ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮರಣದ “ಚುಂಬನ”ದೊಂದಿಗೆ ಸೆಣಸಾಡುವುದು

ಮರಣದ “ಚುಂಬನ”ದೊಂದಿಗೆ ಸೆಣಸಾಡುವುದು

ಮರಣದ “ಚುಂಬನ”ದೊಂದಿಗೆ ಸೆಣಸಾಡುವುದು

ಬ್ರೆಸಿಲ್‌ನಲ್ಲಿರುವ ಎಚ್ಚರ! ಪತ್ರಿಕೆಯ ಸುದ್ದಿಗಾರರಿಂದ

ಮಧ್ಯ ರಾತ್ರಿಯಲ್ಲಿ ನೀವು ಗಾಢನಿದ್ರೆಯಲ್ಲಿರುವಾಗ ಅದು ನಿಮ್ಮ ಬಳಿಗೆ ಬರುತ್ತದೆ. ನಿಮ್ಮನ್ನು ಅದು ನಿದ್ರೆಯಿಂದ ಎಚ್ಚರಿಸುವುದಿಲ್ಲ. ಹೌದು, ಅದು ತನ್ನ ಮಾರಕ “ಚುಂಬನ”ವನ್ನು ಕೊಡುತ್ತಿರುವಾಗಲು ಸಹ ನೀವು ಸ್ವಲ್ಪವೂ ಕದಲುವುದಿಲ್ಲ.

ರಾತ್ರಿಯಲ್ಲಿ ಚಟುವಟಿಕೆಯಿಂದ ಕೂಡಿರುವ ಈ ಆಕ್ರಮಣಕಾರಿ ಕೀಟವು ಬಾರ್ಬರ್‌ ಬೀಟಲ್‌ ಆಗಿದೆ. ಚುಂಬನ ಕೀಟ ಎಂದು ಕೂಡ ಕರೆಯಲಾಗುವ ಈ ಕೀಟವು ದಕ್ಷಿಣ ಅಮೆರಿಕದಲ್ಲಿ ಹೇರಳವಾಗಿದೆ. ಈ ಕೀಟದ ಸಾವಕಾಶವಾದ ‘ಚುಂಬನವು’ 15 ನಿಮಿಷಗಳ ವರೆಗೂ ಇರಬಹುದು. ಆ ಸಮಯದಲ್ಲಿ ಅದು ನಿಮ್ಮ ರಕ್ತವನ್ನು ನಿಧಾನವಾಗಿ ಹೀರಿಕೊಳ್ಳುತ್ತದೆ. ಅದರ ‘ಚುಂಬನವು’ ತಾನೇ ನಿಮಗೆ ಯಾವ ಹಾನಿಯನ್ನು ಉಂಟುಮಾಡಲಾರದು. ಆದರೆ, ಆ ಕೀಟವು ನಿಮ್ಮ ಚರ್ಮದ ಮೇಲೆ ಬಿಟ್ಟುಹೋಗುವ ಕಲ್ಮಷವು ತಾನೇ ಅತ್ಯಂತ ಸೂಕ್ಷ್ಮಜೀವಿಯಾದ ಟ್ರೈಪನೋಸೋಮ ಕ್ರೂಸಿ ಅಥವಾ ಸಂಕ್ಷಿಪ್ತ ಹೆಸರಾದ ಟಿ. ಕ್ರೂಸಿಯನ್ನು ಹೊಂದಿರಸಾಧ್ಯವಿದೆ. ಈ ಪರಾವಲಂಬಿಯು ನಿಮ್ಮ ಕಣ್ಣು, ಬಾಯಿ ಅಥವಾ ಗಾಯದ ಮೂಲಕ ದೇಹವನ್ನು ಪ್ರವೇಶಿಸುವುದಾದರೆ, ಅದು ಅಮೆರಿಕನ್‌ ಟ್ರೈಪನೋಸೋಮಿಯಾಸಿಸ್‌ ಅಥವಾ ಎಲ್ಲರಿಗೂ ಪರಿಚಿತವಾಗಿರುವ ಚಾಗಸ್‌ ಎಂಬ ಕಾಯಿಲೆಯನ್ನು ಉಂಟುಮಾಡಬಲ್ಲದು.

ಚಾಗಸ್‌ ಕಾಯಿಲೆಯು ಹೆಚ್ಚು ತೀವ್ರವಾಗಿರುವ ಸಮಯದಲ್ಲಿ, ಸುಲಭವಾಗಿ ಗುರುತಿಸಬಹುದಾದ ಲಕ್ಷಣಗಳೆಂದರೆ, ಕಣ್ಣುಗಳ ಊತವಾಗಿರುತ್ತದೆ. ಅಷ್ಟೇ ಅಲ್ಲದೆ ಸುಸ್ತು, ಜ್ವರ, ಹಸಿವೆಯಿಲ್ಲದಿರುವಿಕೆ ಅಥವಾ ಭೇದಿಯು ಕೂಡ ಆರಂಭವಾಗಬಹುದು. ನಂತರ ಚಿಕಿತ್ಸೆಯನ್ನು ಪಡೆದುಕೊಳ್ಳದಿದ್ದರೂ, ಒಂದು ಅಥವಾ ಎರಡು ತಿಂಗಳುಗಳ ನಂತರ ಈ ಲಕ್ಷಣಗಳು ಸಾಮಾನ್ಯವಾಗಿ ಮಾಯವಾಗುತ್ತವೆ. ಆದರೆ, ತೀರ ಗಂಭೀರವಾದ ಸಮಸ್ಯೆಯು ನಂತರ ಶುರುವಾಗಬಹುದು. ಅಂದರೆ, ಸೋಂಕು ತಗಲಿ ಸುಮಾರು 10ರಿಂದ 20 ವರ್ಷಗಳ ನಂತರ ಬಲಿಯಾದ ವ್ಯಕ್ತಿಯು ಹೃದ್ರೋಗದ ಸಮಸ್ಯೆಗಳು ಅದರಲ್ಲೂ ಹೃದಯ ಬಡಿತದಲ್ಲಿ ಅಡಚಣೆಗಳು ಇಲ್ಲವೇ ಹೃದಯಸ್ತಂಭನವನ್ನು ಕೂಡ ಅನುಭವಿಸಬಹುದು. *

ಸುಮಾರು 18 ಕೋಟಿ ಜನ ಚಾಗಸ್‌ ಕಾಯಿಲೆಯಿಂದ ಸೋಂಕಿತರಾಗಿದ್ದಾರೆ ಎಂದು ಅಂದಾಜುಮಾಡಲಾಗಿದೆ. ಪ್ರತಿವರ್ಷ ಸುಮಾರು 50,000 ಮಂದಿ ಈ ರೋಗದಿಂದ ಸಾಯುತ್ತಾರೆ. ಆದರೆ, ಈ ರೋಗಕ್ಕೆ ಬಲಿಯಾಗುವವರೆಲ್ಲರೂ ಈ ಕ್ರಿಮಿಯಿಂದ ನೇರವಾಗಿ ಕಚ್ಚಿಸಿಕೊಂಡವರಾಗಿರುವುದಿಲ್ಲ. ಉದಾಹರಣೆಗೆ, ಸೋಂಕಿತಳಾಗಿರುವ ತಾಯಿಯ ಹಾಲನ್ನು ಕುಡಿದ ಮಕ್ಕಳು ರೋಗವನ್ನು ತಗಲಿಸಿಕೊಂಡಿದ್ದಾರೆ. ಗರ್ಭವತಿಯು ಕೂಡ ತನ್ನ ಗರ್ಭದಲ್ಲಿರುವ ಶಿಶುವಿಗೆ ಇಲ್ಲವೇ ಮಗುವಿನ ಜನನದ ಸಮಯದಲ್ಲಿ ಈ ರೋಗವನ್ನು ದಾಟಿಸಬಹುದು. ರೋಗವು ಹರಡುವ ಇನ್ನಿತರ ವಿಧಾನಗಳು, ರಕ್ತಪೂರಣ ಮತ್ತು ಟಿ. ಕ್ರೂಸಿಯಿಂದ ಸೋಂಕಿತಗೊಂಡಿರುವ ಹಸಿಯಾದ ಆಹಾರವನ್ನು ಸೇವಿಸುವ ಮೂಲಕವೂ ಆಗಿರಸಾಧ್ಯವಿದೆ. *

ಚಾಗಸ್‌ ರೋಗದ ವಿರುದ್ಧ ಹೋರಾಡುವುದಕ್ಕಾಗಿ ಏನು ಮಾಡಲಾಗಿದೆ? ಕೀಟನಾಶಕಗಳ ಉಪಯೋಗವು ಬಾರ್ಬರ್‌ ಬೀಟಲ್‌ ಕೀಟದ ವೃದ್ಧಿಯನ್ನು ನಿಯಂತ್ರಣದಲ್ಲಿಡಲು ಹೆಚ್ಚು ಪ್ರಭಾವಕಾರಿಯಾಗಿದೆ. ಆದರೆ, ಮನೆಯೊಳಗೆ ಕೀಟನಾಶಕಗಳನ್ನು ಸಿಂಪಡಿಸುವುದು ಅಷ್ಟೊಂದು ಒಳ್ಳೆಯದಲ್ಲ. ಅಷ್ಟೇ ಅಲ್ಲದೆ, ಅದನ್ನು ಪ್ರತಿ ಆರು ತಿಂಗಳಿಗೊಮ್ಮೆ ಸಿಂಪಡಿಸುತ್ತಿರಬೇಕು. ಫೆಡರಲ್‌ ಯೂನಿವರ್ಸಿಟಿ ಆಫ್‌ ರಿಯೋ ಡಿ ಜನೈರೋ ಇದಕ್ಕೆ ಇನ್ನೊಂದು ಪರ್ಯಾಯ ವಿಧಾನವನ್ನು ಕಂಡುಹಿಡಿದಿದೆ. ಅದೇನೆಂದರೆ, ಕೀಟನಾಶಕವನ್ನು ಬೆರೆಸಿರುವ ಪೆಯಿಂಟ್‌ ಅನ್ನು ಉಪಯೋಗಿಸುವುದಾಗಿದೆ. ಇದನ್ನು 4,800 ಮನೆಗಳಿಗೆ ಬಳಿಯಲಾಯಿತು. ಪರಿಣಾಮವೇನಾಯಿತು? ಎರಡು ವರ್ಷಗಳ ನಂತರವೂ 80 ಪ್ರತಿಶತದಷ್ಟು ಮನೆಗಳು ಕೀಟಗಳಿಂದ ಮುಕ್ತವಾಗಿದ್ದವು! ಬೇವಿನ ಮರದ ಎಲೆಗಳು ಅಥವಾ ಬ್ರೆಸಿಲಿಯನ್‌ ಸಿನಮೊಮೊ ಕೂಡ ನಂಜಿಲ್ಲದ ಜೈವಿಕ ವಿಘಟನೀಯ ಪದಾರ್ಥವನ್ನು (ಆ್ಯಸಡಿರಾಕ್ಟಿನ್‌) ಹೊಂದಿದೆ ಎಂಬುದನ್ನು ಸಂಶೋಧಕರು ಕಂಡುಹಿಡಿದಿದ್ದಾರೆ. ಇವು ಸೋಂಕುಗೊಂಡಿರುವ ಕೀಟಗಳನ್ನು ಗುಣಪಡಿಸುವುದು ಮಾತ್ರವಲ್ಲದೆ, ಆರೋಗ್ಯದಿಂದಿರುವಂಥ ಜೀವಿಗಳು ಕೂಡ ಆತಿಥ್ಯ ಜೀವಿಗಳಾಗದಂತೆ ತಡೆಯುತ್ತವೆ.

ಸೋಂಕುಗೊಂಡಿರುವವರಿಗೆ ಸಹಾಯ

ಚಾಗಸ್‌ ಕಾಯಿಲೆಯಿಂದ ಸೋಂಕುಗೊಂಡಿರುವ ಲಕ್ಷಾಂತರ ಜನರಿಗೆ ಯಾವುದಾದರೂ ನಿರೀಕ್ಷೆಯಿದೆಯೇ? ಖಂಡಿತವಾಗಿಯೂ. ಒಂದು ಅಂತಾರಾಷ್ಟ್ರೀಯ ವಿಜ್ಞಾನಿಗಳ ತಂಡವೊಂದು, ಟಿ. ಕ್ರೂಸಿನಲ್ಲಿರುವ 10,000 ಜೀನುಗಳಲ್ಲಿರುವ ರಹಸ್ಯವನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತಿದೆ. ಇದು, ಅವುಗಳನ್ನು ಪರೀಕ್ಷಿಸುವ ವಿಧಾನಗಳು, ಲಸಿಕೆಗಳು ಮತ್ತು ಹೆಚ್ಚು ತೀಕ್ಷ್ಣವಾದ ಔಷಧಿಗಳನ್ನು ಕಂಡುಹಿಡಿಯಲು ಸಾಧ್ಯಮಾಡಬಹುದು.

1997 ಜುಲೈ ತಿಂಗಳಿನಲ್ಲಿ, ವಿಜ್ಞಾನಿಗಳು ಟಿ. ಕ್ರೂಸಿಯ ಬಹುಮುಖ್ಯವಾದ ಪ್ರೋಟಿನುಗಳಲ್ಲಿ ಒಂದನ್ನು ಕೊಲಂಬಿಯಾ ಎಂಬ ಬಾಹ್ಯಾಕಾಶ ನೌಕೆಯ ಮೂಲಕ ಬಾಹ್ಯಾಕಾಶಕ್ಕೆ ಕಳುಹಿಸಿಕೊಟ್ಟರು. ಅದರ ಮೈಕ್ರೋಗ್ರ್ಯಾವಿಟಿಯ ವಿನ್ಯಾಸದಲ್ಲಿ, ಅವರು ಅಲ್ಲಿ ಅದನ್ನು ಅಭ್ಯಸಿಸಬಹುದು. ಮಾತ್ರವಲ್ಲದೆ, ಟಿ. ಕ್ರೂಸಿಯ ರಚನೆಯೊಂದಿಗೆ ಹೊಂದಿಕೊಳ್ಳುವ ಔಷಧಿಯನ್ನು ಕಂಡುಹಿಡಿಯಲು ಇದು ಮೂಲಭೂತ ಹೆಜ್ಜೆಯಾಗಿದೆ. ಹೊಸ ಔಷಧಿಗಳಿಗಾಗಿರುವ ಅನ್ವೇಷಣೆಯು ಪ್ರಾಮುಖ್ಯವಾಗಿದೆ. ಏಕೆಂದರೆ, ಒಮ್ಮೆ ಈ ರೋಗವು ತನ್ನ ಮುಂದಿನ ಮಟ್ಟಗಳನ್ನು ತಲುಪಿತೆಂದರೆ, ಈಗಿರುವ ಯಾವುದೇ ಔಷಧಿಯು ಪರಿಣಾಮಕಾರಿಯಾಗಿರಲಾರದು. *

ಆರಂಭದಲ್ಲೇ ಚಿಕಿತ್ಸೆಯನ್ನು ಕೊಡಬೇಕು ಎಂಬುದನ್ನು ಗ್ರಹಿಸಿರುವ ಬ್ರೆಸಿಲಿಯನ್‌ ಜೀವಶಾಸ್ತ್ರಜ್ಞೆಯಾದ ಕಾನ್‌ಸ್ಟ್ಯಾನ್ಕಾ ಬ್ರಿಟೋ, ಪಾಲಿಮರುಗಳ ಸರಪಳಿ ಪ್ರತಿಕ್ರಿಯೆಯ ಪರೀಕ್ಷೆಯನ್ನು ಕಂಡುಹಿಡಿದರು. ಈ ವಿಧಾನದ ಮೂಲಕ ರೋಗವನ್ನು ಕಂಡುಹಿಡಿಯುವ ಪರೀಕ್ಷೆಯನ್ನು ಎರಡೇ ದಿನಗಳಲ್ಲಿ ಮಾಡಬಹುದು. ಆದರೂ ದುಃಖಕರವಾದ ವಿಷಯವೆಂದರೆ, ರೋಗವು ಆರಂಭದ ಹಂತದಲ್ಲಿರುವಾಗ ತಮಗೆ ಈ ರೋಗ ಇದೆ ಎಂಬುದು ತಾನೇ ಅನೇಕರಿಗೆ ಗೊತ್ತಿರುವುದಿಲ್ಲ.

ತಡೆಗಟ್ಟುವುದೇ ಕೀಲಿಕೈ

ಅಂತಿಮವಾಗಿ, ಬಾರ್ಬರ್‌ ಬೀಟಲುಗಳಿರುವ ಪ್ರದೇಶದಲ್ಲಿ ನಿಮ್ಮ ಮನೆಯಿರುವುದಾದರೆ, ನೀವು ಯಾವ ಮುಂಜಾಗ್ರತೆಯನ್ನು ತೆಗೆದುಕೊಳ್ಳಬಹುದು?

ನೀವು ಮಣ್ಣಿನ ನೆಲದ ಮೇಲೆ ಅಥವಾ ಗುಡಿಸಲು ಮನೆಯಲ್ಲಿ ಮಲಗುವುದಾದರೆ, ಸೊಳ್ಳೆ ಪರದೆಯನ್ನು ಉಪಯೋಗಿಸಿ.

ಕೀಟನಾಶಕಗಳನ್ನು ಉಪಯೋಗಿಸಿ. ಅವು ರೋಗ ಹರಡುವ ಅಪಾಯವನ್ನು ಕಡಿಮೆಗೊಳಿಸುತ್ತವೆ.

ಗೋಡೆಗಳಲ್ಲಿರುವ ಸೀಳುಗಳು ಮತ್ತು ತೂತುಗಳನ್ನು ಮುಚ್ಚಿರಿ. ಏಕೆಂದರೆ ಇವುಗಳು ಬಾರ್ಬರ್‌ ಬೀಟಲ್‌ ಕೀಟಗಳಿಗೆ ಸಂತಾನಾಭಿವೃದ್ಧಿ ಮಾಡುವ ಸ್ಥಳಗಳಾಗಿರಬಹುದು.

ನಿಮ್ಮ ಮನೆಯನ್ನು ಶುಚಿಯಾಗಿಡಿ. ಅದರಲ್ಲೂ ಗೋಡೆಗಳ ಚಿತ್ರಗಳ ಹಾಗೂ ಪೀಠೋಪಕರಣಗಳ ಹಿಂದೆ ಶುಚಿಯಾಗಿಡಿ.

ಆಗಾಗ್ಗೆ ಹಾಸಿಗೆಗಳು ಮತ್ತು ಹೊದಿಕೆಗಳನ್ನು ಬಿಸಿಲಿನಲ್ಲಿ ಒಣಗಲು ಹಾಕಿ.

ಕಾಡು ಪ್ರಾಣಿಗಳು ಮತ್ತು ಸಾಕುಪ್ರಾಣಿಗಳು ರೋಗವನ್ನು ಒಯ್ಯುವ ಸಾಧನಗಳಾಗಿವೆ ಎಂಬುದನ್ನು ಮನದಲ್ಲಿಡಿ.

ಕೀಟವು ಬಾರ್ಬರ್‌ ಬೀಟಲೇ ಆಗಿದೆ ಎಂಬ ಸಂಶಯವು ನಿಮಗೆ ಬರುವಲ್ಲಿ, ಅದನ್ನು ಹತ್ತಿರದ ಆರೋಗ್ಯ ಕೇಂದ್ರಕ್ಕೆ ಪರೀಕ್ಷೆಗಾಗಿ ಕಳುಹಿಸಿಕೊಡಿ.

[ಪಾದಟಿಪ್ಪಣಿಗಳು]

^ ಲಕ್ಷಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಬೇರೆ ಬೇರೆಯಾಗಿರುತ್ತವೆ. ಅವುಗಳಲ್ಲಿ ಕೆಲವೊಂದು ಚಾಗಸ್‌ ಕಾಯಿಲೆಗೆ ಮಾತ್ರವೇ ಸೀಮಿತವಾಗಿರುವುದಿಲ್ಲ. ಆದುದರಿಂದ, ಅವುಗಳನ್ನು ಕೇವಲ ಸಾಮಾನ್ಯವಾದ ಸಮೀಕ್ಷೆಯಾಗಿ ನೀಡಲಾಗಿದೆಯೇ ಹೊರತು ಕಾಯಿಲೆಯನ್ನು ಕಂಡುಹಿಡಿಯುವುದಕ್ಕೆ ಮೂಲವಾಗಿರುವ ಉದ್ದೇಶದೊಂದಿಗೆ ಅವುಗಳನ್ನು ಕೊಟ್ಟಿಲ್ಲ. ಅನೇಕರು ಕಾಯಿಲೆಯು ಬೇರೂರಿದ ಸ್ಥಿತಿಗೆ ಬರುವ ವರೆಗೂ ಯಾವುದೇ ಲಕ್ಷಣಗಳನ್ನು ಅನುಭವಿಸುವುದಿಲ್ಲ.

^ ಕೆಲವೊಂದು ದೇಶಗಳಲ್ಲಿ ರಕ್ತದ ಸರಬರಾಜನ್ನು ಪರೀಕ್ಷಿಸುವಾಗ ಚಾಗಸ್‌ ರೋಗದಿಂದ ಸೋಂಕಿತವಾಗಿದೆಯೇ ಎಂದು ಯಾವಾಗಲೂ ನೋಡುವುದಿಲ್ಲ ಎಂಬುದಾಗಿ ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆಗಟ್ಟು ಕೇಂದ್ರಗಳು ತಿಳಿಸುತ್ತವೆ.

^ ಟಿ. ಕ್ರೂಸಿ ರೋಗವನ್ನು ವಾಸಿಮಾಡುವುದಕ್ಕಾಗಿ ಡಾಕ್ಟರರು ನೈಫರ್‌ಟಿಮೊಕ್ಸ್‌ ಎಂಬ ಔಷಧಿಯನ್ನು ಉಪಯೋಗಿಸುತ್ತಾರೆ. ಆದರೆ, ಅನೇಕವೇಳೆ ಇದು ತೀವ್ರವಾದ ಅಡ್ಡಪರಿಣಾಮಗಳನ್ನು ಹೊಂದಿರುತ್ತದೆ.

[ಪುಟ 13ರಲ್ಲಿರುವ ಚೌಕ]

ಚಾಗಸ್‌ ಕಾಯಿಲೆಯ ಆವಿಷ್ಕಾರ

1909ರಲ್ಲಿ ಕಾರ್ಲೋಸ್‌ ಚಾಗಸ್‌ ಎಂಬ ಒಬ್ಬ ಬ್ರೆಸಿಲಿಯನ್‌ ಡಾಕ್ಟರ್‌, ಬ್ರೆಸಿಲಿನ ಮೈನಸ್‌ ಗೆರೈಸ್‌ ಎಂಬ ರಾಜ್ಯದಲ್ಲಿ ಕೆಲಸಮಾಡುತ್ತಿದ್ದನು. ಅಲ್ಲಿ ರೈಲುರಸ್ತೆಯ ನಿರ್ಮಾಣ ಕೆಲಸವನ್ನು ಮಾಡುತ್ತಿದ್ದವರಿಗೆ ಮಲೇರಿಯಾ ರೋಗ ಬಂದ ಕಾರಣ, ಕೆಲಸಕ್ಕೆ ತಡೆಯುಂಟಾಯಿತು. ಅವನು, ಅನೇಕ ರೋಗಿಗಳಲ್ಲಿ ಚಿರಪರಿಚಿತವಾಗಿದ್ದ ಕಾಯಿಲೆಗಳಿರುವ ಲಕ್ಷಣಗಳಿಗಿಂತ ಭಿನ್ನವಾದ ಲಕ್ಷಣಗಳನ್ನು ಗಮನಿಸಿದನು. ಅಷ್ಟುಮಾತ್ರವಲ್ಲದೆ, ಈ ಪ್ರದೇಶದಲ್ಲಿದ್ದ ಮನೆಗಳು ಕೂಡ ಬಾರ್ಬರ್‌ ಬೀಟಲ್ಸ್‌ ಎಂದು ಕರೆಯಲ್ಪಡುವ ಕೀಟಗಳಿಂದ ಮುತ್ತಿಕೊಂಡಿದ್ದವು. ಈ ಕೀಟಗಳ ಹೊಟ್ಟೆಯೊಳಗಿರುವುದನ್ನು ಚಾಗಸ್‌ ಪರೀಕ್ಷಿಸಿದಾಗ, ಅದರಲ್ಲಿ ಒಂದು ಹೊಸ ಪ್ರೋಟೋಜೋವಾ ಇರುವುದನ್ನು ಕಂಡುಹಿಡಿದನು. ವಿಜ್ಞಾನಿಯಾಗಿದ್ದ ಒಸ್‌ವಾಲ್ಡೊ ಕ್ರೂಸಿ ಎಂಬ ತನ್ನ ಸ್ನೇಹಿತನ ಗೌರವಾರ್ಥವಾಗಿ ಆ ಕ್ರಿಮಿಗೆ ಟ್ರೈಪನೋಸೋಮ ಕ್ರೂಸಿ ಎಂಬ ಹೆಸರನ್ನಿಟ್ಟನು. ಈ ಹೊಸ ಕಾಯಿಲೆಗೆ ಸರಿಯಾಗಿಯೇ ಕಾರ್ಲಸ್‌ ಚಾಗಸ್‌ ಎಂದು ಹೆಸರಿಡಲಾಗಿದೆ. ಏಕೆಂದರೆ, ಕಾರ್ಲಸ್‌ ಮಾಡಿದ ಆಳವಾದ ಸಂಶೋಧನೆಯ ಪರಿಣಾಮವಾಗಿ, ಅವನು ಈ ಕಾಯಿಲೆಯನ್ನು ಕಂಡುಹಿಡಿಯುವಂತಾದನು.

[ಪುಟ 12, 13ರಲ್ಲಿರುವ ಚಿತ್ರ]

ಹಳ್ಳಿ ಮನೆಗಳಲ್ಲಿ ಅನೇಕವೇಳೆ ಬಾರ್ಬರ್‌ ಬೀಟಲ್‌ಗಳು ಮುತ್ತಿಕೊಂಡಿರುತ್ತವೆ

[ಕೃಪೆ]

ಛಾಯಾಚಿತ್ರಗಳು: PAHO/WHO/P. ALMASY