಬದಲಾಯಿಸಬೇಕಾಗಬಹುದು. ಹೌದು, ಇಂದು ಲೋಕದ ಅನೇಕ ಭಾಗಗಳಲ್ಲಿ ಸಕ್ಕರೆಯನ್ನು ದಿನನಿತ್ಯವೂ ಬಳಸುತ್ತಾರೆ. ಹೀಗೆ ಸಕ್ಕರೆ ತಯಾರಿಕೆಯನ್ನು ಇದು ಲೋಕವ್ಯಾಪಕ ಕಸಬನ್ನಾಗಿ ಮಾಡಿದೆ.
ಕ್ಯೂಬದಿಂದ ಭಾರತದ ವರೆಗೆ ಹಾಗೂ ಬ್ರಸಿಲ್‌ನಿಂದ ಆಫ್ರಿಕದ ವರೆಗೆ ಲಕ್ಷಾಂತರ ಜನರು ಕಬ್ಬನ್ನು ಬೆಳೆಸುತ್ತಾರೆ. ಒಂದು ಸಮಯದಲ್ಲಿ ಸಕ್ಕರೆ ತಯಾರಿಕೆಯು ಲೋಕದ ಅತ್ಯಂತ ದೊಡ್ಡ ಹಾಗೂ ಅತ್ಯಂತ ಲಾಭಕರವಾದ ಕಸಬಾಗಿತ್ತು. ಬೇರೆ ಕೆಲವು ಸಸಿಗಳಿಗೆ ಹೋಲಿಸುವಾಗ ಕಬ್ಬು ಈ ಲೋಕದ ಮೇಲೆ ಹೆಚ್ಚು ಪ್ರಭಾವವನ್ನು ಬೀರಿದೆ ಎಂದು ಹೇಳಸಾಧ್ಯವಿದೆ.
ಈ ಗಮನಾರ್ಹ ಸಸಿಯ ಬಗ್ಗೆ ಇನ್ನೂ ಹೆಚ್ಚಿನ ವಿಷಯವನ್ನು ನೀವು ತಿಳಿದುಕೊಳ್ಳಲು ಇಷ್ಟಪಡುತ್ತೀರೋ? ಹಾಗಾದರೆ, ಕಬ್ಬನ್ನು ಬೆಳೆಯುವ ಜಾಗವಾದ ಆಸ್ಟ್ರೇಲಿಯದ ಕ್ವೀನ್ಸ್‌ಲ್ಯಾಂಡ್‌ಗೆ ನಾವು ಹೋಗೋಣ. ಇಲ್ಲಿ ಮಿತವಾದ ಕಬ್ಬಿನ ಬೆಳೆಯನ್ನು ಬೆಳೆಸುತ್ತಾರಾದರೂ, ಪರಿಣಾಮಕಾರಿಯಾದ ಉಳುಮೆ ಹಾಗೂ ಸಂಸ್ಕರಿಸುವಿಕೆಯ ವಿಧಾನಗಳಿಂದಾಗಿ, ಈ ಸ್ಥಳವು ಕಚ್ಚಾ ಸಕ್ಕರೆಯನ್ನು ರಫ್ತುಮಾಡುವುದರಲ್ಲಿ ವಿಶ್ವದಲ್ಲಿಯೇ ಅಗ್ರಸ್ಥಾನವನ್ನು ಪಡೆದಿದೆ.
ಕಬ್ಬು ಬೆಳೆಯುವ ದೇಶಕ್ಕೆ ಒಂದು ಭೇಟಿ
ಗಾಳಿಯು ಬಿಸಿಯಾಗಿದ್ದು, ತೇವಾಂಶವುಳ್ಳದ್ದಾಗಿದೆ. ಉಷ್ಣವಲಯದ ಸೂರ್ಯನು ತನ್ನ ಕಿರಣವನ್ನು ಕಟಾವಿಗೆ ಸಿದ್ಧವಾದ ಕಬ್ಬಿನ ಹೊಲದ ಮೇಲೆ ಪ್ರಖರವಾಗಿ ಬೀರುತ್ತಿದ್ದಾನೆ. ಗೋದಿ ಬೆಳೆಯನ್ನು ಕಟಾವು ಮಾಡುವ ಯಂತ್ರವನ್ನು ಹೋಲುವ ಒಂದು ದೊಡ್ಡ ಯಂತ್ರವು, ಉದ್ದುದ್ದವಾಗಿ ಬೆಳೆದಿರುವ ಕಬ್ಬಿನ ಮೇಲಿಂದ ನಿಧಾನವಾಗಿ ಹಾದುಹೋಗಿ, ಕಟಾವು ಮಾಡುತ್ತಿದೆ. ಹಾಗೂ ಕೊಯ್ದ ಕಬ್ಬಿನ ದಿಂಡನ್ನು ಕತ್ತರಿಸಿ ಪಕ್ಕದಲ್ಲಿಯೇ ಬರುತ್ತಿರುವ ಟ್ರೇಯ್ಲರ್‌ನಲ್ಲಿ ಹಾಕುತ್ತಿದೆ. ಕತ್ತರಿಸಲ್ಪಟ್ಟ ಕಬ್ಬಿನಿಂದ ರಸವು ಜಿನುಗುತ್ತಿದೆ ಮತ್ತು ಸವಿಯಾದ, ಹಳಸಿದ ವಾಸನೆಯು ಗಾಳಿಯಲ್ಲಿ ಪಸರಿಸಿದೆ. ಗಮನಾರ್ಹವಾದ ಈ ಹುಲ್ಲಿನ ಜಾತಿಯಿಂದ ಸಿಗುವ ಅಮೂಲ್ಯ ರಸವು, ಹೊಲದಿಂದ ನಿಮ್ಮ ಮೇಜಿನ ಮೇಲಿರುವ ಸಕ್ಕರೆಯ ಡಬ್ಬಕ್ಕೆ ಪ್ರಯಾಣವನ್ನು ಆರಂಭಿಸಿದೆ.
ಸ್ವಲ್ಪ ಸಮಯದ ಹಿಂದೆ, ಆಸ್ಟ್ರೇಲಿಯದಲ್ಲಿ ಕಬ್ಬನ್ನು ಕೈಯಿಂದ ಕಷ್ಟಪಟ್ಟು ಕತ್ತರಿಸಬೇಕಾಗಿತ್ತು. ಈ ರೀತಿಯಲ್ಲಿ ಈಗಲೂ ಅನೇಕ ದೇಶಗಳಲ್ಲಿ ಕಟಾವು ಮಾಡಲಾಗುತ್ತದೆ. ಯಾವ ರೀತಿಯಲ್ಲಿ ಕಟಾವು ಮಾಡಬಹುದು ಎಂಬುದನ್ನು ಮನದಲ್ಲಿ ಕಲ್ಪಿಸಿಕೊಳ್ಳಿರಿ. ಕೆಲಸಗಾರರು ಕೈಯಿಂದ ಕಬ್ಬನ್ನು ಕೊಯ್ಯುತ್ತಿದ್ದಾರೆ. ಬೆವರಿನಲ್ಲಿ ತೋಯ್ದುಹೋಗಿರುವ ಕೆಲಸಗಾರರು ಹೊಲದಲ್ಲಿ ಕಬ್ಬನ್ನು ಕೊಯ್ಯುತ್ತಾ, ನಿಧಾನವಾಗಿ ಮುಂದೆ ಮುಂದೆ ಸಾಗುತ್ತಿದ್ದಾರೆ. ಮಿಲಿಟರಿ ವಿಧಾನದ ಹಾಗೆ, ಒಂದು ಚೂರು ಗುರಿತಪ್ಪದ ಹಾಗೆ, ಕೆಲಸಗಾರರು ನೆಟ್ಟಗೆ ನಿಂತಿರುವ ಕಬ್ಬಿನ ದಿಂಡುಗಳ ಗೊನೆಯನ್ನು ಒಂದು ಕೈಯಲ್ಲಿ ಬಾಚಿ ಹಿಡಿದುಕೊಂಡು, ಒಂದು ಕಡೆಗೆ ಅದನ್ನು ಬಾಗಿಸುತ್ತಾರೆ. ಕಚಕ್ ಎಂದು ಶಬ್ದಮಾಡುತ್ತಾ ಅವರ ಕುಡುಗೋಲುಗಳು ಅದನ್ನು ಕಡಿದುಹಾಕುತ್ತವೆ! ಕೆಲಸಗಾರರು ತಮ್ಮ ಬಲವಾದ ತೋಳುಗಳನ್ನು ಬೀಸುತ್ತಾ, ಕುಡುಗೋಲುಗಳಿಂದ ದಿಂಡುಗಳನ್ನು ಕತ್ತರಿಸುತ್ತಾರೆ. ಅವುಗಳನ್ನು ನೀಟಾಗಿ ಒಂದು ಕಡೆ ಎಸೆಯುತ್ತಾ,
ಕಬ್ಬಿನ ಇನ್ನೊಂದು ದಿಂಡನ್ನು ಕೈಗೆತ್ತಿಕೊಳ್ಳುತ್ತಾರೆ. ಈ ರೀತಿಯ ವಿಧಾನವು ಲೋಕವ್ಯಾಪಕವಾಗಿ ಕ್ರಮೇಣವಾಗಿ ಬದಲಾಗುತ್ತಿದೆ. ಏಕೆಂದರೆ ಹೆಚ್ಚೆಚ್ಚು ದೇಶಗಳು ಯಂತ್ರವನ್ನು ಉಪಯೋಗಿಸುತ್ತಿವೆ.ಆಸ್ಟ್ರೇಲಿಯದಲ್ಲಿ ಕಬ್ಬನ್ನು ಬೆಳೆಯುವ ಪ್ರದೇಶವು, ಸುಮಾರು 2,100 ಕಿಲೊಮೀಟರುಗಳಷ್ಟು ಉದ್ದದ ಕರಾವಳಿಯ ಪ್ರದೇಶದಲ್ಲಿದ್ದು, ಪ್ರಖ್ಯಾತ ಗ್ರೇಟ್ ಬ್ಯಾರಿಯರ್ ರೀಫ್‌ಗೆ ಸಮಾಂತರವಾಗಿದೆ. ವರ್ಷಪೂರ್ತಿ ಇಲ್ಲಿನ ಹವಾಮಾನವು ಕೊಂಚ ಬಿಸಿಯಾಗಿದ್ದು, ತೇವಾಂಶವಿರುವುದರಿಂದ, ಕಬ್ಬು ಹುಲುಸಾಗಿ ಬೆಳೆಯುತ್ತದೆ. ಮತ್ತು ಇಲ್ಲಿರುವ ಸುಮಾರು 6,500 ಕಬ್ಬು ಬೆಳೆಗಾರರು, ಪುಟ್ಟ ವ್ಯವಸಾಯದ ಜಮೀನಿನ ವಾಸದ ಮನೆಗಳಲ್ಲಿ ವಾಸಿಸುತ್ತಾರೆ. ಇದು ಕರಾವಳಿಯ ಉದ್ದಕ್ಕೂ ದ್ರಾಕ್ಷಿಬಳ್ಳಿಯಲ್ಲಿ ದ್ರಾಕ್ಷಿಗೊಂಚಲುಗಳು ಹೇಗೆ ಕಾಣುತ್ತವೋ ಹಾಗೆ ಕಾಣುತ್ತದೆ.
ಬಹುದೂರದ ವರೆಗೆ ಹೋದ ಮೇಲೆ, ಕ್ವೀನ್ಸ್‌ಲ್ಯಾಂಡ್‌ನ ಮಧ್ಯ ಕರಾವಳಿಯ ಬ್ಯಾಂಡಬೆರ್ಗ್‌ನಲ್ಲಿರುವ ಸಕ್ಕರೆ ನಗರವು ನಮ್ಮ ಕಣ್ಣಿಗೆ ಬೀಳುತ್ತದೆ. ಒಂದು ಚಿಕ್ಕ ಬೆಟ್ಟದಿಂದ ಕೆಳಗಿಳಿದಂತೆ, ಸುಂದರ ಸೊಬಗಿನ ದೃಶ್ಯವು ನಮ್ಮನ್ನು ಕೈ ಬೀಸಿ ಕರೆಯುತ್ತದೆ. ಕಣ್ಣು ಹಾಯಿಸಿದಷ್ಟು ದೂರಕ್ಕೂ ಕಬ್ಬಿನ ಬೆಳೆ ಬಾಗಿ ಬಳುಕುತ್ತಿದೆ! ಎಂತಹ ರಂಗುರಂಗಿನ ಬೆಡಗು! ಒಂದೊಂದು ಕಬ್ಬಿನ ಹೊಲವು ಒಂದೊಂದು ಹಂತದಲ್ಲಿದೆಯಾದುದರಿಂದ, ಅದು ತೇಪೆಹಾಕಿದಂತೆ ಕಾಣಿಸುತ್ತದೆ. ಅಂದರೆ ಅಲ್ಲಲ್ಲಿ ಹಸಿರು ಮತ್ತು ಹೊಂಬಣ್ಣದ ರಂಗುಗಳು ಹಾಗೂ ಈ ವರ್ಷದಲ್ಲಿ ಪಾಳುಬಿಟ್ಟ ಇಲ್ಲವೆ ಇತ್ತೀಚೆಗಷ್ಟೇ ಕಟಾವು ಮಾಡಿದ ಭೂಮಿಯ ಮಧ್ಯೆ ಮಧ್ಯೆ, ಚಿಕ್ಕ ಚಿಕ್ಕ ತೇಪೆಯಂತಹ ಚಾಕಲೇಟ್ ಬಣ್ಣವನ್ನು ನೋಡಬಹುದು.
ಇಡೀ ವರ್ಷದಲ್ಲಿಯೇ ಜುಲೈ ತಿಂಗಳು ಬಹಳ ತಣ್ಣಗಿರುತ್ತದೆ. ಆಗ ಕಟಾವಿನ ಕೆಲಸ ಹಾಗೂ ಗಾಣದ ಕಾಲವು ಪ್ರಾರಂಭವಾಗುತ್ತದೆ. ಬೆಳೆಯು ವಿವಿಧ ಹಂತಗಳಲ್ಲಿ ಬಲಿತ ಹಾಗೆ ಇದು ಡಿಸೆಂಬರ್ ತಿಂಗಳ ವರೆಗೆ ಮುಂದುವರಿಯುತ್ತದೆ. ಕಟಾವು ಮಾಡಿದ ಕಬ್ಬನ್ನು ಏನು ಮಾಡಲಾಗುತ್ತದೆ ಎಂಬುದನ್ನು ನೋಡಲಿಕ್ಕಾಗಿ ನಾವು ಬಹಳ ಉತ್ಸುಕರಾಗಿದ್ದೇವಲ್ಲವೇ? ಹಾಗಾದರೆ, ಈಗ ನಾವು ಸಕ್ಕರೆ ಕಾರ್ಖಾನೆಗೆ ಹೋಗೋಣ. ಅಲ್ಲಿಗೆ ಹೋಗುವ ಮುಂಚೆ, ಕಬ್ಬಿನ ಬಗ್ಗೆ ಇನ್ನೂ ಹೆಚ್ಚನ್ನು ತಿಳಿದುಕೊಳ್ಳುವುದು ಒಳ್ಳೆಯದು. ಆದುದರಿಂದ, ಆ ಪ್ರದೇಶದಲ್ಲಿರುವ ಸಕ್ಕರೆ ಪ್ರಯೋಗಾಲಯಕ್ಕೆ ನಾವು ಮೊದಲು ಭೇಟಿ ನೀಡೋಣ. ಇಲ್ಲಿ ವಿಜ್ಞಾನಿಗಳು ಕಬ್ಬಿನ ಹೊಸಹೊಸ ತಳಿಯನ್ನು ವಿಕಸಿಸಲು ಮತ್ತು ಕಬ್ಬಿನ ವ್ಯವಸಾಯವನ್ನು ಹಾಗೂ ಉತ್ಪಾದನೆಯನ್ನು ಉತ್ತಮಗೊಳಿಸಲು ಸಂಶೋಧನೆಯನ್ನು ಮಾಡುತ್ತಾರೆ.
ಇದರ ಹುಟ್ಟು ಹಾಗೂ ಕೃಷಿ
ಸಕ್ಕರೆ ಸಂಶೋಧನಾ ಕೇಂದ್ರದಲ್ಲಿ, ಸಹಕಾರ ಮನೋಭಾವವುಳ್ಳ ಬೆಳೆವಿಜ್ಞಾನಿಗಳು ಕಬ್ಬಿನ ಬಗ್ಗೆ ತಿಳಿಸಲು ಹಾಗೂ ಅದು ಹೇಗೆ ಬೆಳೆಯುತ್ತದೆ ಎಂಬುದನ್ನು ವಿವರಿಸಲು ಬಹಳ ಉತ್ಸುಕರಾಗಿದ್ದರು. ಆಗ್ನೇಯ ಭಾಗದ ಏಷ್ಯಾ ಹಾಗೂ ನ್ಯೂ ಗಿನಿಯ ಮಳೆಗಾಡಿನಲ್ಲಿ ಇದನ್ನು ಮೊದಲು ಕಂಡುಕೊಳ್ಳಲಾಯಿತು. ಹುಲ್ಲಿನ ಜಾತಿಯಲ್ಲಿಯೇ, ಅಂದರೆ ಹುಲ್ಲು, ಧಾನ್ಯ, ಹಾಗೂ ಬಿದಿರುಗಳಲ್ಲಿಯೇ ಕಬ್ಬು ದೈತ್ಯ ಜಾತಿಯದ್ದಾಗಿದೆ. ಈ ಎಲ್ಲ ಸಸ್ಯಗಳು ದ್ಯುತಿಸಂಶ್ಲೇಷಣೆಯ ಮೂಲಕ ತಮ್ಮ ಎಲೆಗಳಿಂದ ಸಕ್ಕರೆಯನ್ನು ಉತ್ಪಾದಿಸುತ್ತವೆ. ಆದರೆ ಕಬ್ಬು ಅವುಗಳಿಗಿಂತಲೂ ಭಿನ್ನವಾಗಿದೆ, ಹೇಗೆಂದರೆ ಅದು ಸಕ್ಕರೆಯನ್ನು ಎಷ್ಟು ಹೆಚ್ಚು ಪ್ರಮಾಣದಲ್ಲಿ ಉತ್ಪಾದಿಸುತ್ತದೆ ಎಂದರೆ, ಸಕ್ಕರೆಯನ್ನು ರಸದೋಪಾದಿ ತನ್ನ ಒಂದೊಂದು ನಾರಿನ ದಂಟಿನಲ್ಲೂ ಶೇಖರಿಸಿಡುತ್ತದೆ.
ಪುರಾತನ ಭಾರತದಲ್ಲಿ ಕಬ್ಬನ್ನು ಹೆಚ್ಚಾಗಿ ಬೆಳೆಯಲಾಗುತ್ತಿತ್ತು. ಅಲ್ಲಿ ಸಾ.ಶ.ಪೂ. 327ರಲ್ಲಿ ಮಹಾ ಅಲೆಕ್ಸಾಂಡರ್‌ನ ದಂಡೆತ್ತಿ ಹೋಗುತ್ತಿದ್ದ ಸೇನೆಗಳಲ್ಲಿದ್ದ ಗುಮಾಸ್ತರು, ಅಲ್ಲಿನ ನಿವಾಸಿಗಳು “ಜೇನುನೊಣದ ಸಹಾಯವಿಲ್ಲದೆ ಒಂದು ರೀತಿಯ ಜೇನನ್ನು ಒಳಗೊಂಡ ಜೊಂಡನ್ನು ಅಗಿಯುತ್ತಿರುವುದನ್ನು” ಗಮನಿಸಿದರು. 15ನೇ ಶತಮಾನದಲ್ಲಿ ಲೋಕದ ಪರಿಶೋಧನೆ ಹಾಗೂ ವಿಕಸನೆಯು ವೇಗವನ್ನು ಪಡೆದುಕೊಂಡಂತೆ, ಕಾಡ್ಗಿಚ್ಚಿನಂತೆ ಕಬ್ಬು ಎಲ್ಲೆಲ್ಲೂ ಕಾಣಸಿಗಲಾರಂಭಿಸಿತು. ಇಂದು ಸುಮಾರು ಸಾವಿರ ರೀತಿಯ ಕಬ್ಬಿನ ಬೆಳೆಯಿದೆ. ಸುಮಾರು 80 ದೇಶಗಳು ವರ್ಷಕ್ಕೆ ಒಂದು ಶತಕೋಟಿ ಟನ್‌ಗಳಷ್ಟು ಬೆಳೆಯನ್ನು ಬೆಳೆಸುತ್ತವೆ.
ಲೋಕದ ಹೆಚ್ಚಿನ ಭಾಗಗಳಲ್ಲಿ, ಸಸಿ ನೆಡುವುದು ಬಹಳ ಪ್ರಯಾಸಕರವಾದ ಕೆಲಸವಾಗಿದೆ. ಬಲಿತ ಕಬ್ಬಿನ ದಿಂಡನ್ನು ಸುಮಾರು 40 ಸೆಂಟಿಮೀಟರುಗಳಷ್ಟು ಉದ್ದಕ್ಕೆ ಕತ್ತರಿಸಿ, ನೇಗಿಲು ಜಾಡಿನಲ್ಲಿ ಸುಮಾರು 1.5 ಮೀಟರುಗಳಷ್ಟು ಅಂತರದಲ್ಲಿ ನೆಡಲಾಗುತ್ತದೆ. ಪ್ರತಿಯೊಂದು ಕಟ್ಟಿಂಗ್‌ನಲ್ಲಿ ಸುಮಾರು 8ರಿಂದ 12 ಕಬ್ಬಿನ ದಿಂಡುಗಳು ಬೆಳೆಯುತ್ತವೆ ಮತ್ತು ಇದು ಸುಮಾರು 12ರಿಂದ 16 ತಿಂಗಳುಗಳ ಅವಧಿಯಲ್ಲಿ ಬಲಿಯುತ್ತದೆ. ಬಲಿತ ಕಬ್ಬಿನ ದಟ್ಟವಾದ ಹೊಲದ ಮಧ್ಯದಲ್ಲಿ ನಡೆಯುವಾಗ ವಿಚಿತ್ರವಾದ ಭಯ ಉಂಟಾಗುತ್ತದೆ. ಕಬ್ಬಿನ ದಿಂಡು ಹಾಗೂ ದಟ್ಟವಾದ ಎಲೆಗಳು ನಾಲ್ಕು ಮೀಟರುಗಳಷ್ಟು ಎತ್ತರದಲ್ಲಿರುತ್ತವೆ. ತರಗೆಲೆಗಳ ಮರ್ಮರ ಶಬ್ದ ಬರಿ ಗಾಳಿಯಾಗಿರಬಹುದೋ,
ಹಾವಾಗಿರಬಹುದೋ ಇಲ್ಲವೇ ದಂಶಕವರ್ಗದ ಪ್ರಾಣಿಯಾಗಿರಬಹುದೋ? ಹಾಗಿದ್ದಲ್ಲಿ, ಸುರಕ್ಷಿತ ಸ್ಥಳಕ್ಕೆ ಓಡಿಹೋಗುವುದೇ ಲೇಸು!ಕಬ್ಬನ್ನು ತಿಂದುಹಾಕುವ ಹುಳುಗಳನ್ನು ಸಾಯಿಸಲು ಮತ್ತು ಕಬ್ಬಿಗೆ ಬರುವ ರೋಗವನ್ನು ನಿವಾರಿಸಲು ಪರಿಶೋಧನೆಯು ನಡೆಯುತ್ತಿದೆ. ಇದಕ್ಕೆಲ್ಲ ಮಾಡಿರುವ ಪ್ರಯತ್ನಗಳು ಒಂದಷ್ಟರ ಮಟ್ಟಿಗೆ ಜಯಸಾಧಿಸಿವೆಯಾದರೂ ಸಂಪೂರ್ಣವಾಗಿ ಜಯಹೊಂದಿಲ್ಲ. ಉದಾಹರಣೆಗೆ, 1935ರಲ್ಲಿ ಅಧಿಕಾರಿಗಳು ಕಬ್ಬಿನ ಜೀರುಂಡೆ ಕೀಟವನ್ನು ಸಾಯಿಸಲು ಹಾವಾಯಿನ್ ಕಪ್ಪೆಯನ್ನು ಉತ್ತರದ ಕ್ವೀನ್ಸ್‌ಲ್ಯಾಂಡ್‌ನಲ್ಲಿ ಪರಿಚಯಿಸಿದರು. ಆದರೆ ಆದದ್ದೇ ಬೇರೆ. ಈ ಕಪ್ಪೆಯು ಜೀರುಂಡೆ ಕೀಟಗಳನ್ನು ತಿನ್ನುವ ಬದಲು ಬೇರೆ ಕೀಟಗಳನ್ನು ತಿನ್ನಲಾರಂಭಿಸಿತಾದುದರಿಂದ, ಅದು ಬೇಗ ಬೆಳೆದು ಬಹಳ ಸಂತಾನೋತ್ಪತ್ತಿಮಾಡಿತು ಮತ್ತು ಈಶಾನ್ಯ ಆಸ್ಟ್ರೇಲಿಯದಾದ್ಯಂತ ಇದೇ ಒಂದು ದೊಡ್ಡ ಉಪದ್ರವಕಾರಿ ಪೀಡೆಯಾಯಿತು.
ಕಟಾವು ಮಾಡುವ ಮುನ್ನ ನೀವು ಅದನ್ನು ಸುಡುತ್ತೀರೋ?
ರಾತ್ರಿಯಾದಾಗ, ಬಲಿತ ಕಬ್ಬಿನ ಬೆಳೆಗೆ ರೈತನು ಬೆಂಕಿಯಿಡುವುದನ್ನು ನಾವು ಮೂಕವಿಸ್ಮಿತರಾಗಿ ನೋಡಿದೆವು. ಕೆಲವಾರು ಸೆಕೆಂಡುಗಳಲ್ಲಿ ಆ ಚಿಕ್ಕ ಹೊಲವು ದಳ್ಳುರಿಯಾಗಿ ಮಾರ್ಪಟ್ಟಿತು. ಇದು ತನ್ನ ಬೆಂಕಿಯ ಕೆನ್ನಾಲಿಗೆಯನ್ನು ಆಕಾಶದೆತ್ತರಕ್ಕೂ ಚಾಚಿತ್ತು. ಕಬ್ಬನ್ನು ಈ ರೀತಿ ಸುಡುವುದರಿಂದ, ಬೇಡವಾದ ಎಲೆಗಳನ್ನು ತೆಗೆದುಹಾಕಬಹುದು ಮತ್ತು ಕಟಾವು ಹಾಗೂ ಪುಡಿಮಾಡುವ ಕಾರ್ಯಕ್ಕೆ ತಡೆಯೊಡ್ಡಬಹುದಾದ ಇನ್ನಿತರ ವಸ್ತುಗಳನ್ನು ಸಹ ತೆಗೆದುಹಾಕಬಹುದು. ಇತ್ತೀಚೆಗೆ, ಈ ರೀತಿಯ ಸುಡುವಿಕೆಯನ್ನು ಮಾಡದೇ ಬೆಳೆಯುವ ವಿಧಾನವು ಜಾರಿಗೆ ಬಂದಿದೆ. ಈ ವಿಧಾನವನ್ನು ಹಸಿರು ಕಬ್ಬಿನ ಕಟಾವು ಎಂದು ಕರೆಯಲಾಗುತ್ತದೆ. ಇದು ಸಕ್ಕರೆ ಉತ್ಪಾದನೆಯನ್ನು ಉತ್ತಮಗೊಳಿಸುತ್ತದೆ ಮಾತ್ರವಲ್ಲ, ಹಸಿಗೊಬ್ಬರವನ್ನು ಜಮೀನಿನ ಮೇಲೆ ಹಾಸುತ್ತದೆ. ಇದು ಭೂಮಿ ಸವೆತವನ್ನು ಹಾಗೂ ಕಳೆಗಳು ಬೆಳೆಯುವುದನ್ನು ತಡೆಯುತ್ತದೆ.
ಅನೇಕ ದೇಶಗಳಲ್ಲಿ, ಈಗಲೂ ಕಬ್ಬಿನ ಬೆಳೆಯನ್ನು ಕೈಗಳಿಂದ ಕಟಾವು ಮಾಡಲಾಗುತ್ತಾದರೂ, ಹೆಚ್ಚಿನ ದೇಶಗಳು ಈಗ ಕಬ್ಬನ್ನು ಕತ್ತರಿಸುವ ದೊಡ್ಡ ಗಾತ್ರದ ಯಂತ್ರಗಳ ಮೂಲಕ ಕಟಾವು ಮಾಡುತ್ತಿವೆ. ಪೆಡಂಭೂತದಂತಹ ಈ ಯಂತ್ರವು, ಎತ್ತರಕ್ಕೆ ನಿಂತಿರುವ ಕಬ್ಬಿನ ಮೇಲ್ತುದಿಯನ್ನು ಕತ್ತರಿಸುತ್ತಾ, ಬೇಡವಾದ ಎಲೆಯನ್ನು ದಿಂಡುಗಳಿಂದ ತೆಗೆಯುತ್ತದೆ ಹಾಗೂ ಅವುಗಳನ್ನು ಚಿಕ್ಕಚಿಕ್ಕದಾಗಿ ಕತ್ತರಿಸುತ್ತದೆ. ಈಗ ಕಬ್ಬು ಕಾರ್ಖಾನೆಗೆ ಹೋಗಲು ಸಿದ್ಧ. ಕೈಯಿಂದ ಕತ್ತರಿಸುವ ಮೂಲಕ ಒಬ್ಬನು ಒಂದು ದಿನಕ್ಕೆ 5 ಟನ್‌ಗಳಷ್ಟು ಕಟಾವು ಮಾಡಬಹುದು. ಆದರೆ ಕಬ್ಬನ್ನು ಕತ್ತರಿಸುವ ಯಂತ್ರಗಳು ಒಂದು ದಿನದಲ್ಲಿ ಸುಲಭವಾಗಿ ಸುಮಾರು 300 ಟನ್‌ಗಳಷ್ಟು ಕಟಾವು ಮಾಡಬಲ್ಲವು. ಸಕ್ಕರೆಯ ಉತ್ಪಾದನೆಯು ಇಳಿಮುಖಗೊಳ್ಳುವ ಮುಂಚೆ ವಾರ್ಷಿಕವಾಗಿ ಹಲವಾರು ವರ್ಷಗಳ ವರೆಗೆ ಕಟಾವು ಮಾಡಬಹುದು ಮತ್ತು ಕಬ್ಬಿನ ಸಸಿಗಳನ್ನು ಪುನಃ ನೆಡಬಹುದು.
ಒಮ್ಮೆ ಕಬ್ಬನ್ನು ಕತ್ತರಿಸಲಾಯಿತೆಂದರೆ, ಅದರ ಮುಂದಿನ ಕಾರ್ಯವನ್ನು ವೇಗವಾಗಿ ಮಾಡಬೇಕು. ಏಕೆಂದರೆ ಕಟಾವು ಮಾಡಲ್ಪಟ್ಟ ಕಬ್ಬು ಬೇಗನೆ ಕೊಳೆತುಹೋಗುತ್ತದೆ. ಸಕ್ಕರೆ ಕಾರ್ಖಾನೆಗಳಿಗೆ ಬೇಗನೆ
ಅದನ್ನು ರವಾನಿಸಲಿಕ್ಕಾಗಿ, ಸುಮಾರು 4,100 ಕಿಲೋಮೀಟರುಗಳಷ್ಟು ಉದ್ದದ ನ್ಯಾರೋ ಗೇಜ್ ಟ್ರ್ಯಾಮ್‌ಗಳು, ಕ್ವೀನ್ಸ್‌ಲ್ಯಾಂಡ್‌ನಲ್ಲಿರುವ ಕಬ್ಬು ಬೆಳೆಯ ಕ್ಷೇತ್ರಗಳಿಗೆ ಬೇಕಾದ ಸಾಗಣೆ ಸೌಕರ್ಯಗಳನ್ನು ಒದಗಿಸುತ್ತವೆ. ಗ್ರಾಮೀಣ ಪ್ರದೇಶಗಳಲ್ಲಿ ಈ ಚಿಕ್ಕ ರೈಲು ತುಂಬು ಗರ್ಭಿಣಿಯಂತೆ ತನ್ನ ಹತ್ತಾರು ರೈಲಿನ ಡಬ್ಬಿಗಳಲ್ಲಿ ಕಬ್ಬನ್ನು ತುಂಬಿಸಿಕೊಂಡು, ಹಾವಿನಂತೆ ಅಡ್ಡಾದಿಡ್ಡಿಯಾಗಿ ಹೋಗುವುದನ್ನು ನೋಡುವುದೇ ಒಂದು ರೀತಿಯ ಆನಂದ.ಸಕ್ಕರೆ ಕಾರ್ಖಾನೆಯಲ್ಲಿ
ಸಕ್ಕರೆ ಕಾರ್ಖಾನೆಯನ್ನು ಸುತ್ತಿನೋಡುವುದು ಒಂದು ರಸಕರ ಅನುಭವ. ಅಲ್ಲಿ ಕಾಲಿಟ್ಟ ತಕ್ಷಣ ನಮ್ಮ ಕಣ್ಣಿಗೆ ಬೀಳುವುದು, ಕಬ್ಬನ್ನು ಹೊತ್ತುಕೊಂಡು ಬಂದಿರುವ ರೈಲು ಡಬ್ಬಿಗಳ ಸಾಲು. ದೊಡ್ಡ ಛಿದ್ರ ಯಂತ್ರ ಮತ್ತು ಉರುಳೆ ಯಂತ್ರಗಳು ಕಬ್ಬನ್ನು ಸಣ್ಣ ಸಣ್ಣ ಚೂರುಗಳನ್ನಾಗಿ ಮಾಡಿ, ನಾರಿನಿಂದ ಸಕ್ಕರೆಯನ್ನು ಹಿಂಡಿ ತೆಗೆಯುತ್ತವೆ. ಅದರ ನಂತರ ಸಿಗುವ ನಾರು ಇಲ್ಲವೇ ಕಬ್ಬಿನ ಸಿಪ್ಪೆಯನ್ನು ಒಣಗಿಸಲಾಗುತ್ತದೆ ಮತ್ತು ಇಡೀ ಕಾರ್ಖಾನೆಗೆ ಇದನ್ನು ಇಂಧನದಂತೆ ಬಳಸಲಾಗುತ್ತದೆ. ಹೆಚ್ಚಿನ ಕಬ್ಬಿನ ಸಿಪ್ಪೆಯನ್ನು ಪೇಪರ್ ಕಾರ್ಖಾನೆಗೆ ಇಲ್ಲವೇ ನಿರ್ಮಾಣ ಸಾಮಗ್ರಿಯನ್ನು ಉತ್ಪಾದಿಸುವ ಕಾರ್ಖಾನೆಗೆ ಮಾರಲಾಗುತ್ತದೆ.
ಅನಂತರ ಕಬ್ಬಿನ ರಸದಲ್ಲಿರುವ ಕಲ್ಮಷಗಳನ್ನು ತೆಗೆದುಹಾಕಲಾಗುತ್ತದೆ. ಈಗ ಶುದ್ಧವಾದ ದ್ರವವು ಸಿಗುತ್ತದೆ. ಈ ಕಲ್ಮಷಗಳನ್ನು ಮಡ್ಡಿ ಎಂದು ಕರೆಯಲಾಗುತ್ತದೆ. ಇದನ್ನು ಕೃತಕ ಗೊಬ್ಬರವಾಗಿ ಉಪಯೋಗಿಸಲಾಗುತ್ತದೆ. ಮತ್ತೊಂದು ಉಪೋತ್ಪನ್ನವಾದ ಕಾಕಂಬಿ (ಇದು ಕಬ್ಬಿನ ರಸದಿಂದ ಸಕ್ಕರೆಯನ್ನು ಪ್ರತ್ಯೇಕಿಸಿದ ನಂತರ ಸಿಗುವ ಪದಾರ್ಥವಾಗಿದೆ)ಯನ್ನು ಬೂಸಾ ಆಗಿ ಇಲ್ಲವೇ ರಮ್ ಹಾಗೂ ಕೈಗಾರಿಕೆಯ ಮದ್ಯಸಾರದ ಶುದ್ಧೀಕರಣದಲ್ಲಿ ಕಚ್ಚಾ ಪದಾರ್ಥವಾಗಿ ಉಪಯೋಗಿಸಲಾಗುತ್ತದೆ. ಕಬ್ಬಿನ ಬಹುಮುಖ ಸಾಮರ್ಥ್ಯ ಮತ್ತು ಯಂತ್ರಗಳ ಕಾರ್ಯದಕ್ಷತೆಯು ನಿಜವಾಗಿಯೂ ಆಸಕ್ತಿಕರವಾಗಿದೆ.
ಆಮೇಲೆ ಈ ದ್ರವವನ್ನು ಕುದಿಸುತ್ತಾರೆ. ಹೀಗೆ ದ್ರವವು ಇಂಗಿ, ಪಾಕವಾಗುತ್ತದೆ. ಅನಂತರ ಇದನ್ನು ಚಿಕ್ಕ ಚಿಕ್ಕ ಸಕ್ಕರೆ ಹರಳುಗಳನ್ನಾಗಿ ಮಾಡಲಾಗುತ್ತದೆ. ಈ ಹರಳುಗಳು ತಕ್ಕ ಗಾತ್ರವನ್ನು ತಲಪುವ ವರೆಗೆ ಯಂತ್ರದಲ್ಲಿ ಬಿಡಲಾಗುತ್ತದೆ. ಅನಂತರ ಅವುಗಳನ್ನು ಬೆರೆಸುವ ಯಂತ್ರದಿಂದ ತೆಗೆದು, ಒಣಗಿಸಲಾಗುತ್ತದೆ. ಈಗ ಕಚ್ಚಾ ಬ್ರೌನ್ ಶುಗರ್ ಸಿಗುತ್ತದೆ. ಇದನ್ನು ಇನ್ನೂ ಪರಿಷ್ಕರಿಸುವಾಗ, ನಮ್ಮ ಊಟದ ಮೇಜಿನ ಮೇಲಿರುವ ಬಿಳಿ ಸಕ್ಕರೆಯಾಗುತ್ತದೆ.
ಕಣ್ಮನಸೆಳೆಯುವ ಹಾಗೂ ಹೆಚ್ಚಿನ ಮಾಹಿತಿಯನ್ನು ತಿಳಿಸಿದ ಈ ಸಕ್ಕರೆಯ ದೇಶವನ್ನು ನೀವು ಸುತ್ತಿ ನೋಡಿದ ಮೇಲೆ, ನಿಮ್ಮ ಟೀ ಇಲ್ಲವೇ ಕಾಫಿ ಸ್ವಲ್ಪ ಹೆಚ್ಚು ಸಿಹಿಯಾಗಿರುವಂತೆ ತೋರಬಹುದು. ಆದರೆ ಸ್ವಲ್ಪ ತಾಳಿ, ನೀವೇನಾದರೂ ಡೈಯಾಬಿಟಿಕ್ ರೋಗಿಯಾಗಿರುವುದಾದರೆ, ಆಗ ಸಕ್ಕರೆಯನ್ನು ತೆಗೆದುಕೊಳ್ಳದೇ ಅದಕ್ಕೆ ಬದಲಿಯನ್ನು ತೆಗೆದುಕೊಳ್ಳಬೇಕಾಗಿರುವುದು.
ಇದನ್ನು ಸೃಷ್ಟಿಸಿದ ಹಾಗೂ ಇದನ್ನು ಪುಷ್ಕಳವಾಗಿ ಬೆಳೆಯುವಂತೆ ಮಾಡಿದ ನಮ್ಮ ಸೃಷ್ಟಿಕರ್ತನ ಸರ್ವತೋಮುಖ ಶಕ್ತಿ ಮತ್ತು ಚತುರಕೌಶಲಕ್ಕೆ ನಾವು ಮಾರುಹೋಗಿದ್ದೇವೆ. ನಿಜ, ಈ ಅದ್ಭುತ ಗಿಡವಾದ ಕಬ್ಬು—ಹುಲ್ಲಿನ ಜಾತಿಯಲ್ಲಿಯೇ ದೈತ್ಯ!
[ಪುಟ 22ರಲ್ಲಿರುವ ಚೌಕ]
ಇದು ಬಿಳಿ ಬೀಟ್ ಗೆಡ್ಡೆಯೋ ಕಬ್ಬೋ?
ಸಕ್ಕರೆಯನ್ನು ಎರಡು ಮುಖ್ಯವಾದ ಬೆಳೆಯಿಂದ ಉತ್ಪಾದಿಸಲಾಗುತ್ತದೆ. ಕಬ್ಬನ್ನು ಮುಖ್ಯವಾಗಿ ಉಷ್ಣವಲಯದಲ್ಲಿ ಬೆಳೆಸಲಾಗುತ್ತದೆ. ಲೋಕದಲ್ಲಿ ಸುಮಾರು 65 ಪ್ರತಿಶತದಷ್ಟು ಸಕ್ಕರೆಯನ್ನು ಕಬ್ಬಿನಿಂದ ಉತ್ಪಾದಿಸಲಾಗುತ್ತದೆ. ಇನ್ನೂ 35 ಪ್ರತಿಶತದಷ್ಟು ಸಕ್ಕರೆಯನ್ನು ಬಿಳಿ ಬೀಟ್ ಗೆಡ್ಡೆಯಿಂದ ಉತ್ಪಾದಿಸಲಾಗುತ್ತದೆ. ಇದನ್ನು ಬಹಳ ತಣ್ಣಗಿರುವ ಹವಾಮಾನವನ್ನು ಹೊಂದಿರುವ, ಪೂರ್ವ ಹಾಗೂ ಪಶ್ಚಿಮ ಯೂರೋಪ್ ಹಾಗೂ ಉತ್ತರ ಅಮೆರಿಕದಂತಹ ಸ್ಥಳಗಳಲ್ಲಿ ಬೆಳೆಸಲಾಗುತ್ತದೆ. ಎರಡೂ ರೀತಿಯ ಸಕ್ಕರೆಯು ರಾಸಾಯನಿಕವಾಗಿ ತದ್ರೂಪದ್ದಾಗಿರುತ್ತದೆ.
[ಪುಟ 23ರಲ್ಲಿರುವ ಚಿತ್ರ]
ಕಟಾವು ಮಾಡುವ ಯಂತ್ರ. ಟ್ರೇಯ್ಲರ್ ಅನ್ನು ಎಳೆಯುತ್ತಿರುವ ಟ್ರ್ಯಾಕ್ಟರ್
[ಪುಟ 23ರಲ್ಲಿರುವ ಚಿತ್ರ]
ಕಟಾವು ಮಾಡುವ ಮುನ್ನ ಕಬ್ಬನ್ನು ಸುಡುತ್ತಿರುವುದು
[ಪುಟ 21ರಲ್ಲಿರುವ ಚಿತ್ರ ಕೃಪೆ]
ಪುಟ 21-4ರ ಪುಟಗಳಲ್ಲಿರುವ ಎಲ್ಲ ಚಿತ್ರಗಳು: ಕ್ವೀನ್ಸ್‌ಲ್ಯಾಂಡ್ ಸಕ್ಕರೆ ಕಾರ್ಪೊರೇಷನ್