ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೈಹಿಕ ಅಲಂಕಾರ—ಈ ವಿಷಯದಲ್ಲಿ ವಿವೇಚನೆಯನ್ನು ತೋರಿಸುವ ಅಗತ್ಯವಿದೆ

ದೈಹಿಕ ಅಲಂಕಾರ—ಈ ವಿಷಯದಲ್ಲಿ ವಿವೇಚನೆಯನ್ನು ತೋರಿಸುವ ಅಗತ್ಯವಿದೆ

ಬೈಬಲಿನ ದೃಷ್ಟಿಕೋನ

ದೈಹಿಕ ಅಲಂಕಾರ​—⁠ಈ ವಿಷಯದಲ್ಲಿ ವಿವೇಚನೆಯನ್ನು ತೋರಿಸುವ ಅಗತ್ಯವಿದೆ

“ಏನೇ ಬಿದ್ದರೂ ತನ್ನೊಡಲಿಗೆ ಸೇರಿಸಿಕೊಳ್ಳುವಂತಹ ಕಳ್ಳುಸುಬಿನಂತೆ, ದುರಭಿಮಾನದ ಒಬ್ಬ ವ್ಯಕ್ತಿಯು ವಿವೇಚನೆಯನ್ನು ತೋರಿಸುವುದಿಲ್ಲ” ಎಂದು ಒಬ್ಬ ಫ್ರೆಂಚ್‌ ಕಾದಂಬರಿಗಾರ್ತಿಯು ಬರೆದಳು. ಅನೇಕ ಶತಮಾನಗಳಿಂದ ದುರಭಿಮಾನದ ಸಲುವಾಗಿ ಮಾನವರು ಸ್ವತಃ ತಮಗೋಸ್ಕರ ಮಾಡಿಕೊಂಡಿರುವ ಅನೇಕ ವಿಷಯಗಳಲ್ಲಿ ವಿವೇಚನಾ ಶಕ್ತಿಯನ್ನೇ ತೋರಿಸಿಲ್ಲ ಎಂಬುದಂತೂ ಖಂಡಿತ. ಉದಾಹರಣೆಗೆ, ಸಾಧ್ಯವಿರುವಷ್ಟು ತೆಳ್ಳಗಿನ ಸೊಂಟವನ್ನು ಪಡೆದುಕೊಳ್ಳುವ ಪ್ರಯತ್ನದಿಂದ, 19ನೆಯ ಶತಮಾನದ ಸ್ತ್ರೀಯರು ತಮ್ಮ ಹೊಟ್ಟೆಗಳ ಮೇಲೆ ಎಷ್ಟು ಬಿಗಿಯಾದ ಒಳಗವಚವನ್ನು ಧರಿಸಿದರೆಂದರೆ, ಅದರಿಂದ ಅವರಿಗೆ ಸರಿಯಾಗಿ ಉಸಿರಾಡುವುದು ಸಹ ಅಸಾಧ್ಯವಾಗಿತ್ತು. ಅವರಲ್ಲಿ ಕೆಲವರ ಸೊಂಟದ ಸುತ್ತಳತೆಯು ಕೇವಲ 13 ಇಂಚುಗಳಷ್ಟಿತ್ತು ಎಂದು ಹೇಳಲಾಗಿದೆ. ಕೆಲವು ಸ್ತ್ರೀಯರು ತಮ್ಮ ಒಳಗುಪ್ಪಸಗಳನ್ನು ಎಷ್ಟು ಬಿಗಿಯಾಗಿ ಹಾಕಿದ್ದರೆಂದರೆ, ಅವರ ಪಕ್ಕೆಲುಬುಗಳು ಅವರ ಪಿತ್ತಜನಕಾಂಗದೊಳಕ್ಕೆ ಅದುಮಲ್ಪಟ್ಟಿದ್ದವು ಮತ್ತು ಇದರಿಂದಾಗಿ ಮರಣವು ಸಹ ಸಂಭವಿಸಿತು.

ಆ ಫ್ಯಾಷನ್‌ ಹುಚ್ಚು ಈಗ ಕಣ್ಮರೆಯಾಗಿದೆ ಎಂಬುದು ಸಂತೋಷಕರ ಸಂಗತಿಯಾಗಿರುವುದಾದರೂ, ಅದರಿಂದ ಉಂಟಾಗಿರುವ ದುರಭಿಮಾನವು ಇಂದು ಮುಂಚಿನಷ್ಟೇ ವ್ಯಾಪಕವಾಗಿದೆ. ತಮ್ಮ ಸಹಜ ತೋರಿಕೆಯನ್ನು ಬದಲಾಯಿಸುವುದಕ್ಕಾಗಿ, ಈಗಲೂ ಅನೇಕ ಸ್ತ್ರೀಪುರುಷರು ಕಷ್ಟಕರವಾದ ಹಾಗೂ ಜೀವಕ್ಕೇ ಅಪಾಯವನ್ನೊಡ್ಡುವ ವಿಧಾನಗಳನ್ನು ಅನುಸರಿಸುತ್ತಾರೆ. ಉದಾಹರಣೆಗೆ, ಒಂದು ಕಾಲದಲ್ಲಿ ಸಮಾಜದಲ್ಲಿ ಒಳ್ಳೆಯ ನೈತಿಕ ಮಟ್ಟಗಳಿರದಂತಹ ಗುಂಪುಗಳ ಸದಸ್ಯರು ಮಾತ್ರವೇ ಹಚ್ಚೆಹಾಕುವಂತಹ ಹಾಗೂ ದೇಹವನ್ನು ಚುಚ್ಚಿ ಓಲೆ ಹಾಕುವಂತಹ ಪಾರ್ಲರ್‌ (ಸ್ಥಳ)ಗಳಿಗೆ ಭೇಟಿ ನೀಡುತ್ತಿದ್ದರು. ಆದರೆ ಈಗ ಇಂತಹ ಪಾರ್ಲರ್‌ಗಳು ಶಾಪಿಂಗ್‌ ಸೆಂಟರ್‌ಗಳಲ್ಲಿ ಹಾಗೂ ನಗರದ ಹೊರವಲಯಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಎದ್ದೇಳುತ್ತಿವೆ. ಅಷ್ಟುಮಾತ್ರವಲ್ಲ, ಇತ್ತೀಚಿನ ವರ್ಷಗಳಲ್ಲಿ, ಅಮೆರಿಕದ ಅತಿ ವೇಗವಾಗಿ ಅಭಿವೃದ್ಧಿಹೊಂದುತ್ತಿರುವ ಚಿಲ್ಲರೆ ವ್ಯಾಪಾರಗಳಲ್ಲಿ, ಹಚ್ಚೆಹಾಕುವ ವ್ಯಾಪಾರವು ಆರನೆಯ ಸ್ಥಾನದಲ್ಲಿದೆ.

ದೈಹಿಕ ಅಲಂಕಾರದ ವಿಪರೀತ ರೂಪಗಳು ಯುವ ಜನರ ನಡುವೆ ವಿಶೇಷವಾಗಿ ಹೆಚ್ಚಾಗುತ್ತಿವೆ. ಮೊಲೆತೊಟ್ಟುಗಳು, ಮೂಗುಗಳು, ನಾಲಿಗೆಗಳು, ಹಾಗೂ ಜನನಾಂಗಗಳನ್ನೂ ಒಳಗೊಂಡು ದೇಹದ ಅನೇಕ ಭಾಗಗಳನ್ನು ಚುಚ್ಚಿ ಓಲೆ ಹಾಕಿಕೊಳ್ಳುವುದು ಸಹ ಹೆಚ್ಚೆಚ್ಚು ಜನಪ್ರಿಯವಾಗುತ್ತಿದೆ. ಇನ್ನು ಕೆಲವರಿಗಂತೂ, ದೇಹದಾದ್ಯಂತ ಚುಚ್ಚಿ ಓಲೆ ಹಾಕಿಕೊಳ್ಳುವಂತಹ ಫ್ಯಾಷನ್‌ ಅಷ್ಟೇನೂ ರೋಮಾಂಚನವನ್ನು ತರುವುದಿಲ್ಲ. ಏಕೆಂದರೆ, ಅವರು ಇನ್ನೂ ವಿಪರೀತವಾದ ರೂಢಿಯನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇವುಗಳಲ್ಲಿ ಕಬ್ಬಿಣದಿಂದ ಬರೆಹಾಕುವುದು, ಕತ್ತರಿಸುವುದು, * ಮತ್ತು ದೇಹದ ಮೇಲೆ ಶಿಲ್ಪಾಲಂಕಾರ ಮಾಡುವುದು ಸಹ ಒಳಗೊಂಡಿದೆ. ದೇಹದ ಮೇಲೆ ಶಿಲ್ಪಾಲಂಕಾರ ಮಾಡುವುದೆಂದರೆ, ಚರ್ಮದ ಒಳಗೆ ವಸ್ತುಗಳನ್ನು ಸೇರಿಸಿ, ಉಬ್ಬುತಗ್ಗುಗಳು ಕಾಣುವಂತೆ ಮಾಡುವುದೇ ಆಗಿದೆ.

ಒಂದು ಪುರಾತನ ಪದ್ಧತಿ

ದೇಹವನ್ನು ಅಂದಗೊಳಿಸುವುದು ಅಥವಾ ದೇಹಕ್ಕೆ ಸ್ವಲ್ಪ ಮಾರ್ಪಾಟನ್ನು ಮಾಡುವುದು ಹೊಸ ಪದ್ಧತಿಯೇನಲ್ಲ. ಆಫ್ರಿಕದ ಕೆಲವು ಭಾಗಗಳಲ್ಲಿ, ನಿರ್ದಿಷ್ಟವಾದ ಕೌಟುಂಬಿಕ ಗುಂಪುಗಳನ್ನು ಅಥವಾ ಕುಲಗಳನ್ನು ಗುರುತಿಸಲಿಕ್ಕಾಗಿ, ಗೀರುಗಾಯಗಳನ್ನು ಮಾಡುವ ಹಾಗೂ ಹಚ್ಚೆಹಾಕುವ ಪದ್ಧತಿಯನ್ನು ಅನೇಕ ಶತಮಾನಗಳಿಂದ ಉಪಯೋಗಿಸಲಾಗುತ್ತಿತ್ತು. ಆದರೂ, ಇಂತಹ ಅನೇಕ ದೇಶಗಳಲ್ಲಿ ಇಂದು ಆ ಪದ್ಧತಿಗಳನ್ನು ಅಸಮ್ಮತಿಸಲಾಗುತ್ತದೆ ಮತ್ತು ಇವು ಕಡಿಮೆಯಾಗುತ್ತಿವೆ ಎಂಬುದು ಆಸಕ್ತಿಕರ ಸಂಗತಿಯಾಗಿದೆ.

ಹಚ್ಚೆಹಾಕುವುದು, ದೇಹವನ್ನು ಚುಚ್ಚಿ ಓಲೆ ಹಾಕಿಕೊಳ್ಳುವುದು, ಮತ್ತು ಕತ್ತರಿಸುವಂತಹ ರೂಢಿಯು ಬೈಬಲ್‌ ಸಮಯಗಳಲ್ಲಿಯೂ ಅಸ್ತಿತ್ವದಲ್ಲಿತ್ತು. ಅನೇಕವೇಳೆ ಈ ಪದ್ಧತಿಗಳು ವಿಧರ್ಮಿ ಜನಾಂಗಗಳಲ್ಲಿ ಸರ್ವಸಾಮಾನ್ಯವಾಗಿದ್ದು, ಅವರ ಧರ್ಮಗಳಿಗೆ ಸಂಬಂಧಪಟ್ಟವುಗಳಾಗಿದ್ದವು. ಆದುದರಿಂದಲೇ, ತನ್ನ ಜನರಾಗಿದ್ದ ಯೆಹೂದ್ಯರು ಆ ವಿಧರ್ಮಿಗಳನ್ನು ಅನುಸರಿಸಬಾರದೆಂದು ಯೆಹೋವನು ಆಜ್ಞೆಯನ್ನಿತ್ತಿದ್ದನು. (ಯಾಜಕಕಾಂಡ 19:28) ಹೀಗೆ, ದೇವರ ‘ಸ್ವಕೀಯಜನರಾಗಿದ್ದ’ ಯೆಹೂದ್ಯರು, ಕೀಳ್ಮಟ್ಟದ ಸುಳ್ಳು ಧಾರ್ಮಿಕ ಪದ್ಧತಿಗಳಿಂದ ಸಂರಕ್ಷಿಸಲ್ಪಟ್ಟಿದ್ದರು.​—⁠ಧರ್ಮೋಪದೇಶಕಾಂಡ 14:⁠2.

ಕ್ರೈಸ್ತ ಸ್ವಾತಂತ್ರ್ಯ

ಇಂದು ಕ್ರೈಸ್ತರು ಮೋಶೆಯ ಧರ್ಮಶಾಸ್ತ್ರದ ಅಧೀನದಲ್ಲಿಲ್ಲವಾದರೂ, ಅದರಲ್ಲಿ ಕೊಡಲ್ಪಟ್ಟಿರುವಂತಹ ಕೆಲವು ಮೂಲತತ್ವಗಳು ಕ್ರೈಸ್ತ ಸಭೆಗೆ ಇಂದಿಗೂ ಅನ್ವಯವಾಗುತ್ತವೆ. (ಕೊಲೊಸ್ಸೆ 2:14) ಹೀಗೆ, ಕ್ರೈಸ್ತರು ತಾವು ಯಾವ ವಿಧದ ದೈಹಿಕ ಅಲಂಕಾರವನ್ನು ಮಾಡಿಕೊಳ್ಳಬೇಕು ಎಂಬ ವಿಷಯದಲ್ಲಿ, ಸರಿಯಾದ ನಡವಳಿಕೆಯ ಸೀಮಾರೇಖೆಯೊಳಗೆ ತಮ್ಮದೇ ಆದ ಆಯ್ಕೆಯನ್ನು ಮಾಡಸಾಧ್ಯವಿದೆ. (ಗಲಾತ್ಯ 5:1; 1 ತಿಮೊಥೆಯ 2:​9, 10) ಆದರೂ, ಈ ಸ್ವಾತಂತ್ರ್ಯಕ್ಕೆ ಮಿತಿಯಿದೆ ಎಂಬುದಂತೂ ಖಂಡಿತ.​—⁠1 ಪೇತ್ರ 2:⁠16.

1 ಕೊರಿಂಥ 6:12ರಲ್ಲಿ ಪೌಲನು ಬರೆದುದು: “ಎಲ್ಲಾ ಕಾರ್ಯಗಳನ್ನು ಮಾಡುವದಕ್ಕೆ ನನಗೆ ಸ್ವಾತಂತ್ರ್ಯವೇನೋ ಉಂಟು, ಆದರೆ ಎಲ್ಲವೂ ವಿಹಿತವಾಗಿರುವದಿಲ್ಲ.” ಕ್ರೈಸ್ತನೋಪಾದಿ ತನಗಿರುವ ಸ್ವಾತಂತ್ರ್ಯವು, ಇತರರಿಗೆ ಪರಿಗಣನೆಯನ್ನು ತೋರಿಸದೆ ತನ್ನ ಮನಸ್ಸಿಗೆ ಬಂದಂತೆ ನಡೆಯುವ ಅನುಮತಿಯನ್ನು ತನಗೆ ಕೊಟ್ಟಿಲ್ಲ ಎಂಬುದನ್ನು ಪೌಲನು ಅರ್ಥಮಾಡಿಕೊಂಡನು. ಇತರರಿಗಾಗಿರುವ ಪ್ರೀತಿಯು ಅವನ ನಡವಳಿಕೆಯನ್ನು ಪ್ರಭಾವಿಸಿತ್ತು ಖಂಡಿತ. (ಗಲಾತ್ಯ 5:13) ಆದುದರಿಂದಲೇ, “ನಿಮ್ಮಲ್ಲಿ ಪ್ರತಿಯೊಬ್ಬನು ಸ್ವಹಿತವನ್ನು ಮಾತ್ರ ನೋಡದೆ ಪರಹಿತವನ್ನು ಸಹ ನೋಡಲಿ” ಎಂದು ಅವನು ಉತ್ತೇಜಿಸಿದನು. (ಫಿಲಿಪ್ಪಿ 2:⁠4) ಅವನ ನಿಸ್ವಾರ್ಥ ದೃಷ್ಟಿಕೋನವು, ವಿವಿಧ ರೀತಿಯ ದೈಹಿಕ ಅಲಂಕಾರವನ್ನು ಮಾಡಿಸಿಕೊಳ್ಳಲು ಯೋಜಿಸುತ್ತಿರುವ ಯಾವುದೇ ಕ್ರೈಸ್ತನಿಗೆ ಒಂದು ಅತ್ಯುತ್ತಮ ಮಾದರಿಯಾಗಿ ಕಾರ್ಯನಡಿಸುತ್ತದೆ.

ಪರಿಗಣಿಸಬೇಕಾಗಿರುವ ಬೈಬಲ್‌ ಮೂಲತತ್ವಗಳು

ಕ್ರೈಸ್ತರಿಗೆ ಕೊಡಲ್ಪಟ್ಟಿರುವ ಅನೇಕ ಆಜ್ಞೆಗಳಲ್ಲಿ ಒಂದು, ಸುವಾರ್ತೆಯನ್ನು ಸಾರುವುದು ಹಾಗೂ ಕಲಿಸುವುದೇ ಆಗಿದೆ. (ಮತ್ತಾಯ 28:​19, 20; ಫಿಲಿಪ್ಪಿ 2:15) ತನ್ನ ಹೊರತೋರಿಕೆಯನ್ನು ಒಳಗೊಂಡು ಇನ್ನಿತರ ಯಾವುದೇ ವಿಷಯವು, ಆ ಸಂದೇಶಕ್ಕೆ ಕಿವಿಗೊಡುವುದರಿಂದ ಇತರರನ್ನು ತಡೆಯುವಂತೆ ಒಬ್ಬ ಕ್ರೈಸ್ತನು ಬಯಸುವುದಿಲ್ಲ.​—⁠2 ಕೊರಿಂಥ 4:⁠2.

ದೇಹವನ್ನು ಚುಚ್ಚಿ ಓಲೆ ಹಾಕಿಕೊಳ್ಳುವುದು ಅಥವಾ ಹಚ್ಚೆಹಾಕುವಂತಹ ದೈಹಿಕ ಅಲಂಕಾರಗಳು ಕೆಲವರ ಮಧ್ಯೆ ತುಂಬ ಜನಪ್ರಿಯವಾಗಿರಬಹುದು. ಆದರೆ ಒಬ್ಬ ಕ್ರೈಸ್ತನು ಸ್ವತಃ ಹೀಗೆ ಕೇಳಿಕೊಳ್ಳುವ ಅಗತ್ಯವಿದೆ: ‘ನಾನು ವಾಸಿಸುತ್ತಿರುವಂತಹ ಸಮಾಜದಲ್ಲಿನ ಜನರು ಇಂತಹ ದೈಹಿಕ ಅಲಂಕಾರಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾರೆ? ಸಮಾಜದಲ್ಲಿರುವ ಯಾವುದೋ ಒಂದು ವಿಚಿತ್ರ ಗುಂಪಿಗೆ ಸೇರಿದವನೆಂದು ನನ್ನ ಬಗ್ಗೆ ಜನರು ನೆನಸುತ್ತಾರೋ? ಒಂದುವೇಳೆ ನನ್ನ ಮನಸ್ಸಾಕ್ಷಿಯು ಹೀಗೆ ಮಾಡಲು ಒಪ್ಪುವುದಾದರೂ, ನಾನು ದೇಹವನ್ನು ಚುಚ್ಚಿಸಿಕೊಂಡು ಓಲೆ ಹಾಕಿಕೊಳ್ಳುವುದು ಹಾಗೂ ಹಚ್ಚೆಹಾಕಿಸಿಕೊಳ್ಳುವುದು, ಸಭೆಯಲ್ಲಿರುವ ಇತರರ ಮೇಲೆ ಯಾವ ಪರಿಣಾಮವನ್ನು ಬೀರಬಹುದು? ಇದನ್ನು ಅವರು “ಪ್ರಾಪಂಚಿಕ ಆತ್ಮ”ದ ಒಂದು ಪುರಾವೆಯಾಗಿ ಪರಿಗಣಿಸುವರೋ? ಇದು ನನ್ನ “ಸ್ವಸ್ಥಚಿತ್ತ”ದ ವಿಷಯದಲ್ಲಿ ಸಂದೇಹವನ್ನು ಉಂಟುಮಾಡಬಹುದೋ?’​—⁠1 ಕೊರಿಂಥ 2:12; 10:​29-32; ತೀತ 2:⁠12.

ಕೆಲವೊಂದು ರೀತಿಯ ದೈಹಿಕ ಬದಲಾವಣೆಗಳು ಗಂಭೀರವಾದ ವೈದ್ಯಕೀಯ ಅಪಾಯಗಳನ್ನು ಉಂಟುಮಾಡಬಹುದು. ಕೊಳಕಾದ ಸೂಜಿಗಳನ್ನು ಉಪಯೋಗಿಸಿ ಹಚ್ಚೆಹಾಕುವುದರಿಂದ, ಹೆಪಟೈಟಿಸ್‌ ಹಾಗೂ ಏಚ್‌ಐವಿ ರೋಗಗಳು ಹಬ್ಬುವ ಸಾಧ್ಯತೆಯಿದೆ. ಅದಕ್ಕಾಗಿ ಉಪಯೋಗಿಸಲ್ಪಡುವ ಬಣ್ಣಗಳಿಂದ ಕೆಲವೊಮ್ಮೆ ಚರ್ಮರೋಗಗಳು ಉಂಟಾಗುತ್ತವೆ. ದೇಹವನ್ನು ಚುಚ್ಚಿ ಮಾಡಿದಂತಹ ಗಾಯಗಳು ವಾಸಿಯಾಗಲು ಅನೇಕ ತಿಂಗಳುಗಳು ಹಿಡಿಯಬಹುದು ಮತ್ತು ಅದು ವಾಸಿಯಾಗುವ ತನಕ ತುಂಬ ನೋವಿರಸಾಧ್ಯವಿದೆ. ದೇಹವನ್ನು ಚುಚ್ಚುವ ಮೂಲಕ ರಕ್ತವು ವಿಷಮಯವಾಗುವ, ರಕ್ತಸ್ರಾವವಾಗುವ, ರಕ್ತ ಹೆಪ್ಪುಗಟ್ಟುವ, ನರಗಳು ದುರ್ಬಲಗೊಳ್ಳುವ ಹಾಗೂ ಗಂಭೀರವಾದ ಸೋಂಕುಗಳು ಉಂಟಾಗುವ ಸಾಧ್ಯತೆಯಿದೆ. ಅಷ್ಟುಮಾತ್ರವಲ್ಲ, ಕೆಲವೊಂದು ಕಾರ್ಯವಿಧಾನಗಳನ್ನು ಸುಲಭವಾಗಿ ಪುನಃ ಸರಿಪಡಿಸಲು ಸಾಧ್ಯವಿಲ್ಲದಂಥವುಗಳಾಗಿವೆ. ಉದಾಹರಣೆಗೆ, ಒಂದು ಹಚ್ಚೆಯ ಗಾತ್ರ ಹಾಗೂ ಬಣ್ಣದ ಮೇಲೆ ಹೊಂದಿಕೊಂಡು, ಅದನ್ನು ತೆಗೆದುಹಾಕಲು ತುಂಬ ದುಬಾರಿಯಾಗಿರುವ ಹಾಗೂ ವೇದನಾಭರಿತವಾದ ಲೇಸರ್‌ ಚಿಕಿತ್ಸೆಗಳನ್ನು ಅನೇಕಬಾರಿ ಮಾಡಿಸಿಕೊಳ್ಳಬೇಕಾಗುತ್ತದೆ. ದೇಹವನ್ನು ಚುಚ್ಚಿ ಓಲೆ ಹಾಕಿಕೊಳ್ಳುವ ಮೂಲಕ ಜೀವನಪರ್ಯಂತ ಅದರ ಮಚ್ಚೆಗಳು ಉಳಿಯಬಹುದು.

ಒಬ್ಬ ವ್ಯಕ್ತಿಯು ಈ ಅಪಾಯಗಳನ್ನು ಸ್ವೀಕರಿಸಬೇಕೋ ಇಲ್ಲವೋ ಎಂಬುದನ್ನು ನಿರ್ಧರಿಸುವುದು ಅವನ ವೈಯಕ್ತಿಕ ನಿರ್ಧಾರವಾಗಿದೆ. ಆದರೆ, ದೇವರನ್ನು ಮೆಚ್ಚಿಸಲು ಬಯಸುವ ಒಬ್ಬನು, ಒಬ್ಬ ಕ್ರೈಸ್ತನಾಗಿ ಪರಿಣಮಿಸುವುದರಲ್ಲಿ, ಸ್ವತಃ ತನ್ನನ್ನೇ ದೇವರಿಗೆ ಅರ್ಪಿಸಿಕೊಳ್ಳುವುದು ಒಳಗೂಡಿದೆ ಎಂಬುದನ್ನು ಗ್ರಹಿಸುತ್ತಾನೆ. ಏಕೆಂದರೆ ನಮ್ಮ ದೇಹಗಳು, ದೇವರ ಉಪಯೋಗಕ್ಕೋಸ್ಕರ ಆತನಿಗೆ ಮೀಸಲಾಗಿರಿಸಲ್ಪಟ್ಟಿರುವ ಸಜೀವ ಯಜ್ಞಗಳಾಗಿವೆ. (ರೋಮಾಪುರ 12:⁠1) ಆದುದರಿಂದ, ಪ್ರೌಢ ಕ್ರೈಸ್ತರು ತಮ್ಮ ದೇಹಗಳನ್ನು, ಒಬ್ಬನಿಗೆ ಇಷ್ಟಬಂದಾಗ ಹಾನಿಮಾಡುವ ಅಥವಾ ಹಾಳುಮಾಡುವಂತಹ ಒಂದು ವೈಯಕ್ತಿಕ ಸ್ವತ್ತಾಗಿ ಪರಿಗಣಿಸುವುದಿಲ್ಲ. ಅದರಲ್ಲೂ ವಿಶೇಷವಾಗಿ ಸಭೆಯಲ್ಲಿ ನಾಯಕತ್ವವನ್ನು ವಹಿಸಲಿಕ್ಕಾಗಿ ಅರ್ಹರಾಗಿರುವಂತಹ ಕ್ರೈಸ್ತರು, ಸಭ್ಯ ನಡವಳಿಕೆಯುಳ್ಳವರು, ಸ್ವಸ್ಥಚಿತ್ತರು, ಹಾಗೂ ಸಾತ್ವಿಕರು ಎಂಬ ಹೆಸರನ್ನು ಪಡೆದುಕೊಂಡಿದ್ದಾರೆ.​—⁠1 ತಿಮೊಥೆಯ 3:​2, 3.

ಬೈಬಲ್‌ ಶಿಕ್ಷಿತ ವಿವೇಚನಾಶಕ್ತಿಯನ್ನು ಬೆಳೆಸಿಕೊಳ್ಳುವುದು ಹಾಗೂ ರೂಢಿಮಾಡಿಕೊಳ್ಳುವುದು, ಈ ಲೋಕದ ಸ್ವಹಿಂಸಾ ಮನೋಭಾವದಿಂದ ದೂರವಿರುವಂತೆ ಕ್ರೈಸ್ತರಿಗೆ ಸಹಾಯಮಾಡುವುದು. ಏಕೆಂದರೆ, ಈ ಲೋಕವು ನಿರೀಕ್ಷಾಹೀನವಾದ ರೀತಿಯಲ್ಲಿ “ದೇವರಿಗೆ ಸೇರಿರುವ ಜೀವದಿಂದ ವಿಮುಖವಾಗಿದೆ.” (ಎಫೆಸ 4:​18, NW) ಆದುದರಿಂದ, ಕ್ರೈಸ್ತರು ತಮ್ಮ ವಿವೇಚನಾಶಕ್ತಿಯನ್ನು ಎಲ್ಲ ಮನುಷ್ಯರ ಮುಂದೆ ತೋರ್ಪಡಿಸಬೇಕು.​—⁠ಫಿಲಿಪ್ಪಿ 4:⁠5.

[ಪಾದಟಿಪ್ಪಣಿ]

^ ವೈದ್ಯಕೀಯ ಅಥವಾ ಸೌಂದರ್ಯಶಾಸ್ತ್ರಕ್ಕೆ ಸಂಬಂಧಪಟ್ಟ ಉದ್ದೇಶಗಳಿಗಾಗಿ ದೇಹವನ್ನು ಕತ್ತರಿಸುವುದಕ್ಕೂ ಅನೇಕ ಯುವ ಜನರು, ಅದರಲ್ಲೂ ವಿಶೇಷವಾಗಿ ಹದಿಪ್ರಾಯದ ಹುಡುಗಿಯರು ಮಾಡುವಂತಹ ನಿರ್ಬಂಧಿತ ಕತ್ತರಿಸುವಿಕೆ ಅಥವಾ ಅಂಗಹೀನಗೊಳಿಸುವಿಕೆಗೂ ಸ್ಪಷ್ಟವಾದ ಭಿನ್ನತೆಯಿದೆ. ಈ ನಿರ್ಬಂಧಿತ ಕತ್ತರಿಸುವಿಕೆಯು, ಅನೇಕವೇಳೆ ಗಂಭೀರವಾದ ಭಾವನಾತ್ಮಕ ಒತ್ತಡ ಅಥವಾ ದುರುಪಯೋಗದ ರೋಗಲಕ್ಷಣವಾಗಿದ್ದು, ಇದಕ್ಕೆ ವೈದ್ಯರ ಸಹಾಯವನ್ನು ಪಡೆದುಕೊಳ್ಳಬೇಕಾಗಬಹುದು.