ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜಗತ್ತನ್ನು ಗಮನಿಸುವುದು

ಜಗತ್ತನ್ನು ಗಮನಿಸುವುದು

ಜಗತ್ತನ್ನು ಗಮನಿಸುವುದು

ಗರಿತೊಡಿಸಿದ ಪಳೆಯುಳಿಕೆ ಒಂದು ಮೋಸ

ಚೀನಾದ ಲೀಯಾನಿಂಗ್‌ ಪ್ರಾಂತದಲ್ಲಿ ಒಂದು ಪಳೆಯುಳಿಕೆಯು ಸಿಕ್ಕಿತು. ಇದು “ಡೈನಸಾರ್‌ಗಳು ನಿಜವಾಗಿಯೂ ಪಕ್ಷಿಗಳಿಗೆ ಸಂಬಂಧಿಸಿವೆ ಎಂಬ ವಿಷಯದ ಶ್ರೇಣಿಯಲ್ಲಿ ಬಿಟ್ಟುಹೋಗಿರುವ ಭಾಗ” ಎಂದು ನ್ಯಾಷನಲ್‌ ಜಿಯೋಗ್ರ್ಯಾಫಿಕ್‌ ಪತ್ರಿಕೆಯು ವರದಿಸಿತು. ಆರ್ಕಿಯೋರ್ಯಾಪ್ಟರ್‌ ಲಿಯಾನಿಂಜೆನಿಸಿಸ್‌ ಎಂದು ಹೆಸರಿಸಲ್ಪಟ್ಟ ಈ ಪಳೆಯುಳಿಕೆಗೆ ಡೈನಸಾರ್‌ನಂತಹ ಬಾಲವಿತ್ತು. ಆದರೆ ಎದೆ ಹಾಗೂ ಮುಂಗಾಲುಗಳು ಪಕ್ಷಿಯಂತಿದ್ದವು ಎಂದು ಹೇಳಲಾಯಿತು. “ಈ ಹುಸಿ ಪಳೆಯುಳಿಕೆಯಿಂದ ಮೋಸಹೋದೆವು” ಎಂಬುದನ್ನು ಈಗ ವಿಜ್ಞಾನಿಗಳು ಮನಗಂಡಿದ್ದಾರೆ ಎಂದು ಸೈಎನ್ಸ್‌ ನ್ಯೂಸ್‌ ವರದಿಸುತ್ತದೆ. ಬಾಲವನ್ನು ದೇಹಕ್ಕೆ ಕೂಡಿಸಿದ್ದ ಮೂಳೆಗಳು ಕಾಣೆಯಾಗಿದ್ದವು ಮಾತ್ರವಲ್ಲ, ಆ ಪಳೆಯುಳಿಕೆಯನ್ನು ಹೊರತೆಗೆದ ಸ್ಥಳದಲ್ಲಿ ಮೊದಲೇ ಯಾರೋ ಅಗೆದು ತೆಗೆದಿರುವ ನಿಶಾನೆಯು ಸಿಕ್ಕಿತಾದುದರಿಂದ, ಪಳೆಯುಳಿಕೆಯನ್ನು ಪರೀಕ್ಷಿಸಿದ ಜೀವ್ಯವಶೇಷ ಶಾಸ್ತ್ರಜ್ಞರು ಸಂಶಯ ತಾಳಿದರು. ಕೆನಡದ ಆ್ಯಲ್‌ಬರ್ಟಾ ಡ್ರಮ್‌ಹೆಲರ್‌ನಲ್ಲಿರುವ ರಾಯಲ್‌ ಟೈರಲ್‌ ಮ್ಯೂಸಿಯಮ್‌ ಆಫ್‌ ಪ್ಯಾಲೆಂಟಾಲಜಿಯ ಫಿಲಿಪ್‌ ಕರೀ ಅವರಿಗನುಸಾರ, ಯಾರೋ ಒಬ್ಬರು “ಡೈನಸಾರ್‌ನ ಬಾಲದ ಒಂದು ಭಾಗಕ್ಕೆ ಪಕ್ಷಿಯೊಂದರ ಪಳೆಯುಳಿಕೆಯನ್ನು ಅಂಟಿಸುವ ಮೂಲಕ ಆರ್ಕಿಯೋರ್ಯಾಪ್ಟರ್‌ ಪಳೆಯುಳಿಕೆಯ ಮೌಲ್ಯವನ್ನು ಹೆಚ್ಚಿಸಲು ಪ್ರಯತ್ನಿಸಿದ್ದಾರೆ” ಎಂಬುದು ಈ ವರದಿಯಿಂದ ತಿಳಿದುಬರುತ್ತದೆ.

ಸಾಕುಪ್ರಾಣಿಗಳೊಂದಿಗೆ ಹುಷಾರಾಗಿರಿ

ಲೇ ಮೊಂಡ್‌ ಎಂಬ ಫ್ರೆಂಚ್‌ ಪತ್ರಿಕೆಗನುಸಾರ, ಫ್ರಾನ್ಸ್‌ನಲ್ಲಿ 52 ಪ್ರತಿಶತದಷ್ಟು ಮನೆಯಲ್ಲಿ ಸಾಕುಪ್ರಾಣಿಗಳಿವೆ. ಫ್ರಾನ್ಸಿನ ಮೆಸಾನ್‌ ಆಲ್‌ಫರ್‌ನಲ್ಲಿರುವ ಇನ್‌ಸ್ಟಿಟ್ಯೂಟ್‌ ಆಫ್‌ ಕಂಪ್ಯಾರಿಟಿವ್‌ ಆ್ಯನಿಮಲ್‌ ಇಮ್ಯುನಾಲಜಿಯಲ್ಲಿ ಕೆಲಸಮಾಡುವ ಪಶುವೈದ್ಯರ ಒಂದು ಗುಂಪು ಇತ್ತೀಚೆಗೆ ಅಧ್ಯಯನವನ್ನು ಮಾಡಿತು. ಫ್ರಾನ್ಸಿನಲ್ಲಿರುವ ಸುಮಾರು 8.4 ದಶಲಕ್ಷ ಬೆಕ್ಕುಗಳು ಹಾಗೂ 7.9 ದಶಲಕ್ಷ ನಾಯಿಗಳ ಮೈಯಲ್ಲಿರುವ ಬೂಷ್ಟುಗಳು ಹಾಗೂ ಪರೋಪಜೀವಿಗಳು, ಸಾಕುಪ್ರಾಣಿಯನ್ನಿಟ್ಟುಕೊಂಡಿರುವವರಿಗೆ ಅನೇಕ ರೀತಿಯ ರೋಗರುಜಿನಗಳನ್ನು ತರುತ್ತವೆ ಎಂದು ಈ ಅಧ್ಯಯನವು ತೋರಿಸಿತು. ಇದರಲ್ಲಿ ಹುಳುಕಡ್ಡಿ, ಜಂತುಹುಳು, ಕಜ್ಜಿ, ಲೀಷ್ಮನ್‌ ಬೇನೆ ಹಾಗೂ ಟೊಕ್ಸೊಪ್ಲ್ಯಾಸ್‌ಮೊಸಿಸ್‌ ಸೇರಿರುತ್ತವೆ. ಈ ಕೊನೆಯ ರೋಗವು ಗರ್ಭಿಣಿಯರಲ್ಲಿ ಗರ್ಭಪಾತ ಅಥವಾ ಭ್ರೂಣ ವಿರೂಪತೆಗಳನ್ನು ಉಂಟುಮಾಡಸಾಧ್ಯವಿದೆ. ಮನೆಯಲ್ಲಿ ಸಾಕಿದ ಪ್ರಾಣಿಗಳಿಂದ ಉಂಟಾಗುವ ಅಲರ್ಜಿಗಳು ಹಾಗೂ ನಾಯಿ ಕಚ್ಚುವಿಕೆಯಿಂದಾಗಿ, ಫ್ರಾನ್ಸಿನಲ್ಲಿ ವರ್ಷಕ್ಕೆ ಸುಮಾರು 1,00,000 ಜನರಿಗೆ ಸೋಂಕುರೋಗ ತಗಲುತ್ತದೆ ಎಂದು ಆ ವರದಿಯು ತಿಳಿಸುತ್ತದೆ.

ಔಷಧವೇ ವಿಷಕಾರಿಯೋ?

ವೈದ್ಯಕೀಯ ಕ್ಷೇತ್ರದಲ್ಲಾಗುವ ತಪ್ಪುಗಳಿಂದ ವಾರ್ಷಿಕವಾಗಿ ಸುಮಾರು 44,000ದಿಂದ 98,000ದಷ್ಟು ಅಮೆರಿಕನ್ನರು ಆಸ್ಪತ್ರೆಯಲ್ಲಿ ಅಸುನೀಗುತ್ತಾರೆ ಎಂದು ವೈದ್ಯಕೀಯ ಇನ್‌ಸ್ಟಿಟ್ಯೂಟ್‌ ವರದಿ ನೀಡುತ್ತದೆ. ಆಸ್ಪತ್ರೆಗಳು, ಕ್ಲಿನಿಕ್‌ಗಳು ಹಾಗೂ ಔಷಧದಂಗಡಿಗಳು ಕೆಲಸಮಾಡುವ ರೀತಿಯಿಂದ ತಪ್ಪುಗಳು ಉಂಟಾಗುತ್ತವೆ ಎಂದು ಹೇಳಲಾಗುತ್ತದೆ. ಉದಾಹರಣೆಗೆ, ವೈದ್ಯರು ಔಷಧಿಯ ಚೀಟಿಯಲ್ಲಿ ಗೀಚಿ ಬರೆಯುವ ಕಾರಣ, ಅನೇಕ ವೇಳೆ ಔಷಧಿಯಂಗಡಿಯವನಿಗೆ ಅದನ್ನು ಓದಲು ಕಷ್ಟವಾಗುತ್ತದೆ. ಅವನಿಗೆ ವೈದ್ಯರು ಬರೆದಿರುವುದು ಹತ್ತು ಮಿಲಿಗ್ರ್ಯಾಮೋ ಇಲ್ಲವೇ ಹತ್ತು ಮೈಕ್ರೋಗ್ರ್ಯಾಮ್‌ಗಳೋ ಎಂಬುದು ಗೊತ್ತಾಗುವುದಿಲ್ಲ. ಇದಕ್ಕೆ ಸೇರಿಸಿ, ಅನೇಕ ಔಷಧಗಳು ಒಂದೇ ರೀತಿಯ ಹೆಸರುಗಳನ್ನು ಹೊಂದಿರುತ್ತವೆ. ಇದು ವೈದ್ಯರಿಗೆ, ನರ್ಸುಗಳಿಗೆ, ಔಷಧಿಯಂಗಡಿಯವರಿಗೆ ಹಾಗೂ ರೋಗಿಗಳಿಗೂ ಗೊಂದಲವನ್ನು ಉಂಟುಮಾಡುತ್ತದೆ. ವೈದ್ಯಕೀಯ ಕ್ಷೇತ್ರದಲ್ಲಾಗುವ ತಪ್ಪುಗಳನ್ನು ಇನ್ನು ಐದು ವರ್ಷಗಳೊಳಗೆ ಅರ್ಧದಷ್ಟು ಕಡಿಮೆಮಾಡಬೇಕು ಎಂದು ವೈದ್ಯಕೀಯ ಇನ್‌ಸ್ಟಿಟ್ಯೂಟ್‌ ಆದೇಶ ನೀಡಿದೆ.

ಬೈಬಲ್‌ ಹೆಚ್ಚಿನ ಭಾಷೆಗಳಲ್ಲಿ ಅನುವಾದಿಸಲ್ಪಟ್ಟಿದೆ

“ಈಗಲೂ ಲೋಕದಲ್ಲಿಯೇ ಅತ್ಯಂತ ಹೆಚ್ಚು ಭಾಷೆಗಳಲ್ಲಿ ಅನುವಾದಿಸಲ್ಪಟ್ಟ ಗ್ರಂಥವು ಬೈಬಲಾಗಿದೆ” ಎಂದು ಮೆಕ್ಸಿಕನ್‌ ವಾರ್ತಾಪತ್ರಿಕೆಯಾದ ಎಕ್ಸೆಲ್ಸೆಯೋರ್‌ ಹೇಳುತ್ತದೆ. ಜರ್ಮನ್‌ ಬೈಬಲ್‌ ಸೊಸೈಟಿಗನುಸಾರ, 1999ರಲ್ಲಿ ಬೈಬಲ್‌ ಇನ್ನೂ 21 ಭಾಷೆಗಳಲ್ಲಿ ಅನುವಾದಿಸಲ್ಪಟ್ಟಿತು. ಈಗ ಬೈಬಲು ಕಡಿಮೆಪಕ್ಷ ಆಂಶಿಕವಾಗಿಯಾದರೂ ಸರಿ, ಸುಮಾರು 2,233 ಭಾಷೆಗಳಲ್ಲಿ ಸಿಗುತ್ತದೆ. ಇವುಗಳಲ್ಲಿ “ಇಡೀ ಬೈಬಲ್‌, ಅಂದರೆ ಹಳೇ ಹಾಗೂ ಹೊಸ ಒಡಂಬಡಿಕೆಯ ಬೈಬಲ್‌ ಸುಮಾರು 371 ಭಾಷೆಗಳಲ್ಲಿ ಅನುವಾದಿಸಲ್ಪಟ್ಟಿದ್ದು, ಇದು 1998ರಲ್ಲಿ ಇದ್ದುದ್ದಕ್ಕಿಂತ 5 ಬಾಷೆಗಳಷ್ಟು ಹೆಚ್ಚು.” ಈ ಭಾಷೆಗಳನ್ನೆಲ್ಲ ಎಲ್ಲಿ ಮಾತಾಡುತ್ತಾರೆ? “ಹೆಚ್ಚಿನ ಭಾಷೆಗಳ ಅನುವಾದಗಳನ್ನು ಅಂದರೆ, ಸುಮಾರು 627 ಭಾಷೆಗಳನ್ನು ಆಫ್ರಿಕದಲ್ಲಿ ಕಂಡುಕೊಳ್ಳಬಹುದು, ಅದರ ನಂತರ ಏಷ್ಯಾದಲ್ಲಿ ಸುಮಾರು 553, ಆಸ್ಟ್ರೇಲಿಯ/ಪೆಸಿಫಿಕ್‌ನಲ್ಲಿ 396, ಲ್ಯಾಟಿನ್‌ ಅಮೆರಿಕ/ಕ್ಯಾರಿಬಿಯನ್‌ನಲ್ಲಿ 384, ಯೂರೋಪ್‌ನಲ್ಲಿ 197 ಮತ್ತು ಅಮೆರಿಕದಲ್ಲಿ 73 ಭಾಷೆಗಳು” ಎಂದು ಆ ಪೇಪರ್‌ ಹೇಳುತ್ತದೆ. ಆದರೂ, “ಈ ಭೂಮಿಯಲ್ಲಿ ಮಾತಾಡಲ್ಪಡುವ ಅರ್ಧದಷ್ಟು ಭಾಷೆಗಳಲ್ಲಿ ಸಹ ಬೈಬಲು ಇನ್ನೂ ಅನುವಾದಿಸಲ್ಪಟ್ಟಿಲ್ಲ.” ಏಕೆ? ಆ ಭಾಷೆಗಳನ್ನು ಸ್ವಲ್ಪವೇ ಜನರು ಮಾತಾಡುತ್ತಾರಾದುದರಿಂದ, ಆ ಭಾಷೆಯಲ್ಲಿ ಬೈಬಲನ್ನು ಅನುವಾದಿಸುವುದು ಕಷ್ಟಕರ. ಅದಲ್ಲದೆ, ಅನೇಕ ಜನರು ಬಹುಭಾಷಿಗಳಾಗಿದ್ದಾರೆ ಮತ್ತು ಅವರಿಗೆ ತಮ್ಮ ಮಾತೃಭಾಷೆಯಲ್ಲಿ ಬೈಬಲು ಮುದ್ರಿತವಾಗಿರದಿದ್ದರೂ, ಮತ್ತೊಂದು ಭಾಷೆಯ ಬೈಬಲನ್ನು ಅವರು ಓದಶಕ್ತರಾಗಿದ್ದಾರೆ.

ಲಂಡನಿನ ಭಾಷೆಗಳು

ಇಂಗ್ಲೆಂಡಿನ ಲಂಡನ್‌ನಲ್ಲಿರುವ ಶಾಲಾಮಕ್ಕಳು ಕಡಿಮೆ ಅಂದರೆ 307 ಭಾಷೆಗಳನ್ನು ಮಾತಾಡುತ್ತಾರೆ ಎಂದು ದ ಟೈಮ್ಸ್‌ ಅನ್ನುವ ನಗರದ ವಾರ್ತಾಪತ್ರಿಕೆಯು ವರದಿಸುತ್ತದೆ. ಈಗ ಲಂಡನಿನಲ್ಲಿ ಮಾತಾಡಲ್ಪಡುತ್ತಿರುವ ಭಾಷೆಗಳ ಮೊದಲ ಸರ್ವೇಯ ಲೇಖಕರಲ್ಲಿ ಒಬ್ಬರಾದ ಡಾ. ಫಿಲಿಪ್‌ ಬೇಕರ್‌ ಈ ವೈವಿಧ್ಯತೆಯನ್ನು ನೋಡಿ ಬೆಚ್ಚಿಬೆರಗಾದರು. “ಇಂದು ಲಂಡನ್‌, ಲೋಕದಲ್ಲಿಯೇ ಅತ್ಯಂತ ಬಹುಭಾಷಿ ನಗರವಾಗಿದೆ ಎಂಬುದು ಖಂಡಿತ. ನ್ಯೂ ಯಾರ್ಕ್‌ನಲ್ಲಿರುವ ಭಾಷೆಗಳಿಗಿಂತಲೂ ಹೆಚ್ಚು ಭಾಷೆಗಳು ಅಲ್ಲಿವೆ” ಎಂದು ಅವರು ಹೇಳುತ್ತಾರೆ. ಮಾತಾಡಲ್ಪಡುವ 307 ಭಾಷೆಗಳಲ್ಲಿ ಇನ್ನೂ ನೂರಾರು ಭಾಷೆಗಳು ಸೇರಿಸಲ್ಪಟ್ಟಿಲ್ಲವಾದುದರಿಂದ ಇದು ನಿಷ್ಕೃಷ್ಟವಾದ ಸಂಖ್ಯೆಯಲ್ಲ. ಲಂಡನಿನಲ್ಲಿರುವ ಸುಮಾರು 8,50,000 ಶಾಲಾಮಕ್ಕಳಲ್ಲಿ, ಕೇವಲ ಮೂರನೇ ಒಂದು ಭಾಗದಷ್ಟು ಮಕ್ಕಳು ಮಾತ್ರ ಮನೆಯಲ್ಲಿ ಇಂಗ್ಲಿಷ್‌ ಭಾಷೆಯನ್ನು ಮಾತಾಡುತ್ತಾರೆ. ಹೆಚ್ಚಿನ ವಿದೇಶಿ ಭಾಷೆಗಳನ್ನು ಮಾತಾಡುವವರು ಭಾರತೀಯ ಉಪಖಂಡದಿಂದ ಬಂದವರಾಗಿದ್ದಾರೆ. ಕಡಿಮೆ ಅಂದರೆ 100 ಆಫ್ರಿಕನ್‌ ಭಾಷೆಗಳು ಮಾತಾಡಲ್ಪಡುತ್ತವೆ. ಒಂದೇ ಒಂದು ಶಾಲೆಯಲ್ಲಿ, ಅಲ್ಲಿರುವ ಮಕ್ಕಳು ಸುಮಾರು 58 ಭಾಷೆಗಳನ್ನು ಮಾತಾಡುತ್ತಾರೆ.

ಭಾರವಾದ ಬೆನ್ನುಚೀಲ

ಮಕ್ಕಳಲ್ಲಿ ಕಂಡುಬರುವ ಬೆನ್ನು ಹಾಗೂ ತೋಳಿನ ನೋವಿಗೂ ಕೆಲವು ಮಕ್ಕಳು ಹೊರುವ ಭಾರವಾದ ಬೆನ್ನುಚೀಲಗಳಿಗೂ ಹತ್ತಿರದ ಸಂಬಂಧವಿದೆ ಎಂಬುದನ್ನು ಅಮೆರಿಕನ್‌ ಆ್ಯಕ್ಯಾಡೆಮಿಯ ಮೂಳೆತಜ್ಞರ ಒಂದು ಅಧ್ಯಯನವು ತೋರಿಸಿದೆ. ಅವರ ಬೆನ್ನುಚೀಲಗಳಲ್ಲಿ ಶಾಲಾಪುಸ್ತಕಗಳು, ಆಹಾರ, ನೀರು, ಸಂಗೀತ ಉಪಕರಣಗಳು ಹಾಗೂ ಬದಲಾಯಿಸಲು ಒಂದು ಜೊತೆ ಬಟ್ಟೆ ಇವೆಲ್ಲವೂ ತುಂಬಿರುತ್ತವೆ. ಕೆಲವು ಮಕ್ಕಳಂತೂ ಸುಮಾರು 18 ಕೆ.ಜಿ.ಯಷ್ಟು ಭಾರವನ್ನು ಹೊರುತ್ತಾರೆ. ಇಷ್ಟೊಂದು ಭಾರವಾದ ಚೀಲಗಳನ್ನು ದಿನಾಲೂ ಹೊತ್ತುಕೊಂಡು ಹೋದರೆ, ಪ್ರಾಥಮಿಕ ಶಾಲೆಯ ಮಕ್ಕಳು ಗಂಭೀರವಾದ ಬೆನ್ನು ನೋವಿನ ಸಮಸ್ಯೆಯನ್ನು ಎದುರಿಸಬಹುದು ಎಂದು ಮಕ್ಕಳ ತಜ್ಞರು ಎಚ್ಚರಿಸುತ್ತಾರೆ. ಇದರಲ್ಲಿ ಬೆನ್ನುಮೂಳೆಯ ಬಾಗುವಿಕೆ ಸಹ ಸೇರಿರುತ್ತದೆ. ವಿದ್ಯಾರ್ಥಿಗಳು ತಮ್ಮ ದೇಹ ತೂಕದ 20 ಪ್ರತಿಶತಕ್ಕಿಂತಲೂ ಹೆಚ್ಚಿನ ಭಾರವನ್ನು ಹೊರಬಾರದು ಇಲ್ಲವೇ ಅದನ್ನು “ಚಕ್ರಗಳುಳ್ಳ” ಬ್ಯಾಗುಗಳಲ್ಲಿ ಎಳೆದುಕೊಂಡು ಹೋಗಬೇಕು; “ಚೀಲದ ಜೊತೆಗೆ ಟೊಂಕಕ್ಕೆ ಹೊಂದುವ ಬೆಲ್ಟು ಇರಬೇಕು ಮತ್ತು ಬೆನ್ನುಗಳಿಗೆ ಮೆತ್ತೆಯಿರುವ ಚೀಲಗಳಿರಬೇಕು” ಎಂದು ವಿಶೇಷಜ್ಞರು ಪ್ರಿನ್ಸಿಪಾಲರಿಗೆ ಹಾಗೂ ಶಿಕ್ಷಕರಿಗೆ ಸಲಹೆ ನೀಡುತ್ತಾರೆ ಎಂದು ಮೆಕ್ಸಿಕೋ ನಗರದ ಎಕ್‌ಸೆಲ್‌ಸೆಯೋರ್‌ ವಾರ್ತಾಪತ್ರಿಕೆಯು ವರದಿಸುತ್ತದೆ.

ಮಾಲಿನ್ಯಕಾರಿ ವಿಗ್ರಹಗಳು

ಹಬ್ಬಹರಿದಿನಗಳ ನಂತರ ವಿಗ್ರಹಗಳನ್ನು ಹತ್ತಿರದ ನೀರಿನಲ್ಲಿ ಮುಳುಗಿಸುವುದು ಹಿಂದೂಗಳ ವಾಡಿಕೆ. ಹೂವು ಇಲ್ಲವೇ ತರಕಾರಿಗಳ ಬಣ್ಣದಿಂದ ಈ ವಿಗ್ರಹಗಳಿಗೆ ಬಣ್ಣಬಳಿಯುತ್ತಿದ್ದಾಗ, ಇದೇನೂ ಪರಿಸರೀಯ ಸಮಸ್ಯೆಯಾಗಿರಲಿಲ್ಲ. ಆದರೆ ಈಗ ಉತ್ಪಾದಕರು, ಹೆಚ್ಚಿನ ಸಾಂದ್ರತೆಯುಳ್ಳ ಲೋಹಗಳಿಂದ ಮತ್ತು ಕ್ಯಾನ್ಸರನ್ನು ಬರಿಸುವ ಒಂದು ಪದಾರ್ಥದಿಂದ ತಯಾರಿಸಲ್ಪಟ್ಟ ಬಣ್ಣವನ್ನು ಉಪಯೋಗಿಸುತ್ತಿದ್ದಾರೆ. ಇದು ಭಾರತದ ಕೆಲವು ಸ್ಥಳಗಳಲ್ಲಿ, ನದಿತೊರೆಗಳಲ್ಲಿ ಸಾವಿರಾರು ವಿಗ್ರಹಗಳನ್ನು ಮುಳುಗಿಸಿದ ನಂತರ ನೀರನ್ನು ಕಲುಷಿತಗೊಳಿಸಿದೆ. ನೀರು ಕಲುಷಿತಗೊಳ್ಳದಂತೆ ಮಾಡಲಿಕ್ಕಾಗಿ, ಒಂದು ನಗರದಲ್ಲಿನ ನಿವಾಸಿಗಳು ನೂರಾರು ವಿಗ್ರಹಗಳನ್ನು ತೆಗೆದುಕೊಂಡು ಹೋಗಿ, ಒಂದು ವಿಶಾಲವಾದ ಜಾಗದಲ್ಲಿ ಅವುಗಳನ್ನು ಚೂರುಚೂರು ಮಾಡಿಬಿಟ್ಟರು. ಭಾರತದ ಪ್ರತಿಯೊಂದು ಕಡೆಯಲ್ಲೂ ಹೀಗೇ ಮಾಡಲ್ಪಡಬೇಕು ಮತ್ತು ವಿಗ್ರಹಗಳ ಉತ್ಪಾದಕರು ತಾವು ಹಿಂದೆ ರೂಢಿಯಾಗಿ ಬಳಸುತ್ತಿದ್ದ ಬಣ್ಣಗಳನ್ನೇ ಪುನಃ ಉಪಯೋಗಿಸಲು ಆರಂಭಿಸಬೇಕೆಂದು ಡೌನ್‌ ಟು ಅರ್ತ್‌ ಎಂಬ ಪತ್ರಿಕೆಯು ಸಲಹೆ ನೀಡುತ್ತದೆ. “ಇಲ್ಲದಿದ್ದರೆ, ಹಿಂದೂಗಳು ಪೂಜಿಸುವ ನದಿಗಳು ಅವರು ಪೂಜಿಸುವ ವಿಗ್ರಹಗಳಿಂದಲೇ ವಿಷಭರಿತವಾಗುವವು” ಎಂದು ಆ ಪತ್ರಿಕೆಯು ಹೇಳುತ್ತದೆ.